ಬುಧವಾರ, ಆಗಸ್ಟ್ 17, 2022

ನೆನಪಿನ ದೋಣಿ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು.

ಬಣ್ಣ ಬಣ್ಣದ ಕಾಗದದ ದೋಣಿಯ ಒನಪು
 ಮಾಸಿಲ್ಲವಿನ್ನೂ ಬಾಲ್ಯದ ಆ ಸುಂದರ ನೆನಪು 

ಚಿಣ್ಣರಿಗೆ ಸಂಭ್ರಮದ ದಿನವದು ಮಳೆಗಾಲವು
 ಕಾಗದದ ದೋಣಿಯಿಂದ ತುಂಬುತ್ತಿದ್ದ ಹಳ್ಳವು

 ತಾಮುಂದು ನಾ ಮುಂದು ಎಂದುಲಿಯುತ್ತಿದ್ದ ದಿನಗಳು
 ಮಕ್ಕಳ ಕೈಯಲ್ಲಿ ಅರಳುತ್ತಿದ್ದವು ಕಾಗದದ ದೋಣಿಗಳು

 ಚಂದದ ದೋಣಿಗೆ ಅಂದದಿ ಹೆಸರು ಬರೆದು
 ಹರಿವ ನೀರಿನಲಿ ತೇಲಿ ಬಿಡುತ್ತಿದ್ದ ಸುಂದರ ಕ್ಷಣವದು

 ಚಿತ್ತಾರ ಗೊಂಡ ದೋಣಿಗಳು ಬೀಗುತ್ತಿದ್ದವು ನೀರಿನಲಿ
 ತಾರೆಯರು ಕದ್ದೊಯ್ದರೆ ಎಂಬ ಭೀತಿ ಮನದಲಿ

 ಬಾಲ್ಯದ ಆಟಗಳು ಸ್ನೇಹ ಸೇತುವೆಯೇ ಆಗಿದ್ದವಂದು
 ಯಂತ್ರಗಳೊಂದಿಗೆ ಉರುಳುವ ಮಕ್ಕಳ ಬಾಲ್ಯವಿಂದು

 ಮಧುರ ಸ್ನೇಹದ ನೆನಪ ಬುತ್ತಿಯ ಬಿಚ್ಚೋಣ
  ಕಳೆದ ಸುಂದರ ಕ್ಷಣಗಳ ಮತ್ತೆ ಮೆಲುಕು ಹಾಕೋಣ

 ಸವಿನೆನಪ ದೋಣಿಯಲಿ ಸಾಗಲಿ ಎಲ್ಲರ ಮನ 
ಸುಂದರ ನಿಷ್ಕಲ್ಮಶ ಸ್ನೇಹದ ಕಣಜವಾಗಲಿ ಜೀವನ

- ಮಧುಮಾಲತಿ ರುದ್ರೇಶ್ ಬೇಲೂರು.



ಸಮಾನತೆ ಸಂಹಾರ (ಸಣ್ಣ ಕತೆ) - ಮನು ವೈದ್ಯ, ಶಿರಸಿ.

ಬೆಳಿಗ್ಗೆಯೇ ಬೇಗನೆ ಎದ್ದು, ತನ್ನ ನೆರೆತ ಕೂದಲುಗಳಿಗೆ ಕಪ್ಪು ಬಣ್ಣ ಬಳಿದುಕೊಂಡು,  ಸ್ನಾನ ಮಾಡಿ ಸ್ಲೀವ್ ಲೆಸ್ ಬ್ಲೌಸ್, ಪಾರದರ್ಶಕ ಸೀರೆ ಉಟ್ಟು, ಮುಖಕ್ಕೆ ಅರ್ಧ ಇಂಚು ಮೇಕಪ್ ಮಾಡಿಕೊಂಡು, ಪುನುಗಿನ ಬೆಕ್ಕಿನಂತೆ ಘಮಿಸುತ್ತಾ, ವಿಶ್ವ ಮಹಿಳಾ ದಿನಾಚರಣೆಗೆ ಹೋಗಲು ತಯಾರಾಗಿ ನಿಂತಿದ್ದಳು ೫೦ ವರ್ಷದ ಜಲಜಾಕ್ಷಿ.. ಅವಳೀಗ ಮಹಿಳಾ ಸಂಘದ ಅಧ್ಯಕ್ಷೆ.. ಒಮ್ಮೆ ಸಮಯ ನೋಡಿಕೊಂಡಳು, ಗಂಟೆ ಹತ್ತಾಗುತ್ತಿದೆ.. ಆಗಲೇ ಸಮಯವಾಯಿತು, ಬೇಗ ತಿಂಡಿ ತಿಂದು ತೆರಳಬೇಕು ಎಂದು ಗಡಬಡಿಸಿ, ಕೆಲಸದವಳನ್ನು ಕೂಗಿದಳು.. "ಲೇ ಕಮಲಿ ಎಲ್ಲಿ ಹಾಳಾಗಿ ಹೋಗಿದಿಯಾ, ಬೇಗ ತಿಂಡಿ ತಗೊಂಡು ಬಾ, ನನಗೆ ಪಾರ್ಟಿಗೆ ಹೊತ್ತಾಗುತ್ತಿದೆ..." ಎಂದಳು ಕೋಪದಲಿ ಉರಿಯುತ್ತಾ.. 
"ಬಂದೇ ಅಮ್ಮಾವ್ರೇ" ಅನ್ನುತ್ತಾ ಕಮಲಿ.ತಿಂಡಿಯನ್ನು ತಂದು ಡೈನಿಂಗ್ ಟೇಬಲ್ ಮೇಲೆ ಇಟ್ಟಳು.. ಅವಳನ್ನೊಮ್ಮೆ ಕೋಪದ ಕಣ್ಣಲ್ಲಿ ಗುರಾಯಿಸುತ್ತಾ ಜಲಜಾಕ್ಷಿ ತಿಂಡಿ ತಿನ್ನತೊಡಗಿದಳು.. "ರೇಸ್ಕಲ್ ಇಷ್ಟೊತ್ತಿಗೆ ತಿಂಡಿ ತಂದು ಇಟ್ಟಿರಬೇಕೆಂದು ಗೊತ್ತಿಲ್ವಾ ನಿನಗೆ" ಇದೀಗ ಅಮ್ಮಾವ್ರ ಗರ್ಜನೆ ಜೋರಾಗೇ ಇತ್ತು.. ಕಮಲಿ ಅಮ್ಮಾವ್ರ ಕೆಂಗಣ್ಣು ನೋಡಲಾಗದೇ ಹಾಗೇ ತಲೆ ತಗ್ಗಿಸಿ ನಿಂತಿದ್ದಳು.. ಒಂದೆರಡು ನಿಮಿಷಗಳ ತರುವಾಯ ಹಾಗೇ ತಲೆ ತಗ್ಗಿಸಿಕೊಂಡು, ಹೆದರುತ್ತಲೇ ತನ್ನ ಮನವಿಯನ್ನು ಇಟ್ಟಳು ಅಮ್ಮಾವ್ರ ಮುಂದೆ, "ಅಮ್ಮಾವ್ರೇ ಇವತ್ತು ಮಹಿಳಾ ದಿನಾಚರಣೆ ಅಲ್ವಾ, ನಮ್ಮ ಸಂಘದವರು ಚಿಕ್ಕದಾಗಿ ಒಂದು ಕಾರ್ಯಕ್ರಮ ಮಡಿಕ್ಕಂಡವ್ರೆ, ನನ್ನನ್ನೂ ಬನ್ನಿ.ಅಂತ ಹೇಳವ್ರೆ, ನೀವು ಒಪ್ಪಿಕಂಡ್ರೆ, ಇವತ್ತು ಕೆಲಸಕ್ಕೆ ರಜಾ ಮಾಡಿ ಹೋಗಿ ಬತ್ತೀನಿ.." ಎಂದು ತೊದಲುತ್ತಲೇ ನುಡಿದಳು..
ಇದೀಗ ಅಮ್ಮಾವ್ರ ಪಿತ್ತ ನೆತ್ತಿಗೇರಿತ್ತು.."ಏನು ನಿನ್ನಂತ ಕೆಲಸಗಾರರಿಗೆ ಮಹಿಳಾ ದಿನಾಚರಣೆಯಾ, ಅದು ನಮ್ಮಂತ ಶ್ರೀಮಂತರಿಗೆ ಮಾತ್ರ, ನಿನ್ನಂತ ಹೆಣ್ಣು ಮಕ್ಕಳು ಹೇಗಿರಬೇಕೋ ಹಾಗಿದ್ದರೆ ಚೆಂದ..ಅದೆಲ್ಲಾ ಏನೂ ಬೇಕಾಗಿಲ್ಲ, ನೀನು ಹೋದರೆ ಇಲ್ಲಿ ಕೆಲಸ ಮಾಡುವವರು ಯಾರು..? ಬೇಡ, ಇಲ್ಲೆ ಬಿದ್ದಿರು, ಬೀದಿ ನಾಯಿ ಉಪ್ಪರಿಗೆಯ ಕನಸು ಕಾಣಬಾರದು.." ಎಂದು ಅಹಂಕಾರದ ಗತ್ತಿನಲಿ ಹೇಳಿ, ಅಲ್ಲಿಂದ ಎದ್ದು ನಡೆದುಬಿಟ್ಟಳು ಜಲಜಾಕ್ಷಿ.. 
ಕಮಲಿ ಏನೂ ಹೇಳಲು ತೋಚದೆ ಬೇಸರದಲಿ ತಲೆ ತಗ್ಗಿಸಿ ನಿಂತಿದ್ದಳು.. ಅದೇ ಸಮಯಕ್ಕೆ ಜಲಜಾಕ್ಷಿಯ ಒಬ್ಬಳೇ ಮಗಳು ಛಾಯಾ ಫ್ರೆಂಡ್ಸ ಜೊತೆ ಪಬ್ ಗೆ ಹೋಗಲು ತಯಾರಾಗುತ್ತಿದ್ದಳು..

ವೇದಿಕೆ ಬಹಳ ಸುಂದರವಾಗಿ ಅಲಂಕೃತಗೊಂಡಿತ್ತು.. ಜಲಜಾಕ್ಷಿ ಗತ್ತಿನಲೇ ವೇದಿಕೆ ಹತ್ತಿ, ಅಧ್ಯಕ್ಷ ಸ್ಥಾನದಲಿ ಕುಳಿತಳು ಅಹಂಕಾರದಲಿ.. ಆ ಹಾಲ್ ಮಹಿಳೆಯರಿಂದ ಕಿಕ್ಕಿರಿದು ತುಂಬಿತ್ತು.. ಕಾರ್ಯಕ್ರಮ ಶುರುವಾಯಿತು.. ಬಂದ ಅತಿಥಿಗಳು ಮಹಿಳೆಯರಿಗೆ ಇನ್ನೂ ಸಂಪೂರ್ಣ ಸಮಾನತೆ ಸಿಕ್ಕಿಲ್ಲ, ಸಿಗುವವರೆಗೂ ನಮ್ಮ ಹೋರಾಟ ನಡೆಯುತ್ತಿರಬೇಕು, ಪುರುಷರ ಹುಟ್ಟಡಗಿಸಬೇಕು, ಎಂದೆಲ್ಲಾ ಭೀಕರ ಭಾಷಣ ಮಾಡಿ, ಚಪ್ಪಾಳೆ ಗಿಟ್ಟಿಸಿ ಬಾಯಿ ಒರೆಸಿಕೊಂಡು ಕೂತರು.. ಕೊನೆಯಲ್ಲಿ ಅಧ್ಯಕ್ಷರ ಭಾಷಣ.. ವೃದ್ಧಾಪ್ಯದ ಅಂಚಿನ ಯುವತಿ ಜಲಜಾಕ್ಷಿ ಮೈಕ್ ಮುಂದೆ ಬಂದು ನಿಂತು ಒಮ್ಮೆ ಕೆಮ್ಮಿ ತನ್ನ ಅಧ್ಯಕ್ಷೀಯ ಮಾತನ್ನು ಶುರುಮಾಡಿದಳು..
"ಪುರುಷರ ಹುಟ್ಟಡಗಿಸುವ ಕೆಲಸ ಒಂದೆಡೆಯಾದರೆ, ನಾವು ಮಹಿಳೆಯರು ಇನ್ನೊಂದು ಕೆಲಸ ಮುಖ್ಯವಾಗಿ ಮಾಡಲೇಬೇಕು. ಅದೇನೆಂದರೆ ಮಹಿಳೆಯರು ಮಹಿಳೆಯರಲ್ಲಿ ಸಮಾನತೆ ಕಾಣಬೇಕು, ಅಂದರೆ ಕೆಲಸದ ಮಹಿಳೆಯರಿಂದ ಹಿಡಿದು ಶ್ರೀಮಂತ ಮಹಿಳೆಯರವರೆಗೂ ಸಮಾನವಾಗಿ ಕಾಣಬೇಕು ನಾವು.. ಈಗಾಗಲೇ ನಾವು ಪುರುಷರ ಸಮಾನಕ್ಕೆ  ಸರಿಸುಮಾರು ಬಂದಾಗಿದೆ.. ಇನ್ನು ನಮಗಿರುವ ಕೆಲಸವೆಂದರೆ ಅವರನ್ನು ಗುಲಾಮರನ್ನಾಗಿ ಮಾಡಿ, ಮನೆಯ ಆಡಳಿತವನ್ನು ನಾವೇ ನೋಡಿಕೊಳ್ಳುವುದು.." ಭಾಷಣ ಮುಗಿಯಿತು.. ಕರತಾಡನ ಕಿವಿಗಡಕಿಚ್ಚುವಂತೆ ಮಾರ್ಧನಿಸಿತು.. 

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅಲ್ಲಿ ಬಂದವರಿಗೆ ಪಾರ್ಟಿ ಇತ್ತು.. ಮಹಿಳಾ ಮಂಡಲದ ಎಲ್ಲ ಮಹಿಳೆಯರೂ ಪಾರ್ಟಿಯ ಮೋಜು ಮಸ್ತಿಯಲ್ಲಿ ಬೆರೆಯುತ್ತಾ ಖುಷಿಯ ಲೋಕದಲ್ಲಿ ತೇಲಾಡುತ್ತಿದ್ದರು.. ಮಹಿಳಾ ಸಂಘದ ಕಾರ್ಯದರ್ಶಿ ಮೀನಾಕ್ಷಿ, ಜಲಜಾಕ್ಷಿಯ ಹತ್ತಿರ ಅಲ್ಲೇ.ಪಿಸುಗುಟ್ಟಿದಳು.."ನಮ್ಮ ಪಕ್ಕದ ಮನೆಯ ಪದ್ಮಿನಿ.ಇದ್ದಾಳಲ್ಲ, ಅವಳಿಗೇನೋ ಮಂಕು, ಅಷ್ಟೊಂದು ಓದಿಕೊಂಡರೂ, ಪತಿಯೇ ಪರದೈವ ಅನ್ನುತ್ತಾಳೆ, ಅವಳೇ ಅಡಿಗೆ ಮಾಡಿ ಬಡಿಸುತ್ತಾಳೆ.. ಇಂತಹ ಯಾವ ಪಾರ್ಟಿಗೂ ತಾಗಿಸಿಕೊಳ್ಳುವುದೇ ಇಲ್ಲ.. ಗಂಡನ ಮಾತೇ ವೇದವಾಕ್ಯ ಎನ್ನುತ್ತಾಳೆ, ಅವಳಿಗೇನು ಗೊತ್ತು ಸಮಾನತೆಯ ಅರ್ಥ, ಮೂರ್ಖ ಮುಂಡೇದು.." ಎನ್ನುತ್ತಾ ನಕ್ಕಳು.. ಜಲಜಾಕ್ಷಿಯೂ ಅವಳ ಜೊತೆ ಸೇರಿ ಹೂ ಗುಟ್ಟುತ್ತಾ ನಕ್ಕಳು.. ಅಲ್ಲಿ ಸೇರಿದ್ದ ಎಲ್ಲ ಮಹಿಳೆಯರೂ, ಅಲ್ಲಿ ಬರದೇ ಇದ್ದ ಮತ್ತೊಬ್ಬ ಮಹಿಳೆಯರ ಬಗ್ಗೆ ಅಸೂಯೆಯಿಂದ ಮಾತಾಡುವವರೇ.. 

ಸಮಾನತೆ ಎಂಬ ಪದದ ನಿಜವಾದ ಅರ್ಥ ಆ ಪಾರ್ಟಿಯ ಮಧ್ಯದಲ್ಲಿ ಕರಗಿ, ದೂರದಲ್ಲೆಲ್ಲೋ ಅಣಕದ ನಗೆ ಬೀರುತ್ತಾ ನಿಂತಿತ್ತು....
- ಮನು ವೈದ್ಯ, ಶಿರಸಿ.

