ಬುಧವಾರ, ಫೆಬ್ರವರಿ 14, 2024

ಪ್ರೀತಿಯೆಂದರೆ(ಕವನ) - ಡಾ.ಕಲ್ಪನಾ ಡಿ.ಎನ್.,ಬೆಂಗಳೂರು.

ಪ್ರೀತಿಯೆಂದರೆ ಒಲವಿನ ಆರ್ದತೆಯು
ಪ್ರತಿಧ್ವನಿಸುವ ಮೋಹಕ ಚೆಲುವ ಸುಧೆಯು
ಪ್ರತಿಷ್ಠಾಪಿಸಿದ ಜೀವಕ್ಕೆ ಪ್ರೇಮದ ಸಿಂಚನವು
ಪ್ರತಿರೋಧಿಸದ ಭಾವೋತ್ಕರ್ಷದ ವೈಚಿತ್ರ್ಯವು

ಅಕ್ಷರದಲ್ಲಿ ಬರೆಯಲಾಗದ ನವೀನ ಕಾವ್ಯವು 
ಅಕ್ಷಿಯಲ್ಲಿ ಅಕ್ಷಯವಾದ ನಿಜ ಬಂಧುರವು
ಸಾಕ್ಷಿಯಾಗಿದೆ ಜೇನ ಸ್ರವಿಸುವ ಅಧರವು
ಪ್ರಕ್ಷೋಭಿತ ಚಿತ್ತಕ್ಕೆ ಹೆಗಲಾದ ಸಾಂಗತ್ಯವು

ಧರಣಿ ಕಾದದಂತೆ ವರುಣನ ನಲ್ಮೆಯ ಪ್ರೀತಿಗೆ
ಧಾರಣಿಯ ಉಸಿರಾಟದ ಏರಿಳಿತದ ಧಾಟಿಗೆ 
ಕನಸಿನ ಮೋಡ ವರ್ಣಚಿತ್ತಾರದಿ ಮೂಡಿದೆ
ಮನಸಿನ ಮುಂಗಾರು ಎದೆಯ ತಂತಿ ಮೀಟಿದೆ

ಚಿತ್ರಿಸಿದೆ ಚಿತ್ರವನು ಆಗಸದಿ ಕಾಮನಬಿಲ್ಲಂತೆ 
ಚಿತ್ತ ಚೋರನ ಉಸಿರು ಚೆಲುವೆಯಲಿ ಬೆರೆತಂತೆ
ಪ್ರೇಮದುಸಿರಿಗೆ ವರ್ಷಧಾರೆಯ ಸಿಂಚನವು
ಪ್ರೇಮದಂತರ್ಜಲವಾಗಿದ ಬತ್ತದ ಸಂಭ್ರಮವು 

ಮಧುರನಾದ ನಭಕ್ಕೂ ಆಸೆಯಲಿ ಲಗ್ಗೆಯಿಟ್ಟಂತೆ
ಮಾಧುರ್ಯದ ಜೇನ ಚೆಂದುಟಿಯು ಸವಿದಂತೆ
ವೃಷ್ಟಿಯ ಸ್ಪರ್ಶಕ್ಕೆ ಹೊಮ್ಮಿದ ಸೌರಭವು
ಸೃಷ್ಟಿಯ ನಿಯಮಕೆ ಉದ್ಗರಿಸಿದ ಭಾವವು

ತನುವಲಹರಿಗೆ ಸ್ಫರಿಸಿದ ಅವ್ಯಕ್ತ ಮಾರ್ದನಿ
ತನ್ನವಳ ಪ್ರೇಮಕೆ ಬಾಗಿದ ಸೋನೆಯ ಇನಿದನಿ
ನಿಲ್ಲದಿರಲಿ ಮತ್ತಿನಲಿ ನೆನೆಸುವ ವರ್ಷಧಾರೆಯು
ನಲ್ಲನೊಲವಲಿ ಕರಗಿಸಿತು ಸುರಿದ ಮಳೆಯು 
 - ಡಾ.ಕಲ್ಪನಾ ಡಿ.ಎನ್.,ಬೆಂಗಳೂರು.

ಭಾನುವಾರ, ಫೆಬ್ರವರಿ 4, 2024

ಲಾಸ್ಟ್ ಬೆಂಚ್ ಹುಡುಗರು(ಕವಿತೆ) - ವಿಸ್ಮಯ.

ಕಾಲೇಜಿನ ಕ್ಲಾಸಲಿ
ಮೊದಲ ದಿನದಿಂದಲೂ
ಲಾಸ್ಟ್ ಬೆಂಚಿಗೆ
ಕುಳಿತವರು ,
ಅದೇ ಅಗ್ರಸ್ಥಾನವೆಂದು
ನಂಬಿದವರು ನಾವು

ಮೊದಲ ಬೆಂಚ್
ಖಾಲಿ ಇದ್ದರೂ,
ಕೊನೆಯ ಬೆಂಚಲಿ
ಬೇರೆ ಬಾಯ್ಸ್ ಕುಳಿತಿದ್ದರು
ಜಾಗ ಖಾಲಿ ಮಾಡಿಸಿ
ಕೋರುವವರು ನಾವು

ಲಾಸ್ಟ್ ಬೆಂಚ್ ಅಲ್ಲಿ
ಕುಳಿತು ಸೈಟ್
ಹೊಡೆಯುವವರು ನಾವು
ಒಂದು ಹುಡುಗಿ
ತಿರುಗಿ ನೋಡಿದರು
ಲವ್ ಅಟ್ ಫಸ್ಟ್ ಸೈಟ್
ಎನ್ನುವವರು ನಾವು

ಕೆಲವು ಹುಡುಗಿಯರ ಪಾಲಿಗೆ
ದುಶ್ಮನ್ ಗಳು
ಉಪನ್ಯಾಸಕರ ನೆನಪಿಗೆ
ಪೊರಕಿಗಳು ಎಂದು
ಗುರುತಿಸಿಕೊಂಡವರು ನಾವು

ಗಡ್ಡ ಬಿಟ್ಟು ಪೋಕರಿ
ಗಳಂತೆ ಇರುವವರು,
ಕಾಲೇಜಿಗೆ ಪರಿಚಯ
ವಿದ್ದರು ಅಪರಿಚಿತರಂತೆ
ಇರುವವರು ನಾವು

ಯಾವುದೋ ಒಂದು
ಕಾರಣಕ್ಕೆ ಗೆಳೆಯರ ಜೊತೆ
ಮಾತು ಬಿಟ್ಟವರು
ಪಾರ್ಟಿ ಎಂದರೆ ಜೊತೆ
ಸೇರುವವರು ನಾವು

ಕಾಲೇಜು ಕಡೆಗಣಿಸಿದರು
 ಕಾಲೇಜಿಗೆ ಆಭಾರಿಗಳು
ನಾವು...
ಏನಾದರೂ ಆಗಲಿ
ಲಾಸ್ಟ್ ಬೆಂಚಿನವರು
ನಾವು
ನಗುನಗುತ ಇರುವವರು ನಾವು...

- ವಿಸ್ಮಯ (ಮೈಲಾರಿ ಎಚ್. ಎಸ್.)

ಚಿತ್ರಕಲಾವಿದೆ ಚಂದ್ರಪ್ರಭಾರ ಕುಂಚದಲ್ಲಿ ರೂಪುತೆಳೆದ ನವ್ಯ ಕಲೆ ನೂರೂರು(ಲೇಖನ) - ಗೊರೂರು ಅನಂತರಾಜು, ಹಾಸನ.

ಕರುನಾಡ ಕಲೆಗೆ ಅದರಲ್ಲೂ ಚಿತ್ರಕಲೆಗೆ ಹಾಸನ ಜಿಲ್ಲೆಯ ಕೊಡುಗೆಯೂ ಸಾಕಷ್ಟಿದೆ. ಈ ಕಲೆಯ ನೆಲೆಯನ್ನು ಪರಿಚಯಿಸಲು ಹೊರಟು ನನಗೆ  ಪ್ರತಿಭಾನ್ವಿತ ಚಿತ್ರಕಲಾವಿದೆ  

ಚಂದ್ರ ಪ್ರಭಾರವರ ಮಾಹಿತಿಯನ್ನು ಒದಗಿಸಿದವರು  ಚಿತ್ರಕಲಾವಿದರು ಚಂದ್ರಕಾಂತ ನಾಯರ್. ಚಂದ್ರಪ್ರಭಾರಿಗೆ  ಬಾಲ್ಯದಿಂದಲೇ ಚಿತ್ರಕಲೆಯ ಮೇಲೆ ಅಪಾರ ಆಸಕ್ತಿ. ಈ ಆಸಕ್ತಿಯೇ ಹವ್ಯಾಸವಾಗಿ ಇಂದು ಚಿತ್ರಕಲೆಯಲ್ಲಿ ಪ್ರಭುದ್ಧರಾಗಿದ್ದಾರೆ.

ಕಲಾವಿದೆ ಚಂದ್ರಪ್ರಭರವರು ಶಿವಣ್ಣ ಹಾಗೂ ಪದ್ಮ ದಂಪತಿಗಳ ಮಗಳಾಗಿ ಜುಲೈ ೧೫ ರಂದು ಅರಕಲಗೂಡು ತಾಲೂಕಿನಲ್ಲಿ ಜನಿಸಿದರು. ಇವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಅರಕಲಗೂಡುನಲ್ಲಿ ಮುಗಿಸಿ ನಂತರ ಚಿತ್ರಕಲಾ ಅಭ್ಯಾಸಕ್ಕಾಗಿ ಹಾಸನದ ನಿರ‍್ಮಲ ಚಿತ್ರಕಲಾ ಶಾಲೆಗೆ ಸೇರುತ್ತಾರೆ.  ಕಲಾ ಶಾಲೆಯಲ್ಲಿ ಉಪನ್ಯಾಸಕರ ಪ್ರೋತ್ಸಾಹದಿಂದ ಕಲೆಯ ಅನೇಕ ತಂತ್ರಗಾರಿಕೆ,  ಮಾದ್ಯಮ ಬಳಸುವ ವಿಧಾನ, ಚಿತ್ರಕಲೆಯ ಅನೇಕ ಆಯಾಮಗಳನ್ನು ಅರಿತುಕೊಳ್ಳಲು ಅನುಕೂಲವಾಗುತ್ತದೆ.
ಅಲ್ಲಿಂದ ಮುಂದೆ ಕಲೆಯಲ್ಲಿ ಪ್ರಾಯೋಗಿಕ ಚಿಂತನೆಯಿಂದಾಗಿ ೨೦೧೮ ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ. ಎಫ್.ಎ ಸ್ನಾತಕೋತ್ತರ  ಪದವಿಯನ್ನು ಸಂಪೂರ್ಣ ಗೊಳಿಸಲು ನೆರವಾಗುತ್ತದೆ.
 ಚಿತ್ರಕಲಾ ಪದವೀದರೆ  ಪ್ರಸ್ತುತ ನಗರದ ಪ್ರತಿಷ್ಠಿತ ಶಾಲೆ ಹಾಸನ್ ಪಬ್ಲಿಕ್ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾಯ೯ ನಿರ‍್ವಹಿಸುತ್ತಿದ್ದಾರೆ. ಇವರದು ಬದುಕಿನುದ್ದಕ್ಕೂ ಸ್ವಾಭಿಮಾನದ ಜೀವನ. ಕಲೆಯಲ್ಲಿ ಜೀವಂತಿಕೆಯನ್ನು ಕಂಡು ಕರುನಾಡ ಕಲೆಯ ಸಿರಿವಂತಿಕೆಯನ್ನು ಕಾಣಬಯಸುವ ಕಲಾ ಸರಸ್ವತಿ.
 ಸಾವಿರಾರು ಮಕ್ಕಳ ಹೃದಯದಲ್ಲಿ ತನ್ನ ಕುಂಚದಿಂದ ಕಣ್ಣಿಗೆ ಹಬ್ಬದ ರಸದೂಟ ನೀಡಿ ಆತ್ಮೀಯತೆಯ ಮುಗ್ಧ ನಗುವನ್ನು ,,ಆಸಕ್ತಿಯನ್ನು ಉಂಟುಮಾಡುವ ಚೈತನ್ಯ ಶಕ್ತಿ ಚಂದ್ರಪ್ರಭಾರವರದ್ದಾಗಿದೆ.
ಚಂದ್ರಪ್ರಭಾರವರು ಬಿಡಿಸಿದ ವೈವಿಧ್ಯಮಯ ಚಿತ್ರಗಳ ಕಲಾಕೃತಿಗಳೆಂದರೆ ಸಾಮಾಜಿಕ ಚಿತ್ರಗಳು, ಸೃಜನಾತ್ಮಕ ಚಿತ್ರಗಳು ಕ್ರಿಯಾತ್ಮಕ ಚಿತ್ರಗಳು, ರೇಖಾಚಿತ್ರಗಳು,  ದೇವಿ ದೇವತಾ ಚಿತ್ರಗಳು, ಅದ್ಭುತ ಶಿಲಾಬಾಲಕಿಯ ಚಿತ್ರಗಳು ,ಪ್ರಕೃತಿ ರಮಣೀಯ ಚಿತ್ರಗಳು ,ಪ್ರಾಣಿ-ಪಕ್ಷಿಗಳ ಸುಂದರ ನೋಟಗಳ ಚಿತ್ರಗಳು, ಗಿಡ ಮರಗಳ ರಮ್ಯತೆಯ ಚಿತ್ರಗಳು ,ಕವಿ ಹೃದಯ ಗೆದ್ದ ಆಕಾಶದ ಮೇಘಮಾಲ ಚಿತ್ರಗಳು, ನೂರಾರು ಮಕ್ಕಳು ಬಯಸುವ ಚಿತ್ರಗಳು, ಒಂದೆರಡಲ್ಲ ನೂರಾರು ವೈವಿಧ್ಯ ಚಿತ್ರಕಲಾ ಲೋಕ.
 
