ಸೋಮವಾರ, ಜನವರಿ 30, 2023

ಬಣ್ಣದ ಬದುಕು ಯಾಕೂಬ (ಕೃತಿ ಪರಿಚಯ) - ಶ್ರೀಮತಿ ಮಾಲಾ, ಚೆಲುವನಹಳ್ಳಿ.

ಸಿನಿಮಾ, ಕಿರುಚಿತ್ರ, ಧಾರಾವಾಹಿಗಳಂತೆ ರಂಗಭೂಮಿಯೂ ಮನೋರಂಜನೆ ನೀಡುವಲ್ಲಿ ಅತೀ ಪ್ರಮುಖ ಪಾತ್ರ ವಹಿಸಿ ಜನತೆಯ ಮನದಲ್ಲಿ ಸ್ಥಿರಕಾಲ ಉಳಿfಯುವಲ್ಲಿ ಯಶಸ್ವಿಯಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯೂ ಕೂಡ ಅತ್ಯಂತ ಪ್ರತಿಭಾವಂತ ಕಲಾವಿದರನ್ನೂ, ನಿರ್ದೇಶಕರನ್ನೂ, ಬರಹಗಾರರನ್ನೂ ಹೊಂದಿ ಕಲಾಕ್ಷೇತ್ರದಲ್ಲಿ ಶ್ರೀಮಂತಿಕೆಯಿಂದ ಬೀಗುತ್ತಿರುವುದು ಸಂತಸದ ವಿಚಾರ . ಜಿಲ್ಲೆಯ ಹಿರಿಯ ಹಾಗೂ ಜನಪ್ರಿಯ ಸಾಹಿತಿಗಳ ಪಟ್ಟಿಯಲ್ಲಿ ರಾರಾಜಿಸಬಹುದಾದವರಲ್ಲಿ ಶ್ರೀಯುತ ಗೊರೂರು ಅನಂತ ರಾಜು ಅವರೂ ಒಬ್ಬರು. ಅವರ ಬಿಡುವಿಲ್ಲದ ಲೇಖನಿಯಿಂದ ಧಾರಾಕಾರವಾಗಿ ಹರಿದುಬರುವ ಕಥೆ, ಕವನ, ಲೇಖನಗಳು ಜನರ ಮನಸ್ಸಿನಲ್ಲಿ ಓದುವ ಆಸಕ್ತಿಯನ್ನು ಮೂಡಿಸುವುದರೊಂದಿಗೆ ಮೌಲ್ಯಯುತವಾಗಿಯೂ ವಿಶಿಷ್ಟ, ವಿಶೇಷತೆಯೊಂದಿಗೆ ಹಲವಾರು ಉತ್ತಮ ಮಾಹಿತಿಗಳನ್ನೊಳಗೊoಡಿರುತ್ತವೆ.
   ಈ ನಿಟ್ಟಿನಲ್ಲಿ ಶ್ರೀಯುತರ ರಂಗಭೂಮಿಯ ನಾಟಕಗಳ ಬಗೆಗಿನ ಲೇಖನಗಳು ಅತ್ಯಂತ ಮಹತ್ವಪೂರ್ಣವಾಗಿ ಮೂಡಿಬಂದಿದ್ದು  ಓದುಗರ ಕಣ್ಮುಂದೆ ದೃಶ್ಯಾವಳಿಗಳು ಪ್ರತ್ಯಕ್ಷವಾದಂತೆ ಅನ್ನಿಸದೇ ಇರದು.
   ಉತ್ತಮ ರಂಗಪ್ರಯೋಗ ಟಿಪ್ಪುವಿನ ನಿಜ ಕನಸುಗಳು ನಾಟಕದ ಲೇಖನವು ಟಿಪ್ಪುವಿನ ಸೋಲು ಗೆಲುವು ರಾಜತಂತ್ರಗಳ ಬಗೆಗೆ, ಹಾಗೂ ಅವನ ಮತ ವಿಸ್ತರಣೆಯೇ ಮುಖ್ಯ ಉದ್ದೇಶವಾಗಿದ್ದುದರ ಬಗ್ಗೆ, ವಿಸ್ತ್ರತವಾಗಿ ಬೆಳಕು ಚೆಲ್ಲಿ ಸ್ವತಃ ಪಾತ್ರಗಳು ಸನ್ನಿವೇಶಗಳು ಸಂಪೂರ್ಣ ಕಥಾನಕವೇ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ.
    ಡಾ. ರಾಜಪ್ಪ ದಳವಾಯಿಯವರ ವಿ ದ ಪೀಪಲ್ ಆಫ್ ಇಂಡಿಯಾದಲ್ಲಿ ಡಾ.ಅಂಬೇಡ್ಕರ್ ರವರ ಜೊತೆಗೆ ಸಂವಿಧಾನ ರಚನೆಯ ಪೂರ್ಣ ಮಾಹಿತಿಯೊಂದಿಗೆ ನಡೆದ ಕಾರ್ಯಾಗಾರ ಅದರಲ್ಲಿ  ಮಹಿಳೆಯರು ವಹಿಸಿದ ಮುಖ್ಯ ಪಾತ್ರವನ್ನು ವೈಭವೀಕರಿಸಿದ್ದಾರೆ 
   ವಿಭಿನ್ನ ಏಕ ವ್ಯಕ್ತಿ ರಂಗಪ್ರಯೋಗ ತಾಯಿಯಾಗುವುದೆಂದರೆ ಎಂಬ ಲೇಖನವಂತೂ ಸ್ಮಿತಾ ಅವರೇ ಬರೆದು ನಿರ್ದೇಶಿಸಿ ನಟಿಸಿರುವ ತಮ್ಮ ಜೀವನ ಕಥಾನಕದಲ್ಲಿ ಒಬ್ಬ ತಾಯಿಯಾಗಲಾರದ ಹೆಣ್ಣು ಮಗಳ ಯಾತನೆ, ವೇದನೆಗಳೊಂದಿಗಿನ ಆಕೆಯ ಮನೋಜ್ಞ ಅಭಿನಯ, ದಿಂಡಗೂರು ತಂಡದ ಕೇರಿ ಹಾಡುವಿನಲ್ಲಿ ಸಂತೋಷ ಅವರ ಪರಿಶ್ರಮ, ಒಂದು ಹಳ್ಳಿಯ, ಕೇರಿಯಲ್ಲಿ ನಡೆಯುವ ಜನಾಂಗಗಳ ಘಟನಾವಳಿಗಳು ನಂತರ  *ಸೋದರನೇ ಶಿವನು ಶಾಸ್ತ್ರಿಗಳ ಶಿವನಲ್ಲ* ಎಂಬ ಲೇಖನದಲ್ಲಿ ಕುವೆಂಪು ಅವರ ಜಲಗಾರ ನಾಟಕದ ಕಥೆ,,ಆಷಾಡದ ಮಳೆಯ ಅಬ್ಬರ ಕಲಾಕ್ಷೇತ್ರದಲ್ಲಿ ಮಳೆಯ ನರ್ತನದಲ್ಲಿ ಹಳ್ಳಿಯ ಹೊಲ ಗದ್ದೆಗಳಲ್ಲಿ ಮಳೆಗಾಲದಲ್ಲಿ ಬೇಸಾಯ ಹೂಡುತ್ತಿದ್ದ ಪುರುಷರು ತಾವು ಹೆಂಗಸರಾಗಿ ಹುಟ್ಟಬಾರದಿತ್ತೆ ಹಾಗಿದ್ದರೆ ಮನೆಯಲ್ಲಿ ಬೆಚ್ಚಗೆ ಇರಬಹುದಿತ್ತು ಎಂದು ಹಪಹಪಿಸುವುದು,ಬೇತಾಳ ಹೇಳಿದ ಸುಳ್ಳು ಕಥೆಯಾಗಲಿ, ಗಂಡ ಹೆಂಡತಿಯರ ನಡುವಿನ ಜಗಳ ತಾರಕಕ್ಕೇರಿ ಪಾತ್ರಗಳ ಅಭಿನಯ ನೈಜತೆಯಿಂದ ಕೂಡಿ ಎಲ್ಲರನ್ನು ಕಟ್ಟಿಹಾಕಿದಂತೆ ಭಾಸವಾಗುವುದು, ಚಿತ್ರದುರ್ಗ ತಿಪ್ಪೇಸ್ವಾಮಿಯವರ ರಂಗಭೂಮಿ ಪ್ರಯಾಣ,ನಟಿ ವೇದ ಎಮ್ ವೈ ಅವರು ರಂಗಭೂಮಿಯಲ್ಲಿ ತಮ್ಮ ಉತ್ತಮ ನಟನೆಯೊಂದಿಗೆ ಹೇಗೆ ಭರವಸೆ ಮೂಡಿಸಿದ್ದಾರೆ ಎಂಬುದು ಲೇಖಕರಿಗೂ ಭರವಸೆಯಾಗಿ ಮೂಡಿಬಂದಿದೆ.
    ಲೀಕ್ ಔಟ್ ಎಂಬ ಲೇಖನದಲ್ಲಿ ಸ್ತ್ರೀಯರ ಸೀರೆಯ ಸೆರಗು ಯಾವ ಯಾವ ಪದಗಳಲ್ಲಿ ಹಾಗೂ ಯಾವ ರೀತಿಯಲ್ಲಿ ಬಳಕೆಯಾಗಿದೆ, ಸ್ತ್ರೀಯರ ಸೂಕ್ಷ್ಮ ಸಂವೇದನೆಯಲ್ಲಿ ಹೇಗೆ ಬಹುಮುಖ್ಯ ಪಾತ್ರ ವಹಿಸಿದೆ ಎಂಬುದನ್ನು ಭಾವನಾತ್ಮಕವಾಗಿ ಅಕ್ಷತಾ ಅವರು ತಮ್ಮ ನಟನೆಯ ಮೂಲಕ ತಿಳಿಯಪಡಿಸಿರುವುದು,ಗ್ಯಾರಂಟಿ ರಾಮಣ್ಣನವರ ಅಭಿನಯದ ಹೆತ್ತವರನ್ನು ಸಂರಕ್ಷಿಸಬೇಕು ಎಂಬ ಸಹಬಾಳ್ವೆಯ ಸಂದೇಶವನ್ನು ಸಾರುವ ಕೌಟುಂಬಿಕ ಕಥಾನಕ,ಹೊಳೆ ನರಸೀಪುರದ ಮಂಜುನಾಥ್ ಅವರ ಸಾಧನೆ, ರಂಗಗೀತೆಗಳು ಹೇಗೆ ಹೇಗೆ ಪ್ರೇಕ್ಷಕರನ್ನು ರಂಜಿಸುತ್ತವೆ, ನಾಟಕದ ಮದ್ಯೆ ಆಗುವ ಅಡೆತಡೆಗಳನ್ನು ಹೇಗೆ ಮರೆಮಾಚುವಲ್ಲಿ ಯಶಸ್ವಿಯಾಗುತ್ತವೆ ಎಂಬುದು ಮನಸ್ಸಿಗೆ ಮುದ ನೀಡುತ್ತದೆ.
    ಮುಂದೆ ಸಾಗುತ್ತಾ  ಮಹಾಭಾರತ ಪೌರಾಣಿಕ ನಾಟಕದಲ್ಲಿ ತರಗೆಲೆಯ ಉಪಯೋಗ, ಬಂಗಾರವಾದ ಅಪ್ಪು ಜನ್ಮ ಲೇಖನವಂತೂ  18  19 ನೇ ಶತಮಾನದ ಚಿತ್ರಗಳು, ನಟರು, ಸಂಗೀತ ಹಾಗೂ ಚಿತ್ರಕತೆಗಳು ಹೇಗೆ ಮನಮುಟ್ಟಿ, ಬದುಕಿಗೆ ಪ್ರೇರಣೆ ನೀಡುತ್ತಿದ್ದವು ಎಂಬುದರ ಜೊತೆಗೆ  ಹಿರಿಯ ನಟರು ತಮ್ಮ ಅಭಿನಯದಿಂದ ಮನಸೂರೆಗೊಂಡು ಜನಮಾನಸದಲ್ಲಿ ನೆಲೆಯಾಗಿ ನಿಲ್ಲುತ್ತಿದ್ದರು ಎಂಬುದು ನನ್ನ ಸ್ವಂತ ಅನುಭವವನ್ನೆ ಲೇಖಕರು ಪ್ರತಿಬಿಂಬಿಸಿದಂತೆ ಭಾಸವಾಯಿತು.ರಾಜಣ್ಣ ರಾಶಿ ಅವರ ನಿರಂತರ ಮತ್ತು ಬಿಂಬ ಪ್ರತಿಬಿಂಬ ಲೇಖನವಂತೂ ಒಬ್ಬ ಅಭಿಯಂತರಾದ ಟಿ. ಶಂಕರಪ್ಪ ಶೆಟ್ಟಿಯವರು ಉದ್ಯೋಗ ನಿಮಿತ್ತ ಔರಂಗಬಾದ್ ಗೆ ಹೋದಾಗ ಅಲ್ಲಿಯ ಅವರ ಅನುಭವಗಳು, ಔರಂಗಬಾದ್ ಹಾಗೂ ದೌಲತಾಬಾದ್ ನ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವಲ್ಲಿ ಮುಖ್ಯ ಪಾತ್ರ ವಹಿಸಿದರೆ ಶಂಕರಶೆಟ್ಟಿಯವರ ಸಾಹಿತ್ಯ ಪ್ರೇಮ ರಚಿಸಿದ ಹಲವಾರು ಕೃತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.
        ಗ್ರಾಮ್ಯ ಬದುಕಿನ ನೋವು ನಲಿವಿನ ಹಂದರ ಲೇಖನವು ನಾಲ್ಕು ವಿಭಿನ್ನ ವಿಚಾರಗಳೊಂದಿಗೆ ಗ್ರಾಮೀಣ ಜನರು ಋತುಮಾನದ ವೈಫರೀತ್ಯದಿಂದ ಪಡುವ ಬವಣೆಗಳನ್ನು ಮನಸ್ಸಿಗೆ ನಾಟುವಂತೆ ಹೇಳುವಲ್ಲಿ ಯಶಸ್ವಿಯಾಗಿದ್ದರೆ, ತಮ್ಮ ಸ್ನೇಹಿತರೂ ತಬಲಾ ವಾದಕರೂ ಆದ ಬೇಲೂರ್ ನಾಗೇಶ್ ಅವರ ಬದುಕು, ಪರಿಶ್ರಮ, ಕುಟುಂಬ ಹಾಗೂ  ಸಾಧನೆಗಳ ಬಗ್ಗೆ ತಿಳಿಸುತ್ತ ತಬಲಾ ವಾದನ ನಾಟಕ, ಸಂಗೀತಗಳಲ್ಲಿ ಎಷ್ಟು ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ಮನಗಾಣಿಸುವುದರೊಂದಿಗೆ ಪ್ರತಿಯೊಂದು ಲೇಖನವೂ ಸಮಾಜದ ನಾನಾ ಸ್ಥರಗಳ ಬಗ್ಗೆ, ಸಾಧಕರ ಬಗೆಗಿನ ಮಹತ್ತರ ವಿಚಾರಗಳನ್ನು ಅನಾವರಣಗೊಳಿಸುವಲ್ಲಿ ಮೇಲು ಗೈ ಸಾಧಿಸಿದ್ದು, ತಾವೂ ಒಬ್ಬ ಸಾಧಕರಾಗಿ ಇನ್ನಿತರ ಸಾಧಕನ್ನೂ ಆತ್ಮೀಯವಾಗಿ ಪರಿಚಯಿಸಿರುವುದು ಲೇಖಕರ ವಿಶಾಲ ಮನೋಭಾವನೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಯಾಕೂಬ ಲೇಖನವಂತೂ ತಮ್ಮ ಬಾಲ್ಯ ಸ್ನೇಹಿತ ಗೋಡೆ ಬರಹದ ಯಾಕೂಬನ  ಕನ್ನಡಾಭಿಮಾನವನ್ನು ಸ್ಮರಿಸುತ್ತಾ ಅವನು ಕನ್ನಡ ಪ್ರೇಮದ ಬಗ್ಗೆ ಬರೆಯುತ್ತಿದ್ದ ನುಡಿಸಾಲುಗಳು ತನ್ನಲ್ಲೂ ಅಭಿಮಾನ ಮೂಡಿಸಿಡಿದಲ್ಲದೆ ಕಾವೇರಿ ನದಿ ನೀರಿನ ಹೋರಾಟದಲ್ಲಿ ಅವನ *ಕಾವೇರಿ ನೀ ನಮ್ಮ ಅನ್ನದಾತೆ **ಎಂಬ ಬರಹ ತನ್ನನ್ನೂ  ಹೋರಾಟದಲ್ಲಿ ಧುಮುಕುವಂತೆ ಮಾಡಿ ಬರಹದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡಿದ್ದು ಅಲ್ಲದೇ ಅವನ ಸುಳ್ಳುತನ, ಪುಸ್ತಕ ಓದುವ ಹವ್ಯಾಸ, ಬಡತನಕ್ಕೆ ದುಡಿಮೆಯೇ ಮದ್ದು ಎಂಬ ಅವನ ಧ್ಯೇಯ, ಗೋಕಾಕ್ ಚಳುವಳಿಯ ಸಂದರ್ಭದಲ್ಲಿ ಕವಿಗಳ ನುಡಿಗಳನ್ನು ಕಂಪೌಂಡ್ ಗೋಡೆಗಳ ಮೇಲೆ ಬರೆದು ಜನರನ್ನು ಹುರಿದುಂಬಿಸುತ್ತಿದ್ದುದ್ದು,ಒಬ್ಬ ಮುಸ್ಲಿಂ ಆದರೂ ಹಿಂದೂ ದೇವತೆಗಳ ಮೇಲೆ ಅವನಿಗಿದ್ದ ಭಕ್ತಿ, ಕೆಲಸದ ಮೇಲಿನ ಶ್ರದ್ಧೆ, ನಂತರ ಲೇಖಕರ ದಯೆಯಿಂದ ದೊಡ್ಡ ಮಟ್ಟದ ಕೆಲಸ ಸಿಕ್ಕಾಗ ಧನ್ಯತಾ ಭಾವದಿಂದ ಸ್ಮರಿಸುವುದು, ಈಗಲೂ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ, ಜವಾಬ್ದಾರಿಯುತ ಸ್ಥಾನವನ್ನು ನಿರ್ವಹಿಸುತ್ತಿರುವುದು ಇವೆಲ್ಲಾ ಓದುತ್ತಾ ನಮಗೂ ಯಾಕೂಬ್ ರನ್ನು ಒಮ್ಮೆ ನೋಡಬೇಕೆನ್ನುವ ಅಭಿಲಾಷೆ ಮೂಡದೆ ಇರದು ಒಟ್ಟಾರೆಯಾಗಿ ಯಾಕೂಬ್ ನನ್ನು ಒಬ್ಬ ಅದ್ಭುತವ್ಯಕ್ತಿಯನ್ನಾಗಿ ಅವರ ಸಂಪೂರ್ಣ ಜೀವನ ಕಥಾನಕದೊಂದಿಗೆ ಚಿತ್ರಿಸಿರುವುದು ಯಾಕೂಬನ ಮೇಲಿನ ಅವರ, ಪ್ರೀತಿ, ಅಭಿಮಾನಗಳನ್ನು ಬಿಂಬಿಸಿದರೆ, ಪತ್ರಿಕಾ ವಲಯಕ್ಕೆ ಪಾದಾರ್ಪಣೆ ಮಾಡಿ ಕಾವೇರಿ ಹೋರಾಟದ ಲೇಖನಗಳನ್ನು ಬರೆಯುತ್ತಾ ಜೊತೆಗೆ, ಗೊರೂರು ರಾಮಸ್ವಾಮಿಯವರು ನಿಧಾನರಾದಾಗ ಭಾಷಣ ಮಾಡಲು ಬಿಡದ ತಮ್ಮೂರಿನ ಫoಡ್ ಕಲೆಕ್ಟ್ ಮಾಡುವ ಹುಡುಗರು, ಕೊನೆಗೆ ಶಾಲೆಯ ವಾರ್ಷಿಕೋತ್ಸವದಲ್ಲಿ ಯಾಕೂಬನ ಸಹಾಯದಿಂದಲೇ ತಮಗೆ ಭಾಷಣ ಮಾಡುವ ಅವಕಾಶ ಸಿಕ್ಕಿದ್ದನ್ನು ಹೇಳುತ್ತಾ ಯಾಕೂಬನ ಕಥೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ ಅಲ್ಲದೇ ತಮ್ಮದೇ ನಿರ್ದೇಶನ ರಚನೆಯ ನಾಟಕಗಳಲ್ಲಿ ಬರುವ ಹಾಸ್ಯ ಪ್ರಸಂಗಗಳನ್ನು ಕಣ್ಣಿಗೆ ಕಟ್ಟುವಂತೆ ತಮ್ಮ ಬರವಣಿಗೆಯ ಶೈಲಿಯನ್ನು ರೂಢಿಸಿಕೊಂಡು ಲೀಲಾಜಾಲವಾಗಿ ಓದಿಸಿಕೊಂಡು ಹೋಗುವ ನೈಪುಣ್ಯತೆಯನ್ನು ಸಾಧಿಸಿ ಉದಯೋನ್ಮುಖ ಬರಹಗಾರರಿಗೆ ಪ್ರೇರಣೆಯಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ಈ ಸಾಧನೆಯ ಹಾದಿ ಯಶಸ್ವಿಯಾಗಿ ಸಾಗಲಿ ಇನ್ನೂ ಹೆಚ್ಚಿನ ಮಾಹತ್ವಪೂರ್ಣ ಲೇಖನಗಳು ಅವರ ಲೇಖನಿಯಿಂದ ಮೂಡಿಬರಲಿ ಎಂದು ಮನದುಂಬಿ ಹಾರೈಸುತ್ತಾ ಅವರ ಬಗ್ಗೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟ ಅಭಿಮಾನಕ್ಕಾಗಿ ಹೃತ್ಪೂರ್ವಕವಾದ ವಂದನೆಗಳು.

