ಗುರುವಾರ, ಜುಲೈ 15, 2021

ಪಾತ್ರದ ಅಂತರಾಳವನ್ನು ಪ್ರವೇಶಿಸುವ ನೈಜ್ಯ ಕಾದಂಬರಿಕಾರ ಯಶವಂತ ಚಿತ್ತಾಲರ ಮೂರು ‘ದಾರಿಗಳು’ (ಪುಸ್ತಕ ವಿಮರ್ಶೆ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

ಪಾತ್ರದ ಅಂತರಾಳವನ್ನು ಪ್ರವೇಶಿಸುವ ನೈಜ್ಯ ಕಾದಂಬರಿಕಾರ ಯಶವಂತ ಚಿತ್ತಾಲರ ಮೂರು ‘ದಾರಿಗಳು’
ಯಶವಂತ ಚಿತ್ತಾಲ ಅವರು ಕನ್ನಡದ ಖ್ಯಾತ ಕತೆಗಾರ ಹಾಗೂ ಕಾದಂಬರಿಕಾರರಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ಅಗಸ್ಟ 3 1924 ರಲ್ಲಿ ಜನಿಸಿದರು. ಸಾಹಿತಿ ಗಂಗಾಧರ ಚಿತ್ತಾಲರು ಇವರ ಸಹೋದರರಾಗಿದ್ದರು. ಶಾಂತಿನಾಥ ದೇಸಾಯಿ ಮತ್ತು ಗೌರೀಶ ಕಾಯ್ಕಿಣಿಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವವನ್ನು ಬೀರಿದರು. ಚಿತ್ರಕಲೆಯೂ ಇವರ ಹವ್ಯಾಸವಾಗಿತ್ತು. ಚಿತ್ತಾಲರ ಬರವಣಿಗೆಯ ಕೇಂದ್ರಬಿಂದು ಹನೇಹಳ್ಳಿ. ಇವರ ಮೊದಲ ಕತೆ ಬೊಮ್ಮಿಯ ಹುಲ್ಲು ಹೊರೆ ಇದು ಅವರ ಮೊತ್ತ ಮೊದಲ ಕಥೆ. ಸಂದರ್ಶನ, ಅಬೋಲಿನ, ಆಟ, ಬೇನ್ಯಾ, ಆಯ್ದ ಕತೆಗಳು, ಕಥೆಯಾದಳು ಹುಡುಗಿ ಹೀಗೆ ಹಲವು ಕಥಾ ಸಂಕಲನಗಳನ್ನು ರಚಿಸಿದ್ದು ಛೇದ, ಕತೆಯಾದಳು ಹುಡುಗಿ, ಶಿಕಾರಿ, ಮೂರು ದಾರಿಗಳು ಎನ್ನುವಂತ ಉತ್ತಮ ಕಾದಂಬರಿಗಳನ್ನೂ ರಚಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೂ ಇವರು ಭಾಜನರಾಗಿದ್ದಾರೆ. 
