'ಇದಂ ಕೇಳ್ದು ಜನಾ ಬದುಕಬೇಕು'
ಕನ್ನಡ ಮುಟ್ಟೋಣ ಸಂಕಟ ಮೀರೋಣ
ಕನ್ನಡ ಸಾಹಿತ್ಯವು ಮೌಖಿಕ ಹಾಗೂ ಲಿಖಿತ-ಎರಡೂ ಪರಂಪರೆಗಳಲ್ಲಿ ಸಮೃದ್ಧವಾಗಿ ಬೆಳೆದು ಬಂದಿದೆ. ಲಿಖಿತ ಸಾಹಿತ್ಯದಲ್ಲೇ ಮೌಖಿಕ ಸಾಹಿತ್ಯಾಭಿವ್ಯಕ್ತಿಯ ಬಗ್ಗೆ ಅನೇಕ ಸಾಕ್ಷ್ಯಗಳು ದೊರೆಯುತ್ತವೆ. ಕನ್ನಡದ ಪ್ರಾಚೀನ ಕೃತಿಯಾದ ‘ಕವಿರಾಜಮಾರ್ಗ'ದಲ್ಲೇ ‘..ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿ'ಗಳಾಗಿದ್ದ ಹಾಗೂ ‘ಕುರಿತವರಲ್ಲದೆ ಮತ್ತಂ ಪೆರರುಂ ತಂತಮ್ಮ ನುಡಿಯೊಳೆಲ್ಲರ್ ಜಾಣ'ರೂ ಆಗಿದ್ದ ಕನ್ನಡ ನಾಡವರನ್ನು ಸ್ಮರಿಸಲಾಗಿದೆ. ಈ ಸ್ಮರಣೆಯ ಹಿಂದಿನ ಸಂಗತಿಯನ್ನು ಅವಲೋಕಿಸಿದರೆ, ಆ ಕಾಲದಲ್ಲೇ ಕವಿಗಳು ಪರಿಶ್ರಮದಿಂದ ಕಾವ್ಯಗಳನ್ನು ರಚಿಸಿ ಓದುತ್ತಿದ್ದರೆಂದೂ, ಅವುಗಳನ್ನು ಓದುಬಾರದವರೂ, ಅಭ್ಯಾಸ ಮಾಡದವರೂ ಸಹ ಕೇಳುತ್ತಲೇ ಅರಿಯುವ ಪರಿಣಿತರಾಗಿದ್ದರೆಂದೂ ಮತ್ತು ಅನಕ್ಷರಸ್ಥ ಅಪಾರ ನುಡಿಜಾಣರೂ/ಸಹೃದಯರೂ ಇದ್ದರೆಂಬ ವಿದ್ಯಮಾನವು ಅಭಿಮಾನದ ಸಂಗತಿಯಾಗಿದೆ. ಕಾಲಯಾನದಲ್ಲಿ ನಿರಂತರವಾಗಿ ಎದುರಾಗುವ ಸಂಕಟಗಳನ್ನು ಮೀರುವ ಪ್ರಕ್ರಿಯೆಯಲ್ಲಿ ಕನ್ನಡ ಕಾವ್ಯಪ್ರತಿಭೆ ತನ್ನದೇ ವೈಶಿಷ್ಟ್ಯತೆ ಮೆರೆದಿದೆ. ಓದುವ-ಕೇಳುವ-ತಿಳಿಯುವ-ವ್ಯಾಖ್ಯಾನಿಸುವ ಕವಿ-ಸಹೃದಯರ ಸಂವಾದವು ಚಾರಿತ್ರಿಕವೂ ಸಾಂಸ್ಕೃತಿಕವೂ ಆದುದಾಗಿದೆ. ಈ ಸಂವಾದ ಪರಂಪರೆಗೆ ಆದಿ-ಅಂತ್ಯಗಳಿಲ್ಲ; ಪ್ರಾಚೀನ-ಅರ್ವಾಚೀನಗಳಿಲ್ಲ. ಇದು ಮತ್ತೆ ಮತ್ತೆ ನೆನೆನೆನೆದು ನಿಚ್ಚಂಪೊಸತಾಗುವ ಜೀವನಜಲಯಾನ-ಜಾಗೃತಯಾನ.
ಜನಚರಿತ್ರೆಯನ್ನೂ ಗಮನಿಸಿದರೆ, ಭಾಷೆಯಿಲ್ಲದೆ ಸಾಹಿತ್ಯದ ಸಂಸ್ಪರ್ಶವಿಲ್ಲದೆ ಯಾವ ಸಂಸ್ಕೃತಿಯೂ ಯಾವ ದೇಶವೂ ಯಾವ ಜನಾಂಗವೂ ಯಾವ ಜ್ಞಾನಶಿಸ್ತೂ ಬೆಳೆಯುವುದಿಲ್ಲ ಮತ್ತು ಉಳಿಯುವುದಿಲ್ಲ. ಯಾವುದೇ ಜನಸಂಸ್ಕೃತಿಯು ಜೀವಂತವಾಗಿ ಹರಿದುಬರುವುದು ತಾನು ಕಟ್ಟಕೊಂಡ ಭಾಷೆಯಿಂದಲೇ. ಇಂತಹ ಭಾಷೆಯಲ್ಲಿ ರೂಪುಗೊಂಡ ಸೃಜನಶೀಲ ಸಂರಚನೆಗಳಿಂದ ಸಂಸ್ಕೃತಿಯು ‘ಸ್ಥಾವರ'ಗೊಳ್ಳದೆ ‘ಜಂಗಮ'ಗೊಳ್ಳುವುದು; ಅನಂತವಾಗುತ್ತಾ ಹೋಗುವುದು. ಆದ್ಯ ವಚನಕಾರನಾದ ದೇವರ ದಾಸಿಮಯ್ಯನು ‘ಕರಿಯನಿತ್ತಡೆ ಒಲ್ಲೆ, ಸಿರಿಯನಿತ್ತಡೆ ಒಲ್ಲೆ, ಹಿರಿದಪ್ಪ ರಾಜ್ಯವನಿತ್ತಡೆ ಒಲ್ಲೆ, ನಿಮ್ಮ ಶರಣರ ಸೂಳ್ನುಡಿಗಳನು ಒಂದರಗಳಿಗೆ ಇತ್ತಡೆ ನಿಮ್ಮನೇ ಇತ್ತೆ ಕಾಣಾ ರಾಮನಾಥ' ಎಂದರೆ, ಮಹಾಕವಿ ಕುಮಾರವ್ಯಾಸನು ‘...ಸಿರಿಯ ಮದವೆಂಬ ಅಧಿಕ ತಾಮಸ ದೊರಕಿದಾಗಳೇ ನೀತಿಕಾರರ ವಚನಾಂಜನದಿನ್ ಉಜ್ವಲಿಸುವುದು ನಯ'ವೆಂದು ಸಾರಿದ್ದಾನೆ. ಅಸ್ತಿತ್ವ-ಅಹಂಕಾರಗಳ ಮೇಲಾಟಗಳಲ್ಲಿ ಮೈಮರೆತು ಅಳಿವಿನತ್ತ ಸಾಗುವ ಸಮಾಜಕ್ಕೆ ಸೂಕ್ತ ಚಿಕಿತ್ಸೆ ನೀಡಿ, ಅರಿವಿನ ಶಕ್ತಿಯನ್ನು ಸಂಚಯನಗೊಳಿಸುವಲ್ಲಿ ಸಾಹಿತ್ಯಕೃತಿಗಳ ಪಾತ್ರವು ಮಹತ್ತರವಾದುದು. ಪುರಾತನ ಕಾಲದಿಂದಲೂ ಜನಸಮುದಾಯಗಳು ತಮ್ಮ ಬದುಕಿನ ಸಂಕಟಗಳನ್ನು ಮೀರಲು ಇಂಥ ಕಾವ್ಯಗಳನ್ನು ಮತ್ತೆ ಮತ್ತೆ ಓದಿ, ಕೇಳಿ, ‘ತಿಳಿ’ದು-‘ನೆನೆ’ದು ಸಮಾಧಾನ ತಂದುಕೊಂಡಿದ್ದಾರೆ. ಇಲ್ಲಿ ‘ನೆನೆ’ಯುವುದೆಂದರೆ ಕೇವಲ ಸ್ಮರಿಸುವುದು ಮಾತ್ರವಲ್ಲ; ನಿತ್ಯಜೀವನವನ್ನು ಬೆಳಗಿಕೊಳ್ಳುವುದೇ ಆಗಿದೆ. ಬಯಲು ನೆನೆಯದೆ 'ತಂಪಾಗದೆ ಮೋಡ ಕಟ್ಟುವುದಿಲ್ಲ, ಮಳೆ ಸುರಿಯುವುದಿಲ್ಲ; ಭೂಮಿ ನೆನೆಯದೆ' ತಂಪಾಗದೆ ಹಸಿರು ಹುಟ್ಟುವುದಿಲ್ಲ; ಅಂತರಂಗ ಆರ್ದ್ರಗೊಳ್ಳದೆ ಅರಿವು ಹುಟ್ಟುವುದಿಲ್ಲ. ಹೀಗಾಗಿ ನಾವು ನಿತ್ಯ‘ನೆನೆ’ಯದೆ ಬಾಳು ಬೆಳಗುವುದಿಲ್ಲ.
