ಮಂಗಳವಾರ, ಆಗಸ್ಟ್ 10, 2021

ತಾಯಿಯ ಎದೆಹಾಲೇ ನಿಜವಾದ ಅಮೃತ:( ವಿಶ್ವ ಸ್ತನಪಾನ ಸಪ್ತಾಹ ದಿನದ ಕುರಿತ ಲೇಖನ). - ಹನುಮಂತ ದಾಸರ, ಹೊಗರನಾಳ.

ತಾಯಿಯ ಎದೆಹಾಲೇ ನಿಜವಾದ ಅಮೃತ:
( ವಿಶ್ವ ಸ್ತನಪಾನ ಸಪ್ತಾಹ ದಿನದ ಕುರಿತು).

"ಹಣ್ಣು-ಹಂಪಲಿಗಿಂತ, ಬೆಣ್ಣೆ-ತುಪ್ಪಗಿಂತ,
ಎಳನೀರು-ರುಚಿಗಿಂತ, ಕಬ್ಬಿನ ರಸಕ್ಕಿಂತ
ಸಕ್ಕರೆ-ಸಿಹಿ ಬೆಲ್ಲಕ್ಕಿಂತ, ಮಧುರ-ಮಂದಾರಕ್ಕಿಂತ
ನಿನ್ನ ಹಾಲು ಅಮೃತವಂತೆ ಮಹಾತಾಯಿ
ನಿನ್ನ ಹಾಲು ಬಹು ರುಚಿಯಂತೆ".....!!

ಮೇಲಿನ ನುಡಿಗಳಂತೆ ತಾಯಿಯ ಎದೆ ಹಾಲಿಗೆ ಎಷ್ಟೊಂದು ಮಹತ್ವ ಮತ್ತು ಅವಶ್ಯಕವಾಗಿದೆ ಎಂಬುದು ತಿಳಿಯುತ್ತದೆ.
ಒಂದು ಹೆಣ್ಣು ತಾನು ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆಯೇ ಅವಳ ದೇಹದಲ್ಲಿ ಮತ್ತೆ ಅವಳ ನಡವಳಿಕೆ, ಚಲನವಲನಗಳು ಹಾಗೂ ಭಾವನೆಗಳು ಬೇರೆ ಬೇರೆ ರೀತಿಯಲ್ಲಿ ಬದಲಾಗುತ್ತವೆ ಮತ್ತು ಸೂಕ್ಷ್ಮತೆಯ  ನಡವಳಿಕೆಗಳೂ ಕೂಡ ಬದಲಾಗತೊಡಗುತ್ತವೆ.
ಹೆಣ್ಣು ಪ್ರೌಢಾವಸ್ಥೆಗೆ ಬಂದಾಗ ಹೆಣ್ಣಿಗೆ ಪ್ರತಿಯೊಂದು ಅಂಗಾಂಗಗಳಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಮುಖ್ಯವಾಗಿ ಹೆಣ್ಣು ತಾನು ಬಾಲ್ಯವಸ್ಥೆಯನ್ನು ದಾಟಿ ಪ್ರೌಢಾವಸ್ಥೆಗೆ ಬರುತ್ತಿದ್ದಂತೆ ಹೆಣ್ಣಿಗೆ ಸ್ತನ ಮೂಡಲು ಶುರುವಾಗುತ್ತವೆ ಮತ್ತು ದೈಹಿಕ ಬದಲಾವಣೆಗಳು ಕಾಣುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆ ಅವಳು ಬೆಳೆಯುತ್ತಿದ್ದಂತೆ ಅವಳಲ್ಲಿ ತಾಯ್ತನದ ಆಶೆ-ಆಕಾಂಕ್ಷೆಗಳು ಮೂಡತೊಡಗುತ್ತವೆ. ಹೆಣ್ಣಿನ ಪ್ರತೀ ಮಾಸದ ಋತುಮತಿಯ ಕ್ಷಣವೂ ಕೂಡ ಹೆಣ್ಣಿಗೆ ಅತೀ ಅವಶ್ಯಕವಾದದ್ದು ಮತ್ತು ಋತುಮತಿಯ ಕ್ಷಣವೂ ಕೂಡ ಹೆಣ್ಣಿನ ಬೆಳವಣಿಗೆಗೆ ಮತ್ತು ಅವಳ ದೈಹಿಕ ಬೆಳವಣಿಗೆಗೆ ಪೂರಕವಾಗುವ ಹಲವಾರು ಲಾಭದಾಯಕ ಪ್ರೋಟೀನುಗಳು, ವಿಟಾಮಿನ್ ಗಳು, ಹಾಗೂ ಅಂಡಾಣುಗಳು ಕೂಡ  ಉತ್ಪತ್ತಿಯಾಗುತ್ತವೆ.
