ಶನಿವಾರ, ಜನವರಿ 1, 2022

ಹೊಸ ವರ್ಷ - ಹೊಸ ವಿಚಾರ(ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್ಲ .

2022 ನೇ ವರ್ಷಕ್ಕೆ ಕಾಲಿಡುತ್ತಿರುವ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.  21ರ ವಾರ್ಷಿಕ ಗಡಿ ದಾಟಿ  22 ಕೆ ಎಲ್ಲರೂ ಕಾಲಿಡುತ್ತಿದ್ದೇವೆ.20 ಮತ್ತು 21 ನೆಯ ಈ ಅವಧಿ ಏನೆಲ್ಲಾ ಕಷ್ಟ ನಷ್ಟಗಳನ್ನು ಅನುಭವಿಸಿದೆವು ಎಂಬುದು ಎಲ್ಲರಿಗೂ ತಿಳಿದ ವಿಷಯವೇ. ಕೊರೋನಾ ಮಹಾಮಾರಿ ಸಾಂಕ್ರಾಮಿಕ ಕಾಯಿಲೆಯಿಂದ ಸಹಸ್ರಾರು ಸಾವಿರ ಜನರ ಮರಣದ ನೋವಿನ ಕಂಬನಿ ಒರೆಸಿಕೊಳ್ಳುವ ಮುನ್ನವೇ..... ನಾಡಿನ ಅನರ್ಘ್ಯ ರತ್ನಗಳಂತೆ ಕಂಗೊಳಿಸಿ ತಮ್ಮ ಚಂದದ  ಮೊಗದ ಬಿಂಬವನ್ನು ಎಲ್ಲರ ಹೃದಯ ದಂಗಳದಲ್ಲಿ ಭಿತ್ತಿ ಕಣ್ಮರೆಯಾದ ಕಣ್ಮಣಿಗಳನೇಕರು.ಅದರಲ್ಲೂ ಮುಖ್ಯವಾಗಿ ರಾಷ್ಟ್ರದ ರಕ್ಷಣೆಗೆ ಗಡಿಯಲ್ಲಿ ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರಿಗೆ ಕೋಟ್ಯಂತರ ಜನರ ಪರವಾಗಿ ನಮನಗಳನ್ನು ಸಲ್ಲಿಸುತ್ತೇನೆ.ಯೋಧರ ಸ್ಮರಣೆಗಾಗಿ ನನ್ನದೊಂದು ಸ್ವರಚಿತ ಚುಟುಕು ......

ತಾಯ್ನಾಡ ರಕ್ಷಿಸಲು ತಾಯ ಮಡಿಲು ತೊರೆದಿರುವೆ ।
ವೀರಯೋಧನಾಗಿ ಗಡಿನಾಡು ಕಾಯುತ್ತಿರುವೆ।
ಕರುಳಬಳ್ಳಿಯ ಕನವರಿಕೆಯ ಕೂಗು ಸೆಳೆಯುತ್ತಿದೆ । 
ಹಸುವಿಗಾಗಿ ಹಂಬಲಿಸುವ ಕರುವಿನಂತಾಗಿದೆ।
ಹೆತ್ತಮ್ಮನ ಕರೆಗಿಂತ ಹೊತ್ತಮ್ಮನ ಪೊರೆಯಲು।
ಶಪಥಗೈದು ಬಂದಿಹೆ ನೀನು ಅದರಂತೆ ನಡೆಯುತಿರುವೆ ।

ಎಂದು  ರಾಷ್ಟ್ರದ ಜನರಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸುವ ಯೋಧರನ್ನೆಲ್ಲ ಸ್ಮರಿಸುತ್ತಾ ....
ಅದೇ ರೀತಿ ಕನ್ನಡ ನಾಡಿನ ಹಿರಿಯ ಸಾಹಿತಿ 'ನಿತ್ಯೋತ್ಸವ ಕವಿ, ಎಂದೇ ಪರಿಚಿತರಾದ ಕೆ. ಎಸ್. ನಿಸಾರ್ ಅಹ್ಮದ್ ಅವರ ಅಗಲಿಕೆ ಕನ್ನಡ ಸಾಹಿತಿಗಳ ಪಾಲಿಗೆ ತುಂಬಲಾರದ ನಷ್ಟ .ಮತ್ತು   "ಸಂಗೀತಬ್ರಹ್ಮ" ಹಾಡುಗಾರರಾದ ಎಸ್. ಪಿ .ಬಾಲಸುಬ್ರಹ್ಮಣ್ಯಂ ಹಾಗೂ ಸಂಗೀತ ನಿರ್ದೇಶಕ' ರಾಜನ್' ರವರ ಮರಣವು ಸಂಗೀತಪ್ರೇಮಿಗಳ ಮತ್ತು ಉದಯೋನ್ಮುಖ ಸಂಗೀತಗಾರರ ಪಾಲಿಗೆ ನೋವಿನ ಸಂಗತಿ .ಆ ಸಂದರ್ಭದಲ್ಲಿ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರ ಕುರಿತು ನಾ ರಚಿಸಿದ ಸ್ವರಚಿತ ಕವನ ....
               ॥ಗಾನ ಗಂಧರ್ವ॥
ಭಕ್ತಿಸುಧೆ ಭಾವಲಹರಿಯ ಜೀವ ನೀನು ಕನ್ನಡಿಗ ಮೇರುನಟರ ಅಂತರ್ಧ್ವನಿ ನೀನು ಬಹುಭಾಷಾ ಗಾನಸಾಧಕ ನೀನು 
ಎದೆತುಂಬಿ ಹಾಡುವವರಿಗೆ ಚೇತನ ನೀನು ।

