ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಶನಿವಾರ, ಡಿಸೆಂಬರ್ 31, 2022
ಶುಕ್ರವಾರ, ಡಿಸೆಂಬರ್ 30, 2022
ಅರಿವಿರದ ಸಮಯ(ಕವಿತೆ) - ಮಂಜುನಾಥ ಮೇಟಿ.
ಅಡಚಣೆಯಿಲ್ಲದೆ ಸಾಗುತಿದೆ
ಅರುವಿರದ ಸಮಯ
ಸುಖಃದ ಹಂಗನು ತೊರೆದು
ಅಲಕ್ಷಿಸಿದೆ ದುಖಃದ ಭಯ
ಕಾಲಕ್ಕೆ ತಕ್ಕಂತೆ ಬದಲಾಗುತ
ಗೆದ್ದವರ ತಾಳಕ್ಕೆ ಕುಣಿಯುತ
ತಿಳಿಯದ ಪಾಠವ ಕಲಿಸುತ
ಮತ್ತೊಮ್ಮೆ ಸಿಗನೆಂದು ಹೇಳುತ
ಸಾಗುತಿದೆ ಅರುವಿರದ ಸಮಯ
ಗೆಲುವೆ ಶಾಶ್ವತವಲ್ಲವೆಂದು
ಸೋಲಿಗೂ ಕೊನೆಯಿದೆ ಎಂದು
ಪ್ರಯತ್ನಕ್ಕೆ ವಿಜಯವಾಗಲೆಂದು
ನೊಂದ ಮನಸ್ಸಿಗೂ ಯಶಸಿದೆ ಎಂದು
ಹೇಳುತ ಸಾಗಿದೆ ಅರುವಿರದ ಸಮಯ.
- ಮಂಜುನಾಥ ಮೇಟಿ.
ಜಗದ ಕವಿಗೆ ನಮನ (ಕವಿತೆ) - ಆಶಾ ಶ್ರೀಧರ್, ಶಿವಮೊಗ್ಗ.
ಮಲೆನಾಡಿನ ಮಣ್ಣಿನ ಮಗನಿವರು
ಸಾಹಿತ್ಯಕೆ ಕೊಡುಗೆಯ ಕೊಟ್ಟವರು
ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರು
ರಾಷ್ಟ್ರಕವಿ ಬಿರುದಾಂಕಿತರು
ಕರ್ನಾಟಕ ಏಕೀಕರಣ ಹರಿಕಾರರು
ಸರ್ವೋದಯ ಸಮನ್ವಯ ದೂರದೃಷ್ಟಿ
ಸಮತೆಯ ಸಾರಿದವರು
ಕನ್ನಡ ನುಡಿಗಾಗಿ ಸಮರ್ಪಿಸಿಕೊಂಡವರು
ಕನ್ನಡಕ್ಕಾಗಿ ಕೈ ಎತ್ತು ಕಲ್ಪವೃಕ್ಷವಾಗುವುದು
ಎಂದ ಕನ್ನಡದ ಕಂದನಿವರು
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ಕನ್ನಡಿಗನಾಗಿರುವ ದೀಕ್ಷೆ ತೊಟ್ಟವರು
ಮನುಜಜಾತಿ ತಾನೊಂದೇ ಕುಲಂ ಎನುತ
ವಿಶ್ವಮಾನವರಾದವರು
ನೆನಪಿನ ದೋಣಿಯಲಿ ಆತ್ಮಚರಿತ್ರೆಯ
ತೆರೆದವರು.
- ಆಶಾ ಶ್ರೀಧರ್, ಶಿವಮೊಗ್ಗ.
ಬತ್ತದಿರಲಿ ಸ್ಪೂರ್ತಿ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.
ಚಿಮ್ಮುವ ಚಿಲುಮೆಯಂತಿರಲಿ ಜೀವನ
ಹೊತ್ತ ದೃಡಸಂಕಲ್ಪದ ಬದುಕಿನ ಪಯಣದಲಿ
ಬಾಲ್ಯದಿಂದ ಕಳೆಯುವ ವೃದ್ಧಾಪ್ಯದ ತನಕ
ಬತ್ತದಿರಲಿ ದಕ್ಕಿದ ಯಶ ವಿಶಾದಗಳ ನಿಟ್ಟಿನಲಿ
ಕೈಯಿಂದ ಜಾರದಂತೆ ಅವಕಾಶಗಳ ಸದ್ಬಳಕೆಯಲಿ
ನೊಯಿಸದಂತಿರಲಿ ಹಾರೈಸಿ ಹರಸುವ ಮನಗಳಿಗೆ
ಜೀವನದ ಅನುಭವಗಳ ಸರಮಾಲೆಯೇ ಪಣವಾಗಿ
ಬತ್ತದಿರಲಿ ಸ್ಪೂರ್ತಿ ಪ್ರತಿಹೆಜ್ಜೆಯ ನಡೆಯಲ್ಲಿ
ಏಳು ಬೀಳು ಕಷ್ಟ ನಷ್ಟ ಒಳಗೊಂಡಾದ ಪಯಣವು
ಬಾಳಿನಲಿ ಎದುರಿಸಿ ಕಲಿತು ಕಲಿಸುವ ಅಧ್ಯಯನವು
ಬತ್ತದಿರಲಿ ಸ್ಪೂರ್ತಿ ಕಂಡರಿಯದಕ್ಕಿಂತ ಅರಿತದಾರಿಯಲಿ ಸುಗಮವಲ್ಲವೇ ಹಿಡಿದ ಛಲ ಬಿಡದೇ ಸಾಧಿಸುವಲ್ಲಿ
ಕಾಣುವ ಆಧುನಿಕ ಯುಗದ ವಿಭಿನ್ನತೆಯಲಿ
ಎಷ್ಟು ಕಷ್ಟದ ಬದುಕು ಈ ನಾಲ್ಕು ದಿನಗಳಲ್ಲಿ
ಕಾಲೆಳೆಯಲು ಹೊಂಚುಹಾಕುವ ದುಷ್ಟಶಕ್ತಿಗಳ ಮಧ್ಯೆ
ಬತ್ತದ ಚಿಲುಮೆಯ ಬುಗ್ಗೆಯಂತಿರಲಿ ಸ್ಪೂರ್ತಿ
ಮೆಟ್ಟಿನಿಂತಿರುವ ಸತ್ಯದ ದಾರಿಯಲಿ ಈ ಧೇಯ
ಕಾಯಕವೇ ಕೈಲಾಸವೆಂಬ ಅರಿವಿನ ಅಂತರಾತ್ಮ
ಬತ್ತದಿರಲಿ ಸ್ಪೂರ್ತಿ ಬೆಳಗುವ ಆಶಾಕಿರಣದೊಂದಿಗೆ
ಹರಿವ ನದಿಯ ನೀರೊಳು ಹೊಸತನದ ಹರಿವಂತೆ
ಸೃಷ್ಟಿಯ ಮಾಯೆಯಲಿ ರಮಿಸುವ ಛಾಯೆಯಲಿ
ಚೈತನ್ಯತುಂಬುವ ಭೂಮಾತೆಯೇ ತಬ್ಬಿಕೊಂಡಿಹಳು
ಚಿಗುರೊಡೆಸಿ ಬೆಳಸುವ ಪರಿಸರ ಸಂಕುಲ ಬತ್ತದಂತೆ
ಬದುಕಿಸುವ ಕಲೆಯಲ್ಲಿ ಸ್ಪೂರ್ತಿಯ ಸೆಲೆಯಲ್ಲಿ
- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.
ಒಮ್ಮೆ ಹಿಂದಿರುಗು (ಕವಿತೆ) - ರಂಜಿತಾ ಹೆಗಡೆ.
ದೇವನಿಲ್ಲದ ಜಗವಿದು!
ಕರುಣೆಯಿಲ್ಲದ ಯುಗವಿದು!
ಕೈ ಬೀಸಿ ಹೊರಟಿದ್ದೆ ನೀನು
ಶಾಲೆಗೆಂದು!
ನನಗೇಕೆ ತಿಳಿಯಲಿಲ್ಲ
ಕಾಣದ ದೈವ ನಿನ್ನ ಹೊತ್ತೊಯ್ಯುವುದೆಂದು!
ಒಮ್ಮೆ ಹಿಂದಿರುಗುವೆಯಾ ಕಂದ,
ದೇವನಿಲ್ಲದ ಈ ಜಗಕೆ...!
ಕರುಳ ಬಳ್ಳಿಯು ಕಳಚಿ
ಹೋಯ್ತು!
ಹೂ ಬಿಡುವ ಮುನ್ನ!
ಕನಸ ನಾವೆಯು ಮಗುಚಿ
ಹೋಯ್ತು!
ದಡ ಸೇರುವ ಮುನ್ನ!
ಕೂಗಿ ಕೂಗಿ ಕರೆದರೂ
ಕೇಳದೇ ಹೊರಟೆಯೇಕೆ?
ಒಮ್ಮೆ ಹಿಂದಿರುಗಲಾರೆಯಾ ಕಂದ,
ದೇವನಿಲ್ಲದ ಈ ಜಗಕೆ!
ಅಂಗಳದ ಮಣ್ಣ ಕಣ
ಸದ್ದಿಲ್ಲದೇ ಕಾಯುತಿದೆ.
ನಿನ್ನ ಪುಟ್ಟ ಹೆಜ್ಜೆಗಳಿಗೆ....
ಹೂದೋಟದ ಹೂವು
ಬಾಡದೆ ನಿಂತಿದೆ....
ನಿನ್ನ ಮೃದು ಸ್ಪರ್ಶಗಳಿಗೆ...!
ಒಮ್ಮೆ ಹಿಂದಿರುಗಲಾರೆಯಾ ಕಂದ,
ದೇವನಿಲ್ಲದ ಈ ಜಗಕೆ!
ನೀ ಜೀಕುವ ಜೋಕಾಲಿ
ಬೇಸರದಿ ತೂಕಡಿಸಿದೆ!
ಕೆಂಪು ಕರಡಿಯ ಗೊಂಬೆ
ನಿರ್ಜೀವದಿ ಕುಳಿತಿದೆ!
ನಿನ್ನಂತೆಯೇ....!
ಹಿಂದಿರುಗಿ ಬರಲಾರೆಯಾ ಕಂದ
ದೇವನಿಲ್ಲದ ಈ ಜಗಕೆ!
ನಿನ್ನ ಕಾಲ ಗೆಜ್ಜೆ ಉಸಿರೆತ್ತದೇ
ಮೌನ ತಾಳಿದೆ.
ಕೈ ಬಳೆಗಳು ಉತ್ತರಿಸದೇ
ಮುನಿಸಿ ಕುಳಿತಿದೆ.
ಒಡತಿಯ ವಿಯೋಗದಿಂದ!
ಒಮ್ಮೆ ಹಿಂದಿರುಗಲಾರೆಯಾ ಕಂದ
ದೇವನಿಲ್ಲದ ಈ ಜಗಕೆ.
ಕಾದು ಕುಳಿತರೇನು ಬಂತು...?
ಕರಗೀತೆ ಮನದ ನೋವು?
ಕೂಗಿ ಕರೆದರೇನು ತಂತು?
ಸರಿಯಾದೀತೇ ಕಂದನ ಸಾವು?
ಒಮ್ಮೆ ಹಿಂದಿರುಗಿಬಿಡು ಕಂದ...
ದೇವನಿಲ್ಲದ ಈ ಜಗಕೆ!
ನೀಡಿ ಹೋದೆಯಾ ಕಂದ
ಈ ಅಮ್ಮನಿಗೆ ಕಂಬನಿಯ
ಬಳುವಳಿ...!
ಇಲ್ಲದ ದೈವದ ಎದುರು
ಹೇಗೆ ಸಾರಲಿ ನಾ ಚಳುವಳಿ?
ಹಿಂದಿರುಗಿ ಬಾ ಕಂದ ಎಂದರಚಿದರೂ
ವ್ಯರ್ಥ ಆ ವಿಧಿಯಾಟದ ಮುಂದೆ!
ಉಳಿದಿದ್ದು ದಾರಿಯು ಒಂದೇ...!
ನಿನ್ನ ನೆನಪಿನ ಹೆಜ್ಜೆಗೆ
ಗೆಜ್ಜೆ ಕಟ್ಟುವುದೊಂದೇ...!
- ರಂಜಿತಾ ಹೆಗಡೆ.
ಬುಧವಾರ, ಡಿಸೆಂಬರ್ 21, 2022
ದೂರ ತೀರದ ಯಾನ (ಕವಿತೆ) - ಸುಭಾಷ್ ಸವಣೂರು.
ಮನದಂತರಾಳದಲಿ ಗರಿಗೆದರುತಿದೆ
ನೊರೆಂಟು ಬಣ್ಣ ಬಣ್ಣದ ಚಿತ್ತಾರಗಳು
ಹೃದಯದಲಿ ಹಾಗೆ ಗೂಡು ಕಟ್ಟಿದೆ
ಪ್ರೀತಿ ಪ್ರೇಮಗಳ ಮಧುರ ಬಾಂಧವ್ಯವು
ಕಂಡು ಕಾಣದೆ ಸುಮ್ಮನೆ
ಮರೆಯಾದ ಸವಿಗನಸುಗಳು
ಹಾಗೆ ಹುದುಗಿ ಹೋಗಿವೆ
ಅಂತರಂಗದ ಭಾವನೆಗಳಲಿ
ಎಳೆ ಎಳೆಯಾಗಿ ಹರಿದು ಬರುತಿವೆ
ನೆನಪಿನ ಒಡಲಾಳದಿಂದ
ಅಂದು ಮೌನದಲ್ಲೇ ಅಳಿದು ಹೋದ
ಆ ಸುಂದರ ಕಾವ್ಯಗಳು
ಸಾಗುತಿದೆ ಜೀವನದ ಪಯಣವು
ಸಾಗರದೀ ತೇಲುವ ನಾವೆಯ ಹಾಗೆ
ನಾವಿಕ ನೀನು ಪಯಣಿಗ ನಾನು
ಅರಿಯೆ ನಾನಿಂದು ಎಂದು ಸೇರುವೆನೆಂದು
ಆ ದೂರ ತೀರದ ಯಾನವ .....!!!!
- ಸುಭಾಷ್ ಸವಣೂರು.
ಹೇಮಾವತಿ ನದಿ ಹರಿದಾಳೋ (ಕವನ) - ಗೊರೂರು ಅನಂತರಾಜು, ಹಾಸನ.
