ಬಾಲ್ಯದ ನೆನಪು
ಬಳಿ ಬಂದು
ಮಗುವಾಗಿಸಿದ ದಿನ
ಹರೆಯ ಪ್ರಾಯದ
ಗೋಡೆ ಮೇಲೆ
ಹಳೆಯ ನೆನಪಿನ
ದೀಪ ಹಚ್ಚಿದ ಕ್ಷಣ
ಮಾಸದ ನೆನಪು
ಎಂದಿಗೂ ತಂಪು
ಬಾಲ್ಯದ ಬದುಕು
ಬಾಳಿನ ಬೆಳಕು
ಬಾಲ್ಯ ಪ್ರತಿಯೊಬ್ಬರ ಜೀವನದಲ್ಲಿ ಬಂದೋಗುವ ಒಂದು ಅದ್ಭುತ ಕಾಲಘಟ್ಟ.ನಾವೀಗ ಅದನ್ನು ನೆನಪಿನ ಪರದೆಯನ್ನು ಸರಿಸಿ ನೋಡಲು ಮಾತ್ರವೇ ಸಾಧ್ಯ.ಅಂದಿನ ದಿನಗಳಲ್ಲಿ ಮಾಡಿದ ಚೇಷ್ಟೆ, ಆಡಿದ ಮಾತು,ಓಡಿದ ಜಾಗ ಎಲ್ಲವೂ ಕಣ್ಣ ಮುಂದೆ ಬಂದಾಗ ಒಮ್ಮೆ ನಾವು ಮತ್ತೆ ಮಗುವಾಗಿ ಬಿಡುತ್ತೇವೆ.ಹೌದು ಬಾಲ್ಯವೆಂದರೆ ಹಾಗೆ ಅಲ್ಲವೇ ಯಾವುದೇ ರೀತಿಯ ಗಂಡು ಹೆಣ್ಣೆಂಬ ತಾರತಮ್ಯವಾಗಲಿ,ಜಾತಿ ಮತಗಳೆಂಬ ಭೇದ ಭಾವವಾಗಲಿ ಕಾಣಿಸದು.ಅಲ್ಲಿ ಗೆಳೆತನವೆಂಬ ಬಿಗಿ ದಾರದಿಂದ ಬೆಸೆದು ಪ್ರೀತಿಯೆಂಬ ಹೂವಿನ ತೋಟದಲ್ಲಿ ಕೂಡಿ ಆಡುವುದೇ ಬಾಲ್ಯ ಜೀವನದ ಒಂದು ಸೊಬಗು.ಬಾಲ್ಯಾವಸ್ಥೆ ಮನುಜ ಜೀವನದ ಬಹುದೊಡ್ಡ ವರವೆಂದು ಹೇಳಿದರೂ ತಪ್ಪಾಗಲಾರದು.ಬಾಲ್ಯ,ಯವ್ವನ,ಹಾಗೂ ಮುಪ್ಪು ಈ ಮೂರು ಭೂಮಿಯ ಮೇಲಿನ ಪ್ರತೀಯೊಂದು ಜೀವಿಗೂ ಸಹಾ ಸಂಭವಿಸಬಹುದಾದಂತಹ ಕಾಲ ನಿಯಮ.ಕಾಲ ಕಳೆದಂತೆ ಇವುಗಳು ಸಹಾ ನಮಗರುವಿಲ್ಲದಂತೆ ಉರುಳಿ ಬಿಡುತ್ತವೆ.ಆದರೆ ನಾವು ಕಳೆದ ದಿನಗಳು ಅನುಭವಿಸಿದ ಕ್ಷಣಗಳು ಮಾತ್ರ ಸದಾ ನಮ್ಮೊಂದಿಗೆ ನೆನಪುಗಳಾಗಿ ಉಳಿದುಕೊಳ್ಳುತ್ತವೆ.ಉರುಳಿದ ದಿನಗಳನ್ನು ಅರಳಿದ ಹೂವುಗಳ ಹಾಗೆ ಮುಖದಲ್ಲಿ ನೆನಪಿನ ನಗು ತುಂಬಿಕೊಳ್ಳಲಷ್ಟೇ ಸಾಧ್ಯ. ಮೊನ್ನೆಯ ದಿನ ಬಾಲ್ಯ ಗೆಳೆಯ ಗೆಳತಿಯರೆಲ್ಲರೂ ಸೇರಿದ ದಿನ ಬಾಲ್ಯದ ನೆನಪುಗಳು ಮರುಕಳಿಸಿದಾಗ ನಾವೆಲ್ಲ ಆ ಒಂದು ಕ್ಷಣ ಮಕ್ಕಳಾಗಿ ಬಿಟ್ಟಿದ್ದೆವು.ಅಂದು ಕುಣಿದಾಡುತ್ತ ಓಡಾಡಿದ ಕಾರಿಡಾರ್, ನಾವು ಹಚ್ಚಿದ ತೆಂಗಿನ ಗಿಡ, ಕೂಡಿ ಆಡಿದ ಮೈದಾನ, ಕುಳಿತು ಪಾಠ ಕೇಳಿದ ತರಗತಿ,ಪ್ರತೀದಿನ ಹಾಕಿಕೊಂಡು ಬರುತ್ತಿದ್ದ ನೀಲಿ ಸಮವಸ್ತ್ರ, ಗುರುಗಳು ಬರೆಯುತ್ತಿದ್ದ ಬ್ಲಾಕ್ ಬೋರ್ಡ್, ಗೋಡೆಯ ಮೇಲೆ ನೇತು ಹಾಕಿದ್ದ ಚಿತ್ರ ಪಟಗಳು ಎಲ್ಲವೂ ಎಲ್ಲರನ್ನೂ ಒಮ್ಮೆ ನಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದ್ದವು.ಅದೆಷ್ಟೋ ವರ್ಷಗಳಿಂದ ಒಬ್ಬರನ್ನೊಬ್ಬರು ನೋಡಿರಲಿಲ್ಲ ಕೈ ಕುಲುಕಿ ಮಾತನಾಡಿರಲಿಲ್ಲ.ಆದರೆ ಆ ಒಂದು ದಿನ ನಾವೆಲ್ಲರೂ ಸೇರಿಕೊಳ್ಳಲು ಕಾರಣವಾಗಿತ್ತು.ನಮ್ಮ ಗುರುಗಳಾದ ಸುಮಿತ್ರಾ ಮಿಸ್ ಸತತವಾಗಿ ಸುಮಾರು
ಇಪ್ಪತ್ತೈದು ವರ್ಷಗಳಿಂದ ನಮ್ಮೂರಿನ ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಇದೀಗ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಬೇಕಿರುವುದು ಅನಿವಾರ್ಯ ಸನ್ನಿವೇಶವಾಗಿದ್ದರಿಂದ ನಾವೆಲ್ಲರೂ ಅವರಿಗೆ ಗುರುವಂದನಾ ಸಲ್ಲಿಸಲು ಸೇರಿದ್ದೆವು.ಕಾಲಿನ ಚಪ್ಪಲಿಗಳನ್ನು ಹೊರಗೆ ಬಿಟ್ಟು ಶಾಲೆಯೊಳಗೆ ಹೊಕ್ಕೊಡನೆ ಸುಮಿತ್ರಾ ಮಿಸ್ ಅವರನ್ನು ಮಾತನಾಡಿಸಿ ಅಂದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕಿಕೊಂಡು ಓಡಾಡಿದಂತೆ ಇಂದು ಸಹಾ ಎಲ್ಲರೂ ಮಿಸ್ ರವರ ಹಿಂದೆ ಮುಂದೆ ಓಡಾಡಿದೆವು.ನಂತರ ಪ್ರಭು ಸರ್,ಸಂಜೀವ್ ಸರ್,ಕವಿತಾ ಮಿಸ್ ರನ್ನು ಗೌರವಾದರದಿಂದ ಮಾತನಾಡಿಸಿದೆವು.ಪೂರ್ಣಿಮಕ್ಕ,ವಿಜಯಲಕ್ಷ್ಮಿ ಅಕ್ಕ,ಮೇಘನಕ್ಕ,ಗೀತಕ್ಕ,ಅಶ್ವಿನಿ ಅಕ್ಕ, ಭರತ್ ಅಣ್ಣ,ನಾಗರಾಜ್ ಅಣ್ಣ,ನಿತೀಶ್ ಅಣ್ಣ,ಮತ್ತೊಬ್ಬ ಭರತ್ ಅಣ್ಣ ರಾಕೇಶ್ ಅಣ್ಣ,ಮುರಳಿ,ಪ್ರೀತಿ,ಸಚಿನ್,ಕಾವ್ಯ,ಪವಿತ್ರಾ,