ಜಗತ್ತಿನಾದ್ಯಂತ ಕೊರೋನಾ ಉಂಟುಮಾಡುತ್ತಿರುವ ನೂರಾರು ಸಂಕಟಗಳ ನಡುವೆ, ಅವುಗಳನ್ನು ಯಾವುದೇ ಒಂದು ದೃಷ್ಟಿಕೋನದಿಂದಲೋ ಅಥವಾ ಕೇವಲ ದೈಹಿಕವಾದ ಇಮ್ಮೂನಿಟಿ ಪವರ್ನಿಂದ ಮಾತ್ರವೇ ಮೀರಿಬಿಡುತ್ತೇವೆನ್ನುವುದು ದಾರ್ಷ್ಟ್ರದ ಮಾತಾದೀತು. ಯಾಕೆಂದರೆ ಹಲವು ದೃಷ್ಟಿಕೋನಗಳ ಮೈತ್ರಿಯೊಂದಿಗೆ ದೈಹಿಕದಷ್ಟೇ ಮುಖ್ಯವಾಗಿ ಮಾನಸಿಕವಾದ ಸಬಲೀಕರಣವೂ ಮನೋದೈಹಿಕ ಸಮೀಕರಣವೂ ಸಾಧ್ಯವಾದರೆ, ಎಂಥ ಸಂಕಟವನ್ನಾದರೂ ಮೀರಲು ಸಾಧ್ಯ ಎಂಬುದು ಲೋಕಸತ್ಯ. ಆಧುನಿಕ ಕಾಲದಲ್ಲಿ ಅಕ್ಷರಲೋಕದ ಅಹಂಕಾರವು ವಿಕಾರವಾಗಿ ತೋರುತ್ತಿರುವಾಗ, ವಿವಿಧ ಸಂಕಟಗಳಲ್ಲಿ ಸಿಲುಕಿ ನರಳುತ್ತಿರುವಾಗ, ಅವುಗಳಿಂದ ಮುಕ್ತರಾಗುವ ಆಶಯದಲ್ಲಿ ಕನ್ನಡ ಕಾವ್ಯಗಳ ‘ನೆನೆನೆನೆ’ದು ಶ್ರೀಸಾಮಾನ್ಯೀಕರಿಸುವ ನುಡಿನಡೆಯು ಮಹೋನ್ನತವಾದುದು. ಈ ದಿಸೆಯಲ್ಲಿ ಕನ್ನಡದ ಜನಪ್ರಿಯ ಕಾವ್ಯಗಳನ್ನು ಆಧರಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಳೆದ ಎರಡು ತಿಂಗಳಿಂದ ಅಂತರ್ಜಾಲದ ಮೂಲಕ ಹಮ್ಮಿಕೊಂಡಿದ್ದ "ಸಂಕಟಗಳ ಮೀರೋಣ" ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು. ಈ ಕಾರ್ಯಕ್ರಮದ ವಿನ್ಯಾಸವೇ ‘ಸಾರ್ವಕಾಲೀನ ಸಿರಿಗನ್ನಡ ಸಮಾಗಮ'ದಂತಿತ್ತು.
ಪ್ರಸ್ತುತ ಕಾರ್ಯಕ್ರಮ ಸರಣಿಯು ದಿನಾಂಕ:೦೮.೦೫.೨೦೨೧ರಿಂದ ಆರಂಭವಾಗಿ ದಿನಾಂಕ:೧೭.೦೬.೨೦೨೧ರ ವರೆಗೂ ನಡೆಯಿತು. ಆರಂಭದ ಪ್ರತೀ ಐದೈದು ದಿನಗಳ ಕಾಲ, ಐದೈದು ಪ್ರಸಂಗಗಳನ್ನು ಕೇಂದ್ರೀಕರಿಸಿ ಐವರು ಗಮಕಿಗಳು ಹಾಗೂ ಐವರು ವ್ಯಾಖ್ಯಾನಕಾರರ ಮೂಲಕ ಕನಕದಾಸರ ನಳಚರಿತ್ರೆ, ರಾಘವಾಂಕನ ಹರಿಶ್ಚಂದ್ರ ಕಾವ್ಯ, ಷಡಕ್ಷರದೇವನ ರಾಜಶೇಖರ ವಿಳಾಸ, ಮುದ್ದಣ ಕವಿಯ ಶ್ರೀರಾಮಾಶ್ವಮೇಧಂ, ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ, ಲಕ್ಷ್ಮೀಶನ ಜೈಮಿನಿ ಭಾರತ ಕೃತಿಗಳ ವಾಚನ-ವ್ಯಾಖ್ಯಾನ ನಡೆಯಿತು. ತದನಂತರ ೧೦ ದಿನಗಳ ಕಾಲ, ೧೦ ಜನ ಗಮಕಿಗಳ ವಾಚನದಲ್ಲಿ ಹಾಗೂ ೧೦ ಜನ ವಿದ್ವಾಂಸರ ವ್ಯಾಖ್ಯಾನದಲ್ಲಿ ಚಾಮರಸ ಕವಿಯ ಪ್ರಭುಲಿಂಗ ಲೀಲೆಯ ೧೦ ಪ್ರಸಂಗಗಳನ್ನು ಪ್ರಸ್ತುತಪಡಿಸಲಾಯಿತು. ಒಟ್ಟು ೪೦ ದಿನಗಳ ಕಾಲ, ಆಯ್ದ ಕಾವ್ಯಗಳ ೪೦ ಪ್ರಸಂಗಗಳು, ೧೬ ಜನ ಗಮಕಿಗಳು, ೧೬ ಜನ ವಿದ್ವಾಂಸರು, ಸಾವಿರಾರು ಸಹೃದಯರ ಸಹಭಾಗಿತ್ವದಲ್ಲಿ ಮೂಡಿಬಂದ ಪ್ರತಿಯೊಂದು ಪ್ರಸಂಗವೂ ಅನ್ಯಾದೃಶ್ಯ.
