ನಮಗೆ ಪುಣ್ಯ ಇದ್ದರೆ ಪುಣ್ಯಕ್ಷೇತ್ರಗಳ ದರ್ಶನ ತನ್ನಿಂದ ತಾನೇ ದೊರೆಯುತ್ತೆ ಅಂತ ನಮ್ಮ ತಂದೆ ತಾಯಿ ಹೇಳ್ತಾ ಇದ್ರು .ಅಂತಹ ಸಂದರ್ಭ ಇತ್ತೀಚೆಗೆ ನನಗೆ ಒದಗಿ ಬಂತು. ನಾನೆಂದೂ ನೋಡಬೇಕು ಎಂದು ಬಯಸದೆ ಇರುವಂತಹ ನಾಗದೇವತೆಯ ದರ್ಶನ ಭಾಗ್ಯ ಒದಗಿ ಬಂದದ್ದು ನನ್ನ ಪುಣ್ಯ ಎಂದು ಆ ಸ್ಥಳದ ಮಹತ್ವ ತಿಳಿದ ಮೇಲೆ ನನಗನಿಸಿತ್ತು.ಏಕೆಂದರೆ ನಾನು ನೋಡಿದ್ದು ವಿಜಯನಗರ ಸಾಮ್ರಾಜ್ಯದ ಸ್ಥಾಪಕರಾದ ಹಕ್ಕಬುಕ್ಕರ ಕಾಲದಲ್ಲಿ ಅಂದರೆ 14ನೇ ಶತಮಾನದಲ್ಲಿ ಸ್ಥಾಪಿತವಾದಂತಹ ಶಿಲಾ ನಾಗದೇವತೆಗಳ ಸನ್ನಿಧಿಯ ತಾಣ.ಈ ಸ್ಥಳವನ್ನು ನಾಗಮ್ಮದೇವಿ ಸನ್ನಿಧಿ ಎಂದು ಕರೆಯುವರು.
ಹಂಪೆಯ ವಿರೂಪಾಕ್ಷಸ್ವಾಮಿಯ ದೇವಾಲಯದಿಂದ 1ಕಿಲೋ ಮೀಟರ್ ದೂರ ಹೋದರೆ ಎದುರಿಗೆ ಒಂದು ಬೃಹತ್ತಾದ
ಕಲ್ಲು ಮಂಟಪ ಕಾಣಿಸುತ್ತೆ ,ಅಲ್ಲಿಂದ ನಾವು ಆ ಬೆಟ್ಟವನ್ನು ಹತ್ತಿ ಸುಮಾರು 2 ಕಿಲೋ ಮೀಟರ್ ದೂರ ಪಯಣಿಸಬೇಕು. ಬೆಳಿಗ್ಗೆ 8ಗಂಟೆಗೆ ನಾವು ಬಿಸಿಲಿನ ತಾಪಮಾನ ಹೆಚ್ಚುವ ಮುನ್ನವೇ ಪ್ರಯಾಣ ಬೆಳೆಸಿದೆವು .ಈ ಸನ್ನಿಧಿಗೆ ಭೇಟಿ ನೀಡುವ ಮಾರ್ಗಮಧ್ಯದಲ್ಲಿ ಕಾಲ್ನಡಿಗೆಯಲ್ಲಿ ಹೋಗಬೇಕು.ಮಾರ್ಗಮಧ್ಯದಲ್ಲಿ ಒಂದು ಶೀಲಾ ಬಂಡೆಯ ಮೇಲೆ ಹದಿನಾಲ್ಕನೇ ಶತಮಾನದಲ್ಲಿ ಕೆತ್ತಲ್ಪಟ್ಟ 'ಅನಂತಪದ್ಮನಾಭ ಸ್ವಾಮಿಯ' ಮೂರ್ತಿಯನ್ನು ನೋಡಬಹುದು. ಹಾಗೆಯೇ ಅದರ ಎದುರಿಗೆ ಆಂಜನೇಯನ ದೇವಸ್ಥಾನವಿದೆ. ಆ ದೇವಸ್ಥಾನದ ಮುಂದೆ ನಿಂತು ನಾವು ದೂರದಲ್ಲಿರುವ ಅಂಜನಾದ್ರಿ ಬೆಟ್ಟವನ್ನು ಗಮನಿಸಬಹುದು .ಇಲ್ಲಿಂದ ಮುಂದೆ ಪಯಣಿಸಿದರೆ 'ಮಾತಂಗಪರ್ವತಕ್ಕೆ ಹೋಗುವ ದಾರಿ' ಎಂಬ ನಾಮಫಲಕವೂ ನಮಗೆ ದೊರೆಯುತ್ತದೆ .ಅದರ ಪಕ್ಕವೇ ನಾಗಮ್ಮ ದೇವಿ ಸನ್ನಿಧಿಗೆ ಹೋಗುವ ಮತ್ತೊಂದು ಮಾರ್ಗವೂ ಇದೆ .ಆ ಮಾರ್ಗದ ಮುಖಾಂತರ ಮುಂದೆ ಸಾಗಿದಾಗ ಮೊದಲು ನಮಗೆ ಬೃಹತ್ ಹೆಬ್ಬಂಡೆಗಳ ಕೆಳಗೆ ಗುಹೆಯಲ್ಲಿ ಶಿವಲಿಂಗುವಿನ ದರ್ಶನವಾಗುತ್ತದೆ.ತುಂಬಾ ಪುರಾತನ ಸ್ಥಳವಾಗಿರುವುದರಿಂದ ಜನಸಂಚಾರವೂ ಕಡಿಮೆಯಿರುವುದರಿಂದ ಸ್ವಚ್ಛತೆಯ ಕೊರತೆ ಕಾಣುತ್ತಿತ್ತು.
