ಬುಧವಾರ, ಸೆಪ್ಟೆಂಬರ್ 13, 2023

ಕಲಾ ನೈಪುಣ್ಯ (ಕವಿತೆ) - ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.

ಚಿತ್ರ ಕಲಾಕಾರನ ಕಲಾ ನೈಪುಣ್ಯತೆಗೆ ನಿಬ್ಬೆರಗಾಗಬೇಕು/
ಕನ್ನಡಿ ಎದುರು ನಿಂತ ಬಾಲೆ ಅಜ್ಜಿಯಂತೆ ತೋರುತಿರಲು ಏನೆನ್ನಬೇಕು/

ಕನ್ನಡಿಯೂ ಕಲಾ ಕೌಶಲ್ಯವೇ,ಬಾಲೆ ನಿಜವೆ?
ಚಿತ್ರ ಬ್ರಹ್ಮನಿಗೆ ಅದೂ ಅಸಾಧ್ಯವೇ/

ಚಿತ್ರ ಕಲೆಯೊಳಗೇ ಅಭಿವ್ಯಕ್ತಿಸಿದ ಬದುಕಿನ ಭಿನ್ನ ಅವಸ್ಥೆಗಳ ಅನನ್ಯ ಭಾವ/
ಶೈಶವ,ಬಾಲ್ಯ,ತಾರುಣ್ಯ ಕೊನೆಗೆ ಮುಪ್ಪು  ಎಂದು ಬಿಂಬಿಸಿಹ ಚಿತ್ರ ಕಾವ್ಯ/

ಮುದುರುವುದು ತಾರುಣ್ಯ
ತಪ್ಪದು ಮುಪ್ಪು ಎಂಬ ಸತ್ಯದ ಪ್ರತಫಲನ/
ಬದುಕಿನ ಅಂತ್ಯ ಬಿಂದು ಅರಿಯದ ಪಯಣವ ಸಾಥ೯ಕ ಪಡಸಿಕೋಳ್ಳೋಣ/

ಸಾಥ೯ಕತೆಗೂ, ಸಂಯಮಕೂ,
ಉರಿದಾಟ, ಕಚ್ಚಾಟ, ಕುಹಕತನಗಳಲ್ಲಿ
ಆಯ್ಕೆಯ ಇಟ್ಟ ದೇವರೆಂಬ ಜಾಣ/
ಈ ಜನುಮದ ಕಮ೯ ಫಲಗಳು ಬಿಡದೇ ಹಿಂಬಾಲಿಸುವವು ಕಾಣ/

ಸನ್ನಡತೆ, ಸದ್ವಿಚಾರಗಳ ಆರಿಸಿಕೊಂಡು, ಮುಂಬರುವ ಜನುಮಗಳ ಚಿಂತಿಸಿರಿ/
ಲಭ್ಯವಾದ ಮಾನವ ಜನ್ಮವ ವ್ಯರ್ಥಗೊಳಿಸದಿರಿ/.

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


ಪೀನ ನಿಮ್ನಗಳ ನಡುವೆ (ಕವಿತೆ) - ಪ್ರಭುಕುಮಾರ ಪಿ.

ಪೀನ ನಿಮ್ನಗಳ ನಡುವೆ 
ಗೋಚರ ಅಗೋಚರಗಳ 
ಅನುಭವದ ಅನುಭಾವವಿದೆ. 

ಕಣ್ಣ ಕನಸುಗಳೆಲ್ಲ 
ಬಣ್ಣದ ಬದುಕಿನ
ಕೊನೆ ಮೊದಲಿನ ನಡುವೆ
ಸುಳಿದು ಸೆಳೆಯುತ್ತಿದೆ. 

ಬದುಕಿನ ಬಯಲು 
ಬಯಲಿನ ಬದುಕು 
ಚಿತ್ತ ಚೇತನಗಳ ಒಳಗೆ
ಪುಳಕಿಸಿ ಕಲಕುತ್ತಿದೆ. 

ನೆನ್ನೆ ನಾಳೆಗಳ ನಿಮ್ನ ಪೀನಗಳ 
ಕೋನ ಮಾಪನದ ನಡುವೆ
ಬುದ್ಧಿ ಭಾವಗಳ  ವಿದ್ಯುದಾಲಿಂಗನಕೆ 
ತನು ಮನವನು ಅಣಿಗೊಳಿಸಿದೆ. 

ಕಳೆದು ಹೋಗುವ ಈ ಗಳಿಗೆ
ಸೆಳೆಯಲು ಎಂದೇ ಇರುವ ಬಯಕೆ 
ಪೀನ ನಿಮ್ನಗಳ ಸಂಗಮ ಬಿಂದುವಿಗೆ
ಸದಾ ಹಂಬಲಿಸಿದೆ.

- ಪ್ರಭುಕುಮಾರ ಪಿ.

ಮುಟ್ಟು (ಪುಸ್ತಕ ಪರಿಚಯ) - ಮಾಣಿಕ್ ಪಂಚಾಳ ನಾಗೂರ.


ಪುಸ್ತಕದ ಹೆಸರು: ಮುಟ್ಟು ವಿಜ್ಞಾನ, ಸಂಸ್ಕೃತಿ, ಮತ್ತು ಅನುಭವ
ಲೇಖಕರು : ಡಾ. ಎಚ್.ಎಸ್.ಅನುಪಮಾ


ಮೊದಲಿಗೆ ಎಚ್.ಎಸ್. ಅನುಪಮ  ಅವರಿಗೆ ಧನ್ಯವಾದಗಳು. ಹೆಣ್ಣಿನ ಮುಟ್ಟಿನ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ. ನಾನು ಮೊದಲೆಲ್ಲಾ ಇವರ ಕೆಲವು ಪುಸ್ತಕಗಳನ್ನು ಓದಿದ್ದೇನೆ ಸರಳವಾಗಿ ವಿಚಾರಗಳನ್ನು ತಿಳಿಸುವ ಬರಹಗಳಾಗಿವೆ. ಮುಟ್ಟು ಅನ್ನೋ ಹೆಸರು ಕೇಳಿದ್ದೆ ಮೊದಲು ಬಾರಿ ಈ ಹಿಂದೆ ಎಲ್ಲೂ ಕೇಳಿರಲಿಲ್ಲ ಇದೊಂದು ಪುಸ್ತಕಿಯ ಭಾಷೆ ನಮ್ಮ ಭಾಷೆಯಲ್ಲಿ ಇದನ್ನು ಡೇಟ್ ಅನ್ನುತ್ತಾರೆ ಈ ಪದ ಹೇಗೆ ಗೊತ್ತಾಯ್ತು ಅಂದರೆ ದಸರಾ ಸಮಯದಲ್ಲಿ ನಮ್ಮ ಕಡೆ ಮನೆ ಸ್ವಚ್ಛ ಮಾಡುತ್ತಾರೆ ಮಾಡಿದ ನಂತರ ತುಳಜಾಪುರ ದೇವಿಗೆ 9 ದಿನ ಕಾಲ ಪೂಜೆ ಮಾಡುತ್ತಾರೆ ಆ 9 ದಿನಗಳ ನಡುವೆ ನಮ್ಮ ಅಮ್ಮ ಹೊರಗಡೆ ಒಂದು ಮೂಲೆಯಲ್ಲಿ ಕೂತಿದ್ದರು ಒಂದಿನ ನಾನು ಹೊರಗಡೆಯಿಂದ ಬಂದು ನಮ್ಮಮ್ಮನ ಬಳಿ ಹೋದರೆ ಮುಟ್ಬೇಡ ದೂರ ಇರು ಅಂತ ನಮ್ಮಜ್ಜಿ ಹೇಳಿದ್ರು ಅದಕ್ಕೆ ನಾನು ಏಕೆ ಅಂದೆ ಅದಕ್ಕೆ ಅವರು ಮೂರು ದಿನ ನಿಮ್ಮಮ್ಮನ ಮುಟಬೇಡ ಅಂತ ಹೇಳಿದ್ರು ಅದು ಯಾಕೆ ಅಂತ ನನಗೆ ಗೊತ್ತಾಗ್ಲಿಲ್ಲ ಕೆಲವೊಮ್ಮೆ ಅವರು ಮಾತಾಡಿಕೊಳ್ಳುತ್ತಿದ್ದಾಗ ಡೇಟ್ ಬಂದಿದೆ ಅಂತ ಮಾತಾಡ್ತಿದ್ದರು ಆವಾಗ ಕೇಳಿದ್ದು ಈ ಪದ ದಸರಾ ಸಮಯದಲ್ಲಿ ಡೇಟ್ ಬಂದಾಗ ನಮ್ಮಮ್ಮ ಯಾರನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ ಮತ್ತು ಪೂಜೆ ಮಾಡುತ್ತಿರಲಿಲ್ಲ ಮತ್ತೆ ದೇವರ ಕೆಲಸ ಯಾವುವು ಮಾಡುತ್ತಿರಲಿಲ್ಲ ಯಾವಾಗಲೂ ಮೂಲೆಯಲ್ಲಿ ಕೋರುತ್ತಿದ್ದರು ಆ ಸಮಯದಲ್ಲಿ ಅವರು ಬೇರೆ ಕಡೆ ಮಲಗುತ್ತಿದ್ದರು ಇದನ್ನು ನೋಡಿ ನನಗೆ ಯಾಕೆ ಹೀಗೆ? ಅಂತ ಅನಿಸಿತು ಮುಟ್ಟು ಒಂದು ಸಹಜ ಕ್ರಿಯೆ ಇದನ್ನು ಈಗಿನ ಕಾಲದಲ್ಲಿ ಮೂಡನಂಬಿಕೆಯಿಂದಾಗಿ ಇದನ್ನು ಬೇರೆರಿತಿಯೆ ಕಾಣುತ್ತಿದ್ದಾರೆ. ಈ ಪುಸ್ತಕ ಓದಲು ಶುರು ಮಾಡಿದಾಗ ಏಕೆ ಏಕೆ? ಎಂದು ಪ್ರಶ್ನೆ ಹಾಕಲಾಗಿತ್ತು ನಾನು ಏನಿರಬಹುದು ಅಂತ ಅದನ್ನು ಪೂರ್ತಿ ಓದಿದೆ ಇದರಲ್ಲಿ ಅವರಿಗೆ ಆ ಸಮಯದಲ್ಲಿ ಮೂಡಿದ ಪ್ರಶ್ನೆಗಳನ್ನು ಮತ್ತು ಸಂದರ್ಭವನ್ನು ಬರೆದಿದ್ದರು. ಮೊದಲಿಗೆ ಅವರ ಮುಟ್ಟಿನ ಬಗೆಗಿನ ಅನುಭವವನ್ನು ನಮ್ಮ ಜೊತೆಗೆ ಹಂಚಿಕೊಂಡಿದ್ದಾರೆ. ಅವರ ಅನುಭವವನ್ನು ಓದಿ ನನಗೆ ಒಂದು  ಇನ್ನು ಜಾಸ್ತಿ ತಿಳಿದುಕೊಳ್ಳಬೇಕೆನಿಸಿತು ಹೀಗೆ ಓದುತ್ತಾ ಹೋದಂತೆ ಹೆಣ್ಣು ಮುಟ್ಟಿನ ಸಮಯದಲ್ಲಿ ಅಷ್ಟೆಲ್ಲಾ ಕಷ್ಟಗಳನ್ನು ಅನುಭವಿಸುತ್ತಾಳೆ ಅಂತ ಗೊತ್ತಾಯ್ತು ಮತ್ತು ಇಲ್ಲಿ ಎಲ್ಲಾ ಹೆಣ್ಣು ಮಕ್ಕಳು ನೋವು ತಿಂದವರೇ ಜಾಸ್ತಿ ಇದನ್ನು ಓದಿ ನನಗೆ ಅನಿಸ್ತು ನಾನು ಗಂಡಾಗಿ ಕೊಟ್ಟಿದ್ದೆ ಪುಣ್ಯ ಅಂತ ಸಾಮಾನ್ಯವಾಗಿ ಎಲ್ಲಾ ಗಂಡಸರು ಯೋಚಿಸುವುದು ಹೆಣ್ಣು ಮಕ್ಕಳ ಜೀವನಾನೆ ಚೆನ್ನಾಗಿದೆ ಅವರಿಗೇನು ಚಿಂತನೆ ಇಲ್ಲ ಅವರು ಕೆಲಸ ಮಾಡುವ ಚಿಂತನೆ ಇಲ್ಲ ಅಂತ ಏಕೆಂದರೆ ಗಂಡನೇ ದುಡಿದು ಸಾಕುತ್ತಾನೆ ಅಂತ ಅವರು ಜೀವನಾನೆ ಆರಾಮಾಗಿದೆ ಅಂತ ಹೇಳ್ತಾರೆ ಆದರೆ ಈ ಪುಸ್ತಕ ಓದಿದ ನಂತರ ಗೊತ್ತಾಯ್ತು ಹೆಣ್ಣಿನ ಕಷ್ಟ ಏನು ಅಂತ ಅವರ ಆ ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವು ಯಾರಿಗೂ ಬೇಡ ಮುಟ್ಟು ಅನ್ನುವುದು ಮಹಿಳೆಯ ದೇಹದಲ್ಲಿ ಸಹಜವಾದ ಕ್ರಿಯೆ ಅದನ್ನು ನಮ್ಮ ಜನ ಮೈಲ್ಗೆ ಅಂತ ಅವರನ್ನು ದೂರ ಇಡುತ್ತಾರೆ ಅದನ್ನು ನಾನು ಒಪ್ಪುವುದಿಲ್ಲ ನಾನು ಯಾವತ್ತೂ ಈ ರೀತಿ ಮಾಡುವುದಿಲ್ಲ ನಮ್ಮ ಮನೆಯಲ್ಲಿ ಯಾರೇ ಮುಟ್ಟಾದರೂ ಅವರಿಗೆ ದೂರವಿಡದೆ ಅವರಿಗೆ ಆತ್ಮೀಯತೆಯಿಂದ ಕಾಳಜಿಯಿಂದ ನೋಡಿಕೊಳ್ಳಬೇಕು. ನಾವು ನಮ್ಮ ಕಷ್ಟಗಳು ಮತ್ತು ನೋವುಗಳೊಡನೆ ಹೆಣ್ಣಿನ ಕಷ್ಟಗಳನ್ನು ಅರಿತುಕೊಂಡು ಬಾಳುವುದು ಉತ್ತಮ ಈ ಪುಸ್ತಕ ಓದಿದ್ದರಿಂದ ನಾನು ಮುಟ್ಟಿನ ಬಗ್ಗೆ ಮತ್ತು ಅದರ ಬಗೆಗಿನ ಸಮಸ್ಯೆಗಳು ಮತ್ತು ಬಿಳಿ ಮುಟ್ಟು ಆಗಲು ಕಾರಣ ಮತ್ತು ಪರಿಹಾರ ಆ ಸಮಯದಲಾಗುವ ಸಮಸ್ಯೆಗಳು ಚೆನ್ನಾಗಿ ತಿಳಿದುಕೊಂಡಿದ್ದೇನೆ ನಾನು ಮುಂದೆ ನಮ್ಮ ಮನೆ ಹೆಣ್ಣು ಮಕ್ಕಳಾದ ತಾಯಿ ಅಕ್ಕ ತಂಗಿಯ ಕಷ್ಟಕ್ಕೆ ಸ್ಪಂದಿಸುತ್ತೇನೆ ಮತ್ತು ಅವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತೇನೆ. ಪುಸ್ತಕ ಓದಿದ್ದು ನನಗೆ ಒಂದು ಒಳ್ಳೆ ಅನುಭವ ಕೊಟ್ಟಿದೆ ಹೆಣ್ಣಿನ ಬಗ್ಗೆ ತಿಳಿದುಕೊಳ್ಳಲು ಸಹಾಯವಾಗಿದೆ.