ಕನ್ನಡ ಕಾವ್ಯಗಳನ್ನು ಕುರಿತ ಈ ಬಗೆಯ ವಾಚನ-ವ್ಯಾಖ್ಯಾನಗಳ ಮೂಲಕ ಆರೋಗ್ಯಕರವಾದ, ಆದರ್ಶಪೂರ್ಣವಾದ 'ಸೀಮಾತೀತ ಸಂವಾದ'ವನ್ನು ಸಾಧ್ಯಗೊಳಿಸುವಲ್ಲಿ ಅಕಾಡೆಮಿಯ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. 'ಇದಂ ಕೇಳ್ದು ಜನಾ ಬದುಕಬೇಕು' ಎಂಬ ಕವಿ ರಾಘವಾಂಕನ ಲೋಕಪ್ರಜ್ಞೆಯಲ್ಲಿ, ಕೊರೋನಾ ಕಾಲದಲ್ಲಿ ಸಂಕಟಗಳನ್ನು ಮೀರಲು ಕನ್ನಡ ಕಾವ್ಯಗಳನ್ನು ಮತ್ತೆ 'ನೆನೆ'ಯುವಂತೆ ಮಾಡಿದ ಅಕಾಡೆಮಿಯ ಕಾಯಕವು ಸ್ತುತ್ಯಾರ್ಹ. ಯಾರಿಗೇ ಆಗಲಿ, ಎಂಥ ಸಂಕಟಗಳೇ ಬರಲಿ, ಇಂಥ ಕಾವ್ಯಗಳನ್ನು ಆಲಿಸಿದರೆ ಬದುಕುವ ಭಾವಾನುಭಾವಗಳು ಬಲಗೊಳ್ಳುತ್ತವೆ ಎಂಬ ಕಾರಣಕ್ಕಾಗಿಯೇ ಪರಂಪರೆಯುದ್ದಕ್ಕೂ ಕನ್ನಡ ಕಾವ್ಯಗಳನ್ನು ‘ನೆನೆ’ಯುತ್ತಾ ಬರುತ್ತಿರುವುದು. ಗ್ರಾಮಭಾರತದಲ್ಲಿ ಇಂದಿಗೂ ಇಂಥ ‘ನೆನೆ’ಯುವ ನಡೆಯು ನಿರಂತರವಾಗಿದೆ. ಈ ಮಾರ್ಗದಲ್ಲಿ, ಅಕಾಡೆಮಿಯು ಅಖಂಡ ಕರ್ನಾಟಕದೊಳಗಿನ ಬಹುಧ್ವನಿಗಳ ಮಹಾಮೈತ್ರಿಯಲ್ಲಿ ಅಂತರ್ಜಾಲದ ಮುಖೇನ ಅಪರಿಮಿತ ಅರಿವನಿತ್ತ ಇಂಥ ಅಪರೂಪದ ಕಾರ್ಯಕ್ರಮವನ್ನು ಏರ್ಪಡಿಸಿದ್ದು ಆಪ್ತವೆನಿಸಿತು.
