ಅಂಗಾಂಗ ದಾನದಿಂದ ನಾಲ್ಕು ಜೀವ ದಾನ..
ದೇಹದಾನ ಇನ್ನೊಬ್ಬರ ಜ್ಞಾನದ ಕಣ್ಣಾಗಲಿ....
ಹಸಿದಿರುವವರಿಗೆ ಅನ್ನವನ್ನೀಡುವುದು ತುಂಬ ಶ್ರೇಷ್ಟವಾದ ಕೆಲಸ. ಯಾಕೆಂದರೆ ನಮ್ಮ ದೇಶದಲ್ಲಿ ಇನ್ನೂ ಬಡವರು ತುಂಬಾನೆ ಇದ್ದಾರೆ. ಒಪ್ಪೋತ್ತಿನ ಊಟಕ್ಕೂ ಕಷ್ಟ ಪಡುತ್ತಿರುವವರು ಬಹಳಷ್ಟಿದ್ದಾರೆ. ಅಂತಹವರಿಗೆ ಸಹಾಯ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಸಹಾಯ ಮಾಡಲು ಶ್ರೀಮಂತರೆ ಆಗಬೇಕಿಲ್ಲ ನಮ್ಮಲ್ಲಿ ಇರುವುದರಲ್ಲಿ ಅಲ್ಪ ಸ್ವಲ್ಪ ಸಹಾಯ ಸಾಕು.
ಹಾಗೆಯೆ ನಾವುಗಳು ಬದುಕಿರುವಾಗ ನಾವು ಏನನ್ನು ವ್ಯಯಿಸದೆ, ಕಳೆದುಕೊಳ್ಳದೆ ಒಂದು ಜೀವವನ್ನೆ ಉಳಿಸುವಂತಹ ದೊಡ್ಡ ದಾನವೆಂದರೆ ಅದು ರಕ್ತ ದಾನ. ದಾನ ಮಾಡುವ ಮನಸ್ಸಿರುವ ಎಲ್ಲ ಮಹಾನಿಯರು ತಾವು ಸತ್ತ ಮೇಲು ತಮ್ಮ ಅಂಗಾಂಗ ದಾನ, ಕಣ್ಣು, ಹೃದಯ ಮುಂತಾದವನ್ನು ದಾನಮಾಡುವವರು ಬಹಳಷ್ಟಿದ್ದಾರೆ. ನಿಜಕ್ಕೂ ಅಂತಹವರೆಲ್ಲರೂ ಶ್ರೇಷ್ಟರೆ.
ಜೀವದಾನ
ಜೀವ ಇರುವಾಗ ರಕ್ತದಾನ
ರಕ್ತದಾನದಿಂದ ಮೂವರಿಗೆ ಜೀವದಾನ
ಜೀವ ಹೋಗುವಾಗ ಅಂಗಾಂಗ ದಾನ !!
ಅಂಗಾಂಗ ದಾನದಿಂದ ಹಲವರಿಗೆ ಜೀವದಾನ
ಜೀವ ಹೋದಾಗ ನೇತ್ರದಾನ ಮತ್ತು
ದೇಹದಾನ ನೇತ್ರದಾನದಿಂದ ಇಬ್ಬರಿಗೆ ದೃಷ್ಟಿದಾನ!!
ದೇಹದಾನದಿಂದ ವೈದ್ಯರ ಜ್ಞಾನಕ್ಕೆ ವರದಾನ
ವೈದ್ಯರಿಂದ ಆರೋಗ್ಯ ಮತ್ತು ಚಿಕಿತ್ಸೆಗೆ ವರದಾನ!!..
