ಶಾಲೆ, ಪ್ರತಿಯೊಬ್ಬರ ಜೀವನದ ಮರೆಯಲಾಗದ ಒಂದು ಜಾಗ. ಎಳೆ ವಯಸ್ಸಿನಲ್ಲಿ ಆಡಿದ ತುಂಟಾಟ, ಜಗಳ, ಗೆಳೆಯರು, ಗುರುಗಳು, ಶಾಲೆ ಬೆಲ್ಲು, ಊಟದ ಸಮಯದ ಚೆಲ್ಲಾಟ, ಆಟದ ಸಮಯದ ಗುದ್ದಾಟ, ಮೊದಲ ಮುಗ್ಧ ಪ್ರೇಮ, ಶಿಕ್ಷಕರ ಕೈಯ ಏಟು, ಗೆಳೆಯರು ಮಾಡಿರೋ ತಪ್ಪಿಗೆ ನಾವನುಭವಸಿದ ಶಿಕ್ಷೆ, ಹೋಮ್ ವರ್ಕ್, ಪೆನ್ನು ಪೆನ್ಸಿಲ್ ಟಿಫನ್ ಬಾಕ್ಸು ಹೀಗೆ ಹೇಳ್ತಾ ಹೋದ್ರೆ ಸಾಲು ಸಾಲು ಅವಿಸ್ಮರಣೀಯ ನೆನಪುಗಳು ಮತ್ತು ಅನುಭವ. ನಾವು ಕಾಲಿ ತಲೇಲಿ ಬಂದು ಶಾಲೆಯಿಂದ ತೇರ್ಗಡೆ ಆಗುವಾಗ ಪರಿಪಕ್ವ ಮನುಷ್ಯನನ್ನಾಗಿ ಮಾಡೋದು ಆ ಶಾಲೆ. ಆದರೆ.. ಆದರೆ ಈಗ ಆಗ್ತಿರೋದು ಸಾರ್.!? ತದ್ವಿರುದ್ಧ!
ಮೊದಲೆಲ್ಲ ಶಾಲೆಗೆ ಒಂದು ಆವರಣ, ಒಂದು ಹೆಬ್ಬಾಗಿಲು ಅಂತ ಇರ್ತಿತ್ತು. ಆ ಹೆಬ್ಬಾಗಿಲಿನ ಮೇಲೆ ಅರ್ಧ ವೃತ್ತಾಕಾರದ ತಗಡು, ಅದರ ಮೇಲೆ ಬರೆದಿರೋರು, "ಜ್ಞಾನದೇಗುವಿದು ಕೈ ಮುಗಿದು ಒಳಗೆ ಬಾ". ವ್ಹಾ... ಎಷ್ಟು ಶಕ್ತಿ ಇದೆ ನೋಡಿ ಈ ವಾಕ್ಯಕ್ಕೆ. ಇದನ್ನ ಓದಿ ಯಾವ ಮಗುವು ಸಹ ಶಾಲೆಗೆ ಕಾಲಿಡುವ ಮುಂಚೆ ನಮಸ್ಕರಿಸದೆ ಒಳಗೆ ಬರ್ತಿರ್ಲಿಲ್ಲ. ಶಾಲೆಯನ್ನ ಜ್ಞಾನ ನೀಡೋ ದೇಗುಲ, ಅಲ್ಲಿ ಪಾಠ ಕಲಿಸೋ ಅಧ್ಯಾಪಕರು ದೇವಸಮಾನರು ಅನ್ನೋ ದೈವಕಲ್ಪನೆ ಚಿಕ್ಕಂದಿನಿಂದಲೇ ಮಕ್ಕಳ ಮನಸ್ಸಿನಲ್ಲಿ ಆವರಿಸುತ್ತಿತ್ತು. ಸದ್ಗುಣಗಳು ಮೈಗೂಡುತ್ತಿತ್ತು. ಈಗೇನಿದೆ ಸಾರ್.!? ೩೦-೪೦ ನಿವೇಶನ ಜಾಗ ಇದ್ದರೇ ಸಾಕು ನಾಲ್ಕು ಮಹಡಿ ಕಟ್ಟಡ ಕಟ್ಟಿ "Recognised by Govt. of Karnataka" ಅಂತ ಬೋರ್ಡ್ ಹಾಕೋದೆ ಆಂಗ್ಲ ಮಾಧ್ಯಮ ಶಾಲೆ ಆರಂಭ ಮಾಡೋದೆ. ಇಂಥಾ ಶಾಲೆಗೂ ಪೋಷಕರು ಮಕ್ಕಳನ್ನ ಸೇರಿಸ್ತಾರೆ ಅದೆ ಆಶ್ಚರ್ಯ! ಇಲ್ಲಿ ಹೆಬ್ಬಾಗಿಲು ಇರಲ್ಲ ಮೆಟಲ್ ಗೇಟ್ ಇರುತ್ತೆ. ಗೇಟ್ ಪಕ್ಕನೇ ಸೂಚನಾ ಫಲಕ ಇರುತ್ತೆ. ಆ ನೋಟೀಸ್ ಬೋರ್ಡ್ ಅಲ್ಲಿ ಮುಂಚೆ ಹೇಳಿದ್ದ ತರಾನೆ ಏನೋ ಬರೆದಿರುತ್ತದೆ ಆದರೆ ಅದಲ್ಲ. ಅದರಲಿ " ಲಿಟಲ್ ಜೀನಿಯಸ್ ವಿದ್ಯಾಸಂಸ್ಥೆಗೆ ಸ್ವಾಗತ, ಫೀಸ್ ಕಟ್ಟಿದ್ದರೆ ಒಳಗೆ ಬನ್ನಿ.!". ನೋಡಿ, ಕೈ ಮುಗಿದು ಒಳಗೆ ಬಾ ಅನ್ನೋದು ಎಲ್ಲಿ.. ಫೀಸ್ ಕಟ್ಟಿದ್ದರೆ ಒಳಗೆ ಬಾ ಅನ್ನೋದು ಎಲ್ಲಿ. ಇಲ್ಲಿಂದಲೇ ಅಲ್ವೇ ಮಕ್ಕಳ ತಲೇಲಿ ದುಡ್ಡಿನ ಮೇಲೆ ದುರಾಸೆ ಹಾಗು ದುಡ್ಡಿದ್ದರೇ ಜೀವನ ಅನ್ನೋ ತಪ್ಪು ಕಲ್ಪನೆ ಹುಟ್ಟೋದು..!?
ಮಕ್ಕಳು ಗಣೇಶನ ಸ್ತೋತ್ರ, ಸರಸ್ವತಿ ಹೇಳದಿದ್ದರೂ ಪರವಾಗಿಲ್ಲ "Jhonny Jhonny, Jack and Jill" ಅಂತ ಇಂಗ್ಲೀಷ್ ಪದ್ಯ ಹಾಡಿದರೆ ಸಾಕು ಅನ್ನೋ ದುರಂತ ಮನೋಭಾವ ತಂದೆ ತಾಯಿಯರದು. "ಗುರು ಬ್ರಹ್ಮ ಗುರು ವಿಷ್ಣು" ಸ್ತೋತ್ರ ಹೇಳ್ತಾರೆ ಕೇಳ್ಬೇಕು ಆದ್ರೆ ಕೇಳ್ಬಾರದು ಹಂಗೆ ಹೇಳ್ತಾರೆ. ಆ ಸ್ತೋತ್ರದ ಕೊನೇಲಿ ಇರೋದು "ಗುರುವೇ ನಮಃ" ಅಲ್ವೇ, ಇವರೇನಂತಾರೆ ಗೊತ್ತೇ.., "ತಸ್ಮೈ ಶ್ರೀ ಗುರುವೇನು ಮಹಾ.!?". ಆಮೇಲೆ ಶಿಕ್ಷಕರು ಶಿಕ್ಷೆ ಕೊಟ್ಟರೆ "ನೀವೇನು ಮಹಾ.!?" ಅಂತ ಕೇಳಿದರೂ ತಪ್ಪಿಲ್ಲ.