ಹೊಸ ಬೆಳಕು ಮೂಡ್ಶಾವೋ
ಕತ್ತಲು ಕರಗ್ಯಾವೋ
ಅಣೆಕಟ್ಟೆ ಗೊರೂರಲ್ಲಿ ಕಟ್ಯಾರೋ
ಹೇಮಾವತಿ ನದಿ ಹರಿದಾಳೋ
ಎಡದಂಡೆ ನಾಲೆಯಿಂದ
ತುಮಕೂರಿಗೆ ಹರಿದಾಳೋ
ರೈತರು ನೀರು ಪಡೆದಾರೋ
ನಾಲೆಯ ನೀರು ಪಡೆದಂತ ರೈತರು
ಹೊಲಕ್ಕೆಲ್ಲಾ ಬೀಜ ಬಿತ್ತಾರೋ
ಹೇಮಾವತಿ ನದಿ ಹರಿದಾಳೋ
ಬಲದಂಡೆ ನಾಲೆಯಿಂದ
ಹೊಳೆನರಸೀಪುರಕ್ಕೆ ಹರಿದಾಳೋ
ಭತ್ತ ಕಬ್ಬು ಬೆಳೆದ್ಯಾರೋ
ರೈತರ ಬಾಳು ಬೆಳಗ್ಯಾಳೋ
ಹೇಮಾವತಿ ನದಿ ಹರಿದಾಳೋ
ಬಲಮೇಲ್ದಂಡೆ ನಾಲೆಯಿಂದ
ಹೇಮಾವತಿ ಹರಿದಂತೆ
ಕೆರೆಕಟ್ಟೆ ತುಂಬಿ ತುಳಕ್ಯಾವೋ
ನಮ್ಮ ಈ ಬದುಕನ್ನು
ಹಸನಾಗಿ ಮಾಡಿದ
ಹೇಮಾವತಮ್ಮಗೆ ಶಿರಬಾಗಿ
ಬಾಗಿನ ಪೂಜೆ ಮಾಡೇವೋ
ಹೇಮಾವತಿ ನದಿ ಹರಿದಾಳೋ
- ಗೊರೂರು ಅನಂತರಾಜು
ಹಾಸನ
9449462879
ಮಗುವಾಗಿ ನಿತ್ಯ ನಗಬೇಕು(ಕವಿತೆ) - ಗೂಳೇಶ್ ಬಿ ಯಾಗಾಪುರ.
ಸುಖಾಸುಮ್ಮನೆ ನಗಲು
ಸುಂಕ ಕಟ್ಟಬೇಕಿಲ್ಲ
ಬರಿ ಸಂತೋಷದ ಸಮಯದಲ್ಲಷ್ಟೆ
ಸಂಗಡಿಗರ ಒಡಗೂಡಿ ನಗಬೇಕೇ? ಖಂಡಿತ ಇಲ್ಲ
ನಗಬೇಕು ನಿತ್ಯ ನಗುತಲೆ ಇರಬೇಕು ಇತರರಿಗು ನಗಿಸುತಲೆರಬೇಕು
ನಗಲು ಸಮಯ ಸಂದರ್ಭಗಳು ಯಾಕೆ
ಹೌದು ನಗು ಎಂಬುದು ದುಃಖ ಆವರಿಸಿದ
ಮನೆ ಅಥವಾ ಆ ಪ್ರದೇಶದ ಸಮಯದಲ್ಲಿ
ನಗುವುದು ಉಚಿತವಲ್ಲ ಹಾಗೆಯೇ ಸಂಭ್ರಮದ
ಮನೆಯಲ್ಲಿ ಒಬ್ಬೊಬ್ಬರೆ ಓಡಾಡುವುದು ಸರಿಯೇ?
ನಗು ಎಂಬುದು ಮಗುವಂತೆ
ಮುಗ್ದ ಮನಸ್ಸುಳ್ಳ ಮಗುವಿನ ಮೊಗದಂತೆ
ನಕ್ಕರೆ ನಾಚಿಕೆ ಮಾಯಾ, ನಕ್ಕರೆ ನರ ನಾಡಿಮಿಡಿತಗಳು
ಬಾಳಲಿ ಎದುರಾಗೊ ಕಹಿ ಘಟನೆಗಳ
ಎದುರಿಸುವ ಅಮೃತವೆ ಈ ನಮ್ಮ ನಗು
ನಗುವಿನ ಗುಳಿಗೆ ನೀ ಸೇವಿಸು
ಎದುರಾಳಿಗಳ ಮನದಲ್ಲೂ ನಿನ್ನ
ಮುಖದ ಲಕ್ಷ್ಮಣ ಅವರಲ್ಲೂ ನಾಟಿ
ಮಾಡುವಂತಾಗುವ ನಗುವಿನ
ಒಡೆಯ ನೀನಾಗಲು ನಿತ್ಯ ನೀ ನಗುತಿರು
- ಗೂಳೇಶ್ ಬಿ ಯಾಗಾಪುರ.
ಬುಧವಾರ, ಡಿಸೆಂಬರ್ 14, 2022
ಅಳಲು (ಕವಿತೆ) - ಮಾಲತಿ ಮೇಲ್ಕೋಟೆ.
ಯಶವ ಸಂಭ್ರಮಿಪ
ಹಿತವರಿರದಿರೆ ಒಡನೆ
ಸಂತಸವೆಲ್ಲಿಯದು
ಗೆಲುವಿನಲು ನರಗೆ
ಸೋಲಿನಲು ಸಂತೈಪ
ಹಿತವರಿರೆ ಸನಿಹದಲಿ
ನೋವಿನಲು ನೆಮ್ಮದಿಯ
ಕಾಣದಿರಲಹುದೇ
ಯಶದ ಅಮಲೆಂದೂ
ತಲೆಯ ಬೀಗಿಸದಿರಲಿ
ಸೋಲಿನಲಿ ಕಂಗೆಟ್ಟು
ಮನ ಕುಸಿಯದಿರಲಿ
ಹಿತರಿರಲಿ ಇರದಿರಲಿ
ಇಚ್ಛಿಸಲಿ ನಿಂದಿಸಲಿ
ನಿಲಿಸದೆಯೆ ಕಾಯಕವ
ನಡೆಸಲು ನಿರ್ಲಿಪ್ತಿಯಲಿ
ಸೋಲುಗೆಲುವುಗಳನೆಂದು
ಶಾಂತಿಯಲಿ ಸ್ವೀಕರಿಸೆ
ಸಮಚಿತ್ತ ನೀಡೆನಗೆ
ಓ ನನ್ನ ಪ್ರಭುವೇ
- ಮಾಲತಿ ಮೇಲ್ಕೋಟೆ.
ಚಿತ್ರಕಲೆ - ಅಜ್ಜಯ್ಯ ಬಿ.
- ಅಜ್ಜಯ್ಯ ಬಿ.
ಇಂದು ಪದವಿ ಕಾಲೇಜ್ ವಿದ್ಯಾರ್ಥಿ
ಊರು :- ಚಿಕ್ಕ ಉಜ್ಜಿನಿ
ಜಿಲ್ಲೆ :- ದಾವಣಗೆರೆ
ತಾಲ್ಲೂಕು :- ಜಗಳೂರು
ದೂರವಾಣಿ ಸಂಖ್ಯೆ :- 8317460438.
ಮಂಗಳವಾರ, ಡಿಸೆಂಬರ್ 13, 2022
ಪೋಲಿಯ ಬಿರುದು (ಕವಿತೆ) - ವೀರಣ್ಣ ಎಚ್. ಹೂಗಾರ್.
ನಾ ಹೊತ್ತ ಕನಸಿಗೆ ನಿನ್ನ ಪ್ರೀತಿಯಿದೆ
ದೀಪದ ಬೆಳಕಿಗೆ ಸ್ವಲ್ಪ ತಿಳಿಸು
ಸೊಂಟ ಬಳಸುವ ಕೈಗಳಿವೆ
ನಾಚಿ ನಿಂತ ಕಂಗಳಿವೆ
ಅದರುವ ತುಟಿ ಒಣಗಿದೆ
ಮದುವೆ ಆದ ಹೊಸತರದಲ್ಲಿ
"ರೀ" ಎಂಬ ಸ್ವಲ್ಪ ಗೌರವವಿದೆ
ಸರಿರಾತ್ರಿಯಲಿ ಪೋಲಿ ಎಂಬ ಬಿರುದು ಇದೆ
ಸೊಂಟಕೆ ಡಾಬುಬೇಕೆ?
ಸೆರಗು ಸರಿಸುವ ಕೈಗಳಿವೆ
ಸಾಕೆಂದು ಮುತ್ತು ಕೊಟ್ಟರು
ತುಟಿಗಳು ಸುಸ್ತಾಗಿಲ್ಲ
ನೋಡುವ ನೋಟ ಶಾಂತವಾಗಿಲ್ಲ
ಮಳೆಯಂತೆ ಬೆವರ ಹನಿ
ಚಳಿಯಲಿ ನಡಗುವ ದೇಹದಲ್ಲಿ
ನಾ ಮುಡಿಸಿದ ಮಲ್ಲಿಗೆ ಹೂ ಬಾಡದಿರಲಿ
ಮುಂಜಾನೆಯಿಂದ ರಾತ್ರಿಯವರೆಗೂ
ಕನಸಿನೊಂದಿಗೆ ಚೆಲ್ಲಾಟವಿದೆ
ಕೆಡಿಸದಿರು ಮುತ್ತುಗಳ ಕೊಟ್ಟು
ಅಮಾಯಕ ನಾನಾಗಿರುವೆ
ಮಹಡಿ ಮನೆಗೆಲ್ಲಾ ಗೊತ್ತು
ನಿನ್ನ ಭಾವಚಿತ್ರಗಳ ಭಿತ್ತಿ
ಬಿಟ್ಟ ಬಿಸಿಯುಸಿರಿನ ದೇಹಕೆ
ಅಂಗಳದಲ್ಲಿ ನೆನಪಿನ ಜೊತೆ ನಿಂತಿರುವೆ
ಮಂಗಳ ಸೂತ್ರದ ಕನಸಿನೊಂದಿಗೆ.
- ವೀರಣ್ಣ ಎಚ್. ಹೂಗಾರ್, ಗದಗ.
ನಂಟು (ಕವಿತೆ) - ಕಾರ್ತಿಕಕುಮಾರ್, ಬೀದರ್.
ಎಂಟು ತುಂಬುವ
ಮೊದಲೇ ಕಳಚಿತು
ಅಪ್ಪನ ನಂಟು
ಅಲ್ಲಿಗೆ ಅರ್ಥವಾಗಿತ್ತು
ಅವನ ನನ್ನ ಋಣ ತೀರಿತೆಂದು
ಹರಸಿ ಹೋರಟವ
ಕನಸಿನಲ್ಲೂ ನನ್ನ ಕಾಡುವ
ಎಚ್ಚರವಾದಗಲೆಲ್ಲ ಮತ್ತೆ
ಮರಳಿ ಬರುವನೇನೋ
ಅನ್ನೋವಷ್ಟು ನಾ ಭಾವುಕ
ಇಂದಿಗೂ ನೀಲಿ ಬಾನಲಿ ಮಿನುಗುತಿಹನು
ಅಲ್ಲಿಂದಲೇ ನನ್ನ ಹರಸುತಿಹನು.
- ಕಾರ್ತಿಕಕುಮಾರ್, ಬೀದರ್.
ಸೋಮವಾರ, ಡಿಸೆಂಬರ್ 12, 2022
ಛದ್ಮವೇಷ (ಸಣ್ಣ ಕಥೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.
ಪದ್ಮಾ ದೇವರ ಮನೆಯಲ್ಲಿ ಪೂಜೆ ಮಾಡ್ತಾ ಇದ್ಲು . ಮಗ ವಿನೀತ, ಶಾಲೆಗೆ ಹೋಗುವುದಿಲ್ಲ ಅಂತ ಹಠ ಮಾಡ್ತಾ ಇದ್ದ. ಯಾಕೋ ಕಂದ ಶಾಲೆಗೆ ಹೋಗುವುದಕ್ಕೆ ಅಳ್ತಾ ಇದ್ದೀಯ? ಎಂದು ಪ್ರೀತಿಯಿಂದ ಕೇಳಿದಳು ಪದ್ಮಾ. ಅಮ್ಮ ಶಾಲೆಯಲ್ಲಿ ಜನವರಿ ೨೬ ನೇ ತಾರೀಕು ಗಣರಾಜ್ಯೋತ್ಸವವಂತೆ. ಅದಕ್ಕಾಗಿ ಛದ್ಮವೇಶದ ಕಾರ್ಯಕ್ರಮ ಮಾಡುತಾರಂತೆ, ನಾನು ಅದರಲ್ಲಿ ಭಾಗವಹಿಸುತ್ತೇನೆ ಎಂದೆ. ಅದಕ್ಕೆ ಅವರು ನೀನು ಚೆನ್ನಾಗಿ ಮಾತನಾಡುವುದಿಲ್ಲ, ನಿನಗೆ ಏನು ಬರುವುದಿಲ್ಲ, ಬೇಡ ಎಂದು ಬಿಟ್ಟರು. ಅದಕ್ಕೆ ನಾನು ಇಲ್ಲ ನಾನು ಪಾತ್ರ ಮಾಡುತ್ತೇನೆ ಟೀಚರ್, ನನಗೂ ಒಂದು ಪಾತ್ರ ಕೊಡಿ ಎಂದು ಎಷ್ಟು ಕೇಳಿದರು ಕೊಡಲಿಲ್ಲ. ನಾಳೆ ನೋಡೋಣ, ನಾನು ಯಾವ ಪಾತ್ರ ಕೊಟ್ಟರು ಮಾಡಬೇಕು ಎಂದು ಗದರಿದರು. ಅದಕ್ಕೆ ನನಗೆ ಇವತ್ತು ಪಾತ್ರ ಕೊಡುತ್ತಾರೋ.... ಇಲ್ಲವೋ.... ನಾನು ಶಾಲೆಗೆ ಹೋಗುವುದಿಲ್ಲ ಎಂದು ಅಳ ತೊಡಗಿದ. ಅದಕ್ಕೆ ಅಮ್ಮ ಪ್ರೀತಿಯಿಂದ ನಿನಗೆ ಪಾತ್ರ ಖಂಡಿತ ಕೊಡುತ್ತಾರೆ. ಒಂದು ವೇಳೆ ಕೊಡದಿದ್ದರೂ ಅದಕ್ಕೆ ಅಳೋದು ಬೇಡ ಕಂದ.... ಯಾಕಂದ್ರೆ ಒಂದು ವರ್ಗ ಕೋಣೆಯಲ್ಲಿ ಸಾಕಷ್ಟು ಜನ ಮಕ್ಕಳಿರತಾರೆ, ಎಲ್ಲರಿಗೂ ಪಾತ್ರ ಕೊಡುವುದು ಕಷ್ಟ. ಅವರ ಸಾಮರ್ಥ್ಯಕ್ಕನುಗುಣವಾಗಿ ಪಾತ್ರ ಕೊಡಬೇಕಾಗುತ್ತದೆ. ಅದು ಅವರ ಜವಾಬ್ದಾರಿ. ರಾಷ್ಟ್ರೀಯ ಹಬ್ಬಗಳಲ್ಲಿ ಯಾವುದೇ ರೀತಿಯ ಅಸಬ್ಯತೆಯ ಭಾಗವಹಿಸುವಿಕೆ ಇರಬಾರದು, ಹೀಗಾಗಿ ಅವರು ಜಾಗರೂಕತೆಯಿಂದ ಸ್ಪಷ್ಟವಾಗಿ ಮಾತನಾಡುವ ಮಕ್ಕಳನ್ನು ತೆಗೆದುಕೊಳ್ಳುತ್ತಾರೆ. ನೀನು ಇನ್ನಷ್ಟು ಬೆಳೆದು ದೊಡ್ಡವನಾದ ಮೇಲೆ ನಿನಗೂ ಸಹ ಪಾತ್ರ ಕೊಡುತ್ತಾರೆ ಅದಕ್ಕೆ ಅಳುವುದು ಬೇಡ ಎಂದು ಸಮಾಧಾನಪಡಿಸಿದಳು. ಒಂದು ವೇಳೆ ನಿನಗೆ ಈ ದಿನ ಯಾವುದೇ ಪಾತ್ರ ಕೊಟ್ಟರು ನೀನು ಒಪ್ಪಿಕೊಂಡು ಬಾ, ನಾನು ನಿನಗೆ ಅದರ ಬಗ್ಗೆ ಹೇಳುತ್ತೇನೆ ಎಂದು ಮಗುವನ್ನು ಶಾಲೆಗೆ ಕಳುಹಿಸಿದಳು. ವಿನೀತ ಅಮ್ಮನ ಮಾತು ಕೇಳಿ ಸಮಾಧಾನದಿಂದ ಶಾಲೆಗೆ ತೆರಳಿದ. ಎಂದಿನಂತೆ ಶಿಕ್ಷಕರು ಪ್ರತಿಯೊಂದು ಮಗುವಿಗೂ ಛದ್ಮವೇಷದ ಪಾತ್ರವನ್ನು ನೀಡಿದರು. ಟೀಚರ್ ನನಗೂ ಒಂದು ಪಾತ್ರ ಕೊಡಿ, ನಾನು ಮಾಡುತ್ತೇನೆ ಎಂದನು ವಿನೀತ .ಸರಿ ಸರಿ ಮೊದಲು ನೀನು ಚೆನ್ನಾಗಿ ಮಾತನಾಡೋದನ್ನ ಕಲಿ.... ನೀನು 'ಋಷಿ' ಪಾತ್ರವನ್ನು ಮಾಡು ಎಂದರು. ಋಷಿ ಪಾತ್ರ ಅಂದ್ರೆ ಹೇಗಿರುತ್ತೆ ಟೀಚರ್ ?ಅಂದಾಗ ಏನಿಲ್ಲ, ದಾಡಿ, ಮೀಸೆ, ತಲೆಯಲ್ಲಿ ಜಟಾಧಾರಿಯಾಗಿ ,ಕೇಸರಿ ಬಣ್ಣದ ಧೋತಿ ಮತ್ತು ಮೇಲೊಂದು ಕೇಸರಿ ಬಣ್ಣದ ಶಾಲು ಈ ರೀತಿಯ ಉಡುಪು ಧರಿಸಬೇಕು ಅಷ್ಟೇ ಎಂದರು ಟೀಚರ್. ವಿನೀತ ಏನು ಮಾತನಾಡದೆ ಸರಿ ಟೀಚರ್ ಎಂದು ಹೇಳಿದ.