ಬೇಡ ಸಂಶಯದ ಭೂತ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ತುಂಬಿದೆ ಕಣ ಕಣದಲೂ ನಿನ್ನದೆ ಬಿಂಬ
ಹರಿದಾಡುತಿದೆ ಕ್ಷಣ ಕ್ಷಣ ನಿನ್ನ ನಾಮವ ಹೇಳಿಕೊಂಡು

ಚೆಲುವೆ ಪ್ರತಿ ಕ್ಷಣ ಕ್ಷಣವೂ ನಿನ್ನದೇ ಧ್ಯಾನ
ಮನದೊಡತಿ ಆಗಿಹೇ ನೀ ನನ್ನ ಪ್ರಾಣ

ನೀ ಬೆನ್ನೇರಿಸಿಕೊಳ್ಳಬೇಡ ಸಂಶಯದ ಭೂತ
ಅದರಿಂದ ಲಾಭವಿಲ್ಲ ಆಗುವುದು ಹೆಚ್ಚು ಅನಾಹುತ

ದಾರಿ ದೂರವಿರಬಹುದು ಮನವೆಂದಿಗೂ ಹತ್ತಿರ
ಕೇಳೆ ಜಾಣೆ ನೀನಿಲ್ಲದೆ ನಾ ಹೇಗಿರಲಿ ಕೊಡು ನೀ ಉತ್ತರ

ನೀನೆ ನಾನು ನಾನೇ ನೀನು ತಿಳಿ ನಮ್ಮಿಬ್ಬರ ಉಸಿರೇ ಒಂದು
ಪ್ರೇಮಾಮೃತದ ಹೊತ್ತಿಗೆಯಲಿ ಬರೆಯೋಣ ನಮ್ಮಿಬ್ಬರ ಹೆಸರು ಚೆಂದ

- ಶಿವಾ ಮದಭಾಂವಿ, ಗೋಕಾಕ.
8951894526

ಸಂತಸದಿ ಸಂಭ್ರಮಿಸುವ ಸ್ವಾತಂತ್ರ್ಯ ಅಮೃತ ಮಹೋತ್ಸವ (ಕವಿತೆ) - ಶಾಂತಾರಾಮ ಶಿರಸಿ.

ಯಾರಿಗಾಗಿ-ಯಾವುದಕ್ಕಾಗಿ, 
ಎಲ್ಲವೂ ತಾಯ್ನೆಲ-ದೇಶದ ಋಣವ ತೀರಿಸುವ ಸಲುವಾಗಿ, 
ಪರರ ದಾಸ್ಯದಿಂದ ದೇಶವ ಸ್ವತಂತ್ರವಾಗಿಸಲು-ಸ್ವತಂತ್ರರಾಗಿ ಬದುಕುವುದಕ್ಕಾಗಿ,
ನಾವು ಇಂದು ಬದುಕಿ ಬಾಳುತ್ತಿದ್ದೇವೆಂದರೆ ನಿಮ್ಮ ತ್ಯಾಗ-ಬಲಿದಾನಗಳಿಂದಾಗಿ...

ನಲವತ್ತೇಳರಲ್ಲಿ ಸಿಕ್ಕ ಸ್ವಾತಂತ್ರ್ಯ,
ಅಲ್ಲಿಂದ ಎಲ್ಲವ ಸಹಿಸಿ ಬಹುದೂರ ಸಾಗಿಬಂದೆಯಾ,
ಕಳೆದಾಗಿದೆ ಸ್ವಾತಂತ್ರ್ಯ ಸಿಕ್ಕು ಎಪ್ಪತೈದು ವರುಷ, 
ಎಪ್ಪತೈದರ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಹರುಷ...

ಸ್ವಾತಂತ್ಯ ಸಿಕ್ಕು ಸಂಭ್ರಮಿಸುವ  ದೇಶದ ಜನತೆ ಎಲ್ಲೆಡೆ,
ವಿವಿಧತೆಯಲ್ಲಿ ಏಕತೆ ಸಾಧಿಸಿ ರಾಷ್ಟ್ರ ತಿರಂಗಾ ಮುಗಿಲೆತ್ತರ ಹಾರಿಸಿ ಸಂಭ್ರಮಿಸುತ್ತಿರುವ ನಡೆ, 
ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂಭ್ರಮಿಸುವುದು ಪ್ರತಿ ಪ್ರಜೆಯ ಹಕ್ಕಿದು,
ಕೊನೆಗೆ ಸ್ವತಂತ್ರರು ನಾವು ಸ್ವತಂತ್ರರು ಬರಿಯ ಕೂಗಾಗಿಹುದು,
ಎಲ್ಲಿಗೆ-ಯಾರಿಗೆ-ಹೇಗೆ ಎಂದು ಪರಿಸ್ಥಿತಿಯ ತೋರಿದರೆ ಯಾರಿಂದಲೂ ಉತ್ತರ ಸಿಗದು..

ನಮ್ಮ ರಾಷ್ರ್ಟ-
ತಾಯಿ ಭಾರತಮಾತೆಗೆ ಕರ ಜೋಡಿಸಿ ನಮಸ್ಕರಿಸುವ,
ತಾಯ್ನೆಲ-ಜಲ, ಯೋಧರು-ರೈತರು,
ಪ್ರತಿಯೊಬ್ಬರಿಗೂ ಗೌರವ ಸಲ್ಲಿಸುವ...

- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ... 
7676106273


ನಾನೂ ಸ್ವಾವಲಂಬಿ (ಕವಿತೆ) - ಮಾನಿನಿ.

"ಬಾಲ್ಯದಲ್ಲಿ ತಂದೆ
ಪ್ರಾಯದಲ್ಲಿ ಗಂಡ
ವೃಧ್ದಾಪ್ಯದಲ್ಲಿ ಮಗನ
ಆಶ್ರಯವಿಲ್ಲದೆ ಹೆಣ್ಣೊಬ್ಬಳು
ಬದುಕಲಾರಳು
ಅವಳೆಂದಿಗೂ
ಗಂಡಸಿನ ಆಶ್ರಯ ಬಯಸುವವಳು"
ಎನ್ನುವ ಮಾತು ಇಂದಿಗೆ ಅನ್ವಯವಾಗದು 
ಅದನ್ನು ಹಿಂದೆ ತೆಗಿ

ನಾನು ಪುರುಷಾವಲಂಬಿಯಲ್ಲ
ಸ್ವಾವಲಂಬಿ
ಅಸ್ತಿತ್ವವಿರುವವಳು

ಕಾಲಿಗೆ ಸುತ್ತಿರುವ ಸರಪಳಿ ಕಿತ್ತು
ಎಲ್ಲ ಮಿತಿಗಳ ದಾಟಿ
ಜೀವಿಸ ಬಲ್ಲೆ ಸ್ವತಂತ್ರಳಾಗಿ ಸ್ವಾವಲಂಬಿಯಾಗಿ

ನಿನ್ನ ಬೆಳಕಿನ ಕಿರಣಗಳಿಗಾಗಿ
ಕಾಯುವವಳಲ್ಲ
ನಾನೀಗ ಸ್ವಯಂ ದೀಪಿಕೆ
ಸ್ವಪ್ರಕಾಶಿಣಿ

ನಿನ್ನ ಹೆಜ್ಜೆಗೆ ಸಮನಾಗಿ
ಹೆಜ್ಜೆ ಇಡಬಲ್ಲ ಸ್ವಾಭಿಮಾನಳು
ಸ್ವತಂತ್ರ ಮನುಷ್ಯಳು
ಆಗಿದ್ದೇನೆ ನಾನೀಗ!

ಓ ಗಂಡಸೇ!  ಇದೀಗ ತಿಳಿ
ನನ್ನ ಹುಟ್ಟಿಗೆ ನಿನ್ನ ಒಂದು ಹನಿ
ವೀರ್ಯ ಅನಿವಾರ್ಯ
ಆದರೆ ನನ್ನ ಬದುಕಿಗಲ್ಲ!

- ಮಾನಿನಿ. 


ಸಾಕಮ್ಮಜ್ಜಿಯ ಅನುಭವಗಳು (ಸಣ್ಣ ಕತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಮನುಷ್ಯನಿಗೆ ಜ್ಞಾನ ಸಂಪಾದನೆ ಎಷ್ಟು ಮುಖ್ಯವೋ, ಅನುಭವಗಳಿಂದ ಅರಿವು ಮೂಡಿಸಿ ಕೊಳ್ಳುವುದು ಅಷ್ಟೇ ಮುಖ್ಯ. ಜೀವನದಲ್ಲಿ ಕಹಿ ಅನುಭವಗಳು ಆಗದಿದ್ದರೆ ಸಿಹಿಯ ಸವಿ ತಿಳಿಯುವುದಿಲ್ಲ. ಕಷ್ಟಗಳಲ್ಲಿ ಮುಳಿಗಿ ಎದ್ದಷ್ಟು ಸುಖದ ಅನುಭವ ದೊರೆಯುತ್ತವೆ. ಅದಕೆ ಹಿರಿಯರ, ಗುರುಗಳ, ನೆರೆಹೊರೆಯವರ ಅನುಭವದ ಮಾತು ಕೇಳುತ್ತಲಿರಬೇಕು.
ಅನುಭವಗಳ ಸಂತೆ ಕಂತೆಯೊಂದಿಗೆ ನಿಮ್ಮ ಮುಂದೆ ಸಾಕಮ್ಮಜ್ಜಿಯ ಕಥೆ ತಿಳಿಸುತ್ತಿದ್ದೆನೆ.

ಬೆಂಗಳೂರಿನ ಕೆ. ಆರ್. ಮಾರ್ಕೆಟದಲ್ಲಿ ನೂರು ವರ್ಷದ ಗಟ್ಟಿಮುಟ್ಟಾದ ಸಾಕಮ್ಮಜ್ಜಿ ಹಣ್ಣುಹಂಪಲುಗಳನ್ನು ಮಾರಾಟಮಾಡುವ ಕಾಯಕ ಕೈಗೊಂಡಿದ್ದಳು. ದಿನಾಲು ನಾಲ್ಕು ಗಂಟೆಗೆ ಮಗನ ಜೊತೆ ಬಂದು ಮಂಡಿಯಲ್ಲಿ (ಹರಾಜದಲ್ಲಿ) ತನಗೆ ಬೇಕಾದ ಡೊಳ್ಳೆ ತುಂಬಿದ ಹಣ್ಣುಗಳನ್ನು
ಖರಿದಿ ತಂದು ಮುಸ್ಸಂಜೆಯ ಐದುವರೆ ಸಮಯದ ತನಕ ವ್ಯಾಪಾರ ಮಾಡುತ್ತಿದ್ದಳು. ವಯಸ್ಸಿದ್ದಾಗ ಗಂಡ ಬಳೆಗಳ ವ್ಯಾಪಾರ ಮಾಡಿ ನಂತರ ಮನೆಯಲ್ಲಿ ಕಂಬಳಿ ನೆಯುತ್ತಿದ್ದ. ಇಬ್ಬರೂ ಮೈ ತುಂಬಿ ದುಡಿದರು ದಿನದ ದುಡಿಮೆ ದಿನದ ಉಪಜೀವನಕ್ಕಷ್ಟೆ ಸಾಲುತ್ತಿತ್ತು. ಮಕ್ಕಳಿಗೆ ಹೆಚ್ಚಿಗೆ ಶಾಲೆ ಕಲಿಸುವುದಾಗಲಿಲ್ಲ. ಹತ್ತನೆ ತರಗತಿಯವರೆಗೆ ಬಂದು ಓದು ನಿಲ್ಲಿಸಿ ವ್ಯಾಪರಕ್ಕಿಳಿದಿದ್ದರು. 
ನಮ್ಮ ತಂದೆ ತಾಯಿಗೆ ನಾನು ಹನ್ನೆರಡನೆಯ ಮಗುವಾಗಿದ್ದೆ. ಇನ್ನು ಮುಂದೆ ನಮಗೆ ಮಕ್ಕಳು ಸಾಕಪ್ಪಾ ದೇವರೆಯಂತ ನನಗೆ ಸಾಕಮ್ಮಾ ಎಂದು ಹೆಸರಿಟ್ಟರು ಅಂತ ಹಲ್ಲಿಲ್ಲದ ಬಾಯಿಯಿಂದ ಮುಗ್ಧ ನಗು ನಗತಾ ಎಲ್ಲರಿಗೂ ಹೇಳ್ತಾಳೆ.
ಎಂಭತ್ತು ವರ್ಷಗಳಿಂದ ವ್ಯಾಪಾರ ಮಾಡ್ತಾಯಿದ್ದಿನಿ. ನನ್ನ ವಾರಗೆಯವರೆಲ್ಲ ಸತ್ತಹೋದರು. ನಾಲ್ಕಾರು ಜನ ಉಳ್ಕೊಂಡವರು ಈ ಕರೋನಾ ಹೊತ್ಗೊಂಡ ಹೊಯ್ತಂತ ಹೇಳುವಳು. ಈವಾಗೆಲ್ಲ ಹಳೆಗಿರಾಕಿಗಳ ಮಕ್ಕಳು ಬಂದು ನನ್ನ ಯೋಗಕ್ಷೇಮ ಕೇಳತಾ ಹಣ್ಣುಹಂಪಲು ಖರಿದಿಮಾಡ್ಕೊಂಡು ಹೊತವರೆ ಅನ್ನೊಳು. ನಿಜ ಕಣಪ್ಪ ಹಳೆದಿನಗಳು ಬಹು ಚೆನ್ನಾಗಿದ್ದವು. ಜಾತಿ ಕುಲ ಅನ್ನೊದಿದ್ದಿತ್ತಿಲ್ಲ. ಒಟ್ಟಾಗೆ ಎಲ್ಲರೂ ದುಡಿಯೋರು. ಮನೆಯೊಳಗೆ ಏನಾದರೂ ತಾಪತ್ರಯ ಬಂದರೆ ಅವರು ಬಿಟ್ಟೋದ ವ್ಯಾಪಾರ ನಾವು ಮಾಡಿ ದುಡ್ಡ ಅವರ ಮನಿಗೆ ಒಪ್ಪಿಸ್ತಿದ್ವಿ. ಒಬ್ಬರಿಗೊಬ್ಬರು ಆ‍ಸ್ರಾ ಆಗಿ ಬದುಕತಿದ್ವಿ. ಅದಕ್ಕನ್ರಿ ಯಾವ ಜಡ್ಡ ಜಾಪತ್ರಿಯಿಲ್ಲದ ಆ ದೇವರ ಚೆನ್ನಾಗಿ ಇಟ್ಟವ್ನೆ. 
ಅವಳ ಒಂದೊಂದು ಮಾತೂ ಕೇಳಿದ್ರೆ ಹುರುಳು ಹುರದಂಗೆ ಮಾತಾಡವಳು. ವಿದ್ಯೆಯಿಂದಲೆ ಜ್ಞಾನ ಸಂಪಾದನೆ ಅನ್ನೊದು ತಪ್ಪು. ಜೀವನದಲ್ಲಿ ಅನುಭವಗಳಿಂದಲೂ ಜ್ಞಾನ ಸಿಗುತ್ತೆ ಅನ್ನೊ ಮಾತಿಗೆ ಈ ಅಜ್ಜಯೇ ಸಾಕ್ಷಿ. ಅವಳಿಗೆ ಮನೆಯಿಂದ ಊಟ, ತಿಂಡಿ ಬರಲು ತಡವಾದರೆ ಸುತ್ತಲಿನ ವ್ಯಾಪಾರಸ್ಥರು ಅವಳನ್ನ ಕರೆದುಕೊಂಡು ಉಂಬವರಂತೆ ಹೇಳ್ತಾಳೆ. ನಮ್ಮದು ಹರಿದು ಹಂಚಿಕೊಂಡು ತಿಂದು ಬದುಕುವ ಜೀವನ. ನೋಡಪ್ಪ ನಾನೇನು ದುಡ್ಡುಗಳಿಸಿ ದೊಡ್ಡವಳಾದವಳಲ್ಲ (ಶ್ರೀಮಂತಿಕೆ) ಎಲ್ಲರ ಜೊತೆ ಸವಿಮಾತ, ನಂಬಿಕೆ, ನಡೆ ನುಡಿ ಪ್ರಾಮಾಣಿಕತೆ ಇಟ್ಟುಕೊಂಡು ದೊಡ್ಡವಳಾದವಳು. ಆವಾಗಿನ ಜನಬೀಡ ಕಡಿಮಿ ಇರ್ತಿತ್ತು. ಆದ್ರೆ ಜನ ಜೀವಕ್ಕ ಜೀವ ಕೊಡತಿದ್ರು. ಅದಕ ದಿನಮಾನಗಳು ಚೆನ್ನಾಗಿದ್ದವು. ಈವಾಗ ಎಲ್ಲಾ ಸ್ವಾರ್ಧಿಗಳು. ತಮ್ಮ ಹೊಟ್ಟೆ ತುಂಬಿಸ್ಗೊಳದಲ್ದೆ ಮುಂದಿನ ಪಿಳಿಗಿಗೆ ಆಸ್ತಿ ಮಾಡುವವರಿದ್ದಾರೆ. ಏನಕೇಳ್ತಿ ಕರೋನಾದಂತಹ ಗಾಳಿ ಬೀಸಿದ್ರದಿಂದಲೆ ಪೊಳ್ಳಿದ್ದದ್ದೆಲ್ಲ ಕೊಚಗೊಂಡ ಹೊಯ್ತು. ನಮ್ಮಂತ ಗಟ್ಟಿ ಇರೋದು ಉಳ್ಕಂಡಯ್ತಿ. ಈಗಿನ ಬದುಕ್ನಾಗೆ ನೆಮ್ಮದಿ ಸಂತೋಷ ಕಡಮಿನೆ, ಬರೀ ಜಗಳ, ದುಡ್ಡಿನ ಅಹಂಕಾರ, ದ್ವೇಷ ತುಂಬಕೊಂಡೈಯ್ತಿ.  ನಮ್ಮ ಬದುಕ ಛಂದ ಇತ್ತಕಣಪ್ಪ. ಸಾಕಷ್ಟು ಕಷ್ಟ ನೋವು ಅನುಭವಿಸಿದ್ದಿನಿ. ಆದ್ರ ತಿಂದ ಅನ್ನಾ ಬರೀ ಚಟ್ನಿ ಭಕ್ಕರಿನೆ ಹೊಟ್ಟಿಗಹತ್ತಿತ್ತು. ಈಗಿನವ್ರಿಗ ಚಿನ್ನಾಕ ಎಲ್ಲಾ ಸೌಕರ್ಯ ಕೊಟ್ಟವ್ನೆ ದೇವ್ರು, ಆದ್ರೆ ಬಾಯಿ ಕೊಟ್ಟಿಲ್ಲ. ರೋಗಿನ ತವರಮನಿ ಆಗೈತಿ ದೇಹ. ಇನ್ನೂ ಏನೇನು ಕಾಣದೈತೊ ಗೊತ್ತಿಲ್ಲ. ನನಗಂತೂ ಮನಿತುಂಬ ಮೊಮ್ಮಕ್ಕಳು ಮರಿಮೊಮ್ಮಕ್ಕಳ ನಂದ ಗೋಕುಲ ಐತಿ ನೋಡು ಅನ್ನೋಳು ಅಜ್ಜಿ. ಮೊಮ್ಮಕ್ಕಳು ಎಷ್ಟು ಜನ, ಅವರ ಹೆಸರ ಕೆಳಿದ್ರೆ, ಎಣಸಕ್ಕಿಲ್ಲಪ್ಪ, ಒಟ್ಟಾರೆ ಎಲ್ರುನೂ ಪುಟ್ಟಾ, ಕಿಟ್ಟಾ, ಚಿಟ್ಟಾಂತ ಕರಿಯೋದು. 
ಇನ್ನು ಏನು ಆಸೆ ಐತಿ ನಿನಗೆ ಅಜ್ಜಿಯಂತ ಕೇಳಿದ್ರೆ. ಇನ್ನೆನು ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಕಂಡಿವ್ನಿ, ಇನ್ನೊಪ್ಪತ್ತ ಕಾಲ ಬದುಕಿದ್ದರೆ ಮರಿಮೊಮ್ಮಕ್ಕಳ ಜೊತೆ ಮಗುವಾಗಿ ಬದುಕ್ತಿವ್ನಿ. ಆ ಯಮರಾಜ ಬರೋತನಕ ಕುಸಗೊಳ ಜೊತೆ ಆಡ್ತಿವ್ನಿ, ಅವ್ರ ತೊದಲು ಮಾತ ನಾ ಕೇಳ್ತಿನಿ ನನ್ನ ತೊದಲ ಮಾತು ಮಕ್ಕಳು ಕೇಳ್ತಾವೆ. ಎಲ್ಲರೂ ನಗ್ತಾನಗ್ತಾ ಚನ್ನಾಗಿದ್ದಿವಿ ಅನ್ನೊ ಮಾತು ಅಜ್ಜಿಯದಾಗಿತ್ತು.

