ಶನಿವಾರ, ಮಾರ್ಚ್ 4, 2023

ವಿಚಾರ ಮಂಟಪ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎ ರೇವತಿಯವರ ʼಬದುಕು ಬಯಲುʼ ಕೃತಿಯ ಸಂವಾದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ದಿನಾಂಕ: ೨೮.೦೨.೨೦೨೩, ವಿಚಾರ ಮಂಟಪ ಸಾಹಿತ್ಯ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಎ ರೇವತಿಯವರ ಬದುಕು ಬಯಲು ಕೃತಿಯ ಸಂವಾದ ಕಾರ್ಯಕ್ರಮಕ್ಕೆ, ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಚಾಲನೆ ನೀಡಿದ ಉದಯ್‌ ಕಿರಣ್‌ ರವರು ಬದುಕು ಬಯಲು ಕೃತಿಯ ಅನುವಾದಕರೂ, ಮಹಿಳಾಪರ ಹೋರಾಟಗಾರರು ಆದ ದು. ಸರಸ್ವತಿಯವರನ್ನು ಪರಿಚಯಿಸುತ್ತಾ ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ನಂತರ ಗೌತಮ್‌ ಗೌಡ ಇವರು ಎ ರೇವತಿಯವರ,

“ಅಮ್ಮ ಒಪ್ಪಿಲ್ಲ, ನಮ್ಮನ್ನು ಅಪ್ಪ ಒಪ್ಪಿಲ್ಲ,

ಊರು ಒಪ್ಪಿಲ್ಲ, ನಮ್ಮನ್ನು ದೇಶ ಒಪ್ಪಿಲ್ಲ.....” ಎಂಬ ಕವಿತೆಯನ್ನು ವಾಚನ ಮಾಡಿದರು.

ಕಾರ್ಯಕ್ರಮದಲ್ಲಿ ಮೊದಲಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಭರತ್‌ ರಾಜ್‌ ಆರ್‌. ಇವರು ಇಂತಹ ಮಹತ್ವದ ಕೃತಿಯೊಂದನ್ನು ಕನ್ನಡಕ್ಕೆ ಅನುವಾದಿಸಿದ ದು. ಸರಸ್ವತಿಯವರಿಗೆ ಮೊದಲಿಗೆ ನಮ್ಮೆಲ್ಲರ ಪರವಾಗಿ ಆನಂತ ಧನ್ಯವಾದಗಳು. ನಮ್ಮ ಕಾಲೇಜಿನ ಶಿಕ್ಷಕರೊಬ್ಬರ ಮೂಲಕ ನನಗೆ ಬದುಕು ಬಯಲು ಪುಸ್ತಕದ ಕುರಿತು ತಿಳಿಯಿತು. ಪುಸ್ತವನ್ನು ತೆಗೆದುಕೊಂಡು ಓದಿದಾಗ ನಾನು ಭಾವುಕನಾದೆ, ಎಲ್ಲ ಭಾವನೆಗಳು, ಭವಣೆಗಳನ್ನು ಈ ಕೃತಿ ಒಳಗೊಂಡಿದೆ. ನಾನು ಸಹ ನನ್ನ ಚಿಕ್ಕ ವಯಸ್ಸಿನಲ್ಲಿ ನಾಟಕಗಳಲ್ಲಿ ದ್ರೌಪದಿಯ ಪಾತ್ರ ಮಾಡಿದ್ದು ನೆನಪಾಯಿತು. ರೇವತಿ ತಮ್ಮ ಕೃತಿಯಲ್ಲಿ ಹೇಳುವ ಒಂದು ಮಾತು ನೆನಪಾಗುತ್ತಿದೆ, ನಾನು ನೋಡುವವರ ಕಣ್ಣಿಗೆ ಹೆಣ್ಣಿನ ವೇಷ ತೊಟ್ಟಿರಬಹುದು, ಆದರೆ ನಾನು ನಿಜಕ್ಕೂ ಹೆಣ್ಣೇ ಆಗಿದ್ದೆ. ಎಂದು ರೇವತಿ ಹೇಳುವರು. ಪುಸ್ತಕದಲ್ಲಿ ಬಾಲ್ಯದಿಂದಲೇ ನಡೆಯೋ ಕೆಲವೊಂದು ಘಟನೆಗಳು ಓದುತ್ತಿರುವ ನನಗೂ ನನ್ನೊಳಗಿರುವ ಆ ಮುಚ್ಚಿದ ಹೆಣ್ಣಿಗೂ ಅರಿವಾಗ ತೊಡಗಿತು, ನಾನು ಈ ಸಂದರ್ಭಗಳನ್ನ ಅನುಭವಿಸಿದ್ದೇನೆ ಎಂದು. ಎಷ್ಟೋ ಬಾರಿ ಅಕ್ಕನದೋ ತಂಗಿಯದೋ ಅಥವಾ ಅಮ್ಮನದೋ ಬಟ್ಟೆ ಸೀರೆಗಳನ್ನ ತೊಟ್ಟುಕೊಂಡು ನಲಿದಾಡುವ, ಅವರ ಸಿಂಗಾರದ ವಸ್ತುಗಳನ್ನ ಹಾಕಿಕೊಂಡು ಖುಷಿ ಪಡುವ ಸಂದರ್ಭಗಳು ಕಣ್ಣಿನ ಮುಂದೆ ಸಾಲಾಗಿ ಬಂದು ಮರೆಯಾದವು.

 ರೇವತಿಯವರ ಬಾಲ್ಯದಲ್ಲಿ ಅವರು ದೇವಿ ಹಬ್ಬಕ್ಕಾಗಿ ಚಂದ್ರಮತಿ ವೇಷತೊಟ್ಟಾಗ ಅವರಲ್ಲಾಗೋ ಖುಷಿ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ದ್ರೌಪದಿಯ ಪಾತ್ರ ಮಾಡಿದ್ದನ್ನ ನೆನಪಿಸುತ್ತೆ. ಆಗ ಬರುವ ಆ ಡೈಲಾಗ್ ನನ್ನ ಮನಸ್ಸನ್ನೇ ತಟ್ಟುತ್ತದೆ.... "ನಾನು ಹೆಣ್ಣಿನ ವೇಷ ತೊಟ್ಟು ಹೆಣ್ಣಿನ ಪಾತ್ರ ಹಾಕಿದ್ದೀನಿ ಎಂದು ಲೋಕ ಭಾವಿಸಿತು. ಆದರೆ ನಾನು ಹೆಣ್ಣಿನ ವೇಷ ತೊಟ್ಟಿರಲಿಲ್ಲ ಬದಲಾಗಿ ಹೆಣ್ಣೇ ಆಗಿದ್ದೆ"ಎನ್ನುತ್ತಾರೆ. ಓದುತ್ತಾ ಓದುತ್ತಾ ನಿಧಾನವಾಗಿ ಪುಸ್ತಕ ನನ್ನನ್ನೇ ಆವರಿಸಿ ಬಿಟ್ಟಿತ್ತು ಹೇಗೆಂದರೆ ನಾನೇ ರೇವತಿಯಾಗಿಬಿಟ್ಟಿದ್ದೆ....!

ಗಂಡಿನ ಜೊತೆ ಮಿಲನವಾಗುವ ಆಸೆ ಇಂದ ಹಳೇ ಗುರುವನ್ನ ಬಿಟ್ಟು ವೇಶ್ಯಾವಾಟಿಕೆಗೆ ತೊಡಗಿ ಎಷ್ಟೋ ಜನ ರೌಡಿಗಳಿಂದ ಹಿಂಸೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದದ್ದು,  ಕೃತಿಯಲ್ಲಿ ಬರುವ ಆಫರೇಷನ್‌ಗೆ ಸಂಬಂಧಿಸಿದ ಕೆಲವು ಸಂದರ್ಭಗಳನ್ನು ಓದಿದಾಗ ನಾನೇ ರೇವತಿಯಾಗಿ ಅವರ ನೋವನ್ನು ಅನುಭವಿಸುವಂತಾಯಿತು. ಒಬ್ಬರ ಮನಸ್ಸನ್ನೇ ಮನಸ್ಸಿನ ಆಶಯಗಳನ್ನೇ ವಾಸ್ತವ ಅಂತ ಒಪ್ಪಿಕೊಳ್ಳುವುದು ಮುಖ್ಯ ಎಂದು ಹೇಳಿದರು.

