ಅಧ್ಯಾಯ -೨
ಆಗ ಮಧ್ಯಾಹ್ನ ಸುಮಾರು ೧.೩೦ ರ ಸಮಯ.. ಅಚ್ಯುತಾನಂದ ಹೆಗಡೆಯವರು ಆಗಷ್ಟೇ ಊಟ ಮುಗಿಸಿ, ಮನೆಯ ಜಗಲಿಯಲ್ಲಿ ಕೂತು ಎಲೆ ಅಡಿಕೆ ಹಾಕಿಕೊಳ್ಳುತ್ತಾ, "ಮಗ ಬತ್ತೆ ಹೇಳಿದ್ದಾ, ಇಷ್ಟೊತ್ತಿಗೆ ಬರಕಾಗಿತ್ತು. ಹೊಸನಗರದಿಂದ ೧೨ ಗಂಟೆಗೆ ಬಸ್ಸು ಬಿಡ್ತ.. ಅಲ್ಲಿಂದ ಹೊಸಳ್ಳಿಗೆ ೧ ತಾಸು ಸಾಕು.. ಇವಾಗ ೧.೩೦ ಆತು. ಇಷ್ಟೊತ್ತಿಗೆಲ್ಲಾ ಅವ ಮನೆಲಿರಕಾಗಿತ್ತು. ಶಿವಮೊಗ್ಗದಿಂದ ಹೊರಡಲೇ ಲೇಟ್ ಮಾಡ್ಕಂಡು ಬಸ್ಸು ತಪ್ಪಿ ಹೋತ ಎಂತೇನ..?" ಎಂದು ಗೊಣಗಿದರು, ತಂಬಾಕಿನ ಎಸಳನ್ನು ಬಾಯಿಗೆ ಎಸೆದುಕೊಳ್ಳುತ್ತಾ..
ಅಷ್ಟರಲ್ಲಿ ಬ್ಯಾಗ್ ಒಂದನ್ನು ಹೆಗಲಿಗೇರಿಸಿಕೊಂಡು, ಪ್ರತೀಕ್ ಆಗಷ್ಟೇ ಮನೆಯ ಒಳಗೆ ಬಂದ.. ಇದನ್ನು ನೋಡಿದ ಅಚ್ಯುತಾನಂದರು, "ಅಯ್ಯೋ ಈಗಷ್ಟೇ ನಿನ್ನ ಬಗ್ಗೇನೆ ಯೋಚ್ನೆ ಮಾಡ್ತಾ ಇದ್ದಿದ್ದೆ, ಎಂತ ಇಷ್ಟು ತಡ ಆಗೋತಾ..?" ಎಂದರು ಬಾಯಲ್ಲಿ ತುಂಬಿದ ತಂಬಾಕಿನ ರಸವನ್ನು ಮೆಲ್ಲುತ್ತಾ..
"ಎಂತಾ ಇಲ್ಲೆ, ಬಸ್ಸು ತಡ ಆತು ಅಷ್ಟೆ.." ಎಂದಷ್ಟೇ ಹೇಳಿ ಹಾಗೇ ಒಳಗೆ ನಡೆದುಬಿಟ್ಟ ಪ್ರತೀಕ್..
"ಮಗಾ ಬಂದ್ಯ.. ನಿಂದೇ ಬರು ಹಾಯ್ತಾ ಇದ್ದಿದ್ದೆ, ಬೇಗ ಸ್ನಾನ ಮಾಡ್ಕಂಡು ಬಾ ಊಟ ಮಾಡ್ಲಕ್ಕು.." ಎಂದಳು ಸರೋಜ ಪ್ರತೀಕ್ ಒಳ ಬರುತ್ತಿರುವುದನ್ನು ನೋಡಿ..
"ಹೂಂ.." ಎಂದಷ್ಟೇ ಹೇಳಿ ಸ್ನಾನ ಮುಗಿಸಿ ಊಟಕ್ಕೆ ಬಂದು ಕುಳಿತ..
ಸರೋಜ ಊಟ ಬಡಿಸುತ್ತಾ, "ತಮಾ, ಸಾಗರ ಬದಿ ಒಂದು ಹುಡುಗಿ ಜಾತಕ ಬೈಂದು.. ನಿಂಗಳ ಇಬ್ಬರ ಜಾತಕ ಚೋಲೋ ಹೊಂದಾಣಿಕೆ ಆಗ್ತಡಾ, ಗೋವಿಂದ ಭಟ್ಟರು ಹೇಳಿದ್ರು..ಹುಡುಗಿ ಡಿಗ್ರಿ ಮುಗಿಸಿ ಮನೆಲ್ಲೇ ಇದ್ದಡಾ.. ಒಬ್ಬಳೇ ಮಗಳಡಾ. ಎರಡು ಎಕರೆ ಜಮೀನು ಇದ್ದಡಾ. ಸಣ್ಣ ನೌಕರಿ ಆದ್ರೂ ಅಡ್ಡಿಲ್ಲೆ, ಶಿವಮೊಗ್ಗ ಬದಿಗೆ ಇದ್ದವು ಆದ್ರೆ ಸಾಕು ಹೇಳಿದ್ದ.. ಹುಡುಗಿಗೂ ೩೦ ವರ್ಷ ಆತು.. ನೋಡಲೂ ಚೊಲೋ ಇದ್ದು.. ನೀ ಒಂದ ಸಲ ನೋಡಿ ಎಂತದು ಹೇಳು.." ಎಂದು ಹೇಳಿ ಮಗನ ಮುಖ ನೋಡಿದಳು..
