ಹೀಗೆ ಒಂದ್ ಸಾರಿ ನಮ್ಮ ಕ್ಲಾಸ್ ನಲ್ಲಿ ಇಂಗ್ಲಿಷ್ ಮ್ಯಾಮ್ ಜೊತೆ ನನ್ನ ಕವಿಗೋಷ್ಠಿಯ ವಿಚಾರವಾಗಿ ದು.ಸರಸ್ವತಿ ಮ್ಯಾಮ್ ರವರ ಕುರಿತು ಮಾತಾಡ್ಬೇಕಾದ್ರೆ ಇಂಗ್ಲಿಷ್ ಮ್ಯಾಮ್ ಹೇಳಿದ್ರು "ದು.ಸರಸ್ವತಿ ಯವರ ಬದುಕು-ಬಯಲು ಓದು ತುಂಬಾ ಚೆನಾಗಿದೆ, ಅದನ್ನ ಓದಿ ನಾನು ಅವರ ದೊಡ್ಡ ಫ್ಯಾನ್ ಆಗ್ಬಿಟ್ಟಿದ್ದೀನಿ" ಅಂತ. ಅಲ್ಲಿಂದ ನನಗೆ ಆ ಪುಸ್ತಕ ಕೊಂಡು ಓದಲು ಮನಸ್ಸಾಯ್ತು. ತುಂಬಾ ಪುಸ್ತಕದ ಮಳಿಗೆಗಳಲ್ಲಿ ಹುಡುಕಿದೆ ಎಲ್ಲೂ ಸಿಗದಿದ್ದ ಆ ಪುಸ್ತಕ 'ಕನ್ನಡ ಜನ ಸಾಹಿತ್ಯ ಸಮ್ಮೇಳನ'ದಲ್ಲಿ ನಗುತ್ತಾ ಕುಳಿತಿತ್ತು. ಆಗ ತಡ ಮಾಡ್ದೆ ತಗೊಂಡೆ. ಓದಲು ಶುರು ಮಾಡಿದಾಗಿನಿಂದ ಇಷ್ಟು ವರ್ಷ ನನ್ನ ಮನಸ್ಸಿನಲ್ಲಿ ಮರೆಯಾಗಿದ್ದ, ಆಗಾಗ ಬಂದು ತನ್ನ ವಾಸ್ತವಿಕೆಯನ್ನ ತಿಳಿಸಲು ಪ್ರಯತ್ನಿಸುತ್ತಿದ್ದ ಒಂದು ಹೆಣ್ಣು ಜೀವ ಮರು ಹುಟ್ಟನ್ನ ಪಡೆಯಿತು ಎನ್ನಬಹುದು.
ಪುಸ್ತಕದ ಶುರುವಿನಲ್ಲೇ ಗೌರಿ ಲಂಕೇಶ್ ಅವರು "ಈ ಪುಸ್ತಕ ನಮ್ಮನ್ನ ನಗಿಸುತ್ತೆ, ಅಳ್ಸುತ್ತೆ, ಕೆಲವು ಪ್ರಶ್ನೆಗಳನ್ನ ಹುಟ್ಟಿಹಾಕಿ ಯೋಚಿಸುವಂತೆ ಮಾಡುತ್ತೆ" ಎಂದು ಬರೆದಿದ್ದನ್ನ ನೋಡಿ ಇನ್ನೂ ಓದುವ ಕುತೂಹಲ ಜಾಸ್ತಿಯಾಯ್ತು.
