ಬುಧವಾರ, ಜೂನ್ 25, 2025

ಸೈನಿಕರೇ ನಿಮಗಿದೋ ನಮನ (ಕವಿತೆ) - ಸುನಂದಾ ಪುರಾಣಿಕ.

ಪ್ರತಿದಿನ ಶಾಂತಿಯುತ ಜೀವನ ನಡೆಸಲು 
ಕಾರಣ ನಮ್ಮೀ ಸೈನಿಕರು
ದೇಶದ ಗಡಿಯನು ಕಾಯುವ ಯೋಧರು
ಅವರೇ ನಮ್ಮಯ ದೇವರು|

ಹೆತ್ತವರ ಮಡದಿ ಮಕ್ಕಳ ತೊರೆದು 
ದೇಶವೇ ನಮ್ಮ ಮನೆಯೆನ್ನುವರು
ಮಳೆ ಬಿಸಿಲು ಚಳಿಗಾಳಿಗೆ ಹೆದರದೆ
ದೇಶ ರಕ್ಷಣೆ ಮಾಡುವರು|

ದೇಶವ ಪ್ರೀತಿಸುವ ನಿಜ ದೇಶಭಕ್ತರು
ಶಿಸ್ತುಬದ್ಧ ಜೀವನ ನಡೆಸುವರು
ಲಕ್ಷಾಂತರ ಜೀವ ರಕ್ಷಿಸಲು ತಮ್ಮಯ
ಪ್ರಾಣ ತ್ಯಾಗವ ಮಾಡುವರು|

ಗಡಿಯಲ್ಲಿನ ಗುಂಡಿನ ಸದ್ದಿಗೆ ಹೆದರದೆ 
ನೀಡುವರು ಅದಕೆ ಪ್ರತ್ಯುತ್ತರ 
ಗುಂಡಿಗೆಯಲಿ ರೋಷ ತುಂಬಿಕೊಂಡು 
ಶತ್ರುಗಳ ಎದೆಸೀಳುವ ಕಾತುರ|

ಪ್ರತಿ ಉಸಿರಲಿ ಇರುವುದು ದೇಶಸೇವೆ 
ತಾಯ್ನಾಡು ಸವ೯ ಶ್ರೇಷ್ಠ 
ದೇಶವೇ ಅವರಿಗೆ ಎಲ್ಲಕ್ಕಿಂತ ಮಿಗಿಲು
ಸಹಿಸುವರು ಬಂದ ಸಂಕಷ್ಟ|

ಸೈನಿಕರ ಬದುಕು ಮುಳ್ಳಿನ ಹಾಸಿಗೆ 
ಕಠಿಣ ಸವಾಲಿನ ಜೀವನ
ರಕ್ತದಿ ದೇಶದ ಭವಿಷ್ಯ ಬರೆಯುವರು
ಸಲ್ಲಿಸೋಣ ಅವರಿಗೆ ನಮನ||

   - ಸುನಂದಾ ಪುರಾಣಿಕ, ಹಳಿಯಾಳ.ಉತ್ತರ ಕನ್ನಡ.

ಗುಬ್ಬಿ ಗೂಡು...

ಲೇಖನ

ಮಕ್ಕಳ ಕವಿತೆಗಳ ಗುಬ್ಬಿ ಗೂಡು...



ಹಾಸನದ ಕವಯಿತ್ರಿ ಶ್ರೀವಿಜಯ ಅವರ ಗುಬ್ಬಿಗೂಡು ಮಕ್ಕಳ ಕವನ ಸಂಕಲನ. 57 ಕವಿತೆಗಳಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಈಗ ನಿವೃತ್ತರಾಗಿರುವ ಸಹಜವಾಗಿಯೇ ಆಗ ಮಕ್ಕಳ ಒಡನಾಟದಲ್ಲಿದ್ದು ಪಾಠ ಮಾಡುವಾಗಿನ ಶಾಲಾ ಪಠ್ಯಗಳ ಪದ್ಯಗಳು ಇವರ ನೆನಪಿನಾಳದಲ್ಲಿ ಪ್ರಭಾವ ಬೀರಿ ಆ ದಿಶೆಯಲ್ಲಿ, ಕೆಲವು ಶಿಶುಗೀತೆಗಳು ರಚನೆಗೊಂಡಿವೆ.