ಇನ್ನು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಸ್ನೇಹಿತರೊಂದಿಗೆ ಹೋಗೋದೆ ಮಜಾ. ಏನಾದ್ರೂ ಲೇಟ್ ಆಯ್ತು ಅಂದ್ರೆ ಓಡ್ತಿದ್ವಿ, ರಸ್ತೆ ಮೂಲಕ ಹೋದ್ರೆ ಇನ್ನೂ ತಡ ಆಗುತ್ತೆ ಅಂತ ಮನೆ ಮನೆ ಕಾಂಪೌಡ್ ಹಾರಿ ಸಂದಿ ಗೊಂದಿಗಳಲ್ಲೆಲ್ಲಾ ನುಗ್ಗಿ ಹೊಸ ದಾರಿ ನಾವೇ ಮಾಡ್ತಿದ್ವಿ. ಒಂದೊಂದು ನಿಮಿಷಕ್ಕೂ ನಮಗೆ ನಾವೇ ಪೈಪೋಟಿ. ಈಗ, ಬಸ್ ಬರುತ್ತೆ. ಟಿಂಗ್ ಅಂತ ಹೇಳಿದ ಸಮಯಕ್ಕೆ ಸರಿಯಾಗಿ ರೆಡಿ ಆದ್ವಾ , ಬಸ್ಸಿನೊಳಗ ಕೂತೆವಾ ಟಿಂಗ್ ಅಂತ ಶಾಲೆಗೆ ತಂದು ಬಿಡುತ್ತೆ. ಮತ್ತೆ ಶಾಲೆ ಮುಗುದ್ರೆ ಬಸ್ ಹತ್ತು ಮನೆಗೆ ತಂದು ಬಿಡುತ್ತೆ. ಎಲ್ಲಿ ಮಜಾ.. ಬರೀ ಸ್ಕೂಲ್ ಜಾ, ಘರ್ ಆಜಾ, ಮತ್ತೆ ಸ್ಕೂಲ್ ಜಾ!
ಇದು ಶಾಲೆಗಳ ಪರಿಸ್ಥಿತಿಯಾದರೆ, ಶಿಕ್ಷಕರದು ಏನು ತೊಂದರೆ ಗೊತ್ತಾ.? "ಅಯ್ಯೊ! ಸೆಮಿಸ್ಟರ್ ಮುಗಿತಾ ಬಂತು ಇನ್ನು Syllabus, portions ಕಂಪ್ಲೀಟ್ ಆಗಿಲ್ವಲ್ಲಾ" ಅಂತಾ. ಇವರಿಗೆ ಮಕ್ಕಳಿಗೆ ಬುಕ್ ಅಲ್ಲಿ ಇರೋ ಅಷ್ಟು ಪಾಠ ಮಾಡ್ಬಿಟ್ಟರೇ ಸಾಕು ಅಂತಾರೆ. ಅಕಸ್ಮಾತ್ ಏನಾದರೂ ಬೇಗ ಬೇಗ ಪಾಠ ಮುಗಿಸಬೇಕು ಅಂತ ಅಂದ್ರೆ "ಈ ಪಾಠ ನಿಮಗೆ ಮುಂದಿನ ವರ್ಷ ಮತ್ತೆ ಬರುತ್ತೆ, ಈಗ ಇದೇನು ಬೇಡ" ಅಂತಲೋ ಅಥವಾ "ಇದು ನಿಮಗೆ ಕಳೆದ ವರ್ಷ ಇತ್ತು, ಹಾಗಾಗಿ ಇದನ್ನ ಮತ್ತೆ ಓದೋದು ಬೇಡ" ಅಂತಲೋ ಹೇಳಿ ಪಾಠವನ್ನ ಎಗರಿಸ್ತಾರೆ. ಈಗ ಇಲ್ಲಿ ಕಳೆದುಕೊಂಡಿದ್ದು ವಿದ್ಯಾರ್ಥಿಗಳೇ ಹೊರತು ಬೇರಾರು ಅಲ್ಲ. ಅದರಲ್ಲೂ Biology ವಿಷಯದಲ್ಲಿ ಎಷ್ಟು ಜಂಪ್ ಮಾಡೋದು. ಅದರಲ್ಲಿ 'Reproduction' ಅನ್ನೊ ಚಾಪ್ಟರ್ ಪಾಠ ಮಾಡೋಕೆ ಯಾಕೆ ಅಷ್ಟು ಮುಜುಗರ ಅನ್ನೋದು ಇನ್ನೂ ತಿಳಿದಿಲ್ಲ. ಅದು ಸಹ ಪ್ರಕೃತಿಯ ಒಂದು ಸಹಜ ಕ್ರಿಯೆಯ ಹಾಗೆ ನೋಡಿದರೆ ಆಯ್ತು, ಅದು ಬಿಟ್ಟು ಶಿಕ್ಷಕರೇ ಅದನ್ನ ಗೌಪ್ಯತೆ ಎಂಬಂತೆ ನಡೆದುಕೊಂಡರೆ ಅದನ್ನ ನೋಡಿ ಮಕ್ಕಳೂ ಸಹ ಅದರಲ್ಲೇನೋ ಇದೆ ಅಂತ ಕುತೂಹಲದಿಂದ ತಿಳಿದುಕೊಳ್ಳುವುದಕ್ಕಿಂತಾ ಜಾಸ್ತಿ ತಿಳಿದುಕೊಂಡು ಜೀವನ ಹಾಳು ಮಾಡಿಕೊಳ್ತಾರೆ. ಇದೆಲ್ಲಾ ಆಗುವ ಮೊದಲೇ ಆ ಚಾಪ್ಟರನ್ನ ಮುಕ್ತವಾಗಿ ಸೌಜನ್ಯದಿಂದ ಪಾಠ ಮಾಡಿದರೆ ಗಂಡಿಗೆ ಹೆಣ್ಣಿನ ಮೇಲೆ, ಹೆಣ್ಣಿಗೆ ಗಂಡಿನ ಮೇಲೆ ಹುಟ್ಟೋದು ಕಾಮ ಅಲ್ಲ, ಗೌರವ.
ಈಗ ಸದ್ಯದ ಪರಿಸ್ಥಿತಿಯಿಂದಾಗಿ ಪರೀಕ್ಷೆಗೆ Syllabus cut-off ಮಾಡಿದ್ದಾರೆ. ಮಕ್ಕಳೇನಾದರೂ ಆ ತೆಗೆದು ಹಾಕಿರೋ ಪಾಠದಿಂದ doubts ಕೇಳಿದ್ರೆ, "ಇದೇನು ಪರೀಕ್ಷೆಗೆ ಬರಲ್ಲ, ಇದೇನು ಓದ್ಬೇಡಿ.. ಯಾಕೆ ಸುಮ್ಮನೆ ಪರೀಕ್ಷೆಗೆ ಬರ್ದೆ ಇರೋದನ್ನ ಓದಿ ಟೈಂ ವೇಷ್ಟ್ ಮಾಡ್ತೀರ.?" ಅಂತ ಹೇಳಿ ಕಳಿಸ್ತಾರೆ. ಇದೇ ನಂಬಲಸಾಧ್ಯವಾದ ವಾಸ್ತವ. ಅವರು ಸರಿಯಾಗೇ ಇದ್ದಾರೆ, ಅವರು ಕೆಲಸ ಮಾಡ್ತಿರೋದು ವಿದ್ಯಾಸಂಸ್ಥೆಗೆ., ಮತ್ತು ಸಂಸ್ಥೆಗೆ ಬೇಕಾಗಿರೋದು ಅಂಕೆಗಳು. ಅಂಕೆಗಳು ಬರೋಲ್ಲ ಅಂದ್ರೆ ಯಾಕೆ ಓದ್ಬೇಕು ಅಲ್ವೇ.? ಹೀಗೆ ಮಾಡಿ ಮಾಡಿ, ಯುವಕರು ವಿದ್ಯಾವಂತರಾಗ್ತಿದ್ದಾರೆ ಆದ್ರೆ ಸಂಸ್ಕಾರ ಮತ್ತೆ ವಿವೇಕ ಹೀನರಾಗ್ತಿದ್ದಾರೆ. ಮೂಲ ಸಂಸ್ಕಾರವೇ ಸರಿ ಇಲ್ಲದ ಮೇಲೆ ವಿದ್ಯೆ ಇದ್ದು ಏನು ಪ್ರಯೋಜನ. ವಿವೇಕ, ವಿನಯ, ಸಂಸ್ಕಾರ ಬೆಲ್ಲದ ಹೂರಣದ ಹಾಗೆ, ವಿದ್ಯೆ ಹೂರಣದ ಮೇಲಿನ ರೊಟ್ಟಿಯ ಹಾಗೆ. ನಾವು ಬರೀ ವಿದ್ಯೆ ಅನ್ನೋ ರೊಟ್ಟಿಗೆ ಎಷ್ಟೇ ಸಾಧನೆ ಅನ್ನೋ ತುಪ್ಪ ಸುರಿದರೂ ಹೋಳಿಗೆಗೆ ರುಚಿ ಸಿಗೋದು ಹೂರಣದ ಜೊತೆ ತಿಂದಾಗ ಮಾತ್ರ.
