ಬುಧವಾರ, ಸೆಪ್ಟೆಂಬರ್ 17, 2025

ವರದಿ..

ವರದಿ

ನಾಟಕಕಾರ ಗೊರೂರು ಅನಂತರಾಜು ಅವರಿಗೆ ಬೆಂಗಳೂರು ಗೆಜ್ಜೆ ಹೆಜ್ಜೆ ರಂಗತಂಡದಿಂದ ರಂಗ ಪುರಸ್ಕಾರ 

ಬೆಂಗಳೂರಿನ ಚಲನಚಿತ್ರ ಹಾಸ್ಯನಟರು ಮೈಸೂರು ರಮಾನಂದ್ ಸಾರಥ್ಯದ ಹೆಜ್ಜೆ ಗೆಜ್ಜೆ ರಂಗ ತಂಡದ 50ನೇ ವರ್ಷದ ಪಾದಾರ್ಪಣೆಯ ಸಂಭ್ರಮ ಹಾಗೂ ಆಶಾನಾದಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಮಕ್ಕಳ ನಾಟಕ ಕೃತಿ ಲೋಕಾರ್ಪಣಿ, ರಂಗ ಸಂಗೀತ, ನಾಟಕ ಪ್ರದರ್ಶನ ಕಾರ್ಯಕ್ರಮ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಿತು. ಹಾಸನದ ಸಾಹಿತಿಗಳು ನಾಟಕಕಾರರು ಶ್ರೀ ಗೊರೂರು ಅನಂತರಾಜು ರವರ ಕಲಾ ಸೇವೆ ಸಾಂಸ್ಕೃತಿಕ ಸಂಘಟನೆ, ನಾಟಕ, ಸಾಹಿತ್ಯ ಸೇವೆ ಗುರುತಿಸಿ ರಂಗ ಪುರಸ್ಕಾರವನ್ನು ಹೆಜ್ಜೆ ಗೆಜ್ಜೆ ತಂಡದ ಸಂಸ್ಥಾಪಕ ಅಧ್ಯಕ್ಷರು ಮತ್ತು ಚಲನಚಿತ್ರ ನಟರು ಶ್ರೀ ಮೈಸೂರು ರಮಾನಂದ್ ಅವರು ನೀಡಿ ಸನ್ಮಾನಿ ದರು. ಸಾಹಿತ್ಯ ಕ್ಷೇತ್ರದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿರುವ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ರಂಗಭೂಮಿ ನಟರು, ಗಾಯಕರು, ನೃತ್ಯ ಚಿತ್ರ ಕಲಾವಿದರು ಮೊದಲಾಗಿ ಪ್ರತಿಭ್ವಾನಿತ ಕಲಾವಿದರನ್ನು ಸಂದರ್ಶಿಸಿ ಪತ್ರಿಕೆಗಳ ಮೂಲಕ ಜನತೆಗೆ ಪರಿಚಯಿಸುವ ಸದಾ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿರುವ ಲೇಖಕರು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯ ಸಾಹಿತ್ಯ ಸಾಂಸ್ಕೃತಿಕ ಸಂಘಟನೆಯ ಗೌರವ ಅಧ್ಯಕ್ಷರು ಶ್ರೀ ಗೊರೂರು ಅನಂತರಾಜು ರವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಯು ಸಮಾಜಕ್ಕೆ ಇನ್ನೂ ಹೆಚ್ಚಿನದಾಗಿ ದೊರೆಯಲೆಂದು ಶುಭ ಹಾರೈಸಿ ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ರಾಜ್ಯಾಧ್ಯಕ್ಷರು ಶ್ರೀ ಮಧು ನಾಯ್ಕ್ ಲಂಬಾಣಿಯವರು ಅಭಿನಂದಿಸಿದ್ದಾರೆ.

ಸವಿ ಮಾತು.

""ಸವಿ ಮಾತು""

 ದಯೆಯೆ ನಿನ್ನ ಮೂಲ ಮಂತ್ರವಾಗಿರಲಿ 
ಹಸಿದ ಜೀವಕೆ ತುತ್ತ ನೀಡುವ ಮನವಿರಲಿ 

ಬಡವನೆದುರು ಶ್ರೀಮಂತಿಕೆಯ ಪ್ರದರ್ಶನ ಸಲ್ಲದು
 ಹಸಿದವರೆದುರು ಭೋಜನದ ಮಾತನಾಡಬಾರದು 

ಕೊಡುವ ಮನವಿದ್ದರೆ ನೀ ನಿಸ್ವಾರ್ಥದಿ ನೀಡು 
ಸರ್ವರೆದುರು ತೋರ್ಪಡಿಕೆಯ ಪ್ರತಿಷ್ಠೆ ಬಿಡು 

ಮೂಕ ಜೀವಿಗಳ ಕಂಡು ಮರುಗುವುದನು ಕಲಿ 
ಅಶಕ್ತರಿಗೆ ಕೈಲಾದ ಸಹಾಯ ಮಾಡು ಬಾಳಲಿ

 ಕಿರಿಯರೆದೆಯಲಿ ಸ್ನೇಹ ಪ್ರೀತಿಯ ಹಣತೆ ಬೆಳಗು
 ಗುರು ಹಿರಿಯರ ನುಡಿಗೆ ನಮಿಸಿ ತಲೆ ಬಾಗು

 ಉಸಿರಿನ ನಂತರವೂ ಹೆಸರುಳಿಯುವಂತಾಗಲಿ
 ನಿನ್ನ ನಡೆ ನುಡಿ ಸಕಲರಿಗೂ ದಾರಿದೀಪವಾಗಿರಲಿ

ಗರ್ವ ಪಡದಿರು ದೇವ ನೀಡಿದ ಸುಖಕೆ
ಭಕ್ತಿಯಲಿ ಆಮಂತ್ರಿಸು ಚಿನ್ಮಯನ ಮನಕೆ

ಹಣ ಅಂತಸ್ತು ಅಧಿಕಾರ ಶಾಶ್ವತವಲ್ಲ
ತಿಳಿದು ನಡೆ ಬದುಕು ನೀನೆಣಿಸಿದಂತಿಲ್ಲ
 ಮಧುಮಾಲತಿ ರುದ್ರೇಶ್ ಬೇಲೂರು 
🙏💐✍️

ಮಂಗಳವಾರ, ಸೆಪ್ಟೆಂಬರ್ 16, 2025

ಪ್ರೀತಿಸುವ ಹೃದಯಗಳಿಗಾಗಿ...ಸಿಹಿ ಮಾತು.

ಪ್ರೀತಿಸುವ ಹೃದಯಗಳಿಗಾಗಿ... ಸಿಹಿಮಾತು.

ಪ್ರೀತಿ ಏಕೆ ಭೂಮಿ ಮೇಲಿದೆ? ಎಂಬ ಪ್ರಶ್ನೆಗೆ ಸಾಹಿತಿಗಳು, ನಿರ್ದೇಶಕರು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ. ಪ್ರೀತಿಸುವ ಹೃದಯಗಳಿಗಾಗಿ ಈ ಪ್ರೀತಿ ಭೂಮಿ ಮೇಲಿದೆ ಒಂದು ವೇಳೆ ಪ್ರೀತಿಯು ಇಲ್ಲದಿದ್ದರೆ ಈ ಬದುಕಿಗೆ ಅರ್ಥವೇ ಇಲ್ಲದಂತಾಗುತ್ತದೆ. ಎರಡು ಹೃದಯಗಳು ಸಂಗಮವಾದಾಗ ಪ್ರೀತಿಯ ಜ್ಯೋತಿ ಹೊತ್ತಿ ಉರಿಯುವುದು ಅದು ಒಮ್ಮೊಮ್ಮೆ ಅರ್ಧದಲ್ಲಿಯೇ ದುಃಖವನ್ನು ನೀಡಿ ನಂದಿ ಹೋಗುವುದು, ಮತ್ತೊಮ್ಮೆ ಮದುವೆಯ ಹಂತಕ್ಕೆ ತಿರುಗಿ ಬದುಕೆ ಆನಂದಮಯವಾಗುವುದು. ಪ್ರೀತಿಗಾಗಿ ಪ್ರಾಣವನ್ನು ಕಳೆದುಕೊಂಡವರನ್ನು ನೋಡಿದ್ದೇವೆ ಅದರ ಬಗ್ಗೆ ಕೇಳಿದ್ದೇವೆ ಪ್ರಾಣ ಕಳೆದುಕೊಳ್ಳುವಂತಿದ್ದರೆ ಪ್ರೀತಿಸುವುದಾದರೂ ಯಾಕೆ? ಪ್ರೀತಿ ಎಂಬ ಸಸಿ ಮರವಾಗಿ ನೆರಳಾಗಿ ಮಾದರಿಯಾಗಬೇಕೆ ವಿನಃ ಅದೊಂದು ದುರಂತ ಪ್ರೇಮ ಕಥೆಯಾಗಬಾರದು. ಹುಡುಗ ಹುಡುಗಿಯನ್ನು ಹುಡುಗಿ ಹುಡುಗನನ್ನು ಎಷ್ಟರಮಟ್ಟಿಗೆ ಪ್ರೀತಿಸುವರು ಅನ್ನುವುದು ಮುಖ್ಯವಲ್ಲ ಪ್ರೀತಿಗೆ ಎಷ್ಟು ಗೌರವ ಕೊಡುತ್ತಾರೆ ಎಂಬ ಪ್ರಾಮಾಣಿಕ ಮನಸ್ಸು ಬಹಳ ಮುಖ್ಯವಾಗಿದೆ. ಹೆಂಡತಿಗಾಗಿ ಬೆಟ್ಟವನ್ನು ಕೊರೆದು ಇಡೀ ಊರಿಗೆ ದಾರಿ ಮಾಡಿಕೊಟ್ಟ ದಶರಥ ಮಾಂಜಿಯ ಪ್ರೇಮ ಕಥೆ ಪ್ರೀತಿಸುವ ಹೃದಯಗಳಿಗೆ ಒಂದು ಸ್ಪೂರ್ತಿ ಅಂತಹ ನಿಷ್ಕಲ್ಮಶವಾದ ಪ್ರೀತಿಗಳು ಮಾತ್ರ ದಂತಕತೆಯಾಗಿ ಉಳಿಯಲು ಸಾಧ್ಯ.

ಪ್ರೀತಿಸುವುದಾದರೆ ಒಬ್ಬರನ್ನು ಪ್ರೀತಿಸಬೇಕು ಮನಸ್ಸುಗಳು ಅರ್ಥವಾಗಲು ಎಷ್ಟು ವರ್ಷಗಳೇ ಬೇಕು ನಲಿವಿರಲಿ ನೋವಿರಲಿ ಒಂದೇ ಪ್ರೀತಿ ಇರಲಿ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ತಿಂಗಳಿಗೊಬ್ಬರನ್ನು ಪ್ರೀತಿಸುತ್ತಾ ಹೋದರೆ ಅದು ಪ್ರೀತಿಯಾಗಲ್ಲ ಹಲವು ರೀತಿಯ ಆಶಾ ಮನೋಭಾವನೆ. ಈಗಲೂ ಕೆಲವರು ಪ್ರಾಮಾಣಿಕವಾದ ಶುದ್ಧ ಮನಸ್ಸಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದಾರೆ ಪ್ರೀತಿಯು ಒಮ್ಮೊಮ್ಮೆ ಎಲ್ಲರನ್ನು ಮರೆಸುತ್ತದೆ ಆದರೆ ನಾವು ಮರೆಯಬಾರದು ಹೆತ್ತವರ ಪ್ರೀತಿಯ ಮುಂದೆ ಉಳಿದ ಎಲ್ಲಾ ಪ್ರೀತಿಗಳು ಅಷ್ಟಕ್ಕಷ್ಟೇ.

