ಮಂಗಳವಾರ, ನವೆಂಬರ್ 21, 2023

ಹೆಸರಿಲ್ಲದವನು(ಸಣ್ಣ ಕತೆ) - ಜ್ಯೋತಿ ಕುಮಾರ್.ಎಂ(ಜೆ.ಕೆ.).

“ ಹಲೋ “,
..............
“ ಹಾಯ್ “,
..............
“ ಹಾಯ್,ಹಲೋ “,
“ಯಾರು?!”
ಅಂತ ಕೇಳಿತು ಮೊಬೈಲಿನಲ್ಲಿಯ ಆ ಬದಿಯ ದನಿ.

ನಾನು ಯಾರು ಅಂತ ಕೇಳಬೇಕಿರಲಿಲ್ಲ.ಅವಳಿಗೆ ಅಷ್ಟೊಂದು ಚಿರಪರಿಚಿತ ನಾನು ಅವಳಿಗೆ.ಜೀವಕ್ಕೆ ಜೀವವೇ ನಾವಿಬ್ಬರೂ ಆಗಿದ್ದಾಗ,ನನ್ನ ಹೆಸರೆ ಅವಳಿಗೆ ಶಕ್ತಿ,ಸಾಂತ್ವನ,ಪ್ರೀತಿ,ಪ್ರೇಮ,ಸಡಗರ,ಜೀವಂತಿಕೆ ಆಗಿತ್ತು.ದಿನಕ್ಕೆ ಒಮ್ಮೆಯಾದರೂ ನೋಡಲೇ ಬೇಕಿತ್ತು,ಒಂದಿಷ್ಟು ಹೊತ್ತು ಮಾತನಾಡಲೆಬೇಕಿತ್ತು."ನೀನು ನನ್ನ ಜೀವ ಭಾವ ತರಂಗ ಕಣೋ” ಅನ್ನೋಳು.

ಆದರೆ,ಇವತ್ತು,ಯಾರು? ಅಂತ ನಿರ್ಭಾವುಕವಾಗಿ ಕೇಳ್ತಾ ಇದ್ದಾಳೆ.

‘ಅಜಯ್ ದೇವಗನ್’ ಅಂದೆ.

ಅವಳಿಗೆ,ಅಜಯ್ ದೇವಗನ್ ಅಂದ್ರೆ ಪ್ರಾಣ.ಅವನ ಪ್ರತೀ ಚಲನ ಚಿತ್ರವನ್ನೂ ಮಿಸ್ ಮಾಡ್ದೆ ನೋಡ್ತಾ ಇದ್ದಳು.ಅವಳ ಪರ್ಸಿನಲ್ಲಿ ಅವನದೊಂದು ಫೋಟೊ ಯಾವಾಗಲೂ ಕುಳಿತಿರೋದು.ಸ್ವಲ್ಪ ಹೆಚ್ಚು ಕಡಿಮೆ ನನ್ನ ಕೂದಲು ಮತ್ತು ನಾನು  ಅದೇ ತರಹ ಇದ್ದಿದ್ದರಿಂದ,ನನ್ಗೆ ಮೀಸೆ ಟ್ರಿಮ್ ಮಾಡಿಸ್ತಾ ಇದ್ದಳು.ಅದೇ ತರಹದ ಬಟ್ಟೆಗಳನ್ನೆ ಸೆಲೆಕ್ಟ್ ಮಾಡಿಸ್ತಾ ಇದ್ದಳು.ಒಳಗೊಂದು ಟೀ ಶರ್ಟ್ ಅದರ ಮೇಲೊಂದು ಶರ್ಟ್,ಪೂರ್ತಿ ಮೇಲಿನದೊಂದು ಓಪನ್ ಬಟನ್.ಅವಳ ಪರ್ಸಿನಲ್ಲಿದ್ದ ದೇವಗನ್ ಶೈಲಿದೇ ಒಂದು ಫೋಟೊ  ಕೂಡ ತೆಗೆಸಿದ್ದಳು.ಇದು ನಮ್ಮಿಬ್ಬರ ಟಾಪ್ ಸಿಕ್ರೆಟಿನಲ್ಲೊಂದಾಗಿತ್ತು.

ಆಗಿನ್ನೂ,ಮೊಬೈಲ್ ಬೊಚ್ಚು ಬಾಯಿ ಬಿಟ್ಟು ಕೊಂಡು,ಅಂಬೆಗಾಲು ಇಡ್ತಾ ಇದ್ದ ಕಾಲ.ಈಗಿನ ತರಹ ಆಗಿದ್ದರೆ,ಟ್ರೂ ಕಾಲರ್ ಆ್ಯಪಿನಲ್ಲಿ ನನ್ನ ಹೆಸರು ಬಂದ ತಕ್ಷಣ ಬ್ಲಾಕ್ ಆಗಿರುತ್ತಿತ್ತೇನೋ.

ಇದೆಲ್ಲ ನೆನಪಿಸಿಕೊಳ್ಳುತ್ತಾ,ನನ್ನ 1108 ನೋಕಿಯಾ ಫೋನ್ ಅನ್ನು ಕಿವಿಗೆ ಸರಿಯಾಗಿ ಹಿಡಿದುಕೊಂಡೆ.

“ಯಾಕೆ ಮಾಡಿದೆ ಫೋನ್?ಫೋನು ಮಾಡಬಾರದು ಅಂತ ನಿನ್ಗೆ ಹೇಳಿಲ್ವ,ಹೇಳಿದ್ದನ್ನೆ ಹೇಳೋಕೆ ಅಸಹ್ಯ ಆಗುತ್ತೆ,ಯಾವ ಬೇವರ್ಸಿನೋ ನಿನ್ಗೆ ನನ್ನ ನಂಬರ್ ಕೊಟ್ಟಿದ್ದು,ಆ ಗಿಡ್ಡ ಮಂಜನಾ,ಆ ಪ್ರವೀಣನಾ?ಆ ನನ್ನ ಮಕ್ಳಿಗೆ ಎಷ್ಟು ಹೇಳಿದ್ರೂ ನಿನ್ಗೆ ನನ್ನ ನಂಬರ್ ಕೊಡ್ತಾರೆ,ಈಡಿಯಟ್ಸ್ .”ಅಂತ ಏನೇನೋ ಬೈಯ್ತಾ ಇದ್ದಳು.ಆದ್ರೆ ಅಪ್ಪಿ ತಪ್ಪಿಯು ಹೇಗಿದ್ದಿಯಾ?ಅರಾಮಾ?ಏನ್ ಮಾಡ್ತಾ ಇದ್ದೀಯಾ?ಎಲ್ಲಿದ್ದೀಯಾ?ಅಟ್ ಲಿಸ್ಟ್ ಸತ್ತಿದ್ದೀಯಾ?ಬದುಕಿದ್ದಿಯಾ? ಅಂತಾನು ಕೇಳಲಿಲ್ಲ.

ಕೊಂಚ ಸಮಯದ ನಂತರ ಫೋನ್ ಕರೆ ಕಟ್ಟಾಗಿತ್ತು.ಇವಳು ಅವಳೇನಾ?ಅಥವಾ ರಾಂಗ್ ನಂಬರ್ರಿಗೆ ಕಾಲ್ ಮಾಡಿದ್ನಾ? ಅಂತ ಒಂದು ಕ್ಷಣ ದಿಗಿಲಾಯ್ತು.

ಇರಲಿ ಯಾವ್ದೋ ಧಾವಂತದಲ್ಲಿ ಇರಬೇಕು ಅಂದುಕೊಂಡು,ಸ್ವಲ್ಪ ಸಮಯದ ನಂತರ ಮೆಸೇಜ್ ಮಾಡ್ದೆ.ಆಗೆಲ್ಲಾ ಮೆಸೇಜಿಗೂ ಕೂಡ ಒಂದು ರೂಪಾಯಿ ಕಟ್ಟಾಗೋದು,ನನ್ಗೆ ಅದರ ದರ್ದು ಇರಲಿಲ್ಲ.ನನ್ನ ಗಮನವೆಲ್ಲ ಅವಳು ನನ್ನ ಜೊತೆ ಮಾತನಾಡಬೇಕು.ನನ್ಗೆ ಅವಳು ಬೇಕಿತ್ತು ಅಷ್ಟೇ.

“ ಹಾಯ್ ”.
.........

“ ಹಲೋ” .
.............

“ ಯಾಕೆ,ನೋ ರಿಪ್ಲೇ?”

“ ಹೇ,ಯಾರಿದು? ‘

ಮತ್ತದೇ,ಸಿಡಿಗುಂಡಿನಂತಹ ಪ್ರಶ್ನೆ.ಅಂದ್ರೆ ನನ್ನ ನಂಬರ್ ಅನ್ನು ಒಂದ್ಸಾರಿನೂ ಗಮನಿಸಿಲ್ಲ ಅಂದ ಹಾಗೆ ಆಯ್ತು.

‘ ರಾಹುಲ್ ದ್ರಾವಿಡ್ ’ ಆಂತ ಈ ಸಾರಿ ಟೈಪಿಸಿದೆ.ಅವಳ ಎರಡನೇ ಫೇವರಿಟ್ ಹೀರೊ.ಗ್ರೇಟ್ ಕ್ರಿಕೆಟರ್.ಇದು ನಮ್ಮಿಬ್ಬರಿಗಷ್ಟೆ ಗೊತ್ತಿದ್ದ ಎರಡನೇ ಸಿಕ್ರೇಟ್.

“ಥೂ!,ನಿನ್ನ.ನಿನ್ನ ಜನ್ಮಕ್ಕೆ ಬೆಂಕಿ ಹಾಕಾ!”.ಎಂದು ರಿಪ್ಲೈ ಬಂತು.ಹೌದು ನನ್ನ ಜನ್ಮಕ್ಕೆ ಬೆಂಕಿಗಿಂತ ಉತ್ತಮ ಸ್ನೇಹಿತ ಇರಲು ಸಾದ್ಯವಿರಲಿಲ್ಲ.ಕನಿಷ್ಟ ನಾಯಿಗೂ ಒಂದು ಹೆಸರಿರುತ್ತೆ,ಬಂಟಿ,ಬಿಂಗೋ,ಚಿನ್ನು,ಮುನ್ನ,ಪಪ್ಪಿ,ರಾಮು...ಹೀಗೆಯೆ,ಆದರೆ ನನ್ಗೆ? ನಂದೆ ಆದ ಹೆಸರೇ ಇರಲಿಲ್ಲ.ಅವರಿವರ ಹೆಸರು ಹೇಳಿಕೊಂಡು,ಪಾತ್ರ ಮಾಡಬೇಕಿತ್ತು.ಹೆಸರಿಲ್ಲದವನು ನಾನು!!!

ಹೀಗೆ ಸುಮಾರು ಆರೇಳು ತಿಂಗಳ ಕಾಲ,ಅಜಯ್ ದೇವಗನ್ ಹಾಗೂ ರಾಹುಲ್ ದ್ರಾವಿಡ್ ಪಾತ್ರಗಳ ಪರಕಾಯ ಪ್ರವೇಶ ಮಾಡಿದರೂ.ಅವಳಿಂದ ಯಾವುದೇ ಉತ್ತರ ಬರಲೇ ಇಲ್ಲ.ಕೊನೆಕೊನೆಗೆ ನಾನು ಹಲೋ ಅಂದ ತಕ್ಷಣ ಫೋನ್ ಕರೆ ಕಟ್ ಮಾಡ್ತಾ ಇದ್ದಳು.ನಾನು ಕಳುಹಿಸಿದ ಎಷ್ಟೋ ಮೆಸೇಜುಗಳು ಇನ್ ಬಾಕ್ಸಿನಲ್ಲಿ ಹಾಗೆಯೇ ಬಿದ್ದು ಸತ್ತು ಹೋಗಿರ್ತಾ ಇದ್ದವು.

ಹಿಂದೊಮ್ಮೆ, ಅವಳು,ನಾನಿದ್ದಲ್ಲಿಗೆ ಬಂದು,”ಇವತ್ತಿಗೆ,ನಮ್ಮಿಬ್ಬರ ಪ್ರೀತಿ ಮುಗೀತು,ಕಾರಣ ಏನೂ ಇಲ್ಲ.ನನ್ಗೆ ನೀನು ಬೇಡ ಅಷ್ಟೆ”,ಅಂದು ಹೋದ ದಿನದಿಂದ ಅವಳ ಮನಸ್ಸಿನಲ್ಲಿ,ಈಗ ಅವಳ ಮೊಬೈಲ್ಲಿನಲ್ಲಿ ನನ್ಗೆ ಯಾವ್ದೇ ಜಾಗ ಇರಲಿಲ್ಲ.ಫೋನ್ನಲ್ಲಿ ನನ್ನ ಹೆಸರು ಸೇವ್ ಆಗಿರಲೇ ಇಲ್ಲ.ಕನಿಷ್ಟ ಒಂದು ಡಾಟ್ ಆಗಿಯಾದರೂ ಸೇವ್ ಮಾಡಬಹುದಿತ್ತು.ಆದರೆ,ಮಾಡಿರಲಿಲ್ಲ.ನನ್ನ ಹೆಸರು,ಅವಳ ಹೃದಯದಲ್ಲಿ,ಅವಳ ಮೋಬೈಲ್ಲಿನಲ್ಲಿ ಉಳಿಯುವುದು ಅವಳಿಗೆ ಬೇಕಾಗಿರಲಿಲ್ಲ.ಲವ್ ಅಂತ ಸೇವ್ ಮಾಡಲು,ನಾನು ಅವಳ ಲವ್ವರ್ ಅಲ್ಲ,ಎಕ್ಸ್ ಅಂತ ಸೇವ್ ಮಾಡಿ ಮನೆಯವರ ಕೆಂಗಣ್ಣಿಗೆ ಸಿಲುಕುವುದೂ ಬೇಕಿರಲಿಲ್ಲ.ಹಾರ್ಟ್ ಸಿಂಬಲ್ ಆಗಿ ಸೇವ್ ಮಾಡಲು,ಇದ್ದೊಂದು ಹೃದಯವ ಯಾರಿಗೆ ಕೊಟ್ಟಿದ್ದಳೋ,ಯಾರಿಗೆ ಗೊತ್ತು?

ನಾನೂ ಏನೆಲ್ಲಾ ಪ್ರಯತ್ನಿಸಿದರು,ಅವಳ ಎದೆಯ ಕವಾಟಗಳು,ನನ್ನ ವಿಷಯದಲ್ಲಿ ಯಾವಾಗಲೋ ಮುಚ್ಚಿ ಹೋಗಿದ್ದವು.ಪ್ರೀತಿ ಇಲ್ಲದವರ ಮನೆಯ ದೇವರ ಜಗುಲಿಯಾದರೂ ಬೇಡ,ಪ್ರೀತಿ ತುಂಬಿದ ಮನೆಯ ಮೆಟ್ಟಿನ ಗೂಡಾಗಿದ್ದರು ಸಾಕು.ನಾನಾದರೂ ಏನು ಮಾಡಲಿ,ಪ್ರೀತಿ ಇಲ್ಲದ ಮೇಲೆ.ಬಲವಂತದಿಂದ  ಮಾಡೋಕೆ ಅದೇನು ಬಲಾತ್ಕಾರವೆ?

ಹೀಗೆಯೇ ಸುಮಾರು ಮೂರು ವರ್ಷಗಳು ಕಳೆದಿರಬಹುದು.ಪಾಪಿ ಪೇಟ್ ಕಾ ಸವಾಲ್.ಏನಾದರೂ ಮಾಡಲೇ ಬೇಕಲ್ವಾ?ಬದುಕು ಬಡಿದು ಬಡಿದು,ಜೀವನದ ಮುಂದಿನ ದಡಕ್ಕೆ ತಲುಪಿಸುತ್ತಂತೆ.ನಾನು ಯಾವುದೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ.ನನ್ನವಳನ್ನು ಅವರ ಸೋದರ ಮಾವನವರ ದೇವನಹಳ್ಳಿಯ ಮನೆಯಲ್ಲಿ ಬಿಟ್ಟು,ಇನ್ನೊಂದು ಕಡೆ ಹೋಗಿ,ಬಸ್ಸಿಳಿದು ಬರ್ತಾ ಇದ್ದೆ.ಮಧ್ಯಾಹ್ನ ಸುಮಾರು ಮೂರು ಗಂಟೆ.ಸೂರ್ಯನಿಗೆ ಆಗ ತುಂಬು ಯೌವ್ವನ,ನಿಗಿ ನಿಗಿ ಬೆಂಕಿ ಕಾರುತ್ತಿದ್ದ.ವಿಪರೀತ ಸೆಕೆ.ಇಳೆ,ಮಳೆ ಕಾದು,ಕಾದು ಕೆಂಡವಾಗಿದ್ದಳು.

ಚೀನಾದ,ಇಷ್ಟಗಲದ ಕಲರ್ ಡಿಸ್ಪ್ಲೇನ ಮೊಬೈಲಲ್ಲಿ ಯಾವುದೋ ಹೊಸ ನಂಬರ್ ನಿಂದ ಕಾಲ್ ಬಂತು.

“ ಹಲೋ ”,

...........

“ ಹಾಯ್,ಯಾರು? ”

“ ನಾನು.”

ನೆತ್ತಿಗೆ ಒಂದೇ ಸಾರಿಗೆ ಸಿಡಿಲು ಬಡಿದ ಹಾಗೆ ಆಯ್ತು.ಕತ್ತೆತ್ತಿ ನೋಡಿದೆ,ಮಳೆ ಮೋಡವಾಗಿ,ಸಿಡಿಲು ಏನಾದರೂ ಬಿತ್ತಾ?ಅಂತ.ಆದರೆ,ಅದೇ ನೀಲಿ ಆಕಾಶದಲ್ಲಿ,ಮೂವತ್ತರೆಡು ಹಲ್ಲು ಬಿಟ್ಟು ಸೂರ್ಯ ನಕ್ಕಂಗೆ ಆಯ್ತು.

