ಗುರುವಾರ, ಆಗಸ್ಟ್ 12, 2021

ಸಾಧಕರ ಹಾದಿಯಲ್ಲಿ ತುಳುನಾಡಿನ ಯುವ ಪ್ರತಿಭೆ ಕುಮಾರ್ ವಿಟ್ಲ (ಸಾಧಕರ ಪರಿಚಯ) - ಸಂಗ್ರಹ : ರೇವಣಸಿದ್ದಪ್ಪ ಎಚ್ ಎಲ್.

ಸಾಧಕರ ಹಾದಿಯಲ್ಲಿ ತುಳುನಾಡಿನ ಯುವ ಪ್ರತಿಭೆ
ಕುಮಾರ್ ವಿಟ್ಲ

ನಟನಾಗಿ, ನಿರೂಪಕನಾಗಿ ಬೆಳೆದು ನಿಂತಿದ್ದಾನೆ, ಯುವ ಜನ ಮೇಳದಲ್ಲಿ ಭಿಕ್ಷೆ ಬೇಡಿದ ಕಲಾವಿದ !!   ಯಾವ ಘಳಿಗೆಯಲೋ, ಯಾವ ತಿರುವಿನಲೋ ಬದುಕು ಸಾಕಷ್ಟು ಬದಲಾವಣೆಗಳನ್ನು ತಾನೇ ಮಾಡಿಕೊಳ್ಳುತ್ತದೆ ! ಸಿಕ್ಕಂತಹ ಅವಕಾಶವನ್ನು ನಾವು ಸದುಪಯೋಗ ಮಾಡಿಕೊಂಡರೆ ಆ ಕ್ಷಣದಲ್ಲೇ ನಮ್ಮ ಬದುಕಿನ ಲೋಕಕ್ಕೆ ಬಣ್ಣವನ್ನು ಆ ಕಲಾಮಾತೆಯೇ ನೀಡುತ್ತಾಳೆ ಎನ್ನುವುದಕ್ಕೆ ಸಾಕ್ಷಿ ಈ ಯುವ ಕಲಾವಿದ ! ತನ್ನ ಮಾತಿನ ಪ್ರೌಢ್ಯತೆಯ ಮೂಲಕ ಪ್ರೇಕ್ಷಕರ ಮನ ಗೆದ್ದ ಯುವ ನಿರೂಪಕ ! ತನ್ನ ಅದ್ಭುತ ನಟನೆಯ ಮೂಲಕ ಕಲಾಭಿಮಾನಿಗಳ ಮನವ ಗೆದ್ದ ಯುವ ನಟ ! ಬಾಲ್ಯದಲ್ಲಿ ಕಂಡಂತಹ ಕನಸುಗಳನ್ನು ನೆರವೇರಿಸುತ್ತಾ ಸಾಗುತ್ತಿರುವ ಈ ಯುವಕ ಕಲಾವಿದ, ನಿರೂಪಕನೆ ಕುಮಾರ್ ವಿಟ್ಲ....

