ಕೈಬೀಸಿ ಕರೆಯುವ ಮಸ್ಸೂರಿಯ ಸೊಬಗು
'ದೇಶ ಸುತ್ತು ಕೋಶ ಓದು 'ಎಂಬ ನಾಣ್ಣುಡಿಯಂತೆ ಕೋಶ ಜ್ಞಾನ ಹೆಚ್ಚಿಸಿದರೆ ದೇಶ ಸುತ್ತುವಿಕೆ ಅನುಭವ ನೀಡುತ್ತದೆ.ಅಂತಹ ಒಂದು ಅನುಭವದ ಝಲಕ್ ಇಲ್ಲಿದೆ .ಉತ್ತರಾಖಂಡ್ ರಾಜ್ಯವನ್ನು 'ದೇವಭೂಮಿ 'ಅಂತಾನೇ ಕರೀತಾರೆ. ಯಾಕಂದ್ರೆ ಈ ರಾಜ್ಯ ಹಲವು ಪವಿತ್ರ ಯಾತ್ರಾ ಸ್ಥಳಗಳಾದ ಗಂಗೋತ್ರಿ ,ಯಮುನೋತ್ರಿ, ಬದರಿನಾಥ ,ಕೇದಾರನಾಥ, ಹರಿದ್ವಾರ ,ಹೃಷಿಕೇಶ ಮುಂತಾದ ಸ್ಥಳಗಳು ಬರುವುದು ಇಲ್ಲಿಯೇ. ಅಲ್ಲದೆ ಋಷಿಗಳ, ಸಾಧುಸಂತರ ತಪೋಭೂಮಿ ಎಂದು ಇದು ಖ್ಯಾತಿಯಾಗಿದೆ. ಅದೇ ರೀತಿಯಾಗಿ ಪಾಂಡವರು ಸ್ವರ್ಗಾರೋಹಣ ಯಾತ್ರೆಯು ಈ ಪ್ರದೇಶದ ಮೂಲಕ ಸಾಗಿತೆಂದು ನಂಬಿಕೆ .
ಅದ್ಭುತ ಗಿರಿಧಾಮಗಳನ್ನು ಈ ರಾಜ್ಯ ಹೊಂದಿದೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಲ್ಲಿ ಬರುವ 'ಮಸ್ಸೂರಿ' ಒಂದು ಅದ್ಭುತ ಗಿರಿಧಾಮ. "ಪರ್ವತಗಳ ರಾಣಿ" "ಮೋಹಕ ಮೋಡಗಳ ಮಾದಕ ನೃತ್ಯಗಳಿಗೆ ಸಾಕ್ಷಿ ತಾಣ" ನಮ್ಮ ಕರ್ನಾಟಕದ ಕೊಡಗಿನ ತಲಕಾವೇರಿ ಯನ್ನು ಮತ್ತೆ ಮತ್ತೆ ನೆನಪಿಸುವ ಸುಂದರ ನಾಡು .ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅಂದರೆ 27-9-2000 ರಲ್ಲಿ ನಮ್ಮ ಕುಟುಂಬ ಪರಿವಾರದೊಂದಿಗೆ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ಗೆ ಹೋಗಿದ್ದೆವು.
ಇಲ್ಲಿರುವ 'ಸಹಸ್ರಧಾರ ಜಲಪಾತ'ವನ್ನು ನೋಡಲು ಎರಡು ಕಣ್ಣುಗಳು ಸಾಲದು .ಸಾವಿರ ಸಾವಿರ ನೀರಿನ ಧಾರೆಗಳ ಸಾಲು ಬೆಟ್ಟದ ಮೇಲಿಂದ ಧುಮ್ಮಿಕ್ಕಿ ಹರಿಯುವ ರುದ್ರರಮಣೀಯ ದೃಶ್ಯ ಮನಮೋಹಕವಾದುದು.ಸುತ್ತಲೂ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ , ಗಂಗಾನದಿಯ ನೀರು ಧಾರಾಕಾರವಾಗಿ ಭೋರ್ಗರೆಯುತ್ತಾ ಧುಮುಕುವ ದೃಶ್ಯ ಎಂಥವರಿಗಾದರೂ ಸಂತೋಷವನ್ನುಂಟುಮಾಡುವಂತಿದೆ.ಈ ಪ್ರಕೃತಿಯ ಮಡಿಲಲ್ಲಿ ನಿಂತು ಇಂತಹ ರಮಣೀಯ ಸ್ಥಳಕ್ಕೆ ಮತ್ತೊಮ್ಮೆ ಬರುವುದು ಆಗುವುದೋ ಇಲ್ಲವೋ ಎನ್ನುವ ಭಾವನೆ ನಿಸರ್ಗದ ಮಡಿಲಲ್ಲಿ ಫೋಟೋಗಳನ್ನು ತೆಗೆಸಿಕೊಂಡು, ಆ ನಿಸರ್ಗದ ಸವಿಯನ್ನುಂಡು ನಮ್ಮ ಪ್ರಯಾಣ ಮಸ್ಸೂರಿಯತ್ತ ಸಾಗಿತ್ತು.