ಮನೋವೈಜ್ಞಾನಿಕ ಹಿನ್ನಲೆಯಲ್ಲಿ ಬರೆಯುವ ಇವರು ತಮ್ಮ ಸಾಹಿತ್ಯದಲ್ಲಿ ಪ್ರತಿ ವ್ಯಕ್ತಿಯ ವರ್ತನೆಯ ಹಿಂದಿರುವ ಸೂಕ್ಷ್ಮವಾದ ಕಾರಣಗಳನ್ನು ಮನೋಜ್ಞವಾಗಿ ಹಿಡಿದಿಡುತ್ತಾರೆ. ಮತ್ತು ಪಾತ್ರದ ಅಂತರಾವನ್ನು ಹೊಕ್ಕು ವಿಶ್ಲೇಷಿಸುವಲ್ಲಿ ಸಫಲರಾಗುತ್ತಾರೆ. ನನ್ನ ನೆಚ್ಚಿನ ಕಾದಂಬರಿಯಾದ ಮೂರು ದಾರಿಯನ್ನು ನಾನು ಆಗಾಗ ಓದುತ್ತಿರುತ್ತೇನೆ. ಇಲ್ಲಿ ಬರುವ ಮೂರು ಪ್ರಮುಖ ಪಾತ್ರಗಳೆಂದರೆ ಕಥಾ ನಾಯಕಿ ನಿರ್ಮಲಾ, ನಾಯಕ ವಾಸುದೇವ, ಹಾಗೂ ನಿರ್ಮಲಾಳ ತಂದೆ ವಿಶ್ವನಾಥ ಶಾನುಬೋಗರು ನಿರ್ಮಲಾಳನ್ನು ಇಂಗ್ಲೀಷ್ ಶಾಲೆಯಲ್ಲಿ ಓದಿಸಬೇಕೆಂದು ತಂಗಿ ಚಂದ್ರಬಾಗಿಯ ಮನೆಯಲ್ಲಿ ಬಿಟ್ಟಿದ್ದರು. ಸುಂದರಿಯಾದ ನಿರ್ಮಲೆಯು ಊರ ಫಟಿಂಗ ರಂಗಪ್ಪನ ಕಣ್ಣಿಗೆ ಬಿದ್ದು ಅವನು ಅವಳನ್ನು ಅಡ್ಡದಾರಿಗೆಳೆಯುವುದು ಹಾಗೂ ಅವಳ ಕೋಮಲವಾದ ಮನಸ್ಸಿನಲ್ಲಿ ಉಂಟಾಗುವ ತಲ್ಲಣಗಳತ್ತ ಕಾದಂಬರಿ ದೃಷ್ಟಿ ಹಾಯಿಸುತ್ತದೆ. ಹಾಗೂ ಸಂಪ್ರದಾಯಸ್ತ ಕುಟುಂಬದ ತಂದೆ ವಿಶ್ವನಾಥ ಶಾನುಬೋಗರ ಮರ್ಯಾದೆಯ ಕುರಿತಾದ ಭೀತಿ. ಅವರ ಆ ಮುಗ್ಧ ಮನಸ್ಸಿನ ಭೀತಿಯೇ ದುರಂತಕ್ಕೆ ಕಾರಣವಾಗುವ ರೀತಿ. ಆದರ್ಶದ ಯುವಕ ವಾಸುದೇವ, ವಾಸ್ತವವಾದಿ ಗೆಳೆಯ ಶೀನನ ಪಾತ್ರ, ಚಾಡಿ ಹೇಳುವ ಹೆಂಗಸು ತುಂಗಕ್ಕ, ಹೆಂಡಿತಿಯ ಮನೆಯವರನ್ನು ಸದಾ ತಿರಸ್ಕರಾದಿಂದ ಕಾಣುವ ಚಂದ್ರಬಾಗಿ ಗಂಡ ನಾರಯಣ ಜೋಶಿಯ ಕೋಪ ಪ್ರತಿಯೊಂದು ಪಾತ್ರ ಹಾಗೂ ಸನ್ನಿವೇಶವನ್ನು ಯಶವಂತ ಚಿತ್ತಾಲರು ತುಂಬಾ ಜಾಗುರೂಕತೆಯಿಂದ ಹೆಣೆದಿರುವುದು ಕಾದಂಬರಿಯ ಶ್ರೇಷ್ಟತೆಗೆ ಕಾರಣವಾಗಿದೆ. ಮಕ್ಕಳನ್ನು ಶಿಕ್ಷಣಕ್ಕೆ ಮತ್ತು ಇನ್ನಿತರ ಕಾರಣಕ್ಕಾಗಿ ಪರ ಊರಿಗೆ ಕಳಿಸುವದರಿಂದ ಆಗುವ ಅನಾಹುತವನ್ನೂ ಎಚ್ಚರಿಸುತ್ತದೆ. ನಿರ್ಮಲಾ ತನ್ನ ಅತ್ತೆಯ ಊರಿಗೆ ಶಾಲೆ ಕಲಿಯಲೆಂದು ಹೋಗಿ ಅಲ್ಲಿನ ಫಟಿಂಗ ರಂಗಪ್ಪನ ಕಾಮುಕ ಕಣ್ಣಿಗೆ ಬಿದ್ದು ಹದಿಯರದ ಅವಳು ಅನುಭವಿಸುವ ಭಾವ ತಲ್ಲಣಗಳು