ಹೇಗಿದೆ ಸಾಕಮ್ಮಜ್ಜಿಯ ಕಥೆ. ಇನ್ನೂ ಸಾಕಷ್ಟು ಅವಳ ಅನುಭವಗಳ ಬುತ್ತಿ ನಮ್ಮುಂದೆ ಬಿಚ್ಚಿಟ್ಟಿದ್ದಾಳೆ. ಅದರಲ್ಲಿಯೂ ಸ್ವಲ್ಪ ಪ್ರಮಾಣ ಕಥೆಯ ಮೂಲಕ ತಮ್ಮ ಮುಂದೆ ಇಟ್ಟಿರುವೆ. 

-  ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.



ಮನವೊಂದು ಯೋಚನೆ ನೂರೊಂದು (ಕವಿತೆ) - ರಾಕೇಶ್ ಡಿ. ವೀರಾಪುರ.

ಸಮನಾಗಿ ಇರಬೇಕು ಬದುಕಲಿ ಸುಖದುಃಖ
ಸದಾ ಎಚ್ಚರದಿ ಇರಲು ಸಮಸ್ಯೆಗಳು ಪ್ರಮುಖ
ಆದರೂ ಕಷ್ಟಗಳು ಹೆಚ್ಚಲು ತ್ರಾಸವು ಜೀವಕ
ಅದರ ನಡುವೆ ನೆಮ್ಮದಿ ಹುಡುಕಾಟ ಮನಕ

ಅರಿಯದೆ ಆದಂತಹ ಘಟನೆಗೆ ಮನವು
 ಹೃದಯದಿ ಕವಿದಿದೆ ಮನದಿ ನೀರವ ಮೌನವು
ಎಂದು ಮರೆಯಲಾಗದ ಇಂತಹ ದಿನವು
ನೆನೆದರೆ ಸಾಕೆನಿಸುತ್ತದೆ ಈ ನನ್ನ ಜೀವನವು

ಮನವೊಂದಿದೆ ಯೋಚನೆಗಳು ನೂರಾರಿವೆ
ಕಷ್ಟಗಳು ಜೀವನವನು ಸದಾ ಎಚ್ಚರಿಸುತ್ತಿವೆ
ಮೈಮರೆಸದೆ ಸರಿದಾರಿಯಲಿ ನೆಡೆಯುತ್ತಿದೆ
ಗುರಿಸಾದಿಸುವ ಸಲುವಾಗಿ ಜೀವನ ಸಾಗಿದೆ
 
ಬದುಕಿನಾಟವು ಕೆಲವೊಮ್ಮೆ ಅನಿರೀಕ್ಷಿತವು
ಬಯಸದೆ ಬರುವ ನೋವುಗಳು ನಿರೀಕ್ಷಿತವು
ಎರಡರ ನಡುವೆ ಜೀವನ ಒಂದೊಮ್ಮೆ ಸುಗಮ
ಜೊತೆಗೆ ಬದುಕಲಿ ನೋವುನಲಿವಿನ ಸಂಗಮ

    - ರಾಕೇಶ್ ಡಿ. ವೀರಾಪುರ.


ಈ ಸಮಯ ಕಳೆದುಹೋಗುತ್ತೆ (ಲೇಖನ) - ಮಾನಸ ಎಂ. ಸೊರಬ.

ಸಮಯ ಎಷ್ಟು ಶ್ರೇಷ್ಠ ಅನ್ಸತ್ತೆ ನಿಜಾ ಅಲ್ವಾ ಸಮಯ ಜೀವನದಲ್ಲಿ ಎಲ್ಲಾವನ್ನು ಸರಿ ಮಾಡುತ್ತೆ. ಸಮಯ ಮನುಷ್ಯನಿಗೆ ಅಮೂಲ್ಯ ಪ್ರತಿ ಕ್ಷಣವೂ ಕೂಡ ಬಹಳ ಮುಖ್ಯ ನಾವು ಅದನ್ನ  ಉಪಯೋಗ ಆಗುವ ಹಾಗೆ ಬಳಸಿಕೊಂಡು ಸಾಗಬೇಕು. ಕೆಟ್ಟ ಸಮಯ ಬಂದಾಗ ನಾವು ಹೇಗೆ ಅದನ್ನ ತಗೋತಿವಿ ಅನ್ನೋದರ ಮೇಲೆ ನಿರ್ಧರಿಸುತ್ತದೆ. ಜೀವನದಲ್ಲಿ ನಿಮ್ಮ ಹತ್ರ ಏನು ಇಲ್ಲದಾಗ ನಿಮ್ಮ ತಾಳ್ಮೆ ಹಾಗೂ ನಿಮ್ಮ ಬಳಿ ಎಲ್ಲವೂ ಇದ್ದಾಗ ನಿಮ್ಮ ನಡುವಳಿಕೆ ತುಂಬಾ ಮುಖ್ಯ ಅನ್ಸತ್ತೆ. ನಿಮ್ಮ ದೌರ್ಭಲ್ಯಗಳಿಗೆ ನೀವು ಕಾರಣವಾಗಬೇಡಿ ನಿಮ್ಮ ಬಲಕ್ಕೆ ನೀವು ಕಾರಣವಾಗಿ. ಕೆಟ್ಟ ಸಮಯ ಇದೇ ಎಂದಾಕ್ಷಣ ಈಡಿ ಜೀವನವೇ ಕೆಟ್ಟದಾಗುತ್ತೆ ಅಂದುಕೊಳ್ಳುವುದು ತಪ್ಪು ಅಂತಹ ಸಂದರ್ಭದಲ್ಲಿ ಆತ್ಮವಿಶ್ವಾಸ  ಇರಬೇಕು.ನಮ್ಮ ಮನಸ್ಸು ಕೆಲವೊಮ್ಮೆ ಕೆಲವು  ಕಾರಣಗಳಿಂದ  ನೋವುಂಟಾಗುತ್ತದೆ ನಮ್ಮ ನಿಯಂತ್ರಣ ತಪ್ಪುತ್ತದೆ ಅಂತಹ ಸಂದರ್ಭದಲ್ಲಿ ಅದರ ಪಾಡಿಗೆ ಹಾಗೆ ಬಿಡಿ ಸಮಯ ಕೊಡಿ ಅದು ಹಾಗೆ ಸರಿ ಹೋಗುತ್ತದೆ. ಸಮಯದ ಬೆಲೆ ತಿಳಿದವರಿಗೆ ಜೀವನದ ಬೆಲೆಯೂ ಸಹ ತಿಳಿದಿರುತ್ತದೆ. ಸಮಯಕ್ಕೆ ನಾವು ಗೌರವ ಕೊಟ್ಟರೆ ಮುಂದೆ ಸಮಯವೇ ನಮಗೆ ಗೌರವ ತಂದುಕೊಡುತ್ತದೆ. ಈ ದಿನ ನಮ್ಮ ಕೊನೆ ದಿನವೆಂದು ಕಳೆದರೆ ಬದುಕು ಪ್ರತಿ ಕ್ಷಣದ ಸಂಭ್ರಮ ಆಗುತ್ತೆ ಯಾಕಂದರೆ ಯಾರಿಗೆ ಗೊತ್ತು ಏಷ್ಟು ಜನರಿಗೆ ನಾಳೆಯ ಸೂರ್ಯ ನೋಡಲು ಸಿಗುವುದೋ ಇಲ್ಲವೋ ಎಂದು. ಜೀವನದಲ್ಲಿ ಗಡಿಯಾರ ಎಲ್ಲರಿಗೂ ಒಂದೇ ಆದ್ರೆ ಅದರಲ್ಲಿ ತೋರಿಸೋ ಟೈಮ್ ಎಲ್ಲರಿಗೂ ಒಂದೇ ಅಲ್ಲಾ . ಸಮಯ ಯಾರಿಗೂ ಕಾಯುವುದಿಲ್ಲ ಬಡವ ಶ್ರೀಮಂತ ಎಲ್ಲರಿಗೂ ಗಡಿಯಾರ ಮಾತ್ರ ಒಂದೇ ಎಲ್ಲರನ್ನೂ ಸಮಾನವಾಗಿ ಕಾಣುವುದು ಈ ಸಮಯ ಮಾತ್ರ.ನಿನ್ನೆಯ ಸಮಯದ ಬಗ್ಗೆ ಯೋಚನೆ ಮಾಡಿ ನಾಳೆಯ ಸಮಯವನ್ನ  ಹಾಳುಮಾಡಬೇಡಿ ಇವತ್ತಿನ ದಿನವನ್ನು ಸರಿಯಾಗಿ ಬಳಸಿಕೊಳ್ಳಿ.ನಂಬಿಕೆಗೆ ಹೇಗೆ ಸಮಯ ಬೇಕು ಹಾಗೆ ಸಮಯದ ಮೇಲೂ ನಂಬಿಕೆ ಇರಲಿ.
Wait for your time
Time proves everything

     - ಮಾನಸ ಎಂ. ಸೊರಬ.

ಸ್ವರಾಜ್ಯಕ್ಕೆ ಮುಕ್ಕಾಲುನೂರು (ಲೇಖನ) - ಬ್ರಿಜೇಶ್ ಕುಮಾರ್. ಬಿ. ಟಿ.

ಹೌದು ಇಂದು ತಾಯಿ ಭಾರತೀಯ ಮಕ್ಕಳಾದ ನಮಗೆ 75ರ ಆಚರಣೆಯ ಸಮಯವಿದಾಗಿದೆ. "ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು, ನಾನು ಅದನ್ನು  ಪಡೆದೆ ತೀರುತ್ತೇನೆ" ಎಂಬ ಹೇಳಿಕೆಯಂತೆ ನಾವು ಸ್ವಾತಂತ್ರ್ಯವಾಗಿ ಜೀವಿಸುತ್ತಿದ್ದೇವೆ. ಈ ದಿನಕ್ಕಾಗಿ ಅದೆಷ್ಟೋ ಸಂಘರ್ಷಗಳೇ ನಡೆದು ವೀರರ ತ್ಯಾಗ ಬಲಿದಾನಗಳಾಗಿರುವುದು ನಮಗೆಲ್ಲರಿಗೂ ತಿಳಿದಿದೆ. ಆದರೂ ಈ 75ನೇ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಲ್ಲರ ಮನದಾಳದಲ್ಲಿ ಎಲ್ಲಿಲ್ಲದ ಹರುಷವನ್ನು ತಂದಿರುವುದು ನಿಜವೇ. ಈ ಸ್ವಾತಂತ್ರ್ಯೋತ್ಸವ ನಿಜಕ್ಕೂ ಒಂದು ಬಗೆಯ ಹೆಮ್ಮೆ ತರುವಂತದ್ದು. ಏಕೆಂದರೆ ನಮ್ಮ ತಾಯಿ ಭಾರತಾಂಬೆಯನ್ನು "ವಿಶ್ವಗುರು"ವನ್ನು ಮಾಡುವ ಕನಸು ಹೊತ್ತಿದ್ದ "ಸ್ವಾಮಿ ವಿವೇಕಾನಂದರ 150ನೇ ಜಯಂತಿ", "ಗುರು ತೇಗ್ ಬಹದ್ದೂರರ 400ನೇ ಜಯಂತಿ", "ತಾತ್ಯಾ ಟೋಪೆಯ 200ನೇ ಜಯಂತಿ", "ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು" ಈ ಘೋಷಣೆಯ 150ನೇ ವರ್ಷ, "ಸುಭಾಶರ 125ನೇ ಜಯಂತಿ" ಹೀಗೆ ಹತ್ತು ಹಲವು ಸಂಗತಿಗಳ ಸ್ಮರಣೆಗಳ ನಡುವೆ ಕಿರೀಟ ಪ್ರಾಯವಾದದ್ದು ಈ ಬಾರಿಯ ಸ್ವಾತಂತ್ರ್ಯದ ಹಬ್ಬ.