ಹಾಗೆಯೇ ಹೊರ ಬಂದು ಮುಂದೆ ಪಯಣಿಸಿದರೆ "ಹತ್ತು ಕೈ ಅಮ್ಮನ" ಸನ್ನಿಧಿಗೆ ಭೇಟಿ ನೀಡುತ್ತೇವೆ.ಹತ್ತು ಕೈಗಳನ್ನು ಹೊಂದಿರುವುದರಿಂದ "ಹತ್ತುಕೈ ಅಮ್ಮಾ" ಎಂದು ಕರೆಯುತ್ತಾರೆ.ಆ ತಾಯಿಯ ದರ್ಶನ ಪಡೆದು ಹಾಗೆ ಮುಂದೆ ಸಾಗಿದಾಗ, ನಾಗಮ್ಮ ದೇವಿಯ ದಿವ್ಯ ಸಾನಿದ್ಯ ದೊರೆಯುತ್ತದೆ. ಸುತ್ತಲೂ ಹಚ್ಚ ಹಸಿರಿನ ಹೊಲಗಳ ಮಧ್ಯದಲ್ಲಿದ್ದ ಈ ನಾಗ ಮಂಟಪ ನೋಡಲು ಆಕರ್ಷಕವಾಗಿತ್ತು.ಆ ಸ್ಥಳಕ್ಕೆ ಭೇಟಿಯಿತ್ತ ನಂತರ ಮನಸ್ಸಿಗೆ ಏನೋ ಒಂದು ರೀತಿಯ ಸಮಾಧಾನದ ಅನುಭವ. ಮುಖ್ಯವಾಗಿ ನಾವು ಈ ಸನ್ನಿಧಿಗೆ ಬಂದ ಕಾರಣ, ನಮ್ಮ ಸಂಬಂಧಿಕರ ಮಕ್ಕಳ ನಾಗದೋಷ ಪರಿಹಾರಕ್ಕಾಗಿ ಆ ಸ್ಥಳವನ್ನು ಅರ್ಚಕರು ಸೂಚಿಸಿದ್ದರು. ಅವರ ಸಲಹೆಯಂತೆ ಅರ್ಚಕರೊಂದಿಗೆ ನಾವು ಆ ಸ್ಥಳಕ್ಕೆ ಭೇಟಿ ನೀಡಿದ್ದೆವು. ನಾಗದೋಷ ಪರಿಹಾರಕ್ಕಾಗಿ ದೇಶಾದ್ಯಂತ ಹಲವಾರು ಸ್ಥಳಗಳಿವೆ. ಅವುಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಕ್ಕೆ ಸುಬ್ರಹ್ಮಣ್ಯ,ಶಿವಮೊಗ್ಗ ಜಿಲ್ಲೆಯ ಅಗಸನಹಳ್ಳಿ ನಾಗಪ್ಪ ದೇವಾಲಯ, ಬೆಂಗಳೂರಿನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಘಾಟಿ ಸುಬ್ರಹ್ಮಣ್ಯ ,ಅಲ್ಲದೆ ತಮಿಳುನಾಡಿನ ತಂಜಾವೂರಿನ ತಿರುನಾಗೇಶ್ವರ, ರಾಮೇಶ್ವರ, ಹೀಗೆ ದೇಶಾದ್ಯಂತ ಹಲವಾರು ಸ್ಥಳಗಳಿವೆ .ಅಂತಹ ಸ್ಥಳಗಳಲ್ಲಿ ಉತ್ತರ ಕರ್ನಾಟಕದ ವಿಜಯನಗರ ಜಿಲ್ಲೆಯಲ್ಲಿ ಬರುವ ನಾಗಮ್ಮ ಸನ್ನಿಧಿ ಮತ್ತು ಕಮಲಾಪುರದ ಹತ್ತಿರವೂ ಸಹ ಬೃಹತ್ತಾದ ನಾಗದೇವತೆಯ ಸನ್ನಿಧಿಯಿದೆ.