ಹಗಲಲ್ಲಿ ಸೂರ್ಯನ ಇರುಳಲಿ ಚಂದ್ರನ ಇಟ್ಟವನಾರಮ್ಮ
ಕಪ್ಪನೆ ಮುಗಿಲಲಿ ಹನಿ ಹನಿ ಮಳೆಯೂ ಇಟ್ಟವನಾರಮ್ಮ

  ತಾಯಿ ಮಗುವಿನ ಸಂಭಾಷಣೆ ಮಗುವಿನ ಮುಗ್ದ ಪ್ರಶ್ನೆಗಳಿಗೆ ತಾಯಿಯ ಜಾಣ್ಮಿಯ ಉತ್ತರ ಸರಳ ಸಾಲುಗಳಲ್ಲಿ ರಚಿಸುವುದು ಮೇಲ್ನೊಟಕ್ಕೆ ಸುಲಭವೆಂದುಕೊಂಡರೂ 
ಪ್ರಾಸಬದ್ದತೆಯಲ್ಲಿನ ರಚನೆ ಅಷ್ಟೇ ತ್ರಾಸವೂ ಹೌದು. ಶಿಶು ಕಾವ್ಯ ರಚನೆಗೆ ಪದಕೌಶಲ್ಯವೂ ಬೇಕು. ಮಗು ಕೇಳುವ
ಜಗದ ಕೌತುಕದ ಪ್ರಶ್ನೆಗೆ ತಾಯಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾಳೆ.

ಹೂವಿಂದ ಹೂವಿಗೆ ಹಾರುವ 
ಚಿಟ್ಟೆಗೆ ಬಣ್ಣ ಬಳಿದವನಾರಮ್ಮ
ತಾಯಿಯ ಹೃದಯದಿ ಮಮತೆ 
ಪ್ರೀತಿಯ ಇಟ್ಟವನಾರಮ್ಮ

 ರಾತ್ರಿ ಆಕಾಶ ತೋರಿಸಿ ಮನೆಯ ಮಹಡಿಯಲ್ಲಿ ತುತ್ತು ತಿನಿಸುತ್ತಿರುವ ತಾಯಿ ಮಗುವಿನ ಪ್ರಶ್ನೆಗಳ ಸರಮಾಲೆಗೆ ತತ್ತರಿಸಿ ಉತ್ತರದ ಹುಡುಕಾಟದಲ್ಲಿ ಆಕಾಶ ನೋಡಿದ್ದಾಳೆ ಪಾಪ. ಇನ್ನೂ ನಮ್ಮ ಮನೆಯಲ್ಲೊಂದು ಪುಟ್ಟ ಪಾಪವಿರುವುದು ಎಂಬ ಶಿಶು ಕಾವ್ಯ ನೆನಪಿಸುತ್ತದೆ ಈ ಪದ್ಯದ ಸಾಲು 

ನಮ್ಮ ಮನೆಗೆ ಒಂದು ಪುಟ್ಟ ಪಾಪು ಬಂದಿತು.
ಎತ್ತಿಕೊಳ್ಳಲು ಹೋದರೆ ಅಮ್ಮ ಬಂದು ತಡೆದಳು
ಪ್ರೀತಿಯಿಂದ ಪಾಪು ಅಪ್ಪಿ 
ಮುತ್ತು ಕೊಟ್ಟಳು

ಇನ್ನೂ ನೀನ್ಯಾರಿಗಾದೆಯೋ ಎಲೆ ಮಾನವ.. ಎಂಬ ಗೋವಿನ ಹಾಡಿನ ಮಾದರಿಯ ಈ ಪದ್ಯದಲ್ಲಿ ಪರಿಸರ ಕಾಳಜಿಯಿದೆ.

ಮರ ನಾನು ಹೆಮ್ಮರ
ನಾನೆಂದೂ ಅಮರ
ನೀನಾರಿಗಾದೆಯೋ ಪಾಮರ..