ಕರ್ನಾಟಕ  ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಚಿತ್ರಕಲಾ ಮೇಳಗಳು ಮತ್ತು ಚಿತ್ರಕಲಾ ಕ್ಯಾಂಪ್  ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕಾರ‍್ಯಕ್ರಮಗಳ ರಂಗಮಂಟಪಗಳನ್ನು ಸಜ್ಜುಗೊಳಿಸುವಲ್ಲಿ ವಿಶಿಷ್ಟ ಕಲಾಪ್ರತಿಭೆ ಇವರಲ್ಲಿದೆ. ತಮ್ಮ  ಬಿಡುವಿನ ಸಮಯದಲ್ಲಿ ಚಿತ್ರಕಲೆಗಾಗಿ ಆಸಕ್ತಿ ತೋರಿಸುವ ಮಕ್ಕಳಿಗೆ ಮಹಿಳೆಯರಿಗೆ ಉಚಿತವಾಗಿ ಚಿತ್ರಕಲೆ ಕಲಿಸುವ ಗುರುವಾಗಿದ್ದಾರೆ.
 ಚಿತ್ರಕಲೆಗೋಸ್ಕರ ತನ್ನ ಬಾಳನ್ನೇ ಮುಡುಪಾಗಿಟ್ಟು  ಬದುಕು ನಡೆಸುತ್ತಿರುವ  ಚಂದ್ರಪ್ರಭ ಮೇಡಂ ಚಿತ್ರಕಲೆ ಎಂಬ ಸಾಗರದಲ್ಲಿ  ಸ್ವಂತ ಶಕ್ತಿಯಿಂದ ಗುರುತಿಸಿಕೊಳ್ಳುವ ಹೆಮ್ಮೆಯ ಸಾಧಕಿ. 

- ಗೊರೂರು ಅನಂತರಾಜು, ಹಾಸನ.

ಗೆಲ್ಲುತ್ತೇನೆ(ಕವಿತೆ) - ಬಿ ಎಂ ಮಹಂತೇಶ್.

ಹೊತ್ತು ಮೂಡುವ ಮುನ್ನ
ಎದ್ದು ರೊಟ್ಟಿ ಬೇಯಿಸಿದ,
ಎತ್ತು, ನೊಗ ಹೊತ್ತು
ನೆತ್ತಿ ಕಾಯಿಸಿದ,
ನನ್ನ ಹೆತ್ತವರಿಗಾಗಿ ಗೆಲ್ಲುತ್ತೇನೆ...

ನಿತ್ಯವೂ ಸ್ಫೂರ್ತಿ ತುಂಬುತ
ಬದುಕಿನಾದಿಯ ತುಳಿಸುತ,
ಜ್ಞಾನವ ಬಿತ್ತುತ, ಮುದ್ದು
ಮಾಡಿದ ನನ್ನ ಗುರುಗಳಿಗಾಗಿ
ಗೆಲ್ಲುತ್ತೇನೆ...

ಮುತ್ತಿನಂತ ಮಾತನಾಡುವ
ನನ್ನ ಗೆಳೆಯರಿಗಾಗಿ,
ಚುಚ್ಚಿ ಮಾತನಾಡುವ
ನಾಲ್ವರಿಗಾಗಿಯಾದರೂ
ನಾನು ಗೆಲ್ಲುತ್ತೇನೆ...

ಗೆದ್ದೇ ಗೆಲ್ಲುತ್ತೇನೆ
ಒಂದಲ್ಲ ಒಂದು ಒಂದೇ ದಿನ..
ನನ್ನದೇ ಮಾತಾಗಬೇಕು
ಎಲ್ಲರ ಬಾಯಲ್ಲಿ ಪ್ರತಿದಿನ...

-  ಬಿ ಎಂ ಮಹಾಂತೇಶ್
SAVT  ಕಾಲೇಜ್ ಕೂಡ್ಲಿಗಿ
ವಿಜಯನಗರ ಜಿಲ್ಲಾ
9731418615

ಶನಿವಾರ, ಫೆಬ್ರವರಿ 3, 2024

ಮಾನವೇ ಪ್ರಾಣ ಹೆಣ್ಣಿಗೆ (ಕವಿತೆ) - ಶ್ರೀಮತಿ ಎಚ್. ಎಸ್. ಪ್ರತಿಮಾ, ಹಾಸನ.

ಹೆಣ್ಣಾಗಿ ಹುಟ್ಟಿದ್ದೆ ತಪ್ಪೇನು? ಹೇಳಿ
 ಮಾನವೇ ಪ್ರಾಣ ಹೆಣ್ಣಿಗೆ ಕೇಳಿ
 ಕೈಮುಗಿದು ಬೇಡುವೆನು ಎಲ್ಲರಲಿ 
 ಒಮ್ಮೆ ಆಲಿಸಿರಿ ಮಾತನು ಕೇಳುತಲಿ  ....

 ಕ್ರೂರ ಮೃಗದ ಜನರಿರುವಾಗ ಜಗದಲಿ 
 ಹೆಣ್ಣು ಬಾಳುವುದು ಯಾವಾಗ ಪ್ರೀತಿಯಲಿ 
 ಶೋಷಣೆಯ ಮಾಡದಿರಿ ಸಹಿಸಲಾಗದು
ಎಲ್ಲದರೂ ಮಾಡಿದರೆ ಹೆಣ್ಣಿಗೆ ನೋವದು  ....

 ಹೆಣ್ಣು ಕುಲಕ್ಕೆ ಅದು ನೋವಿನ ಆಹ್ವಾನ
 ಮಾಡದಿದ್ದರೂ ಪರವಾಗಿಲ್ಲ ಸನ್ಮಾನ
 ಎಲ್ಲಿಯೂ ಮಾಡದಿರಿ ನೀವು ಅವಮಾನ
 ಸಹಿಸಲಾಗದು ಹೆಣ್ಣಿನ ಜೀವನ......

 ಬಡವನಾದರೇನು? ಶ್ರೀಮಂತರಾದರೇನು?
 ಮಾನ ಎಂಬುದು ಎಲ್ಲರಿಗೂ ಒಂದೆ ಅಲ್ಲವೇನು?
 ಸರಿಸಮಾನ ಜೀವನ ಮಾಡಬೇಕಾದರೆ
ಪ್ರೀತಿ  ಪ್ರೇಮ ದಯೆ ತೋರಬೇಕಲ್ಲವೆ?.......

 ಶೋಷಣೆಗೂ ಒಂದು ಇತಿಮಿತಿ ಇದೆ
 ಅರಿತು ಬಾಳಿದರೆ ಅದು ಅರ್ಥವಾಗುತ್ತದೆ
 ಹೇಳುತಲಿ ಮುಂದುವರೆದ ಸಮಾಜ ಎಂದು
 ಮಾಡುವರು ನಾಚಿಕೆ ಪಡುವ ಕೃತ್ಯಗಳು ಇಂದು........ 

- ಶ್ರೀಮತಿ ಎಚ್. ಎಸ್. ಪ್ರತಿಮಾ, ಹಾಸನ.

ಶುಕ್ರವಾರ, ಫೆಬ್ರವರಿ 2, 2024

ಚುಕ್ಕೆಯೊಂದು ನಿಬೆರಗಾಗಿ ನಮ್ಮನೆ ನೋಡುತ್ತಿದೆ ಸಖಿ (ಕೃತಿ ವಿಮಶೆ೯) - ನಾರಾಯಣಸ್ವಾಮಿ (ನಾನಿ).

ವಿಮರ್ಶೆಯೆಂದರೆ ಉನ್ನತವಾದ  ನೈತಿಕ ಪ್ರಜ್ಞೆಯನ್ನು ನಿರೂಪಿಸಬೇಕು ಹಾಗೂ ಕೃತಿಯಲ್ಲಿನ ಮೌಲ್ಯಗಳು ಬದುಕಿನ ಪರವಾಗಿವೆಯೇ ಎಂಬುದನ್ನು ನಿರೂಪಿಸಬೇಕು  - ಎಫ್ ಆರ್ ಲೇವಿಸ್. 

ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಬರಹಗಾರರ ಸಂಖ್ಯೆಯು ಹೆಚ್ಚಾಗುತ್ತಿದೆ. ಪ್ರಸ್ತುತ ಸಾಹಿತ್ಯ ಕ್ಷೇತ್ರದಲ್ಲಿ  ಪ್ರತಿಯೊಬ್ಬ ಬರಹಗಾರನಿಗೂ/ಬರಹಗಾರಳಿಗೂ ತಾನು ಕೃತಿಗಳನ್ನುಪ್ರಕಟಿಸಬೇಕು, ಕವಿಯಾಗಿ/ಕವಯತ್ರಿಯಾಗಿ/ ಲೇಖಕ/ಲೇಖಕಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಗೌರವ ಪುರಸ್ಕಾರಗಳಿಗೆ ಭಾಜನರಾಗಬೇಕೆಂಬ ಹಂಬಲ ಹೆಚ್ಚಾಗುತ್ತಿದೆ. ತಾನು ಬರೆದಿರುವ ಪುಸ್ತಕ ಹಲವಾರು ಜನರು ಓದಬೇಕೆಂದು ಬಯಸುವ ಬರಹಗಾರರು ಬೇರೆಯವರು ಬರೆದ ಪುಸ್ತಕಗಳನ್ನು ನಾವೂ ಓದಬೇಕು ಎಂಬ ಮನಸ್ಸು ನಮ್ಮಲ್ಲಿ ಕಾಣೆಯಾಗುತಿದೆ. ಇತ್ತೀಚಿನ ದಿನಮಾನಗಳಲ್ಲಿ ಓದುಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಅದರಲ್ಲೂ ತಾನು ಓದಿದ ಪುಸ್ತಕವನ್ನು ಪರಿಚಯ/ವಿಮರ್ಶೆ  ಮಾಡುವುದಕ್ಕೆ ಯಾರಿಗೂ ಸಮಯವಿಲ್ಲಾ, ತನ್ನ ಸಮಯವನ್ನೆಲ್ಲಾ ಈ ಮೊಬೈಲ್ ಎಂಬ ಮಾಯಲೋಕ ಕಸಿದುಬಿಟ್ಟಿದೆ.
ಹಿಂದಿನ ಕಾಲದಲ್ಲಿ ಒಬ್ಬ ಕವಿ ಅಥವಾ ಲೇಖಕ ಬರೆದ ಬರಹವನ್ನು ಹಿರಿಯ ಲೇಖಕರು ಓದುತ್ತಿದ್ದರು. ಆ ಕೃತಿಯು ಹೊಂದಿದ್ದ ಆಶಯವನ್ನು ವಿಮರ್ಶೆಯ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ದಾಖಲಿಸುತ್ತಿದ್ದರು. ಆ ಕೃತಿಯಲ್ಲಿನ ನ್ಯೂನತೆಗಳನ್ನು ಯಾವುದೇ ರಿಯಾಯಿತಿ ನೀಡದೆ ಹೊರಗೆಡವುತ್ತಿದ್ದರು. ಅದಕ್ಕೆ ಕಾರಣ ಆ ಲೇಖಕ ಮುಂದಿನ ಬರಹದಲ್ಲಿ ಆ ನ್ಯೂನತೆಗಳನ್ನು ಸರಿಪಡಿಸಿಕೊಂಡು ತನ್ನ ತಪ್ಪುಗಳನ್ನು ತಿದ್ದಿಕೊಂಡು, ಪ್ರಬುದ್ದತೆಯ ಸಾಹಿತ್ಯದೆಡೆಗೆ ನಡೆಯಲಿ ಎಂಬುದೇ  ವಿಮರ್ಶಕರ ಆಶಯವಾಗಿತ್ತು.
ವಿಮರ್ಶೆಯೆಂದರೆ ಕೃತಿಯು ಬರೆದ ಲೇಖಕನನ್ನೋ ಕೃತಿಯೊಳಗಿನ ಬರಹವನ್ನೋ ಹೊಗಳಿ ಬರೆಯುವುದಲ್ಲ. ಬರಹದೊಳಗಿನ ತಪ್ಪುಗಳನ್ನು ಕಂಡು ಹಿಡಿದು ಮುಂದೆ ಅದೇ ತಪ್ಪುಗಳು ಮುಂದುವರಿಯದಂತೆ ಎಚ್ಚರಿಕೆಯನ್ನು ನೀಡುವುದು. ಆ ಕೃತಿಯೊಳಗಿನ ಒಳ್ಳೆಯ ಸಂದೇಶಗಳನ್ನು ಎತ್ತಿಹಿಡಿದು ಮತ್ತಷ್ಟು ಓದುಗರು ಓದುವಂತೆ ಸಲಹೆ ನೀಡುವುದು. ಆ ಕೃತಿಯಲ್ಲಿನ ಅಂಶಗಳು ಈ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತವೆ ಎಂಬುದನ್ನು  ಓದುಗರ ಮನಕ್ಕೆ ತಲುಪಿಸುವುದನ್ನು ವಿಮರ್ಶೆ ಎನ್ನಬಹುದು. 
ಯಾರದೋ ಮುತುವಜಿ೯ಗೆ ಬಿದ್ದೋ, ಇಲ್ಲ ನನ್ನ ಸಂಬಂಧಿಕರು ಇಲ್ಲ, ನನ್ನ ಸ್ನೇಹಿತರೋ ಎಂದು ತಿಳಿದು ಅವರು ಬರೆದ ಕೃತಿಯನ್ನು ಬರೀ ಹೊಗಳಿಕೆಯ ರೂಪದಲ್ಲಿ ವಿಮರ್ಶೆ ಬರೆದರೆ ಪರಿಚಯ ಮಾಡಿದರೆ ಅದು ವಿಮರ್ಶೆ  ಎನಿಸಿಕೊಳ್ಳುವುದಿಲ್ಲ. ಅದು ಕೃತಿಯ ಮಾರಾಟಕ್ಕೆ  ಜಾಹಿರಾತು ನೀಡಿದಂತೆ ಆಗುತ್ತದೆ.
ವಿಮರ್ಶೆ ಅಂದಾಗ ನನಗೆ ಒಂದು ಘಟನೆ ನೆನಪಾಯಿತು. ನಾನು ಹೊಸದಾಗಿ ಸಾಹಿತ್ಯ ಲೋಕಕ್ಕೆ ಬಂದಿದ್ದೆ. ಒಬ್ಬರು ಕವಯತ್ರಿ ಒಂದು ಕವಿತೆ ಕಳುಹಿಸಿ, ಈ ಕವಿತೆಯ ಬಗ್ಗೆ ನಿಮ್ಮ ವಿಮರ್ಶೆ ಬರೆಯಿರಿ ಅಂದರು. ನಾನು ನನ್ನ ಜ್ಞಾನದ ಮಟ್ಟಿಗೆ ಆ ಕವಿತೆಯೊಳಗಿನ ಲೋಪಗಳನ್ನು ಕಂಡು ಹಿಡಿದು ಹೇಳಿದ್ದೆ. ಆಗ  ಆ ಕವಿತೆ ಬರೆದ ಕವಯತ್ರಿ ನನ್ನ ಪ್ರಶ್ನೆ ಮಾಡಿದರು. ನಿಮಗೆ ವಿಮರ್ಶೆ  ಮಾಡುವುದು ಬರುತ್ತಾ? ನಿಮಗೆ ವಿಮರ್ಶೆ  ಮಾಡುವುದು ಗೊತ್ತಿದ್ದರೆ ಈ ಕವಿತೆಯ ಬಗ್ಗೆ  ನೀವು ಈ ರೀತಿಯಾಗಿ ಬರೆಯುತ್ತಿರಲಿಲ್ಲ ಅಂತ ಕೋಪಿಸಿಕೊಂಡರು. ಆಗ ನಾನು ಅವರಿಗೆ ಹೇಳಿದೆ "ಕವಿತೆ ಬರೆಯುವವರೆಗೆ ಮಾತ್ರ ಅದು ಕವಿಯ ಸ್ವತ್ತು, ಅದು ಹೊರಬಂದ ನಂತರ ಅದು ಓದುಗನ ಸೊತ್ತು ಅಂತ ಹಿರಿಯರು ಹೇಳಿದ್ದಾರೆ. ಪ್ರತಿಯೊಬ್ಬರ ಮನಸ್ಥಿತಿಯೂ ಒಂದೇ ತೆರನಾಗಿ ಇರಲಾರದು. ನಿಮ್ಮ  ಕವಿತೆಯನ್ನು ಓದಿದಾಗ ನನ್ನ ಮನದಲ್ಲಿ ಮೂಡಿದ ಭಾವನೆಗಳನ್ನು ಹೊರಹಾಕಿದ್ದೇನೆ ಅಷ್ಟೇ. ನಿಮ್ಮ ಕವಿತೆಯನ್ನು ಹೊಗಳಿ ಬರೆದಿದ್ದರೆ ಈ ಮಾತು ನೀವು ನನ್ನ ಕೇಳುತ್ತಿರಲಿಲ್ಲ ಅದರೆ ನಾನು ನನ್ನ ಭಾವನೆಗಳನ್ನು ಹೊರಹಾಕಿದ್ದೇನೆ ನೀವು ನನ್ನ ವಿಮರ್ಶೆಯನ್ನು ಒಪ್ಪಬಹುದು ಬಿಡಬಹುದು ಎಂದು ಹೇಳಿದೆ. ಮತ್ತೆಂದು ಅವರು ನನ್ನನ್ನು ವಿಮರ್ಶೆ ಮಾಡಲು ಕೇಳಲಿಲ್ಲ. ಅವರ ಕವಿತೆಯನ್ನು ಹೊಗಳಿ ಬರೆಯದಿದ್ದೆ ನನ್ನ ತಪ್ಪಾಯಿತು ಅನಿಸುತ್ತದೆ. ಬರಹಗಾರನ ಮನಸ್ಥಿತಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಬೆಳೆಯುವ ಗುಣಗಳನ್ನು ಬೆಳೆಸಿಕೊಂಡು ಮುಂದೆ ಸಾಗಬೇಕು. 
ಇತ್ತೀಚೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶ ಕರು ಕಡಿಮೆಯಾಗುತ್ತಿದ್ದಾರೆ. ಕೆಲವರು ಪುಸ್ತಕಗಳ ಪರಿಚಯವನ್ನು ಅಷ್ಟೇ ಮಾಡುತ್ತಿದ್ದಾರೆ. ಪುಸ್ತಕದೊಳಗಿನ ಬರಹದ ಗಟ್ಟಿತನವನ್ನು ಪ್ರಬುದ್ಧತೆಯ ಬರಹದೆಡೆಗೆ ಯುವ ಬರಹಗಾರರಿಗೆ ದಾರಿ ತೋರುವ ಪ್ರಯತ್ನ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿಲ್ಲ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಹಿರಿಯ ಬರಹಗಾರರೆಂದೆ ಗುರುತಿಸಿ ಕೊಂಡಿರುವ 

