ಬಸವಾದಿ ಶರಣರ ವಚನಗಳಲ್ಲಿ ಪ್ರಜಾಪ್ರಭುತ್ವದ ಮಾನವೀಯ ಮೌಲ್ಯಗಳು
ವಚನ ಸಾಹಿತ್ಯ ಎಂದಕೂಡಲೇ ನಮ್ಮ ಗಮನ 12ನೇ ಶತಮಾನದತ್ತ ತಿರುಗುತ್ತದೆ. ತಪ್ಪೇನಿಲ್ಲ, ನಮ್ಮ ವಚನ ಸಾಹಿತ್ಯವೆಂದರೇ,ಅದೊಂದು ವಿಶಿಷ್ಟ ಮತ್ತು ವಿಭಿನ್ನವಾದ ತತ್ವಾದರ್ಶಗಳನ್ನು ಹೊಂದಿದ ಅಂಕಣವೂ ಹೌದು. ಹೀಗಿರುವಾಗ ವಿಶ್ವವಿಖ್ಯಾತಿಯನ್ನು ಹೊಂದಿದ ಈ ವಚನ ಸಾಹಿತ್ಯಕ್ಕೆ ಅಮೃತನುಡಿಗಳನ್ನು ತುಂಬಿ ಗಗನದೆತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಶರಣರೆಂದರೇ ಬಸವಣ್ಣನವರು,ಅಕ್ಕಮಹಾದೇವಿ, ಜೇಡರದಾಸಿಮಯ್ಯ, ಸರ್ವಜ್ಞ, ಶಿವಶರಣೆ ಮಲ್ಲಮಾಂಬೆ, ನೀಲಾಂಬಿಕೆ ಮುಂತಾದ ಮಹನೀಯ ಅನೇಕ ವಚನಕಾರರು ವಚನಗಳನ್ನು ರಚಿಸಿ,ಹಾಡಿ ವಿಶ್ವದೆಲ್ಲೆಡೆ ಕನ್ನಡ ಕೀರ್ತಿಯ ಪತಾಕೆಯನ್ನು ಹಾರಿಸುವಲ್ಲಿ ಮತ್ತು ಮಾನವೀಯ ಮೌಲ್ಯಗಳನ್ನು ವಚನಗಳ ಮೂಲಕ ಸಾದರಪಡಿಸಿರುವುದನ್ನು ನೋಡಿದರೇ ಈ ಮಹೋನ್ನತ ವಚನ ಸಾಹಿತ್ಯವು ಮಾನವ ಬದುಕಿನ ಪ್ರತಿಯೊಂದು ಮೌಲ್ಯಗಳನ್ನು ತಿಳಿಸುವ ಸಾಹಿತ್ಯವೂ ಹೌದು.
ವಚನ ಸಾಹಿತ್ಯ ಇದೊಂದು ವಿಶ್ವ ಶ್ರೇಷ್ಠ ಸಾಹಿತ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಜೀವನದ ಆದರ್ಶಗಳನ್ನು ಸಾರುವ ವಿಶಿಷ್ಟ ವಿಶ್ವ ಸಂವಿಧಾನವಾಗಿದ್ದು ಈ ಸಾಹಿತ್ಯದಲ್ಲಿನ ಹಲವಾರು ಮೌಲ್ಯಗಳನ್ನು ನಾವು ನಮ್ಮ ಡಾ.ಬಾಬಾ ಸಾಹೇಬರ ರಾಷ್ಪ್ರ ಸಂವಿಧಾನದಲ್ಲೂ ವಚನಗಳಲ್ಲಿರುವ ಅಂಶಗಳನ್ನು ಕಾಣಬಹುದು.
ಪ್ರಪಂಚಕ್ಕೆ ಸಮಾನತೆ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಹಲವಾರು ಅಂಶಗಳ ಪರಿಕಲ್ಪನೆಗಳನ್ನು ಮೊಟ್ಟ ಮೊದಲು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ವ್ಯಕ್ತಿಯೆಂದರೇ ವಿಶ್ವಗುರು ಬಸವಣ್ಣನವರು.