ಮೊದಲು ಹೆಣ್ಣು  ಮಗುವಾಗಿ/ಶಿಶುವಾಗಿ ಕಂಡು, ಮುಂದೆ ವಧುವಾಗಿ, ಗಂಡನಿಗೆ ಹೆಂಡತಿಯಾಗಿ ತದನಂತರ ಮಗುವಿಗೆ ಒಬ್ಬ ತಾಯಿಯಾಗಿ ಜಗತ್ತಿಗೆ ತನ್ನ ಮಹತ್ವವನ್ನು ತಿಳಿಸುತ್ತಾಳೆ. ಹೀಗೆ ಹೆಣ್ಣು ತನ್ನ ಕಾಲಚಕ್ರವನ್ನು, ಜೀವನಪಯಣವನ್ನು ಪ್ರಾರಂಭಿಸುತ್ತಾಳೆ.
ನವಜಾತ ಶಿಶುವಿಗೆ ತಾಯಿಯ ಹಾಲು ಎಷ್ಟೊಂದು ಉಪಯುಕ್ತ ಮತ್ತು ಅವಶ್ಯಕವೆಂದರೇ, ಅದೊಂದು ವಿಷವಿರದ/ವಿಷಬೆರೆಸದ ಹಾಗೂ ಮಿಶ್ರಣ ಮಾಡದಂತಹ ಅಮೃತವೂ ಹೌದು. ಈ ಅಮೃತಕ್ಕಿಂತ ಶ್ರೇಷ್ಠವಾದದ್ದು ಬೇರೊಂದಿಲ್ಲ. ಏಕೆಂದರೇ ತಾಯಂದಿರ ಎದೆಹಾಲು ಪೌಷ್ಠಿಕ, ಲಾಭದಾಯಕ, ಮಗುವಿನ ಜೀವನಾಮೃತ ಹಾಗೂ ಮಗುವಿಗೆ ಹಾಲುಣಿಸಿದಾಗ ಹಲವಾರು ವಿಟಮಿನ್ ಮತ್ತು ಪ್ರೊಟೀನ್ ಗಳು ಎದೆಯ ಹಾಲಿನ ಮೂಲಕ ಮಗುವಿಗೆ ತಲುಪಿ ಮಗುವನ್ನು ಆರೋಗ್ಯಯುತವಾಗಿ ಇರಲು ಸಹಾಯಮಾಡುತ್ತದೆ ಮತ್ತು ಮಗುವಿಗೆ ತಾಯಿ ಎದೆ ಹಾಲುಣಿಸುವುದರಿಂದ ಅವಳಿಗೂ ಉಪಯೋಗವಿದೆ ಎನ್ನುವುದಕ್ಕೆ ಹಲವಾರು ವೈಜ್ಞಾನಿಕ ಕಾರಣಗಳಿವೆ.
ತಾಯಿಯ ಎದೆ ಹಾಲು ಅತೀ ಪೌಷ್ಠಿಕತೆಯಿಂದ ಮತ್ತು ಸಂಪೂರ್ಣ ಸುರಕ್ಷತೆಯಿಂದ ಹಾಗೂ ಸರಳವಾಗಿ ಯಾವುದೇ ತೊಂದರೆಗಳಿಲ್ಲದೇ ,ಬೇರಾವುದೇ ಅಡ್ಡಪರಿಣಾಮಗಳಿಲ್ಲದೆ, ಯಾವುದೇ ಮಿಶ್ರಿತಗೊಂಡಿರದೇ ಸರಳಾವಾಗಿ ಜೀರ್ಣವಾಗುವ ಮೂಲಕ ಮಗು ಮತ್ತು ತಾಯಿ ಇಬ್ಬರ ಆರೋಗ್ಯವನ್ನು ಹೆಚ್ಚಿಸುತ್ತದೆ.

ತಾಯಿಯ ಹಾಲಿನಲ್ಲಿ ಮಗುವಿಗೆ ದೊರೆಯುವ ಮೂಲಾಂಶಗಳು:
ತಾಯಿಯ ಹಾಲಿನಲ್ಲಿ ಮಗುವಿಗೆ ಎಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಬೇಕಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ದೊರೆಯುವಂತೆ ಸಹಕರಿಸುತ್ತದೆ.