- ಮಾಣಿಕ್ ಪಂಚಾಳ ನಾಗೂರ ಕಲಬುರಗಿ.

ನಾ ಪಡೆದ ತಾಯಿ (ಕವಿತೆ) - ಕನಸಿನಕೂಸು (ವಸಂತ ಪುಂಡಲೀಕ, ಬಾಗೇವಾಡಿ).

ತಾಯಿ ಎಂದರೆ ಅದೊಂದು ಅಮೂಲ್ಯವಾದ ಜೀವ
ಎಂದಿಗೂ ಬಿಡಿಸಲಾಗದ ಬಂಧ ಅಳಿಸಲಾಗದ ನೆನಪು
ಮರೆಯಲಾಗದ ಮಾಣಿಕ್ಯ  ತಾಯಿ ಎಂದರೆ ತ್ಯಾಗದ ಪ್ರತೀಕ...

ತಾಯಿ ಎಂದರೆ ಕೇವಲ ಹೆತ್ತವಳು ಮಾತ್ರ ಅಂತೇನಿಲ್ಲ
ಮಮತೆಯಿಂದ ಪ್ರೀತಿ ವಾತ್ಸಲ್ಯದಿಂದ ನಿಷ್ಕಲ್ಮಶ ಮನಸ್ಸಿನಿಂದ  ನೋಡಿಕೊಳ್ಳುವ ಪ್ರತಿಯೊಬ್ಬಳು
ತಾಯಿನೇ...

ನೀ ಎನ್ನ ನವಮಾಸ ಗರ್ಭದಿ ಹೊರಲಿಲ್ಲ ಹೆರಲಿಲ್ಲ
ಎದೆಹಾಲು ಕುಡಿಸಲಿಲ್ಲ ಅದಕ್ಕಿಂತ ಹೆಚ್ಚಾಗಿ ವಾತ್ಸಲ್ಯದ ಮಡಿಲನಿಟ್ಟು ಅಳಿದ ಉಷ್ಣದ ಕ್ಷೀರಾಮೃತವ ಕುಡಿಸಿ
ತಾಯ್ತನಕ್ಕೆ ಅರ್ಥ ತುಂಬಿದೆ...

ನಾ ಬಿದ್ದಾಗ ನೀ ಪಡುವ ನೋವು ಹೇಳತೀರದು
ಗೆದ್ದಾಗ ನಿನಗಿಂತ ಸಂಭ್ರಮ ಪಟ್ಟವರಿಲ್ಲ
ನಿನಗಾಗಿ ನೀ ಯೋಚಿಸಿದ್ದೆ ನಾ ಕಾಣಲಿಲ್ಲ
ಬರೀ ನನ್ನ ಏಳಿಗೆಯೇ ನಿನ್ನ ಮನದ ತುಂಬೆಲ್ಲ...

ನನ್ನ ಬಿಟ್ಟು ನೀ ಎಲ್ಲೂ ಹೋಗಿದ್ದು ನಾ ಕಂಡಿಲ್ಲ ನಿನ್ನ ಪ್ರತಿ ಸಡಗರದಲ್ಲಿಯೂ ನೀ ಎಂದೂ ನನ್ನ ಮರೆತಿಲ್ಲ ಎಷ್ಟು ಹೊಗಳಿದರು ನಿನ್ನ ಗುಣಗಾನ ಮುಗಿಯದು  ಬೆಳೆಸಿದಂತೆ ಬೆಳೆಸಿದಂತೆ ಅದು ಬೆಳಕಾಗಿ ಉಳಿಯುವುದು...
 
ನೀ ಮಾಡಿದ ತ್ಯಾಗಕ್ಕೆ ನಾ ಏನು ಕೊಟ್ಟರು ಸಮ ದೂಗಲ್ಲ ನಿನ್ನ ತಾಯ್ತನದ ಸವಿಯ ಜೀವನದೂದ್ದಕ್ಕೂ ನಾ ಮರೆಯೋಲ್ಲ ಹಡೆದ ತಾಯಿಗಿಂತ ಪಡೆದ ತಾಯಿ ಮೇಲು ಎನ್ನುವ ಮಾತು ನೀ ಮತ್ತೊಮ್ಮೆ ನಿರೂಪಿಸಿ ಬಿಟ್ಟೆಯಲ್ಲ...
   
                                                         - ಕನಸಿನಕೂಸು (ವಸಂತ ಪುಂಡಲೀಕ).

ಏಕಾಂಗಿ ಸಂಚಾರಿ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ನಾನೊಮ್ಮೆ ಹೊರಟೆನು ಏಕಾಂಗಿ ಸಂಚಾರಿಯಾಗಿ 
 ಹಳ್ಳಿಯಲ್ಲಿ ಬಾಲ್ಯದ ನೆನಪುಗಳ ಸಂಗ್ರಹಕಿಯಾಗಿ
ದಾರಿಯಲ್ಲಿ ನಿಂತೆನು ಪ್ರಕೃತಿಯ ಆರಾಧಕಿಯಾಗಿ 
ಮನಸ್ಸು- ದೇಹಗಳೆರಡರು ನವ ಚೈತನ್ಯಮಯವಾಗಿ,
 
ನಗರದ ರಸ್ತೆಗಳ ಡಾಂಬರೀಕರಣ ವ್ಯವಸ್ಥೆಯು 
ವಾಹನಗಳ   ಸಂಚಾರದ  ಶಬ್ದದ  ದಟ್ಟಣೆಯು 
ಮನಸ್ಸು -ದೇಹಗಳೆರಡಕ್ಕೆ ನೀಡುವುದು ಅಹಿತಕರ 
ಆದರೂ ನೆಲೆಸುವೆವು ಜೀವನ ನಿರ್ವಹಣೆಗೋಸ್ಕರ,

ಏಕಾಂಗಿ ಸಂಚಾರಿಯ ಜೀವನವು ಸುಂದರ 
ಭಾವನೆಗೆ ಸ್ಪಂದಿಸುವ ಸಂಗಾತಿ ಸುಮಧುರ 
ಹಳ್ಳಿ-ದಿಲ್ಲಿ ಎಲ್ಲಿಯಾಗಲಿ ನೆಮ್ಮದಿಯ ಗೂಡು 
ದೊರೆತರೆ  ಅದುವೇ  ಸ್ವರ್ಗಲೋಕದ  ಬೀಡು.

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಪರಿಸರ (ಕವಿತೆ) - ಕು. ಜ್ಯೋತಿ ಆನಂದ ಚಂದುಕರ.

ಬೇಕೆಂದಾಗ ಮುನಿಸು ತೋರಿ
 ಬೇಡವೆಂದಾಗ ಸುಮ್ಮನೆ ಸುರಿದು
 ಕಾಡುವ ಈ ಮಳೆ ಏಕೆ ಹೀಗೆ ?
 ಪ್ರಕೃತಿಯ ಮರ್ಮವೇ ಹಾಗೆ...

 ಬೇಡದ ಬಯಕೆಗಳ ಹೊತ್ತು
 ಮರಗಳ ಮಾರಣಹೋಮ ಮಾಡಿ 
 ಕಾಡು ಕಡಿದು ನಾಡು ಕಟ್ಟುವ
 ಆಣೆಕಟ್ಟು ಕಟ್ಟಿ ನೀರಿಂಗಿಸುವ
 ಈ ಮನುಜನೇಕೆ ಹೀಗೆ ?

 ಹೇ ಮಾನವ
 ಏಕಾಗುತ್ತಿರುವೆ ದಾನವ
 ತರುವಾಯದ ಪೀಳಿಗೆಗೆ 
 ಕೊಂಚವಾದರೂ
 ಉಳಿಸು ಈ ನಿಸರ್ಗವ...

 ಸವಿ ಪ್ರಕೃತಿಯ ಸೌಂದರ್ಯವ
 ತೋರಿಸಬೇಡ ಸ್ವಾರ್ಥವ
 ನೀ ಬದುಕಲಾದರೂ
 ಬದುಕಿಸಬೇಕಲ್ಲ ಈ ಪರಿಸರವ ?

ನಿತ್ಯ ನಿರ್ಮಲವಾಗಿ
ನಾವು ಉಸಿರಾಡಲು ಬೇಕು ಪ್ರಕೃತಿ.
ಇಂದಾದರೂ ಒಂದು ಗಿಡ ನೆಟ್ಟರೆ, ಬದಲಾದಿತು ಮುಂದಿನ ಪೀಳಿಗೆಯ ಆಕೃತಿ.

- ಕು. ಜ್ಯೋತಿ ಆನಂದ ಚಂದುಕರ, ಬಾಗಲಕೋಟೆ.

ನೀ ದಿಟ್ಟ ಮಹಿಳೆ (ಕವಿತೆ) - ಮಂಜುಶ್ರೀ ಹೆಚ್.,ಬಳ್ಳಾರಿ.

ಒಲೆಯನ್ನು ಊದುವ ಕೈಗಳು,
ತೊಟ್ಟಿಲನ್ನು ತೂಗುವ ಕೈಗಳು,
ಊಟ ಮಾಡಿಸುವ ಕೈಗಳು,
ಪಾಲನೆಯಿಂದ ಪೋಷಣೆ ಮಾಡುವ ಕೈಗಳು,
ಜಗತ್ತನ್ನೇ ಆಳುವ ಮನಸಿದ್ದರು ಯಾರದೋ
ಬಂಧನಕ್ಕೆ ಬಂಧಿಯಾಗಿರುವ ಕೈಗಳು.

ತಲೆತಗ್ಗಿಸಿ ಮೌನವಾಗಿ ಕೂತೆ
ಮೌನವನ್ನೇ ಆಭರಣವಾಗಿಸಿಕೊಂಡು,
ನೋವನ್ನೇ ನಾಚಿಕೆಯಾಗಿಸಿಕೊಂಡು,
ಸಿದ್ದವಾಗಿರುವೆ ಮದುವೆಗೆ
ಭಾವನೆಗಳೇ ಇಲ್ಲದ ಗೊಂಬೆಯಂತೆ,
ಇನ್ನೊಬ್ಬರ ಸಂತೋಷಕ್ಕಾಗಿ.

ಮನಸಿಲ್ಲದ  ಕಗ್ಗತ್ತಲೆಯ ಕಾಡಿನಲ್ಲಿ
     ಹೋಗುತ್ತಿರುವೆ,
ಒಮ್ಮೆ ತಿರುಗಿದರೆ ನೋವಿನ ಜಟಕಾಬಂಡಿ.

ಇಷ್ಟೊಂದು ಸಹನೆಯ ಮಾತೃದೇವತೆ,
ಒಮ್ಮೆ ಮುನಿಸಿದರೆ ವಿನಾಶಕ್ಕೆ ಅಡಿಪಾಯ.

ಅಕ್ಕರೆಯ ಅಕ್ಕನಾಗಿ,
ಕಾಳಜಿಯ ಹೆಂಡತಿಯಾಗಿ,
ನಂಬಿಕೆಯ ಮಗಳಾಗಿ,
ಹಿತಬಯಸುವ ಅಮ್ಮನಾಗಿ.

ಎಲ್ಲಾರ ಮನದಲ್ಲಿ ನೆಲೆಗೊಂಡಿರುವ ಈ ಹೆಣ್ಣನ್ನು ಗೌರವಿಸಿ, ವಂದಿಸಿ, ಪಾಲಿಸಿ, ಪ್ರೀತಿಸಿ.

- ಮಂಜುಶ್ರೀ ಹೆಚ್.,ಬಳ್ಳಾರಿ.

ಹೇ ಭಗವಂತ ಒಮ್ಮೆ ಧರೆಗೆ ಬಾ (ಕವಿತೆ) - ಶ್ರೀ ಮುತ್ತು.ಯ. ವಡ್ಡರ.

ಹೇ ಭಗವಂತ ಒಮ್ಮೆ ದರೆಗೆ ಬಾರಯ್ಯ
ಬಂದು ನೀ ಅನ್ಯಾಯ ಅಕ್ರಮ ಹೋಗಲಾಡಿಸಯ್ಯ
ಪಾಪವೇ ತುಂಬಿದ ಲೋಕಕೆ ಬೇಗ ಬಾರಯ್ಯ
ಮನುಜನನ್ನು ಮನುಷ್ಯನಾಗಿ ಬದಲಾಯಿಸಬೇಕಾಗಿದೆ ಅಯ್ಯ

ದೇವರೆಂದರೆ ನೀನೇ ಭಕ್ತಿ ಎಂದರೂ ನೀನೇ
ನೀನಿಲ್ಲದೆ ಲೋಕವೆಲ್ಲ ಶೂನ್ಯ ತಾನೇ
ಜಗದ ಉದ್ದಾರಕ್ಕಾಗಿ ಭೂಲೋಕಕೆ ಬಾ ಶಿವನೇ
ನಿತ್ಯ ನಿಮ್ಮ ಪಾದವ ಪೂಜಿಸಿ ನಮಿಸುವೆ ಬಾ ದೇವನೇ

ಕಷ್ಟವ ಮರೆಮಾಚಿ ಸುಖ ನೀಡಲು ಬಾ
ದುರ್ಮಾರ್ಗವ ತೊಲಗಿಸಿ ಸನ್ಮಾರ್ಗ ತೋರಲು ಬಾ
ಪಾಪದ ಪ್ರಪಂಚದಲ್ಲಿ ಪುಣ್ಯವ ಕಲ್ಪಿಸಲು ಬಾ
ಅನ್ಯಾಯ ಮರೆಸಿ ನ್ಯಾಯ ನೀಡಲು ಬಾ

ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಲು ಅವತರಿಸು
ಒಂಟಿಯಾದವರಿಗೆ ಜೊತೆಯಾಗಿ ನೀ ಆಗಮಿಸು
ಅನ್ನಕ್ಕಾಗಿ ಅಲೆಯುವವರಿಗೆ ಮೃಷ್ಟಾನ್ನವಾಗಿ ಕಾಣಿಸು
ಪ್ರಾರ್ಥಿಸುವ ಭಕ್ತರಿಗೆ ವರವಾಗಿ ಆಶೀರ್ವದಿಸು 

ಭಯ ಭಕ್ತಿ ಇಲ್ಲದವರಿಗೆ ಎಚ್ಚರಿಕೆಯ ಗಂಟೆ ಕೊಡು
ನಾನು ನನ್ನದೆನ್ನುವ ಅಹಂಕಾರಿಗಳಿಗೆ ಮುಕ್ತಿಕೊಡು
ಒಳಗೊಳಗೆ ಸಂಚು ಮಾಡುವ ಹಿತ ಶತ್ರುಗಳಿಗೆ ಬುದ್ಧಿ ಕೊಡು
ಕಷ್ಟಕ್ಕಾಗದ ಸಂಬಂಧಿಕರಿಗೆ ತಿಳುವಳಿಕೆ ಕೊಡು 

- ಶ್ರೀ ಮುತ್ತು.ಯ.ವಡ್ಡರ
ಶಿಕ್ಷಕರು 
ಬಾಗಲಕೋಟ
Mob-9845568484

ಜಗತ್ತಿಗೆ ದೊಡ್ಡವಳಮ್ಮ (ಕವಿತೆ) - ಜಿ. ಟಿ. ಆರ್ ದುರ್ಗ.

ಅಮ್ಮ...ಅಮ್ಮ ಅಮ್ಮ...ಎಲ್ಲಿರುವೆ ನನ್ನಮ್ಮ...
ನಿಮ್ಮ ಮಗುವು ನಿಮ್ಮಲ್ಲಿ ಸ್ವರ್ಗವ ಕಂಡೆಮ್ಮ 
ಅಮ್ಮಾ..... ಅಮ್ಮಾ....ಸೃಷ್ಟಿಯೆ ನೀನಮ್ಮ
ನಮ್ಮ ಸೃಷ್ಟಿಯೆ ನೀನಮ್ಮ.... ನನ್ನ ಉಸಿರು ನೀನಮ್ಮ 
ಅಮ್ಮಾ..... ಅಮ್ಮಾ...ನನ್ನಮ್ಮ 

ಜೀವ ಕೊಟ್ಟ ತಾಯಿ ಕೋಟಿ ಪುಣ್ಯ ತಾಯಿ
ಈರೇಳು ಲೋಕದಲ್ಲಿ ಯಾರಿಲ್ಲ ಕೇಳು ತಾಯಿ 
ಹೃದಯದಲ್ಲಿ ನಿನ್ನದೆ ಅಮ್ಮ ಎನ್ನುವ ಸದ್ದು
ನಿಮ್ಮ ಹೃದಯದಲ್ಲಿ ನಿನ್ನ ಕಂದನದೆ ಸದ್ದು
ಅಮ್ಮ ಅಮ್ಮ ಎದೆ ಹಾಲು ಕೊಟ್ಟಳ ಅಮ್ಮ

ಆಕಾಶಕ್ಕಿಂತ ದೊಡ್ಡವಳಮ್ಮ 
ಬ್ರಹ್ಮಾಂಡಕ್ಕಿಂತ ದೊಡ್ಡವಳಮ್ಮ
ಕೋಟಿ ದೇವರಿಗಿಂತ ನೀನೆ ದೊಡ್ಡವಳಮ್ಮ
ಮಾತು ತಪ್ಪದಂತ ಮಾಣಿಕ್ಯ ನೀನಮ್ಮ
ಸೃಷ್ಟಿಗಿಂತ ದೊಡ್ಡವಳಮ್ಮ ನನ್ನಮ್ಮ ದೇವತೆ ನೀನಮ್ಮ

- ಜಿ. ಟಿ. ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ.