ನಂತರ ಗೌತಮ್‌ ಗೌಡ ಇವರು ಮಾತನಾಡುತ್ತಾ, “ತೃತೀಯ ಲಿಂಗಿಗಳನ್ನು ಅಮಾನುಷವಾಗಿ ನಡೆಸಿಕೊಳ್ಳುವ ನಾವು ನಮ್ಮನ್ನು ನಾಗರೀಕರೆಂದು, ನಮ್ಮ ಸಮಾಜವನ್ನು ನಾಗರೀಕ ಸಮಾಜವೆಂದು ಕರೆದುಕೊಳ್ಳುವ ನೈತಿಕತೆ ನಮಗಿದೆಯೇ ಎಂಬ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಿದೆ. ಸಮಾಜವು ಲಿಂಗ, ಲೈಂಗಿಕತೆಯ ವಿಚಾರದಲ್ಲಿ ಕಟ್ಟಿಕೊಂಡಿರುವ ಆಲೋಚನೆಗಳು ಸಂಪೂರ್ಣ ಅವಿವೇಕದಿಂದ ಕೂಡಿವೆ. ಗಂಡು-ಹೆಣ್ಣುಗಳನಷ್ಟೇ ಸಹಜವೆಂದು ನಾವು ಭಾವಿಸಿದ್ದೇವೆ. ಆದರೆ, ಇವಕ್ಕೆ ಹೊರತಾದ ಟ್ರಾನ್ಸ್‌ ಮೆನ್‌, ಟ್ರಾನ್ಸ್‌ ವಿಮೆನ್‌, ಗೇ, ಲೆಸ್ಬಿಯನ್‌ ಇತ್ಯಾದಿ ಲೈಂಗಿಕತೆಗಳು ಹೆಣ್ಣು ಗಂಡುಗಳಷ್ಟೇ ಸಹಜ ಮತ್ತು ಪ್ರಾಕೃತಿಕ ಎಂಬುದನ್ನು ನಾವು ಅರಿಯಬೇಕು. ಈ ಅರಿವನ್ನು ವುಂಟುಮಾಡುವಲ್ಲಿ ಬದುಕು ಬಯಲು ಕೃತಿಯ ಪಾತ್ರ ಮಹತ್ವದ್ದು. ತೃತೀಯ ಲಿಂಗಿಗಳ ಬಗ್ಗೆ ಹಲವರು ಹಲವು ಆರೋಪಗಳನ್ನು ಮಾಡುತ್ತಾರೆ. ಆದರೆ, ತೃತೀಯಲಿಂಗಿಗಳಿಗೆ ಸೂಕ್ತ ವಿದ್ಯಾಭ್ಯಾಸ, ಸಾಂತ್ವನ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸಿದ್ದರೆ, ಅವರ ಲೈಂಗಿಕತೆಯನ್ನು ಸಮಾಜ ಸಹಜವೆಂದು ಒಪ್ಪಿದ್ದರೆ ಅವರು ಹೀಗೇಕೆ ಆಗುತ್ತಾರೆ ಎಂದು ನಮಗೆ ನಾವು ಪ್ರಶ್ನೆ ಮಾಡಿಕೊಳ್ಳುವುದಿಲ್ಲ. ತಾನು ಮಾಡುವ ಊಟ ತಿಂಡಿಗಳಷ್ಟೇ ಸಹಜವಾದದ್ದು ತನ್ನ ಹೆಣ್ತನ, ಅದನ್ನು ನೀವು ಒಪ್ಪಿಕೊಳ್ಳಬೇಕು ಎಂದು ರೇವತಿ ಕೇಳುತ್ತಾರೆ.


ಹಿಜ್ರಾಗಳು ಮರಣ ಹೊಂದಿದಾಗ ಅವರ ಮೃತ ದೇಹವನ್ನು ಚಪ್ಪಲಿಯಿಂದ ಹೊಡೆದು ಮತ್ತೆ ಮುಂದಿನ ಜನ್ಮದಲ್ಲಿ ಹೀಗೆ ಜನಿಸಬಾರದು ಎಂದು ಹೇಳುವ ಸಂಪ್ರದಾಯ ಹಿಜ್ರಾಗಳಲ್ಲಿದೆಯಂತೆ. ಇದೆಷ್ಟು ಅಮಾನವೀಯವಲ್ಲವೇ?, ತನ್ನ ತನವನ್ನು ತಾನು ನಿರೂಪಿಸಿಕೊಳ್ಳಲು ರೇವತಿ ಎಷ್ಟೇ಼ಷ್ಟು ಹೋರಾಟಗಳನ್ನು ಮಾಡಬೇಕಾಯಿತಲ್ಲ ಎಂದು ನನಗೆ ಬಹಳ ಚಿಂತೆಯಾಗುತ್ತಿದೆ. ನಾವು ತಂದೆ ತಾಯಿಗಳ ಪೋಷಕರ ವಿರುದ್ಧ ಬಂಡಾಯ ಮಾಡಬೇಕಿದೆ ಅಂತ ಅಡಿಗರು ಹೇಳಿದನ್ನ ರೇವತಿ ತನ್ನ ಬದುಕಿನಲ್ಲಿ ಮಾಡಿದಳು ಅನಿಸುತ್ತೆ. ಸಾಮಾನ್ಯವಾಗಿ ಒಬ್ಬರನ್ನು ಬೈಯುವಾಗ ಶಿಖಂಡಿ ಅನ್ನುವ ಪದವನ್ನ ಬಳಸ್ತಾರೆ. ಅಂದರೆ, ಕೈಲಾಗದವನು ಅಂತ. ಆದರೆ ನಾವು ನಿಜ ಕೈಲಾಗದವರಲ್ಲ ಅನ್ನುವುದನ್ನ ರೇವತಿ ತಮ್ಮ ಕೃತಿಯ ಮೂಲಕ ವಿವರಿಸ್ತಾರೆ. ಮಹಭಾರತದಲ್ಲಿ ಶಿಖಂಡಿಯ ಪಾತ್ರವೂ ಬಹಳ ಮಹತ್ವದ್ದು ಅನ್ನುವುದನ್ನ ನಾವು ಮರೆಯಬಾರದು. ತೃತೀಯ ಲಿಂಗಿಗಳು ಸೂಕ್ತವಾದ ಅವಕಾಶಗಳು ಸಿಕ್ಕರೇ, ತಾವು ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ರೇವತಿ, ಚಾಂದಿನಿ, ವಿದ್ಯ, ಅಕಯ್ಯ್‌ ಅಂತಹವರು ಉದಾಹರಣೆಗಳು” ಎಂದು ಹೇಳಿದರು.

ಮುಂದೆ ಉದಯ್‌ ಕಿರಣ್‌ ಇವರು ಪುಸ್ತಕದ ಕುರಿತು ಮಾತನಾಡುತ್ತಾ, “ಬದುಕು ಬಯಲು ಕೃತಿ ಹಲವರ ಬದುಕುಗಳನ್ನು ಪ್ರತಿಬಿಂಬಿಸುವ ಕೃತಿ. ರೇವತಿ ಎದುರಿಸುವ ಸಮಸ್ಯೆಗಳನ್ನು ಎದುರಿಸಲಾರದೇ, ಅವಮಾನಗಳನ್ನು ಸಹಿಸಲಾರದೆ ಸಾಯುವುದಕ್ಕೆ ತಯಾರಾಗುವವರು ಹಲವರನ್ನು ಕಾಣಬಹುದು. ಯಾವುದೇ ಮನುಷ್ಯ ಮುಖ್ಯವಾಗಿ ಹೆದರುವುದು ಸಾವಿಗೆ. ಹೀಗಿರುವಾಗ ಆತ್ಮಹತ್ಯೆಗೆ ಒಬ್ಬ ವ್ಯಕ್ತಿ ಮುಂದಾಗುತ್ತಾನೆ ಎಂದರೆ ಅವನು ಎದುರಿಸಿದ ಸೋಲು, ಅವಮಾನಗಳ ತೀವ್ರತೆ ಎಷ್ಟಿರಬಹುದು ಎಂಬುದನ್ನು ನಾವು ಊಹಿಸಬಹುದು. ಇಂತಹ ತೀವ್ರತರವಾದ ಕಷ್ಟಗಳನ್ನೆಲ್ಲಾ ಸಹಿಸುತ್ತಲೇ, ಜೀವನ ಪ್ರೀತಿಯನ್ನು ಉಳಿಸಿಕೊಂಡ ರೇವತಿಯ ಬದುಕು ಈ ಕೃತಿಯಲ್ಲಿ ಅನಾವರಣಗೊಂಡಿದೆ.