ವಿನೀತ ಶಾಲೆಯಿಂದ ಮನೆಗೆ ಬರುತ್ತಲೇ ತನ್ನಮ್ಮನಿಗೆ ತನಗೆ ಕೊಟ್ಟ 'ಋಷಿ' ಪಾತ್ರದ ಬಗ್ಗೆ ತಿಳಿಸಿದ. ಅವನ ಮುಖದಲ್ಲಿ ಮಂದಹಾಸ ಕಾಣಲಿಲ್ಲ. ಯಾಕೋ ಹೀಗೆ ಇದಿಯಾ? ನಿನಗೆ ಪಾತ್ರ ಕೊಟ್ಟಿದ್ದಾರಲ್ಲ ಎಂದಳು ಅಮ್ಮ. ಎಲ್ಲರಿಗೂ ಗಾಂಧೀಜಿ, ನೆಹರು, ಅಂಬೇಡ್ಕರ್, ದೇವರ ದಾಸಿಮಯ್ಯ, ಬಸವಣ್ಣ, ವಿವೇಕಾನಂದ ಹೀಗೆ ಬೇರೆ ಬೇರೆ ಪಾತ್ರ ಕೊಟ್ಟಿದ್ದಾರೆ. ನನಗೆ ಮಾತ್ರ ಋಷಿ ಆಗು ಎಂದು ಗದರಿದರು. ಸರಿ ಕಂದ ನಿನಗೆ ಋಷಿಯ ಪಾತ್ರವನ್ನೇ ನಾನು ಮಾಡಿಸುವೆ, ಖಂಡಿತ ನೀನು ಇದರಲ್ಲಿ ಯಶಸ್ವಿಯಾಗುತ್ತೀಯ ಎಂದಳು ಪ್ರೀತಿಯಿಂದ ಅಮ್ಮ.
ಋಷಿಗೆ ಬೇಕಾದಂತಹ ಎಲ್ಲಾ ಉಡುಗೆಗಳನ್ನು ತಂದು, ಆ ಉಡುಗೆಯಿಂದ ಅಲಂಕರಿಸಿ, ಅವನನ್ನು ಮಾನಸಿಕವಾಗಿ ಸಿದ್ಧಗೊಳಿಸಿದಳು. ಕಂದ ನೀನು ಹೇಳಬೇಕಾದಂತಹ ನಿನ್ನ ಪಾತ್ರ ಅಗಸ್ತ್ಯ ಋಷಿ ಎಂದು.
ಅಮ್ಮ ಅಗಸ್ತ್ಯ ಋಷಿ ಅಂದರೆ ಯಾರು? ಎಂದನು ವಿನೀತ. ಅದಕ್ಕೆ ತಾಯಿ, ಇವರು ನಮ್ಮ ಹಿಂದೂ ಧರ್ಮದ ಪುರಾಣದ ಪ್ರಕಾರ ಶ್ರೇಷ್ಠ ಬ್ರಹ್ಮರ್ಷಿ. ಸಪ್ತ ಋಷಿಗಳಲ್ಲಿ ಒಬ್ಬರು. ಅಂದರೆ ಕಶ್ಯಪ, ವಶಿಷ್ಠ ,ವಿಶ್ವಾಮಿತ್ರ, ಅಗಸ್ತ್ಯ, ಅತ್ರಿ, ಜಮದಗ್ನಿ, ಭಾರದ್ವಜ ಶ್ರೇಷ್ಠ ಋಷಿಗಳಲ್ಲಿ ಒಬ್ಬರಾದ ಅಗಸ್ತ್ಯ ಮಹರ್ಷಿಗಳ ಪಾತ್ರ ಎಂದು ನೀನು ನಿನ್ನನ್ನು ಪರಿಚಯಿಸು. ಸರಿಯಮ್ಮಾ..... ಅಗಸ್ತ್ಯ ಋಷಿಗಳ ಬಗ್ಗೆ ನಾನೇನು ಹೇಳಬೇಕು? ನೀನು ಇದರ ಬಗ್ಗೆ ಬರೆದು ಕೊಟ್ಟು, ಕಂಠ ಪಾಠ ಮಾಡು ಎನ್ನಬೇಡ. ನನಗೆ ಕಂಠಪಾಠ ಮಾಡಲು ಆಗುವುದಿಲ್ಲ ಎಂದು ಅಳತೊಡಗಿದ. ಇಲ್ಲ ಕಂದ ನಾನು ನಿನಗೆ ಅಗಸ್ತ್ಯ ಋಷಿಗಳ ಬಗ್ಗೆ ಕಥೆ ಹೇಳುವೆ, ನಾನು ಹೇಳಿದಂತೆ ನೀನು ಕಥೆ ಹೇಳಿದರೆ ಸಾಕು. ಎಲ್ಲರ ಮೆಚ್ಚುಗೆಗೆ ಪಾತ್ರವಾಗುವೆ ಎಂದಳು ಪದ್ಮಾ. ಸರಿ ಅಮ್ಮ ಎಂದನು ವಿನೀತ .ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೂ ನಿತ್ಯವೂ ಛದ್ಮವೇಷದ ಬಗ್ಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದರು . ವಿನೀತ ನನ್ನಮ್ಮ ನನಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ ಟೀಚರ್ ಎಂದು ಹೇಳುತ್ತಿದ್ದ .
ಜನವರಿ ೨೬ ನೇ ತಾರೀಕು ವೇದಿಕೆಯ ಮೇಲೆ ಮುಖ್ಯ ಗುರುಗಳು, ಶಿಕ್ಷಕ ವೃಂದ ಒಳಗೊಂಡಂತೆ ಎಲ್ಲರೆದುರಿಗೆ ಪ್ರತಿಯೊಂದು ಮಗು, ತನ್ನ ಪಾತ್ರಕ್ಕನುಗುಣವಾಗಿ ವೇದಿಕೆಗೆ ಆಗಮಿಸಿ, ಅದಕ್ಕೆ ಸಂಬಂಧಿಸಿದ ವಿಷಯವನ್ನು ಹೇಳಿ ಹೋಗುತ್ತಿದ್ದರು. ಅದೇ ಪ್ರಕಾರ ೬ ನೇ ತರಗತಿಯಲ್ಲಿ ಓದುತ್ತಿದ್ದ ವಿನೀತನನ್ನು 'ಋಷಿ' ವೇಷದಲ್ಲಿ ಎಂದು ಕೂಗಿದರು. ಆಗ ವಿನೀತ ತನ್ನ ತಾಯಿ ಹೇಳಿದಂತೆ,ಗಾಂಭೀರ್ಯದಿಂದ ಋಷಿಯ ಉಡುಗೆಯಲ್ಲಿ ವೇದಿಕೆಗೆ ಬಂದನು.
ನನ್ನ ಛದ್ಮವೇಷದ ಹೆಸರು "ಅಗಸ್ತ್ಯ ಋಷಿ" ಎಂದು ಪರಿಚಯಿಸಿಕೊಂಡ. ಒಂದು ಪುರಾಣದ ಕಥೆಯ ಪ್ರಕಾರ ವರುಣ ಮತ್ತು ಮಿತ್ರ ಎಂಬ ದೇವತೆಗಳ ಮಗನೇ ಅಗಸ್ತ್ಯರು .ಹೀಗಾಗಿ ಈತನನ್ನು 'ಮೈತ್ರಾವರುಣಿ' ಎಂದು ಸಹ ಕರೆಯುತ್ತಾರೆ .ಈತನ ಪತ್ನಿಯ ಹೆಸರು ಲೋಪ ಮುದ್ರ. ಅಗಸ್ತ್ಯ ಎಂದು ಹೆಸರು ಬರಲು ಒಂದು ಕಥೆ ಕೂಡ ಇದೆ. ಮಧ್ಯಭಾರತದಲ್ಲಿರುವ ವಿಂಧ್ಯಪರ್ವತ ಸೂರ್ಯನಿಗೆ ಸವಾಲಾಗಿ ಎತ್ತರಕ್ಕೆ ಬೆಳೆಯುತ್ತಿತ್ತು. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿ ಅವರೆಲ್ಲರೂ ಮೈತ್ರಾವರುಣಿಯ ಹತ್ತಿರ ಬಂದರು. ಪರ್ವತದ ಬೆಳವಣಿಗೆಯನ್ನು ನಿಲ್ಲಿಸಿ, ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಋಷಿಯನ್ನು ಕೇಳಿಕೊಂಡರು. ಆಗ ಮೈತ್ರಾವರುಣಿಯು ಪರ್ವತದ ಬಳಿ ಬಂದು "ನೀನು ಬೆಳೆಯುವುದನ್ನು ನಿಲ್ಲಿಸು" ಎಂದು ಆಜ್ಞಾಪಿಸಿದಾಗ, ಪರ್ವತದ ಬೆಳವಣಿಗೆ ನಿಂತಿತು. ಈ ಪರ್ವತವನ್ನು ,'ಅಗ' ಎಂದೂ ಸಹ ಕರೆಯುತ್ತಾರೆ. ಹೀಗೆ ಪರ್ವತ ಅಥವಾ ಅಗದ ಬೆಳವಣಿಗೆಯನ್ನು ಸ್ಥಂಬಿಸಿದ್ದರಿಂದ ಅಥವಾ ನಿಲ್ಲಿಸಿದ್ದರಿಂದ 'ಅಗಸ್ತ್ಯ' ಎಂಬ ಹೆಸರು ಬಂತು ಎಂದು ಕಥೆ ಇದೆ.
ಅಗಸ್ತ್ಯರು ಮಹಾಮಹಿಮರು.
ಅರಣ್ಯದಲ್ಲಿನ ಋಷಿಗಳಿಗೆ ಒದಗಿದ್ದ ಕಾಟವನ್ನು ತಪ್ಪಿಸಿದ್ದವರು. 'ವಾತಾಪಿ' ಮತ್ತು 'ಇಲ್ವಲ್ಲ' ಎಂಬ ರಾಕ್ಷಸ ಸಹೋದರರು ಅತಿಥಿಗಳನ್ನು ಭೋಜನಕ್ಕೆ ಆಹ್ವಾನಿಸಿ ಹತ್ಯೆ ಮಾಡುತ್ತಿದ್ದರು. ಯಾರಾದರೂ ಅತಿಥಿಗಳು ಬಂದರೆ ವಾತಾಪಿಯು 'ಮೇಕೆ' ರೂಪ ಧರಿಸುತ್ತಿದ್ದ. ಇಲ್ವಲ ಮೇಕೆಯನ್ನು ಕೊಂದು ಅಡುಗೆ ಮಾಡಿ ಅತಿಥಿಗಳಿಗೆ ಊಟಕ್ಕೆ ಬಡಿಸುತ್ತಿದ್ದ. ಅತಿಥಿಗಳು ಊಟ ಮಾಡಿದ ಮೇಲೆ ಇಲ್ವಲನು "ವಾತಾಪಿ ಹೊರಗೆ ಬಾ" ಎಂದಾಗ, ವಾತಾಪಿಯು ಅತಿಥಿಯ ಹೊಟ್ಟೆಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದ. ಈ ರೀತಿಯಾಗಿ ಈ ರಾಕ್ಷಸರು ಹಲವಾರು ಋಷಿಗಳನ್ನು ಹತ್ಯೆ ಮಾಡುತ್ತಿದ್ದರು. ಇದನ್ನು ತಿಳಿದಂತಹ ಅಗಸ್ತ್ಯರು, ಈ ಕೃತ್ಯವನ್ನು ತಪ್ಪಿಸಲು ಒಂದು ಸಾರಿ ವಾತಾಪಿ ಮತ್ತು ಇಲ್ವಲ ಇದ್ದಲ್ಲಿಗೆ ಬಂದರು. ಇಲ್ವಲ ರಾಕ್ಷಸ ಅದೇ ರೀತಿ 'ಮೇಕೆ'ಯ ರೂಪದಲ್ಲಿದ್ದ ವಾತಾಪಿಯನ್ನು ಕೊಂದು, ಅಗಸ್ತ್ಯರಿಗೆ ಊಟ ಬಡಿಸಿದ. ಈ ವಿಷಯ ತಿಳಿದಿದ್ದ ಅಗಸ್ತ್ಯರು ಊಟವಾದ ಕೂಡಲೇ ಹೊಟ್ಟೆಯ ಮೇಲೆ ಕೈ ಆಡಿಸುತ್ತಾ "ವಾತಾಪಿ ಜೀರ್ಣವಾಗಿ ಹೋಗು" ಎಂದರು. ವಾತಾಪಿ ಅಗಸ್ತ್ಯರ ಹೊಟ್ಟೆಯಲ್ಲಿಯೇ ಕರಗಿ ಹೋದ. ಇಲ್ವಲ್ಲ ಎಷ್ಟೇ ಕರೆದರೂ ಬರಲಿಲ್ಲ. ಅಗಸ್ತ್ಯರು ಇಲ್ವಲನಿಗೂ ಶಾಪಕೊಟ್ಟು ಅವನನ್ನು ಕೊಂದರು.
ಅಗಸ್ತ್ಯ ಮುನಿಗಳು ದೇವತೆಗಳನ್ನು ಸಹ ರಕ್ಷಿಸಿದವರು. ಹೇಗೆಂದರೆ ಕಾಲಕೇಯರೆಂಬ ರಾಕ್ಷಸರು ದೇವತೆಗಳಿಗೆ ಸಾಕಷ್ಟು ತೊಂದರೆಯನ್ನು ಕೊಡುತ್ತಿದ್ದರು. ಹಗಲು ಹೊತ್ತಿನಲ್ಲಿ ಸಮುದ್ರದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದರು. ರಾತ್ರಿ ದೇವತೆಗಳ ಮೇಲೆ ಆಕ್ರಮಣ ಮಾಡುತ್ತಿದ್ದರು. ಇದರಿಂದ ದೇವತೆಗಳಿಗೆ ಚಿಂತೆಯಾಯಿತು. ಅವರು ಬ್ರಹ್ಮದೇವನ ಬಳಿ ಹೋದರು .ಆಗ ಬ್ರಹ್ಮದೇವ ಸಮುದ್ರದಲ್ಲಿರುವಂತಹ ಅವರನ್ನು ಶಿಕ್ಷಿಸುವುದು ಕಷ್ಟ. ಇದಕ್ಕೆ ಅಗಸ್ತ್ಯರೇ ಪರಿಹಾರ ನೀಡುತ್ತಾರೆ ಎಂದುಕೊಂಡು ಅಗಸ್ತ್ಯರ ಬಳಿಗೆ ತೆರಳಿದರು.ಅಗಸ್ತ್ಯರು ಸಮುದ್ರದ ಬಳಿ ಬಂದು, ನೀರನ್ನು ಸಂಪೂರ್ಣವಾಗಿ ಆಪೋಷಣೆ ಮಾಡಿ ಕುಡಿದು ಬಿಟ್ಟರು. ಆಗ ದೇವತೆಗಳು ಸಮುದ್ರದಲ್ಲಿ ಅಡಗಿ ಕುಳಿತಿದ್ದ ರಾಕ್ಷಸರನ್ನು ಸಂಹಾರ ಮಾಡಿದರು. ಈ ರೀತಿಯಾಗಿ ಕಾಲಕೇಯರಂಬ ರಾಕ್ಷಸರಿಂದ ದೇವತೆಗಳನ್ನು ರಕ್ಷಿಸಿದರು. ಅಲ್ಲದೆ ರಾಮಾಯಣದಲ್ಲಿ ಶ್ರೀ ರಾಮ ಸೀತಾ ಮತ್ತು ಲಕ್ಷ್ಮಣರು ಹದಿನಾಲ್ಕು ವರ್ಷಗಳ ವನವಾಸದ ಅವಧಿಯಲ್ಲಿ ಅಗಸ್ತ್ಯ ಮಹರ್ಷಿಗಳ ಆಶ್ರಮಕ್ಕೆ ಬಂದಿದ್ದರು.....ಇಷ್ಟು ಹೇಳಿ ಅಗಸ್ತ್ಯ ಋಷಿಯು ಛದ್ಮವೇಷದಿಂದ ನಾನು ಸಂತೋಷವಾಗಿದ್ದೇನೆ ಎಂದು ವೇದಿಕೆಯಿಂದ ಕೆಳಗಿಳಿದನು.
ವೇದಿಕೆಯಲ್ಲಿದ್ದ ಮುಖ್ಯ ಗುರುಗಳನ್ನು ಒಳಗೊಂಡಂತೆ ಮುಂಭಾಗದಲ್ಲಿ ಕುಳಿತಿದ್ದ ಎಲ್ಲ ವಿದ್ಯಾರ್ಥಿಗಳು ಚಪ್ಪಾಳೆಯೊಂದಿಗೆ ವಿನೀತನನ್ನು ಅಭಿನಂದಿಸಿದರು. ಮುಖ್ಯ ಗುರುಗಳು ಒಬ್ಬ ಋಷಿಯ ಗಾಂಭೀರ್ಯ ಹೇಗಿರುತ್ತೆ, ಎನ್ನುವುದನ್ನು ತುಂಬಾ ಚೆನ್ನಾಗಿ ಛದ್ಮವೇಷದಲ್ಲಿ ತಯಾರಿ ಮಾಡಿದ್ದೀರಾ ಎಂದು ಶಿಕ್ಷಕರಿಗೆ ಅಭಿನಂದಿಸಿದರು. ಆಗ ವಿನೀತನ ಶಿಕ್ಷಕರು ಇದನ್ನು ನಾವು ಮಾಡಿಸಿಲ್ಲ ಗುರುಗಳೇ, ವಿನೀತನ ತಾಯಿಯೇ ಈತನಿಗೆ ಈ ಪಾತ್ರದ ಬಗ್ಗೆ ತಯಾರಿ ಮಾಡಿಸಿದ್ದಾರೆ ಎಂದು ಅಭಿಮಾನದಿಂದ ಹೇಳಿದಾಗ ,ಇದಕ್ಕೆ ಹೇಳುವುದು ತಾಯಿಯೇ ಮೊದಲ ಗುರು ಎಂದು ಹೇಳಿ ,ವಿನೀತನ ತಾಯಿಯನ್ನು ವೇದಿಕೆಗೆ ಕರೆದು, ವಿನೀತನಿಗೆ ಪ್ರಥಮ ಬಹುಮಾನ ನೀಡುವುದರ ಜೊತೆಗೆ ಅಭಿನಂದಿಸಿದರು. ತಾಯಿಯು ಪ್ರೀತಿಯಿಂದ ಹೇಳಿದ ವಿಷಯಗಳು ಮಗುವಿನ ಮನದಲ್ಲಿ ಆಳವಾಗಿ ಬೇರೂರಿ ಅವನು ಕಲಿಕೆಯಲ್ಲಿ ನಿಪುಣನಾಗುತ್ತಾನೆ. ಆದ್ದರಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶಿಕ್ಷಕರ ಜೊತೆಜೊತೆಗೆ ತಂದೆ ತಾಯಿಯ ಪಾತ್ರವೂ ಸಹ ಮುಖ್ಯ ಎಂದು ನಾವು ಮೇಲಿಂದ ಮೇಲೆ ಹೇಳುತ್ತೇವೆ. ಮಕ್ಕಳ ಶ್ರಯೋಭಿವೃದ್ಧಿಗಾಗಿ ಎಲ್ಲ ಪಾಲಕರು ಸಹಕರಿಸಿ ಎಂದು ಎಲ್ಲರನ್ನುದ್ದೇಶಿಸಿ ಮುಖ್ಯ ಗುರುಗಳು ಮಾತನಾಡಿದರು.ಪದ್ಮಾಳಿಗೆ ತನ್ನ ಮಗ ವಿನೀತನಲ್ಲಿ ಮೂಡಿದ ಆತ್ಮವಿಶ್ವಾಸದ ಬಗ್ಗೆ ಹೆಮ್ಮೆ ಎನಿಸಿತು.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್.
ಮುಂಜಾನೆಯ ಚಳಿ (ಕವನ) - ಸುಭಾಷ ಸವಣೂರ.
ಮುಂಜಾನೆಯ ಚುಮು ಚುಮು ಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,
ಸಂಗೀತದ ಅಲೆಗಳ ಮೇಲೆ ತೇಲಿ ಬಂದ ಸುಪ್ರಬಾತದ ಸ್ವರದಲ್ಲಿ ನಿನ್ನ ಮೌನ ಕಂಡೆ,
ಹೊಂಗಿರಣಗಳ ಬೆಳಕಿನಲ್ಲಿ ನಿನ್ನ ನಗುವ ಕಂಡೆ,
ಎಳೆ ಬಳ್ಳಿಯ ಹೊಯ್ದಾಟದಲ್ಲಿ ನಿನ್ನ ನಡಿಗೆಯ ಕಂಡೆ,
ಸೋನೆ ಮಳೆಯಂತೆ ಸುರಿದ ನಿನ್ನ ಪ್ರೀತಿಯಲ್ಲಿ,
ನನ್ನ ಹೃದಯವ ನೆನೆಸಿಕೊಂಡೆ,ಸಾಗರದಂಥ ನನ್ನ ಮನಸಿನ ಭಾವನೆಗಳ ನೀ ಹಂಚಿಕೊಂಡೆ..........
ಇನ್ನು ಕಾಯಿಸಬೇಡ ನನ್ನ, ಕಪ್ಪೆಚಿಪ್ಪಿನ ಮುತ್ತಂತೆ,
ಕಣ್ಣೀರ ಕಡಲಲ್ಲಿ ತೇಲುವ ಬಿಂಬದಂತೆ ಕಾಯುವೆ ನಿನ್ನ
ಆಹಾ..!! ಬಿಸುತಿಹುದು ತಂಪು ತಂಗಾಳಿ
ಸಣ್ಣದಾಗಿ ಶುರುವಾಗಿದೆ ಮಾಗಿಯ ಚಳಿ
ಕಳಚಿಬಿಡು ವಿರಹಗಳ ಸರಪಳಿ
ಒಂದು ಕಡೆ ಚಳಿಯ ಧಾಳಿ,
ಮತ್ತೊಂದೆಡೆ ವಿರಹಾಗ್ನಿ!
ತನು-ಮನದ ಮೇಲೆ ಧಾಳಿ!
ಮೂಲೆ ಸೇರಿ ಬೆಚ್ಚಗೆ ಮಲಗಿದವರೇ ಹೆಚ್ಚು!
ಗಾಳಿಯ ಜೊತೆ ಸೆಣಸಿ ಬೆವರಿಳಿಸುವವರಾರು?
- ಸುಭಾಷ ಸವಣೂರ.
ಹಳ್ಳಿಯಿಂದ ದಿಲ್ಲಿವರೆಗೂ ಹೆಸರು ಮಾಡಿರುವ ಉತ್ತರ ಕರ್ನಾಟಕದ ಯುವ ಪ್ರತಿಭೆ ಸಂಜಯಕುಮಾರ ಬಿರಾದಾರ - ಚಿದಾನಂದ ಪಡದಾಳೆ.
"ಕಲಿಕೆಯು ಸೃಜನಶೀಲತೆಯನ್ನು ನೀಡುತ್ತದೆ, ಸೃಜನಶೀಲತೆ ಚಿಂತನೆಗೆ ಕಾರಣವಾಗುತ್ತದೆ, ಚಿಂತನೆ ಜ್ಞಾನವನ್ನು ನೀಡುತ್ತದೆ ಜ್ಞಾನವು ನಿನ್ನನ್ನು ಶ್ರೇಷ್ಠ ನನ್ನಾಗಿ ಮಾಡುತ್ತದೆ." ಜ್ಞಾನ ಬೆಲೆಕಟ್ಟಲಾಗದ ಸಂಪತ್ತು. ಜ್ಞಾನ ವ್ಯಕ್ತಿಯಲ್ಲಿ ನೈತಿಕತೆಯನ್ನು ತುಂಬಿ ಸದೃಢರನ್ನಾಗಿ ಮಾಡಿ ಸಮಾಜದಲ್ಲಿ ಗೌರವವನ್ನು ಕಲ್ಪಿಸುವ ಮೊದಲ ಮೆಟ್ಟಿಲು. ಇದಕ್ಕಾಗಿ ಜಗಜ್ಯೋತಿ ಬಸವೇಶ್ವರರು "ಜ್ಞಾನದ ಬಲದಿಂದ ಅಜ್ಞಾನದ ಕೇಡು"ಎಂದು ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ. ಏಕೆಂದರೆ, ಜ್ಞಾನದ ಮಹತ್ವವೇ ಇಂಥದ್ದು. ಈ ಮೇಲೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಹೇಳಿದ ಮಾತು ಅಕ್ಷರಶಃ ಸತ್ಯವಾದುದ್ದು.
ಸೃಜನಶೀಲರಾಗಿ ಬದುಕಿ ಜ್ಞಾನವನ್ನು ಸಂಪಾದಿಸಿಕೊಂಡರೆ ಅದು ನಿಮ್ಮನ್ನು ಶ್ರೇಷ್ಠರನ್ನಾಗಿ ಮಾಡುವುದರಲ್ಲಿ ಎರಡು ಮಾತಿಲ್ಲ!. ಆದರೆ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ಅಲ್ಪವಾಗಿ ಅರ್ಥೈಸಿಕೊಂಡು ಅಂಕಗಳಿಗೆ ಸೀಮಿತವಾಗಿ ಬಿಡುತ್ತಾರೆ. ಆದರೆ ಶಿಕ್ಷಣವು ಜ್ಞಾನ ಮತ್ತು ಜ್ಞಾನದ ಮೂಲಕ ಅಂತ್ಯವಿಲ್ಲದ ಪ್ರಯಾಣವಾಗಿದೆ. ಈ ಮಾತುಗಳಿಗೆ ಪಡಿಯಂಚಿನಂತಿರುವವರು ವಿದ್ಯಾರ್ಥಿ ಸಹೋದರ ಸಂಜಯಕುಮಾರ ಯಂಕನಗೌಡ ಬಿರಾದಾರ.
ನಾನು ನಿಮಗೆ ಪರಿಚಯಿಸಲಿರುವ ಯುವಾಂಕಣದ ಯುವ ಸ್ಫೂರ್ತಿ ಬರಿ ವಿದ್ಯಾರ್ಥಿ ಮಾತ್ರವಲ್ಲ, ಬದಲಿಗೆ ತನ್ನ ವಯಸ್ಸಿಗೆ ಮೀರಿದ ಸಾಧನೆ ಮಾಡಿದ ಇನ್ನೂ ಮಾಡುತ್ತಲೇ ಸಾಗುತ್ತಿರುವ ಯುವ ಸಾಧಕ. ಸಂಜಯಕುಮಾರ ಬಿರಾದಾರ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದವರು. 1999 ಜುಲೈ 4 ರಂದು ಯಂಕನಗೌಡ ಬಿರಾದಾರ ಹಾಗೂ ಸುವರ್ಣ ಬಿರಾದಾರ ಅವರ ಕಿರಿಯ ಪುತ್ರನಾಗಿ ಜನಿಸಿದರು. ತಮ್ಮ ಪಿಯುಸಿ ವರೆಗಿನ ಶಿಕ್ಷಣವನ್ನು ಸ್ವಗ್ರಾಮ ತೆಲಗಿಯಲ್ಲಿಯೇ ಪಡೆದುಕೊಂಡರು. ಕಾಲೇಜಿಗೆ ಪ್ರಥಮ ಸ್ಥಾನ ಬರುವುದರ ಮೂಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿ ಕಾಲೇಜಿನಲ್ಲಿ ಗುರುತಿಸಿಕೊಂಡಿದ್ದರು.