ರಕ್ತದಾನ ಜೀವದಾನ
ರಕ್ತದ ಅವಶ್ಯಕತೆ ಬರುವುದು ತುಂಬಾ ತುರ್ತು ಸಂದರ್ಭದಲ್ಲಿ, ಅಪಘಾತವಾದಾಗ, ತುರ್ತು ಚಿಕಿತ್ಸೆ ಆಪರೇಷನ್ ಇರುವಾಗ. ಈ ಸಂದರ್ಭದಲ್ಲಿ ಸಂಬಂಧಪಟ್ಟ ಸಂಬಂಧಿಕರ ಅಳಲೂ ಹೇಳತೀರದು ಮತ್ತು ತುಂಬಾ ಗಾಬರಿಯ ಪರಿಸ್ಥಿತಿ ಇರುತ್ತದೆ. ಅಂತಹ ಸಂದರ್ಭದಲ್ಲಿ ಯಾರಾದರೂ ಸಹಾಯಕ್ಕೆ ಸಿಕ್ಕಿದರೆ ಅವರೆ ಆಪತ್ಬಾಂದವರು.
1900 ವರ್ಷಗಳ ಹಿಂದೆ ಈ ರಕ್ತ ನೀಡುವ ವ್ಯವಸ್ಥೆಯೇ ಇರಲಿಲ್ಲ ಯಾಕೆಂದರೆ ಆಗ ಒಬ್ಬರ ರಕ್ತ ಇನ್ನೊಬ್ಬರಿಗೆ ನೀಡಬಹುದು ಎಂದು ಗೊತ್ತೆ ಇರಲಿಲ್ಲ ಹಾಗಾಗಿ ರಕ್ತದ ಅವಶ್ಯಕತೆ ಇದ್ದವರೆಲ್ಲ ಸಾವನ್ನಪ್ಪುತ್ತಿದ್ದರು. ನಂತರ ರಕ್ತದ ಗುಂಪುಗಳನ್ನು ಕಂಡುಹಿಡಿದು ರಕ್ತವನ್ನು ಬೇರೆಯವರಿಗೂ ನೀಡಬಹುದು ಎಂದು ತಿಳಿಸಿಕೊಟ್ಟವರು ಕಾರ್ಲ್ ಲ್ಯಾಂಡ್ ಅವರಿಗೊಂದು ಸಲಾಮ್.
ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಸಾಯುವವರೆ ನಾವು , ಮಣ್ಣಲ್ಲಿ ಮಣ್ಣಾಗಿ ಹೋಗುವವರೆ. ಅದರ ಮಧ್ಯೆ ಏನಾದರೂ ಸ್ವಲ್ಪ ಒಳ್ಳೆಯ ಕೆಲಸವನ್ನು ಮಾಡುವ ಮನಸು ಬೇಕು ಅಷ್ಟೆ. ಪ್ರತಿಯೊಬ್ಬರ ದೇಹದಲ್ಲೂ 5 ಲೀಟರ್ ರಕ್ತ ಇರುತ್ತದೆ ಆದರೆ ಬೇಕಾಗಿರುವುದು 3 ಲೀಟರ್ ರಕ್ತ ಆದರೆ ನಾವು ದಾನ ಮಾಡುವಾಗ ನೀಡುವುದು 350 ಎಂ.ಎಲ್ ಮಾತ್ರ. ಅದು ನಾವು ರಕ್ತ ಕೊಟ್ಟ 24 ಗಂಟೆಗಳೊಳಗಾಗಿ ಕೂಡತ್ತದೆ.
ಗಂಡಸರು 3 ತಿಂಗಳಿಗೊಮ್ಮೆ ಮತ್ತು ಹೆಂಗಸರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಹೀಗೆ ಮಾಡುವುದರಿಂದ ನಮ್ಮ ಆರೋಗ್ಯ ವೃದ್ದಿಯಾಗುತ್ತದೆ.!!!