ಇತ್ತೀಚಿನ ದಿನಮಾನಗಳಲ್ಲಿ ಪ್ರೀತಿ ಪ್ರೇಮಗಳು ಕೊಲೆ ಅತ್ಯಾಚಾರ ರೂಪವನ್ನು ಪಡೆದುಕೊಂಡು ಅಂತ್ಯವಾಗುತ್ತಿವೆ. ದಯವಿಟ್ಟು ಪ್ರೀತಿಸುವ ವ್ಯಕ್ತಿಗಳ ಬಗ್ಗೆ ಅವರ ಗುಣಗಳ ಬಗ್ಗೆ ಅರಿತುಕೊಂಡು ಪ್ರೀತಿಸಬೇಕಾಗುತ್ತದೆ. ಪ್ರೀತಿ ಮಾಡುವುದು ತಪ್ಪಲ್ಲ ಸರಿಯಿಲ್ಲದ ವ್ಯಕ್ತಿಗಳನ್ನು ಪ್ರೀತಿಸುವುದು ತಪ್ಪು, ಅವರ ಬಗ್ಗೆ ಹಿಂದೆ ಮುಂದೆ ಏನು ಗೊತ್ತಿಲ್ಲದೆ ಪ್ರೀತಿಸುವುದು ತಪ್ಪು, ನಮ್ಮ ಸ್ವಾಭಿಮಾನ ಘಣತೆ ಕುಟುಂಬದ ಗೌರವ ಬಿಟ್ಟು ಪ್ರೀತಿಸುವುದು ತಪ್ಪು, ಬದುಕಿನಲ್ಲಿ ನಾವು ಒಂದು ಹಂತಕ್ಕೆ ಬಾರದೆ ಪ್ರೀತಿಸುವುದು ತಪ್ಪು, ಸರಿಯಾಗಿ ಓದುವ ಸಮಯದಲ್ಲಿ ಪ್ರೀತಿಸುವುದು ತಪ್ಪು, ಹೆತ್ತವರಿಗೆ ಮೋಸ ಮಾಡಿ ಪ್ರೀತಿಸುವುದು ತಪ್ಪು, ಪ್ರೀತಿಸುವುದಾದರೆ ಮದುವೆಯ ನಂತರ ಹೆಂಡತಿ ಗಂಡನನ್ನು ಗಂಡ ಹೆಂಡತಿಯನ್ನು ಸಾಗರದಷ್ಟು ಪ್ರೀತಿಸಲಿ ಆ ಪ್ರೀತಿಗೆ ಒಂದು ಅರ್ಥವಿದೆ.
               ಪ್ರೀತಿ ಮಾಡುವ ಹೃದಯದ ಬಡಿತದಲ್ಲಿ ಧೈರ್ಯದ ತುಡಿತವಿರಬೇಕು. ಒಂದು ಹೃದಯವನ್ನು ಪ್ರೀತಿಸಿ ಪ್ರೇಮವನ್ನು ತೋರಿದಾಗ ಅದನ್ನು ಒಬ್ಬರು ಒಲ್ಲೆ ಎನ್ನುತಾರೆ ಎಂದಿಟ್ಟುಕೊಳ್ಳಿ. ಆಗಲೂ ಆ ಪ್ರೀತಿಯ ಭಾವನೆಯನ್ನು ಹಾಗೆಯೇ ಉಳಿಸಿಕೊಳ್ಳುವ ಎದೆಗಾರಿಕೆ ಇರುವವರು ಮಾತ್ರ ಪ್ರೀತಿಸಲು ಅರ್ಹರು. ಆದರೆ ವಾಸ್ತವ ಹಾಗಿಲ್ಲ. ಪ್ರೀತಿ ಮಾಡಿದವರು ದೂರ ಸರಿದಾಗ ಪ್ರಾರಂಭದಲ್ಲಿ ಸ್ವಲ್ಪ ನೊಂದುಕೊಂಡು ಬರಬರುತ್ತಾ ಅವರ ಮೇಲಿನ ಅಭಿಮಾನವನ್ನು ಕರಗಿಸಿಕೊಂಡು ಬಿಡುವುದು ಸಾಧಾರಣ. ಇದು ಮನಷ್ಯ ಪ್ರೀತಿ. ಅಬ್ಬಬ್ಬಾ ಎಂದರೂ ಅದರ ಛಾಯೆ ಮಾತ್ರ ಉಳಿದಿರುತ್ತದೆಯೇ ವಿನಾ ಪ್ರಾರಂಭದಲ್ಲಿ ಇರುವ ಆ ತೀವ್ರತೆ ಉಳಿದಿರುವುದಿಲ್ಲ. ಯಾಕೆ ಹೀಗೆ? ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ಇವೆಲ್ಲ ಮಾನವ ಸಹಜ, ಇದೆಲ್ಲ ಕಾಲ ನಿಯಮ ಎನ್ನುವ ಉತ್ತರದ ಮುಸುಕಿನ ಅಡಿಯಲ್ಲಿ ಸೇರಿ ಹೋಗುತ್ತೇವೆಯೇ ವಿನಾ ಕಾರಣಗಳನ್ನು ನಿಜವಾಗಿ ಕಂಡುಕೊಳ್ಳುವ ಸಹನೆ ನಮಗಿರುವುದಿಲ್ಲ. ಹೀಗಲ್ಲವಾದರೆ, ಪ್ರೀತಿಸಿದ ವ್ಯಕ್ತಿ ದೂರವಾದಾಗ ಸೇಡಿನ ಕಿಚ್ಚು ಹಚ್ಚಿಸಿಕೊಂಡು ಬಲಿಯನ್ನು ಬಯಸುವುದು. ಹೂವು ಅರುಳುವಷ್ಟೇ ಸಹಜ ಹರೆಯದಲ್ಲಿ ಪ್ರೀತಿ ಅರಳುವುದು. ಪ್ರೀತಿಯ ಬಗ್ಗೆ ಏನು ಬರೆಯುತ್ತೀರಿ, ಎಷ್ಟು ಬರೆಯುತ್ತೀರಿ ಅಗೆದಷ್ಟು, ಬಗೆದಷ್ಟು ಬತ್ತದ ಝರಿಯಂತೆ ಅದು ಹರಿಯುತ್ತಲೇ ಇರುತ್ತದೆ.

ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ 
ಬಾಗಲಕೋಟ 
9845568484

ಓದು...





ಜೀವನವನ್ನ ಪ್ರತಿ ನಿಮಿಷವೂ
ಅನುಭವಿಸಿ ಸಾಗುತ್ತಿರಿ
ಒಳ್ಳೆಯ ನೆನಪುಗಳೊಂದಿಗೆ
ಇಲ್ಲಿ ಯಾವುದೂ ಶಾಶ್ವತವಿಲ್ಲ 
ಒಂದು ಪುಟ ಓದಿದ ಮೇಲೆ
ಮತ್ತೊಂದು ಪುಟವನ್ನ ನಾವು ತಿರುಚಿ
ಓದುವೆವು .....

ಈ ದೇಹದ ಆಕೃತಿಗೆ ತಾಯಿ ಒಂಭತ್ತು
ತಿಂಗಳು ನೋವು ನಲಿವುಗಳ ಕಷ್ಟವ
ತೆತ್ತು ನಮ್ಮನ್ನ ಈ ಭೂಮಿಗೆ ತಾಯಿ ಉಡುಗೊರೆಯಾಗಿ ನೀಡಿರುವಳು...

ಅವ್ವನಿಗೆ ಬೆಳಕಾಗು
ಅಪ್ಪನಿಗೆ ಅಸರೆಯಾಗು 
ಮನೆಗೆ ದೀಪಾವಾಗು
ಸಮಾಜಕ್ಕೆ ಉತ್ತಮ ಪ್ರಜೆಯಾಗು
ಬಡತನದ ಬೇಗೆಯಲ್ಲಿ ಬೆಂದು ನೊಂದವರಿಗೆ ನೀನು ಒಬ್ಬ 
ಅಧಿಕಾರಿಯಾಗು....


ಮಣ್ಣಾಗುವ ಈ ದೇಹವಿದು
ಕೊನೆಯಲ್ಲಿ
ಭೂದಿಯಾಗುವ ಸುಡುವ ಕಟ್ಟಿಗೆಯಲ್ಲಿ 
ಅಷ್ಟರೊಳಗೆ ನಿನ್ನ ಕನಸುಗಳು
ಪುಟಗಳಲ್ಲಿ ಉಸಿರಾಗಿರಲಿ...


           ಕಾರ್ತಿಕ್....✍️
     ( ಶ್ರವಣ ಬೆಳಗೊಳ )

ಬುಧವಾರ, ಸೆಪ್ಟೆಂಬರ್ 10, 2025

ಅವಳ ಪಾದದ ಸ್ಪರ್ಶ

ಶೀರ್ಷಿಕೆ : 
ಅವಳ ಪಾದದ ಸ್ಪರ್ಶ 

ನೀನ್ನನು ನಾನು ಮರೆಯುವಷ್ಟು ಪ್ರೀತಿ ಮಾಡುವೆನು
ಆ ಪ್ರೀತಿಗೆ ಇಂದು ರೂಪ 
ನೀ ಬರೆದವಳು
ನೀನಿಲ್ಲದ ದಿನಗಳು ಪ್ರತಿ ಕ್ಷಣವೂ ಮುನ್ನುಡಿಯನ್ನ ಬರೆಸುತ್ತಿದ್ದೆ....


ಮಣ್ಣಾಗುವ ನಿನ್ನ ಪಾದವನ್ನ 
ಅಂಗೈಯಲ್ಲಿ ನಾ 
ಹಿಡಿದು ಕೊಳ್ಳುವೆ
ಅಂತರಂಗದ ಒಳ ಮನಸ್ಸು 
ಸ್ವಚ್ಛ ಅಂದವಾಗಿ
ಈ ಹೃದಯದ ಭಾವನೆಗಳನ್ನ
ನೆಲದ ಮರಳಿನ ಕಣದಲ್ಲಿ
ನಿನ್ನ ಹೆಸರನ್ನ 
ಬರೆದು ಇಟ್ಟಿರುವೆ....

ನೆನಪುಗಳನ್ನ ಶೇಖರಿಸಿ ಕೊಡಿಟ್ಟಿರುವೆ 
ಅವಳಿಲ್ಲದ ಈ ಋತುಗಳ ದಿನಗಳ ಸಮಯದಲ್ಲಿ
ಮುಂದಿನ ಜನುಮ 
ಒಂದು ಇತ್ತಾರೆ ನಾ 
ಕಾಯುವೆ ಆ ಪಾದದ 
ಬಲಗಿನ ಸ್ಪರ್ಶಕ್ಕೆ....