ಶಾಲಾ ದಿನಗಳಿಂದಲೂ ಕ್ರೀಯಾಶಿಲರಾಗಿದ್ದ ಸಂಜಯಕುಮಾರ, ಕ್ರೀಡೆ, ಯೋಗಾಸನ, ಛದ್ಮವೇಷ, ಮಿಮಿಕ್ರಿಯೆ, ಭಾಷಣ, ಸ್ಪರ್ಧೆಗಳನ್ನು ಸೇರಿದಂತೆ ಪ್ರತಿಯೊಂದರಲ್ಲಿಯೂ ಭಾಗವಹಿಸುವುದರಲ್ಲಿ ಮೊದಲಿಗರು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಭಾವಂತರಾಗಿದ್ದ ಸಂಜಯಕುಮಾರ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದು ಅವರ ನಾಯಕ ಗುಣದ ಮೇಲೆ ಬೆಳಕು ಚೆಲ್ಲುತ್ತದೆ. ಪ್ರೌಢ ಶಿಕ್ಷಣದಲ್ಲಿ ಓದುತ್ತಿರುವಾಗ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟದಲ್ಲಿ 5000 ಮೀಟರ್ ವೇಗ ನಡಿಗೆಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
ಉನ್ನತ ವ್ಯಾಸಂಗಕ್ಕಾಗಿ ವಿದ್ಯಾಕಾಶಿ, ಫೇಡಾನಗರಿ, ಸಾಂಸ್ಕೃತಿಕ ರಾಜಧಾನಿ ಎಂದೆ ಪ್ರಸಿದ್ಧಿಯಾದ ಧಾರವಾಡಕ್ಕೆ ಬಂದರು. ಇಲ್ಲಿಯ ಪ್ರತಿಷ್ಠಿತ ಜ್ಞಾನ ದೇಗುಲವಾದ ಕರ್ನಾಟಕ ಮಹಾವಿದ್ಯಾಲಯದಲ್ಲಿ ಬಿ.ಎ ಪದವಿಗೆ ಪ್ರವೇಶ ಪಡೆದರು. ಸಮಾಜದ ಬಗ್ಗೆ ಅತೀವ ಕಾಳಜಿ ಹೊಂದಿರುವ ಸಂಜಯಕುಮಾರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿಕೊಂಡು ನೂರಾರು ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿದ್ದಾರೆ. ಕಾಲೇಜಿನ ವಾರ್ಷಿಕ ಸಂಚಿಕೆಯಾದ ನೀನಾದದ ವಿದ್ಯಾರ್ಥಿ ಸಂಪಾದಕರಾಗಿ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ಸೇವಾದಳ, ಎಬಿವಿಪಿ, ಯುವಕ ಬಿರಾದರಿ ಭಾರತ, ಯುವ ಸಂಸತ್ತು, ರಾಷ್ಟ್ರೀಯ ವಿದ್ಯಾರ್ಥಿ ಪರಿಷತ್ (ಬಿ.ಸಿ.ಎಸ್), ರಾಷ್ಟ್ರೀಯ ಅಂಗವಿಕಲರ ಸಕ್ಷಮ ವೇದಿಕೆ, ಭಾವೈಸಿರಿ ವೇದಿಕೆ, ಆರ್ಟ್ ಆಫ್ ಗಿವಿಂಗ್ ಸಂಸ್ಥೆ, ಆಸರ ಇವುಗಳ ಸದಸ್ಯರಾಗಿ ಹಾಗೂ ಕರ್ನಾಟಕ ಮಾನವ ಸಂಪನ್ಮೂಲ ಅಭಿವೃದ್ಧಿ ಟ್ರಸ್ಟ್ ನ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ, ಜಾನಪದ ಯುವ ಬ್ರಿಗೇಡ್ ಧಾರವಾಡ ಜಿಲ್ಲಾ ಸಂಚಾಲಕರಾಗಿ, ಸಿರಿನಾಡು ವೆಬ್ ಟಿವಿ ಕಾರ್ಯಕ್ರಮದ ಸಂಯೋಜಕರಾಗಿ ಮತ್ತು ರಾಷ್ಟ್ರೀಯ ಯುವ ವೇದಿಕೆಯ ಮೂರು ರಾಜ್ಯಗಳ (ಕರ್ನಾಟಕ, ಮಹಾರಾಷ್ಟ್ರ, ಕೇರಳ) ಸಂಯೋಜಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.
ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ಅದೇ ರೀತಿ ನೂರಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ ವಿವಿಧ ವಿಷಯದ ಕುರಿತು ಜಾಗೃತಿಯನ್ನು ಮೂಡಿಸಿ ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿರುವುದು ಶ್ಲಾಘನೀಯ. ವಿಶೇಷ ಚೇತನ ವಿದ್ಯಾರ್ಥಿಗಳ ಪರೀಕ್ಷೆಗಳಂತ ಸಂದರ್ಭದಲ್ಲಿ ಅವರಿಗಾಗಿ ಪರೀಕ್ಷೆಯನ್ನು ಬರೆದು ಅವರಿಗೆ ಕಣ್ಣಾಗಿದ್ದಾರೆ. ಹಾಗೂ ಐದಕ್ಕೂ ಹೆಚ್ಚು ವಿಶೇಷ ಚೇತನರ ಉದ್ಯೋಗ ಮೇಳದಲ್ಲಿ ನೂರಕ್ಕೂ ಹೆಚ್ಚು ಸ್ನೇಹಿತರ, ಸ್ವಯಂಸೇವಕರ ಸಹಾಯದಿಂದ ಸಾವಿರಕ್ಕೂ ಹೆಚ್ಚು ವಿಶೇಷ ಚೇತನರ ಸೇವೆಯನ್ನು ಮಾಡಿದ್ದಾರೆ. ವಿಶೇಷ ಚೇತನರ ದಾಖಲಾತಿ ಪರಿಶೀಲನೆಲ್ಲಿ ಹಾಗೂ ಮೇಳದಲ್ಲಿ ಪಾಲ್ಗೊಂಡವರನ್ನು ತಮ್ಮ ಸ್ವಂತ ಸ್ಥಳಗಳಿಗೆ ತಲುಪಿಸುವಲ್ಲಿ ಉಂಟಾದ ಗೊಂದಲಗಳನ್ನು ತಮ್ಮ ಸೇವಾ ಮನೋಭಾವದಿಂದ ಯಶಸ್ವಿಯಾಗಿ ಬಗೆಹರಿಸಿ ಅವರ ಆಶಾಕಿರಣರಾಗಿದ್ದಾರೆ.
ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಗುರುತಿಸಿ ನ್ಯೂಸ್ ಟೈಮ್, ಧಾರವಾಡ ನ್ಯೂಸ್ ಹಾಗೂ ಹಲವಾರು ಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮಗಳಲ್ಲಿ ಇವರ ಸಾಧನೆಯ ಕುರಿತು ಸಂದರ್ಶನಗಳು ಬಿತ್ತರಿಸಿದ್ದಾರೆ.
ಅಷ್ಟೇ ಅಲ್ಲದೆ ಸಹೋದರ ಸಂಜಯ್ ಡಿ ಡಿ ಚಂದನದ ಮಧುರ ಮಧುರವಿ ಮಂಜುಳಗಾನದಲ್ಲಿ ಭಾಗವಹಿಸಿದ್ದಾರೆ. ಹಾಗೂ ಧಾರವಾಡದ ಆಕಾಶವಾಣಿಯಲ್ಲಿ ಕವಿತಾ ವಾಚನ ಮಾಡಿದ್ದಾರೆ. ದೇಶದ ಐದು ಭಾಷೆಗಳಲ್ಲಿ ನಿರರ್ಗಳವಾಗಿ (ಕನ್ನಡ, ಹಿಂದಿ, ಇಂಗ್ಲೀಷ್,ಲಂಬಾಣಿ, ತೆಲುಗು) ಮಾತನಾಡುತ್ತಾರೆ. ಇವರು ಕರ್ನಾಟಕ ರಾಜ್ಯದ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸಿ ಅತ್ಯುತ್ತಮ ಸ್ವಯಂಸೇವಕ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ನೂರಕ್ಕೂ ಹೆಚ್ಚು ಜನರಿಗೆ ರಕ್ತದಾನವನ್ನು ಮಾಡಿಸಿದ್ದಾರೆ. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್, ಸ್ವಯಂಸೇವಕರಿಗೆ ಕ್ಯಾಪ್ ಮತ್ತು ಸರ್ಕಾರಿ ಶಾಲೆಗಳಿಗೆ ಗಿಡಗಳನ್ನು ಕೊಡುಗೆಯಾಗಿ ನೀಡಿರುವುದು ಇವರ ಇನ್ನೊಂದು ಸಾಧನೆ ಎನ್ನಬಹುದು. ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ ಮಾತಾಡ್ ಮಾತಾಡ್ ಕನ್ನಡ, ಲಕ್ಷ ಕಂಠಗಳ ಗೀತಗಾಯನ ಕಾರ್ಯಕ್ರಮದಲ್ಲಿ 35 ಯುವ ಕಲಾವಿದರನ್ನು ಸಂಘಟಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಆದ್ದರಿಂದ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಮಾನ್ಯ ಶ್ರೀ ಸುನಿಲ್ ಕುಮಾರ್ ಅವರು ಇವರಿಗೆ ಪ್ರಶಂಸನಾ ಪತ್ರ ಮತ್ತು ಐದು ಸಾವಿರ ನಗದು ನೀಡಿ ಗೌರವಿಸಿದ್ದಾರೆ. ಹೀಗೆ ಚಿತ್ರಕಲಾ ರಂಗೋಲಿ ವಿನ್ಯಾಸಕರಾಗಿ, ಯುವ ಬರಹಗಾರರಾಗಿ, ಭಾಷಣಕಾರರಾಗಿ, ಉತ್ತಮ ನಿರೂಪಕರಾಗಿ, ಕಾರ್ಯಕ್ರಮ ಸಂಘಟಕರಾಗಿ, ಯುವ ಸಮಾಜ ಸೇವಕರಾಗಿ, ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಸಹೋದರ ಸಂಜಯಕುಮಾರ ರಾಜ್ಯ, ರಾಷ್ಟ್ರಮಟ್ಟದಲ್ಲಿ ಅದೆಷ್ಟೊ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಅವುಗಳಲ್ಲಿ ಕೆಲವೊಂದಿಷ್ಟು ನಿಮಗೆ ತಿಳಿಸಲು ಬಯಸುತ್ತೇನೆ. 2019/20ನೇ ಸಾಲಿನ ಪೂನಾದ ವರ್ಲ್ಡ್ ಫೀಸ್ ಯೂನಿವರ್ಸಿಟಿ ಆಯೋಜಿಸಿದ ‘9ನೇ ಭಾರತೀಯ ಛಾತ್ರ ಸಂಸತನಲ್ಲಿ’ ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ದೇವಿ ಪಾಟೀಲ್ ಅವರ ಸಮಕ್ಷಮದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 2020 ರಲ್ಲಿ ನ್ಯಾಷನಲ್ ಯೂತ್ ಡೆವಲಪ್ಮೆಂಟ್ ಕೌನ್ಸಿಲ್ ಆಯೋಜಿಸಿದ ‘ನ್ಯಾಷನಲ್ ಕಾನ್ಫರೆನ್ಸ್ ಆಫ್ ನೇಚರ್ ಕಂಜರ್ವೇಶನ್’ ನಲ್ಲಿ ರಾಜ್ಯಸಭಾ ಸದಸ್ಯರಾದ ವಂದನಾ ಚೌವ್ಹಾಣ್ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. 2020ರಲ್ಲಿ ದೆಹಲಿಯ ವಿಗ್ಯಾನ್ ಭವನದಲ್ಲಿ ವರ್ಲ್ಡ್ ಫೀಸ್ ಯೂನಿವರ್ಸಿಟಿ ಆಯೋಜಿಸಿದ ‘10ನೇ ಭಾರತೀಯ ಛಾತ್ರ ಸಂಸತ್ತನಲ್ಲಿ’ ಮಾಜಿ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜಿ ಹಾಗೂ ಉಪರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗಿಯಾಗಿದ್ದಾರೆ. 2021ರಲ್ಲಿ ಬಾಂಬೆಯಲ್ಲಿ ಪದ್ಮಶ್ರೀ ಪುರಸ್ಕೃತರಾದ ಶ್ರೀ ಕ್ರಾಂತಿ ಷಾ ಅವರು ಆಯೋಜಿಸಿದ ಎರಡು ದಿನಗಳ ‘ರಾಷ್ಟ್ರೀಯ ದಾಂಡಿ ಸ್ಮೃತಿ’ ಶಿಬಿರದಲ್ಲಿ ಭಾಗವಹಿಸಿದ್ದಾರೆ. 2021ರಲ್ಲಿ ಕೋವಿಡ್ ನಿಂದಾಗಿ ವರ್ಚುವಲ್ ನಲ್ಲಿ ಆಯೋಜಿಸಿದ ‘11ನೇ ಭಾರತೀಯ ಛಾತ್ರ ಸಂಸತನಲ್ಲಿ’ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ. 2022ರಲ್ಲಿ ಅಂತರಾಷ್ಟ್ರೀಯ ತ್ರಿಪುರ ರಾಜ್ಯದ ಗೌರ್ನರ್ ಭವನದಲ್ಲಿ ನಡೆದ ‘ರಾಷ್ಟ್ರೀಯ ಹೆರಿಟೇಜ್ ಫೆಸ್ಟನಲ್ಲಿ’ ಭಾಗವಹಿಸಿದ್ದಾರೆ. 2022ರಲ್ಲಿ ಭಾರತದ ಟ್ಯಾಲೆಂಟ್ ನೋಮಿಕ್ಸ ಮತ್ತು ಜಪಾನ್ ನ ಕೆಎಎಸ್ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ 'ಯೂನಿವರ್ಸ ಟು ಇಕ್ವಿವೆರಸ್: ಸ್ಟಾರ್ಟ್ ದ ರಿಪ್ಪಲ್' ನ 6ನೇ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
2022ರಲ್ಲಿ ಭಾರತ ಸರ್ಕಾರ ವರ್ಚುವಲ್ ನ ಮೂಲಕ ಪುದುಚೇರಿಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ ‘25ನೇ ವರ್ಷದ ನ್ಯಾಷನಲ್ ಯೂತ್ ಫೆಸ್ಟಿವಲ್’ ನಲ್ಲಿ ಭಾಗವಹಿಸಿದ್ದಾರೆ. ಇತ್ತಿಚಿಗೆ ಯುವಕ ಬಿರಾದರಿ ಭಾರತ ಆಯೋಜಿಸಿದ ಉತ್ತರ ಪ್ರದೇಶದಲ್ಲಿ ‘ರಾಷ್ಟ್ರೀಯ ಯುವ ನಾಯಕತ್ವ ಶಿಬಿರದಲ್ಲಿ’ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದಾರೆ. ಜೂನ್ ನಲ್ಲಿ ಯುವಕ ಬಿರಾದರಿ ಭಾರತ ಸಂಸ್ಥೆಯು ಮಹಾರಾಷ್ಟ್ರ ರಾಜ್ಯದ ಶಹಪುರ್ ತಾನೆಯಲ್ಲಿ ಆಯೋಜಿಸಿದ ಐದು ದಿನಗಳ ಕಾಲ ‘ರಾಷ್ಟ್ರೀಯ ವೃಕ್ಷ ಮೀಟ್ ಹಾಗೂ ರಾಷ್ಟ್ರೀಯ ನಾಯಕತ್ವ ಶಿಬಿರದಲ್ಲಿ’ ಭಾಗಿಯಾಗಿದ್ದಾರೆ. ದೆಹಲಿಯ ಮಹಾರಾಷ್ಟ್ರ ಸದನದಲ್ಲಿ ಅಂತರಾಷ್ಟ್ರೀಯ ಯುವ ದಿನದ ಅಂಗವಾಗಿ ನಡೆದ ‘ರಾಷ್ಟ್ರೀಯ ಯುವ ಪಾರ್ಲಿಮೆಂಟಿನಲ್ಲಿ’ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾರತ ಸರ್ಕಾರವು ಆಯೋಜಿಸಿದ ಎನ್.ಎಸ್.ಎಸ್ ‘ರಾಷ್ಟ್ರೀಯ ಭಾವೈಕ್ಯತೆ ಶಿಬಿರದಲ್ಲಿ’ ಆರ್ಗನೈಸ್ ಕಮಿಟಿ ಸದಸ್ಯರಾಗಿ ಪಾಲ್ಗೊಂಡಿದ್ದಾರೆ. ಹಾಗೆಯೇ 5 ‘ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ’ ಭಾಗವಹಿಸಿದ್ದಾರೆ.
