ಶುಕ್ರವಾರ, ಆಗಸ್ಟ್ 29, 2025

ಬೆಳಗು...

ಕವನ
    ಬೆಳಗು
ಬೆಳಗು ಬಾ ಬೆಳಕು
ಬೆಳದಿಂಗಳ ಬೆಳಕು ಚೆಲ್ಲುತ
ರಂಗು ರಂಗಿನ ಕಾಮನಬಿಲ್ಲಿನಂತೆ
ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ
ರಂಗು ರಂಗಿನ ರಂಗೋಲಿಯಂತೆ
ನೆನಪಿನಂಗಳದಿ ನಗು ನಗುತ
ನೀ ಬೆಳಗು ಬಾ ಬೆಳಕು... 
ಈ ಬಾಳ್ ಕತ್ತಲೆಯ ಬದುಕು 
ಹೊಸ ಜ್ಯೋತಿಯ ಹೊಂಬೆಳಕಲಿ 
ಸೂರ್ಯನ ಬೆಳಕು ಚೆಲ್ಲುತ 
ದ್ಯಿವ ಜ್ಯೋತಿಯ ಉದಯಿಸುತ 
ಬೆಳಗು ಬಾ ಬೆಳಕು...

        - ವಿ.ಎಂ.ಎಸ್.ಗೋಪಿ ✍️
         ಲೇಖಕರು, ಸಾಹಿತಿಗಳು
                 ಬೆಂಗಳೂರು.

ವಿಧ್ಯಾಪತಿ ವಿನಾಯಕ ...

.....ವಿದ್ಯಾಪತಿ ವಿನಾಯಕ.... 

ಭಾದ್ರಪದ ಮಾಸದ ಗಣೇಶ ಚೌತಿಯು 
ಸಿದ್ಧಿ ವಿನಾಯಕನಿಗೆ ವಾಹನ ಚಿಕ್ಕ ಇಲಿಯು 
ಬಹಳ ಪ್ರಸಿದ್ಧಿ ಕ್ಷಿಪ್ರ ಪ್ರಸಾದನ ಬುದ್ಧಿವಂತಿಕೆಯು 
ದೇವರಿಂದ ಜನ್ಮ ಪಡೆದ ನಮ್ಮ ವಿಶ್ವಮುಖನು

ಶಿವ ಪಾರ್ವತಿಯರ ಪ್ರೀತಿಯ ಸ್ಕಂದಪೂರ್ವಜನು
ವಿದ್ಯೆಗಿವನೇ ಭೂಷಣ ನಮ್ಮ ಗಜಮುಖನು 
ನಿನ್ನ ಪೂಜಿಸಿದೊಡೆ ಗಾನಪತ್ಯನಾದೆ ನಾನು 
ಸದಾ ಕಾಪಾಡುವ ದೇವಲೋಕದ ದೈವ ನೀನು 

ಮತ್ತೆ ಬಂದಿದೆ ಸಡಗರದ ಯಜ್ಞಕಾಯನ ಉತ್ಸವವು 
ತುಂಬಿದೆ ಹರ್ಷ ಭೂಮಿಯ ತುಂಬೆಲ್ಲವು 
ನಿತ್ಯ ಕಡಬು ಹೋಳಿಗೆಯ ನೈವೇದ್ಯವು 
ಸ್ಥಾಪಿಸಿ ಮಣ್ಣಿನ ಗಣಪತಿಯ ಪೂಜಿಸೋಣ ನಾವು ನೀವು 

ಸಿಡಿಸದಿರಿ ಜೋರಾಗಿ ಎಲ್ಲೆಡೆ ಪಟಾಕಿಗಳನ್ನು 
ಗೊತ್ತಿದ್ದರೂ ನಾಶಮಾಡಬೇಡಿ ಪ್ರಕೃತಿಯ ಸೊಬಗನ್ನು 
ಮಹಾ ಗಣಪತಿಯ ವಿಸರ್ಜನೆಯಲಿ ಮರೆಯದಿರಿ ಪ್ರತಿಜ್ಞೆಯನ್ನು 
ನಿರ್ವಿಘ್ನತಾ ಸಿದ್ಧಿಗಾಗಿ ಮೊದಲ ಪೂಜೆ ದೇವಾ ನಿಮಗಿನ್ನು

ಸಕಲ ಕಾರ್ಯಗಳಿಗೂ ಮುಂದಿರುವ ಸಿದ್ಧಿವಿನಾಯಕನೇ 
ನಂಬಿದ ಪಾಲಿನ ಭಕ್ತರ ಕೈ ಬಿಡದ ಮೂಷಿಕವಾಹನನೇ 
ಭೂಮಿಯ ಮೇಲಿನ ಎಲ್ಲರ ಕಷ್ಟ ನಿವಾರಿಸುವ ವಕ್ರತುಂಡನೇ 
ಭೂಲೋಕದ ಉದ್ಧಾರಕ್ಕಾಗಿ ಜನಿಸಿದ ಲಂಬೋದರನೇ

ಏಕದಂತ ಬಂದು ನಮಗೆಲ್ಲ ಹರ್ಷವ ತಂದನು 
ನಲಿಯುತ ಕುಣಿಯುತ ನಾನಾವೇಷದಿ ಬಂದನು 
ಗರಿಕೆಯ ಹುಲ್ಲಿನಲಿ ಸಕಲರ ಪ್ರೀತಿಯ ಕಂಡನು 
ಬೇಡಿದ ವರವನು ಭಕ್ತರಿಗೆ ದಯಪಾಲಿಸಿಹನು 
ಶ್ರೀ ಮುತ್ತು ಯ ವಡ್ಡರ
ಶಿಕ್ಷಕರು 
ಬಾಗಲಕೋಟ 
9845568484

ಶನಿವಾರ, ಆಗಸ್ಟ್ 23, 2025

ಗಣೇಶ ಚತುರ್ಥಿ...


ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ. ಗಣೇಶೋತ್ಸವ ಸಮಾರಂಭಗಳು ನಗರಗಳು ಸೇರಿದಂತೆ ಪ್ರತಿ ರಾಜ್ಯದ ಎಲ್ಲ ಹಳ್ಳಿ ಹಳ್ಳಿಗಳಲ್ಲಿ ಮನೆಗಳಲ್ಲಿ ಮನೆಯ ಅಂಗಳದ ಬೀದಿಗಳಲ್ಲಿ ಗಣೇಶ ಹಬ್ಬ ಆಚರಿಸುತ್ತಾರೆ. ಗಣೇಶೋತ್ಸವಗಳು ಅತೀ ವಿಜೃಂಭಣೆಯಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಗೆ ತನ್ನದೇ ಆದ ವೈಶಿಷ್ಟವಿದೆ. ಭಾದ್ರಪದ ಮಾಸ ಶುಕ್ಲ ಪಕ್ಷ ಚತುರ್ಥಿಯಂದು ಮಾಡುವ ಗಣೇಶನ ಹಬ್ಬ ಒಂದು ರೀತಿಯಲ್ಲಿ ವಿನಾಯಕನ ಹುಟ್ಟು ಹಬ್ಬವೆಂದೇ ಹೇಳಬಹುದು. ಗಣೇಶನ ಹಬ್ಬವನ್ನು ದೇಶದಾದ್ಯಂತ ಆಚರಿಸುತ್ತಾರೆ, ಜಾತಿ ಮತ ಭೇದವಿಲ್ಲದೇ ಶ್ರೀ ಗಣೇಶವನ್ನು ವೈಭವದಿಂದ 5 ದಿನಗಳವರೆಗೆ ಪೂಜಿಸುತ್ತಾರೆ. ಕೆಲವರು ಒಂದೇ ದಿನ ಪೂಜಿಸುತ್ತಾರೆ. ಗಣೇಶನ ಪೂಜೆಯ ಮೊದಲ ದಿನವೆ ಗೌರಿಪೂಜೆ ಮಾಡುತ್ತಾರೆ. ದೇಶದಲ್ಲೇ ಅತಿ ಹೆಚ್ಚು ವೈಭವದಿಂದ ಗಣೇಶಹಬ್ಬ ಆಚರಿಸುವ ಮಹಾರಾಷ್ಟ್ರ, ಗೋವಾ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ಪ್ರತಿಯೊಂದು ಮನೆ ಮನೆಯಂಗಳದಲ್ಲಿ ಗಣಪತಿಯ ಮೂರ್ತಿಯನ್ನು ತಂದು ಒಂದು ದಿನ, ಮೂರು, ಐದು, ಏಳು ಹನ್ನೊಂದು ಹಾಗು ಇಪ್ಪತ್ತೊಂದು ದಿನಗಳವರೆಗೆ ಪೂಜಿಸಿ, ಆರಾಧಿಸುತ್ತಾರೆ. ಮನೆಯಲ್ಲಿ ಯಾವುದೇ ಒಂದು ಶುಭ ಸಮಾರಂಭ ನಡೆಯುವ ಸಂದರ್ಭದಲ್ಲಿ ಶುಭ ಸಮಾರಂಭ ಆರಂಭವಾಗುವುದೇ ಗಣೇಶನ ಪೂಜೆಯಿಂದ ಗಣಪತಿಯನ್ನು ವಿಘ್ನನಿವಾರಕ ಎನ್ನುತ್ತಾರೆ. ನಾವು ಮಾಡುವಂತಹ ಕೆಲಸವು ಯಾವುದೇ ತೊಂದರೆಯಿಲ್ಲದೇ ಶೀಘ್ರವಾಗಿ ಪೂರ್ಣವಾಗಲಿ ಎಂದು ವಿನಾಯಕನಿಗೆ ಪೂಜೆ ಮಾಡುತ್ತೇವೆ. ಗಣೇಶ ಏಕದಂತ, ಮಂಗಳಮೂರ್ತಿ ವಿಘ್ನೇಶ್ವರ, ಲಂಬೋದರ, ವಿನಾಯಕ ಗಜಮುಖ ಮೋಷಿಕವಾಹಕ, ಮೋದಕ ಪ್ರಿಯ, ಪಿಲೈಯಾರ್, ಮುಂತಾದ ಅನೇಕ ಹೆಸರುಗಳಿವೆ. ವಿಘ್ನಗಳನ್ನು ವಿನಾಶ ಮಾಡುವುದರಿಂದ ವಿಘ್ನೇಶ್ವರ ಎಂದು ಕರೆಯುತ್ತೇವೆ. ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಮುನ್ನ ಹೂವು, ವಸ್ತ್ರ, ಮುಂತಾದ ಪೂಜ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳು ಕಾಗದ ಪ್ಲಾಸ್ಚಿಕ್ ನಿಂದ ಮಾಡಲಾದ ವಸ್ತುಗಳನ್ನು ಮುಂತಾದವುಗಳನ್ನು ತೆಗೆಯಬೇಕು. ವಿಸರ್ಜನೆ ಮಾಡುವ ಗಣೇಶನ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರಿಂದ ನೀರು ಪವಿತ್ರವಾಗುತ್ತದೆ. ಕೆರೆ ಮತ್ತು ಸಮುದ್ರದ ನೀರಿನಲ್ಲಿ ಮಣ್ಣಿನ ಗಣೇಶ ವಿಗ್ರಹಗಳನ್ನು ಮಾತ್ರ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಪ್ಲಾಸ್ಟಿಕ್ ವಸ್ತುಗಳು ಮರ ಮತ್ತು ಬಿದಿರು ಕಡ್ಡಿಗಳು ಕಸ ವಿಲೇವಾರಿ ಸ್ಥಳಗಳಿಗೆ ನೀಡಬೇಕು. ನಮ್ಮ ಸುತ್ತಮುತ್ತ ಇರುವ ಪರಿಸರ ನಾವು ಕಾಪಡಬೇಕು. ಈ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮಣ್ಣಿನಿಂದ ಮಾಡಿದ ಗಣಪತಿಗಳನ್ನು ನಮ್ಮ ನಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿ ಆಚರಿಸೋಣ. 