ಪುಸ್ತಕದಲ್ಲಿ ಬಾಲ್ಯದಿಂದಲೇ ನಡೆಯೋ ಕೆಲವೊಂದು ಘಟನೆಗಳು ಓದುತ್ತಿರುವ ನನಗೂ ನನ್ನೊಳಗಿರುವ ಆ ಮುಚ್ಚಿದ ಹೆಣ್ಣಿಗೂ ಅರಿವಾಗ ತೊಡಗಿತು. ನಾನು ಈ ಸಂದರ್ಭಗಳನ್ನ ಅನುಭವಿಸಿದ್ದೇನೆ ಎಂದು. ಎಷ್ಟೋ ಬಾರಿ ಅಕ್ಕನದೋ ತಂಗಿಯದೋ ಅಥವಾ ಅಮ್ಮನದೋ ಬಟ್ಟೆ ಸೀರೆಗಳನ್ನ ತೊಟ್ಟುಕೊಂಡು ನಲಿದಾಡುವ, ಅವರ ಸಿಂಗಾರದ ವಸ್ತುಗಳನ್ನ ಹಾಕಿಕೊಂಡು ಖುಷಿ ಪಡುವ ಸಂದರ್ಭಗಳು ಕಣ್ಣಿನ ಮುಂದೆ ಸಾಲಾಗಿ ಬಂದು ಮರೆಯಾದವು.
ರೇವತಿಯವರ ಬಾಲ್ಯದಲ್ಲಿ ಅವರು ದೇವಿ ಹಬ್ಬಕ್ಕಾಗಿ ಚಂದ್ರಮತಿ ವೇಷತೊಟ್ಟಾಗ ಅವರಲ್ಲಾಗೋ ಖುಷಿ ನಾನು ನಾಲ್ಕನೇ ತರಗತಿಯಲ್ಲಿದ್ದಾಗ ದ್ರೌಪದಿಯ ಪಾತ್ರ ಮಾಡಿದ್ದನ್ನ ನೆನಪಿಸುತ್ತೆ. ಆಗ ಬರುವ ಆ ಡೈಲಾಗ್ ನನ್ನ ಮನಸ್ಸನ್ನೇ ತಟ್ಟುತ್ತದೆ...."ನಾನು ಹೆಣ್ಣಿನ ವೇಷ ತೊಟ್ಟು ಹೆಣ್ಣಿನ ಪಾತ್ರ ಹಾಕಿದ್ದೀನಿ ಎಂದು ಲೋಕ ಭಾವಿಸಿತು. ಆದರೆ ನಾನು ಹೆಣ್ಣಿನ ವೇಷ ತೊಟ್ಟಿರಲಿಲ್ಲ ಬದಲಾಗಿ ಹೆಣ್ಣೇ ಆಗಿದ್ದೆ"ಎನ್ನುತ್ತಾರೆ. ಓದುತ್ತಾ ಓದುತ್ತಾ ನಿಧಾನವಾಗಿ ಪುಸ್ತಕ ನನ್ನನ್ನೇ ಆವರಿಸಿ ಬಿಟ್ಟಿತ್ತು ಹೇಗೆಂದರೆ ನಾನೇ ರೇವತಿಯಾಗಿಬಿಟ್ಟಿದ್ದೆ....!
ರೇವತಿಯೇ ಆಗಿದ್ದ ನಾನು ನನ್ನ ಕೆಲವು ನಡವಳಿಕೆಗಳಿಂದ ಅಪ್ಪ ಅಮ್ಮ ಮತ್ತು ಅಣ್ಣಂದಿರ ಕೋಪಕ್ಕೆ ಗುರಿಯಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆಗೂ ಒಳಗಾಗಿದ್ದೆ, ಊರಿನ ಬೆಟ್ಟದಲ್ಲಿ ನನ್ನ ಹಾಗೆಯೇ ಇರುವ ಹಿಜ್ರಾ ಗೆಳತಿಯರ ಜೊತೆ ಸೀರೆಯುಟ್ಟು ಕುಣಿದು ನನ್ನ ಆಸೆಗಳನ್ನ ತೀರಿಸಿಕೊಂಡಿದ್ದೆ, ಚೆನ್ನೈನಲ್ಲಿ ಸುತ್ತಾಡಿದ್ದೆ, ಸ್ನೇಹಿತನ ಸಹಾಯ ಪಡೆದು ಅಮ್ಮನ ಓಲೆಯನ್ನ ಮಾರಿ ಅದರಲ್ಲಿ ಬಂದ ಹಣದಲ್ಲಿ ಮುಂಬೈ ತನಕವೂ ತಲುಪಿದ್ದೆ, ಅಲ್ಲಿ ಶಿಶ್ನ ಇದ್ದವರನ್ನ ಒಪ್ಪಿಕೊಳ್ಳದೇ ಹೋದಾಗ ಬಿಕ್ಷೆಬೇಡಿ... ಗುರುವಿಗೆ ಸೇವೆಮಾಡಿ ಅವರಿಗೆ ಸಂತೋಷ ಪಡಿಸಿ ಆಪರೇಷನ್ ಮಾಡಿಸುವಂತೆ ಕೇಳಿಕೊಂಡಿದ್ದೇನೆ, ಚೆನ್ನೈನಲ್ಲಿ ಆಪರೇಷನ್ ಆದ ನಂತರ ನಡೆಯಲು ಕಷ್ಟ ಪಟ್ಟು ರೈಲ್ವೇ ಸ್ಟೇಷನ್ ನಲ್ಲೇ ಮಲಗಿದ್ದೇನೆ. ಈ ಆಪರೇಷನ್ ನ ಬಗ್ಗೆ ತಿಳಿಸಲೇ ಬೇಕೆಂದರೆ ಅವತ್ತು ಬಸ್ ನಲ್ಲಿ ಈ ಪುಸ್ತಕ ಓದುತ್ತಲೇ ಅದರಲ್ಲಿ ಮುಳುಗಿಹೋಗಿದ್ದರಿಂದ, ನಾನೇ ರೇವತಿ ಎಂದುಕೊಂಡಿದ್ದರಿಂದ ಆಪರೇಷನ್ ಬಗೆಗೆ ಓದುತ್ತಾ ನನಗೆ ಶಿಶ್ನ ಕತ್ತರಿಸಿದ್ದಾರೆ ಎಂಬಂತೆ ಭಾವಿಸಿಕೊಂಡು ನಾನು ಇಳಿಯುವ ಸ್ಟಾಪ್ ಬಂದಾಗ ಎದ್ದೇಳಲು ಕಷ್ಟವಾಗುವಂತೆ ನನ್ನಲ್ಲೇ ಒಂದು ರೀತಿಯ ನೋವಿನ ಭಯ ಆವರಿಸಿಕೊಂಡಿದ್ದು ಈಗಲೂ ಮೈ ಜುಮ್ ಎನ್ನಿಸುತ್ತದೆ.
ಗಂಡಿನ ಜೊತೆ ಮಿಲನವಾಗುವ ಆಸೆ ಇಂದ ಹಳೇ ಗುರುವನ್ನ ಬಿಟ್ಟು ವೇಶ್ಯಾವಾಟಿಕೆಗೆ ತೊಡಗಿದ್ದಾಗ ಎಷ್ಟೋ ಜನ ರೌಡಿಗಳು ಬಲವಂತವಾಗಿ ಸೆಕ್ಸ್ ಮಾಡಲು ಹೊಡೆದು ಒಪ್ಪಿಸಿ ಒಪ್ಪದಿದ್ದಾಗ ಜೀವ ಬೆದರಿಕೆ ಯೊಡ್ಡಿದ್ದನ್ನು ಮತ್ತು ಈ ಚಿಕ್ಕ ಜಾಗದಲ್ಲೂ ಇರೋದಕ್ಕೆ ಬಿಡುವುದಿಲ್ಲ ಎಂದಾಗ ಓದುತ್ತಿರುವ ನಮಗೂ ಅಲ್ಲಿಯ ವ್ಯವಸ್ಥೆಯ ಮೇಲೆ ಕೋಪ ಬರುತ್ತದೆ ಮನುಷ್ಯರನ್ನ ಮನುಷ್ಯರ ಹಾಗೆ ನಡೆಸಿಕೊಳ್ಳದಿರುವುದರ ಬಗ್ಗೆ ಅಸಹನೆ ಉಂಟಾಗುತ್ತದೆ. ಎಲ್ಲವನ್ನೂ ದಾಟಿ ಬಂದ ರೇವತಿಯವರು ಬೆಂಗಳೂರಿಗೆ ಬಂದು ಅಲ್ಲೂ ಸಹ ಸೆಕ್ಸ್ ವರ್ಕ್ ಮಾಡುತ್ತಾರೆ ಅಲ್ಲಿ ಬಂದ ಸ್ವಲ್ಪ ಸ್ವಲ್ಪ ವೇ ಹಣವನ್ನ ತನ್ನ ಮನೆಗೆ ಕಳುಹಿಸುತ್ತಾರೆ. ಅವರ ಮನೆಯವರು ಎಷ್ಟೇ ಅವರಿಗೆ ತೊಂದರೆ ಕೊಟ್ಟರೂ ಸಹ ಅವರನ್ನ ನನ್ನವರೆಂದು ಒಪ್ಪಿಕೊಂಡಿರುವ ರೇವತಿಯವರ ಮುಂದೆ ಅವರಲ್ಲಿನ ಈ ಹೆಣ್ತನದ ಕಾರಣದಿಂದ ಅವರನ್ನ ಮೃಗಕ್ಕಿತ ಕೀಳಾಗಿ ನೆಡೆಸಿಕೊಂಡ ಅವರ ಮನೆಯವರು ತುಂಬಾ ಚಿಕ್ಕವರಂತೆ ಕಾಣುತ್ತಾರೆ. ಸೆಕ್ಸ್ ವರ್ಕ್ ನ ನಂತರ ಸಂಗಮದಲ್ಲೂ ಕೆಲಸಮಾಡಲು ತೊಡಗಿ ಅಲ್ಲಿ ತನ್ನ ಹಾಗೆ ಇರುವ ಹಿಜ್ರಾಗಳ ಪರವಾಗಿ ನಿಂತು ಅವರಿಗೆ ಬೇಕಾದ ಎಲ್ಲ ಹಕ್ಕುಗಳ ಬಗೆಗೆ ಧ್ವನಿ ಎತ್ತುತ್ತಾರೆ.
ಈ ಪುಸ್ತಕದ ಬಗೆಗೆ ಕಾರ್ಯಕ್ರಮವೊಂದರಲ್ಲಿ ದು.ಸರಸ್ವತಿ ಮ್ಯಾಮ್ ಅವರ ಜೊತೆ ಈ ಪುಸ್ತಕದ ಕುರಿತು ಮಾತನಾಡುತ್ತಿದ್ದಾಗ ಅವರು ಹೇಳಿದರು "ಇದು ಏಕೆ ಎಲ್ಲರಿಗೂ ಇಷ್ಟ ಆಗುತ್ತೆ ಅಂದ್ರೆ ಎಲ್ಲರ ಮನಸ್ಸಿಗೂ ಜೀವನಕ್ಕೂ ಇದು ತಟ್ಟುತ್ತೆ. ವಾಸ್ತವಿಕತೆಯನ್ನ ಅರ್ಥ ಮಾಡಿಸುತ್ತೆ " ಎಂದಿದ್ದರು.ಇದು ನಿಜವೇ ಇದರಲ್ಲಿ ಬರುವ ಒಂದೊಂದು ಘಟನೆಗಳು ಸಹ ಅಲ್ಲಲ್ಲಿ ನಮ್ಮ ಜೀವನದಲ್ಲಿ ಮುಚ್ಚಿಹೋದ ಕೆಲವೊಂದು ಬಾಗಿಲುಗಳನ್ನು ತಟ್ಟಿ ತೆರೆಸಿ ಅಲ್ಲಿರುವ ಎಲ್ಲಾ ವಿಷಯಗಳನ್ನ ಆಚೆ ತರಿಸುತ್ತದೆ ಒಂದು ರೀತಿಯ ಮನಸ್ಸಿನಲ್ಲೇ ನಮ್ಮನ್ನ ನಾವು ಗುರಿಯಾಗಿಸಿಕೊಂಡು ಸ್ವಯಂ ಪ್ರಶ್ನೆ ಮಾಡಿಕೊಳ್ಳುವ ಹಾಗೆ ಮಾಡುತ್ತದೆ....
