ಭಾನುವಾರ, ಆಗಸ್ಟ್ 15, 2021

ಯಶಸ್ವಿಯಾಗಿ ನಡೆದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಕವನ ವಾಚನ ಸ್ಪರ್ಧೆ.

ಯಶಸ್ವಿಯಾಗಿ ನಡೆದ ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ಕವನ ವಾಚನ ಸ್ಪರ್ಧೆ

(ಸಿದ್ಧೇಶ್ವರ ಸಾಹಿತ್ಯ ವೇದಿಕೆ ಕರ್ನಾಟಕ,  ಜಿಲ್ಲಾ ಘಟಕ ತುಮಕೂರು ಹಾಗೂ ತಾಲ್ಲೂಕು ಘಟಕ ತುರುವೇಕೆರೆ ಇವರ ಜಂಟಿ ಸಹಯೋಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ  ಹಮ್ಮಿಕೊಂಡಿದ್ದ ಮಕ್ಕಳ ಕವನ ವಾಚನ ಸ್ಪರ್ಧೆ ಕಾರ್ಯಕ್ರಮದ ವರದಿ).

ಕಾರ್ಯಕ್ರಮವನ್ನು ಶ್ರೀಮತಿ ಸುಮಾ ಬಸವರಾಜ ಹಡಪದ ರವರು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿದರು. ಉದ್ಘಾಟನಾ ಭಾಷಣವನ್ನು ಮಾಡುತ್ತಾ  ಶ್ರೀ ಅಲ್ಲಾಗಿರಿರಾಜ್ ಕನಕಗಿರಿ ರವರು, ಕವಿ ಎಂದರೆ ಕೇವಲ ಕವನ ಬರೆಯುವುದಲ್ಲ, ಆ ಕವಿಗೆ ಸಾಮಾಜಿಕ‌ ಜವಾಬ್ದಾರಿ ಮುಖ್ಯ. ಕವಿ ಕೇವಲ ಪುಸ್ತಕ ಮಾಡಿದರೆ ಪ್ರಯೋಜನವಿಲ್ಲ. ಒಬ್ಬ ಕವಿಯ ಕವಿತೆ ಎಷ್ಟು ಜನಕ್ಕೆ ಮುಟ್ಟಿದೆ ಎನ್ನುವುದು ಮುಖ್ಯ, ಕವಿಯಾದವನು ತನ್ನ‌ ಓದುಗರನ್ನು‌ ಸೃಷ್ಠಿ ಮಾಡಿಕೊಳ್ಳಲು ಸಾಧ್ಯ ವಾಗದಿದ್ದರೆ ಅವನು‌ ಕವಿಯೇ ಅಲ್ಲ. ಕವಿತೆ ಕೇವಲ ಅಕ್ಷರದ ಸಾಲಲ್ಲ, ಅದು ಸಮಾಜವನ್ನು‌ ಕಟ್ಟುವ ಅನುಭವ - ಅನುಭಾವಗಳನ್ನು ಬೆಸೆಯುವ ಜೀವಪರ ಕೆಲಸ. ಗ್ರಂಥ ರಚನೆ ಕವಿಯ ಕಾಯಕವಲ್ಲ ಬದಲಾಗಿ ಕಾವ್ಯವನ್ನು ಸಮರ್ಥವಾಗಿ ಜನರಿಗೆ ಮುಟ್ಟಿಸುವುದು ಕವಿಯ ಕೆಲಸ.  ಒಬ್ಬ ಕವಿಗೆ ನಿಜವಾದ ವಿಮರ್ಶಕರೆಂದರೆ ಸಾಮಾನ್ಯ ಓದುಗರು.  