ಹಾಗೂ ಆ ವಯಸ್ಸಿನಲ್ಲಿ ಆಗುವ ಚಿಕ್ಕ ಪುಟ್ಟ ಅಚಾತುರ್ಯಗಳನ್ನೇ ಹಳ್ಳಿಗಳಲ್ಲಿ ದೊಡ್ಡದು ಮಾಡಿಬಿಡುವ ಹಾಗೂ ಊರಿನ ತುಂಬಾ ಅದನ್ನು ಪ್ರಚಾರ ಮಾಡುವ ಇಲ್ಲದ್ದನ್ನು ಸೇರಿಸಿ ಹೇಳುವ ಬಾಯಿ ಚಟದಿಂದಾಗುವ ಪರಿಣಾಮವನ್ನು ಕಾದಂಬರಿ ಚನ್ನಾಗಿ ವಿಶ್ಲೇಷಿಸುತ್ತದೆ. ಇಲ್ಲಿ ಕಥಾ ನಾಯಕ ವಾಸುದೇವನ ಮೂಲಕ ಕಾದಂಬರಿಕಾರ ಹೇಳುವ ಮಾತು ಹೀಗಿದೆ “ಭಾಷೆ ಕಲಿತ/ವ್ಯಕ್ತಿ ಬರಿಯ ಮಾತಿನ ದುರುಪಯೋಗದಿಂದಲೇ ಇನ್ನೊಬ್ಬರ ಮನಸ್ಸನ್ನು ಎಷ್ಟೊಂದು ಕೆಡಿಸಬಲ್ಲ?”
 ನಿರ್ಮಲೆ ತಿರುಗಿ ತಂದೆಯ ಬಳಿ ಬಂದಾಗ ತಂದೆ ವಾಸು ದೇವ ಎನ್ನುವ ಹುಡುಗನನ್ನು ಮದುವೆಗೆ ಗೊತ್ತು ಮಾಡುತ್ತಾನೆ. ಆದರ್ಶವಾದಿಯಾದ ವಾಸುದೇವ ನಿರ್ಮಲೆಯನ್ನು ಮದುವೆಯಾಗಲು ಒಪ್ಪುತ್ತಾನೆ. ರಂಗಪ್ಪನೊಂದಿಗಿನ ಅವಳ ಸಂಬಂಧ ಊರೆಲ್ಲಾ ಸುದ್ದಿಯಾಗಿ ವಾಸುದೇವನವರೆಗೂ ಬಂದಾಗ ವಾಸುದೇವ ಮೆರೆಯುವ ಘನತೆ ಎಂತವರನ್ನೂ ತಲೆದೂಗುವಂತೆ ಮಾಡುತ್ತದೆ. “ಅವಳು ನನ್ನನ್ನು ಮದುವೆಯಾಗುವುದಾದರೆ ಬರಿಯ ಕ್ಷಣಿಕ ಉನ್ಮಾದದ ಭರದಲ್ಲಿ ಆದ ತಪ್ಪನ್ನು ನಾನು ಕ್ಷಮಿಸಲು ಸಿದ್ದನಿದ್ದೇನೆ” ಎನ್ನುವ ಮಾತು ಸ್ತ್ರೀ ಪರವಾದ ದೋರಣೆಯಾಗಿದೆ.
ವಾಸುದೇವ ನಿರ್ಮಲೆಯನ್ನು ಬೇಟಿ ಆಗಲೆಂದು ಬಂದಾಗಲೂ ನಿರ್ಮಲೆಯ ಟಿemesisಣiಛಿ ಚಿಟಿgeಡಿ ಮನಸ್ಥಿತಿಯನ್ನು ಅರಿಯದೆ ಪದೆ ಪದೆ ಅವಳ ಹಳೆಯ ತಪ್ಪನ್ನು ನೆನಪಿಸುವಂತೆ ಹೆದರಬೇಡ, ಹೆದರಬೇಡ ಎಂದಾಗ ಒಮ್ಮೆಲೆ ಕೋಪ ನೆತ್ತಿಗೇರಿಸಿಕೊಂಡ ನಿರ್ಮಲೆ ‘ನಾನು ರಂಗಪ್ಪನ ಪ್ರೇಯಸಿ’ ಎಂದು ಕಟುವಾಗಿ ಉತ್ತರಿಸುತ್ತಾಳೆ. ಇದನ್ನು ನಿಜವೆಂದು ನಂಬಿದ ವಾಸುದೇವ ಸಹ ತನ್ನ ನಿರ್ಧಾರ ಬದಲಿಸಿಕೊಳ್ಳುತ್ತಾನೆ. 