ರಕ್ತದೊತ್ತಡ ನಿವಾರಣೆಯಾಗುತ್ತದೆ, ಬಿ. ಪಿ ಕಂಟ್ರೋಲ್ನಲ್ಲಿರುತ್ತದೆ. ರಕ್ತ ಶುದ್ದಿಯಾಗಿ ಹೊಸ ರಕ್ತಕಣಗಳ ಉತ್ಪತ್ತಿಯಾಗುತ್ತದೆ. ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಇದರ ಜೊತೆಗೆ ನಾವು ನೀಡುವ ರಕ್ತದಿಂದ 4 ಜನರ ಪ್ರಾಣ ಉಳಿಸಬಹುದು. ಅದು ಹೇಗೆಂದರೆ ನಮ್ಮ ರಕ್ತವನ್ನು 4 ಭಾಗಗಳಾಗಿ ವಿಂಗಡಿಸಬಹುದ ಈಗೆ ಅವಶ್ಯಕತೆ ಇರುವಂತೆ ನೀಡಬಹುದು. ಆಗಾಗಿ ಎಲ್ಲರಲ್ಲೂ ನಾನು ವಿನಂತಿಸಿಕೊಳ್ಳುವುದೇನೆಂದರೆ ದಯವಿಟ್ಟು ಎಲ್ಲರೂ ರಕ್ತದಾನ ಮಾಡಿ ಜೀವ ಉಳಿಸಿ ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ರಕ್ತದಾನ..
ಜೀವ ದ್ರವ್ಯವಾದ ರಕ್ತ
ಒಂದು ಜೀವ ಉಳಿವಿಗೆ ಉಪಯುಕ್ತ.
ಸ್ವಯಂಪ್ರೇರಿತ ರಕ್ತದಾನ
ಸಾಯುವ ಜೀವಕ್ಕೆ ಜೀವದಾನ.
ರಕ್ತದಾನದಿಂದ ದಾನಿಗೆ
ಬರುವದು ಹೊಸ ಚೈತನ್ಯ.
ಮೂರು ಜೀವ ಉಳಿಸಿದಕ್ಕೆ
ಸಿಗುವದು ಸಾಕಷ್ಟು ಪುಣ್ಯ.
ನೇತ್ರದಾನ ಜೀವನದಾನ
ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳಾಗಿವೆ. ಜೀವಿಯು ತನ್ನ ಸುತ್ತಲಿನ ಪರಿಸರದ ಜೊತೆಗೆ ಸಂಪರ್ಕವನ್ನು ಬೆಳೆಸಲು ಕಣ್ಣು ಪ್ರಮುಖ ಸಾದನ. ವಿಜ್ಣಾನ ಮತ್ತು ತಂತ್ರಜ್ಣಾನಗಳ ಕ್ಷೇತ್ರದಲ್ಲಿ ನಾವು ಎಷ್ಟೇಲ್ಲಾ ಅಭಿವೃದ್ಧಿ ಸಾಧಿಸಿದ್ದರೂ ಮಾನವನ ಅಂಗಾಂಶವನ್ನು ಕೃತಕವಾಗಿ ಉತ್ಪಾದಿಸುವುದರಲ್ಲಿ ಇನ್ನೂ ಸಫಲರಾಗಿಲ್ಲ. ಹಾಗಾಗಿ ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತನಂತರ ಸುಟ್ಟು ಅಥವಾ ಹೂಳಿ ನಾಶ ಮಾಡುವ ಬದಲಿಗೆ ದಾನಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ಉಪಕಾರವಾಗುತ್ತದೆ. ನಾವು ತೀರಿದ ನಂತರ ನಮ್ಮ ದೇಹ ಅಳಿದರೂ ಅಂಧರ ಬಾಳಿಗೆ ಬೆಳಕಾಗುವ ಮೂಲಕ ನಾವು ಶಾಶ್ವತವಾಗಿರುವುದು ಸಾದ್ಯವಾಗುತ್ತದೆ. ಕನ್ನಡದ ಖ್ಯಾತ ನಟರಾದ ಡಾ: ರಾಜಕುಮಾರ್ ರವರು ಕಣ್ಣುಗಳನ್ನು ಅವರ ನಿಧನದ ನಂತರ ದಾನ ಮಾಡಲಾಯಿತು. ಎಂದರೆ ಅವರ ಕಣ್ಣುಗಳು ಇ೦ದಿಗೂ ಬದುಕಿವೆ
ಗಂಡು-ಹೆಣ್ಣು, ರೋಗಿ-ಆರೋಗ್ಯವಂತ, ದೊಡ್ಡವರು - ಚಿಕ್ಕವರು ಎಂಬ ಭೇದವಿಲ್ಲದೆ ಎಲ್ಲ ವಯೋಮಾನದ ಜನರೂ ತಮ್ಮ ಕಣ್ಣುಗಳನ್ನು ದಾನಮಾಡಲು ಸಾದ್ಯವಿದೆ. ಈ ಎಲ್ಲ ಕಾರಣದಿಂದಾಗಿ ರಕ್ತದಾನ ಹಾಗೂ ನೇತ್ರದಾನವನ್ನು ನಾವು ಪ್ರೋತ್ಸಾಹಿಸಬೇಕು.
