~~~~~~~~
ಕ್ಯಾಲೆಂಡರ್ ವರುಷ ಬಂತೆಂದರೆ ಸಾಕು
ಥೇಟ್ ನಮ್ಮೂರ ಮೈದೆವ್ವಗಳೆ ನೆನಪಾಗುತ್ತವೆ
ಕೆದರಿದ ಕೂದಲು, ಬಾತುಕೊಂಡ ಮುಖ
ಓಲಾಡುವ ತೂಗಾಡುವ ಬಾಡಿ
ಹೇಳಿಕೊಳ್ಳಲಾಗದ ಅದುಮಿಟ್ಟುಕೊಂಡೆಲ್ಲ ಉಸಿರನು
ಘಟಸರ್ಪಗಳು ಹೆಡೆಬಿಚ್ಚಿ
ಕಂಡಕಂಡವರ ಬಳಿಯೆಲ್ಲ
ಬಳಕಾಡುತ ಬುಸ್ ಬುಸ್ಸೆನ್ನುತ್ತವೆ
ಭೂತಗುಡಿಯ ಮುಂದಣ
ದೆವ್ವಗಳ ಅರಚಾಟಕೇನೋ
ತೂಗುಹಾಕಿದೆವು ಮೌಢ್ಯದ ಪಟ್ಟಿ!
ಹೆಂಡದಂಗಡಿ ಪಬ್ಬುಬಾರುಗಳ
ಧೂಮ್ ಧಾಂಗುಡಿಯ ನರ್ತನಕೀಗ
ಹಿಡಿಯಬೇಕು ಯಾರ ಕೊರಳಪಟ್ಟಿ?
ಹುಣಸೆ ಚುಳುಪಿಯದೊಂದೆ ಏಟಿಗೆ
ಬಿಟ್ಟೋಡುತ್ತಿತ್ತಾ ದೆವ್ವ! ಆಗದಿದ್ದರೆ
ಧರ್ಮದಂಡವಂತೂ ಇತ್ತು
ಮಧ್ಯರಾತ್ರಿಯಲಿ ಏರಿಸಿಕೊಂಡೀ ಪಿತ್ತಕೆ
ಮತ್ತೊಂದು ರಾತ್ರಿಯಲೆ ಎಚ್ಚರ
ನಿಶೆಯಲಿ ಮತ್ತೊಂದು ಸುತ್ತು
ನಮ್ಮ ಮುಳ್ಳುಜಾಲಿ ನೆರಳಾಗಲಿಲ್ಲ ನಿಜ
ಕೊಂಡು ತಂದ ಎಕ್ಸ್ ಮಾಸಿಗೇಕೆ ಜೋಲಿ
ಗಂಧವ ಬೆಳೆಯೋಣವೆಂದರೆ ಕಳ್ಳಕಾಕರ ಕಾಟ
ಕಾನೂನು ಸರಮಾಲೆಗಳ ಪೀಕಲಾಟ
ಥೋss.. ಇದಾಗದ ಕೆಲಸ
ತಲೆ ಚಿಟ್ಟೆನ್ನುತಿದೆ
'ಚಿಯರ್ಸ್... ಹ್ಯಾಪಿ ನ್ಯೂ ಇಯರ್'
~ ಅರಬಗಟ್ಟೆ ಅಣ್ಣಪ್ಪ