ಇವರು ಸಮಾಜಕ್ಕೆ ಸಲ್ಲಿಸಿದ ಅಭೂತಪೂರ್ವ ಸೇವೆಯನ್ನು ಕಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ ಗೌರವಗಳು ಹರಸಿಬಂದಿವೆ. ಅವುಗಳಲ್ಲಿ ಕೆಲವು -ಗ್ರಾಮ ಸ್ವಚ್ಛತೆಗಾಗಿ 2017ರಲ್ಲಿ ಕೇಂದ್ರ ಸಚಿವರಾದ ಶ್ರೀ. ಪ್ರಲ್ಹಾದ ಜೋಶಿ ಮತ್ತು ಸಭಾಪತಿಗಳಾದ ಸನ್ಮಾನ್ಯ. ಬಸವರಾಜ ಹೊರಟ್ಟಿ ಅವರಿಂದ ‘ರಾಜ್ಯ ಯುವ ಪುರಸ್ಕಾರ’ ಪಡೆದುಕೊಂಡಿದ್ದಾರೆ. 2019-20 ನೇ ಸಾಲಿನ ಕರ್ನಾಟಕ ಸರ್ಕಾರ ಕೊಡ ಮಾಡುವ ‘ಎನ್.ಎಸ್.ಎಸ್ ಅತ್ಯುತ್ತಮ ಸ್ವಯಂಸೇವಕ ರಾಜ್ಯ ಪ್ರಶಸ್ತಿಯನ್ನು’ ಪಡೆದುಕೊಂಡಿದ್ದಾರೆ. 2018ರಲ್ಲಿ ಹೂವಿನಹಡಗಲಿಯಲ್ಲಿ ನಡೆದ 11ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ‘ಚಿಕ್ಕ ಪ್ರಾಯದಲ್ಲಿ ಅಪೂರ್ವ ಸಾಧನೆ ಮಾಡಿದ್ದಕ್ಕಾಗಿ ಕರ್ನಾಟಕ ಪ್ರತಿಭಾ ರತ್ನ ರಾಜ್ಯಪ್ರಶಸ್ತಿ’ ಯನ್ನು ನೀಡಿ ಗೌರವಿಸಿದ್ದಾರೆ. 2019/20 ನೇ ಸಾಲಿನ ಕರ್ನಾಟಕ ವಿಶ್ವವಿದ್ಯಾಲಯ ಕೊಡ ಮಾಡುವ ಪ್ರತಿಷ್ಠಿತ ‘ಡಾ.ಡಿ ಸಿ ಪಾವಟೆ ಎನ್.ಎಸ್.ಎಸ್. ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ’ ಯನ್ನು ಪಡೆದುಕೊಂಡಿದ್ದಾರೆ. 2020ನೇ ಸಾಲಿನಲ್ಲಿ ಶ್ರೀಮತಿ ಅಂಜಲಿ ಮಾಯಾಡಿಯೋ ಅಂಬೇಡ್ಕರ ಅವರು ಇವರ ಸಮಾಜಸೇವೆಗಾಗಿ ಅಂಬೇಡ್ಕರ ಅವರ 64ನೇ ಮಹಾಪರಿನಿರ್ವಾಣ ದಿವಸದ ಪ್ರಯುಕ್ತ ‘ಮೂಕನಾಯಕ ಅ ಸೈಲೆಂಟ್ ಹಿರೋ’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. 2020ರಲ್ಲಿ ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ, ಬೆಂಗಳೂರು ಇವರ ಜಾನಪದ ಹಾಗೂ ಸಮಾಜ ಸೇವೆಯಲ್ಲಿ ಸಲ್ಲಿಸಿದ ಸೇವೆಗಾಗಿ ‘ಸಾಹಿತ್ಯ ಸೇವಾರತ್ನ ರಾಜ್ಯ ಪ್ರಶಸ್ತಿ’ ನೀಡಿ ಗೌರವಿಸಿದ್ದಾರೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಯುವ ಸಬಲೀಕರಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ 2020/21ನೇ ಸಾಲಿನ ‘ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿ’ ಯನ್ನು ನೀಡಿ ಗೌರವಿಸಿದ್ದಾರೆ. ಇ.ಎಸ್.ಎನ್ ಪಬ್ಲಿಕೇಶನ್ ಅವರು ಆಯೋಜಿಸಿದ್ದ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಮಾಜ ಸೇವಾ ಕ್ಷೇತ್ರಕ್ಕೆ 2022ನೇ ಸಾಲಿನ ‘ಗ್ಲೋಬಲ್ ಐಕಾನಿಕ್ ಎಜುಕೇಶನ್ ಅವಾರ್ಡ್’ ನ್ನು ನೀಡಿ ಗೌರವಿಸಲಾಗಿದೆ. 2022ನೇ ಸಾಲಿನ ಸಮಾಜ ಸೇವೆ ಹಾಗೂ ಎನ್.ಎಸ್.ಎಸ್. ನಲ್ಲಿಯ ಕಾರ್ಯವೈಖರಿಗಾಗಿ ಭಾರತ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಮಹೇಂದ್ರನಾಥ ಪಾಂಡೆ ಅವರು ‘ರಾಷ್ಟ್ರೀಯ ಯುವ ಐಕಾನ್ ರಾಷ್ಟ್ರ ಪ್ರಶಸ್ತಿಯನ್ನು’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಮಿಜೋರಾಂನ ನಿವೃತ್ತ ರಾಜ್ಯಪಾಲರಾದ ಶ್ರೀ ಅಮಲೋಕ್ ರತನ್ ಕೋಹ್ಲಿ ಹಾಗೂ ಉಪಸ್ಥಿತರಿದ್ದರು. ರಕ್ತದಾನ ಫೌಂಡೇಶನ್ ರಾಜಸ್ಥಾನದವರು ರಾಷ್ಟ್ರೀಯ ರಕ್ತದಾನ ಆಂದೋಲನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ರಕ್ತದಾನ ಕ್ವಿಜ್ ಸ್ಪರ್ಧೆಯಲ್ಲಿ ‘ಕರ್ನಾಟಕ ರಾಜ್ಯಕ್ಕೆ ಮೂರನೇ ಸ್ಥಾನ’ ಪಡೆದಿದ್ದಾರೆ. ಭಾರತ ಸರ್ಕಾರ ಆಯೋಜಿಸಿದ್ದ 25ನೇ ವರ್ಷದ ವರ್ಚುವಲ್ ನ್ಯಾಷನಲ್ ಯೂತ್ ಫೆಸ್ಟಿವಲ್ ನಲ್ಲಿ ಭಾಗವಹಿಸುವುದರ ಮೂಲಕ ‘2047 ರಲ್ಲಿ ಭಾರತ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ’ ಪಡೆದಿದ್ದಾರೆ.
ಇವರು ಹಲವಾರು ಗಣ್ಯವ್ಯಕ್ತಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ. ಸುಧಾಮೂರ್ತಿ ಅವರು ಅತ್ಯುತ್ತಮ ಸ್ವಯಂಸೇವಕ ಎಂದು ಇವರನ್ನು ಸನ್ಮಾನಿಸಿ ಅಭಿನಂದಿಸಿದ್ದಾರೆ. ಹಿಂದಿನ ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ. ದೀಪಾ ಚೋಳನ್ ಅವರು ಸಂಜಯಕುಮಾರ ಅವರನ್ನು ‘ವೆರಿ ಆಕ್ಟಿವ್ ಪರ್ಸನ್’ ಎಂದು ಕರೆದಿದ್ದಾರೆ. ಶ್ರೀಮತಿ. ಕಲ್ಪನಾ ಗೋಪಾಲನ್ ಐಎಎಸ್ ಅಧಿಕಾರಿಗಳಿಂದ, ಹಿರಿಯ ಐಎಎಸ್ ಅಧಿಕಾರಿಗಳಾದ ಡಾ.ಟಿ.ಸಿ. ಪೂರ್ಣಿಮಾ ಪ್ರಸಾದ್ ಅವರಿಂದ ಅತ್ಯುತ್ತಮ ಸ್ವಯಂ ಸೇವಕ ಎಂದು ಮೆಚ್ಚುಗೆಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ. ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯ ಅವರಿಂದಲು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ, ಸಭಾಪತಿಗಳಾದ ಶ್ರೀ ಬಸವರಾಜ ಹೊರಟ್ಟಿ, ಕೇಂದ್ರ ಸಚಿವರಾದ ಕುಮಾರಕೇತಕರ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ಪ್ರಸ್ತುತ ಬಸವನ ಬಾಗೇವಾಡಿ ತಾಲ್ಲೂಕಿನ ಶಾಸಕರಾದ ಶ್ರೀ ಶಿವಾನಂದ ಎಸ್ ಪಾಟೀಲ್ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ.
ಅದೇ ರೀತಿಯಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ, ನಾಡೋಜ್ ಪಾಟೀಲ ಪುಟ್ಟಪ್ಪ, ಸಾಹಿತಿ ವೀಣಾ ಶಾಂತೇಶ್ವರ, ನಾಡೋಜ ಡಾ. ಚೆನ್ನವೀರ ಕಣವಿ, ಸಾಹಿತಿ ವೈದೇಹಿ, ಬಂಡಾಯ ಸಾಹಿತಿ ಕುಂ. ವೀರಭದ್ರಪ್ಪ, ಹಾಸ್ಯ ಸಾಹಿತಿ ಭುವನೇಶ್ವರಿ ಹೆಗಡೆ, ಹಿಂದಿ ಸಾಹಿತಿ ಉರ್ಮಿಳಾ ಶಿರೀಷ್, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ದಿವಂಗತ ಪ್ರೋ. ಎಚ್.ಎಮ್. ಮಹೇಶ್ವರಯ್ಯ, ಸಾಹಿತಿ ಪ್ರತಿಭಾ ನಂದಕುಮಾರ್ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಮಹಾರಾಷ್ಟ್ರದ ಯುವಕ ಬಿರಾದರಿ ಭಾರತ ಸಂಸ್ಥೆಯ ಸಂಸ್ಥಾಪಕ-ಅಧ್ಯಕ್ಷರಾದ ಪದ್ಮಶ್ರೀ ಪುರಸ್ಕೃತ ಶ್ರೀ ಕ್ರಾಂತಿ ಷಾ ಅವರಿಂದಲೂ ಮೆಚ್ಚುಗೆಯನ್ನು ಪಡೆದಿದ್ದಾರೆ. ಹೀಗೆ ಹಲವಾರು ಮಹನಿಯರಿಂದ ಮೆಚ್ಚುಗೆಯನ್ನು ಪಡೆದು ಸಾಧನೆಯ ಶಿಖರವನ್ನು ಏರುತ್ತಿದ್ದಾರೆ.
ಇಷ್ಟೆಲ್ಲಾ ಸಾಧನೆ ಮಾಡಿದಾಗಲೂ ಯಾವುದೇ ಹಮ್ಮು ಬಿಮ್ಮು ತೊರದೆ ಎಲ್ಲರೊಡನೆ ಆತ್ಮೀಯವಾಗಿ ಬೆರೆಯುತ್ತ ಯಾರೇ ಕಷ್ಟದಲ್ಲಿದ್ದರೂ ತನ್ನ ಕೈಲಾದಷ್ಟು ಸಹಾಯ ಮಾಡುತ್ತ, ಏನಾದರೂ ಒಳ್ಳೆಯ ಕೆಲಸವಾಗುತ್ತದೆ ಎಂದರೆ ಹಿಂದೆ ಮುಂದೆ ನೋಡದೆ ಮುನ್ನುಗ್ಗಿ ಆ ಕೆಲಸವನ್ನು ಯಶಸ್ವಿಯಾಗಿ ಮಾಡಲು ಪ್ರಯತ್ನಿಸುವ ಸಹೋದರ ಸಂಜಯಕುಮಾರರಂತ ಸಜ್ಜನರ ಸಂತತಿ ಸಾವಿರವಾಗಲಿ ಎಂದು ಆಶಿಸುತ್ತೇನೆ. ಹಾಗೆಯೇ ಸಹೋದರ ಸಂಜಯ ತನ್ನ ಜೀವನದಲ್ಲಿ ಇನ್ನೂ ಉನ್ನತ ಸಾಧನೆ ಮಾಡಲಿ ಮತ್ತು ಅವರಿಂದ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸಗಳಾಗಲಿ ಎಂದು ಹಾರೈಸುತ್ತೇನೆ.
- ಚಿದಾನಂದ ಪಡದಾಳೆ, ಲೇಖಕರು ಹಾಗೂ ಸಹ್ಯಾದ್ರಿ ಸ್ಪರ್ಧಾತ್ಮಕ ಮಾಸಪತ್ರಿಕೆ ಸಂಪಾದಕರು.
ಭಾರತದ ಬೆಳವಣಿಗೆಯಲ್ಲಿ ಕನ್ನಡಿಗರ ಪಾತ್ರವೇನು? (ಲೇಖನ) - ಬ್ರಿಜೇಶ್ ಕುಮಾರ್. ಬಿ. ಟಿ.
ಭಾರತದ ಬೆಳವಣಿಗೆಯಲ್ಲಿ ಕನ್ನಡಿಗರ ಪಾತ್ರವೇನೆಂದರೆ ಇದೊಂದು ವ್ಯಾಪಕವಾದ ವಿಷಯವೇ ನಿಜ. ಕನ್ನಡಿಗರು ಇಂದೇನಾಗಿದ್ದಾರೆ ಎಂದರೆ ನಾವು ಎಷ್ಟು ದೊಡ್ಡ ರಾಜ್ಯಗಳನ್ನು ನಿರ್ಮಿಸಿದ್ದೆವು ಎಲ್ಲಿಯವರೆಗೂ ನಮ್ಮ ಗಡಿ ಸೀಮೆಗಳು ಇದ್ದವು ಎನ್ನುವುದು ಈಗ ನೆನಪೇಇಲ್ಲದಂತಾಗಿಹೋಗಿದೆ.
