ಬುಧವಾರ, ಮಾರ್ಚ್ 1, 2023

ಮಾನವಧರ್ಮ ಸ್ಥಾಪಕ, ಮಹಾಯೋಗಿ ಪರಮಹಂಸರ ಸಂಸ್ಮರಣೆಯಲ್ಲಿ (ಲೇಖನ) - ಶಶಿವಸಂತ, ಗೂಳೂರು.

(ಪರಮಹಂಸ ರಾಮಕೃಷ್ಣರ ಜನ್ಮ‌ದಿನಾಚರಣೆಯ ಪ್ರಯುಕ್ತ ವಿಚಾರ ಮಂಟಪ ಬಳಗವು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನೀಡಲಾದ ಉಪನ್ಯಾಸ)

ಭಾರತ ಕಂಡ ಪ್ರಸಿದ್ಧ ಧಾರ್ಮಿಕ ಗುರು, ಸರ್ವಧರ್ಮ ಸ್ವರೂಪಿ, ಮಹಾ ಮಾನವಚೇತನ ಶ್ರೀ ರಾಮಕೃಷ್ಣ ಪರಮಹಂಸರು. ೧೯ ನೆ ಶತಮಾನದಲ್ಲಿ ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯ ಕಾಮಾರಪುರ ಎಂಬ ಸಣ್ಣ ಹಳ್ಳಿಯಲ್ಲಿ ಖುದಿರಾಂ ಚಟ್ಟೋಪಾಧ್ಯಾಯ ಮತ್ತು ಚಂದ್ರಮಣಿದೇವಿ ಎಂಬ ಭಕ್ತ ಬ್ರಾಹ್ಮಣ ದಂಪತಿಗಳಿಗೆ 4 ನೆ ಮಗನಾಗಿ ರಾಮಕೃಷ್ಣರು ೧೮೩೬ ಘೆಬ್ರವರಿ ೧೮ ರಂದು ಜನ್ಮತಾಳಿದರು . ಇವರ ಮೂಲ ಹೆಸರು ಗಧಾದರ ಎಂಬುದಾಗಿತ್ತು. ಬಾಲ್ಯದಿಂದಲೂ ಧರ್ಮ ಶಾಸ್ತ್ರಗಳಲ್ಲಿ ಆಸಕ್ತಿ, ಧೈರ್ಯ, ವಿಶಾಲ ಮನೋಭಾವನೆ ಗಳು ಇವರಲ್ಲಿ ಒಡಮೂಡಿದ್ದವು.
ಶಾಲೆಯ ಕಲಿಕೆಯಲ್ಲಿ ಅಷ್ಟೇನೂ ಆಸಕ್ತಿ ತೋರದ ಬಾಲಕ ಪರಿಸರದ ವಿಸ್ಮಯ ಸಂಗತಿಗಳಿಂದ ಪ್ರಭಾವಿತನಾದ. ಬಯಲಾಟ ಆಡುವುದು, ಹಾಡುಗಳನ್ನು ಹಾಡುವುದು.... ಹೀಗೆ ಪ್ರಕೃತಿಯನ್ನು ಆರಾದಿಸುತ್ತಿದ್ದನು.
ಕೆಲವೊಮ್ಮೆ ಸೃಷ್ಟಿಯ ಸೊಬಗಿಗೆ ಭಾವಪರವಶರಾಗಿ ಬಾಹ್ಯ ಪ್ರಪಂಚವನ್ನೇ ಮರೆತುಬಿಡುತಿದ್ದ ಈ ಬಾಲಕ ಮುಂದೆ ಜಗತ್ತನ್ನೆ ಮುನ್ನಡೆಸುವ  ವಿಶ್ವಗುರುವಾಗುತ್ತನೆ ಎಂದು ಆಗ ಯಾರೂ ಊಹಿಸಿರಲಿಲ್ಲ.