“ ಒಂದ್ನಿಮಿಷ.”

ಅಂದು,ಆ ಕಡೆ ಈ ಕಡೆ ನೋಡಿದೆ.ಅಲ್ಲೊಂದು,ಪಟ್ಟಿಗೆ ಅಂಗಡಿ ಇತ್ತು.ಗಿರಾಕಿಗಳಿಲ್ಲದ ಮುದಿ ವೈಶ್ಯಯಂತೆ,ಬಾಗಿಲು ತೆರೆದು ನಿಂತಿತ್ತು.ಅಲ್ಲೋಗಿ ಒಂದು ಸಿಗರೇಟ್ ಕೊಂಡು,ಬಾಯಿಗೆ ಇಟ್ಟು ಅಂಟಿಸಿಕೊಂಡು,ಎದೆಯ ಪುಪ್ಪಸದಾ ತುಂಬಾ ಹೊಗೆಯನ್ನು ಎಳೆದು,ನಿರಾಳನಾದೆ.

“ ಮ್ಮ್,ಹೇಳಿ,ಯಾರು?” ಅಂತ ಕೇಳಿದೆ,ಯಾವುದೇ ಭಾವನೆ ಇಲ್ಲದೇ. ಆದರೆ,ನನ್ಗೆ ಗೊತ್ತಿತ್ತು,ಅದು ಅವಳೇ ಅಂತ.ಅವಳು ಕರೆ ಮಾಡಿದಕ್ಕೆ ನಾನು ಸಂಭ್ರಮಿಸಲೂ ಇಲ್ಲ,ಆಶ್ಚರ್ಯ ಪಡಲೂ ಇಲ್ಲ.

“ ನಾನು” ಅಂದಳು.

“ ನಾನು ಅಂದ್ರೆ,ಹೆಸರಿಲ್ವಾ?”ಮರು ಪ್ರಶ್ನೆ ಎಸೆದೆ.

“ನಾನು.............ಅಂತ,ನಿನ್ಗೆ .........ಆಗಬೇಕು”ಹೀಗೆ ಏನೋ ಹೇಳಿದಳು.ಆದರೆ ನನ್ಗೆ ಅವಳ ಹೆಸರು ಮತ್ತು ನಮ್ಮ ಸಂಬಂಧದ ಬಗ್ಗೆ ಹೇಳಿದಾಗ,ಯಾಕೋ ಮ್ಯೂಟ್ ಮಾಡಿದ ಪಿಕ್ಚರಿನ ಸೀನ್ ತರಹ ಏನೂ ಕೇಳಿಸಲೇ ಇಲ್ಲ.

“ ಹ್ಞುಂ,ಹೇಳು” ಅಂದೆ,ಬೇಕಂತಲೆ,ಬಹುವಚನದಲ್ಲಿ ಮಾತನಾಡಲಿಲ್ಲ.

“ ಚೆನ್ನಾಗಿದ್ದೀಯಾ?”

“ ಬದುಕಿದ್ದೇನೆ.”

“ ಮದುವೆ ಆಯ್ತಂತೆ,ನಾನೇಳಿರಲಿಲ್ವ,ನಿನ್ಗೆ ನಂಗಿಂತ ಒಳ್ಳೆ ಹುಡ್ಗಿ ಸಿಕ್ತಾಳೆ ಅಂತ,ಟೀಚರ್ ಅಂತೆ.”ಅಂದಳು.

“ ನಿಂದೂ ಮದುವೆ ಆಯ್ತಾ?”ಸುಮ್ನೆ ಏನೋ ಒಂದು ಕೇಳಬೇಕು ಅಂತ ಕೇಳಿದೆ.

“ ಹೌದು ಆಯ್ತು,ನಮ್ಮನೆವರು ಎಲ್.ಐ.ಸಿ.ಯಲ್ಲಿ ಡಿ.ಓ.” ಅಂದಳು.

“ಸರಿ” ಅಂದೆ.

“ ಎಲ್ಲಿದ್ದೀಯಾ? ” ಯಾವಾಗ ಕೇಳಬೇಕಿತ್ತೋ ಅವಾಗ ಕೇಳಿರಲಿಲ್ಲ.ಈಗ ಈ ಪರಿಯ ಪ್ರಶ್ನೆ.

“ ಯಾಕೆ? ನಿನ್ನಿಂದ ದೂರಾನೆ,ಇದ್ದೀನಿ ಬಿಡು”,ಅಂತಂದು ಮುಖಕ್ಕೆ ಹೊಡೆದ ಹಾಗೆ ಹೇಳಿದೆ.

“ನಿಂದು,ಅಪಾಯಿಂಟ್ ಆಯ್ತಂತೆ?ನೀನೂ ಟೀಚರ್ ಅಂತೆ?”

“ ಹೌದು”.ಅರ್ಧಕ್ಕೆ ತುಂಡರಿಸಿದೆ.

“ ಓ.ಕೆ.ಬ್ಯೂಸಿ ಇರೋ ಹಾಗೆ ಕಾಣುತ್ತೆ,ಇದೇ ನನ್ನ ನಂಬರ್ ಸೇವ್ ಮಾಡ್ಕೋ ಬಾಯ್”.ಅಂದಳು.

ಅಯ್ಯೋ,ದುರ್ವಿಧಿಯೆ,ಇದೇನು ನಿನ್ನ ಮಾಯ ಜಾಲ,ಬಳಲಿ ಬೆಂಡಾಗಿ ಬಸವಳಿದಾಗ,ಅವಳು ಇನ್ನಿಲದಂತೆ ಕಾಡಿದಳು.ಈಗ ಬೇಡವೆಂದರೂ,ಅವಳೇ ಬಂದು ಕಾಲಿಗೆ ತೊಡರುತ್ತಿದ್ದಾಳೆ.ನಂಬರ್ ಸೇವ್ ಮಾಡಲಾ?ನನ್ನವಳಿಗೆ ಗೊತ್ತಾಗದ ಹಾಗೆ,ಇದನ್ನು ಗುಪ್ತವಾಗಿ ಮುಂದುವರೆಸಲಾ?ಹಳೆಯ ಸಲುಗೆಯಿಂದ ಅವಳಿಗೆ ಪುನಃ ಹತ್ತಿರವಾಗಲಾ?

ಮದುವೆಗೂ ಮುಂಚೆ ನನ್ನವಳಿಗೆ ಅವಳ ಬಗ್ಗೆ ಹೇಳಿದಾಗ,”ನೋಡ್ರಿ,ಪಾಸ್ಟ್ ಈಸ್ ಪಾಸ್ಟ್.ಹಿಂದೆ ಏನಾಗಿತ್ತು,ಅದು ನಂಗೆ ಬೇಡ.ಇನ್ಮುಂದೆ ನೀವು ನನ್ನವರು ಮಾತ್ರ ಅಷ್ಟೇ.”ಅಂದಿದ್ದಳು.ಮದುವೆಯಾಗಿ ಕೆಲವು ದಿನಗಳ ನಂತರ “ಆದರೆ ಮುಂದೆ ಎಂದಾದರೂ ಅವಳು ವಾಪಾಸ್ಸು ಬಂದು,ನಂಗೆ ನೀನು ಬೇಕೆ ಬೇಕು ಅಂದ್ರೆ,ನನ್ನನ್ನು ಬಿಟ್ಟು ಅವಳೆ ನಿಮ್ಮ ಚಾಯ್ಸ್ ಆಗಿರುತ್ತಾಳೆ ಅಲ್ವಾ ?”ಅಂತ ಗೇಲಿ ಮಾಡಿ ನಕ್ಕಿದ್ದಳು.ಅವಳ ಆ ನಗು ನಂಗೆ,ಬೆಂಕಿ ಹಾಗೆ ಸುಡಲು ಪ್ರಾರಂಭಿಸಿತು,ಆದರೆ ನಿಜವಾಗಲೂ ಸುಟ್ಟಿದ್ದು,ಸಿಗರೇಟ್ಟಿನ ಕೊನೆಯ ಬಿಟ್ ದಾಟಿ ಬಂದ ಬೆಂಕಿ.ಜೋರಾಗಿ ಕೈ ಕೊಡವಿ,ಸಿಗರೇಟ್ ಬಿಸಾಕಿದೆ.

ಹೆಸರಿಲ್ಲದವನು ನಾನು, ಪ್ರೇಯಸಿಯ ಅಂತಃಪುರ ಹಸಿರು ಮಾಡಲಾ?ಅಥವಾ ಮುತ್ತು,ಮುತ್ತು ಅಂತ ನನ್ನನ್ನೇ ನೆಚ್ಚಿ ಬಂದು, ಮದುವೆಯಾಗಿ ವರ್ಷ ತುಂಬುವುದರೊಳಗೆ,ಬಸಿರಾಗಿ,ಹೆರಿಗೆಯಾಗಿ,ಮಗು ಕಳೆದುಕೊಂಡು,ಬರಿದಾದ ಮಡಿಲಲ್ಲಿ,ಅಕ್ಷರಶಃ ಹುಚ್ಚಿಯಾಗಿದ್ದಾಳೆ.ನನ್ನವಳ,ಆ ಹುಚ್ಚನ್ನು ಇನ್ನಷ್ಟು ಹೆಚ್ಚಿಸಲೇ?,ಮಸಣವಾದ ನನ್ನವಳ ಬಾಳಲ್ಲಿ ಚಿಂತೆಯ ಚಿತೆಯಾಗಲೇ? ಅಥವಾ ಮಡಿಲಲ್ಲಿ ಮಗುವಾಗಲೇ!.

ಅವಳ ಜೀವನದಲ್ಲಿ ನನ್ನ ಪಾತ್ರಕ್ಕೆ ,ಒಂದು ಹೆಸರಿಲ್ಲ.ಆದರಿವಳೋ ಮುಂದೆ ಹುಟ್ಟುವ ನಮ್ಮ ಮಕ್ಕಳ ಹೆಸರ ಮುಂದೆ ನನ್ನ ಹೆಸರನ್ನು ಸೇರಿಸಿ,ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುವವಳು.ನನ್ನ ಹೆಸರು ನನ್ನವಳಿಗೆ ಕುಲ ತಿಲಕ.ರಾಜ ವೈಭವ.ಮದುವೆಯಾದ ಕ್ಷಣದಿಂದ ತನ್ನ ಹೆಸರ ಮುಂದೆ ನನ್ನ ಹೆಸರನಿಟ್ಟು ಮೆರೆಸಿದವಳು.

ಗೆದ್ದಲು ತಿಂದ ಹೃದಯವನ್ನು ದೈವ ಮಂದಿರ ಮಾಡಿ ಪೂಜಿಸಿದ ನನ್ನವಳ ಪ್ರತಿಮೆಯ ಮುಂದೆ,ಅವಳ ನೆನಪು,ಮುಸುಕಾಗಲು ಪ್ರಾರಂಭಿಸಿತು.ಕಾಲುಗಳು ನನ್ನವಳನ್ನು ಸೇರುವ ಕಾತರದಿಂದ,ಆ ಕಡೆ ನಡೆಯಲು ಪ್ರಾರಂಭಿಸಿದವು.ಅವಳಿಂದ ಬಂದ,ಕರೆಯ ನಂಬರ್ರಿನಲ್ಲಿಯ ಅಂಕಿಗಳು ಮನದ ಪಟದಿಂದ ಒಂದೊಂದೇ ಅಳಿಸಿ ಹೋಗಲು  ಪ್ರಾರಂಭಿಸಿದವು.

ನಿಂತ ನೀರ
ಕಲಕಬೇಡಿ ಕಲ್ಲುಗಳೆ.
ಹೂದಳಗಳ 
ಇರಿಯಬೇಡಿ ಮುಳ್ಳುಗಳೆ.
ಎಂಬ ಎದೆಯ ಹಾಡು,ಎಲ್ಲಿಂದಲೋ ತೇಲಿ ಬರ್ತಾ ಇತ್ತು.

 - ಜ್ಯೋತಿ ಕುಮಾರ್.ಎಂ(ಜೆ.ಕೆ.).
ವಿಳಾಸ:-ಜ್ಯೋತಿ ಕುಮಾರ್.ಎಂ(ಜೆ.ಕೆ.)
ಶ್ರೇಯಾಂಕ್  ನಿಲಯ
ಮುದ್ದಣ್ಣ  ಬಡಾವಣೆ
A.P.M.C.ಹಿಂಭಾಗ 
ಜಗಳೂರು
ದಾವಣಗೆರೆ-ಜಿಲ್ಲೆ.
9972397103
jkdear007@gmail.com

ಒಂದು ಸಿನಿಮಾದ ಹಿಂದಿನ ಕಥೆ (ಸಣ್ಣ ಕತೆ) - ಜಯಶ್ರೀ ಹಿರೇಮಠ.

ಡಾಕ್ಟರ. ಬಸಲಿಂಗಯ್ಯ ಹಿರೇಮಠ ಆಯುರ್ವೇದ ವೈದ್ಯಕೀಯದಲ್ಲಿ ಎತ್ತಿದ ಕೈ,  ಸಿದ್ಧ ಹಸ್ಥರಿದ್ದರು.  ಅವರ ಬಾಲ್ಯವನ್ನು  ಗದಗಿನ ಪುಟ್ಟರಾಜ ಗುರುಗಳ ಆಶ್ರಮ, ಆಶ್ರಯದಲ್ಲಿ  ಕಳೆದಿದ್ದರು.  ಗೆಳೆಯರೊಬ್ಬರ ಕೋರಿಕೆ ಮೇರೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಮೈಸೂರ್ ಗೆ ಹೋದರು.  ನಂತರ ಬೆಂಗಳೂರಿಗೆ ಬಂದು ನೆಲೆಸಿದರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು.  ಹಿರಿಯವಳೆ ಜಯಾ ಆಕೆ ತುಂಬಾ ಧೈರ್ಯಶಾಲಿ ತಂದೆಯ ಗರ್ವ.  ಜಯಾಳನ್ನ ಧಾರವಾಡದಲ್ಲಿ  ನೌಕರಿ ಮಾಡುತ್ತಿದ್ದ  ವೀರೇಶ್ ಜೊತೆ ವಿದ್ಯಾಭ್ಯಾಸ ಮುಗಿದ ನಂತರ ಜಯಾ ಮದುವೆ ಮಾಡಿದ್ದರು. 
ಜಯಾಗೆ ಇಬ್ಬರು ಮಕ್ಕಳು ಒಂದು ಹೆಣ್ಣು ಒಂದು ಗಂಡು.  ಮಗಳು ಸುಷ್ಮಾ ರಾಣಿ,  ಮಗ ರುದ್ರಮುನಿ, ಇಬ್ಬರೂ ಶಾಲೆಯಲ್ಲಿ  ನಂಬರ್ ಒನ್.  ಮಗಳು PUC ಕಲಿಯುವಾಗ NCC ಕೆಡೆಟ್,  ಅಲ್ಲದೆ ಸಾರ್ಜೆಂಟ್ ಕೂಡ  B SC, MSC , ಮಾಡಿದ ಮೇಲೆ ಒಂದು ವರ್ಷ ಕಾಲೇಜೊಂದರಲ್ಲಿ  ಲೆಕ್ಚರರ್ ಆಗಿ ನೌಕರಿ ಮಾಡುತ್ತಿದ್ದಾಗ  ಅವಳಿಗೆ ಒಂದು ಒಳ್ಳೇ ಮನೆತನದ ವರ  ಶಿವಾನಂದ್ ನ ಜೊತೆ ಮದುವೆ ಆಯಿತು.  ಅವಳಿಗೆ ಒಬ್ಬ ಗಂಡು ಮಗ ಆದಿತ್ಯ . ಆದಿತ್ಯ ಎಂದರೆ ಜಯಾಗೆ ಪಂಚ ಪ್ರಾಣ.   ಆದಿ ಅವಳಮ್ಮ ಕಲಿಸಿದಂತೆ ಜಯಾನ್ನ ಬೇಬಿ ಎಂದೇ ಕರೆಯುತ್ತಿದ್ದ. 

ಇನ್ನು  ಮಗ ರುದ್ರ  ಸ್ಕೌಟ್ ನಲ್ಲಿದ್ದ ಪ್ರತೀ ಆಟದಲ್ಲೂ ಫಸ್ಟ್. ಯೋಗ, ಕರಾಟೆ, ಡಾನ್ಸ್ ಹೀಗೆ ಆಲ್ ರೌಂಡರ್ ಆಗಿದ್ದ .  ಅವನೂ  B B A ಮುಗಿಸಿದ.  ರುದ್ರನಿಗೆ  ಸಿನಿಮಾದಲ್ಲಿ ಹೀರೋ ಆಗುವ ಮಹದಾಸೆ.  ಅವನು ಬೆಳೀತಾ ಬೆಳೀತಾ ಅವನ  ಆಸೆಯೂ ಬೆಳೆದು ಹೆಮ್ಮರವಾಯ್ತು.  ಮನೆಯಲ್ಲಿ ತಂದೆಯ ಸಮ್ಮತಿ ಇರಲಿಲ್ಲ.  ಮಗಳ ಗಂಡ ಶಿವು , ರುದ್ರನ ಆಸೆಗೆ ಬೆಂಬಲ ನೀಡಿದ. 

