ಶುಕ್ರವಾರ, ಸೆಪ್ಟೆಂಬರ್ 2, 2022

ಪ್ರೇಮ ಧರ್ಮ (ಸಣ್ಣ ಕತೆ) - ಮನು ವೈದ್ಯ

೧ 
ಅವನಿಗೆ ಎಚ್ಚರವಾದಾಗ  ಬೆಳಗಿನ 8 ಗಂಟೆ. ಹಾಸಿಗೆಯಿಂದ ಎದ್ದು ಒಮ್ಮೆ ಮೈ ಮುರಿದು, ತಾನಿದ್ದ ಎಂಟನೆ ಮಹಡಿಯಲ್ಲಿನ ರೂಮಿನ ಕಿಟಕಿಯ ಕರ್ಟನ್ ಸರಿಸಿ ಹೊರಗಡೆ ಇಣುಕಿದ. ಅದು ಚಳಿಗಾಲವಾದ್ದರಿಂದ, ಸುತ್ತಲೂ ತುಂಬಿದ ಇಬ್ಬನಿಯ ಪರದೆಯನ್ನು ಸರಿಸುತ್ತಾ ಸೂರ್ಯ ತನ್ನ ಪ್ರಖರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದ. ಹಾಗೇ ಜೋರಾಗಿ ಆಕಳಿಸುತ್ತಾ, ತಾನಿದ್ದ ಹಾಸಿಗೆಯಡೆ ತಿರುಗಿ ನೋಡಿದ.. ಅವಳಿನ್ನೂ ಮಲಗೇ ಇದ್ದಾಳೆ. ಹಾಗೇ ಅವಳ ಹತ್ತಿರ ಕುಳಿತು, ಅವಳ ತುಂಬು ಕೂದಲನ್ನು  ನೇವರಿಸುತ್ತಾ, ಅವಳ ಹಣೆಯ ಮೇಲೊಮ್ಮೆ ಚುಂಬಿಸಿದ. ಅವಳು ಮಲಗಿದಲ್ಲೇ ಸ್ವಲ್ಪ ಕೊಸರಾಡಿ, ಮುಚ್ಚಿದ ಕಣ್ಣನ್ನು ತೆರೆಯದೇ, "ಹೆಗಡೆ ಡಾರ್ಲಿಂಗ್.." ಎಂದು ಸಣ್ಣಗೆ ಕನವರಿಸಿದಳು. ಅವನು ಅದೊಂದು ರೀತಿಯಲ್ಲಿ ಸಂತೃಪ್ತಿಯ ಮುಗುಳು ನಗುವಿನೊಂದಿಗೆ, "ಇವಳಿಗಿನ್ನೂ ಸಕ್ಕರೆ ನಿದ್ದೆ, ಅಲ್ಲ..ಅಲ್ಲ... ರಾತ್ರಿ ಸುಖದಿಂದ ದಣಿದ ದೇಹಕ್ಕೆ ಬಂದ ಸುಖದ ನಿದ್ದೆ.." ಎಂದು ಅಂದುಕೊಳ್ಳುತ್ತಾ, ಅಲ್ಲೇ ಟೇಬಲ್ ಮೇಲಿದ್ದ ಸಿಗರೇಟ್ ಪ್ಯಾಕ್ ಗೆ ಕೈ ಚಾಚಿದ.. ಸಿಗರೇಟ್ ಒಂದನ್ನು ಹೊತ್ತಿಸಿಕೊಂಡು, ಕಿಟಕಿಯ ಮುಂದೆ ನಿಂತು ನೆಮ್ಮದಿಯ ಹೊಗೆ ಬಿಡುತ್ತಾ ನಿಂತುಕೊಂಡ 32 ರ ಯುವಕ ಪ್ರತೀಕ್ ಹೆಗಡೆ.. 