ಟ್ರಾನ್ಸ್‌ ಜೆಂಡರ್‌ಗಳನ್ನು ಅವರಿರುವ ಹಾಗೆಯೇ ಒಪ್ಪಬೇಕು. ಹುಡುಗ ನಾಗಿ ಹುಟ್ಟಿದವನಲ್ಲಿ ಹೆಣ್ಣಿನ ಭಾವನೆಗಳು ಕಂಡರೆ ಅವನನ್ನು ಹೆಣ್ಣಿಗ, ಏನು ಹೆಣ್ಣಿನ ತರಹ ಆಡುವೆ ಅಂತಾರೆ, ಅದೆ ಹುಡುಗ ಬೆಳೆದು ದೊಡ್ಡವಾಗಿ ಲಿಂಗ ಪರಿವರ್ತಿಸಿಕೊಂಡು ತನ್ನನ್ನು ತಾನು ಹೆಣ್ಣು ಎಂದು ಗುರುತಿಸಿಕೊಂಡಾಗ, ಇದೇನು ನಿನ್ನ ಧ್ವನಿ ಗಂಡಿನ ಹಾಗಿದೆಯಲ್ಲ ಅಂತಾರೆ. ಹೀಗೆ ಕರೆಯುತ್ತಲೇ ಹೆಣ್ಣಾಗಿಯೂ ಗಂಡಾಗಿಯೂ ಒಪ್ಪದೇ ಪ್ರಾಣಿಗಳಿಗಿಂತ ತುಚ್ಚವಾಗಿ ಕಾಣುತ್ತಾ ಅವಮಾನಕ್ಕೆ ಒಳಪಡಿಸುತ್ತಾರೆ.  ರೇವತಿ ತಾನು ಪೋಲೀಸರಿಂದ ಹಾಗೂ ರೌಡಿಗಳಿಂದ ಅನುಭವಿಸುತ್ತಿದ್ದ ಚಿತ್ರಹಿಂಸೆಯ ಕುರಿತು ಈ ಕೃತಿಯಲ್ಲಿ ಬರೆದಿದ್ದಾರೆ. ರಸ್ತೆಯಲ್ಲಿಯೇ ರೇವತಿ ಇಷ್ಟೆಲ್ಲ ಹಿಂಸೆಗೆ ಒಳಗಾದಾಗಲೂ ಸಹ ಎಲ್ಲರೂ ಯಾವುದೋ ಸಿನೆಮಾ ಶೂಟಿಂಗ್‌ ನೋಡುವ ಹಾಗೆ ಇದನ್ನೆಲ್ಲ ನೋಡುತ್ತಿರುತಾರೆಯೇ ವಿನಃ ಅವಳ ರಕ್ಷಣೆಗೆ ದಾವಿಸುವುದಿಲ್ಲ. ರಕ್ಷಣೆ ನೀಡಬೇಕಾದ ಪೋಲೀಸಿನವರಿಂದಲೂ ರೇವತಿ ಇಂತಹುದ್ದೇ ಹಿಂಸೆಗೆ ಒಳಗಾಗುವುದು ಅಮಾನವೀಯ.

ನೋರಾರು-ಸಾವಿರಾರು ಜನರು ಇಂದಿಗೂ ರೇವತಿಯ ಹಾಗೆಯೇ ಹಿಂಸೆ ಅವಮಾನಗಳನ್ನು ಅನುಭವಿಸುತ್ತಲೇ ಇರುವರು. ಇಂತಹವರೆಲ್ಲರ ಬದುಕುಗಳನ್ನು ಈ ಕೃತಿ ಸಮರ್ಥವಾಗಿ ಪ್ರತಿನಿಧಿಸುತ್ತದೆ. ತೃತೀಯ ಲಿಂಗಿಗಳ ಮನೆಯವರು ಸಹ ಇವರನ್ನು ಬಹಳ ಕೀಳಾಗಿ ನೋಡುತ್ತಾರೆ. ಇದೊಂದು ನೈಸರ್ಗಿಕವಾದ ಪ್ರಕ್ರಿಯೆ ಎಂಬುದನ್ನು ಒಪ್ಪುವುದಕ್ಕೆ ಅವರು ಸಿದ್ಧರಿರುವುದೇ ಇಲ್ಲ. ರೇವತಿಯವರ ಅಣ್ಣಂದಿರು ಅವರನ್ನು ಎಷ್ಟು ಹಿಂಸಿಸುತ್ತಾರೆ, ಕೆಟ್ಟ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಇದನ್ನೆಲ್ಲಾ ಯಥಾವತ್ತಾಗಿ ಮನಸ್ಸಿಗೆ ನಾಟುವಂತೆ ಈ ಕೃತಿಯಲ್ಲಿ ವಿವರಿಸಲಾಗಿದೆ. ಹಿಜ್ರಾ ಸಮುದಾಯದ ಸಂಸ್ಕೃತಿಯ ಕುರಿತು, ಅದರ ಒಳಗೇ ಮನೆಮಾಡಿರುವ ಮೌಡ್ಯಗಳ ಕುರಿತು, ಪುರುಷ ಪ್ರಾಧಾನ್ಯತೆಯ ಆಂಶಗಳನ್ನು ಆ ಮೂಲಕ ಉಂಟಾಗುವ ಹಿಂಸೆ, ದೌರ್ಜನ್ಯ ಇತ್ಯಾದಿಗಳನ್ನು ಕುರಿತು ರೇವತಿ ಈ ಕೃತಿಯಲ್ಲಿ ವಿವರಿಸಿದ್ದಾರೆ.

ಗಣೇಶನ ಉತ್ಸವದ ಸಂದರ್ಭಗಳಲ್ಲಿ ಡ್ಯಾನ್ಸ್‌ ಮಾಡಲು ಹೋಗುತ್ತಿದ್ದ ತೃತೀಯ ಲಿಂಗಿಗಳನ್ನು ಪ್ರಾಣಿಗಳನ್ನು ಹರಾಜು ಹಾಕಿ ಮಾರುವ ಹಾಗೆ ಇವರಿಗೂ ಧರ ನಿಗದಿಗೊಳಿಸುವುದು. ಇವರ ಸ್ತನಗಳು ನಿಜವಾದವೇ ಇಲ್ಲವೇ ಎಂದು ಪರೀಕ್ಷಿಸಲು ಸ್ತನಗಳನ್ನು ಹಿಸುಕಿ ನೋಡುವುದು. ಇತ್ಯಾದಿಗಳನ್ನು ಓದುವವರಿಗೆ ಮೈಜುಮ್ಮೆನ್ನಿಸುತ್ತದೆ. ಇನ್ನು ಅದನ್ನು ಅನುಭವಿಸುವವರ ಪಾಡು ಏನಾಗಿರಬಹುದು ಎಂದು ಊಹಿಸಿಕೊಳ್ಳಿ.

ಟ್ರಾನ್ಸ್‌ ಜೆಂಡರ್‌ ಗಳ ಪರವಾಗಿ ಎನ್.ಜಿ.ಓ ಗಳು ಮಾಡುತ್ತಿದ್ದ ಕೆಲಸ, ಅದಕ್ಕೆ ಅವರ ಪ್ರತಿಕ್ರಯೆಗಳು ಇತ್ಯಾದಿಗಳನ್ನು ರೇವತಿ ಬಹಳ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹೀಗೆ ಇಡೀ ಪುಸ್ತಕವೇ ಟ್ರಾನ್ಸ್‌ ಜೆಂಡರ್ಗಳ ಸಮಸ್ಯೆಗಳನ್ನು ಚರ್ಚಿಸುತ್ತಾ, ಬದಲಾವಣೆಗೆ ನಮ್ಮನ್ನು ಚಿಂತಿಸುವ ಹಾಗೆ ಮಾಡುತ್ತೆ. ನಾವು ಚಿಂತಿಸಬೇಕಾಗಿದೆ. ತೃತೀಯಲಿಂಗಿಗಳು ಎಲ್ಲರಂತೆ ಅವರೂ ಸಹ ಎಂದು ಭಾವಿಸಬೇಕಾಗಿದೆ.” ಎಂದು ಹೇಳಿದರು.