    ಹೌದು, ಕನಸಲ್ಲಿ ಕಾಣುವ ನಿದ್ದೆಗಿಂತ, ನಿದ್ದೆಯೇ ಬರದಂತೆ ಮಾಡುವ ಕನಸುಗಳಿಗೆ ಹೆಚ್ಚಿನ ಮಹತ್ವವು ! ಆದರೆ, ಅದನ್ನು ಅರ್ಥ ಮಾಡಿಕೊಳ್ಳುವ ಮಂದಿ ಅತ್ಯಲ್ಪ. ತನ್ನ ಬಾಲ್ಯದಲ್ಲಿ ಕಂಡಂತಹ ಕನಸುಗಳನ್ನು ತನ್ನ ಹಠ, ಸ್ವಾಭಿಮಾನದ ಮೂಲಕವೇ ನನಸಾಗಿಸಿಕೊಂಡು ಬೆಳೆಯುತ್ತಾ ಸಾಗುತ್ತಿರುವವನೇ ಈ ಸಾಧಕ ! ಬಡ ಕುಟುಂಬದಿಂದ ಮೇಲೆದ್ದು ಬಂದ ಯುವ ಕಲಾವಿದ ತನ್ನ ನೋವುಗಳನ್ನು ತನ್ನಲ್ಲೇ ನುಂಗಿಕೊಂಡು ಸಾಧನೆಯ ಮೆಟ್ಟಿಲು ಹತ್ತಿದ ಸಾಧಕನು ! ಬಾಲ್ಯದಲ್ಲಿ ಕಂಡ ಕನಸುಗಳ ಬೆನ್ನೇರಿದ ಯುವಕನು, ಬಾಲ್ಯದಲ್ಲಿ ಅತ್ಯಂತ ಮುಗ್ಧನಾಗಿದ್ದನು. ತನ್ನ ಮುಗ್ಧ ನಗೆಯಲ್ಲೇ ಎಲ್ಲರ ಪ್ರೀತಿಯನ್ನು ಗಳಿಸಿದ್ದ ಯುವಕ ಇಂದು ತನ್ನ ಕಲಾ ಪ್ರೌಢ್ಯತೆಯ ಮೂಲಕ ಹಲವಾರು ಬೆಂಬಲಿಗರ ಪ್ರೀತಿ ಸಂಪಾದಿಸಿದ ಕಲಾವಿದನೇ ಕುಮಾರ್ ವಿಟ್ಲ ! ವಿಟ್ಲದ ರಂಗರಮಜಲು ನಿವಾಸಿಯಾಗಿರುವ ವಿಶ್ವನಾಥ ಕುಲಾಲ್ ಹಾಗೂ ನಾಗವೇಣಿ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೆಯ ಸುಪುತ್ರನೇ ಕುಮಾರ್ ವಿಟ್ಲ..! ತನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ರೀಟಾ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣವನ್ನು ವಿಠಲ ಪದವಿ ಪೂರ್ವ ಕಾಲೇಜು ವಿಟ್ಲ ದಲ್ಲಿ ಪೂರೈಸಿ, ಬಳಿಕ ಪದವಿ ಶಿಕ್ಷಣ ಮಂಗಳೂರಿನ ಕಾರ್ ಸ್ತ್ರೀಟ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂರೈಸಿದ್ದಾನೆ ಈ ಯುವ ಕಲಾವಿದ !! ಪ್ರಾಥಮಿಕ ಶಿಕ್ಷಣದಲ್ಲಿ ಅತ್ಯಂತ ಮುಗ್ಧನಾಗಿದ್ದ ಬಾಲಕ, ಪದವಿ ಪೂರ್ವ ಶಿಕ್ಷಣದ ಸಮಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಎಂಬ ಸೇವಾ ವಿಭಾಗದಲ್ಲಿ ತೊಡಗಿಸಿಕೊಂಡವನೇ ತನ್ನ ನಾಯಕತ್ವ ಹಾಗೂ ಕಲಾ ಪ್ರೌಢ್ಯಮ್ಯವನ್ನು ಬತ್ತಳಿಕೆಯಲ್ಲಿ ಸೇರಿಸಿಕೊಂಡು ಮುನ್ನಡೆದನು ಈ ಯುವಕ !! ಅಲ್ಲಿಂದ ಆರಂಭವಾದ ಕಲಾ ಮಾತೆಯ ಸೇವೆಯು ಹಲವಾರು ಪ್ರಶಸ್ತಿಗಳನ್ನು ಈತನ ಮುಡಿಗೇರಿಸಿತು...! ಪದವಿ ಶಿಕ್ಷಣಕ್ಕಾಗಿ ಎಂದು ಮಂಗಳೂರಿನ ಕಾಲೇಜಿಗೆ ಸೇರಿಕೊಂಡನೋ ಅಂದಿನಿಂದ ಈತನ ಬದುಕಿನ ಪಥವು ಬದಲಾಗಿ ಸಾಗಿತು ! ಅಲ್ಲಿ ಪಡೆದುಕೊಂಡ ತಿರುವನ್ನು ಅತ್ಯಂತ ಯಶಸ್ವಿಯಾಗಿ ಕಾಪಾಡಿಕೊಂಡ ಕುಮಾರ್ ಯಶಸ್ಸಿನ ಹಾದಿಯಲ್ಲಿ ಹೆಜ್ಜೆ ಹಾಕಲಾರಂಭಿಸಿದ, ಅಂದು ಪಡೆದ ತಿರುವು ಇಂದು ಕರಾವಳಿ ಕರ್ನಾಟಕದ ಹೆಮ್ಮೆಯ ಚಾನೆಲ್ ಸ್ಪಂದನಾ ಚಾನೆಲ್ ನಲ್ಲಿ ಟಿವಿ ನಿರೂಪಕನಾಗಿ ಬೆಳೆಯುವವರೆಗೆ ಸಾಗಿಸಿತು...!!