- ಶ್ರೀಮತಿ ಮಾಲಾ, ಚೆಲುವನಹಳ್ಳಿ.

ನಮ್ಮ ಜನ ಮರೆತರೋ ನಿನ್ನ (ಕವಿತೆ) - ಗಂಗಾಧರ ಬಾಣಸಂದ್ರ.

ಅದೋ ನೋಡು ಅಂಬೇಡ್ಕರ.... 
ನಮ್ಮ ಜನ ಮರೆತರೋ ನಿನ್ನಾ.....

ನೋಡುನೋಡಲ್ಲಿ ಬೀಜಸ್ಮೃತಿಯ
ರಥದ ಗಾಲಿಗಳು ಕಳಚುತ್ತಿವೆ,
ಪ್ರಶ್ನಿಸದೇ ಮೂಖವಾಗಿವೆ  ನಮ್ಮವರ
ಮನಸ್ಸುಗಳು !, 
ಪ್ರಭುತ್ವದ ಆರ್ಭಟಕ್ಕೆ,
ಹಣ-ಹೆಂಡದ ಅಮೀಷಕ್ಕೆ.
ಭೀಮಮಂಡಲ ಬೋಳಾಗುತ್ತಿದೆ, 
ಭೀಮ ಕಂಡ ಭಾರತ ಬಲಿಯಾಗುತ್ತಿದೆ.

ಹೇ... ಬೀಮನೇ....
ಅದೋ !  ನೋಡು.
ನೀ ಕೊಟ್ಟ  ಅಸ್ತ್ರ,
ಮಾರಾಟವಾಗುತ್ತಿದೆ.   
ಆಧಿಕಾರ ದಾಹದ ಜಂಜಾಟದೊಳಗೆ,
ನೀ ಕಟ್ಟಿದ ಕನಸು
ಬಲಿಯಾಗುತ್ತಿದೆ.

ಹೇ... ಭೀಮಾ ನಿನ್ನ ಹೆಸರನ್ನು, ಹೇಳಿ. 
ನೂರಾರು ಸಭೆ ಸೇರಿ  
ಸಾವಿರಾರು ಮಾತಾಡಿ. ಅವರಿವರ ಮಾತು ಕೇಳಿ, 
ಭೀಮ ಜಯಂತಿಯ ಮಾಡಿಹರೋ! 
ನಿನ್ನ ಚಿತ್ರವಿಟ್ಟು ಪೂಜಿಸಿಹರೋ.

ಅಧಿಕಾರಕ್ಕೆ ಗುದ್ದಾಡಿ 
ಕುರ್ಚಿಗಾಗಿ ಕಿತ್ತಾಡಿ....
ದುಡ್ಡಿಗಾಗಿ ಬಡಿದಾಡಿ.
ಗುಲಾಮಗಿರಿಯ ರಕ್ಷಕರಾಗಿ, ಸಂವಿಧಾನ ಮರೆತಿಹರೋ.

ನಮ್ಮ ಜನ,  ನಿನ್ನ ತತ್ವ- ಚಿಂತನೆಯ 
ಮಾರೆತು ಬಿಟ್ಯಾರೋ,  ಗುಲಾಮಗಿರಿಗೆ ಮಾರಿಕೊಂಡಾರೋ.

 ಶಿಕ್ಷಣ,  ಸಂಘಟನೆ, 
 ಹೋರಾಟಗಳಿಲ್ಲ.
ಅದೋ  ಅಂಬೇಡ್ಕರ
ನೀ..ಕೊಟ್ಟ  ಶಿಕ್ಷಣ ಕಲಿತವರು, 
ನಿನ್ನನೇ ಮರೆತು. 
ನ್ಯಾಯ, ನಿಷ್ಠೆ, ಸ್ವಾಭಿಮಾನವ  ಮಾರಿಬಿಟ್ಟು,
ಸಮುದಾಯದ ಏಳ್ಗೆಯ ಅಡವಿಟ್ಟು,
ಮನುಸ್ಮೃತಿಯ ತಲೆಯಮೇಲಿಟ್ಟು!  ಮೆರೆದು ಮೆರೆದು, 
ಕೆಟ್ಟರು ಕಡೆಗೊಂದು ದಿನ.

ನೀ....ಕೊಟ್ಟ ವಿಮೋಚನಾಸ್ತ್ರ‌, ಅದುವೇ 
‌ಹೋರಾಟ ದಿಟ್ಟ ಹೆಜ್ಜೆ. 
ಎಲುಬಿಲ್ಲದ ನಾಲಿಗೆ, 
ಹಾವಿನಂತೆ ಹರಿದಾಡಿ
ವಿಷವನ್ನೇ... ಕಾರುತ್ತಿದೆ.
ಅಧಿಕಾರದ ಹುಚ್ಚು ಏರುತಿದೆ.

ಮನ್ನಿಸಿ ಬಿಡು, ಬೀಮ.
ನೀ ಕೊಟ್ಟ ಭೀಮಾಸ್ತ್ರವು 
ಅಂಗಾಗವ ಕಳಚಿವೆ,
ನಲುಗಿವೆ,
ಮಾರಾಟವಾಗುತ್ತಿವೆ.

 ಕೇಳಿ ಕೇಳಿ 
ನನ್ನ  ಜನಗಳೇ....
ಗುಲಾಮರಾಗಬ್ಯಾಡಿರೋ.
ಸ್ವಾಭಿಮಾನಿಗಳಾಗಿ  ಬಾಳಿರೋ.
ಭೀಮಾ ಕೊಟ್ಟ  ಸಂವಿಧಾನವ ಉಳಿಸಿ, ಬೆಳೆಸಿರೋ.
ವಿಶ್ವಜ್ಞಾನಿ, ಮಹಾಮಾನವನು ಕೊಟ್ಟ ಸಂವಿಧಾನವ ಉಳಿಸಿರೋ...

- ಗಂಗಾಧರ್, ಬಾಣಸಂದ್ರ.
# 8722780127

ಗುರು ಅಮೂರ್ತ ಶಕ್ತಿಯ ಮೂರ್ತರೂಪವೇ- ಕಾರುಣ್ಯ ಬೋಧೆ (ಕೃತಿ ಪರಿಚಯ) - ಕಾರ್ತಿಕ ಆಚಾರ್ಯ ಎಂ.,ಕಲ್ಲಹಳ್ಳಿ.

ನಾ ಗುರು ಚರಣ ಸೇವಕ
ನನ್ನೆಲ್ಲಾ ಸಾಧನೆಗೆ ಗುರುವೇ ಕಾರಣಿಕ!!

ಎತ್ತಾಗಿ,ತೋತ್ತಾಗಿ,ಹಿತ್ತಲದ ಗಿಡವಾಗಿ,
ಮತ್ತೆ ಪಾದದ ಕೆರವಾಗಿ ಗುರುವಿನ ಹತ್ತಲಿರು ಸರ್ವಜ್ಞ.

ಮೊದಲಿನಿಂದಲೂ ಗುರು,ಗುರುಸೇವೆ,ಗುರುವಿನ ಸಂಗದಿಂದ ಬಂದವ ,ಆಯಾಸವಿರದೇ ಬೇಸರಗೊಳ್ಳದ ಮಾಡುವ ಕಾರ್ಯವೆಂದರೆ ಗುರುವೆಂಬ ಪದಕ್ಕಷ್ಟೇ ಹಾಗೆ ಪ್ರತಿ ಬಾರಿಯೂ ಕರೆಮಾಡಿದಾಗಲೂ ಒಂದೊಳ್ಳೆ ಅನುಭವ ಹಂಚುವ ಗುರುವಿನಿಂದ ಕೃತಿಬಂದದ್ದು ತೃಪ್ತಿ ಸಂತೋಷನೀಡಿದೆ ಮೊನ್ನೆಯಷ್ಟೇ ಗಿಣಿಗೇರಾದ ಶ್ರೀಮಠದ ಪೂಜ್ಯ ಶ್ರೀಕಂಠಶ್ರೀಗಳ ವಿರಚಿತ ಕಾರುಣ್ಯಬೋಧೆ ಕೃತಿ ಅದ್ದೂರಿಯಾಗಿ ಲೋಕಾರ್ಪಣೆ ಆದದ್ದು ಹರ್ಷನಿಯ ಸಂಗತಿ ಈ ಪುಣ್ಯಕಾರ್ಯಕ್ರಮದಲ್ಲಿ ಭಾಗಿಯಾದದ್ದು ಇನ್ನೂ ಪಾವನಭಾವವೇ ಹೊರಡಿತು!!