 ಜಗನ್ಮಾತೆ ಕಾಳಿದೇವಿಯ ಪರಮ ಭಕ್ತನಾದ ಗಧಾದರನು ದಕ್ಷಿಣೇಶ್ವರದ ಜಗನ್ಮಾತೆಯ ದೇವಾಲಯದಲ್ಲಿ ಮುಂದೆ ಅರ್ಚಕನಾಗಿ ನೇಮಿಸಲ್ಪಡುವನು. ಅಲ್ಲಿನ ಆಡಳಿತ ಮಂಡಳಿಯ ಮಾರ್ಥುಬಾಬು ಎಂಬ ವ್ಯಕ್ತಿ ಇವರ ಅಮೋಘ ಭಕ್ತಿ ಮತ್ತು ಅಲೌಕಿಕ ಆಸಕ್ತಿ ಕಂಡು *ರಾಮಕೃಷ್ಣ* ಎಂದು ನಾಮಕರಣ ಮಾಡುತ್ತಾನೆ. ಅಂದಿನಿಂದ "ರಾಮಕೃಷ್ಣರಾಗಿ ಇಡೀ ಸಮಾಜವನ್ನು ಆಧ್ಯಾತ್ಮದ ಶಕ್ತಿಯಿಂದ ಮುನ್ನಡೆಸುವ ಮಹಾಯೋಗಿಯಾಗುತ್ತಾರೆ." ಎಲ್ಲಾಧರ್ಮಗಳನ್ನು ಒಳಗೊಂಡ ಎಲ್ಲದರಿಂದಲು ಹೊರತಾದ ವಿಶ್ವಧರ್ಮ ವನ್ನು ಸ್ಥಾಪಿಸಿದರು.
ಪರಮಹಂಸರು ಅದ್ವೈತ ಸಿದ್ಧಾಂತವನ್ನು ಬೋಧಿಸಿದರು. ಅವರ ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವ ಬೀರಿವೆ .
ರಾಮಕೃಷ್ಣರು ಅಷ್ಟಾಯೋಗವಾದ ನಿರ್ವಿಕಲ್ಪ ಸಮಾಧಿಯನ್ನು ಅನುಭವಿಸಿದ್ದಾರೆ ಎಂದು ನಾವು ಅವರ ಜೀವನ ಚರಿತ್ರೆ ಯಲ್ಲಿ ತಿಳಿಯುತ್ತೇವೆ. ಈ ಸ್ಥಿತಿಯಲ್ಲಿ ಮನುಷ್ಯ ವಾಸ್ತವದ ಬಾಹ್ಯ ಪ್ರಪಂಚವನ್ನು ಮರೆತು  ಮತ್ತೊಂದು ಅನೂಹ್ಯ ಜಗತ್ತಿನ ಅನುಭವವನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಪರಮಹಂಸರು ಕಾಳಿ ದೇವಿಯ ಪರಮ ಭಕ್ತರಾಗಿದ್ದರು ಮತ್ತು ಪ್ರಕೃತಿಯ ಎಲ್ಲಾ ಅಂಶಗಳಲ್ಲಿ ದೈವತ್ವವನ್ನು ಪರಿಕಲ್ಪಿಸಿ ಆರಾಧಿಸುತ್ತಿದ್ದರು. 
ವಿದ್ಯಮಾಯೆ ಮತ್ತು ಅವಿದ್ಯಾಮಾಯೆ ಎಂಬ ಎರಡು ಮಾಯೆಗಳು ಮನುಷ್ಯನನ್ನು ನಿಯಂತ್ರಿಸುತ್ತವೆ ಎಂದು ಹೇಳಿದರು. ಸೃಷ್ಟಿಯ ಕಾಳ ಶಕ್ತಿಗಳಾದ ಕೌರ್ಯ, ಲೋಭ,ಮತ್ಸರ... ಮುಂತಾದವುಗಳನ್ನು ಅವಿದ್ಯಾಮಾಯೆಗಳು ಅಂತಲೂ ಪ್ರೇಮ, ಆದ್ಯಾತ್ಮ,ಕರುಣೆ ಗಳಂತಹ ಶಕ್ತಿಗಳನ್ನು ವಿದ್ಯಾ ಮಾಯೆ ಅಂತಲೂ ಸಂಭೋದಿಸಿದ್ದಾರೆ. ಅಲ್ಲದೆ ವಿದ್ಯಾಮಾಯೆಗಳ ಸಹಾಯದಿಂದ ಅವಿದ್ಯಾ ಮಾಯೆಗಳನ್ನು ಗೆದ್ದು ನಾವು ಮಾಯಾತೀತರಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು.