ವಸಂತ್,ಮೇಘರಾಜ್,ಅಮಿತ್,ಪ್ರಜ್ವಲ್,ಹಾಗೂ ನಾನು ಎಲ್ಲರೂ ಅಲ್ಲಿ ಹಾಜರಿದ್ದೆವು.ಕಾರಿಡಾರ್ ನಲ್ಲಿಯೇ ಎಲ್ಲರೂ ಬೆಂಚಿನಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಹರಟೆ ಹೊಡೆದೆವು.ವಾಸ್ತವ ಜೀವನದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದರ ಕೆಲಸ ಕಾರ್ಯ ಓದಿನ ಕುರಿತು ಒಬ್ಬರನ್ನೊಬ್ಬರು ಕೇಳಿ ತಿಳಿದುಕೊಳ್ಳುವ ಮೂಲಕ ಕಾಲ ಕಳೆದವು.ಆದಾದನಂತರ ಗುರುವಂದನಾ ಕಾರ್ಯಕ್ರಮ ತಯಾರಿ ತರಗತಿ ಕೋಣೆಯಲ್ಲಿ ನಡೆಯಿತು.ದೇವತೆಗಳಂತೆ ನೆರೆದಿದ್ದ ಮುದ್ದು ಮಕ್ಕಳ ಎದುರಿನಲ್ಲಿ ಸುಮಿತ್ರಾ ಮಿಸ್ ಗುರು ವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ನಂತರ ಸಂಜೀವ್ ಸರ್ ನಿರೂಪಣೆ ವಹಿಸಿಕೊಂಡು ಎಲ್ಲರನ್ನೂ ಸ್ವಾಗತಿಸಿದರು.ತದನಂತರ ಹಳೆಯ ವಿದ್ಯಾರ್ಥಿಗಳಾದ ನಾಗರಾಜ್ ಹಾಗೂ ನಿತೀಶ್ ಅಣ್ಣ ಪ್ರಾರ್ಥನಾ ಗೀತೆ ಹಾಡುವ ಮೂಲಕ ಕಾರ್ಯಕ್ರಮ ಮುನ್ನಡೆಸಿದರು.
ಹಳೆಯ ವಿದ್ಯಾರ್ಥಿಗಳಿಂದ ಪರಿಚಯ ಹಾಗೂ ಅನಿಸಿಕೆ ಹಂಚಿಕೊಳ್ಳುವುದಾಗಿ ಹೇಳಿದಾಗ ಮೊದಲು ಸಚಿನ್ ನಿಂದ ಪ್ರಾರಂಭಗೊಂಡಿತು.ತನ್ನ ಹೆಸರು,ಮಾಡಿದ ವ್ಯಾಸಾಂಗ,ಮಾಡುತ್ತಿರುವ ಕೆಲಸದ ಬಗ್ಗೆ ಪರಿಚಯಿಸಿಕೊಂಡು ಕೆಲವು ಅತ್ಯುತ್ತಮ ಹಿತನುಡಿಗಳಿಂದ ಭಾಷಣವನ್ನು ಕೊನೆಗಾಣಿಸಿದ.ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಕೆಲಸದ ಬಗ್ಗೆ ಯಾವುದೇ ಮುಜುಗರವಿಲ್ಲದೆಯೇ ಮುಕ್ತವಾಗಿ ವ್ಯಕ್ತಪಡಿಸಿದರು. ಬಬ್ಬೊಬ್ಬರು ಒಂದೊಂದರಲ್ಲಿ ಆಸಕ್ತಿ ಹೊಂದಿದವರಾಗಿದ್ದು ಹೆಮ್ಮೆಯಿಂದ ಹೇಳಿಕೊಂಡರು.