ವರುಣ್‌ರಾಜ್‌ ಜಿ. ಇವರು ಕೃತಿಯ ಕುರಿತು ಮಾತನಾಡುತ್ತಾ, ರೇವತಿಯವರ ಆತ್ಮಕಥನ ಓದುಗರನ್ನು ಹೊಸದೊಂದು ಆಯಾಮದಲ್ಲಿ ಆಲೋಚಿಸುವಂತೆ ಮಾಡುತ್ತದೆ. ಎಷ್ಟೇ ನೋವು ಅವಮಾನಗಳನ್ನು ಸಹಿಸಿಕೊಂಡರು ಮಾನವೀಯತೆಯನ್ನು, ಮನುಷ್ಯ ಪ್ರೇಮವನ್ನು ತನ್ನೊಳಗೆ ಜೀವಂತವಾಗಿಸಿಕೊಂಡಿರುವ ರೇವತಿಯವರ ಪರಿ ನಿಜಕ್ಕೂ ಅದ್ಭುತವಾದ್ದು. ಮನೆಯವರೆಲ್ಲಾ ಎಷ್ಟೇ ಬೈದರೂ, ಆಡಿಕೊಂಡರೂ, ನೋಯಿಸಿದರೂ ರೇವತಿ ಅವರಿಗೆ ಒಳ್ಳೆಯದನ್ನೇ ಬಯಸಿದರು. ತಾವು ಸಾಕಷ್ಟು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಮನೆಯವರಿಗೆ ನೀಡಿ ಖಾಲಿ ಕೈಯಲ್ಲಿದ್ದರೂ ಎದೆಗುಂದದೇ, ಬದುಕನ್ನು ನಡೆಸಿ, ಸಮಾಜದ ಮನೆಯವರ ಮನಸ್ಸುಗಳನ್ನು ಗೆದ್ದು ನಮಗೆಲ್ಲ ಮಾದರಿಯಾಗಿರುವರು.

ನಾವು ಹಲವು ಭಾರಿ ನಮಗೆ ಅರಿವಿಲ್ಲದೆಯೇ ಬಳಸುವ ಕೆಲವು ಪದಗಳು ಮತ್ತೊಬ್ಬರನ್ನು ಬಹಳಷ್ಟು ನೋಯಿಸುತ್ತವೆ, ಅವಮಾನಕ್ಕೆ ಒಳಪಡಿಸುತ್ತವೆ. ಇದಕ್ಕೆ ಕಾರಣ ನಮಗೆ ಸೂಕ್ಷ್ಮವಾಗಿ ಆಲೋಚಿಸುವ ಪ್ರಜ್ಞೆ ಇಲ್ಲದಿರುವುದು. ಹಿಜ್ರಾ ಸಮುದಾಯದ ಕುರಿತಾದ ಇಂತಹ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳುವಲ್ಲ, ಅವರೊಳಗಿರುವ ಮಾನವೀಯತೆ, ಸಮಾಜದ ಕುರಿತಾದ ಅವರ ಅದಮ್ಯ ಪ್ರೇಮ, ಎಂದೂ ಬತ್ತದ ಜೀವನೋತ್ಸಾಹಗಳನ್ನು ಅರ್ಥ ಮಾಡಿಕೊಳ್ಳಲು ಅವುಗಳನ್ನು ಸೂಕ್ಷ್ಮವಾಗಿ ಗ್ರಹಿಸಲು ನಮಗೆ ಈ ಕೃತಿ ಸಹಕಾರಿಯಾಗಿದೆ. ಎಂದು ಹೇಳಿದರು.

ಕಲ್ಬುರ್ಗಿಯ ಉಪನ್ಯಾಸಕರಾದ ಕೈಲಾಶ್‌ ಡೋಣಿ ಅವರು ನಾನು ಹಲವು ದಿನಗಳ ಹಿಂದೆ ಈ ಪುಸ್ತಕವನ್ನು ಓದಿದ್ದೆ, ಇದನ್ನು ಓದಿದ ಮೇಲೆ ತೃತೀಯ ಲಿಂಗಿಗಳನ್ನು ನೋಡುವ ನನ್ನ ನೋಟಕ್ರಮವೇ ಬದಲಾಯಿತು. ಮುಂದೆ ಹಲವು ಕಾರ್ಯಕ್ರಮಗಳಲ್ಲಿ ಹೋರಾಟಗಳಲ್ಲಿ ತೃತೀಯಲಿಂಗಿಗಳ ಜೊತೆಗಿದ್ದೆವು. ಹೀಗೆ ಹಲವರ ನೋಟ ಕ್ರಮಗಳನ್ನು ಬದಲಾಯಿಸಬಲ್ಲ ರೇವತಿ, ಅಕ್ಕಯ್‌, ಮಂಜಮ್ಮ ಜೋಗತಿಯಂತಹವರ ಆತ್ಮ ಕಥನಗಳು ಬಂದಿದ್ದು, ಇಂತಹ ಕೃತಿಗಳು ಇನ್ನಷ್ಟು ಹೆಚ್ಚಬೇಕು. ನಮಗೆ ಇಂತಹವರ ಜೀವನಗಳೂ ಆದರ್ಶವಾಗಬೇಕು. ಹಿಜ್ರಾ ಸಂಸ್ಕೃತಿ, ಆಚರಣೆ, ಜೀವನ ವಿಧಾನ, ಗುರು ಶಿಷ್ಯ ಪರಂಪರೆ ಇವುಗಳ ಕುರಿತು ಸಮಗ್ರ ಅಧ್ಯಯನ ಸಂಶೋಧನೆಗಳು ನಡೆಯಬೇಕು, ಆ ಮೂಲಕ ಜನರನ್ನು ಹೆಚ್ಚು ಸಂವೇದನಾಶೀಲರನ್ನಾಗಿಸಬೇಕು ಎಂದು ಹೇಳಿದರು.

ಮುಂದೆ ತುಮಕೂರಿನ ಗಂಗಾಧರ ಬಾಣಸಂದ್ರ ಇವರು ಪುಸ್ತಕದ ಕುರಿತು ಮಾತನಾಡುತ್ತಾ, ಕೃತಿಯನ್ನು ಓದುವಾಗ ಒಬ್ಬ ಹಿಜ್ರಾ ತನ್ನ ಅಸ್ತಿತ್ವಕ್ಕಾಗಿ, ತನ್ನ ಸಣ್ಣ ಸಣ್ಣ ಆಸೆಗಳ ಪೂರೈಕೆಗಾಗಿ, ಸಣ್ಣ ಸಣ್ಣ ಅವಶ್ಯಕತೆಗಳಿಗಾಗಿ ದೊಡ್ಡ ಮಟ್ಟದ ಹೋರಾಟವನ್ನೇ ಮಾಡಬೇಕಾದ ಪರಿಸ್ಥಿತಿ ಇದೆ, ಸಮಾಜ ಹೇಗೆ ಇಂತಹವರನ್ನು ನೀಚವಾಗಿ ನಡೆಸಿಕೊಳ್ಳುತ್ತದೆ ಎಂಬುದು ನಮ್ಮ ಕಣ್ಣಿಗೆ ರಾಚುತ್ತದೆ. ಅಧಿಕಾರ, ವಂಶಪ್ರತಿಷ್ಠೆ, ಆಸ್ತಿಯಂತಹ ವಿಷಯಗಳಲ್ಲಿ ಹೇಗೆ ಇವರನ್ನು ಹೊರಗಿಡಲಾಗುತ್ತೆ, ಇವರಿಂದ ಬರುವ ಲಾಭ, ಆದಾಯಕ್ಕೆ ಮಾತ್ರ ಇಲ್ಲದ ಗೌರವದ ಪ್ರಶ್ನೆ, ಇವರನ್ನು ಇವರಂತೆ ಒಪ್ಪಿಕೊಳ್ಳಬೇಕಾಗಿ ಬಂದಾಗ ಮಾತ್ರ ಮುನ್ನೆಲೆಗೆ ಬರುತ್ತದೆ. ಮನೆಯವರು ಸಮಾಜ ಹಾಗೂ ಹಲವು ಭಾರಿ ತನ್ನವರಿಂದಲೇ ನೋವಿಗೆ ದುಖಃಕ್ಕೆ ಒಳಗಾಗಿ ಅವುಗಳನ್ನು ಎದುರಿಸುತ್ತಲೇ ಸಮಾಜಕ್ಕೆ ಮಾದರಿಯಾದ ರೇವತಿಯ ಬದುಕು ಈ ಕೃತಿಯಲ್ಲಿ ಚಿತ್ರಣಗೊಂಡಿದೆ.