ಪ್ರತೀಕ್ ಇದೆಲ್ಲಾ ಮಾಮೂಲು ಎಂಬಂತೆ, ಊಟ ಮಾಡುತ್ತಿದ್ದವನು ತಲೆ ಎತ್ತದೆ,
"ಅಮ್ಮಾ.. ಈ ನಮ್ಮ ಬ್ರಾಹ್ಮಣ ಜಾತಿಯವರ ಕರ್ಮ ಕಾಂಡ.. ಇವೆಲ್ಲಾ ಮೊದಲು ಹೀಂಗೆ ಹೇಳ್ತ, ಕಡಿಗೆ ಒಂದೊಂದೇ ಖ್ಯಾತೆ ತೆಗಿತಾ ಬತ್ತ.. ಹೀಂಗೆ ಎಷ್ಟು ಜಾತಕ ಬಂತು, ಏನೂ ಆಗದೇ ಹೋತು ಈ ನಾಲ್ಕು ವರ್ಷದಲ್ಲಿ ನಿಂಗೇ ಗೊತ್ತಿದ್ದಲಿ..ಬಿಡು. ಮೊದ್ಲು ಆ ಹುಡುಗಿ ಮನೆಯವು ಎಂತದೂ ಜಾಸ್ತಿ ಡಿಮ್ಯಾಂಡ್ ಇಲ್ಲದೇ ನನ್ನ ಒಪ್ಕಳ್ಳಲಿ, ಆಮೇಲೆ ನೋಡನ.." ಎಂದಷ್ಟೇ ಕ್ಲುಪ್ತವಾಗಿ ಹೇಳಿ, ಮತ್ತೇನೂ ಹೇಳಲು ಉಳಿದಿಲ್ಲ ಎಂಬಂತೆ ಬೇಗ ಊಟ ಮುಗಿಸಿ ಎದ್ದು ಕೈ ತೊಳೆದುಕೊಂಡ.. ಸರೋಜ ಮತ್ತೇನೋ ಹೇಳಲು ಹೋದವಳು, ಮಗನ ಮುಖದಲ್ಲಿದ್ದ ತಿರಾಸ್ಕಾರ ಭಾವ ನೋಡಿ ಸುಮ್ಮನಾದಳು..
'ಈಗಲಾದರೂ ತಾನು, ತನ್ನ ಮತ್ತು ರೀಟಾಳ ಪ್ರೇಮ ವಿಷಯ ಹೇಳದಿದ್ದರೆ, ಅನಾಹುತವಾದೀತು..' ಎಂದು ಮನದಲ್ಲೇ ಅಂದುಕೊಳ್ಳುತ್ತಾ ಪ್ರತೀಕ್ ಏನೋ ನಿರ್ಧಾರಕ್ಕೆ ಬಂದವನಂತೆ ತನ್ನ ರೂಮಿನೆಡೆಗೆ ಹೆಜ್ಜೆ ಹಾಕಿದ..
ಅಲ್ಲೇ ದೂರದಲ್ಲೆಲ್ಲೋ "ಯಾವ ಹೂವು ಯಾರ ಮುಡಿಗೋ.." ಎಂಬ ಹಾಡು ಧ್ವನಿಸುತ್ತಿತ್ತು...
----+++------++-------++-------------
"ಅಲ್ದ ಶಂಕರಾ.. ಹೀಂಗೆ ಬಂದ ಹುಡುಗರನ್ನೆಲ್ಲಾ, ಅದು ಸರಿ, ಇಲ್ಲೆ, ಇದು ಸರಿ ಇಲ್ಲೆ ಹೇಳಿ ಬಿಡ್ತಾ ಹೋದರೆ ನಿನ್ನ ಮಗಳಿಗೆ ಮದ್ವೆ ಕಷ್ಟ ನೋಡು.." ಎಂದು ಅಚ್ಯುತಾನಂದರು ಎಲೆ ಅಡಿಕೆ ಜೊತೆ ತಂಬಾಕನ್ನು ಸೇರಿಸಿ ಬಾಯಿಗಿಡುತ್ತಾ ಹೇಳಿದರು..
"ಹಾಂಗೇಳಿ ಎಂತೆತವ್ಕೋ ನನ್ನ ಮಗಳು ಪ್ರೇಮಾ ನ ಗಂಟು ಹಾಕಲಾಗ್ತನ..? ನೋಡ ಚೊಲೋ ಕಾರು, ಬಂಗ್ಲೆ, ಆಸ್ತಿ ಇಪ್ಪ ಗಂಡು ನೋಡಿ ಪ್ರೇಮಾನ ಮದುವೆ ಮಾಡವು ಅದ್ಕಂಡಿದ್ದು ತಪ್ಪ ಹೇಳು.?" ಎಂದು ತಂಬಾಕು ಬೆರೆತ ತಾಂಬೂಲವನ್ನು ಬಾಯಿಗಿಡುತ್ತಾ ಹೇಳಿದರು ಶಂಕರ ಹೆಗಡೆಯವರು.
ಅಚ್ಯುತಾನಂದರ ಮನೆಯ ಬೀದಿಯ ಕೊನೆಯಲ್ಲೆ ಅವರ ಮನೆಯಿರುವುದು.. ತನ್ನ ಮಗಳು ಪ್ರೇಮಾಳಿಗೆ ಕಳೆದ ೬ ವರ್ಷಗಳಿಂದ ಗಂಡು ನೋಡುತ್ತಲೇ ಇದ್ದಾರೆ. ಆದರೆ ಯಾವ ಗಂಡೂ ಅವರಿಗೆ ಸರಿ ಬರಲೇ ಇಲ್ಲ.. ಪಿ.ಯು.ಸಿ ಮುಗಿಸಿ ಮನೆಯಲ್ಲೇ ಇರುವ ಪ್ರೇಮಳಿಗೆ, ದೊಡ್ಡ ಹಣವಂತ, ಬೆಂಗಳೂರಂತ ನಗರದಲ್ಲಿ ದೊಡ್ಡ ಉದ್ಯೋಗದಲ್ಲಿರುವ ಗಂಡನ್ನೇ ನೋಡಿ ಮದುವೆ ಮಾಡಬೇಕೆಂಬ ಮಹದಾಸೆ ಶಂಕರ ಹೆಗಡೆಯವರದು.. ಇರುವವಳು ಒಬ್ಬಳೇ ಮಗಳು, ಮನೆಯಲ್ಲಿ ತಾನು ಮತ್ತೆ ತನ್ನ ಹೆಂಡತಿಯನ್ನು ಬಿಟ್ಟರೆ ಅವಳಿಗೆ ಮತ್ತಾರು ದಿಕ್ಕಿಲ್ಲ, ಎಂಬ ಆಲೋಚನೆಯನ್ನು ಮುಂದಿಟ್ಟುಕೊಂಡು, ಅದೆಷ್ಟೋ ಒಳ್ಳೆ ಸಂಬಂಧಗಳು ಬಂದರೂ, ಇದಕ್ಕೂ ಒಳ್ಳೆಯ ಸಂಬಂಧ ಬರಬಹುದೆಂದುಕೊಳ್ಳುತ್ತಾ, ಏನಾದರೂ ಒಂದು ಐಬು ಹೇಳಿ ಅದನ್ನು ತಿರಸ್ಕರಿಸುತ್ತಿದ್ದ.. ಮೊನ್ನೆ ಒಂದು ಸಂಬಂಧ ಬಂದಿತ್ತು. ಒಳ್ಳೆಯ ಜಮೀನು ಮನೆ ಇರುವ ಸಂಬಂಧ, ಒಬ್ಬನೇ ಮಗ, ಸ್ಪುರರ್ದೂಪಿ. ಡಿಗ್ರಿ ಮುಗಿಸಿ, ಕೃಷಿಯಲ್ಲೇ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹೊರಗಡೆ ನೌಕರಿಗೆಂದು ಹೋಗದೆ, ತನ್ನ ಮನೆಯಲ್ಲೇ ಇರುವ ೪೦ ಎಕರೆ ಕೃಷಿ ಭೂಮಿಯನ್ನೇ ನೋಡಿಕೊಂಡಿದ್ದ.. ಅವನು ಮನೆಯಲ್ಲಿದ್ದಾನೆ, ಸ್ವಲ್ಪ ಕಪ್ಪು ಎಂಬ ಕಾರಣ ನೀಡಿ ಆ ಸಂಬಂಧವನ್ನೂ ತಿರಸ್ಕರಿಸಿಬಿಟ್ಟಿದ್ದರು ಶಂಕರ ಹೆಗಡೆಯವರು..