           ಬಡತನವೆಂಬುದು ಬಹುಷ: ಗ್ರಾಮೀಣ ಭಾಗದ ಪ್ರತಿಯೊಬ್ಬರನ್ನೂ ಹೆಜ್ಜೆ-ಹೆಜ್ಜೆಗೂ ಸೋಲಿಸುತ್ತಲೇ ಬಂದಿದೆ ! ಅಂತಹ ಬಡತನದ ಬೇಗೆಯಲ್ಲೇ ಬೆಳೆದು ಬಂದವನು ಈ ಕುಮಾರ.. ಬಡ ಕುಟುಂಬದಲ್ಲಿ ಜನುಮ ಪಡೆದ ಕುಮಾರನು, ತನ್ನ ಸಾಧನೆಯ ಹೆಜ್ಜೆಯ ಮೂಲಕ-ಸ್ವಾಭಿಮಾನದ ಮೂಲಕ ಇದೀಗ ತನ್ನ ಬದುಕಿನಲ್ಲಿ ಕುಮಾರ ವಿಜಯವನ್ನು ಸಾಧಿಸುತ್ತಾ ಮುನ್ನಡೆಯುತ್ತಿದ್ದಾನೆ !! ತಮ್ಮ ನಾಲ್ಕು ಮಕ್ಕಳ ವಿದ್ಯಾಭ್ಯಾಸ, ಮನೆಯ ಜವಾಬ್ದಾರಿಯನ್ನು ದಂಪತಿಗಳು ಮುನ್ನಡೆಸಿದ್ದು ಕೂಲಿ ಕೆಲಸ ಹಾಗೂ ಬೀಡಿ ಕಟ್ಟುವ ಮೂಲಕ ! ತಂದೆ ಕೂಲಿ ಕೆಲಸ ಮಾಡಿದರೆ, ತಾಯಿಯು ಬೀಡಿ ಕಟ್ಟಿ ಜೀವನ ನಿರ್ವಹಣೆ ನಡೆಸುತ್ತಿದ್ದರು ! ತನ್ನ ಸಣ್ಣ ಪ್ರಾಯದಲ್ಲೂ ಸುಮ್ಮನೆ ಕುಳಿತಿರಲಿಲ್ಲ ಈ ಯುವ ನಿರೂಪಕ... ತನ್ನ ಅಮ್ಮನ ಬೀಡಿ ಕೊಂಡೊಯ್ಯುವ ವೇಳೆಯಲ್ಲಿ ನೆರೆಹೊರೆಯ ಮನೆಯವರ ಬೀಡಿಯನ್ನೂ ತನ್ನೊಂದಿಗೆ ಇರಿಸಿಕೊಂಡು ಹೋಗುತ್ತಿದ್ದ ! ಬೀಡಿ ನೀಡಿ ಬಂದುದಕ್ಕೆ ಆತನ ಸಂಪಾದನೆ ಅಂದು ಕೇವಲ ಒಂದು ರೂಪಾಯಿ !! ಅತ್ತ ಒಂದೆಡೆ ತಂದೆ ಕೂಲಿ ಕೆಲಸ ಮಾಡುತ್ತಿದ್ದರೂ ಕೂಡಾ ಅವರಿಗೆ ಸಮಯಕ್ಕೆ ಸರಿಯಾಗಿ ಕೂಲಿ ಕೆಲಸಗಳು ಸಿಗುತ್ತಲೇ ಇರಲಿಲ್ಲ ! ಆದರೆ, ತಾಯಿಯದ್ದು ಮಾತ್ರ ನಿತ್ಯದ ದುಡಿಮೆ.. ಮನೆಯ ದೀಪಗಳೆಲ್ಲಾ ಆರಿ ಹೋದರೂ ಕೂಡಾ ಮಧ್ಯರಾತ್ರಿಯಲ್ಲೂ ತಾಯಿಯ ಬೀಡಿ ಕಟ್ಟುವ ಕಾರ್ಯಕ್ಕೆ ಸಾಕ್ಷಿಯಾಗಿ ನಿಂತಿತ್ತು ದೀಪವು !! ಯಾವುದಕ್ಕೂ ಎದೆಗುಂದದೆ, ತನ್ನ ಬೀಡಿಯ ಮೂಲಕವೇ ಕುಟುಂಬಕ್ಕೆ ಆಧಾರವಾಗಿದ್ದು ಕರುಣಾಮಯಿ ತಾಯಿ !! ಬಡತನವೆಂಬುದು ಮನೆಯೊಳಗೆ ಆಳವಾಗಿ ಬೇರೂರಿದ್ದರೂ ಕೂಡಾ ಆ ಬೇರನ್ನು ಮಕ್ಕಳ ಮುಂದೆ ತೋರಿಸದೆ ನೆಮ್ಮದಿಯ ಜೀವನವನ್ನು ಮುನ್ನಡೆಸುತ್ತಿದ್ದರು ವಿಶ್ವನಾಥ ಕುಲಾಲ್ ಹಾಗೂ ನಾಗವೇಣಿ ದಂಪತಿ !! ಅಮ್ಮ ಕಟ್ಟಿದ ಸುರುಳಿ ಸುರುಳಿ ಬೀಡಿಗಳು ಮಕ್ಕಳ ಸಾಧನೆಯ ಮೆಟ್ಟಿಲುಗಳಾಗಿದ್ದವು, ತಂದೆ ಹರಿಸಿದ ಬೆವರ ಹನಿಗಳು ಕುಮಾರ್’ನ ಬದುಕಿನ ಪಥವನ್ನು ಸಾಧನೆಯ ಹಾದಿಯಲ್ಲಿ ಮುನ್ನಡೆಸಿತ್ತು...! ತನ್ನ ಬಡತನದ ಮಧ್ಯೆ ತನ್ನ ಜವಾಬ್ದಾರಿಯನ್ನರಿತಂತಹ ಈ ಕಲಾವಿದ ತನ್ನ ನೋವುಗಳನ್ನು ತನ್ನೊಳಗೆಯೇ ನುಂಗಿಕೊಂಡು, ಮನೆಯವರ ಮುಂದೆಯಾಗಲಿ ಅಥವಾ ತನ್ನ ಸ್ನೇಹಿತರೊಂದಿಗಾಗಲಿ ತೋರಿಸಿಕೊಳ್ಳದೆ, ತಾನು ಅನುಕ್ಷಣವೂ ಸಂತಸದಿಂದಲೇ ಇರುವವನು ಎಂದು ತನ್ನ ಕತ್ತಲೆಯ ಮಧ್ಯೆ ಬೆಳಕನ್ನು ಸಮಾಜಕ್ಕೆ ತೋರಿಸಿದನೀತ !! ತನ್ನ ಬದುಕಿನ ಬಂಡಿಯನ್ನು ಮುನ್ನಡೆಸಲು ಮನೆಯಲ್ಲಿ ಬಡತನ ಅಡ್ಡಿಯಾಗಬಾರದೆಂದುಕೊಂಡ ಈ ಯುವ ಕಲಾವಿದ ತನ್ನ ಎಂಟನೇ ತರಗತಿಯಲ್ಲೇ ಕೂಲಿ ಕೆಲಸ ಆರಂಭಿಸಿದನು. ಅದರ ಜೊತೆಯಲ್ಲಿ, ಊರೂರಿನ ಜಾತ್ರೆ ಸುತ್ತಿಕೊಂಡು ಗೋಬಿ ಮಾರಿ ಜೀವನದ ಬುತ್ತಿ ಕಟ್ಟಿ ಬೆಳೆದವನು !! ಪೈಟಿಂಗ್, ತೋಟದ ಕೆಲಸ, ಮೇಸ್ತ್ರೀ ಕೆಲಸ ಸೇರಿದಂತೆ ಎಲ್ಲಾ ಕೂಲಿ ಕೆಲಸ ಮಾಡಬಲ್ಲಂತಹ ಸಾಮರ್ಥ್ಯವುಳ್ಳ ಕಲೆಗಾರನೀತ !! ಊರೂರಿನ ಜಾತ್ರೆ ಸುತ್ತಿಕೊಂಡು ಜೀವನ ಸಾಗಿಸುತ್ತಾ, ತನ್ನ ಖರ್ಚುಗಳ ಜೊತೆಗೆ ಮನೆಯ ಖರ್ಚುಗಳನ್ನೂ ನಿಭಾಯಿಸಿಕೊಂಡು ಅಂದೇ ತನ್ನ ಜವಾಬ್ದಾರಿಯನ್ನರಿತವನು ಈ ಕಲೆಗಾರ.....