ಇದನ್ನು ಓದುವಾಗ, ನಾವು ಮನುಷ್ಯರೇ, ನಮ್ಮದು ನಾಗರೀಕ ಸಮಾಜವೇ?, ಎಂಬ ಪ್ರಶ್ನೆಗಳು ನನ್ನಲ್ಲಿ ಮೂಡಿದವು. ಈ ಕೃತಿಯಲ್ಲಿ ಒಂದು ಕಡೆ ರೇವತಿ ಎದುರಿಸಿದ ಅವಮಾನಗಳು, ನೋವು ಸಂಕಟಗಳು ಸಮಾಜ ಅವರನ್ನು ನಡೆಸಿಕೊಂಡ ರೀತಿಗಳ ಚಿತ್ರಣವಿದ್ದು, ಇದು ಓದುಗರನ್ನು ಆತ್ಮ ವಿಮರ್ಶೆಗೆ ಒಳಪಡಿಸಿ, ಬದಲಾವಣೆಗೆ ಕರೆ ನೀಡಿದರೆ, ಮತ್ತೊಂದು ಕಡೆ ರೇವತಿಯನ್ನು ತನ್ನ ಮನೆಯವರು ಮತ್ತು ಸಮಾಜ ಕಡೆಗಾದರೂ ಒಪ್ಪಿಕೊಂಡದ್ದು, ಓದುಗರಲ್ಲಿ ಮತ್ತು ಹಿಜ್ರಾ ಸಮುದಾಯದ ಸಹೋದರಿಯರಲ್ಲಿ ಒಂದು ಆಶಾವಾದವನ್ನು ಸಹ ಮೂಡಿಸುತ್ತದೆ. ಇಂತಹಾ ನೂರಾರು ರೇವತಿಯರು ತಮ್ಮ ತಮ್ಮ ಜೀವನವನ್ನು ಹಸನುಗೊಳಿಸಿಕೊಳ್ಳಬೇಕು. ಎಲ್ಲರಂತೆ ಇವರಿಗೂ ಬದುಕುವ, ಉದ್ಯೋಗ ಪಡೆಯುವ, ತಮ್ಮಿಷ್ಟದ ಜೀವನವನ್ನು ನಡೆಸುವ ಅವಕಾಶ ಮತ್ತು ಸ್ವಾತಂತ್ರ್ಯ ಸಿಗಬೇಕು.

ಹಿಜ್ರಾಗಳ ಪರಂಪರೆಯನ್ನು ಅದರ ಪ್ರಾಚೀನತೆಯನ್ನು ಹೇಳುವ ಒಂದು ಕತೆ ಇದೆ. ಅದು ರಾಮಾಯಣದಲ್ಲಿ ರಾಮನು ವನವಾಸಕ್ಕೆ ಹೋಗುವ ಸಂದರ್ಭದ್ದು, ಎಲ್ಲಾ ಗಂಡಸರು ಮತ್ತು ಹೆಂಗಸರು ತಮ್ಮ ತಮ್ಮ ಮನೆಗಳಿಗೆ ತೆರಳಿ ಎಂದು ಹೇಳಿದ ರಾಮ ತೃತೀಯ ಲಿಂಗಿಗಳನ್ನು ಲೆಕ್ಕಕೆ ತೆಗೆದುಕೊಳ್ಳುವುದೇ ಇಲ್ಲ. ಇದೊಂದು ಕತೆಯೇ ಆಗಿರಬಹುದು. ಆದರೆ, ರಾಜನಾದ ರಾಮನಿಗೆ ಇಂತಹ ಒಂದು ಸೂಕ್ಷ್ಮತೆ ಇಲ್ಲದೇ ಹೋಗಿದ್ದು ದುರಂತ. ಈ ದುರಂತ ಇಂದಿಗೂ ಮುಂದುವರೆದಿದೆ. ಆ ಸೂಕ್ಷ್ಮತೆ ಇಂದಿಗೂ ನಮ್ಮಗೆ ಬಂದಿಲ್ಲ. ಇನ್ನಾದರೂ ನಾವು ಇದರ ಕುರಿತು ಚಿಂತಿಸುವಂತಾಗಬೇಕಿದೆ ಎಂದು ಹೇಳಿದರು.

ಮುಂದೆ ಬದುಕು ಬಯಲು ಕೃತಿಯ ಅನುವಾದಕಿ 

ದು. ಸರಸ್ವತಿ ಇವರು ಮಾತನಾಡುತ್ತಾ, ಈ ಕೃತಿಯನ್ನು ತಾವೆಲ್ಲರೂ ಓದಿ-ಗ್ರಹಿಸಿ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಬಹಳ ಸಂತೋಷದ ವಿಷಯ. ನಾನು ಹೇಳ ಬಹುದಾಗಿದ್ದ ಹಲವು ಮುಖ್ಯ ಹಾಗೂ ಸೂಕ್ಷ್ಮ ವಿಚಾರಗಳನ್ನು ಸಹ ಕೆಲವರು ಚರ್ಚಿಸಿದ್ದಾರೆ. ಬದುಕು ಬಯಲು ಎಂಬ ಈ ಶೀರ್ಷಿಕೆಯನ್ನು ಬಹಳಷ್ಟು ಮಂದಿ ಇಷ್ಟ ಪಟ್ಟರು. ಈ ಕೃತಿ ಬರಿಯ ರೇವತಿಯ ಕತೆಯನ್ನಷ್ಟೇ ಅಲ್ಲದೇ, ಇಡೀ ತೃತೀಯ ಲಿಂಗಿಗಳ ಬದುಕಿಗೆ ಕನ್ನಡಿ ಹಿಡಿಯುವ ಮತ್ತು ಸಮಾಜದ ಕ್ರೌರ್ಯವನ್ನು ಯತ್ಥಾವತ್ತಾಗಿ ತೋರಿಸುತ್ತದೆ. ಅಂದರೆ, ತೃತೀಯ ಲಿಂಗಿಗಳ ಬದುಕುಗಳಿಗೆ ಕನ್ನಡಿ ಹಿಡಿಯುತ್ತಾ, ಸಮಾಜದ ಕ್ರೌರ್ಯವನ್ನು ಬಯಲು ಮಾಡುತ್ತದೆ.



 ನನಗೆ ಬಹಳ ಹಿಂದಿನಿಂದಲೂ ಪರಿಚಯ. ಪೆಂಗ್ವಿನ್‌ ನವರು ಅವಳ ಆತ್ಮಕತೆಯನ್ನು ಇಂಗ್ಲಿಷ್ನಲ್ಲಿ ಪ್ರಕಟಿಸಿದರು. ಕರ್ನಾಟಕ ನನ್ನ ಬದುಕಿನ ಹೋರಾಟಗಳಿಗೆ ಒಂದು ತಿರುವನ್ನು ನೀಡಿತು. ಹೀಗಾಗಿ ನನ್ನ ಆತ್ಮಕಥನ ಕನ್ನಡಕ್ಕೆ ಬರಬೇಕಂದು ಅದರಲ್ಲೂ ನಾನೇ ಅದನ್ನು ಅನುವಾದ ಮಾಡಬೇಕೆಂಬುದು ರೇವತಿಯ ಆಶಯವಾಗಿತ್ತು. ಆದರೆ, ಈ ಸಮಾಜದ ಐಬಿನ ಕನ್ನಡಕವನ್ನೇ ನಾವೂ ಹಲವು ಸಲ ಧರಿಸಿಕೊಂಡಿರುವುದರಿಂದ, ಅದರಿಂದ ಬಿಡಿಸಿಕೊಂಡು ಹಲವು ಸೂಕ್ಷ್ಮಗಳನ್ನು ಅರ್ಥಮಾಡಿಕೊಂಡು ನಂತರವೇ ನಾನು ಈ ಪುಸ್ತಕವನ್ನು ಅನುವಾದ ಮಾಡಬೇಕಿತ್ತು. ಇದಕ್ಕಾಗಿ ಈ ಕೃತಿಯ ತಮಿಳಿನ ಕೃತಿಯನ್ನು, ಇಂಗ್ಲೀಷಿನ ಅನುವಾದವನ್ನು ಸೂಕ್ಷ್ಮವಾಗಿ ಓದಿದೆ. ಇದರ ಜೊತೆಗೆ ರೇವತಿಯ ಬದುಕನ್ನು ಸಹ ಹತ್ತಿರದಿಂದ ನಾನು ನೋಡಿದ್ದ ಕಾರಣ, ಅವಳ ಊರು, ಮನೆ, ಅವಳು ಬೆಳೆದ ಪರಿಸರ ಇತ್ಯಾದಿಗಳ ಕುರಿತು ನನಗೆ ತಿಳಿದಿದ್ದರಿಂದ ಮತ್ತು ಇದೆಲ್ಲಕ್ಕಿಂತ ಹೆಚ್ಚು ರೇವತಿಯ ಮೇಲಿನ ಅಪಾರ ಪ್ರೀತಿಯಿಂದ ನಾನು ಈ ಕೃತಿಯ ಅನುವಾದವನ್ನು ಪ್ರಾರಂಭಿಸಿದೆ. ಅಲ್ಲದೆ. ಈ ಕೃತಿಯ ಅನುವಾದ ನನ್ನ ದೃಷ್ಠಿಯನ್ನು ವಿಸ್ತರಿಸಿಕೊಳ್ಳುವ ಒಂದು ಪ್ರಯತ್ನವಾಗಿಯೂ ನನಗೆ ಕಂಡಿತು. ಈ ಪುಸ್ತಕವನ್ನು ಓದುವ ಪ್ರತಿಯೊಬ್ಬರಿಗೂ ಈ ದೃಷ್ಠಿವಿಸ್ತಾರ ಸಾಧ್ಯ.  

