ಹೊಡೆಯ ಬೇಕೆನಿಸಿದೆ ಗಾಡಿಯನು
ಸ್ಮಶಾನಕೆ
ಭ್ರಷ್ಟಾಚಾರ,ಅನಾಚಾರ,ಅನೀತಿಗಳ
ಬೇಸರಕ್ಕೆ |
ಈ ಜಗತ್ತು ಸರಿಯಿಲ್ಲ
ಈ ಜಗತ್ತು ನಮಗಲ್ಲ |
ಸಾಕಾದ ಈ ಜೀವ ಅಲ್ಲಾದರೂ
ಮಲಗಲಿ
ಮಣ್ಣಡಿಯ ಶ್ರಮಜೀವಿಗಳುದರವಾದರೂ
ಬೆಳಗಲಿ ||
ಸತ್ಯದಾ ನಿತ್ಯ ಸಸಿನ ಜೀವಗಳ
ಹೆಸರನ್ನುಳಿಸಿತೇ ಈ ಜಗತ್ತು
ಉಸಿರಾಯಿತೇ ಹಸಿರನ್ನುತ್ತು |
ಸಾಗಿತಾ ಚೇತನಗಳ ಮಾರಣಹೋಮ
ನಡೆಸಿತಾ ಪ್ರಾಯಶ್ಚಿತ್ತಕ್ಕಾಗಿ ಹೋಮಹವನ |
ಚಿತ್ರಪಟಕೆ ಬಿತ್ತು ಮಾರುದ್ದದ ಹಾರ-ತುರಾಯಿ
ಅಪಮೈತ್ರಿಯ ಜಗಕಾಯ್ತು ಭಾರಿ ಕಮಾಯಿ ||
ತೀರದಾ ಹಸಿವದು ಭ್ರಷ್ಟಾಚಾರ
ಜಗವೇ ಆಗಿಹುದು ಅದಕ್ಕಾಹಾರ |
ಕಿತ್ತು ತಿನ್ನುವಾ ಹಂಬಲ ಕತ್ತೆ ಕಿರುಬಗಳಿಗೆ
ಕತ್ತು ಕೊಯ್ವಾ ಚಪಲ ಮಿಕ ಬಕಾಸುರಗಳಿಗೆ |
ಬೇಸತ್ತು....ಬೇಸತ್ತು...ನಾ...ಸತ್ತು....|
ಹೊಡೆಯ ಬೇಕೆನಿಸಿದೆ ಗಾಡಿಯನು
ಸ್ಮಶಾನಕೆ
ಮಣ್ಣಡಿಯ ನಿಷ್ಟಜೀವಕಾದರೂ
ಅಹಾರವಾಗೋ ಬಯಕೆ ||
ಲಂಚದಾ ಕಿರುಬಗಳಿಗೆ
ಹಾದಿಬೀದಿಯಾ ಹೆಣ |
ಹದ್ದು,ಗೂಬೆ ಖಗಗಳಿಗೆ
ಸಂಭ್ರಮದ ತೋರಣ |
ಆಗುವ ಆಸೆಯಿಲ್ಲ
ಈ ತರದ ಸಾವಿಗೆ ಮನಸ್ಸಿಲ್ಲ ||
ನೊಂದೆನ್ನ ಜೀವಗಳಿಗೆ
ಆಸರೆಯಂತೂ ಆಗಲಿಲ್ಲ
ನೆಮ್ಮದಿಯ ಊಟವಂತು
ಕನಸಾಗೆ ಉಳಿಯಿತಲ್ಲ |
ಸತ್ಯದಾ ಉಸಿರೇ ಕಗ್ಗಂಟಾಯಿತಲ್ಲ
ರಣಹದ್ದುಗಳ ಕೂಗಾಟ ಮೆರೆದಾಡಿತಲ್ಲ ||
ಹೆಗ್ಗಣಗಳ ದಾಳಿಯು ಮುಂದುವರಿದಿದೆ
ನನ್ನ ಬಳಿಗೆ ಈಗ ಬಂದು ಕಾದು ನಿಂತಿವೆ |
ಆಹಾರವಾಗಲು ನನಗಿಲ್ಲ ಮನಸ್ಸು
ನ್ಯಾಯ-ನೀತಿ-ಧರ್ಮವೇ ನನಗೆ ಕಾಸು |
ಮಣ್ಣಡಿಯ ಜೀವಿಗಳೋದ್ಧಾರದ ನೆಪಹೇಳಿ
ಮಡಿದರೆ ಉಳಿವುದೇ ಧರ್ಮವೆನ್ನ ಬಳಿ ||
ಗೊಂದಲದಾ ಗೂಡಾದ ಎನ್ನ ಮನಸ್ಸಿಗೆ
ಕಂಡಿತಾಗ ಎನ್ನಮ್ಮನ ಹರಿದ ಸೀರೆ |
ನವಮಾಸದ ನೋವನ್ನು ನಲಿಯುತ್ತಾ ಉಂಡವಳಾ,
ಹೋರಾಟದ ಜಗದಲ್ಲಿ ಎಲ್ಲವನ್ನು ಕಂಡವಳಾ,
ಬಂಡೆಯಾಗಿ ನಿಂತು ಎನ್ನನ್ನು ಪೊರೆದವಳಾ.......
ಸೀರೆಯಾsss ಚೂರುಗಳು ಅಣಕಿಸಿತು ನನ್ನನ್ನು ||
''ದೌರ್ಭಾಗ್ಯದ ಸರಣಿಗೂ ಅಂಜದೆ,ಬೆಚ್ಚದೆ ಬೆಳೆಸಿದೆ ನಿನ್ನನ್ನು
ವೈರಾಗ್ಯದ ಮೂರ್ತಿಯಾಗಿ ಕೊಡುವೆ ನನಗೆ ಏನನ್ನು !?
ಕ್ಷಣಿಕವಾದ ಈ ಜೀವಕೆ ಸಾವು ಖಚಿತವೇ
ಹಾಗೆಂದ ಮಾತ್ರಕೆ ಆತ್ಮಹತ್ಯೆ ಉಚಿತವೆ |
ಕತ್ತಲಲ್ಲೆ ಕುಳಿತು ಕನವರಿಸುವೆ ಏತಕ್ಕೆ
ಎದ್ದು ಬಂದು ಗರ್ಜಿಸು ದುಷ್ಟರ ಜಗಕ್ಕೆ |
ಮೊಳಗಲಿ ಗರ್ಜನೆ ಸಿಂಹವನ್ನೆ ನಾಚಿಸಿ
ಬಾಲಮುದುಡಿಕೊಳ್ಳಲಿ ಕಿರುಬ-ಮುಂಗುಸಿ |
ಹೆಗ್ಗಣಗಳ ಬಿಲವದು ಮುಚ್ಚಿ ಹೋಗಲಿ
ಹೋರಾಟದ ಕಿಚ್ಚು ಹೊತ್ತಿ ಉರಿಯಲಿ'' ||
ಹೋರಾಟದ ಸಾಗರಕ್ಕೆ ದುಮುಕೋಣ
ಒಬ್ಬಂಟಿಯಾದರೂ ಎದುರಿಸೋಣ |
ತಾನಾಗಿಯೆ ಹೋಗ್ವ ಜೀವ ಹೋರಾಡಿ ಮಡಿಯಲಿ
ಕತ್ತೆ,ಕಿರುಬ,ಹೆಗ್ಗಣಗಳ ಬಲಿಯ ಪಡೆಯಲಿ ||
ಪ್ರಯತ್ನ: ಅಣ್ಣಪ್ಪ ಅರಬಗಟ್ಟೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