'ಮಸ್ಸೂರಿ' ಪ್ರಕೃತಿಯನ್ನು ಆರಾಧಿಸುವವರಿಗೆ ಒಂದು ಸುಂದರ, ಮನಮೋಹಕ, ಆಹ್ಲಾದಕರ ,ಮನಸ್ಸಿಗೆ ಶಾಂತಿ ಸಮಾಧಾನ ನೀಡುವ ನಿಸರ್ಗದ ಮಡಿಲು .ಇದನ್ನು ನೋಡಿದವರ ಕಣ್ಣುಗಳೇ ಧನ್ಯ ಎನಿಸುವದು. ಅಷ್ಟೊಂದು ಸುಂದರವಾದ ತಾಣ. ಮಸ್ಸೂರಿ ಡೆಹ್ರಾಡೂನ್ ನಿಂದ ಸುಮಾರು ನಲವತ್ತು ಕಿಲೋ ಮೀಟರ್ ದೂರದಲ್ಲಿದೆ. ಇದು ಬೆಟ್ಟದ ತುದಿಯಲ್ಲಿದೆ.ನಾವು ಸಮತಟ್ಟಾದ ಪ್ರದೇಶದಿಂದ ಬೆಟ್ಟದ ಮೇಲಕ್ಕೆ ಅಂಕು ಡೊಂಕಾದ ರಸ್ತೆ ಮಾರ್ಗದ ಮುಖಾಂತರ ಹೋಗಬೇಕು .ಘಾಟ್ ವಿಭಾಗ, ಕೆಳಗಿನ ಪ್ರದೇಶ ತುಂಬಾ ಆಳವಾಗಿ ಕಾಣುತ್ತದೆ. ಸುತ್ತಲೂ ಎಲ್ಲಿ ನೋಡಿದರಲ್ಲಿ ಮಂಜು ಆವರಿಸಿದೆ. ಎಲೆಉದುರುವ ಕಾಡುಗಳು' ಸವನ್ನಾ ಮಾದರಿಯ ಹುಲ್ಲುಗಾವಲು, ಹಸಿರಿನಿಂದ ತುಂಬಿರುವ ಈ ಮಸೂರಿಯನ್ನು ತಲುಪಿದಾಗ ಸಾವಿರಾರು ಅಡಿಗಳಷ್ಟು ಎತ್ತರವಿರುವಂತೆ ನಮಗೆ ಕಾಣಿಸುತ್ತದೆ. ಆದರೆ ಅದು ಎಷ್ಟು ಎತ್ತರವಿದೆ ಎಂಬುದು ತಿಳಿಯಲಿಲ್ಲ .ಮಸ್ಸೂರಿಗೆ ಹೋಗುವುದು ದೇವರ ದರ್ಶನಕಲ್ಲ, ಅಲ್ಲಿರುವುದು ಕೇವಲ ಪ್ರಕೃತಿಯ ಸೌಂದರ್ಯ .ಪ್ರಕೃತಿ ಮಾತೆಯೇ ನಮಗೆಲ್ಲಾ ದೇವತೆ .ಬೆಟ್ಟದ ತುದಿಯಿಂದ ಧುಮ್ಮುಕ್ಕುತ್ತಿರುವ ನೀರಿನ ಧಾರೆ ಬೆಳ್ಳಿಯ ಝರಿಗಳಂತೆ ಗಳಂತೆ ಹರಿಯುತ್ತಿದೆಯೇನೋ ಎನ್ನುವ ರಮಣೀಯ ನೋಟ .ಅಲ್ಲಿ ಬಂದಂತಹ ಎಲ್ಲ ಪ್ರವಾಸಿಗರಿಗೆ ಮಸ್ಸೂರಿಯ ಸೊಗಡಿನ ನೋಟದಲ್ಲಿ ಅಲ್ಲಿಯ ಉಡುಗೆಯನ್ನ ಹಾಕಿಕೊಂಡು ಫೋಟೋ ತೆಗೆಸಿಕೊಳ್ಳುವ ಮನಮೋಹಕ ದೃಶ್ಯಗಳು ಅನೇಕ. ಹಾಗೆಯೇ ನಾನು ಮತ್ತು ನನ್ನ ಅಕ್ಕನ ಮಗಳು ಸಹ ಇಲ್ಲೇ ಮಸ್ಸೂರಿಯ ಉಡುಗೆಯಲ್ಲಿ ಫೋಟೋ ತೆಗೆಸಿಕೊಂಡೆವು. ಅರ್ಧ ಗಂಟೆಯ ಬಳಿಕ ಫೋಟೊ ಕೊಟ್ಟಾಗ ,ನಮಗಾದ ಸಂತೋಷ ಅಷ್ಟಿಷ್ಟಲ್ಲ .