ಯುಕ್ತಿ ಮೇಲು
ಬೇಡ ಮಗು ದುಡುಕದಿರು ಸಿಡಿದು ಬೀಳುವೆ
ನೋಡಿ ಸಾಗು ಕೆಡದೆ ಇರು ತಿಳಿಯ ಹೇಳುವೆ
ಕೇಡು ನೀಗು ಹಡೆದವರ ಮಾತು ಕೇಳಯ
ಕೂಡಿ ಸಾಗು ಬಿಡದವರ ಇರುತ ಬಳಿಯ
ಕೆಟ್ಟದೆಲ್ಲ ನಮಗೆ ಬೇಗ ಖುಷಿಯ ಕೊಡುವುದು
ಅಷ್ಟೆ ವೇಗದಲ್ಲಿ ನಮ್ಮ ನಾಶ ಮಾಡುವುದು
ಕೇಡು ಮಾಡಿ ಮೆರೆದ ಅವನು ಬಂಧಿಯಾದನು
ನೋಡು ಧರ್ಮದೇಟು ತಿಂದು ಚಿಂದಿಯಾದನು
ಕತ್ತಿ ಅಂಚಿನಲ್ಲಿ ನಡಿಗೆ ತೊಲಗಿ ಮತ್ಸರ
ಮತ್ತೆ ಆಡಿಕೊಳುಮವ ಜನರ ಮಾಡಿ ತಾತ್ಸರ
ಗೊತ್ತಾಗಲಿ ಈ ಜಗಕೆ ನಿನ ಶಕ್ತಿ ಎತ್ತರ
ಉತ್ತುಂಗಕೆ ತಲುಪಿ ಜನಕೆ ಕೊಡು ಉತ್ತರ
ಯಾರೂ ಏರದೆತ್ತರಕ್ಕೆ ಏರಿ ನಿಲ್ಲು ನೀ
ಯಾರೂ ಇಳಿಯದಾಳಕ್ಕೆ ಇಳಿದು ನಿಲ್ಲು ನೀ
ಬೇರೆಯವಗೆ ನಿನ ಚರಿತೆ ಹುರುಪು ತುಂಬಲಿ
ನೇರ ಜಗದಿ ನಿನ ಹೆಸರೆ ಮಿಂಚಿ ಮೆರೆಯಲಿ
ಶಕ್ತಿಗಿಂತ ಯುಕ್ತಿ ಮೇಲು ಎಂಬ ಉಕ್ತಿಯು
ಸೂಕ್ತವಾದ ಮಾತು ನಂಬು ಇಂಬು ಕೊಡುವುದು
ಮುಕ್ತ ಮನದ ಹಿರಿಯರೆಲ್ಲ ಕ್ರಾಂತಿ ತೊರೆದರು
ರಕ್ತ ಹರಿಸದಂತೆ ತಡೆದು ಶಾಂತಿ ತಂದರು
- ಶ್ರೀ ತುಳಸಿದಾಸ ಬಿ ಎಸ್, ಸಹಶಿಕ್ಷಕರು - ರಾಯಚೂರು.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