 ಅದೇನೋ ಮತ್ತಷ್ಟು  ಆತ್ಮೀಯರು ಗುರುಗಳು, ಯುವಯತಿವರೇಣ್ಯರು,ಅಪ್ಪಟ ಓದುಗ, ದುಪ್ಪಟ್ಟು ಸಾಹಿತ್ಯಾಭಿಮಾನಿಗಳು ಅಭಿನವ ಶ್ರೀಕಂಠಶ್ರೀಗಳು ನಾವುಗಳು ಆತ್ಮೀಯ ಗುರುಶಿಷ್ಯರಾದದ್ದು ಪರಿಚಯವಾದದ್ದು ಓದು,ಸತ್ ಚಿಂತನೆ,ಸಾಹಿತ್ಯದ ಹಾದಿಯಲ್ಲೇಯೇ  ಶ್ರೀಗಳ ವಿರಚಿತ 
ಕಾರಣ್ಯಬೋಧೆ ಇದು ಹೊತ್ತಿಗೆ ಎಂದರೆ ಸಾಮಾನ್ಯವಾದೀತೇನೋ ಕಾರಣ ವಿದ್ವತ್ಪೂರ್ಣ ಸಂತರ ಆಶೀರ್ವಾಣಿಯ ಸಂಗಮ ಅಚ್ಚೊತ್ತಿವೆ ಶ್ರೀಗಳ ಅನುಭವ - ಅನುಭಾವದ ಸಂಕಲನಗಳಾಗಿವೆ 
ಬಹಿರಂಗಕ್ಕೆ ಸೌಂದರ್ಯ ಎಷ್ಟು ಪ್ರಾಮುಖ್ಯತೆಯೋ ಅಂತರಂಗಕ್ಕೂ ಆಧ್ಯಾತ್ಮಿಕತೆ ಅಷ್ಟೇ ಮುಖ್ಯ ಎಂಬುದು ಮತ್ತೆ ನಿರೂಪಿಸಿದೆ ಇದೇ ಹಾದಿಯಲ್ಲಿ ಆಧ್ಯಾತ್ಮಿಕತೆ, ನೈತಿಕವಾಗಿ,ಅನುಭವದ ಮಜಲುಗಳನ್ನು ಎಷ್ಟು ಎಷ್ಟು ಚೆಂದ ಅಂತೀರಿ ಸರಳವಾಗಿ ಅಂದಾಗಿ ಚೆಂದಾಗಿ ಸುಮಾರು ೪೦ ಅಂಕಣಗಳ ವಿಂಗಡನೆಯಂತೆ ಬಹು ಅರ್ಥಪೂರ್ಣವಾಗಿ ಪ್ರಕಟಿಸುವಲ್ಲಿ ಚೊಚ್ಚಲ ಕೃತಿಯಲ್ಲಿಯೇ ಯಶಸ್ವಿಕಂಡಿದ್ದಾರೆ ಎಂಬ ಭಾವನೆ ನಮ್ಮದು.

     ಶ್ರೀಗಳ ಕಂಡಾಗಲೆಲ್ಲ ಈ ಮಾತು ಸ್ಮೃತಿಗೆ ಒದಗುತ್ತದೆ "ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ,ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿದಂತಿ "
ಈ ನುಡಿಗೆ ಭಾಜನರಾದವರೇ ನಮ್ಮ ಪೂಜ್ಯರು ಸಾಕ್ಷಿಯಾದದ್ದೇ ಅವರ ಕಾರುಣ್ಯಬೋಧೆ ಕೃತಿ 
ಅವರ ಸ್ಪೂರ್ತಿ,ಅಧ್ಯಯನ,ಗುರುಪರಂಪರೆ,ಕಂಡ ಮತ್ತು ಪಡೆದ ಅನುಭವದ ಮಜಲುಗಳನ್ನು ಬಿಂಬಿಸಿದ್ದಾರೆ ಕಗ್ಗಗಳು,ವಚನಗಳು,ಅನೇಕ ದಾರ್ಶನಿಕರಿಂದ ಪಡೆದ ಅನುಭವಗಳು,ಕನ್ನಡ,ಸಾಮಾಜಿಕ,ನೈತಿಕ ಮೌಲ್ಯಗಳಿಂದ ಕೂಡಿದ್ದಾಗಿದೆ ವಿದ್ವತ್ತು ಮತ್ತು ವಿನಯ,ಜ್ಞಾನದ ಈ ಮೂರನ್ನು ಮೈಗೂಡಿಸಿ ಬೆರೆಯುತ್ತಾ,ಸಂದೇಶ ನೀಡುತ್ತಾ,ಪ್ರತಿ ವಾರ ಪತ್ರಿಕೆಯ ಮುಖೇನ ಬಿತ್ತರಿಸುತ್ತಲೇ ಬಂದಿದ್ದಾರೆ ಗುರುವಿನ ನುಡಿಯಲ್ಲಿ ಧರ್ಮ ನೆಲೆಗೊಂಡಿದೆ ಎನ್ನುವುದು ಈ ಕೃತಿಯಿಂದ ಮತ್ತೆ ಸಾಬೀತಾಗಿದೆ‌‌.ಗುರುವಿನ ಕೃತಿಗೆ ಒಂದೆರಡು ಅಭಿಮಾನದ ನುಡಿ ಬರೆಯಬಹುದೇ ಹೊರತು ವಿಮರ್ಶೆ ನೀಡಲಾರೆ ಕಾರಣ ಸಿಹಿಯನ್ನು ಸಿಹಿಯಾಗಿದೆ ಎಂದು ಸಾಬೀತುಮಾಡಿದಂತಾಗುತ್ತದೆ.

ಎಲ್ಲರನ್ನೂ ಅಪ್ಪಿಕೊಳ್ಳುವ, ಎಲ್ಲರನ್ನೂ ಸಮಾನಹೃದಯಿಂದ ಕಾಣುವ ಶ್ರೀಗಳ ಕೃತಿ ಉನ್ನತ್ತೋನ್ನತವಾಗಿ ಕೀರ್ತಿಗಳಿಸಲಿ ಭಗವಂತ ಇನ್ನೂ ಚೈತನ್ಯನೀಡಲೆಂದು ಶ್ರೀಮಠದ ಗುರುಪರಂಪರೆಯಲ್ಲಿ ಪ್ರಾರ್ಥಿಸುವೆ ಮತ್ತಷ್ಟು ಕನ್ನಡ ಸಾಹಿತ್ಯ ಲೋಕಕ್ಕೆ, ಆಧ್ಯಾತ್ಮಿಕ ಸಂದೇಶಗಳು ಹಬ್ಬಲೆನ್ನುವೆ, ಆಶೀಸುವೆ, ಅಭಿವಂದಿಸುವೆ.

- ಕಾರ್ತಿಕ ಆಚಾರ್ಯ ಎಂ.,ಕಲ್ಲಹಳ್ಳಿ.

ನಿನ್ನ ಕಂಗಳ ಗುಟ್ಟೇನು ಗೆಳತಿ (ಕವಿತೆ) - ಧನುಷ್ ಎಚ್ ಶೇಖರ್.

ಆ ನೀಲಿ ಆಗಸದ 
ಬಿಳಿ ಮೋಡಗಳ ತುಂಬೆಲ್ಲಾ 
ಆವರಿಸಿದ ಕಾರ್ಗಾಲದ 
ಕರ್ಮುಗಿಲಿನ ಒಳಗೂ ಮಿನುಗುವ 
ಒಂಟಿ ನಕ್ಷತ್ರದ ಕುರುಹೇನು 
ಗೆಳತಿ ?

ಕಪ್ಪು ಕಡಲಿನ 
ಮೇಲೆ ಹಾಯುವ 
ಅಂತರಂಗದ ಅಲ್ಲೋಲ ಕಲ್ಲೋಲಗಳ 
ಒಳಗೂ ತಣ್ಣಗೆ 
ತೇಲುವ ನೀಲಿಗಣ್ಣಿನ ಲಾಟೀನಿನ 
ಬೆಳಕ ಬೆಳದಿಂಗಳಿಗೇನು ಅರ್ಥವಿದೆ 
ಗೆಳತಿ ?

ಬರಿಗಂಗಳ ಕೊಳದೊಳಗೆ 
ತೇಲುವ ಆ ನೀಲಿ ಬಾನು
ಈ ಕಪ್ಪು ಕಡಲು
ತುಳುಕಿಸಿದ ನೀರಿಗೂ 
ಸುರಿದ ಮಳೆಗೂ ಧಾರಾಕಾರ 
ಪೈಪೋಟಿಯ ನಡುವೆ ಸುಳಿವ 
ನಿನ್ನ ಕಂಗಳ 
ಒಳಗಿನ ನನ್ನ ಬಿಂಬದ 
ಗುಟ್ಟೇನು ಗೆಳತಿ ?

- ಧನುಷ್ ಎಚ್ ಶೇಖರ್, ಬೆಂಗಳೂರು.

ವಂದನೆ (ಕವಿತೆ) - ಮಾಲತಿ ಮೇಲ್ಕೋಟೆ.

ವಂದನೆಯ ಸಲ್ಲಿಸುವೆ ನನ್ನಯಾ ಜೀವನಕೆ
ಸಂಧಿಸುವ ನಂಬಿಕೆಯು ಇಲ್ಲ ಮುಂದೆ

ನೀನಿತ್ತ ಎಲ್ಲವನು ನಗುತಲೆ‌ ಪಡೆದಿಹೆನು
ಏನೊಂದು ನನ್ನಲ್ಲಿ ನಿಲದೆಂದು ತಿಳಿದಿಹೆನು

ವಂದನೆಯ ಸಲ್ಲಿಸುವೆ ಕಷ್ಟದಾ ದಿನಗಳಿಗೆ
ಏಳಿಗೆಯ ದಾರಿಯಲಿ ನನ್ನ ನಡೆಸಿದವು

ವಂದನೆಯು ನನ್ನಯಾ ಮಿತಿಗಳಿಗು ಸಲ್ಲುವುದು
ಬೆಳೆಯುವ ಅವಕಾಶವನು ತಂದಿತ್ತುದಕ್ಕೆ

ಸಲಿಸುವೆನು ವಂದನೆಯ ಒಂದೊಂದು ಸವಾಲಿಗು 
ಬೆಳೆಸಿದವು ನನ್ನಲ್ಲಿ ಶಕ್ತಿಯುಕ್ತಿಗಳನು

ವಂದನೆಯ ಸಲ್ಲಿಸುವೆ  ನನ್ನೆಲ್ಲ ತಪ್ಪಿಗು
ಕಲಿಸಿದವು ಒಂದೊಂದು ಹೊಸ ಪಾಠಗಳನು
- ಮಾಲತಿ ಮೇಲ್ಕೋಟೆ.

ಪ್ರಣಾಳಿಕೆ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಚುನಾವಣೆಯಲ್ಲಿ ಕಾಣುವ
ಪ್ರಣಾಳಿಕೆಯ ಸುರಿಮಳೆ
ಬಡಜನರ ಮರುಳಾಗಿಸಲು
ಇವರದೇ ಕಹಳೆ
ಯಾರು ಗೆದ್ದರೇನು 
ಬಿಡದು ದಿನದ ರಗಳೆ
ಗಾಳಕೆ ಬಿದ್ದನಂತರ 
ಪರಿತಪಿಸಬೇಡಿ ಪ್ರಜೆಗಳೆ

ಭ್ರಷ್ಟಾಚಾರಕೆ ಬೇಡಿ 
ಹಾಕುವವರಾರಿಲ್ಲ
ದೌರ್ಜನ್ಯ ಎಸೆದ ಆರೋಪಿ 
ಶಿಕ್ಷೆಗೆ  ಒಳಪಟ್ಟಿಲ್ಲ 
ಚುನಾವಣೆಯ ಪ್ರಣಾಳಿಕೆ 
ಯಾರ ಕೈ ಸೇರುವುದಿಲ್ಲ
ದುಡ್ಡಿನ ಆಸೆಗೆ ಜನ 
ಮುಗಿಬೀಳುವರಲ್ಲ

ಪ್ರಣಾಳಿಕೆಗೆ ಪ್ರಜೆಗಳದೇ 
ಹಣದ ದುರ್ಬಳಕೆ 
ಯಾರಿಗೆ ಬೇಕು 
ಇಂತಹ ಹೊಗಳಿಕೆ
ಮೈ ಮುರಿದು ದುಡಿದರೆ 
ಅದುವೇ ಜೀವನಕೆ
ಎರಡೊತ್ತಿನ ಹಸಿವಿನ 
ಚೀಲ ತುಂಬುವುದಕೆ

ತಿಳಿದವರ ಛತ್ರ
ಕಾಯಕವೇ ಕೈಲಾಸ 
ಬಿಡಬೇಡಿ ಧೃಡ 
ಸಂಕಲ್ಪದ ಮಂತ್ರ 
ಮರುಳಾಗಲು ಹೂಡುವರು 
ಹೊಸ ಹೊಸ ತಂತ್ರ
ನಿಮ್ಮ ಹಕ್ಕಿನ ಮತಕೆ 
ತೆರೆದಿರಲಿ ನಿಮ್ಮಯ ನೇತ್ರ

ಪ್ರಣಾಳಿಕೆ ಹೊರಡಿಸಲು
ಯಾರಪ್ಪನ ಗಂಟು
ಬೂಟಾಟಿಕೆಯ ಮಾತಲಿ
ತೋರಿಸುವ ನಂಟು
ಮತದಾನದ ಮರುದಿನವೇ
ಅಭ್ಯರ್ಥಿಗಳು ಕಟ್ಟುವರು ಗಂಟು
ಮರು ಮತದಾನದಕೆ
ಇವರ ಪಾದಾರ್ಪಣ ನೂರಕ್ಕೆ
ನೂರು ಪರ್ಸೆಂಟ್ 
- ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ನಂಬಿಕೆಯ ನೆರಳು (ಕವನ) - ಸುಭಾಷ್, ಸವಣೂರ.

ನೀನಾಗು ಬಾಯಿಲ್ಲಿ 
ನನ್ನೊಳಗಿನ ನೋವಲ್ಲಿ
ನಂಬಿಕೆಯ ನೆರಳು

ನಾ ಬರೆದ ಕವಿತೆಗೆ
ಭಾವ ತುಂಬಿ ಹಾಡಿಗೆ
ನೀನಾಗು ಸವಿಗೊರಳು

ಮುಂಜಾನೆ ಮಂಜಿನಲಿ
ನಂಜೆಂಬುದು ಏನಿಲ್ಲ
ನೀನಾಗು ಹೊಳೆವ ಕಿರಣ

ಅರಳುವ ಸುಮದಿ
ಮಕರಂದವಾಗಿ ಬೆರೆತು
ದುಂಬಿಗಾಗು ನೀ ಪ್ರೇರಣೆ 

ನಾಳೆಗಳು ನರಳದಂತೆ
ಬೆರಳು ಹಿಡಿದು ನಡೆಸು
ನಿನ್ನೊಲವಿಗೆ ಬೆಲೆಯಿದೆ

ಅಂತರಂಗದ ಮಿಡಿತ
ಅರಿತಿರುವೆ ನೀ ಖಚಿತ
ನಿನಗೆ  ಆ ಕಲೆಯಿದೆ

ಬೇಸರದ ಬರದ ಛಾಯೆ
ಆವರಿಸಿರಲು ಮನದಲ್ಲಿ
ನೀನಾಗು ತುಂತುರಿನ ಸೋನೆ

ಹಿತವಾಗಿ ನಾ ನೆನೆದು
ಸುಖವಾಗಿ ನಾನುಳಿದು
ಸದಾ ಅರಾಧಿಸುವೆ  ನಿನ್ನನೇ

ಈ ಬದುಕೆಂಬ ಯಾನದಲ್ಲಿ
ನೀನಿರಲು ಜೊತೆಯಲ್ಲಿ
ಒಂಟಿತನ ನನ್ನ ಬಿಟ್ಟು  ಓಡಿತು

ಇರುವವರೆಗೂ  ಒಲವಿಂದ
ಬದುಕಿಸಿದೆ ನಗುವಿಂದ
ನೀ ನನ್ನನ್ನು ಬೆರೆತು.               
- ಸುಭಾಷ್, ಸವಣೂರ.

ದೇಶವ ಕಟ್ಟೋಣ (ಕವನ) - ನಾಝೀಮಾ ಹಾಸನ.

ಗೆಜ್ಜೆಯ ಕಟ್ಟೋಣ  ನಾವು
ಹೆಜ್ಜೆಯ ಹಾಕೋಣ
ಹೆಜ್ಜೆಯ ಹಾಕುತ
ಸದ್ದನು  ಮಾಡುತ
ದೇಶವ  ಕಟ್ಟೋಣ
ನಾವು  ದೇಶವ   ಕಟ್ಟೋಣ

ಜ್ಞಾನವ  ಹಂಚೋಣ  ನಾವು
ಸಂವಿಧಾನ ಓದೋಣ
ಸಂವಿಧಾನ  ಓದುತ
ಜ್ಞಾನವ  ಬೆಳೆಸುತ
ದೇಶವ  ಕಟ್ಟೋಣ
ನಾವು  ದೇಶವ  ಕಟ್ಟೋಣ

ಮತಭೇದ ಅಳಿಸೋಣ  ನಾವು
ಏಕತೆ  ಸಾರೋಣ
ಏಕತೆ  ಸಾರುತ
ಭ್ರಾತೃತ್ವ   ಬೆಳೆಸುತ
ದೇಶವ  ಕಟ್ಟೋಣ
ನಾವು ದೇಶವ  ಕಟ್ಟೋಣ

ಒಗ್ಗಟ್ಟನ್ನು  ಮೂಡಿಸೋಣ ನಾವು
ಜಾತಿಯತೆ  ಅಳಿಸೋಣ
ಜಾತಿಯತೆ  ಅಳಿಸುತ
ಒಗ್ಗಟ್ಟನ್ನು  ಜಪಿಸುತ
ದೇಶವ  ಕಟ್ಟೋಣ
ನಾವು  ದೇಶವ ಕಟ್ಟೋಣ

ಅನೀತಿಯ  ಓಡಿಸೋಣ  ನಾವು
ನೀತಿಯ  ಬಿತ್ತೋಣ
ನೀತಿಯ  ಬಿತ್ತುತ
ಪ್ರೀತಿಯ ಹರಡುತ 
ದೇಶವ ಕಟ್ಟೋಣ
ನಾವು  ದೇಶವ ಕಟ್ಟೋಣ.
  - ನಾಝೀಮಾ ಹಾಸನ.

ನಮಗೆ ನಾವೇ ಜೋಡಿ (ಕವನ) - ಸವಿತಾ ಆರ್ ಅಂಗಡಿ

ನಮ್ಮವರೀಗ ಯಾರು ನಮಗಿಲ್ಲ
ನಮಗೆ ನಾವೇ ಜೋಡಿಯೆಲ್ಲ
ದಿನಗಳು ಕಳೆದುದು ಗೊತ್ತಾಗಲಿಲ್ಲ
ಉದುರಿ ಹೋದವು ವರ್ಷಗಳು ಹೇಗೆಲ್ಲ

ಕಷ್ಟದಿಂದ ಜೀವನವು ಬೆಂದು ಹೋಗಿದೆ
ದುಡಿಯುವ ಶಕ್ತಿ ಮೀರಿಹೋಗಿದೆ
ಮಕ್ಕಳು ನೋಡುವವರೆಂಬ ಆಸೆ
ತೀರಿಹೋಗಿದೆ
ನಮಗೆ ನಾವೇ ಜೋಡಿ ಎಂದು ತಿಳಿದಾಗಿದೆ

ಹೂವೆಂದು ಸಾಕಿಸಲುಹಿದೆವು
ಹಾವಾಗಿ ತಿರುಗಿ ಬುಸುಗುಟ್ಟಿದವು
ಬಂಧು ಬಳಗದ ಅಕ್ರಂದನ ವಿಲ್ಲದಿಹುದು
ಮುಪ್ಪಾವಸ್ಥೆಗೆ ಜೊತೆಗೆ ಇಲ್ಲದಿಹುದು
ಜೀವನವೇ ತೂಗುಯ್ಯಾಲೆ ಯಾಗಿಹುದು

ನೋವಿನಲ್ಲೂ ನಗುವಲ್ಲೂ ಜೊತೆಯಾಗಿರೋಣ
ಕಷ್ಟ ಸುಖಗಳನ್ನು ಹಂಚಿಕೊಳ್ಳೋಣ
ದಾರಿ ತೋರಿಸಿದವರೊಡನೆ ಸಾಗೋಣ
ಭಗವಂತನಿಗೆ ಸೆರಗೊಡ್ಡಿ ನಮಿಸೋಣ.

- ಸವಿತಾ ಆರ್ ಅಂಗಡಿ, ಮುಧೋಳ.

ಪ್ರೀತಿ ಮತ್ತು ಬೆಳಗು (ಕವಿತೆ) - ಬಸವರಾಜ್ ಪಾಟೀಲ್.

ನಾನೆಂದಿಗೂ ನಿನ್ನ ಪ್ರೀತಿಯ ಕಾಣಲೆ ಇಲ್ಲ ಊಸಿರಾಗಿ ಸದಾ ಬಳಿ ಇರುವೆ
 ಹಸಿವು- ದಾಹವ ನೀಗಿಸಿದೆ 
ಮೈ- ಮನವ ಹೀತವಾಗಿಸಿದೆ 
ಅದೇಷ್ಟು ಬಾರಿ ನಿನ್ನಿಂದ ಎಲ್ಲವೂ ಪಡೆದೆ ನಾ ಶೀಕ್ಷಿಸಿದೆ ಹಲವು ಭಾರಿ 
ಬಳಲಿದೆ ನಾ ದೇಹದ ಅನಾರೋಗ್ಯದಿಂದ ಬಳಲಿದೆ ಮನದಲ್ಲಿ ನಾನೆ ಭೀತ್ತಿದ ವಿಷ ಬೀಜದಿಂದ 
ಒಂದಿಷ್ಟು ಬದಲಾಗದೆ ಅದೇ ತರಹ ಇರುವೆ ಅದೇ ಬೆಳಗು
 ಅದೇ ಇರಳು 
ನನ್ನ ಬಿಟ್ಟು ಇರಲಾರೆಯಾ? 
ನಾನೆಷ್ಟು ಪಾಪ ಕೃತ್ಯ ಮಾಡಿದರೂ ಮತ್ತೆ ನನ್ನೆದುರು ಬಂದು ನಿಲ್ಲುವೆ
 ಇದು ಪ್ರೀತಿಯೋ ?
ಇರು ಸ್ವರ್ಗ ವೋ ?
ಇದು ನರಕವೋ ?  
ಬದುಕಿದ್ದು ಸತ್ತವನಿಗೆ ಪ್ರೀತಿ ಸತ್ತಂತೆ 
ಪ್ರೀತಿ ಸ್ನೇಹಕ್ಕಾಗಿ ಉಸಿರಾಡುವವನಿಗೆ ಸತ್ತರೂ ಬದುಕಿದ್ದಂತೆ 
ಅದಕ್ಕಾಗಿಯೆ ಅಲ್ಲವೆ ನೀ ನನ್ನ ಬಿಡಲಾರೆ ನಿನಿರುವ ಪ್ರತಿ ದಿನವೂ ನನ್ನಲ್ಲಿ ಪ್ರೀತಿ ತುಂಬಿದೆ 
ನೀನೆ ನನ್ನ ಪ್ರೀತಿಗೆ ಸಾಕ್ಷಿ 
ಕಾರಣ ನೀನು ಇನ್ನೂ ನನ್ನ   ಬಿಟ್ಟಿಲ

- ಬಸವರಾಜ್ ಪಾಟೀಲ್, ಗದಗ್.


ಗುರುವಾರ, ಜನವರಿ 26, 2023

ತಾರುಣ್ಯದ ತಂತಿ ಮೀಟಿ - ಪುಸ್ತಕದೊಳಗೊಂದು ಸುತ್ತು(ಪುಸ್ತಕ ಪರಿಚಯ).

ಅನುಭವಕ್ಕಿಂತ ಮಿಗಿಲಾದುದು ಬದುಕಿನಲ್ಲಿ ಮತ್ತೇನೂ ಇಲ್ಲ. ಅನುಭವವೇ ಶ್ರೇಷ್ಠ. ಇದು ಸುಮ್ಮನೆ ಬರುವುದಿಲ್ಲ. ಬದುಕಿನ ಬಂಡಿ ಉರಳಿದಾಗ ತಗ್ಗು ದಿಣ್ಣೆಗಳಲ್ಲಿ ಹತ್ತಿಳಿದಾಗ, ಏರುಪೇರುಗಳನ್ನು ದಾಟಿದಾಗ ಆಗುವಂತಹುದೇ ಅನುಭವ. ಇದಕ್ಕೆ ಕ್ಷೇತ್ರಗಳು ಹಲವು. ಒಂದೊಂದು ಕ್ಷೇತ್ರಕ್ಕೂ ವಿವಿಧ ಹಾಗೂ ವಿಭಿನ್ನ ಮಾರ್ಗಗಳುಂಟು. ಪ್ರತಿಯೊಂದು ಮಾರ್ಗವೂ ನಾವು ಸಾಗುವ ಪಥದಲ್ಲಿ ತನ್ನದೇ ಆದ ಅನುಭವವನ್ನು ನೀಡುತ್ತದೆ. ಅನುಭವವು ಕ್ಷೇತ್ರದಿಂದ ಕ್ಷೇತ್ರಕ್ಕೆ ಹೇಗೆ ಭಿನ್ನವಾಗಿರುತ್ತದೆಯೊ ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೂ ಭಿನ್ನವಾಗಿರುತ್ತದೆ. ಒಂದೇ ಕ್ಷೇತ್ರಕ್ಕೆ ಇಬ್ಬರು ಅಥವಾ ಮೂವರು ಅಥವಾ ಅದಕ್ಕಿಂತಲೂ ಹೆಚ್ಚು ಮಂದಿ ತೊಡಗಿಸಿಕೊಂಡಾಗ, ಎಲ್ಲರಿಗೂ ಒಂದೇ ಅನುಭವವಾಗುತ್ತದೆ ಎಂದೇನಿಲ್ಲ. ಪ್ರತಿಯೊಬ್ಬರಿಗಾಗುವ ಅನುಭವವು ಬೇರೆ ಬೇರೆಯೆ ಇರುತ್ತದೆ. ಆದ್ದರಿಂದ ನಾವು ಪ್ರತಿ ಕ್ಷೇತ್ರದಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ, ಆ  ಕ್ಷೇತ್ರದಲ್ಲಿ ಪರಿಪೂರ್ಣತೆಯ ಅನುಭವವನ್ನು ಪಡೆಯಬೇಕು. ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಇತ್ಯಾದಿ ಕ್ಷೇತ್ರಗಳಲ್ಲಿ ವ್ಯಕ್ತಿಗಳು ತೊಡಗಿಸಿಕೊಂಡಾಗ ಅವರಿಗಾಗುವ ಅನುಭವಗಳು ಸದಾ ಕಾಲವೂ ಅನನ್ಯ. ಸಾಹಿತ್ಯ ಕ್ಷೇತ್ರವೊಂದರಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನಗಾಗುವ ಅನುಭವಗಳನ್ನು ತಾನೂ ಅನುಭವಿಸಿ, ಸಮಾಜದಲ್ಲಿ ಇತರರಿಗೂ ಉಣಬಡಿಸುತ್ತಿರುವ ಓರ್ವ ಶ್ರೇಷ್ಠ ಸಾಹಿತ್ಯಾತ್ಮಕ ಚಿಂತಕರು ಅವರೇ ನಮ್ಮ ಗೊರೂರು ಅನಂತರಾಜುರವರು. 

ಗೊರೂರು ಅನಂತರಾಜು ರವರ ಕಥೆ, ಕವನ, ಹಾಸ್ಯ, ಕಾದಂಬರಿ, ನಾಟಕ ಹೀಗೆ ವಿಭಿನ್ನ ಲೇಖನಗಳನ್ನು ನಾವು ಆಗಾಗ ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ. ವಿಭಿನ್ನ ಸಾಹಿತ್ಯಾತ್ಮಕ ಮಜಲುಗಳನ್ನು ಓದುಗರಿಗೆ ನೀಡಿದ್ದಾರೆ. ಇವರ ಬರಹಗಳು ಓದುಗರ ಚಿಂತನ ಮಂಥನಕ್ಕೆ ಓರೆ ಹಚ್ಚುತ್ತವೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಸಲುವಾಗಿ ಇವರು ಕೆಲವು ಲೇಖನಗಳನ್ನು ಬರೆದಿರುತ್ತಾರೆ. ವಿಜ್ಞಾನದ ಜ್ಞಾನದೀಪವನ್ನು ಹಚ್ಚಲು ಪ್ರಯತ್ನಿಸಿರುತ್ತಾರೆ. 