ಶ್ರೀ ರಾಮಕೃಷ್ಣರ ನಾಲ್ಕು ಭೋದನೆಗಳು ಇಂತಿವೆ.....
,೧. *ಎಲ್ಲ ಅಸ್ತಿತ್ವದ ಏಕತೆ*: ಭಗವಂತನ ಸೃಷ್ಟಿಯಲ್ಲಿ ರೂಪು ತಳೆದಿರುವ ಎಲ್ಲ ವಸ್ತುಗಳು, ಜೀವಿಗಳು ಮತ್ತು ಅವುಗಳ ಅಸ್ತಿತ್ವದ ಮೂಲ ಒಂದೇ ಆಗಿದೆ ವಿವಿಧ ಪಾತ್ರಗಳನ್ನು ನಿರ್ವಹಿಸುವ ನಮ್ಮ ಅಸ್ತಿತ್ವಕ್ಕೆ ನಾವು ನ್ಯಾಯ ನೀಡುತ್ತಾ ಬಾಳಬೇಕು ಎಂದು.
*೨. ಮಾನವರಲ್ಲು ಇರುವ ದೈವತ್ವ*: ಬಹುತೇಕ ಜನರು ದೇವರು ಎಂಬುವುದಿಲ್ಲ ಅದೆಲ್ಲವೂ ಮೂಢನಂಬಿಕೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ನಮ್ಮೊಳಗೆ ಇರುವ ದೇವರನ್ನು ನಾವು ಮರೆತುಬಿಡುತ್ತೇವೆ. ಇತರರ ಬಗ್ಗೆ ಅನುಕಂಪ ಹೊಂದಿರುವ ಎಲ್ಲಾ ಮನುಷ್ಯರೂ ತಮ್ಮೊಳಗೆ ದೈವತ್ವವನ್ನು ಹೊಂದಿರುತ್ತಾರೆ ಎಂಬುದು ಅವರ ನಿಲುವಾಗಿತ್ತು.
*೩.ದೇವರ ಏಕತೆ*: ನಾವೆಲ್ಲರೂ ವಿವಿಧ ದೇವರುಗಳನ್ನು ವಿವಿಧ ರೂಪಗಳಲ್ಲಿ ಆರಾಧಿಸುತ್ತೇವೆ. ಆದರೆ ಎಲ್ಲ ದೇವರ ಮೂಲ ಒಂದೇ... ಎಲ್ಲರ ಉದ್ದೇಶ ಒಂದೇ... ಭಕ್ತಿಯೇ ಆ ಎಲ್ಲ ದೇವರುಗಳು ಮೂಲ ಆಧಾರ ಎಂಬುದು ಇವರ ತತ್ವ.
*೪. ಎಲ್ಲ ಧರ್ಮಗಳ ಸಾಮರಸ್ಯ*: ಹಿಂದೂ , ಮುಸಲ್ಮಾನ, ಕ್ರೈಸ್ತ, ಬೌದ್ಧ... ಹೀಗೆ ನಾನಾ ಧರ್ಮವನ್ನು ಅನುಸರಿಸುವ ನಾವು ಎಲ್ಲ ಧರ್ಮಗಳ ಮೂಲಮಂತ್ರ ಒಂದೇ ಅವೆಲ್ಲವುಗಳ ಒಗ್ಗಟ್ಟಿನಲ್ಲಿ ಸತ್ಯತೆ ಅಡಗಿದೆ ಹಾಗಾಗಿ ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಹೊಂದದೆ ಸಾಮರಸ್ಯದಿಂದ ಬದುಕಿನ ಎಂಬುದು ಅವರ ನಾಲ್ಕನೇ ತತ್ವ.
ಪರಮಹಂಸರು ಕೆಲವು *ಸಾಮತಿಗಳನ್ನು* ರಚಿಸಿ ಅವುಗಳ ಮೂಲಕ ತಮ್ಮ ವಿಚಾರಗಳನ್ನು ಜನರಿಗೆ ಸುಲಭವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ...