ನಮ್ಮ ಸಮಾಜದಲ್ಲಿ ಗಂಡು ಹೆಣ್ಣು ಎಂದು ಒಪ್ಪಿಕೊಳ್ಳುತ್ತಾರೆಂಬುದು ಸತ್ಯವಾದರೆ ಗಂಡಿನಂತಿರುವ ಹೆಣ್ಣು....ಹೆಣ್ಣಿನಂತಿರುವ ಗಂಡು ಇರುತ್ತಾರೆಂದು ಅರ್ಥ ಮಾಡಿಕೊಳ್ಳುವ ಮನಸ್ಸುಗಳು ಜಾಸ್ತಿಯಾಗಿ ಹಿಜ್ರಾ ಗೆಳತಿಯರನ್ನ ತಮ್ಮವರೆಂದು ಭಾವಿಸುವ ಘಳಿಗೆಯನ್ನು ಎದರು ನೋಡ ಬೇಕಿದೆ. ದಲಿತ ಮತ್ತು ಮಹಿಳೆಯರಿಗಿಂತ ಇನ್ನೂ ಕೀಳಾಗಿ ನಮ್ಮ ಸಮಾಜ ಹಿಜ್ರಾಗಳನ್ನ ನಡೆಸಿಕೊಳ್ಳುತ್ತದೆ. ಈಗಲೂ ನಿಗೂಢವಾಗಿರುವ ಹಿಜ್ರಾ ಸಮುದಾಯಗಳು ಜನರಿಗೆ ಕುತೂಹಲ ಮೂಡಿಸುವುದರ ಜೊತೆಗೆ ಅವರನ್ನ ತಿರಸ್ಕಾರದಿಂದ ಅನ್ಯಗ್ರಹ ಜೀವಿಗಳೆಂದು ಕಾಣುತ್ತಿರುವುದು ದುಃಖಕರ ಸಂಗತಿಯಾಗಿದೆ. ಇತ್ತೀಚೆಗೆ ಸ್ವಲ್ಪ ಸ್ವಲ್ಪ ವೇ LGBTQ ಸಮುದಾಯದ ಜನರು ಮುಂದೆ ಬಂದು ತನ್ನ ಹಕ್ಕುಗಳನ್ನ ಕವನಗಳ, ಕಥೆಗಳ, ಹಾಡುಗಳ ಮತ್ತು ತಮ್ಮ ಹೋರಾಟದಿಂದ ಕೇಳುತ್ತಿದ್ದಾರೆ. ಈ ತರಹದ ವರ್ತಮಾನ ಇನ್ನೂ ಹೆಚ್ಚಾಗಬೇಕಿದೆ. ಕೆಲವು ವಾರಗಳ ಹಿಂದೆ ನನ್ನ ಸಂಗಾತಿಯೊಬ್ಬರ ಜೊತೆ ಮಾತನಾಡುತ್ತಿದ್ದಾಗ "ಕ್ವೀರ್ ಸಾಹಿತ್ಯ ಹೆಚ್ಚಾದಂತೆ ಇದೆಲ್ಲ ಸಾಧ್ಯ ಎಂದು. ಇವುಗಳಿಂದ ನಮ್ಮ ಜನರ ತಪ್ಪು ಕಲ್ಪನೆ ಹಾಗೂ ಅರಿವಿನಿಂದ ಹೊರ ತರಬೇಕಿದೆ" ಎಂದು ಮಾತನಾಡಿದ್ದೆವು.