ಘಂಟಾಸಾಲರ ಏಕಲವ್ಯ ಶಿಷ್ಯನಾಗಿ 
ಹಂಸಲೇಖರ ಸಂಗೀತದ ಸಂಗಾತಿಯಾಗಿ 
ಪ್ರೇಮಲೋಕ ಗೀತೆಗಳ ಮೇರು ಪರ್ವತವಾಗಿ 
ಅಮೃತವರ್ಷಿಣಿಯ ಬೆಳದಿಂಗಳಾಗಿ ಮರೆಯಾದೆಯಾ।

ಉಮಂಡು ಉಮಂಡು ಘನ ಗರಜೆ ಪದರಾ... ಹಿಂದೂಸ್ತಾನಿ ಗಾಯನದ ಸವಿಯುಣಬಡಿಸಿ ಶಂಕರಾಭರಣಂ ಶಾಸ್ತ್ರೀಯ ಸಂಗೀತದತ್ತ ಕರೆದೊಯ್ದು 
ಗಾನಕೋಗಿಲೆಯಾದ ಗಾನಗಂಧರ್ವನೇ ಮರೆಯಾದೆಯಾ।
                2020-21ರ  ಈ ಅವಧಿಯಲ್ಲಿ ಕನ್ನಡ ರಂಗಭೂಮಿಯ ಹಲವಾರು ಹಿರಿಯ, ಕಿರಿಯ ಚೇತನಗಳು ಕಣ್ಮರೆಯಾದದ್ದು ಇಡೀ ನಾಡಿನ ಜನತೆಯನ್ನು ದುಃಖದ ಮಡುವಿನಲ್ಲಿ ತಳ್ಳಿದೆ.2020ರಲ್ಲಿ ಚಿರಂಜೀವಿ ಸರ್ಜಾ, ಬುಲೆಟ್ ಪ್ರಕಾಶ್, ಮಿಮಿಕ್ರಿ ರಾಜಗೋಪಾಲ್, ಹಿರಿಯ ನಟಿ ಶಾಂತಮ್ಮ, ಕಿಶೋರಿ ಬಲ್ಲಾಳ್, ಮಿರ್ಚಿ ರಾಜಗೋಪಾಲ್, ಮಿಚೆಲ್ ಮಧು, ಚಂದನಾ, ರಾಕ್ ಲೈನ್ ಸುಧಾಕರ್, ಮೆಚ್ಚಿನಾ ಮಿಚೆಲ್ , ಸಿದ್ಧರಾಜು ಕಲ್ಯಾಣಕರ್ ,ಹುಲಿಮನೆ ಗಂಗಾಧರಯ್ಯ, ಮುಂತಾದ ಕಲಾವಿದರ ಮರಣ  ಕನ್ನಡ ಚಿತ್ರರಂಗದ ಹಿರಿ, ಕಿರುತೆರೆಗೆ ತುಂಬಲಾರದ ನಷ್ಟ.2021ರಲ್ಲಿ  ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ಮತ್ತು ಪುನೀತ್ ರಾಜ್ ಕುಮಾರ್ ರವರ ಅಕಾಲಿಕ ಸಾವು ಸರ್ವರನ್ನು ಮತ್ತಷ್ಟು ದುಃಖದ ಮಡಿಲಿಗೆ ತಳ್ಳಿದೆ.
ಯುವರತ್ನ, ರಾಜರತ್ನ, ಪವರ್*ಎಂದು ಅಭಿಮಾನಪಡೆದ ಪುನೀತ್ ರಾಜಕುಮಾರ್ ಅಕ್ಟೋಬರ್ 29 ರಂದು ತೀವ್ರ ಹೃದಯಾಘಾತದಿಂದ ಮರಣ ಹೊಂದಿದ್ದು, ಕನ್ನಡನಾಡು ಕಂಡ ಅಮೂಲ್ಯ ರತ್ನ ಇನ್ನಿಲ್ಲವಾಗಿದೆ. ಕೇವಲ ನಮ್ಮ ರಾಷ್ಟ್ರವಲ್ಲದೆ ಇಡೀ ವಿಶ್ವವೇ ಪುನೀತ್ ರಾಜ್ ಕುಮಾರ್ ಸಾವಿಗೆ ಕಂಬನಿ ಮಿಡಿದ ದೃಶ್ಯಗಳು ಟಿವಿ. ಪರದೆ ಮೇಲೆ ನೋಡುತ್ತಾ, ಸಹಸ್ರ ಜನರ ಕಣ್ಣಂಚಿನಲ್ಲಿ ನೀರು ತುಂಬಿ ಬಂದದ್ದು ಸತ್ಯ. ಏಕೆಂದರೆ ಇವರೊಬ್ಬ ನಟ ಮಾತ್ರವಾಗಿ ಜನರನ್ನು ಗೆಲ್ಲಲಿಲ್ಲ .......ಈ ನಟನ ಸಾಧನೆಗೆ ಹೃದಯಪೂರ್ವಕವಾಗಿ ನನ್ನದೊಂದು ಸ್ವರಚಿತ ಕವನ ....
                   ॥ಅಮರ ಕುವರ ॥

