ನಾಳೆ ಬಾ,
ಇದೊಂದು ಬರಹ ನಮ್ಮ ಬಾಲ್ಯದ ದಿನಗಳು ಅಂದರೆ ನಾನು ನಾಲ್ಕನೇ ತರಗತಿ ಓದುವಾಗ ನಮ್ಮೂರಿನ ಕೆಲವು ಮನೆಗಳ ಬಾಗಿಲುಗಳ ಮೇಲೆ ಬಿಳಿ ಬಳಪದಲ್ಲಿ, ಕೆಲವರು ಇದ್ದಿಲಿನಲ್ಲಿ, ಕೆಲವರು ಬಿಳಿ ಪೈಂಟ್ ಬಳಸಿ ಬರೆದಿದ್ದರು, ಸುತ್ತಮುತ್ತಲಿನ ಊರುಗಳಲ್ಲಿಯೂ ಇದೇ ಬರಹ ಕಣ್ಣಿಗೆ ಬೀಳುತ್ತಿತ್ತು.
ನನಗೆ ಕುತೂಹಲ ಹಾಗೇ ನಮ್ಮ ಅಕ್ಕನನ್ನ ಕೇಳಲು ಊರಿಗೆ ದೆವ್ವ - ಭೂತಗಳ ಹಾವಳಿ ಜಾಸ್ತಿಯಾಗಿದೆ, ಮಧ್ಯರಾತ್ರಿಯಲ್ಲಿ ಮನೆಗಳ ಬಾಗಿಲು ಬಡಿದು ಮನೆಯವರ ಹೆಸರು ಕೂಗುತ್ತದೆ. ಯಾರಾದರೂ ಬಾಗಿಲು ತೆಗೆದು ಹೊರಗೆ ಬಂದರೆ ಅವರು ರಕ್ತ ಕಾರಿ ಸಾಯುತ್ತಾರೆ. ಪಕ್ಕದ ಊರಿನಲ್ಲಿ ಯಾರೋ ಹೀಗೆ ಮೋಹಿನಿ ಬಾಗಿಲು ಬಡಿದು ಹೆಸರು ಹಿಡಿದು ಕರೆದು ಅವರು ರಕ್ತ ಕಾರಿ ಸತ್ತು ಹೋದರು ಎಂದು ನನ್ನ ಮನಸ್ಸಿನಲ್ಲಿ ಆ ಮೋಹಿನಿಯ ಭಯಂಕರ ರೂಪವನ್ನು ನನ್ನ ಕಣ್ಣು ಕಟ್ಟುವಂತೆ ಹೇಳಿದಳು. ನನಗೋ ಭಯ ಶುರುವಾಯಿತು. ರಾತ್ರಿ ಮೋಹಿನಿ ನನ್ನ ಹೆಸರು ಹಿಡಿದರೆ ಏನು ಗತಿ!? ಎಂದು ನನ್ನ ಅಕ್ಕನನ್ನು ಕೇಳಲು ಅವಳು ಯಾರ ಮನೆಯ ಬಾಗಿಲಲ್ಲಿ ನಾಳೆ ಬಾ ಎಂದು ಬರೆದಿರುತ್ತೋ ಆ ಮನೆಯವರ ಹೆಸರು ಕರೆಯದೆ ಹಾಗೇ ಮುಂದಿನ ಮನೆಗೆ ಹೋಗುತ್ತೆ. ಅದಕ್ಕೆ ನಮ್ಮ ಮನೆಯ ಬಾಗಿಲಿನ ಮೇಲೆ ನಾಳೆ ಬಾ ಅಂತ ಬರಿತಿದ್ದೀನಿ ಅಂದಳು.