ನಾಗದೋಷ ,ಸರ್ಪದೋಷ,ಕುಜ ದೋಷ ಇದೆ ಎಂದು ಜ್ಯೋತಿಷಿಗಳು ಹೇಳಿದರೆ ಸಾಕು ಎಲ್ಲರೂ ಭಯಪಡುತ್ತಾರೆ. ನಾಗದೋಷವೆಂದರೆ ......ಹಾವನ್ನು ಸಾಯಿಸಿರಬಹುದು ಅಥವಾ ತೊಂದರೆ ಕೊಟ್ಟಿರಬಹುದು .ಇದರಿಂದ ದೋಷವಾಗಿರುತ್ತದೆ ಎನ್ನುವುದು ನಂಬಿಕೆ. ನಾನು ಯಾವುದೇ ಹಾವನ್ನು ಸಾಯಿಸಿಲ್ಲ, ತೊಂದರೆ ಕೊಟ್ಟಿಲ್ಲ ಆದರೂ ಜಾತಕದಲ್ಲಿ ಸರ್ಪ ದೋಷವಿದೆ ಎಂದು ಹೇಳುತ್ತಾರಲ್ಲ..... ಅನ್ನುವವರು ಇದ್ದಾರೆ .ಅದಕ್ಕೆ ತಿಳಿದವರು ಈ ಜನ್ಮದ ಪಾಪವಲ್ಲದಿದ್ದರೂ ಈ ಮೊದಲಿನ ಜನ್ಮದ ದೋಷವಿದೆ ಎನ್ನುತ್ತಾರೆ. ಕುಟುಂಬದ ಹಿರಿಯರು ನಾಗಹತ್ಯೆ ಮಾಡಿದ್ದರೆ ಅದರ ದೋಷ ಕುಟುಂಬದ ಸದಸ್ಯರ ಮೇಲೆ ಆಗುತ್ತದೆ , ಅದಕ್ಕೆ ಇನ್ನೂ ತಿಳಿಯುವಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲಿಗಾಗಿ ಹಕ್ಕನ್ನು ಪಡೆಯುವಂತೆ ನಿಮ್ಮ ಪೂರ್ವಿಕರು ಮಾಡಿದ ಕೆಟ್ಟ ಮತ್ತು ಒಳ್ಳೆಯ ಕಾರ್ಯಗಳು ಪಾಪ ಪುಣ್ಯಗಳ ರೂಪದಲ್ಲಿ ನಿಮಗೆ ಪಿತ್ರಾರ್ಜಿತವಾಗಿ ಬರುತ್ತವೆ ಎಂದು ತಿಳಿ ಹೇಳುತ್ತಾರೆ.ಆದ್ದರಿಂದ ಅದೇ ಕುಟುಂಬದಲ್ಲಿ ಕೆಲವರು ಒಳ್ಳೆಯ ಜೀವನ ನಡೆಸಿದರೆ ಇನ್ನೂ ಕೆಲವರಿಗೆ ತೊಂದರೆಗಳು ಎದುರಾಗುತ್ತಿರುತ್ತವೆ.