ಗೊರೂರು ಅನಂತರಾಜು ಹಲವಾರು ಪುಸ್ತಕ ವಿಮರ್ಶೆಯ ಕೃತಿಗಳನ್ನು ಹೊರತಂದು ಇತ್ತೀಚೆಗೆ ಕನ್ನಡ ಸಾಹಿತ್ಯ ವಲಯದಲ್ಲಿ ವಿಮರ್ಶಕರೆಂದೆ ಗುರುತಿಸಿಕೊಂಡಿದ್ದಾರೆ. ಇವರು ಚುಕ್ಕಿಯೊಂದು ನಿಬ್ಬೆರಗಾಗಿ ನಮ್ಮನ್ನೆ ನೋಡುತಿದೆ ಸಖಿ ಎಂಬ ವಿಮರ್ಶಾ ಕೃತಿಯಲ್ಲಿ ತಾವು ಓದಿದಂತಹ ಹಲವಾರು ಕೃತಿಗಳ ಬಗ್ಗೆ ಬಹಳಷ್ಟು ಸೊಗಸಾಗಿ ತಕ೯ಬದ್ದವಾಗಿ ಪ್ರತಿಯೊಂದು ಕೃತಿಯೊಳಗಿನ ಅಂಶಗಳನ್ನು ಆವಲೋಕಿಸುತ್ತಾರೆ.
ಗೊರೂರು ಅನಂತರಾಜು ರವರು ಈ ಕೃತಿಯಲ್ಲಿ ಸುಮಾರು  34 ಕೃತಿಗಳ ಬಗ್ಗೆ  ಬಹು ವಿಸ್ತಾರವಾಗಿ, ಆ ಕೃತಿಗಳ ಲೇಖಕರನ್ನು, ಆ ಕೃತಿಯೊಳಗೆ ತನ್ನ ಮನವನ್ನು ಕಾಡಿದ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಕೃತಿಯಲ್ಲಿನ ಪ್ರತಿಯೊಂದು ವಿಷಯಗಳನ್ನ ವಿವರಿಸುತ್ತಾ ಅದರ ಮೌಲ್ಯವನ್ನು ಹೆಚ್ಚಿಸುತ್ತಾ ಸಾಗುತ್ತಾರೆ.
ಈ ಕೃತಿಗೆ ನನ್ನ  ಅಂತರಂಗದ ಧ್ಯಾನ ಗಜಲ್ ಯೆಂಬ ಗಜಲ್ ಕೃತಿಯೊಳಗಿನ ಒಂದು ಗಜಲ್ ಸಾಲನ್ನು ಈ ವಿಮರ್ಶಾ   ಕೃತಿಗೆ ಹೆಸರನ್ನಾಗಿ ಬಳಸಿಕೊಂಡಿದ್ದು ಖುಷಿಯ ವಿಚಾರ. ಮತ್ತು ನನ್ನ ಗಜಲ್ ಸಾಲು ಚಿರಶಾಶ್ವತವಾಗಿ ಉಳಿಯುವಂತೆ ಮಾಡಿದ ಗೊರೂರು ಅನಂತರಾಜು ರವರಿಗೆ ತುಂಬು ಹೃದಯ ಧನ್ಯವಾದಗಳು.  ಈ ಕೃತಿಯಲ್ಲಿನ ಮೊದಲ ಬರಹ, ನನ್ನ ಮೊದಲ ವಿಮರ್ಶಾ ಕೃತಿಯಾದ ಹಲವು ಪುಸ್ತಕಗಳ ಅವಲೋಕನ ಕೃತಿಯ ಬಗ್ಗೆ ಅವರು ಬರೆದಿರುವ ಸಾಲುಗಳಿದ್ದರೂ ಕೂಡ, ನಾನು ಆ ಸಾಲುಗಳನ್ನು ಉಲ್ಲೇಖಿಸದೇ ಇತರ ಬರಹದ ಕಡೆಗೆ ಸಾಗುವೆ.
 ಟಿ ಶಂಕರಪ್ಪನವರು ಬರೆದಿರುವ ಜೀವನ ನಿರಂತರ ಎಂಬ ಕೃತಿಗೆ "ಹುಚ್ಚು ಕೊಡಿ ಮನಸ್ಸು ಅದು ಹದಿನಾರರ ವಯಸ್ಸು" ಎಂಬ ಶೀರ್ಷಿಕೆಯನ್ನು ಕೊಟ್ಟು ಬರೆದಿರುವಂತಹ ಕಾದಂಬರಿಯ ಪರಿಚಯವನ್ನ ಮಾಡುತ್ತಾ, ಈ ಕಾದಂಬರಿಯು ಪ್ರೀತಿ ಪ್ರೇಮ ತ್ಯಾಗದ ಪ್ರತಿಕವಾಗಿದೆ.  ಈ ಕಥಾನಕದಲ್ಲಿ ಪ್ರೇಮದ ಭಾವನೆಗಳಿಂದ ದೂರವಿದ್ದ ಯುವಕ. ಪ್ರೇಮದ ಮೋಹದ ಜಾಲದಲ್ಲಿ ಸಿಲುಕುತ್ತಾನೆ. ತನ್ನ ಪ್ರೀತಿಯು ಫಲಿಸದೆ ಭಗ್ನ ಪ್ರೇಮಿಯಾಗಿ ನೋವನ್ನು ಅನುಭವಿಸುತ್ತಾನೆ. ಕೊನೆಗೆ ತನ್ನ ಪ್ರೀತಿ ಬಯಸಿ ಬಂದ ಹುಡುಗಿಯನ್ನ ನಿರಾಕರಿಸಿ,  ತನ್ನ ಜಾತಿಯ ಹುಡುಗಿಯನ್ನೇ  ಮದುವೆಯಾಗಿ ತಂದೆ ತಾಯಿಯ  ಆಶಯವನ್ನು ಈಡೇರಿಸುತ್ತಾನೆ. ಈ ಕೃತಿಯು ಜೀವನ ಕ್ಷಣಿಕವಲ್ಲಾ, ಅದೊಂದು ಭಾವನಾತ್ಮಕ ಬದುಕು ಎಂಬುದನ್ನ ನಿರೂಪಿಸುತ್ತದೆ. ಈ  ಕಾದಂಬರಿಯಲ್ಲಿ ಭಾವನಾತ್ಮಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಬದುಕಿನ ವಿವಿಧ ಆಯಾಮಗಳಿವೆ
ಎಂಬುದನ್ನು ಈ ಕೃತಿಯು ಸಾರುತ್ತದೆ ಎಂಬುದನ್ನು ವಿಮರ್ಶಕರು ಬಹಳಷ್ಟು ಸೊಗಸಾಗಿ ಪುಸ್ತಕವನ್ನು ಪರಿಚಯಿಸಿದ್ದಾರೆ.
"ತಲೆ ಸವರಿ ಕಳುಹಿಸಿ ಕೊಟ್ಟಿದ್ದ ಆ ಜೀವಾತ್ಮ ಕೊನೆಯುಸಿರೆಳೆದಿತ್ತು". ಎಂಬ ಶೀರ್ಷಿಕೆಯಲ್ಲಿ ಬರೆದ ಈ ಸಾಲುಗಳು ಸೀತಮ್ಮ ವಿವೇಕ್ ರವರು ಬರೆದ ಮೂರನೇ ಕೃತಿಯಾಗಿದ್ದು, ಇದು ಇವರ ಮೊದಲ ಕವನ ಸಂಕಲನ.  ಲೇಖಕರು ಇತಿಹಾಸ ಸ್ನಾತಕೋತ್ತರ ಪದವಿದರರು ಕ್ರೀಡಾಪಟು ಸಹ ಆಗಿದ್ದರು. ತನ್ನ ಕ್ರೀಡಾಲೋಕದ ಬಗ್ಗೆ ಕವಿತೆಯ ಸಾಲುಗಳನ್ನ  ಈ ಕೃತಿಯಲ್ಲಿ ಹೀಗೆ ಬರೆದುಕೊಂಡಿದ್ದಾರೆ.
 "ಅಂದು ನಾನು ಬೆನ್ನತ್ತಿದ ಕ್ರೀಡೆ ಭಜಿ೯ ಎಸೆತ 
ಇಂದು ನನನ್ನು ಮಾಡಿದೆ ಪ್ರಫುಲ್ಲ ಪುಳಕಿತ" 
ಎಂದು  ಹೇಳಿಕೊಳ್ಳುತ್ತಾರೆ. ನಾನು ಬಾಲ್ಯದಲ್ಲಿ ತೊಡಗಿಸಿಕೊಂಡಿದ್ದ ಕ್ರೀಡೆ, ಇಂದು ನನ್ನ  ಭವಿಷ್ಯವನ್ನು  ಬೆಳಗಿದೆ ಎಂದು ಸಾರುವ ಕೃತಿಯ ಸಾಲುಗಳನ್ನು  ಪರಿಚಯಿಸುತ್ತಾ, ಕೃತಿಯನ್ನು ಓದಿದಾಗ ತನ್ನ  ಮನದಾಳದಲ್ಲಿ ಮೂಡಿದ ಭಾವನೆಗಳನ್ನ ವಿಮರ್ಶಕರಾದ ಗೊರೂರು ಅನಂತರಾಜುರವರು ಓದುಗರ ಮನದಾಳಕ್ಕೆ ತಲುಪಿಸಲು ಪ್ರಯತ್ನಪಟ್ಟಿದ್ದಾರೆ.
ಹೇಮಾವತಿ ತೀರ ಅಕ್ಕಿ ಹೆಬ್ಬಾಳು ಶೀರ್ಷಿಕೆಯಲ್ಲಿ ಬರೆದಂತಹ  ವಿಮರ್ಶೆಯು ಹೇಮಾವತಿ ತೀರದ ಲೇಖಕ ಮಹಮ್ಮದ್ ಅಜುರುದ್ಧಿನ್ ಅವರ ಕೃತಿಯಾಗಿದ್ದು  ಈ ಕೃತಿಯು ಅಕ್ಕಿ ಹೆಬ್ಬಾಳು ನಾಲೆಯ ಬಗ್ಗೆ, ಆ ಪ್ರದೇಶದ ಸಾಂಸ್ಕೃತಿಕ ಲೋಕದ ಬಗ್ಗೆ, ಆ ಪ್ರದೇಶದಲ್ಲಿರುವ  ದೇವಸ್ಥಾನಗಳು, ಧಾಮಿ೯ಕತೆಯ ರೀತಿ ನೀತಿಯ ಬಗ್ಗೆ ಇರುವ ಇತಿಹಾಸವನ್ನು ಸಾರುವ ಕೃತಿಯಾಗಿದೆಯೆಂದು ಸೊಗಸಾಗಿ ವಿಮರ್ಶಿಸಿದ್ದಾರೆ ವಿಮರ್ಶಕರು.
 ನಂತರದಲ್ಲಿ "ಇಪ್ಪತ್ತೆಂಟು ಹಳ್ಳಿಗಳ ಕತ್ತರಿಘಟ್ಟ ಹರಿಸೇವೆ" ಎಂಬ ಶೀರ್ಷಿಕೆಯಲ್ಲಿ ಬರೆದ ವಿಮರ್ಶೆಯು ಹಾಸನ ಜಿಲ್ಲೆಯ ಪಂಡಿತ ಸ್ವಾಮಿಗೌಡರ ಧಾರ್ಮಿಕ ವಿಚಾರಗಳನ್ನ ಪ್ರಸ್ತುತಪಡಿಸುವಂತಹ ಕೃತಿಯಾಗಿದ್ದು ಸ್ವಾಮಿಯ ಅಥವಾ ವೆಂಕಟೇಶ್ವರನ ಭಕ್ತಿ ಪೂಜೆಗಳು, ಅವನ ಮಹಿಮೆ ಮತ್ತು ದೇವಸ್ಥಾನದಲ್ಲಿ ತಾಮ್ರದ ಕಳಸದ ಪ್ರತಿಷ್ಠಾಪನೆ ಮುಂತಾದ ವಿಷಯಗಳ ಮೇಲೆ ಈ ಕೃತಿಯು ಬೆಳಕು ಚೆಲ್ಲುತ್ತದೆ.
 "ಡಾ ಮಳಲಿ ವಸಂತಕುಮಾರ್ -ನಾಡಪ್ರಭು ಕೆಂಪೇಗೌಡ" ಶೀರ್ಷಿಕೆಯಲ್ಲಿ ಬರೆದ ಬರಹದಲ್ಲಿ ಬೆಂಗಳೂರನ್ನು ಕಟ್ಟಿ ಬೆಳೆಸಿದ ಕರುನಾಡಿನ ಪ್ರಭು ಕೆಂಪೇಗೌಡರ ಆಳ್ವಿಕೆಯಲ್ಲಿ ನಾಡಿನ ಜನರಿಗೆ ಜೀವನದ ಪರಿಸ್ಥಿತಿ, ಆಡಳಿತದ ರೀತಿ
ನೀತಿಗಳನ್ನು, ಕೆಂಪೇಗೌಡನ ಆಳ್ವಿಕೆಯಲ್ಲಿ ಇದ್ದ ಬೆಂಗಳೂರಿನ ಅಕ್ಕಪಕ್ಕದ ಇತರ ಪ್ರದೇಶಗಳು, ಮಾಗಡಿ ರಾಜವಂಶದ ರಾಜರುಗಳು ಅಳ್ವಿಕೆಯ ಮೇಲೆ ಈ ಕೃತಿಯು ಬೆಳಕು ಚೆಲ್ಲುತ್ತಿದ್ದು ಈ ಕೃತಿಯಲ್ಲಿ ಕೆಂಪೇಗೌಡರ ಇತಿಹಾಸದ ಚರಿತ್ರೆಯನ್ನು ತಮ್ಮ ಕೃತಿ ಪರಿಚಯ ವಿಷಯದಲ್ಲಿ ಗೊರೂರು ಅನಂತರಾಜು ರವರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
 ನಂತರದಲ್ಲಿ ಬರುವ ಕನಕದಾಸರ ಭಾವಧಾರಿತ ಬರಹವು ದಾಸ ಪರಂಪರೆ ಮತ್ತು ಕನಕದಾಸರ ಖಂಡೋಕ್ತಿಗಳನ್ನು ತಿಳಿಸಿದರೆ, ಡಿ ಆರ್. ನಾಯ್ಕ ಕುಮಟದ ಹೊಳೆಗದ್ದೆಯವರು ಬರೆದಿರುವ ಪಾಟಿ ಚೀಲ ಮಕ್ಕಳ ಕವಿತೆಗಳು ಕೃತಿಯು ಬಾಲ್ಯದ ದಿನಗಳ ಪುಸ್ತಕಗಳಲ್ಲಿ ಓದುತ್ತಿದ್ದ ಕವಿತೆಗಳು ನೆನಪಾಗುತ್ತವೆ. ಈ ಕೃತಿಯಲ್ಲಿರುವ ಸಾಲುಗಳು ಮಕ್ಕಳ ಮನದಲ್ಲಿ ಉಳಿಯುವ ಕವಿತೆಗಳಾಗಿವೆ ಎನ್ನುತ್ತಾರೆ ವಿಮರ್ಶಕರು.
ನಗೆಯ ಲೇಪನ ಅಪ್ಪ-ಮಗ ಹ್ಯಾಗ್ ಸತ್ತ" ಇದೊಂದು ಹಾಸ್ಯ ಪೇರಿತವಾದ ನಾಟಕ ಕೃತಿಯಾಗಿದ್ದು ಇದರಲ್ಲಿ ಬರುವ ಸಂಭಾಷಣೆಯು ಮೂರು ಪಾತ್ರಗಳಲ್ಲಿ ನಾಟಕವನ್ನು ಆವರಿಸಿಕೊಂಡಿದೆ. ಹಾಸ್ಯ ರಸಾಯನ ದೃಶ್ಯಗಳು ಚಂದವಾಗಿ ಈ ಕೃತಿಯಲ್ಲಿ ನಿರೂಪಿತವಾಗಿವೆ. ಕನ್ನಡ ಇಂಗ್ಲಿಷ್ ಭಾಷಾ ಮಿಶ್ರಣದಲ್ಲಿ ನಗೆ ಉಕ್ಕಿಸುವ ಪ್ರಯತ್ನವಿದೆಯೆಂದು ಸುಂದರವಾಗಿ ವಿವರಿಸುತ್ತಾ ಸಾಗುತ್ತಾರೆ ಲೇಖಕರು.
