ಮಾನವನ ವರ್ತನೆಗಳ ಹಿಂದಿರುವ ಕಾರಣವನ್ನು ವಿಶ್ಲೇಷಿಸುವ ಸೂಕ್ಷ್ಮ ಸಂವೇದನೆಗಳ ಕತೆಯಾಗಿ ಗಿರೀಶ್ ಕಾರ್ನಾಡರ ‘ಯಯಾತಿ’ ನಾಟಕ
ಗಿರೀಶ್ ಕಾರ್ನಾಡ್ ಅವರು ಉತ್ತಮ ನಾಟಕಕಾರರು, ಲೇಖಕರು, ರಂಗಕರ್ಮಿ, ಸಿನಿಮಾನಟ, ನಿರ್ದೇಶಕ, ಚಿಂತಕ ಹಾಗೂ ಹೋರಾಟಗಾರರು. ಕನ್ನಡ ಮತ್ತು ಇಂಗ್ಲೀಷ್, ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ. ಇವರು ಜನಿಸಿದ್ದು ಮಹಾರಾಷ್ಟ್ರದ ಮಥೆರಾನ್‍ನ ಸಬರಕಾಂತದಲ್ಲಿ ತಂದೆ ಡಾ.ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಬಾಯಿ.
ಉನ್ನತ ಶಿಕ್ಷಣವನ್ನು ಆಕ್ಸಫರ್ಡ ವಿಶ್ವವಿಧ್ಯಾಲಯದಲ್ಲಿ ಪೂರ್ಣಗೊಳಿಸಿದ ಇವರು ವಿದೇಶದಲ್ಲಿರುವಾಗಲೇ ಕನ್ನಡ ನಾಟಕಗಳನ್ನು ರಚಿಸಿದರು. ಯಯಾತಿ, ತುಘಲಕ್, ಹಯವದನ, ಅಂಜು ವiಲ್ಲಿಗೆ, ಹಿಟ್ಟಿನ ಹುಂಜ, ಅಂಜು ಮಲ್ಲಿಗೆ, ನಾಗಮಂಡ, ಅಗ್ನಿ ಮತ್ತು ಮಳೆ ಹೀಗೆ ಹತ್ತು ಹಲವಾರು ನಾಟಕಗಳನ್ನು ರಚಿಸಿದ ಇವರು ಬಹುಮುಖ ಪ್ರತಿಭೆಯುಳ್ಳ ವಿಧ್ವತ್ ಗಣಿಯಾಗಿದ್ದಾರೆ. ಬರೀ ಸಾಹಿತಿಗಳಷ್ಟೆ ಅಲ್ಲದೆ ನಟರು, ನಿರ್ದೇಶಕರು ಆಗಿ ಕನ್ನಡ ಸಾಹಿತ್ಯ ಲೋಕದಲ್ಲೆ ಗಮನಾರ್ಹ ಕ್ರಾಂತಿ ಮಾಡಿರುವುದನ್ನು ಕಾಣಬಹುದು.
ಇಂಗ್ಲೆಂಡ್‍ಗೆ ತೆರಳುವ ಮುನ್ನ ಗಿರೀಶ್ ಕಾರ್ನಾಡರ ಮೊದಲ ಕೃತಿ ಯಯಾತಿ ಪ್ರಕಟವಾಯಿತು. ಇದಕ್ಕೆ ಮೂಲ ಮರಾಠಿಯ ವಿ.ಎಸ್. ಖಾಂಡೇಕರ್ ಅವರು ಬರೆದ ಕೃತಿ. ಪ್ರತಿಯೊಬ್ಬರಲ್ಲೂ ಹೆಚ್ಚುತ್ತಿರುವ ದುರಾಸೆ ಹಾಗೂ ಸ್ವಾರ್ಥಪರತೆ, ಇತರರನ್ನು ಕಡೆಗಣಿಸಿ ತಾನೇ ಎಲ್ಲವನ್ನೂ ಅನುಭವಿಸಬೇಕೆಂಬ ಹಪಾಹಪಿಯ ಗುಣಗಳನ್ನು ನಾಟಕ ಅನಾವರಣಗೊಳಿಸುತ್ತದೆ. ಮಹಾಭಾರತದ ವಸ್ತವನ್ನು ಆಶ್ರಯಿಸಿದ ಈ ನಾಟಕದಲ್ಲಿ ಬರುವ ಯಯಾತಿಯು ಪಾಂಡವರ ಪೂರ್ವಜರಲ್ಲಿ ಒಬ್ಬನಾಗಿದ್ದಾನೆ.