ಸಾಮಾನ್ಯವಾಗಿ ಹಿಂದುಗಳಲ್ಲಿ ನಾವು ಹೆಚ್ಚಾಗಿ ಈ ಜಾತಕ ಪರಿಶೀಲಿಸುವ ಪರಿಪಾಠವನ್ನು ಹೊಂದಿರುತ್ತೇವೆ. ಅದರ ಮೂಲಕ ಮುಂದೆ ಒದಗಬಹುದಾದ ತೊಂದರೆ, ವಿಪತ್ತುಗಳಿಗೆ ಶಾಂತಿ ಪರಿಹಾರವನ್ನು ಮಾಡುವ ಮೂಲಕ, ತೊಂದರೆಯ ತೀವ್ರತೆಯನ್ನು ಕಡಿಮೆಮಾಡಬಹುದು ಎಂಬುದು ಪುರಾತನ ಕಾಲದಿಂಲೂ ಬಂದ ಒಂದು ನಂಬಿಕೆಯಾಗಿದೆ.ಕೆಲವೊಮ್ಮೆ ನಮ್ಮ ಜಾತಕದಲ್ಲಿ ಕಾಣಸಿಗುವ ದೋಷಗಳು ನಮ್ಮನ್ನು ವಾಸ್ತವ ಜೀವನದಲ್ಲಿ ಹೆಚ್ಚಾಗಿ ಬಾಧಿಸುವುದನ್ನು ನಮ್ಮ ಸುತ್ತಮುತ್ತನಲ್ಲಿ ನೋಡಿರುತ್ತೇವೆ. ಅದರಲ್ಲೂ ನಾಗದೋಷಗಳ ಕುರಿತು ನಾವು ಆಗಾಗ ಕೇಳುತ್ತಿರುತ್ತೇವೆ. ಈ ದೋಷಗಳಲ್ಲಿ ಕೆಲವು ಪೂರ್ವಜನ್ಮದ ದೋಷಗಳು ಎಂದು ಹೇಳಿದರೆ , ತಿಳಿದು ತಿಳಿಯದೇ ಮಾಡಿದ ಕೆಲವು ತಪ್ಪುಗಳಿಂದ ನಾವು ದೋಷಕ್ಕೆ ಬಲಿಯಾಗುತ್ತೇವೆ. ಅವುಗಳಿಂದ ನಾನಾ ತರಹದ ತೊಂದರೆಗಳನ್ನು ಅನುಭವಿಸುವುದನ್ನು ಕಾಣಬಹುದು. ಅಷ್ಟೇ ಅಲ್ಲದೇ ವಿವಾಹವಾಗದೇ ಇರುವುದು, ಚರ್ಮ ರೋಗ, ನಿರುದ್ಯೋಗ, ಸಂತಾನಹೀನತೆ, ಎಷ್ಟೇ ಪ್ರಯತ್ನ ಪಟ್ಟರೂ ಕಂಕಣ ಭಾಗ್ಯ ಕೂಡಿ ಬರದಿರುವುದು, ಎಷ್ಟೇ ವಿದ್ಯಾವಂತ ಆಗಿದ್ದರೂ, ರೂಪವಂತ ಆಗಿದ್ದರೂ ಮದುವೆ ಆಗದಿರುವದು,ಕೂಡಿದ ಸಂಬಂಧಗಳು ಮುರಿದು ಬೀಳುವುದು, ಇನ್ನೂ ಕೆಲವರಿಗೆ ಗರ್ಭ ಸಂಬಂಧ ಕಾಯಿಲೆಗಳು, ಯಾವುದೇ ವೈದ್ಯರ ಬಳಿ ಹೋದರು ಗುಣ ಆಗುತ್ತಿಲ್ಲ ಮತ್ತೆ ಮತ್ತೆ ಬರುತ್ತಿದೆ ಎನ್ನುವವರು, ಎಲ್ಲಾ ಚೆನ್ನಾಗಿ ಇದ್ದರೂ ಮಾನಸಿಕ ಸಮಸ್ಯೆಯಿಂದ ನೆಮ್ಮದಿಯಿಲ್ಲ ಎನ್ನುವವರು ಇಂತಹ ಹಲವಾರು ತೊಂದರೆಗಳಿದ್ದರೆ, ನಾಗದೋಷದಿಂದ ಬಳಲುತ್ತಿರಬಹುದು ಎಂಬ ನಂಬಿಕೆಯಿಂದ ತಂದೆತಾಯಿಗಳು ಜ್ಯೋತಿಷಿಗಳ ಬಳಿ ಹೋಗುವುದು ಸರ್ವೇ ಸಾಮಾನ್ಯ.
ವಿದ್ಯಾವಂತರಾದ ನಾವು ಈ ಮೂಢನಂಬಿಕೆಗಳನ್ನು ನಂಬೋದು ಸರಿಯೇ ಅಂತ ಒಂದು ಸಾರಿ ನಮ್ಮ ಮನಸ್ಸಿಗೆ ಅನ್ನಿಸಿದರೂ ,ಇದನ್ನೆಲ್ಲ ಮಾಡಿಸಬೇಡಿ ಮೂಢನಂಬಿಕೆ ಅಂತ ಹೇಳ್ಬೇಕು ಅನಿಸಿದರೂ, ಕೇವಲ ಪಠ್ಯ ಪುಸ್ತಕದ ಜ್ಞಾನ ಪಡೆದ ನಮಗೆ ನಮ್ಮ ದೇಶದ ಸಂಸ್ಕೃತಿ ಪರಂಪರೆಯಲ್ಲಿ ಅಡಗಿರುವ ಕಾಲಗರ್ಭದ ಎಷ್ಟೋ ಸತ್ಯಗಳನ್ನು ಅರಿಯದ ಜ್ಞಾನ ನಮ್ಮದು ಅನಿಸಿತು.ಅಲ್ಪಸ್ವಲ್ಪ ತಿಳುವಳಿಕೆಯಿಂದ ಅನುಭವಿಕ ಹಿರಿಯರೆದುರು ಆ ರೀತಿ ಮಾತನಾಡುವುದು ಸರಿಯಲ್ಲ ಅನ್ನಿಸಿತು. ಪುರಾತನ ಕಾಲದಲ್ಲಿ ಇಂತಹ ಉದ್ದೇಶಗಳನ್ನು ಈಡೇರಿಸುವುದಕ್ಕಾಗಿ ಸ್ಥಾಪಿತವಾದಂತಹ ನಾಗದೇವತೆಗಳ ಶಕ್ತಿಯ ಮೇಲೆ ಅಪನಂಬಿಕೆ ಬೆಳೆಸುವುದು ಎಷ್ಟರಮಟ್ಟಿಗೆ ಸರಿ? ಅಂತ ಮನಸಿಗೆ ಅನ್ನಿಸಿತು.ದೈವಶಕ್ತಿಯ ಮುಂದೆ ನಂಬಿಕೆ, ಅಪನಂಬಿಕೆಯ ಪ್ರಶ್ನೆಯೇ ಇಲ್ಲ ಎಂದುಕೊಂಡು ಪೂಜೆಗೆ ಹಿರಿಯರು ಅನುಮತಿ ನೀಡಿದರು. ಅಲ್ಲದೆ ಈ ಪೂಜೆಯನ್ನು ಯಾವಾಗೆಂದರೆ ಆವಾಗ ಮಾಡಿಸಲು ಬರುವುದಿಲ್ಲ. ಅವರವರ ಜಾತಕಕ್ಕನುಗುಣವಾಗಿ, ರಾಶಿಗಳಿಗೆ ಅನುಗುಣವಾಗಿ ,ನಕ್ಷತ್ರಗಳು ಕೂಡುವ ಸಮಯಕ್ಕನುಗುಣವಾಗಿ, ಅದು ಹಗಲಾಗಿರಬಹುದು ಅಥವಾ ರಾತ್ರಿ ಆಗಿರಬಹುದು ಅದೇ ಸಂದರ್ಭದಲ್ಲಿ ಅರ್ಚಕರು ಹೇಳಿದ ದಿನದಂದೇ ಪೂಜಾ ಕೈಂಕರ್ಯಗಳನ್ನು ಮಾಡಬೇಕಾಗುತ್ತದೆ. ಅಲ್ಲಿಯವರೆಗೂ ಕಾಯಲೇಬೇಕು.