 "ಪ್ರಜಾಮುಖಿಯೊಂದಿಗೆ ಮುಖಾಮುಖಿ ಶೀರ್ಷಿಕೆ
ಯಲ್ಲಿ  ಬರೆದ ಈ ಕೃತಿಯು ಒಂದು ಸಂಪಾದಿತ ಕೃತಿಯಾಗಿದೆ. ಇದರ ಸಂಪಾದಕರು Ramesh ಸುವೇ೯ ಕನ್ನಡ  ಸಂಘಟಕರಾಗಿದ್ದು  ಅವರು ನಡೆಸಿದ ಕಾರ್ಯಕ್ರಮಗಳಲ್ಲಿ ನಡೆದ ಕವಿಗೋಷ್ಠಿ ಮತ್ತು ಹಲವು ಚುಟುಕು ಪದ್ಯಗಳು ಈ ಕೃತಿಯಲ್ಲಿ ಇದ್ದು ಓದುಗರ ಮನವನ್ನ ಸೆಳೆಯುತ್ತವೆ.
"ಎಕ್ಸ್ ಪ್ಲೆಸಿಸ್ ಪದ್ಯಗಳ ಕಾವ್ಯ" ಮೈಸೂರಿನ ಜಿ.ರಾಮೇಗೌಡರು ವಾಟ್ಸಪ್ ಚಿತ್ರಗಳಿಗೆ ಕಾವ್ಯ ರಚಿಸಿ ಸೃಷ್ಟಿ ಸಂದೇಶಕ್ಕೆ ಅಕ್ಷರಗಳ ರೂಪವನ್ನ ಕೊಟ್ಟ ನೂರ ಅರವತ್ತು ನಾಲ್ಕು  ದೃಶ್ಯ ಕಾವ್ಯಗಳು ಈ ಸಂಕಲನದಲ್ಲಿ  ಪ್ರಕಟವಾಗಿದೆ.
 "ನಿಂತು ಹೋದ ರಂಗಭೂಮಿ ಪತ್ರಿಕೆಯ ಲೇಖನ ಸಂಗ್ರಹ"  ಬರಹದಲ್ಲಿ ರಂಗಭೂಮಿ ಕಲಾವಿದರು ಸಲ್ಲಿಸಿದ ಸೇವೆ, ಹಲವಾರು ಮಹನೀಯರ ವ್ಯಕ್ತಿ ಚಿತ್ರಣ ಚಿತ್ರಿತವಾಗಿ ಅವರ ಪರಿಚಯವನ್ನು ಈ ಕೃತಿಯು ಹೊರ ಜಗತ್ತಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
" ಕಾಡು ಪ್ರೀತಿಯ ಗುಬ್ಬಚ್ಚಿ ಗೂಡು" ಚೆನ್ನರಾಯಪಟ್ಟಣದ ಎ.ಜಿ. ರಾಜು ಬರೆದ ಈ ಕಾದಂಬರಿಯು ಪ್ರಕೃತಿ ಮಾತೆಯ ಮೇಲೆ ಮನುಜ ನಿರಂತರವಾಗಿ ನಡೆಸುತ್ತಿರುವ ದೌರ್ಜನ್ಯಕ್ಕೆ ಆ ಪ್ರಕೃತಿ ಮಾತೆಯು ಮುನಿದು ಪ್ರಸ್ತುತ ಭೂಮಿಯ ಮೇಲೆ ಆವಘಡಗಳು ಅನಾಹುತಗಳು ಸಂಭವಿಸುತ್ತವೆ ಎಂದು ತಿಳಿಸುತ್ತಾ ಒಂದು ಸಂದೇಶವನ್ನು ನೀಡುತ್ತಾರೆ. ಒಂದು ಮರವನ್ನ ಕಡಿದರೆ ಆ ಕಡಿದ ಮರಕ್ಕೆ ಪ್ರತಿಯಾಗಿ ಒಂದು ಗಿಡವನ್ನು ಬೆಳೆಸುವ ಸಂದೇಶ. ಮುಂದಿನ ಮಕ್ಕಳಿಗೂ ಪ್ರಕೃತಿ ಮಾತೆ ನೆರವಾಗಲಿ ಎಂಬ ಆಶಯವನ್ನು ಲೇಖಕರು ವಿವರಿಸಿದ್ದಾರೆ
"ಯುವಕವಿಗಳ ಭಾವಾಭಿವ್ಯಕ್ತಿ ಕಾವ್ಯದೀವಿಗೆ" ಈ ಶೀರ್ಷಿಕೆಯಲ್ಲಿ ಬರೆದ ಕವನ ಸಂಕಲನದ ಕೃತಿಯಲ್ಲಿ ಸುಮಾರು 62 ಹೊಸ ತಲೆಮಾರಿನ ಕವಿಗಳ ಕವಿತೆಗಳು ಈ ಸಂಕಲನದಲ್ಲಿದೆ. ಈ ಕವಿತೆಗಳಲ್ಲಿ   ಮೈಮನಗಳ ತುಮುಲುಗಳಿಂದ ಹಿಡಿದು ಸಮಕಾಲಿನ ಸಾಮಾಜಿಕ, ರಾಜಕೀಯ ವಿದ್ಯಮಾನಗಳ ಮೇಲೆ ಬೆಳಕು ಚೆಲ್ಲುತ್ತಾ, ಓದುಗರನ್ನು ಭಾವ ಜಗತ್ತಿನ ನೋಡುವಂತೆ ಮಾಡಿಸುತ್ತವೆ ಎಂದು ಪುಸ್ತಕ ಪರಿಚಯಿಸಿದ್ದಾರೆ ಲೇಖಕರು.
" ಗುರುಗಳಿರಲಿ.. ನಮಿಸು ಕಂದಾ ನಗುತಲಿ"  ಎಂಬ ಶೀರ್ಷಿಕೆಯಲ್ಲಿ  ಬರೆದ ಬರಹವು ಶ್ರೀಮತಿ ಸುಶೀಲ ಸೋಮಶೇಖರ್ ರವರ ವಚನಗಳ ಸಮುಚ್ಚಯವಾಗಿದ್ದು,  ಮಕ್ಕಳು ಓದಲು ಸುಲಭವಾದ ಪದ್ಯಗಳಿವೆ ಈ ಕೃತಿಯಲ್ಲಿ..ಈ ವಚನ ಸಂಕಲನದಲ್ಲಿ ವಚನಗಳಿಗೆ ತಕ್ಕ ರೇಖಾ ಚಿತ್ರಗಳು ಕೂಡ ಕೂಡ ಓದುಗರ ಗಮನ ಸೆಳೆಯುತ್ತವೆ ಎಂದು ಹೇಳುತ್ತಾರೆ.
 ಚುಕ್ಕಿಯೊಂದು ನಿಬ್ಬೆರಗಾಗಿ ನಮ್ಮನ್ನೇ ನೋಡುತಿದೆ..ಎಂಬ ವಿಮರ್ಶಾ ಕೃತಿಯಲ್ಲಿನ ಎಲ್ಲಾ ಬರಹಗಳನ್ನು ಪರಿಚಯ ಮಾಡುತ್ತಾ ಹೋದಂತೆ ಓದುಗನಲ್ಲಿ ಮುಂದೆ ಓದಲು ನಿರಾಸಕ್ತಿ ಮೂಡಬಹುದು ಎಂಬ ಭಾವನೆಯಿಂದ ಸರಳಿಕರಿಸುತ್ತಾ "ಬದುಕು ಚಕ್ಕಡಿ ಬಾಳ್ವೆ ತಕ್ಕಡಿ" ಬರಹ ಎ. ಸಿ. ರಾಜಪ್ಪನವರ ಕವನ ಸಂಕಲನವಾಗಿದೆ. "ಹಳ್ಳಿಯ ಬದುಕಿನ ನೈಜ ಚಿತ್ರ, ಮುದುಕಿಗೂ ಮುದುಕನಿಗೂ ಎಲ್ಲೆಲ್ಲಿ ಮಾತಾಯಿತು, ಒಬ್ಬರೊಬ್ಬರು ಹಾರಬಲ್ಲೆವು, ಶಾಸಕರ ಕೃಷಿ ಕಾಯಕವೆಂಬ ಬರಹ, ಅನುಭವಸಾರ ಬಣ್ಣದ ಬದುಕು ಯಾಕೂಬ  ರಂಗಕಲಾವಿದರ ರಂಗಭೂಮಿ ರಂಗಾಂತರಂಗ ಡಾಕ್ಟರ್ ಪ್ರದೀಪ್ ಕುಮಾರ್ ಹೆಬ್ರಿ ಮಂಡ್ಯ,  ಕಾಲ ಕಾಲವನ್ನೇ ನುಂಗಿ ಹಾಕುತ್ತದೆ ಹೊಟ್ಟೆ ಪಾಡಿದ maraket ನಲ್ಲಿ ಸುಳ್ಳಿನ ಮಾರಾಟ, ವಾಚಕರ ಕಲ್ಪನೆ ಸದಾ ಎಚ್ಚೆತ್ತಿರಬೇಕು ಗ್ರಂಥಾಲಯ..ಬಾ.ನಂ ಲೋಕೇಶ್,  ದೇಶ ಭಾವಗಳ ಆತ್ಮಾಭಿಮಾನ ಮಾನವ ಜನ್ಮ ದೊಡ್ಡದು, ನಗುವಿನ ಚಿತ್ತಾರ- ಸನ್ಮಾನ  ಪ್ರಶಸ್ತಿ ಪರಂತು, ಕಾವೇರಿಯ ಹರಿವು ಅರಿವು-- ಸಂಗಮ. ಮುಂತಾದ ಶೀರ್ಷಿಕೆಯಲ್ಲಿ ಬರೆದ ವಿಮರ್ಶಾತ್ಮಕ ಲೇಖನಗಳು ಓದುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.
 "ಸಾಧಕರ ಸೇವೆಯ ಹಾದಿಯಲಿ" ಎಂಬ ಕೃತಿಯು ಗೊರೂರು ಅನಂತರಾಜು ಬರೆದಿದ್ದಾರೆ. ಈ ಕೃತಿಯನ್ನು ಶಿಕ್ಷಕರು ಶ್ರೀಮತಿ ಸಾವಿತ್ರಮ್ಮ  ಓಂಕಾರ್ ಬರೆದಿದ್ದು ಈ ಕೃತಿಯು ಅನಂತರಾಜುರವರ ಐವತ್ತನೇ ಕೃತಿಯಾಗಿದ್ದು ಈ ಕೃತಿಯಲ್ಲಿ ಹಲವು ಲೇಖಕರು ಸಾಧಕರನ್ನ ಲೇಖಕರು ಪರಿಚಯ ಮಾಡಿದ್ದಾರೆ ಎಂದು ಸಾವಿತ್ರಮ್ಮ ಓಂಕಾರ್ ರವರು ಈ ಕೃತಿಗೆ ಸೊಗಸಾಗಿ ವಿಮರ್ಶೆ  ಬರೆದಿದ್ದಾರೆ.
" ಹುಟ್ಟಿದವನಿಗೂ ಅಥ೯ವಾಗದ ಕವಿತೆಗಳು ನಿದ್ರೆಗೆ ಜಾರಿವೆ" ಶೀರ್ಷಿಕೆಯಲ್ಲಿ ಬರೆದ ಪುಸ್ತಕ ಪರಿಚಯವು ಹಿರಿಯ ಕವಿ ಸಂಗಾತಿ ಪತ್ರಿಕೆಯ ಸಂಪಾದಕರಾದ ಕು. ಸ. ಮಧುಸೂದನ್ ರವರ ಕವಿತೆಗಳನ್ನು ಅಥ೯ಪೂಣ೯ವಾಗಿ ವಿಶ್ಲೇಷಣಾತ್ಮಕವಾಗಿ ಬರೆದಿದ್ದಾರೆ.  ಕು. ಸ.  ಮಧುಸೂದನ್ ರವರ ಕವಿತೆಗಳು ವಿಶಿಷ್ಟವಾಗಿರುತ್ತದೆ. ನಾನು ಕೂಡ ಅವರ ಕವಿತೆಗಳ ಅಭಿಮಾನಿಯಾಗಿದ್ದೆ. ಗೊರೂರು ಅನಂತರಾಜು ಅವರ ಕವಿತೆಗಳ ಮಾಧುರ್ಯತೆಯನ್ನು ಸೊಗಸಾಗಿ ವಿವರಿಸಿದ್ದಾರೆ. ಕು.ಸ.ಮಧುಸೂದನ್ ರವರ ಒಂದು  ಕವಿತೆಯನ್ನು ನೋಡುವುದಾದರೆ 
ನನ್ನ ಕಡು ಪಾಪದ ಕವಿತೆಗಳೂ
 ನಿನ್ನ ಪ್ರಖರ ಪುಣ್ಯದ ಕವಿತೆಗಳೂ
 ಒಂದಾದ ದಿನ ಹುಟ್ಟಿದ ಹೊಸ ಕವಿತೆ 
ಕವಿತೆ ಅಂತಲೇ ಹೆಸರಿಡೋಣವೆ ?
ಗೊರೂರು ಅನಂತರಾಜು ಹಿರಿಯ ಲೇಖಕರಾದರೂ ಕೂಡ ಹೊಸದಾಗಿ ಕನ್ನಡ ಸಾಹಿತ್ಯ ಲೋಕವನ್ನು ಪ್ರವೇಶಿಸಿರುವ ಯುವ ಪ್ರತಿಭೆಗಳನ್ನು ಪರಿಚಯ ಮಾಡುತ್ತಾ, ಅವರ ಪುಸ್ತಕಗಳನ್ನು ಓದಿ ವಿಮರ್ಶೆ  ಮಾಡುತ್ತಾ, ತಾನು ಬರೆದ ವಿಮರ್ಶೆಗಳನ್ನು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾ ಪ್ರೋತ್ಸಾಹ ನೀಡುವ ಪರಿಯು ಮೆಚ್ಚುವಂತದ್ದು ಮತ್ತು ಆಭಿನಂದನಾಹ೯ವಾಗಿದೆ.
ನನ್ನಂತಹ ಕಿರಿಯ ಬರಹಗಾರನಿಗೂ ತಮ್ಮ ಕೃತಿಗೆ ಬರೆಯಲು ಅವಕಾಶ ಕೊಟ್ಟಿರುವ ಗೊರೂರು ಅನಂತರಾಜುರವರಿಗೆ ನಾನು ಧನ್ಯವಾದಗಳು ಸಲ್ಲಿಸಲೇಬೇಕು. ಇದು ನನ್ನ ಮೊದಲ ಮುನ್ನುಡಿ, ನನಗೆ ಬದುಕಿನ ಕೊನೆಯಗಾಲದವರೆಗೂ ನೆನಪಿನಲ್ಲಿ ಉಳಿಯುವಂಥದ್ದು. ಅಂತಹ ಒಂದು ಸದಾವಕಾಶವನ್ನು ಕೊಟ್ಟ ಲೇಖಕರಿಗೆ ನನ್ನ ತುಂಬು ಹೃದಯದ ಧನ್ಯವಾದ ತಿಳಿಸುತ್ತಾ ಇವರು ಇನ್ನಷ್ಟು ಕೃತಿಗಳನ್ನು ಹೊರ ತರಲಿ ಇವರಿಗೆ ಕರುನಾಡಿನಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಹಾರೈಸುತ್ತಾ, ನನ್ನ ತೊದಲು ನುಡಿಯ ಸಾಲುಗಳಿಗೆ ವಿರಾಮ ಕೊಡುತ್ತಿದ್ದೇನೆ.