      ಶಿವು    2020 ನವೆಂಬರ್ 28 ರ ಶೆನಿವಾರ ರಾಣಿ ಮತ್ತು ಆದಿತ್ಯನ  ಜೊತೆ ಧಾರವಾಡಕ್ಕೆ ಬಂದರು.  ಜಯಾಗೆ  ಬಹಳ ಖುಷಿ ಆಯ್ತು.  ಶಿವು ಊಟ ಮಾಡಿದ ನಂತರ ರುದ್ರುನ್ನ ಕರಕೊಂಡು ಹೊರಗೆ ಹೋದ ನಂತರವೇ ಜಯಾಗೆ ಗೊತ್ತಾಯ್ತು ವಿಷಯ ಏನು ಅಂತ.   ಶಿವು ತನಗೆ ಪರಿಚಯವಿದ್ದ ಸಿನಿಮಾ ನಿರ್ಮಾಪಕರೊಬ್ಬರ ಪರಿಚಯ ಮಾಡಿಸಲು ರುದ್ರುನ್ನ ಕರ್ಕೊಂಡು ಹೋದದ್ದು ಅಂತ. 
  
  ರುದ್ರು ಡಿಗ್ರಿ ಮಾಡುತ್ತಿರುವಾಗಲೇ  ಮಾಡೆಲಿಂಗ್.   ಕ್ಷೇತ್ರದಲ್ಲಿ ಹೆಸರು ಮಾಡಿದ್ದ  ಬೆಂಗಳೂರಿನಲ್ಲಿ.    "ಅಭಿನಯ ಚಕ್ರವರ್ತಿ ಸುದೀಪ್ "ಅವರ ಹಾಗೇ ಅಭಿನಯ ಕೂಡ ಮಾಡುವುದನ್ನು ಒಮ್ಮೆ ಶಿವು ನೋಡಿದ್ದ.  ಅನಾಯಾಸವಾಗಿ ಧಾರವಾಡದಲ್ಲಿ ಶೂಟಿಂಗ್ ಸಲುವಾಗಿ ತಮ್ಮ ತಂಡದೊಟ್ಟಿಗೆ ಬಂದಿದ್ದ ಗೆಳೆಯರಿಗೆ ರುದ್ರನ ಪರಿಚಯ ಮಾಡಿಸಿದಾಗ,
ಅವರು ಮೊದಲೇ ಕರ್ಕೊಂಡು ಬರಬೇಕಿತ್ತು ಈ ಸಿನಿಮಾದಲ್ಲೇ ಹೀರೊ ಆಗಿ ತಗೋತಿದ್ದಿವಿ ಅಂತ ಮರುಗಿದರೆ...?     ಅಲ್ಲಿದ್ದವರೆಲ್ಲಾ  ರುದ್ರುನ್ನೆ ಹೀರೊ ಅಂತ ತಿಳಕೊಂಡಿದ್ರಂತೆ.  

    ಭಾನುವಾರ ಪ್ರದೀಪ್ ಅಂದ್ರೆ ನಿರ್ಮಾಪಕರು ಶಿವುಗೆ ಫೋನ್ ಮಾಡಿ ಮೀಟಿಂಗ್ ಇದೆ ನಿಮ್ಮ ಅಳಿಯನ್ನ ಕರ್ಕೊಂಡು ಬನ್ನಿ ಅಂತ ಹೇಳಿದ್ರಂತೆ  ಮತ್ತೆ ಇಬ್ಬರೂ ಶೂಟಿಂಗ್ ಸ್ಪಾಟ್ ಗೆ  ಹೋದರು.

ಜಯಾ ಮಾತ್ರ ಅವರು ಮನೆಗೆ ಯಾವಾಗ ಬರ್ತಾರೋ 
ಅಂತ ಚಾತಕ ಪಕ್ಷಿಯಂತೆ ಕಾಯ್ತಾ ಇದ್ದಳು. ಸಾಯಂಕಾಲ ಮನೆಗೆ ಬಂದು ಅತ್ತೆಯನ್ನು ನೋಡಿ ಶಿವು ಹೇಳಿದ ಧಾರವಾಡದಲ್ಲಿ ಶೂಟಿಂಗ್ ಮುಗಿಯುವ ತನಕ ರುದ್ರುಗೆ ಬರೋದಕ್ಕೆ ಹೇಳಿದ್ದಾರೆ  ಅತ್ತೆ  ಅಂತ
ಅಂದಾಗ.  ಜಯಾಗಂತೂ ಆಕಾಶ ಮೂರೇ  ಗೇಣು ಇದ್ದಂತೆ ಭಾಸವಾಯಿತು.  ಅಂತೂ ಇಂತೂ  ಮಗನ  ಆಸೆ ಈಡೇರುತ್ತೆ ಅಂತ.

ರುದ್ರ  ಅದೂ ಕೊರೋನಾ ಟೈಮ್ ನ್ನೂ ಲೆಕ್ಕಿಸದೆ ತನಗೆ ಇಷ್ಟವಾದ ಫೀಲ್ಡ್ ಗೆ ತೆರಳಿದ.   ಶಿವು,  ರಾಣಿನ್ನ ಮತ್ತು ಆದಿತ್ಯನ್ನ.   ಕರ್ಕೊಂಡು ಸಾಯಂಕಾಲ ತಮ್ಮ ಊರಿಗೆ ಹೊರಟೇ ಬಿಟ್ಟ. 

    ಆದಿತ್ಯ ಜಯಾಳ ಮುದ್ದಿನ ಮೊಮ್ಮಗ  ಅವ ಹೊರಟ ಅಂದ್ರೆ  ಸಾಕು ಆಕೆಗೆ ಏನೋ ಒಂದು ಥರ  ಕಳವಳ ಬೇಜಾರು ದುಃಖ  ಸಂಕಟ  ಒಂದು ಅಮೂಲ್ಯ ವಾದ  ವ್ಯಕ್ತಿ ತನ್ನಿಂದ ದೂರ ಹೋಗುತ್ತಾನೆ ಅನ್ನುವ ಆತಂಕ, ದುಗುಡ ಅಲ್ಲದೆ ಆದಿತ್ಯ ತಮ್ಮ ಊರಿಗೆ ಹೋದ ಮೇಲೆ ಎಲ್ಲಿ ತನ್ನನ್ನ ಮರೆತು ಬಿಡುತ್ತಾನೇನೋ ಅಂತ ಭಯ.......!?

          30/11/2020

ಬೆಳಿಗ್ಗೆ ಆರು ಗಂಟೆಗೆ ಸರಿಯಾಗಿ ರುದ್ರು  ಶೂಟಿಂಗ್
ಸೆಟ್ ಗೆ  ಹೋಗಿದ್ದ.   ಜಯಾ ಪೂಜೆ ಮಾಡಿ ಮುಗಿಸಿದಾಗ ರುದ್ರ ಶೂಟಿಂಗ್ ಗೆ ಹೋಗಿದ್ದು ಗೊತ್ತಾಯ್ತು.   ಮಧ್ಯಾಹ್ನ ಕಳೆಯಿತು,  ಸಾಯಂಕಾಲ ಆಯ್ತು ರಾತ್ರಿ ಆಯ್ತು.  ರುದ್ರ ಬರಲಿಲ್ಲ.
ಜಯಾಗೆ  ಕುತೂಹಲ....!   ರುದ್ರನ    ಮೊದಲ ದಿನದ
ಅನುಭವ ಹೇಗಿತ್ತು ?  ಕೇಳಲು ಕಾತುರದಿಂದ ಕಾಯ್ತಾ ಇದ್ದಳು  ಒಮ್ಮೇಲೆ ರಾತ್ರಿ 2 ಗಂಟೆಗೆ ಬಂದ ರುದ್ರ.
 
    ರುದ್ರ  ಹೇಳಪ್ಪಾ ನಿನ್ನ ಮೊದಲ ದಿನದ ಅನುಭವ ಹೇಗಿತ್ತು ಅಂತ.....!  ಆಗ ಅವನು ಹೇಳಿದ ಮಾತು ಕೇಳಿ ಜಯಾಳ ಗಂಟಲು ಉಬ್ಬಿತು, ಕಣ್ಣಾಲಿಗಳು ತುಂಬಿ ತುಳುಕಿತು. 

     ರುದ್ರ  ಬೆಳಿಗ್ಗೆ ಬೇಗ ಎದ್ದು ಹೋಗಿದ್ದಾಗ ಸೆಟ್ ನಲ್ಲಿ
ಕ್ಯಾಮರಾ ಮನ್ ,ಸೆಟ್ ಹಾಕುವವರು, ಕುಕ್ ಇನ್ನೂ. ತುಂಬಾ ಜನ ಬಂದಿದ್ದರಂತೆ.   ಆನಂತರ ಶೂಟಿಂಗ್ ಶುರುವಾಯ್ತು ಸುಮಾರು ಆರೇಳು ಗಂಟೆಯ ನಂತರ ವಿರಾಮ.   ಮತ್ತೆ ಶೂಟಿಂಗ್ ಶುರು.  ಅಂತೂ ರಾತ್ರಿ ಒಂದು ಗಂಟೆಗೆ ಪ್ಯಾಕಪ್ ಆದ ಮೇಲೆ  ಸ್ವಲ್ಪ ಹೊತ್ತು ನಿರ್ಮಾಪಕರು, ಚಿತ್ರ ತಂಡದ ಜೊತೆ ಮಾತಾಡಿ ಮನೆಗೆ ಬಂದಾಗ  ರಾತ್ರಿ ಎರಡು ಗಂಟೆ ಆಗಿತ್ತು.

    ರುದ್ರ ಬರುವುದನ್ನೇ ಎದುರು ನೋಡುತ್ತಿದ್ದ ಜಯಾಗೆ  ಕೆಟ್ಟ ಕುತೂಹಲ.  ರುದ್ರ  ಯಾರಿಗೂ ನಿರಾಶೆ ಮಾಡಲಿಲ್ಲ    ತನ್ನ ಅನುಭವ ಹೇಳಲು ಶುರು ಮಾಡಿದ .  ಬೆಳಿಗ್ಗೆ ಐದು ಗಂಟೆಗೆ ಸರಿಯಾಗಿ ಎದ್ದು ತಯಾರಾಗಿ ಆರು ಗಂಟೆಗೆ ಶೂಟಿಂಗ್ ಸ್ಪಾಟ್ ಗೆ ಹೋದೆ ಅಲ್ಲಿ ಎಲ್ಲರೂ ನನ್ನನ್ನ ತುಂಬಾ ಚೆನ್ನಾಗಿ ಮಾತಾಡಿಸಿದರು.   ಶೂಟಿಂಗ್ ನಡೆಯುವಾಗ ನಾನು ಒಂದು ಕಡೆ ನಿಂತು ಎಲ್ಲಾ ಗಮನಿಸಿದೆ.  ಮಧ್ಯ ವಿರಾಮ ಆಗುವ ತನಕ ಅಂದರೆ ಬರೋಬ್ಬರಿ ಆರು ತಾಸು ಆಗಿತ್ತು,  ಒಂಟಿ ಕಾಲ್ನಾಗ ನಿಂತಿದ್ದೆ ಕಾಲು ಭಾಳ ನೋವಾಯ್ತು ಅಂದಾಗ ಜಯಾಗೆ ತುಂಬಾ ಅಳು ಬಂತು.

     ರುದ್ರ ಅದನ್ನ ನೋಡಿ ಆಕೆಗೆ ಹೇಳಿದ ಮಮ್ಮೀ....! ಇದೇನು ಮಹಾ  ಅಲ್ಲ.  ಇದು ನನಗೆ ಇಷ್ಟವಾದ ಜಗತ್ತು.   ನಾನೇ ಅತೀ ಹತ್ತಿರದಿಂದ ಸಿನಿಮಾ
ಶೂಟಿಂಗ್ ನೋಡುವುದರಲ್ಲಿ ಮಗ್ನ ಆಗಿದ್ದು .
ಪ್ರದೀಪ್ ಅಣ್ಣಾ ಕೂತ್ಕೊಳ್ಳಿ  ಅಂತ ಹೇಳಿ ನನ್ನನ್ನ
ಎಲ್ಲರಿಗೂ ಮತ್ತೊಮ್ಮೆ ಪರಿಚಯ ಮಾಡಿಸಿದರು.
ಮೊನ್ನೆ ಶಿವು ಮಾಮ, ಬಸವಾರಾಧ್ಯ ಅಣ್ಣಾ
ನನ್ನನ್ನ ಪ್ರದೀಪ್ ಅಣ್ಣಾ ಅವರಿಗೆ ಪರಿಚಯ
ಮಾಡಿಸಿದ್ರಲ್ಲಾ .....! ಆಗ ಅವರೇನಂದರು ಗೊತ್ತಾ ?
ರುದ್ರ ನಮಗೆ ನೀವು ಮೊದಲೇ ಸಿಗಬೇಕಾಗಿತ್ತು  ಅಂತ.
ಸೆಟ್ ನಲ್ಲಿ ಇದ್ದವರೆಲ್ಲಾ   ನನ್ನನ್ನೇ ಹೀರೊ ಅಂತ
ತಿಳಿದು ಕೊಂಡಿದ್ದರು.  ಈ ಮಾತನ್ನು  ಶಿವೂನೂ ರುದ್ರನಿಗೆ ಹೇಳಿ ಇದನ್ನ ಉಳಿಸಿಕೊಂಡು ಹೋಗು ರುದ್ರ ಅಂತ ಹೇಳಿ ಹೋಗಿದ್ದನಂತೆ.

  ರುದ್ರ ಇದನ್ನೆಲ್ಲಾ ಹೇಳಿ ಮುಗಿಸುವ ಹೊತ್ತಿಗೆ ಬೆಳಿಗ್ಗೆ ಐದು ಗಂಟೆ .   ಎಲ್ಲರೂ ಮಲ್ಕೊಳ್ರಿ  ಇನ್ನು ಅಂದ.
ಬೆಳಕೇ ಆಯ್ತು ಇನ್ನೇನು ಮಲಗೋದು ಅಂತ ಜಯಾ
ಅಂದಾಗ .... ಇವತ್ತು  ನೀವು ನನ್ನ ದಾರಿ ಕಾದೀರಿ ....?! ಇನ್ನು ಮುಂದೆ ಕಾಯ್ ಬ್ಯಾಡ್ರಿ  ಈ ವಯಸ್ಸಿನಲ್ಲಿ ನಿಮಗೆ ರೆಸ್ಟ್ ಬೇಕು. ಅದೂ ಅಲ್ಲದೇ ನಾನೂ ಒಂದೆರಡು ತಾಸು ಮಲಗೆದ್ದು ಮತ್ತೆ ಶೂಟಿಂಗ್ ಗೆ  ಹೋಗ್ತೀನಿ, ಅಂತ ತಾಯಿಗೆ ಮಲಗಲು ಹೇಳಿ  ತನ್ನ ರೂಮಿಗೆ ಹೋದ.

      01/12/2020

ಜಯಾ ಏಳುವ ಹೊತ್ತಿಗಾಗಲೇ ರುದ್ರ ಶೂಟಿಂಗ್ ಗೆ
ಹೋಗಿದ್ದ  ಅವ ಮನೆಗೆ ಬರುತ್ತಿದ್ದ ಹಾಗೆ ಎಲ್ಲರ  ವಿಚಾರಣೆ ಶುರು.  ಇವತ್ತು ಹ್ಯಾಗಿತ್ತು  ನಿನ್ನ  ಅನುಭವ.  ರುದ್ರ ಹೇಳಿದ ಇವತ್ತು ನಿರ್ಮಾಪಕರ ಮಗ ನನ್ನೊಟ್ಟಿಗೆ ಎಷ್ಟು ಹಚ್ಕೊಂಡು ಮಾತಾಡಿದ ಆಗ ಅಲ್ಲಿದ್ದವರೆಲ್ಲಾ ನೀವಿಬ್ಬರೂ ಮೊದಲಿನಿಂದ ಪರಿಚಯಾನ...?  ಅಂತ ಕೇಳಿದರು.
ಜಯಾ  ಅವನ ಮಾತು ತುಂಡರಿಸಿ ಕೇಳಿದಳು ಇದೇ
ಸಿನಿಮಾದಲ್ಲಿ ನಿಂಗೆ ಆಕ್ಟ್ ಮಾಡಲು ಅವಕಾಶ ಸಿಗುತ್ತಾ.....?  ಅಂದಾಗ ರುದ್ರ ಹೇಳಿದ ಇಲ್ಲ.....! ತಾಯಿಗೆ ಬಹಳ ನಿರಾಶೆ ಆಯ್ತು.  ಈ ಸಿನಿಮಾ ಈಗ ಅರ್ಧ ಶೂಟ್ ಆಗಿದೆ ಮುಂದಿನ ಸಾರಿ ನನಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿ ಮುಗಿಸಿದ.  ಮತ್ತೆ ನೀನು ದಿನಾ ಹೋಗೋದು ನೋಡಿ ನಿನಗೂ ಅವಕಾಶ
ಕೊಟ್ಟಾರೇನೊ .....? ಅನ್ಕೊಂಡಿದ್ದೆ ,  ನೀನು ನಿರ್ಮಾಪಕರಿಗೆ ಹೇಳಿಲ್ಲನು........ ? ನೀನು  ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದು , ಹೇಳಬೇಕಿತ್ತು .  ಅಂದಾಗ ರುದ್ರ ಹೇಳಿದ.  ಶಿವು ಮಾಮ ಎಲ್ಲಾ ಹೇಳಿದ್ದಕ್ಕೆ ಅವರು ನನಗೆ ಅಲ್ಲಿ ಹೋಗಿ ಅನುಭವ ಆಗ್ಲಿ ಅಂತ  ಶೂಟಿಂಗ್ ಸ್ಪಾಟ್ ಗೆ ಹೋಗೋಕೆ  ಅನುಮತಿ ಕೊಟ್ಟಿರೋದು
ಅಂದು ಮಾತು ಮುಗಿಸಿದ.  ಜಯಾಳ ಪೆಚ್ಚು ಮೋರೆ
ನೋಡಿ ರುದ್ರ ಆಕೆಗೆ  ಸಮಾಧಾನ ಮಾಡ್ತಾ ಹೇಳಿದ
ತಡೀರಿ ಈ ಕೊರೋನ ಟೈಮ್ ಮುಗೀಲಿ ಅವಕಾಶ ಜಾಸ್ತಿ ಸಿಗುತ್ತೆ.   ಅಂತ ಹೇಳಿ ಮಲಗಲು ಹೋದ.

03/12/2020

ರುದ್ರ ಬೆಳಿಗ್ಗೆ ಬೇಗ  ಹೋಗೋದು ರಾತ್ರಿ ಶೂಟಿಂಗ್
ಪ್ಯಾಕಪ್  ಆದ ಮೇಲೆ ಬರುವುದು ಜಯಾಳಿಗೀಗ ಅಭ್ಯಾಸ ಆಗಿಬಿಟ್ಟಿತು.    ಆದ್ರೆ  ಇವತ್ತು ಒಂದು ಸರ್ಪರೈಸ್ ಇತ್ತು  ರುದ್ರ ಶೂಟಿಂಗ್ ಹೊರಟ ದಿನದಿಂದ ಜಯಾ ಯಾವಾಗಲೂ ಫೋನ್ ಮಾಡಿ  ಅವನಿಗೆ ತೊಂದರೆ ಕೊಟ್ಟಿರಲಿಲ್ಲ.  ಅವ ಮನೆಗೆ ಬಂದ ಮೇಲೆ ಜಯಾಗೆ ಹೇಳಿದ ಹಿರೇಮಠ್...! 
ರುದ್ರ ಜಯಾ ಮೇಲೆ ಪ್ರೀತಿ ಜಾಸ್ತಿ ಆದಾಗ, ಇಲ್ಲಾ ತುಂಬಾ ಬೇಜಾರು ಮಾಡಿಕೊಂಡಗಲೆಲ್ಲಾ ಸರ್ ನೇಮ್  ಹಚ್ಚಿ  ಕರೆಯುತ್ತಿದ್ದ.  ದಿನಾಲೂ ನೀವು ಕೇಳ್ತಾ ಇದ್ರಿ....! ಇವತ್ತು ಕೇಳಲೇ ಇಲ್ಲ.....?  ನೋಡ್ರಿ ಇವತ್ತು ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು, ನಂಗೆ  ಕಾಲೇಜ್ ಓರಿಯೆಂಟೇಶನ್ ಡೇ ನಲ್ಲಿ ಕಾಲೇಜ್ ಸ್ಟೂಡೆಂಟ್ ರೋಲ್ ಕೊಟ್ರು.  ಅಂತ ರುದ್ರ ಹೇಳಿದಾಗ  ಏನು ಸೀನಿತ್ತು..? ಎಂದು ಜಯಾ  ಕೇಳಿದಳು ಆಗ  ರುದ್ರ ಹೇಳಿದ.  ಹಿರೇಮಠ್ .....! ನೀವು ಸಿನಿಮಾ ರಿಲೀಸ್ ಆದ ಮೇಲೆ  ನೋಡುವರಂತೆ ಈಗ ನನ್ನನ್ನ ಏನು ಕೇಳಬಾರದಂತಪ್ಪ  ... .....! ಎಂದು ಹೇಳಿ ಮಾತು  ಮುಗಿಸಿದ.  ಇವತ್ತು ಗಟ್ಟಿಮೇಳಾ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಶರಣ್ಯಳ ನೃತ್ಯ ಇತ್ತಂತೆ.  ಅದು ಒಂದು ಹಾರರ್ ಮೋವಿ ಡಿಸೆಂಬರ್16ರ ವರೆಗೂ ಶೂಟಿಂಗ್ ಇರುತ್ತೆ, ನಂತರ ದಾಂಡೇಲಿಯಲ್ಲಿ  ಶೂಟಿಂಗ್ ಮುಂದುವರಿಯುತ್ತದೆ ಎಂದು ರುದ್ರ ಹೇಳಿದ .  ಅಜೇಯ್ ಮತ್ತು ಅವರ ತಂದೆ ರುದ್ರನ್ನ  ದಾಂಡೇಲಿಗೂ ಬನ್ನಿ ಎಂದು ಹೇಳಿದರಂತೆ.
ಬರೋಣ ಬಿಡಿ ಸಾರ್ ಎಂದು ಹೇಳಿ ಬಂದನಂತೆ.

ರುದ್ರ ಹೀಗೇ ಶನಿವಾರದ ತನಕ ಹೋದ.  ಭಾನುವಾರ
ರಜೆ.   ಮತ್ತೆ ಸೋಮವಾರದಿಂದ ಶುಕ್ರವಾರ ತನಕ
ಹೋಗುವುದು ಬರುವುದು ಮನೆಯವರಿಗೀಗ ಅಭ್ಯಾಸ ಆಗಿಬಿಟ್ಟಿತು ಜಯಾ ಒಮ್ಮೆ ನಮ್ಮನ್ನೂ ಶೂಟಿಂಗ್ ನೋಡಲು ಕರ್ಕೊಂಡು ಹೋಗು ಅಂತ ಕೇಳಿದಳು.  ಈಗ ಬೇಡ ಮಮ್ಮಿ ಎಂದಾಗ ಹೋಗಲಿ .....!  ನಮ್ಮೂರಿನಲ್ಲಿ ಶೂಟಿಂಗ್ ಗೆ  ಬಂದಾರಲ್ಲಪ್ಪ.....!  ಅವ್ರನ್ನಾದ್ರೂ ಮನೀಗೆ ಒಮ್ಮೆ ಊಟಕ್ಕೆ ಕರಿ ಅಂದಳು ಅದಕ್ಕೆ ಅವನು ಆಯ್ತು ಅಂದ.  ಇವತ್ತು ರುದ್ರನ  ಜೊತೆ ಸಂಜೆ ಅವನ ಫ್ರೆಂಡ್ ಕೂಡ ಶೂಟಿಂಗ್ ನೋಡಲು ಹೋಗಿದ್ದನಂತೆ ಆರು ಗಂಟೆಗೇ ಶೂಟಿಂಗ್ ಮುಗಿಸಿ ಇನ್ನೋವಾ ಕಾರಿನಲ್ಲಿ ಇವರ್ದ್ದೊಂದು ಟೀಮ್ ನ ಕರ್ಕೊಂಡು  ಹೊರಗಡೆ ಹೋಗಿ ಊಟ ಮಾಡಿ ಬಂದೆವು ಎಂದು  ಹೇಳಿದ ರುದ್ರ.  ಅಪೂರ್ವ ರುದ್ರನ ಫ್ರೆಂಡ್  ಅವನೂ ರುದ್ರನ ಬಗ್ಗೆ ತನಗೇನು ಗೊತ್ತಿತ್ತೋ  ಅದನ್ನ ಅಲ್ಲಿದ್ದವರಿಗೆಲ್ಲಾ ಹೇಳಿದ್ದ.    ಶನಿವಾರ ಮತ್ತೆ ಅಜೇಯ್ ಫೋನ್ ಮಾಡಿದ ಮೇಲೆ ರುದ್ರ ಹೋಗಿ ಬಂದ.    ಇವತ್ತು ರಾತ್ರಿ 10.30 ಕ್ಕೆ   ಮನೆಗೆ ಬಂದ . ಇವತ್ತು ಎಲ್ಲರೂ ಒಟ್ಟಿಗೇ ಊಟ ಮಾಡಿದೆವು .
ನಂತರ ಜಯಾ  ಮತ್ತೊಮ್ಮೆ ರುದ್ರನಿಗೆ  ಹೇಳಿದಳು. ಅವರೆಲ್ಲಾ ಹೋಗುವುದರೊಳಗೆ ಒಂದು ಸಾರಿ ನಮ್ಮಮನೆಗೆ  ಕರಿ ಅವರೂ ಉತ್ತರ ಕರ್ನಾಟಕದ ಊಟ ಮಾಡ್ಲಿ  ಅಂದಳು  ಆಗ ರುದ್ರ ಹೇಳಿದ  ನಾಳೆ 13, ಭಾನುವಾರ ರಜೆ.  ಸೋಮವಾರ ಕೇಳಿ ನಿಮಗೆ ಹೇಳ್ತಿನಿ ಬಿಡಿ ಅಂದ.
       
             ರುದ್ರ ಸೋಮವಾರ ಸಂಜೆ ಹೋಗಿದ್ದ ಸಂದರ್ಭದಲ್ಲಿ ನಿರ್ಮಾಪಕರು  ಫುಲ್ ಬಿಜಿ, ಹಾಗೇ
ಬಂದ. 15 ರಂದೂ ಹಂಗೇ ಆಯ್ತು.  ಮತ್ತು ಆವತ್ತೇ
ಶೂಟಿಂಗ್ ಕಡೇ ದಿನ ಕೂಡ ಆಯ್ತು.  16 ರಂದು,    ಎಲ್ಲರೂ ರುದ್ರನಿಗೆ ಮತ್ತೆ ಬರೋಣ... ..!ಬನ್ನಿ ಸಾರ್  ಅಂತ ಹೇಳಿದಾಗ.  ರುದ್ರ ಅವರನ್ನೆಲ್ಲಾ ವೀವ್ ನೋಡಲು ಕಲ್ಕೇರಿಗೆ ಕರ್ಕೊಂಡು ಹೋಗಿ ಬಂದ ನಂತರ ಅವರೆಲ್ಲರಿಗೂ ಹೋಟೆಲ್ ನಲ್ಲಿ ಊಟ ಮಾಡಿಸಿದ ಮೇಲೆ ಮನೆಗೆ ಬಂದ.  ಬಂದವನೇ ಮಮ್ಮಿ ಇವತ್ತು ನಾವೆಲ್ಲಾ ಕ್ರಿಕೇಟ್ ಕೂಡ ಆಡಿದೆವು. ಅಂದ ಸರಿ ಬಿಡು ಎಲ್ಲರಿಗೂ ಧಾರವಾಡದ ಪರಿಚಯ ಮಾಡಿಸಿದೆ ಅಂದೆ ಹೂಂ ಎಂದು ಹೇಳಿ ಮಲಗಲು ಹೋದ.

             17/12/2020.

ಇವತ್ತು ರುದ್ರ ಬೆಳಿಗ್ಗೆ 8 ಗಂಟೆ ಗೇ ಹೋಗಿದ್ದ .   ಡೈರೆಕ್ಟರ್  ಕೂಡ ಇವರ ಜೊತೆ ಕ್ರಿಕೇಟ್ ಆಟ ಆಡಿ ಟೈಮ್ ಪಾಸ್ ಮಾಡಿ ಸಂಜೆ ಬೆಂಗಳೂರಿಗೆ ಪ್ರಯಾಣ
ಬೆಳೆಸಿದರಂತೆ.  ಅಂತೂ ಅವರಿಗೆ ಸೆಂಡ್ ಆಫ್
ಮಾಡಿಯೇ ಬಂದ್ಯನಪಾ ......? ಅಂದಳು ಜಯಾ   ಯೆಸ್ ......!.  ಇನ್ನು ನನ್ನ ಟೈಮ್ ಗಾಗಿ ಕಾಯಬೇಕು.  ಭರತ್ ಅಂದ್ರೆ ಡೈರೆಕ್ಟರ್ ಹೋಗುವಾಗ ನೀವು ನಮ್ಮ ಮನಸ್ಸಲ್ಲಿ  ಇರ್ತಿರಾ ಬಿಡಿ ಸಾರ್ ಎಂದು ಹೇಳಿ ಹೋದರಂತೆ.  ಎಷ್ಟು ದೊಡ್ಡ ಮಾತು.....!

ಅಂತೂ ಇಂತೂ ರುದ್ರನ ಆಸೆಗೆ ಗರಿ  ಮೂಡಿದ ಹಾಗೇ
ಆಯ್ತು..... ಇನ್ನು ಈ  ಗಂಡು ನವಿಲು ಗರಿಬಿಚ್ಚಿ ಕುಣಿಯವುದನ್ನು ನೋಡಬೇಕು ಅನ್ನುವುದೇ ತಾಯಿಯ ಮಹದಾಸೆ.
      ರುದ್ರ ಸಿನೆಮಾದಲ್ಲಿ ಆಕ್ಟ್ ಮಾಡುವ  ಆಸೆಯನ್ನ ತಂದೆಗೆ ತಿಳಿಸಿದಾಗ ಆಯ್ತು ಒಂದು ವರ್ಷ ಟೈಮ್ ಕೊಡ್ತೀನಿ  ನಾನು ತಿಂಗಳಿಗೆ 15000/- ರೂ. ಅಷ್ಟೇ ಕೊಡುತ್ತೇನೆ ಅಂದಾಗ ರುದ್ರ ಅದಕ್ಕೊಪ್ಪಿದ.  ಬೆಂಗಳೂರಿನಲ್ಲಿದ್ದ ತನ್ನ ಗೆಳೆಯನ ಜೊತೆ ಶೇರಿಂಗ್ ನಲ್ಲಿ ಇರತೊಡಗಿದ.  ಅವರಪ್ಪ ಎರಡೇ ತಿಂಗಳಿಗೆ ದುಡ್ಡು ಕೊಡುವುದು ನಿಲ್ಲಿಸಿದರು.  ಆಗ ರುದ್ರ  ಮತ್ತೆ ಎರಡು ತಿಂಗಳು ಕಾದ ಪ್ರಯೋಜನ ಆಗಲಿಲ್ಲ.   ಕಡೆಗೆ ಅವ ಫಸ್ಟ್ ಸೋರ್ಸ್ ಎಂಬ UK ಕಂಪನಿಯಲ್ಲಿ  CSA ಆಗಿ ನೌಕರಿ ಮಾಡುತ್ತಲೇ.  ತನ್ನ ತಾಯಿಯ ಫ್ರೆಂಡ್ ಗೆ ಗೊತ್ತಿರುವ ಡೈರೆಕ್ಟರ್ ಕಡೆಯಿಂದ ಸಿನಿಮಾ ಒಂದರಲ್ಲಿ ಒಂದು ಒಳ್ಳೇ ಅವಕಾಶ ಸಿಕ್ಕಿತು.  ಅದರಲ್ಲಿ ಸೆಕೆಂಡ್ ಹೀರೋ ಆಗಿದ್ದ.  ಹೀಗೆ ಒಂದರಿಂದ,  ಒಂದು ಒಟ್ಟು ಐದು ಸಿನಿಮಾದಲ್ಲಿ ಆಕ್ಟ್ ಮಾಡಿದ್ದಾನೆ.  ಅದೂ ಶಿಫ್ಟ್ ನೌಕರಿ ಮಾಡುತ್ತಾ.  
     ರುದ್ರ  ತನ್ನ ಹೆಸರಿಗೆ ತಕ್ಕಂತೆ ಇದ್ದವನು ಈಗ ತುಂಬಾ ಬದಲಾಗಿದ್ದಾನೆ.  ಚಿಕ್ಕವನಿದ್ದಾಗಿನಿಂದಲೂ ಅವನಿಗೆ ತುಂಬಾ ಜವಾಬ್ದಾರಿ.  ತಂದೆ ತಾಯಿ ಅಕ್ಕ...... ಅಂತಾ. ಹೀಗೆ...ಜೀವನದಲ್ಲಿ  ನಡೆದ ಘಟನೆಗಳಿಂದ ಆದ
ಅನುಭವ ಅವನನ್ನು ತುಂಬಾ ದೊಡ್ಡ ವ್ಯಕ್ತಿಯನ್ನಾಗಿ
ಮಾಡಿತ್ತು.   " ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಜೀವನ ಕಲಿಸಿತ್ತು ".
  
      ಹೇಗೋ ಜೀವನ ಸಾಗಿಸುತ್ತಿದ್ದ  ಒಮ್ಮೆಲೇ  ಅವನ ತಾಯಿಗೆ ತುಂಬಾ ಸೀರಿಯಸ್ ICU ನಲ್ಲಿ ರೆಡ್ ಝೋನ್ ನಲ್ಲಿ ಇರಿಸಿದ್ದು ಕೇಳಿ ರುದ್ರ ರಾತ್ರೋ ರಾತ್ರಿ  ಪ್ರಯಾಣ ಬೆಳೆಸಿದ.   31  ಮೇ 2023  ಅಡ್ಮಿಟ್ ಆಗಿ ಎರಡು ದಿನ ಏನೂ ಪ್ರಜ್ಞೆಯೇ ಇಲ್ಲ.   ಜೂನ್ 1ರಂದು ಆಕೆ ಮದುವೆಯಾದ ದಿನ ಗಂಡ ಬಂದು ಮಾತಾಡಿದ್ದು ಅರಿವಿಲ್ಲ.   ಮಗಳು ಬಂದಾಗಲೂ ಏನು ಮಾತಾಡಿದ್ದು ಗೊತ್ತಿಲ್ಲ.  ಅಳಿಯ ಬಂದಾಗ  ಸ್ವಲ್ಪ ತಿಳಿಯಿತು.  ಈಗ ಇಬ್ಬರು ಮೊಮ್ಮಕ್ಕಳು ಜಯಾಗೆ.  ಮಗಳು ,ಅಳಿಯ  ಜಯಾಗೆ ಸಮಾಧಾನ ಹೇಳಿ ನೀವು ಡಿಸ್ಚಾರ್ಜ್ ಆದ ಮೇಲೆ ಬರ್ತೀವಿ ಎಂದು ಹೇಳಿ ಹೋದರು .

      ರುದ್ರ ತಾಯಿ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಮೇಲೆ ಅವ ಹೇಳಿದ್ದು ಇಷ್ಟೇ.    "  ಮಮ್ಮಿ ನಾನು ಮುಂದೆ ಒಂದು ದಿನ ದೊಡ್ಡ ವ್ಯಕ್ತಿ ಆಗೇ ಆಗ್ತೀನಿ "  ಆದರೆ ಅದನ್ನ ನೋಡೋಕೆ ನೀವೇ ಇಲ್ಲ ಅಂದ್ರ....? " ನಾನು  ಯಾಕ ಇಷ್ಟು ಕಷ್ಟ ಪಡಬೇಕು ".....? ನೀವು  ಇಷ್ಟು ವರ್ಷ ಕಷ್ಟ ಪಟ್ಟೀರಿ ...!  ನಮಗೂ ಒಳ್ಳೇ ಕಾಲ ಬಂದೇ ಬರುತ್ತ.  ಕಾಯಬೇಕು ಅಷ್ಟೇ ಅಂತ ಧೈರ್ಯ ಹೇಳಿ   ಮತ್ತೆ ಬೆಂಗಳೂರಿಗೆ  ಹೋದ.
     ಜಯಾ  ಒಂದು ಶಾಲೆಗೆ ಟೀಚರ್ ಕೆಲಸಕ್ಕೆ ಹೊರಟಳು.   ಈಗಲೂ ಮಗನಿಗೆ ಅದೃಷ್ಟದ  ಬಾಗಿಲು ತೆರೆಯುತ್ತದೆ ಎಂದು ಕಾಯುತ್ತಾ ಕುಳಿತಿರುವಳು......


- ಪ್ರೊ. ಜಯಶ್ರೀ ಹಿರೇಮಠ,
ಆಯುರ್ವೇದ ಮತ್ತು ಜಾನಪದ ವೈದ್ಯರು
ಮತ್ತು ಸಾಹಿತಿ,
ಧಾರವಾಡ -580009.
ಮೋ.  9449819425.

ನಿನಗಾರು ಸಾಟಿ (ಕವಿತೆ) - ಶ್ರೀ ಮುತ್ತು. ಯ. ವಡ್ಡರ.

ಮಮತೆಯಿಂದ ಪ್ರೀತಿಸುವ ತಾಯಿ ನಿನಗಾರು ಸಾಟಿ
ಕಾಳಜಿಯಿಂದ ನೋಡಿಕೊಳ್ಳುವ ತಂದೆ ನಿನಗಾರು ಸಾಟಿ
ಹೆಗಲಿಗೆ ಹೆಗಲು ನೀಡುವ ಸಹೋದರ ನಿನಗಾರು ಸಾಟಿ
ಕಷ್ಟಕ್ಕೆ ಸ್ಪಂದಿಸುವ ಸಹೋದರಿ ನಿನಗಾರು ಸಾಟಿ

ಹಸಿದವರಿಗೆ ಅನ್ನ ನೀಡುವ ರೈತರೆ ನಿಮಗಾರು ಸಾಟಿ
ನೊಂದವರಿಗೆ ನೆರಳಾಗುವ ಆಶ್ರಯದಾತರೇ ನಿಮಗಾರು ಸಾಟಿ
ಅಕ್ಷರ ಕಲಿಸುವ ಗುರುಗಳೇ ನಿಮಗಾರು ಸಾಟಿ
ಪ್ರಾಣ ಹೊತ್ತೆ ಇಟ್ಟು ದೇಶ ಸೇವೆ ಮಾಡುವ ಯೋಧರೆ ನಿಮಗಾರು ಸಾಟಿ 

ಇಡೀ ವಿಶ್ವಕೆ ಬೆಳಕು ನೀಡುವ ಸೂರ್ಯನೇ ನಿನಗಾರು ಸಾಟಿ
ಪ್ರತಿಯೊಬ್ಬರ ಬದುಕಿಗೆ ಉಸಿರಾದ ಗಾಳಿಯೇ ನಿನಗಾರು ಸಾಟಿ
ಜೀವ ಉಳಿಸುವ ಅಮೃತ ಜಲವೇ ನಿನಗಾರು ಸಾಟಿ

ಸಾವಲ್ಲೂ ಜೊತೆನಿಲ್ಲುವ ಸ್ನೇಹಿತನೇ ನಿನಗಾರು ಸಾಟಿ
ಬದುಕಿನಲಿ ಕೈ ಹಿಡಿದು ಬಾಳುವ ಸತಿ ನಿನಗಾರು ಸಾಟಿ 
ಭಾರ ಹೊತ್ತು ಸಲಹುತಿರುವ ಭೂತಾಯಿ ನಿನಗಾರು ಸಾಟಿ
ಅಮೃತದ ಹಾಲು ನೀಡುವ ಗೋಮಾತೆ ನಿನಗಾರು ಸಾಟಿ. 

- ಶ್ರೀ ಮುತ್ತು. ಯ. ವಡ್ಡರ
(ಶಿಕ್ಷಕರು, ಹಿರೇಮಾಗಿ)
ಬಾಗಲಕೋಟ
Mob-9845568484

ಹಣತೆ ಹಬ್ಬ (ಕವಿತೆ) - ಸದ್ದಾಂ ತಗ್ಗಹಳ್ಳಿ.

ಎತ್ತ ನೋಡಿದತ್ತ ಚಿತ್ತ ಸೆಳೆದಿದೆ
        ಮನೋಲ್ಲಾಸ ಬೀರಲು
ಎತ್ತಣ ಸಾಗಿದರು ಕಣ್ತೆರೆಸುತಿದೆ
 ಹುರುಪಿನ ಬೆಳಕ ಚೆಲ್ಲಲು

ಕತ್ತಲೆಯಿಂದ ಬೆಳಕಿನತ್ತ ಸಾಗಿದೆ
ಹೊಸತನವ ಕಂಡುಕೊಳ್ಳಲು
ಅಜ್ಞಾನದಿಂದ ಸುಜ್ಞಾನದೆಡೆಗೆ ಸಾಗಿದೆ
       ಬದುಕಿನೂದ್ದಕ್ಕೂ ನೆಮ್ಮದಿ ಪಡೆಯಲು

ಹಚ್ಚಿದ ಹಣತೆಯಿಂದ ಕಾಂತಿ ಸೂಸಿದೆ
ಮನದಿಂದಾದರವ ಪಡೆಯಲು
ಕ್ರೂರತೆಯಿಂದ ಮಮತೆ ಸೃಷ್ಠಿಸಿದೆ
ಭಾವ ಸಮ್ಮಿಲನದಿಂದಿರಲು

ಅಂಧಕಾರ ತೊರೆದು ಜ್ಯೋತಿ ಚೆಲ್ಲಿದೆ
ಸತ್ಯ ಸನ್ಮಾರ್ಗವ ಸೃಷ್ಠಿಸಲು
ಮಿಂಚುತ್ತಾ ಹೊಳೆಯತ್ತಾ ಹರಡಿದೆ
ಸಂತಸದ ಹಾದಿ ಸುಲಭವಾಗಿಸಲು

ಅಷ್ಟ ದಿಕ್ಕುಗಳಲ್ಲೂ ಆವರಿಸಿದೆ
      ನವಾವತಾರವ ತೋರಿಸಲು
ಭಕುತಿಯಿಂದ ಪಾದಕ್ಕೆ ನಮಿಸಿದೆ
ಸುಖ ಶಾಂತಿ ಪಡೆಯಲು.

- ಸದ್ದಾಂ ತಗ್ಗಹಳ್ಳಿ

ಕಲ್ಪನಾ ಲೋಕ (ಕವಿತೆ) - ರೂಪ ಅಶೋಕ್.

ಮಿತಿಯಿಲ್ಲದೆ ವಿಹರಿಸಿದೆ ಕಲ್ಪನಾ ಲೋಕದಲ್ಲಿ
ಬಾಲ್ಯದ ಕೆಲ ಸಮಯ ಕೊಳ್ಳುವ ಆಸೆಯಲ್ಲಿ
ಭಾವನೆಗಳ ಮಹಪೂರದ ಚಿತ್ತ ಸಂತೆಯಲ್ಲಿ
ನನಗರಿಯದೆ ನಕ್ಕು ನಲಿದು ಅಂತರಂಗದಲ್ಲಿ

ನಿನ್ನದೇ ನೆನಪಲ್ಲಿ ಗುನುಗುನಿಸಿದೆ ಪದದಲ್ಲಿ 
ಕೈಗೆಟುಕುದ ಆಸೆಗೆ ಕಾಲ್ಪನಿಕ ರೂಪದಲ್ಲಿ
ಕೋಗಿಲೆಯಂತೆ ಹಾಡಿದೆ ನನ್ನೊಳ ಮನದಲ್ಲಿ
ಹಗಲಿರುಳು ನೀ ಬಯಸಿದ್ದು ಹೃದಯದಲ್ಲಿ

ಗಳಿಸಿದೆ ಪ್ರತಿದಿನ ಪ್ರೀತಿಯ ಹೆಸರಲ್ಲಿ
ಕುಣಿದಾಡಿದೆ ಮಾಯೆ ಮನಸ್ಸಿನ ಜಂತೆಯಲ್ಲಿ
ಎಂದೂ ಮರೆಯದಿರಲಿ ನನ್ನ ಚಿತ್ತದಲ್ಲಿ
ನಲಿದಿದೆ ಆಂತರ್ಯ  ಮುಸ್ಸಂಜೆಯಲ್ಲಿ

ಅನಿಸುತಿದೆ ಯಾಕೋ ರವಿಯಂತೆ ಮಿಂಚಲು
ಸೂರ್ಯನಂತೆ ಉರಿಯುವ ಆಸೆ ಮೊದಲು
ಜೀವನ ನೌಕೆಯಲ್ಲಿ ಆವರಿಸಿದ್ದಾಗಿದೆ ಕತ್ತಲು 
ಕಾತರಿಸಿದೆ ಮನ ಸಂಪೂರ್ಣತೆ ಹೊಂದಲು

- ರೂಪ ಅಶೋಕ್.

ಜಗಕೆಲ್ಲ ಒಬ್ಬ (ಕವಿತೆ) - ಭಾಗ್ಯಮ್ಮ ಎಸ್ ಅಡವಿ.

ಜಗಕೆಲ್ಲ ಒಬ್ಬ
ನಮ್ಮಲ್ಲಿ ನೀನೊಬ್ಬ
ನಿನ್ನ ಜನನ
ನಮಗೆಲ್ಲ ಜೀವನ

ಜಾತಿ ನೋಡಲಿಲ್ಲ
ಜ್ಯೋತಿಯ ಬೆಳಗಿದೆ
ಮೋತಿ ನೋಡಲಿಲ್ಲ
ಮಾನವನಾಗಿ ಸಿದೆ

ಜಾತಿಯ ಗುಡಿ ನೋಡಲಿಲ್ಲ
ಗೀತೆಯ ಪದ ಕೇಳಲಿಲ್ಲ
ಸಮಾನತೆಯ ನಗೆ ಬೀರಿ
ಜಗಕೊಬ್ಬ ನೀನಾದೆ.

ಬಾಸ್ಕರ ಅಂದರ
ಭ್ಯಾಸರಕಿ ಒಡ್ಯದ
ಕೆಂಪಾಗಿ ಕಂಡಾಗ
ತಂಪಾಗಿ ಕುಂತೇವಿ.

- ಭಾಗ್ಯಮ್ಮ ಎಸ್ ಅಡವಿ.

ಕನ್ನಡ ಬಳಸಿ ಕನ್ನಡ ಉಳಿಸಿ (ಲೇಖನ) - ಮಾನಸ. ಎಂ., ಸೊರಬ.

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.
  ಪ್ರಕೃತಿಯೇ ಸ್ವರ್ಗ ಎನ್ನಿಸುವಷ್ಟು ಹಸಿರಿನಿಂದ ಮೈದುಂಬಿಕೊಂಡು ಸೃಷ್ಟಿಯ ಅದ್ಭುತಕ್ಕೆ ಸಾಕ್ಷಿಯಾದ ಕಪ್ಪು ಮಣ್ಣಿನ ನಾಡು ನಮ್ಮ ಕರುನಾಡು. ಕರ್ನಾಟಕ ಎಂದರೆ ಒಂದು ಸಂಸ್ಕೃತಿ. ವಿಶ್ವವೇ ಬೆರಗಾಗಿ ನೋಡುತ್ತಿರುವ ಪರಂಪರೆಯ ಸೊಬಗು. ಕರುನಾಡು ಭಾವೈಕ್ಯತೆಯ ಬೀಡು.ಈ ನಾಡಿನಲ್ಲಿ ಹುಟ್ಟುವುದೇ ಪುಣ್ಯ. ಈ ನಾಡಿನ ಮಣ್ಣಿನಲ್ಲಿ ಕರುಣೆ ಇದೆ, ಪಾವಿತ್ರ್ಯತೆ ಇದೆ, ಶಕ್ತಿ ಇದೆ.
ಶತಮಾನದಿಂದ ಹಂಚಿ ಹೋಗಿದ್ದ ನಮ್ಮ ಕರ್ನಾಟಕ ಒಂದು ಗೂಡಿ ವಿಶಾಲ ಮೈಸೂರು ರಾಜ್ಯ ಉದಯವಾಗಿ 1973 ನವೆಂಬರ್ 1 ಮೈಸೂರ್ ರಾಜ್ಯ ಕರ್ನಾಟಕ ಎಂದು ನಾಮಕರಣವಾಯಿತು. ನಮ್ಮ ಕನ್ನಡಕ್ಕೆ ಸಾವಿರ ವರ್ಷಗಳ ಇತಿಹಾಸ ಇದೆ.
ಕನ್ನಡದ ಸಾಹಿತ್ಯ ಪರಂಪರೆ, ಇತಿಹಾಸ, ಸಂಸ್ಕೃತಿ,ಕಾವ್ಯ ಆಚಾರ ವಿಚಾರ ನಮ್ಮ ಕನ್ನಡದ ಹಿರಿಮೆ , ಸಾಧು,ಸಂತರು, ದಾಸರು, ಶಿವ ಶರಣರು, ಕವಿಗಳು ನಮ್ಮ ನಾಡಿನ ಹೆಮ್ಮೆ ಕನ್ನಡದ ಹೆಮ್ಮೆ. ಜಗತ್ತಿನಲ್ಲಿ ಎಲ್ಲಿಯೂ ಇರದ ಶಿಲ್ಪಕಲೆ ನಮ್ಮ ನಾಡಿನಲ್ಲಿದೆ.
ನಮ್ಮ ಕನ್ನಡ ಪರಿಪೂರ್ಣ ಭಾಷೆ. 
ನಮ್ಮ ಕನ್ನಡ ಕನ್ನಡಿಗರ ಮಾತೃ ಭಾಷೆ ಕರ್ನಾಟಕದ ರಾಜ್ಯ ಭಾಷೆ. 
ನಾವು ಮಾತನಾಡುದ್ದನ್ನ ಬರೆಯಬಹುದು , ಬರೆದದ್ದನ್ನು ಓದಬಹುದಾದ ಒಂದು ಸುಂದರ ವಿಶಿಷ್ಟ ಭಾಷೆ.ನಮ್ಮ ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ಕನ್ನಡಿಗರ ಭಾವನೆ ಯೋಚನೆ ಮಾಡುವ ರೀತಿ.
ನಮ್ಮ ಕನ್ನಡ ಭಾಷೆ ಜಗತ್ತಿನ ನಾಲ್ಕುವರೆ ಸಾವಿರ ಭಾಷೆಗಳಲ್ಲಿ ಅತ್ಯಂತ ಶ್ರೀಮಂತ ಭಾಷೆ. ಭಾರತದ ಪುರಾತನ ಭಾಷೆಗಳಲ್ಲಿ ಒಂದು ನಮ್ಮ ಕನ್ನಡ. ಕನ್ನಡ ಭಾಷೆ ಅಭಿಜಾತ ಭಾಷೆಯೆಂಬ ಸ್ಥಾನಮಾನವನ್ನು ಕೇಂದ್ರ ಸರ್ಕಾದಿಂದ ಪಡೆದಿದೆ. ನಮ್ಮ ಭಾರತದ ಶಾಸ್ತ್ರೀಯ ಸ್ಥಾನಮಾನ ಪಡೆದ 3ನೇ ಭಾಷೆ ನಮ್ಮ ಕನ್ನಡ. ವೈಜ್ಞಾನಿಕವಾಗಿ ಅತ್ಯಂತ ಸ್ಪಷ್ಟತೆ ಇರೋ ಭಾಷೆ. 
ಕನ್ನಡ ಲಿಪಿಯನ್ನು ಆಚಾರ್ಯ ವಿನೋಬಾ ಭಾವೆಯವರು "ಜಗತ್ತಿನ ಲಿಪಿಗಳ ರಾಣಿ"  ಎಂದು ಕರೆದಿದ್ದಾರೆ ಅಂತಹ ಸುಂದರ ಭಾಷೆಯ ನಾಡು ನಮ್ಮದು. 
     ಇಂತಹ ಪುರಾತನ ಇತಿಹಾಸ ಸಂಸ್ಕೃತಿ ಇರುವ ನಮ್ಮ ಕನ್ನಡ ನಮ್ಮಿಂದ ದೂರವಾಗಿ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜಾಗೃತವಾಗಬೇಕಿದೆ .ಇಂದಿನ ಯುವ ಜನಾಂಗ ಕನ್ನಡ ಬಗ್ಗೆ ಕೀಳರಿಮೆ ಇಂದ ನಿತ್ಯ ಜೀವನದಲ್ಲಿ ಕನ್ನಡವು ದೂರ ಉಳಿಯುವಂತಾಗಿದೆ. ಕನ್ನಡಿಗರಿಂದಲೇ ಕನ್ನಡಕ್ಕೆ ಭಯವಾಗುತ್ತಿದೆ.ಕನ್ನಡಿಗರೇ ಕನ್ನಡಕ್ಕೆ ಇಂದು ಶತ್ರುಗಳಾಗಿಬಿಡಬಹುದು.ಎರಡೂವರೆ ಸಾವಿರ ವರ್ಷದಿಂದ ಉಳಿದ ನಮ್ಮ ಕನ್ನಡ ಇಂದು ಮರುಗುತ್ತಿದೆ. ಕನ್ನಡಿಗರು ಮನಸ್ಸು ಮಾಡಿದರೆ ಮಾತ್ರ ಉಳಿಸಬಹುದಾದ ಸ್ಥಿತಿಗೆ ಬಂದಿದೆ. ಜ್ಞಾನ ಸಂಪಾದನೆಗೆ ಬೇರೆ ಭಾಷೆ ಬೇಕು ಅಷ್ಟೇ. ನಮ್ಮ ಕನ್ನಡ ಉಳಿಸುವುದು ನಮ್ಮ ಕರ್ತವ್ಯವಾಗಿದೆ.
ನಮ್ಮ ಭಾಷೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಇರಲಿ. ಎಂದೂ ನಾವು ನಮ್ಮ ಭಾಷೆಯನ್ನು ಬಿಟ್ಟು ಕೊಡದೆ ಗೌರವಿಸಿ ಉಳಿಸಬೇಕಿದೆ. ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸಬೇಕು.  ಮತ್ತೊಮ್ಮೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಗೌರವ ಇರಲಿ ಎಂದು ಹೇಳುವೆ.ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಉತ್ಸವವಾಗಿ ರಾರಾಜಿಸಬೇಕು. ಕನ್ನಡವನ್ನು ಬಳಸಬೇಕು. ಕನ್ನಡ ಭಾಷೆಯ ಬಗ್ಗೆ ಅಭಿಮಾನ ಗೌರವ ಇರಲಿ. ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ.
ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ ಕನ್ನಡ ಕಸ್ತೂರಿ ಕನ್ನಡ.
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು.
ಕನ್ನಡವೇ ಸತ್ಯ ಕನ್ನಡವೇ ನಿತ್ಯ.