ಬಸವಣ್ಣನವರು ಅನುಭವ ಮಂಟಪದ ಮೂಲಕ ಇಡೀ ಮನುಕುಲದ ಉಧ್ಧಾರಕ್ಕಾಗಿ ಸರ್ವಜನಗಳ ಕಲ್ಯಾಣಕ್ಕಾಗಿ ಜನಜೀವನದ ಏಳಿಗೆಗಾಗಿ ಶ್ರಮಿಸುವ ಒಂದು ವಿಶಿಷ್ಟ ವ್ಯವಸ್ಥೆಯಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೆ ತಂದು ವಿಶ್ವದೆಲ್ಲೆಡೆ ಕೀರ್ತಿಯನ್ನು ಗಳಿಸಿ ಇಡೀ ಶರಣ ಸಂಕುಲಕ್ಕೆ ಮತ್ತು ಸಕಲ ಜೀವಾತ್ಮರೆಲ್ಲರಿಗೂ ಒಳಿತನ್ನು ಬಯಸಿದ ಪುಣ್ಯಾತ್ಮ,ಸಕಲ ಜೀವಾತ್ಮ ಮತ್ತು ಸಮತಾವಾದಿ ಶರಣರೆಂದರೇ ಬಸವಣ್ಣನವರು ಎಂಬುದನ್ನು ನಾವು ಮರೆಯುವಂತಿಲ್ಲ.
ಮೌಲ್ಯಾಧಾರಿತ, ಸಾಮರಸ್ಯದ ಬದುಕು, ಸಮೃಧ್ಧತೆಯ ನಾಡನ್ನು ಕಟ್ಟುವ ಕನಸನ್ನು ಕಂಡು ಅದೇ ನಿಟ್ಟಿನಲ್ಲಿ ಪ್ರಜಾಪ್ರಭುತ್ವದ ಸಿಧ್ಧಾಂತವನ್ನು ಜಗತ್ತಿಗೆ ತಿಳಿಯಪಡಿಸಲು ಹಾಗೂ ಶಾಂತಿ, ಸಂಯಮ, ಸಹಬಾಳ್ವೆ,ಕಾಯಕ, ದಯೆ,ಕರುಣೆ, ಸಾಮರಸ್ಯ,ದಾಸೋಹ,ಸಮಾನತೆ, ಸಂಪ್ರೀತಿ, ಭ್ರಾತೃತ್ವ, ಪ್ರಾಣಿದಯೆ ಮುಂತಾದ ವೈಚಾರಿಕ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.
ಪ್ರತಿಯೊಂದು ಜೀವಿಯು ಜೀವಿಸುವ ಭೂಮಂಡಲವು ಒಂದೇ,ನಾವೆಲ್ಲರೂ ಒಂದೇ ಮನೆಯ ಕುಟುಂಬದ ಸದಸ್ಯರಿದ್ದಂತೆ, ಸ್ವಾರ್ಥವನ್ನು ಬಿಟ್ಟು ನಾವೆಲ್ಲರೂ ಒಂದಾಗಿ ನಿಸ್ವಾರ್ಥದಿಂದ ಬದುಕುವಂತಹ ಯೋಚನೆಯ ಮನಸ್ಥಿತಿ ನಮ್ಮಲ್ಲಿ ಮೂಡಬೇಕಿದೆ ಹಾಗೂ ನಾವೆಲ್ಲರೂ ಜಾತಿ-ಬೇಧವನ್ನು ಲೆಕ್ಕಿಸದೇ ಸೌಹಾರ್ಧಯುತವಾಗಿ ಬಾಳಿ ಪ್ರತಿಯೊಬ್ಬರ ಬದುಕನ್ನು ಬೆಳಗುವ ಮೂಲಕ ಪ್ರೀತಿ-ಸ್ನೇಹವನ್ನು ಜಗತ್ತಿಗೆ ಸಾರುವ ಮತ್ತು ಪರಿಚಯಿಸುವ ಕೆಲಸದಲ್ಲಿ ತೊಡಗೋಣ ವಿಶ್ವದೆಲ್ಲೆಡೆ ಮಾನವೀಯ ಮೌಲ್ಯಗಳನ್ನು ವಿಶೇಷತೆಯನ್ನು ಸಾರೋಣ ಎನ್ನುವಂತಹ ಆಶಾವಾದದ ಬಯಕೆ ಪ್ರತಿಯೊಬ್ಬ ಶರಣರ ಮಾತಾಗಿತ್ತು.
