ಬುಧವಾರ, ಜೂನ್ 23, 2021

ಆತ್ಮ ಸಖಿಯ ಧ್ಯಾನದಲ್ಲಿ ( ಕೃತಿ ವಿಮರ್ಶೆ) - ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ.

*ಸಿದ್ಧರಾಮ ಹೊನ್ಕಲ್ ಅವರ ಆತ್ಮ ಸಖಿಯ ಧ್ಯಾನದಲಿ*    *ಗಜಲ್ ಸಂಕಲನದ ಬಗ್ಗೆ ನಾಲ್ಕು ಮಾತು* 
                (ಶ್ರೀ ಸಿದ್ಧರಾಮ ಹೊನ್ಕಲ್ )

ಪ್ರೊ.ಸಿದ್ಧರಾಮ ಹೊನ್ಕಲ್ ಅವರು ಕಲ್ಯಾಣ ಕನಾ೯ಟಕದ ದೈತ್ಯ  ಕವಿಗಳೆಂದೇ ಎಲ್ಲರಿಗೆ ಚಿರ ಪರಿಚಿತರು. ಈಗಾಗಲೇ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಪ್ರವಾಸ ಕಥನ , ಲಲಿತ ಪ್ರಬಂಧಗಳು, ಕವಿತೆಗಳು,ಗಜಲ್ ಗಳು,ಹೀಗೆ ಎಲ್ಲಾ ಪ್ರಕಾರದಲ್ಲಿ ೪೫ ಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿದ್ದಾರೆ. ಸಾಹಿತ್ಯ ಅಕಾಡೆಮಿಯಿಂದ ಪ್ರಶಸ್ತಿ ಪಡೆದಿದ್ದಲ್ಲದೆ ಇನ್ನೂ ಅನೇಕ  ಪ್ರಶಸ್ತಿಗಳು ಹಾಗೂ ಗುಲಬರ್ಗಾ ವಿ ವಿ ಯ ರಾಜಪುರೋಹಿತ ಕಥಾ ಸ್ಪದೆ೯ಯಲ್ಲಿ ಚಿನ್ನದ ಪದಕ ಮತ್ತು ಸತತವಾಗಿ ಆರು ಸಲ ಕಥಾ ಪುರಸ್ಕಾರ ಪಡೆದಿದ್ದಾರೆ.ಮೂರು ಬಾರಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ.ಮತ್ತು ಅನೇಕ ಇತರ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ.

 ಶಹಪೂರ ತಾಲೂಕಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ  ಸವಾ೯ಧ್ಯಕ್ಷತೆ ಮತ್ತು ಯಾದಗಿರಿ ಜಿಲ್ಲಾ ೪ ನೇ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಗೌರವಗಳನ್ನು ಪಡೆದಿದ್ದಾರೆ. ಇವರು ವೃತ್ತಿಯಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ಪ್ರವೃತ್ತಿಯಲ್ಲಿ ದೈತ್ಯ ಸಾಹಿತಿಗಳಾಗಿ ಕನಾ೯ಟಕದ ತುಂಬಾ ಪರಿಚಿತರಾಗಿದ್ದಾರೆ.