ಕಾರ್ಬೋಹೈಡ್ರೇಟ್ ಗಳು, ಪ್ರೊಟೀನ್ ಗಳು, ಮೇದಸ್ಸು, ಜೀವಸತ್ವಗಳು, ಲವಣಾಂಶ, ರೋಗನಿರೋಧಕ ಅಂಶಗಳು ಮತ್ತು ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ.87%ರಷ್ಟು ನೀರಿನಾಂಶ ತಾಯಿಯ ಎದೆ ಹಾಲಿನಿಂದ ಮಗುವಿಗೆ ಸಿಗುತ್ತದೆ. ಇವೆಲ್ಲಾ ಅಂಶಗಳು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ.

ಎದೆ ಹಾಲಿನಿಂದ ಮಗುವಿಗೆ ಸಿಗುವ ಲಾಭಗಳು:
* ಮಾನಸಿಕ, ದೈಹಿಕ, ಹಾಗೂ ಸಾಮಾಜಿಕ ಬೆಳವಣಿಗೆಗೆ ಅವಶ್ಯಕವಾಗಿರುತ್ತದೆ.
* ವಾಂತಿ,ಭೇದಿ, ಮಲಬದ್ಧತೆ, ಅಲರ್ಜಿ, ಕಿವಿ ಸೋರುವುದು, ಶ್ವಾಸಕೋಶದ ರೋಗಗಳನ್ನು ತಡೆಗಟ್ಟುತ್ತದೆ.
* ಮಗು ಬೇಗನೆ ನಡಿಯಲು ಸಹಕಾರಿಯಾಗುತ್ತದೆ.
* ಮಕ್ಕಳ ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ.
* ರಕ್ತದ ಕ್ಯಾನ್ಸರ್, ಸಕ್ಕರೆ ರೋಗ, ರಕ್ತದೊತ್ತಡ ಮತ್ತು ಬೊಜ್ಜುತನವನ್ನು ತಡೆಗಟ್ಟುತ್ತದೆ.

ಮಗುವಿಗೆ ಹಾಲುಣಿಸುವುದರಿಂದ ತಾಯಿಗೆ ಸಿಗುವ ಲಾಭಗಳು:
* ಸ್ತನಪಾನದಿಂದ ತಾಯಿ ಮತ್ತು ಮಗುವಿನ ನಡುವೆ ಬಾಂಧವ್ಯ ಬೆಳೆಯುತ್ತದೆ.
* ತಾಯಿಗೆ ಮಾನಸಿಕ ತೃಪ್ತಿ ದೊರೆಯುತ್ತದೆ.
* ಬಾಣಂತಿಯರಲ್ಲಿ ರಕ್ತಸ್ರಾವ ಕಡಿಮೆಗೊಳಿಸಿ ಗರ್ಭಾಶಯವನ್ನು ಸದೃಢಗೊಳಿಸಿ ಸಹಜಸ್ಥಿತಿಗೆ ತರುವಲ್ಲಿ ಸಹಕರಿಸುತ್ತದೆ.
* ತಾಯಂದಿರಲ್ಲಿ ಹೆಚ್ಚಿರುವ ಅತಿಯಾದ ಕೊಬ್ಬಿನಾಂಶ ಮತ್ತು ಬೊಜ್ಜುತನವನ್ನು ಕರಗಿಸಲು ಸಹಕರಿಸುತ್ತದೆ.
* ಗರ್ಭನಿರೋಧಕ ಶಕ್ತಿಯ ಕಾರ್ಯವನ್ನು ಹೆಚ್ಚಿಸುತ್ತದೆ.
* ಎದೆ ಹಾಲಿನಿಂದ ತುಂಬಿದ ಸ್ತನಗಳು ಗಂಟಾಗಿ ನೋವಾಗೋ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
* ಸ್ತನದ ಮತ್ತು ಅಂಡಾಶಯದ ಕ್ಯಾನ್ಸರ್ ಸಂಭವವನ್ನು ಕಡಿತಗೊಳಿಸುತ್ತದೆ.

ಮಗುವಿಗೆ ತಾಯಿ ಹಾಲುಣಿಸುವ ವಿಧಾನಗಳು:
* ಮೊದಲು ಮೊಲೆಯನ್ನು ಬಿಸಿನೀರಿನಿಂದ ತೊಳೆದು ಶುಚಿಯಗೊಳಿಸಬೇಕು.