ಗಣೇಶ ಹಬ್ಬಕ್ಕೆ ವಿವಿಧ ಬಗೆಯ ಕಜ್ಜಾಯ.
 ಕುಚ್ಚಲಕ್ಕಿ ಕಜ್ಜಾಯ :
 ಕುಚ್ಚಲಕ್ಕಿ, ಬೆಲ್ಲ, ಕಾಯಿತುರಿ ತಲಾ ಒಂದು ಕಪ್, ಏಲಕ್ಕಿಪುಡಿ ಒಂದು ಚಮಚ. 
ವಿಧಾನ : ಕುಚ್ಚಲಕ್ಕಿಯನ್ನು ಪಟಪಟ ಸಿಡಿಯುವ ತನಕ ಹುರಿಯಿರಿ. ಅನಂತರ ತರಿತರಿಯಾಗಿ ಬೀಸಿ ಅಥಾವ ಮಿಕ್ಸಿಗೆ ಹಾಕಿಕೊಳ್ಳಿ, ಬೆಲ್ಲ ಕಾಯಿತುರಿ ಏಲಕ್ಕಿ ಮಿಶ್ರಣಕ್ಕೆ ಅಕ್ಕಿಯ ತರಿಯನ್ನು ಬೆರಸಿ. 
ಕಪ್ಪು ಎಳ್ಳು ಕಜಾಯ :
ಕಪ್ಪು ಎಳ್ಳು, ಬೆಲ್ಲ ತುರಿದ ಕಾಯಿತುರಿ ತಲಾ ಒಂದು ಕಪ್. 
ವಿಧಾನ : ಕಪ್ಪು ಎಳ್ಳನ್ನು ಪಟಪಟ ಸಿಡಿಯುವ ತನಕ ಹುರಿಯಿರಿ. ಅನಂತರ ಅದನ್ನು ಅಗಲವಾದ ಪಾತ್ರೆಯಲ್ಲಿ ಅಥಾವ ಮೊರಕ್ಕೆ ಹಾಕಿ ಕೈಯಿಂದ ಮೆಲ್ಲನೆ ತಿಕ್ಕಿ. ಆಗ ಅದರ ಸಿಪ್ಪೆ ಬೇರೆಯಾಗುತ್ತದೆ. ಹೀಗೆ ಆರಿಸಿದ ಬಳಿಕ ಅದಕ್ಕೆ ಬೆಲ್ಲ ಹುರಿದಕಾಯಿತುರಿ, ಕಡಲೇಬೀಜ ಏಲಕ್ಕಿ ಹಾಕಿ ಕಲಸಿ. 

             - ವಿ.ಎಂ.ಎಸ್.ಗೋಪಿ ✍
               ಲೇಖಕರು, ಸಾಹಿತಿಗಳು
                   ಬೆಂಗಳೂರು.

ಕವಿತೆ...

ಎಲ್ಲವೂ ಕಾಡಿಸುವ
ಸಮಯಕ್ಕೆ
ಯಾವ ಕವಿತೆಗಳೂ
ಹುಟ್ಟುವುದಿಲ್ಲ

ರಚನೆಗೊಂದು
ವಿರಾಮ ನಿಲ್ದಾಣ ಬೇಕು
ನಿಲ್ಲುತಿದ್ದಂತೆ
ಕಾಡುವವಿರುವಾಗ
ಯಾವ ಕವಿತೆ
ತರಲಿ ನಿಮ್ಮ ಮುಂದೆ?

ಇಷ್ಟೆಲ್ಲ ಗೋಜಲುಗಳ ಮಧ್ಯೆ
ಮತ್ತೊಂದು ಬೇಡವೆನಿಸಿರಬಹುದು
ನಿಮಗೆ!
ಆದರೆ ನಿಮ್ಮನ್ನು ನಾನು
ತಲುಪಲಿ ಹೇಗೆ?
ನೆಪಕಾದರೊಂದು ಕವಿತೆ ಬೇಡವೆ?

ಬೆಟ್ಟವೆ ಕುಸಿದಂತೆ
ಮೈಮೇಲೊಮ್ಮೆಲೆ
ಅಂಗೈ ಜಾಲದೊಳಗಿಂದ
ಧುತ್ತನೆದ್ದು ಕುಣಿಯುತ್ತವೆ
ಒಂದಾದರೂ ಹಿಡಿದು
ಕಾಡಿದರೆ ಹೊಸೆಯಬಹುದು
ಒಂದೆರಡು! ಹರಡಿ ಕೇಳಬಹುದು
ಹೇಗಿದೆ? ಕಾವ್ಯರಂಗೋಲಿ!?

ಬಿಡುವೇನೋ ಹಾಸಿ
ಹೊದೆಯುವಷ್ಟಿದೆ
ತಲೆಯೊಳಗಣ ಜಾತ್ರೆಗಿಲ್ಲ
ನೆಮ್ಮದಿ
ಎಲ್ಲರೂ ಎಲ್ಲವೂ ಎದ್ದೆದ್ದು
ಕುಣಿವಾಗ ಸಪ್ಪೆಯೆನಿಸಬಹುದು
ಅಕ್ಷರ ಚುಕ್ಕಿಯ ಭಾವಬಂಧ!

ಬರೆಬರೆದು ಬಿಸಾಕುವರು
ಕೆಲವರು! ಢಂ! ಢುಮ್! ಟುಸ್! ಪುಸ್!
ಹೊಟ್ಟೆಕಿಚ್ಚು ನನಗೆ
ಚಟಪಟ ಹುಳ್ಳಿಕಾಳೂ ದಕ್ಕದೆ!

ಬೆಳಕಿಲ್ಲದ ಕಾರಣಕೆ
ಕತ್ತಲೇ ಹೊರತು
ಕತ್ತಲಿರುವಿಕೆಗಲ್ಲ!
ಜಗಮಗಿಸುವ ವಿಶ್ವಾನಂತ 
ಚೇತನವ್ಯೂಹದೊಳಗೆ
ಮಣ್ಣ ಪ್ರಣತಿಯು ನಾನು
ಅದೆಷ್ಟೆ ಜಗಮಗಿಸಲಿ ಜಗತ್ತು
ಉರಿದರಷ್ಟೆ ಬೆಲೆ!
ಆದರದೂ ತಿಳಿಯದಂತೆ
ಬೆಳಗಬೇಕೆಂಬ 'ಆಸೆ' ಕೊನೆಗೆ!

ಅಕ್ಕರದ ಬತ್ತಿ ಹೊಸೆದು
ಭಾವತೈಲವೆರೆದು
ಭರವಸೆಯ ಕಿಡಿ ತಾಗಿ
ಪ್ರಜ್ವಲಿಸಲಿ ಬೆಳಗು
ಕಾವ್ಯಜ್ಯೋತಿಯೆ ನನ್ನ ಪ್ರಾಣದೀಪ್ತಿ!

~ ಅರಬಗಟ್ಟೆ ಅಣ್ಣಪ್ಪ

ಕವಿತೆ...

'ಮಗು'ವಿನಂತೆ 
ಎಡವಿದ ಸಮಾಜವನು
 'ತಾಯಿ'ಯಂತೆ ಕೈಹಿಡಿ
 ದೆತ್ತಬೇಕಾದ ಲೇಖನಿಗಳು
 ಪ್ರಶಸ್ತಿ,ಅಧ್ಯಕ್ಷಗಿರಿಗಳ ಬೆನ್ನತ್ತಿ
 ತಮ್ಮಯ ಕಾಯಕಕೆ ವಿರಾಮ 
 ಘೋಷಿಸಿಹವು!

 ಅಸತ್ಯ, ಅನ್ಯಾಯಗಳ
 ಆರ್ಭಟದ ಹುಟ್ಟಡಗಿಸುವ
 ಮಂತ್ರ 'ಬೇಕೆ ಬೇಕು ನ್ಯಾಯ
 ಬೇಕೆಂದು' ಬೀದಿಗಿಳಿಯಬೇಕಿದ್ದ 
 ಹೋರಾಟದ ಕೆಚ್ಚಿನ ದನಿಗಳು 
 'ನಾನು' ನನ್ನದೆಂಬ ಸ್ವಾರ್ಥದಲಿ 
 ಮೌನವ್ರತ ಪಾಲಿಸಿಹವು!

 ಇನ್ನು,ಪ್ರಜೆಗಳ ಹಿತ ಕಾಯ್ವ ಕೈಗಳೋ
 ಅದ್ಭುತ,ಅಮೋಘ,ಅವರ್ಣನೀಯ!

 ಕಾಗೆಯನು ಕೋಗಿಲೆಯೆಂದು
 ಕೋಗಿಲೆಯನು ಕಾಗೆಯೆಂದು ತೋರ್ವವು!
 ಅದೇ ಸತ್ಯ ಎಂದು ಸಾರುವುದಕೆ
 ಅಜ್ಞಾನಿಗಳ ದಂಡೊಂದು 
 ತುದಿಗಾಲಲಿ ನಿಂತು ಕಾದಿಹದು,

  ಸಾಕಲ್ಲವೇ ಇಷ್ಟು, 
  ಸತ್ಯ ಅಸತ್ಯವಾಗುವುದಕೆ,
  ನ್ಯಾಯ ಅನ್ಯಾಯವಾಗುವುದಕೆ,
  ನಿರಪರಾಧಿ ಅಪರಾಧಿಯಾಗುವುದಕೆ!

  ಇನ್ನು ನ್ಯಾಯದೇವತೆಯ ಪಾಡು ಕೇಳಿ,
  ಇವರೆಲ್ಲರ ತಾಳಕೆ ಹೆಜ್ಜೆಯೆ ಹಾಕಿ 
  ನಿಸ್ಸಹಾಯಕಳಾಗಿ ನಿಂತಿಹಳು
  ಕಣ್ಣಿದ್ದು ಕುರುಡಾದ ಗಾಂಧಾರಿಯಂತೆ!

  ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ

ಪಯಣ...

ಪಯಣ

ದೂರ ಹೋಗಬೇಕು ನಾನು
ನಾನೆ ನನ್ನ ಸನಿಹವಿಲ್ಲ
ಜಗದ ಗೊಡವೆ ತೊರೆದು
ಸಾಗಬೇಕು ನಿಲ್ಲದೆ!

'ಇದ್ದು ಹೋಗು, ಬಂದು ಸೇರು'
ಸೋತಿದೆ ತೆರೆಯ ಬಾಳು
ಕಳೆಯಬೇಕು ಹೊಳೆಯಬೇಕು
ರಂಗ ತೊರೆದ ಮೇಲೇ ಬದುಕು!

ನಿಂತು ನಿಂತೇ ಕೊಳೆವೆಯೇಕೆ
ಪಂಕ ತುಂಬಿ ಹೂಳಿದೆ
ಹರಿದು ಹರಿದು ಅಬ್ಬಿಯಾಗು
ಸಾಗಿದಂತೆ ಬಾಳಿದೆ!

ಪದ ಪದವ ನೀವಿದಂತೆ
ಅಂತರಾಳ ಚಂದನ
ಅಂದು ಬುದ್ಧ ಇಂದು ನಾನೆ
ನಾಳೆ ನಿಮದೆ ಗಾಯನ!
~ ಅರಬಗಟ್ಟೆ ಅಣ್ಣಪ್ಪ

ಸಂಘಗೀತ...

ಸಂಘಗೀತ
'ಬೆಳಕು ನಮ್ಮ ಭಾರತ'
ಹೊಳೆಯುವುದು ಶಾಶ್ವತ
ಸಂಘಶಕ್ತಿಯಲ್ಲಿ ನಾವು
ಸಾಗಿದರೆ ಸಂತತ

ಹಿಮಾಚಲದ ಬೆಳಗಿನಲ್ಲಿ
ಬಿಂದು ಬಿಂದು ಸಿಂಧುವಾಗಿ
ಎದೆಗಡಲ ಗಂಗೆಯಲ್ಲಿ
ಒಂದಾಗಿ ಸೇರುವ, ನಾವು ಒಂದಾಗಿ ಸೇರುವ

ಪದ ಪದವ ಪೋಣಿಸಿ,
ವೀರಗಾನ ಮೊಳಗಿಸಿ
ಸರಸ್ವತಿಯಲೀ ಮಿಂದು,
ಅರುಣಾಚಲದಿ ನಿಂದು
ಕ್ಷಾತ್ರರುಧಿರ ಹಾರವಾಗು
ಭಾರತಾಂಬೆ ಕೊರಳಿಗೆ, ಭಾರತಾಂಬೆ ಕೊರಳಿಗೆ

ಅಂದು ಇಂದು ಎಂದೆಂದೂ
ನಮ್ಮ ಬಲವೆ ಹಿಂದುವೆಂದು
ನೊಸಲಿಗಿಟ್ಟ ಕೇಸರಿಯು
ಮಣ್ಣಕಣದ ಬಂಧವೆಂದು
ಸಂಘದೀಕ್ಷೆ ತೊಡುವೆವಿಂದು
ಅಖಂಡವೂ ನಾವೆಂದು! ಅಖಂಡವೂ ನಾವೆಂದು!!
~ ಅರಬಗಟ್ಟೆ ಅಣ್ಣಪ್ಪ

ಶನಿವಾರ, ಆಗಸ್ಟ್ 16, 2025

ಭೂದೇವಿ ನಿನಗಾಗಿ ಕಾದಿಹಳು ಬಾರೋ ಶ್ರೀ ಕೃಷ್ಣ ಧರ್ಮ ರಕ್ಷಣೆಗಾಗಿ ಧರೆಗೆ...