*೧.* ಕತ್ತಲು ತುಂಬಿದ ಕೋಣೆಯಲ್ಲಿ ಒಂದು ಕಿರುದೀಪವನ್ನು ಹಚ್ಚಿದೊಡೆ ಎಲ್ಲ ಕಟ್ಟಲು ತೊಡೆದು ಹೋಗುವಂತೆ ಮೌಢ್ಯವೆಂಬ ಕತ್ತಲನ್ನು ತೊಡೆಯಲು ಜ್ಞಾನವೆಂಬ ಹಣತೆ ಹಚ್ಚೋಣ ಎಂಬುದು ಮೊದಲನೆಯದು.
*೨.* ಸಮುದ್ರದ ನೀರು ಉಪ್ಪಾಗಿದೆ ಎಂದು ತಿಳಿಯಲು ಸ್ವತಃ ಸಮುದ್ರಕ್ಕೆ ಹೋಗಿ ನಾಲಿಗೆಯ ಮೇಲೆ ಒಂದು ಹನಿ ನೀರಿಟ್ಟು ನೋಡಿದರೆ ಮಾತ್ರ ಅದರ ಸತ್ಯ ತಿಳಿಯುವಂತೆ  ಯಾವುದೇ ವಿಷಯವನ್ನು ತಿಳಿಯಲು ಅಥವಾ ಯಾವುದನ್ನಾದರೂ ಸಾಧಿಸಲು ಸತತ ಪ್ರಯತ್ನ ಅವಶ್ಯಕ ಎಂಬುದು ಇದರ ತಾತ್ಪರ್ಯ.
*೩* ಜೇನು ತುಂಬಿದ ಬಟ್ಟಲಿನೊಳಕ್ಕೆ ನೊಣವೊಂದು ಪ್ರಾಣದ ಹಂಗು ತೊರೆದು ಬಿದ್ದು ಹೇಗೆ ಅದರ ಸವಿಯನ್ನು ಸವಿಯುವುದೋ ಹಾಗೆ ಉತ್ಕಟ ಪ್ರಯತ್ನದಿಂದ ಯಾವುದೇ ಕಾರ್ಯದಲ್ಲಿ ನಮಗೆ ಯಶಸ್ಸು ದೊರೆಯುತ್ತದೆ ಎಂದಿದ್ದಾರೆ ಪರಮಹಂಸರು.
*೪* ದುಂಬಿಯೊಂದು ಹೂವಿನ ಮಕರಂದ ಹೀರುವ ಮೊದಲು ಅದರ ಸುತ್ತಲೂ ಝೆಂಕರಿಸುತ್ತ ಸುತ್ತುತ್ತಿರುತ್ತದೆ ಒಂದು ಬಾರಿ ಮಕರಂದವನ್ನು ಮುತ್ತಿದೊಡನೆ ಹೇಗೆ ನಿಶ್ಯಬ್ದ ವಾಗು ತನ್ಮಯವಾಗಿ ಬಿಡುತ್ತದೆಯೋ ಜ್ಞಾನಿಯಾದವನು ಹೆಚ್ಚು ಮಾತನಾಡದೆ ಸದಾ ಮೌನಿಯಾಗಿರುತ್ತನೆ ಎಂದು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ.
*೫* ಕೇವಲ ಪಾಂಡಿತ್ಯವನ್ನು ಪಡೆದರೆ ಅಷ್ಟೇ ಸಾಲದು ಸದಭಿರುಚಿ ಇರಬೇಕು ಎಂಬಲ್ಲಿ ಅವರು ಆಕಾಶದೆತ್ತರದಲ್ಲಿ ಹಾರುತ್ತಿರುವ ಹದ್ದಿನ ದೃಷ್ಟಿ ಎಲ್ಲವೂ ಕೆಳಗೆ ಕೊಳೆತು ನಾರುವ ಹೆಣಗಳ ಮೇಲೆ ಇರುವಂತೆ. ಲೌಕಿಕ ಪಾಂಡಿತ್ಯವನ್ನು ಪಡೆದವರು ಕೇವಲ ಪ್ರಾಪಂಚಿಕ ಸುಖವನ್ನೇ ಅರಸುತ್ತಾರೆ ನಮ್ಮ ಜ್ಞಾನ ಅಲೌಕಿಕ ಸಂಗತಿಗಳ ಕಡೆ ತುಡಿಯಬೇಕೆಂದು ಬಹಳ ಅರ್ಥಗರ್ಭಿತ ದುಷ್ಟಾಂತದ ಮೂಲಕ ಇಲ್ಲಿ ವಿವರಿಸುತ್ತಾರೆ.