* ಮೊಲೆಯ ತುದಿಯನ್ನು ಸರಿಯಾಗಿ ತೊಳೆದು ಹಾಲುಣಿಸಬೇಕು ಏಕೆಂದರೇ ತುದಿಯ ಭಾಗಕ್ಕೆ ಬಟ್ಟೆಯ ಎಲೆಗಳು ಹಾಗೂ ತೊಟ್ಟು ಕುಳಿತುಕೊಂಡಿರುತ್ತದೆ.
* ಮೊಲೆ ಮತ್ತು ಅದರ ಹಿಂಭಾಗದ ಕಪ್ಪು ಭಾಗ ಆದಷ್ಟು ಮಗುವಿನ ಬಾಯೊಳಗಿರುವಂತೆ ಹಾಲುಣಿಸಬೇಕು ಹಾಗಾದರೆ ಮಾತ್ರ ತಾಯಿಯ ಎದೆಹಾಲು ಸರಳವಾಗಿ ಮಗುವಿನ ಗಂಟಲಿಗೆ ಇಳಿಯಲು ಸಾಧ್ಯವಾಗುತ್ತದೆ.
* ತಾಯಿ ಹಾಲುಣಿಸುವಾಗ ಸರಿಯಾಗಿ ಮಗುವನ್ನು ಎರೆಡೂ ಕೈಗಳಿಂದ ತನ್ನ ಎದೆಗೆ ಅಪ್ಪಿಕೊಂಡಿರಬೇಕು.
* ಮಗುವಿನ ಹೊಟ್ಟೆ ತಾಯಿಯ ಹೊಟ್ಟೆಗೆ ಅಂಟಿಕೊಂಡಿರುವಂತೆ ಹಾಲುಣಿಸಬೇಕು.
* ಮಗುವಿನ ಮೂಗು ತಾಯಿಯ ಮೊಲೆಯಿಂದ ಬ್ಲಾಕ್ ಆಗದಂತೆ ಅಥವಾ ಮಗುವಿನ ಉಸಿರಾಟಕ್ಕೆ ತೊಂದರೆಯಾಗದಂತೆ ತಾಯಿ ಹಾಲುಣಿಸುವಾಗ ತನ್ನ ಮಗುವಿನ ಕಡೆಗೆ ಗಮನಹರಿಸಬೇಕು.
* ಮಗು ತನ್ನ ಕೈಯಿಂದ ಮೊಲೆಯನ್ನು ಹಿಡಿದು ಹಾಲು ಕುಡಿಯುತ್ತಿದ್ದರೇ ಅದು ಸರಾಗವಾಗಿ ಕುಡಿಯುತ್ತದೆ ಎಂದರ್ಥ.
* ಹಾಗೂ ಮಗು ಹಾಲನ್ನು ನುಂಗುವಾಗ 'ಕ್' ಎಂಬ ಶಬ್ದ ಮಾಡುವುದನ್ನು ತಾಯಿ ಆಲಿಸಬೇಕು.
* ತಾಯಿ ಕುಳಿತುಕೊಂಡು ಅಥವಾ ಮಲಗಿಯೂ ಕೂಡ ಹಾಲು ಕುಡಿಸಬಹುದು ಮತ್ತು ವ್ಯರ್ಥವಾಗದಂತೆ ನೋಡಿಕೊಳ್ಳಬೇಕು.

ಹೆರಿಗೆಯ ನಂತರ ತಾಯಿಗೆ ಬೇಕಾಗುವ ಆಹಾರ ಪದ್ಧತಿ:
* ಹೆರಿಗೆ ನಂತರದ ಸಮಯದಲ್ಲಿ ತಾಯಿಗೆ ದಿನಾಲು 500ಗ್ರಾ0.ನಷ್ಟು ಹೆಚ್ಚಿನ ಶಕ್ತಿಯುತವಾದ ಆಹಾರ ಬೇಕಾಗುತ್ತದೆ.
* 25ಗ್ರಾ.ನಷ್ಟು ಪ್ರೊಟೀನ್ ಹಾಗೂ 15ಗ್ರಾ. ನಷ್ಟು ಫ್ಯಾಟ್,ವಿಟಾಮಿನ್ ಗಳು ಹಾಗೂ ಐರನ್ ಮತ್ತು ಕ್ಯಾಲ್ಸಿಯಮ್ ಯುಕ್ತ  ಪದಾರ್ಥಗಳನ್ನು ಹಾಗೂ ಹೆಚ್ಚಿನ ಲವಣಾಂಶಭರಿತ ಪದಾರ್ಥಗಳನ್ನು ನೀಡಬೇಕು.