- ಮಾನಸ. ಎಂ., ಸೊರಬ.

ನಾನು ಕನ್ನಡದ ಕಂದ (ಕವಿತೆ) - ಹಿಮಂತರಾಜ.

ನಾನು ಕನ್ನಡದ  ಕಂದ
ಏನು ಮುನ್ನುಡಿ ಚಂದ
ಹಂಪಿ ನಾಡಿನ ಕುವರ
ಚಂದನ ವನ ಸುಂದರ||ಪ||

ಹರಿಹರನ ಪುಣ್ಯಭೂಮಿ
ರಾಘವಾಂಕ ಧನ್ಯಭೂಮಿ
ತುಂಗಭದ್ರೆಯ ಮನುಜ
ಕಾಣು ಕಾಳುಗಳ ಕಣಜ||ಚ||

ಮುತ್ತುರತ್ನ ಅರಳಿದ್ದವು
ಬಂಗಾರಬೆಳ್ಳಿ ಚೆಲ್ಲಿದ್ದವು
ಅಕ್ಕಬುಕ್ಕ ಸಾಮ್ರಾಜ್ಯವು
ಬೆಟ್ಟಗುಡ್ಡ ಅವಿಭಾಜ್ಯವು||ಚ||

ಜ್ಞಾನಪೀಠದ ಬಹುಮಾನ
ಚಾಮುಂಡಿಯ ಅಭಿಮಾನ
ಕೋಲಾರದ ಚಿನ್ನದಗಣಿ
ಕನ್ನಡನಾಡಿನಲಿ ಕಣ್ಮಣಿ||ಚ||

      - ಹಿಮಂತರಾಜ.

ಸಡಗರಕೆ ಕುಂದಿಲ್ಲ (ಚಿತ್ರ ಕವನ) - ಕಮಲಾಭಿತನಯೆ.

ಕರಕುಶಲ ಕಲೆಯಿಂದ, 
ಮಜಬೂತು ಕಟ್ಟಿಗೆಯ ಕಂಬ ತೊಲೆಗಳಿಂದ ಅಲಂಕೃತ 
ಮನೆಯ ಮಕ್ಕಳು, ಸೊಸೆಯರು/

*ದೀಪಾವಳಿ* ಎಂದು ಸಂಭ್ರಮದಿ ಸೇರಿಹರು ಅಕ್ಕರೆಯಲಿ ಸುಳಿದಾಡಿ ನಗುವ ತುಂಬುವರು/

ಮನೆ ತುಂಬ ಇರುವ ಹಿರಿಯರು,ಮಕ್ಕಳಿಗೆ ಬಗೆ ಬಗೆಯ ಅಡುಗೆ ಮಾಡಿಹರು/

ಸಹಕಾರ -ಸೌಹಾದ೯ತೆಯಲಿ ಕೆಲಸ ಪೂರೈಸಿ,  ತುಸು ಬಿಡುವ ಕಂಡಿಹರು/

ಊಟಕ್ಕೆ ಬರಲಿರುವ ಹಿರಿಯರು,ಮಕ್ಕಳಿಗೆ ಕಾದಿಹರು/

ಕೆಲಸದ ಆಯಾಸ ಇನಿತೂ ತೋರದು, ಮೊಬೈಲ್ ಫೋಟೋದ ಹುಮ್ಮಸ್ಸು ಉಕ್ಕಿಹುದು/

ಚಂದಾಗಿ ಇಣಕಲ್ ಸೀರೆ -ತಕ್ಕ ಆಭರಣ ತೊಟ್ಟು,
ಒತ್ತಾಗಿ ಕೂತಿಹರು,ಸಂತೃಪ್ತಿಯ ನಗೆ ಬೆಳದಿಂಗಳು ಚೆಲ್ಲಿಹುದು/

ಹೆಂಗಳೆಯರೇ ಹಾಗೆ, ಹನಿ ನೀರಿಗೆ ಅರಳಿ ನಗುವ ಪ್ರಕೃತಿಯಂತೆ/

ಫೋಟೋ ಆಯಿತು;
 ಮನೆ ಮಂದಿಗೆಲ್ಲ ಉಣಲಿಕ್ಕಿ, ಉಂಡು ಮಲಗಿ ಎದ್ದರೆ ನಿಶ್ಚಿಂತೆ/

ಮನೆ ಹಿರಿಯರ ಆದರ, ಯಜಮಾನರ ಪ್ರೀತಿ ಇರಲು, ಇರುವ ಮನೆಯೇ ಅರಮನೆಯಂತೆ,
ಇರದು ಅಲ್ಲಿ ಯಾವುದೇ ಚಿಂತೆ/

 - ಕಮಲಾಭಿತನಯೆ
ಶ್ರೀಮತಿ ರೇಖಾ ನಾಡಿಗೇರ ಹುಬ್ಬಳ್ಳಿ

ಡಾ// ಸಿ.ಆರ್. ಚಂದ್ರಶೇಖರ್ ಅವರ'ಆತಂಕ, ಖಿನ್ನತೆ ಮತ್ತು ಗೀಳು ಮನೋರೋಗ' (ಪುಸ್ತಕ ಪರಿಚಯ) - ಮಾಣಿಕ್ ಪಾಂಚಾಳ ಕಲಬುರಗಿ.

ನಾನು ಈ ಥರ ಪುಸ್ತಕ ಮೊದಲಬಾರಿ ಓದುಲತಿನಿ ಈ ಬುಕ್ ಓದಲು ಕಾರಣ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಇದರೆ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕ ಓದುತಿದ್ದೇನೆ. ಮೊದಲು ನಾನು ಈ ಪುಸ್ತಕ ನೋಡಿದಾಗ ಇದರಲ್ಲಿ ಖಿನ್ನತೆಗೆ ಒಳಗಾದವರ ಲಕ್ಷಣಗಳು, ಕಾರಣಗಳು ಮತ್ತು ಅವರನ್ನು ಗುರುತಿಸುವುದರ ಬಗ್ಗೆ ಇರಬೌದು ಅಂತ ತಿಳಿದಿದ್ದೆ . ಹಾಗೆ ಈ ಪುಸ್ತಕ ಸುಮ್ನೆ ಓದುತ್ತಾ ಹೋದೆ ಮೊದಲು ನೋಡಿದ್ದು ಮಾನಸಿಕ ರೋಗದ 12 ಸೂತ್ರಗಳು ಓದಿದೆ ಆವಾಗ ಇವು ನನಗೆ ಮ್ಯಚ ಆಗುತ್ತೆ ಅಂತ ಇವುಗಳನ್ನ ನನ್ನ ಜೀವನದಲ್ಲಿ ನಾಬಿ ಪಾಲಿಸಬೇಕು ಅಂತ ಅನ್ಕೊಂಡೆ ಹೀಗೆ ಓದುತ್ತಾ ಹೋದಂತೆ ಕೊನೆಯಲ್ಲಿ ಆತಂಕ ಮತ್ತು ಭಯದ ಬಗ್ಗೆ ಓದುವಾಗ ನನಗೆ ಹಾಗೇನೂ ಅನಿಸಲಿಲ್ಲ ಹಾಗೆ ಓದುತ್ತಾ ಹೋದಂತೆ ಅಲ್ಲಿ ಆತಂಕ ಮತ್ತು ಭಯ ಜ್ಞಾಪಕ ಶಕ್ತಿಯ ಮೇಲೆ ಹೇಗೆ ಪ್ರಭಾವ ಬೀರಿವೆ ಮತ್ತು ಅದನ್ನು ಹೆಚ್ಚಿಸುವುದು ಹೇಗೆ ಎಂದು ಓದ ಬೇಕಾದರೆ ಮೊನ್ನೆ ನನ್ ತಮ್ಮ ನನಗೆ ಇದರ ಬಗ್ಗೆ ಕೇಳಿದ್ದ ಹಾಗೆ ನೆನಪಾಗಿ ನಾನು ಬುಕ್ ತೊಗೊಂಡು ಅವನ್ ಬಲ್ಲಿ ಹೋದ ಅವನಿಗೆ ಈ ಪುಸ್ತಕದಲ್ಲಿ ಕೊಟ್ಟಿರುವ ಜ್ಞಾಪಕ ಶಕ್ತಿ ಹೇಗೆ ಹೆಚ್ಚಿಸಬೇಕು ಎಂದು ವಿವರವಾಗಿ ತಿಳಿಸಿದೆ ಆವಾಗ ಅವನು ಒಂದು ಪ್ರಶ್ನೆ ಕೇಳಿದ ಆಗ ನಾನು ಹಿಂದೆ ಓದಿದ ಎಲ್ಲಾ ಪುಟಗಳು ನೆನಪಾದವು ಆಗ ನನಗೆ ಈ ಪುಸ್ತಕದಲ್ಲಿ ಏನಿದೆ ಎಂದು ತಿಳಿತು. ಆಗ ನಾನು ಅವನಿಗೆ ಹೇಳಿದೆ ಆತಂಕ ಮತ್ತು ಖಿನ್ನತೆ ಅಂದ್ರೆ ಏನು ಅದರಾಗ 6-7 ವಿಧಗಳಿವೆ ಎಂದು ನನಗೂ ಗೊತ್ತಿರಲಿಲ್ಲ ಆಗ ಅವನು ಕೇಳಿದ ನಂತರ ನಾನು ಓದಿದು ನೆನಪಾಯಿತು. ನಾನು ಅವುಗಳ ಬಗ್ಗೆ ಅವನಿಗೆ ಹೇಳಿದೆ ಖಿನ್ನತೆ , ಆತಂಕ ಮತ್ತು ಭಯ ಇವುಗಳ ಲಕ್ಷಣಗಳು , ಕಾರಣಗಳು ಮತ್ತು ಪರಿಹಾರ ಬಗ್ಗೆ ತಿಳಿಸಿ ಹೇಳಿದೆ. ಅವನಿಗೆ ಹೇಳಿದ ನಂತರ ನನಗೂ ಸ್ವಲ್ಪ ಕುತೂಹಲದಿಂದ ಮುಂದೆ ಓದಿದೆ ಅದರಲ್ಲಿ ಕೊನೆಯದಾಗಿ ದೇವರು ಮೈಮೇಲೆ ಬರೋದು, ದೆವ್ವ ಬರೋದು, ಮಾಟ, ಮಂತ್ರ ಮದ್ದು ಇದು ಯಾವುದೂ ಇರುವುದಿಲ್ಲ ಇದು ಒಂದು ಮಾನಸಿಕ ಒತ್ತಡದಿಂದ ಹೀಗಾಗುತ್ತದೆ ಅಂತ ತಿಳಿಯಿತು. ಇದಕ್ಕೂ ಮೊದಲು ನಾನು ಕೂಡ ದೆವ್ವ ಇರುತ್ತವೆ ಅಂತಾ ನಂಬಿದ್ದೆ. ಇಗ ಈ ಪುಸ್ತಕ ಓದಿದರಿಂದ ಇದೆಲ್ಲ ಸುಳ್ಳು ಇದು ಒಂದು ಮಾನಸಿಕ ರೋಗವಾಗಿದೆ. ನಾನು ಈ ಪುಸ್ತಕ ಓದಿ ಇಷ್ಟು ತಿಳಿದುಕೊಂಡಿದ್ದೇನೆ. ನನಗೆ ಈ ಮಾನಸಿಕ ಖಾಯಿಲೆಯ ಬಗ್ಗೆ ಇನ್ನಷ್ಟು ಓದುವ ಕುತೂಹಲ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಯುವಜನರು ಖಿನ್ನತೆಯಿಂದ ಬಳಲುತ್ತಿರುವುದರಿಂದ ಅದಕ್ಕೆ ಈ ಪುಸ್ತಕ ಎಲ್ಲಾ ಯುವಜನರು ಓದಲೇಬೇಕಿದೆ. ಧನ್ಯವಾದಗಳು ಸರ್.......

- ಮಾಣಿಕ್ ಪಾಂಚಾಳ ಕಲಬುರಗಿ.

ನಾವು ಒಬ್ಬೊಬ್ಬರು ಹಾರಬಲ್ಲವು ಪರಿಪೂರ್ಣತೆ ಸಾಧಿಸಬಲ್ಲವು (ಕೃತಿ ಪರಿಚಯ) - ಗೊರೂರು ಅನಂತರಾಜು, ಹಾಸನ.

ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿದೆ. ಕವಿ ತಾನು ಅನುಭವಿಸಿ ಬರೆದಿದನ್ನು ಓದುಗ ಕಂಡು ಕೊಳ್ಳುತ್ತಾನೆ. ಆತ ವಿಮರ್ಶಕನಾಗಿ ಕವಿಯ ಅಂತರಾಳ ಹೊಕ್ಕಿ ಕೃತಿಯ ವಸ್ತು ವಿಷಯ ಜೊತೆಗೆ ಕವಿಯ ಮನಸ್ಥಿತಿ ಪರಿಸ್ಥಿತಿ ಅರಿಯುತ್ತಾನೆ. ಸಾಹಿತಿಗಳ ಜೀವನ ಕ್ರಮ ಅವರು ಅನುಭವಿಸಿದ ಕಷ್ಟ ಕಾರ್ಪಣ್ಯಗಳ ನಡುವೆ ಅಳವಡಿಸಿಕೊಂಡ ಮೌಲ್ಯಗಳು ಅವರ ಜೀವನದಲ್ಲಿ ಘಟಿಸಿದ ಘಟನೆಗಳನ್ನು ಸಾಹಿತಿ ಹೇಗೆ ಓದುಗರಿಗೆ ನಿರೂಪಿಸಿದ್ದಾನೆ, ಅದು ಓದುಗನಿಗೆ ಹೇಗೆ ಪ್ರೇರಣೆಯಾಗಿದೆ. ಸಾಹಿತಿಗಳ ಕೃತಿ ಓದುವಿಕೆಯಲ್ಲಿ ನಮ್ಮ ಬದುಕು ಹೇಗೆ ಉತ್ತಮವಾಗಿಸಿಕೊಳ್ಳಲು ಮಾದರಿಯಾಗುತ್ತದೆ ಎಂಬುದನ್ನು ಹೆಚ್.ಕೆ.ಮಹೇಶ ಭಾರದ್ವಾಜ್‌ ತಮ್ಮ ಕವಿ ಕೃತಿಯಲ್ಲಿ ಜೀವನ ಪ್ರೀತಿಯಲ್ಲಿ ನಿರೂಪಿಸಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಸಾವಯವ ಕೃಷಿ ಸಾಧನೆಗೆ ಪ್ರಶಸ್ತಿ ಪಡೆದವರು. ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ರಾಜ್ಯ ಮಟ್ಟದಲ್ಲಿ ಒ೦ದು ಬೃಹತ್‌ ಕಾರ್ಯಕ್ರಮ ಆಯೋಜಿಸಿ ಕೃಷಿಕರು, ಸೈನಿಕರು, ಶಿಕ್ಷಕರು ಮೊದಲಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಹಾಸನ ಜಿಲ್ಲೆಯಿಂದ ಹೆಸರು ಕೇಳಿದ್ದರು. ಮಹೇಶ್‌ ಹೆಸರನ್ನು ಕೃಷಿ ಕ್ಷೇತ್ರಕ್ಕೆ ಕಳಿಸಿದ್ದೆ. ಕಾರ್ಯಕ್ರಮ ನಡೆಯಬೇಕಾದಿದ್ದು ಹೂವಿನಹಡಗಲಿಯಲ್ಲಿ. ಅನಂತರಾಜ್ ಸಾರ್, ಅಷ್ಟು ದೂರದ ಪ್ರಯಾಣ ಕೃಷಿ ಕೆಲಸ ಬಿಟ್ಟು ಹೋಗುವುದು ಕಷ್ಟವಾಗುತ್ತದೆ ಎಂದಿದ್ದರು. ಕೃಷಿ ಕಾಯಕದ ಬಗ್ಗೆ ಎಷ್ಟೊಂದು ನಿಷ್ಟೆ ಭೇಷ್..! ಈ ಕಾರಣಕ್ಕೆ ಏನೋ ರಾಜ್ಯಾಧ್ಯಕ್ಷರು ದಕ್ಷಿಣ ಕರ್ನಾಟಕದ ಅರ್ಧ ಭಾಗವನ್ನು ನನಗೆ ವಹಿಸಿ ಅದು ಹಾಸನದಲ್ಲಿ ನಡೆದಿತ್ತು. ಮಹೇಶ್ ಕೃಷಿ ಕಾಯಕದಲ್ಲಿ ನಿಷ್ಟಾವಂತರು. ನಾನು ಎಷ್ಟೋ ಬಾರಿ ಯೋಚಿಸಿದ್ದೇನೆ. ನಮಗೂ ಜಮೀನಿತ್ತಲ್ಲ. ನಾನೇಕೆ ಪ್ರಗತಿಪರ ರೈತನಾಗಲಿಲ್ಲ..! ಮೊದಲಿಗೆ ನಮ್ಮ ತಂದೆಯೇ ಇದಕ್ಕೆ ಅವಕಾಶ ಕೊಡಲಿಲ್ಲ. ನಾನು ಓದಲಿಲ್ಲ ಬರೆಯಲಿಲ್ಲ. ವ್ಯವಸಾಯ ನೀ ಸಾಯ ಎಂಬ ಮಾತಿನಂತೆ ಜೀವನ ಪೂರ್ತಿ ದುಡಿಮೆಯಲ್ಲೇ ಜೀವನ ತೇಯ್ದೆ. ನನ್ನ ಮಕ್ಕಳು ನನ್ನಂತೆ ಕಷ್ಟ ಪಡಬಾರದು. ಅವರು ಓದಿ ನೌಕರಿ ಹಿಡಿಯಲಿ ಎಂಬ ಅಪ್ಪ ಬಯಸಿದ್ದರಲ್ಲಾ..! ನಾನಾದರೂ ಪ್ರಾಯದಲ್ಲಿ ಬರೇ ನಾಟಕ ಕಥೆ ಕಾವ್ಯ ಎಂದು ಅತ್ತಲೇ ಚಿತ್ತ ಹರಿಸಿ ಇತ್ತ ನಮ್ಮಪ್ಪ ಸಂಪಾದಿಸಿದ್ದ ಜಮೀನು ಕಳೆದುಕೊಂಡ ದಡ್ಡ ಶಿಖಾಮಣಿ. ಯೌವ್ವನದಲ್ಲಿ ಗೇಯ್ಮೆ ಮಾಡದೇ ರಾಗಿ ಮುದ್ದೆ ಉಣ್ಣದೇ ಬೆಳೆದ ಸೋಮಾರಿ ಸುಖ ಪುರುಷ. ಈಗ ಸಕ್ಕರೆ ಕಾಯಿಲೆ ಮನುಷ್ಯ. ಎಂತಹ ಶ್ರಮಜೀವಿ ನಮ್ಮಪ್ಪ.,?ಅದಕ್ಕೆ ಅಪ್ಪನಿಗೆ ಆ ದೇವರು ಒಳ್ಳೆಯ ಆರೋಗ್ಯ  ಕರುಣಿಸಿದ್ದ.  ಶ್ರಮ ಜೀವಿಗಳಿಗೆ ಯಾವತ್ತೂ ಆರೋಗ್ಯ ಭಾಗ್ಯ ಇರುವಲ್ಲಿ ಈ ಭಾಗ್ಯಲಕ್ಷ್ಮಿ ಆಮಿಷವೇಕೆ? ದೊಡ್ಡಪ್ಪನ  ಪ್ರಶ್ನೆ.  ಈ ಸರ್ಕಾರಗಳು ಇವೆಯೆಲ್ಲಾ ಆವು ನಮ್ಮನ್ನು ಹೆಂಡದ ಆಸೆಗೆ ನೂಕಿ ಆಯಸ್ಸು ಕಿತ್ತುಕೊಳ್ಳುತ್ತವೆ  ಕಣ್ಲಾ ಮಗಾ..ಎನ್ನುತ್ತಿದ್ದ ದೊಡ್ಡಪ್ಪ ಕುಡಿತದ ಚಟಕ್ಕೆ ಅಪ್ಪನಿಗಿಂತ ಮೊದಲೇ ಕೈಲಾಸ ವಾಸಿಯಾಗಿದ್ದರು.  ಬಿ.ಎ.ಪದವೀದರರಾಗಿ ಹಳ್ಳಿಯಲ್ಲೇ  ಉಳಿದು ಕೃಷಿಯನ್ನೇ ತಮ್ಮಜೀವನ ವೃತ್ತಿಯನ್ನಾಗಿಸಿಕೊಂಡು ಶಾಲಾ ಮಕ್ಕಳಿಗೆ ಸಂಜೆ ಉಚಿತ ಪಾಠ ಮಾಡುತ್ತಿರುವ ಮೇಷ್ಪ್ರು. ಮಹೇಶ್‌ ಸಾವಯವ ಕೃಷಿ ಬಗ್ಗೆ ಆಕಾಶವಾಣಿಗೆ ಸಂದರ್ಶನ ನೀಡಿದ್ದಾರೆ. ಸ್ವತ: ಸಾವಯವ ಗೊಬ್ಬರ ತಾವೇ ತಯಾರಿಸಿಕೊಂಡು  ಉತ್ತಮ ಫಸಲು ತೆಗೆದಿದ್ದಾರೆ ಮಹೇಶ್‌ ಹಂದ್ರಾಳು ಅವರ ತೋಟದಲ್ಲಿ ಒಂದು ಸುಂದರ ಕವಿಗೋಷ್ಠಿ ಮಾಡೋಣವೇ ಎಂದು ಹಿಂದೆ ಕೇಳಿದ್ದೆ. ಅದಕ್ಕಿನ್ನು ಉತ್ತರ ಬಂದಿಲ್ಲ. ಇರಲಿ ಬದುಕೆಂದರೆ ನಾವಂದುಕೊಂಡಂತಲ್ಲ. ಅದು ಬಂದಂತೆ ಬರಮಾಡಿಕೊಳ್ಳಬೇಕು. ತಮಗೆ ಬೇಕಾದಂತೆ ಅದನ್ನು ದುಡಿಸಿಕೊಳ್ಳಬೇಕು. ಎಗ್ಗಿಲ್ಲದ ಜೀವನ ನಿರ್ವಹಣೆಯಿಂದಾಗಿ ಬದುಕನ್ನೇ ಶಾಪವಾಗಿಸಿಕೊಂಡ  ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವ ಹಾದಿಯನ್ನು ಯಾರಾದರೂ ತೋರುವವರಿದ್ದರೆ ಸದ್ಯಕ್ಕೆ ಅವರೇ ನಮ್ಮ ಪಾಲಿನ ಕಂದೀಲು.
  ನಮ್ಮ ಬದುಕಿನ ಕತ್ತಲೆಯನ್ನು ನೀಗಿಸಿ ಬೆಳಕಿನಡೆ ಹೆಜ್ಜೆ ಹಾಕಲು ದಾರಿ ದೀಪಗಳಾಗಿ ಕಾಣುತ್ತಾರೆ.  ಬದುಕೆಂಬ ಬಂಡಿಗೆ ಯಾವುದೇ ನಿಯಮ ಸಿಗ್ನಲ್ಲುಗಳನ್ನು ಹಾಕಿಕೊಳ್ಳದೆ ನಾವು ನಮ್ಮ ಕೈಯಾರೆ ಸೃಷ್ಟಿಸಿಕೊಂಡ ಹೊಂಡಗಳಿಗೆ ಬಿದ್ದು ಹಸನಾದ ಬದುಕನ್ನು ಹಾಳು ಮಾಡಿಕೊಂಡಿದ್ದೆವೆ. 

ಏನು ಪ್ರಪಂಚವಿದು ಏನು ಧಾಳಾಧಾಳಿ
ಏನದ್ಭುತಾಪಾರ ಶಕ್ತಿ ನಿರ್ಘಾತ
ಮಾನವನ ಗುರಿಯೇನು ಬೆಲೆಯೇನು ಮುಗಿವೇನು
ಏನರ್ಥವಿದಕ್ಕಲ್ಲ ಮಂಕುತಿಮ್ಮ -.ಡಿ.ವಿ.ಜಿ

ನಮ್ಮ ಜೀವನಾನುಭವಗಳು ಮತ್ತು ಸಾಹಿತಿಗಳ ಬದುಕಿನ ಅನುಭವಾಮೃತದಿಂದ ಪೂರಿತವಾದ ಸಾಹಿತ್ಯದ ವ್ಯಾಸಂಗಗಳು ಬೆಳಕನ್ನು ಕಂಡು ಕೊಳ್ಳಲು ನೆರವಾಗಬಹುದು. ನಮ್ಮ ಕನ್ನಡ ಬರಹಗಾರರು ತಮ್ಮ ಬರಹದಂತೆಯೇ ಬದುಕಿನಲ್ಲೂ ಉತ್ತಮ ಮೌಲ್ಯಗಳೊಂದಿಗೆ ಬಾಳಿದವರು.  ಮಹೇಶ್ ೨೧ನೇ ಶತಮಾನದ ನೂರು ಪ್ರಮುಖ ಸಾಹಿತಿಗಳ ಬದುಕಿನ ಬಗ್ಗೆ ಕಣ್ಣಾಯಿಸಿ ಹೇಳುತ್ತಾರೆ

ಯಾವ ಪ್ರಮುಖ ಕನ್ನಡ ಸಾಹಿತಿಯೂ ಇದುವರೆಗೆ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಯಾವುದೇ ಕವಿ ಬರಹಗಾರರೂ ತಮ್ಮ ಸಂಗಾತಿಗೆ ವಿಚ್ಛೇದನ ನೀಡಿಲ್ಲ. ತಮ್ಮ ತಂದೆ ತಾಯಂದಿರನ್ನು ಅವರ‍್ಯಾರೂ ವೃದ್ಧಾಶ್ರಮಕ್ಕೆ ಸೇರಿಸಿಲ್ಲ. ಯಾವ ಪ್ರಮುಖ ಸಾಹಿತಿಗಳೂ ಅಪರಾಧಕ್ಕಾಗಿ ಜೈಲಿನ ದರ್ಶನ ಮಾಡಿಲ್ಲ..

ನಮ್ಮ ಕನ್ನಡ ಸಾಹಿತಿಗಳಿಗೆ ಬದುಕಿನ ಬಗೆಗಿದ್ದ ದೃಷ್ಟಿಕೋನವೇನು? ಹಾಗೆಯೇ ಅವರು ತಮ್ಮ ನಡೆಯಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯವೇನು?  ಪ್ರಶ್ನೆ ಎತ್ತಿಕೊಂಡು ಮೌಲಿಕ ಬದುಕಿಗೆ ಮಾದರಿಯಾದ ಸಾಹಿತಿಗಳನ್ನು ಉಲ್ಲೇಖಿಸುತ್ತಾ ಅವರ ಬದುಕನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. 
ಡಿ.ವಿ.ಜಿ.ಕನ್ನಡ ಸಾರಸ್ವತ ಲೋಕದ ಧೀಮಂತರು. ಎಸ್.ಎಸ್.ಎಲ್.ಸಿ. ಫೇಲಾಗಿ ಕೆಲವು ಕಾಲ ಜಟಕಾಗಳಿಗೆ ಬಣ್ಣ ಬಳಿಯುವ ಕೆಲಸ ಮಾಡಿ ನಂತರ ಪತ್ರಕರ್ತರಾಗಿ ಜೀವನ ನಿರ್ವಹಿಸಿ ಬಹು ಭಾಷಾ ಪರಿಣಿತರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿ ಡಿ.ವಿ.ಜಿ.ಇಂಡಿಯನ್‌ ರೆವ್ಯೂ ಆಫ್‌ ರೆವ್ಯೂಸ್ ಮಾಸಪತ್ರಿಕೆ ನಡೆಸುತ್ತಿದ್ದ ವೇಳೆ ನೆಂಟರೊಬ್ಬರ ಮನೆಗೆ ಯಾವುದೋ ಸಮಾರಂಭಕ್ಕೆ ಹೋಗಬೇಕಿತ್ತು ಆದರೆ ಹೋಗಲಿಲ್ಲ. ಕಾರಣ ಅವರ ಪತ್ನಿ ಬಳಿ ಇದ್ದ ಒಂದೇ ಸೀರೆ ಹರಿದಿತ್ತಂತೆ.! ಆ ಸೀರೆಯಲ್ಲಿ ಹೋದರೆ ಡಿವಿಜಿಯವರ ಮರ್ಯಾದೆಗೆ ಕುಂದು ಬರುತ್ತದೆಂದು ಅವರ ಪತ್ನಿ ಯಾವ ಸಮಾರಂಭಗಳಿಗೂ ಹೋಗುತ್ತಿರಲಿಲ್ಲ. ಇಂತಹ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲೂ ಸರ್ಕಾರವು ಪತ್ರಕರ್ತರಿಗೆ ನೀಡುತ್ತಿದ್ದ ಸಂಭಾವನೆ ನಿರಾಕರಿಸುತ್ತಾರೆ. ತಮಗೆ ಬಂದ ಕೇ೦ದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಮೊತ್ತವಲ್ಲದೆ ನಾಗರೀಕರು ಸನ್ಮಾನ ಮಾಡಿ ಅರ್ಪಿಸಿದ ಒಂದು ಲಕ್ಷ ನಿಧಿಯನ್ನು ತಾವು ಕಟ್ಟಿ ಬೆಳೆಸಿದ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದಾನ ಮಾಡಿದ  ಡಿವಿಜಿ ಸರಳತೆ ಸ್ವಾಭಿಮಾನ ಸಜ್ಜನಿಕೆಗಳ ಸಾಕಾರ ಮೂರ್ತಿ.

ಜೀವನವೆಂದರೆ ಒ೦ದು ಹೂವು ಇದ್ದಂತೆ
ಪ್ರೇಮವೆನ್ನುವುದು ಆ ಹೂವಿನಲ್ಲಿರುವ ಮಕರಂದ ಇದ್ದಂತೆ - ವಿಕ್ಟರ್ ಹ್ಯೂಗೋ

ಸಾಹಿತ್ಯಕ್ಕಿಂತ ಬದುಕು ದೊಡ್ಡದು ಎಂಬ ಅಭಿಪ್ರಾಯದ ತೇಜಸ್ವಿ ಹಾಗೆಯೇ ಬದುಕಿದರು. ತೇಜಸ್ವಿಯವರು ಸಾಂಸ್ಕೃತಿಕವಾಗಿ ಅಷ್ಟು ಎತ್ತರಕ್ಕೆ ಬೆಳೆದರೂ ತೋರಿಕೆಯ ಅರೆ ಬರೆ ವಿದ್ಯಾವಂತರಿಗಿಂತ ಸಾಧಾರಣ ವರ್ಗದ ಜನರೊಂದಿಗೇ ಹೆಚ್ಚು ಸಲೀಸಾಗಿ ಬೆರೆತಿದ್ದರು. ಕನ್ನಡ ಸಾಹಿತ್ಯದಲ್ಲಿ ಎಂ.ಎ.ಪಡೆದ ಅವರು ಅಧ್ಯಾಪಕರಾಗದೆ ಮೂಡಿಗೆರೆ ಸಮೀಪದಲ್ಲಿ ತೋಟ ಖರೀದಿಸಿ ಕೃಷಿಕರಾಗಿ ಹಂಗಿಲ್ಲದ ಬದುಕು ಕಟ್ಟಿಕೊಂಡರು. ಮೇರು ಸಾಹಿತಿ ಕುವೆಂಪುರವರ ಪುತ್ರರಾದರೂ ತಮ್ಮಜೀವನದೃಷ್ಟಿ ಹಾಗೂ ಸಾಹಿತ್ಯದಲ್ಲಿ ಎಲ್ಲೂ ತಂದೆಯ ನೆರಳಾಗದೆ ತಂದೆಯ ಪ್ರಭಾವವನ್ನು ಬಳಸದೆ ಬದುಕಿದ್ದು ತೇಜಸ್ವಿಯವರ ಸ್ವಭಾವದ ಗರಿಮೆ. ಕರ್ವಾಲೋ ಕಾದಂಬರಿಯಲ್ಲಿ ವಿಜ್ಞಾನಿ ಕರ್ವಾಲೋ ಹೇಳುವ ಮಾತು: ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲಾ ಹೆಬುದ್ದೆಯನ್ನು ನೀನು ನಿಶಾಂಶ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು?  ಇದರಲ್ಲೇ ನಿನ್ನ ಆಯಸ್ಸು ಮುಗಿದು ಹೋಗುತ್ತೆ. ಸತ್ಯದ ಕಿಂಚಿತ್‌ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೆಯನ್ನು ಮೀರಬೇಕು ನಾವು ಆಗಲೇ ನಿಮಗೆ ಬೇರೆ ಬೇರೆ ಜಗತ್ತು ಪ್ರಪಂಚ ಕಾಣ್ತದೆ.. 

ಗ್ರಾಮೀಣ ಜೀವನ ಬಹುಮುಖಿ ಯಾದುದು. ಹಲವು ವೃತ್ತಿಗಳ ಹಲವು ಜಾತಿಯ ಹಲವು ರೀತಿ ನೀತಿಗಳ ಜನರನ್ನು ಹಳ್ಳಿಗಾಡಿನಲ್ಲಿ ನೋಡುತ್ತೇವೆ. ಈ ಎಲ್ಲ ವೃತಿಗಳು ಸಂಪ್ರದಾಯಗಳ ಜನ ಜನಪದ ಸಾಹಿತ್ಯ ರಚನೆಯಲ್ಲಿ ಕೊಡುಗೆ ನೀಡಿರುವುದರಿಂದ ಗ್ರಾಮೀಣ ಜೀವನದ ಸರ್ವ ಮುಖಗಳೂ ಅವರ ಸಾಹಿತ್ಯದಲ್ಲಿ ಪ್ರಕಟವಾಗಿದೆ. ಜನಪದ ಸಾಹಿತ್ಯ ಜೀವಂತ ಜನತೆಯ ಜೀವನ ಸಾಹಿತ್ಯ ಎಂದಿದ್ದಾರೆ  ಡಾ. ಎಂ.ಎಸ್. ಸುಂಕಾಪುರ. ಕವಿಗಳೆಂದರೆ ಶಿಷ್ಟರಷ್ಟೇ ಅಲ್ಲ. ಜನಪದರು ಹೌದು. ಜನಪದರ ಸಿರಿ ಬದುಕಿನಲ್ಲಿ ನಮ್ಮ ಹಿರಿಯರು ಜೀವನದಲ್ಲಿ ಅಳವಡಿಸಿಕೊಂಡಿದ್ದ ಮೌಲ್ಯಗಳನ್ನು ಜೀವನ ಪ್ರೀತಿಯನ್ನು ಬಿಂಬಿಸಿದ್ದಾರೆ. 