*೬*  ಉಪ್ಪಿನ ಗೊಂಬೆಯೊಂದು ಸಮುದ್ರ ನೋಡಲು ಹೋದಾಗ ಅದು ಹೇಗೆ ನೀರಿನಲ್ಲಿ ಕರಗಿ ಲೀನವಾಗುವುದೋ ಜ್ಞಾನ ಸಾಗರದಲ್ಲಿ ಲೀನವಾಗಿ ಮುಕ್ತಿದರ್ಷನ ಪಡೆಯಬಹುದಾಗಿದೆ ಎಂದೂ ಅವರು ತಿಳಿಸುತ್ತಾರೆ.

 ರಾಮಕೃಷ್ಣರ ನೂರಾರು ನುಡಿಮುತ್ತುಗಳು ಇಂದಿಗೂ ನಮ್ಮನ್ನು ಮುನ್ನಡೆಸುವ ದಾರಿ ದೀಪಗಳಾಗಿವೆ . ಅವರ ಪರಮ ಶಿಷ್ಯನಾದ ಸ್ವಾಮಿ ವಿವೇಕಾನಂದರು ತಮ್ಮ ಗುರುಗಳ ತತ್ವಗಳನ್ನು ಜಗತ್ತಿಗೆ ಅರುಹುವ ಸಲುವಾಗಿ ೧೮೯೭ ರಲ್ಲಿ ಶ್ರೀ ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸುತ್ತಾರೆ ತನ್ಮೂಲಕ ಜಗತ್ತಿನಾದ್ಯಂತ ಪರಮಹಂಸರ ಬೋಧನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಮಹಾ ಕಾರ್ಯಕ್ಕೆ ಚಾಲನೆ ದೊರೆಯುತ್ತದೆ ಅಂದಿನಿಂದ ಇಂದಿನವರೆಗೂ... ಅವರ ಸಹಸ್ರಾರು ಶಿಷ್ಯವೃಂದ ಸಮಾಜವನ್ನು ತಿದ್ದುವ ಕೆಲಸದಲ್ಲಿ ಕಾರ್ಯೋನ್ಮುಖವಾಗಿದೆ. 
ಸಾಕ್ಷಾತ್ ವಿಷ್ಣುವಿನ ಅವತಾರವಾದ ರಾಮಕೃಷ್ಣರಂತಹ ಮಹಾ ಚೇತನ ಹುಟ್ಟಿದ ಈ ಮಣ್ಣಿನಲ್ಲಿ ನಾವೆಲ್ಲರೂ ಜೀವಿಸುತ್ತಿರುವುದು ನಮ್ಮ ಜನ್ಮದ ಪುಣ್ಯ.
*" ಸ್ವರ್ಗವೆಂದರೆ ಮತ್ತೇನೋ ಅಲ್ಲ, ಸದಾ ಸಂತೋಷವಾಗಿರುವ ನಮ್ಮ ಮನಸ್ಸೇ"* ಎಂಬ ಅವರ ಮಾತಿನಂತೆ ನಮ್ಮ ಆತ್ಮ ಚೈತನ್ಯವನ್ನು ಸದಾ ಆನಂದದಿಂದ ಇರಿಸಿಕೊಂಡು ಬಾಳಲು ಪ್ರಯತ್ನಿಸೋಣ...
ನಮ್ಮದೇ ಹೃದಯದಲ್ಲಿ ಇರುವ ಪ್ರೀತಿ ಧರ್ಮವನ್ನು ಜಗತ್ತಿನಲ್ಲಿ ಸ್ಥಾಪಿಸಿ ಎಲ್ಲ ಮಾನವರೂ ಪ್ರೇಮ ಧರ್ಮವನ್ನು ಆಚರಿಸಿ ಆರಾಧಿಸಿ ಪಾವನರಾಗೋಣ.

- ಶಶಿವಸಂತ, ಗೂಳೂರು.
ಶಿಕ್ಷಕರು, ಲೇಖಕರು ತುಮಕೂರು
9663259692.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...