ನಾನಾಗಬಾರದೇಕೆ ಮನೆಯಲೊಂದು. ಟಿ. ವಿ. - ಸವಿತಾ ಆರ್ ಅಂಗಡಿ. ಮುಧೋಳ.

ಮುಗ್ಧ ಮನಸ್ಸಿನ ಮಗು ನೀನು
 ನಿನ್ನ ಭಾವನೆಯನ್ನು ಅರ್ಥೈಸಿಕೊಳ್ಳುವ ಮನಸ್ಸಿಲ್ಲ
 ನಿನ್ನ ಕಂಬನಿಗೆ ಮಿಡಿಯುವ ಮನವಿಲ್ಲ
 ನಿನಗೆ ಕರುಣೆ ತೋರುವ ತಂದೆ ತಾಯಿಯರಿಲ್ಲ
 ನೀನೊಂದು ಮುಗ್ಧ ಮನಸ್ಸಿನ ಮಗು.

 ಬಿಡುವಿಲ್ಲದೆ ತಮ್ಮ ಕೆಲಸಕ್ಕೆ ಬಡಿದಾಡುವರು
 ಮಗುವಿನ ಅಂತರಾಳವನ್ನು ತಿಳಿಯುವರಾರು
 ಕಷ್ಟ ಹೇಳಿಕೊಂಡರು ಕೇಳುವರಾರು
 ಮುಗ್ಧ ಮನಸ್ಸಿಗೆ ಬೇಕು ಅಂತರಾಳದ ಪ್ರೀತಿ
ಇದಾವದು ಸಿಗದೇ ಬಳಲುವುದು ಮುಗ್ಧ ಮನಸ್ಸು

 ಅಂದುಕೊಂಡಿದ್ದು ಮಗು ಮನಸ್ಸಿನಲ್ಲಿ
 ತಂದೆ ತಾಯಿಂದರಿಗೆ ಟಿವಿ ಮೇಲಿದೆ ಹೆಚ್ಚಿನ ಪ್ರೀತಿ
 ನಾನೇಕೆ ಆಗಬಾರದು ಮನೆಯಲೊಂದು ಟಿ. ವಿ
 ಅದಕ್ಕಾಗಿ ಕೊಡುವರು ಹೆಚ್ಚಿನ ವೇಳೆಯನು
 ಮುಗ್ಧ ಹೃದಯಕ್ಕೆ ಎಲ್ಲಿ ಸಿಗುವುದು ತಂದೆ ತಾಯಿಯ ಪ್ರೀತಿ

 ಸಂತಸವನ್ನು ಹಂಚಿಕೊಳ್ಳುವರು ಆ ಟಿವಿ ಜೊತೆ
 ಮಗುವಿಗೆಲ್ಲಿ ಸಿಗುವುದು ಸಂತಸದ ಕ್ಷಣಗಳು
 ಅಮ್ಮನಿಗೆ ಬೇಕು ಟಿವಿ ಸೀರಿಯಲ್ ಗಳ ಭರಾಟೆ
 ಅಪ್ಪನಿಗೆ ಬೇಕು ಮೊಬೈಲ್ ಮೋಜು ಮಸ್ತಿ
 ಕೊಡೋರು ಸಾಕಷ್ಟು ಸಮಯವನ್ನು ಟಿವಿ ಮೊಬೈಲ್ ನೋಡಲು

 ಕಥೆ ಕೇಳಿ ಮಲಗಬೇಕೆಂಬ ಕಾತುರ ಮಗುವಿಗೆ
 ಹೇಳಲಾರದೆ ಸುಸ್ತಾಗಿ ಮಲಗುವರು
ಮುಗ್ಧ ಮನಸ್ಸಿಗೆ ಆಗ ಅನಿಸಿತು
 ನಾನೇಕೆ ಆಗಬಾರದು ಅಪ್ಪ ಅಮ್ಮಂದಿರ ಟಿವಿ

 ದೇವರಲ್ಲಿ ಪ್ರಾರ್ಥಿಸಿತು ಮಗು
 ನಾನಾಗುವೆ ಅಪ್ಪ-ಅಮ್ಮಂದಿರ ಟಿವಿ
 ಸಿಗುವುದು ನನಗೆ ಆಗ ಪ್ರೀತಿ ವಾತ್ಸಲ್ಯ
 ನಾನಾಗಬೇಕು ಅಪ್ಪ ಅಮ್ಮಂದಿರ ಟಿವಿ.


- ಸವಿತಾ ಆರ್ ಅಂಗಡಿ. ಮುಧೋಳ.

ಭ್ರಷ್ಟಾಚಾರವೆಂಬ ಪೆಡಂಭೂತ ಬಲೆಯಲ್ಲಿ ಬಡವರು (ಲೇಖನ) - ಅರ್ಚನ ಹೊನಲು, ಅತ್ತಿಬೆಲೆ.

ಮೌಲ್ಯಗಳ ಕುಸಿತದಿಂದ ದಿನದಿಂದ ದಿನಕ್ಕೆ ಸಮಾಜದಲ್ಲಿ ಭ್ರಷ್ಟಾಚಾರ ತೀವ್ರತೆ ಹೆಚ್ಚುತ್ತಿದೆ. ಬಡವರ ವಿಷಯದಲ್ಲಿ ಈ ಭ್ರಷ್ಟಾಚಾರವೆಂಬ ಪೆಡಂಭೂತ ತನ್ನ ವಿಸ್ತಾರವನ್ನು ಅತ್ಯಂತ ವ್ಯಾಪಕವಾಗಿಸಿಕೊಂಡು ಬಡವರ ರಕ್ತ ಹೀರುತ್ತದೆ. ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಪಡೆಯಲು ಬಡವರು ಕಚೇರಿಗಳಿಗೆ ಅಲೆದಾಡಿ ಅಲೆದಾಡಿ ಕೊನೆಗೆ ಯೋಜನೆಯ ಸಹವಾಸವೇ ಬೇಡ ಎಂದು ಬೇಸತ್ತು ಸರ್ಕಾರಗಳನ್ನು ಶಪಿಸುತ್ತಿರುವುದು ಸಾಮಾನ್ಯವಾಗಿದೆ. ಯೋಜನೆಗಳ ಮಂಜೂರಾತಿಗಾಗಿ ಹಾಗೂ ಅವುಗಳ ಲಾಭ ಪಡೆಯುವ ಸಮಯದಲ್ಲಂತೂ ಅಧಿಕಾರಿಗಳು ತಮ್ಮ ಹಣದಾಹಿತನವನ್ನು ಪ್ರದರ್ಶಿಸಿ ಬಡವರ ಕಣ್ಣೀರಿಗೆ ಕಾರಣವಾಗುವ ಸನ್ನಿವೇಶಗಳು ಪ್ರಬುದ್ಧರ ಆಕ್ರೋಶ ಹೆಚ್ಚುವಂತೆ ಮಾಡುತ್ತದೆ. 

ಭ್ರಷ್ಟಾಚಾರ ಇಂದು ನೆನ್ನೆಯದಲ್ಲ ಕಾಲಕಾಲದಿಂದಲೂ ತಲತಲಾಂತರದಿಂದಲೂ ಹರಿದು ಬರುತ್ತಿರುವ ಒಂದು ಪಿಡುಗಾಗಿದೆ. ದೇಶದಲ್ಲಿ ಶೇ.70 ರಿಂದ 80 ರಷ್ಟು ಭ್ರಷ್ಟಾಚಾರಿಗಳು ಇದ್ದಾರೆ. ಕೇವಲ ರಾಜಕಾರಣಿಗಳು ಅಧಿಕಾರಗಳ ಮಟ್ಟದಲ್ಲಿ ಮಾತ್ರವಲ್ಲ, ಇತರೆ ಕ್ಷೇತ್ರಗಳಲ್ಲೂ ಇದೆ. ಭಾರತದಲ್ಲಿ ಭ್ರಷ್ಟಾಚಾರ ಹೆಚ್ಚಾಗಲು ನಾವೇ ಕಾರಣ ಜನರು ಭ್ರಷ್ಟಾಚಾರ ಪ್ರೋತ್ಸಾಹಿಸಿದ ಪರಿಣಾಮ ಒಂದು ರೀತಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಎಲ್ಲರಿಗೂ ಭ್ರಷ್ಟಚಾರಕ್ಕೆ ಕಾರಣರಾಗುತ್ತಿದ್ದಾರೆ. “ಭ್ರಷ್ಟಾಚಾರ ರಹಿತ ಸಮಾಜ ಹೇಗೆ ಎನ್ನುವ ಜಿಜ್ಞಾಸೆ ನಮ್ಮನ್ನು ಕಾಡುತ್ತದೆ”, ಒಮ್ಮೆಲೆ ಭ್ರಷ್ಟಾಚಾರ ನಿರ್ಮೂಲನೆ ಆಗುತ್ತದೆ. ಎಂಬ ಭ್ರಮೆ ಇಲ್ಲ ಆದರೆ ಇದರ ವಿರುದ್ಧ ದೇಶದಲ್ಲಿ ಸಾರ್ವತ್ರಿಕ ಚಳುವಳಿ ಹೋರಾಟಗಳು ನಡೆಯಬೇಕು ಎಲ್ಲರೂ ಆದರ್ಶ, ಸರಳ ಜೀವನ ರೂಢಿಸಿಕೊಳ್ಳಬೇಕು. 