               ಪದವಿ ಪೂರ್ವ ಶಿಕ್ಷಣದ ಸಂದರ್ಭ ರಾಷ್ಟ್ರೀಯ ಸೇವಾ ಯೋಜನೆಯೇ ತನ್ನ ನಿರೂಪಣೆಗೆ ಮೊದಲ ಮೆಟ್ಟಿಲು ಎಂದು ನೆನಪಿಸಿಕೊಳ್ಳುತ್ತಾನೆ ಕುಮಾರ್ ! ಅಂತೆಯೇ, ಕಾಲೇಜು ದಿನಗಳಲ್ಲಿ ಹಲವಾರು ಪ್ರಹಸನ, ನೃತ್ಯರೂಪಕಗಳಲ್ಲಿ ಭಾಗವಹಿಸಿ ತನ್ನೊಳಗಿನ ಕಲಾವಿದನನ್ನು ಗಟ್ಟಿಗೊಳಿಸಿದ್ದ ಯುವಕ !! ವಿಟ್ಲದಲ್ಲಿ ನಡೆದಂತಹ ರಾಜ್ಯ ಮಟ್ಟದ ಯುವ ಜನ ಮೇಳದಲ್ಲಿ ದುಡ್ಡು ಕೊಟ್ಟರೆ ಬೇಕಾದು ಸಿಗುತೈತೆ ಎಂಬ ಜನಪ್ರಿಯವಾದ ಹಾಡಿಗೆ ನೃತ್ಯರೂಪಕನಾಗಿ ವೇದಿಕೆ ಹತ್ತಿದ ಕುಮಾರ್ ಸ್ತ್ರೀ ವೇಷಧಾರಿಯಾಗಿದ್ದ ! ಸ್ತ್ರೀ ವೇಷಧಾರಿಯಾಗಿ ಅಳುತ್ತಾ ವೇದಿಕೆಯಿಂದ ಭಿಕ್ಷೆ ಬೇಡುತ್ತಾ ಸಾಗಿದ ಆ ದಿನದಲ್ಲಿ ಕಲಾ ಪ್ರೇಮಿಗಳು ಆ ನಟನೆಯ ಭಿಕ್ಷೆಯ ತಟ್ಟೆಗೆ ಒಂದಷ್ಟು ಹಣಗಳನ್ನು ಭಿಕ್ಷೆ ಹಾಕಿದ್ದರು. ಆ ಭಿಕ್ಷೆಯಲ್ಲಿ ಸಂಪಾದಿಸಿದ್ದು, 94 ರೂಪಾಯಿ ! ಅಷ್ಟೇ ಅಲ್ಲದೆ, ಆ ನಟನೆ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು..! ಪದವಿ ಕಾಲೇಜಿನಲ್ಲಿ ಯಶಸ್ವಿ ಕಲಾವಿದನಾಗಿ ಪರಿಚಿತನಾದ ಕುಮಾರ್ ವಿಟ್ಲ !! ಶಿಕ್ಷಣದ ಬಳಿಕ ಉದ್ಯೋಗ ಅರಸಿ ಹಲವು ಕಡೆಗಳಲ್ಲಿ ಅಲೆದಾಡಿದ ಬಳಿಕ, ಸ್ನೇಹಿತನ ಮಾಹಿತಿಯ ಮೇರೆಗೆ ಖಾಸಗಿ ವಾಹಿನಿಯೊಂದರಲ್ಲಿ ರಿಪೋರ್ಟರ್ ಆಗಿ ಜೀವನ ಆರಂಭಿಸಿದ ಈ ಯುವ ನಿರೂಪಕ ! ಬಳಿಕ, ಅದೇ ವಾಹಿನಿಯಲ್ಲಿ ನ್ಯೂಸ್ ಆಂಕರ್ ಆಗಿ ಹೊಸ ಜೀವನಕ್ಕೆ ಮುಂದಡಿಯಿಟ್ಟನು ಯುವ ಕಲಾವಿದ !! ಅಲ್ಲಿಂದ, ಕರಾವಳಿಯ ಖಾಸಗಿ ವಾಹಿನಿಯೊಂದರಲ್ಲಿ ಸುದ್ದಿ ವಾಚಕನಾಗಿ ತನ್ನ ಹೊಸ ಬದುಕಿಗೆ ಮುನ್ನುಡಿಯಿಟ್ಟವನು ಈತ !!... ತನ್ನ ಸಾಧನೆಯ ದಿನಗಳನ್ನು, ತಾನು ಕಲಾವಿದನಾಗಿ ಮಿಂಚಿರುವ ದಿನಗಳನ್ನು ನೆನಪಿಸುತ್ತಾ ಸಾಗಿದಾಗ ಹಲವಾರು