ಅದಕ್ಕೇ ಅಚ್ಯುತಾನಂದರು ಹಾಗೆ ಕೇಳಿದ್ದು..
"ಅದೆಲ್ಲಾ ಸರಿ, ನಿನ್ನ ಮಗಳಿಗೆ ಈಗ ಸುಮಾರು ೨೮ ವರ್ಷ.. ನೀ ಹೀಂಗೆ ಮಾಡ್ತಾ ಇದ್ರೆ, ಅವಳಿಗೆ ವಯಸ್ಸಾಗ್ತು.. ಹೆಣ್ಣು ಮಕ್ಕಳಿಗೆ ೩೦ ಆದ ಮೇಲೆ ಗಂಡು ಸಿಗದು ಕಷ್ಟ ನೋಡು.." ಎಂದು ಅಚ್ಯುತಾನಂದರು ಎಚ್ಚರಿಸಿದರು..
"ಹಾಂಗೆಲ್ಲಾ ಎಂತಾ ಆಗ್ತಿಲ್ಲೆ.. ನನ್ನ ಮಗಳು ನೋಡಲೆ ಬೆಳ್ಳಗೆ ಒಳ್ಳೆ ಗೊಂಬೆ ಇದ್ದಾಂಗೆ ಇದ್ದು.. ಅದ್ಕೆ ಚೊಲೋ ಸಂಬಂಧ ಇವತ್ತಲ್ಲ ನಾಳೆ ಸಿಕ್ಕೇ ಸಿಗ್ತು ತಗ.." ಎಂದರು ಶಂಕರ ಹೆಗಡೆಯವರು ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಾ..
"ಏನೋ ಎಲ್ಲಾ ಒಳ್ಳೇದು ಆದ್ರೆ ಅಷ್ಟೆ ಸಾಕು..ಎಂದು ಹೇಳುತ್ತಾ ಅಚ್ಯುತಾನಂದರು ಮತ್ತೇನೋ ಜ್ಞಾಪಿಸಿಕೊಂಡಂತೆ "ಅಲ್ದ ನನ್ನ ಮಗಗೊಂದು ಎಲ್ಲಾದರೂ ಒಳ್ಳೆ ಹುಡುಗಿ ಇದ್ದರೆ ನೋಡು ಹೇಳಿದ್ದೆ, ಏನಾತು ಅದು.." ಎಂದರು ವಿಷಯ ಬದಲಿಸುತ್ತಾ..
"ಓಹ್ ಅದಾ, ನಾನೂ ನಂಗೆ ಗೊತ್ತಿರ ಮೂರ್ನಾಲ್ಕು ಕಡೆ ಹೇಳಿಟ್ಟಿದ್ದೆ.. ಅವ್ಕೆ ದೊಡ್ಡ ನೌಕರಿಲಿದ್ದವೆ ಆಗವಡ, ನಿನ್ನ ಮಗನ ನೌಕರಿ ಅಷ್ಟು ದೊಡ್ಡದಲ್ಲ ಹೇಳಿ ನೀನೇ ಅವತ್ತು ಹೇಳಿದ್ಯಲಾ.., ನಮ್ಮ ಜಾತಿವ್ಕೆ ದುಡ್ಡಿನ ದುರಾಸೆ ಹಿಡದೋಜು ನೋಡು.." ಎಂದು ಹೇಳುತ್ತಾ, ತಂಬಾಕಿನ ತಾಂಬೂಲವನ್ನು ಉಗುಳಲು ಎದ್ದು ಹೊರಗಡೆ ಹೊರಟರು ಶಂಕರ ಹೆಗಡೆಯವರು..
ಅವರ ಮಾತನ್ನು ಕೇಳಿದ ಅಚ್ಯುತಾನಂದರು ಆಶ್ಚರ್ಯದಿಂದ ಅವರನ್ನೇ ನೋಡುತ್ತಾ ಕುಳಿತರು.. "ಎಲಾ ಇವನ, ಇವನು ಇವನ ಮಗಳಿಗೆ ಹಣವಿರುವ ಗಂಡನ್ನು ನೋಡಿದರೆ ಅದು ದುರಾಸೆಯಲ್ಲ, ಮತ್ತೊಬ್ಬರು ಅದೇ ಕೆಲಸ ಮಾಡಿದರೆ ದುರಾಸೆ. ಇದು ನಮ್ಮ ಬ್ರಾಹ್ಮಣ ಜಾತಿಯ ದುರವಸ್ಥೆ.." ಎಂದು ಮನದಲ್ಲೇ ಅಂದುಕೊಂಡರು..
ಅಷ್ಟರಲ್ಲಿ ಶಂಕರ ಹೆಗಡೆಯವರು "ಸರಿ ನಾನಿನ್ನು ಹೊರಡ್ತೆ, ಆಗಲೇ ಬೆಳಿಗ್ಗೆ ೧೦ ಗಂಟೆ ಆಗೋತು, ತೋಟದಲ್ಲಿ ಸ್ವಲ್ಪ ಕೆಲಸ ಇದ್ದು, ಸಂಜೆ ಬತ್ತೆ.." ಎಂದು ತುರಾತುರಿಯಿಂದ ಹೊರಟರು.
