ಬೆಣ್ಣೆ ಚಂದ್ರ ಕಣ್ಣಲಿಳಿದ
ಎಣ್ಣೆ ಲಾಂದ್ರ ಏತಕೆ
ಸಣ್ಣ ಸುಂದ್ರ ಬಣ್ಣಬಳಿದ
ನುಣ್ಣ ಮನದ ಮಂಚಕೆ.....
ತಂಬೆಲರ ನಡುಕ ಹೆಚ್ಚಿ
ಹೊಂಬಣ್ಣದ ಮೈಯಿಗೆ
ಅಂಬು ಮೇಣ್ ಚಳಿಯ ಹಚ್ಚಿ
ಕಂಬಳಿಯೆಳೆದೆ ಮೆಲ್ಲಗೆ....
ಸಾಗರವು ಉಕ್ಕಿ ಕರೆದು
ಮಾಗಿಚಳಿಯ ವೇಗಕೆ
ಸಾಗಿಬಂದ ಅಲೆಯು ಕೊರೆದು
ಬಾಗಿಬಳುಕೋ ಲಾಸ್ಯಕೆ ....
ಕಾಯುತಿರಲು ಸನಿಹ ಬರುವ
ಬೇಯದಾಸೆ ತುಡಿತಕೆ
ನೋಯಿಸದೆ ಕೇಳುತಿರುವ
ಮಾಯದಾಸೆ ಮಿಡಿತಕೆ....
ಕಣ್ಣ ಹೊಳಪು ಕರೆದು ತಂತು
ಸಣ್ಣ ತಪ್ಪು ಮಾಡಲು
ತಣ್ಣ ಮಳಲ ತೀರ ಕೂತು
ಬಣ್ಣ ಕನಸು ಕಾಣಲು ....
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ರಾಗವಿಲ್ಲದಿದ್ದರೇನು ರಂಗಿನ ಕಾವ್ಯವಿಹುದಲ್ಲ
ಪ್ರತ್ಯುತ್ತರಅಳಿಸಿ