ಹೇಳಿದಂತಹ ಮಾತುಗಳಿವೆ ಮೌನದಲಿ, ತಿಳಿಸಲಾಗದಂತಹ ಭಾವನೆಗಳಿವೆ ಮನದಲ್ಲಿ , ಕನಸುಗಳಿವೆ ನನಸಾಗದಂತಹ ನಯನಗಳಲ್ಲಿ, ತೀರದಂತಹ ಬಯಕೆಗಳಿವೆ ಅಂತರಂಗದಲಿ ...... ಓರ್ವ ಲೇಖಕನ / ಕವಿಯ ಮನದಾಳದ ಮಾತು, ಭಾವನೆ, ಕನಸು, ಬಯಕೆಗಳು ಆತನ ಮನದಾಳದಲ್ಲಿ ಹುದುಗಿರುತ್ತವೆ. ಅವು ಹೊರಬರಲು ಬರಹ ಒಂದು ಪ್ರಮುಖ ಸಾಧನವಾಗಿರುತ್ತದೆ. ಕಣ್ಣೆದುರಿಗೇ ಎಷ್ಟೋ ಅನವಶ್ಯಕ ಘಟನೆಗಳು ನಡೆದು ಹೋದರೂ ಅವುಗಳನ್ನು ಅದೇ ಸ್ಥಳದಲ್ಲಿ ನಿಂತು ಬಗೆಹರಿಸುವ ಸಾಮರ್ಥ್ಯವಿದ್ದರೂ, ಅಲ್ಲಿ ಅವಕಾಶ ಸಿಗದೆ ವಂಚಿತರಾಗಬಹುದು. ಅಂತಹ ಸಂದರ್ಭದಲ್ಲಿ ಘಟನೆಯ ಸಂದರ್ಭ, ಸಮಸ್ಯೆ, ಕಾರಣ , ಪರಿಹಾರಗಳನ್ನು ನೀಡಲು ಈ ಬರಹ ಅತ್ಯುತ್ತಮ ಹಾಗೂ ಅತ್ಯಮೂಲ್ಯ ಸಾಧನವಾಗಿ ಪರಿಣಮಿಸುತ್ತದೆ. ಈ ನಿಟ್ಟಿನಲ್ಲಿ 'ಬರಹ' ಎಂಬ ಸಾಧನವನ್ನು ಗೊರೂರು ಅನಂತರಾಜುರವರು ಉತ್ತಮವಾಗಿ ಬಳಸುತ್ತಾರೆ. ಮೌನದ ಮಾತುಗಳನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜದ ಒಳಿತಿಗೆ ಬರೆಯುತ್ತಾರೆ. ಮನದೊಳಗಿನ ಭಾವನೆಗಳನ್ನು ಬರಹದ ಮೂಲಕ ವ್ಯಕ್ತಪಡಿಸಿ ಆ ಮೂಲಕ " ತನ್ನಂತೆಯೇ ಪರರು ಹಾಗೂ ಪರರಂತೆ ತಾನು " ಎಂಬ ಅನುಭಾವವನ್ನು ಬೆಸೆಯುತ್ತಾರೆ. 

ಗುರು ಅನಂತರಾಜುರವರಿಗೆ ಬರಹ ಬರವಣಿಗೆ ನಿತ್ಯ ನಿರಂತರವಾದ ಪ್ರವೃತ್ತಿಯಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಹಲವು ವರ್ಷಗಳು ದುಡಿದು ಈಗ ನಿವೃತ್ತಿಯಾಗಿದ್ದಾರೆ. ವೃತ್ತಿಯಿಂದ ಮಾತ್ರ ನಿವೃತ್ತಿ, ಆದರೆ ನಿಂತಿಲ್ಲ ಈಗಲೂ ಇವರ ಪ್ರವೃತ್ತಿ. ಅದು ಬರಹಗಳ ಜ್ಞಾನದ ಬುತ್ತಿ. ಪ್ರವೃತ್ತಿಯೆಡೆಗೆ ಇವರ ಕಾಳಜಿ, ಕಳಕಳಿ, ಆಸಕ್ತಿ,  ಶ್ರದ್ಧೆ, ನಿಷ್ಠೆ , ಶ್ರಮ ಬರವಣಿಗೆಯ ಮೇಲಿನ ಪ್ರೀತಿ ಇವರ ಅವಿನಾಶಿ ಸಂಪನ್ಮೂಲಗಳಾಗಿವೆ. ಯಾವುದೇ ಕ್ಷೇತ್ರದಲ್ಲಿ ವ್ಯಕ್ತಿಯೊಬ್ಬನು ಬೆಳೆಯಬೇಕಾದರೆ ಮೇಲಿನ ಅಂಶಗಳು ಅತ್ಯಾವಶ್ಯಕ. ಎಲ್ಲಾ ಅಂಶಗಳನ್ನು ಸಮ್ಮಿಳಿತ ಮಾಡಿಕೊಂಡು ಗೊರೂರು ಅನಂತರಾಜು ರವರು ತಮ್ಮ ಬರವಣಿಗೆಗಳನ್ನು ಆರಾಧಿಸುತ್ತಾ ಮುನ್ನಡೆಯುತ್ತಿದ್ದಾರೆ. ಇವರ ಕ್ರಿಯಾಶೀಲ ಚಟುವಟಿಕೆಗಳು ಆತ್ಮ ಪುನರಾವಲೋಕನಕ್ಕೆ ಮಾರ್ಗಸೂಚಿಯಾಗುತ್ತದೆ. ವ್ಯಕ್ತಿಯ ಮನೋವಿಕಾಸಕ್ಕೆ ಇವರ ಬರವಣಿಗೆಗಳು ಸ್ಪೂರ್ತಿಯಾಗುತ್ತದೆ. 

ನಾನು ಶಾಲೆಯಲ್ಲಿ ಕರ್ತವ್ಯ ನಿರತನಾಗಿದ್ದ ಒಂದು ದಿನ ಮಧ್ಯಾಹ್ನ ಗೊರೂರು ಅನಂತರಾಜುರವರು ನನಗೆ ಕರೆ ಮಾಡಿ, ತಮ್ಮನ್ನು ಪರಿಚಯಿಸಿಕೊಂಡು, " ನನ್ನ ಒಂದು ಪುಸ್ತಕ ತಾರುಣ್ಯದ ತಂತಿ ಮೀಟಿ "  ಈ ಪುಸ್ತಕವನ್ನು ಓದಿ ಅಭಿಪ್ರಾಯ ತಿಳಿಸಿ ಸರ್ ಎಂದು ಹೇಳಿದರು. ನಾನು ಒಪ್ಪಿದೆ. ಓದಿದೆ. ಗೊರೂರು ಅನಂತರಾಜುರವರು ಬರವಣಿಗೆಯಲ್ಲಿ ಎತ್ತರಕ್ಕೆ ಬೆಳೆದ ಲೇಖಕರು. ಅವರ ಕಥೆ , ಕವನ , ಹಾಸ್ಯ, ರಂಗಕಲೆಗಳ ಲೇಖನಗಳು ಇತ್ಯಾದಿ ಬರಹಗಳು ಅದ್ಭುತವಾದ ಪರಿಕಲ್ಪನೆಗಳನ್ನು ಓದುಗರಿಗೆ ಕಟ್ಟಿಕೊಡುತ್ತವೆ. ಅಂತಹ ಓರ್ವ ಶ್ರೇಷ್ಠ ಲೇಖಕರ ಪುಸ್ತಕ ನನ್ನ ಕೈಲಿ ಡಿಜಿಟಲ್ ರೂಪದಲ್ಲಿ. ಇಷ್ಟವೂ ಆಯಿತು. ಓದೋಣವೆಂದು ತೀರ್ಮಾನಿಸಿ ಶ್ರೀಯುತರನ್ನು ಭೇಟಿ ಮಾಡಿದೆ. ಪುಸ್ತಕವನ್ನು ನನ್ನ ಕೈಗಿಟ್ಟು ಇದನ್ನು ಓದಿ ಅಭಿಪ್ರಾಯ ತಿಳಿಸಿ ಸರ್ ಎಂದರು. ನಾನೂ ಒಪ್ಪಿದೆ. 

" ತಾರುಣ್ಯದ ತಂತಿ ಮೀಟಿ " ಈ ಕೃತಿಯಲ್ಲಿರುವ ಲೇಖನಗಳು ಓದುಗರನ್ನು ಒಂದೆಡೆ ಕುಳಿತು ನಿರಂತರವಾಗಿ ಓದುವಂತೆ ಮಾಡುತ್ತವೆ. ಓದುಗರ ಮನೋತರಂಗಗಳು ಪದಗಳ, ವಾಕ್ಯಗಳ ಸಾಲುಗಳೊಂದಿಗೆ ಪ್ರವಾಸ ಮಾಡುತ್ತವೆ. ಪುಸ್ತಕ ಓದುತ್ತಲೇ ಪ್ರಪಂಚ ನೋಡುವ ಅನುಭವ ನಮಗಾಗುತ್ತದೆ. ಕನ್ನಡ ಚೆನ್ನ - ಕವಿಗಳು ಚಿನ್ನ, 'ಚಿನ್ನದ ಲೋಕ'  ಕೃತಿಯಲ್ಲಿ ವೈ. ಬಿ. ಎಚ್. ಶಿವಯೋಗಿ ರವರ ಮಕ್ಕಳ ಬಣ್ಣದ ಕಾವ್ಯ ಲೋಕದ ಕಲ್ಪನೆಯನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಗೊರೂರು ಅನಂತರಾಜುರವರು ವಿವರಣಾತ್ಮಕವಾಗಿ ಓದುಗರ ಮನಮುಟ್ಟುವಂತೆ ಹೇಳಿದ್ದಾರೆ. ಎನ್‍. ಬಿ. ಆನಂದ ಪಟೇಲ್ ನೆಲ್ಲಿಗೆರೆ ಇವರು " ನಡೆದಾಡುವ ದೇವರು ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮೀಜಿಯವರು " ಎಂಬ ಕೃತಿಯ ಮೂಲಕ ಸ್ವಾಮೀಜಿಯವರು ಸಾಧನೆಯ ಹಾದಿಯಲ್ಲಿ ಸನ್ಯಾಸಿ ಜೀವನ ನಡೆಸುತ್ತಾ ಆಕಾಶದ ಎತ್ತರಕ್ಕೆ ಬೆಳೆದು ನಿಂತ ಮಹಾನ್ ತ್ಯಾಗಿ ಎಂಬ ಜೀವನಗಾಥೆಯನ್ನು ನೀಡಿದ್ದಾರೆ. ಆ ಕೃತಿಗೊಂದು ಲೇಖನವನ್ನು ಪ್ರಕಟಿಸಿ ಪುಸ್ತಕಕ್ಕೊಂದು ಅರ್ಥಗರ್ಭಿತ ಸಂದೇಶವನ್ನು ನೀಡಿದ್ದಾರೆ.  ಹೀಗೆಯೇ " ತಾರುಣ್ಯದ ತಂತಿ ಮೀಟಿ " ಕೃತಿಯು ವಿಭಿನ್ನ ಲೇಖನಗಳ ವೈಶಿಷ್ಟ್ಯ ಪೂರ್ಣ ಕೃತಿಯಾಗಿದ್ದು ವೈವಿಧ್ಯಮಯವಾಗಿದೆ.

ಸರಳ ಜೀವನ ಉದಾತ್ತ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ಗೊರೂರು ಅನಂತರ ಮನಸ್ಸು ಮಗುವಿನಂತೆ. ಅಂಬೆಗಾಲಿಡುವ ಮಗುವೊಂದು ನೆಲದಲ್ಲಿ ಕಾಣುವ ಚಿಕ್ಕ ಚಿಕ್ಕ ಇರುವೆ, ಹುಳ, ವಸ್ತುಗಳನ್ನು ಕೈಬೆರಳಿನಿಂದ ಮುಟ್ಟುವಂತೆ ಸಾಹಿತ್ಯ ಲೋಕವೆಂಬ ಸೌಧದೊಳಗಿನ ನೆಲದಲ್ಲಿ ಹರಿದಾಡುವ ಎಲ್ಲಾ ರೀತಿಯ ಸಾಹಿತ್ಯವನ್ನು ಅತ್ಯಂತ ಸೂಕ್ಷ್ಮ ದೃಷ್ಟಿಕೋನದಿಂದ ಅವಲೋಕಿಸಿ, ಈ ಸಮಾಜಕ್ಕೆ ಯಾವುದನ್ನು ನೀಡಬೇಕು ಎಂಬುದನ್ನು ತೀರ್ಮಾನಿಸಿ, ತಮ್ಮ ಕೃತಿಯ ಮೂಲಕ ಉಣಬಡಿಸಿದ್ದಾರೆ. ಈ ಲೇಖನಗಳ ಮೂಲಕ ಜೀವನದ ಆಗುಹೋಗುಗಳಾದ ನಗು - ಅಳು, ದುಃಖ- ಸಂತಸ,  ಕಷ್ಟ - ಸುಖ, ವೃತ್ತಿ - ಪ್ರವೃತ್ತಿ, ಅನುಭವ - ಅನುಭವ, ಬಾಲ್ಯ - ಯೌವ್ವನ - ವೃದ್ಯಾಪ್ಯ, ಒಂಟಿತನ - ಸಹಜೀವನ, ಸೋಲು - ಗೆಲುವು ಹೀಗೆ ಎಲ್ಲಾ ರೀತಿಯ ಚಿಂತನೆಗಳು ಮಂಥನ ರೂಪ ತಳೆದು ಒಡಮೂಡಿವೆ.ಗೊರೂರು ಅನಂತರಾಜುರವ ರು ಮಾನವ ಬದುಕಿನ ವಿವಿಧ ಮಜಲುಗಳನ್ನು ತಮ್ಮ ಬರವಣಿಗೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಎಲ್ಲಾ ಬರಹಗಳಲ್ಲೂ ಅವರ ಸರಳತೆ ಎದ್ದು ಕಾಣುತ್ತದೆ. ಆ ಮೂಲಕ ಜಗತ್ತಿಗೆ ಉದಾತ್ತ ಚಿಂತನೆಗಳನ್ನು, ಪರಿಕಲ್ಪನೆಗಳನ್ನು, ಅನುಭವಗಳನ್ನು ನೀಡುತ್ತಿದ್ದಾರೆ. 

" ತಾರುಣ್ಯದ ತಂತಿ ಮೀಟಿ "  ಈ ಕೃತಿಯು ಗೊರೂರು ಅನಂತರಾಜುರವರಿಂದ ಬರೆಯಲ್ಪಟ್ಟ ವಿಭಿನ್ನ , ವಿವಿಧ ಲೇಖನಗಳ ಸಂಗ್ರಹ. ಎಲ್ಲಾ ಲೇಖನಗಳು ಕೃತಿಯಾಗುವ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಅವೆಲ್ಲವನ್ನು ಒಟ್ಟಾಗಿ ಸೇರಿಸಿ ಪ್ರತಿಯೊಂದು ಹೊರತಂದಿದ್ದಾರೆ. 

ಗೊರೂರು ಅನಂತರಾಜು ಅವರು ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆಯನ್ನೇ ಆರಾಧಿಸುತ್ತಾ, ಬರವಣಿಗೆಯ ಮೂಲಕವೇ ಸಾಮಾಜಿಕ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಸೇವೆ ಎಂಬುದು ಬಹಳ ಗಂಭೀರವಾದ ವಿಚಾರ, ಇದೊಂದು ಜವಾಬ್ದಾರಿ , ಇದೊಂದು ಕೈಂಕರ್ಯ, ಇದೊಂದು ದೃಷ್ಟಿಕೋನ, ವಿಭಿನ್ನವಾದ ನೆಲೆಗಟ್ಟು, ವಿಶಿಷ್ಟವಾದ ವೇದಿಕೆ, ಎಂಬ ಚಿಂತನೆಗಳ ಮೂಲಕವೇ ಈ ಸಮಾಜಕ್ಕೆ ಒಳ್ಳೆಯದನ್ನೇ ತಿಳಿ ಹೇಳುತ್ತಾ ತಮ್ಮ ಬರಹಗಳ ಮೂಲಕ ಸಾಗಿದ್ದಾರೆ. ಇವರ ತಾತ್ವಿಕವಾದ ಶಕ್ತಿ, ಚಿಂತನಾ ಸಾಮರ್ಥ್ಯ, ಭೌತಿಕವಾದ ವಿಚಾರ ವಿಮರ್ಶೆಗಳು ಓದುಗಮಹನೀಯರನ್ನು ಮತ್ತಷ್ಟು ವಿಚಾರ ವಿಮರ್ಶಗಳಿಗೆ ಅಣಿಗೊಳಿಸುತ್ತವೆ. ಸರಿ - ತಪ್ಪುಗಳ ನಿರ್ಧರಿಸುವಿಕೆಗೆ ವೇದಿಕೆಯನ್ನು ಒದಗಿಸುತ್ತವೆ. ಸಾಮಾಜಿಕ ಸಮತೋಲನಕ್ಕೆ ದಾರಿಯಾಗಿದೆ ಇವರ ಲೇಖನಗಳ ಮಾಲಿಕೆ. 