ಭ್ರಷ್ಟಾಚಾರ ಎಂಬ ಪಿಡುಗು ಎಷ್ಟು ಆವರಿಸಿಬಿಟ್ಟಿದೆ ಎಂದರೆ ಕೆಲವು ವರ್ಷಗಳ ಹಿಂದೆ ಸರ್ಕಾರಿ ಉದ್ಯೋಗ ಪಡೆಯಲು ಲಂಚ ನೀಡಬೇಕಾಗಿತ್ತು.  ಆದರೆ ಇಂದು  ಡೆತ್ ಸರ್ಟಿಫಿಕೇಟ್ ಗೂ, ಬರ್ತ್ ಸರ್ಟಿಫಿಕೇಟ್ ಗೂ ಅಲ್ಲದೇ ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರೇಷನ್ ಕಾರ್ಡ್, ಗುರುತಿನ ಚೀಟಿ , ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಹೀಗೆ ಮುಂತಾದವು ಸಣ್ಣ ಪುಟ್ಟ ಕೆಲಸದಲ್ಲಿಯೂ ಭ್ರಷ್ಟಾಚಾರ ರಾರಾಜಿಸುತ್ತಿದೆ. ಈ ಲಂಚವನ್ನು ಪರ್ಸೇಂಟೇಜ್ ಲೆಕ್ಕದಲ್ಲಿ ಪಡೆಯಲಾಗುತ್ತದೆ. ಕಡತ ವಿಲೇವಾರಿ ಮಾಡಲು ಲಂಚ ನೀಡಬೇಕಾಗಿದೆ. ಇದರ ಪರಿಣಾಮ ಭಾರತದ ನಿಜವಾದ ಆತ್ಮಕ್ಕೆ ಧಕ್ಕೆಯಾಗಿದೆ. ಜನರ ದಕ್ಷತೆ ಪ್ರಾಮಾಣಿಕತೆಯೇ ಕುಸಿದಿದೆ. ಸಮಾಜ ಮತ್ತು ಸರ್ಕಾರದ ಮೇಲೆ ನಂಬಿಕೆಯೆ ಇಲ್ಲವಾಗಿದೆ ಭ್ರಷ್ಟಾಚಾರ ಮತ್ತು ಜಾತಿ ವ್ಯವಸ್ಥೆ ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಭ್ರಷ್ಟಾಚಾರವು ದೈನಂದಿನ ಜೀವನದ ಅನುಭವವಾಗಿದೆ. ಹೊಸ ಗುರುತಿನ ಚೀಟಿ ನೀಡಲು ಅಧಿಕಾರಿಶಾಹಿಗೆ ಹಣ, ಆಸ್ಪತ್ರೆಯಲ್ಲಿ ಉಚಿತವಾಗಿ ವಿತರಿಸಬೇಕಾದ ಕುಟುಂಬ ಯೋಜನೆ ಮಾತ್ರಗಳನ್ನು ಪಡೆಯಲು ಅನಧಿಕೃತ ಪಾವತಿ ಅಥವಾ ಕಿರುಕುಳವನ್ನು ತಪ್ಪಿಸಲು ಪೋಲೀಸರಿಗೆ ಸಾಂದರ್ಭಿಕ ಲಂಚ ಈ ರೀತಿಯ ಭ್ರಷ್ಟಾಚಾರವು ಒಟ್ಟಾರೆಯಾಗಿ ಸಮಾಜದ ಮೇಲೆ ಬೀರುತ್ತದೆ. ಆದರೆ ಅದರಿಂದ ಹೆಚ್ಚು ಬಳಲುತ್ತಿರುವವರು ಬಡವರು. 

ಭ್ರಷ್ಟಾಚಾರವು ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳನ್ನು ಬೀರುತ್ತದೆ. ಆದರೆ ಇದು ಹೆಚ್ಚಾಗಿ ಬಡವರ ಮೇಲೆ ಅಸಮಾನ ಪರಿಣಾಮ ಬೀರುತ್ತದೆ. ಭ್ರಷ್ಟಾಚಾರವು ಅವರಿಗೆ ಅಗತ್ಯವಿರುವ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಕಾನೂನು ಸೇವೆಗಳಿಗೆ ಅವರ ಪ್ರವೇಶವನ್ನು ಮತ್ತಷ್ಟು ಮಿತಿಗೊಳಿಸಬಹುದು. ಭ್ರಷ್ಟಾಚಾರದಿಂದ ಆಗುವ ಹಾನಿ ಬಹುಪಟ್ಟು ಇದು ಪ್ರಜಾಪ್ರಭುತ್ವದ ತಳಹದಿಯ ಮೇಲೆ ದಾಳಿ ಮಾಡಬಹುದು. ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಕುಗ್ಗಿಸಬಹುದು ಕಾನೂನುಗಳು ಮತ್ತು ನಿಬಂಧನೆಗಳನ್ನು ತಿರುಚಬಹುದು. ಅಧಿಕಾರಶಾಹಿ ಅಡೆತಡೆಗಳನ್ನು ಸೃಷ್ಟಿಸಬಹುದು,ಇದರಿಂದಾಗಿ ನಮ್ಮ ದೇಶದಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲದಂತಾಗಿದೆ. 

ಭ್ರಷ್ಟಾಚಾರವು ಈಗಾಗಲೇ ಬಿಗಿಯಾದ ಬಜೆಟ್‌ನಲ್ಲಿ ತಿನ್ನುತ್ತದೆ ಮತ್ತು  ಹೆಚ್ಚುವರಿ ವೆಚ್ಚಗಳು ಇತರ ಮೂಲಭೂತ ಅಗತ್ಯತೆಗಳ ಪ್ರದೇಶಗಳಲ್ಲಿ ಕಡಿತವನ್ನು ಅರ್ಥೈಸುತ್ತದೆ. ಬಡವರು ತಮ್ಮ ಆದಾಯದ ಹೆಚ್ಚಿನ ಪಾಲನ್ನು ಶ್ರೀಮಂತರಿಗಿಂತ ಲಂಚದ ಮೇಲೆ ಪಾವತಿಸುತ್ತಾರೆ. ಎಂದು ಪ್ರಾಯೋಗಿಕ ವಿಶ್ಲೇಷಣೆ ತೋರಿಸಿದೆ. ಬಡವರು ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಶಾಲೆಗಳನ್ನು ಬಳಸಲು ಸಾಧ್ಯವಿಲ್ಲ. 
ಈ ಎಲ್ಲಾ ಸಮಸ್ಯೆಗಳ ಹಿನ್ನೆಲೆ ಕುರಿತಾಗಿ ಭ್ಟಚಾರವನ್ನು ತಡೆಗಟ್ಟುವ ಉದ್ದೇಶದಿಂದ ವಿಶ್ವ ಭ್ರಷ್ಟಾಚಾರ ವಿರೋಧಿ ದಿನ ಡಿಸೆಂಬರ್ 9 ರಂದು ಆಚರಿಸಲಾಗುತ್ತದೆ. ಭ್ರಷ್ಟಾಚಾರ ವಿರೋಧಿ ಆಚರಣೆ ಮತ್ತು ಆತ್ಮಾವಲೋಕನ ಅತ್ಯಂತ ಅವಶ್ಯಕವಾಗಿದೆ. 31 ಅಕ್ಟೊಬರ್‌ 2003 ರಂದು ಜನರಲ್‌ ಅಸೆಂಬ್ಲಿ ಭ್ರಷ್ಟಾಚಾರದ ವಿರುದ್ಧ ಯುನೈಟೆಡ್‌ ನೇಷನ್ಸ್‌ ಕನ್ವೆನ್ಶನ್ ಅನ್ನು ಅಂಗೀಕರಿಸಿತು  ಇದು ಡಿಸೆಂಬರ್‌ 9, 2005 ರಲ್ಲಿ ಜಾರಿಗೆ ಬಂದಿತು. ಈ  ಆಚರಣೆಯು ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಿರ್ಮೂಲನೆ ಗೊಳಿಸಿದೆ? ಬಡವರನ್ನು ಎಷ್ಟರಮಟ್ಟಿಗೆ ಭ್ರಷ್ಟಾಚಾರ ದಿಂದ ಪಾರು ಮಾಡಿದೆ ಎಂಬುವುದೇ ಜನರ ಪ್ರಶ್ನೇ?

ನೈತಿಕ ಮತ್ತು ಮಾನವೀಯತೆಯ ಆಧಾರದ ಮೇಲೆ ಈ ಸಮಾಜವನ್ನು ಪುನರ್ ರೂಪಿಸಬೇಕಿದೆ. ಧಾರ್ಮಿಕ ಆಧ್ಯಾತ್ಮಿಕ ಗುರು ಪರಂಪರೆ ಆರೋಗ್ಯ ಸಮಾಜ ಸೇವೆ ಪತ್ರಿಕೋದ್ಯಮ ಸೇರಿ ಎಲ್ಲವೂ ಬಹುತೇಕ  ಭ್ರಷ್ಟಗೊಂಡಿರುವಾಗ ಇದರ ನಿರ್ಮೂಲನೆ ತುಂಬಾ ಕಷ್ಟ ಆದರೆ ಅಸಾಧ್ಯವಲ್ಲ. ಮಾನವೀಯ ಮೌಲ್ಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಿದರೆ ಸಾಮಾನ್ಯ ಜನರಾದ ನಾವುಗಳು ಹಣ ಅಧಿಕಾರಕ್ಕಿಂತ ಮನುಷ್ಯನ ನಿಜವಾದ ಮತ್ತು ಪ್ರಮಾಣಿಕ ವ್ಯಕ್ತಿತ್ವಕ್ಕೆ ಗೌರವ ಕೊಡುವ ಸರಳ ಮನೋಭಾವ ಪ್ರದರ್ಶಿಸಿದರೆ ಭ್ರಷ್ಟಾಚಾರ ಸಾಕಷ್ಟು ಕಡಿಮೆಯಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ನಾವು ಪಾರದರ್ಶಕತೆಯನ್ನು ಅಳವಡಿಕೊಳ್ಳಬೇಕು ಪಾರದರ್ಶಕತೆ ಎಂದರೆ ಯಾರು ಏಕೆ, ಏನು ಹೇಗೆ ಮತ್ತು ಎಷ್ಟು ಎಂಬುವುದನ್ನು ತಿಳಿದುಕೊರ್ಳಳುವುದು. ಇದರರ್ಥ ಔಪಚಾರಿಕ ಮತ್ತು ಅನೌಪಚಾರಿಕ ನಿಯಮಗಳು ಯೋಜನೆಗಳು ಪ್ರಕ್ರಿಯೆಗಳು ಮತ್ತು ಕ್ರಿಯೆಗಳ ಮೇಲೆ ಬೆಳಕು ಚೆಲ್ಲುವುದು. ಪಾರದರ್ಶಕತೆಯು ನಮಗೆ ಸಾರ್ವಜನಿಕರಿಗೆ ಸಾಮಾನ್ಯ ಒಳತಿಗಾಗಿ ಎಲ್ಲಾ ಶಕ್ತಿಯನ್ನು ಹೊಂದಲು ಸಹಾಯ ಮಾಡುತ್ತದೆ. 
ಮಾಹಿತಿಯನ್ನು ಹುಡುಕುವುದು ಮತ್ತು ಸ್ವೀಕರಿಸುವುದು ಮಾನವ ಹಕ್ಕು, ಇದು ಭ್ರಷ್ಟಾಚಾರದ ವಿರುದ್ಧ ರಕ್ಷಣೆಯಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಿರ್ಧಾರ ತೆಗೆದು ಕೊಳ್ಳುವವರು ಹೆಚ್ಚಿಸುತ್ತದೆ. ನಮ್ಮ ಸಮಾಜಿಕ ಭಾವನೆಗಳನ್ನು ಬದಲಾಯಿಸದಿದ್ದರೆ. ಭವಿಷ್ಯದಲ್ಲಿ ಯುವ ಸಮೂಹಕ್ಕೆ ಸಂಕಷ್ಟದ ದಿನಗಳು ಎದುರಾಗಲಿದೆ. ಹಾಗಾಗಿ ಭ್ರಷ್ಟರಹಿತ ಸಮಾಜ ಕಟ್ಟಲು ಯುವಜನತೆ ಮುಂದಾಗಬೇಕು. 

- ಅರ್ಚನ ಹೊನಲು, ಅತ್ತಿಬೆಲೆ.

ಸ್ವಾತಂತ್ರ ಹೋರಾಟ (ಕವಿತೆ) - ರಹಿಮಾನ. ಖಾ. ನದಾಫ್.