ಈಗ ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೊರಡಬೇಕಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮೇಡಂ ಬನ್ನಿ ಮಕ್ಕಳೇ ಶಾಲೆಗೆ
ಎಂದು ಕಿರು ಪದ್ಯದಲ್ಲಿ ಕರೆ ನೀಡುತ್ತಾರೆ
 
ರಜೆಯು ಮುಗಿಯಿತು 
ಶಾಲೆ ತೆರೆಯಿತು
 ಬನ್ನಿ ಮಕ್ಕಳೆ ಶಾಲೆಗೆ
ಶಾಲೆ ನಮ್ಮ ದೇಗುಲ 
ಗುರುಗಳಮ್ಮ ದೇವರು..

ನಾವು ಬಾಲ್ಯದಲ್ಲಿ ಕಂಡ ನಮ್ಮ ಹಂಚಿನ ಮನೆಯ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡನ್ನು ಇಂದು ಕಾಣುವುದು ಅಪರೂಪ.

ನಮ್ಮ ಮನೆಯ ಸೂರಿನಲ್ಲಿ 
ಗುಬ್ಬಿ ಗೂಡು ಕಟ್ಟಿತು 
ಪುಟ್ಟ ಪುಟ್ಟ ಮರಿಗಳೊಡನೆ
ಅಲ್ಲಿ ವಾಸ ಮಾಡಿತು

ಗಾಳಕ್ಕೆ ಸಿಕ್ಕ ಮೀನೊಂದು ಭೇಟೆಗಾರನಲ್ಲಿ ತನ್ನ ಪ್ರಾಣ ಭಿಕ್ಷೆ ಬೇಡುವುದು ಮರುಕ ಹುಟ್ಟಿಸುತ್ತದೆ.

ಒಂದು ದಿನ ಸಂಜೆ ನಾನು
ಗಾಳ ಹಾಕಿ ಹಿಡಿದೆ ಮೀನು
ದೀನವಾಗಿ ನನ್ನ ನೋಡಿ
ಪ್ರಾಣ ಭಿಕ್ಷೆ ಬೇಡಿತು

ನಾವು ದೊಡ್ಡವರು ದೊಡ್ಡ ಭೇಟೆಗಾರರು ಗಾಳಕ್ಕೆ ಸಿಕ್ಕ ಮೀನಿಗೆ ಪ್ರಾಣಭಿಕ್ಷೆ
ನೀಡುವುದಿರಲಿ ಮೀನನ್ನೇ ಗುಳುಂ ಸ್ವಾಹ ಮಾಡುತ್ತೇವೆ ಎಂದರೆ ಪಾಪ ಮಕ್ಕಳು ಹಾಗೇ ಮಾಡುವರೇ?

ಅಯ್ಯೋ ಪಾಪ ಕರುಣೆಯಿಂದ 
ಸಾಯುತ್ತಿರುವ ಮೀನು ಎತ್ತಿ 
ನೀರಿನೊಳಗೆ ಬಿಟ್ಟನು

ತಿನ್ನುವ ಮೀನಿಗೆ ಜೀವದಾನ ನೀಡಿದ ಮಗುವಿಗೆ ಈ ಪದ್ಯದ ಸಂದೇಶ ಏನು ಎಂದು ಕೇಳಿದರೆ
ಅಹಿಂಸೆ ಎಂದಿತಂತೆ! ಇರಲಿ
ಇನ್ನೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ಮಜವೇ ಬೇರೆ. ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವದೇ ಮಜ. ಹಳ್ಳಿಯ ಗಿಡ ಮರ, ಕೆರೆ ಬಯಲು ಅಜ್ಜನ ತೋಟದ ಮನೆ ಮದ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆ 
 ತಾನೇ ಖುಷಿ ನೀಡುವುದಿಲ್ಲ.