ಏನೂ ಅವಸರವಿಲ್ಲದಂತೆ, ಸಿಗರೇಟ್ ಸೇದುತ್ತಾ ನಿಂತಿರುವ ಅವನ ಭಂಗಿಯೇ ಹೇಳುತ್ತಿತ್ತು, ಹಿಂದೆಂದೂ ಕಾಣದ ಸಂತೋಷ, ಸಂತೃಪ್ತಿ ಯನ್ನು ಅವನು ಇಂದು ಅನುಭವಿಸುತ್ತಿದ್ದಾನೆ ಎಂದು.. ಅದಕ್ಕೆ ಸಾಕ್ಷಿಯೆಂಬಂತೆ, ಅವನ ಮುಖದಲ್ಲಿ‌ ಆ ಸಂತೃಪ್ತಿಯ ಅಲೆ, ಸಂತಸದ ಮುಗುಳು ನಗೆ ಎರಡೂ ಮೂಡಿ, ಹೊಸದೊಂದು ಕಳೆಯನ್ನು  ತಂದುಕೊಟ್ಟಿತ್ತು.. ಹಾಗೇ ಸಿಗರೇಟ್ ಹೊಗೆಯೊಂದಿಗೆ ಅವನ ಯೋಚನೆ ಸಾಗುತ್ತಿತ್ತು.. "ನನ್ನ ಇಂದಿನ ಈ ಸಂತಸಕ್ಕೆ, ಹಿಂದೆಂದೂ ಕಾಣದ ಸಂತೃಪ್ತಿಗೆ ಈ ರೀಟಾ ಫರ್ನಾಂಡಿಸ್ ಕಾರಣ.." ಎಂದು ಅಂದುಕೊಳ್ಳುತ್ತಾ ಹಾಸಿಗೆಯತ್ತ ನೋಡಿದ.. ಅವಳಿನ್ನೂ ನಿದ್ದೆಯಲ್ಲೇ ಇದ್ದಳು.. "ನೀನೇನಾದರೂ ನನ್ನ ಜೀವನದಲ್ಲಿ ಬರದೇ ಹೋಗಿದ್ದರೆ ನಾನು ಏನಾಗುತ್ತಿದ್ದೇನೋ..? ಥ್ಯಾಂಕ್ಸ್ ರೀಟಾ ಡಾರ್ಲಿಂಗ್.." ಎಂದು ಅವಳತ್ತ ನೋಡುತ್ತಾ, ಮನಸಲ್ಲೇ ಅಂದುಕೊಂಡ.. ಹಾಗೇ ಅವನ ಯೋಚನೆ ಗತಕ್ಕೆ ಸಾಗಿತು.. 
ಹತ್ತು ವರ್ಷಗಳ ಹಿಂದೆ ಆಗಷ್ಟೆ   MSW ಡಿಗ್ರಿ ಮುಗಿಸಿದ ಪ್ರತೀಕ್ ಗೆ ಜೀವನದ ಕುರಿತು ದೊಡ್ಡ, ದೊಡ್ಡ ಕನಸುಗಳಿದ್ದವು.. ಏನಾದರೂ ಸಾಧಿಸಬೇಕೆಂಬ ಛಲ. ಎಲ್ಲರಂತೆ ಹಣ ಗಳಿಸಿ, ಮನೆ ಕಟ್ಟುವಂತ ಸಾಧಾರಣ ಯೋಚನೆ ಅವನದಲ್ಲ.. ನೋಡಲು ಬಹಳ‌ ಸರಳವಾಗಿ, ಅತೀ ಸಾಮಾನ್ಯನಂತೆ ಇರುವ ಪ್ರತೀಕ್ ನ ವ್ಯಕ್ತಿತ್ವ, ವಿಚಾರ ಧಾರೆಗಳು ಇತರರಿಗಿಂತ ಭಿನ್ನವಾಗಿತ್ತು. ಸಮಾಜಕ್ಕೆ ತನ್ನಿಂದಾದ ಕೊಡುಗೆಯನ್ನು ಕೊಡಬೇಕು. ಆ ಮೂಲಕ ತನ್ನನ್ನು ತಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಲೋಚನೆ ಅವನದು. ಇದರ ಜೊತೆ ಸಾಹಿತ್ಯದ ಗೀಳು ಬೇರೆ ಇತ್ತು.. ತನ್ನ ಬರವಣಿಗೆಯಿಂದ ತಾನಂದುಕೊಂಡ ಕೆಲಸ ಸಾಧಿಸಬೇಕು ಎಂಬ ಕನಸನ್ನು ಹೊತ್ತು ತನ್ನ ವಿದ್ಯಾಭ್ಯಾಸ ಮುಗಿಸಿ ಹೊರ ಪ್ರಪಂಚಕ್ಕೆ ಕಾಲಿಟ್ಟ ಪ್ರತೀಕ್ ಗೆ ತಾನಂದುಕೊಂಡ ಕೆಲಸ ಅಷ್ಟು ಸುಲಭವಲ್ಲ ಎಂಬುದು ವರ್ಷವಾಗುವಷ್ಟರಲ್ಲೇ ತಿಳಿದು ಹೋಯಿತು.. ಸಾಹಿತ್ಯವೊಂದೇ ಹೊಟ್ಟೆ ತುಂಬಿಸಲಾರದು, ಉದ್ಯೋಗದ ಜೊತೆ, ಜೊತೆಗೆ ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪ್ರತೀಕ್ ಗೆ ಉದ್ಯೋಗವೇನೋ ಸಿಕ್ಕಿತ್ತು.. ಉದ್ಯೋಗದ ಒತ್ತಡದಲ್ಲಿ ಮೂರ್ನಾಲ್ಕು ವರ್ಷಗಳೇ ಕಳೆದಿದ್ದವು..ಆದರೆ ಅವನಂದುಕೊಂಡ ಕನಸು ಕನಸಾಗೇ ಉಳಿದಿತ್ತು.. ಕೆಲಸ ಜಾಸ್ತಿ, ಸಂಬಳ ಕಡಿಮೆ ಎಂಬಂತ ಉದ್ಯೋಗ..‌ಮೊದಲಿಂದಲೂ ಕಷ್ಟದಲ್ಲೇ ಬೆಳೆದ ಪ್ರತೀಕ್ ಗೆ ಕಷ್ಟವನ್ನು ಮೆಟ್ಟಿ ನಿಲ್ಲುವ ಮನಸ್ಥಿತಿ ಮೊದಲಿಂದಲೂ ಇತ್ತು.. ಯಾವುದಕ್ಕೂ ಹೆದರದೇ ಗರಿ ಬಿಚ್ಚಿ ಹಾರುತ್ತಿದ್ದ ತನ್ನ ಕನಸುಗಳಿಗೆ ಮತ್ತೆ ರೆಕ್ಕೆ ಪುಕ್ಕಗಳನ್ನು ಜೋಡಿಸಿಕೊಳ್ಳುತ್ತಾ, ಉದ್ಯೋಗವನ್ನು ಬದಲಿಸುತ್ತಾ ಸಾಗಿದ.. ಒಂದು ಹಂತದಲ್ಲಿ ತನ್ನ ಬರವಣಿಗೆಯ ಮೂಲಕ ಸ್ವಲ್ಪ ಮಟ್ಟಿಗೆ ಹೆಸರನ್ನು ಮಾಡಿದ.. ಹರಿಯುವ ನದಿಯಂತೆ ಹಾಗೇ ಮುನ್ನಡೆಯತೊಡಗಿದ್ದ.. ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುತ್ತಾ, ಬರವಣಿಗೆಯಲ್ಲಿಯೂ ಉನ್ನತಿ ಸಾಧಿಸುತ್ತಾ, ಒಂದೆರಡು ಕೃತಿಗಳನ್ನೂ ಬಿಡುಗಡೆ ಮಾಡಿದ ಪ್ರತೀಕ್..‌
ಆದರೆ ಜೀವನ ಯಾವಾಗಲೂ ಒಂದೇ ರೀತಿ ಇರುವುದಿಲ್ಲ.. ಕಾಲ ಬದಲಾಗುತ್ತಲೇ ಇರುವುದು.. ಇಷ್ಟೆಲ್ಲಾ ಮಾಡಿದ ಪ್ರತೀಕ್ ನ ಆರ್ಥಿಕ‌ ಸ್ಥಿತಿ ಪಾತಾಳಕ್ಕೇ ಇತ್ತು.. ಚಿಕ್ಕ ಮಟ್ಟದ ಉದ್ಯೋಗದಿಂದ ಆತನಿಗೆ ಬರುವ ಸಂಬಳ ಮಾತ್ರ ತುಂಬಾ ಕಡಿಮೆ.. ತನ್ನ ಕನಸಿನ ಸಾಕಾರಕ್ಕಾಗಿ ಉದ್ಯೋಗ ಬದಲಿಸುತ್ತಾ ಸಾಗಿದ ಅವನಿಗೆ ತನ್ನ ಉದ್ಯೋಗದ ಕುರಿತು ಚಿಂತೆ ಶುರುವಾಗಿದ್ದು, ಮನೆಯಲ್ಲಿ  ಆತನ ಮದುವೆ ಮಾತುಕತೆ ಪ್ರಾರಂಭಗೊಂಡಾಗಲೇ.. ಆಗಲೇ ಉದ್ಯೋಗ ಮಾಡುತ್ತಾ 7-8 ವರ್ಷಗಳೇ ಕಳೆದು ಹೋಗಿತ್ತು.. ಕೃಷಿ ಕುಟುಂಬದಿಂದ ಬಂದ ಪ್ರತೀಕ್ ಗೆ ಮನೆಯಲ್ಲಿ ತಕ್ಕ ಮಟ್ಟಿಗೆ ಕೃಷಿ ಭೂಮಿಯೇನೋ ಇತ್ತು..ಆದರೆ ಬ್ರಾಹ್ಮಣ ಕುಟುಂಬದವನಾಗಿದ್ದರಿಂದ, ಅದೆಷ್ಟೇ ಕೃಷಿ ಭೂಮಿಯಿದ್ದರೂ, ಹೆಣ್ಣು ಸಿಗಬೇಕೆಂದರೆ, ಬೆಂಗಳೂರಿನಲ್ಲಿ ದೊಡ್ಡ ಉದ್ಯೋಗವಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ಇತ್ತು.. ಆದರೆ ತನ್ನ ಕನಸಿನ ಸಾಕಾರಕ್ಕಾಗಿ ಬೆಂಗಳೂರನ್ನು ತೊರೆದು ತನ್ನ ಊರಾದ ಶಿವಮೊಗ್ಗಕ್ಕೆ ಬಂದು, ಒಂದು ಸಂಸ್ಥೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಪ್ರತೀಕ್ ಗೆ ಹೆಣ್ಣು ಸಿಗುವುದೇ ಕಷ್ಟವಾಗತೊಡಗಿತ್ತು.. 
ನಿಜವಾದ ಸಮಸ್ಯೆ ಪ್ರಾರಂಭವಾಗಿದ್ದೆ ಇಲ್ಲಿ.. 

ಪ್ರತೀಕ್ ಉದ್ಯೋಗದಲ್ಲಿರುವನೆಂದು ಹಲವಾರು ಹೆಣ್ಣಿನ ಜಾತಕಗಳೇನೋ ಬಂದವು..ಆದರೆ ಅವನು ಸ್ವಲ್ಪ ಕಪ್ಪು ಎಂದೋ, ಸಂಬಳ ಕಡಿಮೆ ಎಂಬ ಕಾರಣಕ್ಕೆ, ಮದುವೆಯಾಗಲು ಹಲವು ಹೆಣ್ಣಿನ ಮನೆಯವರು ತಿರಸ್ಕರಿಸಿದರು. ಇನ್ನೂ ಹಲವು ಜಾತಕ ಸರಿ ಇಲ್ಲವೆಂದು ತಿರಸ್ಕರಿಸಿದರು.. ಇನ್ನೂ ಕೆಲವು ಮದುವೆ ಆಗಿಬಿಡುವುದೋ ಎಂಬಲ್ಲಿಗೆ ಹೋಗಿ ತಿರಸ್ಕೃತವಾದವು.. ಹೀಗೆಯೇ ಎರಡು ಮೂರು ವರ್ಷಗಳು ಕಳೆದವೇ ಹೊರತು, ಪ್ರತೀಕ್ ಗೆ ಹೆಣ್ಣು ಮಾತ್ರ ಸಿಗಲಿಲ್ಲ.. ತನ್ನ ಜೀವನ ಸಂಗಾತಿಯಾಗುವವಳ ಕುರಿತು ಹಲವು ಕನಸುಗಳನ್ನು ಕಂಡಿದ್ದ ಪ್ರತೀಕ್ ಗೆ ಇದರಿಂದ ಮನಸ್ಸು ಸಾಕಷ್ಟು ನೊಂದಿತು.. ಹೆಣ್ಣು ಕೊಡುವ ಯಾರೂ ಈತನ ಗುಣದ ಬಗ್ಗೆಯಾಗಲೀ, ಇವನಲ್ಲಿರುವ ಕೌಶಲ್ಯದ ಬಗ್ಗೆಯಾಗಲೀ ವಿಚಾರಿಸದೇ, ಮದುವೆಯನ್ನು ಒಂದು ವ್ಯವಹಾರದಂತೆ ಮಾತುಕತೆ ಮಾಡುತ್ತಿದ್ದದ್ದು, ಉದಾತ್ತ ಧ್ಯೇಯಗಳನ್ನಿಟ್ಟುಕೊಂಡಿದ್ದ ಪ್ರತೀಕ್  ಗೆ ಬೇಸರ ತಂದಿತು.. "ಬ್ರಾಹ್ಮಣ ಜಾತಿಯ ಹುಡುಗಿಯರಿಗೆ ಹುಡುಗನ ಗುಣಕ್ಕಿಂತ, ಆತನ ಹಣ, ಅಂತಸ್ತು ಮುಖ್ಯ.." ಎಂದು ಆತನಿಗೆ ಬಲವಾಗಿ ಅನಿಸತೊಡಗಿತ್ತು.. ತನ್ನನ್ನು ಮದುವೆಯಾಗುವ ಹುಡುಗಿ ತನ್ನ ಗುಣವನ್ನು ನೋಡಿ ಇಷ್ಟಪಡಬೇಕು, ತನ್ನ ಸಾಧನೆಗೆ, ತನ್ನ ಕನಸಿಗೆ ನೀರೆರೆದು ಪ್ರೋತ್ಸಾಹಿಸುವವಳಾಗಿರಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವನಿಗೆ ತನ್ನ ಆಸೆಗೆ ತಣ್ಣೀರೆರೆಚಿದಂತಾಗಿ ಬಹಳ ನೊಂದುಕೊಂಡಿದ್ದ.. 
"ನಮ್ಮ ಜಾತಿ ಹುಡುಗೀರಿಗೆ ಸಿಕ್ಕಾಪಟ್ಟೆ ಸೊಕ್ಕು, ಅವ್ಕೆ ಗುಣ ಮುಖ್ಯ ಅಲ್ಲ, ಹಣ.. ಹಣ ಒಂದಿದ್ದರೆ, ಅವು ಮುಸ್ಲೀಂ ಹುಡುಗನ ಜೊತೆ ಬೇಕಾದ್ರೂ ಓಡಿ ಹೋಗ್ತ.. ನನ್ನ ಗುಣ ಇಷ್ಟಪಟ್ಟು ಬಪ್ಪ ಬೇರೆ ಜಾತಿ ಹುಡುಗಿ ಆದ್ರೂ ಅಡ್ಡಿಲ್ಲೆ, ನಾ ಅವ್ರನ್ನೇ ಮದ್ವೆ ಆಗ್ತೆ.." ಎಂದು ತನ್ನ ಅಪ್ಪ, ಅಮ್ಮನ ಮುಂದೆ ನೊಂದು ನುಡಿದಿದ್ದ ಪ್ರತೀಕ್.. 
"ಮಗಾ.. ಎಂತಕ್ಕೆ ಹೀಂಗೆ ಮಾತಾಡ್ತೆ, ಬೇರೆ ಜಾತಿ ಹುಡುಗೀರು, ನಮ್ಮ ಮನೆ ಸಂಪ್ರದಾಯಕ್ಕೆ ಹೊಂದಕಂಡು ಹೋಗ್ತ್ವಿಲ್ಲೆ.. ಅದರಲ್ಲೂ ಅವು ಮಾಂಸ, ಮಡ್ಡಿ ಎಲ್ಲಾ ತಿಂತ, ಬೇಡ.. ನಿಂಗೆ ನಮ್ಮ ಜಾತೀಲೆ ಚೊಲೋ ಹುಡುಗಿ ಸಿಕ್ತು.. ಎಲ್ಲದಕ್ಕೂ ಟೈಮ್ ಬರವು.." ಹೇಳಿ ಅವನ ಅಮ್ಮ ಸಮಾಧಾನ ಹೇಳಿದ್ದಳು.. ಪ್ರತೀಕ್ ಇದಕ್ಕೆ ಏನೂ ಮಾತಾಡದೇ ಹಾಗೇ ಹೊರಟುಹೋಗಿದ್ದ.. ಆದರೆ ಅವನ ಮನದ ವೇದನೆ ಮಾತ್ರ ಕಡಿಮೆಯಾಗಿರಲಿಲ್ಲ..