ಅಚ್ಯುತಾನಂದರು "ಸರಿ..ಸರಿ.." ಎಂದು ಅವರನ್ನು ಬೀಳ್ಕೊಟ್ಟರು..
-------++++-------++++-----++-----
ಪ್ರತೀಕ್ ಮನೆಗೆ ಬಂದು ೧ ವಾರವೇ ಕಳೆದಿತ್ತು.. ತನ್ನ ರೀಟಾಳ ಮದುವೆಯ ವಿಷಯವನ್ನು ಮನೆಯಲ್ಲಿ ಮಾತನಾಡಿ, ಒಪ್ಪಿಸಿ ಫಿಕ್ಸ ಮಾಡಿಕೊಂಡೇ ಬರಬೇಕೆಂದು, ಏನೋ ಒಂದು ಸುಳ್ಳು ನೆಪವೊಡ್ಡಿ ೮ ದಿನ ರಜೆ ತೆಗೆದುಕೊಂಡು ಬಂದಿದ್ದ.. ಯಾವತ್ತೂ ರಜೆ ತೆಗೆದುಕೊಳ್ಳದೇ, ಕೆಲಸ ಮಾಡುತ್ತಿದ್ದ ಪ್ರತೀಕ್ ನನ್ನು ಕಂಡರೆ ಸಂಸ್ಥೆಯ ಮುಖ್ಯಸ್ಥರಿಗೆ ತುಂಬಾ ಇಷ್ಟ..ಕೆಲಸದಲ್ಲಿ ಅವನಿಗಿರುವ ಶ್ರದ್ಧೆ, ಅವನ ಕೌಶಲ್ಯ ಎಲ್ಲವೂ ಅಚ್ಚು, ಮೆಚ್ಚಾಗಿತ್ತು ಅವರಿಗೆ..ಅದಕ್ಕೆ ಹಿಂದೂ, ಮುಂದೂ ಯೋಚಿಸದೇ ಅವನಿಗೆ ರಜೆಯನ್ನು ಮಂಜೂರು ಮಾಡಿದ್ದರು..ಅದರಲ್ಲಿ ೬ ದಿನಗಳು ಆಗಲೇ ಕಳೆದು ಹೋಗಿವೆ.. ಇನ್ನೂ ತನ್ನ ವಿಷಯದ ಒಂದು ತುಣುಕನ್ನೂ ಮನೆಯಲ್ಲಿ ಹೇಳಿಲ್ಲ.. ೨ ದಿನದಲ್ಲಿ ಎಲ್ಲವನ್ನೂ ಹೇಳಿ ಒಪ್ಪಿಸಲೇ ಬೇಕೆಂದು ತೀರ್ಮಾನಿಸಿ, ಅಪ್ಪನ ಹತ್ತಿರ ಈಗಲೇ ಹೇಳಿಬಿಡೋಣ ಎಂದು ಗಟ್ಟಿ ಮನಸ್ಸಿನೊಂದಿಗೆ, ತನ್ನ ರೂಮಿನಿಂದ ಮನೆಯ ಜಗುಲಿಯ ಕಡೆ ಬಂದ..ಆದರೆ ಅಲ್ಲಿ ಅವನ ತಂದೆ ಇರಲಿಲ್ಲ..ತೋಟದ ಕಡೆ ಹೋದರು ಎಂದು ಅಮ್ಮನಿಂದ ತಿಳಿಯಿತು.. ಸರಿ ಅವರು ಬರಲಿ ಆಮೇಲೇ ಹೇಳಿದರಾಯಿತು..ಎಂದು ಕೊಂಡು ಅಲ್ಲೇ ಜಗುಲಿಯಲ್ಲೇ ಕುಳಿತು ತಂದೆಗಾಗಿ ಕಾಯತೊಡಗಿದ.. ಅವನಿಗೆ ರೀಟಾ ಮತ್ತೆ, ಮತ್ತೆ ನೆನಪಾಗುತ್ತಿದ್ದಳು..ತಂದೆ ಬರುವುದರೊಳಗೆ ಅವಳಿಗೊಂದು ಕಾಲ್ ಮಾಡಿಬಿಡೋಣ ಎಂದುಕೊಂಡು ಮೊಬೈಲ್ ಎತ್ತಿಕೊಂಡು ಅಂಗಳಕ್ಕೆ ಹೆಜ್ಜೆ ಇಟ್ಟ..
ಇತ್ತ ತೋಟದಿಂದ ಬರುವಾಗ ಅಚ್ಯುತಾನಂದರು ಶಂಕರ ಹೆಗಡೆಯವರನ್ನು ಮಾತಾಡಿಸಿಕೊಂಡು ಹೋಗೋಣ ಎಂದುಕೊಂಡು ಬರುತ್ತಿದ್ದರು..ಅವರ ತೋಟಕ್ಕೆ ಹೋಗುವಾಗ, ಬರುವಾಗ ಶಂಕರ ಹೆಗಡೆಯವರ ಮನೆಯನ್ನು ದಾಟಿಕೊಂಡೇ ಹೋಗಬೇಕು.. ಹೇಗೂ ದಾರಿಯಲ್ಲೇ ಮನೆ ಸಿಗುತ್ತದೆ ಒಮ್ಮೆ ಹೋಗಿ ಮಾತಾಡಿಸಿಕೊಂಡು ಬರೋಣ ಎಂದುಕೊಂಡು ಹೊರಟಿದ್ದರು..