ಈಗ ಸಿದ್ಧರಾಮ ಹೊನ್ಕಲ್ ಅವರು ಒಬ್ಬ ಶ್ರೇಷ್ಠ ಗಜಲ್  ಕಾರರಾಗಿ ಉತ್ತಮ ಗಜಲ್ ಗಳನ್ನು ರಚಿಸುತ್ತಿದ್ದಾರೆ.ಅವರು ಈಗಾಗಲೇ ಒಂದೇ ವರ್ಷದಲ್ಲಿ ಮೂರು ಗಜಲ್ ಸಂಕಲನಗಳನ್ನು ಪ್ರಕಟಿಸಿದ್ದಾರೆ.೧. ಆಕಾಶಕ್ಕೆ ಹಲವು ಬಣ್ಣಗಳು ೨. ಹೊನ್ನ ಮಹಲ್ ೩. ನಿನ್ನ ಪ್ರೇಮವಿಲ್ಲದೇ ಸಾಕಿ ,ಎಂಬ ಗಜಲ್ ಸಂಕಲನಗಳನ್ನು ಪ್ರಕಟಿಸಿ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ ಅದ್ಭುತ ಗಜಲ್ ಕಾರರು ಇವರು.ಈಗ ನಾಲ್ಕನೇ ಗಜಲ್ ಸಂಕಲನ  *ಆತ್ಮ ಸಖಿಯ ಧ್ಯಾನದಲಿ* ಎಂಬ ಗಜಲ್ ಸಂಕಲನವು ಪ್ರಕಟನೆಗೆ ಸಿದ್ಧ ಪಡಿಸಿದ್ದಾರೆ.

       ಗಜಲ್ ಗಳ ಮೂಲ ದ್ರವ್ಯವಾದ ಪ್ರೀತಿ ,ಪ್ರೇಮ, ವಿರಹ,ನಿವೇದನೆ,ಕಾಯುವಿಕೆಗಳು, ಇವರ ಗಜಲ್ ಗಳಲ್ಲಿ ತಮ್ಮ ಆತ್ಮ ಸಖಿಯನ್ನು ಪಡೆಯುವ,ಆಕೆಯ ಬರುವಿಗಾಗಿ ಕಾಯುತ್ತಾ ವಿರಹದಲ್ಲಿ ನರಳುವುದು ,ಆಕೆ ಇಲ್ಲದೆ ನನಗೆ ಬದುಕೇ ಇಲ್ಲವೆಂಬ ಭಾವಗೊಂದಿಗೆ ಆಕೆಯ ಹುಡುಕಾಟ ದಲ್ಲಿಯೇ ಗಜಲ್ ಗಳನ್ನು ರಚನೆ ಮಾಡಿದ್ದಾರೆ. ಉತ್ಕೃಷ್ಟ ವಾದ ಪ್ರೇಮಾಲಾಪದ ಗಜಲ್ ಗಳಿದ್ದು ಓದುಗರನ್ನು ಪ್ರೀತಿ ವಿರಹದಲ್ಲಿ ತೋಯಿಸಿ ಬಂಧಿಸುತ್ತವೆ.

           *ಆತ್ಮ ಸಖಿಯ ಧ್ಯಾನದಲಿ* " ಈ ಗಜಲ್ ಸಂಕಲನದಲ್ಲಿ ಒಟ್ಟು ೭೫ ಗಜಲ್ ಗಳಿದ್ದು ಎಲ್ಲಾ ಗಜಲ್ ಗಳಲ್ಲಿ ಹೆಚ್ಚಾಗಿ ಹೊನ್ಕಲ್ ಅವರು ತಮ್ಮ ಆತ್ಮಸಖಿ ಯೊಂದಿಗೆ ಪ್ರೀತಿ,ಪ್ರೇಮ,ವಿರಹ,ಕಾಯುವಿಕೆ, ಪ್ರೀತಿಯ ಹಂಬಲವನ್ನು ಬಹಳ ಸುಂದರವಾಗಿ ನಿವೇದಿಸಿ ಕೊಂಡಿದ್ದಾರೆ. ಮತ್ತು ಕೆಲವು ಗಜಲ್ ಗಳು ಸಾಮಾಜಿಕ ಕಳಕಳಿ,ಇಂದಿನ ಕರೋನಾದ ದುರಿತ ಕಾಲದ ವಾಸ್ತವಿಕ ಸ್ಥಿತಿಯನ್ನು ಅಸಹಾಯಕನಾದ ಮಾನವನ ಪರಿಸ್ಥಿತಿ ಬಗ್ಗೆ ಯೂ ಎಳೆ ಎಳೆಯಾಗಿ ಬಿಚ್ಚಿ ಬರೆದಿದ್ದಾರೆ. ಹಾಗೂ ಸೂಫಿ ಸಂತರ ತತ್ವದಂತೆ ಆಧ್ಯಾತ್ಮಿಕ ಸ್ಪರ್ಶದ ಕೆಲವು ಗಜಲ್ ಗಳು ಇವೆ. ಲೌಕಿಕ ಪ್ರೀತಿಯಿಂದ ಅಲೌಕಿಕ ಪ್ರೀತಿಯಕಡೆಗೆ ಓದುಗರನ್ನು ಕರೆದುಕೊಂಡು ಹೋಗುತ್ತವೆ.ವಸುದೇವ ಕುಟುಂಬಂ ಎನ್ನು ವಂತೆ ವಿಶ್ವ ಮಾನವ ಒಂದೆಂಬ ಭಾವನೆಯ  ಗಜಲ್ ಗಳು ಕೂಡ ಇವೆ. ಸದಾ ನಗು ನಗುತಾ ಮುಗ್ಧ ಮಗುವಿನ ಮನಸ್ಸಿನ ಹೊನ್ಕಲ್ ಅವರ ಗಜಲ್ ಗಳು ಯುವಕರನ್ನು ಬಹಳ ಕಾಡುತ್ತವೆ.ಕೆಲವು ಗಜಲ್ ಗಳು ಚಿಂತನೆಗೆ ಹಚ್ಚುತ್ತವೆ.