* ಹಣ್ಣು-ಹಂಪಲುಗಳನ್ನು, ತರಕಾರಿ-ಸೊಪ್ಪುಗಳನ್ನು ತಿನ್ನಬೇಕು ಮತ್ತು ಬೇಳೆ-ಕಾಳು ಹಾಗೂ ಮೊಳಕೆ ಕಾಳುಗಳನ್ನು ತಿನ್ನಬೇಕು.
* ಉತ್ತತ್ತಿ, ಕೊಬ್ಬರಿ-ಬೆಲ್ಲ ಹಾಗೂ ಗೋಡಂಬಿ-ದ್ರಾಕ್ಷಿಯಂತಹವುಗಳನ್ನು ಅತಿಯಾಗಿ ತಿನ್ನಬೇಕು.
* ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಆಗಾಗ ಪಡೆಯಬೇಕು, ಮೀನು-ಮಾಂಸಗಳನ್ನು ತಿನ್ನಬೇಕು.
* ಆಹಾರದಲ್ಲೇ ಎಲ್ಲಾ ವಿಟಾಮಿನ್ ಗಳು ದೊರೆಯದಿರುವ ಕಾರಣ ಕ್ಯಾಲ್ಸಿಯಂ, ಐರನ್ ಮತ್ತು ಮಲ್ಟಿ ವಿಟಾಮಿನ್ ಮಾತ್ರೆಗಳನ್ನು 3 ತಿಂಗಳುಗಳವರೆಗೆ ತೆಗೆದುಕೊಳ್ಳಬೇಕು.
* ದಿನಾಲು 2 ರಿಂದ 3 ಲೀಟರ್ ನೀರು ಕುಡಿಯಲೇಬೇಕು ಏಕೆಂದರೇ ಹೆರಿಗೆಯಾದ ತಾಯಿಗೆ ಆಗಾಗ ಆಯಾಸವಾಗುವುದು, ಬಾಯಾರಿಕೆಯಾಗುವುದು ಜಾಸ್ತಿಯಾಗಿರುತ್ತದೆ.
* ಪ್ರಮುಖವಾಗಿ ತಾಯಂದಿರು ಹೆರಿಗೆಯಾದ ನಂತರದ ಕೆಲವು ದಿನಗಳವರೆಗೆ ವಿಶ್ರಾಂತಿ ಪಡೆಯಲೇಬೇಕಾಗಿರುತ್ತದೆ.
* ವೈದ್ಯರ ಸಲಹೆಯಿಲ್ಲದೆ ಬೇರೆ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವಂತಿಲ್ಲ. ಯಾಕೆಂದರೇ ಬೇರೆ ಯಾವುದೋ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ತಾಯಿಗೆ ಹಾಲಿನ ಉತ್ಪತ್ತಿ ಕಡಿಮೆಯಾಗುವ ಸಂಭವವಿರುತ್ತದೆ.
* ವೈದ್ಯರ ಸಲಹೆ ಇಲ್ಲದೇ ಬೇರೆ ಯಾವುದೇ ಚುಚ್ಚುಮದ್ದನ್ನು ಕೂಡ ತೆಗೆದುಕೊಳ್ಳುವಂತಿಲ್ಲ.
- ಹೀಗೆ ತಾಯಿಯು ತನ್ನ ಹೆರಿಗೆಯ ನಂತರ ತನ್ನ ಮತ್ತು ಮಗುವಿನ ಆರೋಗ್ಯಕ್ಷೇಮಕ್ಕಾಗಿ ಮೇಲಿನ ಆಹಾರ ಪದ್ಧತಿ ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅವಳ ಮನೆಯ ಪ್ರತಿಯೊಬ್ಬ ಸದಸ್ಯರೂ ಕೂಡ ಅವಳಿಗೆ ಸಹಕರಿಸಬೇಕು.

ತಾಯಿಯು ನೀಡುವ ಎದೆ ಹಾಲಿನಿಂದ ಸಮಾಜದಲ್ಲಿ ಒಳಗೊಂಡಿರುವ ಸತ್ಯ-ಮಿಥ್ಯತೆಗಳು:
* ಮಿಥ್ಯ- ತಾಯಿಯು ತನ್ನ ಮಗುವಿಗೆ ಹಾಲುಣಿಸುವುದರಿಂದ ಅವಳ ಸೌಂದರ್ಯ ಕಡಿಮೆಯಾಗುತ್ತದೆ.