ಕವಿ ಓದುಗರ ಮನಸ್ಸಿನಲ್ಲಿ ಉಳಿಯಬೇಕು, ಕವಿ ಜನರ ಪರವಾಗಿ ಜನರ ಮನಸಿನಲ್ಲಿರಬೇಕು. ಕವಿಯು ರವಿ ಕಾಣದನ್ನು  ಸಹಾ ಕಾಣಬಲ್ಲ ವಾಸ್ತವ ಜೀವಿ ಆಗಬೇಕು, ಕಲ್ಪನಾ ಜೀವಿ ಆಗಬಾರದು. ಕವಿ ಮನೆ ಮಹಾಮನೆ ಆಗಬೇಕು. ಕವಿ ವೇದಿಕೆಯ ಮೇಲಲ್ಲ  ಜನರ ನಡುವೆ ಇರಬೇಕು. ಇಂದು ಪ್ರಶಸ್ತಿಗಳಿಗಾಗಿ ಕವಿಗಳಾಗುತ್ತಿದ್ದಾರೆ. ಆದರೆ‌ ನಿಜವಾದ  ಕವಿಯ ಕೆಲಸ ಮನಸ್ಸುಗಳನ್ನು ಕಟ್ಟುವುದು. ದೇಶ ಕಟ್ಟುವುದು. ಧರ್ಮ ಕಟ್ಟುವುದಲ್ಲ. ಹಿಂಸೆ, ದೌರ್ಜನ್ಯ, ಇತ್ಯಾದಿಗಳ ಬಗ್ಗೆ ಕವಿ ತನ್ನ ಕಾವ್ಯದ ಮೂಲಕ ಪ್ರತಿಭಟಿಸಬೇಕು. ಕವಿ ಯಾವಾಗಲೂ ನೊಂದವರ, ಬಡವರ, ಶೋಷಿತರ ಪರವಾದ ದ್ವನಿಯಾಗಿರಬೇಕು.  ಕಾಲ ಕಳೆದಂತೆ ಕವಿ ಕಾಲವಾಗುತ್ತಾನೆ, ಆದರೆ ಅವನ ಕವಿತೆ ಕಾಲವಾಗಬಾರದು, ಜನರ ನಾಲಿಗೆಯ ಮೇಲೆ ಅವರ ನುಡಿಯಲ್ಲಿ ನಮ್ಮ‌ ಕವಿತೆ ಸದಾ ಜೀವಂತವಾಗಿರಬೇಕು.  ಎಂದು ಅಭಿಪ್ರಾಯ ಪಟ್ಟರು.
ಮುಂದೆ ಶ್ರೀಮತಿ ಆನಂದಜಲ ರವರು ಮಾತನಾಡುತ್ತಾ ಮಕ್ಕಳ ಕವಿತೆ ಎಂದರೆ ಮಕ್ಕಳು ಸುಲಭವಾಗಿ ಓದಿ, ಹಾಡಬಲ್ಲ, ಅರ್ಥಸಿಕೊಳ್ಳಬಲ್ಲ, ಸರಳವಾದ ಸುಂದರವಾದ, ಪ್ರಾಸಬದ್ಧ ರಚನೆಗಳಾಗಿರಬೇಕೆಂದು ಹೇಳಿದರು. ಮುಂದೆ ಶ್ರೀಮತಿ‌ ಕಲ್ಪನಾ ಡಿ ಎನ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಂಗಾಂಗದಾನದ ಬಗ್ಗೆ ಮಾತನಾಡುತ್ತಾ ಅಂಗಾಂಗದಾನ ಮಾಡಿದರೆ ಮುಕ್ತಿ ಇಲ್ಲ ಅನ್ನುವುದು ಸುಳ್ಳು, ಸತ್ತ ಮೇಲೆ ಮಣ್ಣಲ್ಲಿ ಮಣ್ಣಾಗುವ ಅಥವಾ ಬೆಂಕಿಯಲ್ಲಿ ಬೂದಿಯಾಗುವ ಬದಲು ಈ ದೇಹದಿಂದ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ದಾನ ಮಾಡಿ ಅವರ ಬದುಕನ್ನು ಬೆಳಗಿಸುವ ಕೆಲಸ ನಾವು ಮಾಡಬೇಕು. ಸಂಚಾರಿ ವಿಜಯ್ ಸೇರಿದಂತೆ ಹಲವರು ತಮ್ಮ ಅಂಗಾಂಗಗಳನ್ನು ದಾನ‌ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಹಾ ಅಂಗಾಂಗದಾನಕ್ಕೆ ಸಂಕಲ್ಪ ಮಾಡಿದ್ದಾರೆ ಇವೆಲ್ಲಾ ಬಹಳಾ ಒಳ್ಳೆಯ ಬೆಳವಣಿಗೆಗಳು, ಇಷ್ಟಾದರೂ ಸಹಾ ಇನ್ನು ಸಾವಿರಾರು ಮಂದಿ ಅಂಗಾಂಗದಾನಿಗಳಿಗಾಗಿ ಕಾಯುತ್ತಿದ್ದಾರೆ. ಅವಶ್ಯಕತೆಯನ್ನು ಪೂರೈಸುವಷ್ಟು ಅಂಗಾಂಗದಾನ ನಡೆಯುತ್ತಿಲ್ಲ ನಾವೆಲ್ಲರೂ ಮುಂದೆ ಬಂದು ಅಂಗಾಂಗದಾನಕ್ಕೆ ಸಂಕಲ್ಪ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮುಂದೆ ಮಾನ್ಯ ಸಂತೋಷ್ ಬಿದರಗಡ್ಡಿಯವರು ಮಾತನಾಡಿ ನಾವು ಮೊದಲು ನಮ್ಮ‌ಇತಿಹಾಸವನ್ನು‌ ತಿಳಿಯಬೇಕು, ನಂತರ ಇತಿಹಾಸದ ಕುರಿತು ಕವಿತೆ ಬರೆಯಬೇಕು. ಗಾಂಧಿ, ಸುಭಾಷ್ ಚಂದ್ರ ಬೋಸ್, ಅವರಷ್ಟೇ ಅಲ್ಲದೇ ಸಾವಿರಾರು ಜನ ಸ್ವಾತಂತ್ರ್ಯ ಹೊರಾಟಗಾರರು ಅಜ್ಞಾತರಾಗಿಯೇ ಉಳಿದಿದ್ದಾರೆ. ಇವರೆಲ್ಲರ ಬಗ್ಗೆ ನಾವು ನಮ್ಮ‌ ಮಕ್ಕಳಿಗೆ ಕಲಿಸಬೇಕಾಗಿದೆ. ಮದನಲಾಲ್ ದಿಂಗ್ರ, ರಾಮಪ್ರಸಾದ್ ಬಿಸ್ಮಿಲ ಮುಂತಾದವರು ದೇಶಪ್ರೇಮವನ್ನು ಮುಂದಿನ‌ ತಲೆಮಾರಿನವರಿಗೆ ತಿಳಿಸುವ ಜವಾಬ್ದಾರಿ‌ ನಮ್ಮ ಮೇಲಿದೆ. ನಮ್ಮ‌ಮಕ್ಕಳನ್ನು ದೇಶ ಪ್ರೇಮಿಗಳಾಗಿ‌‌ ಮಾಡುವ ಜವಾಬ್ದಾರಿ‌ ನಮ್ಮ ಮೇಲಿದೆ ಎಂದು ಹೇಳಿದರು.

ಮುಂದೆ ಶ್ರೀ ಎಲ್ ಹನುಮಯ್ಯನವರು ಮಾತನಾಡುತ್ತಾ, ನಾವು ಕೇವಲ ಮುಖ್ಯ ಭೂಮಿಕೆಯಲ್ಲಿದ ಸ್ವಾತಂತ್ರ್ಯ ಹೋರಾಟಗಾರರನ್ನು‌ ಮಾತ್ರ   ನೆನೆಸುತ್ತೇವೆ. ಇದು ಆಗಬಾರದು. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರೆಲ್ಲರನ್ನು ನಾವು ನೆನಪಿಸಿಕೊಳ್ಳಬೇಕು. ನಮ್ಮದು ಪ್ರಪಂಚಕ್ಕೆ ಮಾದರಿಯಾದ ಪ್ರಜಾಪ್ರಭುತ್ವದ ದೇಶ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶ. ಇಂದಿನ ಯುವಕರಲ್ಲಿ ಈ ಗೌರವ ಭಾವನೆ ಇಲ್ಲ. ಸ್ವಾತಂತ್ರ್ಯ ದಿನಾಚರಣೆ ಕೇವಲ ಪ್ರೌಢ ಶಾಲೆಗೆ ಸೀಮಿತವಾಗಿದೆ. ಇಂದಿನ ಶಿಕ್ಷಣ ವ್ಯವಸ್ಥೆ, ಅಧ್ಯಾಪಕ ವೃಂದ, ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡುವ ಕೆಲಸ ಮಾಡುತ್ತಿಲ್ಲ. ದೇಶಕ್ಕಾಗಿ ಬದುಕುವ ಉದ್ದೇಶ ನಮ್ಮ ಯುವ ಜನರಲ್ಲಿಲ್ಲ. ಸ್ವಾತಂತ್ರ್ಯ ಎಂಬುದು ಸಂಸ್ಕೃತಿ ಆದರೆ ಸ್ವೇಚ್ಛೆ ಎಂಬುದು ವಿಕೃತಿ, ಇಂದಿನ ಯುವ ಪೀಳಿಗೆ ಸ್ವೇಚ್ಛೆಯನ್ನು ಬಯಸುತ್ತದೆ. 