ವಿಶೇಷವೆಂದರೆ, ಆಯ್ದ ಕನ್ನಡ ಕಾವ್ಯಗಳ ಗಮಕ ವಾಚನ ಹಾಗೂ ವ್ಯಾಖ್ಯಾನವನ್ನೊಳಗೊಂಡ ಈ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಗಮಕಿಗಳಾದ ಶ್ರೀ ಕೃ.ರಾಮಚಂದ್ರ ಅವರಿಂದ ಹಿಡಿದು ಜಾನಪದಲೋಕದ ಅಜ್ಞಾತ ಗಮಕಿಗಳಾದ ಕೋಲಾರದ ಶ್ರೀ ಆರ್.ವೆಂಕಟರಮಣಪ್ಪ ಅವರ ವರೆಗೆ; ಕುಮಾರಿ ಮಹಿಮಾ ಕಶ್ಯಪ್ ಅವರಿಂದ ಹಿಡಿದು ರಾಯಚೂರಿನ ಶ್ರೀ ಎಂ.ಖಾಸೀಂ ಮಲ್ಲಿಗೆಮಡುವು ಅವರ ವರೆಗಿನ ಹೊಸತಲೆಮಾರಿನ ಗಮಕಿಗಳನ್ನು ಒಳಗೊಂಡಂತೆ; ಹಿರಿಯ ವಿದ್ವಾಂಸರಾದ ಡಾ.ಪಾದೇಕಲ್ಲು ವಿಷ್ಣುಭಟ್ಟ ಅವರಿಂದ ಹಿಡಿದು ಕಿರಿಯ ವಿದ್ವಾಂಸರ ವರೆಗಿನ ವೈವಿಧ್ಯಮಯ ವ್ಯಾಖ್ಯಾನಕಾರರನ್ನು ಒಳಗೊಂಡಂತೆ; ಸಾವಿರಾರು ಸಹೃದಯರ ಶ್ರದ್ಧಾಪೂರ್ಣ ಸಹಭಾಗಿತ್ವದಲ್ಲಿ ಜಾತಿ-ಮತ-ಲಿಂಗ-ಪಕ್ಷ-ಜ್ಞಾನಶಿಸ್ತು ಮೊದಲಾದ ಸೀಮೆಗಳನ್ನು ದಾಟಿ ‘ಕನ್ನಡ-ಕರ್ನಾಟಕದ ಮಹಾಸಂಗಮ'ದಂತೆ ನಡೆದ ಅಪರೂಪದ ಕಾರ್ಯಕ್ರಮವಾಗಿತ್ತು. ಇಲ್ಲಿ ಗಮಕಿಗಳು, ಆಯ್ದ ಕನ್ನಡ ಕಾವ್ಯಗಳ ವಿವಿಧ ಪ್ರಸಂಗಗಳನ್ನು ಭಾವಪೂರ್ಣವಾಗಿ ಹಾಡಿ ಮನೋಲ್ಲಾಸಗೊಳಿಸಿದರೆ, ವ್ಯಾಖ್ಯಾನಕಾರರು ವಿಶ್ವವಿವೇಕ, ಭಾರತೀಯ ದರ್ಶನ, ಜಾನಪದ, ತತ್ವಪದ, ವಿಜ್ಞಾನ, ಅಧ್ಯಾತ್ಮ, ತಂತ್ರಜ್ಞಾನ, ಚರಿತ್ರೆ, ಧರ್ಮ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಭಾಷಾಶಾಸ್ತ್ರ, ರಂಗಭೂಮಿ ಮೊದಲಾದ ಬಹುಶಿಸ್ತೀಯ ವೈವಿಧ್ಯಮಯ ನೋಟಗಳಿಂದ ಸಹೃದಯರ ಮನೋವಿಕಾಸಕ್ಕೆ ಅಣಿಗೊಳಿಸಿದರು. ಈ ನಡುವೆ ವಾಚನ-ವ್ಯಾಖ್ಯಾನಗಳನ್ನು ಆಲಿಸಿ ಮನಸೂರೆಗೊಂಡು ಸಹಸ್ಪಂದನೆ ನೀಡಿದ ಸಾವಿರಾರು ಸಹೃದಯರು ಅಕಾಡೆಮಿಯ ಆಶಯಕ್ಕೆ ದನಿಯಾದರು. ಹೀಗೆ, ಆ ಕಾಲದ ಕನ್ನಡ ಕಾವ್ಯಯಾನವನ್ನು ಈ ಕಾಲದ ಜನಮನದಲ್ಲಿ ನಿಚ್ಚಂಪೊಸತಾಗಿ ನಡೆಯಾಡಿಸಿದಂತಾಯಿತು.