ನಮಗೆಲ್ಲ ಸಹಜವಾಗಿ ತಿಳಿದಂತೆ ಸ್ವಾತಂತ್ರ್ಯದ ಸಂಘರ್ಷ ಶುರುವದ ಹಾದಿಯನ್ನು ನಾವು ನೋಡುವುದಾದರೆ 1854ರ ದಂಗೆಯ ನಂತರ, ಈಸ್ಟ್ ಇಂಡಿಯಾ ಕಂಪನಿಯು 1858 ರಲ್ಲಿ ರಾಣಿ ವಿಕ್ಟೋರಿಯಾ ಗೆ ಸಾರ್ವಭೌಮತ್ವವನ್ನು ಬಿಟ್ಟುಕೊಟ್ಟಿತು, ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಸ್ಥಾಪಿಸಿತು. 1857ರ ದಂಗೆಯು ಭಾರತದ ನೆಲದ ಮೇಲೆ ವಿದೇಶಿ ಅಧಿಕಾರದ ವಿರುದ್ಧದ ಮೊದಲ ಕಿಡಿಯಾಗಿದೆ. ಇದರ ಫಲವಾಗಿ ದೇಶದ ಸ್ವಾತಂತ್ರ್ಯವನ್ನು ಸಾಧಿಸಲು ದೇಶದ ವಿಮೋಚನಾ ಹೋರಾಟಗಾರರು ಅನೇಕ ಚಳುವಳಿಗಳನ್ನು ನಡೆಸಿದರು.
      ಇದಕ್ಕಾಗಿ ಅದೆಷ್ಟೋ ವೀರರು ಊಟ, ವಸತಿ, ಮನೆ, ಸಂಸಾರಗಳನ್ನು ತೊರೆದು ತಮ್ಮ ಪ್ರಾಣವನ್ನು ಲೆಕ್ಕಿಸದೆ ತಾಯಿ ಭಾರತೀಯ ಮಡಲಿಗೆ ಅರ್ಪಿಸಿ ಅಜರಾಮರವಾಗಿದ್ದಾರೆ.
       ಇದರಂತೆಯೇ ನಮ್ಮ ವೀರರ ಹೋರಾಟಗಳಿಂದ ಪ್ರಥಮ 1947 ರ ಆಗಸ್ಟ್ 14 ರ ಮಧ್ಯೆ ರಾತ್ರಿ ನಮಗೆ ಸ್ವಾತಂತ್ರ್ಯ ದೊರೆತಿರುವುದು ಎಲ್ಲರಿಗೂ ತಿಳಿದಿದೆ.
      ಇದರಲ್ಲಿ ನಮಗೆ ತಿಳಿದಿರುವ ಹಾಗೆ 6 ಲಕ್ಷಕ್ಕೂ ಹೆಚ್ಚು ಭಾರತ ಮಾತೆಯ ಸುಪುತ್ರರು ತ್ಯಾಗ ಬಲಿದಾನಗಳನ್ನು ಗೈದಂತಹ ಕ್ರಾಂತಿಕಾರಿ ವೀರರನ್ನು ನಾವಿಂದು ನೆನೆಯಬಹುದಾಗಿದೆ.

    ಇನ್ನು "ಸಿಡಿಲಸಂತರಾದ ಸ್ವಾಮಿ ವಿವೇಕಾನಂದರು" ನಮ್ಮ ತಾಯಿ ಭಾರತಿಯನ್ನು ಕುರಿತು ಕಂಡಂತಹ "ವಿಶ್ವಗುರು ಭಾರತದ" ಕನಸು ನನಸಾಗುತ್ತಿದೆ ಎಂಬ ಸಂತೋಷವೂ ಮನದಲ್ಲಿದೆ.
       ಏಕೆಂದರೆ, ಕೊರೋನ ವಿಷಯವನ್ನೇ ನಾವು ನೋಡುವುದಾದರೆ "130 ಕೋಟಿ ಜನಸಂಖ್ಯೆಯ ಭಾರತ ಕೋರೋನವನ್ನು ಹೇಗೆ ನಿಭಾಯಿಸುತ್ತದೆ" ಎಂದು ಇಡೀ ಜಗತ್ತು ನಮ್ಮನ್ನು ನೋಡುತ್ತಿತ್ತು. ಆದರೆ ಈ ವಿಷಯದಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳು ಸಹ ಭಾರತದ ಮುಂದೆ ತಲೆಬಾಗಿ ಶರಣಾದವು. ಕಾರಣ ಭಾರತದ ವಿಜ್ಞಾನಿಗಳು ಅದಕ್ಕೆ ಉತ್ತರ ನೀಡಿದರು. ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿರುವ ಹಾಗೂ ಕಾಯಿಲೆಯನ್ನು ಹುಟ್ಟುಹಾಕಿದ ಚೀನಾ ಅದಕ್ಕೆ ಅದರ ಮದ್ದು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ವಿಶ್ವದ ದೊಡ್ಡಣ್ಣ ಅಮೇರಿಕಾ ಕೂಡ ಕೊರೋನಾಗೆ ಶರಣಾಯಿತು. ಕಾರಣ ಅತಿ ಭಯಾನಕ ಸಾಂಕ್ರಾಮಿಕ ರೋಗಕ್ಕೆ ಭಾರತದ ವಿಜ್ಞಾನಿಗಳು ಔಷಧಿಯನ್ನು ಕಂಡುಹಿಡಿದರು. ನಾವು ನೋಡಬಹುದು ನಮ್ಮ ಜಗತ್ತಿನಲ್ಲಿ ಪೋಲಿಯೋ ಕಾಯಿಲೆ 1950 ರಲ್ಲಿ ಬಂದಾಗ, ಅದರಿಂದ ಆದಂತಹ ಅನಾಹುತಗಳು ತುಂಬಾ ದುಷ್ಪರಿಣಾಮಗಳನ್ನು ಉಂಟು ಮಾಡಿತು. ಅದಕ್ಕೆ ಔಷಧಿಯನ್ನು ಕಂಡುಹಿಡಿಯಲು 11 ವರ್ಷಗಳನ್ನು ತೆಗೆದುಕೊಂಡು ಕೊನೆಯಲ್ಲಿ 'ಆಲ್ಬರ್ಟ್ ಸಾಬಿನ್' ಎಂಬ ವಿಜ್ಞಾನಿ 1961ರಲ್ಲಿ ಕಂಡು ಹಿಡಿದರು. ಹೀಗಿರುವಾಗ ಭಾರತ ವರ್ಷ ತುಂಬುವುದರೊಳಗಾಗಿ ಕೊರೋನ ರೋಗಕ್ಕೆ ಔಷಧಿಯನ್ನು ಕಂಡು ಹಿಡಿಯಿತು. ಅಷ್ಟೇ ಅಲ್ಲದೆ ಇಡೀ ವಿಶ್ವಕ್ಕೆ ಸರಿ ಸುಮಾರು 58 ಮಿಲಿಯನ್ ಡೋಸ್ ಗಳಷ್ಟು ಔಷಧಿ ಪೂರೈಕೆಯನ್ನು ಮಾಡಿ ಲಕ್ಷಾಂತರ ಜನರ ಪ್ರಾಣವನ್ನು ರಕ್ಷಿಸಿತು..
   ಇನ್ನು ನಮಗೆ ಈಗಷ್ಟೇ ಶ್ರೀಲಂಕದಲ್ಲಿ ಸೃಷ್ಟಿಯಾದಂತಹ ಆರ್ಥಿಕ ಪರಿಸ್ಥಿತಿಯ ಬಿಕ್ಕಟ್ಟಿನ ಬಗ್ಗೆಯೂ ನಮಗೆ ತಿಳಿದಿದೆ. ಅಲ್ಲಿನ ಜನರಿಗೆ ತಿನ್ನಲು ಸರಿಯಾಗಿ ಆಹಾರ ಸಹ ಸಿಗದೆ ಇರುವಂತಹ ಬಿಕ್ಕಟ್ಟಿನ ಪರಿಸ್ಥಿತಿ ಶುರುವಾಯಿತು.  ಆದರೆ ನಮ್ಮ ಭಾರತ ಶ್ರೀಲಂಕಾದ ಆರ್ಥಿಕ ಪರಿಸ್ಥಿತಿಯನ್ನು ನೋಡಿ ಅದಕ್ಕೆ ಆಹಾರವನ್ನು ಕಳುಹಿಸಿಕೊಟ್ಟಿತು ಹಾಗೂ ಸಹಾಯ ಹಸ್ತವನ್ನು ನೀಡಿತು.
       1974ರಲ್ಲಿ ಅಮೆರಿಕ ಭಾರತಕ್ಕೆ ನಿರ್ಬಂಧ ವಿಧಿಸಿತ್ತು. 1998ರಲ್ಲಿ ಮತ್ತೊಮ್ಮೆ ಭಾರತ ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿ ಕಣ್ಣು ಕೆಂಪಾಗಿಸಿತ್ತು. 'ಆದರೆ ಈ ಬಾರಿ ಬೆದರಿಕೆಗೆ ಬಗ್ಗದ ಸ್ವಾಭಿಮಾನಿ ಭಾರತ, ಅಮೆರಿಕದ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಜಗತ್ತಿಗೆ ತನ್ನ ತಾಕತ್ತನ್ನು ಪ್ರದರ್ಶಿಸಿತು'.  ವಿಶ್ವದ ಬಲಿಷ್ಠ ರಾಷ್ಟ್ರಗಳು ಭಾರತವನ್ನು ಕೆಣಕಲು ಒಮ್ಮೆ ನೋಡಿಕೊಳ್ಳುವ ಪರಿಸ್ಥಿತಿ ಶುರುವಾಗಿ ಹೋಗಿದೆ. 
       ಅಷ್ಟೇ ಅಲ್ಲ ನಮ್ಮ ಭಾರತ ಶೇರು ಮಾರುಕಟ್ಟೆಯಲ್ಲಿಯೂ ಸಹ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರತಿ ಅರ್ಥ ಸೆಕೆಂಡಿಗೆ 91 ಕೋಟಿಯಷ್ಟು ಅಭಿವೃದ್ಧಿಯನ್ನು ಹೊಂದಿತ್ತಿದ್ದೇವೆ. ಹೀಗೆ ಮುಂದುವರೆದರೆ 2027ರ ವೇಳೆಗೆಲ್ಲ ಭಾರತವೇ ಎಲ್ಲಾದರಲ್ಲೂ ಮೇಲುಗೈ ಸಾಧಿಸುವುದಾಗಿ ಸೂಚನೆಯನ್ನು ಸಹ ನೀಡಿದ್ದಾರೆ.
      ಕೇವಲ ಇಷ್ಟೇ ಅಲ್ಲ ನಾವು ನೋಡಿರಬಹುದು, ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷದ ಕೊನೆಯ ಸಂದಾನದ ಸಮಯದಲ್ಲಿ ನಮ್ಮ ಹೆಮ್ಮೆಯ  ಭಾರತವನ್ನು ಸಂದಾನ ಮಾಡಿಸಿಕೊಡಲು ಬಳಿ ಬಂದು ಅಂಗಲಾಚಿತನ್ನು ನಾವು ನೋಡಿರಬಹುದಾಗಿದೆ.
      ಇನ್ನು ನಮ್ಮ ಸೈನ್ಯದ ವಿಚಾರವಾದರೆ 2019 ರಲ್ಲಿ ನಡೆದಂತಹ ಪುಲ್ವಾಮ ದಾಳಿಯಲ್ಲಿ ನಮ್ಮ ವೀರ ಯೋಧರು 40 ಜನರು ಹುತಾತ್ಮರಾಗುತ್ತಾರೆ. ಆದರೆ ಅದರ ಪ್ರತಿಕಾರವಾಗಿ ಭಾರತವು ಪಾಪಿ ಪಾಕಿಸ್ತಾನದ ಬಾಲಕೋಟ್ ಎಂಬ ಪ್ರದೇಶಕ್ಕೆ ನುಗ್ಗಿ "ಏರ್ ಸ್ಟ್ರೈಕ್" ಅನ್ನು ಮಾಡಿ  ಉಗ್ರರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ, ಧ್ವಂಸ ಮಾಡಿ ಅಲ್ಲಿದ್ದವರೆಲ್ಲರನ್ನು ಸದೆಬಡೆದು ಬರುತ್ತಾರೆ. ಶತ್ರು ದೇಶಕ್ಕೆ ನುಗ್ಗಿ ಹೊಡೆಯುವ ಶಕ್ತಿ ಇರುವ ಭಾರತವನ್ನು ಕೆಣಕಲು ತಮ್ಮ ಶಕ್ತಿ ಸಾಮರ್ಥ್ಯವನ್ನು ಮೊದಲು ನೋಡಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ.
       ಇನ್ನು ಈಗಂತೂ ನಮ್ಮ ಸೈನ್ಯಕ್ಕೆ ಮುಕ್ತ ಸ್ವಾತಂತ್ರ್ಯ ದೊರೆತಿದೆ. ಜಗತ್ತಿನಲ್ಲೇ ಬಲಿಷ್ಠ ರಕ್ಷಣಾ ಪಡೆಗಳ ಸಾಲಿನಲ್ಲಿ 'ನಮ್ಮ ಭಾರತವು ನಾಲ್ಕನೇ ಸ್ಥಾನ'’ವನ್ನು ಗಳಿಸಿದೆ. 
        ಇನ್ನು ಈ ಮೇಲಿನ ಎಲ್ಲಾ ಅಂಶಗಳನ್ನು ಒಮ್ಮೆ ಗಮನಿಸಿದಾಗ ನಾವು ಪಠ್ಯಪುಸ್ತಕಗಳಲ್ಲಿ ಓದಿಕೊಂಡು ಬಂದಿರುವ ಹಾಗೆ "ನಿಜಕ್ಕೂ ನಮ್ಮ ಭಾರತ ಮುಂದುವರೆಯುತ್ತಿರುವ ರಾಷ್ಟ್ರವೇ?" ಎಂಬ ಸಂಶಯ ಕಾಡುತ್ತದೆ..