ಕಣ್ಣಿಗೆ ದೃಷ್ಟಿ ಕೊಟ್ಟದ್ದು ಸೃಷ್ಟಿ
ನೇತ್ರದಾನ ಮಾಡುವದು ಕೃಪಾದೃಷ್ಟಿ.
ಅಂದರಿಗೆ ನೀಡಿ ನಮ್ಮ ದೃಷ್ಟಿ
ಅದರಿಂದಾಗುವದು ಸುಂದರ ಲೋಕ ಸೃಷ್ಟಿ...
ದೇಹದಾನವೇನೆಂದರೆ, “ಒಬ್ಬ ವ್ಯಕ್ತಿಯು ತನ್ನ ಮರಣದ ಅನಂತರ ತನ್ನ ದೇಹವನ್ನು ವೈದ್ಯಕೀಯ ಜ್ಞಾನಾರ್ಜನೆ ಮತ್ತು ಸಂಶೋಧನೆಗೋಸ್ಕರ ಸಮರ್ಪಿಸುವ ಇಚ್ಛೆಯನ್ನು ಮರಣ ಪೂರ್ವದಲ್ಲೇ ಪ್ರಕಟಗೊಳಿಸುವ ಪ್ರಕ್ರಿಯೆ.
ದೇಹದಾನದ ಬಗ್ಗೆ ಪುರಾಣಗಳಲ್ಲೂ ಸಹ ಉಲ್ಲೇಖಿಸಲಾಗಿದೆ. ವೃತ್ತಾಸುರ ರಾಕ್ಷಸ ದೇವಲೋಕದ ಮೇಲೆ ದಾಳಿ ಮಾಡಿದಾಗ ಎಲ್ಲ ದೇವತೆಗಳು ಶಿವನಲ್ಲಿಗೆ ಧಾವಿಸಿದರು. ಆಗ ಭಗವಂತನು ದೇವತೆಗಳೇ ಋಷಿ ದಧೀಚಿಯ ಬಳಿಗೆ ಹೋಗಿ ತಮ್ಮ ದೇಹತ್ಯಾಗ ಮಾಡಲು ಪ್ರಾರ್ಥಿಸಿಕೊಳ್ಳಿರಿ. ಅನಂತರ ವಿಶ್ವಕರ್ಮರ ಮೂಲಕ ಋಷಿ ದಧೀಚಿಯ ಅಸ್ಥಿಗಳಿಂದ ಶ್ರೇಷ್ಠವಾದ ವಜ್ರಾಯುಧವನ್ನುರಚಿಸಿ ವೃತ್ಸಾಸುರನ ವಧೆ ಮಾಡಬಹುದೆಂದು ಉಪದೇಶಿಸಿದನು. ಇದು ಲೋಕಕಲ್ಯಾಣಕ್ಕೋಸ್ಕರ ತನ್ನ ದೇಹದಾನ ಮಾಡಿದ ವಿಶ್ವದ ಮೊಟ್ಟಮೊದಲ ಉದಾಹರಣೆ.