*ಮನದಲೇ ಅವಿತು ಆಟವಾಡಿಸುವವಳೇ ನೀ ಈಗ* *ಎಲ್ಲಿರುವೆ*
*ಮನಸು ಹತ್ತಿರ ವಿದ್ದರೂ ದೂರಾದವಳೇ ನೀ ಈಗ* *ಎಲ್ಲಿರುವೆ* (ಗಜಲ್ ೩)

ಮೇಲಿನ ಮತ್ಲಾದಲ್ಲಿ ಕವಿ ತನ್ನ ಪ್ರಿಯತಮೆ ಆತ್ಮ ಸಂಗಾತಿಯನ್ನು ಹುಡುಕುತ್ತಾ,ಎಲ್ಲಿ ಅವಿತುಕೊಂಡು ಕುಳಿತು ಆಟವಾಡಿಸುತ್ತಿರುವೆ,ಮನಸಿನಲ್ಲಿದ್ದರೂ ಕಣ್ಣಿಗೆ ಕಾಣದೆ ದೂರಾದೆ ಯಾಕೆ ಎಲ್ಲಿ ಅಡಗಿರುವೆ ,ನೀ ಈಗ ಎಲ್ಲಿರುವೆ ಎಂದು ಹಪಹಪಿಸುತ್ತಾನೆ.

 *ಕದ್ದು ಕದ್ದು ನೋಡುವುದೇಕೆ ಹೀಗೆ ಕಾಡುವುದೇಕೆ ಸಖಿ* 
 *ಮನ ತುಂಬಾ ಪರಸ್ಪರ ನಾವಿರಲು ಈ ಬಿಗುಮಾನವೇಕೆ*  *ಸಖಿ* (ಗಜಲ್೮)

ಪ್ರಿಯತಮೆ ಕದ್ದು ಕದ್ದು ತನ್ನ ಪ್ರಿಯಕರನನ್ನು ಮರೆಯಲ್ಲಿ ನಿಂತು ನೋಡುತ್ತಾ ಅವನ ಕೈಗೆ ಸಿಗದೆ ಕಾಡಿಸುತ್ತಾಳೆ.ಕವಿ ನಾವು ಪರಸ್ಪರ ಮನದಲ್ಲಿ ಬಂದಿಯಾಗಿದ್ದೇವೆ.ಮತ್ತೇಕೆ ಈ ಬಿಗುಮಾನದಲ್ಲಿ ದೂರ ನಿಂತು ಕಾಡುತ್ತಿರುವೆ,ಬೇಗ ಬಂದು ನನ್ನ ಅಪ್ಪಿಕೋ ಸಖಿ ಎಂದು ಹಂಬಲಿಸುತ್ತಾನೆ.

