ಒಂಟಿಯಾಗಿ ಬಂದದ್ದಾಗಿದೆ ಹಾಗೆಯೇ ಹೋಗುವುದಿದೆ
ಬಾಳ್ಮೆಯ ಹಂತದೊಳಾದರೂ ಜಂಟಿಯಾಗಿರಬಹುದಲ್ಲವೇ
ಮೈತ್ರಿಯ ಮರೆತು ನಾನತ್ವದಿ ಮೆರೆದ ದಿನಗಳು
ಮತ್ತೆ ಮರಳಿ ಬಾರದಾಗಿವೆ ನಿನ್ನೊಡನೆ
ಇರುವುದದೆಷ್ಟು ದಿವಸವೀ ಮಾಯಾವಿ ಲೋಕದೊಳು
ನಡೆದದ್ದು ನಡೆದಾಗಿದೆ ನಡೆಯಬೇಕಾದದ್ದನ್ನು ನೋಡು
ಮತ್ಸರವ ಹಂಚುವ ಮೊದಲು ವಾಸ್ತವವನ್ನರಿತು
ಭಾತೃತ್ವದ ಸವಿಯ ಸಾರುವಲ್ಲಿ ಮುಂದಾಗು
ನಿನ್ನಂತೆ ಪರರಿಲ್ಲಿ ಅಜರಾಮರರಾರಿಲ್ಲ
ಸ್ನೇಹಪರತೆಯಲ್ಲಿ ಎಲ್ಲರೊಳಗೊಂದಾಗಿ ಬದುಕಿ ಬಿಡು
ನೀಡುವುದಾದರೆ ಪ್ರೀತಿ ವಿಶ್ವಾಸವ ನೀಡಿಬಿಡು ಬೇಡುವುದಾದರೆ ಕರುಣಾಂಬುನಿಧಿಯ ಬೇಡಿಬಿಡು
ಇವನಾರವ ಎಂದೆನ್ನಬೇಡ ಇವ ನಮ್ಮವನೇ
ದುಶ್ಚಟದ ದಾಸನಾಗಿಹೆಯಲ್ಲಾ ನಿನ್ನ ಪರಿಚಯವಾದರೂ ನಿನಗಿದೆಯೇ
ಬಡವನಲ್ಲೂ ಹೃದಯವಿದೆ ಪ್ರೀತಿಯ ಉಣಬಡಿಸು
ಮನುಷ್ಯರಂತಿರುವೆಲ್ಲರಲ್ಲೂ ಮನುಷ್ಯತ್ವವ ರೂಪಿಸು
ದ್ವೇಷವೆಂಬ ಕಂತೆಯ ಸಲಹುತ ಮುಂಬರುವೆಯಾ
ದಹಿಸುವಲ್ಲಿ ಆದಿಯಾಗು ಅನ್ಯರುನ್ನತಿಯ ಕಂಡ ಹೊಟ್ಟೆ ಉರಿಯ
ಸೌಹಾರ್ದತೆಯಲಿ ಜೀವಿಸಿ ಇತಿಹಾಸದ ಪುಟವಾಗಲೆತ್ನಿಸು
ಇಲ್ಲದ ದಳ್ಳೂರಿಯಲ್ಲಿ ಭವಿಷ್ಯ ಹರಣವಾಗುವ ಮುನ್ನ
- ಮೇಘನಾ ಶಿವಾನಂದ್
ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ
ಯುವ ಕವಯಿತ್ರಿ ಮತ್ತು ಬರಹಗಾರ್ತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