ಒಬ್ಬರು ಕೃಷಿಯಲ್ಲಿ,ಮತ್ತೊಬ್ಬರು ಕಂಪನಿಯಲ್ಲಿ,ಮತ್ತೆ ಕೆಲವರು ಕೆಲಸದ ಹುಡುಕಾಟದಲ್ಲಿ,ಮಗದೊಬ್ಬರು ಓದು,ಮನೆ ಹೀಗೆ ತಮ್ಮ ತಮ್ಮ ಅನುಭವದ ಅನಿಸಿಕೆಗಳೊಂದಿಗೆ ಸುಮಿತ್ರಾ ಮಿಸ್ ರವರ ಕುರಿತು ಗೌರವಾಭಿಮಾನ ಹಾಗೂ ಪ್ರೀತಿ ಪೂರ್ವಕವಾದ ಹಿತವಚನಗಳನ್ನಾಡಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ಮೂಡಿಸಿದರು.ಭವಿಷ್ಯದ ಬೆಳಕನ್ನು ಕಾಣ ಹೊರಟಿರುವ ಮುಗ್ಧ ಮಕ್ಕಳಿಗೆ ನೀವು ನಿಮ್ಮ ನಿಮ್ಮ ಕನಸನ್ನು ಬೆನತ್ತಿ ಹೋಗಿ ಎಂಬುದಾಗಿಯೂ ಹಾಗೂ ಹೆಚ್ಚಿನ ಓದಿನಿಂದಲೇ ಎಲ್ಲವೂ ಅಲ್ಲ ಎಂಬ ಸಾಧನಾ ಮಂತ್ರವನ್ನು ತಿಳಿಯ ಪಡಿಸಿದರು.ನಮ್ಮೆಲ್ಲರ ಮಾತಿನ ನಂತರ ಸುಮಿತ್ರಾ ಮಿಸ್ ತಮ್ಮ ಜೀವನಾನುಭವ, ಬದುಕು, ಭರವಸೆ,ನಮ್ಮ ಬಾಲ್ಯದ ದಿನದ ಮೆಲುಕು, ಸಾಧನಾ ಮಾರ್ಗದ ಕೆಲ ಹಿತನುಡಿ,
ಹಳೆಯ ವಿದ್ಯಾರ್ಥಿಗಳ ವ್ಯಕ್ತಿತ್ವ ಹಾಗೂ ಆಸಕ್ತಿದಾಯಕ ಕ್ಷೇತ್ರದ ಕುರಿತು ಒಂದಷ್ಟು ವಿಚಾರಗಳನ್ನು ಹರುಷದಿಂದ ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಶಾಂತವಾಗಿ ಕುಳಿತಿದ್ದ ಮಕ್ಕಳಿಗೆಲ್ಲ ಕೆಲವರು ಲೇಖನಿ ಹಾಗೂ ಸಿಹಿ ವಿತರಣೆ ಮಾಡಿದರು.ಇಳಿ ಸಂಜೆಯ ಸವಿ ಸಮಯ ಶಾಲೆಯ ಹಿಂಬದಿಯಲ್ಲಿರುವ ಮೈದಾನದಲ್ಲಿ ಮಿಸ್ ನಡುವೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಹರುಷಗೊಂಡೆವು.ಮತ್ತೆ ಆ ಬಾಲ್ಯದ ನೆನಪಿನಂಗಳದಲ್ಲಿ ಮಕ್ಕಳಾಗಿ ವಿಹರಿಸಿದೆವು.ಈ ರೀತಿಯಲ್ಲಿ ಅಂದು ಕುಳಿತಿದ್ದ ಬೆಂಚಿನಲ್ಲಿ ಇಂದು ಕುಳಿತು,ಅಂದು ಓಡಾಡಿದ ಕಾರಿಡಾರ್ ನಲ್ಲಿ ಇಂದು ಓಡಾಡಿ,ಅಂದು ಬೆರೆತಿದ್ದ ಸ್ನೇಹಿತರೊಂದಿಗೆ ಇಂದು ಬೆರೆತು ಮತ್ತೆ ಬಾಲ್ಯದ ಸುಂದರ ದಿನಗಳನ್ನು ಕ್ಷಣಗಳನ್ನು ಬರಮಾಡಿಕೊಂಡು ಬಹಳ ಸಂತೋಷದಿಂದ ಸಂಭ್ರಮಿಸಿದೆವು.ಬಿದ್ದು ಎದ್ದಂತಹ ನೆನಪು, ಹಾಡಿ ಕುಣಿದಂತಹ ನೆನಪು,