ಸತ್ಯ- ಅದು ಸುಳ್ಳು. ತಾಯಿ ತನ್ನ ಮಗುವಿಗೆ ಹಾಲುಣಿಸುವುದರಿಂದ ಇನ್ನಷ್ಟು ಕಾಂತಿ ಹೆಚ್ಚುತ್ತದೆ. ಹಾಗೂ ಅವಳ ಸೌಂದರ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವಯಸ್ಸು, ಜೀನ್ಸ್ ಹಾಗೂ ಅವರ ಆಹಾರದ ಪದ್ಧತಿಗಳ ಮೇಲೆ ಅವಳ ಸೌಂದರ್ಯ ಅವಲಂಬಿತವಾಗಿರುತ್ತದೆ.
* ಮಿಥ್ಯ- ತಾಯಿಯ ಹೆರಿಗೆಯ ನಂತರದಲ್ಲಿ ಬರುವ ಮೊದಲ ಹಾಲು ಕೆಟ್ಟದ್ದು ಮತ್ತು ಶುದ್ಧವಿರುವುದಿಲ್ಲ ಅದನ್ನು ಹಿಂಡಿ ಚೆಲ್ಲಬೇಕು.
ಸತ್ಯ- ತಾಯಿಯ ಮೊದಲ ಹಾಲು ಅದು ಹಳದಿ ದ್ರವ  ಕೊಲೋಸ್ಟ್ರಮ್  ಅಂಶ ಹೊಂದಿರುತ್ತದೆ. ಅದಕ್ಕೆ ಸೋಂಕುಗಳನ್ನು ರಕ್ಷಿಸುವ ಶಕ್ತಿಯಿರುತ್ತದೆ. ಇದು ರೋಗ ನಿರೋಧಕ ಲಸಿಕೆ ಮತ್ತು ಮಗು ಹುಟ್ಟಿದ ದಿನ ಮಗುವಿಗೆ ನೀಡುವ ಪ್ರಮುಖ ಚುಚ್ಚುಮದ್ದಿನಷ್ಟು ವಿಶೇಷತೆಯಾಗಿರುತ್ತದೆ.
* ಮಿಥ್ಯ- ಮೊದಲ 2 ದಿನ ಹಾಲು ಬರುವುದಿಲ್ಲ, ಅದಕ್ಕೆ ಮೊಲೆಯ ಹಾಲನ್ನು ಕುಡಿಸಬೇಡಿ ಮಗುವನ್ನು ಮೊಲೆಗೆ ಹಚ್ಚಬೇಡಿ, ಹಾಲಿನ ಪರವಾಗಿ ಬೆರೆ ಯಾವುದೋ ಪುಡಿಯನ್ನು ಕೊಡಬೇಕು.
ಸತ್ಯ- ಇದು ತಪ್ಪು. ಹುಟ್ಟಿದ ಮಗು 20 ರಿಂದ 60 ನಿಮಿಷ ಮಗು ಅತ್ಯಂತ ಚಟುವಟಿಕೆಯಿಂದ ಇರುತ್ತದೆ ಮತ್ತು ಮಗುವಿನ ಹಾಲಿನ ಹೀರುವಿಕೆಯ ಪ್ರಕ್ರಿಯೆಯೂ ಹೆಚ್ಚಿರುತ್ತದೆ. ಹೀಗಾಗಿ ಮಗುವಿಗೆ ಎಷ್ಟು ಬೇಗ ಹಾಲುಣಿಸುವಿರೋ ಅಷ್ಟು ಬೇಗ ತಾಯಿ-ಮಗುವಿನ ಸಂಪರ್ಕ ಹೆಚ್ಚಿ ಹಾಲು ಉತ್ಪತ್ತಿಯಾಗಿ ಸರಾಗವಾಗಿ ಹಾಲು ಹರಿಯುವುದಕ್ಕೆ ಸಹಕರಿಸುತ್ತದೆ.
* ಮಿಥ್ಯ- ಮಗುವಿಗೆ ಅವಾಗವಾಗ ಜೇನುತುಪ್ಪ, ನೀರು, ಸಕ್ಕರೆ ನೀರು ಕುಡಿಸುತ್ತಾ ಇರಬೇಕು.