          ಕಾರ್ತಿಕ್....✍️
      ( ಶ್ರವಣ ಬೆಳಗೊಳ )

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ...

ಪುಷ್ಪಗಿರಿ ಬೆಟ್ಟಕ್ಕೆ ಚಾರಣದ ಸಾಹಸ ಕಥನ

ಹಾಸನ ತಾಲ್ಲೂಕು ಮುಟ್ಟನಹಳ್ಳಿಯ ಲೇಖಕರಾದ ತ್ಯಾಗರಾಜ್ ಮತ್ತು ತಂಡ ಪ್ರಸಿದ್ಧ ಚಾರಣಕ್ಕೆ ಹೆಸರು ವಾಸಿಯಾದ ಪುಷ್ಪಗಿರಿ ಬೆಟ್ಟಕ್ಕೆ ಚಾರಣಕ್ಕೆ ಹೋಗಿ ಬಂದ ಸಾಹಸ ಕಥನವನ್ನು ಸ್ವಾರಸ್ಯಕರವಾಗಿ ಮಿನಿ ಕಾದಂಬರಿ ಸ್ವರೂಪದಲ್ಲಿ ಓದಿಸಿಕೊಂಡು ಹೋಗುವಂತೆ ಬಣ್ಣಿಸಿದ್ದಾರೆ. ಕುಮಾರ ಪರ್ವತ ಚಾರಣ ಮಾಮೂಲಿ ವ್ಯಕ್ತಿಗಳಿಗೆ ಅದೊಂದು ದಿಗಿಲು. ಹವ್ಯಾಸಿ ಚಾರಣಿಗರಿಗೆ ಅದೊಂದು ವಿಶಿಷ್ಟ ಅನುಭವ. ಇಂತಹ ಚಾರಣದ ಅನುಭವವನ್ನು ಬರಹಕ್ಕಿಳಿಸುವುದು ಒಂದು ಕೌಶಲ್ಯವೆ ಸರಿ. ಆಧುನಿಕತೆ, ಲೋಕಜ್ಞಾನ ಬೆಳೆದಂತೆ ಬರಹವೂ ಕೂಡ ಹೊಸತು ಕಂಡುಕೊಳ್ಳುತ್ತಿದೆ. ನಾವು ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳನ್ನು ಓದುವಾಗ ಮಲೆನಾಡಿನ ಜನಜೀವನ ಹಾಗೂ ಪರಿಸರದಲ್ಲಿ ತೆರೆದುಕೊಂಡಂತೆ ಇಲ್ಲಿಯ ಚಾರಣದಲ್ಲಿ ದಟ್ಟ ಅರಣ್ಯ ಪರಿಸರ ಪಿಕ್ನಿಕ್ ಕಥನದಲ್ಲಿ ರೂಪುಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧ ದೇವಸ್ಥಾನಗಳು, ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವ ಅನುಭವವನ್ನು ಪತ್ರಿಕೆಗಳಲ್ಲಿ ಆಗಿಂದಾಗ್ಗೆ ಬರೆಯುತ್ತಿರುತ್ತೇನೆ. ಆಗುಂಬೆ ಎಸ್.ನಟರಾಜ್‌ರಂತಹ ಲೇಖಕರು ಬರೆದ ತಮ್ಮ ಪ್ರವಾಸಾನುಭವವನ್ನು ಜೊತೆಗೆ ಆ ಸ್ಥಳದ ಐತಿಹಾಸಿಕ ಹಿನ್ನೋಟದ ಜೊತೆಗೆ ಸುಧೀರ್ಘವಾಗಿ ಬರೆದ ಪುಸ್ತಕಗಳನ್ನು ಓದುತ್ತಿದ್ದೇನೆ. ಯೂ ಟ್ಯೂಬ್‌ನಂತಹ ದೃಶ್ಯ ಮಾಧ್ಯಮಗಳಲ್ಲಿ ಕ್ಯಾಮರ, ಮೊಬೈಲ್‌ಗಳಲ್ಲಿ ವಿಡಿಯೋ ಮಾಡಿ ಪ್ರಸಿದ್ಧ ತಾಣಗಳನ್ನು ಕಣ್ಣಮುಂದೆಯೇ ಕಟ್ಟಿಕೊಡುವುದನ್ನು ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇನೆ. ಈ ದಿಸೆಯಲ್ಲಿ ಚಾರಣ ಹೊರಟ ಲೇಖಕರು ತ್ಯಾಗರಾಜ್ ಮತ್ತು ಆರು ಮಂದಿಯ ತಂಡ ಮಂಜಿನ ದಾರಿಯಲ್ಲಿ ಬೆಟ್ಟ ಹತ್ತಿ ಇಳಿದು ಬಂದ ಚಾರಣದ ಸಾಹಸ ಕಥೆ ಸಹಜ ಬರವಣಿಗೆಯಲ್ಲಿ ನಿರೂಪಿತವಾಗಿದೆ. ಹಾಗೆಯೇ ತಮ್ಮ ಪ್ರತಿ ಹೆಜ್ಜೆಯನ್ನು ದಾಖಲಿಸುತ್ತಾ ಸಾಗುವ ಚಾರಣದ ಅನುಭವ ಲೇಖಕರ ಬರಹ ಶೈಲಿಯಿಂದ ಓದುಗರಿಗೂ ಬೋರಾಗದೆ ಓದಿಸಿಕೊಂಡು ಹೋಗುತ್ತದೆ. ಎಲ್ಲೋ ನಾವೇ ಆ ಪಯಣದಲ್ಲಿ ಭಾಗಿಯಾದಂತೆ ಕಣ್ಮುಂದೆ ದೃಶ್ಯ ಗೋಚರಿಸುತ್ತದೆ. ಕಡೆಯಲ್ಲಿ ಒಂದು ನಿತ್ಯ ಹರಿದ್ವರ್ಣದ ಕಾಡಿನ ಪಯಣವು ಹಚ್ಚ ಹಸಿರಾಗಿ ಮನದಲ್ಲಿ ಉಳಿದುಬಿಡುತ್ತದೆ. ಲೇಖಕರ ಮೊದಲ ಕಂತಾದ ಈ ಪುಸ್ತಕ ೪೪ ಪುಟಗಳ ವಿಸ್ತಾರದಲ್ಲಿ ಹರಡಿಕೊಂಡಿದೆ ಹಾಗೂ ಚಾರಣದ ಸರಣಿಗಳು ಭಾಗ-೧ ಎಂದೇ ಹೆಸರಿಡಲಾಗಿದೆ. ಅಲ್ಲದೆ ಇನ್ನು ಮುಂದೆಯೂ ಸಹ ಲೇಖಕರು ಹೊಸ ಹೊಸ ಪ್ರದೇಶಗಳಿಗೆ ಚಾರಣ ಮಾಡಿದ ಅನುಭವ ದಾಖಲಿಸಿ ಕೃತಿ ರೂಪದಲ್ಲಿ ಪ್ರಕಟಿಸುವ ಇಂಗಿತ ಅಭಿವ್ಯಕವಾಗಿದೆ. ಲೇಖಕರು ಹಲವಾರು ಸಾಹಸ ಚಾರಣಗಳನ್ನು ಮಾಡಿರುವ ಅನುಭವ ದಟ್ಟವಾದಂತಿದೆ. ಈ ಲೇಖನವು ಮುಂದೆ ಈ ಪ್ರದೇಶದಲ್ಲಿ ಚಾರಣ ಮಾಡುವ ಸಾಹಸಿಗರಿಗೆ ಮಾರ್ಗದರ್ಶಿ ಗೈಡ್ ಆಗುವುದು ನಿಶ್ಚಿತ. ಪ್ರಸ್ತುತ ಈ ಕೃತಿಯ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ಮಾಡುವವರಿಗೆ ಉಪಯುಕ್ತವಾಗಿದೆ. ಹಾಗೆಯೇ ಒಮ್ಮೆ ಓದಿಸಿಕೊಳ್ಳುವ ಸದಭಿರುಚಿಯ ಕೃತಿಯಾಗಿದೆ. 

ಗೊರೂರು ಅನಂತರಾಜು, ಹಾಸನ. ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಮಾವು ಹ(ಹೆ)ಣ್ಣು

ಮಾವು ಹ(ಹೆ)ಣ್ಣು

ಮಾವು ತಿಂದವರಿಗೆ ಗೊತ್ತು ರುಚಿ
ಬೆಳೆಯವಾಗಲೇ ಕಣ್ಣಿಡುವರು  
ಬೇರೆಯವರ ದೃಷ್ಟಿ ಬೀಳದಿರಲೆಂದು ಬಚ್ಚಿಡುವರು 
ಮಾಗಿದಷ್ಟು ರುಚಿ ಎಂದು ಬೀಗುವರು ಮಾಗಿತೆಂದರೆ ಕಣ್ಣಲ್ಲಿ ಕುಕ್ಕುವರು ಬಾಯಲ್ಲಿ ನೀರು ಸುರಿಸುವರು ಯಾವಾಗ ತಿನ್ನುವೇನು ಎಂದು ಮನದಲ್ಲಿ ಮೆಲುವರು ಪ್ರಕೃತಿಯ ಕಸುವ ಉಂಡು ಮೈದುಂಬಿ ಹೊಂಬಣ್ಣ ತಿರುಗಿದರೆ ಕಿತ್ತುಕೊಳ್ಳುವರು ಹೊಂಬಣ್ಣದ ತೊಗಲ ಎಳೆ ಎಳೆಯಾಗಿ ಬಿಚ್ಚಿ ಆಸೆಯ ತೀರಿಸಿಕೊಳ್ಳುವರು 
ಹಣ್ಣು ತಿನ್ನುವ ಭರದಲ್ಲಿ ಒಡಲ ವಾಟೆಯ ಗೀರುವರು
 ಗೀರಿ ಗೀರಿ ರಸವ ಸುರಿಸುವರು
ವಾಟೆಯ ಮೇಲೆ ಮೂಡಿದ ಗೀರಿನ ಕಲೆಯ ಮೇಲೆ ಸಾಧಿಸಿದೆನೆಂದು ಬೀಗುವರು
ರಸವ ಹೀರಿದ ನಂತರ ಕಸವೆಂದು ಬೀಸಾಕುವರು
ಕಸದಲ್ಲಿ ಕಣ್ಣೀರ ಹರಿಸಿ ಕೂಗುತಿದೆ ಒಡಲ ಜೀವ
ಹಣ್ಣೊಲ್ಲೋ ಮಾರಾಯ ನಾ ಹೆಣ್ಣು ಎಂದು.
ಶ್ರೀಮತಿ ಮಹಾದೇವಿ ಗೋಗೇರಿ

ಶುಕ್ರವಾರ, ಸೆಪ್ಟೆಂಬರ್ 5, 2025

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ...

ಶ್ರೀಮತಿ ಬಿ ಬಿ ದೇವದುರ್ಗ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ.....

           ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್ 
 ಉಪನಿರ್ದೇಶಕರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ, ಬಾಗಲಕೋಟ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಹುನಗುಂದ ತಾಲೂಕಿನ ಹಿರೇಮಳಗಾವಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾಗಿರುವ ಶ್ರೀಮತಿ ಬಿ.ಬಿ ದೇವದುರ್ಗ ಗುರುಮಾತೆಯರಿಗೆ 2025 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಲಾಯಿತು..
        ಬಾಗಲಕೋಟೆಯ ಕಲಾಭವನದಲ್ಲಿ ಸೆಪ್ಟಂಬರ್ 5ರಂದು ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಶ್ರೀ ಆರ್ ಬಿ ತಿಮ್ಮಾಪುರ್, ಬಾಗಲಕೋಟೆ ಸಂಸದರು ಆಗಿರುವ ಶ್ರೀ ಪಿ ಸಿ ಗದ್ದಿಗೌಡರ್, ಬಾಗಲಕೋಟೆಯ ಶಾಸಕರು ಆಗಿರುವ ಮಾನ್ಯ ಶ್ರೀ ಎಚ್ ವೈ ಮೇಟಿ ಹಾಗೂ ಬಾಗಲಕೋಟೆಯ ಜಿಲ್ಲಾಧಿಕಾರಿಗಳು ಆಗಿರುವ ಶ್ರೀ ಸಂಗಪ್ಪ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಆಗಿರುವ ಶ್ರೀ ಶಶಿಧರ್ ಕೊರಿಯರ್ ಹಾಗೂ ಜಿಲ್ಲಾ ಉಪ ನಿರ್ದೇಶಕರು ಆಗಿರುವ ಶ್ರೀ ಎ ಸಿ ಮಣ್ಣಿಕೇರಿ ಮತ್ತು ಹುನಗುಂದ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಗಿರುವ ಮಾನ್ಯ ಶ್ರೀಮತಿ ಜಾಸ್ಮಿನ್ ಕಿಲ್ಲೆದಾರ ಹಾಗೂ ಇನ್ನಿತರ ಗಣ್ಯ ಮಾನ್ಯರು ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
          ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಶ್ರೀಮತಿ ಬಿ ಬಿ ದೇವದುರ್ಗ ಮೇಡಂ ಇವರಿಗೆ ಸಮಸ್ತ ಹುನಗುಂದ ತಾಲೂಕಿನ ಶಿಕ್ಷಕ ಬಳಗ ಹಾಗೂ ಹಿರೇಮಳಗಾವಿ ಗ್ರಾಮದ ಗುರು ಹಿರಿಯರು ಮತ್ತು ಶಾಲೆಯ ಶಿಕ್ಷಕ ಬಳಗ ಹಾಗೂ ಪ್ರೀತಿಯ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.

ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ...

ನಾವು ಶಿಕ್ಷಕರು, ನಮ್ಮ ಶಿಕ್ಷಣ ಹೀಗಿರಲಿ...
( ಸಮಸ್ತ ಗುರು ಬಳಗಕ್ಕೆ ಶಿಕ್ಷಕರ ದಿನಾಚರಣೆಯ ಗೌರವದ ಶುಭಾಶಯಗಳು )