 ರಂಗಪ್ಪ ನಿರ್ಮಲೆಯನ್ನು ಸಂಚಿನಿಂದ ಸೂರಿ ಪಾರ್ಕಿಗೆ ಕರೆದೊಯ್ದು ಅವಳನ್ನು ಅಲ್ಲಿ ಬೋಗಿಸಲು ಪ್ರಯತ್ನ ಪಟ್ಟಿದ್ದು ನಿಜ ಆದರೆ ನಿರ್ಮಲ ಕೊಸರಿಕೊಂಡು ಓಡಿ ಬರುತ್ತಾಳೆ ಅಲ್ಲಿಂದ ಶುರವಾದ ಅವಳ ಮನಸೀಕ ಹಾಗೂ ದೈಹಿಕ ಅಸ್ಥವ್ಯಸ್ಥತೆ ಅವಳನ್ನೇ ನುಂಗಿ ಬಿಡುತ್ತದೆ. ಕೊಂಚ ಹಟದ ಸ್ವಭಾವದವಳಾದ ನಿರ್ಮಲೆಗೆ ತನ್ನ ಹಾಗೂ ರಂಗಪ್ಪನ ಸಂಬಂಧದ ಕುರಿತು ಮಾವ ನಾರಾಯಣ ಜೋಶಿ ಬಾಯಿಗೆ ಬಂದಂತೆ ಮಾತನಾಡಿದಾಗ ನಿರ್ಮಲೆ ವಿಪರೀತ ಕೋಪ ತಾಳಿ ಹಿಸ್ಟೀರಿಯಾ ಆದವಳಂತೆ ಒಮ್ಮೆಲೆ ಸಿಟ್ಟಿನಿಂದ ತಾನು ರಂಗಪ್ಪನ ಜೊತೆ ಮಲಗಿದ್ದು ಸತ್ಯ ಈಗ ಅವನೊಂದಿಗೆ ಓಡಿಯೂ ಹೋಗುತ್ತೇನೆ ನೀವೇನು ಮಾಡುತ್ತೀರಿ ಎಂದು ಬಡಬಡಿಸುತ್ತಲೇ ಅವಳು ಮೂರ್ಚೆ ಹೋಗುತ್ತಾಳೆ. ಅವಳ ತಪಾಸಣೆಗೆ ಬಂದ ವೈದ್ಯರೂ ಇದನ್ನೇ ಹೇಳುತ್ತಾರೆ ಅವಳ ಮನಸ್ಸಿನ ವಿರುದ್ದವಾಗಿ ಕೆಲ ದಿನಗಳ ಕಾಲ ನಡೆದುಕೊಳ್ಳದಂತೆ. ಆದರೆ ಕಾಲ ಮಿಂಚಿಹೋಗಿರುತ್ತದೆ. ನಿರ್ಮಲೆ ನಡುರಾತ್ರಿ ಎಚ್ಚರವಾಗಿ ತನ್ನ ಶಾಲೆಯ ಬಳಿ ಇದ್ದ ಪಾಳು ಬಿದ್ದ ಬಾವಿಗೆ ಹೋಗಿ ಸಾವನಪ್ಪುತ್ತಾಳೆ. ಆಗ ನಿರ್ಮಲಳ ಚಾರಿತ್ರ್ಯದ ಕುರಿತು ಸುಳ್ಳು ಸುದ್ಧಿ ಹಬ್ಬಿಸಿದ ತುಂಗಕ್ಕನಲ್ಲದೆ ಗಾಳಿ ಸುದ್ದಿ ನಂಬಿದ ಇಡಿ ಊರಿಗೆ ಊರೇ ಕಣ್ಣೀರಾಗುತ್ತದೆ. ಓದುಗ ಸಹೃದಯಿಯನ್ನು ಬಿಡದೆ ಮನಸ್ಸನ್ನು ಕಾಡುವ ಈ ಕಾದಂಬರಿ ಪ್ರತಿ ಕೇರಿ ಹಾಗೂ ಊರಿನಲ್ಲಿ ನಡೆಯುವ ಕತೆಯಾಗಿದೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.





(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...