ಅದನ್ನು ಕೇಳಿದ್ದೆ ತಡ ನಾನು ನನ್ನ ಗೆಳೆಯರ ಜೊತೆ ಸೇರಿ ಬಳಪಗಳನ್ನು ಕೊಂಡು ನಮ್ಮೂರಿನ ಒಂದೂ ಮನೆ ಬಿಡದೆ ಎಲ್ಲಾ ಮನೆಗಳ ಮೇಲು ನಾಳೆ ಬಾ ಬರಹ ಬರೆದಿದ್ದೆ ಬರೆದಿದ್ದು ನಮ್ಮ ಮನೆಯ ಕಿಟಕಿ ಬಾಗಿಲು ಗಳ ಮೇಲೂ ನಾಳೆ ಬಾ ಬರೆದೆ. ಮೋಹಿನಿ ಕಿಟಕಿಯ ಹತ್ತಿರ ಬರಬಾರದು ಹಾಗೇ ಹೋಗಲಿ ಎಂದು.
ಕೊನೆಗೂ ಒಂದು ಪ್ರಶ್ನೆ ನನಗೆ ಹಾಗೆ ಕಾಡ್ತಿದೆ ಈ ಮೋಹಿನಿಗಳು ಯಾವ ಮೀಡಿಯಂ ನಲ್ಲಿ ಓದಿದ್ದರೆ ಯಾಕಂದ್ರೆ ಇಂಗ್ಲಿಷ್ ಮೀಡಿಯಂ ಆದ್ರೆ ನಾವು ಕನ್ನಡದಲ್ಲಿ ಬರೆದ್ರೆ ಅರ್ಥ ಆಗಲ್ಲ , ಇಲ್ಲ ಬೇರೆ ದೇಶದ ಮೋಹಿನಿ ಆದ್ರೆ ನಮ್ಮ ಯಾವ ಭಾಷೇನೂ ಗೊತ್ತಾಗಲ್ಲ ಮತ್ತೆ ಮಾಗಿಲು ಬಡಿದು ನಮ್ಮ ಹೆಸರು ಕೂಗಿದರೆ ಏನ್ಮಾಡೋದು ?
ಉತ್ತರ ಸಿಂಪಲ್ ಏನಂದ್ರೆ ಅದು ನಮ್ಮ ಹೆಸರು ಕರೆದಾಗ ನಾವು ಅದಕ್ಕೆ ಅರ್ಥ ಆಗ್ದೇ ಇರೋ ನಮ್ ಭಾಷೆನಲ್ಲಿ ಯಾರೂ ಇಲ್ಲ ಅಂತ ಹೇಳಿ ಕಂಬಳಿ ಹೊಡ್ಕೊಂಡ್ ಮಲಗೋದು ಅಷ್ಟೇ !!!.
ಇದೊಂದು ದೃಶ್ಯ ನನ್ನ ಕಣ್ಣಿಗೆ ನಾಳೆ ಅಂದಾಗಲೆಲ್ಲ ಬರುತ್ತೆ. ಬಾಲ್ಯದ ಮುಗ್ದ ಮನಸುಗಳೇ ನಾಳೆಯ ಬಗ್ಗೆ ಯೋಚಿಸಿ ಪರಿಹಾರ ಕಂಡು ಕೊಳ್ಳುತ್ತವೆ.
ನಮ್ಮ ಪ್ರಬುದ್ಧ ಮನಸುಗಳು ನಾಳೆಯ ಬಗ್ಗೆ ನಾಳೆಯ ನಮ್ಮ ಭವಿಷ್ಯದ ಬಗ್ಗೆ, ನಮ್ಮ ಮಕ್ಕಳ ನಾಳೆಯ ಬಗ್ಗೆ, ನಮ್ಮ ಪ್ರಕೃತಿಯ ನಾಳೆಯ ಬಗ್ಗೆ, ನಮ್ಮ ದೇಶ-ಭಾಷೆಯ ನಾಳೆಯ ಬಗ್ಗೆ ಯೋಚಿಸಬೇಡವೇ ಅಥವಾ ನಮ್ಮ ಮನದ ಬಾಗಿಲ ಮೇಲೆ "ನಾಳೆ ಬಾ" ಅಂತ ಬರೆಯಬೇಕೆ !? ಇಲ್ಲಾ "ಇಂದೇ ನಾನೇ ಬರ್ತೀನಿ" ಅಂತ ಬರೆಯಬೇಕೆ?
ನೀವೇಹೇಳಿ..
- ಹನುಮಂತ ರಾಜು ಎನ್, ನೆಲಗದರನಹಳ್ಳಿ ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