"ಈ ಬ್ರಾಹ್ಮಣ ಹುಡುಗಿಯರು ಕಾಲೇಜು, ಜಾಬ್ ಹೇಳಿ ಅವರಿವರ ಜೊತೆ ಚಕ್ಕಂದ ಆಡಿ, ಕೊನೆಗೆ ತುಂಬಾ ಸಾಚಾ ಅನ್ನೋ ತರ ಮನೆಯಲ್ಲಿ ತೋರಿಸಿದ, ಇಂಜಿನಿಯರ್, ಡಾಕ್ಟರ್ ಹುಡುಗನನ್ನು ಮದುವೆ ಆಗ್ತಾರೆ..‌ಅಲ್ಲಿ ಬಕ್ರಾ ಆಗೋದು ಮಾತ್ರ ನಮ್ಮ ಜಾತಿ ಹುಡುಗನೇ.." ಎಂದು ಅದೆಷ್ಟೋ ಸಲ ತನ್ನ ಗೆಳೆಯರೊಂದಿಗೆ ತನ್ನ ಜಾತಿಯ ಗುಣಗಾನ ಮಾಡಿದ್ದ ಪ್ರತೀಕ್..
ಇದೀಗ ಪ್ರತೀಕ್ ನ ಮನಸ್ಸು ನಿರಾಸೆಯ ಕರಿಮೋಡದಿಂದಲೇ ತುಂಬಿಕೊಂಡಿತ್ತು.. ವಯಸ್ಸು 30 ದಾಟಿದರೂ ಮದುವೆಯಿಲ್ಲ.. ಉದ್ಯೋಗದಲ್ಲೂ ಉನ್ನತಿಯಿಲ್ಲ.. ಕಷ್ಟಗಳು, ಸಮಸ್ಯೆಗಳ ಸುರಿಮಳೆಯೇ ಸುರಿಯತೊಡಗಿತ್ತು.. ಇದರಿಂದ ನಿಧಾನವಾಗಿ ಕುಡಿತದತ್ತ ವಾಲಿದ.. ಸಿಗರೇಟ್ ಅಭ್ಯಾಸ ಅಂಟಿಕೊಂಡಿತು.. ಬ್ರಾಹ್ಮಣ ಹುಡುಗಿಯರೆಂದರೆ ಸಾಕು ಉರಿದು ಬೀಳತೊಡಗಿದ.. ಇದೇ ಸಂದರ್ಭದಲ್ಲಿ ಅವನು ಮತ್ತೆ ಉದ್ಯೋಗ ಬದಲಾಯಿಸಿದ್ದ.. ಇದೀಗ ಸಿಕ್ಕ ಉದ್ಯೋಗದಲ್ಲಿ, ಸಂಬಳ ತಕ್ಕಮಟ್ಟಿಗೆ ಒಳ್ಳೆಯದಿತ್ತು.. ಇದೀಗಲಾದರೂ ಮದುವೆಯಾಗಬಹುದೆಂಬ ಆಸೆ ಮತ್ತೆ ಚಿಗುರೊಡೆಯುತ್ತಿರುವಾಗಲೇ, ಮತ್ತೆ, ಅದೇ ಹಳೆಯ ರಾಗ, ಮತ್ತದೇ ಹುಡುಗಿಯರ ಸಮಸ್ಯೆ.. ಮತ್ತೆ ಹಲವು ಪ್ರೊಪೋಸಲ್ ಬಂದವು ಹೋದವು..ಆದರೆ ಮದುವೆ ಮಾತ್ರ  ಕೈಗೆಟುಕದ ದ್ರಾಕ್ಷಿಯಾಗಿತ್ತು..