ಬೆಟ್ಟದ ಹೂವಾಗಿ ಚಲಿಸುವ ಮೋಡಗಳ ನೋಡುತಾ 
ಭಾಗ್ಯವಂತನಾದ ವಸಂತಗೀತದ ಬಾಲನಟನು  
ಭಕ್ತಪ್ರಹ್ಲಾದನಾಗಿ ಹರಿನಾಮಸ್ಮರಣೆಮಾಡುತ 
ದೇವರೆಲ್ಲೆಡೆ ಇರುವೆನೆಂದು ಅರುಹಿದ ಲೋಹಿತನಿವನು।

ಅಪ್ಪು ಚಿತ್ರದಲ್ಲಿ ಮೊದಲ ಪ್ರೌಢಿಮೆ ಮೆರೆದು 
ಆಕಾಶದಲ್ಲಿ ಅಜೇಯ ಅರಸನಾಗಿ 
ಅಂಜನಿಪುತ್ರನಂತೆ ತಂದೆಯ ಮಿಲನಕಾಗಿ 
ಕನ್ನಡಿಗರ ವಂಶಿಯಾಗಿ ನಮ್ಮನ್ನಗಲಿದ ಪುನೀತನಿವನು। 

ನಟನಾವಿಶಾರದ ಗಾಯನಸುಧೆಯರಿಸಿದ 
ಕನ್ನಡದ ಕೋಟ್ಯಾಧಿಪತಿಯಲ್ಲಿ ನಿರೂಪಿಸಿದ 
ಚಿತ್ರ ನಿರ್ಮಾಪಕನಾಗಿ ನಾಡಿನಲ್ಲಿ ಮೆರೆದ ದೊಡ್ಮನೆ ಹುಡ್ಗ  ಪವರ್ ಸ್ಟಾರ್  ಯುವರತ್ನನಿವನು ।
 
ವೃದ್ಧರಿಗೆ ಅನಾಥರಿಗೆ ಆಶ್ರಯದಾತನಾಗಿ 
ಗೋಶಾಲೆಗಳ ಮೂಲಕ ಮೂಕಜೀವಿಗಳ ಶಕ್ತಿಯಾಗಿ 
ಭೂಮಿಗೆ ಬಂದ ಭಗವಂತನಂತೆ ರಾಜಕುಮಾರನಾಗಿ 
ಜಗದ ಹೃದಯಗಳಲಿ ನಗುವರಳಿಸಿ 
ನೇತ್ರದಾನ ಮಾಡಿದ ಅಮರ ಕುವರನಿವನು ।
 
ಎಷ್ಟೋ ವಯೋವೃದ್ಧರು ನಮ್ಮ ಆಯಸ್ಸನ್ನೆಲೢಾ  ಭಗವಂತ ಪುನೀತನಿಗೆ ಧಾರೆಯರೆದು  ನಮಗೆ ಸಾವು ತರಬಾರದಾ? ಎಂದು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದು ಉಂಟು .ಅಂತಹ ಮಾತುಗಳನ್ನು ಆಡಿದವರಲ್ಲಿ "ಕರುನಾಡು ರತ್ನ" ಕಾರ್ಯಕ್ರಮದಲ್ಲಿ ಕನ್ನಡದ ಮೇರು ನಟ ರವಿಚಂದ್ರನ್ ರವರು ಸಹ ಒಬ್ಬರು. ಕಾಯಿಲೆಯಿಂದ ನರಳುತ್ತಿರುವ  ನಮ್ಮ ತಾಯಿಯ ಆಯಸ್ಸನ್ನಾದರೂ ಪುನೀತ್ ನಿಗೆ ನೀಡು ಭಗವಂತ ಎಂದು ಕೇಳಿ ಕೊಳ್ಳತ್ತಿದ್ದೆ ಎಂದು ಹೃದಯ ತುಂಬಿದ ಮಾತುಗಳನ್ನಾಡಿ, ಒಂದು ಗಾಯನದ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದು ವಿಶೇಷವಾಗಿತ್ತು.
        ಹೂವಿನಂಥ ಮನಸು
        ಈ ಹೂವಿಗಿಲೣ ಮುನಿಸು  
         .............................
        ಬಾಡದ ಹೂ ನೀನು 
       ನಮ್ಮೂರ ಕಾಮಧೇನು......  ಎಂದು ಹಾಡುತ್ತ ಭಾವಪರವಶರಾಗಿ ಪುನೀತ್ ರಾಜಕುಮಾರನನ್ನು ಸ್ಮರಿಸಿದ ಕ್ಷಣವೂ ಅಮೂಲ್ಯ ಕ್ಷಣ.

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು 
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ 
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ 
ಎಲ್ಲರೊಳಗೊಂದಾಗು ಮಂಕುತಿಮ್ಮ ....

ಎಂಬ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಅದ್ಭುತ ಸಾಲುಗಳು ಈತನಿಗೆ ಮಾದರಿಯಾಗಿವೆ.

ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ 
ಮುನಿಯಬೇಡ ಅನ್ಯರಿಗೆ ಅಸಹ್ಯಪಡಬೇಡ 
ತನ್ನ ಬಣ್ಣಿಸಬೇಡ ಇದಿರ ಹಳಿಯಲುಬೇಡ 
ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮದೇವನೊಲಿವ ಪರಿ ।.....ಎಂಬ ಬಸವಣ್ಣನವರ ವಚನದಂತೆ ತನ್ನನೆಂದು ಬಣ್ಣಿಸದೆ ಅಂತರಂಗ ಮತ್ತು ಬಹಿರಂಗ ಶುದ್ದಿಯಲಿ ಜನಮನಗೆದ್ದ ಶ್ರೇಷ್ಠ ನಟ
ಪುನೀತ್ ರಾಜ್ ಕುಮಾರ್. 