ತಂದೀಯ ನೆನೆದಾರ ತಂಗುಳು ಬಿಸಿಯಾಯ್ತು
ಗಂಗಾದೇವಿ ನನ್ನ ಹಡೆದವ್ವ ನೆನೆದರೆ
ಮಾಸಿದ ತಲೆಯ ಮಡಿಯಾಯ್ತು..

ದ.ರಾ.ಬೇಂದ್ರೆಯವರ ಬದುಕಿನ ಸೂತ್ರ ಒಲವೇ ನಮ್ಮ ಬದುಕು. ಬೇಂದ್ರೆಯವರು ತಮ್ಮ ಕವನಗಳಲ್ಲಿ ಭಾವಗಂಗೆಯನ್ನು ಇಳಿಸಿ ರಸಧಾರೆ ಹರಿಸಿದ ವರಕವಿ. ಅವರು ಸುಖದ ದಾರಿಯಲ್ಲಿ ನಡೆದು ಮಹಾಕವಿಯೆನಿಸಿಕೊಂಡವರಲ್ಲ. ಬದಲಾಗಿ ಬೆಂದು ಬೇಂದ್ರೆಯಾದವರು.

ಎನ್ನ ಪಾಡೆನಗಿರಲಿ ಆದರೆ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ ನನ್ನೆದೆಯು ಕರಗಿದರೆ ಅದರ ಸವಿಯನ್ನಷ್ಟೇ ಹಣಿಸು ಎಂದರು. 

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಬಳಸಿಕೊಂಡೆ ವದನೆ ನಾವು ಅದಕು ಇದಕು ಎದಕು 
ಎಂದು ಪ್ರೇಮ ಸಂದೇಶ ನೀಡಿದರು. ಕುವೆಂಪುರವರ ಬದುಕು ಮತ್ತು ಕೃತಿಗಳ ನಡುವೆ ಅವಿನಾಭಾವ ಸಂಬಂಧ
ಇದೆ. ಅವರು ಬದುಕನ್ನು ಕಡೆಗಣಿಸಿದವರಲ್ಲ. ಅವರ ಪ್ರಕಾರ ಬಾಳು  ಅಮೂಲ್ಯವಾದುದು. ಅಷ್ಟೇ ಏಕೆ ಈ ಸೃಷ್ಟಿಯಲ್ಲಿರುವ ಮರಗಿಡ ಪ್ರಾಣಿ ಪಕ್ಷಿಗಳ ಬದುಕೂ ಮಹತ್ತಾದುದೇ. 

ಆನಂದಮಯ ಈ ಜಗ
ಹೃದಯ
ಎತಕೆ ಭಯ? ಮಾಣೋ
ಸೂರ್ಯೊದಯ ಚಂದ್ರೋದಯ
ದೇವರ ದಯ ಕಾಣೋ

ನಾಡಿನ ಸಂಸ್ಕಾರವಂತ ವಿಚಾರವಂತ ಸಾಹಿತಿಗಳ ಬದುಕಿನ ಘಟನೆಗಳನ್ನು ಅವರ ಕವಿತ್ವ ಸಾಹಿತ್ಯ ಇವೆಲ್ಲವನ್ನೂ ಅಭ್ಯಸಿಸಿ ಅವರ ಬದುಕನ್ನು ಕಿರು ಕೃತಿಯಲ್ಲಿ ಅವಲೋಕಿಸಿದ್ದಾರೆ. ಕಡೆಯದಾಗಿ ನಮ್ಮ ಊರಿನ ರಸಿಕರು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರು ಶಾಲೆಯಲ್ಲಿ ಕಲಿತ ವಿದ್ಯೆಗಿಂತಲೂ ಸ್ವಂತ ಪ್ರಯತ್ನದಿಂದ ಕಲಿತಿದ್ದೆ ಹೆಚ್ಚು. ಇವರೊಬ್ಬ ಜಾನಪದ ತಜ್ಞ.  ದ.ರಾ.ಬೇಂದ್ರೆಯವರು ಗರುಡ ಗಂಬದ ದಾಸಯ್ಯ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ನಮ್ಮ ಜನಕ್ಕೆ ನಮ್ಮ ಜೀವನದ ರಮ್ಯತೆಯನ್ನು ತೋರಿಸಿ ಮಂಕು ಕವಿದ ಕಣ್ಣಿಗೆ ಅಂಜನ ಹಾಕುವ ಕಲೆಯಲ್ಲಿ ಕೈ ಪಳಗಿದವರಲ್ಲಿ ಗೊರೂರಿಗೆ ಗಣ್ಯ ಸ್ಥಾನವಿದೆ. ಅಳುತ್ತ ಬಂದವರನ್ನು ನಗುತ್ತ ಹೋಗುವಂತೆ ಮಾಡುವುದು ಜಾತಿ ರಸಿಕರ ಕಸುಬಾಗಿದೆ. 
ರಿಚರ್ಡ್ ಬ್ಯಾಕ್‌ ಅವರ ಜೋನಾಥನ್ ಲಿವಿಂಗ್‌ಸ್ಟನ್‌ ಕೃತಿ ಓದಿ ನೇಮಿಚಂದ್ರರು ಬರೆದರು.
ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಭರವಸೆ ಇರಲಿ. ಭರವಸೆ ಕಳೆದುಕೊಳ್ಳದ ಬದುಕು ಇರಲಿ. ಕನಸುಗಳ ಬೆನ್ನೆತ್ತುವ ಧೈರ್ಯವಿರಲಿ. ಕನಸು ನನಸಾಗಿಸಲು ಬೆವರು ಸುರಿಸುವ ಪ್ರಯತ್ನವಿರಲಿ. ನಾವು ಒಬ್ಬೊಬ್ಬರು ಹಾರಬಲ್ಲೆವು ಪರಿಪೂರ್ಣತೆ ಸಾಧಿಸಬಲ್ಲವು. 
ಚುಟುಕು ಬ್ರಹ್ಮರೆಂದು ಹೆಸರಾದ ದಿನಕರದೇಸಾಯಿಯವರ ಈ ಒಂದು ಚುಟುಕು ಉಲ್ಲೇಖಿಸಿ ವಿಮರ್ಶೆಗೆ ಮುಕ್ತಾಯ ಹಾಡುತ್ತೇನೆ. 

ನನ್ನ ದೇಹದ ಬೂದಿ ಗಾಳಿಯಲ್ಲಿ ತೂರಿಬಿಡಿ
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ.. 
  
  
- ಗೊರೂರು ಅನಂತರಾಜು, 
ಹಾಸನ.
ಮೊ: ೯೪೪೯೪೬೨೮೭೯.

ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, 
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, 
ಹಾಸನ.

ಹೆಣ್ಣು (ಕವಿತೆ) - ಕನಸಿನಕೂಸು.

ಅವಳೆಂದರೆ ಪೃಥ್ವಿಗೆ ಸಮತೂಕದವಳು
ಪೂಜ್ಯನಿಯ ಸ್ಥಾನದಲ್ಲಿ ನಿಂತವಳು
ಕರುಣೆಯ ಕಡಲನ್ನು ಉಕ್ಕಿಸುವ ಮಾನಸ ಗಂಗೋತ್ರಿ
ತಪ್ಪು ತಿದ್ದಿ ಬುದ್ದಿ ಕಲಿಸುವಲಿ ಕ್ಷಮಯಾ ಧರಿತ್ರಿ...

ಅವಳು ಅಕ್ಕರೆಯಲಿ ಅಕ್ಕನಾಗಿ ಸಕ್ಕರೆಯ         ತಂಗಿಯಾಗಿ ಮಮತೆಯ ಮಾತೆಯಾಗಿ
ಮುದ್ದಿನ ಮಡದಿಯಾಗಿ ಕರುಣೆಯ ಕಡಲಾಗಿ
ಹಲವಾರು ರಂಗದಲಿ ತನ್ನನು ತೊಡಗಿಸಿಕೊಂಡವಳು ...

ತನ್ನ ಚಾಕ ಚಕ್ಯತೆಯಲಿ ಮನೆಯ ಜವಾಬ್ದಾರಿಯ ಹೊರುವವಳು ಹಸಿದಾಗ ಅಣ್ಣ ನೀಡುವವಳು ಮಾತಿನ ಮೂಲಕ ಎಲ್ಲರ ಮನೆ ಮನ ಗೆಲ್ಲುವವಳು ಸಾಧಾಕಾಲ ತನ್ನವರ ಒಳತಿಗಾಗಿ ಶ್ರಮಿಸುವವಳು...

ಕಲಿಸುವಲಿ ಸರಸ್ವತಿಯಾಗಿ ಒಲಿಯುವಲಿ         ಲಕ್ಷ್ಮೀಯಾಗಿ ಶಿಕ್ಷಿಸುವಲಿ ಕಾಳಿಯಾಗಿ
ಶಿಷ್ಟರ ಪಾಲಿಗೆ ಸೌಮ್ಯಳಾಗಿ ದುಷ್ಟರ ಪಾಲಿಗೆ ಬೆಂಕಿಯ ಕೆನ್ನಾಲಿಗೆಯಾಗಿ ತೋರುವವಳು...

ಅವಳೆಂದರೆ ಒಂದು ಅಮೋಘ ಶಕ್ತಿ
ಅವಳೆಂದರೆ ಸುಂದರವಾದ ಪ್ರಕೃತಿ
ಅವಳೆಂದರೆ ಪ್ರತಿ ಸಂಸಾರದ ಕಣ್ಣು 
ಅವಳೇ ಎಲ್ಲರ ಮನೆ ಮನ ಬೆಳಗುವ ಹೆಣ್ಣು..
   
                                                          - ಕನಸಿನಕೂಸು 
    ವಸಂತ ಪು ಬಾಗೇವಾಡಿ, ಗಜಪತಿ.

ನಾ ಕರಿಯನೆಂದುನೀ ಜರಿಯ ಬೇಡ ಓ ಬಿಳಿಗೆಳತಿ (ಕವಿತೆ) - ಬಿ ಎಂ ಮಹಾಂತೇಶ.

ಆ ನಿನ್ನ ಬಿಳಿ ಮೋಡದಂತ
ಮುದ್ದಾದ ಗಲ್ಲದ ಮೇಲೆ ಮುದದಿ
ಮುದ್ದಾಡುವ ಕಪ್ಪುಬೊಟ್ಟಾಗುವೆ...

ಮಯೂರಿಯಂತೆ ನಟಿಸುವ
ಆ ನಿನ್ನ ಕಣ್ ರೆಪ್ಪೆಗಳಿಗೆ
ಮಾಧುರ್ಯ ಕಪ್ಪಾಗುವೆ...

ನಿನ್ನೊಲವಿನ ಬಿಳಿಯಾಳೆಯ
ಮೇಲೆ, ಚೆಲುವ ಭಾವ
ಗೀಚಲು ಮಧುರ ಮಸಿಯಾಗುವೆ...

ಅಳೆಯಲಾಗದ ಆ ನಿನ್ನ
ಅಂದ ಚೆಂದ, ಮೈ ಬಣ್ಣವನು
ಮುಚ್ಚುವ ಕತ್ತಲೆಯಾಗುವೆ...

ಮುಪ್ಪಿನಲೆಯು ನಿನಗಪ್ಪಳಿಸಿ,
ಬಿಳಿ ಕೇಶರಾಶಿ ಮೂಡಿದಾಗ
ಅವುಗಳಿಗೆ, ಕರಿ ಮಸಿಯಾಗುವೆ...


- ಬಿ ಎಂ ಮಹಾಂತೇಶ
ಕ್ಯಾಸನಕೆರೆ, ಕೂಡ್ಲಿಗಿ ತಾ,
ವಿಜಯನಗರ ಜಿ,
9731418615

ಅಂತರಾಳದ ತುಡಿತ (ಕವಿತೆ) - ಮಾಲತಿ ಮೇಲ್ಕೋಟೆ.

ಭಾವಯಾನದಲಿಂದು ಜೀವನವು ಸಾಗಿಹುದು
ಅಂತರಾಳದ ನೋವ ಹೇಳದಾಗಿಹುದು
ಬಾಳಬದುಕಿನ ಪಯಣದಲಿ ಮಾತು ಮೌನದ ರಿಂಗಣ
ಮಾತು ಮರೆಯಾಗಿಹುದು ಮೌನದಾ ಹಿಂದೆ

ಮನದಲಿಹ ಭಾವಗಳು ಹೊರಬರದಾಗಿಹುದು
ನೀ ಕಂಡ ಕೂಡಲೇ ಮಾತು ಮೌನವಾಗುವುದು
ಕಣ್ಣನೋಟವದು ಮಾತ್ರ ಸಾರಿ ಹೇಳುತಲಿಹುದು
ಮನದೆಲ್ಲ ಭಾವಗಳ ನಿನಗರ್ಪಿಸಿಹುದು

ನೀನಿರದ ದಿನಗಳಲಿ ಬೆಳದಿಂಗಳಲು ತಾಪ
ತೋರುತಿಹೆ ಎಲ್ಲರಲು ಅರಿಯದೆಯೆ ಕೋಪ
ಮನದೆಲ್ಲ ಉಮ್ಮಳವ ನಿನ್ನೆದುರು ಬಿಚ್ಚಿಟ್ಟು
ಹಗುರವಾಗುವ ಬಯಕೆ ನನ್ನಲಿಹುದು

ನಿನ್ನೊಡನೆ ಕಳೆದಂಥ ಸಮಯವದು ಮನದಲ್ಲಿ
ಪುಳಕ ಹುಟ್ಟಿಸುತಿಹುದು ಇಂದು ನನ್ನಲ್ಲಿ
ನಿನ್ನಿಂದ ದೂರಾಗಿ ನೋವು ಹೆಪ್ಪುಗಟ್ಟಿಹುದು
ಕರಗುವಾ ಬಗೆ ಹೇಗೆ ತಿಳಿಯದಾಗಿಹುದು

- ಮಾಲತಿ ಮೇಲ್ಕೋಟೆ,
ಬೆಂಗಳೂರು.

ಮಂಗಳವಾರ, ನವೆಂಬರ್ 7, 2023

ಉನ್ಮಾದ (ಕವಿತೆ) - ಶ್ರೀಧರ ಬಿ ಸಿ ಭುವನಹಳ್ಳಿ, ಮಾಲೂರು.

ಬಿಸಿಯುಸಿರ ತಾಪವು
ಚಿಲುಮೆಯಾಗಿ ಚಿಮ್ಮಿ
ಮೊಸರ ಮಳೆಯಾಗಿ ಹರಿದು
ಹಾಲ್ಗಡಲು ಉಕ್ಕುವಂತೆ ಉಕ್ಕಿ
ತೆರೆಗಳ ನೊರೆಯಂತೆ ಪುಟಿದು
ಶರವೇಗದಲಿ ಶರಧಿಯ ಸೇರುತಿದೆ
ಮನವು ತಣಿಯುತಿದೆ,
ಭಾರವು ಕರಗುತಿದೆ, 
ಜೀವ ಉಲ್ಲಾಸಗೊಂಡಿದೆ,

ಮನದ ಮರ್ಕಟದ ಲಗಾಮು
ಸಡಿಲಿಸಿ ಕಡಲ ಕಡೆಗೆ ಎವಯಿಕ್ಕದೆ ನೋಡುತಿದೆ.
ಸಭ್ಯ ಅಸಭ್ಯಗಳ ತಿಕ್ಕಾಟಕ್ಕೆ 
ಬುದ್ಧಿಯ ಕುಲುಮೆ ಬೇಯುತಿದೆ, ನಲಿಯುತಿದೆ, 

ಉತ್ತುಂಗದ ಉನ್ಮಾದಕ್ಕೆ
ಕಾಯುತ್ತಿದೆ ಕಾತುರದಿಂದ
ಬೆವರಹನಿಯು ಸೇರಿ 
ಬೊಗಸೆ ತುಂಬಿದೆ ಜೋಳಿಗೆಯಲಿ
ಹರಿದು ಹೋಗುತ್ತಿದೆ
ಚರಂಡಿಯ ಕಾಲುವೆಯಲ್ಲಿ
ಸತ್ತ ಹಸುಳೆಯ ಆಕ್ರಂದನ
ಕಿವಿಯಲ್ಲಿ ಗುನುಗುತ್ತಿದೆ

ತಪ್ಪು ಮಾಡಿದೆ ನೀ ಎಂದು
ತಪ್ಪಲ್ಲದ ತಪ್ಪಿಗೂ
ಮರುಗುತ್ತಿದೆ ಜೀವ
ಪ್ರಕೃತಿಯ ನಿಯಮಕ್ಕೆ
ಯಾರು ಹಿತವರು ಎಂದು
ಸಮಾಧಾನಿಸಿಕೊಳ್ಳುತ್ತಲೆ
ಸಾಗುತ್ತಿದೆ ಕರ್ಮ ಹೀಗೆ 
ನಿತ್ಯ ನಿರಂತರ ಸುಖದಾಸೆಗೆ


  - ಶ್ರೀಧರ ಬಿ ಸಿ ಭುವನಹಳ್ಳಿ, ಮಾಲೂರು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...