ಹಳಗನ್ನಡ ಓದುವುದು ಕಷ್ಟ ಎಂಬುದು ಹೊಸತಲೆಮಾರಿನ ಬಹುದಿನಗಳ ಕೊರಗು. ಹಳಗನ್ನಡವೂ ಕನ್ನಡಯಾನದ ಒಂದು ಯುಗದ ಸಂರಚನೆಯಲ್ಲದೇ ಅಪರಿಚಿತವೇನಲ್ಲ; ಕನ್ನಡಕ್ಕೆ ಹೊರತಾದ ಅನಂಗವೂ ಅಲ್ಲ. ಅದು ಕನ್ನಡ ಭಾಷೆ-ಸಾಹಿತ್ಯದಲ್ಲಿ ಅವಿಭಾಜ್ಯವೂ ಐಕ್ಯವೂ ಆಗಿರುವ ಅಭಿವ್ಯಕ್ತರೂಪ. ಇಂದು ಆಂಗ್ಲದೊಂದಿಗೆ ಕನ್ನಡ ಸಾಧಿಸಿದ ಮೈತ್ರಿಯಂತೆಯೇ ಅಂದು ಸಂಸ್ಕೃತ-ಪ್ರಾಕೃತಗಳೊಂದಿಗೆ ಸಾಧಿಸಿದ ಮೈತ್ರಿಯ ಪರಿಣಾಮದಲ್ಲಿ ಮೂಡಿಬಂದದ್ದೇ ಹಳಗನ್ನಡ. ಹಳಗನ್ನಡ ಸಂದರ್ಭದಲ್ಲಿ ರಚನೆಗೊಂಡ ಕಾವ್ಯಗಳಲ್ಲಿ ಆ ಹೊತ್ತಿನ ಛಂದೋಬದ್ಧವಾದ ಸೃಜನಶೀಲ ಕನ್ನಡವಿದೆ; ಲಯಬದ್ಧವಾದ ಶ್ರವಣಸುಧಾ ವಿನೂತನ ಒಳಗನ್ನಡವಿದೆ. ಇಂಥ ಹಳಗನ್ನಡವನ್ನು ತಿಳಿಗನ್ನಡವನ್ನಾಗಿ ಮಾಡಲು ಶ್ರಮವೂ ಬೇಕು; ಮೇಲಾಗಿ ಸಹೃದಯತೆ ಇರಬೇಕು. ಸಹೃದಯತೆಯಿಂದ ಸಂವಾದಿಸ ಹೊರಟರೆ ಯಾವ ಸಾಹಿತ್ಯ ಕೃತಿಯನ್ನಾದರೂ ನಮ್ಮೊಳಗಾಗಿಸಿಕೊಳ್ಳುವ ಶಕ್ತಿಯು ತಂತಾನೇ ಸ್ಫೂರ್ತಿಗೊಳ್ಳುತ್ತದೆ. ಇಂಥ ಸ್ಫೂರ್ತಿದಾಯಕ ಸಹೃದಯ ಸ್ಪಂದನೆಯಲ್ಲಿ ಕನ್ನಡ ಕಾವ್ಯಗಳನ್ನು ‘ಮುಟ್ಟು'ವಂತಾದಾಗ ಮಾತ್ರವೇ ಕೊರಗು ಕರಗಿಹೋಗಿ ಬಚ್ಚಿಟ್ಟ ಕಾವ್ಯಗಳು ತಂತಾನೇ ಬಿಚ್ಚಿಟ್ಟುಕೊಳ್ಳುತ್ತವೆ; ಬಯಲಾಗುತ್ತವೆ. ಬಗೆಬಗೆದಷ್ಟೂ ಬದುಕಿಗೆ ಬಲ-ಬೆಳಕನ್ನು ನೀಡುತ್ತವೆ. ಈ ಬಗೆಯ ಕನ್ನಡಯಾನಕ್ಕೆ ಸಹೃದಯರನ್ನು ಒಳಗು ಮಾಡಿ, ಕಲಿಕೆಯ ಕೊರಗನ್ನೂ ಕರಗಿಸಿದ್ದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 'ಸಂಕಟಗಳನ್ನು ಮೀರೋಣ' ಕಾರ್ಯಕ್ರಮ ಸಾಕ್ಷಿಯೆಂಬಂತಿತ್ತು. ಹಳಗನ್ನಡ ಕಾವ್ಯಗಳಲ್ಲಿನ ಅನನ್ಯ ಪ್ರಸಂಗಗಳನ್ನು ವಾಚಿಸಿ-ವ್ಯಾಖ್ಯಾನಿಸಿದ ಪರಿಯು ‘ಅಪ್ ಟು ಡೇಟ್ ಹಳಗನ್ನಡ'ಕ್ಕೆ ದ್ಯೋತಕವಾಗಿತ್ತು; ಔಟ್ ಡೇಟೇಡ್ ಎಂಬ ಮಾತು ಹುಸಿಯಾಗಿತ್ತು. ಹೊಸತಲೆಮಾರಿನ ಓದುಗರಿಗೆ, ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ಮತ್ತು ಗಮಕಿಗಳಿಗೆ ಹಳಗನ್ನಡವನ್ನು ಬಿಡಿಸಿ, ಭಾವಕ್ಕೆ ತಕ್ಕಂತೆ ಓದುವ, ಕಾಲಕ್ಕೆ ತಕ್ಕಂತೆ ಕನ್ನಡಿ ಹಿಡಿದು ತೋರುವ ಒಂದು ಬಗೆಯ ‘ಮಾದರಿ ವಾಚನ-ವ್ಯಾಖ್ಯಾನ-ರಸಾಸ್ವಾದನ’ವಾಗಿ ಅನಾವರಣಗೊಂಡಿತು; ಸೀಮಾತೀತ ಸೂರಿಸಜ್ಜನ ಸಹೃದಯಸಂಗಮದಲ್ಲಿ ‘ಕನ್ನಡದ ಮಹಾಮಂಟಪ’ವೆಂಬಂತೆ ಕಂಗೊಳಿಸಿತು.