ಬದಲಾಗೋಣ ಬನ್ನಿ...... ಎಂದು ಶೀರ್ಷಿಕೆ ಹಾಕಿ ಹೊಸ ವರ್ಷದಲ್ಲಿ ದುಃಖದ ವಿಷಯವನ್ನೇ ಹೇಳಿ ನಿಮಗೆ ನೋವು ಕೊಡುವುದು ನನ್ನ ಉದ್ದೇಶವಲ್ಲ .ನಿನ್ನೆಯ ದಿನದ ತಪ್ಪುಗಳನ್ನು ಇಂದು ತಿದ್ದಿಕೊಂಡರೆ ಮಾತ್ರ ನಾಳೆ ಎನ್ನೋದು ಚೆನ್ನಾಗಿರುತ್ತೆ ಎಂದು ತಿಳಿಯುವ ಕಿರು ಪ್ರಯತ್ನವಷ್ಟೆ .ಪ್ರತಿವರ್ಷವೂ ರೈತರ ದಿನಾಚರಣೆ, ನೇಕಾರರ ದಿನಾಚರಣೆ, ಆಹಾರ ಉಳಿಸಿ ,ಹಸಿದವರ ಒಡಲ ತುಂಬಿಸಿ, ಎಂಬಂತಹ ವೀಡಿಯೊಗಳು, ಸ್ಟೇಟಸ್ ಗಳು ಆಯಾ ಕಾಲಕ್ಕೆ ತಕ್ಕಂತೆ ಎಲ್ಲರೂ ನೋಡುತ್ತೇವೆ. ಹಾಗೆಂದ ಮಾತ್ರಕ್ಕೆ ರೈತರ ಕಷ್ಟ, ನೇಕಾರರ ಕಷ್ಟ ಕಡಿಮೆಯಾಗುವುದಿಲ್ಲ. ಇವರ ಆತ್ಮಹತ್ಯೆಯೂ ನಿಲ್ಲೋಲ್ಲ. ನಾವೇಕೆ ಇವರ ಸಮಸ್ಯೆಗಳಿಗೆ ಸ್ಪಂದಿಸುವ ಹೊಸ ವಿಚಾರ ಮಾಡಬಾರದು ? ಅಂತ ನನಗೆ ಅನಿಸಿತು.ಇದು ಕೇವಲ ನನ್ನ ಅನಿಸಿಕೆ ಅಷ್ಟೆ .ಒಬ್ಬ ವ್ಯಕ್ತಿಗೆ ಒಂದು ವಸ್ತುವಿನ ಬೆಲೆ ಗೊತ್ತಾಗೋದು ಅದನ್ನು ಕೊಳ್ಳಲು ತಾನು  ಸಂಪಾದಿಸಿದ ಹಣ ಕೊಟ್ಟಾಗ. ಅದೇ ರೀತಿ ಆಹಾರದ ಬೆಲೆ, ಊಟ ಮಾಡುವ ಆಹಾರವನ್ನು ಅನವಶ್ಯಕವಾಗಿ ಕಸದ ಬುಟ್ಟಿಗೆ ಹಾಕುವವರಿಗೆ  ಅದರ ಬೆಲೆ ಎಂದೂ ಗೊತ್ತಾಗುವುದಿಲ್ಲ. ಅದನ್ನು ಬೆಳೆಯುವ ರೈತನ ಕಷ್ಟ ಏನು ?ಅಂತ ಊಟ ಮಾಡಿದ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಅದಕ್ಕಾಗಿ ಒಬ್ಬ ಶಿಕ್ಷಕಿಯಾಗಿ ನನಗೆ ಅನಿಸಿದ್ದು ,    ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಅವಧಿಯನ್ನು ಅಥವಾ ಕ್ರಾಫ್ಟ್ ವರ್ಕ್  ಅವಧಿಯನ್ನು ಕಡ್ಡಾಯಗೊಳಿಸಿ ಶಾಲಾ ಮಕ್ಕಳಿಗೆ ಬಡ ರೈತರ ಹೊಲದಲ್ಲಿ ಕೆಲಸಕ್ಕೆ ಕಳುಹಿಸಬಹುದಲ್ಲಾ?ಇದರಿಂದ ಆ ಮಗು ಸಾಕಷ್ಟು ವಿಷಯದ ಜ್ಞಾನವನ್ನು  ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ಬದಲು ಪರಿಸರದಲ್ಲಿ ಕಲಿಯುತ್ತದೆ. ಸಮಾಜ ವಿಜ್ಞಾನ ಪಾಠಗಳಲ್ಲಿ ಗ್ರಾಮ, ವ್ಯವಸಾಯ, ಬಡತನ, ಮಣ್ಣಿನ ವಿಧಗಳು, ಬಡವರು ಎದುರಿಸುವ ಸಮಸ್ಯೆಗಳು, ಆಹಾರ ಧಾನ್ಯಗಳು ,ಹಣದುಬ್ಬರ ಇತ್ಯಾದಿ ವಿಷಯಗಳನ್ನು ಅಳವಡಿಸಿದ್ದಾರೆ .ಇವುಗಳನ್ನು ನೈಜತೆಯ ಸ್ಥಳದಲ್ಲಿ ಕಲಿಸಿದರೇ ಕಲಿಕೆ ಮಕ್ಕಳಿಗೆ ಇನ್ನೂ ಪರಿಣಾಮಕಾರಿಯಾಗುತ್ತದೆ .