ಈ ಕೃತಿಯಲ್ಲಿ ರೇವತಿ ಎತ್ತುವ ಕೆಲವು ಪ್ರಶ್ನೆಗಳನ್ನು ನಾವು ಮುಖ್ಯವಾಗಿ ಗಮನಿಸಬೇಕು. ಗಂಡು, ಹೆಣ್ಣು, ಪ್ರಾಣಿ ಮತ್ತು ಸಸ್ಯ ಪ್ರಪಂಚದ ಸಲೈಂಗಿಕತೆ ಇವಾವು ಒಮ್ಮೆಗೆ ಬಂದವಲ್ಲ. ಪ್ರಕೃತಿಯಲ್ಲಿ ಇವೆಲ್ಲ ಸಹಜ. ಇವಕ್ಕೆ ವೈಜ್ಞಾನಿಕ ವಿವರಣೆಯೂ ಇದೆ. ತೃತೀಯ ಲಿಂಗಿಗಳ ಬದುಕನ್ನು ಅವರ ಆಸೆಗಳನ್ನು ಅವರು ಬದುಕನ್ನು ಕಟ್ಟಿಕೊಳ್ಳುವ ದಾರಿಗಳನ್ನು ನಾವೇಕೆ ಅನೈತಿಕ ಎನ್ನುತ್ತೇವೆ. ಹಾಗೆ ನೋಡಿದರೆ, ಸಮಾಜವನ್ನು ಗಂಡು-ಹೆಣ್ಣು ಎಂದು ವಿಭಾಗ ಮಾಡುವುದೇ ಅನೈತಿಕತೆ. ಕೇವಲ ಲೈಂಗಿಕತೆ ಮಾತ್ರವೇ ಹೇಗೆ ಅನೈತಿಕವಾಗುತ್ತದೆ. ಹಸಿವು, ಬಡತನ, ಶೋಷಣೆಗಳು ನಿಜವಾದ ಅನೈತಿಕತೆ.

ಸಮಾಜದಲ್ಲಿ ಅಧಿಕಾರ ರಚನೆ, ಸಂತತಿ ಮುಂದುವರಿಕೆ, ಹಾಗೂ ಖಾಸಗಿ ಆಸ್ತಿ ಇತ್ಯಾದಿ ಆಲೋಚನೆಗಳು ಪ್ರಭಲವಾಗಿವೆ. ಇವುಗಳು ಸ್ವಾರ್ಥದಿಂದ ಕೂಡಿರುವವು. ನಮ್ಮ ಮಕ್ಕಳು ನಮ್ಮ ನಾಳಿನ ಪ್ರೇಮದ ಪುತ್ರ ಪುತ್ರಿಯರು, ಅವರು ಇನ್ನು ಮುಂದೆ ಮುಂದೆ ಸಾಗಲು ನಾವು ಭಾಗಿ ಬಿಲ್ಲುಗಳಾಗೋಣ ಎಂದು ರೂಮಿ ಹೇಳುವ ಮಾತುಗಳನ್ನು ನಾವು ನೆನಪಿಸಿಕೊಳ್ಳಬೇಕು. ನಮ್ಮ ಮಕ್ಕಳನ್ನು ನಾವು ಪ್ರೀತಿಯಿಂದ ಸಾಕಬೇಕು. ಅವರು ಮುಂದೆ ಬೆಳೆದು ನಮ್ಮ ವಂಶ ಅಭಿವೃದ್ದಿ ಮಾಡ್ತಾರೆ, ನಮ್ಮನ್ನ ಚನ್ನಾಗಿ ನೋಡಿಕೊಳ್ತಾರೆ ಇತ್ಯಾದಿ ಸ್ವಾರ್ಥದಿಂದಲ್ಲ. ಈ ಸ್ವಾರ್ಥವೇ ನಮ್ಮ ಸಮಾಜದ ಹಲವು ಅನರ್ಥಗಳಿಗೆ ಕಾರಣ.

ಹಾಗೆ ನೋಡಿದರೆ, ಇಡೀ ವಿಶ್ವದಲ್ಲಿ ಗಂಡು ಹೆಣ್ಣು ಎಂಬುದಷ್ಟೇ ಇಲ್ಲ. ಎಲ್ಲ ಪಕ್ಷಿಗಳೂ ಹಾರುವುದಿಲ್ಲ. ಎಲ್ಲ ಹಣ್ಣುಗಳು ಸಿಹಿ ಇರುವುದಿಲ್ಲ. ಎಲ್ಲ ಸಸ್ತನಿಗಳು ಮರಿ ಹಾಕುವುದಿಲ್ಲ. ಹೀಗೆ ಒಂದು ಎಂಬುದು ಪ್ರಕೃತಿಯಲ್ಲಿಲ್ಲ. ಅದೇ ರೀತಿ ಹೆಣ್ಣು ಗಂಡು ಸಹ. ಇವರು ಗಂಡು ಇವರು ಹೆಣ್ಣು ಎಂದು ಒಬ್ಬರ ಮೇಲೆ ಹೇರಿಕೆ ಮಾಡುವುದೇ ತಪ್ಪು.

ದೊರೈಸ್ವಾಮಿ ಹುಟ್ಟಿದ್ದಾಗ ಅವರನ್ನು ಗಂಡು ಎಂದರು, ಅವನ ವರ್ತನೆಯನ್ನು ನೋಡಿ ಹೆಣ್ಣಿಗ ಅಂದರು. ಮುಂದೆ ತಾನು ಹೆಣ್ಣೇ ಆದಾಗ ನಿನ್ನ ಧ್ವನಿ ಏಕೆ ಗಂಡಸಿನಹಾಗಿದೆ. ನಿನ್ನ ಸ್ತನಗಳು ನಿಜವಾದವೇ? ಇತ್ಯಾದಿ ಪ್ರಶ್ನೆಗಳನ್ನು ಕೇಳಿದರು. ಅಂದರೆ ಇದರ ಅರ್ಥ ಪ್ರಾಕೃತಿಕವಾಗಿರುವುದನ್ನು ನಾವು ಒಪ್ಪಿಕೊಳ್ಳುವುದಕ್ಕೆ ಸಿದ್ಧವೇ ಇಲ್ಲ. ಒಂದು ನಮ್ಮ ನಿಮ್ಮಂತಹ ಜೀವವಾಗಿ ನಾವು ರೇವತಿಯನ್ನು ಏಕೆ ಒಪ್ಪಿಕೊಳ್ಳುವುದಕ್ಕೆ ಸಾಧ್ಯವಿಲ್ಲ? ರೇವತಿಗೆ ಆಸ್ತಿ ಕೊಡಬೇಕಾದಾಗ ಅವಳಿಗೆ ವಾರಸುದಾರರಿಲ್ಲ ಎಂಬ ಕಾರಣವನ್ನು ಕೊಡುವ ಮನೆಯವರು, ಅವಳು ಹಣ ಸಂಪಾದಿಸಿ ತಂದು ಕೊಡುವಾಗ ಸಂತೋಷದಿಂದ ಸ್ವೀಕರಿಸುತ್ತಾರೆ. ತಂದೆಯ ಆರೋಗ್ಯಕ್ಕೆ, ತಾಯಿಯ ಆರೋಗ್ಯಕ್ಕೆ ಮನೆಯ ಖರ್ಚಿಗೆ ಇದಕ್ಕೆಲ್ಲಾ ಸಾಕಷ್ಟು ಹಣವನ್ನು ತಂದು ಕೊಟ್ಟಾಗ ಅದನ್ನು ತೆಗೆದುಕೊಳ್ಳುವುದಕ್ಕೆ ಇಲ್ಲದ ಸಮಸ್ಯೆ ರೇವತಿಗೆ ಆಸ್ತಿ ಕೊಡುವಾಗ ಮಾತ್ರ ಏಕೆ ಬರುತ್ತದೆ?. ಈ ಕೃತಿಯ ಉದ್ದಕ್ಕೂ ಎಲ್ಲಿಯೂ ನಮ್ಮ ಬಗ್ಗೆ ಕರುಣೆ ತೋರಿಸಿ ಎಂದು ರೇವತಿ ಕೇಳುವುದಿಲ್ಲ. ನಿಮ್ಮಲ್ಲಿ ನಾನು ಒಬ್ಬಳು. ನನಗೂ ನಿಮ್ಮಂತೆ ಬದುಕಲು ಬಿಡಿ ಎಂದಷ್ಟೇ ರೇವತಿ ಕೇಳುವುದು. ಈ ಅವಕಾಶವನ್ನು ನಾವೇಕೆ ಅವಳಿಗೆ ಕೊಡಬಾರದು. ಗಂಡು ಎಂದರೇನು?, ಬರೀ ಶಿಷ್ನವೇ? ಹೆಣ್ಣು ಎಂದೇನು ಬರಿಯ ಯೋನಿಯೇ? ಅದೊಂದು ಸಮಗ್ರ ಸೌಂದರ್ಯ. ಪ್ರಕೃತಿ ಎಂದೂ ಸಮನಾಂತರವಾದದಲ್ಲ. ಅದರ ನಿಯಮವೇ ವೈವಿಧ್ಯತೆ, ಬಹುತ್ವ. ಎಲ್ಲವೂ ಸತ್ಯ. ಎಲ್ಲವೂ ಹೌದು.

ರೇವತಿ ಇಷ್ಟೊಂದು ಕಠೋರವಾದ ನಿಯಮಗಳಲ್ಲಿಯೂ ಜೀವಂತಿಕೆಯಿಂದ ಅಷ್ಟೇ ಪ್ರೀತಿಯಿಂದ ಬಾಳಿ ಬದುಕಿ, ಈ ಕೃತಿಯನ್ನು ಬರೆದಿರುವಳು. ಅದರ ಜೊತೆಗೆ ತನ್ನ ಊರಿನ ಸಮುದಾಯ, ಸಂಸ್ಕೃತಿ, ದೇವರು ಆಚರಣೆ ಇತ್ಯಾದಿಗಳನ್ನೂ ಅಷ್ಟೇ ಪ್ರೀತಿಯಿಂದ ಬರೆದಿದ್ದಾಳೆ. ರೇವತಿಯನ್ನು ಸಮಾನ ಅಸಮಾನವಾಗಿ ಕಂಡಿರಬಹುದು. ಆದರೆ, ರೇವತಿ ಎಲ್ಲವನ್ನೂ ಸಮವಾಗಿಯೇ ಕಾಣುತ್ತಾಳೆ. ಯಾವ ಕ್ರೋಧ, ದ್ವೇಷ, ಮತ್ಸರಗಳಿಲ್ಲದೆ ಮನುಷ್ಯರನ್ನು ತಾನೂ ಒಬ್ಬ ಮನುಷ್ಯಳಾಗಿ ಶುದ್ಧ ಹೃದಯದಿಂದ ನೋಡಿ ರೇವತಿ ಈ ಕೃತಿಯನ್ನು ಬರೆದಿರುವುದು ಈ ಕೃತಿಯ ವೈಶಿಷ್ಟ್ಯ.

ಈ ಕೃತಿ ತಮಿಳಿನಲ್ಲಿ ಮತ್ತಷ್ಟು ಆಪ್ತವಾದ ಮೂಡಿಬಂದಿದ್ದು, LGBT ಹೋರಾಟಕ್ಕೆ ಈ ಕೃತಿ ಒಂದು ಮಹತ್ವದ ಮೈಲಿಗಲ್ಲು. ಈ ಕೃತಿಯ ನಂತರ ಲೀವಿಂಗ್‌ ಸ್ಮೈಲ್‌ ವಿದ್ಯ, ಅಕ್ಕಯ್‌ ಮುಂತಾದವರ ಕೃತಿಗಳು ಬಂದವು. ರೇವತಿಯ ಮತ್ತು ಇಂತಹವರ ಬದುಕುಗಳು ಬಹುಮುಖಿಯಾದವು. ಯಾವ ದಿಕ್ಕಿನಿಂದಲೂ ನಾವು ಇವರ ಬದುಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬುದು ನಮಗೆ ಈ ಕೃತಿಗಳ ಮೂಲಕ ಮನದಟ್ಟಾಗಿದೆ. ನಮ್ಮನ್ನು ಅವಮಾನಿಸಿದವರಿಂದಲೂ ನಾವು ಒಂದು ಒಪ್ಪಿಗೆಗೆ ಅಪ್ಪುಗೆಗೆ ಕಾಯುತ್ತಾ ಇದೇವೆ ಅನ್ನುವ ದ್ವನಿ ಈ ಕೃತಿಯಲ್ಲಿದೆ. ಹಾಗೆ ನೋಡಿದರೆ, ಬಹುಪಾಲು ಹೋರಾಟಗಳ ಧ್ವನಿಯೂ ಇದೆ. ಒಂದಾಗುವ, ಒಂದು ಸಮುದಾಯದ ಭಾಗವಾಗುವುದನ್ನು ಇವುಗಳು ಬಯಸುವುದು. ಪ್ರತಿರೋಧ ವ್ಯಕ್ತಪಡಿಸುತ್ತಲೇ, ಸಮತೋಲನ ಕಾಯ್ದುಕೊಂಡು ಹೋರಾಡುವ ಮೂಲಕ, ಘನತೆಯಿಂದ ಕೆಲವೊಮ್ಮೆ ಸಿಟ್ಟು ಆಕ್ರೋಶಗಳ ಮೂಲಕ ಸಮುದಾಯದ ಭಾಗವಾಗುವುದನ್ನೇ ಈ ಹೋರಾಟಗಳು ಬಯಸುವುದು. ಸಿಟ್ಟು, ಆಕ್ರೂಶ, ಪ್ರತಿರೋಧ ಮತ್ತು ಪ್ರತಿಭಟನೆಗಳಿಗೆ ಅವುಗಳದ್ದೇ ಆದ ಘನತೆ ಇದೆ.

ನೀನು ಹೆಣ್ಣು ಎಂದು ನಿನ್ನನ್ನು ನೀನು ಗುರಿತಿಸಿಕೊಳ್ಳುವುದಾದರೆ, ನಾನು ಸಹ ನಿನ್ನನ್ನು ಹೆಣ್ಣು ಅಂತಲೇ ಭಾವಿಸುವೆ. ಒಪ್ಪುವೆ ಅನ್ನುವುದು ಮುಖ್ಯ. ಇವರಿಗೆ ಬೇಕಿರುವುದು ಇದೆ. ನಾನು ಹೇಗಿದ್ದೇನೋ ಹಾಗೆ ನನ್ನನ್ನು ಒಪ್ಪುವ ಮನಸ್ಸು, ಸಮಾಧಾನ ಮಾಡುವ ಒಂದು ಸಾಂತ್ವನದ ಹೆಗಲು ನಮಗೆ ಬೇಕಿದೆ ಅನ್ನುವುದು ರೇವತಿಯಂತಹವರ ಆಶಯ. ಆದರೆ, ಹೀಗೆ ಇರುವುದನ್ನು ಇರುವ ಹಾಗೆ ಒಪ್ಪದೇ, ಅವರ ಪಾಡಿಗೆ ಅವರನ್ನು ಬದುಕಲೂ ಬಿಡದೆ, ಹಿಂಸಿಸುವುದು, ಅವಮಾನಿಸುವುದು ಮಾಡಿದಾಗ ಅದನ್ನ ಸಹಿಸಿಕೊಳ್ಳೊಕೆ ಹೇಗೆ ಸಾಧ್ಯ. ಸಮಾಜ ನಮ್ಮನ್ನು ಇರುವ ಹಾಗೆ ಒಪ್ಪುವುದಿಲ್ಲ ಅಂತ ತಿಳಿದಾಗ ಏನು ಮಾಡುವುದು. ಅವರ ಆಸೆ-ಆಶಯಗಳನ್ನು ಮುಚ್ಚಿಟ್ಟುಕೊಳ್ತಾರೆ. ಎಷ್ಟು ಕಾಲ ಮುಚ್ಚಿಡುವುದಕ್ಕೆ ಸಾಧ್ಯ?. ಹಾಗೇ ಮುಚ್ಚಿಡುವಾಗ ಅವರು ಅನುಭವಿಸುವ ಏಕಾಂತ, ನೋವು, ಒಂಟಿತನ, ಅಸಹಾಯಕತೆಗಳು ಎಷ್ಟು ಘೋರವಾದವು. ನಾವು ಒಬ್ಬರನ್ನ ಇಂತಹ ಅಸಹಾಯಕತೆಗೆ, ಏಕಾಂಗಿ ತನಕ್ಕೆ ನೂಕುವುದಲ್ಲವೇ ನಿಜವಾದ ಅನೈತಿಕತೆ.