ಮಹಾಭಾರತದ ಆದಿಪರ್ವದ ಕತೆಯನ್ನಾಶ್ರಯಿಸಿದ ಕಾರ್ನಾಡರ ಯಯಾತಿ ನಾಟಕದಲ್ಲಿ ಬರುವ ಪಾತ್ರಗಳು ತುಂಬಾ ಪರಿಣಾಮಕಾರಿಯಾಗಿವೆ. ಈ ನಾಟಕ ಒಟ್ಟಾರೆಯಾಗಿ ಯಯಾತಿಯ ಲೈಂಗಿಕ ಅತೃಪ್ತ ಮನಸ್ಸನ್ನು ಪ್ರತಿಬಿಂಬಿಸುತ್ತದೆ. ಹಾಗೆ ಇಲ್ಲಿ ಶರ್ಮಿಷ್ಟೆಯ ಪ್ರೀತಿಯೂ ಅನವರಣಗೊಳ್ಳತ್ತದೆ. ಇಲ್ಲಿ ಶರ್ಮಿಷ್ಟೆ ಅಸುರರಾಜ ವೃಷಪರ್ವನ ಮಗಳು. ಇಲ್ಲಿ ಶುಕ್ರಾಚಾರ್ಯರ ಮಗಳಾದ ದೇವಯಾನಿ ಯಯಾತಿಯ ಹೆಂಡತಿಯಾದರೆ ಶರ್ಮಿಷ್ಟೆ ಯಯಾತಿಯ ಪ್ರೇಯಸಿ. ಹಾಗೂ ದೇವಯಾನಿಯ ದಾಸಿ. ಪುರು ಯಯಾತಿಯ ಮಗ. ಪುರುವಿನ ಹೆಂಡತಿ ಚಿತ್ರಲೇಖೆ. ಯಯಾತಿ ಚಂದ್ರವಂಶಕ್ಕೆ ಸೇರಿದ ಅರಸು. ಯಯಾತಿಯ ತಂದೆ ನಹುಷ ಸಾಕಷ್ಟು ಮಹತ್ವಾಕಾಂಕ್ಷಿಯಾಗಿದ್ದನು. ಹಾಗೆ ಇಲ್ಲಿ ಯಯಾತಿಯ ಪೂರ್ವಜರನ್ನು ಒಮ್ಮೆ ಅವಲೋಕಿಸಿದಾಗ ಬುಧ ಇವನು ತಾರಾ ಮತ್ತು ಇಲಾ ಎನ್ನುವ ಇಬ್ಬರು ಹೆಂಡತಿಯನ್ನು ಮದುವೆಯಾಗಿರುತ್ತಾನೆ. ಬುಧನ ಮಗ ಪುರುರವ ಊರ್ವಶಿಯನ್ನು ಮದುವೆಯಾಗಿದ್ದು ಮಹಾಭಾರತದಲ್ಲಿ ರೋಚಕ ವರ್ಣನೆ. ನಂತರ ಬರುವ ಆಯುಕುಮಾರ ಮತ್ತು ಸ್ವರ್ಭಾನದಿಯರ ಮಗ ನಹುಷ ವಿರಾಜೆಯನ್ನು ಮದುವೆಯಾಗಿಯೂ ಇಂದ್ರಾಣಿಯನ್ನು ಬಯಸುತ್ತಾನೆ.