ಜೊತೆಗೆ ಮಣ್ಣಿನ ಜ್ಞಾನ, ವ್ಯವಸಾಯದ ವಿವಿಧ ಬೆಳೆಗಳು, ಅವುಗಳನ್ನ ಬೆಳೆಯುವಾಗ ಅನುಸರಿಸುವ ಕ್ರಮಗಳು, ಬಿಸಿಲು -ಮಳೆಯೆನ್ನದೆ ರೈತ ಅನುಭವಿಸುವ ಕಷ್ಟ- ನಷ್ಟ ,ಮಳೆ, ಪ್ರವಾಹಗಳಿಂದ ಆಗುವ ದುಷ್ಪರಿಣಾಮ, ಬೆಳೆ ನಾಶ ,ಇತ್ಯಾದಿ ವಿಷಯಗಳನ್ನು ತಿಳಿಯುವುದರಿಂದ ಮಗುವಿಗೆ ಆಹಾರ ಧಾನ್ಯದ ಬೆಲೆ ಏನು? ಯಾಕೆ ಅದನ್ನು ಸಂರಕ್ಷಿಸಬೇಕು ?ಊಟ ಮಾಡುವ ಆಹಾರವನ್ನು ಅಗತ್ಯಕ್ಕೆ ತಕ್ಕಷ್ಟು ಹಾಕಿಸಿಕೊಳ್ಳುವ, ಹಾಳು ಮಾಡದಂತೆ ಜಾಗೃತಿ ವಹಿಸಿಕೊಳ್ಳುವ ಪಾಠವನ್ನು ಮಕ್ಕಳು ಕಲಿಯುತ್ತಾರೆ.ಈ ಪಾಠ ಬದುಕಿನುದ್ದಕ್ಕೂ ಅವರಿಗೆ ಮಾರ್ಗದರ್ಶನವಾಗುತ್ತದೆ. ಮುಂದೆ ಯಾರಾದರೂ ಆಹಾರವನ್ನು ವೇಸ್ಟ್ ಮಾಡುವುದನ್ನು ಕಂಡರೆ, ಅದರ ಮಹತ್ವವನ್ನು ಕಲಿತಂತಹ ಪ್ರತಿಯೊಂದು ಮಗು ಇತರರಿಗೆ ತಿಳಿಹೇಳಿ ರೈತನ ಬೆವರಿನ ಶ್ರಮದ ಕಥೆಯನ್ನು ತಿಳಿಸುತ್ತಾನೆ.ಅಲ್ಲದೆ ಪ್ರೌಢಾವಸ್ಥೆಯಿಂದ ಕಾಲೇಜು ಹಂತದಲ್ಲಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. ಅವರು ಯಾವುದೇ ಗೌರವಾನ್ವಿತ ಹುದ್ದೆಯ ಬಗ್ಗೆ ಅಧ್ಯಯನ ನಡೆಸುತ್ತಿರಲಿ, ಹಸಿವೆಯಾದಾಗ ಎಲ್ಲರಿಗೂ ಆಹಾರ ಬೇಕೇ ವಿನಃ ಅವರ ಪದವಿ ಪುರಸ್ಕಾರಗಳು ಹೊಟ್ಟೆ ತುಂಬಿಸುವುದಿಲ್ಲ.ನಮ್ಮ ದೇಶದಲ್ಲಿ ಶೇಕಡ 70% ಕ್ಕಿಂತ ಹೆಚ್ಚು ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದಾರೆ.ಮಾನರಕ್ಷಣೆಗಾಗಿ ಬಟ್ಟೆ ನೇಯುವ ನೇಕಾರಿಕೆ ಲಕ್ಷಾಂತರ ಜನರ ಕುಲಕಸಬು. ಕೃಷಿ ದೇಶದ ಮೂಲ ವೃತ್ತಿ. ರೈತ ದೇಶದ ಬೆನ್ನೆಲುಬು. ದೇಶ ಸುಭದ್ರ ವಾಗಿರಬೇಕೆಂದರೆ ಬೆನ್ನೆಲುಬು ಗಟ್ಟಿಯಾಗಿರಬೇಕು. ಅಂದರೆ ರೈತ ಆರೋಗ್ಯಯುತನಾಗಿರಬೇಕು ಅಂದಾಗ ಮಾತ್ರ ಎಲ್ಲರೂ ಆಹಾರ ಕಾಣಲು ಸಾಧ್ಯ .ಅಂತಹ ರೈತನಿಗೆ  ಮತ್ತು ನೇಕಾರನಿಗೆ ಆತ್ಮವಿಶ್ವಾಸ ತುಂಬಲು "ನಾವಿದ್ದೇವೆ" ಎಂದು ವಿದ್ಯಾರ್ಥಿಗಳು ಹೆಗಲು ಕೊಟ್ಟರೆ, ನಮ್ಮ ದೇಶದಲ್ಲಿ 'ರೈತರ ಆತ್ಮಹತ್ಯೆ'ನೇಕಾರ ಆತ್ಮಹತ್ಯೆ ಎಂಬ ವಿಷಯ ನಮ್ಮಿಂದ ಬಹುದೂರ ಸರಿಯಬಹುದು.