ಆಲ್ಬಂ ಸಾಂಗ್ ಸೇರಿದಂತೆ ಯಶಸ್ವಿ ಪಯಣವು ಆತನ ಜೊತೆಯಲ್ಲಿ ಸಾಗಿ ನಿಂತಿದೆ.. ಅಂತಹ ಆಲ್ಬಂ ಸಾಂಗ್ ಗಳತ್ತ ನೋಟ ಬೀರಿದಾಗ ಅಭಿಲಾಶ್ ಬಜ್ಪೆ ಅವರ ಪ್ರೋತ್ಸಾಹದಿಂದ ಓ ಮೇರಿ ಮುನ್ನಿ, ಅರ್ಕಂಜಿ, ಧನರಾಜ್ ಬಂಟ್ವಾಳ ಮತ್ತು ಪ್ರಸಾದ್ ಶೇಣಿ ನೇತೃತ್ವದಲ್ಲಿ ಸಾರ ಜನ್ಮ, ಕಾಲಾಗ್ನಿ ಕ್ರಿಯೇಷನ್ಸ್ ತಂಡದ ಶ್ರೀಮತಿ, ಪನಂದಿ ಬೇನೆ ತುಳು ಅಲ್ಬಮ್ ಸಾಂಗ್ ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಈ ಯುವ ಕಲಾವಿದ ಹರ್ಷಿತ್ ಸೋಮೇಶ್ವರ ನಿರ್ದೇಶನದ ಲಾಸ್ಟ್ ವಾರ್ನಿಂಗ್ ಕಿರುಚಿತ್ರ, ಗರ್ವ ಟೆಲಿ ಚಿತ್ರಗಳಲ್ಲಿ ನಟಿಸಿ ಕಲಾವಿದನಾಗಿ ಕರಾವಳಿಯಲ್ಲಿ ಸೈ ಎನಿಸಿಕೊಂಡಿದ್ದಾನೆ ಈ ಯುವ ಪ್ರತಿಭೆ !! ಕೇವಲ ನಟನಾಗಿ ಮಿಂಚಿದ್ದಾನೆ ಎಂದರೆ ಅದು ತಪ್ಪಾಗಬಹುದು ಯಾಕೆಂದರೆ, ಬಹುಮುಖ ಪ್ರತಿಭೆಯಾಗಿರುವ ಕುಮಾರ್ ವಿಟ್ಲ ತನ್ನ ಅಂತಿಮ ಪದವಿಯಲ್ಲಿ ಬೆಸ್ಟ್ ಎಂ.ಸಿ.2019 ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ..! ರಾಷ್ಟ್ರೀಯ ಸೇವಾ ಯೋಜನೆಯ Best Out Going N.S.S Volunteer Award ಕೂಡಾ ಈ ಯುವ ಕಲಾವಿದನ ಯಶಸ್ಸಿನ ತೊಟ್ಟಿಲಲ್ಲಿ ಮಿಂಚುತ್ತಿದೆ.! ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಸರ್ಕಾರದ ಆಯೋಜಿಸಿದ್ದ ಕರ್ನಾಟಕ ವಿಷನ್ 2025 ಕಾರ್ಯಕ್ರಮದಲ್ಲಿ ಜಿಲ್ಲೆಯ 3 ಜನ ವಿಧ್ಯಾರ್ಥಿ ಪ್ರತಿನಿಧಿಗಳಲ್ಲಿ ನಾನು ಭಾಗವಹಿಸಿದ್ದರು..! ವಿಶ್ವವಿಖ್ಯಾತ ಮೈಸೂರು ದಸರಾ ಸಂದರ್ಭದಲ್ಲಿ ನಡೆಯುವ ಯುವ ದಸರಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯ ನೃತ್ಯತಂಡದ ನಿರೂಪಣೆ ಸೇರಿದಂತೆ ಕರಾವಳಿಯ ಹಲವಾರು ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿಯೂ ಸೈ ಎನಿಸಿಕೊಂಡಿದ್ದಾರೆ ಕುಮಾರ್ ವಿಟ್ಲ !!
                      ಕುಮಾರ್ ವಿಟ್ಲ ಅವರೊಳಗಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದವರು ನವೀನ್ ಕೊಣಾಜೆ ! ಅವರೇ ನನ್ನ ಜೀವನದ ಯಶಸ್ಸಿನ ಗುರು ಎಂದು ನಮೃತೆಯ ನಗುವನ್ನು ಬೀರುತ್ತಾರೆ ಈ ಬಹುಮುಖ ಪ್ರತಿಭೆ !! ಹಲವಾರು ಕಿರು ನಾಟಕ ಸೇರಿದಂತೆ ಜಾನಪದ ಹಾಡಿನ ನೃತ್ಯತಂಡದ ಜೊತೆ ಹಲವಾರು ವೇದಿಕೆ ಏರಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಾಯಕನಾಗಿ ಗುರುತಿಸಿಕೊಂಡ ಕುಮಾರ್ ತನ್ನ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ತನ್ನ ಎನ್.ಎಸ್.ಎಸ್ ತಂಡದ ಜೊತೆಗೂಡಿ ಕೊಣಾಜೆಯ 10 ಎಕರೆ ಹಡಿಲು ಭೂಮಿಯಲ್ಲಿ ಕೃಷಿ ಆರಂಭಿಸಿ ಅಲ್ಲಿ ಯ ದೊರೆತ ಅಕ್ಕಿಯಿಂದ ಕಾಲೇಜಿನ ಮತ್ತು ಪ್ರಾಂಶುಪಾಲರ ಬಿಸಿಯೂಟದ ಕನಸನ್ನು ನಾವು ವಿದ್ಯಾರ್ಥಿಗಳೇ ನೆರವೇರಿಸಿದ್ದೆವು.. ಆ ಸಂದರ್ಭದಲ್ಲಿ ಕಾಲೇಜಿಗೆ ಭಾರೀ ಪ್ರಶಂಸೆಗಳು ದೊರಕಿತ್ತು ! ಈ ಸಂದರ್ಭದಲ್ಲಿ ಸ್ವತ: ಕುಮಾರ್ ವಿಟ್ಲ ನಾಯಕನಾಗಿದ್ದು ಆತನ ನಾಯಕತ್ವದ ಯಶಸಿಗೆ ಹಿಡಿದ ಕೈಗನ್ನಡಿಯಾಗಿದೆ..! ತಾನೊಬ್ಬ ನಟನಾಗಿ, ಯುವ ನಿರೂಪಕನಾಗಿ ಮಿಂಚಿರುವ ಕುಮಾರ್ ವಿಟ್ಲ, ಹವ್ಯಾಸಿ ಬರಹಗಳ ಮೂಲಕವೂ ಹಲವರ ಮನಗೆದ್ದಿದ್ದಾರೆ. ಅದರ ಜೊತೆಗೆ ಕೃಷಿಯ ಒಡನಾಟವನ್ನೂ ಹೊಂದಿರುವವರು ಈ ಯುವ ಕಲಾವಿದ.......