ದೇಹದಾನದ ಪ್ರಕ್ರಿಯೆಯನ್ನು ಹೇಗೆ ಮಾಡಬಹುದು ? : ದೇಹದಾನ ನೊಂದಣಿ ಪ್ರಕ್ರಿಯೆ ತುಂಬಾ ಸುಲಭ. ದೇಹದಾನ ಮಾಡಲಿಚ್ಛಿಸಿದ ವ್ಯಕ್ತಿಯು ಯಾವುದೇ ಸರಕಾರಿ ಅಥವಾ ಕರ್ನಾಟಕ ಸರಕಾರದ ಗೆಜೆಟ್‌ನಲ್ಲಿ ನೋಂದಾಯಿಸಲ್ಪಟ್ಟ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದೇಹದಾನ ಸ್ವೀಕೃತಿಗಾಗಿ ನೋಂದಾಯಿಸಬಹುದು. ಅರ್ಜಿ ಫಾರಂನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ ಒಂದು ಪ್ರತಿಯನ್ನು ತಮ್ಮಲ್ಲಿರಿಸಿ ಮತ್ತೂಂದು ಪ್ರತಿಯನ್ನು ಅಂಗರಚನಾ ಶಾಸ್ತ್ರ ವಿಭಾಗಕ್ಕೆ ನೀಡಬೇಕು. ದಾನಿಯವರು ತಮ್ಮ ಹೆಸರು, ವಿಳಾಸ, ಮೊಬೈಲ್/ದೂರವಾಣಿ ಸಂಖ್ಯೆ ಮತ್ತು ಒಂದು ಪಾಸಪೋರ್ಟ್ ಗಾತ್ರದ ಫೋಟೊವನ್ನು ಅಂಟಿಸಬೇಕು. ಅರ್ಜಿ ಫಾರಂನಲ್ಲಿ ದಾನಿಯ ಕುಟುಂಬದ ಸದಸ್ಯರು, ರಕ್ತಸಂಬಂಧಿಗಳು, ಸ್ನೇಹಿತರು ಅಥವಾ ನೆರೆಹೊರೆಯವರಿಂದ ನಾಲ್ಕು ಜನರ ಸಹಿ ಮಾಡಿಸಬೇಕು. ಹಾಗೆಯೇ ಅರ್ಜಿಯನ್ನು ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಸ್ವತಃ ಬಂದು ಇಲ್ಲವೇ ಅಂಚೆ ಮುಖೇನ ತಲುಪಿಸಿ ನೋಂದಣಿ ಮಾಡಿಸಬಹುದು. ತದನಂತರ ದೇಹದಾನಿಯ ಹೆಸರನ್ನು ನೋಂದಾಯಿಸಿ ನೋಂದಣಿ ಸಂಖ್ಯೆಯನ್ನು ಸ್ವೀಕೃತಿ ಪತ್ರದ ಮೂಲಕ ತಿಳಿಸಲಾಗುವುದು.
ದೇಹ ಮಣ್ಣಾಗುವದಕಿಂತ
ಮುಂಚೆ ಇನ್ನೊಬ್ಬರ ಜ್ಞಾನದ ಕಣ್ಣಾಗಲಿ.
ತಾರ್ಕಿಕ ಜ್ಞಾನವು ವೃದ್ದಿಯಾಗಲಿ.