- ನಾರಾಯಣಸ್ವಾಮಿ (ನಾನಿ)
ಬಂಡಹಟ್ಟಿ, ಮಾಸ್ತಿ 
ಮಾಲೂರು ತಾಲ್ಲೂಕು ಕೋಲಾರ ಜಿಲ್ಲೆ 
ಮೊಬೈಲ್ : ೯೮೮೦೯೩೨೯೭೨:

ಬೆಳಗು (ಕವಿತೆ) - ಮಾಲತಿ ಮೇಲ್ಕೋಟೆ.

ನಸುಕನ್ನು ಸರಿಸುತ್ತ ರವಿಯು ಮೂಡುತಲಿರಲು
ಮೂಡಣದ ಆಗಸದಿ ರಂಗು ತುಂಬಿರಲು
ಅನುಪಮ ಚೆಲುವಿನಲಿ ಪ್ರಕೃತಿ ಮೀಯುತಲಿರಲು
ಅರುಣ ಕಾಂತಿಯ ರಂಗು ಕಣ್ತುಂಬುತಿರಲು

ಇಬ್ಬನಿಯ ಸಾಲು ಹಸಿರು ಹುಲ್ಲಿನ ಮೇಲೆ
ಕಿರಣದಲಿ ಹೊಳೆಯುತಿದೆ ಮುತ್ತಿನಾ ಮಾಲೆ
ಅಚ್ಚರಿಯ ಮೊಗದಲ್ಲಿ ಸೂಸುತ್ತ ಬಾಲೆ
ಎಣಿಸಿಹಳು ಏನಿದುವು ಪ್ರಕೃತಿಯಾ ಲೀಲೆ

ಚೇತನವ ಪಡೆದಿರಲು ಜೀವಸಂಕುಲವು
ಮೂಡುತಿದೆ ಮತ್ತೊಂದು ಹೊಸತು ದಿನವು
ಹಕ್ಕಿಗಳ ಚಿಲಿಪಿಲಿಯ ಸಂಭ್ರಮೋತ್ಸವವು
ಪಸರಿಸಿದೆ ಸಂಪಿಗೆಯ ಹೂವ ಪರಿಮಳವು

ಇಕ್ಕೆಲದಿ ನೆಳಲೀವ ಹಸಿರು ಮರಗಳ ಸಾಲು
ಎಲೆಗಳಾ ನಡುವಲ್ಲಿ ತೂರಿ ಬಿಸಿಲಿನ ಕೋಲು
ಪ್ರೀತಿಯಲಿ ಇಳೆಯನ್ನು ಮುತ್ತಿಡುತಲಿರಲು
ಭೂರಮಣಿ ಮೊಗದಲ್ಲಿ ಸಂತಸದ ಹೊನಲು

- ಮಾಲತಿ ಮೇಲ್ಕೋಟೆ.

ನಾನು ನನ್ನ ಕವನಗಳು (ಕವಿತೆ) - ವಿ.ಎಂ.ಎಸ್. ಗೋಪಿ, ಬೆಂಗಳೂರು.

ನಾ ಬರೆಯುವೆ ಕವನ 
ಬಿಳಿ ಹಾಳೆಯಲ್ಲಿ ಮೊದಲ ಲೇಖನ 
ಏನೇನು ತಿಳಿಯದೇ ಬರೆದ ಅಕ್ಷರಗಳು 
 ಅರ್ಥಪೂರ್ಣವಾಗದ ಪದಗಳು 
ಎಷ್ಟೊಂದು ಬಿಳಿ ಹಾಳೆಗಳು 
ಎಷ್ಟು ಸಾವಿರ ಅಕ್ಷರಗಳು 
ಮುಸ್ಸಂಜೆಯಾದರು ನಾ ಬರೆಯಲಿಲ್ಲ ಕವನಗಳು 
ರಾತ್ರಿ ನಿದ್ದೆಯಲ್ಲೂ ಬರೆಯಲಿಲ್ಲ ಕನಸಿನ ಕವಿತೆಗಳು 
ದಿನ ದಿನಗಳು ಕಳೆದರು ನಾ ಬರೆಯಲ್ಲಿಲ ಕವನಗಳು 
  ಆದರು ನಾ ಬಿಡಲಿಲ್ಲ ಕವನ ಬರೆಯುವದನ್ನು 
ಸಲ್ಪ ದಿನಗಳು ಅನಂತರ ಬರೆದಿದೆ ಕವನಗಳು 
ನಾನು ನನ್ನ ಕವನಗಳು 
ಬಿಳಿ ಹಾಳೆಯಲ್ಲಿ ಬರೆದಿಟ್ಟ ಕವನಗಳು 
ಬೀಸು ಗಾಳಿಯಲ್ಲಿ ಹಾರಿ ಹೋದ ಬಿಳಿ ಹಾಳೆಗಳು 
ಕೇಸರು ಮಣ್ಣು ಆದ ಬಿಳಿಹಾಳೆಗಳು 
ಅಕ್ಷರಗಳು ಕಾಣ್ಣದ ಹಾಳೆಯ ಬಣ್ಣಗಳು   
ಮನೆ ದೇವರಿಗೆ ಬರೆದೆ ಓಂಕಾರ 
ಬಣ್ಣ ಬಣ್ಣಗಳ ಹೂಗಳಿಗೆ ಜೈಕಾರ 
ಪೀತ್ರಿಸುವ ಹೃದಯಗಳಿಗೆ ಪ್ರೇಮಕಾರ
ನನ್ನ ಕವನಕ್ಕೆ ಸಿಕ್ಕಿತು ಜೈಕಾರ.

- ವಿ.ಎಂ.ಎಸ್. ಗೋಪಿ, ಬೆಂಗಳೂರು.

ಪುಸ್ತಕ ವಿಮಾನ(ಕವಿತೆ) - ಜೀನಮ್, ಮಲ್ಲಾಡಿಹಳ್ಳಿ.