ಇದರಲ್ಲಿ ಮಾನಿನಿ, ಚಾಂದಿನಿ, ಪಂಚಮಿ ಯವರೆಲ್ಲ ಅವರ ಕವನಗಳಿಂದ ತಮ್ಮಲ್ಲಾಗುವ ಮನಸ್ಸಿನ ಎಲ್ಲಾ ತುಮುಲಗಳ ಬಗೆಗೆ ವಿವರಿಸಿದ್ದಾರೆ. ಈ ತರಹದ ಪ್ರಯತ್ನಗಳು ಇನ್ನೂ ಹೆಚ್ಚಾಗಬೇಕೆಂಬುಂದೆ ನಮ್ಮ ಗುರಿಯಾಗಿದೆ. ಇದನ್ನ ಕಣ್ತುಂಬಿಕೊಳ್ಳಲು ಇದಕ್ಕಾಗಿ ನಾವು ಶ್ರಮಿಸಬೇಕಿದೆ. "ಅಕ್ಕಯ್ ಪದ್ಮಶಾಲಿ"ಯವರು ಹೇಳುವ "CAN I HUG YOU" ಎಂಬ ಮಾತು ನಾವೂ ನಿಮ್ಮಂತೆಯೇ ಮನುಷ್ಯರು ನಮ್ಮನ್ನ ಆಲಿಂಗಿಸಿಕೊಳ್ಳಿ. ನಮ್ಮನ್ನ ಅಸಾಮಾನ್ಯರಂತೆ ಕಾಣುವ ಬದಲು ನಿಮ್ಮಂತೆ ಸಾಮಾನ್ಯರಂತೆ ಕಾಣಿ. ನಮ್ಮನ್ನ ಸಾಮಾಜಿಕವಾಗಿ ಒಳಗೊಳ್ಳಿಸಿಕೊಳ್ಳಿ ಎಂಬ ಅರ್ಥವೇ ಆಗಿದೆ. ಈ ವೈವಿಧ್ಯತೆಯನ್ನ ನಾವು ಸ್ವೀಕರಿಸಬೇಕಾಗಿದೆ.
ಹೇಳಬೇಕೆಂದರೆ ಪ್ರತೀ ಗಂಡಿನಲ್ಲೂ ಹೆಣ್ಣಿರುತ್ತಾಳೆ ಹಾಗೆಯೇ ಪ್ರತೀ ಹೆಣ್ಣಿನಲ್ಲೂ ಗಂಡಿರುತ್ತಾನೆ. "ಗಂಡು ಹೆಣ್ಣಿನ ಮಿಲನದ ಮಿಶ್ರಣವೇ ಅಲ್ಲವೇ ಒಂದು ಮಗು" ಎನ್ನುವುದನ್ನ ತಿಳಿಯಬೇಕಿದೆ. ನಾನು ಶುದ್ಧ ಗಂಡು, ನಾನು ಶುದ್ಧ ಹೆಣ್ಣು ಎನ್ನುವ ಭ್ರಮೆ ಇಂದ ಆಚೆ ಬರಬೇಕಿದೆ. ಇನ್ನೂ ಹೇಳಲು, ಮಾತನಾಡಲು ಬಹಳಷ್ಟಿದೆ ಸದ್ಯಕ್ಕೆ ಇಷ್ಟು ಸಾಕು ಎನಿಸುತ್ತದೆ.
ಕೊನೆಯಲ್ಲಿ ಇದರ ಮುನ್ನುಡಿಯಲ್ಲಿರುವ ದು.ಸರಸ್ವತಿಯವರ ಮಾತನ್ನ ಹಂಚಿಕೊಳ್ಳಲು ಬಯಸುತ್ತೇನೆ:
"ಏನು ಹೆಣ್ಣೆಂದರೆ? ಮೊಲೆ, ಯೋನಿ,ಗರ್ಭವೇ?
ಗಂಡೆಂದರೆ ಮೀಸೆ,ದಾಡಿ,ಶಿಶ್ನವೇ? ಅದರಾಚೆಗಿನದು ಏನು? ಇದ್ದರೆ ಅದು ಒಂದಂತೂ ಅಲ್ಲ, ಎಷ್ಟೆಷ್ಟೋ ತೆರೆನ ಜೀವಿಗಳೋ ಅಷ್ಟಷ್ಟು ತೆರನಿರಬೇಕು.
ಧನ್ಯವಾದಗಳು.......ಜೈ ಭೀಮ್.
- ಭರತ್ ಆರ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