ಭೂದೇವಿ ನಿನಗಾಗಿ ಕಾದಿಹಳು ಬಾರೋ ಶ್ರೀಕೃಷ್ಣ ಧರ್ಮರಕ್ಷಣೆಗಾಗಿ ಧರೆಗೆ 

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭೌತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ ||"
"ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ | ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ||"

ಧರ್ಮವು ಅವನತಿ ಹೊಂದಿದಾಗ , ಅಧರ್ಮವು ಉತ್ತುಂಗಕ್ಕೇರಿದಾಗ , ನಾನು ನನ್ನನ್ನು ದೇಹವನ್ನಾಗಿ ಮಾಡಿಕೊಳ್ಳುತ್ತೇನೆ. ಸಜ್ಜನರ ರಕ್ಷಣೆಗಾಗಿ, ದುಷ್ಟರನ್ನು ನಿರ್ಮೂಲನೆ ಮಾಡಲು ಮತ್ತು ಧರ್ಮವನ್ನು ಸ್ಥಿರವಾಗಿ ಸ್ಥಾಪಿಸಲು, ನಾನು ಯುಗಯುಗಾಂತರಗಳಲ್ಲಿಯೂ ಪ್ರಕಟಗೊಳ್ಳುತ್ತೇನೆಂದು.
ಎಲ್ಲಿ ಮರೆಯಾಗಿರುವೆ ದೇವ ಧರೆಯು ಅಧರ್ಮದ ಅಟ್ಟಹಾಸಕ್ಕೆ ನಲುಗುತ್ತಿದೆ ನಿನಗೆ ಕೇಳದಾಗಿದೆಯೇ ? ಕಾಣಿಸದಾಗಿದೆಯೇ ?

ಸುಜನತೆಯ ಪಾಡು, ನರಕ ಸದೃಶ್ಯವಾಗಿದೆ ದುರ್ಮಾರ್ಗಿ, ದುರ್ಗುಣದ ದುರ್ಮುಖಿಗಳ ದುರ್ವಿಚಾರಗಳು,ಎಲ್ಲರನ್ನು ಆಪೋಶನ ತಗೆದುಕೊಳ್ಳುತ್ತಿವೆ. ಮೋಸ, ವಂಚನೆ, ಅನ್ಯಾಯ, ಅತ್ಯಾಚಾರ ವಿಜೃಂಭಿಸುತ್ತಿವೆ. ಭ್ರಷ್ಟ ರಾಜಕಾರಣಿಗಳ ಪ್ರಬಲ ಅಸ್ತ್ರವಾದ, ಜಾತಿ, ಮತದವೆಂಬ ವಿಷಾನಿಲವು 
ಮನುಕುಲವನ್ನೇ ಸರ್ವನಾಶ ಮಾಡುವ ಹಂತಕ್ಕೆ ತಂದು ನಿಲ್ಲಿಸುತ್ತಿದೆ. ನಿನ್ನ ಆಗಮನದ ಹೊರತು ಅದ್ಯಾರಿಂದಲೂ ಈ ಜಗವನ್ನು ಸದ್ಧರ್ಮದೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ ದೇವ, ಶೀಘ್ರದಿ ಅವತರಿಸಿ ಆಗಮಿಸು, ಮತ್ತೆ ಭೂದೇವಿ ನಿನಗಾಗಿ ಕಾದಿಹಳು. 

ದ್ವಾಪರ ಯುಗದಿ ಶ್ರೀಕೃಷ್ಣನ ಜನನ 

ಶ್ರೀ ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಮುಂತಾದ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಶ್ರೀ ಕೃಷ್ಣನ ಜನನವನ್ನು ಆಚರಿಸುವ ಹಬ್ಬವು ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಶ್ರಾವಣ ಮಾಸದ ನೂಲು ಹುಣ್ಣಿಮೆಯ ನಂತರ ಎಂಟನೇ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.ಮೊದಲ ದಿನವನ್ನು ಕೃಷ್ಣಾಷ್ಟಮಿ ಕರೆದರೆ ಎರಡನೇ ದಿನವನ್ನು ಜನ್ಮಾಷ್ಟಮಿ ಎಂದು ಕರೆಯಲಾಗುತ್ತದೆ. ಶ್ರೀಕೃಷ್ಣನನ್ನು ವಿಷ್ಣುವಿನ ಎಂಟನೇ ಅವತಾರ ಎಂದು ಪೂಜಿಸಲಾಗುತ್ತದೆ 
ಪ್ರಪಂಚದಾದ್ಯಂತದ ಇರುವ ಎಲ್ಲಾ ಹಿಂದೂಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ವ್ಯಾಪಕವಾಗಿ ಪೂಜಿಸಲ್ಪಡುವ ದೇವತೆಗಳಲ್ಲಿ ಶ್ರೀಕೃಷ್ಣ ಪ್ರಥಮನು.  
ಸುಮಾರು ನಾಲ್ಕು ಸಾವಿರದ ಚಿಲ್ಲರೆ ವರ್ಷಗಳ ಹಿಂದೆ ದ್ವಾಪರ ಯುಗದಿ ಜಗದ ತುಂಬೆಲ್ಲ ಅಂಧಕಾರ ಆವರಿಸಿದ ಸಮಯದಲ್ಲಿ, ಜನರು ಸಮಾಜ ವಿರೋಧಿ ಶಕ್ತಿಗಳು ಪ್ರತಿಪಾದಿಸುವ ದುಷ್ಟತನ, ನೋವು,, ಕ್ರೌರ್ಯ ಮತ್ತು ದುಃಖಗಳಿಂದ ಮುಕ್ತರಾಗುವಂತೆ ಸರ್ವಶಕ್ತನನ್ನು ಪ್ರಾರ್ಥಿಸಿದರು. ಪ್ರಾರ್ಥನೆಗಳು ಮತ್ತು ಪವಿತ್ರ ಚಟುವಟಿಕೆಗಳು ಭೂಮಿಯ ಮೇಲಿನ ದೈವಿಕ ಜೀವನದ ಅವತಾರಕ್ಕೆ ಕಾರಣವಾಯಿತು, ಅದು ಮಥುರಾದ ಜೈಲಿನಲ್ಲಿ ವಾಸುದೇವ -ದೇವಕಿ ದಂಪತಿಗೆ ಭಗವಾನ್ ಶ್ರೀ ಕೃಷ್ಣನು 'ರೋಹಿಣಿ' ನಕ್ಷತ್ರದ (ನಕ್ಷತ್ರ) ಬುಧವಾರ ದಂದು ಜನಿಸಿದನು. ದಂತಕಥೆಯ ಪ್ರಕಾರ, ಶ್ರೀ ಕೃಷ್ಣನು ತನ್ನ ಮಾವ ಕಂಸನ ಆಳ್ವಿಕೆ ಮತ್ತು ದೌರ್ಜನ್ಯಗಳನ್ನು ಕೊನೆಗೊಳಿಸಲು, ಜಗದ ಅಂಧಕಾರ ಅಳಿಸಲು ಕತ್ತಲೆಯ ತುಂಬಿದ ಬಿರುಗಾಳಿ ರಾತ್ರಿಯಲಿ ಜನಿಸಿದನು.ಹುಟ್ಟಿದ ದಿನವೇ, ಅವನು ತನ್ನ ಮಹಾಶಕ್ತಿಯನ್ನು ಬಳಸಿಕೊಂಡು ಜೈಲಿನ ಬಾಗಿಲುಗಳನ್ನು ತೆರೆದನು, ವಾಸುದೇವನನ್ನು (ಅವನ ತಂದೆ) ಜೈಲಿನಿಂದ ಹೊರಗೆ ಕರೆದೊಯ್ಯಲು ಪ್ರೋತ್ಸಾಹಿಸಿದನು, ಉಕ್ಕಿ ಹರಿಯುವ ಯಮುನಾ ನದಿಯನ್ನು ದಾಟಿ ಗೋಕುಲದಲ್ಲಿರುವ ನಂದಬಾಬಾ ಅವರ ಮನೆಗೆ ಸುರಕ್ಷಿತವಾಗಿ ತಲುಪಿದನು ಶಿಶುವಿದ್ದಾಗಲೇ, ಅನಂತ ಲೀಲೆಗಳನ್ನು ತೋರಿದನು ಜನರು ಪುಟ್ಟ ಕೃಷ್ಣನಿಗೆ ಯಶೋದಾನಂದನ್ ಗೋಪಾಲ,ಮುಕುಂದ, ಮುರಾರಿ, ಇತ್ಯಾದಿ ಪ್ರೀತಿಯ ಹೆಸರುಗಳನಿಟ್ಟು ಪ್ರೀತಿಯಿಂದ ಕರೆಯುತಿದ್ದರು. ಶ್ರೀಕೃಷ್ಣ ನು ತುಂಟಾಟವಾಡುತ್ತಲೇ ಹಲವಾರು ರಕ್ಕಸರನ್ನು ಸಂಹರಿಸಿದನು,ಬೆಣ್ಣೆ ಕದ್ದನು, ಗೋಪಿಕೆಯರ ಸೀರೆಯನ್ನು ಕದ್ದನು, ರಾಧೆಯ ಮನವನು ಗೆದ್ದನು, ಬೆಳೆದು ಮಾವ ಕಂಸನನ್ನೂ ಮರ್ದಿಸಿ ರಾಜ ಕೃಷ್ಣನಾದನು, ರುಕ್ಮಿಣಿಯು ಸೇರಿ ಅಷ್ಟ ಸತಿಯರ ಪತಿಯಾದನು, ಗೋಕುಲದಿಂದ ಮಥುರೆಗೆ ಸ್ಥಳಾಂತರಗೊಂಡನು.ಆದರೆ ದುರುಳ ಜರಾಸಂಧನ ನಿರಂತರ ಉಪಟಳಕ್ಕೆ ಬೇಸತ್ತು ಜನಹಿತಕ್ಕಾಗಿ ದ್ವಾರಕೆಗೆ ಸ್ಥಳಾಂತರಗೊಂಡನು ದ್ವಾರಕಾ ನಗರವು ಚಿನ್ನದಿಂದ ನಿರ್ಮಿಸಲ್ಪಟ್ಟ ನಗರವಾಗಿದ್ದು, ಕೃಷ್ಣನು ಸ್ವರ್ಗೀಯ ನಿವಾಸಕ್ಕೆ ತೆರಳಿದ ನಂತರ ವರ್ಷಗಳಲ್ಲಿ ಸಮುದ್ರದ ಕೆಳಗೆ ಮುಳುಗಿಹೋಯಿತು ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನ ಹುಟ್ಟಿನಿಂದ ಮರಣದವರೆಗಿನ ಪ್ರಯಾಣವು 100 ವರ್ಷಗಳಿಗಿಂತ ಸ್ವಲ್ಪ ಹೆಚ್ಚು ಕಾಲ ನಡೆಯುತ್ತದೆ. ಕೌರವರ ವಿರುದ್ಧದ ಪ್ರಸಿದ್ಧ ಮಹಾಭಾರತ ಯುದ್ಧದಲ್ಲಿ ಅವರು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದನು ಆದ್ರೆ ಒಬ್ಬ ದುಷ್ಟ ಮಗನಿಂದ (ಸಾಂಬ ) ಶ್ರೀ ಕೃಷ್ಣ ಹತಾಶೆಗೊಳಗಾದನು ಧರ್ಮ ಸಂಸ್ಥಾಪಕನೆ ಅನೇಕ ಅಧರ್ಮಗಳನ್ನ ಕಣ್ಣಾರೆ ನೋಡಬೇಕಾದ ಪರಸ್ಥಿತಿ ಸಿಲುಕಿದನು. ಅದಕ್ಕೆ ಹೇಳುವದಲ್ಲವೇ ವಿಧಿಯಾಟದ ಮುಂದೆ ಯಾರ ಆಟವು ನಡೆಯುವದಿಲ್ಲವೆಂದು ಅದು ದೈವವಾದ್ರೂ ಸರಿ, ಮನುಜನಾದ್ರು ಸರಿ ವಿಧಿಯಾಟಕ್ಕೆ ತಲೆಬಾಗಲೇ ಬೇಕು ದುಷ್ಟ ಸಾಂಬನ ಬಗ್ಗೆ ಹೇಳಲು ಈ ಲೇಖನ ಯಾವಕಡೆಗು ಸಾಲುವದಿಲ್ಲ, ಅವನ ಬಗ್ಗೆ ಬೃಹತ್ ಗ್ರಂಥವೇ ಬರೆಯಬಹುದು, ಆದ್ರೆ ಒಂದು ಮಾತಂತೂ ಸತ್ಯ, ಸಾಂಬನಂತ ಮಗ ಹುಟ್ಟಿದರೆ ವಿನಾಶ ಕಟ್ಟಿಟ್ಟ ಬತ್ತಿ. ಯದುಕುಲದ ಸರ್ವನಾಶಕ್ಕೆ ಕಾರಣನಾದ, 
ಇಂತಾ ಮಗ ಯಾರಿಗೂ ಹುಟ್ಟದಿರಲಿ. ಕೃಷ್ಣವತಾರದ ಅಂತ್ಯದಿ ಮತ್ತೆ ಆರಂಭವಾದ ಅಧರ್ಮದ ಉತ್ಪತ್ತಿ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ಧರೆಯಲ್ಲಿ ಮತ್ತೆ ಸದ್ಧರ್ಮ ಸ್ಥಾಪಿಸಲು ಶ್ರೀ ನಾರಾಯಣ ಅವತಾರವಾಗಲೇ ಬೇಕಿದೆ ಅಲ್ಲವೇ. 

ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ. 
ಮೊ 9740499814

ದೇಶಭಕ್ತಿಯ ಹಣತೆ...

"ದೇಶಭಕ್ತಿಯ ಹಣತೆ""

 ಭಾರತದ ನೆಲವಿದು ಎಷ್ಟು ಸುಂದರ 
ಜನ್ಮ ಭೂಮಿ ನಮ್ಮದಿದು ಭವ್ಯ ಮಂದಿರ 

ಜನ್ಮಿಸಿದ ನಾವುಗಳೆ ಪುಣ್ಯವಂತರು 
ಭಾರತಾಂಬೆ ಮಡಿಲಿನ ಕೀರ್ತಿವಂತರು

 ದಾಸ್ಯದ ಸಂಕೋಲೆಯಲಿ ಬಂಧಿಯಾಗಲು ಮಾತೆ
 ಹೊತ್ತಿತು ಎಲ್ಲೆಲ್ಲೂ ದೇಶಭಕ್ತಿಯ ಹಣತೆ 

ತಾಯ್ನೆಲದ ರಕ್ಷಣೆಗೆ ಹರಿಯಿತು ನೆತ್ತರು
 ಪ್ರತಿ ಹನಿಯದು ಜೀವ ಪಡೆಯಿತು ಸಾವಿರಾರು

 ಮೊಳಗಿತು ಹೋರಾಟದ ಕಹಳೆ ಮೂಲೆ ಮೂಲೆಯಲಿ
 ಬೆಳಗಿತು ಸಂಗ್ರಾಮದ ಜ್ಯೋತಿ ಮನೆ ಮನೆಯಲಿ

 ಕೇಸರಿ ಬಿಳಿ ಹಸಿರದು ತ್ರಿವರ್ಣ ಧ್ವಜವಾಯಿತು 
ಭಾರತಾಂಬೆ ಘನತೆಗೆ ರಕ್ಷಾ ಕವಚವಾಯಿತು 

ಸಾವಿರಾರು ತ್ಯಾಗ ಬಲಿದಾನಗಳ ಅರ್ಪಣೆ 
ಬಂಧ ಮುಕ್ತಿಯಾದ ತಾಯಿಗೆ ಗೌರವ ಸಮರ್ಪಣೆ

 ಬನ್ನಿ ಐಕ್ಯತೆಯ ಮಂತ್ರ ಜಪಿಸೋಣ 
ತಾಯ್ನೆಲವಿದು ನಮ್ಮದೆಂದು ಕೂಗಿ ಸಾರೋಣ

 
ಮಧುಮಾಲತಿ ರುದ್ರೇಶ್ ಬೇಲೂರು

ಶುಕ್ರವಾರ, ಆಗಸ್ಟ್ 15, 2025

ಹೃದಯದಿ ಮೊಳಗಲಿ ವಂದೇ ಮಾತರಂ..

ಹೃದಯದಿ ಮೊಳಗಲಿ ವಂದೇ ಮಾತರಂ
( 79ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು )

ಮತ್ತೆ ಬಂದಿದೆ ಸಂಭ್ರಮದ ಸ್ವಾತಂತ್ರ್ಯ ದಿನವು 
ಹಾರಲಿ ಕೆಂಪು ಕೋಟೆಯ ಮೇಲೆ ತಿರಂಗವು 
ಅರ್ಪಿಸೋಣ ಭಾರತ ಮಾತೆಗೆ ಸ್ವಾತಂತ್ರ್ಯದ ಹೋರಾಟವು 
ಹೇಳಲಿ ವಂದೇ ಮಾತರಂ ಪ್ರತಿ ಹೃದಯವು

ಸಿಗಲಿ ಸ್ವಾತಂತ್ರ್ಯ ರೈತ ಬೆಳೆದ ಬೆಳೆಗಳಿಗೆ 
ಸಿಗಲಿ ಸ್ವಾತಂತ್ರ್ಯ ವರದಕ್ಷಿಣೆ ಕೊಡುವ ಹೆತ್ತವರಿಗೆ 
ಸಿಗಲಿ ಸ್ವಾತಂತ್ರ್ಯ ಭ್ರಷ್ಟಾಚಾರಕ್ಕೆ ಒಳಗಾಗುವ ಅಮಾಯಕರಿಗೆ 
ಸಿಗಲಿ ಸ್ವಾತಂತ್ರ್ಯ ಒಂಟಿಯಾಗಿ ತಿರುಗುವ ಹೆಣ್ಣು ಮಕ್ಕಳಿಗೆ 

ಭಾರತದ ವೈಭವ ಕೇಸರಿ ಬಿಳಿ ಹಸಿರು ಧ್ವಜದಲಿ 
ನಿತ್ಯ ವಂದೇ ಮಾತರಂ ಹೃದಯದಿಂದ ಮೊಳಗಲಿ 
ನಮ್ಮ ಬಾವುಟ ಸೂರ್ಯನ ಹೊಂಗಿರಣದಂತೆ ಹೊಳೆಯುತ್ತಿರಲಿ
ಇಡೀ ವಿಶ್ವದಲ್ಲಿಯೇ ಭಾರತ ಶ್ರೇಷ್ಠ ಗುರುವಾಗಲಿ

ಸ್ವಾತಂತ್ರ್ಯ ದಿನ ಮೀಸಲಿರದಿರಲಿ ಕೇವಲ ಒಂದು ದಿನಕ್ಕೆ 
ಸ್ಮರಿಸಿ ಸ್ವಾತಂತ್ರ್ಯ ಹೋರಾಟಗಾರರನ್ನು ಪ್ರತಿ ಕ್ಷಣಕ್ಕೆ 
ಅವರ ನೆನಪು ಆಗದಿರಲಿ ಕೇವಲ ಪೊಳ್ಳು ಭಾಷಣಕ್ಕೆ 
ಬೆಳೆಸಿ ಉಳಿಸಿ ಸಂಸ್ಕೃತಿ ಪರಂಪರೆ ಪ್ರತಿ ಜನ್ಮಕ್ಕೆ

ದೇಶ ಸೇವೆಯೇ ಈಶ ಸೇವೆ ಎನ್ನುವ  
ಹುತಾತ್ಮರಾದ ರಾಷ್ಟ್ರ ನಾಯಕರನ್ನು ನಿತ್ಯ ಸ್ಮರಿಸುವ
ಉಳಿಸಿ ಬೆಳೆಸಿರಿ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನವ 
ಮುಡಿಪಾಗಿರಲಿ ದೇಶದ ಅಭಿವೃದ್ಧಿಗೆ ನಮ್ಮ ಜನ್ಮವ

ಸ್ಮರಿಸೋಣ ಮಾಡು ಇಲ್ಲವೇ ಮಡಿ ಎಂದ ಗಾಂಧೀಜಿಯನು 
ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಎಂದ ತಿಲಕರನು
ಇಂಕ್ವಿಲಾಬ್ ಜಿಂದಾಬಾದ್ ಎಂದ ಭಗತ್ ಸಿಂಗ್ ರನು 
ಜೈ ಹಿಂದ್ ಎಂದಿರುವ ಸುಭಾಷ್ ಚಂದ್ರ ಬೋಸ್ ರನು
ಶ್ರೀ ಮುತ್ತು ಯ ವಡ್ಡರ
 ಶಿಕ್ಷಕರು,ಹಿರೇಮಾಗಿ
ಬಾಗಲಕೋಟ 
9845568484

79 ನೇ ಸ್ವಾತಂತ್ರ್ಯೊತ್ಸವ..

ಬೆಂಗಳೂರಿನ ಬಹುತೇಕ ಮಳಿಗೆಗಳು ಸೇರಿದಂತೆ ವ್ಯಾಪಕ ಕೇಂದ್ರಗಳು ಸೇಲ್ ಗಳ ಪೈಪೋಟಿಯಲ್ಲಿ ತೊಡಗಿವೆ. ದೊಡ್ಡ ದೊಡ್ಡ ಮಾಲ್ ಗಳು ನವವಧುವಿನಂತೆ ಕಂಗೊಳಿಸುತ್ತ ಶೃಂಗಾರಗೊಂಡಿವೆ. ಒಂದು ಕೊಂಡರೆ ಇನ್ನೊಂದು ಉಚಿತ ಅಷ್ಟು ರಿಯಾಯಿತಿ ಇಷ್ಟು ರಿಯಾಯಿತಿ ಅದು ಕೊಂಡರೆ ಇದು ಪ್ರೀ.. ಎಂಬ ಟಿವಿ ಜಾಯಿರಾತು ಮತ್ತು ಬ್ಯಾನರ್ ಗಳಿಂದ ಪ್ರಚಾರವಾಗುತ್ತಿವೆ. ಸ್ವಾತಂತ್ರ್ಯ ದಿನಾಚರಣೆ ಮತ್ತು ಗೌರಿ ಗಣೇಶ ಹಬ್ಬದ ಸಡಗರ. ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ನಾವು ಆಚರಿಸುತ್ತೇವೆ. ನಾವೆಲ್ಲರೂ ಭಾರತೀಯರು ಎಂದು ಜಾತಿ, ಮತ, ಭೇದವಿಲ್ಲದೆ ಸಂಭ್ರಮಿಸುವ ದಿನವಿದು 78 ವಸಂತಗಳನ್ನು ಪೂರೈಸಿ 79ನೇ ಸ್ವಾತಂತ್ರೋತ್ಸವವನ್ನು ಆಚರಿಸುತ್ತಿದ್ದೇವೆ. ಈ ದಿನಾಚರಣೆಯ ದಿನದಂತ ದೇಶಭಕ್ತಿಯ ಹಾಡುಗಳು ಭಾಷಣಗಳು ಕಲೆ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಾರುವ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯುತ್ತವೆ. ನಾವೆಲ್ಲರೂ ಭಾರತೀಯರು ಧರ್ಮ, ಜಾತಿ ಭಾಷೆ ಕುಲಗೋತ್ರ ಬಡವ, ಶ್ರೀಮಂತರು, ವಿದ್ಯಾವಂತ, ಅವಿದ್ಯಾವಂತ ಎಂಬ ಭೇದವಿಲ್ಲದೇ ನಮ್ಮ ಭಾರತ ದೇಶವನ್ನು ಪ್ರತಿಯೊಬ್ಬ ಪ್ರಜೆಯು ಪ್ರೀತಿಸುತ್ತಾನೆ. ಪ್ರೀತಿಸಲೇಬೇಕು, ಏಕೆಂದರೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ. ಸ್ವಾತಂತ್ರ್ಯನಂತರ ನಾವು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಕೃಷಿ ವಿದ್ಯೆ, ಆರೋಗ್ಯ, ಕೖೆಗಾರಿಕೆ, ಕಲೆ, ಸಂಸ್ಕೃತಿ, ವಿಜ್ಞಾನ, ತಂತ್ರಜ್ಞಾನ, ಸಿನಿಮಾ, ಕ್ರೀಡೆ ಇತ್ಯಾದಿ ರಂಗದಲ್ಲಿ ನಮ್ಮ ದೇಶ ಮುಂದುವರೆದೆ ರಾಷ್ಟ್ರಗಳ ಶ್ರೇಣಿಯಲ್ಲಿ ಇದೆ. ಪ್ರಗತಿ ಪಥದಲ್ಲಿರುವ ಈ ದೇಶದ ಪ್ರಗತಿ ನಮ್ಮ ಪ್ರಗತಿ ಎಂಬ ಭಾವನೆ ಸದಾ ನಮ್ಮಲ್ಲಿರಬೇಕು. " ಸತ್ಯಮೇವ ಜಯತೇ" ಇದು ನಮ್ಮ ರಾಷ್ಟ್ರೀಯ ದ್ಯೇಯವಾಕ್ಯ, ಈ ದ್ಯೇಯವಾಕ್ಯದ ಪರಿಪಾಲನೆ ಎಷ್ಟಾಗುತ್ತಿದೆ. ಎಲ್ಲ ಕಡೆ ಸುಳ್ಳು ವ್ಯಾಪಿಸಿಕೊಂಡು ಬಿಟ್ಟಿದೆ. ವಂಚೆನೆ, ಮೋಸ ಲಂಚ ಇಲ್ಲದೇ ಇಂದು ಯಾವ ವ್ಯವಹಾರಗಳು ಕೂಡಾ ನಡೆಯುತ್ತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಿಳೆಯರು ಕೂಡ ಹೋರಾಡಿದ್ದಾರೆ. ದೇಶವನ್ನು ಗೌರವಿಸುವ ನಾವು ಮಹಿಳೆಯರನ್ನು ಗೌರವಿಸಬೇಕು. ತಾಯಿ ಎಂಬ ಗೌರವ, ಮಗಳೆಂಬ ವಾತ್ಸಲ್ಯ. ಅತ್ತೆ ಎಂಬ ಅಭಿಯಾನ. ಸೊಸೆ ಎಂಬ ಪ್ರೀತಿ ಸಹೋದರ ಸಹೋದರಿಯರ ಪ್ರೀತಿ ಭಾಂದವ್ಯ. ನಾವೆಲ್ಲರೂ ಒಂದೇ ನಮ್ಮೆಲ್ಲರ ಸೃಷ್ಟಿಕರ್ತನು ಒಬ್ಬನೆ ಆಗಿರುವಾಗ ನಾವೆಲ್ಲರೂ ಒಂದೇ ಸಹೋದರ ಸಹೋದರಿಯಾಗಿ ಒಂದೇ ದೇಶದ ನಿವಾಸಿಗಳಾಗಿ ಜಾತಿ ಮತ ಧರ್ಮ ಭಾಷೆ ಭೇದವಿಲ್ಲದೇ ನಾವು ಭಾರತೀಯರು ಎಂಬ ಒಗ್ಗಟ್ಟು ಹಾಗು ಏಕತೆಯನ್ನು ಪ್ರದರ್ಶಿಸಬೇಕಾಗಿದೆ. " ಸ್ವಾತಂತ್ರ್ಯ ದಿನಾಚರಣೆ" ಎನ್ನುವುದು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದ ನಾವೆಲ್ಲರು ಒಂದೇ ಎಂಬ ಭಾವನೆಯನ್ನು ಗಟ್ಚಿಗೊಳಿಸೋಣ ಸ್ವಾತಂತ್ರ್ಯ ದಿನಾಚರಣೆಯ ಎಲ್ಲಾರು ಸಡಗರ ಸಂಭ್ರಮದಿಂದ ಆಚರಿಸೋಣ. 