ಬದ್ಧತೆಯ ಪ್ರಬುದ್ಧತೆಯಿರುವ ಮಿತ್ರರಾದ ಗೊರೂರು ಅನಂತರಾಜುರವರು ಸ್ವಯಂ ಕ್ರಿಯಾಶೀಲತೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ತಮಗೆ ಆದ ಅನುಭವಗಳನ್ನು ಸಮಾಜದ ಹಿತಕ್ಕಾಗಿ ಕಟ್ಟಿಕೊಡುವ ಕೃತಿಯೊಂದನ್ನು ನೀಡುತ್ತಿದ್ದಾರೆ. ಕಾಲ, ದೇಶ, ವಸ್ತು, ವಿಷಯ ಮತ್ತು ವಿಚಾರಗಳ ಮೂಲಭೂತ ಪರಿಕಲ್ಪನೆಗಳನ್ನು ಒಳಗೊಂಡಂತೆ ಅವು ಎಲ್ಲಾ ತಾಲೂಕು ಯೋಗ್ಯವೆನಿಸುವಂತೆ ತಮ್ಮ ವಿಚಾರ ವಿಮರ್ಶೆಗಳನ್ನು ಮಂಡಿಸುತ್ತಾರೆ. ವ್ಯಷ್ಠಿಗೂ , ಸಮಷ್ಠಿಗೂ , ಪರಿಪೂರ್ಣತೆಗೂ, ಸಮನ್ವಯತೆಗೂ ಅಗತ್ಯವಾದ ಜ್ಞಾನವು ಈ ಲೇಖನಗಳಲ್ಲಿ ಒಡಮೂಡಿದೆ. ಸಾಧಿಸಿದ ಸಾಧಕರನ್ನು ಪರಿಚಯಿಸುವ ಮೂಲಕ ನಮಗೆ ತಿಳಿದಿರದ ಅದೆಷ್ಟೋ ಲೇಖಕರನ್ನು ಪರಿಚಯಿಸುತ್ತದೆ. ಈ ಕೃತಿ ಜ್ಞಾನ, ವಿಜ್ಞಾನ ಪತ್ರಿಕೋದ್ಯಮ, ರಾಷ್ಟ್ರನಾಯಕರು, ಕಲಾವಿದರು - ರಂಗಕರ್ಮಿಗಳು ಕನ್ನಡದ ಕವಿ ಪರಂಪರೆ ಸಾಹಿತ್ಯ ದಿಗ್ಗಜರು, ಧಾರ್ಮಿಕ ಮಹಾಪುರುಷರು, ಕಲೆ, ಹವ್ಯಾಸ ಹೀಗೆ ಹತ್ತು ಹಲವು ವಿಚಾರಗಳನ್ನು ವಿಮರ್ಶಿಸುವ ಮೂಲಕ ಬೌದ್ಧಿಕ ಸ್ತರವನ್ನು ಮೇಲಕ್ಕೇರಿಸುತ್ತದೆ. ಸಾಮಾನ್ಯ ಜ್ಞಾನವು ಬದುಕಿಗೆ ಅತ್ಯಗತ್ಯವೆಂದು ಸಾರಿ ಹೇಳುತ್ತದೆ ಈ ಕೃತಿ. ಗಂಭೀರ ವಿಷಯಗಳನ್ನು ಸರಳವಾಗಿಯೂ, ಸುಲಭವಾಗಿಯೂ, ಓದುಗರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಆಕರ್ಷಕ ಶೈಲಿಯಿಂದ ಕೂಡಿರುತ್ತದೆ ಈ ಕೃತಿಯ ವೈಶಿಷ್ಟ್ಯವೆನಿಸಿದೆ.

ಮಹಾಕವಿ ರಸಋಷಿ ಕುವೆಂಪುರವರ ಪಂಚತತ್ವಗಳಾದ ಮನುಜಮತ , ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣ ದೃಷ್ಟಿಗಳು ಮನುಷ್ಯ ಮನುಷ್ಯನಾಗಲಿಕ್ಕೆ ಮನುಷ್ಯತ್ವವನ್ನು ಮೈಗೂಡಿಸಿಕೊಳ್ಳಲಿಕ್ಕೆ ಅವಶ್ಯವಾಗಿ ಬೇಕೇ ಬೇಕು. ಸಹನೆ, ದಯೆ, ಕರುಣೆ, ಪ್ರೀತಿ, ಮಮತೆ, ವಾತ್ಸಲ್ಯ, ನಂಬಿಕೆ, ವಿಶ್ವಾಸ, ಶ್ರದ್ಧೆ, ಶ್ರಮ ಇವುಗಳನ್ನು ಮೈಗೂಡಿಸಿಕೊಂಡು ಯಾರಿಗೂ ಕೇಡನ್ನು ಬಯಸದ ಮನಸ್ಸುಗಳ ನಿರ್ಮಾಣವಾಗಬೇಕಿದೆ ಈ ಸಮಾಜದಲ್ಲಿ. ಓದಿ ಬೋಧಕನಾಗು, ಖಾದಿ ಯೋಧನೆ ಆಗು ವಣಿಕ ಶ್ರಮಿಕನೆ ಆಗು, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿಯ ಆಶಯ ಮಹೋನ್ನತವಾದ ನುಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗೊರೂರು ಅನಂತರಾಜುರವರು ಸಮಾಜದಲ್ಲಿನ ಮನಸ್ಸುಗಳಿಗೆ ಮನುಷ್ಯತ್ವವನ್ನು ತಮ್ಮ ಬರವಣಿಗೆಯ ಕೌಶಲದ ಮೂಲಕ ತುಂಬುತ್ತಿದ್ದಾರೆ. ಈ ಕೃತಿಯು ಮಾನವನ ಬದುಕಿನ ಎಲ್ಲಾ ಮಜಲುಗಳನ್ನು ಹಿಡಿದು ನಿಂತು ಓದುಗರನ್ನು ತೃಪ್ತಿಪಡಿಸುತ್ತವೆ.

- ಕೆ. ಎನ್. ಚಿದಾನಂದ, ಹಾಸನ.


ಶನಿವಾರ, ಜನವರಿ 14, 2023

ಪ್ರತಿಭೆಗಳ ಮಹಾ ಸಂಗಮ'ಗಾನ ನಾಟ್ಯ ಎರಡೂ ರಮ್ಯ' (ಕೃತಿ ಪರಿಚಯ) - ಎಂ.ಜಿ.ಪರಮೇಶ್ ಮಡಬಲು.

(ಸಾಹಿತಿ ಗೊರೂರು ಅನಂತರಾಜು ಅವರ ಕೃತಿ ವಿಮರ್ಶೆ)
ಶಿಲ್ಪ ಕಲೆಯ ತವರೂರು,ಗೊಮ್ಮಟನ ನೆಲೆವೀಡು,ಕಲೆ,ಸಾಹಿತ್ಯ,ಸಂಗೀತ ಶಿಲ್ಪಕಲೆ ಮತ್ತು ರಂಗಭೂಮಿಗೆ ಹೆಸರಾದ ಹಾಸನ ಜಿಲ್ಲೆಯು ಕರ್ನಾಟಕ ಇತಿಹಾಸದಲ್ಲಿ ತನ್ನದೇ ಆದ ಚಾಪು ಮೂಡಿಸಿದೆ. ಸಾಹಿತ್ಯ ಹಾಗೂ ಸಾಂಸ್ಕೃತಿಕವಾಗಿ ಸಾಕಷ್ಟು ಹೆಸರು ಪಡೆದಿದೆ. ಇಂತಹ ಹಾಸನ ಜಿಲ್ಲೆಯಲ್ಲಿ ಅನೇಕ ವಿದ್ವಾಂಸರು,ಕವಿಗಳು,ಸಾಹಿತಿಗಳು,ಕಲಾವಿದರು ಜನ್ಮತಳೆದಿದ್ದಾರೆ. ಅಂತಹ ಕವಿಗಳಲ್ಲಿ ಗೊರೂರು ಅನಂತರಾಜು ಅವರು ಹಿರಿಯ ಕವಿಗಳ ಸಾಲಿನಲ್ಲಿ ಕಾಣಸಿಗುವ ಅಪರೂಪದ ಬರಹಗಾರರು. ಇವರನ್ನು ಬಹುಮುಖ ಪ್ರತಿಭಾಸಂಪನ್ನರೆಂದರೆ ತಪ್ಪಾಗಲಾರದು.ಬಾಲ್ಯದಿಂದಲೇ ಸಾಹಿತ್ಯ ಹವ್ಯಾಸವನ್ನು ಮೈಗೂಡಿಸಿಕೊಂಡಿರುವ ಅನಂತರಾಜು ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸೃಜನಶೀಲ ಬರಹಗಾರರು.ಕವಿಯಾಗಿ,ಸಾಹಿತಿಯಾಗಿ,ರಂಗಭೂಮಿ ಕಲಾವಿದರಾಗಿ,ಹಾಸ್ಯ ಕಲಾವಿದರಾಗಿ ಜಿಲ್ಲೆಯಾದ್ಯಂತ ಹೆಸರಾಗಿದ್ದಾರೆ.ಜನಮನ ಸೂರೆಗೊಂಡಿದ್ದಾರೆ.ಸಾಂಸ್ಕೃತಿಕ ವ್ಯಕ್ತಿತ್ವದಿಂದಲೇ ಎಲ್ಲರ ಮನ ರಂಜಿಸಿದ್ದಾರೆ. ಬಹುಮುಖ ಪ್ರತಿಭಾ ಸಂಪನ್ನರೆನಿಸಿದ ಗೊರೂರು ಅನಂತರಾಜು ಅವರು ಕಥೆ,ಕವನ,ಕವಿತೆ,ಲೇಖನ,
ನಾಟಕಗಳು,ಹಾಸ್ಯ ಲೇಖನಗಳು, ವಿವಿಧ ಪ್ರಕಾರದ ಸಾಹಿತ್ಯವಿಮರ್ಶೆ, ರಂಗಪ್ರಯೋಗ ಒಳಗೊಂಡಂತೆ ಸುಮಾರು 50 ಕ್ಕೂ ಹೆಚ್ಚು ಮೌಲ್ಯಯುತ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ.ಜಿಲ್ಲೆಯಾದ್ಯಂತ ನೂರಾರು ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿರುವ ಅನಂತರಾಜು ಅವರು ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದಲ್ಲಿ "ಗೊರೂರು ಅನಂತರಾಜು" ಎಂದೇ ಎಲ್ಲರ ಮನೆ ಮಾತಾಗಿದ್ದಾರೆ.

ಇವರ "ಗಾನ ನಾಟ್ಯ ಎರಡೂ ರಮ್ಯ"
ಕೃತಿಯನ್ನು ವಿಮರ್ಶೆಗೆಂದು ಕೈಗೆತ್ತಿಕೊಂಡಾಗ,ಇದೊಂದು ಉತ್ತಮ ಕೃತಿಯಾಗಿದ್ದು, ವಿವಿಧ ರಂಗಗಳಲ್ಲಿ ಹೆಸರು ಮಾಡಿರುವ ಹಾಗೂ ಎಲೆಮರೆ ಕಾಯಿಯಂತಿರುವ ಪ್ರತಿಭಾವಂತರ ಸಾಧನೆಯನ್ನೊಳಗೊಂಡ ಪರಿಚಯಾತ್ಮಕವಾದ ವಿಶಿಷ್ಟ ಕೃತಿ. ಜಿಲ್ಲೆ,ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು,ಕವಿ-ಸಾಹಿತಿಗಳು, ಸಂಗೀತ ನೃತ್ಯ ಕಲಾವಿದರು,ಜಾನಪದ ಕಲಾವಿದರು,ಭರತನಾಟ್ಯ,ಸುಗಮ ಸಂಗೀತ ಹಾಡುಗಾರರು,ರಂಗಭೂಮಿ ಕಲಾವಿದರು ಹೀಗೆ ವಿವಿಧ ರಂಗಗಳಲ್ಲಿ ಸೇವೆಸಲ್ಲಿಸುತ್ತಿರುವ ಸೃಜನಶೀಲ ಕಲಾವಿದರನ್ನು ಗುರುತಿಸಿ,ಸಂದರ್ಶಿಸಿ, ವಿಮರ್ಶಿಸಿ,ಅಧ್ಯಯನ ನಡೆಸಿ,ಬರೆದಿರುವ ಎಲ್ಲರೂ ಓದಲೇಬೇಕಾದ ಅಮೂಲ್ಯ ಕೃತಿ.
"ಗಾನ ನಾಟ್ಯ ಎರಡೂ ರಮ್ಯ" ಕೃತಿಗೆ ಭರತನಾಟ್ಯ ವಿದುಷಿ,ಅಂಬಳೆ ರಾಜೇಶ್ವರಿ ಅವರು ಬರೆದಿರುವ ಮುನ್ನುಡಿ ಕೃತಿಯ ಮೌಲ್ಯವನ್ನು , ಸೌಂದರ್ಯವನ್ನು ಹೆಚ್ಚಿಸಿದೆ.
ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿ ಹಾಗೂ ಜನಮಿತ್ರ ದಿನಪತ್ರಿಕೆ ಸಂಪಾದಕರಾದ ಹೆಚ್.ಬಿ.ಮದನಗೌಡರು,
ಗೊರೂರು ಅನಂತರಾಜು ಕುರಿತು ಬರೆದಿರುವ ಮೆಚ್ಚುಗೆ ನುಡಿಗಳು ಕೃತಿಗೆ ಕಲಶವಿಟ್ಟಂತಿದೆ.
ಹಾಸನ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿದ್ದ ರಾಜಲಕ್ಷ್ಮಿ ಶ್ರೀಧರ್ ಅವರ ಬೆನ್ನುಡಿ ಮುಕುಟಕ್ಕೆ ಮಾಣಿಕ್ಯವಿಟ್ಟಂತಿದೆ.