ಅಲ್ಲಿ ಸುಮಾರು ನೂರಾರು ನಾಗದೇವತೆಗಳ ಶಿಲಾವಿಗ್ರಹಗಳಿವೆ. ಅವುಗಳಲ್ಲಿ ಕೆಲವು ನಾಗದೇವತೆಗಳಿಗೆ ನಾಗ ಶರೀರ ಮಾನವಮುಖ ಇರುವುದು ವಿಶೇಷವಾಗಿತ್ತು.ನಿಸರ್ಗದ ಮಡಿಲಲ್ಲಿರುವ ದೇಗುಲದ ಪಕ್ಕವೇ ತುಂಗಭದ್ರ ನದಿ ನೀರಿನ ಧಾರೆ.ಅಲ್ಲಿ ಸ್ನಾನ ಮಾಡಿ ಆ ಮಕ್ಕಳ ಕಡೆಯಿಂದಲೇ ಎಲ್ಲ ನಾಗದೇವತೆಗಳಿಗೆ ಪೂಜೆ ಸಲ್ಲಿಸಲಾಯಿತು . ನಾಗದೋಷ ಪರಿಹಾರಕ್ಕಾಗಿ ಹಲವು ರೀತಿಯ ಸಾಮಾನುಗಳನ್ನು ತರಲು ಅರ್ಚಕರು ಸಲಹೆ ನೀಡಿದ್ದರು.ಅವರು ಹೇಳಿದಂತೆ ಪೂಜೆಗೆ ಅಣಿ ಪಡಿಸಲಾಯಿತು .ಮೊದಲಿಗೆ ವಿಘ್ನೇಶ್ವರನ ಪೂಜೆಯೊಂದಿಗೆ ಆರಂಭವಾಯಿತು .ನಂತರ ಯಾವ ಕಾರಣಕ್ಕಾಗಿ ಈ ಪೂಜೆಯನ್ನು ಮಾಡಲಾಗುತ್ತದೆಯೋ ಆ ಉದ್ದೇಶದೊಂದಿಗೆ ಮಕ್ಕಳಿಂದ ಸಂಕಲ್ಪವನ್ನು ಮಾಡಿಸಲಾಯಿತು .ಮಕ್ಕಳು ಅರ್ಚಕರು ಹೇಳಿದಂತೆ ಹಿಟ್ಟಿನಿಂದ ತಯಾರಿಸಿದ ಸರ್ಪಗಳನ್ನು ಮಾಡಿದರು. ಅನಂತರ ಅವುಗಳಿಗೆ ಪೂಜೆಯನ್ನು ಸಲ್ಲಿಸಿ , ಅರ್ಚಕರು ಮಂತ್ರಪಠಣ ಮಾಡುತ್ತಲೇ ,ಅವರ ಅಣತಿಯಂತೆ ,ಪ್ರತಿಸಾರೆಯೂ ಹೋಮದ ಅಗ್ನಿಕುಂಡದಲ್ಲಿ ಹಿಟ್ಟಿನಿಂದ ತಯಾರಿಸಿದ 2 ನಾಗದೇವತೆಗಳನ್ನು ಸಮರ್ಪಿಸಲಾಯಿತು.