ಶಂಕರ ಹೆಗಡೆಯವರು ಮತ್ತೆ ಅವರ ಧರ್ಮಪತ್ನಿ ಇಬ್ಬರೂ ಏನೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು.. ಮನೆಯಲ್ಲಿ ಅವರ ಮಗಳು ಪ್ರೇಮಾ ಒಬ್ಬಳೇ ಇದ್ದಳು.. ಎಂದಿನಂತೆ ಅವರ ಮನೆ ಕೆಲಸದ ಆಳು ಹನುಮಂತು ಕೂಡ ಕೆಲಸಕ್ಕೆ ಬಂದಿದ್ದ.. ಇದಾವುದೂ ತಿಳಿಯದ ಅಚ್ಯುತಾನಂದರು ಮನೆಯ ಬಾಗಿಲು ತೆರೆದಿದ್ದು ನೋಡಿ ಹಾಗೇ ಒಳಗಡೆ ಹೋದರು.. ಇನ್ನೇನು ಶಂಕರ ಹೆಗಡೆಯವರನ್ನು ಕೂಗಬೇಕು ಅನ್ನುವಷ್ಟರಲ್ಲಿ, ಒಳಗಿನಿಂದ ಒಂದು ಗಂಡು ಮತ್ತು ಹೆಣ್ಣಿನ ಧ್ವನಿ ಅವರಿಗೆ ಕೇಳಿಬಂತು.. ಅದು ಮಾಮೂಲಿನಂತಿರಲಿಲ್ಲ.. "ಥೂ ಪೋಲಿ.. ಹಗಲಲ್ಲೇ ಶುರು ಮಾಡಿದ್ಯಾ, ಬಿಡು.. ಯಾರಾದ್ರೂ ಬಂದ್ರೆ ಕಷ್ಟ.." ಎಂದು ಹೇಳುತ್ತಾ ನಗುತ್ತಿರುವುದು ಕೇಳಿಸಿತು ಅವರಿಗೆ..
ತಕ್ಷಣ ಆ ಧ್ವನಿ ಪ್ರೇಮಾಳದ್ದೆಂದು ಅವರಿಗೆ ತಿಳಿದುಹೋಯಿತು.. ಅದರ ಹಿಂದೆಯೇ ಮತ್ತೊಂದು ಧ್ವನಿ ತೇಲಿ ಬಂತು.. "ಸುಮ್ನಿರು, ಇಂಥ ಒಳ್ಳೆ ಅವಕಾಶ, ಮತ್ತೆ ಸಿಗೋದಿಲ್ಲ." ಎನ್ನುತ್ತಾ ಮುತ್ತಿಡುವ ಶಬ್ಧ..ಆ ಗಂಡಿನ ಧ್ವನಿ ಯಾರದೆಂದು ತಕ್ಷಣ ತಿಳಿಯಲಿಲ್ಲ..ಅವರ ಮನಸ್ಸು ಏನೋ ಕೇಡು ಶಂಕಿಸಿತು.. ಹಾಗೇ ಆ ಧ್ವನಿ ಬಂದತ್ತ ಹೋದರು ಅಚ್ಯುತಾನಂದರು.. ಅಲ್ಲಿ ಅಡಿಗೆ ಮನೆಯಲ್ಲಿನ ದೃಶ್ಯ ನೋಡಿ ಗರಬಡಿದವರಂತೆ ನಿಂತು ಬಿಟ್ಟರು.. ಮನೆಯ ಆಳು ಹನುಮಂತು ಪ್ರೇಮಾಳನ್ನು ತಬ್ಬಿಕೊಂಡು ಮುತ್ತಿಡುತ್ತಿದ್ದ, ಅವಳೂ ಕೂಡ ನಗುತ್ತಾ ಅವನನ್ನು ತಬ್ಬಿಕೊಂಡಿದ್ದಳು.. ಅವರು ತಮ್ಮ ರಾಸಲೀಲೆಯಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ, ಅಲ್ಲಿ ಅಚ್ಯುತಾನಂದರು ಬಂದಿದ್ದು ಅವರಿಗೆ ತಿಳಿಯಲೇ ಇಲ್ಲ..ಅಚ್ಯುತಾನಂದರಿಗೆ ಅಲ್ಲಿರಲಾಗದೇ ಹಾಗೇ ಸಪ್ಪಳ ಮಾಡದೇ ಬೇಸರದಿಂದ ಹಿಂತಿರುಗಿ ಮನೆಗೆ ಬಂದುಬಿಟ್ಟರು..
ಅವರು ಹೋದ ಅರ್ಧ ಗಂಟೆಯ ನಂತರ ಹನುಮಂತು ಅಂಗಿಯನ್ನು ಹಾಕಿಕೊಳ್ಳುತ್ತಾ, ಏನೂ ಆಗಿಲ್ಲವೆಂಬಂತೆ ಮನೆಯಿಂದ ಹೊರಬಿದ್ದು ತೋಟದತ್ತ ನಡೆದ.. ಇತ್ತ ಪ್ರೇಮಾ ತನ್ನ ಸಿಉರೆಯನ್ನು ಸರಿಯಾಗಿ ಕಟ್ಟಿಕೊಂಡು, ಕೆದರಿದ ಕೂದಲನ್ನು ಸರಿಪಡಿಸಿಕೊಂಡು, ರೂಮಿನಿಂದ ಹೊರಬಿದ್ದು ಅಡಿಗೆ ಮನೆಯತ್ತ ತೆರಳಿ ಎಂದಿನಂತೆ ತನ್ನ ಕೆಲಸದಲ್ಲಿ ತನ್ಮಯಳಾದಳು.. ಇದಕ್ಕೂ ಮುಂಚೆ ಅಲ್ಲಿ ಇಂಥದ್ದೊಂದು ಘಟನೆ ನಡೆದಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಿತ್ತು ಅಲ್ಲಿನ ವಾತಾವರಣ.. ಆ ಮನೆಯಲ್ಲಿರುವ ಮರದ ಕಂಬಗಳು 'ತಮಗೆ ಇದೆಲ್ಲಾ ಮಾಮೂಲೆ, ಎಷ್ಟು ಸಾರಿ ನೋಡಿದ್ದೆವೋ..' ಎಂಬಂತೆ ಮೂಕ ಸಾಕ್ಷಿಗಳಾಗಿ ನಿಂತಿದ್ದವು..
