ಸಮಾಜದಲ್ಲಿ ಬೇರೂರಿರುವ ಸಮಸ್ಯೆಗಳಲ್ಲಿ `ಜಾತಿ ಸಮಸ್ಯೆ'ಯೂ ಒಂದು. ಮನುಷ್ಯರೇ ಸೃಷ್ಟಿಸಿರುವ ಈ ಜಾತಿಗಳಿಂದಾಗಿ ಅವಕಾಶ ವಂಚಿತರಾದ ಜನರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹಲವು ರೀತಿಯ ಹೋರಾಟಗಳನ್ನು ಮಾಡುತ್ತಾರೆ. ಪ್ರಸ್ತುತ ಸಿನಿಮಾರಂಗದಲ್ಲಿ ಜಾತಿ ಆಧಾರಿತವಾದಂತಹ ಸಿನಿಮಾಗಳು ಬರುತ್ತಿರುವುದು ಗಮನಾರ್ಹ ವಿಷಯ. ಇತ್ತೀಚಿಗೆ ನಾನು ನೋಡಿದ ಜಾತಿ ಆಧಾರಿತ ಹೋರಾಟದ ಸಿನಿಮಾಗಳಲ್ಲಿ ತಮಿಳಿನ `ಕರ್ಣನ್' ಮೂವಿಯೂ ಒಂದು.
`ಕರ್ಣನ್' ಮಾರಿ ಸೆಲ್ವರಾಜ್ ನಿರ್ದೇಶನದ, ಧನುಷ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ 2021ರಲ್ಲಿ ಬಿಡುಗಡೆಗೊಂಡ ತಮಿಳು ಚಿತ್ರ. ಇದು ಕೇವಲ ಒಂದು ಸಿನಿಮಾ ಮಾತ್ರವಲ್ಲ. ದಿನನಿತ್ಯ ಹಲವು ಕಡೆ, ಹಲವು ವಿಧಗಳಲ್ಲಿ ನಡೆಯುವಂತಹ ನೈಜ ಘಟನೆಗಳೇ ಆಗಿವೆ.
ಕರ್ಣ ಒಬ್ಬ ಅವಕಾಶವಂಚಿತ ಸಮುದಾಯಕ್ಕೆ ಸೇರಿದವ. ಜತೆಗೆ ಆರ್ಮಿಗೆ ಸೇರಬೇಕೆಂದು ಕನಸು ಹೊಂದಿದ್ದವ. ಸುತ್ತಮುತ್ತಲೂ ಅವನ ಸಮುದಾಯದವರೇ ಕೂಡಿದ ಒಂದು ಸಣ್ಣ ಹಳ್ಳಿ. ಆ ಹಳ್ಳಿಯ ಸುತ್ತಲೂ ಬೆಟ್ಟ, ಮರ ಗಿಡಗಳನ್ನಾವರಿಸಿದ ಕಾಡು. ಮೂಲ ನಿವಾಸಿಗಳು ಎಂದರೆ ಹಾಗೇ ಅಲ್ಲವೇ ಪ್ರಕೃತಿಯೇ ಅವರ ದೇವರು,ಮನೆ ಎಲ್ಲವೂ. ಮೇಲ್ಜಾತಿ ಎನಿಸಿಕೊಂಡವರಿಗೆ ನೀಡಿದ್ದಂತಹ ಸೌಲಭ್ಯ ಎಲ್ಲವನ್ನೂ ಸಹ ಅವಕಾಶವಂಚಿತರಿಗೂ ನೀಡಿರುತ್ತಿದ್ದರೆ ಕರ್ಣ ಕತ್ತಿ(ಆಯುಧ) ಹಿಡಿಯುತ್ತಿರಲಿಲ್ಲ, ಪುಟ್ಟ ಬಾಲಕ ಕಲ್ಲು ಹೊಡೆಯುತ್ತಿರಲಿಲ್ಲ, ಪುಟ್ಟ ಗೌರಿ ರಸ್ತೆ ಮಧ್ಯೆ ಅಸಾಯಕತೆಯಿಂದ ಸಾಯುತ್ತಿರಲಿಲ್ಲ, ಎಲ್ಲರೂ ಶಿಕ್ಷಣ ವಂಚಿತರಾಗುತ್ತಿರಲಿಲ್ಲ.