ಸತ್ಯ- ಅದು ತಪ್ಪು. ತಾಯಿಯ ಹಾಲಿನಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಮಗುವಿಗೆ ನೀರು ಕುಡಿಸುವ ಅಗತ್ಯತೆ ಇರುವುದಿಲ್ಲ ಮತ್ತು ಮಗುವಿಗೆ ಬೇಕಾಗುವಷ್ಟು ಸಕ್ಕರೆ, ಸಸಾರಾಜನಕ, ಮೇದಸ್ಸು ಇರುವುದರಿಂದ ಬೇರೇನೂ ನೀಡುವ ಅವಶ್ಯಕತೆಯಿರುವುದಿಲ್ಲ.
* ಮಿಥ್ಯ- ಗಂಡು ಮಗುವಿನ ತಾಯಿ ನೀರು ಹೆಚ್ಚು ಕುಡಿಯಬಾರದು, ಮಗುವಿಗೆ ಹೊಟ್ಟೆ ನೋವಾಗುತ್ತದೆ.
ಸತ್ಯ- ನೀರು ಸಾಕಾಗುವಷ್ಟು ಕುಡಿಯಬಹುದು. ದಿನಾಲು 2 ರಿಂದ 3 ಲೀಟರ್ ನೀರು ಕುಡಿಯುವುದರಿಂದ ತಾಯಿಯ ಹಾಲು ಉತ್ಪತ್ತಿಗೆ ನೀರಿನಾಂಶ ಮುಖ್ಯವಾಗಿರುತ್ತದೆ.
* ಮಿಥ್ಯ- ತಾಯಿಗೆ ಜ್ವರ ಬಂದಾಗ ಮೊಲೆಯ ಹಾಲನ್ನು ಕುಡಿಸಬಾರದು.
ಸತ್ಯ- ಜ್ವರ ಬಂದಾಗಲೂ ಮಗುವಿಗೆ ಹಾಲನ್ನು ಕುಡಿಸಬಹುದು. ತಾಯಿ ಕೆಮ್ಮುವಾಗ ಮತ್ತು ಸೀನುವಾಗ ಮಗುವಿಗೆ ತನ್ನ ಉಸಿರು ತಾಕದಂತೆ ನೋಡಿಕೊಳ್ಳಬೇಕು.ಒಂದು ವೇಳೆ ತಾಯಿಯು ಜ್ವರದಿಂದ ತುಂಬಾ ಬಳಲುತ್ತಿದ್ದರೇ ಮನೆಯಲ್ಲಿರುವ ಯಾರಾದರೂ ಮೊಲೆಯ ಹಾಲನ್ನು ಹಿಂಡಿ ಮಗುವಿಗೆ ಕುಡಿಸಬೇಕು. 
ಮೊಲೆಯ ತುದಿಗೆ ಏನಾದರೂ ಗಾಯ ಅಥವಾ ಇನ್ಫೆಕ್ಷನ್ ಆದಾಗ ಅದು ಚಿಕಿತ್ಸೆಯಾಗಿ ವಾಸಿಯಾಗುವವರೆಗೂ ಮಗುವಿಗೆ ಹಾಲುಣಿಸಬಾರದು.
ಹಾಗೆಯೇ, ಟಿ. ಬಿ., ಜಾಂಡೀಸ್, ಕುಷ್ಠರೋಗ, ಮೊಲೆಯ ಕ್ಯಾನ್ಸರ್, ಎಚ್. ಐ. ವಿ. ಇದ್ದರೂ ಕೂಡ ಮಗುವಿಗೆ ಹಾಲು ಕುಡಿಸಬಹುದು.
ಜನನದ ಸಮಯದಲ್ಲಿ ಮಗುವಿಗೆ ತಾಯಿಯಿಂದ ಎಚ್. ಐ. ವಿ. ಸೋಂಕು ಮಗುವಿಗೆ ತಗುಲಬಹುದು ಆದರೇ ಹಾಲುಣಿಸುವುದರಿಂದ ಬರುವುದು ಕಡಿಮೆ ಕಂಡು ಬಂದಿದೆ. ಹಾಲು ಕೊಡದಿದ್ದಾಗ ಮಗು ವಾಂತಿ, ಭೇದಿ ಮತ್ತು ಇನ್ನಿತರ ಕಾರಣಗಳಿಂದ ಮರಣ ಹೊಂದುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಹಾಲು ಕುಡಿಸುವುದರಿಂದ ಇನ್ನೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
* ಮಿಥ್ಯ- ಕೆಲಸಕ್ಕೆ ಹೋಗುವ ತಾಯಂದಿರು ಹಾಲು ಕುಡಿಸಲು ಆಗುವುದಿಲ್ಲ.