ಹಾಸನ ಜಿಲ್ಲೆಯ ಬಹುತೇಕ ಕಲಾವಿದರು,ವಿವಿಧ ಕ್ಷೇತ್ರಗಳ ಸಾಧಕರ ಬಗ್ಗೆ ತಿಳಿಯಲು ಈ ಕೃತಿ ವಿಶಿಷ್ಟ ಮಾಹಿತಿಯನ್ನು ನೀಡುತ್ತದೆ ಜೊತೆಗೆ ಉದಯೋನ್ಮುಖ ಕಲಾವಿದರ ಪರಿಚಯ ಸೊಗಸಾಗಿ ಮೂಡಿಬಂದಿದೆ.
ಜಿಲ್ಲೆಯ ಹೆಸರಾಂತ ಜಾನಪದ ಕಲಾವಿದರಾದ ದೊಡ್ಡಳ್ಳಿ ರಮೇಶ್,ದುದ್ದ ಯೋಗೇಂದ್ರ ಇವರು ಜಾನಪದದ ಹಲವು ಪ್ರಕಾರಗಳಲ್ಲಿ ತಮ್ಮ ವಿಶಿಷ್ಟ ಕಲೆಯನ್ನು ಜನಮನಕ್ಕೆ ತಲುಪಿಸಿದ್ದಾರೆ ಇವರ ಪರಿಚಯಾತ್ಮಕ ವಿಚಾರಧಾರೆಗಳನ್ನು ದಾಖಲಿಸಿರುವುದು ಹೆಮ್ಮೆಯ ವಿಚಾರ.ಉಗ್ಗು ಇದ್ದರೂ ಹಾಡಿ ಹಿಗ್ಗುವ ಹಾಸನ ಬಾಬು ಅವರ ಅದ್ಭುತ ಕಂಠಸಿರಿಯಲ್ಲಿ ಹಾಡುಗಳನ್ನು ಕೇಳುವುದೇ ಪರಮಾನಂದ...!"ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ" ಎಂಬ ಹಾಡು ಅತ್ಯಂತ ಜನಪ್ರಿಯ ಗೀತೆಯಾಗಿ ಹೊರಹೊಮ್ಮಿದೆ.ಹಾಸನ ಜಿಲ್ಲೆಯ,ಸಾಹಿತ್ಯ,ಸಾಂಸ್ಕೃತಿಕ,ಐತಿಹಾಸಿಕ ಸೊಬಗನ್ನು ತೆರೆದಿಡುವ ವಿಶಿಷ್ಟ ಗೀತೆಯಾಗಿದೆ.
ಭಾಮಿನಿ,ವಾರ್ಧಕ,ಚಂಪೂ,
ಛಂದಸ್ಸು,ರಗಳೆ ಮುಂತಾದ ಪ್ರಕಾರಗಳ ಕಾವ್ಯಗಳನ್ನು ಸುಲಲಿತವಾಗಿ ಹಾಗೂ ಸುಶ್ರಾವ್ಯವಾಗಿ ಗಮಕ ಗಾಯನ ಮಾಡುವ ಗಣೇಶ ಉಡುಪ ಅವರ ಪರಿಚಯವೂ ಸಹ ಕೃತಿಯ ಅಂದವನ್ನು ಹೆಚ್ಚಿಸಿದೆ.
ಹಾಸನದ ಹೊಯ್ಸಳೋತ್ಸವ ಹಾಗೂ ಧ್ವನಿ ಬೆಳಕಿನ ಸಂಯೋಜನೆಯಲ್ಲಿ ಕರ್ನಾಟಕ ಗತವೈಭವ ದೃಶ್ಯರೂಪಕ ಕಾರ್ಯಕ್ರಮಗಳ ಕುರಿತು ಬರೆದಿರುವ ಲೇಖನಗಳು ಅರ್ಥವತ್ತಾಗಿ ಮೂಡಿಬಂದಿವೆ.
ಜನ-ಮನ ರಂಜಿಸಿದ ಹಾಡುಹಬ್ಬ,
ಯುವ ಗಾಯಕರ ಗೀತ ಗಾಯನ ಕಾರ್ಯಕ್ರಮ,ನಾಡಹಬ್ಬಕ್ಕೆ ರಂಗುತಂದ ವಿದ್ಯಾರ್ಥಿಗಳ ನೃತ್ಯರೂಪಕಗಳು, ಬಾಹುಬಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಹಾಸನ ಮತ್ತು ಶ್ರವಣಬೆಳಗೊಳದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತ ವಿಚಾರಧಾರೆಗಳು ಅರ್ಥಪೂರ್ಣವಾಗಿ ಮೂಡಿಬಂದಿವೆ.

ಹಾಸನದಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಮೇಳದಲ್ಲಿ ಜಾನಪದ ಕಲಾತಂಡಗಳು,ವೀರಗಾಸೆ ನೃತ್ಯ,ಡೊಳ್ಳಿನ ಕುಣಿತ,ಬೀಸೋ ಕಂಸಾಳೆ,ಚೌಡಿಕೆ ಹಾಡು,ಜಗ್ಗಲಿಗೆ ಮೇಳ ಮುಂತಾದ ಕಲೆಗಳು ಪ್ರದರ್ಶನಗೊಂಡ ಬಗೆಯನ್ನು,ಜನಸಾಮಾನ್ಯರು ಆಸ್ವಾದಿಸಿದ ಬಗೆಯನ್ನು ಗೊರೂರು ಅನಂತರಾಜು ಅವರು ಸಾರವತ್ತಾಗಿ ನಿರೂಪಿಸಿದ್ದಾರೆ.ಸುಗಮ ಸಂಗೀತಕ್ಕೆ ಹಾಸನ ಜಿಲ್ಲೆಯ ಕೊಡುಗೆ ಹಾಗೂ ಬೆಳೆದು ಬಂದ ಬಗೆಯನ್ನು ಸವಿಸ್ತಾರವಾಗಿ ಬರೆಯುತ್ತಾ,ಹನ್ಯಾಳು ಗ್ರಾಮದ ಕಾಳಾಬೋವಿ, ಪಿ.ಬಿ.ಶ್ರೀನಿವಾಸ್ ಅವರ ಧ್ವನಿ ಹೋಲುವ ಬಿ.ಡಿ.ಶಂಕರೇಗೌಡರು,ಜಿ.ಟಿ.ದೇವರಾಜು,ಹಾಸನದ ಭಾನುಮೋಶ್ರೀ, ಜಿಲ್ಲೆಯ ಮತ್ತೋರ್ವ ಪ್ರಸಿದ್ಧ ಹಾಡುಗಾರರಾದ ಗ್ಯಾರಂಟಿ ರಾಮಣ್ಣ,ಜನಪ್ರಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಹಾಡಿದ ಇಂಚರನಾಗೇಶ್ ಹೀಗೆ ನೂರಾರು ಗಾಯಕರು ತಮ್ಮ ವಿಶಿಷ್ಟ ಪ್ರತಿಭೆಯ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅಲ್ಲಲ್ಲಿ ಆಚರಿಸುವ ತಿಂಗಳ ಮಾವನ ಹಬ್ಬದ ಕುರಿತು ಈ ಕೃತಿಯಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ.ಇದೊಂದು ಜಾನಪದ ಆಚರಣೆಯ ಹಬ್ಬವಾಗಿದ್ದು 'ಬಾರಯ್ಯ ಬೆಳದಿಂಗಳೆ,ನಮ್ಮೂರ ಹಾಲಿನಂಥ ಬೆಳದಿಂಗಳೇ...'ಎಂದು ಚಂದಮಾಮನನ್ನು ಕರೆಯುವ ಆಚರಣೆಯಾಗಿದೆ. ಬಯಲಿನಲ್ಲಿ ತಿಂಗಳ ಮಾವನ ರಂಗೋಲಿ ಬರೆದು ಸೋಬಾನೆ ಪದ ಹಾಡುವ ವಿಶಿಷ್ಟ ಆಚರಣೆಯಾಗಿದೆ.
ತಮ್ಮ ವಿಶಿಷ್ಟವಾದ ಜನಪದ ಗಾಯನದ ಕಂಠಸಿರಿಯನ್ನು ಹೊಂದಿರುವ ಕೆ.ಕೆ.ದೇವಾನಂದ ವರಪ್ರಸಾದ್,ಹಳ್ಳಿಗಾಡಿನ ಜನಪದವನ್ನು ಇಂಪಾಗಿ ಹಾಡುವ ಲಲಿತ ಜ್ಯೋತಿ ಸಹೋದರಿಯರು,
ಬಾಲ್ಯದಲ್ಲಿಯೇ ಕಾಲಿಗೆ ಗೆಜ್ಜೆಕಟ್ಟಿ ಭರತನಾಟ್ಯದಲ್ಲಿ ಹೆಸರು ಮಾಡಿದ ಪ್ರತೀಕ್ಷಾ, ಕೆ.ಆರ್.ರಜನಿ,ಸಂಗೀತ ನೃತ್ಯ ಹಾಗೂ ಕಾವ್ಯಪ್ರತಿಭೆ ಹೆಚ್.ಕೆ.ಪ್ರವಲ್ಲಿಕಾ ಇನ್ನೂ ಮುಂತಾದವರ ಸಾಧನೆಯ ಚಿತ್ರಣವನ್ನು ಸಾಹಿತಿ ಗೊರೂರು ಅನಂತರಾಜು ಅವರು ಅರ್ಥಪೂರ್ಣವಾಗಿ ನಿರೂಪಿಸಿದ್ದಾರೆ.

ಪ್ರಸ್ತುತ ಈ ಕೃತಿಯಲ್ಲಿ ಉದಯೋನ್ಮುಖ ಕಲಾವಿದರು,ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಪ್ರತಿಭಾವಂತರನ್ನು ಗುರುತಿಸಿ,ಅವರ ವಿವಿಧ ಕ್ಷೇತ್ರಗಳ ಸಾಧನೆಯ ಮಾಹಿತಿಯನ್ನು ಸಂಗ್ರಹಿಸಿ ಬಹಳ ಅಚ್ಚುಕಟ್ಟಾಗಿ ಕೃತಿ ರಚನೆ ಮಾಡಿ ಓದುಗರಿಗೆ ಉಣಬಡಿಸಿರುವ ಅನಂತರಾಜು ಅವರ ಕಾಳಜಿಯನ್ನು ನಾವೆಲ್ಲರೂ ಪ್ರಶಂಸಿಸಬೇಕು.

"ಮಣ್ಣು ಕೂಡುವ ದೇಹ ತಣ್ಣಗಾಗುವ ತನಕ
ಹಿಡಿದ ಕಾಯಕದಲಿ ನಿರತನಾಗು|
ಜನರ ಕಲ್ಯಾಣಕ್ಕೆ ಜಗದ ಉದ್ದಾರಕ್ಕೆ ನಿನ್ನ ಕೊಡುಗೆಯನಿತ್ತು ಹೊರಟುಹೋಗು||"
ಮಹಾದೇವ ಬಣಕಾರರ ಈ ಮೌಲ್ಯಯುತ ಸಾಲುಗಳು ನಮ್ಮನ್ನು ಸದಾ ಜಾಗೃತಗೊಳಿಸುತ್ತವೆ.ಹುಟ್ಟು-ಸಾವಿನ ನಡುವೆ ಮನುಷ್ಯ ಹೇಗೆ ಬದುಕಿದ್ದ ಎನ್ನುವುದು ಬಹಳ ಮುಖ್ಯ. ಅದರಂತೆ ಗೊರೂರು ಅನಂತರಾಜು ಅವರು ತಮ್ಮ ವಿಶಿಷ್ಟ ಕಾರ್ಯ ಸಾಧನೆಗಳಿಂದ ನಮ್ಮ ನಡುವೆ ಸದಾ ಪ್ರಜ್ವಲಿಸುತ್ತಿದ್ದಾರೆ. ಇವರ 
ಕ್ರಿಯಾಶೀಲ ವ್ಯಕ್ತಿತ್ವ ನಮ್ಮೆಲ್ಲರಿಗೂ ಮಾರ್ಗದರ್ಶಿಯಾಗಬಲ್ಲದು.ಅನಂತರಾಜು ಅವರ 'ಗಾನ ನಾಟ್ಯ ಎರಡೂ ರಮ್ಯ'ಕೃತಿಯು ಸಂಗ್ರಹಯೋಗ್ಯವಾದ ಉತ್ತಮ ಗ್ರಂಥವಾಗಿದ್ದು, ಕೃತಿಕರ್ತರಾದ ಅನಂತರಾಜು ಅವರಿಗೆ ಸಮಸ್ತ ಒದುಗರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.
ಇವರಿಂದ ಇನ್ನೂ ಹಲವು ಮೌಲಿಕ ಗ್ರಂಥಗಳು ಹೊರಬರಲಿ ನಮ್ಮಂತಹ ಕಿರಿಯ ಬರಹಗಾರರಿಗೆ ಸದಾ  ಮಾರ್ಗದರ್ಶನ ನೀಡಲಿ ಎಂದು ಶುಭಕೋರುತ್ತೇನೆ.

- ಎಂ.ಜಿ.ಪರಮೇಶ್ ಮಡಬಲು
ಸಾಹಿತಿಗಳು
7892856305.

ಎಳ್ಳುಬೆಲ್ಲಿನ ಸಂಕ್ರಮಣ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸೂರ್ಯ ತನ್ನ ಪಧ ಉತ್ತರದಲ್ಲಿರಿಸಿದ
ಸಂಕ್ರಮಣವ ಹಬ್ಬ ನೀವೆಲ್ಲ ಆಚರಿಸಲೆಂದ
ಸಂಗಮೇಶ್ವರನ ಜಾತ್ರೆ ನಡೆಯಿತಂದು
ಭಕ್ತಿ ಮಂಡಳಿ ಪೂಜಿಸಲು ಸೇರಿತಂದು

ನದಿ ದಂಡೆಯಲ್ಲಿ ತುಂಬಿದ ಜನಸಾಗರ 
ಕರಮುಟಿಗಿ ಮೈಸವರಿ ಸ್ನಾನ ಮಾಡುವ ಭರ
ಕಳೆಯಿತು ಕರ್ಮವು ಶುಭ ದಿನದಂದು
ಸ್ವಾಗತಿಸುತಿದೆ ಹೊಲದ ಪೈರು ನಮಗಿಂದು

ಛಜ್ಜಿ ರೊಟ್ಟಿ ಭಜ್ಜಿ ಪಲ್ಲೆ ತಿಂದಾರ ನದಿ ದಂಡೆಯಲ್ಲಿ
ಸಂಗಮೇಶ್ವರ ಪಲ್ಲಕ್ಕಿ ಹಿಡಿದಾರ ಭಕ್ತಿರಸದಲ್ಲಿ
ಸುತ್ತೂರಿನ ಜನ ಜಾತ್ರೆಯ ಗದ್ದಲಲಿ
ಬೇಕಾದ ಆಟಿಕೆ ಮಕ್ಕಳಿಗೆ ಸಿಕ್ಕಿತಲ್ಲಿ

ಮುದ್ದು ಗುಂಡುಗಳ ಹಾರಾಟದಲ್ಲಿ
ಪುರವಂತರ ಆಟ ಮೈನವರೆಳಿಸಿತು ಅಲ್ಲಿ
ಭಕ್ತರ ಜೆಂಕಾರ ಸಂಗಮೇಶ್ವನ ಹೆಸರಲ್ಲಿ
ಜಾತಿ ಮತ ಮರೆತು ಒಂದಾದರು ಭಾವೈಕ್ಯತೆಯಲ್ಲಿ

ಸಂಕ್ರಮಣವ ಹಬ್ಬ ತಂದಿತು ಹರ್ಷತುಂಬುತಲ್ಲಿ
ಹೊಳಿಗೆಯ ಊಟ ಭಕ್ತರು ಸವಿಯುತಲಿ
ಎಳ್ಳು ಬೆಲ್ಲಿನಾ ಮಿಶ್ರಣ ಹಿರಿಯರಿಗೆ ನೀಡುತ
ಹಾರೈಕೆಯ ನುಡಿಗಳು ಸುಖದಿಂದ ಬದುಕಿರೆಂತ

ಸಂಗಮೇಶ್ವನ ಸಾನಿಧ್ಯ ತುಂಬಿತ್ತು ಭಕ್ತರಿಂದ
ಜಾನಪದ ಡೊಳ್ಳು ಕುಣಿತ ನೋಡಲು ಬಲುಚೆಂದ
ಬಣ್ಣಬಣ್ಣದ ಹೂಗಳ ಮಾಲೆಯಲ್ಲಿ ಮುಳಿಗೆದ್ದ
ಕಬ್ಬು ಬಾಳೆ ಟೆಂಗು ತಿಂದು ತೆಗಿದ ಹಬ್ಬ ಚಂದ

- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಶುಕ್ರವಾರ, ಜನವರಿ 13, 2023

ಸಂಕ್ರಾಂತಿ ಸಂಭ್ರಮ (ಕವಿತೆ) - ಶ್ರೀಮತಿ ಪ್ರತಿಮಾ. ಹೆಚ್. ಎಸ್.