ದೇಶದಲ್ಲಿರುವ ಪ್ರತಿಯೊಂದು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಕೇಂದ್ರದ ಸಮೀಪವೇ ಇರುವ ಬಡ ರೈತರ ಹೊಲದಲ್ಲಿ ವಾರಕ್ಕೊಮ್ಮೆಯಾದರೂ ಒಂದು ಅವಧಿಯ ತರಗತಿ ಸಮಯವನ್ನು ಆಯಾ ಕಾಲಕ್ಕೆ ತಕ್ಕಂತೆ ಹೊಲದಲ್ಲಿ ಬಿತ್ತನೆ, ಕಳೆ ತೆಗೆಯುವ, ತೆನೆ ಮುರಿಯುವ, ಸಸಿ ನಾಟಿ ಮಾಡುವ, ರಾಶಿ ಮಾಡುವ ಇತ್ಯಾದಿ ಪ್ರತಿಯೊಂದ ಕೆಲಸಗಳಲ್ಲಿ ವಿದ್ಯಾರ್ಥಿಗಳು ಸಹಾಯ ಮಾಡಿದರೆ ಯಾವ ರೈತನೂ ಸಾಲದ ಸುಳಿಗೆ ಸಿಲುಕದೆ ಸಮೃದ್ಧ ಬೆಳೆ ಬೆಳೆದು ಸಮಾಜಕ್ಕೆ ಆಹಾರಧಾನ್ಯಗಳನ್ನು ಕೊಡುಗೆಯಾಗಿ ನೀಡುತ್ತಾನೆ. ಇದರಿಂದ ಬಡ ರೈತನು ಕೆಲಸಗಾರರಿಗೆ ಕೊಡುವ ಕೂಲಿ ಹಣವನ್ನು ಉಳಿಸಲು ವಿದ್ಯಾರ್ಥಿಗಳು ಸಹಾಯ ಮಾಡಿದಂತಾಗುವುದು.ಅದರಂತೆ ನೇಯ್ಗೆ ಕೆಲಸದಲ್ಲಿ ಹತ್ತಿಯಿಂದ ನೂಲನ್ನು ತೆಗೆಯುವ, ನೂಲಿನಿಂದ ಬಟ್ಟೆಯನ್ನು ನೇಯುವ, ವಿವಿಧ ಹಂತಗಳ ಪರಿಚಯ ಮಾಡುವುದು. ಒಂದು ಅಮೂಲ್ಯ ಮೌಲ್ಯದ ಕಲಿಕೆಯ ಜೊತೆಗೆ ಹಲವು ವಿಷಯಗಳ ಜ್ಞಾನವನ್ನು ವಿದ್ಯಾರ್ಥಿಗಳು  ಪಡೆದಂತಾಗುತ್ತದೆ.ಪಾಲಕರು ಬಹುಶಃ ಈ ಒಂದು ಚಟುವಟಿಕೆಯಿಂದ ಸಂತೋಷಗೊಳ್ಳಬಹುದು.  ಯಾವ ವಿದ್ಯಾರ್ಥಿಗೂ ಇದು ಹೊರೆಯಾಗುವುದಿಲ್ಲ ಎನ್ನುವುದು ನನ್ನ ಭಾವನೆ.ಅಲ್ಲದೆ ಕೃಷಿ ಮತ್ತು ನೇಕಾರಿಕೆ ಎಂಬ ಪವಿತ್ರ ವೃತ್ತಿಗಳ ಬಗ್ಗೆ ತಾತ್ಸಾರ ಮಾಡದೆ ವೃತ್ತಿಯನ್ನು ಪ್ರೀತಿಸುವುದರ ಜೊತೆಗೆ ರೈತನನ್ನು ಮತ್ತು ನೇಕಾರನನ್ನು ಮಿತ್ರನನ್ನಾಗಿ ಮಾಡಿಕೊಂಡು ಪ್ರತಿಯೊಂದು ಕ್ಷೇತ್ರದ ವಿದ್ಯಾರ್ಥಿಯು ರೈತರ ಮತ್ತು ನೇಕಾರರ ಬಗ್ಗೆ ಕೀಳಾಗಿ ಮಾತಾಡದೆ ಸಮಾಜದಲ್ಲಿ ಅವರಿಗೆ ಒಳ್ಳೆಯ ಸ್ಥಾನ ದೊರೆತಂತಾಗುತ್ತದೆ.ರೈತ ಮತ್ತು ನೇಕಾರ ಎರಡು ಕಣ್ಣುಗಳಿದ್ದಂತೆ ಎಂದು ಬಾಯಿ ಮಾತಿನಲ್ಲಿ ಹೇಳುವ ಬದಲು ಅದನ್ನು ಕಾರ್ಯರೂಪಕ್ಕೆ ತಂದರೆ ಈ ಎರಡೂ ಕಣ್ಣುಗಳಿಗೆ ನ್ಯಾಯ ದೊರಕಿಸಿದಂತಾಗುತ್ತದೆ   ಎನ್ನುವುದು ನನ್ನ ವಿಚಾರ.ನನ್ನ ಈ ವಿಚಾರವನ್ನು  ರಾಷ್ಟ್ರಮಟ್ಟದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ, ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಸಚಿವರಿಗೆ ಈ ಲೇಖನದ ಮೂಲಕ  ನಿವೇದನೆ ಮಾಡಿಕೊಳ್ಳುತ್ತಿದ್ದೇನೆ. 
              ವರುಷಗಳು ಉರುಳುತ್ತಿವೆ ಪರಿಸರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳಾಗುತ್ತಿವೆ ಪರಿಸರದ ನಾಶದಿಂದ ಅರಣ್ಯಗಳು ಅಳಿವಿನಂಚಿನಲ್ಲಿವೆ .