             - ವಿ.ಎಂ.ಎಸ್.ಗೋಪಿ ✍
               ಲೇಖಕರು, ಸಾಹಿತಿಗಳು
                   ಬೆಂಗಳೂರು.

ಸ್ವಾತಂತ್ರ್ಯೊತ್ಸವ‌‌...

ಭಾರತಾಂಬೆಯ ಸಮಸ್ತ ಕುಡಿಗಳಿಗೂ 79ನೇ ಸ್ವಾತಂತ್ರೋತ್ಸವದ ಹಾರ್ದಿಕ ಶುಭಾಶಯಗಳು. 🙏🙏

ಸ್ವಾತಂತ್ರೋತ್ಸವದ ನಿಮಿತ್ಯ,ಸ್ವಾತಂತ್ರೋತ್ಸದ ಕುರಿತು ಪತ್ರಿಕೆಯಲ್ಲಿ ಪ್ರಕಟವಾದ, ನನ್ನ ಲೇಖನಗಳು ತಮ್ಮ ಓದಿಗಾಗಿ. 

ಲೇಖನ ಪ್ರಕಟಿಸಿದ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏🙏

ಲೇಖನ 
"ಎಲ್ಲಿದೆ ಸ್ವಾತಂತ್ರ್ಯ, ?ಯಾರಿಗೆ ಲಭಿಸಿದೆ ಸ್ವಾತಂತ್ರ್ಯ ?"

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

ಈ ಕವಿತೆ ( ಗೀತೆ )ಬಂಡಾಯ ಸಾಹಿತಿ ಅಂತಲೇ ಚಿರಪರಿಚಿತರಾಗಿದ್ದ ಡಾ.ಸಿದ್ದಲಿಂಗಯ್ಯರವರು,ಸ್ವಾತಂತ್ರ್ಯದ ಬರೆದ ಒಂದು ಉತ್ಕೃಷ್ಟ ಕಾವ್ಯವಾಗಿದೆ, ಇದನ್ನವರು ಇಲ್ಲಿಯ ವ್ಯವಸ್ಥೆಯ ಕಂಡು, ನೊಂದು ಬೇಸರದಿ ಆಕ್ರೋಶ ಭರಿತವಾಗಿ ಬರೆದಿದ್ದಾರೆ.ಅವರ ಪ್ರತಿ ಸಾಲುಗಳು ಅಕ್ಷರಶಃ ಸತ್ಯವಾಗಿವೆ.

ಆಗಸ್ಟ 14ರ ಮಧ್ಯರಾತ್ರಿ ಆಂಗ್ಲ ಕ್ಯಾಲೆಂಡರ ಪ್ರಕಾರ 15ನೇ ತಾರೀಖ, 1947ರಂದು ಲಭಿಸಿದ ಸ್ವಾತಂತ್ರ್ಯ ಏನಾಯಿತು,? ಎಲ್ಲಿಗೆ ಹೋಯಿತು, ? ಆಂಗ್ಲರ ಜೊತೆಯೇ ಬೆನ್ನುಹತ್ತಿ ಹೋಯಿತೇ, ಭವಿಷ್ಯ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿರುವದಕ್ಕೆ ಅದಕ್ಕಿನ್ನೂ ಬೆಳಕಿನೆಡೆಗೆ ಬರಲು ಸಾದ್ಯವಾಗುತ್ತಿಲ್ಲವೇನೋ. ಎಂತಹ ವಿಪರ್ಯಾಸವಲ್ಲವೇ 
ನಮ್ಮ ಸ್ವಾತಂತ್ರ್ಯವನ್ನು ನಾವೇ ಹುಡುಕುತ್ತಿದ್ದೇವೆ. ಸ್ವಾತಂತ್ರ್ಯದ ಹೆಸರಲ್ಲಿ, ಬಾರು, ಪಬ್ಬು, ಕ್ಲಬ್ ಗಳಲ್ಲಿ ಮೋಜು, ಮಸ್ತಿ ಮಾಡುತ್ತಿದ್ದೆವೇ 
ಪಾಶ್ಚಿಮಾತ್ಯ ಸಂಸ್ಕೃತಿಯ ಅಳವಡಿಸಿಕೊಳ್ಳಲು ಹೋಗಿ ಅವಿವೇಕಿಗಳಾಗುತ್ತಿದ್ದೆವೇ ಅಲ್ಲವೇ ?

ಎಲ್ಲಿದೆ ಸ್ವಾತಂತ್ರ್ಯ ? ಯಾರಿಗೆ ಲಭಿಸಿದೆ ಸ್ವಾತಂತ್ರ್ಯ ?