ಇಲ್ಲಿ ದೇವಯಾನಿ ಹಾಗೂ ಶರ್ಮಿಷ್ಟೆಯರು ಆತ್ಮೀಯ ಸ್ನೇಹಿತೆಯರು. ಕಾರಣ ತಂದೆ ಶುಕ್ರಚಾರ್ಯರು ವೃಷಪರ್ವ ಅಸುರ ರಾಜನ ರಾಜಗುರುವಾಗಿದ್ದನು. ಅತ್ಯಂತ ಸುಂಧರಿಯೂ ಹಾಗೂ ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಕಾರಣಕ್ಕಾಗಿ ತುಸು ಅಹಂಕಾರ ಅವಳಲ್ಲಿ ಮನೆಮಾಡಿತ್ತು. ಶರ್ಮಿಷ್ಟೆ ತುಂಬಾ ಸುಂಧರಿ ಹಾಗೂ ಸಾದು ಸ್ವಭಾವದಳು. ದೇವಯಾನಿಗೆ ತನ್ನ ತಂದೆಯ ಬಳಿಯ ಸಂಜೀವಿನಿ ವಿಧ್ಯೆ ಇರುವುದು ಅವಳ ಅಹಂಕಾರಕ್ಕೆ ಕಾರಣವಾಗಿತ್ತು ಹಾಗೆ ತಾಯಿ ಇಲ್ಲದ ಮಗಳೆನ್ನುವ ಕಾರಣಕ್ಕೆ ಶುಕ್ರಚಾರ್ಯರು ಕೂಡ ತುಂಬಾ ಪ್ರೀತಿಯಿಂದ ಬೆಳೆಸಿದ್ದು ಇದಕ್ಕೆ ಕಾರಣವಿರಬಹುದು. ಅತ್ಯಂತ ಆತ್ಮೀಯರಾದ ದೇವಯಾನಿ ಮತ್ತು ಶರ್ಮಿಷ್ಟೆ ಸ್ನಾನಕ್ಕೆಂದು ಕೊಳಕ್ಕೆ ಹೋದಾಗ ಒಂದು ಘಟನೆ ಸಂಭವಿಸುತ್ತದೆ ವೇಗವಾಗಿ ಕೊಳದಲ್ಲಿ ಈಜಿ ದಡ ಸೇರಿದ ಶರ್ಮಿಷ್ಟೆ ದೇವಯಾನಿಯ ವಸ್ತ್ರ ದರಿಸುತ್ತಾಳೆ. ಕಾರಣ ಅಲ್ಲಿರುವ ದಾಸಿ ಇವರಿಬ್ಬರ ಉಡುಗೆಗಳನ್ನು ಅದಲು ಬದಲು ಮಾಡಿರುತ್ತಾಳೆ. ಇದನ್ನು ಕಂಡು ಕೋಪಗೊಂಡ ದೇವಯಾನಿ “ಏನು ಆರ್ಯ ಕನ್ಯೆಯ ವಸ್ತ್ರ ತೊಟ್ಟ ಮಾತ್ರಕ್ಕೆ ನೀನೆನೂ ಆರ್ಯ ಕನ್ಯೆಯಾಗುತ್ತೀಯಾ? ಹಸಿದ ನಾಯಿಗೆ ಚಂದ್ರ ರೊಟ್ಟಿಯಾದ ಹಾಗೆ” ಎಂದು ಮೂದಲಿಸುತ್ತಾಳೆ ಕಾರಣ ಆ ವಸ್ತ್ರವನ್ನು ದೇವಯಾನಿಗೆ ಅವಳ ಪ್ರಿಯತಮ ಕಚ ಉಡುಗೊರೆಯಾಗಿ ನೀಡಿರುತ್ತಾನೆ. ಕಚ ಶುಕ್ರಾಚಾರ್ಯರ ಬಳಿ ವಿಧ್ಯೆ ಸಂಜೀವಿನಿ ವಿಧ್ಯೆ ಕಲಿಯಲು ಬಂದಾಗ ದೇವಯಾನಿ ಕಚನನ್ನು ಪ್ರೀತಿಸಿರುತ್ತಾಳೆ ಆದರೆ ಅವಳ ಪ್ರೀತಿ ವೈಫಲ್ಯವಾಗಿ ಅವಳು ಪುರುಷ ಜಾತಿಯ ಮೇಲೆ ತಿರಸ್ಕಾರ ಹೊಂದಲು ಇದು ಕಾರಣವಾಗುತ್ತದೆ. ಆದರೆ ಅತ್ಯಂತ ಕುಪಿತಳಾದ ಶರ್ಮಿಷ್ಟೆ ದೇವಯಾನಿಯನ್ನು ಹಿಡಿದು ಎಳೆದು ಪಾಳು ಬಿದ್ದ ಕೆಸರು ಗುಂಡಿಗೆ ತಳ್ಳಿ ಬಿಡುತ್ತಾಳೆ. ಕಾರಣ ಅವಳಿಗೆ ತನ್ನ ಜಾತಿ ಹಿಡಿದು ಬೈದುದ್ದಕ್ಕಾಗಿ ಬೇಸರವಾಗಿರುತ್ತದೆ. ಅದೇ ಹಾದಿಯಲ್ಲಿ ಬಂದ ಯಯಾತಿಗೆ ಹೆಣ್ಣು ಧ್ವನಿಯೊಂದು ಕೇಳಿಸುತ್ತದೆ. ಯಾರು ನೀನು ಎಂದು ಯಯಾತಿ ಕೇಳಿದ ಕೂಡಲೆ ದೇವಯಾನಿ ಶುಕ್ರಚಾರ್ಯರ ಮಗಳು ಎಂದು ಹೇಳಿದ ಕೂಡಲೆ ಯಯಾತಿ ಅವಳತ್ತ ಬಲಗೈ ಚಾಚುತ್ತಾನೆ ಕಾರಣ ಶುಕ್ರಚಾರ್ಯರ ಸಂಜೀವಿನಿ ಆಸೆಗೆ. ದೇವಯಾನಿಯೂ ಬಲಗೈಯನ್ನೇ ಚಾಚುತ್ತಾಳೆ ಕಾರಣ ಶರ್ಮಿಷ್ಟೆ ಅವಳನ್ನು ಬಡ ಬ್ರಾಹ್ಮಣನ ಮಗಳೆಂದು ಮೂದಲಿಸಿದ್ದಕ್ಕಾಗಿ ಚಕ್ರವರ್ತಿಯನ್ನು ವರಿಸುವ ನಿರ್ದಾರ ಅವಳದಾಗಿತ್ತು. ಅಂತೂ ದೇವಯಾನಿ ಯಯಾತಿಯನ್ನು ಮದುವೆಯಾಗಿ ಶರ್ಮಿಷ್ಟೆಯನ್ನು ದಾಸಿಯನ್ನಾಗಿ ಕರೆದೊಯ್ಯುತ್ತಾಳೆ ಆದರೆ ಯಾಯಾತಿ ಶರ್ಮಿಷ್ಟೆಯ ಮೋಹ ಪಾಶದಲ್ಲಿ ಸಿಲುಕಿ ಹಾಕಿಕೊಳ್ಳುತ್ತಾನೆ ಇಬ್ಬರ ಮೋಹ ಬಯಲಾಗಿ ದೇವಯಾನಿ ಮತ್ತೆ ತನ್ನ ತಂದೆಯ ಬಳಿ ಹೋಗಿ ದೂರು ಹೇಳಿದಾಗ ತುಂಬಾ ಕೋಪಿಷ್ಟ ಸ್ವಭಾವದವರಾದ ಶುಕ್ರಚಾರ್ಯರು ಯಯಾತಿಯ ಯವ್ವನವೆಲ್ಲಾ ಕಳೆದು ಮಪ್ಪು ಆವರಿಸುವಂತೆ ಶಾಪ ಕೊಡುತ್ತಾರೆ. ಇದರಿಂದ ಆತಂಕಕೊಳಗಾದ ಯಯಾತಿ ಶುಕ್ರಾಚಾರ್ಯರ ಬಳಿ ಹೋಗಿ ತನ್ನ ಶಾಪವನ್ನು ಹಿಂಪಡೆಯುವಂತೆ ಕೇಳುತ್ತಾನೆ. ಆದರೆ ಶುಕ್ರಾಚಾರ್ಯರು ಕೊಟ್ಟ ಶಾಪವನ್ನು ಹಿಂಪಡೆಯಲು ಸಾಧ್ಯವಿಲ್ಲ ಪ್ರತಿಯಾಗಿ ಉಶ್ಯಾಪವನ್ನು ಪಡೆಯಬಹುದೆಂದು ಹೇಳುತ್ತಾನೆ. ಯಯಾತಿಯ ಪ್ರೇಯಸಿ ಶರ್ಮಿಷ್ಟೆ ದೇವಯಾನಿಯ ವರ್ತನೆಯಿಂದ ಬೇಸತ್ತು ಇನ್ನೇನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಬಂದ ದಾಸಿಯರಿಂದಾಗಿ ವಿಷವನ್ನು ಅಲ್ಲಿಯೇ ಬಿಟ್ಟು ತೆರಳುತ್ತಾಳೆ.