ನೆನಪು,ಆ ದಿನ ನಾವುಗಳೆಲ್ಲರೂ ಮಾಡಿದಂತಹ ತರಲೆ ತುಂಟಾಟಗಳು ಹಾಗೆ ಕಣ್ಣೆದುರಿಗೆ ಬಂದು ಬಿಡುತ್ತಿದ್ದವು.ನಮ್ಮ ಶಾಲೆ,ನಮ್ಮ ಗುರು,ನಮ್ಮ ಬಾಲ್ಯ ಜೀವನ ಪರ್ಯಂತ ನೆನಪುಳಿಯುವಂತಹ ಒಂದು ಅದ್ಭುತ ಬದುಕು.ಮಾತ್ರವಲ್ಲದೆ ನಮ್ಮ ಮಿಸ್ ಸ್ಥಾನವನ್ನು ಇದುವರೆಗೂ ಯಾರು ತುಂಬಿಲ್ಲ ತುಂಬಲಾಗುವುದೂ ಇಲ್ಲ.ಹೀಗೆ ಪ್ರತೀ ಹೆಜ್ಜೆಯಲ್ಲೂ ನಮ್ಮನ್ನು ತಿದ್ದಿ ತೀಡಿ ಮುಂದೆ ತಂದು ಬೆಳೆಸಿದವರು ನಮ್ಮ ಸುಮಿತ್ರಾ ಮಿಸ್.ಅವರ ಮೂಲಕ ಅದೆಷ್ಟೋ ಮಕ್ಕಳು ಜ್ಞಾನ ಸಾಗರವನ್ನು ಸೇರುವಂತಾಯಿತು.ಆಸಕ್ತಿದಾಯಕ ಕ್ಷೇತ್ರದಲ್ಲಿ ಸ್ಪೂರ್ತಿ ಪಡೆಯುವಂತಾಯಿತು.ಅವರು ಅಂದು ಬಿತ್ತಿದ ಅಕ್ಷರ ಬೀಜ ಇಂದು ಹೆಮ್ಮರವಾಗಿ ಬೆಳೆದು ನಿಲ್ಲುವಂತಾಯಿತು.ಸುಮಿತ್ರಾ ಮಿಸ್ ಅನಿವಾರ್ಯವಾಗಿ ವೃತ್ತಿ ಜೀವನದಿಂದ ದೂರ ಸರಿಯುವಂತಾಗಿರಬಹುದು ಆದರೆ ನಮ್ಮಂತಹ ಲಕ್ಷಾಂತರ ವಿದ್ಯಾರ್ಥಿಗಳ ಹೃದಯಂತದಾಳಲ್ಲಿ ಸದಾ ಶಾಶ್ವತವಾಗಿ ನೆಚ್ಚಿನ ಗುರುವಾಗಿಯೇ ನೆಲೆಸಿರುತ್ತಾರೆ.ಅವರ ಸಹಯೋಗದಲ್ಲಿ ನಮ್ಮ ವಿದ್ಯಾಭ್ಯಾಸ ನಡೆದಿರುವುದು ಬಾಳಿನ ಮನೆಗೆ ಅಡಿಪಾಯ ಹಾಕಿದಂತಾಗಿದೆ.ಭವಿಷ್ಯದ ಬಾಗಿಲಿಗೆ ಹೊನ್ನ ಕಳಶವಿಟ್ಟಂತಾಗಿದೆ.ಅವರಲ್ಲಿ ಶಿಕ್ಷಣಭ್ಯಾಸ ಮಾಡಿದ ನಾವುಗಳೇ ಅದೃಷ್ಟಶಾಲಿಗಳು ಎಂದು ಆತ್ಮಸಾಕ್ಷಿಯಾಗಿ ಹೇಳಿಕೊಳ್ಳುತ್ತೇವೆ.ಹೀಗೆ ಗುರುವಂದನಾ ಕಾರ್ಯಕ್ರಮದ ದಿನ ಗೆಳೆತನ,ನೆನಪು,ಅನಿಸಿಕೆ, ಆನಂದದ ಮಳೆಗರೆದು ನಮ್ಮೆಲ್ಲರ ಮನ ತಂಪಾಯಿತು.....
- ಸುನಂಚಿ, ಉರಗನಹಳ್ಳಿ.
ದ್ವಿತೀಯ ಎಂ.ಎ...
ಜ್ಞಾನ ಸಹ್ಯಾದ್ರಿ ಶಂಕರಘಟ್ಟ
ಶಿವಮೊಗ್ಗ...