ಕನ್ನಡ ಕಾವ್ಯಪ್ರೇಮಿಗಳಲ್ಲಿ ಒಬ್ಬರಾದ ಶ್ರೀ ಟಿ.ಕೆ.ಗಂಗಾಧರ ಪತ್ತಾರ ಅವರು ಪ್ರತಿನಿತ್ಯವೂ ಈ ಕಾರ್ಯಕ್ರಮವನ್ನು ಫೇಸ್ಬುಕ್ ಲೈವ್ನಲ್ಲಿ ವೀಕ್ಷಿಸಿ, “ಹಿಂದೆ ಲೆಕ್ಕವಿಲ್ಲದಷ್ಟು ಸಲ ಕೀರ್ತನ ಪ್ರವಚನ ಪುರಾಣ ಕಾವ್ಯ ವಾಚನ ವ್ಯಾಖ್ಯಾನ ಕೇಳಿದ್ದೆನಾದರೂ ‘ಸಂಕಟಗಳ ಮೀರೋಣ’ ಶೀರ್ಷಿಕೆಯಡಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡ ಗಮಕ ವಾಚನ-ವ್ಯಾಖ್ಯಾನದಷ್ಟು ರಸಾನುಭೂತಿಯ ದಿವ್ಯಾನಂದ ಲಭಿಸಿರಲಿಲ್ಲ. ಅತ್ಯಂತ ಅತ್ಯುಪಯುಕ್ತ ಮನೋತ್ಸಾಹಕರ-ಮನೋಲ್ಲಾಸಕರ, ಸಂವೇದನಶೀಲ, ಭಾವಸ್ಪಂದನೆಯ ಹೃದಯಸ್ಪರ್ಶಿ ಕಾರ್ಯಕ್ರಮ ಸರಣಿಯ ಪವಿತ್ರ ಮಣಿಹವನ್ನು ಕೈಗೊಂಡ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ವಂದನೆಗಳು” ಎಂದಿದ್ದಾರೆ. ಮತ್ತೊಬ್ಬ ಸಹೃದಯರಾದ ಬಾಗಲಕೋಟೆಯ ಶ್ರೀಸಿದ್ಧಲಿಂಗಪ್ಪ ಬೀಳಗಿ ಅವರು, “ಕರ್ನಾಟ ಸಾಹಿತ್ಯ ಅಕಾಡೆಮಿಯು ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಕೊರೋನಾ ದುರಿತ ಸಂದರ್ಭದಲ್ಲಿ ‘ಸಂಕಟಗಳ ಮೀರೋಣ’ ಶೀರ್ಷಿಕೆಯಡಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಸಾಹಿತ್ಯ ಚಟುವಟಿಕೆಗಳನ್ನು ಮುಂದುವರೆಸಿ ಸಾವಿರಾರು ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಿಯಾಗಿದೆ..” ಎಂದು ತುಂಬು ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಹೀಗೆ, ಸಹಸ್ಪಂದನೆ ನೀಡಿರುವ ಸಾವಿರಾರು ಸಹೃದಯರ ನುಡಿನಲ್ಮೆಗಳೇ ಪ್ರಸ್ತುತ ಕಾರ್ಯಕ್ರಮದ ಸಾರ್ಥಕತೆಯನ್ನು ಸಾರುತ್ತವೆ. ಇಂಥ ವಿನೂತನ ವಿನ್ಯಾಸವುಳ್ಳ ಕಾರ್ಯಕ್ರಮದ ಎಲ್ಲ ಪ್ರಸಂಗಗಳ ಪ್ರಸ್ತುತಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಂತರ್ಜಾಲ ತಾಣ, ಯೂಟೂಬ್, ಫೇಸ್ಬುಕ್ನಲ್ಲಿ ಲಭ್ಯವಿವೆ. ಆಸಕ್ತರೆಲ್ಲರೂ ಯಾವಾಗಬೇಕಾದರೂ ಗಮನಿಸಬಹುದಾಗಿದೆ ಮತ್ತು ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದಾಗಿದೆ.