ನಮ್ಮ ಮುಂದಿನ ಕುಡಿಗಳಿಗೆ ಶುದ್ಧ ನೆಲ, ಜಲ, ಗಾಳಿ ದೊರೆಯಬೇಕೆಂದರೆ ನಾವೆಲ್ಲರೂ ಪರಿಸರದ ಸಂರಕ್ಷಣೆಗೆ ಕೈಜೋಡಿಸುವ ಅವಶ್ಯಕತೆಯಿದೆ . ಪರಿಸರದ ದಿನಾಚರಣೆಯನ್ನು ಸ್ಟೇಟಸ್ಸುಗಳಿಗೆ ಹಾಕಿ ಸಂಭ್ರಮ ಪಡುವ ಬದಲು ಒಂದು ಸಸಿಯನ್ನಾದರೂ ನೆಟ್ಟು ಸಾರ್ಥಕ ಜೀವನ ಬದುಕುವ ಅವಶ್ಯಕತೆಯಿದೆ. ಬರುವ ಸಾಂಕ್ರಾಮಿಕ ಕಾಯಿಲೆಗಳನ್ನು ಮೆಟ್ಟಿ ನಿಲ್ಲುವಂತಹ ಆತ್ಮವಿಶ್ವಾಸ ಬೆಳೆಸಿ, ಸರ್ಕಾರದ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳುವ  ಅವಶ್ಯಕತೆಯಿದೆ.ದಿನದಿಂದ ದಿನಕ್ಕೆ ಮೌಲ್ಯಗಳ ಅಧಃಪತನವಾಗುತ್ತಿದೆ. ನೀರ ಮೇಲಿನ ಗುಳ್ಳೆಯಂತಿರುವ ನಮ್ಮ ಜೀವನಕ್ಕೆ ಸಂತೋಷ, ಸಂಭ್ರಮದ ಜೊತೆಗೆ ಸಹಾಯ, ಪರೋಪಕಾರದಂತಹ ಅಳಿಲು ಸೇವೆಗಳಿಂದ ಜೀವನವನ್ನು ಧನ್ಯವಾಗಿಸಿಕೊಳ್ಳೋಣ. 
              ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಕಲಿಕೆಯಲ್ಲಾಗಲಿ, ವೃತ್ತಿಯನ್ನು ಪಡೆಯುವ ಸಂದರ್ಭದಲ್ಲಾಗಲಿ, ಸಾಕಷ್ಟು ನೋವನ್ನು ಅನುಭವಿಸುತ್ತಿದ್ದಾರೆ.ಕಾರಣವಿಷ್ಟೆ ನಾವು ಪ್ರತಿಶತ 90%ರಷ್ಟು ಅಂಕ ಪಡೆದರೂ ನಮಗಿಂತ ಕಡಿಮೆ ಅಂಕವನ್ನು ಪಡೆದ ಕೆಳವರ್ಗದವರಿಗೆ  ಆ ಉನ್ನತ ಶಿಕ್ಷಣ ಅಥವಾ ವೃತ್ತಿಗಳು ದೊರೆಯುತ್ತಿವೆ. ಅಂದ್ರೆ ನಮ್ ದೇಶದಲ್ಲಿ ಪ್ರತಿಭೆಗೆ ಬೆಲೆಯಿಲ್ಲ. ಜಾತಿಗೆ ಬೆಲೆ ಇದೆಯೇ? ಎಂದು ನೊಂದುಕೊಂಡು ಆಸಕ್ತಿ ಇರುವ ಕ್ಷೇತ್ರ ದೊರೆಯದೆ ನಿರಾಸಕ್ತಿಯ ವಿಷಯವನ್ನು ಅನಿವಾರ್ಯವಾಗಿ ಆಯ್ಕೆ ಮಾಡಿಕೊಂಡು ಕಲಿಕೆಯತ್ತ, ವೃತ್ತಿಯತ್ತ ತಮ್ಮ ಜೀವನ ನಡೆಸುತ್ತಿರುವುದು ವಿಪರ್ಯಾಸ.    ಸ್ವಾತಂತ್ರ ಲಭಿಸಿ  74 ವರ್ಷಗಳು ಗತಿಸಿದರೂ ಮೀಸಲಾತಿಯ ಸೌಲಭ್ಯ ಹಾಗೆಯೇ ಮುಂದುವರಿದಿದೆ.  ಇನ್ನೂ ಎಷ್ಟು ವರ್ಷಗಳವರೆಗೆ ಮೀಸಲಾತಿಯ ವ್ಯವಸ್ಥೆಯಿದೆ? ಪ್ರತಿಭೆಯ ಆಧಾರದ ಮೇಲೆಯೇ ನಮಗೆ ವೃತ್ತಿಶಿಕ್ಷಣ ಕೋರ್ಸುಗಳ ಅಥವಾ ವೃತ್ತಿಗಳು ದೊರೆಯಲು ಸಾಧ್ಯವಿಲ್ಲವೇ?ಎಂಬ ನೋವಿನ ಅಳಲು ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕಾಡುತ್ತಿದೆ.ಇದರ ಬದಲಾವಣೆಗೂ ಸಹ ನಾವು ಶ್ರಮಿಸಬೇಕಾಗಿದೆ.ಸಾಕಷ್ಟು ಜನರು ತಮಗೆ ಇಷ್ಟವಾದ ವೃತ್ತಿ ದೊರೆಯದೆ ಅನಿವಾರ್ಯವಾಗಿ ಅನ್ಯವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ.ಹಾಗೆಂದ ಮಾತ್ರಕ್ಕೆ ನಿವೃತ್ತಿ ಆಗುವವರೆಗೂ ಅದೇ ವೃತ್ತಿಯಲ್ಲಿ ಮುಂದುವರಿಯಬೇಕೆಂಬ ನಿಯಮವೇನೂ ಇಲ್ಲವಲ್ಲ ?  