      ಇನ್ನು ನಮ್ಮ ಸರ್ಕಾರಗಳು ಅಷ್ಟೇ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ವೈಭವಿಯೂತವಾಗಿ ಆಚರಿಸುತ್ತಿರುವುದು ನಮಗೆಲ್ಲ ತಿಳಿದಿದೆ...
      ಕೇಂದ್ರ ಸರ್ಕಾರವು ಕೂಡ ನಾನಾ ಹೆಸರುಗಳಿಂದ ಅಂದರೆ, "ಅಜಾದಿ ಕಾ  ಅಮೃತ ಮಹೋತ್ಸವ" ಅಂದರೆ "ಸ್ವಾತಂತ್ರ್ಯದ ಅಮೃತ ಮಹೋತ್ಸವ" ಎಂಬ ಶೀರ್ಷಿಕೆ ಅಡಿಯಲ್ಲಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಹಾಗೆಯೇ ನಮ್ಮ ಪ್ರಧಾನ ಮಂತ್ರಿಗಳಾದಂತಹ ಶ್ರೀ ನರೇಂದ್ರ ಮೋದಿಜೀ ಅವರ "ಹರ್ ಘರ್ ಮೆ ತಿರಂಗಾ" ಎಂಬ ಹೆಸರಿನಲ್ಲಿ ಪ್ರತಿ ಮನೆ  ಮನೆಗಳ ಮೇಲೆ ಮೂರು ದಿನಗಳ ಕಾಲ ತ್ರಿವರ್ಣ ಧ್ವಜವನ್ನು ಹಾರಿಸಿ ತಾಯಿ ಭಾರತಾಂಬೆಯನ್ನು ಉನ್ನತೊನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ...
        ಇನ್ನು ನಮ್ಮ ಕರ್ನಾಟಕವು ಅಷ್ಟೇ ಇಲ್ಲಿ ಎಲ್ಲವೂ ಇದೆ. ನಮ್ಮ ಇತಿಹಾಸ ಪರಂಪರೆಗಳು, ಸಾಂಸ್ಕೃತಿಕ ಧರೋಹರವೇ ಆಗಲಿ ಇತರೆ ಯಾವ ರಾಜ್ಯಕ್ಕೂ ಕಮ್ಮಿ ಇಲ್ಲ. ಕಾವೇರಿಯಿಂದ ಗೋದಾವರಿಯ ವರೆಗೆ ಹಬ್ಬಿದ, ಗಂಗೋತ್ರಿಯಲ್ಲಿ ಸೈನ್ಯದ ಆನೆಗಳು ಮೀಯುತ್ತಿದ್ದ ಗಂಡುಗಲಿಗಳ ಸಾಮ್ರಾಜ್ಯವಿದು....!
      ಸ್ವಾಭಿಮಾನದ ಪ್ರತಿಕವಾಗಿ, ಸಮನ್ವಯದ ಪ್ರತಿಪಾದಕರವಾಗಿ ರಾಷ್ಟ್ರದ ಹಿತ ದೃಷ್ಟಿಯಿಂದ ಜೊತೆ ಜೊತೆಗೆ ಸಾಗಿದವರು. ಹೀಗಾಗಿಯೇ "ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ" ಎನ್ನುವ ಎದೆಗಾರಿಕೆ ನಮ್ಮದು. ಭಾರತ ಮಾತೆಯ ಮಗಳಾದ ಕನ್ನಡ ತಾಯಿಯನ್ನು ಆರಾಧಿಸುವ ಭಾಗ್ಯ ನಮ್ಮದು..
       ಹಾಗಾಗಿಯೇ ನಮ್ಮ ಕರ್ನಾಟಕ ಸರ್ಕಾರವು ಕೂಡ "ಸ್ವಾತಂತ್ರ್ಯ ಭಾರತಿಗೆ ಕನ್ನಡದ ಆರತಿ" ಎಂಬ ಶೀರ್ಷಿಕೆಯಡಿಯಲ್ಲಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿ 75ನೇ ಸ್ವಾತಂತ್ರ್ಯೋತ್ಸವಕ್ಕೆ ಕರ್ನಾಟಕದ 75 ಸ್ವಾತಂತ್ರ್ಯ ಹೋರಾಟ ನಡೆದಂತಹ ಜಾಗಗಳ ಕುರಿತು 75 ಪುಸ್ತಕವನ್ನು ಮಾಡಿ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದಾರೆ. ಇದರಿಂದ ನಮ್ಮ ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದಂತವರನ್ನು ಮೂಲೆ ಮೂಲೆಗಳಿಂದ ಎಳೆದಂದು ನಮಗೆ ತಿಳಿಯದಂತವರನ್ನು ಸಹ ನಮ್ಮ ಮುಂದೆ ಬೆಳಕಿಗೆ ತಂದಿದ್ದಾರೆ. 
      ಇನ್ನು ಇಷ್ಟೇ ಅಲ್ಲ ದೇಶದ ಮೂಲೆ ಮೂಲೆಗಳಲ್ಲಿ ಈ ಸ್ವಾತಂತ್ರ್ಯೋತ್ಸವದ ಹೆಸರಿನಲ್ಲಿ ಬೈಕ್ ಜಾಥಾಗಳನ್ನು, ಸೈಕಲ್ ಜಾಥಾಗಳನ್ನು ಹಾಗೂ ತಿರಂಗವನ್ನು ಹಿಡಿದು ತಿರಂಗ ಜಾಥಾಗಳನ್ನು ನಡೆಸಿ ಎಲ್ಲರಿಗೂ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
        ಇನ್ನು ನಮ್ಮ ಯುವ ಪೀಳಿಗೆಯ ಕೂಡ ತಾಯಿ ಭಾರತಾಂಬೆಯ ಅಭಿವೃದ್ಧಿಗೆ ಸಹಕರಿಸಿದರೆ ನಮ್ಮ ಭಾರತವನ್ನು ನಾವು ಆದಷ್ಟು ಬೇಗ "ವಿಶ್ವಗುರು" ಸ್ಥಾನಕ್ಕೆ ಕೋರಿಸಬಹುದು.
ಏಕೆಂದರೆ, ನಮ್ಮ ದೇಶದ ಪ್ರತಿ ಯುವಕ ಯುವತಿಯರು ಒಂದು ಹೆಜ್ಜೆ ಮುಂದಿಟ್ಟರೆ ನಮ್ಮ ದೇಶದ ಅಭಿವೃದ್ಧಿ ಯಾದಂತೆಯೇ.
       ಆದರೆ ನಾವುಗಳು ಹೇಗಿದ್ದೇವೆ ಎಂದರೆ ಕೇವಲ ಸ್ವಾತಂತ್ರ್ಯದ ದಿನದಂದು ಮಾತ್ರ ಮೊಬೈಲ್ಗಳಲ್ಲಿ ಸಂದೇಶಗಳನ್ನು ಕಳುಹಿಸುವುದೇ ಒಂದು ದೊಡ್ಡ ರಾಷ್ಟ್ರಸೇವೆಯಾಗಿ ಹೋಗಿದೆ.
       ನನಗೆ ತಿಳಿದಿರಬಹುದು ಈ ಸಮಾಜಕಾರ್ಯಕ್ಕಾಗಿ ಅದೆಷ್ಟೋ ನಿಷ್ಕಲ್ಮಶ ಸಂಘಟನೆಗಳು ಯಾವುದೇ ಲಾಭಗಳನ್ನುಗಳಿಸದೇ ಕಾರ್ಯವನ್ನು ನಿರ್ವಹಿಸಿಸುತ್ತಿವೇ. ಅದರಲ್ಲಿ ನಮ್ಮ ಬಿಡುವಿನ ಸಮಯದಲ್ಲಾದರೂ ನಮ್ಮ ಕೈಯಲ್ಲಿ ಸಾಧ್ಯವಾದ ಮಟ್ಟಿಗೆ ರಾಷ್ಟ್ರಸವೆಯನ್ನು ಮಾಡೋಣ..
      ಒಂದು ಸಣ್ಣ ಉದಾಹರಣೆಯನ್ನೇ  ಗಮನಿಸುವುದಾದರೆ, ನಮ್ಮ ಸಮಾಜದ ದೃಷ್ಟಿಯಲ್ಲಿ ಪ್ರತಿ ವರ್ಷ ಫೆಬ್ರವರಿ 14 ನ್ನು ಅದರಲ್ಲಿಯೂ ನಮ್ಮ ಯುವ ಪೀಳಿಗೆ  "ಪ್ರೇಮಿಗಳ ದಿನ" ಎಂದು ಆಚರಣೆ ಮಾಡಿದರೆ ಒಂದು ಸಂಘಟನೆ ಆ ದಿನವನ್ನು "ದೇಶ ಪ್ರೇಮಿಗಳ ದಿನ" ಎಂದು ಆಚರಣೆ ಮಾಡುತ್ತದೆ ಎಂದರೆ ನಾವು ನಿಜಕ್ಕೂ ಆ ಸಂಘಟನೆಗೆ ಒಂದು ಸಲಾಂ ಎನ್ನಬೇಕೆನ್ನಿಸುತ್ತದೆ. ನಾಡಿನ ಯುವ ತರುಣರಲ್ಲಿ ದೇಶಭಕ್ತಿಯನ್ನು ಮೂಡಿಸುವ ಕೆಲಸವನ್ನು ಮಾಡುತ್ತಿದೆ.
    ಇನ್ನು ನಾವು ಯುವಕರು ಸ್ವಾತಂತ್ರ ಹೋರಾಟದ ಕುರಿತು ಇರುವ ಪುಸ್ತಕಗಳನ್ನು ಓದಿ, ಬೇರೆಯವರಿಗೂ ಅದನ್ನು ಅರ್ಥ ಮಾಡಿಸುವ ಕೆಲಸವನ್ನು ಸಹ ಮಾಡಬಹುದಾಗಿದೆ.
      ಇನ್ನು ಎಲ್ಲೆಲ್ಲಿ ಸ್ವಾತಂತ್ರ್ಯ ಹೋರಾಟಗಳು ನಡೆದಿವೆ ನಾವು ಒಮ್ಮೆ ಭೇಟಿಯನ್ನು ಕೊಡುವ ಒಂದು ಸಣ್ಣ ಪ್ರಯತ್ನವನ್ನು ಸಹ ಮಾಡಬಹುದು ಮತ್ತು ಅದನ್ನು ಬೇರೆಯವರಿಗೂ ತಿಳಿಸಬಹುದು.
     ಸ್ವಾತಂತ್ರ ಹೋರಾಟಗಾರರು ತಾಯಿ ಭಾರತಾಂಬೆಯ ಮಡಿಲಿಗೆ ಶರಣಾದರೆ, ಇಂದು ನಮ್ಮ ಹೆಮ್ಮೆಯ  ವೀರ ಯೋಧರು ನಮ್ಮ ತಾಯ ಸೆರಗಿಗೆ ಕೈಯಿಟ್ಟವರನ್ನು   ಕೊಂದು ಹುತಾತ್ಮರಾಗುತಿದ್ದರೆ. ಸಮಯ ಬಂದರೆ ತಾಯಿ ಭಾರತೀಗೆ ಕ್ರಾಂತಿಕಾರಿಗಳ  ಅವಶ್ಯಕತೆ ಬಂದರೆ ನಾವು ಕ್ರಾಂತಿಕಾರಿಗಳು ಆಗಲು ಸಿದ್ದರಾಗಿರಬೇಕು. ಕೊನೆಗೆ ನಮ್ಮ ಪ್ರಾಣವನ್ನು ಕೂಡ ಅರ್ಪಿಸಲು ಸಜ್ಜಗಿರಬೇಕು.

     75ನೇ ಸ್ವಾತಂತ್ರ್ಯ ದಿನ ಎಂಬ ಕಾರಣದಿಂದಾಗಿ ಇದನ್ನು ತಾಯಿ ಭಾರತಾಂಬೆಯ ಸುಪುತ್ರರು ಇದನ್ನು ತುಂಬಾ ವೈಭವಯುತವಾಗಿ ಆಚರಿಸಲು ಸಜ್ಜಾಗಿದ್ದಾರೆ. ಇನ್ನಾದರೂ ನಾವು ಈ ರಾಷ್ಟ್ರೀಯ ಹಬ್ಬಗಳನ್ನು ಕೇವಲ ಮೊಬೈಲ್ಗಳಲ್ಲಿ ಸಂದೇಶವನ್ನು ಕಳುಹಿಸಲು ಸೀಮಿತವಾಗಿಡದೆ, ಮನ ಮನಗಳಲ್ಲಿ ಈ ಸ್ವಾತಂತ್ರೋತ್ಸವದ ಉದ್ದೇಶವನ್ನು ದೇಶಭಕ್ತಿಯನ್ನು ಮೂಡಿಸಿಕೊಳ್ಳುವ, ಮೂಡಿಸುವ ಕೆಲಸವನ್ನು ಮಾಡಬೇಕಿದೆ. ಈ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ನಮ್ಮ ಮುಖ್ಯ ಗುರಿಯು ನಮ್ಮ ಯುವ ಪೀಳಿಗೆಗೆ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಹೆಮ್ಮೆ ಮತ್ತು ಧೈರ್ಯ ಮತ್ತು ವಸಾಹತುಷಾಹಿ ಆಡಳಿತದ ಬಗ್ಗೆ ಶಿಕ್ಷಣ ನೀಡುವುದಾಗಿದೆ. ನಮ್ಮ ಸಾಂಸ್ಕೃತಿಕ ಭಿನ್ನತೆಗಳನ್ನು ಬದಿಗೊತ್ತಿ ನಿಜವಾದ ಭಾರತೀಯರಾಗಿ ಒಂದಾಗುವ ದಿನವಿದು. ಇದರ ಫಲವಾಗಿ ದೇಶಕ್ಕೆ ಸೇವೆ ಸಲ್ಲಿಸುವುದು ಮತ್ತು ಸಮಾಜದ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ.

- ಬ್ರಿಜೇಶ್ ಕುಮಾರ್. ಬಿ. ಟಿ.
ದ್ವಿತೀಯ ಪಿ ಯು ವಿದ್ಯಾರ್ಥಿ.
ಚಿತ್ರದುರ್ಗ.


ಮೊದಲು ನೆರೆಹೊರೆಯವರನ್ನು ಪ್ರೀತಿಸು (ಲೇಖನ) - ಎಚ್.ಡಿ.ಹೊಗರಾನಾಳ.

ಮನುಷ್ಯ ತಾನು ಬೆಳೆಯುತ್ತಿದ್ದಂತೆ ಹಲವಾರು ಆಸೆ ಆಕಾಂಕ್ಷೆಗಳನ್ನು  ಹೊಂದುತ್ತಾ ಸಾಗುತ್ತಾನೆ. ಅವನ ಆಸೆಗಿಂತ ದುರಾಸೆಯೇ ದುಪ್ಪಟ್ಟಾಗಿರುತ್ತದೆ. ಮಾನವನ ಬುದ್ಧಿ ಮಟ್ಟ ಮತ್ತು ಅವನ ಗ್ರಹಿಕೆ, ವಿಚಾರ ಮಟ್ಟ ಹೆಚ್ಚಿದಂತೆಲ್ಲಾ ತನ್ನನ್ನು ಅಷ್ಟೇ ಅಲ್ಲದೇ ತಾನಿರುವ ಪರಿಸರವನ್ನೇ ಮರೆತು ಬದುಕುವ ಹಲವಾರು ಕ್ಷಣಗಳು ಬರುತ್ತವೆ. ಹೀಗೆ ಮಾನವ ತನ್ನ ಬೌದ್ಧಿಕ ಮತ್ತು ಮಾನಸಿಕವಾಗಿ ಬದಲಾಗುತ್ತಿದ್ದಂತೆ ಹಾಗೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಬೆಳೆಯುತ್ತಿದ್ದಂತೆ ಮಾನವ ತನ್ನ ಮೂಲ ನೆಲೆಯನ್ನು ತೊರೆದು ಬದುಕುವಂತಹ ಹಲವಾರು ಸನ್ನಿವೇಶಗಳು ಕಾಣಸಿಗುತ್ತವೆ. ಹೇಗೆಂದರೆ ಮಾನವ ತಾನು ಎಲ್ಲಾ ಕ್ಷೇತ್ರದಲ್ಲಿ ಬಲಿಷ್ಠನಾಗುತ್ತಿದ್ದಂತೆ ವಿವಿಧ ತೆರನಾದ ಮೌಢ್ಯತೆಗಳಿಗೆ ಮತ್ತು ಅವೈಜ್ಞಾನಿಕ ವಿಚಾರಗಳಿಗೆ ತುತ್ತಾಗಿ ಅವುಗಳನ್ನು ಪಾಲಿಸಲೇಬೇಕಾದಂತಹ ನಿಯಮಗಳಿಗೆ ಅಂಟಿಕೊಳ್ಳುತ್ತಾನೆ.
ತನ್ನ ಸ್ವಇಚ್ಛೆಯ ನಿರ್ಧಾರಗಳಿಗಿಂತ ಇತರರ ನಿರ್ಧಾರಗಳಿಗೆ ನಿಯಮಗಳಿಗೆ ನೀತಿಗಳಿಗೆ ಬಲಿಯಾಗಿ ಪರರ ಇಷ್ಟಕ್ಕೆ ಸ್ಪಷ್ಟ ಮತ್ತು ಖಚಿತವಾದ, ಉಚಿತವಾದ ಅವಲಂಬನೆ ಯಾವಾಗಲೂ ಎಲ್ಲರಲ್ಲೂ ಇಂದು ಎದ್ದು ಕಾಣುವಂತಿದೆ. ಹೇಗೆಂದರೆ ಮಾನವನಿಗೆ ಮೊದಲು ಮಾನವೀಯತೆಯಲ್ಲಿ ಮನುಷ್ಯತ್ವದಲ್ಲಿ ಮಾನವೀಯ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿರಬೇಕು ಮತ್ತು ಅಳವಡಿಸಿಕೊಳ್ಳುವ ಅನುಸರಿಸುವ ಆತ್ಮವಲೋಕನ ಪ್ರತಿಯೊಬ್ಬರಲ್ಲಿರಬೇಕು. ಆದರೇ ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಬ್ಬರ ಬದುಕು ತಮ್ಮಿಷ್ಟದಂತೆ ಸಾಗದೇ ಪರರ ಕೈಗೊಂಬೆಯಾಗಿದೆ. ತಮ್ಮ ಬದುಕನ್ನು ತಾವೇ ಮುನ್ನೆಡೆಸುವಂತಹ ಮೂಲ ಅಂಶಗಳನ್ನು ತಾವೇ ರೂಪಿಸಿಕೊಳ್ಳಬೇಕು ಒಳಿತಿನ ಮಾರ್ಗದಲ್ಲಿ ತಾವೇ ನಡೆಯಬೇಕು ಆದರೇ ಇಂದು ಅದೆಲ್ಲವನ್ನು ಬಿಟ್ಟು ಪರರ ಆಶಯದಂತೆ ನೀತಿ ನಿಯಮಗಳಂತೆ ಸ್ವಂತ ನಿರ್ಧಾರವನ್ನು ಬದಿಗಿಟ್ಟು ಯರವರ ಮಾರ್ಗವೇ ಬಹು ಆಕರ್ಷಣೀಯವಾಗಿ ತೋರುವಂತಾಗಿದೆ. ಮನುಷ್ಯನಿಗೆ ಒಂದು ಭಾವ ಬದುಕು ಮತ್ತು ಬಯಕೆ ಭರವಸೆ ಎನ್ನುವಂತಹ ಅಂಶಗಳು ಪ್ರತಿಯೊಬ್ಬರಲ್ಲಿ ಸೇರಿರುವುದು ಸಹಜ ಇದರ ಜೊತೆಗೆ ಪ್ರೀತಿ-ಭಕ್ತಿ, ಪ್ರೇಮ - ಮಮತೆ, ಸ್ನೇಹ -ಸಂಬಂಧ, ಕರುಣೆ-ಸಹಕಾರ ಮನೋಭಾವ ಹೀಗೆ ಹತ್ತಾರು ಬಂಧನಗಳು ಪ್ರತಿಯೊಬ್ಬ ಮಾನವನ ಬದುಕಿನಲ್ಲಿ ಕಾಣುತ್ತವೆ. ಹೀಗಿರುವಾಗ ನಾವು ದಿನನಿತ್ಯ ವಾಸಿಸುವ ಸ್ಥಳವನ್ನು ಅಥವಾ ನಾವು ವಾಸಿಸಲು ಅನುವುಮಾಡಿಕೊಟ್ಟ ಪ್ರಕೃತಿಯನ್ನು, ಪರಿಸರವನ್ನು ಪ್ರೀತಿಸಲು ಅಥವಾ ಆರಾಧಿಸಲು ಮತ್ತೊಬ್ಬರ ಸಲಹೆ ಸಹಕಾರಬೇಕೇ? ಪ್ರತಿಯೊಬ್ಬ ಮನುಷ್ಯನಿಗೆ ಮೊದಲು ಪರಿಸರದ ಕಾಳಜಿ ಮತ್ತು ಸಂರಕ್ಷಣೆಯ ಬಗ್ಗೆ ಅರಿವಾಗಬೇಕಿದೆ ಹಾಗೂ ನಾವು ಮೊದಲು ದೇಶವನ್ನು ಪ್ರೀತಿಸುವುದರ ಜೊತೆಗೆ ನಮ್ಮ ಸುತ್ತಲಿನ ಪ್ರಕೃತಿಯನ್ನು, ಪ್ರಕೃತಿಯಲ್ಲಿ ಜೀವಿಸುವ ಪ್ರತಿಯೊಂದು ಜೀವಿಯನ್ನು ಮರ-ಗಿಡಗಳನ್ನು, ಪ್ರಾಣಿ-ಪಕ್ಷಿಗಳನ್ನು ಅಷ್ಟೇ ಅಲ್ಲದೇ ಮಾನವ ಸಮುದಾಯದ ಪ್ರತಿಯೊಂದು ಜನಾಂಗವನ್ನು ಜಾತಿ-ಧರ್ಮ, ವರ್ಣ-ಲಿಂಗವೇನ್ನದೆ ನಾವೆಲ್ಲರೂ ಸಮಾನರೆಂಬ ಭಾವ ಪ್ರತಿಯೊಬ್ಬರಲ್ಲಿ ಮೂಡಬೇಕಿದೆ, ಅವರಿವರೆನ್ನದೇ ಎಲ್ಲರನ್ನೂ ಸತ್ಕರಿಸುವ ಸರಳ ಮಾನವೀಯ ಗುಣಗಳು ಮೊದಲು ಮಾನವನಲ್ಲಿ ಮೂಡಬೇಕಿದೆ. ಭಯ-ಭಕ್ತಿ ದೇಶಕ್ಕಷ್ಟೇ ಅಲ್ಲದೇ ಮಾನವೀಯತೆಯ ಮೌಲ್ಯಯುತವಾದ ಬದುಕಿಗೂ ಅವಶ್ಯವಾಗಿ ಬೇಕಾಗಿದೆ. ಮೊದಲು ನಾವು ನಮ್ಮ ಸುತ್ತಲಿನ ಪ್ರತಿಯೊಬ್ಬ ಮನುಷ್ಯನೊಂದಿಗೆ ಸ್ನೇಹ-ಸಂಬಂಧ, ಪ್ರೀತಿ-ಪ್ರೇಮ, ಕರುಣೆ ಮನೋಭಾವ ಬೆಳೆಸಿಕೊಳ್ಳಬೇಕು ಹಾಗೂ ನಮ್ಮ ಸುತ್ತಲೂ ನೆರೆದ ಸಂಪದ್ಭರಿತವಾದ ಪ್ರಕೃತಿಯ ಮಡಿಲನ್ನೂ ಕೂಡ ಪ್ರೀತಿಸಿ ಕಾಪಾಡುವುದು ಪ್ರತಿಯೊಬ್ಬರ ಮೊದಲ ಕರ್ತವ್ಯವಾಗಿದೆ.
ದೇಶ ಪ್ರೇಮ ಎಷ್ಟು ಮುಖ್ಯವೋ ಮಾನವೀಯ ಪ್ರೇಮವೂ ಅಷ್ಟೇ ಮುಖ್ಯವಾಗಿದೆ ಏಕೆಂದರೆ ದೇಶ ಪ್ರೇಮ ಯಾವ ವ್ಯಕ್ತಿಯಲ್ಲಿ ಇರುವುದಿಲ್ಲ ಪ್ರತಿಯೊಬ್ಬ ಮಾನವನ ದೇಹದ ರೋಮರೋಮಗಳಲ್ಲಿ ನೆಲೆಸಿದೆ ಹೀಗಿರುವಾಗ ನಾವು ಮೊದಲು ನಮ್ಮ ನೆರೆಹೊರೆಯವರನ್ನು ಅವರಿವರೆನ್ನದೇ, ಆ ಜಾತಿ, ಆ ಧರ್ಮವೇನ್ನದೆ ಪ್ರತೀ ಘಳಿಗೆಯಲ್ಲಿ  ಒಟ್ಟಾಗಿ ಕೂಡಿ ಬದುಕುವ ಕೂಡಿ ನಲಿಯುವ ಮನೋಭಾವ ಪ್ರೀತಿ ಮಮತೆ ಸ್ನೇಹ ಸಂಬಂಧ ಕ್ಕೆ ಹಿರಿದಾದ ಸೇತುವೆ ಏರ್ಪಡಬೇಕಿದೆ. ನಮ್ಮ ಸುತ್ತಲಿನ ಜನರನ್ನೇ ಮಾತನಾಡಿಸದ, ಮತ್ತೊಬ್ಬರ ಕಷ್ಟ-ಸುಖಗಳಲ್ಲೇ ಭಾಗಿಯಾಗದ, ಸರಿ-ತಪ್ಪುಗಳಲ್ಲಿ ಭಯ ಭಕ್ತಿ ತೋರದ ಇಂತಹ ಅಂಶಗಳಿಗಿಲ್ಲದ ಭಕ್ತಿ ಭಾವ ಅದೆಷ್ಟು ಸರಿ? ದೇಶ ಸ್ವತಂತ್ರ ಪಡೆದಿದ್ದು ಮತ್ತು ಸ್ವಾತಂತ್ರ್ಯ ಪಡೆಯಲು ನಡೆದ ಯುದ್ಧ ಸಮರಗಳು, ತ್ಯಾಗ ಬಲಿದಾನಗಳು ಮತ್ತು ಸ್ವಾತಂತ್ರ್ಯ ಪಡೆಯುವಲ್ಲಿ ಭಾರತೀಯರ ಶೌರ್ಯ ಎಷ್ಟಿತ್ತು ಎನ್ನುವುದು ಇಡೀ ಜಗತ್ತಿಗೆ ತಿಳಿದ ವಿಚಾರ ಮತ್ತು ವಿಶೇಷವಾಗಿ ಕಳೆದ 74 ವರ್ಷಗಳಿಂದ ಸ್ವಾತಂತ್ರ್ಯತ್ಸವ ದಿನಾಚರಣೆಯನ್ನು ವಿಭಿನ್ನ ರೀತಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿರುವುದನ್ನು ಎಲ್ಲರೂ ಮನಗಂಡಿರುವ ವಿಚಾರ ಹಾಗೂ ಇಷ್ಟು ದಿನ ರಾಷ್ಟ್ರ ಧ್ವಜವೆಂದರೇ ಅದೊಂದು ಭಯ ಮತ್ತು ಭಕ್ತಿ ಇರುತ್ತಿತ್ತು ಆದರೇ ಈಗ ರಾಷ್ಟ್ರ ಧ್ವಜವನ್ನು ಸ್ವತಃ ಅವರವರ ಮನೆಯ ಮೇಲೆ ಪ್ರತಿಯೊಬ್ಬ ಸಾರ್ವಜನಿಕರಿಗೂ ಆರಿಸಲು ಅವಕಾಶ ಮಾಡಿಕೊಟ್ಟಿರುವುದು ಎಷ್ಟು ಸಮಂಜಷವಾಗಿದೆ? ರಾಷ್ಟ್ರ ಧ್ವಜಕ್ಕಿರುವ ಬೆಲೆ ಮತ್ತು ಗೌರವ ಇಂತಹ ಸಾರ್ವಜನಿಕವಾಗಿ ನೀಡಿದ ಅವಕಾಶದಿಂದ ಸ್ವಲ್ಪ ಕಡಿಮೆಯಾಗಬಹುದು ಮತ್ತು ರಾಷ್ಟ್ರ ಧ್ವಜದ ಮೇಲಿರುವ ಭಯ ಭಕ್ತಿ ಸ್ವಲ್ಪ ಕುಂದುತ್ತಾ ಹೋಗಬಹುದು. ಮೊದಲು ರಾಷ್ಟ್ರ ಧ್ವಜವನ್ನು ಆರಿಸಲು ಅದಕ್ಕೆ ಸೀಮಿತವಾದ ಸ್ಥಳದಲ್ಲೇ ಹಾಗೂ ನಿಗದಿ ಪಡಿಸಿದ ಸಮಯದಲ್ಲೇ ಮತ್ತು ನಿಗದಿ ಪಡಿಸಿದ ದಿನದಂದೇ ಧ್ವಜವನ್ನು ಆರಿಸಬಹುದಾಗಿತ್ತು ಆದರೆ ಇಂದು ಬೀದಿ ಬೀದಿಯಲ್ಲಿ ಅಷ್ಟೇ ಅಲ್ಲದೇ ಮನೆ ಮಾಳಿಗೆಯಲ್ಲಿ ಕಟ್ಟಿ ಕೈ ಬಿಟ್ಟಾಗ ಅದು ರಭಸದ ಗಾಳಿಗೆ ಕೀಳಬಹುದು, ಹರಿಯಬಹುದು ಅಷ್ಟೇ ಅಲ್ಲದೇ ಬೀದಿ ಬೀದಿಯಲ್ಲಿ ತಿರಂಗವನ್ನು ಹಿಡಿದು ಮೆರವಣಿಗೆ ಮಾಡುವಾಗ ಅಕಸ್ಮಾತಾಗಿ ಕೈಯಿಂದ ಜಾರಿ ಬೀಳುವಂತಹ ಸನ್ನಿವೇಶಗಳು ಬರಬಹುದು ಮತ್ತು ಈಗಾಗಲೇ ಎಷ್ಟೋ ಮನೆಗಳ ಮೇಲೆ, ಮನೆಯ ಮತ್ತು ಕಛೇರಿ, ಇಲಾಖೆಗಳ ಕಟ್ಟಡಗಳ ಮೇಲೆ ನಮ್ಮ ರಾಷ್ಟ್ರ ಧ್ವಜ ಹಾರಾಡುತ್ತಿದ್ದು ಯಾರೊಬ್ಬರೂ ಸರಿಯಾಗಿ ರಾಷ್ಟ್ರ ಧ್ವಜಕ್ಕೆ ಗೌರವ ಸೂಚಿಸುವಂತಹ ಕ್ಷಣಗಳು ಬಹಳ ವಿರಳವಾಗಿ ಕಾಣುತ್ತಿವೆ. ಹೀಗಾಗಿ ಪ್ರತಿಯೊಂದು ಕಚೇರಿ, ಇಲಾಖೆ,ಮನೆ, ಕಟ್ಟಡಗಳ ಮೇಲೆ ಹಾಗೂ ರಸ್ತೆಯುದ್ಧಕ್ಕೂ ರಾಷ್ಟ್ರ ಧ್ವಜವನ್ನು ಹಿಡಿದು ಮೆರವಣಿಗೆ ಮಾಡಿದರೆ ರಾಷ್ಟ್ರ ಧ್ವಜಕ್ಕೆ ಗೌರವ ಸಿಗುವುದೆಂಬ ನಂಬಿಕೆ ಎಷ್ಟಿದೆಯೋ ಅಷ್ಟು ಅಭಿಮಾನಕ್ಕೂ ಕೊರತೆಯಾಗುವಂತಿದೆ ಎಂಬುದು ನನ್ನ ಭಾವನೆ. ಧ್ವಜ ಕಂಬಕ್ಕೆ ಸಿಂಗಾರ ಮಾಡಿ, ಸುತ್ತಲೂ ರಂಗೋಲಿ ಬಿಡಿಸಿ, ಗಣ್ಯರೆಲ್ಲಾ ಸೇರಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ರಾಷ್ಟ್ರ ಧ್ವಜ ಹಾರಿಸಿ ತಲೆ ಎತ್ತಿ ಸೆಲ್ಯೂಟ್ ಹೊಡೆದು ರಾಷ್ಟ್ರಗೀತೆ ಹಾಡಿ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧ ಸಮರ, ತ್ಯಾಗ ಬಲಿದಾನ ಮತ್ತು ಸಾಹಸಗಳ ಕುರಿತು ಭಾಷಣ ಮಾಡಿ ಸಿಹಿ ತಿಂದು ಕೈ ಮುಗಿದು ಮನೆ ನಡೆದು ಸಂಜೆ ಸಮಯಕ್ಕೆ ಸರಿಯಾಗಿ ಸರಿಯಾದ ರೀತಿಯಲ್ಲಿ ರಾಷ್ಟ್ರ ಧ್ವಜವನ್ನು ಕೆಳಕ್ಕೆ ಇಳಿಸಿ ಗೌರವ ಸಲ್ಲಿಸಿದರೆ ಅದು ದೇಶ ಭಕ್ತಿಯೇ? ರಾಷ್ಟ್ರ ಧ್ವಜದ ಮಧ್ಯೆಇರುವ ಅಶೋಕ ಚಕ್ರದಲ್ಲಿರುವ ಗೆರೆಗಳು ದೇಶದ ಪ್ರತಿಯೊಬ್ಬ ಮಾನವನ ಮತ್ತು ಪ್ರತಿಯೊಂದು ಜೀವಿಗಳ ಏಕತೆ ಹಾಗೂ ಮಾನವೀಯತೆಯ, ಬ್ರಾತೃತ್ವ ಮನೋಭಾವಗಳನ್ನು ಮೂಡಿಸುವಂತಹ ಗೆರೆಗಳಾಗಿವೆ ಹಾಗೂ ರಾಷ್ಟ್ರ ಧ್ವಜದಲ್ಲಿರುವ ಕೇಸರಿ,ಬಿಳಿ,ಹಸಿರು ಬಣ್ಣಗಳು ಒಂದೊಂದು ಭಾವಗಳನ್ನು ಒಳಗೊಂಡಿವೆ ಹೀಗಾಗಿ ರಾಷ್ಟ್ರ ಧ್ವಜವಿಡಿದು ಘೋಷಣೆ ಕೂಗಿ ದೇಶಕ್ಕೆ ಗೌರವ ಸಲ್ಲಿಸುವುದರ ಜೊತೆಗೆ ದೇಶದ ಏಕತೆಗೆ ಒತ್ತು ಕೊಡಬೇಕಿದೆ ಮಾನವ ಮಾನವರ ಮಧ್ಯೆ ಕಚ್ಚಾಟ, ಜಗಳ,ಜಾತಿ ಜಾತಿಗಳ ಮಧ್ಯೆ ಹೊಡೆದಾಟದಂತಹ ಸನ್ನಿವೇಶಗಳಿಗೆ ಕಡಿವಾಣ ಹಾಕಿ ದೇಶದ ಏಕತೆಗಾಗಿ ಪಣತೋಡಬೇಕಿದೆ, ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತೀಯರೆಂಬ ಭಾವ ಎಲ್ಲರಲ್ಲೂ ಮೂಡಬೇಕಿದೆ ಹಾಗೂ ನಾವು ಮೊದಲು ನಮ್ಮನ್ನು ಪ್ರೀತಿಸಿಕೊಳ್ಳಬೇಕಿದೆ, ನೆರೆಹೊರೆಯವರನ್ನು ಪ್ರೀತಿಸಿ ಗೌರವಿಸಬೇಕಿದೆ, ಹಿರಿಯರಿಗೆ ಭಯ ಭಕ್ತಿ ತೋರಬೇಕಿದೆ ಮತ್ತು ದೇಶ ಪ್ರೇಮದ ಜೊತೆ ಪ್ರಕೃತಿ ಪ್ರೇಮ, ಪರಿಸರ ಪ್ರೇಮ, ನಿಸರ್ಗ ಪ್ರೇಮವೂ ಅತಿಮುಖ್ಯವಾಗಿದೆ ಸುತ್ತಲಿನ ಪರಿಸರವನ್ನು ಸ್ವಚ್ಛ ಮತ್ತು ಸಂರಕ್ಷಣೆ ಮಾಡುವ ಮೂಲಕ ಹಾಗೂ ಜಾತಿ ಬೇಧ ಲಿಂಗ ತಾರತಮ್ಯ ಎಣಿಸದೆ ಎಲ್ಲರೂ ಸಹಾನುಭೂತಿಯಿಂದ ಎಲ್ಲರೂ ಒಂದಾಗಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುನ್ನೆಡೆದರೆ ಮಾತ್ರ ನಮ್ಮ ದೇಶ ಇಡೀ ಜಗತ್ತಿಗೆ ಮಾದರಿಯಾಗುವಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಇವೆಲ್ಲಾ ಅಂಶಗಳನ್ನು ಪಾಲನೆ ಮಾಡಿದ್ದಲ್ಲಿ ಭಾರತೀಯರಾದ ನಾವುಗಳು ನಮ್ಮ ದೇಶವನ್ನು ಜಗತ್ತಿಗೆ ವಿಶೇಷವಾಗಿ ಪರಿಚಯಿಸಲು ಸಾಧ್ಯವಾಗುತ್ತದೆ.