            ನಾವು ಈ ಲೇಖನ ಬರೆಯುವುದಕ್ಕೆ ಕಾರಣ ನಮ್ಮ ಜೀವ, ಅದು ನಮ್ಮ ತಾಯಿಯ ಭಿಕ್ಷೆ. ನಾವು ಇಲ್ಲಿಯವರೆಗೆ ಬದುಕಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ಜೀವನ, ಅದು ನಮ್ಮ ತಂದೆಯ ಭಿಕ್ಷೆ. ಈ ಜನ್ಮ ಜೀವನದಲ್ಲಿ ನಾವೆಲ್ಲ ಅಕ್ಷರಸ್ಥರು ಆಗಿದ್ದೇವೆ ಎಂದರೆ ಅದಕ್ಕೆ ಕಾರಣ ಶಿಕ್ಷಣ, ಅದು ನಮ್ಮ ಗುರುಗಳ ಭಿಕ್ಷೆ. ಪ್ರತಿ ವ್ಯಕ್ತಿಯ ಹೃದಯದಲ್ಲಿ ಅಕ್ಷರದ ಬೀಜ ಬಿತ್ತಿ, ಆ ವ್ಯಕ್ತಿಯ ಬದುಕಿಗೆ ದಾರಿದೀಪವಾಗಿರುವ ಸಮಸ್ತ ಗುರು ಬಳಗಕ್ಕೆ ಈ ಲೇಖನವನ್ನ ಸಮರ್ಪಿಸುತ್ತಿದ್ದೇವೆ.
          ತುಮಕೂರಿನ ಸಿದ್ದಗಂಗಾ ಶ್ರೀಗಳು ಕಾಯಕಯೋಗಿಗಳಾದಂತೆ, ಗದುಗಿನ ಶ್ರೀ ಪುಟ್ಟರಾಜ ಗವಾಯಿಗಳು ಗಾನಯೋಗಿಗಳಾದಂತೆ, ವಿಜಯಪುರದ ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಜ್ಞಾನಯೋಗಿಗಳಾದಂತೆ, ಪ್ರತಿ ಶಾಲೆಯ ಸರ್ವ ಮಕ್ಕಳ ಮೆದುಳಿಗೆ ಅಕ್ಷರಗಳ ಜ್ಞಾನ ನೀಡುವ ಗುರುಗಳು ಅಕ್ಷರ ಯೋಗಿಗಳು ಎಂದರೆ ತಪ್ಪಾಗಲಾರದು. ರಾಜನು ಗೆಲ್ಲಲಾರದ ಕಳ್ಳನು ಕದಿಯಲಾಗದ ಅಣ್ಣ ತಮ್ಮಂದಿರಲ್ಲಿ ಭಾಗವಾಗದ ಎಷ್ಟು ಗಳಿಸಿದರು ಗಳಿಸಬೇಕೆನ್ನುವ ಎಷ್ಟು ಹಂಚಿದರು ಹಂಚ ಬೇಕೆನ್ನುವ ಬಚ್ಚಿಟ್ಟರೆ ಕೊಳೆಯುವ ಬಿಚ್ಚಿಟ್ಟರೆ ಬೆಳೆಯುವ ಸಂಪತ್ತು ಅದುವೇ ವಿದ್ಯಾ ಸಂಪತ್ತು. ಅಂತಹ ಸಂಪತ್ತನ್ನು ನಿಷ್ಕಲ್ಮಶವಾದ ಹೃದಯದಿಂದ ನಿಸ್ವಾರ್ಥದ ಮನೋಭಾವನೆಯಿಂದ ತಮ್ಮ ತಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಎಲ್ಲಾ ಗುರು ಗುರು ಮಾತೆಯರಿಗೆ ನಮ್ಮ ಪ್ರೀತಿ ತುಂಬಿದ ಹೃದಯದಿಂದ ಗೌರವದ ನಮನಗಳು.
           ಇತಿಹಾಸವನ್ನು ಒಮ್ಮೆ ಭಕ್ತಿಯಿಂದ ಕಂಡಾಗ ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮನಾಗಿದ್ದು ಅವರ ಗುರುಗಳಾದ ವಶಿಷ್ಟ ಮುನಿಯಿಂದ. ಅರ್ಜುನ ಮತ್ತು ಏಕಲವ್ಯ ಉತ್ತಮ ಬಿಲ್ವಿದ್ಯಾ ಪ್ರವೀಣರಾಗಿದ್ದು ದ್ರೋಣಾಚಾರ್ಯರಂತಹ ಗುರುಗಳಿಂದ. ಹಕ್ಕ ಬುಕ್ಕರು ಶತ್ರುಗಳ ದಾಳಿಯಿಂದ ಕೈ ತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆದದ್ದು ವಿದ್ಯಾರಣ್ಯರಂತಹ ಗುರುಗಳಿಂದ. ಶಿವಾಜಿ ಮಹಾರಾಜರು ಸೋತು ಬಸವಳಿದು ಕಂಗೆಟ್ಟು ಕುಳಿತು ಮತ್ತೆ ತಮ್ಮ ಸಾಮ್ರಾಜ್ಯವನ್ನು ಪಡೆಯಲು ಮಾರ್ಗದರ್ಶನ ಮಾಡಿದ್ದು ಗುರುಗಳಾದ ಶ್ರೀರಾಮದರ್ಶರು.ಶ್ರೀ ಭೀಮರಾವ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ ಅಂದರೆ ಅದು ಅವರ ಗುರುಗಳಾದ ಅಂಬೇಡ್ಕರ್ ಅವರಿಂದ. ಅಲೆಗ್ಸಾಂಡರ್ ಪ್ರಪಂಚವನ್ನೇ ಗೆಲ್ಲಲು ಹೊರಟಿದ್ದು ಹಿಂದೆ ಅರಿಸ್ಟಾಟಲ್ ಗುರು ಇದ್ದರು ಎಂಬ ಧೈರ್ಯದಿಂದ. ಅರಿಸ್ಟಾಟಲ್ ರವರ ಗುರು ಪ್ಲೇಟೋ, ಪ್ಲೇಟೋರವರ ಗುರು ಸಾಕ್ರೆಟಸ್. ಹೀಗೆ ಅನೇಕರ ಭವ್ಯ ಭವಿಷ್ಯತ್ತಿಗೆ ಮೇಣದ ಹಾಗೆ ತಮ್ಮನ್ನೇ ತಾವು ಸುಟ್ಟು ಪ್ರತಿ ವಿದ್ಯಾರ್ಥಿಯ ಬದುಕಿನಲ್ಲಿ ಜ್ಞಾನದ ಬೆಳಕನ್ನು ನೀಡುವ ಗುರು ಪರಂಪರೆಯನ್ನು ನೆನಪಿಸಿಕೊಂಡರೆ ಗುರು ಎಂದರೆ ಒಂದು ವ್ಯಕ್ತಿಯಲ್ಲ ಒಂದು ಶಕ್ತಿ ಎಂಬ ಮಾತು ಸತ್ಯವಾದದ್ದು.
             ನೆನಪಿರಲಿ ಶಿಕ್ಷಕ ರಾಷ್ಟ್ರದ ನಿರ್ಮಾತೃ, ದೇಶದ ಬೆನ್ನೆಲುಬು ರೈತನಾದರೆ ವಿದ್ಯಾರ್ಥಿಯ ಬೆನ್ನೆಲುಬು ಶಿಕ್ಷಕ. ತಾಯಿಯೇ ಮೊದಲ ಗುರು ಗುರುವೇ ಎರಡನೆಯ ತಾಯಿ. ನಮ್ಮ ನಮ್ಮ ಶಾಲೆಯ ಮಕ್ಕಳಿಗೆ ತಾಯಿ ಪ್ರೀತಿ ನಿಡೋಣ. ಶ್ರೀ ಸಿದ್ದೇಶ್ವರ ಮಹಾ ಸ್ವಾಮೀಜಿಗಳು ಹೇಳಿದಂತೆ ಶಿಕ್ಷಕ ತಾಯಿಯಂತಿರಬೇಕೇ ವಿನಹ ನಾಯಿಯಂತಿರಬಾರದು ಎಂಬ ಮಾತು ಪ್ರತಿಕ್ಷಣ ಮನದಲ್ಲಿರಲಿ. ನಾಳೆ ನಮ್ಮ ಸ್ವಂತ ಮಕ್ಕಳು ನಮಗೆ ಅನ್ನ ಹಾಕುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಮ್ಮ ಶಾಲಾ ಮಕ್ಕಳು ನಮಗೆ ಈವಾಗ್ಲೇ ಅನ್ನ ಕೊಡುತ್ತಿದ್ದಾರೆ. ನಮ್ಮಿಂದ ಅವರಲ್ಲ ಅವರಿಂದ ನಾವು. ಮಕ್ಕಳಿದ್ದರೆ ಶಾಲೆ ಶಾಲೆ ಇದ್ದರೆ ನಮಗೆ ಸಂಬಳ. ಬಿಲ್ ಮತ್ತು ಬೆಲ್ ಶಿಕ್ಷಕರಾಗದೆ ಪ್ರತಿ ವಿದ್ಯಾರ್ಥಿಯ ದಿಲ್ ಗೆಲ್ಲುವ ಶಿಕ್ಷಕರು ನಾವಾಗೋಣ.
                    ನಾಳೆ ನಮಗೆ ವಯಸ್ಸಾಗಿ ನಿವೃತ್ತಿಯಾದ ಮೇಲೆ ಯಾವುದೋ ಒಂದು ಕೆಲಸಕ್ಕಾಗಿ ಪೊಲೀಸ್ ಸ್ಟೇಷನ್ ಗೆ ಹೋದಾಗ ಅಲ್ಲಿ ಪಿಎಸ್ಐ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಜಿಲ್ಲಾ ಆಡಳಿತ ಕಚೇರಿಗೆ ಹೋದಾಗ ಅಲ್ಲಿಯ ಜಿಲ್ಲಾಧಿಕಾರಿ ನಮ್ಮ ವಿದ್ಯಾರ್ಥಿಯೇ ಆಗಿರಬೇಕು. ಯಾವತ್ತೋ ಒಂದು ದಿನ ವಿಧಾನಸೌಧಕ್ಕೆ ಕಾಲಿಟ್ಟಾಗ ಅಲ್ಲಿ ಎಂಎಲ್ಎ ಹಾಗೂ ಮುಖ್ಯಮಂತ್ರಿ ಕೂಡಾ ನಮ್ಮ ವಿದ್ಯಾರ್ಥಿಯೇ ಆಗಿದ್ದರೆ ಎಷ್ಟು ಗೌರವ ಇದು ವಿಚಾರಿಸಬೇಕಾದ ವಿಷಯ. ಯಾವತ್ತಾದರೂ ಒಂದು ದಿನ ನಾವು ಶಾಲೆಗೆ ರಜೆ ಹಾಕಿ ಮಾರನೇ ದಿನ ಶಾಲೆಗೆ ಹೋದಾಗ ಎಲ್ಲಾ ವಿದ್ಯಾರ್ಥಿಗಳು ನಮ್ಮನ್ನು ಟೀಚರ್, ನಿನ್ನ ಯಾಕೆ ಸಾಲಿ ಬಿಟ್ಟಿದ್ರಿ ಅಂತ ಕೇಳ್ತಾರಲ್ಲ ಅದು ನಮಗೆ ಒಂದು ದೊಡ್ಡ ರಾಷ್ಟ್ರ ಗೌರವ ಕೊಟ್ಟ ಹಾಗೆ. ಪ್ರಾರ್ಥನೆಯಾದ ನಂತರ ಯಾವುದೋ ಒಂದು ತರಗತಿಗೆ ಹೋದ ನಂತರ ಗುಡ್ ಮಾರ್ನಿಂಗ್ ಟೀಚರ್ ಎಂದು ನಗುಮುಖದಿಂದ ಎದ್ದು ನಮ್ಮನ್ನು ಸ್ವಾಗತಿಸುತ್ತಾರಲ್ಲವ ಅದು ನಮಗೆ ಕರ್ನಾಟಕ ರತ್ನ ಕೊಟ್ಟ ಹಾಗೆ. ಕೆಲವು ವರ್ಷಗಳ ನಂತರ ನಮ್ಮ ಹಳೆಯ ವಿದ್ಯಾರ್ಥಿಯು ಎಲ್ಲೋ ಒಂದು ಕಡೆ ಸಿಕ್ಕಾಗ ನಾವು ಅವರನ್ನು ಗುರುತಿಸದಿದ್ದರೂ ಅವರು ನಮ್ಮನ್ನು ಗುರುತು ಹಿಡಿದು ಬಂದು ಸರ್ ಆರಾಮ್ ಇದ್ದೀರಾ ಅಂತ ಕೇಳ್ತಾರಲ್ಲ ಅದು ನಮಗೆ ಭಾರತರತ್ನ ಕೊಟ್ಟ ಹಾಗೆ.
                        ಗುರುವಿನ ಮಹತ್ವವನ್ನು ಸಂತ ಕಬೀರದಾಸರು ತುಂಬಾ ಸೊಗಸಾಗಿ ಹೇಳಿದ್ದಾರೆ. ಅದೇನೆಂದರೆ ಈ ಭೂಮಿಯ ಮೇಲಿನ ಎಲ್ಲಾ ಮರಗಳನ್ನು ಕಡಿದು ಲೇಖನಿಗಳನ್ನಾಗಿ ಮಾಡಿ, ಎಲ್ಲಾ ಸಮುದ್ರಗಳ ನೀರನ್ನು ಮಸಿಯನ್ನಾಗಿ ಪರಿವರ್ತಿಸಿ, ಆಕಾಶವನ್ನೇ ಕಾಗದವನ್ನಾಗಿ ಮಾಡಿ ಎಲ್ಲಾ ಭಾಷೆಗಳನ್ನು ಉಪಯೋಗಿಸಿ ಬರೆದರು ಕೂಡ ಗುರುವಿನ ಗುಣಗಾನ ಇನ್ನು ಉಳಿಯುತ್ತದೆ ಎಂಬ ಮಾತು ಬಹಳ ಸತ್ಯವಾದದ್ದು. ವಿದ್ಯಾರ್ಥಿಗಳ ಮೊದಲ ಪುಟ ಜನನ ತಾಯಿ ಬರೆದರೆ, ಕೊನೆಯ ಪುಟ ಮರಣ ದೇವರು ಬರೆದರೆ ಮಧ್ಯದ ಜೀವನ ಅನ್ನೋ ಹಲವಾರು ಪುಟಗಳನ್ನ ತಿದ್ದಿ ತೀಡಿ ಬರೆಯಬೇಕಾದದ್ದು ಗುರುಗಳು. ಇದು ಪ್ರತಿ ಗುರುವಿನ ಮಹತ್ತರವಾದ ಕಾರ್ಯವಾಗಿದೆ. ನಿಮಗೆ ತಿಳಿದಿರಲಿ ಸ್ವಾತಿ ಮಳೆಯ ನಕ್ಷತ್ರದಲ್ಲಿ ಮಾತ್ರ ಕಪ್ಪೆ ಚಿಪ್ಪು ಸಮುದ್ರದ ಮೇಲೆ ಬಂದು ಬಾಯಿ ತೆರೆದು ಆ ಕ್ಷಣದಲ್ಲಿ ಬೀಳುವ ಮಳೆ ಹನಿಯನ್ನು ಬಾಯಿ ತೆಗೆದು ಆ ಮಳೆಹನಿಯನ್ನು ಬಾಯಲ್ಲಿ ತಗೊಂಡು ಸಮುದ್ರದ ಆಳಕ್ಕೆ ಬಹುದೂರ ತೆಗೆದುಕೊಂಡು ಹೋಗಿ ಕೆಲವು ದಿನಗಳ ನಂತರ ಅದನ್ನು ಅತ್ಯಂತ ಬೆಲೆ ಬಾಳುವ ಮುತ್ತು ಆಗಿ ಪರಿವರ್ತಿಸುವುದು. ಹಾಗೆಯೇ ನಮ್ಮ ನಮ್ಮ ಶಾಲೆಗಳಲ್ಲಿ ಪ್ರತಿನಿತ್ಯ ಸ್ವಾತಿ ನಕ್ಷತ್ರದ ಜ್ಞಾನದ ಮಳೆ ಹನಿಗಳನ್ನು ವಿದ್ಯಾರ್ಥಿಗಳ ಮೆದುಳಿಗೆ ನೀಡಿ ಅವರನ್ನು ಕೂಡ ಸಮಾಜದಲ್ಲಿ ಒಬ್ಬ ಉತ್ತಮ ನಾಗರಿಕನಾಗಿ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮುತ್ತಿನಂತ ಮನುಷ್ಯನನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಆಗ ನಾವು ನಿಜವಾದ ಬಂಗಾರದ ಮನುಷ್ಯರಾಗುತ್ತೇವೆ. 
                        ಯಾವುದೋ ಒಂದು ಕಾರ್ಯಕ್ರಮಕ್ಕೆ ಪ್ರಧಾನಿಗಳೋ ಅಥವಾ ಮುಖ್ಯಮಂತ್ರಿಗಳೋ ಬಂದು ಸಾವಿರಾರು ಜನರ ಗುಂಪಲ್ಲಿ ಇದ್ದ ನಮ್ಮನ್ನು ಗುರುತಿಸಿ ನಮ್ಮ ಹೆಸರು ಕೂಗಿ ಕರೆದಾಗ ನಮಗೆ ಎಷ್ಟು ಖುಷಿ ಆಗುತ್ತೆ ಅಲ್ವಾ. ಹಾಗೆಯೇ ನಮ್ಮ ಶಾಲೆಯ ಪ್ರತಿ ವಿದ್ಯಾರ್ಥಿಯನ್ನು ಹೆಸರಿಟ್ಟೇ ಕರೆಯುವ ರೂಡಿ ನಮ್ಮದಾಗಲಿ. ಕೇವಲ ಸಂಬಳದ ಶಿಕ್ಷಕರಾಗದೆ ನಮ್ಮ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಗಟ್ಟಿಗೊಳಿಸುವ ಹಾಗೂ ಅವರನ್ನು ಸಾಧಕರನ್ನಾಗಿ ಮಾಡುವ ಶಿಕ್ಷಕರು ನಾವಾಗೋಣ. ತಂದೆ ತಾಯಿಗಳು ನಮ್ಮ ಕೈಯಲ್ಲಿ ವಿದ್ಯಾರ್ಥಿ ಎಂಬ ಒಂದು ಸುಂದರವಾದ ಹೂವನ್ನು ಕೊಟ್ಟಿದ್ದಾರೆ. ಅದನ್ನು ಕಸದ ಬುಟ್ಟಿಗೆ ಎಸೆಯುತ್ತೀರೋ ಅಥವಾ ದೇವರ ಮುಡಿಗೆ ಅರ್ಪಿಸುತ್ತಿರೋ ಯೋಚಿಸಬೇಕಾದ ವಿಷಯ. ಪ್ರತಿ ಮಗು ನಮ್ಮ ಸ್ವಂತ ಮಗು ಎಂಬ ಯೋಚನೆ ಸದಾ ಇರಲಿ. ಎಲ್ಲಾ ವಿದ್ಯಾರ್ಥಿಗಳನ್ನು ಬರಿ ಕಲ್ಲುಗಳು ಅಂತ ದಯವಿಟ್ಟು ತಿಳಿಯಬೇಡಿರಿ, ಅವರನ್ನು ನಾವು ಕೆತ್ತಿ ಕೆತ್ತಿ ಶಿಲೆ ಮಾಡುತ್ತಿದ್ದೇವೆ ಅನ್ನೋ ಭ್ರಮೆಯಿಂದ ಆಚೆ ಬರೋಣ. ನೆನಪಿರಲಿ ಕೆಲವು ವಿದ್ಯಾರ್ಥಿಗಳು ಶಿಲೆಗಳಾಗಿಯೇ ನಮ್ಮ ಶಾಲೆಗೆ ಬಂದಿರುತ್ತವೆ ಅವರಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಜ್ಞಾನ ಭಂಡಾರದ ದೇವರನ್ನಾಗಿಸಬೇಕು ಅಷ್ಟೇ.