ಇತ್ತ ಮನೆಗೆ ಬಂದ ಅಚ್ಯುತಾನಂದರಿಗೆ ಮನಸ್ಸು ಕೆಟ್ಟಂತಾಗಿತ್ತು.. ಅವರಿಬ್ಬರೂ ತಬ್ಬಿಕೊಂಡು ನಡೆಸುತ್ತಿದ್ದ ರಾಸಲೀಲೆಯ ದೃಶ್ಯ ಮತ್ತೆ, ಮತ್ತೆ ಕಣ್ಣ ಮುಂದೆ ತೇಲಿ ಬಂದಂತಾಗಿ ಕುಳಿತಲ್ಲಿ, ನಿಂತಲ್ಲಿ ಚಡಪಡಿಸತೊಡಗಿದ್ದರು.. ಮಲ್ಲಿಗೆ ಹೂವೆಂದು ನಂಬಿದ್ದು, ಅದ್ಯಾವುದೋ ಪರಿಮಳವಿಲ್ಲದ ಕೆಲಸಕ್ಕೆ ಬಾರದ ಕಾಡು ಹೂವಾದರೆ ಆಗುವಂತ ಬೇಸರ ಅವರಿಗಿಂದು ಆಗಿತ್ತು.. ಅಲ್ಲೇ ಜಗುಲಿಯ ಮೇಲೆ ಕುಳಿತಿದ್ದ ಪ್ರತೀಕ್ ತಂದೆಯ ಚಡಪಡಿಕೆಯನ್ನು ಗಮನಿಸಿ
"ಅಪ್ಪಾ ಎಂತಾ ಆತ.. ? ಎಂತಕ್ಕೆ ಇಷ್ಟು ಚಡಪಡಿಸ್ತಾ ಇದ್ದೆ..?" ಎಂದು ಕೇಳಿದ..
ಅವರಿಗಾದ ಗಾಬರಿಯಲ್ಲಿ ಅವರಿಗೆ ಜಗುಲಿಯ ಮೇಲೆ ತನ್ನ ಮಗ ಕುಳಿತಿರುವನೆಂಬುದು ಕೂಡ ಕಾಣಲಿಲ್ಲ..ಮಗನ ಪ್ರಶ್ನೆಯಿಂದ ತಕ್ಷಣ ಎಚ್ಚೆತ್ತ ಅವರು, "ಛೇ ಎಂತಾ ಹೀನ ಕೆಲಸ, ಎಂತಾ ದ್ರೋಹ, ನಂಗೆ ಇಷ್ಟು ಬೇಜಾರಾಗ್ತಾ ಇದ್ದು, ಇನ್ನು ಅವಳ ತಂದೆಗೆ ಎಷ್ಟು ಬೇಜಾರು ಆಗ್ಲಕ್ಕು.. ಛೇ..ಛೇ.." ಎನ್ನುತ್ತಾ ಅವರ ಅಸಮಧಾನವನ್ನು ಹೊರಹಾಕಿದರು.. ಪ್ರತೀಕ್ ಗೆ ಅವರ ಮಾತು ಅರ್ಥವಾಗದೇ, "ಎಂತಾ ದ್ರೋಹ, ಯಾರ ತಂದೆ..? ಎಂತದು ಹೇಳಿ ಸರಿಯಾಗಿ ಹೇಳು ಅಪ್ಪಾ.." ಎಂದೊಡನೆ ಅವರು ತಾನು ಕಂಡದ್ದೆಲ್ಲಾ ವಿವರಿಸಿ, "ನೋಡು ಅವಳ ಅಪ್ಪ ಅವಳ ಮದುವೆಗೆ ಸಂಬಂಧ ನೋಡ್ತಾ ಇದ್ರೆ ಇವಳು ಇಲ್ಲಿ ಹೊರಗಿನ ಜಾತಿ ಕೆಲಸದ ಆಳಿನ ಜೊತೆ ಗುಟ್ಟಾಗಿ ಸಂಸಾರ ನಡೆಸಿದ್ದು.." ಎಂದು ಮತ್ತಷ್ಟು ಅಸಮಧಾನದಿಂದ ಹೇಳಿದರು..
ಇವೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಪ್ರತೀಕ್ ಚಿಕ್ಕದಾಗಿ ಮುಗುಳ್ನಕ್ಕು, "ನೋಡಿದ್ಯ ಅಪ್ಪಾ, ನಮ್ಮ ಜಾತಿ ಹುಡುಗೀರು ಹೇಂಗಿರ್ತ ಹೇಳಿ.. ಇಲ್ಲಿ ಹಳ್ಳಿಯಲ್ಲಿದ್ದವೇ ಹೀಂಗೆ, ಇನ್ನು ಹೊರಗಡೆ ನೌಕರಿ ಮಾಡ್ತಾ ಇರ ನಮ್ಮ ಜಾತಿ ಹುಡುಗೀರು ಹೇಂಗಿದ್ದಿಕ್ಕು ಹೇಳಿ ನೀನೇ ವಿಚಾರ ಮಾಡು..ಇಲ್ಲಿ ಪ್ರೇಮಾದೊಂದೇ ತಪ್ಪಲ್ಲ, ಅವಳ ಅಪ್ಪಂದು ತಪ್ಪೆಯಾ..ಅವಂಗೆ ತನ್ನ ಮಗಳ ಆಸೆ, ಕನಸಿಗಿಂತ ಹಣ ಮುಖ್ಯ..ಅವನ ಹಣದ ಅಂಧಕಾರಿಂದ ಮಗಳ ಮನಸ್ಸನ್ನು ಅರ್ಥ ಮಾಡ್ಕಳದ್ದೇ ತಪ್ಪು ಮಾಡದ.." ಎಂದು ಹೇಳಿ ದೀರ್ಘವಾದ ನಿಟ್ಟುಸಿರುಬಿಟ್ಟ ಪ್ರತೀಕ್..
"ಹೌದು ಅದೂ ನಿಜ..ಆದರೂ ನಮ್ಮ ಬ್ರಾಹ್ಮಣ ಸಮಾಜ ಎಷ್ಟು ಹಾಳಾಗಿ ಹೋಯ್ದು.." ಎಂದರು ಬೇಸರದಿಂದ..
ಇದೇ ಸರಿಯಾದ ಸಮಯವೆಂದು ಪ್ರತೀಕ್ ತನ್ನ ಪ್ರೀತಿಯ ವಿಷಯವನ್ನು ತಂದೆಯ ಮುಂದೆ ಬಿಚ್ಚಿಟ್ಟ..
ಮೊದಲೇ ಪ್ರೇಮಾಳ ವಿಷಯದಿಂದ ಬೇಸರಗೊಂಡಿದ್ದ ಅಚ್ಯುತಾನಂದರಿಗೆ ತನ್ನ ಮಗ ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆಂದು ತಿಳಿದು ಮತ್ತಷ್ಟು ಗಾಬರಿಗೊಂಡರು..