ಪ್ರತಿ ಸಾರಿಯೂ ಅರ್ಚಕರು ಬೇರೆಬೇರೆ ನಾಗದೇವತೆಗಳ ಹೆಸರನ್ನು ಹೇಳುತ್ತಾ ,ಮಂತ್ರ ಪಠಣ ಮಾಡುತ್ತಾ, ಆ ಮಕ್ಕಳಿಂದ ಇಪ್ಪತ್ತೈದು ನಾಗಗಳನ್ನು ಅಗ್ನಿಕುಂಡದಲಿ ಸಮರ್ಪಿಸಿದರು. ಇದುವೇ "ಆಶ್ಲೇಷ ಬಲಿ" ಪೂಜೆ ಎಂದು ತಿಳಿಯಿತು. ಮಕ್ಕಳ ಜಾತಕಕ್ಕನುಗುಣವಾಗಿ,ದೋಷ ಕ್ಕನುಗುಣವಾಗಿ ವಿಭಿನ್ನ ರೀತಿಯಲ್ಲಿ ಆಶ್ಲೇಷ ಬಲಿ ಪೂಜೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು . ನಾಗದೋಷಗಳಲ್ಲಿ ಹಲವು ವಿಧ ಸರ್ಪಹತ್ಯ,ಸರ್ಪಾಂಡ ಅಂದರೆ ಹಾವಿನ ಮೊಟ್ಟೆಗಳನ್ನು ನಾಶ ಮಾಡಿದರೆ ಅಥವಾ ಹಾವಿನ ಮಾರ್ಗ ಪಥಕ್ಕೆ ತೊಂದರೆ ಮಾಡಿದರೆ ಅಥವಾ ಹಾವುಗಳ ಮಿಲನ ಕ್ರಿಯೆಯನ್ನು ನೋಡಿದರೆ ಈ ರೀತಿಯ ನಾಗದೋಷ ಬರುತ್ತೆ ಎನ್ನುವುದು ತಿಳಿಯಿತು.ಮಕ್ಕಳು ಇದನ್ನು ಒಪ್ಪದಿದ್ದರೂ ಜೀವನದ ಅನುಭವವಿರುವಂತಹ ಹಿರಿಯರ ಮಾತಿಗೆ ಗೌರವ ಕೊಟ್ಟು ಪೂಜೆಯಲ್ಲಿ ನಿರತರಾಗಿದ್ದರು.ಅನಂತರ ಕುಟುಂಬದ ಹಿರಿಯರ, ಪೂರ್ವಿಕರ ಹೆಸರಿನಲ್ಲಿ ಪಿಂಡಪ್ರಧಾನವನ್ನು ಮಾಡಿಸಿ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಪೂಜೆ ಸಲ್ಲಿಸಲಾಯಿತು.ಇಷ್ಟೆಲ್ಲಾ ಪೂಜೆ ಮುಗಿಯುವ ವೇಳೆಗೆ 4 ಗಂಟೆಗೂ ಅಧಿಕ ಸಮಯಾವಕಾಶ ಬೇಕಾಯಿತು. ಪೂಜಾಕಾರ್ಯಗಳೆಲ್ಲ ಮುಗಿದ ನಂತರ ಪುನಃ ಮತ್ತೊಮ್ಮೆ ಆ ಮಕ್ಕಳು ಸ್ನಾನವನ್ನು ಮಾಡಲು ಸಲಹೆ ನೀಡಿ ,ನಂತರ ಎಲ್ಲಾ ನಾಗಮೂರ್ತಿಗಳಿಗೆ ಆ ಮಕ್ಕಳಿಂದಲೇ ಮತ್ತೊಮ್ಮೆ ನೀರಿನಿಂದ ಶುಚಿಗೊಳಿಸಿ, ಅನಂತರ ಹಾಲನ್ನು ಎರೆಯಲಾಯಿತು.ಅರಿಶಿನ ಕುಂಕುಮದಿಂದ ಅಲಂಕೃತಗೊಳಿಸಿ, ಪುಷ್ಪಗಳನ್ನು ಸಮರ್ಪಿಸಿ,ತೆಂಗಿನಕಾಯಿ ಹಣ್ಣನ್ನು ನೈವೇದ್ಯವಾಗಿ ಸಮರ್ಪಿಸಿ ಪೂಜಾವಿಧಿಯನ್ನೂ ಪೂರ್ಣಗೊಳಿಸಿದರು.ಅಲ್ಲಿಯವರೆಗೂ ಬೆಳಗ್ಗಿನಿಂದ ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಶುದ್ಧ ಮನಸ್ಸಿನಿಂದ ಪೂಜೆಗೈಯುವುದು ವಿಶೇಷವಾಗಿತ್ತು.