            ಗುರು ಎಂಬುದು ಬೌತಿಕ ವಸ್ತುವಲ್ಲ. ಜ್ಞಾನ ಎಂಬುದನ್ನು ಶಿಷ್ಯನಲ್ಲಿಗೆ ಪ್ರವಹಿಸುವಂತೆ ಮಾಡುವ ಶಕ್ತಿ. ಶಿಷ್ಯನನ್ನು ಒಂದು ಹಿಮಗಲ್ಲು ಎಂದು ಭಾವಿಸಿದರೆ ಜ್ಞಾನ ಎಂಬುದು ಕುದಿಯುವ ನೀರಿನಂತೆ. ಗುರು ಈ ಕುದಿಯುವ ನೀರನ್ನು ಶಿಷ್ಯ ಎಂಬ ಹಿಮಗಲ್ಲಿನ ಮೇಲೆ ನಿಧಾನವಾಗಿ ಹನಿ ಸುರಿಯುತ್ತಾ ಬರುತ್ತಾನೆ. ಇಲ್ಲದಿದ್ದರೆ ಹಿಮಗಲ್ಲು ಬಿರುಕು ಬಿಡುತ್ತದೆ. ಗುರು ಶಿಷ್ಯನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾನೆ. ವಿಕಸನದ ಪ್ರಯಾಣದಲ್ಲಿ ಗುರು ಅಕ್ಷರಶಃ ಶಿಷ್ಯನನ್ನು ಹೊತ್ತೊಯ್ಯುತ್ತಾನೆ. "ವಿದ್ಯಾರ್ಥಿಗಳ ಬಾಳ ಹೊಂಬೆಳಕು ಶಿಕ್ಷಕರು " ಎಂದರೆ ತಪ್ಪಾಗಲಾರದು. ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಹಿಂದೆ ಶಿಕ್ಷಕರ ಪಾತ್ರ ತುಂಬಾ ಮಹತ್ವದಾಗಿದೆ. " ತಾಯಿ ಜೀವ ನೀಡಿದರೆ ಶಿಕ್ಷಕರು ಜೀವನವನ್ನೇ ನೀಡುತ್ತಾರೆ " ಎಂಬ ಮಾತು ಅಕ್ಷರಶಃ ಸತ್ಯ. ಶಿಕ್ಷಕರು ವಿದ್ಯಾರ್ಥಿಗಳನ್ನು ನದಿ ದಾಟಿಸುವ ನಾಯಕರು ಹೌದು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಬಗ್ಗೆ ಗುರಿ ಕಟ್ಟಿ ಕೊಡುವವರು ಗುರುಗಳು.

            ನಾವು ಅಕ್ಷರ ವಾದರೆ ನಮ್ಮ ವಿದ್ಯಾರ್ಥಿಗಳು ಪದವಾಗಬೇಕು. ನಾವು ಪದವಾದರೆ ಅವರು ವಾಕ್ಯವಾಗಬೇಕು. ನಾವು ವಾಕ್ಯವಾದರೆ ಅವರು ಪ್ಯಾರಾ ಆಗಬೇಕು. ನಾವು ಪ್ಯಾರಾ ಆದರೆ ಅವರು ಪುಟವಾಗಬೇಕು ಹಾಗೆಯೇ ಮುಂದುವರೆಯುತ್ತಾ.. ನಾವು ಪುಟವಾದರೆ ಅವರು ಪುಸ್ತಕ. ನಾವು ಪುಸ್ತಕವಾದರೆ ಅವರು ಗ್ರಂಥ. ನಾವು ಗ್ರಂಥವಾದರೆ ಅವರು ಗ್ರಂಥಾಲಯ ಆಗಬೇಕು ಅಂದಾಗ ಮಾತ್ರ ಶಿಕ್ಷಕ ವೃತ್ತಿಗೆ ಒಂದು ಅತ್ಯುತ್ತಮವಾದ ಬೆಲೆ ಬರುವುದು.
                  ನಾವು ಪ್ರತಿನಿತ್ಯ ಅವರ ಮೆದುಳಿಗೆ ಪಾಠ ಮಾಡುತ್ತೇವೆ. ಅವಾಗವಾಗ ಅವರ ಹೃದಯಕ್ಕೂ ಕೂಡ ಪಾಠ ಮಾಡಿರಿ, ಆಗ ಅವರ ಹೃದಯದಲ್ಲಿ ನೀವು ಸದಾ ಹೃದಯವಂತರು. ನಾವು ಶಿಕ್ಷಕ ವೃತ್ತಿಗೆ ಒಪ್ಪಿ ಬಂದಿಯೋ ಅಥವಾ ತಪ್ಪಿ ಬಂದಿವೋ ಗೊತ್ತಿಲ್ಲ ಆದರೆ ಈ ವೃತ್ತಿಯನ್ನು ಈಗ ಅಪ್ಪಿಕೊಳ್ಳಲೇಬೇಕು. ಅಂದಾಗ ಇಡೀ ಸಮಾಜವೇ ನಮ್ಮನ್ನು ತಬ್ಬಿಕೊಳ್ಳುತ್ತೆ. ಒಂದು ಶಾಲೆಗೆ ನಾವು ಶಿಕ್ಷಕರಾಗಿ ಆಯ್ಕೆಯಾಗಿ ಹೋಗುವಾಗ ನಮಗೆ ಯಾವುದೇ ಕಪ್ಪು ಚುಕ್ಕೆ ಇರುವುದಿಲ್ಲ. ಹಾಗೆಯೇ ಅಲ್ಲಿಂದ ಹೊರ ಬರುವಾಗಲೂ ಕೂಡ ಯಾವುದೇ ಕಪ್ಪು ಚುಕ್ಕೆ ಇರಬಾರದು. ನಿವೃತ್ತಿ ಆಗುವವರೆಗೂ ಒಂದು ಚಿಕ್ಕ ಕಪ್ಪು ಚುಕ್ಕೆ ಇಲ್ಲದಂತ ಪ್ರಾಮಾಣಿಕ ಸೇವೆ ನಮ್ಮದಾಗಲಿ. ನಮ್ಮ ಬೀಳ್ಕೊಡುವ ಸಮಾರಂಭ ನಮ್ಮ ಶಾಲೆ ಇರುವ ಊರಿನಲ್ಲಿ ಒಂದು ಜಾತ್ರೆಯಂತೆ ಇಡೀ ಊರಿನ ಜನ ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ಆಚರಿಸುವಂತಾಗಬೇಕು. ಕಲಿಕೆಯಲ್ಲಿ ಹಿಂದುಳಿದವರನ್ನು ಮೆಟ್ಟಿಲು ಎಂದು ಜಾಣರನ್ನು ಮೂರ್ತಿ ಎಂದು ದಯವಿಟ್ಟು ಬೇದಭಾವ ಮಾಡಬೇಡಿ. ನಿಮಗೊಂದು ಸತ್ಯ ನೆನಪಿರಲಿ ಪ್ರತಿ ದೇವಸ್ಥಾನಕ್ಕೆ ಹೋದಾಗ ನಾವು ಯಾರು ಗರ್ಭಗುಡಿಯಲ್ಲಿರುವ ದೇವರ ಮೂರ್ತಿಗೆ ನಮಸ್ಕರಿಸುವುದಿಲ್ಲ. ಮೊದಲಿಗೆ ಮೆಟ್ಟಿಲು ಮುಟ್ಟಿ ನಮಸ್ಕರಿಸುತ್ತೇವೆ. ಹಾಗಾಗಿ ಯಾರೂ ಮೇಲಲ್ಲ ಯಾರೂ ಕೀಳಲ್ಲ ನೋಡುವ ದೃಷ್ಟಿ ಬದಲಾಗಬೇಕು ಅಷ್ಟೇ. ನಮ್ಮ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಯಾರೋ ಒಬ್ಬರ ಕೆಳಗೆ ನೌಕರಿ ಮಾಡುವವರು ಆಗಬಾರದು. ಸಾವಿರಾರು ಜನರಿಗೆ ನೌಕರಿ ಕೊಡುವವರು ಆಗಬೇಕು. ನಮ್ಮ ಶಾಲೆ ಇರುವ ಊರಿನ ಹಿರಿಯರಿಗೆ ಕಿರಿಯವನಾಗಿ, ಕಿರಿಯರಿಗೆ ಹಿರಿಯವನಾಗಿ ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಬದುಕಿದಾಗ ಮಾತ್ರ ನಮ್ಮ ಸೇವೆ ಪರಶಿವನಿಗೂ ಇಷ್ಟವಾಗುತ್ತದೆ. ಒಬ್ಬ ಹಾಡುಗಾರನಿಗೆ ಒನ್ಸ ಮೋರ್ ಎಂದರೆ ಮತ್ತೊಮ್ಮೆ ಹಾಡುವನು. ಒಬ್ಬ ನೃತ್ಯಗಾರನಿಗೆ ಒನ್ಸ್ ಮೋರ್ ಎಂದರೆ ಮತ್ತೊಮ್ಮೆ ನೃತ್ಯ ಮಾಡುವನು. ಆದರೆ ಒಬ್ಬ ವಿದ್ಯಾರ್ಥಿಯ ಗೋಲ್ಡನ್ ಲೈಫ್ ಗೆ ಒನ್ಸ ಮೋರ್ ಎಂದರೆ ಮತ್ತೆ ಅವನಿಗೆ ಆ ಕಲಿಕಾ ಅವಧಿಯನ್ನು ನಮ್ಮಿಂದ ಕೊಡಲು ಸಾಧ್ಯವಿಲ್ಲ. ಕಲಿಸುವಾಗ ಸರಿಯಾಗಿಯೇ ಕಲಿಸೋಣ.ಅವನ ಸಾಧನೆಯ ದೀಪವನ್ನು ಅವನ ಬದುಕಲ್ಲಿ ಬೆಳಗೋಣ. ಪ್ರತಿ ವಿದ್ಯಾರ್ಥಿಯ ಭವಿಷ್ಯದ ಬದುಕಿನ ಬುತ್ತಿಯಲ್ಲಿ ಸದಾ ಕಾಲ ಎಂದೆಂದಿಗೂ ಮರೆಯದ ಒಂದು ಸಿಹಿ ತುತ್ತು ನಾವು ಆಗೋಣ.
ಶ್ರೀ ಮುತ್ತು ಯ.ವಡ್ಡರ
 ಶಿಕ್ಷಕರು 
 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,ಹಿರೇಮಳಗಾವಿ 
 ಬಾಗಲಕೋಟ -ಜಿಲ್ಲೆ 
9845568484

ಗುರುವಾರ, ಸೆಪ್ಟೆಂಬರ್ 4, 2025

''ಶಿಲ್ಪಿಯೂ, ಗುರುವೂ''

“ಶಿಲ್ಪಿಯೂ, ಗುರುವೂ”

ಬಿಸಿಲು-ಮಳೆಗಂಜದ ಕಾಯಕಯೋಗಿ ಇವನು..
 ಕಗ್ಗಲ್ಲನ್ನು ಕಡೆದು ಶಿಲ್ಪವಾಗಿ ಸುವವನು... 