ಅದರಂತೆಯೇ ಶರಣರೆಲ್ಲರೂ ಬಾಳಿ-ಬದುಕಿ ಇಂದು ನಮಗೆಲ್ಲರಿಗೂ ಮಾದರಿಯಾಗಿದ್ದಾರೆ. ಹೀಗಾಗಿ ಶರಣರು ಮಾನವೀಯ ಮೌಲ್ಯಗಳನ್ನು ಉಳಿಸಿ-ಬೆಳೆಸಿ ಇಲ್ಲಿಯವರೆಗೆ ಅಂದರೇ ಮುಂಬರುವ ಪ್ರತೀಯೊಂದು ಪೀಳಿಗೆಗಳಿಗೆ ಮುನ್ನಡೆಸಿಕೊಂಡು ಬಂದಿರುವುದು ಅವರ ವಚನ ಸಾಹಿತ್ಯದ ಮೂಲಕ ತಿಳಿದುಬರುತ್ತದೆ.
* ವಚನ ಸಾಹಿತ್ಯ ಮತ್ತು ಭಾರತೀಯ ಸಂವಿಧಾನ:
ವಚನ ಸಾಹಿತ್ಯ ಮತ್ತು ಭಾರತೀಯ ಸಂವಿಧಾನವನ್ನು ಅರಿತು ನೋಡಿದರೇ ವಿಭಿನ್ನ ಎನ್ನುವ ಮಾತೇ ಇಲ್ಲ. ಯಾಕೆಂದರೇ ವಚನ ಸಾಹಿತ್ಯದ ಪ್ರತಿಯೊಂದು ಮೌಲ್ಯಗಳು ಭಾರತೀಯ ಸಂವಿಧಾನದಲ್ಲಿ ಬಿಂಬಿಸಲ್ಪಟ್ಟಿವೆ. ದೇಶದ ಪ್ರಗತಿಗೆ ವಚನ ಸಾಹಿತ್ಯ ಎಷ್ಟು ಮುಖ್ಯವೋ, ಅಷ್ಟೇ ಭಾರತೀಯ ಸಂವೀಧಾನವೂ ಮುಖ್ಯವಾಗಿದೆ. ವಚನ ಸಾಹಿತ್ಯ ಮತ್ತು ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಯ ಸ್ವಾತಂತ್ರ್ಯ ಮತ್ತು ಸಮಾನತೆಯನ್ನು ಒತ್ತಿ ಹೇಳುತ್ತಿವೆ. ಹೀಗಾಗಿ ಈ ಎರಡೂ ತತ್ವಗಳಿಂದ ರಾಷ್ಪ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಮನುಕುಲದ ಅಭಿವೃದ್ಧಿ ಸಾಧ್ಯವಲ್ಲದೇ ಬೇರೇನೂ ಇಲ್ಲವೆಂದು ಅರಿಯಬೇಕು.
* ಪ್ರಜಾಪ್ರಭುತ್ವದ ರುವಾರಿ:
ಶ್ರೀಗುರು ಬಸವಣ್ಣನವರು ಒಬ್ಬ ಪ್ರಜಾವಾದಿ, ಸಾಮಾಜಿಕ, ರಾಜಕೀಯ, ಲೆಕ್ಕಪರಿಶೋಧಕ,ಕೌಟುಂಬಿಕ ಚಿಂತಕ ಹಾಗೂ ನ್ಯಾಯ ಮತ್ತು ಮಾನವ ಹಕ್ಕುಗಳ ಪ್ರತಿಪಾದಕ,ಪ್ರಜಾಪ್ರಭುತ್ವದ ಪಿತಾಮಹರೂ ಹೌದು.
ಮ್ಯಾಗ್ನಕಾರ್ಟ್ ಒಪ್ಪಂದದ ಅರ್ಧ ಶತಮಾನದ ಮುಂಚೆಯೇ ಕಲ್ಯಾಣದಲ್ಲಿ ಅನುಭವ ಮಂಟಪವೆಂಬ ವಿಶ್ವಮಾನ್ಯ ಪ್ರಜಾಪ್ರಭುತ್ವದ ಸಂಸತ್ತನ್ನು ಸ್ಥಾಪಿಸಿದ ಕಾರಣದಿಂದಲೇ ಇಂದು ವಿಶ್ವವು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದೆ ಎಂದರೇ ಅದು ಬಸವಣ್ಣನವರ ವೈಚಾರಿಕ ನಿಲುವು ಎಷ್ಟರಮಟ್ಟಿಗೆ ಗಟ್ಟಿಯಾಗಿತ್ತು ಎಂದು ತಿಳಿಯುತ್ತದೆ.