*ಬಸ್ ಸ್ಟಾಂಡ್ ಒಂದಿರುತ್ತಿದ್ದರೆ....*
ನಾವು ಶಿಕ್ಷಣ ಪಡೆಯಲು, ಆಸ್ಪತ್ರೆಗೆ ಹೋಗಲು ಅಥವಾ ಇತ್ಯಾದಿ ಕೆಲಸದ ಸಲುವಾಗಿ ಬೇರೆ ಊರಿಗೆ ಹೋಗಬೇಕಾದಾಗ ಮೇಲ್ಜಾತಿ ಎನಿಸಿಕೊಂಡವರ ಊರಿನ ಬಸ್ ಸ್ಟಾಂಡ್ ಬಳಿ ಹೋಗ ಬೇಕೆಂದಿರಲಿಲ್ಲ. ಬಸ್ ನಮ್ಮೂರಿನಲ್ಲೂ ನಿಲ್ಲಲಿ. ನಾವು ನಿಮ್ಮಂತೆ ಮನುಷ್ಯರಲ್ಲವೇ? ಬಸ್ ನಿಲ್ಲಿಸಲು ಎಷ್ಟು ಬಾರಿ ಕೇಳಿಕೊಂಡೆವು ನೀವು ಅದನ್ನು ಕೇಳಿದಿರಾ? ಎಂಬುದು ನಮ್ಮೂರಿನ ಪ್ರಶ್ನೆಗಳು; ಇದು ಕರ್ಣನ ಮಾತು.
ಅವತ್ತು ಪುಟ್ಟ ಗೌರಿ ನಡು ರಸ್ತೆಯಲ್ಲಿ ಕುಸಿದು ಬಿದ್ದು ನರಳುತ್ತಿರುವಾಗ ಎಷ್ಟೋ ವಾಹನಗಳು ಆ ಮಾರ್ಗದಲ್ಲಿಯೇ ಓಡಾಡಿದವು. ಆದರೆ ಪುಟ್ಟ ಗೌರಿಯನ್ನು ಉಳಿಸಲು ಒಂದು ವಾಹನವೂ ಮುಂದೆ ಬರಲಿಲ್ಲ. ಕಾರಣ ಅವಳು ಕೆಳಜಾತಿಯವಳು. ಅಲ್ಲಿ ಜಾತಿಗಿದ್ದ ಬೆಲೆ ಮನುಷ್ಯರಿಗಿಲ್ಲ. ಮನುಷ್ಯರು ಮಾನವೀಯತೆಯನ್ನು ಮರೆತು ಜಾತಿಯ ಮದ ಏರಿಸಿಕೊಂಡಿದ್ದಾರೆ. ಬದಲಾವಣೆ ಎನ್ನುವುದು ಇತರರಿಂದ ಆಗದು. ಅದು ಮೊದಲು ನಮ್ಮಿಂದಲೇ ಆರಂಭವಾಗಬೇಕು. ನಮಗೆ ಏನು ಬೇಕೋ ಅದನ್ನು ನಾವು ಪಡೆದುಕೊಳ್ಳಬೇಕು ಎನ್ನುವುದು ಕರ್ಣನ್ ತಿಳಿಸುತ್ತದೆ.
ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕುಗಳಿದ್ದರೂ, ಇಂದು ಆ ಎಲ್ಲಾ ಹಕ್ಕುಗಳನ್ನು ಪಡೆದುಕೊಳ್ಳಲು ಎಲ್ಲರಿಗೂ ಆಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಏನು? ಜಾತಿಯೇ? ಹೌದು! ಜಾತಿಯೇ ಮೂಲಕಾರಣ. ಜತೆಗೆ ಲಿಂಗ ಅಸಮಾನತೆ ಇತ್ಯಾದಿ ಕಾರಣಗಳಿಂದಾಗಿ ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಲು ಅಸಾಧ್ಯವಾಗಿದೆ.
*ನಾವೂ ಕರ್ಣ ಆಗಬೇಕು...*
ಕರ್ಣನ್ ಸಿನಿಮಾದಲ್ಲಿ ತಮ್ಮ ಅವಕಾಶಗಳಿಗಾಗಿ ಹೋರಾಡುವ ಕರ್ಣನಂತೆ ನಾವೂ ಹೋರಾಡಬೇಕಾದ ಪರಿಸ್ಥಿತಿ ಪ್ರಸ್ತುತ ಭಾರತದಲ್ಲಿ ಇದೆ. ನಮ್ಮ ಭೂಮಿಗಾಗಿ, ನಮ್ಮ ಆಹಾರಕ್ಕಾಗಿ, ನೀರಿಗಾಗಿ, ದೇಗುಲಗಳ ಪ್ರವೇಶಕ್ಕಾಗಿ ಇತ್ಯಾದಿ ನಮ್ಮ ಸ್ವಾತಂತ್ರ, ಹಕ್ಕುಗಳಿಗಾಗಿ ಶಿಕ್ಷಣ ಎಂಬ ಆಯುಧವನ್ನು ಪಡೆದು ಕಾನೂನಾತ್ಮಕವಾಗಿ ಹೋರಾಡಬೇಕು. ನಮ್ಮ ಹಕ್ಕನ್ನು ನಾವು ಪಡೆದುಕೊಳ್ಳಬೇಕು.
- ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್, ತುಲುನಾಡ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