   ಒಟ್ಟಿನಲ್ಲಿ, ತನ್ನ ಬಡತವನ್ನು ಲೆಕ್ಕಿಸದೆ ತನ್ನೊಳಗಿನ ಕಲಾವಿದನನ್ನು ಗಟ್ಟಿಯಾಗಿಸಿಕೊಂಡು, ಸಿಕ್ಕಂತಹ ಅವಕಾಶಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಮುನ್ನಡೆದಿರುವ ಕುಮಾರ್ ವಿಟ್ಲ ಇಂದು ಸ್ಪಂದನಾ ವಾಹಿನಿಯ ನಿರೂಪಕನಾಗಿ ಬೆಳೆದು ನಿಂತಿದ್ದಾನೆ !! ತನ್ನ ಯಶಸ್ಸಿನ ಹಾದಿಯಲ್ಲಿ ತನ್ನ ಒಡಹುಟ್ಟಿದ ಅಕ್ಕ ಜಯಭಾರತಿ, ತಂಗಿ ಲೋಲಾಕ್ಷಿ ಹಾಗೂ ತಮ್ಮ ಮನೀಷ್ ಅವರ ಬೆಂಬಲ, ಸ್ನೇಹಿತರ ಬೆಂಬಲವೂ ಇದೆ ಎನ್ನುವುದು ಈ ಯುವ ಪ್ರತಿಭೆಯ ಮಾತು ! ಅಂತೂ, ತನ್ನ ಬಡತನದ ಬೇಗೆಯಲ್ಲಿ ಸುಟ್ಟು ಕರಕಲಾಗಬೇಕಿದ್ದ ತನ್ನೊಳಗಿನ ಕಲೆಯನ್ನು ಗಟ್ಟಿಯಾಗಿಸಿಕೊಂಡು ಕರಾವಳಿಯ ಹೆಮ್ಮೆಯ ಕಲಾವಿದನಾಗಿ ಮಿಂಚುತ್ತಿದ್ದಾನೆ. ಭವಿಷ್ಯದಲ್ಲಿ ಕರಾವಳಿಯ ಉತ್ತಮ ನಿರೂಪಕನಾಗಿ, ಕಲಾವಿದನಾಗಿ ಮಿಂಚಲಿ ಈ ಅಪ್ರತಿಮ ಪ್ರತಿಭೆ !

 ಶ್ರೀ ಲೋಹಿತ್ ಕುಮಾರ್, ಮಂಗಳೂರು. ಇವರ 'ಬಣ್ಣದ ಕನಸುಗಳಿಗೆ ಚಿನ್ನದ ಸ್ಪರ್ಶ ' ಹೆಸರಿನ‌ ಪೇಸ್ ಬುಕ್ ಪುಟದಿಂದ ಸಂಗ್ರಹಿತ, 

ಸಂಗ್ರಹಿಸಿದವರು -  ಶ್ರೀ ರೇವಣಸಿದ್ದಪ್ಪ ಎಚ್ ಎಲ್ ಕನ್ನಡ ಸಹೃದಯಿ ಸೇವಾ ಟ್ರಸ್ಟ್ ಸಂಸ್ಥಾಪಕರು ಮತ್ತು ಪ್ರಧಾನ ಕಾರ್ಯದರ್ಶಿಗಳು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...