ಬಸವಣ್ಣನವರ ಪ್ರಜಾಪ್ರಭುತ್ವದ ಪರಿಕಲ್ಪನೆಯ ವಚನಗಳು ನಮ್ಮ ಬದುಕಿಗೆ ದಾರಿದೀಪವಾಗಿ ಇಂದಿಗೂ ಬೆಳಕು ಚೆಲ್ಲುತ್ತಿವೆ.
"ಕಳಬೇಡ, ಕೊಲಬೇಡ, ಹುಸಿಯ ನುಡಿಯಲೂ ಬೇಡ, ಮುನಿಯಬೇಡ,ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಅಳಿಯಲುಬೇಡ, ಇದೇ ಅಂತರಂಗ ಶುಧ್ಧಿ, ಇದೇ ಬಹಿರಂಗ ಶುಧ್ಧಿ, ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ" ಎನ್ನುವ ಮಾತಿನ ಮೂಲಕ ಮಾನವನ ಮೌಲ್ಯ ಹೇಗಿರಬೇಕು? ಯಾವುದು ಅಂತರಂಗ ಶುಧ್ಧಿ? ಯಾವುದು ಬಹಿರಂಗ ಶುಧ್ಧಿ? ಎನ್ನುವುದನ್ನು ಸಹ ಸಪ್ತಶೀಲ ವಚನದ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಯಾವುದೇ ತರಹದ ಅಪರಾಧಗಳು ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ಇಂದಿಗೂ ನಮ್ಮ ಸಂವಿಧಾನದ ಮೂಲ ಅಂಶ "ಕಾಯಕವೆ ಕೈಲಾಸ" ಕಾಯಕದಲ್ಲಿ ನಿಷ್ಠೆ ಇರಲಿ ಎಂಬ ಬಸವಣ್ಣನವರ ತತ್ವವನ್ನು ಸಾರುತ್ತಿದೆ.
ವಚನ ಸಾಹಿತ್ಯವು ಸಂವಿಧಾನದಂತೆ "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು" ಎನ್ನುವಂತೆ ತೋರುತ್ತಿದೆ. ಹೀಗಾಗಿ 900ವರ್ಷಗಳು ಕಳೆದರೂ ವಚನ ಸಾಹಿತ್ಯವು ಇನ್ನೂ ಜೀವಂತವಾಗಿಯೇ ವಿಶ್ವದೆಲ್ಲೆಡೆ ವಿಜೃಂಭಿಸುತ್ತಿದೆ. ಬಸವಣ್ಣನವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಅಂದರೇ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಎಲ್ಲಾ ಜನಸಾಮಾನ್ಯರಿಗೆ ಮುಕ್ತವಾಗಿ ದೊರೆಯುವಂತಾಗಬೇಕು ಎಂದು ಹೋರಾಡಿದರು, ವಚನಗಳ ಮೂಲಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಜನರಿಗೆ ಕರೆ ನೀಡಿದರು.
ಬಸವಣ್ಣನವರ ಆತ್ಮಬಲ ಮತ್ತು ಅನುಭವದ ವೈಜ್ಞಾನಿಕ ಮನೋಧರ್ಮದ ದೃಷ್ಟಿಯಿಂದ ಲಿಂಗಾಯತ ಧರ್ಮವನ್ನು ಸ್ಥಾಪಿಸಿ, ಬೆಳೆಸಿ ವಚನಗಳನ್ನು ರಚಿಸಿ ವಚನಗಳ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳಿ ಎಂದು ನಮಗೆ ಮಂತ್ರ ಬೋಧನೆ ಮಾಡಿರುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಿದೆ.