ಒಂದು ಮೃತ್ಯ ( ಡೆತ್ ಸರ್ಟಿಫಿಕಿಟ್ )ಪ್ರಮಾಣ ಪತ್ರಕ್ಕಾಗಿಯೂ ಸಹ,ಲಂಚ ಬೇಡುವ ಭ್ರಷ್ಟ ಅಧಿಕಾರಿಗಳಿಗೆ, ಸಮಾನತೆಯ ಸಸಿನೆಟ್ಟು ಬೆಳೆಸಿ,ಸರ್ವರು ಸಾಮರಸ್ಯದಿ ಬಾಳುವಂತೆ ಮಾಡುವದು ಬಿಟ್ಟು, ಜಾತಿ, ಮತದ ವಿಷಬೀಜ ಬಿತ್ತಿ, ತಮ್ಮ ಬೇಳೆ ಬೇಯಿಕೊಳ್ಳುತ್ತಿರುವ ದುಷ್ಟ ರಾಜಕಾರಣಿಗಳಿಗೆ, ಜನರ ಜೀವವನ್ನೆ ಕ್ರಿಮಿಗಳಂತೆ ಹೊಸಕಿ ಹಾಕೋ ನೀಚ - ನಿಕೃಷ್ಟ ಭೂಗತಲೋಕದ ಪಾತಕಿಗಳಿಗೆ, ಪವಿತ್ರ ಕಾವಿಯ ತೊಟ್ಟು ಜನತೆಯನ್ನು ಸನ್ಮಾರ್ಗದಿ ನಡೆಸಬೇಕಾದ ಸ್ಥಾನದಿ ಕುಳಿತು ಕಾಮ ಪಿಶಾಚಿಗಳಾಗಿರುವ ನಕಲಿ ಸನ್ಯಾಸಿಗಳಿಗೆ, ಇಂತಾ ದಟ್ಟ ದರಿದ್ರರಿಗೆ ಲಭಿಸಿದೆಯೇ ಸ್ವಾತಂತ್ರ್ಯ. ದೀನ, ದಲಿತ, ಸುಜನತೆಯ ಬಾಳು ನರಕವಾಗಿದೆ,,ಜಾರಣಿಯ ಸಂತಾನ ಹಾರ್ಯಾಡಿ ಮೆರೆಯುತ್ತಿದೆ, ಗರತಿಯ ಸಂತಾನ ಬಿಕ್ಕಿ ಬಿಕ್ಕಿ ಅಳುತ್ತಿದೆ ಅನ್ನುವಂತ ಪರಸ್ಥಿತಿ. ಅದೆಷ್ಟೋ ಮಹಾನ್ ತೇಜಸ್ಸು ತುಂಬಿದ (ವ್ಯಕ್ತಿಗಳಾದ ) ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವಿನಾಯಕ ದಾಮೋದರ ಸಾವರ್ಕರ ಮಹಾತ್ಮಗಾಂಧಿ, ಸರ್ದಾರ ವಲ್ಲಭಭಾಯ್ ಪಟೇಲ, ಲೋಕಮಾನ್ಯ ಬಾಲ ಗಂಗಾಧರನಾಥ ತಿಲಕ ಸುಭಾಷ್ ಚಂದ್ರಬೋಸ್ ಲಾಲ್ ಬಹಾದ್ದೂರ ಶಾಸ್ತ್ರೀ, ಜವಾಹರಲಾಲ್ ನೆಹರು, ಟಿಪ್ಪು ಸುಲ್ತಾನ್,ಲಾಲ್ ಬಹಾದ್ದೂರ್ ಶಾಸ್ತ್ರಿ,,ಮದನ ಮೋಹನ ಮಾಳವೀಯ,ಸರ್ದಾರ್ ಭಗತ್ ಸಿಂಗ್, ರಾಜಗೋಪಾಲಚಾರಿ,ಭಿಕಾಜಿ ಕಾಮಾ (ಮೇಡಂ ಕಾಮಾ) ಚಂದ್ರ ಶೇಖರ್ ಆಝಾದ್, ಮ್ ಪ್ರಸಾದ್ ಬಿಸ್ಮಿಲ್ಸುಬ್ರಹ್ಮಣ್ಯ ಭಾರತಿಖುದೀರ,ಝಾನ್ಸಿ ರಾಣಿ ಲಕ್ಷ್ಮೀ ಬಾಯೀ,ಸರೋಜಿನಿ ನಾಯ್ಡು, ಜಯಪ್ರಕಾಶ ನಾರಾಯಣ ಸುಖದೇವ ದೇಶಬಂಧು ಚಿತ್ತರಂಜನ ದಾಸ್ ಲಾಲಜಪತ ರಾಯ್ ಸುಖದೇವ, ಮಂಗಳ ಪಾಂಡೆ ಮೌಲನಾ ಹಸರತ್ ಮೊಹಾನಿ ಮೋತಿಲಾಲ್ ನೆಹರು ಪಂಡಿತ ಮೋತಿಲಾಲ ನೆಹರೂ ರವೀಂದ್ರನಾಥ ಟ್ಯಾಗೋರ್ ಲಾಲ್ ಅವಸ್ಥಿದಾದಾ ಭಾಯಿ ನವರೋಜಿ ಬಿಪಿನ್ ಚಂದ್ರಪಾಲ ಈ ಶ್ವರ ಚಂದ್ರ ವಿದ್ಯಾಸಾಗರ, ವಿನೋಬಾ ಭಾವೆ, ಅಲ್ಲೂರಿ ಸೀತಾರಾಮ, ಡಾ. ಬಿ.ಆರ್.ಅಂಬೇಡ್ಕರ. ಕಸ್ತೂರ ಬಾ ಗಾಂಧಿ ಗೋಪಾಲ ಕೃಷ್ಣ ಗೋಖಲೆ , ಕೆ.ಬಿ. ಹೆಡಗೆವಾರ್ ಜಗಜೀವನ ರಾಮ್ ಸೆಹಗಲ್ಎಚ್ ನರಸಿಂಹಯ್ಯ ಗೋವಿಂದ ವಲ್ಲಭ, ಪಂತ್ಪೆರಿಯಾರ್ ರಾಮಸ್ವಾಮಿ ಹಜರತ್ ಮಹಲ್ಹಿಂದೂಸ್ತಾನಿ ಲಾಲ್ ಸೇನಾ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ, ನೀಲಕಂಠ ಗೌಡ ಪ್ರಭುರಾಜ ಪಾಟೀಲ ಸ್ವಾಮಿ ರಾಮಾನಂದ ತೀರ್ಥ. ರಾಜಕಾರರಿಗೆ ಸಿಂಹ ಸ್ವಪ್ನವಾಗಿದ್ದ ನಮ್ಮ ಕಲಬುರ್ಗಿ,ಜಿಲ್ಲೆಯ ಯಡ್ರಾಮಿ ತಾಲೂಕಿನ ಹುಲಿ,ದುಮ್ಮದ್ರಿ ಯ ಸರ್ದಾರ ಶರಣಗೌಡರಂತ ಇನ್ನೂ ಹಲವಾರು ಮಹನೀಯರ ತ್ಯಾಗ ಬಲಿದಾನದ ಪ್ರತಿಫಲವಾಗಿ ಲಭಿಸಿದ ಸ್ವಾತಂತ್ಯ್ರವಿಂದು ಅಧರ್ಮಿಗಳ ಕರಗಳಲ್ಲಿ ಸಿಲುಕಿನರಳುತ್ತಿದೆ.ಮಹಾತ್ಮ ಗಾಂಧೀಜಿ ಹೇಳುತ್ತಿದ್ದರು, "ಒಂದು ಹೆಣ್ಣು ಯಾವಾಗ ನಿರ್ಭಯವಾಗಿ ಮದ್ಯರಾತ್ರಿ ತಿರುಗಾಡುತ್ತಾಳೋ ಅಂದು, ನಿಜವಾದ ಸ್ವಾತಂತ್ರ್ಯ ಲಭಿಸಿದಂತೆ" ಅಂತ,ಈಗ ಮಧ್ಯರಾತ್ರಿ ಇರಲಿ, ಹಗಲಲ್ಲಿಯೇ ಅವಳಿಗೆ ಸ್ವಾತಂತ್ರ್ಯವಿಲ್ಲ, ಹಾಡು ಹಗಲಲ್ಲೇ ಅತ್ಯಾಚಾರ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ,ಅಂದ್ರೆ ಇದೇನಾ ಸ್ವಾತಂತ್ರ್ಯ ?ಇಡಿ ವ್ಯವಸ್ಥೆಯೇ ರಾಜಕೀಯದ ದೊಂಬರಾಟದಲ್ಲಿಯೇ ಕಾಲಹರಣವಾಗತ್ತಿದೆ.ಯಾವ ಊರಲ್ಲಿಯೂ ಸಹ ಸರಿಯಾದ ಶೌಚಾಲಯವಿಲ್ಲದೆ.ನಮ್ಮಕ್ಕ-ತಂಗಿಯರು ಸೂರ್ಯಾಸ್ತ,ನಂತರ, ಇಲ್ಲ ಸೂರ್ಯೋದಯದ ಮುಂಚೆ ನಿತ್ಯ ಕರ್ಮವ ಕಳೆದುಕೊಳ್ಳುವಂತ ಪರಿಸ್ಥಿತಿಯಿದೆ, ಸರಿಯಾದ ಶಿಕ್ಷಣ ವ್ಯವಸ್ಥೆ ಇಲ್ಲದೆ, ಮಕ್ಕಳು ಖಾಸಗಿ ಶಾಲೆಯ ಕದ ತಟ್ಟುವಂತಾಗಿದೆ,ದೇಶದ ಬೆನ್ನೆಲುಬಾದ ರೈತ ಬೆವರು ಸುರಿಸಿ ಬೆಳೆಗೆ, ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.ಸಾಮಾನ್ಯ ವ್ಯಾಪಾರಿ ಸುಂಕದ ಸುಳಿಯಲ್ಲಿ ಒದ್ದಾಡುತ್ತಿದ್ದಾನೆ,ವಿದ್ಯಾವಂತರು ಕೆಲಸ ಸಿಗದೇ ಲಂಚದ ಅಟ್ಟಹಾಸಕ್ಕೆ ನಲುಗುತ್ತಿದ್ದಾರೆ, ಎಲ್ಲಿದೆ ಪ್ರಜಾಪ್ರಭುತ್ವ ( ಡೆಮಾಕ್ರಸಿ )ದುರುಳರ ಕೈಯಲ್ಲಿ ಒದ್ದಾಡುತ್ತಿದೆ.ಕಾರಣ ನಾವು ನಮ್ಮ( ಮತವೆಂಬ ಹಕ್ಕನ್ನು ) ಪ್ರಭುತ್ವವನ್ನು, ಚಿಲ್ಲರೆ ಕಾಸಿಗಾಗಿ ಮಾರಿಕೊಂಡು, ಅವರ ಮುಂದೆ ಬಿಕಾರಿಗಳಂತೆ ನಿಲ್ಲುತ್ತಿದ್ದೇವೆ.ಇನ್ನೂ ಎಲ್ಲಿಯವರೆಗೆ ಭಿಕ್ಷಾಟನೆ,,ಅಷ್ಟ ದಶಕ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿ ನಿಂತಿರುವ ನಾವುಗಳು ಇನ್ನಾದ್ರು ಭಿಕ್ಷೆ ಬಿಟ್ಟು ಬಿಡೋಣ.
,ಅನ್ಯರ ತೆಗಳುವದನ್ನು ಬಿಟ್ಟು, ಮೊದಲು ನಾವು ಸದ್ಧರ್ಮದ ಪಥದಲ್ಲಿ ನಡೆಯೋಣ, ಸ್ವಹಿತಕ್ಕಾಗಿ, ಆಳುವವರ ದೂರವಿಡೋಣ, ದೇಶಕ್ಕಾಗಿ, ದೇಶದ ಹಿತಕ್ಕಾಗಿ, ದೇಶವಾಸಿಗಳ ಸೌಖ್ಯಕಾಗಿ ಶ್ರಮಿಸುವವರ ಪರವಾಗಿ ನಿಲ್ಲೋಣ. ತಾಯಿ ಭಾರತಾಂಬೆಗೆ ಸಂತಸ ತರೋಣ, ಸದೃಢ, ಸಮೃದ್ಧ ದೇಶವನು ಕಟ್ಟೋಣ. 
ಆವಾಗ್ಲೇ ಸ್ವಾತಂತ್ರೋತ್ಸಕ್ಕೆ ನಿಜವಾದ ಅರ್ಥ ಲಭಿಸುತ್ತದೆ.
 
✍ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ. ಯಡ್ರಾಮಿ 
ಮೋ 9740499814

ಕವಿತೆ

ಅಲ್ಲೊಬ್ಬ....
ಹೂ ರಾಶಿಯ ಜೋಳಿಗೆ ಹೊತ್ತು
ಹೂ ಮಾರುತಿದ್ದ;

ಅವನಲ್ಲಿ 
'ಪ್ರೇಮ'ದ ಸಂಕೇತವಾದ
ಗುಲಾಬಿಯೂ ಇತ್ತು!
ಪರಿಮಳ ಸೂಸುವ
ಮಲ್ಲಿಗೆಯೂ ಇತ್ತು!

ಕೊಳ್ಳಲು ಹೋದ ನಾನು 
ನನ್ನ 'ಹೂ'ಮನವನ್ನೆ
ಅವನಿಗೆ ಅರ್ಪಿಸಿಬಂದೆ!

ಕಾರಣ ಅವನು 
ಹೂಮಾರುವ ವೇಷದಲಿದ್ದ
ನನ್ನ ಇನಿಯನೇ ಆಗಿದ್ದ!
ಡಿ.ಶಬ್ರಿನಾ ಮಹಮದ್ ಅಲಿ,ಚಳ್ಳಕೆರೆ

ಕವಿತೆ...

ಅಕ್ಷರ ಪೋಣಿಸಿ
ಪದ ಸೇರಿಸಿ
ಕೂಗಿ ಕರೆದು
ನಾನೇ ನಿನ್ನ  
ಹೆಚ್ಚು ಪ್ರೀತಿಸುವೆ
ಎಂದು ಹೇಳಿ 
ಬೀಗುವಷ್ಟರಲಿ;

ಮಾತಿಲ್ಲದೆ 
ಕಥೆಯಿಲ್ಲದೆ
ನಿನ್ನೆದೆಯೆ
ರಾಶಿ ರಾಶಿ ಒಲವನು
ಕಣ್ಣಲೆ ತೋರಿಸಿ,
ಬೀಗಲು ಬಂದ 
ನನ್ನನು ಬಾಗಿಸಿದ
ನಿನ್ನ ಪ್ರೇಮಪರಿಗೆ 
ನಾ ಬೆರಗಾಗಿ ಹೋದೆ!

ನೀ ಬರುವ ಮೊದಲು
ಒಲವೆಂದರೆ.,....
ನನದೊಂದು
ಕಲ್ಪನೆ ಇತ್ತು;
ಅದು ಎಲ್ಲೆ 
ಇರದ ಬಯಲು,
ಆ ಬಯಲಲಿ 
ಹಚ್ಚ ಹಸಿರು,
ಆ ಹಸಿರಲಿ  
ಹೂರಾಶಿ! 
ಇದುವೇ ಒಲವೆಂದು
ನನ್ನೀ ಮನ ಆಗಾಗ
ನಲಿದಾಡುತಲಿತ್ತು!

ಆದರೆ ಈಗ....
ನೀನೆ ಆ ಬಯಲು!
ನೀನೆ ಆ ಹಚ್ಚಹಸಿರು!
ನೀನೇ ಆ ಹೂರಾಶಿ!
ಒಲವೆಂದರೆ ನೀನೆಯಾಗಿಹೆ!

ಡಿ.ಶಬ್ರಿನಾ ಮಹಮದ್ ಅಲಿ
ಚಳ್ಳಕೆರೆ

ಬುಧವಾರ, ಆಗಸ್ಟ್ 13, 2025

ಅನುಪಮ ಬಂಧವೆಂದರೆ ಅದು ಸ್ನೇಹ ಸಂಬಂಧ

ಅನುಪಮ ಬಂಧವೆಂದರೆ ಅದು ಸ್ನೇಹ ಸಂಬಂಧ 

ಸ್ನೇಹ,ಗೆಳೆತನ,ಫ್ರೆಂಡ್ಶಿಪ್ ,ದೋಸ್ತೀ ಇದು ಇಂದು ನಿನ್ನೆಯದಲ್ಲ, ಯುಗ,ಯುಗಾಂತರದಿಂದಲೂ ಚಿರಂಜೀವಿಯಾಗಿ ಉಳಿದು ಕೊಂಡಿದೆ.ಆದ್ರೂ 
ಎಲ್ಲದಕ್ಕೂ ಒಂದು ದಿನಾಚರಣೆ ಇರುವಾಗ, ಸ್ನೇಹಿತರಿಗೂ ಒಂದು ದಿನಾಚರಣೆ ಇರಬೇಕೆಂದು 1930ರಲ್ಲಿ ಒಂದು ಪಾರ್ಟಿಯಲ್ಲಿ, 
ಹಾಲ್ಮಾರ್ಕ್ ಕಾರ್ಡಗಳ ಸಂಸ್ಥಾಪಕರಾಗಿದ್ದ ಚಾಯ್ಸ್ ಹಾಲ್ ವ್ಯವಹಾರಿಕ ತಂತ್ರವಾಗಿ ಪ್ರಸ್ತಾಪಿಸಿ ಕಾರ್ಯರೂಪಕ್ಕೆ ತರುವಲ್ಲಿ ಸಫಲರಾದರು.1935ರಲ್ಲಿ ಯು ಎಸ್ ಕಾಂಗ್ರೆಸ್ ಅಧಿಕೃತ ರಜಾ ದಿನವಾಗಿ ರೂಪಿಸುವಲ್ಲಿ ಯಶಸ್ವಿಯಾಯಿತು. ತದನಂತರ 1958ರ ಜುಲೈ 30ರಂದು 'ಪರಾಗ್ವೆ'ಯಲ್ಲಿ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.ಮುಂದೆ 2011ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಜುಲೈ 30 ನ್ನು ಅಂತಾರಾಷ್ಟ್ರೀಯ ಸ್ನೇಹ ದಿನವೆಂದು ಘೋಷಣೆ ಮಾಡಿತು. ವಿಶ್ವಸಂಸ್ಥೆ ಜುಲೈ ಮೂವತ್ತೆಂದು ಘೋಷಣೆ ಮಾಡಿದ್ದರು;ಕೆಲ ದೇಶಗಳು ಬೇರೆ ಬೇರೆ ತಿಂಗಳು, ಬೇರೆ ದಿನಾಂಕದಂದು ಆಚರಿಸಲು ಆರಂಭಿಸಿದವು ನಮ್ಮ ಭಾರತ ದೇಶವು ಆಗಸ್ಟ ತಿಂಗಳ ಮೊದಲ ಬಾನುವಾರ ಸ್ನೇಹಿತರ ದಿನವನ್ನು ಆಚರಿಸುತ್ತದೆ. ಬಹಳ ವೇಗವಾಗಿ ಪ್ರಖ್ಯಾತಿ ಪಡೆದ ಫ್ರೆಂಡ್ಶಿಪ್ ಡೇ ಈಗ ವಿಶ್ವದೆಲ್ಲೆಡೆ ಬಹಳ ಹರುಷದಿಂದ ಆಚರಿಸಲ್ಪಡುತ್ತಿದೆ.