 *ನಿಂತಲ್ಲೆ ನಿಂತು ನೀನು ಮಡುಗಟ್ಟಬೇಡವೇ ಸಖಿ* 
 *ನದಿಯಾಗಿ ಹರಿದು ಈ ಕಡಲು ಸೇರಬೇಡವೇ ಸಖಿ*  (ಗಜಲ್ ೧೪)

ಗಜಲ್ ಕಾರರು ಮೇಲಿನ ಮಿಸ್ರಾ ದಲ್ಲಿ ತನ್ನ ಸಖಿಯನ್ನು  ನಿಂತ ನೀರಾಗಬೇಡ,ನಿಂತ ನೀರು ಮಲೀನವಾಗುತ್ತದೆ. ಚಲನೆ ಶುದ್ಧ ಮತ್ತು ಪ್ರಗತಿಯ ಸಂಕೇತವೆಂದು ಹೇಳುತ್ತಾ, ನೀ ನದಿಯಾಗಿ ಹರಿಯುವ ಗಂಗೆಯಾಗಿ ಬಂದು ನನ್ನ ಒಲವಿನ ಹೃದಯ ಸಾಗರದಲ್ಲಿ ಲೀನವಾಗು,ನದಿ ಕಡಲು ಸೇರಿದಾಗಲೇ ಅದಕ್ಕೆ ಹೊಸ ಜನ್ಮ,ಮುಕ್ತಿ ಎಂದು ಹೇಳುತ್ತಾರೆ.

*ನೀ ಈಗ ದೂರಾದರೂ ನೀ ನೀಡಿದ ಸುಖದ ಸಾಂಗತ್ಯ* *ಕಸಿಯಲಾರೆ ಸಖಿ*
 *ಬಿಟ್ಟಿರಲಾರೆ ಆತ್ಮಸಖಿ ಆಗಿರೋದೇಕೆ ನಿನ್ನ ಮಾತು*   *ನೆನಪಾಗದಿರೆ ಹಾಗೆ ಇದ್ದು ಬಿಡೇ ಸಖಿ*   (ಗಜಲ್ ೩೪)

ದಾಂಪತ್ಯ ಜೀವನದಲ್ಲಿ ಮುನಿಸು ,ಸೆಡವು,ಸಿಟ್ಟುಗಳು ಆಗಾಗ ನಡೆಯುತ್ತಿರುತ್ತವೆ.ಸಂಗಾತಿ ಮುನಿದು ಮೌನವಾಗಿ ದೂರಾದರೂ ಅವಳು ಕೊಟ್ಟ ಸುಖ ಮರೆಯಲಾಗುವುದೆ?ಅದನ್ನು ಯಾರೂ ಕಸಿಯಲಾರರು,ನಿನ್ನ ಬಿಟ್ಟು ನಾನು ಬದುಕಲಾರೆ. ನೀನು ನನ್ನ ಆತ್ಮಸಂಗಾತಿ ಆಗಿದ್ದು ನಿನಗೆ ನೆನಪಾಗದೇ?ಎಂದು ಕೇಳುತ್ತಾರೆ.

 *ಹೊರ ಬಂದಾಗ ಅವನವ್ವ ಕೇಳುತ್ತಾಳೆ ಏನೆಂದರು*   *ವೈದ್ಯರು ಅಂತ*
 *ಅಳು ನುಂಗಿ ಯಾವ ತೊಂದ್ರೆ ಇಲ್ಲ ಅಂದ್ರು*  
 *ಪ್ರತಿ ಬಾರಿಯು ನಗುತ್ತಲಿರುತ್ತಾನೆ* (ಗಜಲ್ ೩೭)

ಈ ಒಂದು ಗಜಲ್ ಹೃದಯ ಹಿಂಡುವಂತಹದು. ತಾಯಿಯ ಅನಾರೋಗ್ಯ, ಗುಣಪಡಿಸಲು ಅಲೆದಾಡುವ ಮಗ,ಪ್ರತಿ ಸಾರೆ ಬೇರೆ ಬೇರೆ ಹೊಸ ವೈದ್ಯರನ್ನು ಭೆಟ್ಟಿಯಾಗಿ ತಾಯಿಯನ್ನು ಬೇಗ ಗುಣಪಡಿಸಲು ಬಯಸುವ ಮಗನ ಮನದ ನೋವು ಹಿಡಿದಿಟ್ಟಿದ್ದಾರೆ.ತಾಯಿ ತಪಾಸಣೆ ಮಾಡಿದ ನಂತರ ಕೇಳುವ ಪ್ರಶ್ನೆ? ಅದಕ್ಕೆ ಉತ್ತರಿಸಲಾಗದ ಮಗನ ಸ್ಥತಿ. ಮನದ ‌ನೋವು ಚಿತ್ರಿಸಿದ್ದಾರೆ,ಆದರೂ ಮಗ ತನ್ನ ದುಃಖ ನುಂಗಿ ತಾಯಿಯ ಪ್ರಶ್ನೆಗೆ ಅವಳನ್ನು ಸಮಾಧಾನ ಪಡಿಸಲು ಸುಳ್ಳು ಹೇಳುವುದು, ತಾಯಿಗೆ ನೀನು ಬೇಗ ಆರಾಮ ಆಗುವೆ ಎಂದು ಹೇಳುವ ದೃಶ್ಯ ಮನ ಮಿಡಿಯುವಂತೆ ಕಣ್ಣಿಗೆ ಕಟ್ಟುವಂತೆ ಗಜಲ್ ದಲ್ಲಿ ಹಿಡಿದಿಟ್ಟಿದ್ದಾರೆ.

 *ಯಾರಿಗಾಗಿ ಹಗಲಿರುಳು ಹಂಬಲಿಸಿದೇನೋ ಅವಳು*   *ಬೆನ್ನು ತೋರಿಹಳು* 
 *ಚಕೋರಂಗೆ ಚಂದ್ರಮನ ಚಿಂತೆಯಂತೆ ಕಾದೆನೋ*  *ಅವಳು ಮೋಡದಲಿ ಮರೆಯಾದಳು* 

"ಚಕೋರಂಗೆ ಚಂದ್ರಮನ ಉದಯದಾ ಚಿಂತೆ"ಎಂಬ ಬಸವಣ್ಣ ನವರ ವಚನದ ಸಾಲುಗಳನ್ನು ರೂಪಕವಾಗಿ ಬಳಿಸಿದ್ದಾರೆ. ಚಂದ್ರನ ಬರುವನ್ನು ಚಕೋರ ಪಕ್ಷಿ ಕಾಯುವಂತೆ ತನ್ನ ಪ್ರಿಯೆತಮೆಯು ಬರುವಳೆಂದು ಹಗಲು, ರಾತ್ರಿ ಹಂಬಲಿಸಿ ಕಾದರೂ ಅವಳು ಬರಲಿಲ್ಲ.ಮೋಡದಲ್ಲಿ ಚಂದಿರ ಮರೆಯಾಗುವಂತೆ ಪ್ರಿಯತಮೆ ಮರೆಯಾಗಿ ಮುಖ ತೋರಿಸದೆ ಬೆನ್ನು ತೋರಿಸುತ್ತಾಳೆಂಬ ನಿರಾಶಾಭಾವವು ಈ ಮಿಸ್ರಾದಲ್ಲಿ ವ್ಯಕ್ತಪಡಿಸಿದ್ದಾರೆ.

