ಅಮ್ಮನ ಪ್ರೀತಿಯಿಂದಾಗಿಯೇ ಬ್ರಹ್ಮನ ಸೃಷ್ಟಿಗೆ ಮೆರಗು ಬಂದಿದೆ
ಅಮ್ಮನ ವಾತ್ಸಲ್ಯದಿಂದಾಗಿಯೇ ಜಗ ನಿಲ್ಲದೆ ಮುಂದೆ ಸಾಗಿದೆ
ಅಮ್ಮ ಅಳು ನುಂಗಿ ಮೇಲೆದ್ದಾಗಲೇ ಸಂಸಾರ ಗುರಿಯ ತಲುಪುವುದು
ಅಮ್ಮನ ಧೈರ್ಯಕ್ಕೆ ಬೆಟ್ಟದಂತ ಕೆಲಸಗಳೇ ಕರಗಿ ಬೇಗ ಮುಗಿದಾವು
ಅಮ್ಮ ಪ್ರಸವ ವೇದನೆ ಸಹಿಸಿ ಜನ್ಮ ಕೊಡುವಾಗ
ತನ್ನ ಜೀವವನೆ ಪಣಕ್ಕೆ ಇಡುವಳು
ಗಂಡ ಮಕ್ಕಳಿಗಾಗಿ ಜೀವನವನೇ ಸವೆಸಿ
ಏನನ್ನು ಆಶಿಸದೆ ತಣ್ಣಗೆ ಉಳಿದು ಬಿಡುವಳು
ಅಮ್ಮ ಸಂಸಾರದೊಳಗಿದ್ದು ಸಂಸ್ಕಾರ ಕಲಿಸುತ್ತಾಳೆ
ಅಮರ ಪ್ರೇಮದ ಚಿಲುಮೆಯಂತೆ
ಭೂಮಿ ತೂಕದ ಅಮ್ಮ ಕೊಟ್ಟ ನೋವನು ಮರೆತು
ದ್ವೇಷಿಸದೆ ಜಗದಗಲ ಪ್ರೀತಿಯ ತೋರುತ್ತಾಳೆ
ಅಮ್ಮನ ದುಡಿಮೆ ಅನಾವೃಷ್ಟಿ
ಸಮಯದ ಕಾರ್ಮೋಡದಂತೆ
ಅಮ್ಮ ಮನುಕುಲಕೆ ತಂಪರೆವ
ಇಹ ಪರಗಳ ನಡುವಿನ ಮೇರು ಸೇತುವೆ
ಅಮ್ಮ ಮಾಡುತ್ತಲೇ ಇರುತ್ತಾಳೆ ಸೇವೆ ನಿರಂತರ
ಜಗವ ಬೆಳಗುವ ಸೂರ್ಯ ಚಂದ್ರರಂತೆ
ಅಮ್ಮ ಬರೀ ಹೆಣ್ಣಲ್ಲ ಜಗವೆಲ್ಲ ಶಿರ ಬಾಗಿ
ಮಣಿವ ಪ್ರೀತಿ ಬತ್ತದ ಅಕ್ಷಯ ಪಾತ್ರೆ
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು, ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