ಕನಸೊಂದು ಹಾರಲು ಕಣ್ ರೆಪ್ಪೆಗಳ ಕಟ್ಟಿ
ನನಸಾಗಿಸೆ ಹಿಂತಿರುಗುವೆ ರೆಕ್ಕೆಗಳ ಕಟ್ಟಿ
ರೆಪ್ಪೆಗಳಿಲ್ಲದೆ ಬಾರದು ನಿದ್ರೆ ಕಂಗಳಿಗೆ 
ರೆಕ್ಕೆಗಳಿಲ್ಲದೆ ಹಾರಲಾಗದು ಕನಸುಗಳಿಗೆ

ಆಶ್ವಾಸನೆಯೊಂದು ಮಾಯಾವಿ ಕಡ್ಡಿಯಲಿ
ಹಾರು ನೀನೆಂದು ಲೇಖನಿಯ ತೆಕ್ಕೆಗಳಲಿ
ಪಡೆಯಲಿ ಹೇಗೆಂದು ಕಾಣದ ರೆಕ್ಕೆಗಳ
ಚಿಂತಿಸುತ ದಣಿಸಿದೆ ಈ ಕಣ್ಣ ರೆಪ್ಪೆಗಳ 

ಮಿಂಚಿ ಉರುಳಲು ಮಾಯಾವಿ ಕಡ್ಡಿಯೊಂದು
ಚಕಿತನಾದೆ ಚಿಂತಿಸುತ ಮಂತ್ರಿಸಲಿ ಹೇಗೆಂದು
ಪ್ರಕಾಶಮಾನದಿ ನನ್ನೆಡೆಗೆ ಹಾರಿತ್ತು ಬಿಳುಪೊಂದು
ಬರಿ ಕಾಗದವೇ ಇದು ಪಠಿಸಲಿ ನಾ ಇದಕೇನೆಂದು

ಮಸ್ತಕದಿ ಮಂತ್ರವೊಂದು ಲೇಖನಿಗೆ ನುಡಿದಿತ್ತು
ಬರಿ ಕಾಗದವು ಭರವಸೆಯ ಬೆಳಕನ್ನು ಕಂಡಿತ್ತು
ಲೇಖನಿಯ ಸಾಗಿತ್ತು ಮಸ್ತಕವ ಹಿಂಬಾಲಿಸಿ
ಗದ್ಯ ಪದ್ಯಗಳ ರಾಶಿಯೊಂದು ಪುಸ್ತಕವ ರಚಿಸಿ

ಬರಿ ಕಾಗದಕ್ಕೀಗ ಪುಸ್ತಕದ ಯುಕ್ತಿಯು
ಪಡೆದಂತೆ ಅದ್ಭುತ ರೆಕ್ಕೆಗಳ ಶಕ್ತಿಯು
ಬೇರೆ ಏನಿಲ್ಲ ಲೋಕದಲಿ ಜ್ಞಾನಕ್ಕೆ ಸಮಾನ
ಜ್ಞಾನವಿದ್ದರೆ ಮಾತ್ರ ಏರುವೆ ಪುಸ್ತಕ ವಿಮಾನ

  - ಜೀನಮ್, ಮಲ್ಲಾಡಿಹಳ್ಳಿ.

ಬದುಕಿ ಬಾಳಿರಿ (ಕವಿತೆ) - ಶ್ರೀ ಮುತ್ತು ಯ ವಡ್ಡರ.

ಬದುಕಿ ಬಾಳಿರಿ ಹೆತ್ತವರ ನೆರಳಲಿ
ಬೆಳೆದು ದೊಡ್ಡವರಾಗಿ ಹಿರಿಯರ ಆಶೀರ್ವಾದದಲಿ
ನಲಿದು ಆಡಿರಿ ಬಾಲ್ಯದ ಗೆಳೆಯರ ಒಡನಾಟದಲಿ
ಪ್ರತಿ ಹೆಜ್ಜೆ ಇಡಿ ಗುರುಗಳ ಮಾರ್ಗದರ್ಶನದಲಿ

ತಂದೆ ಬೈದನೆಂದರೆ ಅದು ಜವಾಬ್ದಾರಿಗಾಗಿ
ತಾಯಿ ಕೋಪದಿ ಮಾತನಾಡಿದರೆ ಅದು ಬದುಕಿಗಾಗಿ
ಗುರು ಶಿಕ್ಷಿಸಿದನೆಂದರೆ ಅದು ಶಿಕ್ಷಣಕ್ಕಾಗಿ
ಗೆಳೆಯ ಮಾತುಬಿಟ್ಟರೆ ಅದು ತಪ್ಪಿನ ಅರಿವಿಗಾಗಿ

ಸಹೋದರನ ಹೆಗಲಿಗೆ ಹೆಗಲು ಕೊಡುವವನಾಗು
ಸಹೋದರಿಯ ಬದುಕಿನ ರಕ್ಷಣೆಗೆ ಕಾವಲುಗಾರನಾಗು
ಮಕ್ಕಳು ಪೂಜಿಸುವ ತಂದೆ ನೀನಾಗು
ಸಂಬಂಧಿಕರು ಸಂಬಂಧ ಕಳೆದುಕೊಳ್ಳದ ಬಂಧುವಾಗು

ಹಿರಿಯರಿರಲಿ ಕಿರಿಯರಿರಲಿ ಮಾತು ನಯವಾಗಿರಲಿ
ನಿನ್ನವರಿರಲಿ ಇರದಿರಲಿ ವ್ಯಕ್ತಿತ್ವ ಬದಲಾಗದಿರಲಿ
ಯಾರಿರಲಿ ಇರದಿರಲಿ ಎಲ್ಲೆಲ್ಲಿಯೂ ನಿನ್ನ ಹೆಸರೇ ಅಜರಾಮರವಾಗಿರಲಿ
ಬದುಕಿರಲಿ ಸತ್ತಿರಲಿ ನಮ್ಮ ಹೆಸರಿಗೆ ಒಂದು ಗೌರವವಿರಲಿ

- ಶ್ರೀ ಮುತ್ತು. ಯ. ವಡ್ಡರ
 ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
Mob-9845568484

ಗುರುವಾರ, ಫೆಬ್ರವರಿ 1, 2024

ಗಣರಾಜ್ಯೋತ್ಸವ (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಬಂದಿದೆ ಜನವರಿ ಇಪ್ಪತ್ತಾರು 
ಎಳೆಯೋಣ ಗಣರಾಜ್ಯೋತ್ಸವದ ತೇರು
ಸಂವಿಧಾನ ಜಾರಿಗೆ ಬಂದ ದಿನ
ಭಾರತದ ಇತಿಹಾಸದ ಚಾರಿತ್ರಿಕ ಕ್ಷಣ

ವಿವಿಧತೆಯಲ್ಲಿ ಏಕತೆ ಸಾರುವ ದಿನ
ಎಷ್ಟೇ ಜಾತಿ, ಮತ ,ಪಂಥಗಳಿದ್ದರು 
ಎಲ್ಲರೂ ಸಮಾನರು ಎನ್ನುವ ಸಂವಿಧಾನ 
ಕೇಸರಿ ಬಿಳಿ ಹಸಿರಿನಿಂದ ಕಂಗೊಳಿಸುವ ಧ್ವಜಾರೋಹಣ 
ಜಗಕೆ ಸಾರುವುದು ನಮ್ಮಯ ಸರ್ವಭೌಮತ್ವವನ್ನ  

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಂದೇ ಮಾತರಂ ಜಯ ಘೋಷ
ತಾಯಿ ಭಾರತಾಂಬೆಗೆ ಅದುವೇ ಹರುಷ
ದೇಶಕ್ಕಾಗಿ ಶೌರ್ಯ ಮೆರೆದವರ ಸ್ಮರಣೆ ದಿನ 
ಮೀಸಲಿಡೋಣ ದೇಶಕ್ಕಾಗಿ ನಮ್ಮ ತನುಮನ 

ಸ್ತಬ್ಧಚಿತ್ರ ,ಪರೇಡ್ಗಳ  ನೋಟ ಆಕರ್ಷಣ
ಯುದ್ಧ ವಿಮಾನ ಕ್ಷಿಪಣಿಗಳ ಶಕ್ತಿ ಪ್ರದರ್ಶನ 
ನಾಡು ನುಡಿಯ ವೈಭವದ ಅನಾವರಣ
ನಾವು ಭಾರತೀಯರೆಂಬುದೇ ನಮ್ಮ ಗುಣ

ಗಂಗೆ,ತುಂಗೆ,ಕಾವೇರಿ ಹರಿವ 
ನಾಡು
ಎಲ್ಲರೂ ಒಂದೇ ಎನ್ನುವ ಶಾಂತಿಯ ಬೀಡು 
ಸರ್ವಧರ್ಮ ಸಮನ್ವಯದ ಐಕ್ಯತೆಯ ಗೂಡು 
ತಾಯಿ ಭಾರತಾಂಬೆಯೆ ಮತ್ತೊಮ್ಮೆ ಇಲ್ಲಿಯೇ ಜನ್ಮ ನೀಡು.

- ಬಸವರಾಜ ಕರುವಿನ,
    ಬಸವನಾಳು.

ನೆನಪುಗಳು ಹೀಗೆ (ಕವಿತೆ) - ಕು. ಜ್ಯೋತಿ ಆನಂದ ಚಂದುಕರ.

ನೆನಪುಗಳು ಹಾಗೆ, ಮತ್ತೆ ಮತ್ತೆ
ಕಾಡುತ್ತಾ ಕೆಣಕುತ್ತಾ ತಿವಿಯುತ್ತ
ಸರಿದ ಕಾಲವನ್ನು ಹಿಂಬಾಲಿಸಿ
ಹೊಸ ಬದುಕಿಗೆ ಮುನ್ನುಡಿ ಬರೆಯುತ್ತವೆ.

ಹಳೆಯ ನೆನಪುಗಳ ಬೆನ್ನುಡಿ
ಹೊಸ ಬದುಕಿಗೆ ಮುನ್ನುಡಿಯಾಗಿ
ಕೆಲವೊಮ್ಮೆ ತಿದ್ದಲಾಗದ ಬರಹವಾಗಿ
ಮನದ ಯಾವುದೋ ದಿಕ್ಕಿನಲ್ಲಿ
ದಿಕ್ಕಾಪಾಲಾಗಿ ಚದುರಿ ಕಾಡುತ್ತವೆ.

ಒಂದಿಷ್ಟು ನೋವು ಒಂದಿಷ್ಟು ನಲಿವು
ಕೆಲವೊಮ್ಮೆ ಅಪರೂಪದ ಗೆಲುವು
ಬಹುಪಾಲು ಸೋಲು ಹೀಗೆ
ದ್ರೌಪದಿಯ ಸೀರೆಯಂತೆ
ಸೆಳದಷ್ಟು ಮತ್ತಷ್ಟು ಸೇರಿಕೊಂಡ
ನೆನಪಿನ ನೂಲುಗಳು.

ಹೊತ್ತು ಗೊತ್ತಿಲ್ಲದೇ ಮನವನಾವರಿಸಿ
ಬಿಟ್ಟು ಬಿಡದಂತೆ ಕಾಡುವ
ನೆನಪುಗಳ ಪುಟಗಳನ್ನೆಲ್ಲ
ಹಳೆ ಪುಸ್ತಕಗಳಂತೆ
ಮಾರುವ ಹಾಗೂ ಇಲ್ಲ.

ಏಕೆಂದರೆ ರದ್ದಿಯವ ಪುಸ್ತಕಗಳ
ಕಟ್ಟನ್ನು ತೂಗಿಯಾನು
ನೆನಪಿನ ಪುಟಗಳ ತೂಗಲಾರ
ಹಾಗೇನಾದರೂ ತೂಗಿದನೆನ್ನಿ
ತೂಗಿ ತೂಗಿ ದನಿವಾಗಿ
ನಿಮ್ಮ ರದ್ದಿಗೆ ನಾ ಬೆಲೆ ಕಟ್ಟಲಾರೆ
ಎಂದು ಹೇಳಿ ಮಾಯವಾದನು.