ದೇಹದಾನ ಜೀವಚೈತನ್ಯದಾನ
ಒಬ್ಬ ವ್ಯಕ್ತಿಯು ನೋಂದಾಯಿತ ದಾನಿಯಲ್ಲದಿದ್ದರೂ, ತನ್ನ ಮರಣ ಪೂರ್ವದಲ್ಲಿ ದೇಹ ದಾನಿಯಾಗುವ ಇಂಗಿತವನ್ನು ಕುಟುಂಬ ಸದಸ್ಯರಿಗೆ ಮಾತಿನ ಮೂಲಕ ವ್ಯಕ್ತಪಡಿಸಿದ್ದಲ್ಲಿ ಸಂಬಂಧಿಕರು ದೇಹದಾನಿಯ ಮರಣದ ಅನಂತರ ಅಂಗರಚನಾ ಶಾಸ್ತ್ರ ವಿಭಾಗಕ್ಕೆ ಕರೆ ಮಾಡಿ ತಿಳಿಸಬೇಕಾಗುತ್ತದೆ.
ದೇಹದಾನಿಯ ಮರಣದ ನಂತರ ಏನು ಮಾಡಬೇಕು ? : ದೇಹದಾನಿಯು ಮರಣ ಹೊಂದಿದಲ್ಲಿ ಕುಟುಂಬ ಸದಸ್ಯರು ಸಾವಿನ ಬಗ್ಗೆ ನಮ್ಮ ವಿಭಾಗಕ್ಕೆ 4 ರಿಂದ 6 ತಾಸಿನೊಳಗೆ ಕರೆ ಮಾಡಿ ತಿಳಿಸಬಹುದು. ಮರಣದ ಅನಂತರ ಗೊತ್ತು ಪಡಿಸಿದ ದೇಹದಾನಿ ತನ್ನ ವಿಳಾಸದಿಂದ 30-40 ಕಿ. ಮೀ. ದೂರದಲ್ಲಿದ್ದರೆ, ನಮ್ಮ ಸಂಸ್ಥೆ ದೇಹವನ್ನು ಇಲಾಖೆಗೆ ತರಿಸುವ ಮತ್ತು ಸಂಸ್ಕರಿಸುವ ಎಲ್ಲಾ ವ್ಯವಸ್ಥೆಯನ್ನು ಮಾಡುತ್ತದೆ. ದೇಹವನ್ನು ಸ್ಥಳಾಂತರಿಸುವ ಮತ್ತು ಸಂಸ್ಕರಣೆ ವಿಧಾನದ ಎಲ್ಲಾ ಶುಲ್ಕವನ್ನು ನಮ್ಮ ಇಲಾಖೆಯೇ ಭರಿಸುತ್ತದೆ. ಇಲಾಖೆಗೆ ತಂದ ದೇಹಗಳನ್ನು ಫಾರ್ಮಲಿನ್ ದ್ರಾವಣದಿಂದ ಸಂಸ್ಕರಿಸಿಡಲಾಗುತ್ತದೆ. ತದನಂತರ ದೇಹವನ್ನು ವೈದ್ಯಕೀಯ ಕಾಲೇಜು ತನ್ನ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರವನ್ನು ಕಲಿಸಲು ಉಪಯೋಗಿಸುತ್ತದೆ.