ಆಂಗ್ಲರ ಮೇಲೆ ಕದನಗಳ ಮೂಲಕ ಪ್ರಾರಂಭ ಸ್ವಾತಂತ್ರ್ಯ ಹೋರಾಟ
ಭಾರತಾಂಬೆಯನ್ನು ಸ್ವತಂತ್ರ ಮಾಡಲು ಹೋರಾಟ
ಸಾವಿರಾರು ದೇಶಭಕ್ತರ ಬಲಿದಾನದ ಹೋರಾಟ
 ನೂರಾರು ವರ್ಷ ನಿರಂತರ  ನಡೆದ ಸ್ವಾತಂತ್ರ್ಯ ಹೋರಾಟ..!!

ದೇಶದ್ರೋಹಿಗಳ ಕುಣಿತದಲೂ ಭ್ರಷ್ಟರ ಸಂತೆಯಲೂ
ಜಾತಿ ಮುಖವಾಡಗಳ ಸೀಳಿ ಹಾರುವ ತಿರಂಗದಡಿಗೆ ಹಸಿದವರ ಉಸಿರಾಗಿ ದಮನಿತರ ದನಿಯಾಗಿ
ಭರವಸೆಯ ಬೆಳಕಿನೆಡೆಗೆ ನುಗ್ಗಿ ಹಾರಲೇಬೇಕು...

ಕೆಂಪು ಪರಂಗಿಯವರ ಬಂದೂಕಿಗೆ ರಕ್ತ ಮಾಂಸ ಚೆಲ್ಲಿದ ಕೆಚ್ಚಿದೆ ಕಲಿಗಳ ಕನಸು ನನಸಾಗಿಸಲೂ
ನಿತ್ಯವು ಹೊರೆದವಳ ನೆನೆಯುತ್ತ ಉಗ್ರಗಾಮಿಗಳ ಹೆಡೆಮುರಿ ಕಟ್ಟಿ ಹಿಂಡಾಗಿ ಹಾರಲೇಬೇಕು ನೆಮ್ಮದಿಯ ನಾಳೆಗಾಗಿ ಪಣವತೊಟ್ಟವರು..!!

ರಾಜವಂಶದ ಮೌರ್ಯ ಇತಿಹಾಸದ ಭವ್ಯ ಕೀರ್ತಿ ಸುಂದರ
ರಾಷ್ಟ್ರಗೀತೆ ರಾಷ್ಟ್ರ ಧ್ವಜ ಲಾಂಛನ ಗಾಂಧೀಜಿಗೆ ನಮಸ್ಕಾರ
ಪ್ರಜಾಪ್ರಭುತ್ವ ನಿರ್ಣಯ ಅಂಬೇಡ್ಕರ್ ಸಂವಿಧಾನ ಸಾಗರ
ಹಿಮಗಿರಿ ನೀಲಸಮುದ್ರ ಶಿವಶಂಕರ ರಕ್ಷಾ ಭೂಶಿರ..!!

ಕಾಳಿದಾಸ ಅಷ್ಟ ಜ್ಞಾನಿಗಳ ಕಾವ್ಯ ಸಂಪದದ ಪುರಸ್ಕಾರ
ವೇದ ಸಂವೇದ ಯೋಧ ಭಗತ್ತರ ರೈತರ ಜೀವನ ಸಾರ
ಪಶು ಪಕ್ಷಿ ವನ್ಯಜೀವಿ ಹುಲಿ ಸಿಂಹಗಳ ರಕ್ಷಣಾ ಮಂದಿರ
ಭಾರತ ಸ್ವಾತಂತ್ರ್ಯ ಹೋರಾಟದ ಭವ್ಯ ಪರಂಪರೆ ತೀರ
ಸರ್ವ ಧರ್ಮ ಜಾತ್ಯಾತೀತ ಭಾಷ್ಯತೀತ ಆನಂದ ಸಾಗರ..!!

- ರಹಿಮಾನ. ಖಾ. ನದಾಫ್, ವಿದ್ಯಾರ್ಥಿ ಇಲಕಲ್. # 6360523334

ಶಾಪಗ್ರಸ್ಥ ಅಪ್ಪ (ಕವಿತೆ) - ಎ. ಎನ್. ರಮೇಶ್, ಗುಬ್ಬಿ.

ಅಮ್ಮ ಪ್ರಸವ ವೇದನೆಯಲಿ ನೋವಿನಲಿ
ನರಳುತ್ತಿದ್ದರೆ ಹೆರಿಗೆಕೋಣೆಯ ಒಳಗೆ..
ಒಂದೆಡೆ ಕೂರದೆ ನಿಲ್ಲದೆ ಕಳವಳಿಸುತ್ತಿದ್ದ
ಅಪ್ಪ ಇದ್ದಬದ್ದ ದೇವರನೆಲ್ಲ ಜಪಿಸುತ್ತಿದ್ದ
ಕ್ಷಣಕ್ಷಣ ಜೀವವ ಹಿಡಿದು ಮುಷ್ಟಿಯಲಿ
ತಪಿಸಿ ಪರಿತಪಿಸಿ ಚಡಪಡಿಸುತ್ತಿದ್ದ ಹೊರಗೆ
ಸತಿಸುತರ ವಿಷಯದಿ ಮಹಾಪುಕ್ಕಲ ಅಪ್ಪ.!

ಹಗಲಿರುಳು ದುಡಿದು ಓದಿಸಿ ಬೆಳೆಸಿದ ಮಗ
ಮುಂದೊಂದು ದಿನ ಎಲ್ಲರೆದುರು ಕಡೆಗಣಿಸಿ
“ಜಾಸ್ತಿ ಓದಿಲ್ಲ ನನ್ನಪ್ಪ, ನನ್ನಷ್ಟು ತಿಳಿದಿಲ್ಲ..”
ಎಂದು ಮೂದಲಿಸುವಾಗ ಪೇಲವ ನಗೆನಕ್ಕು
ಜಗದೆದುರು ಮೂರ್ಖನಾಗುವ ಬೆಪ್ಪುತಕ್ಕಡಿ ಅಪ್ಪ.!
ಹೆಗಲಲ್ಲಾಡಿದ ಮಗನೇ ಹಗುರಾಗಿ ಕಾಣುವಾಗ
ಸಂಕಟ ನುಂಗಿಕೊಳ್ಳುವ ನಿಷ್ಪಾಪಿಜೀವ ಅಪ್ಪ.!

ಕೇಳಿ ಕೇಳಿದ್ದನ್ನೆಲ್ಲ ಕೊಡಿಸಿ ಮುದ್ದುಮಾಡಿ ಮೆರೆಸಿ
ಅಕ್ಷರಶಃ ರಾಜಕುಮಾರಿಯಂತೆ ಬೆಳೆಸಿದ ಮಗಳು..
ತಾನೇ ಕಣ್ಣಲ್ಲಿ ಎಣ್ಣೆ ಹಾಕಿ ಹುಡುಕಿದ ಸಿರಿವಂತರ
ಮನೆಗೆ ಸೊಸೆಯಾಗಿ ಹೋದಮೇಲೆ ಉಢಾಫೆಯಲಿ
“ನನ್ನ ಗಂಡನಷ್ಟು ದುಡ್ಡಿಲ್ಲ, ದುಡಿದಿಲ್ಲ ಬಡವ ನನ್ನಪ್ಪ”
ಎಂದಾಗ.. ಎತ್ತಾಡಿಸಿದ ಮನೆಮಗಳೇ ಎತ್ತಾಡುವಾಗ..
ಮೌನದಿ ಹಿಡಿಜೀವವಾಗುವ ಬಡಪಾಯಿ ಅಪ್ಪ.! 

‘ಮಕ್ಕಳಿಗೆ ಆಸ್ತಿ ಮಾಡಬೇಡಿ ಮಕ್ಕಳನೇ ಆಸ್ತಿಮಾಡಿ’
ಎಂಬ ವೇದಾಂತಿಗಳ ನುಡಿ ಕೇಳಿ ಮಕ್ಕಳಿಗೆ ಹಾಗೆ
ಚೆಂದದ ಬದುಕು ಭವಿಷ್ಯ ಕೊಟ್ಟರೂ, ಕಡೆಗವರು..
“ನಮ್ಮಪ್ಪ ಹಣ ಜಮೀನು ಮಾಡದ ಮಹಾಉಡಾಳ’
ಎಂದು ಲೋಕಕೆಲ್ಲ ಸಾರುವಾಗ, ಹಂಗಿಸಿ ಆಡುವಾಗ
ಒಳಗೊಳಗೆ ಕುಗ್ಗಿ ಹೋಗುವ ಕನಿಷ್ಟದವನು ಅಪ್ಪ
ಎಲ್ಲ ಮಾಡಿ ಎಲ್ಲಿಯೂ ಸಲ್ಲದ ಶಾಪಗ್ರಸ್ಥ ತ್ರಿಶಂಕು ಅಪ್ಪ.!

ಮಾಡಿಟ್ಟಮನೆ, ಕೂಡಿಟ್ಟಹಣ ಹಂಚಿಕೊಂಡ ಮಕ್ಕಳು
ಅಗುಳಗುಳಿಗು ಲೆಕ್ಕಿಸುವಾಗ, ಅಡಿಗಡಿಗು ಹಳಿವಾಗ
ಅವಡುಗಚ್ಚುತ ಸಹಿಸಿಕೊಳ್ಳುವ ಅಸಹಾಯಕ ಅಪ್ಪ
ತಾ ಹೆತ್ತು ಹೊತ್ತ ಮಕ್ಕಳೇ, ತನ್ನನೇ ಹೊರೆಯೆಂದು
ಬೀದಿಪಾಲು ಮಾಡಿದಾಗ, ವೃದ್ದಾಶ್ರಮಕೆ ದೂಡಿದಾಗ
ಇಳಿವಯಸಿನಲಿ ಅಬ್ಬೆಪಾರಿಯಾಗುವ ಅಶಕ್ತ ಅಪ್ಪ
ಅಳುವುದ ಬಲ್ಲದ, ಅಳಲೊಲ್ಲದ ಆತ್ಮಾಭಿಮಾನಿ ಅಪ್ಪ.!  



- ಎ.ಎನ್.ರಮೇಶ್. ಗುಬ್ಬಿ.