ಸತ್ಯ- ಕೆಲಸಕ್ಕೆ ಹೋಗುವ ತಾಯಂದಿರು ಹಾಲನ್ನು ಸ್ವಚ್ಛವಾದ ಬಟ್ಟಲಿನಲ್ಲಿ ಹಿಂಡಿ ಇಡಬಹುದು ಮತ್ತು ಹಿಂಡಿದ ಹಾಲು ಸುಮಾರು 8 ಗಂಟೆಗಳ ಕಾಲ ಫ್ರಿಜ್ ಹೊರಗಡೆ ಶೇಖರಿಸಿಡಬೇಕು.
* ಮಿಥ್ಯ- ಹಾಲು ಕುಡಿಸುವುದರಿಂದ ಗರ್ಭ ನಿರೋಧಕ ಕಾರ್ಯ ಸಂಪೂರ್ಣವಾಗಿರುತ್ತದೆ.
ಸತ್ಯ- ಸ್ತನಪಾನ ಸಂಪೂರ್ಣವಾಗಿ ಹಗಲು-ರಾತ್ರಿ ಕುಡಿಸುವುದರಿಂದ 6 ತಿಂಗಳವರೆಗೆ ಗರ್ಭನಿರೋಧಕ ಕಾರ್ಯವಿರುತ್ತದೆ. ನಂತರದಲ್ಲಿ ಋತುಸ್ರಾವ ನಿಲ್ಲುವ ಸಾಧ್ಯತೆ ಇರುತ್ತದೆ ಹಾಗಾಗಿ ವೈದ್ಯರ ಸಲಹೆಯನ್ನು ಪಡೆಯದೇ ಬೇರೆ ಯಾವುದೇ ಗರ್ಭ ನಿರೋಧಕ ಸಾಧನಗಳನ್ನು ಉಪಯೋಗಿಸಬಾರದು.

ಹೀಗೆ ತಾಯಿ ತನ್ನ ಮಗುವಿಗೆ ಹಾಲುಣಿಸುವುದಷ್ಟೇ ಅಲ್ಲದೇ ಶೇಖರಿಸಿಟ್ಟ ಹಾಲನ್ನು ಅನಾಥ ಮಕ್ಕಳಿಗೆ ಮಹಾರಾಷ್ಟ್ರದಲ್ಲಿ ನೀಡುತ್ತಿದ್ದಾರೆ ಮತ್ತು ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು  ಅಗಸ್ಟ್ ಮೊದಲನೇ ವಾರವನ್ನು " ವಿಶ್ವ ಸ್ತನಪಾನ ಸಪ್ತಾಹ" ಎಂದು ಆಚರಿಸುತ್ತದೆ. ಹೀಗೆ ಹಲವಾರು ವಿಷಯಗಳಿಂದ ತಾಯಿಯ ಎದೆಹಾಲು ಮಗುವಿಗೆ ಮತ್ತು ತಾಯಿಯ ಆರೋಗ್ಯಕ್ಷೇಮಕ್ಕೆ ಎಷ್ಟೊಂದು ಉಪಯುಕ್ತ ಎಂದು ತಿಳಿಯುತ್ತದೆ ಮತ್ತು ಹತ್ತಿರದ ಪ್ರತಿಯೊಂದು ಸರ್ಕಾರಿ ಆರೋಗ್ಯ ಕೇಂದ್ರಗಳ ಮೂಲಕ ತರಬೇತಿ ಪಡೆದ ಶುಶ್ರೂಕೆಯರು ತಾಯಂದಿರಿಗೆ ಸ್ತನಪಾನ ಸಲಹೆ ಮತ್ತು ವಿಧಾನಗಳನ್ನು ತಿಳಿಸಬೇಕು ಹಾಗೂ ತಾಯಂದಿರು ಯಾವುದೇ ಕೆಟ್ಟ ನಡತೆ ಮತ್ತು  ಮೂಢನಂಬಿಕೆಗಳಿಗೆ ಒಳಗಾಗದೇ ಹಾಗೂ ಹಳೆಯ ಪದ್ಧತಿಯನ್ನು ಪಾಲಿಸದೇ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಬೇಕಾಗಿದೆ.

-ಹನುಮಂತ ದಾಸರ, ಹೊಗರನಾಳ✍
ಮೊ: 9945246234.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...