ಪೂಜೆಯ ನಂತರ ಎಲ್ಲರೂ ಕೆಲ ಕ್ಷಣ ಅಲ್ಲೇ ಕುಳಿತು ದೇವರ ನಾಮದ ಹಾಡುಗಳನ್ನು ಹಾಡಿ ಅಲ್ಲಿಂದ ಪುನಃ ಹೊರಡಲು ಸಿದ್ಧರಾದೆವು. ಆ ಚಿಕ್ಕ ನಾಗ ಮಂಟಪದ ಸುತ್ತಲೂ ಬಾಳೆತೋಟದ ಹಚ್ಚಹಸಿರಿನ ಹೊಲಗಳು ಮನಸ್ಸಿಗೆ ಮುದ ನೀಡಿದವು.ನಂತರ ಎಲ್ಲರೂ ಅಲ್ಲಿಂದ ಪುನಃ ಹತ್ತು ಕೈ ಅಮ್ಮನ ಸನ್ನಿಧಿಗೆ ಬಂದೆವು.ಅಲ್ಲಿ ಆ ಮಕ್ಕಳಿಂದಲೇ ದೇವಿಗೆ ಅಭಿಷೇಕ ಮಾಡಿಸುವುದರ ಮೂಲಕ ಪೂಜೆ ಸಲ್ಲಿಸಿ, ಮಂಗಳಾರತಿಯ ನಂತರ ಅಲ್ಲಿಂದ ಹೊರಟೆವು.ಪುನಃ ಬಂದ ಕಾಲು ದಾರಿಯಲ್ಲೇ ಮರಳಿ ವಿರೂಪಾಕ್ಷ ದೇವಾಲಯದ ಸನ್ನಿಧಿಗೆ ಬಂದು, ಅಲ್ಲಿ ದೇವರ ದರುಶನ ಪಡೆದು ,ಮಧ್ಯಾಹ್ನದ ಊಟ ಮುಗಿಸಿಕೊಂಡು ಪುನಃ ಮರಳಿ ನಮ್ಮ ಊರಿನತ್ತ ಪ್ರಯಾಣ ಬೆಳೆಸಿದೆವು.
ಸಾಕಷ್ಟು ಜನ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶ್ರೇಷ್ಠ ಸ್ಥಳ ಎಂದು ಹೇಳುತ್ತಾರೆ.ಅದು ನಿಜವಿರಬಹುದು. ಆದರೆ ಕೋಟ್ಯಂತರ ಜನರೆಲ್ಲರಿಗೂ ಆ ಸ್ಥಳಕ್ಕೆ ಹೋಗಿ ದೋಷ ಪರಿಹಾರ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲದಿರಬಹುದು.ದೇವರು ಎಲ್ಲೆಡೆ ಇದ್ದಾನೆಂಬ ನಂಬಿಕೆಯಿರುವವರು ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿರುವ ಕಳಕಪ್ಪ ಸ್ವಾಮಿ ಎಂಬ ಅರ್ಚಕರ ಬಳಿ ಬಂದು ನಾಗದೋಷ ಪರಿಹಾರಕ್ಕಾಗಿ ಸಲಹೆ ಕೇಳಿದಾಗ ,ಅವರು ನಿಷ್ಕಲ್ಮಶ ಮನಸ್ಸಿನಿಂದ ಅವರ ಕೊಟ್ಟ ದಕ್ಷಿಣೆಯನ್ನು ಸಂತೋಷದಿಂದ ಸ್ವೀಕರಿಸಿ ಪೂಜಾ ಕೈಂಕರ್ಯಗಳನ್ನು ಕೈಕೊಂಡು ,ನಿಮಗೆ ಒಳಿತಾದರೆ ನನಗೂ ಒಳಿತಾಗುವುದು ಎಂದು ತುಂಬು ಹೃದಯದಿಂದ ಹರಸಿ ಕಳಿಸುತ್ತಾರೆ.ಹೀಗಾಗಿ ಸಾಕಷ್ಟು ಬಡ ಜನತೆ ಅರ್ಚಕರ ಬಳಿ ಬಂದು ತಮ್ಮ ಜಾತಕದಲ್ಲಿ ದೋಷ ಪರಿಹಾರಕ್ಕಾಗಿ ಇವರ ಸಹಾಯವನ್ನು ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ .
ನನ್ನ ಅರಿವಿಗೆ ತಿಳಿದಂತೆ ಈ ಸ್ಥಳ ಪರಿಚಯ ಲೇಖನವನ್ನು ನಾನು ಬರೆದಿದ್ದೇನೆ.ಈ ಸ್ಥಳದ ಬಗ್ಗೆ ಈಗಾಗಲೇ ಮಾಹಿತಿ ತಿಳಿದವರಿದ್ದರೆ,ನನ್ನ ಬರವಣಿಗೆಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಮಾರ್ಗದರ್ಶನ ನೀಡಿ .
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)