- ಎಚ್.ಡಿ.ಹೊಗರಾನಾಳ
ಮೊ: 9945246234.


ಹೃದಯದ ಕನಸು (ಕವಿತೆ) - ಸಂತೋಷ ಆರ್ ಉಡೇವು.

ಕನಸೆಂಬಾ ನನಸಿನೊಳಗೇ 
ನಿನ್ನ ಬಿಂಬ ನನ್ನೊಳಗೆ 
ಪ್ರತಿ ಘಳಿಗೆ ನಿನ್ನ ಚಿಂತೆ
ನಿದ್ರೆ ಬಾರದು ಮೆದುಳಿಗೆ...

ಹಸಿವು ಆಗದು ದೇಹಕ್ಕೆ...
ಉಸಿರಲ್ಲೇ ಇರುವೇ ನಿನ್ನಂತು 
ಯಾಕೇ ತೋಚಿದೆ 
ಈ ಸ್ನೇಹನಾ...
ಮುಳಿವು ಆಯಿತೇ 
ಆ  ಪ್ರೀತಿನಾ...

ಬಯಸಿದ್ದು ಬಾಳಲ್ಲಿ ಸಿಗಲಿಲ್ಲ...
ನೋವುಂಟು ಮಾಡಿದೆ
ಮನದಲ್ಲಿ...
ಹಗಲು ಇರಳು ನಿನ್ನ ಚಿಂತೆ
ಯಾರಿಗೆ ಬೇಕು ಈ..ನೋವು..

ಕಾಲವೇ ತಿರುಗಿದ ಲೋಕನೇ 
ನೀನೆ ತಿರುಗಲಿಲ್ಲ ಯಾಕೇನೆ 
ಹುಡುಕಾಟ ಸಾಕು ಎನಿಸಿದೆ ಬಾಳಲ್ಲಿ
ಜೀವವೇ ಹೋದಂತಿದೇ ನೋವಲ್ಲಿ

ನನ್ನ ಕನಸಿನ ಮೂಟೇಯಲಿ 
ಕಾಡುತ್ತಿದೆ ನೋವೊಂದು
ಸಿಗದೆ ಹೋದರೆ ನೀ ಇಂದು
ಮರಳಿ ಬಾರದ ಊರಿಗೆ 
ಪಯಣ ಸಾಗುತ್ತಿದೆ ನಿನ್ನಾಣೆ 

ಒಮ್ಮೆಯಾದರು  ಯೋಚಿಸು 
ಬಾಳು ಕೊಡುವೆನು 
ನನ್ನ  ಚೆಲುವೆ... ನನ್ನೊಲವೆ...ನನ್ನ.. .ಚೆಲುವೆ

- ಸಂತೋಷ ಆರ್ ಉಡೇವು 
ಮೊಳಕಾಲ್ಮುರು
9008936478.


ಬುಡಕಟ್ಟು ನಕ್ಷತ್ರ (ಕವಿತೆ) - ಬಸವರಾಜ ನಾಗೂರ ಮುದ್ದೇಬಿಹಾಳ (ಬಾವೂರ).

ಬನದ ಮೊಗ್ಗು ಹೂವಾಗಿ ಅರಳಿ ನಿಂತಿತು
ಬೆಟ್ಟ ಗುಡ್ಡ ಸುಳಿದು ಸುತ್ತಿ ನಾಡ ಸೇರಿತು
ಕಲ್ಲು ಮುಳ್ಳಿನಲ್ಲೂ ಪರಿಮಳವ ಬೀರುತ
ಬೆಳೆಬೆಳೆಯುತ ಇಳೆಯ ತುಂಬ ಸೌಗಂಧ ಹರಡಿತು ॥

ಆದಿವಾಸಿ ಬುಡಕಟ್ಟು ಮನೆಗೆ ಬೆಳಕು ತಂದಳು
ನಿಷ್ಠೆಯಿಂದ ವಿದ್ಯೆ ಕಲಿತು ಗುಮಾಸ್ತೆಯಾದಳು
ತಾತ್ವಿಕ ಬದುಕಲಿ ಕಡುಕಷ್ಟದ ಕಹಿಯನುಣ್ಣುತ
ಆದಿವಾಸಿಗಳ ಬದುಕಿಗೆ ಆಸರೆಯಾಗಿ ನಿಂತಳು ॥

ಅರಳುವ ಕುಸುಮಗಳ ಮಸ್ತಕವ ತುಂಬಲು
ಗುಮಾಸ್ತೆ ಕಜ್ಜವ ತೊರೆದು ಶಿಕ್ಷಕಿಯಾದಳು
ನೂರಾರು ಮಕ್ಕಳಿಗೆ ನಿತ್ಯ ಅಕ್ಷರವನುಣಿಸುತ
ಸದ್ಗುಣಗಳ ತುಂಬಿ ಭರತಮಾತೆಯ ರಕ್ಷಣೆಗೆ ಬಿಟ್ಟಳು ॥

ವಿಧಿಯಾಟದಲಿ ಪತಿಯ ಕಳೆದುಕೊಂಡು ಒಂಟಿಯಾದಳು
 ಕರುಳಬಳ್ಳಿಗಳೆರಡನೂ ಕಳೆದುಕೊಂಡು ಕಂಗಾಲಾದಳು
ಬ್ರಹ್ಮಕುಮಾರಿ ಆಧ್ಯಾತ್ಮ ಚಳುವಳಿ ಸೇರಿ ಶೋಕ ಮರೆಯುತ
ತನ್ನ ತನು ಮನವನು ಭರತಮಾತೆ ಸೇವೆಗೆ ಮೀಸಲಿಟ್ಟಳು ॥

ಜನಸೇವೆ ಮಾಡಲೆಂದು ರಾಜಕೀಯಕೆ ದುಮುಕಿದಳು
ರಾಯರಂಗಪುರದ ಕೌನ್ಸಿಲರಾಗಿ ಯಶಸ್ಸು ಕಂಡಳು
ಓಡಿಶಾ ವಿಧಾನಸಭೆಯಲಿ ಸಚಿವೆಯಾಗಿ ಸೇವೆ ಗೈದು
ಜಾರ್ಖಂಡದ ಮೊದಲ ಪ್ರಜೆಯಾಗಿ ಕೀರ್ತಿ ಪಡೆದಳು  ॥

ಬುಡಕಟ್ಟು ನಕ್ಷತ್ರವೊಂದು ಭಾರತದ ತಾರಾಲಯ ಸೇರಿತು
ಪಳಪಳನೇ ಹೊಳೆಯುತ ಬೆಳಕು ಬೀರಲು ಮುಗಿಲ ಏರಿತು
ಕಾಡ ಹೂವ ತಲೆಗೆ ಮುಡಿದು ಭರತಮಾತೆಯು ನಲಿದಿತ್ತು
ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಲು ಹರುಷ ಉಕ್ಕಿತು ॥

- ಬಸವರಾಜ ನಾಗೂರ ಮುದ್ದೇಬಿಹಾಳ (ಬಾವೂರ).


ನನ್ನ ಕವನದ ಸ್ಪೂರ್ತಿ (ಕವಿತೆ) - ನವೀನ್ ಎಮ್, ಬೈರಸಂದ್ರ.

ನಾನು ಕವನ ಬರೆಯಲು ಕೂತರೆ 
ಸನ್ನಿವೇಶ ಬೇಕಿಲ್ಲ ! 
ಸ್ಪೂರ್ತಿಯೂ ಬೇಕಿಲ್ಲ ! 

ಕಣ್ಣು ಮುಚ್ಚಿ ಕುಳಿತಾಗ 
ನನ್ನ ಮುಂದೆ ಬರುವ 
ನಿನ್ನ ನಗು, 
ಪ್ರೀತಿ, 
ನೀ ನನ್ನೊಂದಿಗೆ 
ಕಳೆದ ಕ್ಷಣಗಳು....

ಅಂತ್ಯದಲ್ಲಿ  ನೀ ಬಿಟ್ಟು ಹೋದ ನೆನಪು,

 ಇವುಗಳೇ ನನಗೆ ಸ್ಪೂರ್ತಿ,  
ಸನ್ನಿವೇಶ.........
- ನವೀನ್ ಎಮ್, ಬೈರಸಂದ್ರ. ಕೋಲಾರ ಜಿಲ್ಲೆ. # 6364356820


ಭೀಮ ಜ್ಯೋತಿ (ಕವಿತೆ) - ಐಶ್ವರ್ಯ ಎಸ್, ಶರೆಗಾರ.

ಮಾಹೋದಲ್ಲಿ ಜನಿಸಿದ ವೀರ 
ಮಹಿಳಾ ಸ್ವಾತಂತ್ರ್ಯ ನೀಡಿದ ಶೂರ 
ಸಮಾನತೆಯೆ ಜೀವಾಳವೆಂದರು
ದೀನ-ದಲಿತರಿಗೆ ಸ್ಪೂರ್ತಿಯಾದರು
 
ಭೀಮ ಯುಗದ ಆರಂಭವಾಯಿತು
ಮನುಸ್ಮೃತಿಯ ಧಹನವಾಯಿತು
ಅಷ್ಪ್ರೃಷ್ಯತೆಯ ಕ್ರಾಂತಿಯಾಯಿತು
ಭೀಮ ಜ್ಯೋತಿಯು ಬೆಳಗ ಹತ್ತಿತು 
 
ಜ್ಞಾನ ಭಂಡಾರದ ಒಡೆಯನಿವನು 
ಗ್ರಂಥ ಸಂಗ್ರಹಣೆಯ ಶ್ರೀಮಂತನಿವನು
ನೂಂದ  ವರ್ಗಕೆ ದಾರಿದೀಪವು
ದೀನ-ದಲಿತರಿಗೆ ಸ್ಪೂರ್ತಿ ಚಿಲುಮೆಯು

ಹೆಜ್ಜೆ ಹೆಜ್ಜೆಗೂ ಅವಮಾನವಾದರೂ
ಪೆಟ್ಟು ತಿಂದಷ್ಟು ಗಟ್ಟಿಯಾದರೂ
ತನ್ನ ಜನಗಳ ಏಳಿಗೆ ಬಯಸಿ 
ಹಗಲು ರಾತ್ರಿ ಅಧ್ಯಯನ ಮಾಡಿದರು 

ಜಾತಿಗ್ರಸ್ತರಿಂದ ದೂರಲ್ಪಟ್ಟರು
ಪುಸ್ತಕ ಸಂಗದಲ್ಲಿ ನಲಿದಾಡಿದರು 
ವಿಶ್ವ ನಡುಗಿಸುವ ಲೇಖನಿ ಹಿಡಿದು
ದೇಶಕೆ ಸಂವಿಧಾನ ಕೊಡುಗೆ ಕೊಟ್ಟರು   

 - ಐಶ್ವರ್ಯ ಎಸ್, ಶರೆಗಾರ,  ಯರಗಟ್ಟಿ.

ಮಂಗಳವಾರ, ಆಗಸ್ಟ್ 2, 2022

ರಜಾದಿನಗಳಲ್ಲಿ ಮಕ್ಕಳ ಚಟುವಟಿಕೆಗಳು (ಲೇಖನ) - ಸವಿತಾ ಆರ್ ಅಂಗಡಿ.