ನನ್ನ ಕಂದ (ಭಾವಗೀತೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಮಗುವೆ ನಿನ್ನ ನಗುವಿನಲ್ಲಿ 
ಗೆಲುವಿನಲೆಯ ಕಂಡೆನಿಲ್ಲಿ 
ಬಸಿರ ಹಸಿರ ಉಡುಗೆಯಲ್ಲಿ 
ಏನಿದು ಹೊಸ ಅನುಭವ... l 
                                 llಪಲ್ಲವಿ ll
ನನ್ನ ಮಡಿಲ ಕುಡಿಯು ನೀನು 
ನಮ್ಮ ಬಾಳಿನ ಬೆಳಕು ನೀನು 
ಗಗನದಿ ಹೊಳೆವ ತಾರೆಯಂತೆ 
ಬೆಳಗು  ನೀನೆಂದೆಂದಿಗೂ...... ಬೆಳಗು
  ನೀನೆಂದೆಂದಿಗೂ.....
                                 ಚರಣ ೧
ನಿನ್ನ ತುಂಟಾಟದಾಟಗಳು 
ನಿನ್ನ ಮುಗ್ಧ ಅಳುವಿನ ಕರೆಯು
ಸೆಳೆಯಿತೆನ್ನನು ನಿನ್ನ ಬಳಿಯಲಿ
ಬಾಚಿತಬ್ಬಿಕೊಳ್ಳಲು.... ಅಪ್ಪಿ ಮುದ್ದಾಡಲು...
                                   ಚರಣ ೨

ನಾಡಿನೊಳಿತಿಗಾಗಿ ಬಾಳು 
ನಾಡಜನರ ಕುವರನಾಗು 
ನಾದಲೋಕದ ಮುರಳಿಯಾಗು 
ನಾರಿದೇವಕಿ ಕಂದ ಕೃಷ್ಣನಂತಾಗು....
                                      ಚರಣ ೩

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಶರಣ ಪುರದ ನಾಗಣ್ಣ (ಲೇಖನ) - ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.

ಹನ್ನೆರಡನೆಯ ಶತಮಾನದ ಕಾಲಘಟ್ಟ
ಒಟ್ಟಾರೆ ಹೇಳುವುದಾದರೆ ಅದೊಂದು ವ್ಯಕ್ತಿ ಮತ್ತು ಸಮಾಜದ ಆಂತರ್ಯದಲ್ಲಿನ ಸರ್ವತೋಮುಖದ ಸಂಘರ್ಷದ ಪರ್ವ ಕಾಲವಾಗಿದೆ. ಇದಕ್ಕೆ ಸಾಕ್ಷಿಯಾಗಿ ಅಪ್ಪ ಬಸವಾದಿ ಶರಣರು ಮಾಡಿದ ಆ ಕಲ್ಯಾಣ ಕ್ರಾಂತಿಯ ಚಾರಿತ್ರಿಕ ಘಟನೆಗಳನ್ನು ಹಾಗೂ ವಚನಗಳ ಆಂತರ್ಯದ ಆಳವನ್ನು ಪರಿಶೀಲನೆ ಮಾಡಿ ನೋಡ ಬಹುದಾಗಿದೆ. ಇಂದು ಶರಣರು ಹಾಗೂ ವಚನಗಳು ಜನಮಾನಸದಲ್ಲಿ ಉನ್ನತ ಸ್ಥಾನವನ್ನು ಪಡೆದಿವೆಯೇನೋ ನಿಜ. ಆದರೆ, ಅಂದು ಶರಣರು ಎದುರಿಸಿದ ಸಂಘರ್ಷ ವ್ಯಕ್ತಿ ನೆಲೆಯಲ್ಲಿ ಹಾಗೂ ಸಾಮಾಜಿಕ ನೆಲೆಯಲ್ಲಿ ಎಂಥಾ ಕಡುಕಷ್ಟದ್ದಿತ್ತು ಎಂಬ ಸಂಗತಿಯೇ ಹೃನ್ಮನಗಳ ಹಿಂಡುತ್ತದೆ. ಅಂತಹವರಲ್ಲಿ ನಮ್ಮ ಪುರದ ನಾಗಣ್ಣನವರ ಹತ್ತು ವಚನಗಳು ಪ್ರಚಲಿತದಲ್ಲಿವೆ.
ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಮೊದಲಾದ ವಿಷಯಗಳ ವಿವರಗಳು ಇವರ ವಚನಗಳಲ್ಲಿ ಕಂಡುಬರುತ್ತವೆ.  ಕೆಲವು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಇನ್ನು ಕೆಲ ವಚನಗಳಲ್ಲಿ ಈ ಪುರದ ನಾಗಣ್ಣನವರು ಪಾದೋದಕದ ಮಹಿಮೆಯನ್ನು ಹೇಳಿರುವರು.
ಈ ಶರಣರ ಜನ್ಮಸ್ಥಳ ತುಮಕೂರು ಜಿಲ್ಲೆ ಗುಬ್ಬಿ ತಾಲೂಕು ಅಮರಗುಂಡ ಗ್ರಾಮವಾಗಿದೆ. ಕಾಲ ೧೧೬೦, ಇವರ ತಂದೆ ಅಮರಗುಂಡ ಮಲ್ಲಿಕಾರ್ಜುನರು. ಅನುಭವ ಮಂಟಪದ ೭೭೦ ಅಮರ ಗಣಂಗಳಲ್ಲಿ ಪುರದ ನಾಗಣ್ಣ ಕೂಡ ಒಬ್ಬ ವಚನಕಾರ ಶರಣರು. 'ಅಮರಗುಂಡದ ಮಲ್ಲಿಕಾರ್ಜುನ' ಅಂಕಿತನಾಮದಲ್ಲಿ  ಶರಣರು ಬರೆದ ಹತ್ತು ವಚನಗಳು ದೊರೆತಿವೆ.    

ವಚನ 
ನೆನೆವ ಮನಕ್ಕೆ ಮೆತ್ತನೆ ತೋರಿದೆ
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ
ಪೂಜಿಸುವ ಕೈಗೆ ಹೊನ್ನನೆ ತೋರಿದೆ
ಇಂತೀ ತ್ರಿವಿಧವನೆ ತೋರಿ ಕೊಟ್ಟು ಮರಹನಿಕ್ಕಿದೆಯಯ್ಯಾ
ಅಮರಗುಂಡ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೇರಗಾದೆನು

ವಿಶ್ಲೇಷಣೆ
ಲಿಂಗ ನೆನೆಯುವ ಮನಸ್ಸಿನಲ್ಲಿ ಭೂಮಿ ಗಳಿಸುವ ಆಸೆ ತೋರಿದೆ. ಲಿಂಗ ನೋಡುವ ಕಣ್ಣಿಗೆ ಹೆಣ್ಣನ್ನು ತೋರಿಸಿದೆ.ಪೂಜಿಸುವ ಕೈಗೆ ಹೊನ್ನಿನ ಆಸೆ ತೋರಿಸಿ ನಿನ್ನ ಮರೆವನ್ನು ಕೊಟ್ಟೆ. ಮಲ್ಲಿಕಾರ್ಜುನಾ ನೀ ತೋರಿದ ನಾಟಕವನ್ನು, ಮೋಹಮಾಯೆಯನ್ನು ನೋಡಿ ಬೆರೆಗಾದೆನು.
ಪರಮಾತ್ಮನು ಭಕ್ತನಿಗೆ ಹೆಣ್ಣು, ಹೊನ್ನು, ಮಣ್ಣನ್ನು ತೋರಿಸಿಕೊಟ್ಟು ತನ್ನ ಧ್ಯಾನದಿಂದ ಮರೆಯಾಗುವ ಕತೆ ಮಾಡಿದ ಮಾಯಾಜಾಲ ನನ್ನು ಕಂಡು ಬೆರಗಾಗಿದ್ದೆನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಶರಣರು ಈ ಅರಿವಿನ ಮೂಲ ಅರಿತು ಆಸೆಯ, ಮಾಯೆಯ ಒಳಗಾಗದೆ ಮುಕ್ತರಾಗಿದ್ದಾರೆ.
ಅಲ್ಲಮ ಪ್ರಭುಗಳ ಒಂದು ವಚನ ಕೂಡ ಹೀಗೆ ಇದೆ. 
ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ
ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರ.

ತಮ್ಮ ಒಂದು ವಚನದಲ್ಲಿ; ಬೇಸಾಯದ ಕ್ರಿಯೆಯನ್ನು ಹೇಳುತ್ತಾ ಆಧ್ಯಾತ್ಮವನ್ನು ಅದಕ್ಕೆ ಅನ್ವಯಿಸುವರು. ಭಕ್ತನ ಲಿಂಗ ಭಿನ್ನವಾಗಲು ಆ ಲಿಂಗದೊಡನೆ ಪ್ರಾಣ ವನ್ನು ಬಿಡಬೇಕೆನ್ನುವ ನಿಷ್ಠುರ ವ್ರತವನ್ನು ಆಚರಿಸ ಬೇಕೆಂದು ಪ್ರತಿಪಾದಿಸಿದ ನಿಷ್ಠುರ ಶರಣರಿವರು.

ವಚನ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ: 
ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ 
ನಿಮ್ಮತ್ತಲೊಂದೆಳವುತ್ತಲದೆ.
ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ?
ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ.      ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ.
ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ
ತಂದೆ ಈ ದಂದುಗವ ಮಾಣಿಸಿ
ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
  
ವಿಶ್ಲೇಷಣೆ 

 ಇಲ್ಲಿ ವಚನಕಾರರು ಅಂದಿನ ಕಾಲದ ವ್ಯಕ್ತಿ ತಾನು ಭಕ್ತಿಯ ಮಾರ್ಗಕ್ಕೆ ಬರುವ ಹಂಬಲದಿಂದ ಶರಣನಾಗಲು ಬಂದು ಸೇರಿದಂತೆಯೇ ಎದುರಿಸುವ ಆಂತರಿಕ ಸಂಘರ್ಷದ ತುಮುಲವನ್ನು ತಿಳಿಸಿದ್ದಾರೆ. ಇಲ್ಲಿ ಕಾಯದ ಅರುವಿನ ಅಂಗಪ್ರಜ್ಞೆಯಲ್ಲಿ ತನ್ನನ್ನು ತಾನು ಪರಿಶೀಲಿಸಿ ನೋಡಿದರೆ ಸ್ಪಷ್ಟವಾಗಿ ಎರಡು ಸ್ಥಿತಿ ಕಂಡಿವೆ. ಅದರ ಬಗ್ಗೆ ವಚನಕಾರರು ತಮ್ಮ ಇಷ್ಟಲಿಂಗಕ್ಕೆ ನಿವೇದನೆ ಮಾಡಿಕೊಂಡು, ಒಂದು ಭ್ರಾಂತಿಯತ್ತ ಎಳೆಯುತ್ತದೆ ಮತ್ತೊಂದು ನಿಮ್ಮತ್ತ ಎಳೆಯುತ್ತದೆ ದೇವಾ ಎನ್ನುವರು. ಇವು ಪರಸ್ಪರ ಅರಿತು ಅನುಸರಿಸಿ ನಡೆಯದೇ ಇರುವಾಗ ನಾನು ಸತ್ಪಥಕ್ಕೆ (ನೇರ)ಹೇಗೆ ಅಡಿಯಿಡಲು ಸಾಧ್ಯವೆನ್ನುವರು.
ಹೀಗೆ ಅವುಗಳ ಪರಸ್ಪರರ ಸಂಘರ್ಷದಲ್ಲಿ ಕಾಲಚಕ್ರದಲ್ಲಿ ಹುಟ್ಟಿ, ಕರ್ಮ ಚಕ್ರದಲ್ಲಿಯೇ ಆಯುಷ್ಯ ಕಳೆಯುತ್ತಿದ್ದೆ. ಎರಡು ತಲೆಯ ಗಂಡಬೇರುಂಡ ಪಕ್ಷಿಯಂತೆ ಒಂದು ತಲೆಯಿಂದ ವಿಷವನ್ನು ಮತ್ತೊಂದರಿಂದ ನಿರ್ವಿಷವನ್ನು ಸೇವಿಸಿದಂತೆ ಆಗಿದೆ. ಅಂದಿನ ಅರಿವು ಅಂದಿಗೇ ಮರೆತು ಹೋಯಿತೆಂದು ಪರಿತಪಿಸುವರು. ಮುಂದೆ ಇಷ್ಟಲಿಂಗ ಸಾಧನೆಯನ್ನು ಮಾಡಲು ಯಾವಾಗ ಯತ್ನಿಸುತ್ತಿದ್ದಾರೆಯೋ ಆಗ ಈ ರೀತಿಯ ಗೊಂದಲ ಉಂಟಾಗುತ್ತದೆ. ಇದನ್ನು ಹೋಗಲಾಡಿಸಿ, ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ ಎಂದು ಪರಿಪರಿಯಾಗಿ ಬಿನ್ನವಿಸುವಲ್ಲಿ ಶರಣತತ್ವ ಗಳ (ಇಷ್ಟಲಿಂಗದ) ನಿಜವಾದ ಅನುಷ್ಠಾನ ಎಷ್ಟು ಕಷ್ಟದ್ದೆಂಬುದನ್ನು ಈ ವಚನದಲ್ಲಿ ಲೌಕಿಕದ ನೇರ ಅನುಭವದ ಚಿತ್ರಣ ನೀಡುವ ಮೂಲಕ ಸ್ಪಷ್ಟಪಡಿಸಲಾಗಿದೆ.