''ಸ್ನೇಹ "ಎಂಬ ಪದ ಸಂಸ್ಕೃತ ಭಾಷೆಯಲ್ಲಿ ಹುಟ್ಟಿಕೊಂಡಿದೆ. ಇದರ ಅರ್ಥ "ಪ್ರೀತಿ" ಅಥವಾ "ವಾತ್ಸಲ್ಯ" ಈ ಪದವು, ನಿಕಟತೆ ಮತ್ತು ಭಾವನಾತ್ಮಕ ಸಂಪರ್ಕದ ಅರ್ಥವನ್ನು ತಿಳಿಸುತ್ತದೆ, ಇದು ಹೆಚ್ಚಾಗಿ ಕೌಟುಂಬಿಕ ಅಥವಾ ಆಳವಾದ ಸ್ನೇಹದೊಂದಿಗೆ ಸಂಬಂಧಿಸಿದೆ ಸಕಾರಾತ್ಮಕ ಅರ್ಥಗಳಿಂದಾಗಿ ಮೆಚ್ಚುಗೆ ಪಡೆಯುತ್ತದೆ. ಇದು ದಯೆ ಮತ್ತು ಸಹಾನುಭೂತಿಯ ಗುಣಗಳನ್ನು ಸಾಕಾರಗೊಳಿಸುತ್ತದೆ, ಪೋಷಕರಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಹೆಚ್ಚುವರಿಯಾಗಿ, "ಸ್ನೇಹ" ಎಂಬ ಪದವನ್ನು ಕೆಲವೊಮ್ಮೆ ಪೋಷಣೆ ಮತ್ತು ಕಾಳಜಿಯ ಕಲ್ಪನೆಯೊಂದಿಗೆ ಸಂಯೋಜಿಸಬಹುದು, ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ಬೆಂಬಲದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.

ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆದರದ ಆತಿಥ್ಯವಿದೆ.ಗತಕಾಲವನ್ನು ಒಮ್ಮೆ ತಿರುವಿದಾಗ ಹಲವು ಬಿಡಿಸಲಾಗದ ಸ್ನೇಹವನ್ನು ಕಾಣಬಹುದು.ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣರ ಸ್ನೇಹ. ಇವರಿಬ್ಬರದು ಅಪ್ರತಿಮ ಗೆಳೆತನ. ಇವರ ಸ್ನೇಹದ ಮುಂದೆ,ಯಾವುದೇ ಗೆಳೆತನ ಇಂದಿಗೂ ನಿಲ್ಲಲಾಗಿಲ್ಲ.

ನಿಜವಾದ ಸ್ನೇಹ ಅಂದ್ರೆ ಏನು ಅಂತ ಈಗ ಯಾರಿಗೂ ಗೊತ್ತಿಲ್ಲಂತ ಕಾಣುತ್ತೆ. ಕೆಲವರು ಗೆಳೆತನ, ಸ್ನೇಹ, ಅಂತ ನಾಟಕ ಮಾಡಿ. ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದು ಆಮೇಲೆ ಎದೆಗೆ ಚೂರಿ ಹಾಕಿ ದ್ರೋಹವೆಸಗುತ್ತಿದ್ದಾರೆ. ಸ್ನೇಹಿತನ ಸತಿಯೆಂದ್ರೆ,ಸಹೋದರಿಯ ಸಮಾನ.ಅಂತಹ ಸಹೋದರಿಯ ಸಮಾನವಾಗಿರುವಂತ ಹೆಣ್ಣಿನ ಮೇಲೆಯೇ ಕಾಮದ ವಕ್ರದೃಷ್ಠಿ ಬೀರಿ, ಇನ್ನಿಲ್ಲದ ಆಮಿಷಗಳನ್ನ ಒಡ್ಡಿ ಆ ಹೆಣ್ಣಿನ ಜೊತೆ ಕಾಮಕೇಳಿಯ ನಡೆಸಿ,ಸ್ನೇಹಿತನ ಜೀವನವನ್ನೆ ಸರ್ವನಾಶ ಮಾಡುವದರ ಜೊತೆಗೆ,ಮರಣಮೃದಂಗ ಬಾರಿಸುತ್ತಿರುವ, ಸುದ್ದಿ ದಿನಾ ಬೆಳಗಾದ್ರೆ ಸಾಕು ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ, ಓದುತ್ತಿದ್ದೇವೆ. 
ಅಂಥವರ ಮಧ್ಯೆ ಮಾದರಿಯಾಗಿ ನಿಲ್ಲುವುದು.

ಕರ್ಣ-ದುರ್ಯೋಧನರ ಅಪೂರ್ವ ಸ್ನೇಹ. 

ಸ್ನೇಹಿತರು ಸಾಯಬಹುದು, ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು. ಕೊನೆಯಿಲ್ಲದ ಸರಪಳಿ ಸ್ನೇಹ.

ಮನಸ್ಸೆಂಬುದು ನೀರಿದ್ದಂತೆ. ಅಲ್ಲಿ ಭಾವನೆಗಳು ಹರಿದಾಡುತ್ತವೆ, ಪ್ರೀತಿ ತುಂಬಿರುತ್ತೆ. ಮನಸ್ಸಿಗೆ ನೋವಾದಾಗ ಭಾವನೆಗಳು ಹೊರಗೆ ಬರುತ್ತವೆ. ಅಂಥ ಭಾವನೆಗಳನ್ನ ಹಂಚಿಕೊಂಡು ಗೆಳೆಯ ಅಥವಾ ಗೆಳತಿಯ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕಷ್ಟದಲ್ಲಿದ್ದಾಗ ಸಹಾಯ ಮಾಡಿ. ಸೋತಾಗ ಬೆನ್ನು ತಟ್ಟಿ ಮೇಲಕೆತ್ತುವವನೇ ನಿಜವಾದ ಸ್ನೇಹಿತ.

ಒಮ್ಮೆ ಕರ್ಣನು,ದುರ್ಯೋಧನನ ಪತ್ನಿ ಭಾನುಮತಿಯ ಜೊತೆ ಪಗಡೆಯಾಡುವ ಸಂಧರ್ಭದಲ್ಲಿ,ತಮಾಷೆಯಿಂದ ಆಕೆಯನ್ನು ಹಿಡಿಯಲು ಹೋಗುತ್ತಾನೆ. ಆಕಸ್ಮಿಕವಾಗಿ ಆಕೆಯ ಮುತ್ತಿನ ಸರ ಕಿತ್ತು,ಮಣಿಗಳೆಲ್ಲಾ ಚೆಲ್ಲಾಪಿಲ್ಲಿಯಾಗುತ್ತವೆ. ಆ ವೇಳೆ ಅಲ್ಲಿಗೆ ದುರ್ಯೋಧನ ಬರುತ್ತಾನೆ. ಬಂದವನು,ಕಿಂಚಿತ್ತು ಅವರನ್ನ ಅನುಮಾನಿಸದೆ, ನಾನು ಮಣಿಗಳನ್ನು ಆಯ್ದು ಕೊಡಲೇ ಎಂದು ಪ್ರಶ್ನಿಸುತ್ತಾನೆ. ಆಗ ಕರ್ಣ, ಧುರ್ಯೋಧನನಿಗೆ ರಾಜ ನನ್ನನ್ನು ಕ್ಷಮಿಸು ಎಂದು ಕೇಳುತ್ತಾನೆ, ಗೆಳೆಯ, ನನಗೆ ನಿನ್ನಲ್ಲಿ ನಂಬಿಕೆಯಿದೆ ಎಂದು ದುರ್ಯೋಧನನೇ ಸಮಾಧಾನಿಸುತ್ತಾನೆ. ಅಷ್ಟರಮಟ್ಟಿಗೆ ದುರ್ಯೋಧನನಿಗೆ ತನ್ನ ಗೆಳೆಯನ್ನಲ್ಲಿ ನಂಬಿಕೆ ವಿಶ್ವಾಸವಿರುತ್ತದೆ.

ದುರ್ಯೋಧನ ಎಂದರೇ ಕೇವಲ ಕುರುಸಾರ್ವಭೌಮ, ಧೃತರಾಷ್ಟ್ರನ ಪುತ್ರ, ಹಠಮಾರಿ, ಕ್ರೂರಿ, ಇದೇನೂ ಆಗಿರಲಿಲ್ಲ; ಕರ್ಣನ ಪಾಲಿಗೆ ಆತ ಜೀವದ ಗೆಳೆಯ, ಅಂತರಂಗದ ಉಸಿರು, ಅಣ್ಣನಂಥ ಆತ್ಮ ಬಂಧು, ಇಡೀ ಜಗತ್ತೇ ಕರ್ಣನನ್ನು ಸೂತಪುತ್ರ, ಬೆಸ್ತ ಎಂದು ಹಂಗಿಸಿದ ಕ್ಷಣದಲ್ಲಿ, ಅಂಗರಾಜ್ಯದ ಕಿರೀಟ ತೊಡಿಸಿದ ಧೀರ ದುರ್ಯೋಧನ.ಅಂಥ ಗೆಳೆಯನಿಗೆ ಯುದ್ದ ಗೆದ್ದು ಕೊಡಬೇಕು. ಆ ಮೂಲಕ ಅವನ ಋಣದಿಂದ ಸ್ವಲ್ಪ ಮಟ್ಟಿಗಾದರೂ ಮುಕ್ತನಾಗಬೇಕು ಎಂಬ ಆಸೆ ಕರ್ಣನಿಗಿತ್ತು.

ಕುರುಕ್ಷೇತ್ರ ಯುದ್ಧ ಆರಂಭವಾದಾಗ ಕರ್ಣನಿಗೆ ಕೃಷ್ಣ ಆತನ ಜನ್ಮರಹಸ್ಯವನ್ನು ತಿಳಿಸಿ, ನೀನು ಪಾಂಡವರಿಗೆಲ್ಲ ಹಿರಿಯ, ನೀನು ಬಂದು ಪಾಂಡವರ ಜೊತೆ ಸೇರು ಎಂದು ಹೇಳುತ್ತಾನೆ. ಆಗ ಕರ್ಣ ನಾನು ದುರ್ಯೋಧನನನ್ನು ಬಿಟ್ಟು ಪಾಂಡವರ ಜೊತೆ ಹೋಗುವುದಿಲ್ಲ ಎನ್ನುತ್ತಾನೆ.ಇದಕ್ಕೆ ಕಾರಣವೇನೆಂದು, ಕೃಷ್ಣ ಕೇಳಿದಾಗ, ತಾನು ದ್ರೌಪದಿ ಸ್ವಯಂವರದಲ್ಲಿ ಬಿಲ್ಲನ್ನು ಎತ್ತಲು ಬಂದಾಗ ತನ್ನನ್ನು ಸೂತ ಪುತ್ರ ಎಂಬ ಕಾರಣಕ್ಕೆ ಬಿಲ್ಲನ್ನೇರಿಸಲು ನಿರಾಕರಿಸಿದರು. ಆ ಸಮಯದಲ್ಲಿ ನನ್ನನ್ನು ಅಂಗ ದೇಶದ ರಾಜನನ್ನಾಗಿ ಮಾಡಿ ಸ್ಥಾನಮಾನ ಕಲ್ಪಿಸಿದವನು ದುರ್ಯೋಧನ, ನಾನು ರಾಜನಿಗೆ ನಿಷ್ಠನಾಗಿದ್ದೇನೆ. ಹೀಗಾಗಿ ನಾನು ಪಾಂಡವರ ಜೊತೆ ಸೇರಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ ಕರ್ಣ. 