ಸಂಸ್ಕೃತಿ-ಸಾಹಿತ್ಯ ಬಗೆಗಿನ ಪೂರ್ವಾಗ್ರಹಗಳಿಂದ ದಾಟಿಸಿದ, ಹಿಂದಣ ಅನಂತ ಪ್ರಜ್ಞೆಗಳಿಂದ ಇಂದಣ ಸಂಕಟಗಳನ್ನು ಮೀರುವ ಅರಿವು ನೀಡಿದ, ಮುಂದಣ ಬಾಳ್ವೆಗೆ ಬೆಳಕಾಗಿ ಎಲ್ಲ ರೀತಿಯ ಅಹಮ್ಮುಗಳನ್ನು ನಿರಸನಗೊಳಿಸಿದ, ಕಾವ್ಯಗಳ ಕೇಳುವಿಕೆಯಿಂದ ಅಂತರಂಗಗಳನ್ನು ಅರಳಿಸಿದ, ಹೊಸತಲೆಮಾರಿಗೆ ಹಳಗನ್ನಡ ಓದಿನ ರುಚಿಹತ್ತಿಸಿದ, ಕನ್ನಡ ಭಾಷೆಯ ಸೃಜನಶೀಲ ಮಹಾಶಕ್ತಿಯನ್ನು ಅನಾವರಣಗೊಳಿಸಿದ, ಕಾಲಕ್ಕೆ ತಕ್ಕ ಹೊಸನೋಟ-ಒಳನೋಟಗಳಿಂದ ಸಂಪನ್ನಗೊಳಿಸಿದ, ಶ್ರೀಸಾಮಾನ್ಯ ಸಹೃದಯರಲ್ಲಿ ನವಚೈತನ್ಯವನ್ನು ಮೂಡಿಸಿದ, ಬಹುಜನರ-ಬಹುಮನದ-ಬಹುದೃಷ್ಠಿಯಿಂದ ಒಡಗೂಡಿ 'ಕನ್ನಡಭಾರತ'ದ ವಿರಾಟ್ದರ್ಶನದಂತೆ ಅಮೋಘವೆನಿಸಿತು. ಇದು ಕನ್ನಡ ಕಾವ್ಯಗಳನ್ನು ಜನಪ್ರಿಯಗೊಳಿಸುವ ಮತ್ತು ಈ ಮೂಲಕ ಜನಜಾಗೃತಗೊಳಿಸುವ ಮಹತ್ಕಾರ್ಯವೇ ಸರಿ. ಇಂಥ ವಿನೂತನ-ಮಾದರಿ ಕಾರ್ಯಕ್ರಮವನ್ನು ಆಗು ಮಾಡಿದ ಕ್ರಿಯಾಶೀಲ ವಿದ್ವಾಂಸರೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರೂ ಆದ ಪ್ರೊ.ಬಿ.ವಿ.ವಸಂತಕುಮಾರ್ ಅವರು ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಎಲ್ಲರೂ ಅಭಿನಂದನಾರ್ಹರು. ಅಸಂಖ್ಯ ಸಹೃದಯರ ಕೋರಿಕೆಯಂತೆ, ಮತ್ತೆಮತ್ತೆ ಕನ್ನಡ ಕಾವ್ಯಗಳನ್ನು ‘ನೆನೆ'ಯುತ್ತ ನಾಡು-ನುಡಿ-ನಾಡವರು ಬದುಕಬೇಕೆಂಬ ಮಹದಾಶಯದ ಇಂಥ ಕಾರ್ಯಕ್ರಮಗಳು ಅಕಾಡೆಮಿ ವತಿಯಿಂದ ನಿರಂತರವಾಗಿ ನಡೆಯಲಿ. ಸರ್ವಜನರೂ ಸಂಕಟಗಳ ಮೀರಿ ಬಾಳುವಂತಾಗಲಿ. "ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ".
- ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ
ಅಸೋಸಿಯೆಟ್ ಫೆಲೋ
ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ
ಭಾರತೀಯ ಭಾಷಾ ಸಂಸ್ಥಾನ
ಮಾನಸಗAಗೋತ್ರಿ, ಮೈಸೂರು-೦೬
ಮೊಬೈಲ್ ನಂ: ೯೭೪೧೪೩೬೭೨೩
ಈಮೇಲ್: kmbyrappa@gmail.com
(ತಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ: 9448241450 ಸಂಪಾದಕರು ವಿ ಮ ಸಾ ಪತ್ರಿಕೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