ತೋಟದ ನಡುವೆ ಕಟ್ಟಿದ ಮನೆಯಿದು
ಸುತ್ತಲೂ ಮೇಯುವ ಹಸುಕರು 
ಕೇಳುವರಾರು ನಮಗಿಲ್ಲಿ

ನಿಜ, ವ್ಯಾಪಾರ ಉದ್ಯೋಗ ಹುಡುಕಿ ಪೇಟೆ ಪಟ್ಟಣ ಸೇರಿರುವ ನಾವು ನಮ್ಮ ಮಕ್ಕಳಿಗೆ ಶಾಲೆ, ಟ್ಯೂಷನ್, ಡ್ಯಾನ್ಸ್ ಸಂಗೀತ ಕ್ಲಾಸ್ ಎಂದೆಲ್ಲಾ ಏನೇನೋ ದಿನನಿತ್ಯ ಅವಕ್ಕೆ ಹಿಂಸೆ ಕೊಡುತ್ತೇವೆ. ಮಗು ಹೊರಗೆ ಆಡದಂತೆ ಹದ್ದಿನ ಕಣ್ಣಿನಿಂದ ಕಾಯುತ್ತೇವೆ. ಗದರಿಸಿ ಗದ್ದಲ ಮಾಡುತ್ತೇವೆ. ಮಕ್ಕಳಿಗೆ ಪ್ರೀಯಾಗಿ ಆಡಲು ಬಿಡದೆ ಹೋಂ ವರ್ಕ್ ಮಾಡು ಎಂದು ಪೀಡಿಸುತ್ತೇವೆ. ಇಂತಿಪ್ಪ ಮಕ್ಕಳಿಗೆ ಹಳ್ಳಿಯ ಅಜ್ಜನ ಮನೆ ಇಷ್ಟವಾಗದೇ ಇರುತ್ತದೆಯೇ! ಅಂತೆಯೇ ಅಜ್ಜಿಯ ಕೈ ತುತ್ತು ಮರೆಯಲುಂಟೆ!

ಆಟ ಓಟ ಮೋಜು ಮಸ್ತಿ 
ಅಜ್ಜ ಅಜ್ಜಿಯ ಪ್ರೀತಿ ಜಾಸ್ತಿ
ಕೈ ತುತ್ತಿನ ಸವಿ ಅಪಾರ

ಮುನ್ನುಡಿಯಲ್ಲಿ ಶ್ರೀಮತಿ ಸುಶೀಲ ಸೋಮಶೇಖರ್ ಬರೆದಂತೆ ಜಿಂಕೆಯ ಓಟದಂತ ತಾಂತ್ರಿಕ ಯುಗದಲ್ಲಿ ಮಕ್ಕಳು ಹಿರಿಯರಿಗಿಂತಲೂ ಜಾಣರು. ಲೀಲಾಜಾಲವಾಗಿ ತಾಂತ್ರಿಕ ಸಾಧನಗಳನ್ನು ಬಳಸಿ ಮಾಹಿತಿ ಸಂಗ್ರಹಿಸುವ ಪ್ರಬುದ್ಧರಾಗಿದ್ದಾರೆ.
ಖಲೀಲಾ ಗಿಬ್ರಾನ್ ಹೇಳುತ್ತಾರೆ ಮಕ್ಕಳು ಬಾಣಗಳಿದ್ದಂತೆ, ನಾವು ಆ ಬಾಣಗಳನ್ನು ಹೂಡುವ ಬಿಲ್ಲಿದ್ದಂತೆ, ನಮಗಿಷ್ಟ ಬಂದಂತೆ ಅವರನ್ನು ಬಗ್ಗಿಸಲು ಯತ್ನಿಸಬಾರದು. ಅವರು ಉತ್ತಮ ರೀತಿಯಲ್ಲಿ ಬೆಳೆಯುವ ವಾತಾವರಣವನ್ನು ಕಲ್ಪಿಸಿಕೊಡಬೇಕು... ಆದರೀಗ ನಾವು ಮಾಡುತ್ತಿರುವುದೇನು? ಸದ್ಯ ನಾವೀಗ ಅಜ್ಜ ಅಜ್ಜಿಯರಾಗಿ ನಮ್ಮ ಮಾತನ್ನು
 ಮಗ ಸೊಸೆಯೇ ಕೇಳುವುದಿಲ್ಲ ಎಂದ ಮೇಲೆ ಮೊಮ್ಮಕ್ಕಳು ತಾನೇ ಏನು ಮಾಡಿಯಾವು?

ಮುದ್ದು ಮಕ್ಕಳಲಿ ಹೊರಗಡೆ ಬಯಲಲಿ
ಆಡುವ ಆಟವ ಮರೆತು ಕುಳಿತಿವೆ
ಮೂರೊತ್ತು ಟಿವಿ ಜಾಲದಲಿ ಸಿಲುಕಿವೆ.
 
ಗೊರೂರು ಅನಂತರಾಜು
ಹಾಸನ
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್, 
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ,
ಹಾಸನ - 573120

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...