ಹೀಗೆ ಕರ್ಣನಿಗೆ ಹತ್ತು – ಹಲವು ಸಂದರ್ಭದಲ್ಲಿ ದುರ್ಯೋಧನನ ಬೆಂಬಲವಾಗಿ ನಿಲ್ಲುತ್ತಾನೆ. ಮಹಾಭಾರತ ಯುದ್ದದಲ್ಲಿ ಯಾವ ಆಮೀಷಗಳಿಗೆ ಬಲಿಯಾಗದೇ ದುರ್ಯೋಧನನ ಪರವಾಗಿ ಯುದ್ಧಮಾಡುವುದಾಗಿ ಹೇಳುತ್ತಾನೆ. ಕೊನೆಗೆ ಕರ್ಣನು ದುರ್ಯೋಧನನಿಗೊಂದು ಮಾತು ಕೊಡುತ್ತಾನೆ.( ಮಾತೆ ಕುಂತಿಗೆ ನಿನಗೆ ಐದು ಜನ ಪಾಂಡವರು ಖಂಡಿತ ಉಳಿಯುವರು ಅಂತ ಮಾತು ಕೊಟ್ಟ ಕಾರಣ ) ಮಿತ್ರ, ಯುದ್ದದಲ್ಲಿ ಸೈನಿಕರನಸ್ಟೇ ಅಲ್ಲದೆ, ಯಾರೇ ಎದುರಾದ್ರು ಕೊಲ್ಲುತ್ತೇನೆ; ಆದ್ರೆ ಪಾಂಡವರನ್ನು ಮುಟ್ಟುವುದಿಲ್ಲವೆಂದು ಹೇಳಿ.ಕಾರಣ ಕೇಳಬೇಡವೆನ್ನುತ್ತಾನೆ, ಆದ್ರೂ ಸಹ,ದುರ್ಯೋಧನ ಕರ್ಣನ್ನ. ಅಪಮಾನಿಸುವುದಿಲ್ಲ,ಏಕೆಂದ್ರೆ ಅವರಿಬ್ಬರ ಸ್ನೇಹ ಅಷ್ಟೊಂದು ಗಾಢವಾಗಿತ್ತು.ಹೀಗೆ ಮಹಾಭಾರತದಲ್ಲಿನ ಅವರಿಬ್ಬರ ಸ್ನೇಹ ಎಂದೆಂದಿಗೂ ಅಮರವಾಗಿದೆ.


ಕೃಷ್ಣ-ಕುಚೇಲರ ಗೆಳೆತನ

ಕರ್ಣ-ದುರ್ಯೋಧನರ ನಂತರ ನಮಗೆ ಸಿಗುವ ಅಪ್ರತಿಮ ಸ್ನೇಹಿತರು ಕೃಷ್ಣ -ಕುಚೇಲ. ಕುಚೇಲ ಒಬ್ಬ ಬಡವನಾಗಿ ಗೆಳೆಯ ಶ್ರೀಕೃಷ್ಣನ ಮನೆಗೆ ಸಹಾಯ ಕೇಳಲು ಬರುತ್ತಾನೆ. ಕೃಷ್ಣನ ಆದರಾತಿಥ್ಯಗಳಿಗೆ ಬೆರಗಾದ ಕುಚೇಲ ಆತನಲ್ಲಿ ಸಹಾಯ ಕೇಳದೆ ಸುಮ್ಮನಾಗುತ್ತಾನೆ. ಸ್ನೇಹಿತನಲ್ಲಿ ತನ್ನ ಬಡತನವನ್ನು ಹೇಳಿಕೊಳ್ಳಲಾಗದೆ ಇದ್ದಾಗ, ಕೃಷ್ಣನೇ ಆತನ ಮನವನ್ನು ಅರಿತು ಕುಚೇಲನಿಗೆ ಸಹಾಯ ಮಾಡುತ್ತಾನೆ. ಕೃಷ್ಣನಿಗೆಂದು ತಂದ ಅವಲಕ್ಕಿಯನ್ನು ಕುಚೇಲ ತನ್ನ ಹರಿದ ಬಟ್ಟೆಯಲ್ಲಿ ಗಂಟು ಕಟ್ಟಿ ಕೊಂಡಿರುತ್ತಾನೆ. ಇದನ್ನು ನೋಡಿದ ಕೃಷ್ಣ, ನನಗಾಗಿ ಏನೋ ತಂದಿರುವ ಹಾಗಿದೆಯಲ್ಲ ಎಂದು ತಾನೇ ಆ ಗಂಟನ್ನು ಬಿಚ್ಚುತ್ತಾನೆ. ಅದರಲ್ಲಿದ್ದ ಅವಲಕ್ಕಿಯನ್ನು ಬಿಚ್ಚಿ ತಾನು ತಿಂದು ರುಕ್ಮಿಣಿಗೂ ಕೊಡುತ್ತಾನೆ. ಎಷ್ಟು ರುಚಿಯಾಗಿದೆ ನನ್ನ ಗೆಳೆಯ ತಂದಿರುವುದೆಂದು ರುಕ್ಮಿಣಿ ಜೊತೆ ಕೃಷ್ಣ ತಿನ್ನುತಾನೆ. ಅಲ್ಲದೆ ಸಹಾಯವನ್ನು ಬೇಡಲು ಬಂದು ಕೇಳದೆ ಹಿಂತಿರುಗಿದ ಕುಚೇಲನ ಬಡತನವನ್ನು ಹೋಗಲಾಡಿಸಿರುತ್ತಾನೆ.

ಪುರಾಣಗಳಲ್ಲಿನ ಇಂಥಹ ಅಪ್ರತಿಮ ಗೆಳೆತನಗಳು ನಮ್ಮ ಕಣ್ಣಮುಂದೆಯೇ ಇದ್ದರೂ, ಇಂದಿನ ದಿನದ ಫ್ರೆಂಡ್ ಶಿಪ್ ನಲ್ಲಿ ಯಾವುದೇ ನಿಯತ್ತು, ಗೌರವ, ಪ್ರೀತಿ ಇಲ್ಲ.ಸ್ನೇಹ,ಪ್ರೀತಿಯ ಹೆಸರಲ್ಲಿ ಕಾಮ ಅಟ್ಟಹಾಸ ಗೈಯುತ್ತಿದೆ, ಅದೆಷ್ಟೋ ಹೆಣ್ಣು ಮಕ್ಕಳ ಹತ್ಯೆಯಾಗಿದೆ, ಇನ್ನೆಷ್ಟೋ ಹೆಂಗಳಿಯರ ಬಾಳು ಗೋಳಾಗಿದೆ. ಕೆಲವು ಸಂಸ್ಕಾರವಿಲ್ಲದ ಹೆಣ್ಣಿಂದ ಗಂಡಿನ ಜೀವನವು ನಾಶವಾಗಿ ಹುಚ್ಚರಾಗಿ ಅಲೆಯುತ್ತಿದ್ದಾರೆ. ಎಲ್ಲವೂ ಆಡಂಬರ, ದುಡ್ಡಿದ್ದವರ ಬಳಿ ಮಾತ್ರ ಗೆಳೆಯರಿರುತ್ತಾರೆ. ಅಂದು ಅಧಿಕಾರ ಇದ್ದವರು ಇಲ್ಲದವರಿಗೆ ತಮ್ಮಿಂದ ಸಹಾಯ ಹಸ್ತ ನೀಡುತ್ತಿದ್ದರು. ಆದರೆ ಇಂದಿನ ಸ್ನೇಹಿತರು ಅಧಿಕಾರ ಬಂದ ಕೂಡಲೇ ಜೊತೆಯಾಗಿದ್ದವರಿಂದ ಬೇರಾಗುತ್ತಾರೆ. ತಮ್ಮ ಸ್ವಾರ್ಥ ಹಾಗೂ ಹಿತಾಸಕ್ತಿಗಳಿಗೆ ಮಹತ್ವ ಕೊಡುತ್ತಾರೆಯೇ ಹೊರತು ಸ್ನೇಹಕ್ಕಲ್ಲ.ಎನ್ನುವದು ಕಟುಸತ್ಯ.

ಕೊನೆಯ ಮಾತು 
'ಸ್ನೇಹ' ಧರೆಯ ಪರಿಶುದ್ಧ ಸಂಬಂಧವು ಅದಕ್ಕೆಕಳಂಕ ತರುವ ಕೃತ್ಯ ಯಾರೇ ಮಾಡಿದರು, ಭವಿಷ್ಯದಿ ಖಂಡಿತ ಪಶ್ಚಾತಾಪ ಪಡಬೇಕಾಗುವದು.ಅದಕ್ಕೆ ದಯವಿಟ್ಟು ಸ್ನೇಹದ ಹೆಸರಲ್ಲಿ ಆಟವಾಡಬೇಡಿ,ನಂಬಿಕೆ ದ್ರೋಹ ಮಾಡದಿರಿ, ಜೊತೆ ಇದ್ದೆ ಹಿತ ಶತ್ರುಗಳಾಗದಿರಿ ಅಂದಾಗ ಮಾತ್ರ ಸ್ನೇಹಿತರ ದಿನ ಆಚರಣೆ ಮಾಡಿದ್ದಕ್ಕೂ ಸಾರ್ಥಕವಾಗುತ್ತದೆ. 

✍ ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ. ಯಡ್ರಾಮಿ.

ಸಾಧಕನಾಗು

ಸಾಧಕನಾಗು...*

ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕು 
ತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕು 
ಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕು 
ನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು 

ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕು 
ಬೇಜಾರು ಆಲಸ್ಯತನ ದೂರಕ್ಕೆ ನೂಕು 
ಸಾಧಕರ ಸಾಧನೆಗಳ ಮೆಲುಕು ಹಾಕು 
ಕರುನಾಡೆ ಒಂದು ದಿನ ನಮ್ಮನ್ನು ಓದಬೇಕು 

ಕುಂಟು ನೆಪಗಳೊಂದಿಗೆ ಕಾಲ ಕಳೆಯಬೇಡಿ 
ಸುಮ್ಮನೆ ಅನಾಗತ್ಯವಾಗಿ ಸಮಯ ವ್ಯರ್ಥ ಮಾಡಿ 
ಕಳೆದು ಹೋದ ದಿನಗಳ ಕುರಿತು ಚಿಂತಿಸಬೇಡಿ 
ಪ್ರಯತ್ನಗಳಲ್ಲಿ ಸೋತಿದ್ದೀರಿ ಆದರೆ ಸತ್ತಿಲ್ಲ ನೆನಪಿಡಿ 

ಇರುವುದೊಂದೇ ಜನ್ಮ ಪರಿಶ್ರಮ ಹೆಚ್ಚಾಗಲಿ 
ನೀವ್ಯಾರು ಎಂಬುದು ಜಗತ್ತಿಗೆ ತಿಳಿಯಲಿ 
ಮಾಡುವ ಕೆಲಸ ಕಾರ್ಯಗಳು ಪ್ರಾಮಾಣಿಕವಾಗಿರಲಿ 
ಸತ್ತ ಮೇಲೆ ಸ್ಮಶಾನ ಕಣ್ಣೀರಿಡುವಂತಾಗಲಿ 

ಮಾಡಿದ ಸಾಧನೆ ಚರಿತ್ರೆಯಲ್ಲಿ ಉಳಿಯಬೇಕಾಗಿದೆ 
ಆ ಮಹಾನ್ ಕಾರ್ಯಕ್ಕೆ ತಪಸ್ಸು ಬೇಕಾಗಿದೆ 
ಹೆತ್ತವರ ಒಡಲು ಸಂತಸದಿ ಇರಿಸಬೇಕಾಗಿದೆ 
ಸಾಧಕರಾಗಿ ಸನ್ಮಾನ ಸಮಾರಂಭಕ್ಕೆ ವೇದಿಕೆ ಸಜ್ಜಾಗಿದೆ 

ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
HPS ಹಿರೇಮಳಗಾವಿ
 ಬಾಗಲಕೋಟ
9845568484

ಬೆಳಗು...

ಕವನ     ಬೆಳಗು ಬೆಳಗು ಬಾ ಬೆಳಕು ಬೆಳದಿಂಗಳ ಬೆಳಕು ಚೆಲ್ಲುತ ರಂಗು ರಂಗಿನ ಕಾಮನಬಿಲ್ಲಿನಂತೆ ಮಿನು ಮಿನುಗುವ ಬೆಳ್ಳಿಚುಕ್ಕಿಯಂತೆ ರಂಗು ರಂಗಿನ ರಂಗೋಲಿಯಂತ...