ಇಳೆಯ ತುಂಬ
ಇನ್ನೂ ವಾಸಂತಿ ನಗುವವಳಿದ್ದಾಳೆ.
ಊರೂರ ತುಂಬ
ಇನ್ನೂ ತಳಿರು ತೋರಣಗಳ ಕಟ್ಟುವವಳಿದ್ದಾಳೆ.
ಹೃದಯದ ತುಂಬ
ಇನ್ನೇನೂ ಒಲವ ಓಲೆಯ ಚಿಗುರಿಸುವವಳಿದ್ದಾಳೆ.
ಆದರೆ ಇಲ್ಲಿನ ಸರ್ವಾಧಿಕಾರಿ ಇದೆಲ್ಲವ ತಡೆಯಲು
ಇಚ್ಛಿಸಿದ್ದಾನೆ!
ಸರ್ವಾಧಿಕಾರಿ ಒಬ್ಬನೇನಾ!
ಇಲ್ಲ.
ಸರ್ವಾಧಿಕಾರಿಗಳು
ಜನಿಸಿ ಅಹಿಂಸೆಯ ಹೂವ ಹೊಸಕಿ, ಸಾಯಿಸಿ
ಅಲ್ಲಲ್ಲಿ ಉಳಿದ ಬಹುತ್ವದ
ಕುತ್ತಿಗೆ ಹಿಡಿಯುತ್ತಿದ್ದಾರೆ!
ಸರ್ವಾಧಿಕಾರಿಯೂ
ಅವನ ದೇವರಿಗೆ ಪ್ರಿಯವಾಗಿಹನೇ?!
ಹೌದು,
ಕೊಡಲು ಇಂತಿಷ್ಟೆ ಪ್ರೀತಿಯ
ಮನದ ಕಡಲ ತೀರವ ಅಗೆದು ಬಗೆದು
ಉಸಿರ ಕುಟ್ಟಿ ನೆತ್ತರ ಹರಿಸಲು ಪ್ರಚೋದಿಸಿದ್ದಿರಬಹುದು!
ಮನವ ಶೃಂಗರಿಸಿ
ಬಯಲ ಬಹಿಷ್ಕರಿಸಿ
ಎದೆಯ ದನಿಯು ಕೇಳದೇ ಹೋಯಿತೇ!
ಎದೆಯ ಪ್ರೇಮದೊಡಲ ಬರಿದುಮಾಡಿ
ರಕ್ತಸಿಕ್ತವಾಗಿಸಿದ್ದಾರೆ
ಸರ್ವಾಧಿಕಾರಿಗಳು.
ಪಾಷಾಣ ಜ್ಞಾನವ ಉಣಬಡಿಸಿ
ಅಹಿಂಸೆಯ ತಾಯಿ ಗರ್ಭಕೆ
ಈಟಿ ಚಾಕು ಬಂದೂಕುಗಳಿಂದ
ಹಸಿಕನಸುಗಳಿಗೆ ತೀಡಿದ್ದಾರೆ!
ಬೇಡ ಬೇಡ!
ಸರ್ವಾಧಿಕಾರಿಗಳು
ಉಂಡ ಮೃಷ್ಟಾನ್ನ ನಾಳೆಗೆ ಹಳಸುವುದು!
ಸಂಭವಿಸಲಿ ನಮ್ಮೆದೆಯ ಕಡಲು
ಬಾನ ದಾರಿಗೆ ದೋಣಿ ವಿಹಾರ
ಹಾರಲಿ ಸಾರಲಿ ಜಗಕೆಲ್ಲ ಪಸರಿಸಲಿ
ನಡುವೆ ನಡೆದು ಸಿಡಿದು
ಸವೆದು ಹೋಗಲಿ ಸಿಡಿಲು
ಸಾಗಲಿ ಸಾಗಲಿ ಅನುಭಾವಿಸಿ
ಭಾರತವು ಮಾನವತ್ವದೆಡೆಗೆ
ಅಹಿಂಸೆಯ ಪ್ರಯೋಗದೆಡೆಗೆ.
- ಶ್ರೀಧರ ಜಿ, ಯರವರಹಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