ಅಂತಹ ಉಡುಗೆಗಳನ್ನು ಧರಿಸಿದ್ದು ಮೊದಲ ಬಾರಿಯಾದ್ದರಿಂದ ತುಂಬಾ ಸಂತಸದಿಂದ ಫೋಟೋಗಳನ್ನು ನೋಡುತ್ತಾ ಅಲ್ಲಿಯ ಸೊಬಗನ್ನು ಮರುಕಳಿಸುವಂತೆ ಮಾಡುವ ಒಂದು ಸಾಕ್ಷಿಯನ್ನಾಗಿ ನಾವು ಫೋಟೊದೊಂದಿಗೆ ಬಂದೆವು.
ಪ್ರದೇಶವಾದ್ದರಿಂದ ಬೆಟ್ಟ ಏರುವಾಗ ಮತ್ತು ಇಳಿಯುವಾಗ ನಮ್ಮ ತಲೆ ತಿರುಗಿದಂತಾಗಿ ಅನುಭವವಾಗುವುದು ಸರ್ವೇಸಾಮಾನ್ಯ . ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬರುವ ತಲಕಾವೇರಿಯನ್ನು ಮತ್ತೆ ಮತ್ತೆ ನೆನಪಿಸುವಂತಹ ತಾಣ.ನಾವು ನಿಂತಾಗ ನಮ್ಮ ನೆತ್ತಿಯ ಮೇಲೆ ಮೋಹಕ ಮೋಡಗಳು ಮಾದಕ ನೃತ್ಯವನ್ನು ಮಾಡುತ್ತಾ ಸಾಗುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತದೆ. ಮೋಡಗಳನ್ನು ಕೈಯಿಂದ ಹಿಡಿಯೋಣ ವೆನ್ನುವಷ್ಟು ಕೆಳಗಡೆ ಮೋಡಗಳು ನಮಗೆ ಗೋಚರಿಸುತ್ತವೆ ಆದರೆ ಅದೊಂದು ಭ್ರಮೆ .ಕೈಗೆ ಸಿಕ್ಕದ ಮೋಡಗಳು ನೃತ್ಯದ ರೀತಿಯಲ್ಲಿ ಮುಂದೆ ಮುಂದೆ ಗಾಳಿಯು ಅವುಗಳನ್ನು ತಳ್ಳಿಕೊಂಡು ಹೋಗುತ್ತದೆ. "ಪರ್ವತಗಳ ರಾಣಿ ಎಂದೇ ಪ್ರಸಿದ್ಧವಾದ ಮಸೂರಿಯನ್ನು ಅಲ್ಲಿಯ ಸೊಬಗನ್ನು ಜೀವನದಲ್ಲಿ ಒಂದು ಸಾರಿಯಾದರೂ ನಾವು ನೋಡಲೇಬೇಕು.ನಮ್ಮ ದೇಶ ನಮ್ಮ ಸಂಸ್ಕೃತಿ ಎಷ್ಟೊಂದು ಅದ್ಭುತ ಅಲ್ಲವೇ ? ಅಂತಹ ಪ್ರಕೃತಿ ಸೌಂದರ್ಯವನ್ನು ಸವಿಯುವ ಭಾಗ್ಯ ಎಲ್ಲರದಾಗಲಿ ಎಂದು ಆಶಿಸುತ್ತೇನೆ.
- ಶ್ರೀಮತಿ ಸುಮಂಗಲಾ ಕೃಷ್ಣಾ ಕೊಪ್ಪರದ ಶಿಕ್ಷಕಿ ಇಳಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