- ಶ್ರೀಮತಿ ಸುಲೋಚನಾ ಮಾಲಿ ಪಾಟೀಲ.


ಸುಂಕದವನು (ಕವಿತೆ) - ಪ್ರೊ ಗಂಗಾರಾಂ ಚಂಡಾಲ, ಮೈಸೂರು.

ಒಂದು ಬಾರಿ ಅವಕಾಶ ತಾನಾಗಿ ಮೂಡಲಿದೆ ನಾಟ್ಯ

ಮತ್ತೊಂದು ಬಾರಿ ಅವಕಾಶ ದುಪ್ಪಟ್ಟು ಬೆಲೆ ರೈತರ ಬೆಳೆಗಳಿಗೆ

ನಾನೊಂದು ಭರವಸೆಯ ಬೆಳಕು ವಿಶ್ವದ ಮುಂದೆ ತಲೆ ಎತ್ತಲು

ಸವೆಸಿ ಹತ್ತು ವರ್ಷಗಳು ಅಮೃತ ಕಾಲ ಮುಂದುವರಿಯುವ ಆಸೆ

ಗಾಂಧಿ ಜಯಂತಿ ಆಚರಣೆ ಮಾಡುತ್ತಲೆ ಗಾಂಧಿಗೆ ಗುಂಡು ಹೊಡೆದವರಿಗೆ ಶಾಸಕ ಸ್ಥಾನ
ಮಂದಿರದಲ್ಲಿ

ಆಹಾರ ಕಾಯ್ದೆ ಅಪೌಷ್ಟಿಕತೆ ವಿಶ್ವ ನುಡಿ ನಾಲಿಗೆ ಹಿಂದೆ ಸರಿದಿದೆ

ನುಡಿ ಸ್ವಾತಂತ್ರ್ಯ ಸುಂಕದೆಸರಲ್ಲಿ ತನಿಖೆ ತನ್ನ ಪರ ಮಾತಾಡುವವರನ್ನಾಗಿ ಮಾಡಲೆಂದು

ಕಾದ ಹೆಂಚಿನ ಮೇಲೆ ಹಾಕಿ ಕೆನ್ನೆ ಸವರುತ್ತಾ ಉರಿ ಹೆಚ್ಚು ಹೆಚ್ಚು

ಮಕ್ಕಳ ಹೆರುವಂತೆ ಸನ್ಯಾಸಿ ಉಪದೇಶ ಹತ್ತು ದೇಶಕ್ಕಾಗಿ

ಸುಂಕ ವಸೂಲಿ ಮಾಡುವ ಆಸೆ
ಸಾಕುವ ಉಸಾಬರಿ ಬೇಡ

ಮಕ್ಕಳು ಬಡವರಾಗಿಯೇ ಇರಬೇಕು ಹೇಳಿದಂತೆ ಕೇಳಲು ಲಜ್ಜೆಗೇಡಿ ಮನಸ್ಸು

ಸೈನಿಕರಲ್ಲಿ ಹೆಣ್ಣಿನ ಪಡೆ ಪಥಸಂಚಲನ ಅಯ್ಯಪ್ಪನ ದರ್ಶನ ದೂರ ದೂರ ಸುಪ್ರೀಂ ಹೇಳಿದರು

ಸುಂಕದವರು ಸ್ವಾಮಿ ಕನಿಕರ ಇಲ್ಲದವರು ಉಳ್ಳವರಿಗೆ ಉಚಿತ ಸಾಲ ಮನ್ನಾ 

ನಿಗಿ ನಿಗಿ ಕೆಂಡ ಹಾಗೆಯೇ ಇರದು ಇದ್ದಲು ಅಥವಾ ಬೂದಿ ಆಗಬೇಕು ಚುನಾವಣೆಯಲ್ಲಿ

ಅವಸರ ಮರೆವು ತಾನು ನೀಡಿದ ಭರವಸೆ ಸೆಡವು ಸುಟ್ಟುಕೊಂಡ ಚೊರ್ರೆಂದು

ಬೂದಿಯಲ್ಲಿ ಮಲಗಿ ಹೇತು ನಾತ ಹೊಡೆದರು ಸುಗಂಧ ಜನರಿಗಾಗಿ ಹದಿನೆಂಟು ಗಂಟೆ ದಿನಕ್ಕೆ

ದಾರಿ ನಡೆದದ್ದು ಕರ್ಮ ಸಿದ್ಧಾಂತ ನಂಬುವ ಹಾಗೆ ಅರಮನೆ ಬಂದೀಖಾನೆ ಆದೀತು

ಬಲಗಾಲದಲ್ಲಿ ಒದ್ದರೆ ಒಳ್ಳೆಯ ಕಾರ್ಯಕ್ರಮವೇ ಘೋಷಣೆಯೆ

ಬಿಕ್ಕಳಿಕೆ ಬರುತ್ತೆ ಎಂದು ನೀರು ಹಿಡಿದು ಸುಪ್ರಭಾತ ಹೇಳುವ ಹಾಗೆ ಸುಂಕ ವಸೂಲಿ

ಕತ್ತಿ ಅಲಗಿನ ಮೇಲೆ ನಡೆದು ಹೆಜ್ಜೆ ತಪ್ಪಿ ಹೋಯಿತು ಓಟು ಮುಳುವಾಯಿತು ಹೆಣ್ಣೆಂದು ತಿಳಿದು

ಹಗೆ ಸಾಧಿಸುವ ರೀತಿ ಸುಂಕ ಹೆಚ್ಚಳ ಪೆಟ್ರೋಲ್ ಖಾಸಗಿ ದರ ಮೀರಿ

ಪಾಪ ಪುಣ್ಯ ಉಳ್ಳವರಿಗೆ ಮಾತ್ರ ಬಡವರಿಗೆ ಸಾಲ ಉಳಿಯಿತು ಅಭಿವೃದ್ಧಿ ಹೆಸರಲ್ಲಿ

ಬಣ್ಣಗೆಟ್ಟ ಬಾವುಟವನ್ನು ಎತ್ತಿ ಎತ್ತಿ
ಓಟು ಕೇಳಿದರೆ ಸಾಕು ಪ್ರತಿಯೊಬ್ಬರ ಇವಿಎಂ ಒಳಗೆ ಕರಾಮತ್ತು

ಹಸಿವೆ ತಿಳಿಯದವರು ಬೆಂದು ಅನ್ನವಾಗಲು ಬಿಡದೆ ಸುಂಕ ಕೊಟ್ಟಿಲ್ಲ ಎಂದು

ಅರ್ದ ಸುಟ್ಟ ಕಟ್ಟಿಗೆ ತುಂಡು ಕರಕಲಾಗಿ ತಣ್ಣಗೆ ಇದ್ದಿಲಾಗದೆ ಪರಿತಪಿಸುತ್ತದೆ

ಕಹಿ ನೋವಿನ ಕಣ್ಣಿರ ಇಂಗುಗುಂಡಿ ಗಂಟಲಲ್ಲಿ ಸಮಾಧಿ ಹೆಸರು ಅಭಿವೃದ್ಧಿ

ವೀರ್ಯ ಫಲಿಸದಿರಲು ಕಸರತ್ತು ದಾಳಿ ತನ್ನ ಒಪ್ಪದವರ ಅನ್ನದ ಶಾಪ ಉಚಿತ ಕಡಿತ

ಹತ್ತಿಕ್ಕುವ ಕುತ್ತಿಗೆಗೆ ಕೈ ಹಾಕಿ ಕೈಗೆ ಬೇಡಿ ಹಾಕುವ ಪ್ರತಿಜ್ಞೆ ಪತ್ರಕರ್ತರಿಗೆ

ಬದುಕು ಕಾದ ಹೆಂಚು ಅಚ್ಚೇ ದಿನ ಆಯೇಗಾ ಸುಟ್ಟುಕೊಂಡ ಬೆರಳು ಮಸಿ ಗುರುತು

ಆ ರಾತ್ರಿ ಕಣ್ಮುಚ್ಚಿ ಕುಳಿತ ಹೆಣ್ಣು ಮರು ದಿನ ಬೆಳಗು ನಗುವ ಹಾಗೆ ಸುಮ್ಮನೆ ನಿಂತಳು

ತುಡುಗು ದನಗಳು ಆಯ್ಕೆ ಶಾಸನಸಭೆಗೆ ಬೆರಗು ಮಾತುಗಳಿಗೆ

ಸುಂಕ ಜಾಸ್ತಿ ಆಯಿತು ಸುಂಕ ಕಡಿಮೆ ಮಾಡುತ್ತೇವೆ ಜನದನ್ ಗ್ಯಾರಂಟಿ

ಹೆಣ್ಣಿನ ಶಾಪ ಗೆಜ್ಜೆ ತಪ್ಪಿದರೂ ನಾಟ್ಯವೆಂದು ಹೇಳುವವರಿಗೆ ಅಭಿವೃದ್ಧಿ ಮಂಕಾಗಿ

ಸೀದು ಹೋದ ಬದುಕು ಕಾನೂನು ಪಾಲನೆ ಕೆಲವರಿಗೆ

ಅದೆಷ್ಟು ಸುಂಕ ಹೆಚ್ಚಳ ಸಹಿಸಬೇಕು ಕೆಲವು ಸರದಾರರ ಮೋಜು ಮಸ್ತಿಗಾಗಿ.

- ಪ್ರೊ ಗಂಗಾರಾಂ ಚಂಡಾಲ, ಮೈಸೂರು. 

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...