ನಮಗೆಲ್ಲ ತಿಳಿದಿರಬಹುದು ನಮ್ಮ ಕನ್ನಡದ ಪ್ರಸಿದ್ಧ ರಾಜಮನೆತನಗಳಾದ ರಾಷ್ಟ್ರಕೂಟರ ಬಲ, ಚಾಲುಕ್ಯರ ಸೈನ್ಯ ಎನ್ನುವುದು ಉತ್ತರ ಭಾಗದ ಗಡಿಗಳ ತನಕ ವ್ಯಾಪಕಗೊಂಡಿದ್ದವು. ನಮ್ಮ ಕರ್ನಾಟಕದ ಬಲ ಹೇಗಿತ್ತು ಎಂದರೆ ಬೇರೆ ರಾಜ್ಯಗಳು ಯುದ್ಧ ಮಾಡಬೇಕಾದ ಸಂದರ್ಭದಲ್ಲಿ ನಮ್ಮ ಕರ್ನಾಟಕದ ಸೈನ್ಯವನ್ನು ಕಳುಹಿಸುವಷ್ಟು ನಮ್ಮಲ್ಲಿ ಸೈನ್ಯದ ಶಕ್ತಿ ಬೆಳದಿತ್ತು.
ಇನ್ನು ಪರಾಕ್ರಮದ ವಿಷಯದಲ್ಲೂ ಸಹ ನಮ್ಮ ಹೆಮ್ಮೆಯ ಕನ್ನಡಿಗರು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ನಮ್ಮ ಸುಪ್ರಸಿದ್ಧ ರಾಜ ಮನೆತನಗಳಾದ ಚಾಲುಕ್ಯರು, ರಾಷ್ಟ್ರಕೂಟರು ತದನಂತರ ಬಂದಂತಹ ವಿಜಯನಗರ ಸಾಮ್ರಾಜ್ಯ ಇವುಗಳೆ ಕನ್ನಡಿಗರ ಪರಾಕ್ರಮಕ್ಕೆ ಬಹುದೊಡ್ಡ ಉದಾಹರಣೆಗಳೆನ್ನಬಹುದಾಗಿದೆ. ಏಕೆಂದರೆ ವಿಜಯನಗರ ಸಾಮ್ರಾಜ್ಯ ಬಂಗಾಳದ ತನಕ ವ್ಯಾಪಕಗೊಂಡ ಕೃಷ್ಣದೇವರಾಯರು ಒರಿಸ್ಸಾದ ಗಜಪತಿಯನ್ನು ಸೋಲಿಸಿದ ಸಂದರ್ಭವನ್ನು ಸಹ ನಾವು ಕಾಣಬಹುದಾಗಿದೆ. ಕೇವಲ ಯುದ್ಧ ಮಾಡಿ ಸೋಲಿಸಿ ಹಿಂತಿರುಗುವುದಷ್ಟೇ ಅಲ್ಲ, ಬದಲಾಗಿ ಅಲ್ಲಿಯೇ ಸಾಮ್ರಾಜ್ಯವನ್ನು ಸಹ ಸ್ಥಾಪನೆ ಮಾಡಿದ್ದಾರೆ ಕನ್ನಡಿಗರು ಎನ್ನುವುದು ಹೆಮ್ಮೆಯ ಸಂಗತಿ.
ಉದಾಹರಣೆಯೆಂದರೆ, ಸುಶ್ಮಿತ ಸೇನ್, ಸೇನ್ ಎಂಬುದು ಬಂಗಾಳಿಯ ಹೆಸರಾದರೂ ಸೇನ ಮನೆತನ ಮೂಲಕ ಕನ್ನಡದ್ದೇ. ಸೇನರು ಬಂಗಾಳದಲ್ಲಿ ನೆಲೆಸಿದ್ದರು, ಆದರೆ ಕನ್ನಡದ ಮೂಲ ರಾಜಮನೆತನದವರೇ. ನೇಪಾಳದಲ್ಲಿ ಇದ್ದಂತಹ ಕನ್ನಡದ ರಾಜಮನೆತನದ ಬಗ್ಗೆ ಲೇಖಕರಾದ ಚಿದಾನಂದ ಮೂರ್ತಿಯವರು ಬರೆದಿದ್ದಾರೆ.
ಇನ್ನು ನೇಪಾಳದಲ್ಲಿರುವ ಪಶುಪತಿನಾಥ ದೇವಸ್ಥಾನದಲ್ಲಿ ಇಂದಿಗೂ ಸಹ ಅರ್ಚಕರು ನಮ್ಮ ಕನ್ನಡ ನಡೆದವರೆ.
ನಮಗೆ ತಿಳಿದಿರಬಹುದು ಕನ್ನಡಕ್ಕೆ ಹೀಗೊಂದು ಬೃಹತ್ ಭಾರತದನಂಟು ಹೇಗಿತ್ತೇನ್ನುವುದನ್ನು.
ಇನ್ನು ನಮ್ಮ ಸಾಹಿತ್ಯ, ಸಂಸ್ಕೃತಿ, ಹಾಗೂ ಸಂಗೀತದ ಕ್ಷೇತ್ರಕ್ಕೆ ನಾವು ಬರುವುದಾದರೆ ಕರ್ನಾಟಕದ ಗೋಪಾಲ ನಾಯಕರು ಹಿಂದುಸ್ತಾನಿ ಸಂಗೀತದ ಜನಕ, ಪ್ರಸ್ತುತ ನಾವೇನು ಹಿಂದುಸ್ತಾನಿ ಜನಕ ಎನ್ನುತ್ತೇವೆ, ತದನಂತರ ಅವರು ಅದನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದು ಅನೇಕ ವಿದ್ವಾಂಸರು ತಮ್ಮ ಬರವಣಿಗೆಯಲ್ಲಿ ಹೇಳಿಕೊಂಡಿದ್ದಾರೆ.
ಇಂದು ಹಿಂದುಸ್ತಾನಿ ಸಂಗೀತ ಎಂದು ತಕ್ಷಣ ಬೇರಲ್ಲೂ ಇರುವುದು ನಮಗೆ ತಿಳಿದರು ಅದಕ್ಕೆ ಮೂಲ ಕಾರಣ ಆತ ಕನ್ನಡದಲ್ಲಿ ಬರೆದಂತಹ ಸಂಗೀತ ಗ್ರಂಥಗಳೆ.
ಇನ್ನು ಕೃಷ್ಣದೇವರಾಯರ ಕಾಲದಲ್ಲಿ ಪಿಳ್ಳಾರಿ ಗೀತೆಗಳನ್ನು ಮಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ಮಾಯ ಮಾಡುವ ಗೌಡ ಎಂಬ ರಾಗವನ್ನು ಮಾಡಿ ಹಾಗೂ ಇದೊಂದು ಪ್ರಾಥಮಿಕ ರಾಗವನ್ನಾಗಿ ಮಾಡಿ ಇದರ ಮುಖಾಂತರ ಎಲ್ಲಾ ರಾಗಗಳನ್ನು ತೆಗೆದುಕೊಂಡು ನಡೆಸುವಂತೆ ಮಾಡಿ ಮಕ್ಕಳಿಗೆ ಅದನ್ನು ಸುಲಭವಾಗಿ ಕಲಿಸಿದರು. ಆ ಕಾಲದಲ್ಲಿ ಸೃಷ್ಟಿ ಆದಂತಹ ಸಂಗೀತ ಅಂದರೆ ವಿದ್ಯಾರಣ್ಯರ ಹಾಗೂ ಪುರಂದರ ದಾಸರು ಪುನರ್ಜೀವವನ್ನು ಕೊಟ್ಟಂತಹ ಸಂಗೀತವನ್ನು ಕರ್ನಾಟಕ ಸಂಗೀತ ಎಂದು ಹೆಸರನ್ನು ಕೊಟ್ಟರು. ಅದನ್ನು ನಾವಿಂದು ಮಲಯಾಳಂ, ತೆಲುಗು, ತಮಿಳ್, ಮದ್ರಾಸ್, ಯಾವುದೇ ಭಾಷೆಯಲ್ಲಿ ಹಾಡಿದರೂ ಅದನ್ನು ಕರ್ನಾಟಕ ಸಂಗೀತ ಎಂದೇ ಕರೆಯುತ್ತಾರೆ. ಅಂತಹ ದೊಡ್ಡ ಕರ್ನಾಟಕ ಸಂಗೀತ ಇಂದು ನಾವು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಹಾಕಿ ಜೈಪುರ್ ಸಂಗೀತ,ಮರಾಠಿ ಸಂಗೀತ, ಕಾಶ್ಮೀರಿ ಸಂಗೀತವೆಂದು ಎಲ್ಲೂ ಇಲ್ಲ ಆಗೊಮ್ಮೆ ಇದ್ದರೂ ಸಹ ಅದು ಪ್ರಾದೇಶಿಕವಾಗಿ ಬಿಡುತ್ತದೆ.
ನಮ್ಮ ಭಾರತ ದೇಶದಲ್ಲಿ ಯಾವುದಾದರೂ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತದ ಹೆಸರಿನಲ್ಲಿ ಕೊಡುಗೆಯನ್ನು ಕೊಟ್ಟಿದ್ದರೆ ಅದು ಕರ್ನಾಟಕದ ಸಂಗೀತವೇ. ಯಾಕೆಂದರೆ ಇದು ಅಷ್ಟು ಶಾಸ್ತ್ರಿನಿಬದ್ಧವಾಗಿ, ಪ್ರೌಢವಾಗಿ ರಚಿತವಾದ ಸಂಗೀತ. ಈ ರೀತಿ ನಮ್ಮ ಕನ್ನಡಿಗರು ಸಂಗೀತಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ.
ಇನ್ನು ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ದೇವಸ್ಥಾನಗಳು, ಕೆತ್ತನೆಗಳು ಇಂದಿಗೂ ಕೂಡ ಬೇರೆ ಬೇರೆಯ ಭಾಗದ ಜನರ ಮೇಲೆ ತೀರ ಪ್ರಭಾವವನ್ನು ಬೀರಿತ್ತು, ಬೀರುತ್ತದೆ. ಗುಜರಾತ್ನಲ್ಲಿ ಆಳಿದಂತಹ ರಾಜ ಮನೆತನಗಳು, ಮಧ್ಯ ಭಾರತದಲ್ಲಿ ಆಳಿದಂತಹ ರಾಜ ಮನೆತನಗಳ ಮೇಲೆ ನಮ್ಮ ಚಾಲುಕ್ಯರ ಹಾಗೂ ರಾಷ್ಟ್ರಕೂಟರ ಪ್ರಭಾವ ತೀರ ಬೀರಿದೆ.
ಇನ್ನು ಗಂಗರು, ಗಂಗರಲ್ಲಿ ಎರಡು ಅಂದರೆ ಪಶ್ಚಿಮ ಗಂಗಾರು ಹಾಗೂ ಪೂರ್ವದ ಗಂಗರು ಎಂದು ಬರುತ್ತಾರೆ. ಸಾಮಾನ್ಯವಾಗಿ ಹೆಚ್ಚು ಮಾತನಾಡುವುದು, ಓದುವುದಿಲ್ಲ ಪಶ್ಚಿಮ ಗಂಗರು ಅಂದರೆ ಚಾವುಂಡರಾಯ, ಶ್ರವಣಬೆಳಗೋಳದ ಗೊಮ್ಮಟೇಶ್ವರ ವಿಗ್ರಹ ಮುಂತಾದವುಗಳ ಬಗ್ಗೆ.
ಇನ್ನು ಪೂರ್ವದ ಗಂಗರು ಅಂದರೆ ಕಳಿಂಗ ಸಾಮ್ರಾಜ್ಯ ಒರಿಸ್ಸಾದ ಉತ್ಕಲದಲ್ಲಿ ಆಳಿದ ಮೂಲವ್ಯಾಕ್ತಿಗಳೇ ನಮ್ಮ ಕರ್ನಾಟಕದವರು.
ಹೀಗೆ ನಮ್ಮ ಕರ್ನಾಟಕದ ಪ್ರಭಾವ ಎಲ್ಲಾ ಕಡೆಯೂ ನಮ್ಮ ಹೆಮ್ಮೆಯ ರಾಜಮನೆತನಗಳ ಕಾಲದಲ್ಲಿ ಬೀರಿತ್ತು.
ಇನ್ನು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರು ಅವರು ಪುನಾದಲ್ಲೂ ಕೆಲಸ ಮಾಡಿದ್ದರು, ಹೈದರಾಬಾದ್ನಲ್ಲಿ ಕೋಸಿ ನದಿ ಪ್ರವಾಹದ ಸಂದರ್ಭದಲ್ಲಿ ಅಣೆಕಟ್ಟನ್ನು ನಿರ್ಮಿಸಿದ್ದರು. ಹೀಗೆ ದೊಡ್ಡ ಮಟ್ಟದಲ್ಲಿ ನಮ್ಮ ಕರ್ನಾಟಕದ ಸರ್ ಎಂ. ವಿಶ್ವೇಶ್ವರಯ್ಯ ನವರು ಎಲ್ಲೆಡೆ ತಮ್ಮ ಕೆಲಸವನ್ನು ಮಾಡಿದ್ದರು.
ಇನ್ನು ಚಿತ್ರೀಕರಣದ ಕ್ಷೇತ್ರದಲ್ಲೂ ಸಹ ಅಂದರೆ ಪೌರಾಣಿಕ ಸಿನಿಮಾಗಳನ್ನು ನಾವು ಕಂಡರೆ ಡಾ.ರಾಜಕುಮಾರ್ ರೀತಿ ಅಭಿನಯ ಯಾರು ಮಾಡಿಲ್ಲ. ಹಿಂದಿಯಲ್ಲಿ ಅಥವಾ ಬೇರೆ ಯಾವುದೇ ಭಾಷೆಯಲ್ಲಿ ಬೇರೆಯವರು ಮಾಡಿದ್ದರು ಅದನ್ನು ಮಾಡಿ ಸೋತಿರುವುದಿದೆ. ಯಾಕೆಂದರೆ ಸಾಮಾಜಿಕ ಪಾತ್ರವನ್ನು ಮಾಡುವ ನಟ, ನಟಿಯರು, ಪೌರಾಣಿಕ ಪಾತ್ರವನ್ನು ಸಹ ಮಾಡಿ ಜಯಿಸಿಕೊಳ್ಳುವುದು, ಅದರಲ್ಲೂ ಪ್ರೇಕ್ಷಕರು ಅದನ್ನು ಒಪ್ಪುವುದು, ತುಂಬಾ ಕಷ್ಟ. ಅದನ್ನು ಪ್ರೇಕ್ಷಕರ ದೃಷ್ಟಿಯಲ್ಲೂ ಸಹ ಗೆದ್ದರೆ, ಆಗ ಮಾತ್ರವೇ ಹೆಮ್ಮೆ. ಇದಕ್ಕೆ ನಮ್ಮ ಕನ್ನಡ ಸಿನಿಮಾಗಳೇ ಮಾದರಿ.
ಹೀಗೆ ಅನೇಕ ಕ್ಷೇತ್ರಗಳಲ್ಲಿ ಕರ್ನಾಟಕ ಭಾರತಕ್ಕೆ ಹೆಮ್ಮೆಯ ಕೊಡುಗೆಯನ್ನು ಕೊಟ್ಟಿದೆ ಎನ್ನಬಹುದು.