"ಛೇ, ಛೇ ಇದು ಸಾಧ್ಯ ಇಲ್ಲೆ, ಆ ಕ್ರಿಶ್ಚಿಯನ್ ಹುಡುಗಿ ನಮ್ಮ ಮನೆ ಸೊಸೆ ಅಪ್ಪದು ನಂಗೆ ಬಿಲ್‌ಕುಲ್ ಇಷ್ಟ ಇಲ್ಲೆ.." ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು..ಇಷ್ಟು ಹೊತ್ತು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಸರೋಜ ಕೂಡ ಅಚ್ಯುತಾನಂದರ ಮಾತಿಗೆ ದನಿಗೂಡಿಸಿದಳು..
"ಅಪ್ಪಾ.. ರೀಟಾ ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿನ ಕಳ್ಕಂಡು, ಅನಾಥಾಶ್ರಮದಲ್ಲೇ ಬೆಳೆದಳು.. ಈ ಪ್ರೇಮಾನಂಥ ಹುಡುಗಿ ಅಲ್ಲ ಅವಳು..ಅವಳು ಹುಟ್ಟಿನಿಂದ ಕ್ರಿಶ್ಚಿಯನ್ ಆದರೂ, ಹಿಂದೂ ಸಂಸ್ಕಾರವನ್ನು ಚೊಲೋ ಅರ್ಥ ಮಾಡ್ಕಂಜು.. ನಮ್ಮ ಸಂಪ್ರದಾಯಕ್ಕೂ ಹೊಂದಿಕೊಂಡು ಹೋಗ ಒಳ್ಳೆ ಹುಡುಗಿ ಅವಳು., ಅಪ್ಪಾ ಈ ಧರ್ಮ, ಜಾತಿ ಎಲ್ಲಾ ನಾವೇ ಮಾಡ್ಕಂಡಿದ್ದು, ಪ್ರೇಮಕ್ಕೆ ಯಾವ ಧರ್ಮನೂ ಇಲ್ಲೆ.. ಪ್ರೇಮವೇ ಒಂದು ಧರ್ಮ. ವಿಶ್ವಾಸ ದ್ರೋಹ, ಹಣದ ದುರಾಸೆ ಇರ ನಮ್ಮ ಬ್ರಾಹ್ಮಣ ಜಾತಿ ಹುಡುಗಿರೀಗಿಂತ, ಹಣಕ್ಕಿಂತ ಪ್ರೀತಿ, ವಿಶ್ವಾಸನೇ ಮುಖ್ಯ ಹೇಳ ನನ್ನ ರೀಟಾನೆ ಎಷ್ಟೋ ಮೇಲು.." ಎಂದು ತರ ತರವಾಗಿ ತಂದೆ, ತಾಯಿಯರಿಗೆ ಅರ್ಥ ಮಾಡಿಸಲು ನೋಡಿದ..
ಅವನು ಎಷ್ಟೇ ಅರ್ಥ ಮಾಡಿಸಲು ನೋಡಿದರೂ, ಅವರು ಮಾತ್ರ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ನೀಡಲೇ ಇಲ್ಲ...
ಪ್ರತೀಕ್ ಇನ್ನೇನೂ ಹೇಳಲು ಉಳಿದಿಲ್ಲ, ಎಂದು ಸೋತ ಮುಖದೊಂದಿಗೆ ಮರುದಿನ ಬೆಳಿಗ್ಗೆ ವಾಪಸ್ಸು ಶಿವಮೊಗ್ಗಕ್ಕೆ ಹೊರಡಲು ಸಿದ್ದನಾದ.. ಸರೋಜಳಿಗೆ ಮಗ ಏನಾದರೂ ಮಾಡಿಕೊಂಡು ಬಿಟ್ಟರೆ ಎಂದು ಗಾಬರಿ..ಅವಳ ಗಾಬರಿಯನ್ನು ಅರ್ಥ ಮಾಡಿಕೊಂಡ ಪ್ರತೀಕ್, "ಅಮ್ಮಾ, ನಿಂಗ ಯಾರೂ ಹೆದ್ರಡಿ, ನಾನು ಅವಳನ್ನು ಕಟ್ಟಿಕ್ಯಂಡು ಓಡಿ ಹೋಗಲ್ಲೆ, ನಿಂಗಳ ಒಪ್ಪಿಗೆ ತಗಂಡೆ ಮದ್ವೆ ಆಗ್ತೆ.. ಆದರೆ ಒಂದು ವಿಷಯ ನಿಂಗ ತೋರಿಸ ನಮ್ಮ ಜಾತಿ ಯಾವ ಹುಡುಗೀನೂ ನಾನು ಮದುವೆ ಆಗಲ್ಲೆ, ನಾನು ಮದುವೆ ಆದ್ರೆ, ನಾನು ಪ್ರೀತಿ ಮಾಡಿರ ರೀಟಾ ಜೊತೆನೆ.. ವಿಚಾರ ಮಾಡಿ, ನಿಂಗಳ ನಿರ್ಧಾರ ತಿಳಿಸಿ.." ಎಂದು ಹೇಳಿ ಶಿವಮೊಗ್ಗಕ್ಕೆ ಹೊರಟುಬಿಟ್ಟ..
ಹಾಗೇ ಕೆಲವು ತಿಂಗಳು ಕಳೆದುಹೋಯಿತು.. ಅಚ್ಯುತಾನಂದರಿಗೆ ಹಾಗೂ ಸರೋಜಮ್ಮನಿಗೆ ಮನಶ್ಯಾಂತಿಯೇ ಇಲ್ಲದಂತಾಗಿತ್ತು ಮಗನ ವಿಷಯದಿಂದ..
ಆದರೆ ಅವರ ಮನಸ್ಸು ಬದಲಾಯಿಸಿಕೊಳ್ಳುವಂತ ಘಟನೆ ಆಗ ನಡೆದಿತ್ತು..
"ಹೆಗಡ್ರೆ, ಹೆಗಡ್ರೆ, ಶಂಕರ ಹೆಗಡೇರ ಮಗಳು ನೇಣು ಹಾಕ್ಕೊಂಬಿಟ್ಲಂತೆ.." ಎಂದು ಗಾಬರಿಯಿಂದ ಎದುಸಿರುಬಿಡುತ್ತಾ, ಅವರ ಮನೆಯ ಆಳು ನಾರಾಯಣ ಅಚ್ಯುತಾನಂದರಿಗೆ ಸುದ್ದಿ ಮುಟ್ಟಿಸಿದ..