ಯಾಕೆ ಹೀಗೆಲ್ಲಾ ಬದಲಾವಣೆ ಆಗಿದೆ ಅಂತ ಯೋಚನೆ ಮಾಡ್ತಿರುವಾಗ ಗೊತ್ತಾಯ್ತು ಇದು ಶಾಲಿವಾಹನ ಶಕೆ ಅಲ್ಲ, ಶಾಲಾ-ವಾಹನ ಶಕೆ ಅಂತ. ಕೆಲವೊಂದು ಶಾಲಾ ಕಾಲೇಜುಗಳಿಗೆ ಸಙರಬೇಕಾದರೆ ಕಟ್-ಆಫ್ ರೀಚ್ ಆಗಬೇಕಂತೆ. ಅದು ಎಲ್ಲಾ ೯೦% ಮೇಲೆಯೇ... ಅಂಥಾ ಬುದ್ಧಿವಂತ ಮಕ್ಕಳಿಗೆ ಹೇಗೆ ಪಾಠ ಮಾಡಿದರೂ ಅವರು ಅಷ್ಟೇ ಅಂಕ ಗಳಿಸುತ್ತಾರೆ. ಯಾರು ಬೇಕಾದರೂ ಅವರಿಗೆ ಪಾಠ ಹೇಳಬಹುದು. ಆದರೆ ಒಬ್ಬ ಜಸ್ಟ್ ಪಾಸ್ ಆಗೋ ವಿದ್ಯಾರ್ಥಿನ ೯೦% ಬರೋ ಹಾಗೆ ಪಾಠ ಮಾಡೋರೆ ನಿಜವಾದ ಶಿಕ್ಷಕರು. ಖ್ಯಾತ ವಾಗ್ಮಿಗಳು, ಚಿಂತಕರೂ ಆದಂತ ಪ್ರೊ ಕೃಷ್ಣೇಗೌಡರು ಬಹಳ ಚೆನ್ನಾಗಿ ಹೇಳ್ತಾರೆ, "A Teacher is the one who teaches you in every step, makes you realise your mistakes and help you to learn from that". ಎಷ್ಟು ಸತ್ಯ ಅಲ್ವಾ. ಈಗ್ಲಾದರೂ ಎಚ್ಚರ ವಹಿಸೋಣ. ಮಕ್ಕಳಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ವಿನಯ, ವಿವೇಕದ ಜೊತೆಗೆ ವಿದ್ಯೆ ಸಿಕ್ಕರೆ ಮುಂದೆ ಬೆಳೆದು ದೇಶಕ್ಕೆ ಕೀರ್ತಿ ತರೋ ಅಂತ ಮಕ್ಕಳಾಗ್ತಾರೆ, ಇಲ್ಲಾ ಅಂದ್ರೆ ಮುಕ್ಕರಿಸಿ ಬೀಳ್ತಾರೆ. ಎಚ್ಚರಾ...!!!
- ಪೂರ್ಣೇಶ್ ಎಸ್
9945296542
purneshyogi@gmail.com
ಬೆಂಗಳೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9113036287 ವಾಟ್ಸಪ್ ಮಾತ್ರ)