ಶಿಲೆಯಲ್ಲಿ ಸುಂದರ ಕಲೆಯರಳಿಸುವವನು... 
ಕಲೆಯಿಂದ ಶಿಲೆಗೊಂದು ಜೀವ ತುಂಬುವವನು... 

ಸಾವಿರ ಉಳಿಪೆಟ್ಟು ತಿಂದರೆ ತಾನೆ ಮೂರ್ತಿ... 
ಸುಂದರ ಶಿಲ್ಪವಾಗಿ ಬದುಕಿಗಾಗುವುದು ಸ್ಪೂರ್ತಿ..

 ಕಗ್ಗಲ್ಲೆಂದು ತಾನೆಂದು ಕೈಕಟ್ಟಿ ಕುಳಿತಿರದೆ... 
ಶ್ರಮಿಸುವನು ಶಿಲೆಗಾಗಿ ಹಗಲಿರುಳೆನ್ನದೆ... 

ಒರಟು ಶಿಲೆಗೆ ತನ್ನ ಕಲ್ಪನೆಯ ಆಕಾರವನೀವ…
ಆರಳಿದ ಮೂರ್ತಿಗೆ ತಾನೇ ಭಕ್ತಿಯಲ್ಲಿ ಕೈಮುಗಿವ... 

ಗುರುವಿಗೂ ಶಿಲ್ಪಿಗೂ ಇರುವುದೊಂದೇ ಸಾಮ್ಯತೆ..
ಕಲ್ಲನ್ನೂ, ಕಲ್ಲು ಮನಸನ್ನೂ ತೀಡಿದೆನೆಂದ ಧನ್ಯತೆ...

ಗುರುವಿನೊಳ ಶಿಲ್ಪಿಗೆ, ಶಿಲ್ಪಿಯೊಳ ಗುರುವಿಗೆ..
ವಂದಿಪೆನು ನಾ ಇಬ್ಬರೂ ಬಾಳ ಬೆಳಗುವ ದೀವಿಗೆ..
ರಚನೆ :
ಶ್ರೀಮತಿ  ಮಧುಮಾಲತಿ ರುದ್ರೇಶ್‌ ಬೇಲೂರು

ಶಿಕ್ಷಕರ ದಿನಾಚರಣೆ...


ಸೆ 5 ರಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. ನಮಗೆ ವಿದ್ಯಾ ಕಲಿಸಿದ ಶಿಕ್ಷಕರು ಮತ್ತು ಕೆಲಸ ಹೇಳಿ ಕಲಿಸಿಕೊಟ್ಟ ಗುರುಗಳಿಗೆ ಪ್ರೀತಿಯ ನಮನಗಳು. 
ಗುರುಬ್ರಹ್ಮ ಗುರುವಿಷ್ಣು 
ಗುರುದೇವೋ ಮಹೇಶ್ವರ 
ಗುರುಸಾಕ್ಷಾತ್ ಪರಬ್ರಹ್ಮ
 ತಸ್ಮೖೆ ಶ್ರೀ ಗುರುವೇ ನಮಃ  
ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿಬಿಡುತ್ತವೆ. ಎಲ್ಲಾ ಮಕ್ಕಳಿಗೂ ತಾಯಿ ತಂದೆಯೇ ಮೊದಲ ಗುರು. ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಬ್ದಾರಿಯುತವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು ಗುರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದುಕೊಂಡಿರುತ್ತಾರೆ. ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ' ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು' ಅನ್ನೋ ಗಾದೆ ಮಾತು ತುಂಬಾ ಅರ್ಥಪೂರ್ಣವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು.. ತಲುಪಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು 
ಮಾರ್ಗದರ್ಶನ ಇರಲೇಬೇಕು. ಗುರುಗಳ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪಬಹುದು. ಗುರುವೇಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ. ನನ್ನನ್ನು ಜೀವನದಲ್ಲಿ ಉತ್ತಮ ವ್ಯಕ್ತಿಯನಾಗಿ ರೂಪಿಸಲು ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗೆ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ ನನ್ನ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. 

             - ವಿ.ಎಂ.ಎಸ್.ಗೋಪಿ ✍
              ಲೇಖಕರು, ಸಾಹಿತಿಗಳು
                     ಬೆಂಗಳೂರು.

ನನ್ನ ಗುರು ಭಗವಂತ !

ನನ್ನ ಗುರು ಭಗವಂತ!

ಕಪ್ಪು ಹಲಗೆಯ ರೈತ
ನನ್ನ ಗುರು ಭಗವಂತ
ಬಳಪ ನೇಗಿಲ ಹೂಡಿ
ಬೆಳಕು ಬಿತ್ತಿದ ಯೋಗಿ
ನನ್ನ ಗುರು ಭಗವಂತ!

ಅಕ್ಕರದ ಜೋಳಿಗೆಯ ಸಂತ
ನನ್ನ ಗುರು ಭಗವಂತ
ಭಾವದೊಲುಮೆಯ ತೂಗಿ
ವಸಂತ ಚೆಲ್ಲಿದ ಜೋಗಿ
ನನ್ನ ಗುರು ಭಗವಂತ!

ಗುಣಗಣಿಗಳ ಸಿರಿವಂತ
ನನ್ನ ಗುರು ಭಗವಂತ
ಪುಟಕ್ಕಿಟ್ಟ ಅನುರಾಗಿ
ಸು'ವರ್ಣ' ಧಾರೆಯ ತ್ಯಾಗಿ
ನನ್ನ ಗುರು ಭಗವಂತ!

ಮೇರುಗಳಲಿ ಹಿಮವಂತ
ನನ್ನ ಗುರು ಭಗವಂತ
ಶಿಖರಾಂಶಗಳನೆ ಎತ್ತಿ
ಹೆಗಲಾದ ಮಾರುತಿ
ನನ್ನ ಗುರು ಭಗವಂತ!

ನಮ್ಮೊಳಗಿನ ಧೀಮಂತ
ನನ್ನ ಗುರು ಭಗವಂತ
ರಾಜಕೋಶಗಳಿಗೆ ವಿರಾಗಿ
ವಿನಯ ಪುನೀತ ಮಣಿ
ನನ್ನ ಗುರು ಭಗವಂತ!

~ ಅರಬಗಟ್ಟೆ ಅಣ್ಣಪ್ಪ
(ನನ್ನೆಲ್ಲಾ ಗುರುಗಳಿಗೆ ನಮಿಸಿ, ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಗೆ ಶುಭಾಶಯಗಳು)

ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

ಜ್ಞಾನದ ಬೆಳಕನ್ನು ಹಚ್ಚುವ ಸಮಸ್ತ ಉಪಾಧ್ಯಾಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು .
ಸಾಮಾನ್ಯವಾಗಿ ವಿಶ್ವದಾದ್ಯಂತ ಹಲವಾರು ದಿನಾಚರಣೆಗಳನ್ನು ನಾವು ಆಚರಿಸುತ್ತೇವೆ .ಪ್ರತಿಯೊಂದು ದಿನಾಚರಣೆಯೂ ಅದರದೇ ಆದ ಮಹತ್ವ ಪಡೆದುಕೊಂಡಿದೆ ಅವುಗಳ ಸಾಲಿನಲ್ಲಿ ಶಿಕ್ಷಕರ ದಿನಾಚರಣೆಯೂ ಅಗ್ರ ಸ್ಥಾನದಲ್ಲಿದೆ ಕಾರಣ ದೇಶವನ್ನು ಆಳುವ ಪ್ರಧಾನಿ ಯವರಿಂದ ಹಿಡಿದು ಒಬ್ಬ ಸಾಮಾನ್ಯ ಜವಾನ ವರಗಿನ ಎಲ್ಲ ಜನಾಂಗಕ್ಕೂ ವಿದ್ಯೆಯನ್ನು ನೀಡಿ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಮಾಡುವವರು ಶಿಕ್ಷಕರು ಹಾಗಾಗಿ ಸಮಸ್ತ ದೇಶದ ಶಿಕ್ಷಕವೃಂದ ದವರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
ಶಿಕ್ಷಕರ ದಿನಾಚರಣೆಯ ಕುರಿತು ಒಂದು ಅವಲೋಕನ
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962 ರಲ್ಲಿ ಭಾರತದ ರಾಷ್ಟ್ರಪತಿಯಾದರು. ಅವರ ಸ್ನೇಹಿತರು ಮತ್ತು ಮಾಜಿ ವಿದ್ಯಾರ್ಥಿಗಳು ಅವರನ್ನು ಸಂಪರ್ಕಿಸಿದರು ಮತ್ತು ಸೆಪ್ಟೆಂಬರ್ 5 ರಂದು ಬರುವ ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ವಿನಂತಿಸಿದರು. ಅವಾಗ ರಾಧಾಕೃಷ್ಣನ್ ರವರು ನನ್ನ ಜನ್ಮ ದಿನವನ್ನು ಆಚರಿಸುವ ಬದಲು ವಿದ್ಯೆಯನ್ನು ಇತರರಿಗೆ ಧಾರೆ ಏರೆಯುವ ಪ್ರತಿಯೊಬ್ಬ ಶಿಕ್ಷಕರಿಗೆ ಅರ್ಪಿಸಿ ಅಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಅದು ನೀವು ನನಗೆ ಕೊಡುವ ಗೌರವ ಎಂದು ಡಾ.ಎಸ್.ರಾಧಾಕೃಷ್ಣನ್ ಹೇಳಿದರು
ಸೆಪ್ಟೆಂಬರ್ 5ರ ನನ್ನ ಜನ್ಮ ದಿನಾಚರಣೆಯ ಬದಲಿಗೆ ಶಿಕ್ಷಕರ ದಿನವನ್ನಾಗಿ ಆಚರಿಸಲಾಗುವುದು. ಭಾರತದ ಎರಡನೇ ರಾಷ್ಟ್ರಪತಿಯವರ ಈ ವಿನಂತಿಯು ಶಿಕ್ಷಕರ ಬಗ್ಗೆ ಅವರ ಪ್ರೀತಿ ಮತ್ತು ಸಮರ್ಪಣೆಯನ್ನು ಪ್ರದರ್ಶಿಸಿತು.
ಅಂದಿನಿಂದ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಡಾ ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿ ಹುದ್ದೆಯನ್ನು ವಹಿಸಿಕೊಂಡ ವರ್ಷವಾದ 1962 ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ.

ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳು ಎಂಬ ನಂಬಿಕೆಯೂ ಅವರಿಗಿತ್ತು.

ಶಿಕ್ಷಕರ ದಿನದ ಮಹತ್ವ:
ದೇಶದ ಭವಿಷ್ಯವು ಅದರ ಮಕ್ಕಳ ಕೈಯಲ್ಲಿದೆ ಎಂದು ಯಾವಾಗಲೂ ನಿರ್ವಹಿಸಲಾಗುತ್ತದೆ. ಶಿಕ್ಷಕರು, ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳನ್ನು ಭವಿಷ್ಯದ ನಾಯಕರನ್ನಾಗಿ ರೂಪಿಸಬಹುದು ಮತ್ತು ಅವರು ರಾಷ್ಟ್ರದ ಭವಿಷ್ಯವನ್ನು ರೂಪಿಸುತ್ತಾರೆ. ನಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ವಿಯಾಗಲು ಸಹಾಯ ಮಾಡಲು ಅವರು ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ.

ಒಳ್ಳೆಯ ಮನುಷ್ಯರಾಗಿ, ನಮ್ಮ ಸಮಾಜದ ಉತ್ತಮ ಸದಸ್ಯರಾಗಲು ಮತ್ತು ದೇಶದ ಆದರ್ಶ ನಾಗರಿಕರಾಗಲು ಅವರು ನಮ್ಮನ್ನು ಮೃದುವಾಗಿ ಒತ್ತಾಯಿಸುತ್ತಾರೆ. ಶಿಕ್ಷಕರ ದಿನವು ವಾಸ್ತವವಾಗಿ ನಮ್ಮ ಜೀವನದಲ್ಲಿ ಶಿಕ್ಷಕರು ವಹಿಸುವ ಕಷ್ಟ, ಸವಾಲುಗಳು ಮತ್ತು ಅಪ್ರತಿಮ ಪಾತ್ರವನ್ನು ಒಪ್ಪಿಕೊಳ್ಳುವ ಆಚರಣೆಯಾಗಿದೆ.
ಶಿಕ್ಷಕರ ದಿನದ ಸಂಗತಿಗಳು
– ಸಮಾಜಕ್ಕೆ ಶಿಕ್ಷಕರ ಕೊಡುಗೆಗಾಗಿ ಶಿಕ್ಷಕರ ದಿನವನ್ನು ವಿಶ್ವಾದ್ಯಂತ ಆಚರಿಸಲಾಗುತ್ತದೆ.

– ವಿವಿಧ ದೇಶಗಳಲ್ಲಿನ ಆಚರಣೆಯು ಪ್ರಖ್ಯಾತ ವ್ಯಕ್ತಿಗಳು ಅಥವಾ ಶಿಕ್ಷಣದ ಕ್ಷೇತ್ರದಲ್ಲಿ ಸಾಧನೆಗಳು ಮತ್ತು ಮೈಲಿಗಲ್ಲುಗಳಿಗೆ ಪರಸ್ಪರ ಸಂಬಂಧ ಹೊಂದಿದೆ.

– ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾದರು. ಅವರು ಕಟ್ಟಾ ಶಿಕ್ಷಣತಜ್ಞರು, ಹೆಸರಾಂತ ರಾಜತಾಂತ್ರಿಕರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶ್ರೇಷ್ಠ ಶಿಕ್ಷಕರು.

– ಡಾ.ಎಸ್.ರಾಧಾಕೃಷ್ಣನ್ ಯಾವಾಗಲೂ ಶಿಕ್ಷಕರು ದೇಶದ ಅತ್ಯುತ್ತಮ ಮನಸ್ಸುಗಳಾಗಬೇಕು ಎಂದು ನಂಬಿದ್ದರು.

ಶಿಕ್ಷಕರ ದಿನಾಚರಣೆಯಂದು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಾರೆ. ಈ ಚಟುವಟಿಕೆಗಳಲ್ಲಿ ನೃತ್ಯ ಸ್ಪರ್ಧೆಗಳು, ಗಾಯನ ಸ್ಪರ್ಧೆಗಳು, ಶಿಕ್ಷಕರ ಮಿಮಿಕ್ರಿ, ಆಟಗಳು ಮತ್ತು ಕವಿತೆಗಳ ವಾಚನ ಸೇರಿವೆ. ಕೆಲವು ವಿದ್ಯಾರ್ಥಿಗಳು ಪಿಕ್ನಿಕ್‌ಗಳನ್ನು ಯೋಜಿಸುತ್ತಾರೆ, ಶಿಕ್ಷಕರಿಗೆ ಉಡುಗೊರೆಗಳು, ಹೂವುಗಳು ಮತ್ತು ಕೈಯಿಂದ ಮಾಡಿದ ಕಾರ್ಡ್‌ಗಳೊಂದಿಗೆ ಸ್ನಾನ ಮಾಡುತ್ತಾರೆ. ಇದೆಲ್ಲವೂ ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮೇಲಿನ ಪ್ರೀತಿ ಮತ್ತು ಗೌರವವನ್ನು ವ್ಯಕ್ತಪಡಿಸುವ ಮಾರ್ಗವಾಗಿದೆ.

ಶಿಕ್ಷಕರ ದಿನವು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಂಚಿಕೊಂಡಿರುವ ಸುಂದರ ಬಂಧವನ್ನು ಆಚರಿಸಲು ಮತ್ತು ಆನಂದಿಸಲು ಅದ್ಭುತ ಸಂದರ್ಭವಾಗಿದೆ. ಈಗಲೂ ಸಹ, ತಮ್ಮ ಜೀವನದಲ್ಲಿ ಅದ್ಭುತವಾದ ಕೆಲಸಗಳನ್ನು ಮಾಡಲು ಬೆಳೆದ ಕೆಲವು ಮಾಜಿ ವಿದ್ಯಾರ್ಥಿಗಳು, ಸೆಪ್ಟೆಂಬರ್ 5 ರಂದು ತಮ್ಮ ಶಾಲಾ-ಕಾಲೇಜುಗಳಿಗೆ ತಮ್ಮ ಶಿಕ್ಷಕರಿಗೆ ಶುಭ ಹಾರೈಸಲು ಮತ್ತು ಈ ದಿನವನ್ನು ಸ್ಮರಣೀಯವಾಗಿಸಲು ಅವರೊಂದಿಗೆ ಉತ್ತಮ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ.
- ಶಿಕ್ಷಕರು ಅಂದರೆ ಯಾರು....‌
ಶಿಕ್ಷಕರು ಜ್ಞಾನ ಮತ್ತು ಬುದ್ಧಿವಂತಿಕೆಯ ನಿಜವಾದ ಆಗಿರುವುದರಿಂದ ಅವರ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಪೋಷಿಸುತ್ತಾರೆ ಮತ್ತು ಸಿದ್ಧಪಡಿಸುತ್ತಾರೆ. ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಾರೆ. ಅಜ್ಞಾನದಿಂದ ಕತ್ತಲೆಯಾದ ಪ್ರಪಂಚದಲ್ಲಿ ಅವರೇ ಬೆಳಕಿನ ಮೂಲ. ನಮ್ಮ ಗುರುಗಳು ನಮ್ಮ ಯಶಸ್ಸಿನ ನಿಜವಾದ ಆಧಾರ ಸ್ತಂಭಗಳು. ಅವರು ನಮಗೆ ಜ್ಞಾನವನ್ನು ಸಂಗ್ರಹಿಸಲು, ನಮ್ಮ ಕೌಶಲ್ಯಗಳನ್ನು ಸುಧಾರಿಸಲು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತಾರೆ ಮತ್ತು ಯಶಸ್ಸಿನ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತಾರೆ. ಆದರೆ, ವಿದ್ಯಾರ್ಥಿಗಳ ಜೀವನದಲ್ಲಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಇಂತಹ ನಿರ್ಣಾಯಕ ಪಾತ್ರವನ್ನು ವಹಿಸಿದ್ದರೂ, ಅವರು ಅರ್ಹವಾದ ಕೃತಜ್ಞತೆಯನ್ನು ಅಪರೂಪವಾಗಿ ತೋರಿಸುತ್ತಾರೆ.

ಆದ್ದರಿಂದ, ವಿದ್ಯಾರ್ಥಿಯಾಗಿ, ವರ್ಷಕ್ಕೊಮ್ಮೆಯಾದರೂ ಅವರಿಗೆ ಧನ್ಯವಾದ ಹೇಳುವುದು ನಮ್ಮ ಕರ್ತವ್ಯ ಮತ್ತು ಶಿಕ್ಷಕರ ದಿನವು ಹಾಗೆ ಮಾಡಲು ನಮಗೆ ಆದರ್ಶ ಅವಕಾಶವನ್ನು ನೀಡುತ್ತದೆ ತಮ್ಮದೇ ಆದ ಶಿಕ್ಷಕರು ಮತ್ತು ಮಾರ್ಗದರ್ಶಕರ ಜೊತೆಗೆ, 5ನೇ ಸೆಪ್ಟೆಂಬರ್ ವ್ಯಕ್ತಿಯೊಬ್ಬರು ಹಿಂತಿರುಗಿ ನೋಡಬಹುದಾದ ದಿನವಾಗಿದೆ ಮತ್ತು ಡಾ. ಎಸ್. ರಾಧಾಕೃಷ್ಣನ್ ಅವರ ಜೀವನ ಮತ್ತು ಕಾರ್ಯಗಳಿಂದ ಪ್ರೇರಿತರಾಗಬಹುದು. ಡಾ. ರಾಧಾಕೃಷ್ಣನ್ ಅವರು ಹಳ್ಳಿಯಿಂದ ಬಡ ಕುಟುಂಬದಿಂದ ಬಂದವರು ಮತ್ತು ಶಿಕ್ಷಣದ ಸಹಾಯದಿಂದ ಅವರು ಗೌರವಾನ್ವಿತ ರಾಜಕಾರಣಿ ಮತ್ತು ದೂರದೃಷ್ಟಿಯ ಶಿಕ್ಷಣತಜ್ಞರಾದರು.
ಈ ದಿನದಂದು ಮತ್ತೊಮ್ಮೆ ನನ್ನ ಬಾಲ್ಯದಿಂದಲೂ ಹಿಡಿದು ಇಲ್ಲಿಯವರೆಗೂ ಗುರು ಸ್ಥಾನದಲ್ಲಿ ನಿಂತು ಒಂದಿಲ್ಲೊಂದು ವಿದ್ಯೆಯನ್ನು ಕಲಿಸಿದ ಗುರುಬಳಗಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
🖋️ಲಕ್ಷ್ಮೀಪುತ್ರ ಕಿರನಳ್ಳಿ ಶಿಕ್ಷಕರು ಹಾಗೂ ಸಾಹಿತಿಗಳು ಆಲಮೇಲ .ವಿಜಯಪುರ

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...