ಅಚ್ಯುತಾನಂದರಿಗೆ ನಿಂತ ಜಾಗವೇ ಕುಸಿದಂತಾಯಿತು.. ಅವರಿಗೆ ತಾವು ಅಂದು ನೋಡಿದ ದೃಶ್ಯ ಮತ್ತೆ ನೆನಪಾಯಿತು..
"ಎಂತಕ್ಕಾ..? ನೇಣು ಹಾಕ್ಕಂಬಂತಾದು ಎಂತಾಗಿತ್ತು ಅವಳಿಗೆ..?" ಎಂದು ಕೇಳಿದರು ಅಚ್ಯುತಾನಂದರು ಗಾಬರಿಯನ್ನು ಮುಚ್ಚಿಕೊಳ್ಳುತ್ತಾ..
"ಅಯ್ಯೋ ಆ ಪ್ರೇಮಮ್ಮ ಮನೆ ಆಳು ಹನುಮಂತು ಜೊತೆ ಕಳ್ಳ ಸಂಬಂಧ ಇಟ್ಟಂಡಿದ್ರಂತೆ, ಆ ಹನುಮಂತು ನಮ್ಮ ಪ್ರೇಮಮ್ಮನೋರಿಗೆ ಮೋಸ ಮಾಡಿ ಎಲ್ಲಿಗೋ ಓಡಿಹೋದ ಹಲ್ಕಟ್ಟು ನನ್ನಮಗ. ಅವನೇನೋ ಓಡಿ ಹೋದ, ಆದರೆ ಅಮ್ಮಾವ್ರಿಗೆ ಮೂರು ತಿಂಗಳು.. ಮರ್ಯಾದೆಗೆ ಹೆದರಿ ಹೀಗೆ ಮಾಡ್ಕಂಬಿಟ್ಟರು ಪ್ರೇಮಮ್ಮನೋರು.." ಎಂದು ದುಃಖದಲ್ಲಿ ಹೇಳಿದ. ಅದನ್ನು ಕೇಳಿದ ಅಚ್ಯುತಾನಂದರು, "ಅನೈತಿಕತೆ ಯಾವತ್ತೂ ಅನರ್ಥಕ್ಕೇ ದಾರಿ ಮಾಡಿಕೊಡುತ್ತದೆ.." ಎಂದು ಮೆಲ್ಲನೆ ಮನಸಲ್ಲಿ ಹೇಳಿಕೊಂಡರು ಬೇಸರದಿಂದ.. ಅವರಿಗೆ ತಮ್ಮ ಮಗನ ನೆನಪಾಯಿತು.. "ಇಷ್ಟು ದಿನ ಮಗ ನಮಗೆ ಮೋಸ ಮಾಡಿದ್ದಾನೆಂದುಕೊಂಡಿದ್ದೆ. ಹಾಗೆ ನೋಡಿದರೆ, ಪ್ರೇಮಾಳಿಗಿಂತ ನನ್ನ ಮಗ ಉತ್ತಮ. ಅವನು ತನ್ನ ಪ್ರೀತಿಯ ವಿಷಯವನ್ನು ಮುಚ್ಚಿಡದೇ, ಎಲ್ಲವನ್ನೂ ಹೇಳಿ, ಇನ್ನೂ ಮದುವೆ ಮಾಡಿಕೊಳ್ಳದೇ ನಮ್ಮ ಒಪ್ಪಿಗೆಗಾಗಿ ಕಾದು ಕುಳಿತಿದ್ದಾನೆ.. ಅದು ಸಂಸ್ಕಾರ, ಅದೇ ಧರ್ಮ.. ಈ ಜಾತಿ, ಸಂಪ್ರದಾಯಕ್ಕಿಂತ ಆತ ಹೇಳಿದ ಪ್ರೇಮ ಧರ್ಮವೇ ದೊಡ್ಡದು.. ಹೌದು, ಮತ್ತೊಂದು ಅನರ್ಥವಾಗುವ ಮುಂಚೆ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು.." ಎಂದು ಮನಸ್ಸಲ್ಲೇ ಅಂದುಕೊಂಡು, ಒಂದು ಗಟ್ಟಿ ನಿರ್ಧಾಕ್ಕೆ ಬಂದವರಂತೆ ಮರುದಿನವೇ ಶಿವಮೊಗ್ಗಕ್ಕೆ ಹೊರಟರು..
-----+++----------+++-------+++-----
"ಎರಡು ಮನಸ್ಸು ಒಂದಾಗತ್ತೆ ಅಂದ್ರೆ ಎರಡು ಧರ್ಮ ಒಂದಾಗಲೇ ಬೇಕು.." ಎಂಬ ಮಾತನ್ನು ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಹೇಳಿದ್ದನ್ನು ಕೇಳಿ ಶಭಾಸ್ ಅಂತ ಹೇಳಿ ಅಭಿನಂದಿಸುತ್ತೇವೆ.. ಆದರೆ ನಿಜ ಜೀವನದಲ್ಲಿ ಅದನ್ನು ಪಾಲಿಸುವುದಿಲ್ಲ.. ಇದೀಗ ನಾನು ಪಾಲಿಸಿದ್ದೇನೆ.. ನನಗೆ ಆತ್ಮ ಸಂತೃಪ್ತಿಯಿದೆ.. " ಎಂದು ಮಗನ ಮದುವೆಗೆ ಬಂದವರಲ್ಲಿ ಅಚ್ಯುತಾನಂದರು ಹೇಳುತ್ತಿದ್ದರು..
ಅಲ್ಲಿ ಮಂಟಪದಲ್ಲಿ, ರೀಟಾ ಮತ್ತು ಪ್ರತೀಕ್ ನಗುತ್ತಾ ನಿಂತಿದ್ದರು.. ಅವರ ಸುತ್ತ ಅವರ ಗೆಳೆಯ ಗೆಳತಿಯರು, ನಿಂತುಕೊಂಡು ಛೇಡಿಸುತ್ತಾ, ಅವರಿಗೆ ಶುಭಾಶಯ ತಿಳಿಸುತ್ತಿದ್ದರು..
ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಂತಿತ್ತು ಅವರಿಬ್ಬರ ಜೋಡಿ...
ಮುಕ್ತಾಯ
- ಮನು ವೈದ್ಯ.