ದೇಹದಾನವನ್ನು ಏಕೆ ಮಾಡಬೇಕು? : ಪ್ರಪಂಚದಲ್ಲಿ ಸ್ವ ಇಚ್ಛೆಯಿಂದ ಮಾಡಿದ ದಾನಗಳೆಲ್ಲ ಶ್ರೇಷ್ಠವೇ ಆಗಿರುತ್ತವೆ ಮತ್ತು ಪ್ರತಿ ದಾನದಲ್ಲೂ ಒಂದು ವಿಶೇಷವಿರುತ್ತದೆ. ದೇಹದಾನ ಮಾಡಿದ ಶವವನ್ನು ಪ್ರಥಮ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾ ಶಾಸ್ತ್ರದ ಕಲಿಕೆಗೋಸ್ಕರ ಬಳಸಲು ಅನುಮತಿ ಇರುತ್ತದೆ. ಭಾರತೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿರುವಂತೆ, ಪ್ರತೀ ದೇಹವನ್ನು 10ರಿಂದ 15 ವಿದ್ಯಾರ್ಥಿಗಳ ಕಲಿಕೆಗೆ ಬಳಸಲಾಗುತ್ತದೆ. ಅಂದರೆ 10ರಿಂದ 15 ಉತ್ತಮ ವೈದ್ಯರನ್ನು ಸಮಾಜಕ್ಕೆ ಕೊಡುವ ಸಾಮರ್ಥ್ಯವಿರುತ್ತದೆ. ಪ್ರತೀ ದೇಹವೂ ಅನೇಕ ನ್ಯೂನತೆಗಳನ್ನು ಹೊಂದಿರುತ್ತವೆ. ಇದನ್ನು ಅರಿತಾಗ ಮಾತ್ರ ಒಬ್ಬ ವೈದ್ಯ ಉತ್ತಮ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಲು ಪರಿಣಿತಿ ಹೊಂದಬಹುದು. ಎರಡನೆಯದಾಗಿ, ದೇಹದಾನವನ್ನು ವೈದ್ಯಕೀಯ ಸಂಶೋಧನೆಗಾಗಿ ಬಳಸಲಾಗುತ್ತದೆ. ಇದರಿಂದ ವೈದ್ಯಕೀಯ ವಿಜ್ಞಾನ ಮುಂದುವರಿಯಲು ಸಹಕಾರಿಯಾಗುತ್ತದೆ.
ದೇಹದಾನವನ್ನು ಯಾರು ಮಾಡಬಹುದು ? : ಹದಿನೆಂಟು ವರ್ಷ ಪ್ರಾಯದ ನಂತರ ಯಾವುದೇ ವ್ಯಕ್ತಿಯು ತನ್ನ ಸ್ವ ಇಚ್ಛೆಯಿಂದ ದೇಹದಾನ ಮಾಡಬಹುದು. ಇದರಲ್ಲಿ ಲಿಂಗಭೇದ, ಪ್ರಾಯ ಅಥವಾ ದೇಹದ ಗಾತ್ರ/ಪ್ರಕಾರದ ಮಿತಿಗಳಿಲ್ಲ.
ಈ ಎಲ್ಲಾ ದಾನಗಳು ಶ್ರೇಷ್ಠದಾನಗಳಾಗಿವೆ ಶ್ರೀಮಂತರು ಮಾತ್ರ ದಾನಮಾಡಬಹುದು ಎಂಬ ಕಲ್ಪನೆಯನ್ನು ಹೊಗಲಾಡಿಸಿ ನಮ್ಮಲ್ಲಿರು ಅಂಗಾಂಗಗಳನ್ನು ದಾನಮಾಡಬೇಕು ನಮ್ಮ ಚೈತನ್ಯ
ಹೆಚ್ಚಿಸುವ ರಕ್ತದಾನ , ಸತ್ತನಂತರವೂ ಪ್ರಪಂಚ ನೊಡುವ ಅವಕಾಶವಿರುವ ನೇತ್ರದಾನ, ತಾರ್ಕಿಕ ಜ್ಞಾನವನ್ನು ವೃದ್ದಿಗೆ ಕಾರಣವಾಗುವ ದೇಹದಾನ, ಇತರ ದಾನಗಳಿಂದ ಮತ್ತೆ ನಾವು ಜೀವಂತವಾಗಿರುವಂತೆ ಮಾಡುತ್ತವೆ. ಈ ದಾನಗಳನ್ನು ಸ್ವ ಇಚ್ಛೆಯಿಂದ ಮಾಡಲು ಸಾರ್ವಜನಿಕರು ಮುಂದೆ ಬರಬೇಕಾಗಿದೆ.
- ಶ್ರೀ ಶಿವನಗೌಡ ಪೋಲಿಸ್ ಪಾಟೀಲ
ಉಪನ್ಯಾಸಕರು
ಹವ್ಯಾಸಿ ಬರಹಗಾರರು
9845646370.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