ನಮ್ಮ ನಡುವಿನ ಒಬ್ಬರೊಂದಿಗೆ ಒಬ್ಬರನ್ನು ಬೆಸೆಯುವ ತಂತುಗಳನ್ನು ಕಂಡುಕೊಳ್ಳುವುದೇ ಅಲ್ಲವೇ ಪ್ರೀತಿ, ಅದೇ ನೈತಿಕತೆ. ಈ ತಂತುಗಳನ್ನು ಕತ್ತರಿಸಿಕೊಂಡು, ದ್ವೇಷವನ್ನ ಹರಡುವುದೇ ಅನೈತಿಕತೆ. ಸಮಾಜವು ನಮ್ಮನ್ನು ನಾವು ನಡೆಸಿಕೊಳ್ಳುವ ವಿಧಾನ ನಮಗೆ ನೋವು ತರಿಸುತ್ತೆ. ಕೋಪ ತರಿಸುತ್ತೆ ಆದರೆ ನಾವು ಈ ಸಮಾಜವನ್ನ ಅದರ ಚಿಂತನಾ ಕ್ರಮಗಳನ್ನು ಮುರಿದು ಕಟ್ಟುವುದು ಸಾಧ್ಯವಿದೆ ಅನ್ನುವುದನ್ನು ರೇವತಿಯ ಆತ್ಮಕಥನ ನಮಗೆ ತಿಳಿಸುತ್ತೆ. ಅದು ನಮಗೆ ಇಷ್ಟವಿದ್ದ ಹಾಗೆ ನಾವು ಬದುಕುತ್ತೇವೆ ಅನ್ನುವುದಕ್ಕಿಂತಲೂ ನಾವೆಲ್ಲರೂ ಒಂದೇ ಎಂಬ ಪ್ರಜ್ಞೆಯನ್ನ ತರುವುದಕ್ಕೆ ಸಾಧ್ಯ ಅನ್ನುವುದನ್ನ ಹೇಳುತ್ತೆ.

ಅಲ್ಲದೇ ಈ ಪುಸ್ತಕದಿಂದ ನನಗೆ ಸಾಕಷ್ಟು ಗೌರವ, ಹೆಸರು ಸಿಕ್ಕಿದೆ. ಅಪಾರ ಘನತೆಯಿಂದ ಬದುಕುತ್ತಿರುವ ರೇವತಿಗೆ ಈ ಎಲ್ಲ ಗೌರವಗಳು ಸಲ್ಲಬೇಕು. ಇಂದಿಗೂ ಹಲವರು ಈ ಪುಸ್ತಕವನ್ನು ಓದಿ ಮೆಚ್ಚಿಕೊಳ್ಳುತ್ತಲೇ ಇದ್ದಾರೆ ಇದು ಬಹಳ ಸಂತೋಷದ ವಿಷಯ. ಬದುಕು ಬಹಳ ದೊಡ್ಡದು. ಪ್ರಕೃತಿ ಎಲ್ಲರಿಗೂ ಬದುಕುವ ಚೈತನ್ಯವನ್ನು ಕೊಟ್ಟಿದೆ. ಬದುಕೇ ಒಂದು ಚಲನೆ. ರೇವತಿಯವರ ಬದುಕು ಇಂತಹ ಚೈತನ್ಯಶೀಲತೆಗೆ, ಚಲನಶೀಲತೆಗೆ ಸಾಕ್ಷಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾರಂಭದಿಂದಲೂ ಕೊನೆಯವರೆಗೂ ಹಾಜರಿದ್ದು ಎಲ್ಲರ ಚರ್ಚೆಯನ್ನು ಕೇಳಿಸಿಕೊಂಡಿದ್ದ ಎ ರೇವತಿಯವರು ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡುತ್ತಾ, ನನ್ನ ಕತೆಯನ್ನು ನಿಮ್ಮದೇ ಕತೆ ಎಂಬಂತೆ ನೀವೆಲ್ಲರೂ ಓದಿರುವಿರಿ. ಅದನ್ನು ತಮ್ಮದೇ ಕತೆ ಎನ್ನುವ ಹಾಗೆ ದು. ಸರಸ್ವತಿಯವರು ಅನುವಾದಿಸಿದ್ದಾರೆ. ನನಗೆ ಇಷ್ಟೊಂದು ಪ್ರಸಿದ್ಧಿಯನ್ನು ತಂದುಕೊಟ್ಟಿರುವುದು ಕರ್ನಾಟಕವೇ. ಹೀಗಾಗಿ ನನ್ನ ಕತೆ ಕರ್ನಾಟಕದವರಿಗೆ ಕನ್ನಡದಲ್ಲಿ ತಲುಪಬೇಕು ಎಂಬ ನನ್ನ ಆಸೆಯನ್ನು ಸರಸ್ವತಿ ಪೂರೈಸಿದ್ದಾರೆ. ಇದು ನನಗೆ ಬಹಳ ಸಂತೋಷದ ವಿಷಯ. ನಾನು ಈಗ ನಮ್ಮವರೊಂದಿಗೆ ನನ್ನ ಊರಿನಲ್ಲೇ ಇದ್ದೇನೆ. ನಾನೀಗ ತಮಿಳುನಾಡಿನಲ್ಲಿ ಇದ್ದರೂ ಈ ಪುಸ್ತಕದ ಮೂಲಕ ಕರ್ನಾಟಕದಲ್ಲಿ ನಾನು ಜೀವಿಸುತ್ತಿರುವೆ. ಇಂದು ನಮ್ಮ ಮನೆಯವರು ನನ್ನನ್ನು ಒಪ್ಪಿದ್ದಾರೆ. ಆದರೆ ಆಸ್ತಿ ವಿಷಯದಲ್ಲಿ ನಮ್ಮ ನಡುವೆ ಇನ್ನು ಮನಸ್ತಾಪವಿದೆ. ನನಗೆ ಯಾವುದೇ ಆಸ್ತಿ ಬೇಡ ಎಂದು ಹೇಳಿರುವೆ. ನನ್ನ ಕೃತಿಯನ್ನು ಓದಿ, ನನ್ನನ್ನು ಪ್ರೀತಿಸುವ ನೀವೇ ನನ್ನ ನಿಜವಾದ ಆಸ್ತಿ.

ನಮ್ಮನ್ನು ಕುರಿತು ಮಂಗಳಮುಖಿ, ಹಿಜ್ರಾ, ತಿರುನಂಗೈ, ಉತ್ತರದ ಕಡೆ ಕಿನ್ನರ್‌ ಇತ್ಯಾದಿ ಹೆಸರುಗಳಿಂದ ಕರೆಯುವರು. ಯಾವುದೇ ಹೆಸರಿಂದ ಕರೆದರೂ ಸಹ ಅದನ್ನು ಗೌರವ ಭಾವದಿಂದ ಘನತೆಯಿಂದ ಬಳಸಬೇಕು. ನಾನು ಈಗ ಮನೆಯಲ್ಲಿಯೇ ಇರುವೆ ಶರ್ಟ್‌ ಪ್ಯಾಂಟ್‌ ಧರಿಸುವೆ ಕಟ್ಟಿಂಗ್‌ ಮಾಡಿಸುವೆ. ಇದೆಲ್ಲ ನನ್ನ ಆಯ್ಕೆ, ನಾನು ನನಗೆ ಇಷ್ಟ ಬಂದ ಹಾಗೆ ನನ್ನನ್ನು ನಾನು ಅಲಂಕರಿಸಿಕೊಳ್ಳುವ ಸ್ವಾತಂತ್ರ್ಯ ನನಗಿರಬೇಕು.

ಹಲವರು ನಮ್ಮನ್ನು ಕುರಿತು ಅಧ್ಯಾಯನ ಮಾಡುವ ಹೆಸರಿನಲ್ಲಿ ಬಂದು ನಮ್ಮಿಂದ ಸಾಕಷ್ಟು ಮಾಹಿತಿ ಪಡೆದು ಥೀಸೀಸ್‌ ಬರೆದು ಲಾಭ ಪಡೆಯುತ್ತಾರೆ. ಆದರೆ ನಮ್ಮ ಕುರಿತು ಆಲೋಚಿಸುವವರು ಆಪ್ತತೆಯನ್ನು ಉಳಿಸಿಕೊಳ್ಳುವವರು ಬೇಕು. ಇಂತಹ ಕೆಲಸವನ್ನು ತಾವು ಮಾಡುತ್ತಿರುವುದು ನನಗೆ ಖುಷಿ ತಂದಿದೆ. ಎಂದು ಹೇಳಿದರು. ನಂತರದ ಸಂವಾದದಲ್ಲಿ ಕೆ.ವಿ. ನೇತ್ರಾವತಿ, ಕಲಾವತಿ ಮಧುಸೂಧನ, ಪವಿ ವಿ. ಮುಂತಾದವರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ ಧನುಷ್‌ ಎಚ್‌ ಶೇಖರ್.



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...