ಉಶ್ಯಾಪವೆದರೆ ಯಯಾತಿಯ ಮುಪ್ಪನ್ನು ಯಾರದರು ಪಡೆದಲ್ಲಿ ಶಾಪದಿಂದ ವಿಮುಕ್ತನಾಗುವನೆಂದು ಹೇಳಿದಾಗ ಯಯಾತಿ ತನ್ನ ರಾಜ್ಯದ ಪ್ರಜೆಗಳಿಗೆಲ್ಲಾ ಅರ್ಧ ರಾಜ್ಯ ಕೊಡುವುದಾಗಿ ಹೇಳಿ ಡಂಗೂರ ಸಾರಿದಾಗ್ಯೂ ಯಾರೂ ಬಾರದಾದಾಗ ತಂದೆಯ ಕಳವಳ ಆತಂಕವನ್ನು ನೋಡಿ ಕೊನೆಯ ಮಗನಾದ ಪುರು ಇದಕ್ಕೆ ಸಿದ್ದನಾಗಿ ತನ್ನ ಯೌವನವನ್ನು ತಂದೆಗೆ ನೀಡಿ ತ್ಯಾಗ ಮೆರೆಯುತ್ತಾನೆ ತಕ್ಷಣ ತುಂಬಾ ಹರ್ಷಚಿತ್ತನಾದ ಯಯಾತಿ ತನ್ನ ಮಗ ಪುರುವಿಗೆ ವಂದಿಸಿ ಅವನನನ್ನು ಕೊಂಡಾಡುತ್ತಾನೆ. ಆದರೆ ಪುರು ಅಂಥಪುರಕ್ಕೆ ತೆರಳಿದಾಗ ಅವನ ಮುಪ್ಪಿನ ಕರಾಳ ಮುಖವನ್ನು ನೋಡಲಾಗದೆ ಅವನ ಹೆಂಡತಿ ಚಿತ್ರಲೇಖೆ ಕಿಟಾರನೆ ಕಿರುಚುತ್ತಾಳೆ. ಅಲ್ಲಿಂದ ಪುರುವನ್ನು ಹೊರಗೆ ಹೋಗುವಂತೆ ಆಜ್ಞೆ ಮಾಡುತ್ತಾಳೆ. ನಿಜ ಈ ಸನ್ನಿವೇಶವೂ ಕೂಡ ಮಾನವ ಸಂಬಂಧಗಳ ಅಸ್ಥಿತ್ವವನ್ನೇ ಪ್ರಶ್ನಿಸುತ್ತದೆ. ಇಲ್ಲಿ ಪುರುವಿನ ಹೆಂಡತಿ ಚಿತ್ರಲೇಖೆ ಕೂಡ ಪ್ರೀತಿಸಿದ್ದು ಪುರುವಿನ ಯೌವನವನ್ನೇ ಹೊರತು ಪುರುವನ್ನಲ್ಲ ಎನ್ನುವುದು ವೇದ್ಯವಾಗುತ್ತದೆ. ಪುರು ಹೊರಬಂದಿದ್ದೇ ತಡ ಚಿತ್ರಲೇಖೆಯು ಶರ್ಮಿಷ್ಟೆ ಅಲ್ಲಿಯೇ ಬಿಟ್ಟು ಹೋದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ವಿಷಯ ತಿಳಿದ ಯಯಾತಿ ಚಿತ್ರಲೇಖೆಯ ಬಳಿ ಬಂದು ಅವಳ ಸಾವಿನಿಂದ ತೀರ್ವವಾಗಿ ಮನ ನೊಂದು ತನ್ನ ದುರಾಸೆ ಇದಕ್ಕೆಲ್ಲಾ ಕಾರಣ ತನ್ನ ಕಾಮದ ಗುಣವೇ ಬದುಕಿನ ದುರಂತಕ್ಕೆ ಕಾರಣವಾಯಿತೆಂದು ಪಶ್ಚಾತಾಪದಿಂದ ತನ್ನ ಮಗ ಪುರುವಿನ ಯೌವನವನ್ನು ಅವನಿಗೇ ಮರಳಿಸಿ ಶರ್ಮಿಷ್ಟೆಯ ಜತೆ ಅರಣ್ಯಕ್ಕೆ ತೆರಳುತ್ತಾನೆ. ಮಾನವ ಸಂಬಂಧಗಳ ನೈಜತೆ ಆಂತಾರ್ಯದ ಬಯಕೆಗಳು, ಅದರಲ್ಲೂ ಎಲ್ಲವನ್ನೂ ಅನುಭವಿಸಬೇಕೆಂಬ ಮನದ ತುಡಿತ, ಮಹತ್ವಾಕಾಂಕ್ಷೆಗಳಿಗಾಗಿ ಮನುಷ್ಯ ಬದುಕಿನ ಹೊಯ್ದಾಟಗಳನ್ನು ನಾಟಕ ತುಂಬಾ ಚನ್ನಾಗಿ ಕಟ್ಟಿ ಕೊಟ್ಟಿದೆ. ಮತ್ತು ಮನೋವೈಜ್ಞಾನಿಕ ನೆಲೆಯಲ್ಲಿ ಈ ನಾಟಕವನ್ನು ನೋಡಿದಾಗ ಮಾತ್ರ ಪ್ರತಿ ಪಾತ್ರದ ವರ್ತನೆಯ ಹಿಂದಿರುವ ಕಾರಣವೂ ಸ್ಪಷ್ಟವಾಗಿ ವೇದ್ಯವಾಗುತ್ತದೆ.
ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