ಶಾಲೆಗಳು ರಜೆ ಆಗ್ತಾ ಇದ್ದಂಗೆ ಮಕ್ಕಳಿಗೆ ಎಲ್ಲಿಲ್ಲದ ಸಂತೋಷ. ಸಂಭ್ರಮ. ಅವರ ತಲೆಯಲ್ಲಿ ಏನೇನೋ ವಿಚಾರಗಳು ಪ್ರಾರಂಭವಾಗಲು ಶುರು ಆಗುತ್ತವೆ.
 ಆ ಸಂದರ್ಭದಲ್ಲಿ ಅವರು ಮನೆಯಲ್ಲಿ ಏನಾದರೂ ಒಂದು ಚಟುವಟಿಕೆ ಮಾಡ್ತಾನೆ ಇರ್ತಾರೆ. ಒಂದು ಅಥವಾ ಒಂದು ಪೆನ್ಸಿಲನ್ನು ತೆಗೆದುಕೊಂಡು ಬುಕ್ ನಲ್ಲಿ ಏನಾದರೂ ಗೀಚೋದು. ಗೋಡೆಗಳ ಮೇಲೆ ಏನಾದರೂ ಬರೆಯುವುದು. ಚಿತ್ರಗಳನ್ನು ಬಿಡಿಸುವುದು ಮಾಡುತ್ತಾರೆ. ಅದರಲ್ಲಿ ವಾಹನಗಳನ್ನು  ಪಕ್ಷಿಗಳನ್ನು ನಿಸರ್ಗದ ಸೌಂದರ್ಯವನ್ನು ಬಿಡಿಸುವರು. ಇನ್ನೂ ಅನೇಕ ರೀತಿಯಲ್ಲಿ ಅವರಿಗೆ ಯಾವುದರಲ್ಲಿ ಹೆಚ್ಚಿನ ಆಸಕ್ತಿ ಇರುವುದು ಅದನ್ನು ತೆಗಿತಾ  ಕೂಡುವರು. ಅದಲ್ಲದೆ ಕೆಲವು ಮಕ್ಕಳು ಮನೆಯಲ್ಲಿರುವ ಗಾರ್ಡನ್ನಲ್ಲಿ ಗಿಡಗಳನ್ನು ನೆಡುವುದು. ಮತ್ತು ಹೂವಿನ ಗಿಡಗಳನ್ನು ನೆಡುವುದು ಮೋಹನ ಹಂಪಲ ಗಿಡಗಳನ್ನು ನೆಡುವುದು ಮಾಡುವರು. ಮತ್ತು ಎಲ್ಲ ರೀತಿಯ ವಾಹನಗಳನ್ನು ಜೋಡಿಸಿಕೊಂಡು ಅದರ ಜೊತೆ ಆಟ ಆಡುವುದು. ಮತ್ತು ಇನ್ನು ಕೆಲವು ಹುಡುಗರು ತಮ್ಮ ಓಣಿಯಲ್ಲಿರುವ ಎಲ್ಲ ಹುಡುಗರನ್ನು ಕರೆದುಕೊಂಡು ಚಿನ್ನಿ ಪಿನ್ನಿ ಆಟ. ಗುಂಡ ಆಡುವುದು. ಕೋಕೋ ಆಟ ಆಡುವುದು. ಜೋಕಾಲಿ ಆಟ. ಬಿಲ್ಲು ಬಾಣದ ಆಟ ಕ್ರಿಕೆಟ್ ಆಟ. ವಾಲಿಬಾಲ್ ಆಡುವುದು ಟೆನಿಸ್ ಆಡುವುದು ಹೀಗೆ ಕಾಲ ಕಳೆಯುವರು. ಮತ್ತೆ ಕೆಲವು ಮಕ್ಕಳು ತಮ್ಮ ಸಂಬಂಧಿಗಳ ಊರಿಗೆ ಹೋಗುವುದು ಅಲ್ಲಿ ಎಲ್ಲರನ್ನೂ ಭೇಟಿಯಾಗುವುದು. ಅಲ್ಲಿ ನೋಡಬೇಕಾದ ಸ್ಥಳಗಳನ್ನು ಹೋಗಿ ನೋಡಿಕೊಂಡು ಬರುವುದು ಮಾಡುತ್ತಾರೆ.
 ಆದರೆ ಇಂದಿನ ಮಾಡರ್ನ್ ಯುಗದಲ್ಲಿ ಮಕ್ಕಳ ಚಟುವಟಿಕೆಗಳು ಬೇರೆ ಬೇರೆಯಾಗಿರುತ್ತವೆ. ಶಾಲೆಗೆ ರಜೆ ಆಗ್ತಿದ್ದಂಗೆ ರಜೆಯ ಶಿಬಿರಗಳು ಕೂಡ  ಪ್ರಾರಂಭವಾಗಿರುತ್ತವೆ. ಅಲ್ಲಿ 9:00 ಗಂಟೆಗೆ ಹೋದರೆ ಸಂಜೆ 5 ಗಂಟೆಯವರೆಗೆ ಅಲ್ಲಿ ಕಾಲ ಕಳೆಯುವರು. ಅಲ್ಲಿ ಅವರಿಗೆ ಸಂಗೀತ ಕ್ಲಾಸ್. ಡಾನ್ಸ್ ಕ್ಲಾಸ್. ಏರೋಬಿಕ್ಸ್. ಗಿಟಾರ್ ನುಡಿಸುವುದು. ಇವುಗಳನ್ನೆಲ್ಲ ಮಕ್ಕಳಿಗೆ ಹೇಳಿಕೊಡುವವರು. ಮತ್ತೆ ಅಲ್ಲಿ ಈಜುಕೊಳವನ್ನು ಮಾಡಿರುವರು ಅಲ್ಲಿ ಮಕ್ಕಳಿಗೆ ಈಜಾಡಲು ಹೇಳಿಕೊಡುತ್ತಾರೆ. ಮತ್ತು ಕರಾಟೆ ಆಡುವುದು ಹೇಳಿಕೊಡುತ್ತಾರೆ. ಯೋಗ ಮಾಡಿಸುವರು. ಈ ರೀತಿಯಾಗಿ ಶಿಬಿರಗಳಲ್ಲಿ ಎಲ್ಲ ತರಹದ ಚಟುವಟಿಕೆಗಳು ಇರುವವು. ಇದರಿಂದ ಮಕ್ಕಳಿಗೆ ಬೇಸಿಗೆ ರಜೆ ಕಳೆಯಲು ಅನುಕೂಲವಾಗುವುದು. ಮಕ್ಕಳು ಯಾವುದಾದರೊಂದು ಚಟುವಟಿಕೆಗಳಲ್ಲಿ ಇರುವುದರಿಂದ ಅವು ಅವರ ಆರೋಗ್ಯ ವೃದ್ಧಿಸುತ್ತದೆ. ಇದರಿಂದ ಅವರ ಜೀವನ ವಿಕಸನಕ್ಕೆ ಕಾರಣವಾಗಬಹುದು. ರಾಜಕಾರಣ ಮಕ್ಕಳನ್ನು ಯಾವಾಗಲೂ ಸುಮ್ಮನೆ ಕೊಡಲು ಬಿಡಬಾರದು. ಯಾವುದಾದರೊಂದು ಚಟುವಟಿಕೆಗಳಲ್ಲಿ ಸೇರಲು ಹೇಳಿಕೊಡಬೇಕು.
 ಇದರಿಂದ ಅವರ ವ್ಯಕ್ತಿತ್ವ ವಿಕಸನ ಗೊಳ್ಳುವುದು. ಹಾಗೆ ಅವರು ಶಾಲೆಗಳಲ್ಲಿ ಅಭ್ಯಾಸದ ಕಡೆ ಹೆಚ್ಚಿನ ಶಕ್ತಿಯನ್ನು ಕೂಡವಹಿಸಬಲ್ಲರು. ಇದು ಎಲ್ಲ ತಂದೆ-ತಾಯಿಯರು ಮಾಡುವಂತಹ ಕರ್ತವ್ಯ. ಇಂದಿನ ಮಕ್ಕಳು ಬರೀ ಮೊಬೈಲ್ ಟಿವಿ ನೋಡುವುದರಲ್ಲಿ ಕಾಲ ಕಳೆಯುವರು. ಅದು ಅವರ ಆರೋಗ್ಯವನ್ನು ಹದಗೆಡಿಸುತ್ತದೆ. ಹಾಗೂ ಮಾನಸಿಕವಾಗಿ ಅವರು ಬೇರೆಯವರ ಜೊತೆ ಒಡನಾಟಗಳು ದೂರವಾಗುವವು. ಮೊಬೈಲ್ ಅನ್ನು ಬಳಸುವುದು ಎಷ್ಟು ಅವಶ್ಯವಿರುತ್ತದೆಯೋ ಅಷ್ಟೇ ಬೆಳೆಸಬೇಕು. ಹೆಚ್ಚಿನ ರೀತಿಯಲ್ಲಿ ಬಳಸಿದರೆ ಅವರ ಕಣ್ಣು ಹಾಳಾಗುವುದು. ತಲೆನೋವು ಬರುವುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರೀತಿಯಾಗಿ ಮಕ್ಕಳು ಟಿವಿ ಮೊಬೈಲ್ನಲ್ಲಿ ತೊಡಗುವುದನ್ನು ಬಿಟ್ಟು ಉಳಿದ ಹೊರಗಿನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಇದರಿಂದ ಅವರ ದೈಹಿಕ ಹಾಗೂ ಮಾನಸಿಕವಾಗಿ ಸದೃಢ ಗೊಳ್ಳುವರು.
- ಸವಿತಾ ಆರ್ ಅಂಗಡಿ. ಮುಧೋಳ. ಬಾಗಲಕೋಟ ಜಿಲ್ಲೆ.


ಪೂಜಿಸೋಣ ಬನ್ನಿ (ಕವಿತೆ) - ರತ್ನಾ ಕೆ.ಭಟ್ ತಲಂಜೇರಿ.

ಶ್ರಾವಣ  ಶುಕ್ಲ ಪಂಚಮಿ ಹಬ್ಬ
ನಾಗದೇವರ ಪೂಜಿಸೋಣ ಬನ್ನಿ
ಮಿಂದು ಮಡಿಯನುಟ್ಟು ಭಜಿಸಿ
ಮಂಗಳಾರತಿ  ಬೆಳಗೋಣ ಬನ್ನಿ

ಶುಚಿಯ ಮಾಡಿ ರಂಗೋಲಿ ಬಿಡಿಸಿ
ತಂಬಿಟ್ಟು ಉಂಡೆ ನೈವೇದ್ಯ ಅರ್ಪಿಸಿ
ಮಣ್ಣಿನ ಋಣವ ತೀರಿಸೋಣ
ನಾಗಪ್ಪನ ಗುಣಗಾನ ಮಾಡೋಣ

ಅಣ್ಣ-ತಂಗಿ ಕರುಳ ಸಂಬಂಧ
ಬಿಡಿಸಲಾರದ ಒಲವ ಬಂಧ
ಸಂಸ್ಕೃತಿ ಸಂಸ್ಕಾರ ಆಚರಣೆಯು
ಭಾರತದ ನೆಲವು ಪುಣ್ಯ ಕಣವು

ಕೇದಗೆ ಅರಶಿನ ನಾಗ ಸಂಪಿಗೆ
ಸಿಂಗಾರ ಅರಳು ಸೀಯಾಳ ಹಣ್ಣು
ಕಲ್ಲನಾಗನಿಗೆ ನೊರೆ ಹಾಲು ಧಾರೆ
ಪೊರೆಯೊ ನಾಗಪ್ಪ ಕೇಳೋಣ ಬಾರೆ

ಜೋಕಾಲಿ ಕಟ್ಟಿ ಜೀಕೋಣ ಬನ್ನಿರೇ
ಹಾಡನ್ನು ಗುನುಗುತ್ತ ಆರತಿ ಬೆಳಗಿರೆ
ಊರಿಗೆ ಬಂದ ಕಷ್ಟವ ಪರಿಹರಿಸು
ಜೀವರ ಜೀವಕೆ ರಕ್ಷಣೆ ಹರಿಸು

ಪಂಚಮಿ ಹಬ್ಬ ಸಡಗರದಿ ಮಾಡೋಣ
ಉಂಡೆ ಬೆಲ್ಲ ಪಾಯಸ ಸವಿಯೋಣ
ತವರಿನ ಮನೆಯ ನೆನೆಯೋಣ
ಗೆಳತಿಯರ ಕೂಡೆ ನಲಿಯೋಣ

- ರತ್ನಾ ಕೆ.ಭಟ್ ತಲಂಜೇರಿ.


ಚಪ್ಪಲಿಗಳು (ಕವಿತೆ) - ಮಹಮ್ಮದ್ ರಫೀಕ್ ಕೊಟ್ಟೂರು.

ಚಪ್ಪಲಿಗಳು ತಾವೇ ಚಲಿಸಲಾರವು
ಮನೆ ಹೊರಗೇ 
ಒಂದು ಮತ್ತೊಂದರ ಸಾಂತ್ವಾನಗೈಯುತ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಬೆನ್ನ ಮೇಲೆ ಒಡೆಯನ 
ಕಾಲುಗಳು 
ಕಣ್ಣು ಕಿವಿಗಳ ಮುಚ್ಚಿಕೊಂಡಿಹವು
ತನ್ನವರು ಕಾಣದಂತೆ , ಕೇಳದಂತೆ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಕಲ್ಲು ಮುಳ್ಳುಗಳಿಗೆ 
ತನ್ನ ಎದೆಯೊಡ್ಡಿ 
ಕೊಚ್ಚೆಯಲೂ  ನಡೆಯುವ ಅವನ
ಕಾಲುಗಳ ಅಪ್ಪಿಕೊಂಡಿಹವು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಎದೆ ಸವೆದು ಬೆನ್ನು ಬಾಗಿದರೂ
ಬೆನ್ನು ಬಿಡದ ಅವನು 
ತುಳಿಯುತಿಹನು ತುಳಿಯುತಲೆ ಇಹನು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು.

  - ಮಹಮ್ಮದ್ ರಫೀಕ್ ಕೊಟ್ಟೂರು.



ಕಂಪು ಅಳಿಯದಿರಲಿ (ಕವಿತೆ) - ತುಳಸಿದಾಸ ಬಿ.ಎಸ್.

ದನಿ ಕೇಳಿ ಮನವು
ಕುಣಿದಂತೆ ನವಿಲು
ಜಾಣೆ ವಾರಿ ನೋಟಕೆ
ಇಣುಕಿದಂತೆ ಶಶಿಯು

ಚಿನ್ನ ನಿನ್ನ ನುಡಿಯು
ಜೇನಿನಂತೆ ಸವಿಯು
ಮನದ ಭಾವ ತಿಳಿಯಲು
ಮಿನುಗಿದಂತೆ ತಾರೆಯು

ತಾಳದಾದ ಬಯಕೆಗೆ
ಬಾಳೆಯಂತೆ ಬಾಗಿದೆ
ಗಳಿಸಿ ಪ್ರೀತಿ ನೆಲದ ಹಾಗೆ
ಅಳಿಯದಂತೆ ಉಳಿಯಲಿ

ಬೆಸೆದ ಬಂಧ ಹೂವಿನಂತೆ
ಉಸಿರು ಗಂಧ ಸೂಸಲಿ
ಹುಸಿಯದಂತೆ ಪ್ರೀತಿ ಬಳ್ಳಿ
ಹಸಿರು ಚದುರಿ ಹಬ್ಬಲಿ

ತಂಪನೆರೆವ ಗಾಳಿಯಂತೆ
ಗುಂಪು ಪ್ರೀತಿ ಸಾಗಲಿ
ಇಂಪು ಸುಖದ ನಿದ್ರೆಯಂತೆ
ಕಂಪು ಅಳಿಯದಿರಲಿ
- ತುಳಸಿದಾಸ ಬಿ. ಎಸ್.


ನಿತ್ಯ ಕಾಯಕವಾಸಿ (ಕವಿತೆ) - ರಾಕೇಶ್ ಡಿ ವೀರಾಪುರ.

ನಿತ್ಯ ಕಾಯಕವಾಸಿ ನಮ್ಮ ರೈತನು
ಬೇಸಾಯವ ಕಸುಬಾಗಿಸಿಕೊಂಡವನು
ಮಳೆಯ ನಡುವೆ ದುಡಿಯುವಾತನು
ವರ್ಷ ಪೂರ್ತಿ ಶ್ರಮ ಪಡುವ ಧೀರನು
 
ತಾನು ಹಸಿದಿದ್ದರೂ ಈ ನಮ್ಮ ರೈತನು
ದೇಶದ ಹೊಟ್ಟೆ ತುಂಬಿಸುವ ಗುಣದವನು
ತನಗಾಗಿ ಹೆಚ್ಚೇನು ನಿರೀಕ್ಷೆಯ ಮಾಡದವನು
ದೇಶಕ್ಕಾಗಿ ನಿತ್ಯ ಬೆವರ ಹನಿಯ ಬಸಿಯುವನು

 ಬಂದರೂ ಸಮಸ್ಯೆಗಳು ನೂರಾರು ಜೀವನದಿ
ಎದೆಗುಂದದೆ ದುಡಿಯುವ ನಿತ್ಯವು ಕಾಯಕದಿ
ಇದ್ದರೂ ಸಾಲದ ಮಾಡಿರುವ ಭಯವು ಮನದಿ
ನಂಬಿಕೆ ಇಡುವ ಒಳ್ಳೆಯ ಫಸಲಿನ ನಿರೀಕ್ಷೆಯಲಿ

 ರೈತ ಬೆಳೆದ ಬೆಳೆಗಳಿಗೆ ಸಿಗದೆ ಬೆಂಬಲ ಬೆಲೆ
ಹೆಚ್ಚಾಗುತ್ತಿವೆ ರೈತರು ಕುಣಿಕೆಗೆ ಕೊಡುವ ತಲೆ
ಅರಿಯಬೇಕಿದೆ ನಾವೆಲ್ಲರೂ ಒಮ್ಮೆ ಅವನ ಬೆಲೆ
ಮಾಡದಿದ್ದರೆ ಸಹಾಯವ ಅಳಿವುದು ನಮ್ಮ ನೆಲೆ

ಹೆತ್ತ ತಾಯಿಯ ಮೇಲಿರುವಂತೆ  ಮಮಕಾರ
ಸ್ವಲ್ಪವಾದರೂ ಇರಲಿ ರೈತನ ಮೇಲೆ ಕನಿಕರ
ರೈತರಿದ್ದರೆ ಸೌಕ್ಯವು ನಮ್ಮೆಲ್ಲರ ಈ ಜೀವನ
ಅದನು ಅರಿತು ಅನ್ನದಾತರ ಗೌರವಿಸೋಣ.
- ರಾಕೇಶ್ ಡಿ ವೀರಾಪುರ.


ಬಾ ಮಳೆಯೇ ಬಾ (ಕವಿತೆ) - ಶಾಂತಾರಾಮ ಶಿರಸಿ.

ನಾನು ನಿನಗಾಗಿ ಕಾದಿರುವ ಕಡಲು,
ಹನಿ ಹನಿಯಾಗಿ ಸುರಿದು,
ಈ ಭುವಿಯ ದಾಹವ ಇಂಗಿಸಲು,
ಮನುಜರು ಮಾಡಿಹ ಕೊಳೆಯ ತೊಳೆದು ಸ್ವಚ್ಚಾವಾಗಿಸು ಬಾ,
ಮಿಕ್ಕಿದ್ದು ನೀರಾಗಿ ಉಕ್ಕಿ ಹರಿಯಲು,
ಬಾ ಮಳೆಯೇ ಬಾ
ಕಡಲ ಒಡಲ ಸೇರಲು..

ಬಿಸಿಯಾಗಿ ಒಣಗಿಹ ಈ ಭೂ ಸಿರಿಯ ತಣಿಸಿ ಹಸಿರಾಗಿಸು ಬಾ,
ಭುವಿಯ ಉಳುವ ರೈತನ ಮೊಗದಲಿ ನಗುವ ತರಿಸು ಬಾ,
ಹನಿಗಳಾಗಿ ಸುರಿದು ಬೇಸರದಿ ಮನಕೆ ನೀರಾಗಿ ಸೋಕಿ ಅಪ್ಪಿಕೊಳ್ಳು ಬಾ,
ನಿನ್ನ ಹನಿಗಳಲ್ಲಿ ಮೈ ಒಡ್ಡಿ ಕುಣಿಯಬೇಕೆಂಬ ಈ ಮನದಾಸೆಯ ತೀರಿಸಲು ಬಾ ಮಳೆಯೇ ಬಾ...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106237



ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...