ಇನ್ನು ಇತ್ತೀಚಿನ ಕಾಲದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಒಂದು ಮಾದರಿಯನ್ನು ನೀಡಿತು. ಎಷ್ಟೋ ದೊಡ್ಡ ದೊಡ್ಡ ವಿಜ್ಞಾನಿಗಳು ಅದರ ಮುಖಾಂತರ ಹೊರಬಂದರು. ಕರ್ನಾಟಕದ ವಿಜ್ಞಾನಿಗಳಿರಬಹುದು, ಸಾಹಿತಿಗಳಿರಬಹುದು, ಕಲಾವಿದರಿರಬಹುದು, ಬಹಳ ದೊಡ್ಡ ಮಟ್ಟದಲ್ಲಿ ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗದೆ ಎಲ್ಲೆಡೆ ಹರಡಿದ್ದಾರೆ. ಯಾಕೆ ಕನ್ನಡಿಗರು ಇಷ್ಟೊಂದು ವ್ಯಾಪಕವಾಗಿ ಹರಡಿದ್ದಾರೆ, ಇಷ್ಟರಮಟ್ಟಿಗೆ ಹರಡಿದ್ದರೂ ಈ ರೀತಿಯಾಗಿ ಮೇಲೆ ಬೆಳೆಯುವುದಕ್ಕೆ ಕನ್ನಡಿಗರಲ್ಲಿ ಇರುವಂತಹ ಎಲ್ಲವನ್ನು ಒಳಗೊಳ್ಳುವ ಮತ್ತು ಎಲ್ಲವನ್ನು ಬೆಳೆಸುವ, ಜೊತೆಯಲ್ಲಿ ತಾನು ಬೆಳೆಯುವ ಹಾಗೂ ಬೇರೆಯವರನ್ನು ಬೆಳೆಸುವ ಸಹೃದಯ ಮನೋಭಾವ ಕನ್ನಡಿಗನದು. ಹೀಗೆ ಬೇಂದ್ರೆಯವರು ಹೇಳಿರುವಂತೆ "ಜಗದೇಳಿಗೆ ಯಾಗುವುದೇ ಅದು ಕರ್ನಾಟಕದಿಂದೇ" ಅವರ ವಿಶ್ವಾಸ ಕನ್ನಡಿಗರಿಂದ ಪ್ರಪಂಚಕ್ಕೆ ಒಳ್ಳೆಯದಾಗುವುದು. ಒಳ್ಳೆಯದಾಗುವುದಾದರೆ, ಅದಕ್ಕೆ ನಮ್ಮ ಕನ್ನಡಿಗರದ್ದು ಒಂದು ಕೊಡುಗೆ ಇದ್ದೇ ಇದೆ..
- ಬ್ರಿಜೇಶ್ ಕುಮಾರ್. ಬಿ. ಟಿ.
ದ್ವಿತೀಯ ಪಿ ಯು ವಿದ್ಯಾರ್ಥಿ.
ಚಿತ್ರದುರ್ಗ.
ಶನಿವಾರ, ಡಿಸೆಂಬರ್ 10, 2022
ಪ್ರಕಟಣೆ : ಕವನ ಸಂಕಲನಕ್ಕೆ ಕವನಗಳ ಆಹ್ವಾನ.
ವಿಚಾರ ಮಂಟಪ ಸಾಹಿತ್ಯ ಬಳಗವು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯುವ ಕವಿಗಳ ಕವಿತೆಗಳನ್ನು ಸಂಕಲಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಆಸಕ್ತ ಕವಿಗಳು ಮುಂದೆ ನೀಡಲಾಗಿರುವ ಸೂಚನೆಗಳನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ಕವಿತೆಗಳನ್ನು ಕಳುಹಿಸಬಹುದು.
• ಕವನಗಳನ್ನು ಸಮಕಾಲೀನ ಸಮಸ್ಯೆಗಳ, ಸಾಮಾಜಿಕ ಪಿಡುಗುಗಳ ಕುರಿತಾಗಿ ಜಾಗೃತಿ ಮೂಡಿಸುವ ಹಾಗೂ ಎಚ್ಚರಿಕೆ ನೀಡುವ ಆಶಯವನ್ನಿಟ್ಟುಕೊಂಡು ರಚಿಸಿರಬೇಕು. ಮತ್ತು ಯಾವುದೇ ಪುಸ್ತಕ, ಪತ್ರಿಕೆಗಳಲ್ಲಿ ಪ್ರಕಟಿಸಿರಬಾರದು.
• ಸಂಪಾದಕ ಮಂಡಳಿಯವರು ಆಯ್ಕೆ ಮಾಡಿದ ಕವನಗಳನ್ನು ಮಾತ್ರವೇ ಪ್ರಕಟಣೆಗೆ ಪರಿಗಣಿಸಲಾಗುವುದು. ಆಯ್ಕೆಯಾದ ೩ ಅತ್ಯುತ್ತಮ ಕವನಗಳಿಗೆ ಮತ್ತು ಒಂದು ಉತ್ತಮ ಶೀರ್ಷಿಕೆಗೆ ಪ್ರಮಾಣಪತ್ರ ಹಾಗೂ ಪುಸ್ತಕ ಬಹುಮಾನವಿರುತ್ತದೆ.
• ಕವನವು ೨೦-೨೫ ಸಾಲುಗಳ ಮಿತಿಯಲ್ಲಿಯೇ ಇರಬೇಕು. ಒಬ್ಬ ಕವಿ ೨ ಕವಿತೆಗಳನ್ನು ಕಳುಹಿಸಬಹುದು. ಪ್ರಾರಂಭದಲ್ಲಿ ವಿಚಾರ ಮಂಟಪ ಕವನ ಸಂಕಲನದಲ್ಲಿ ಪ್ರಕಟಿಸಲು ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಕವನದ ಶೀರ್ಷಿಕೆ, ಬರಹಗಾರರ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ, ಕವಿಯ ಕಿರು ಪರಿಚಯ ಹಾಗೂ ತಪ್ಪಿಲ್ಲದೇ (ಕಡ್ಡಾಯವಾಗಿ ಯುನಿಕೋಡ್ ನಲ್ಲಿ) ಟೈಪಿಸಿದ ನಿಮ್ಮ ಕವನಗಳನ್ನು ೮೨೧೭೭೪೪೮೮೬ ಈ ಸಂಖ್ಯೆಗೆ ವಾಟ್ಸಪ್ ಮೂಲಕ ಕಳುಹಿಸಬೇಕು.
• ಕವನಗಳನ್ನು ದಿನಾಂಕ ೩೦.೦೧.೨೦೨೩ ರ ಒಳಗಾಗಿ ನಮಗೆ ಕಳುಹಿಸುವುದು.
• ಕವನ ಸಂಕಲನ ಪ್ರಕಟಣೆಗೆ ಬೇಕಾಗುವ ಹಣವನ್ನು ಬರಹಗಾರರಿಂದಲೇ ಸಂಗ್ರಹಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ವರುಣ್‌ರಾಜ್ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ
೯೪೪೮೨೪೧೪೫೦ (ವಾಟ್ಸಪ್ ಮಾತ್ರ)
ಬಾಹುಬಲಿ ಸಿನಿಮಾದ ಮಾಹಿಶ್ಮತಿ ಎಲ್ಲಿದೆ ಗೊತ್ತಾ? (ಲೇಖನ) - ಎಮ್. ಹೆಚ್. ಸುವರ್ಣಲಕ್ಷ್ಮೀ.
ಮಧ್ಯಪ್ರದೇಶದಲ್ಲಿ ಮಹೇಶ್ವರ ಪಟ್ಟಣ ಮತ್ತು ಅದರ ಬಳಿ ನರ್ಮದಾ ನದಿ ತೀರದಲ್ಲಿರುವ ಮಹೇಶ್ವರ್ ಘಾಟ್ ನ ಪುರಾತನ ಹೆಸರೇ ಬಾಹುಬಲಿ ಸಿನಿಮಾದಲ್ಲಿ ಬಳಸುತ್ತಿರುವ ಮಾಹಿಶ್ಮತಿ. ಬರಬರುತ್ತಾ ಅದು ಜನರ ಬಾಯಲ್ಲಿ ಮಹೇಶ್ವರ್ ಎಂಬುದು ಇತಿಹಾಸ. ಇತಿಹಾಸವೇ ಇರಲಿ ಒಮ್ಮೆ ಸಾಧ್ಯವಾದರೆ ನೋಡಬೇಕಾದ ಸ್ಥಳ ಮಹೇಶ್ವರ್ ಘಾಟ್ ಇದರ ನಿರ್ಮಾಣದ ಹಿಂದಿರುವ ಚೇತನ ಅಹಲ್ಯಾಬಾಯಿ ಹೋಳ್ಕರ್ ಚಿಕ್ಕ ವಯಸ್ಸಿನ ಹೋಳ್ಕರ್ ಮನೆಯತನದ ಸೊಸೆಯಾಗುವ ಈಕೆ ಗಂಡನನ್ನೂ, ಮಾವನನ್ನೂ, ಮಗನನ್ನೂ ಕೆಲವು ದಿನಗಳ ಅಂತರದಲ್ಲಿ ಕಳೆದುಕೊಂಡ ಸಾಮ್ರಾಜ್ಯದ ಚುಕ್ಕಾಣಿ ಹಿಡಿಯಲು. ಘಾಟ್ ಹಲವಾರು ದೇವಾಲಯಗಳನ್ನು ಕಟ್ಟಿಸಿದಳು.
ನಿರ್ಮಾಣ ಎಷ್ಟು ಉತ್ತಮವಾಗಿದೆ ಎಂದರೆ ಇವತ್ತಿಗೂ ಅವು ಸುರಕ್ಷಿತವಾಗಿವೆ
ಅಷ್ಟೇ ಅಲ್ಲದೆ ತನ್ನ ಮಹೇಶ್ವರದ ಪ್ರಜೆಗಳ ಕ್ಷೇಮಕೋರಿ ತಾನೇ ನಿರ್ಮಿಸಿದ ಈಶ್ವರನ ದೇಗುಲದಲ್ಲಿ ಅವಳನ್ನು ಪ್ರಾರಂಭಿಸಿದ ಲಿಂಗಾರ್ಚನ್ ಪೂಜೆ ವಿಶೇಷವಾಗಿದೆ. ಆಗಿನ ಕಾಲಕ್ಕೆ ಮಹೇಶ್ವರನಲ್ಲಿ 1.10 ಲಕ್ಷ ಜನರಿದ್ದಂತೆ ಪ್ರತಿದಿನ 111 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಹೊಲದ ಮಣ್ಣಿನಿಂದ ಮಾಡಿ ಪೂಜಿಸುತ್ತಾರಂತೆ ಅದೂ ಬೆಳಿಗ್ಗೆ 8.30 ರಿಂದ 9.30 ರ ಒಳಗೆ ಆಶ್ಚರ್ಯದಿಂದ ಈಗಲೂ ಈ ಪೂಜೆ ನಡೆಯುತ್ತಲೇ ಇದೆ.
ಪ್ರತಿದಿನ 11 ಅರ್ಚಕರು ಪ್ರತಿಯೊಬ್ಬರೂ 1000 ಲಿಂಗಗಳನ್ನು ಮಾಡಿ ಪೂಜಿಸುತ್ತಾರೆ. ಅಹಲ್ಯಾಬಾಯಿ ಹೋಳ್ಕರ್ ಇದೇ ತರಹ ಘಾಟ್ ಗಳು ಸಾವಿರಾರು ದೇವಾಲಯಗಳನ್ನು ನಿರ್ಮಿಸಲಾಗಿದೆ ನಮ್ಮ ಬೇಲೂರಿನ ದೇವಾಲಯ ನಿರ್ಮಾಣದಲ್ಲಿ ಅವರ ಕೊಡುಗೆ ಇದೆ ಎಂದು ಇತಿಹಾಸ ಹೇಳುತ್ತದೆ. ವ್ಯಾಪಾರ ಅಭಿವೃದ್ಧಿಗೆ ರಸ್ತೆಗಳು ಮುಖ್ಯ ಎಂದು ಅರಿತಿದ್ದ ಅಹಲ್ಯಾಬಾಯಿ ಮಹೇಶ್ವರ ತಲುಪುವ ಎಲ್ಲಾ ರಸ್ತೆಗಳನ್ನೂ ನಿರ್ಮಿಸಲಾಗಿದೆ. ಸ್ತ್ರೀ ಸ್ವಾತಂತ್ರ್ಯ ಅವರಿಗೆ ಅವಳ ಕೊಡುಗೆ ದೊಡ್ಡದು.ಹೆಚ್ಚಿನ ಮಹೇಶ್ವರಿ ಸೀರೆಗಳು ಬಹಳ ಪ್ರಸಿದ್ಧಿ ಈ ಸೀರೆಗಳು ನೇಯುವ ನೇಕಾರರನ್ನು ಆಗಿನ ಕಾಲಕ್ಕೇ ಹೈದರಾಬಾದ್ ನಿಂದ ಕರೆಸಿಕೊಂಡಿದ್ದಳು.
ಆ ಉದ್ಯಮ ಈಗಲೂ ನಡೆಯುತ್ತಿದೆ. 1767 ರಿಂದ 1795 ರವರೆಗೂ ಹೋಳ್ಕರ್ ರಾಜ್ಯವನ್ನು ವ್ಯವಸ್ಥಿತವಾಗಿ ಆಳವಾದ ಈಕೆ ಮಾಡಿದ ಕೆಲಸಗಳನ್ನು ಬರೆದರೆ ಒಂದು ದೀರ್ಘಾವಧಿಯ ಲೇಖನವಾದೀತು. ಏನಾದರೂ ಆಗಲಿ ಮಹೇಶ್ವರ್ ಘಾಟ್, ಸುತ್ತಲೂ ಹಸಿರು, ವಿಸ್ತಾರವಾದ ನರ್ಮದಾ ನದಿ, ದೋಣಿಯಾನ, ಆಗಾಗ ನಡೆಯುವ ಸಿನಿಮಾ ಶೂಟಿಂಗ್ ಗಳು,
ಧಾರ್ಮಿಕ ಆಚರಣೆಗಳು ನಮ್ಮ ಮನಸ್ಸನ್ನು ಮುದಗೊಳಿಸುತ್ತವೆ.
- ಎಮ್ ಹೆಚ್ ಸುವರ್ಣಲಕ್ಷ್ಮೀ,
ಸೋಮಯಾಜಲಹಳ್ಳಿ, ಶ್ರೀನಿವಾಸಪುರ ತಾಲ್ಲೂಕು. ಕೋಲಾರ ಜಿಲ್ಲೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
-
ಅಂತರಾಷ್ಟ್ರೀಯ ಮಹಿಳಾ ದಿನ... International WOMEN'S Day... ಆತ್ಮೀಯ ಗೆಳತಿ ಅಕ್ಷತಾ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲೆಯ ತವರೂರಿನ ಹೆಣ್ಣು...
-
ಶ್ರೀಮತಿ ಆಶಾಕಿರಣ ಬೇಲೂರು. ಶಿಕ್ಷಕರು, ಬರಹಗಾರರು ಹಾಗೂ ಸಾಮಾಜ ಸೇವಕರು. ಬೇಲೂರು, ಹಾಸನ ಜಿಲ್ಲೆ. ಇವರು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ...
-
ಬಾಲ್ಯದ ಆ ದಿನಗಳು....... ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ,ಗಣಪತಿ ಮಂದಿರ,ವಿಠಲನರುಕ್ಮಿಣಿ ಮಂದಿರ ,ದುರ್ಗವ್ವ, ಮರುಗವ್ವ ಹೀಗೆ ಹತ್ತು ಹಲವ...