ಅವನ ತಾಳ್ಮೆಯ ಕಟ್ಟೆ ಒಡೆದಿತ್ತು.. ಬೇರೆ ಜಾತಿಯಾದರೂ ಸರಿ, ತನ್ನನ್ನು ಇಷ್ಟಪಟ್ಟು ಬರುವ ಹುಡುಗಿಯನ್ನು ಮದುವೆ ಆಗಿಬಿಡಬೇಕು ಎಂದು ನಿರ್ಧಾರ ಮಾಡಿದ್ದ.. ಆಗಲೇ ಅವನಿಗೆ ತಾನು ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಸಂಸ್ಥೆಯಲ್ಲಿ ರೀಟಾಳ ಪರಿಚಯವಾಗಿದ್ದು..‌ರೀಟಾ, ಪ್ರತೀಕ್ ನ ಬರವಣಿಗೆಗೆ ಅಭಿಮಾನಿಯಾಗಿದ್ದಳು, ಅವನು ಬರೆದ ಪ್ರತಿಯೊಂದು, ಲೇಖನ, ಕಥೆ, ಕವನಗಳನ್ನು ತಪ್ಪದೇ ಓದಿ ಪ್ರೋತ್ಸಾಹಿಸುತ್ತಿದ್ದಳು..ನೋಡಲು ಎರಕಹೊಯ್ದ ಗೊಂಬೆಯಂತಿದ್ದಳು.. ಸೌಂದರ್ಯಕ್ಕೆ ತಕ್ಕ ಗುಣ.. ಪ್ರಾಮಾಣಿಕತೆ ಹಾಗೂ ನೇರ ನುಡಿಯ ಪ್ರತೀಕ್ ನ ವ್ಯಕ್ತಿತ್ವ ಹಾಗೂ ಅವನ ಬರವಣಿಗೆ ಇವೆಲ್ಲವೂ ಅವಳಿಗೆ ತುಂಬಾ ಇಷ್ಟವಾಗಿತ್ತು.. ಪ್ರತೀಕ್ ಕೂಡ ಅವಳಿಗೆ ಮನಸೋತಿದ್ದ.. ಪ್ರೇಮಕ್ಕೆ ಯಾವ ಜಾತಿ..? ಅದಕ್ಕೆ ಯಾವ ಪರಿಧಿ..? ಒಟ್ಟಿನಲ್ಲಿ ಇಬ್ಬರ ಮನಸ್ಸು ಒಂದಾಗಿತ್ತು.. ಹೃದಯಗಳು ಬೆರೆತಿತ್ತು.. ಮದುವೆಯೆಂಬ ಸಾಮಾಜಿಕ ಬಂಧನವೊಂದು ಬಾಕಿಯಿತ್ತು.. 
ಆ ದಿನ ಅದೇನೋ ಕೆಲಸದ ಮೇಲೆ ಹೊರಗಡೆ ಹೋಗಿದ್ದ ಇಬ್ಬರೂ ಶಿವಮೊಗ್ಗಕ್ಕೆ ಹಿಂದಿರುಗುವಾಗ ತಡರಾತ್ರಿ ಆಗಿತ್ತು.. ಇನ್ನೇನು ಮಾಡುವುದು ಎಂದು ಶಿವಮೊಗ್ಗದಲ್ಲೇ ಒಂದು ಲಾಡ್ಜ ಬುಕ್ ಮಾಡಿದರು.. ಆ ರಾತ್ರಿ ಅವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದರು.. ಇಬ್ಬರೂ ಪ್ರೇಮದಲಿ ಒಂದಾಗಿದ್ದರು..

ಅದರ ಪರಿಣಾಮವೇ ಇದೀಗ ಪ್ರತೀಕ್ ಮುಖದಲ್ಲಿನ ಸಂತೃಪ್ತಿ, ಸಂತೋಷಕ್ಕೆ ಕಾರಣ..‌ ಅದು ಕಾಮ ವಾಂಛೆಯ ಸಂತೃಪ್ತಿಯಲ್ಲ.. ಅವಳನ್ನು ಅನುಭವಿಸಿದ ಸಂತೋಷವೂ ಅಲ್ಲ.. ಅದೆಲ್ಲವನ್ನೂ ಮೀರಿದ್ದು.. ಪ್ರೇಮದಲಿ ಒಂದಾದ ಇಬ್ಬರು ಪ್ರೇಮಿಗಳ ಶೃಂಗಾರ ಕಾವ್ಯವೇ ಇದು.. ಪ್ರತೀಕ್ ಯೋಚನೆಯಲ್ಲಿ ಮುಳುಗಿದ್ದ.. ಅವನು ಹಿಡಿದಿದ್ದ ಸಿಗರೇಟ್ ಚಿಕ್ಕದಾಗುತ್ತಾ ಬಂದು ಅವನ ತೋರುಬೆರಳನ್ನು ಸುಟ್ಟಾಗ ಇಹಲೋಕಕ್ಕೆ ಬಂದ.. ಅಷ್ಟರಲ್ಲಿ ರೀಟಾ ನಿದ್ದೆಯಿಂದೆದ್ದು ಬಂದು ಅವನನ್ನು ಹಿಂದಿನಿಂದ ತಬ್ಬಿಕೊಂಡು, "ಹೆಗಡೆ ಡಾರ್ಲಿಂಗ್ ಏನು ಯೋಚನೆ ಮಾಡ್ತಾ ಇದಿಯಾ..?" ಎಂದಳು..
