ಬುಧವಾರ, ಜೂನ್ 16, 2021

ಕಲಾ ವಿಭಾಗದ ಮಹತ್ವ (ಲೇಖನ). - ವಿಧ್ಯಾದರ ಶಾನು ಮಧುರಕರ



               ಕಲಾ ವಿಭಾಗದ ಮಹತ್ವ

   "  ವಿದ್ಯೆ ವಿಹೀನಃ ಪಶು ಸಮಾನಃ" ಎಂಬ ಸುಪ್ರಸಿದ್ಧ ಸಂಸ್ಕೃತ ವಾಕ್ಯದಂತೆ, ಈ ಆಧುನಿಕ ಯುಗದಲ್ಲಿ ವಿದ್ಯೆಯು ಪ್ರತಿಯೊಬ್ಬ ಮನುಷ್ಯನಿಗೆ ಅನ್ನ, ನೀರು ,ಗಾಳಿಯಷ್ಟೇ ಅವಶ್ಯಕವಾಗಿದೆ. ಗುರುಕುಲ ಶಿಕ್ಷಣ ಪದ್ಧತಿಯಿಂದ ವಿಶ್ವ ವಿದ್ಯಾಲಯದ ಶಿಕ್ಷಣ ಪದ್ಧತಿಯ ವರೆಗೆ ವಿದ್ಯಾ ವ್ಯವಸ್ಥೆಯು ಈ ಸಮಾಜದಲ್ಲಿ ಅನೇಕ ರೀತಿಯಲ್ಲಿ ಅನೇಕ ಬಾರಿ ಔಚಿತ್ಯ ಪೂರ್ಣವಾಗಿ ಪ್ರವರ್ಧಮಾನಕ್ಕೆ ಬಂದಿದೆ.
                  ಆಧುನಿಕ ಜೀವನ ಪದ್ಧತಿಗೆ, ಅವಶ್ಯಕತೆಗೆ ಅನುಗುಣವಾಗಿ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಇಚ್ಛಾನುಸಾರ ಅನೇಕ ವೈವಿಧ್ಯಮಯವಾದ ಶಿಕ್ಷಣವನ್ನು ಪಡೆಯಲು ಪ್ರಸ್ತುತ ಶೈಕ್ಷಣಿಕ ಪದ್ಧತಿಯು ಅನುವು ಮಾಡಿಕೊಡುತ್ತಿದೆ. ಸೂಕ್ತ ಉದಾಹರಣೆಯಾಗಿ ವಿದ್ಯಾಲಯವನ್ನೇ ಪರಿಗಣಿಸಿದಾಗ ಕಲೆ, ವಾಣಿಜ್ಯ, ವಿಜ್ಞಾನವೆ೦ಬ ಮೂರು ಔಚಿತ್ಯ ಪೂರ್ಣ ಶಿಕ್ಷಣ ವಲಯವನ್ನೇ ಗಮನಿಸಬಹುದು. ಹತ್ತನೇ ತರಗತಿವರೆಗೆ ಬಾಲ್ಯವಸ್ಥೆಯೇ ಮುಗಿದಿರದ ವಿದ್ಯಾರ್ಥಿಗಳು, ಮುಂದೇನು ಎಂಬ ಜಿಜ್ಞಾಸೆಗೆ ಒಳಗಾಗಿ, ಅಗ್ನಿಗೆ ತುಪ್ಪ ಸುರಿಯುವಂತೆಯೇ ಪೋಷಕರು ತಮ್ಮ ಉದ್ವೇಗವನ್ನು ಹೆಚ್ಚಿಸಿಕೊಂಡು ಪ್ರಸಿದ್ಧ ವಿದ್ಯಾಲಯಗಳಲ್ಲಿ ತಮ್ಮ ಮಕ್ಕಳ ನೋಂದಣಿಗಾಗಿ ಅನೇಕ ರೀತಿಯ ಕಷ್ಟಗಳನ್ನು ಅನುಭವಿಸುವುದನ್ನು ವರ್ಷಂಪ್ರತೀ ನಾವು ನೋಡುತ್ತಿದ್ದೇವೆ. ಇದು ಅತ್ಯಂತ ಸ್ಪರ್ಧಾತ್ಮಕ ಯುಗ, ಇಲ್ಲಿ ನೀನು ಇಂತಿಷ್ಟೇ ಅಂಕಗಳನ್ನು ಪಡೆದಾಗ ಮಾತ್ರ, ಇಂತಹುದೇ ಶಿಕ್ಷಣ ಶಾಖೆಗೆ ಸೇರಿಕೊಂಡಾಗ ಮಾತ್ರ ನಿನ್ನ ಭವಿಷ್ಯ ರೂಪುಗೊಳ್ಳುತ್ತದೆ ಎಂಬ ಭಯಾನಕ ವಾತಾವರಣ ಸೃಷ್ಟಿಸಿ, ತಮ್ಮ ಮಕ್ಕಳ ಭವ್ಯ ಭವಿಷ್ಯತ್ತನ್ನು ಇಂದೇ ನೋಡುವ, ನಿರ್ಧರಿಸುವ ವಿಹವರಾದ ಪೋಷಕರನ್ನು ನಾವು ದಿನವೂ ಗಮನಿಸುತ್ತಿದ್ದೇವೆ.