ಅನಿಸುತ್ತದೆ ಒಮ್ಮೊಮ್ಮೆ
ನೆನಪುಗಳನ್ನೆಲ್ಲ ಹರಿದು ಹಂಚಿ ಬಿಡಲೇ
ಆಗದು.... ಆಗದು.

ನನ್ನ ಬದುಕು ನಿಂತಿರುವುದೇ
ದಿನ, ವಾರ, ತಿಂಗಳು, ವರ್ಷಗಳ
ನೆನಪುಗಳ ಗಂಟಿನಲ್ಲಿ
ನನ್ನ ಧೀರ್ಘ ನಿಟ್ಟುಸಿರಿನಲ್ಲಿ
ನಿನ್ನೆಗಳ ನಾಳೆಗಳ ನಡುವೆ.

ಇಂದಿನ ಸೇತುವೆಯಲ್ಲಿ
ಹಳೆ ನೆನಪುಗಳ ಬೆನ್ನುಡಿ
ಹೊಸ ಬದುಕಿನ ಮುನ್ನುಡಿಯಲ್ಲಿ

- ಕು. ಜ್ಯೋತಿ ಆನಂದ ಚಂದುಕರ,
ಬಾಗಲಕೋಟ.

ಪ್ರಕೃತಿ (ಕವಿತೆ) - ಭಾಗ್ಯ ಎಸ್ ಅಡವಿ.

ಕೊಡಲಿಯ ಹಿಡಿದಾರ
ಕಡಿಲಿಕ ಬಂದಾರ್
ಕಷ್ಟದ ಸುದ್ದಿಯ
ಇಷ್ಟ ದಿ ಹೇಳಲೇ

ಸ್ವಾರ್ಥ ಕ್ಕ ಬಲಿಯಾದೆ
ಏನಕ್ಕ ಮಾಡಲಿ
ಮನುಷ್ಯನ ಮೊಸಕ್ಕ
ನನಾದೆ ಬರಡಕ್ಕ 

ಅತ್ತರು ಬಿಡಲಿಲ್ಲ
ಕರೆದರೂ ನೆಡ ಲಿಲ್ಲ
ಕಟ್ಟಿಗೆ ಕಡಿದಾರ
ಒಟ್ಟಾಗೀ ಒಯ್ಯದಾರ

ಹಚ್ಚಾಗ ಅತ್ತಾರ
ಕಡಿಯಾಗ ನಕ್ಕಾರ
ಹುಚ್ಚ ಮಂದಿಗೀ ನೋಡಿ
ಬೆಚ್ಚ ಬೆರಗ ಆಗೆನ.

- ಭಾಗ್ಯ ಎಸ್ ಅಡವಿ.

ಮೌನವಾಯಿತೆ ಮನಸು ನಿನ್ನಿಂದ(ಕವಿತೆ) - ಸುಭಾಷ್ ಸವಣೂರು.

ಮನದಾಳದ ಗರ್ಭದಲಿ
ನೊಂದ ನೆನಪುಗಳ ಚಿತ್ತಾರವು
ಸಣ್ಣ ಬೆಳಕಿಗೂ ಬಾರದೆ ಯಾರಿಗೂ ಕಾಣದೆ
ಅಡಗಿ ಕೂತಿದೆ ಯಾರಲು ಸೇರದೆ

ಕಡಲಾಳದಿಂದ ಉಕ್ಕಿ ಅಲೆಗಳಾಗಿ ಅಪ್ಪಳಿಸಿದಂತೆ
ನೊಂದು ಬೆಂದಾ ನೋವುಗಳು
ಮನದಾಳದಲ್ಲಿ ಕೊರಗಿ ಕೊರಗುತಲಿ
ಕಣ್ಣ ಹನಿಗಳಾಗಿ ಮೌನದಿ ಜಾರಿವೆ

ಸಾಗರದಂತಿದ್ದ ಪ್ರೀತಿಯೂ ಕೈ ಸರಿದು
ಮುಗಿಲೊಂದಿಗೆ ಮುಚ್ಚಿದಂತೆ
ಇದ್ದಕಿದ್ದಂತೆ ಕಂಡಾ ಸುಂದರ ನನಸು
ಕನಸಾಗಿ ಮಾಯವಾಗಿ  ಮನಸ್ಸು ಮೂಕವಾಗಿದೆ

ಮುಸ್ಸಂಜೆ ಸರಿದು ಇರುಳ ಬಯಸಿದಂತೆ
ತಡೆಯಲಾಗದ ಮನದ ಮಾತುಗಳು
ಹೃದಯ ಸೇರದೇ ಮೂಕವಾಗಿ
ಕತ್ತಲೆಯ ಆಸರೆ ಬಯಸಿ ಕಾರಾಳ ಇರುಳಲ್ಲಿ ನೆಲಸಿದೆ

ತುಂಬಿದ ನದಿಗಳು ಹರಿಯುವುದ
ತಡೆಯಲಾಗದಂತೆ
ಮನಸ್ಸಿನಲ್ಲಿ‌ ಚಿಗುರಿದಾ ಆಸೆಗಳೆಲ್ಲಾ
ಬಂದಿಸಲಾಗದೆ
ದುಖಃದ ಒಡಲಿನಲ್ಲಿ ಸೇರಿ ಕಂಬನಿಯಾಗಿ 
ಮೆಲ್ಲನೆ ಜಾರುವುದನ್ನು ತಡೆಯಲಾಗದಾಗಿದೆ

ಹೃದಯವು ಪ್ರೀತಿಯಾ ಸೇರದೆ ಮೌನವಾಗಿ ಮಿಡಿಯುತಾ
ಕಾಣದ ಪ್ರೀತಿಯೂ ಸಿಗಲಾರದೆ ವೇದನೆಯೂ ಹೆಚ್ಚಾಗಿ
ಮನಸ್ಸನು ತೊರೆದು ಮನಸಾರೆ ಹರಿಯುವುದೆ
ಕಾಣದ ಮಮತೆಯ ಪ್ರೀತಿಯ ಕಡಲ ಸೇರಲು.

- ಸುಭಾಷ್ ಸವಣೂರು.

ಸ್ವಾಮಿ ವಿವೇಕಾನಂದ(ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ವಿಶ್ವದ ಪುಟದಲ್ಲಿ ಅಚ್ಚಳಿಯದೆ ಉಳಿದ
ರಾಮಕೃಷ್ಣ ಪರಮಹಂಸರ ಪ್ರೀತಿಯ ಶಿಷ್ಯನಾದ
ಸದ್ವಿಚಾರ ಬೆಳೆಸಿಕೊಂಡ ಭಾರತದ ಕಂದ
ಭಾರತದ ಕ್ರಾಂತಿಕಾರಿ ವಿವೇಕಾನಂದ

ಭಾರತದಲ್ಲಿರುವ ಆಧ್ಯಾತ್ಮದ ಅಗಾಧ ಸಂಪತ್ತು 
ಪಾಶ್ಚಾತ್ಯರಿಗೆನು ಗೊತ್ತು ಅದರ ಕಿಮ್ಮತ್ತು
ಕನ್ಯಾಕುಮಾರಿ ಬಂಡೆ ಮೇಲೆ ತಪವಗೈದು ಕುಳಿತ
ತನ್ನ ಯೌವ್ವನವೇ ರಾಷ್ಟ್ರಪ್ರೇಮಕ್ಕೊಪಿಸಿ ನಿಂತ

ಸೂರ್ಯ ಕಾಂತಿಯಂತೆ ಹೊಳೆವ ನಮ್ಮಸಂತ ದಿಟ್ಟ
ದೇಶಪ್ರೇಮದ ಉದ್ಧಾರಕ್ಕೆ ಚಿಕಾಗೋಕೆ ಕಾಲಿಟ್ಟ
ಸರ್ವಧರ್ಮ ಸಮ್ಮೇಳನದಲ್ಲಿ ಸಂತಗೈದ ಭಾಷಣ
ಸಹೋದರ ಸಹೋದರಿಯರೆಂಬ ಪದತಂದ ಭೂಷಣ

ದೇವರೆಲ್ಲಿಹನು ಎಂದು ಹುಡುಕುತಿರುವ ಪ್ರಶ್ನೆಯಲ್ಲಿ
ಉತ್ತರ ಕಂಡನು ಪರಮಹಂಸರ ಸಾನಿಧ್ಯದಲ್ಲಿ 
ದೇಹ ಚಿತ್ತ ಆತ್ಮಬಲದೊಂದಿಗೆ ಬೆಳೆದುನಿಂತನಲ್ಲ
ಗ್ರಹಣ ಶಕ್ತಿ ಸಮಯಪ್ರಜ್ಞೆ ಅವನಲ್ಲಿ ತುಂಬಿತಲ್ಲ

ಲೋಕದ ದೃಷ್ಟಿಯಲ್ಲಿ ಯುಗಪುರುಷನೆಂಬ ನಾಮ ಪಡೆದ
ಯೋಗಿಯಾಗುವ ಮೊದಲು ಉಪಯೋಗಿ ಆಗುಯೆಂದ
ನವಭಾರತ ಸ್ವಾತಂತ್ರ್ಯದ ಜನಕ ಸ್ವಾಮಿ ವಿವೇಕಾನಂದ
ನಿರ್ವಿಕಲ್ಪ ನಿಶ್ಚಿಂತ ಸಮಾಧಿಯಲ್ಲಿ ಲೀನನಾಗಿ ಹೋದ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಸುಂದರ ಶುಭೋದಯದ (ಕವಿತೆ) - ಜಿಂಕೆಗಳ ಮಂಜುನಾಥ್.

ಇರುಳರಸನು ಇರುಳೆಲ್ಲಾ ಇಳೆದೇವಿಯನು
ರಮಿಸುತ ಮುದ್ದಿಸುತ..ಅವಳಾಳಕ್ಕಿಳಿಯುತ
ಕಣಿವೆಕತ್ತಲೆಗಳಲಿ ರಸಿಕನಂತೆ ಅಲೆಯುತ
ಸುಖಿಸಿ ಸುಸ್ತಾಗಿ ಎದ್ದು ಹೋದ ಸಮಯದಲಿ..

ಹುಣ್ಣಿಮೆ ಚಂದಿರನು ಸರಿರಾತ್ರಿಯ ಕದತೆರೆದು
ಪ್ರಕೃತಿದೇವಿಯ ಚೆಂದುಟಿಯನು ಚುಂಬಿಸುತ
ಅವಳೆದೆಯ ಬಿಸುಪಿನಲಿ ಹಾಲ್ಬೆಳದಿಂಗಳನು
ಸುರಿದು..ಸರಿದು ಎದ್ದು ಹೋದ ಘಳಿಗೆಯಲಿ..

ಮುಂಗಾರಿನ ಮಳೆಹನಿಯು ಮೇಘಗಳಿಂದಿಳಿದು
ಧರಣಿಯ ಹಣೆಯ ಸಿಂಧೂರವನು ತಾಕುತ
ಅವಳದೇ ಕಿಬ್ಬೊಟ್ಟೆಯ ಸೊಬಗಿನಲಿ ಧುಮ್ಮಿಕ್ಕುತ
ದಣಿದ ಭೂರಮೆಯ ಮೊಗದ ಬೆವರಹನಿಯನು
ಒರೆಸುತ..ಸುಖಿಸಿ ಎದ್ದು ಹೋಗುವ ವೇಳೆಯಲಿ..

ಆಗ..ಆಗತಾನೇ..ಉದಯಿಸಿಹನು ಬಾಲಭಾಸ್ಕರ..
ಸಮಸ್ತ ಜಗತ್ತಿಗೇ ಸಾರುತಿಹನು ಶುಭಸಮಾಚಾರ.

- ಜಿಂಕೆಗಳ ಮಂಜುನಾಥ್, ಕಲ್ವಮಂಜಲಿ,ಕೋಲಾರ.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...