"ಏನಿಲ್ಲ ಚಿನ್ನಾ, ಇಷ್ಟು ದಿನ ಶೃಂಗಾರ ಕಾವ್ಯವನ್ನು ಕಲ್ಪನೆಯಲ್ಲಿ ಬರೆಯುತ್ತಿದ್ದೆ, ನಿನ್ನೆ ಅದರ ಅನುಭವ ಆಯ್ತು..ಅದನ್ನೇ ಯೋಚಿಸುತ್ತಾ ಇದ್ದೆ.." ಎಂದು ಅವಳನ್ನು ನೋಡಿ ಮುಗುಳ್ನಕ್ಕ..
"ಛಿ.. ಹೋಗು, ನಿಂಗೆ ಸ್ವಲ್ಪಾನೂ ನಾಚಿಕೆನೇ ಇಲ್ಲ, ಅಲ್ವಾ ಕವಿರಾಯ, ರಸಿಕ ರಾಜ.." ಎಂದಳು ಹುಸಿಕೋಪ ನಟಿಸುತ್ತಾ ಮುದ್ದಿನಿಂದ..
ಹಾಗೇ ಪ್ರತೀಕ್ ಅವಳ ಮುಖವನ್ನು ತನ್ನ ಅಂಗೈಯಲ್ಲಿ ಹಿಡಿದು,ಅವಳ ಹಣೆಯ ಮೇಲೊಂದು ಹೂ ಮುತ್ತನ್ನಿಟ್ಟು, "I Love You Reeta"  ಎಂದು ಪಿಸುಗುಟ್ಟಿದ..
"Love You too Darling.." ಎಂದು ಅವಳು ಪ್ರತಿ ನುಡಿದಳು..
"ರೀಟಾ ನಮ್ಮಿಬ್ಬರ ಜಾತಿ, ಧರ್ಮ ಬೇರೆ, ಬೇರೆ.. ಮದುವೆಯಾಗಲು ಸಾವಿರ ಸಮಸ್ಯೆ ಬರಬಹುದು, ಏನೇ ಆದರೂ ನೀ ನನ್ನ ಕೈ ಬಿಡಲ್ಲ ಅಲ್ವಾ..?" ಎಂದು ಆತ್ಮೀಯತೆಯ ಭಾವದಿಂದ ಕೇಳಿದ ಪ್ರತೀಕ್..
"ಇಲ್ಲ ಕಣೋ, ಅದೆಷ್ಟೇ ಕಷ್ಟ ಬರಲಿ, I am yours.., ನಾನು ಯಾವತ್ತಿದ್ದರೂ ನಿನ್ನವಳು.." ಎಂದು  ದೀರ್ಘವಾದ ನಿಟ್ಟುಸಿರು ಬಿಡುತ್ತಾ ಅವನ ಎದೆಯ ಮೇಲೆ ಒರಗಿದಳು.. 
'ನಾನೂ ಕೂಡ ನಿನ್ನವನೇ..' ಎಂಬಂತೆ ಅವಳ‌ ತಲೆಯನ್ನು ಪ್ರೀತಿಯಿಂದ ನೇವರಿಸಿದ.. 
ಆದರೆ ಅಂದುಕೊಂಡಂತೆ ಯಾವುದೂ ನಡೆಯಲಾರದು.. ಅವರ ಇಂದಿನ ಈ ಸಂಗಮ ಮುಂದೆ ಯಾವುದಕ್ಕೆ ದಾರಿ ಮಾಡಿಕೊಡುತ್ತದೋ ಕಾಲವೇ ನಿರ್ಧರಿಸಬೇಕು...!

*ಮುಂದುವರೆಯುವುದು*

- ಮನು ವೈದ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...