ಸುಮಾರು ವರ್ಷಗಳವರೆಗೆ ಕೆಲಸ ಮಾಡಿದವರಿಗೆ ಈ ವೃತ್ತಿ ಸಾಕಪ್ಪಾ ಎನಿಸಿದರೆ ಅದರಿಂದ ನಿವೃತ್ತಿ ಹೊಂದಿ ನಿಮಗಿಷ್ಟವಾದ ವೃತ್ತಿಯನ್ನು ಮಾಡಬಹುದಲ್ಲಾ?ಇದರಿಂದಾಗಿ ಲಕ್ಷಾಂತರ ಜನ ಕಲಿತಂತಹ ವಿದ್ಯಾರ್ಥಿಗಳು ಕೆಲಸ ಸಿಗದೆ ನಿರುದ್ಯೋಗಿಗಳಾಗಿ ತರಕಾರಿ ಮಾರುವಂತಹ ಇನ್ನಿತರ ಅನ್ಯ ಉದ್ಯೋಗಗಳಲ್ಲಿ ತೊಡಗಿದ್ದಾರೆ .ಅವರಿಗೆ ನ್ಯಾಯ ಒದಗಿಸಿದಂತಾಗುವುದಿಲ್ಲವೇ? ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಸುಧಾರಿಸುವಲ್ಲಿ  ಒಂದು ಅವಕಾಶವನ್ನು ಕೊಡಬಾರದೇಕೆ? ಇರುವ ಕೆಲಸ ಬಿಟ್ಟರೆ ಲಕ್ಷಾಂತರ ರೂಪಾಯಿ ಮಾಸಿಕ ವೇತನ ಹೋಗುತ್ತದೆ ಎಂದು ಕ್ಷುಲ್ಲಕ ವಿಚಾರ ಮಾಡದೆ, ನೆಮ್ಮದಿಯ ಜೀವನಕ್ಕಾಗಿ,ಕೊನೆಗಾಲದಲ್ಲಿ ನೀವಂದುಕೊಂಡಂತೆ ಬದುಕಲು, ಪರರ ಒಳಿತಿಗಾಗಿ ನನ್ನ ನನ್ನ ತ್ಯಾಗ ಎಂದು ಭಾವಿಸಬಾರದೇಕೆ ?  ಸ್ತ್ರೀ- ಪುರುಷರ ನಡುವೆ ಸಮಾನತೆ ಎಂದು ಹೋರಾಡೋದು ಸಾಕು, ವೃತ್ತಿಗಳ ನಡುವೆ ಸಮಾನತೆ ಇರಲಿ ಎನ್ನುವ ವಿಚಾರ ಬೇಕು .ಇದರಿಂದಾಗಿ ಪರಸ್ಪರ ಒಂದು ವೃತ್ತಿಯವರು ಇನ್ನೊಂದು ವೃತ್ತಿಯವರನ್ನು ಪ್ರೀತಿಸುವ, ಗೌರವಿಸುವ ಭಾವನೆ ಬೆಳೆಯುತ್ತದೆ.ಹೀಗೆ  ಹಲವಾರು ವಿಚಾರ ಧಾರೆಗಳೊಂದಿಗೆ   ಹೊಸ ವರ್ಷಕ್ಕೆ ನನ್ನದೊಂದು ಹೊಸ ವಿಚಾರ ನಿಮಗೊಪ್ಪಿತವೇ?  ಎಂದು ನಿಮ್ಮೆಲ್ಲರನ್ನು ಕೇಳಿಕೊಳ್ಳುತ್ತಾ ,ಈ ಹೊಸವರ್ಷ ಎಲ್ಲರ ಜೀವನದಲ್ಲಿ ಹೊಸ ಚೈತನ್ಯವನ್ನು ತುಂಬಲಿ.ನೀವಂದುಕೊಂಡ ಶುಭ ಕೋರಿಕೆಗಳನ್ನೆಲ್ಲಾ ಭಗವಂತ ನೆರವೇರಿಸಲಿ,
ಕೊರೋನಾ, ಓಮಿಕ್ರೋನ ದಂತಹ ಸಾಂಕ್ರಾಮಿಕ ರೋಗಗಳು ವೃದ್ಧಿಸಲು ಅವಕಾಶ ನೀಡದೆ ಸರ್ವರೂ ಶುಚಿತ್ವದ ನಿಯಮಗಳ ಪಾಲನೆ ಮಾಡಿ, ಆ ರೋಗಗಳು ಹರಡದಂತೆ ಜಾಗ್ರತೆ ವಹಿಸಿ, ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳೋಣ .ಬರುವ ಸುಖ ದುಃಖಗಳನ್ನು ಬೇವು ಬೆಲ್ಲದಂತೆ ಸವಿದು ಯುಗಾದಿ ಹಬ್ಬವನ್ನು ಸ್ವಾಗತಿಸೋಣ....ಎಂದು ಬಯಸುತ್ತಾ ಬನ್ನಿ ಬದಲಾವಣೆಗೆ ಕೈ ಜೋಡಿಸಿ ಎಂದು ಪ್ರೀತಿಪೂರ್ವಕವಾಗಿ ಕೇಳಿಕೊಳ್ಳುತ್ತೇನೆ.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್ಲ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...