ಬಸವಣ್ಣನವರು ಕಲ್ಯಾಣದಲ್ಲಿ ಮಾಡಿದ ಎಲ್ಲಾ ಪ್ರಜಾಪ್ರಭುತ್ವ ಪ್ರಯೋಗಗಳಲ್ಲಿ ಬಹಳಷ್ಟು ಪ್ರಯೋಗಗಳು ಜಗತ್ತಿಗೆ ಮೊದಲಿನವುಗಳಾಗಿವೆ. ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯ ಜನಾಂಗದವರಿದ್ದರು ಮಹಿಳೆಯರು, ಪುರುಷರು,ಅಶ್ಪೃಶ್ಯರೆಲ್ಲಾ ಆ ಅನುಭವ ಮಂಟಪ ಎಂಬ ಧಾರ್ಮಿಕ ಸಂಸತ್ತಿನ ಸದಸ್ಯರಾಗಿದ್ದರು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪಡೆದಿದ್ದರು.
ಹೀಗೆ ಸ್ವಾತಂತ್ರ್ಯ ಮತ್ತು ಸರ್ವಸಮಾನತೆಯ ವಿಚಾರವನ್ನು ಜಗತ್ತಿಗೆ ತಿಳಿಸಿದ್ದು ಬಸವಣ್ಣನವರು. ಅವರು ಪ್ರಾರಂಭಿಸಿದ ಅನೇಕ ಚಳುವಳಿಗಳು ಹಾಗೂ ಕ್ರಾಂತಿಗಳಿಂದಾಗಿ ಪುರುಷರು,ಮಹಿಳೆಯರು, ಅಸ್ಪೃಶ್ಯರೂ ಕೂಡ ಶರಣ ಬಳಗಕ್ಕೆ ಸೇರಿದರು.12ನೇ ಶತಮಾನದಲ್ಲಿ ಇದ್ದ ಅವಿದ್ಯಾವಂತರಿಗೆ ಅಕ್ಷರವನ್ನು ಕಲಿಸಿ ವಚನಗಳನ್ನು ಪಠಿಸುವ ಮತ್ತು ರಚಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಿದ ಕೆಲಸ ಮಹತ್ವವಾದದ್ದು.
* ಆಶಯ:
ಬಸವಣ್ಣನವರು ವಚನ ಸಾಹಿತ್ಯದ ಮೂಲಕ ಪ್ರಜಾಪ್ರಭುತ್ವಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಕಾಪಾಡಿಕೊಂಡು ಬಂದಿರುವುದನ್ನು ನಾವು ಮರೆಯುವ ಹಾಗಿಲ್ಲ ಮತ್ತು ಇಡೀ ಭೂಮಂಡಲವೂ ಜೀವಂತವಿರುವವರೆಗೂ ನಾವು ಅವರ ಮೌಲ್ಯಗಳನ್ನು ಉಳಿಸಿ-ಬೆಳೆಸಿ ಮುಂದಿನ ಪೀಳಿಗೆಗಳಿಗೂ ಮುನ್ನಡೆಸಿಕೊಂಡು ಹೋಗುವಂತೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಾವು ತಿಳಿಯಬೇಕಾಗಿದೆ. ಹಾಗೂ ವಚನ ಸಾಹಿತ್ಯದ ಮತ್ತು ಪ್ರಜಾಪ್ರಭುತ್ವದ ಪ್ರತಿಯೊಂದು ಮೌಲ್ಯಗಳು ಸಂವಿಧಾನದ ಪ್ರಮುಖ ಅಂಶಗಳಾಗಿವೆ ಮತ್ತು ವಚನ ಸಾಹಿತ್ಯದ ಜೊತೆಗೆ ಸಂವಿಧಾನದ ಅಂಶಗಳನ್ನು ಸಹ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವೂ ಆಗಿದೆ.
ಹನುಮಂತ ದಾಸರ,ಹೊಗರನಾಳ.
ತಾ//ಮಸ್ಕಿ, ಜಿ//ರಾಯಚೂರು
ಮೊ:9945246234.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ತುಂಬಾ ಧನ್ಯವಾದಗಳು ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಪತ್ರಿಕಾ ಪ್ರಕಟಣೆಯ ಬಳಗಕ್ಕೆ🙏🙏❤❤
ಪ್ರತ್ಯುತ್ತರಅಳಿಸಿ