ಮೀರಾಮಾಧವ
ಮೀರಭಾವದಲಿ ತಂತಿವಾದ್ಯವದು
ಕೃಷ್ಣನಂದವನು ವರ್ಣಿಸೀ|
ನೀರೆಯಂದದಲಿ ಗಾನಕೋಗಿಲೆಯು
ಹಾಡಿಕೊಂಡಿರಲು ಚಂದದೀ|
ಬೀರಿ ಸೊಂಪಿನಲಿ ಪೇಶಲಾಂಕಿತೆಯ
ತಂತಿವೀಣೆಯದು ನಿತ್ಯ ತಾ|
ಪಾರಿಜಾತದಲಿ ಗಂಧಸೂಸುತಿದೆ
ತಾಣದೀವಿಗೆಯ ತಂಪಲೀ||
ವೇಣುನಾದದಲಿ ಲೋಕಲೋಗರವ
ಸೂರೆಗೊಂಡಿರಲು ಯೋಗಿನೇ|
ಪಾಣಿಲಾಘವದಿ ಬಿಚ್ಚುಮೊಗ್ಗೆಯಲಿ
ಮಾಡಿ ತಾನಿರಲು ಪಾರ್ಥನೇ|
ಬಾಣವೂಡಿರುವ ಚೋರಕೃಷ್ಣನನು
ಕೂಗಿ ತಾ ಬರಲು ಕೋಮಲೇ|
ವೀಣೆವಾದ್ಯದಲಿ ನಾಮಧಾರಿಯನು
ಹಾಡಿ ತಾ ಕರೆದು ಕೂಡಿಸೀ||
ಕಣ್ಣನೀರಿನಲಿ ಅರ್ಥಿಬಿಂಬವದು
ಧರ್ಮಸೂಕ್ಷ್ಮವನು ಹೇಳುತಾ|
ಬಣ್ಣಬಣ್ಣದಲಿ ತೇಲಿಹೋಗುತಿಹ
ಧರ್ಮವೀರನದು ನಿರ್ವೃತಾ|
ಬೆಣ್ಣೆಕದ್ದಿರುವ ಕಳ್ಳಕೃಷ್ಣನನು
ಮೀರ ತಾ ಸೆಳೆದು ಪೇಳ್ವುತಾ|
ಸಣ್ಣಮಾತಿನದು ಸೂಕ್ಷ್ಮಬುದ್ಧಿಯಲಿ
ಪಾರ್ಥಸಾರಥಿಯ ನೋಡುತಾ||
ಕೃಷ್ಣಲೀಲೆಯನು ಹಾಡಿಕೊಳ್ಳುತಲಿ
ಬೀದಿಬೀದಿಯಲಿ ಹೋದಳೂ|
ಜಿಷ್ಣುವಾಗುತಿಹ ಕಾಲದೇವನನು
ಪೂಜೆಗೈಯುತಲಿ ಮೀರೆಯೂ|
ವಿಷ್ಣುರೂಪವಿರೆ ಪಾಂಡುರಂಗನಿವ
ವಿಶ್ವರೂಪವನು ತೋರಿದಾ|
ಉಷ್ಣಕಾಲದಲಿ ಪನ್ನಗಾಶನವು
ಹೊಮ್ಮಿ ತಾ ಬರಲು ಬೀರಿದಾ||
- ಅಭಿಜ್ಞಾ ಪಿ ಎಮ್ ಗೌಡ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