ಮನುಷ್ಯನು ಹುಟ್ಟುತ್ತಲೇ ಭೂಮಿ, ತಾಯಿ, ತಂದೆ, ರಾಜ್ಯ, ದೇಶಗಳ ಋಣವನ್ನು ಹೊತ್ತುಕೊಂಡು ಹುಟ್ಟಿರುತ್ತಾನೆ. ಇದನ್ನು‌ ತೀರಿಸುವಲ್ಲಿ ಯುವ ಜನತೆಯ ಪಾತ್ರವೇನು ? ನಮ್ಮ ಶಿಕ್ಷಣ ವ್ಯವಸ್ಥೆಯ ಪಾತ್ರವೇನು ? ಎಂಬುದನ್ನು ನಾವು ಆಲೋಚಿಸಬೇಕು.

ಮತ್ತೊಂದು ವಿಷಯ ಈಗ ಅತ್ಯಾಚಾರಗಳು ಹೆಚ್ಚುತ್ತಿವೆ. ಬಡತನ ಹೆಚ್ಚುತಿದೆ, ರೈತರ ಪರಿಸ್ಥಿತಿ ಹದಗೆಟ್ಟಿದೆ. ನಾವು ದುಡ್ಡು ತಿನ್ನಲು ಸಾಧ್ಯವಿಲ್ಲ, ರೈತರ ನೆರವಿಗೆ ಸರ್ಕಾರ ಬರಬೇಕು ಆದರೆ  ಸರ್ಕಾರಗಳಿಗೆ ಇವರ ಬಗ್ಗೆ ಕಾಳಜಿ ಇಲ್ಲದೇ ಹೋಗಿದೆ. ಪ್ರಪಂಚವೇ ತಲೆಬಾಗುವ ಸಂವಿಧಾನ ನಮ್ಮದು ಆದರೆ ಇಂದು ಅಂತಹಾ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಇದನ್ನು ಯುವಜನರು ಅರಿಯಬೇಕು, ಎಚ್ಚೆತ್ತುಕೊಳ್ಳಬೇಕು. ನಮ್ಮ ಸಾಂಸ್ಕೃತಿಕ ಪರಂಪರೆ ಬಹಳಾ ಶ್ರೀಮಂತವಾದದ್ದು, ಅದನ್ನು ಬಳಸುವ, ಬೆಳಸುವ ಗೌರವಿಸುವ ಕೆಲಸ ಆದಾಗ ಮಾತ್ರ ನಮ್ಮ ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗಳು ಸಾರ್ಥಕವಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಮುಂದೆ ಕವನ ವಾಚನ ಸ್ಪರ್ಧೆಯಲ್ಲಿ ಸು. ೫೦ ಜನ ಕವಿಗಳು ಕವನ ವಾಚನ ಮಾಡಿದರು. ಕವನ ವಾಚನ ಮುಗಿದ ಮೇಲೆ ಮಾತನಾಡಿದ ಸ್ಪರ್ಧೆಯ ನಿರ್ಣಾಯಕರಾದ ಶ್ರೀ ಸುರೇಶ್ ನೆಗಳಗುಳಿ ರವರು ಮಕ್ಕಳ ಕವಿತೆಗಳು ಎಂದರೆ ಬಹಳ ಸಣ್ಣ ಮತ್ತು ಸರಳ ವಾಕ್ಯಗಳಿಂದ ಕೂಡಿದ, ಸುಲಭವಾಗಿ ಅರ್ಥವಾಗುವ ರಚನೆಗಳಾಗಿರಬೇಕು. ಪ್ರಾಸಕ್ಕಾಗಿ ಕವಿ ಹೆಣಗಾಡಬಾರದು, ಅದು ಸಹಜವಾಗಿ ಸ್ಪುರಿಸಿದರೆ  ಚೆನ್ನ. ಆಗ ಅದು ಮಕ್ಕಳ ಕವನ ಅನಿಸುತ್ತೆ. ಇಂತಹಾ ಲಕ್ಷಣಗಳುಳ್ಳ ಹಲವು ಕವಿತೆಗಳನ್ನು ಇಂದು ಇಲ್ಲಿ ವಾಚನ ಮಾಡಿದ್ದೀರ. ನಿಜಕ್ಕೂ ತಿರ್ಪುಗಾರನಿಗೆ ಇದು ಕಠಿಣವಾದ ಕೆಲಸ. ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಕೊನೆಯಲ್ಲಿ  ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮಹೇಶ್ ಬಾಗಳಿ ರವರು ದೇಶದ ಸೇವೆಗಾಗಿ ಎಲ್ಲರೂ ಒಂದಾಗಬೇಕು. ನಾವೆಲ್ಲರೂ ಒಂದಾಗಿ ದೇಶ ಸೇವೆಗೆ ಮುಂದಾಗಬೇಕು. ಪದಗಳಲ್ಲಿ ವರ್ಣಿಸಲಾಗದ ವಿಚಾರವಂತಿಕೆಯ ದೇಶ ನಮ್ಮದು, ಬೌದ್ಧಿಕ ಶ್ರೀಮಂತಿಕೆಯ, ಸಾಂಸ್ಕೃತಿಕ ಶ್ರೀಮಂತಿಕೆಯ ದೇಶ ನಮ್ಮದು. ಇದನ್ನು ನಾವೆಲ್ಲ ಮನಗಾಣಬೇಕು. ಹೊತ್ತ ಭೂಮಿ, ಹೆತ್ತ ತಾಯಿ, ಮಾತು ಕೊಟ್ಟ ಭಾಷೆ ಸ್ವರ್ಗಕ್ಕಿಂತ ಮಿಗಿಲು ಎಂಬುದನ್ನು ನಾವು ಅರಿಯಬೇಕು. ನಾವು ಭಾರತಾಂಬೆಯ ಮಕ್ಕಳು. ನಮ್ಮ‌ಮನೆಯ ಜವಾಬ್ದಾರಿ ನಮ್ಮ‌ಮೇಲಿರುವಂತೆ ಭಾರತ ದೇಶದ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ. ನಾವು ಇದನ್ನು ಪರಿಪಾಲಿಸಬೇಕು ಎಂದು ಹೇಳಿದರು.

ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ರಾಜ್ಯ ಸಂಚಾಲಕರಾದ ಶ್ರೀ ಸಂತೋಷ ಬಿದರಗಡ್ಡಿ, ಡಾ ರವಿ ದಾನಿ, ಶ್ರೀ ವರುಣ್ ರಾಜ್ ಜೀ. ತುಮಕೂರು ಜಿಲ್ಲಾ ಅಧ್ಯಕ್ಷರಾದ ಶ್ರೀ ಅಂಜನ್ ಕುಮಾರ್ ಪಿ ಅರ್, ತುರುವೇಕೆರೆ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಆನಂದಜಲ, ಕುಮಾರಿ ಪ್ರೇಮ, ಕುಮಾರಿ ಅಕ್ಷತಾ ಮುಂತಾದವರು ಉಪಸ್ಥಿತರಿದ್ದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...