                ಇಂತಿಪ್ಪ ಸಂದರ್ಭದಲ್ಲಿ ಕಲೆಯನ್ನು ಪದವಿ ಪೂರ್ವ ಶಿಕ್ಷಣದಲ್ಲಿ ಆಯ್ದುಕೊಂಡ ವಾಣಿಜ್ಯಶಾಸ್ತ್ರ ವನ್ನಾದರೂ ತೆಗೆದುಕೊಳ್ಳಬಹುದಿತ್ತು! ಹತ್ತನೇ ತರಗತಿಯಲ್ಲಿ ಗಣಿತ, ವಿಜ್ಞಾನದಲ್ಲಿ ಕಡಿಮೆ ಅಂಕ ಬಂದಿರುವುದೇ ಕಲೆಯನ್ನು ಆರಿಸಿಕೊಳ್ಳಲು ಕಾರಣವಾಗಿರಬಹುದು ಎಂಬಿತ್ಯಾದಿ ಬುದ್ಧಿಜೀವಿಗಳ ವ್ಯಕ್ತಿತ್ವ ಅಭಿಪ್ರಾಯಗಳು ಪುಂಖಾನು ಪುಂಖವಾಗಿ ಮೈಮೇಲೆ ಎರಗಿದ್ದವು. ಇಂತಹ ಯೋಚನೆ ಲಹರಿಯ ಬಂಧುಮಿತ್ರರಿಗೆ ಕಲಾ ಶಾಸ್ತ್ರದ ಮಹತ್ವವನ್ನು ಲಿಖಿತವಾಗಿ ನೀಡುವ ಒಂದು ಪ್ರಾಮಾಣಿಕ ಪ್ರಯತ್ನವನ್ನು ನಾನಿಲ್ಲಿ ಮಾಡುತ್ತಿದ್ದೇನೆ. 
                ನಮ್ಮ ಭವಿಷ್ಯತ್ತು ಸುಂದರವಾಗಿ ರೂಪುಗೊಳ್ಳಬೇಕಾದರೆ ನಮ್ಮ ಜೀವನಶೈಲಿಯು ತುಂಬಾ ಆರೋಗ್ಯಯುತವಾಗಿ ಇರಬೇಕಾಗುತ್ತದೆ. ಆರೋಗ್ಯಪೂರ್ಣ ಜೀವನ ಶೈಲಿಯು ಸಂಪೂರ್ಣವಾಗಿ ನಮ್ಮ ಸಂಸ್ಕಾರದ ಮೇಲೆ ಅವಲಂಬಿತವಾಗಿರುತ್ತದೆ. ಸಂಸ್ಕಾರವು ರೂಪುಗೊಳ್ಳುವುದು ನಮ್ಮ ಪಾಲಕರ, ಪರಂಪರೆಯ ಸಮಾಜದ ಅತಿ ಅಮೂಲ್ಯ ವಾದ ಕೊಡುಗೆಯಾಗಿರುತ್ತದೆ. ವೈಯಕ್ತಿಕ ಉನ್ನತಿಯು ಸ್ವಂತ ಪರಿಶ್ರಮದೊಂದಿಗೆ, ನಮ್ಮ ಪರಿವಾರದ ಇತಿಹಾಸದೊಂದಿಗೂ ತಳುಕು ಹಾಕಿಕೊಂಡಿರುತ್ತದೆ ಎಂದಾದರೆ, ದೇಶದ ಉನ್ನತಿಯೂ ಇತಿಹಾಸದೊಂದಿಗೆ ಸಂಪನ್ನಗೊಳ್ಳುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ನಮ್ಮ ದೇಶದ ಇತಿಹಾಸ, ಭೌಗೋಳಿಕ ಸನ್ನಿವೇಶಗಳು ಐತಿಹಾಸಿಕ ಸಾಧನೆಗಳನ್ನು ಅರಿಯದೇ  ದೇಶಭಕ್ತಿ  ಎಂಬುದು ಯಾರಲ್ಲಿಯೂ ತನ್ನಿಂದ ತಾನೇ ಮೈದಳೆಯುವುದಿಲ್ಲ. ಇಂತಹ ಸಂಕೀರ್ಣ ವಿಚಾರಗಳನ್ನು ಪದವಿಪೂರ್ವ ಶಿಕ್ಷಣದಲ್ಲಿಯೇ ನೀಡಿ, ಸದೃಡವಾದ ವ್ಯಕ್ತಿತ್ವ ನಿರ್ಮಾಣ ಕೇವಲ ಮತ್ತು ಕೇವಲ ಕಲಾ ಶಾಸ್ತ್ರದಿಂದ ಮಾತ್ರ ಸಾಧ್ಯವೆಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ ಸಂಗೀತ ಮುಂತಾದ ಅನೇಕ ಮೌಲ್ಯಯುತವಾದ ಶಿಕ್ಷಣ ಕಲೆಯಿಂದ ಮಾತ್ರ ಸಾಧ್ಯ.
                   ಇದನ್ನೆಲ್ಲ ಕಲಿತು ಜೀವನ ಮಾಡಲು, ದುಡಿದು ತಿನ್ನಲು ಸಾಧ್ಯವೇ ಎಂಬ ಡಾಂಬಿಕ ಕಟು ಮಾತುಗಳಿಗೆ ಉತ್ತರವಾಗಿ, ನಮ್ಮ ದೇಶದ ಮಹೋನ್ನತ ಪದವಿ ಗಳಾದ ಭಾರತೀಯ ಅಧಿಕಾರ ಸೇವೆಯಲ್ಲಿರುವ ಬಹುಪಾಲು ಸಾಧಕರು ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಪೂರೈಸಿದ್ದು ಕಲೆಯಲ್ಲಿಯೇ ಎಂಬುದು. ಹೊರತಾಗಿ ಬೇರೆಯೇ ಶಾಖೆಗಳಿಂದ ಬರುವ ಸ್ಪರ್ಧಿಗಳೂ ಐಚ್ಛಿಕ ವಿಷಯವನ್ನು ಆಯ್ದುಕೊಳ್ಳುವುದು ಕಲಾವಿಭಾಗದಿಂದಲೇ ಎನ್ನುವುದು ಗಮನಾರ್ಹ. ಖಾಸಗಿ ಉದ್ದಿಮೆಗಳಲ್ಲಿ ಯೂ ಅರ್ಥಶಾಸ್ತ್ರ, ತತ್ವಶಾಸ್ತ್ರಗಳನ್ನು  ಅಭ್ಯಸಿಸುವವರಿಗೆ ಅನೇಕ ರೀತಿಯ ಉದ್ಯೋಗಾವಕಾಶಗಳು ಪುಷ್ಕಳವಾಗಿಯೇ ಲಭ್ಯವಿದೆ. ಕಲಾ ಶಾಸ್ತ್ರದ ಅಥವಾ ಕಲೆಯಲ್ಲಿ ಬರುವ ವಿಷಯಗಳ ಮಹತ್ವದ ಕುರಿತು ಒಂದೆರಡು ಹಾಳೆಗಳಲ್ಲಿ ಬರೆಯುವುದು ಸಮುದ್ರದ ನೀರನ್ನು ಚೊಂಬಿನಲ್ಲಿ ತಂದು ಸಮುದ್ರವನ್ನೇ ತಂದೆ ಎಂಬಂತೆಯೇ. ಆದರೂ , ಆದಿಯಲ್ಲಿ ಅಂತ್ಯದಲ್ಲಿ ನಾನು ಕಲೆಯನ್ನು ಆಯ್ಕೆ ಮಾಡಿಕೊಂಡಿರುವುದು ನನಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಇಷ್ಟು ಬರೆಯುವುದನ್ನು ನನಗೆ ಕಲಿಸಿದ್ದೂ ಕಲೆಯೇ!


ಹೆಸರು:ವಿದ್ಯಾಧರ ಶಾನು ಮಧುರಕರ 
ಮೊಬೈಲ್:8147087784

ಧನ್ಯವಾದಗಳು.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448241450 ಸಂಪಾದಕರು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...