 *ಭಾವಗಳೇ ಸತ್ತು ಹೋದಮೇಲೆ ಈ ಬದುಕಲೇನಿದೆ* 
 *ಕನಸುಗಳೇ ಸತ್ತು ಹೋದಮೇಲೆ ಆ ನನಸಲೇನಿದೆ* 
   (ಗಜಲ್)
" *ಪ್ರೀತಿ ಇಲ್ಲದ  ಮೇಲೆ ಹೂ ಅರಳೀತು ಹೇಗೆ* "ಎಂದ ಕವಿ ಜಿ ಎಸ್ ಎಸ್ ಅವರ ನುಡಿಯಂತೆ ಹೃದಯದಲ್ಲಿ ಭಾವನೆಗಳು ಸತ್ತ ಮೇಲೆ ಬದುಕುವುದು ಹೇಗೆ ,ಬದುಕಿನ ದಾರಿ ದೀಪವಾದ  ಕನಸುಗಳೇ ನಂದಿ ಹೋದ ಮೇಲೆ ಬಾಳ ಬಂಡಿ ಸಾಗುವುದು ಹೇಗೆ,ಬದುಕು ನೀರಸವಾಗಿ ಜೀವನವೇ ನಿಸ್ಸಾರವಾಗುವುದೆಂದು ಗಜಲ್ ಕಾರರು ಭಗ್ನ ಪ್ರೇಮಿಯ ಸ್ಥಿತಿಯನ್ನು ವಿವರಿಸಿದ್ದಾರೆ.

ಹೊನ್ಕಲ್ ಅವರು ಕೆಲವು ತರಹೀ ಗಜಲ್ ಗಳನ್ನು ಈ ಸಂಕಲನದಲ್ಲಿ ರಚಿಸಿದ್ದಾರೆ.ಮೂಲ ಕವಿಯ ಭಾವಕ್ಕೆ ಧಕ್ಕೆ ಬರದಂತೆ ಸುಂದರವಾಗಿ ಭಾವಪೂರ್ಣ ವಾಗಿ ಮುಂದುವರೆಸಿಕೊಂಡು ತರಹೀ ಗಜಲ್ ರಚಿಸಿದ್ದಾರೆ.

ಈ ಸಂಕಲನದಲ್ಲಿ ಮುಸಲ್ ಸಿಲ್ ಗಜಲ್, ಗೈರ ಮುಸಲ್ ಸಿಲ್ ಗಜಲ್, ಮುರದ್ಧಫ್ ಗಜಲ್ ,ಗೈರ ಮುರದ್ಧಫ್ ಗಜಲ್, ಜುಲ್ ಕಾಫಿಯಾ ಗಜಲ್, ತರಹೀ ಗಜಲ್, ಸಂಪೂರ್ಣ ಮತ್ಲಾ ಗಜಲ್ ಹೀಗೆ ವಿವಿಧ ರೀತಿಯ ಗಜಲ್ ಗಳನ್ನು ನಾವು ಇಲ್ಲಿ ಓದಬಹುದು.

ಪ್ರೌಢ ಗಜಲ್ ಕಾರರಾದ ಸಿದ್ಧರಾಮ ಹೊನ್ಕಲ್ ಅವರು ಇನ್ನೂ ಅನೇಕ ಗಜಲ್ ಸಂಕಲನಗಳನ್ನು ಪ್ರಕಟಿಸಿ ಕನ್ನಡ ಗಜಲ್ ಸಾಹಿತ್ಯ ಲೋಕವನ್ನು ಸಮೃದ್ಧ ಪಡಿಸಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಮ ಕೊಡುವೆ.


*ಶ್ರೀ ಮತಿ ಪ್ರಭಾವತಿ ಎಸ್ ದೇಸಾಯಿ* ಹಿರಿಯ ಸಾಹಿತಿ ಹಾಗೂ ಗೌರವ ಸಲಹೆಗಾರರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...