ಸಂಕ್ರಾಂತಿ ಬಂದಿದೆ ಹರುಷವ  ತಂದಿದೆ.
ಪಾರಂಪರಿಕವಾಗಿ ಸಂಭ್ರಮದಿ ಆಚರಿಸುವೆವು.
ಎಲ್ಲೆಡೆಯೂ ಎಳ್ಳು ಬೆಲ್ಲವ ಹಂಚುತಲಿ, 
ರಂಗುರಂಗಿನ ಹಬ್ಬದ ಸಿಹಿಯನ್ನು ಮೆಲ್ಲುತ್ತಲಿ.

ಎಲ್ಲೆಡೆಯೂ ರೈತರಿಗೆ ಸುಗ್ಗಿಯು ನೋಡು.
ಹಿಗ್ಗುತಲಿ ನಲಿಯುತಲಿ ಹಿರಿಯರ ಮಾರ್ಗದಿ,
ಆಚರಿಸುವ ನೋಡು ಸುಗ್ಗಿಯ ಹಬ್ಬವು.
ಹೆಣ್ಣು ಮಕ್ಕಳಿಗೆ ಇದು ಸಿಂಗಾರದ ಹಬ್ಬವು.

ವರುಷದ ಮೊದಲನೆಯ ಮಾಸದಲ್ಲಿನ  ಹಬ್ಬವಿದು ಎಲ್ಲ ಮಕ್ಕಳು ಸಂತೋಷದಿ,
ಕುಣಿಯುತ ಸಂಭ್ರಮಿಸೋ ಚೆಂದದ ಹಬ್ಬ. ಮನೆಮನೆಗೂ ಹಂಚುತ ಸಿಹಿಯ ಕಬ್ಬ. 

 ಸಂತಸದಿ ಎಲ್ಲರೂ ಸಂಭ್ರಮಿಸೇ ಕೂಡಿ,
 ಎಲ್ಲೆಡೆಯೂ ಒಳಿತಿನ ಬೆಳಕು ಮೂಡಿ.
 ಹಿರಿಯರು ತೋರಿದ ಹಬ್ಬವು ನೋಡಿ, 
 ಎಲ್ಲರೂ ಖುಷಿಯಾಗಿ ಬಾಳುವಂತೆ ಮಾಡಿ. 

- ಶ್ರೀಮತಿ ಪ್ರತಿಮಾ. ಹೆಚ್. ಎಸ್., ಶಿಕ್ಷಕಿ, ಹಾಸನ.


ಅಮೃತಗಂಗಾ (ಕವಿತೆ) - ಪ್ರಜ್ವಲ್ ಕುಮಾರ್ ಬಿ.ಕೆ, ಕೃಷ್ಣರಾಜಪೇಟೆ.

ದಮನಿಸಿ ದಮನಿಸಿ ಕುಣಿದಿಹ ಗಂಗಾ, 
ಕಾಂಚನ ಗಂಗ.
ಎತ್ತೆತ್ತಲು ಚೆಲ್ಲಿಹ ಪ್ರೇಮೋತ್ತುಂಗ.
ಲಹರಿಯ ಲಹರಿಸಿ, ಅಲೆಯಪ್ಪಳಿಸಿ
ನಾಟ್ಯ ಪ್ರದರ್ಶಿಸುತಿಹೆ,  ಎಂತ ಸೋಜಿಗ !
ಕುಣಿ-ಕುಣಿ, ತಣಿ -ತಣಿ, 
ಮಿಣಿ - ಮಿಣಿದು
ದಣಿವಾರಿಸೆ ಬಂದ ಅಮೃತಗಂಗಾ...

ಬರಡು ಭೂಮಿಯು ಕರೆಯುತಿರೆ, ಬಾ ನೀ ಬೇಗನೆ ಜಗದುಸಿರೆ.
ಹೊಳೆ - ಹೊಳೆವ ಮೇಘಮಾತೆ, ಪುಣ್ಯ ಪ್ರಧಾತೆ.
ಚಳ-ಚಳ ಜಳ-ಜಳ ವಿವಿಧ ನಾದದಿ, ಏರುವೆ ಗುಡ್ಡವ.
ಧುಮುಕುವೆ ಜಲಪಾತವ.
ಸೇರಲು ಮೇಘವ 
ತೀರಿಸೆ ದಾಹವ.
ಕಾಂಚನಗಂಗಾ ಎತ್ತೆತ್ತಲು ಚೆಲ್ಲಿಹೆ ನಿನ್ನೀ
ಪ್ರೇಮೋತ್ತುಂಗ.
ದಣಿವನಾರಿಸೆ ಬಂದ ಅಮೃತಗಂಗಾ.

ಕೇಳಲು ನೀರಿನ ಸಪ್ಪಳ ರಾಗ
ಕಾಣಲು ನಿನ್ನಯ ರಭಸದ ಓಘ,  ಸ್ಪರ್ಶಿಸೆ ನಿನ್ನನ್ನು ಎಂತ ಅಮೋಗ.
ನಾ ಅಮ್ಮನ ಮಗ, ನೀ ನನ್ನಯ ಜಗ.
ಕಾಂಚನಗಂಗಾ.
ಎತ್ತೆತ್ತಲು ಚೆಲ್ಲಿಹೆ ನಿನ್ನೀ
ಪ್ರೇಮೋತ್ತುಂಗ.
ದಣಿವನಾರಿಸಲು ಬಂದ ಅಮೃತಗಂಗಾ.
- ಪ್ರಜ್ವಲ್ ಕುಮಾರ್ ಬಿ.ಕೆ, ಕೃಷ್ಣರಾಜಪೇಟೆ.

ಸಂಕ್ರಾಂತಿ (ಕವಿತೆ) - ನಾಝೀಮಾ, ಹಾಸನ.

ಸೂರ್ಯನ ಕರೆಗೆ ಓ..ಗೊಡುತ,
ಹೊಸತುಗಳ  ಆಲಂಗಿಸುತ,
 ಬದಲಾವಣೆಗಳ ಸ್ವೀಕರಿಸುತ
 ಬನ್ನಿ ಸಂಕ್ರಾಂತಿಯ ಆಚರಿಸೋಣ.

 ನಿತ್ಯವೂ ಸತ್ಯದಲೆ ಕಳೆಯುತ,
 ಎಳ್ಳುಬೆಲ್ಲವ ತಿನ್ನುತ,
ಸವಿಸವಿಯಾಗಿ  ಮಾತನಾಡುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.

 ದ್ವೇಷ-ಅಸೂಯೆ, ದುಃಖ-ದುಮ್ಮಾನ,
 ಮೇಲು-ಕೀಳು, ನಾನು ನೀನೆಂಬ
 ಅಹಂಭಾವವ ಗಾಳಿಗೆ ತೂರುತ,
 ನಲಿಯುತ, ಹಾಡುತ,  ಪಟವನು ಹಾರಿಸುತ
ಬನ್ನಿ ಸಂಕ್ರಾಂತಿಯ ಆಚರಿಸೋಣ.
 - ನಾಝೀಮಾ, ಹಾಸನ.


ಭರವಸೆಯ ಬರಹಗಾರ ಕೆ.ಎನ್.ಅಕ್ರಂಪಾಷ (ಲೇಖನ) - ಎನ್ ಮಸ್ತಾನ್ ವಲಿ, ಯನುಮಲಪಾಡಿ.

ಚಿಂತಾಮಣಿ ನಗರದ ನಿವಾಸಿಯಾಗಿರುವ ಕೆ.ಎನ್.ಅಕ್ರಂಪಾಷ ರವರು ಉದಯೋನ್ಮುಖ ಬರಹಗಾರರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಅಪಾರ ಒಲವನ್ನು ಹೊಂದಿದ್ದ ಇವರು ಶಾಲೆಯಲ್ಲಿ ನಡೆಯುವ ಸಾಹಿತ್ಯಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು.

    ತನ್ನ ಮಾತೃಭಾಷೆ ಉರ್ದು ಆಗಿದ್ದರೂ ಸಹ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲೂ ,ಪ್ರೌಢ ಶಾಲಾ ಶಿಕ್ಷಣ ಹಾಗು ಪದವಿ ಪೂರ್ವ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲೂ ಪಡೆದರೂ ಕನ್ನಡ ಭಾಷೆಯ ಮೇಲೆ ಅಪಾರ ಅಭಿಮಾನ ಹೊಂದಿದವರಾಗಿದ್ದರು.ಶಾಲಾ-ಕಾಲೇಜುಗಳಲ್ಲಿ ಕನ್ನಡ ವಿಷಯವನ್ನು ಪ್ರಥಮಭಾಷೆಯಾಗಿ ತೆಗೆದುಕೊಂಡು ಉತ್ತಮ ಅಂಕಗಳನ್ನು ಗಳಿಸಿ ಸೈ ಎನಿಸಿಕೊಂಡರು.
    ಚಿಕ್ಕಂದಿನಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿ ಹೊಂದಿದ್ದ ಇವರಿಗೆ ಸೂಕ್ತ ಅವಕಾಶಗಳು ಸಿಕ್ಕಿರಲಿಲ್ಲ.ಹೀಗಿರುವಾಗ ಚಿಂತಾಮಣಿಯ ಕನ್ನಡ ಸಾಹಿತ್ಯ ವೇದಿಕೆ , ಕನ್ನಡ ಸಾಹಿತ್ಯ ಬಳಿಗೆ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಸಂಪರ್ಕ ಸಿಕ್ಕಿತು.ಅಲ್ಲಿ ಇವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಹಾಗು ಅವಕಾಶಗಳು ದೊರೆತವು. ಇದರಿಂದಾಗಿ ಅಕ್ರಂಪಾಷರವರು ಕನ್ನಡದಲ್ಲಿ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಲು ಸಾಧ್ಯವಾಯಿತು.

   ಈಗಾಗಲೇ ಅವರು ರಚಿಸಿರುವ ಮಕ್ಕಳಕಥೆ,ಕವನ,ಲೇಖನ,ಚುಟುಕುಗಳು ರಾಜ್ಯದ ಹಲವು ದಿನಪತ್ರಿಕೆ,ಮಾಸಪತ್ರಿಕೆ,ಸ್ಮರಣ ಸಂಚಿಕೆ ಹಾಗು ಕವನ ಮತ್ತು ಚುಟುಕು ಸಂಕಲನಗಳಲ್ಲಿ ಪ್ರಕಟಗೊಂಡಿವೆ.ಅದರಲ್ಲೂ ಮುಖ್ಯವಾಗಿ ಅವರು ಬರೆದಿರುವ ಮಕ್ಕಳ ಕಥೆಗಳು ಜನಪ್ರಿಯವಾಗಿವೆ.

   ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಕವಿಗೋಷ್ಠಿ ಹಾಗು ಇನ್ನಿತರೆ ಕನ್ನಡ ಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸ್ವರಚಿತ ಚುಟುಕು ಹಾಗು ಕವನಗಳನ್ನು ವಾಚಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅವರು ಹಾಸ್ಯ ಕಲೆಯನ್ನು ರೂಢಿಸಿಕೊಂಡಿದ್ದಾರಲ್ಲದೆ ಚಿತ್ರ ಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
   ಕಥೆ,ಲೇಖನ,ಕವನಗಳಿಗೆ ಸಂಬಂಧಿಸಿದಂತೆ ರೇಖಾ ಚಿತ್ರಗಳನ್ನು ತಾವೇ ರಚಿಸಿಸುವುದು ಇವರ ಮತ್ತೊಂದು ವೈಶಿಷ್ಟ್ಯವಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನ ಮತ್ತು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
  ಈಗಾಗಲೇ ಇವರ ಲೇಖನಿಯಿಂದ ಮೂಡಿಬಂದ ಇಪ್ಪತ್ತಕ್ಕೂ ಹೆಚ್ಚು ಕಥೆಗಳನ್ನು ಒಳಗೊಂಡ "ಚಂದ್ರನ ಮಗಳು" ಎಂಬ ಕಥಾ ಸಂಕಲನ ಹೊರಬಂದು ಜನಪ್ರಿಯವಾಗಿದೆ. ಹಿರಿಯ ವಯಸ್ಸಿನಲ್ಲಿ ಇವರು ಹೊರ ತಂದ ಕನ್ನಡ ಕವಿವಾಣಿ ಎಂಬ ಮಾಸಪತ್ರಿಕೆಯು ಕನ್ನಡಿಗರ ಮೆಚ್ಚುಗೆಯನ್ನ ಗಳಿಸಿತ್ತು ಎಂಬುದು ಗಮನಾರ್ಹ ಅಂಶವಾಗಿದೆ. ಈ ಪತ್ರಿಕೆಯನ್ನು ಉಚಿತವಾಗಿ ರಾಜ್ಯಾದ್ಯಂತ ಸಾಹಿತ್ಯಾಸಕ್ತರಿಗೆ ವಿತರಿಸುವ ಮೂಲಕ ದಾಖಲೆ ಸಾಧನೆಯನ್ನು ಇವರು ಮಾಡಿದ್ದರು.
ಇವರ ಕನ್ನಡ ಸೇವೆ ಹಾಗೂ ಸಾಧನೆಯನ್ನು ಪರಿಗಣಿಸಿ ರಂಗ ಶ್ರೀ ಕಾವ್ಯ ಸೌರಭ ಪ್ರಶಸ್ತಿ, ಉತ್ತಮ ಚುಟುಕು ಕವಿ ಪ್ರಶಸ್ತಿ, ತಾಲೂಕು ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪ್ರತಿಭಾರತ್ನ ಪ್ರಶಸ್ತಿ ,ಯುವ ಸಾಧಕ ರತ್ನ ಪ್ರಶಸ್ತಿ ,ವಿಶ್ವ ಮಾನವ ಪ್ರಶಸ್ತಿ, ಕನ್ನಡ ಸಿರಿ ಪ್ರಶಸ್ತಿ , ಜವಾಹರ್ ಲಾಲ್ ನೆಹರು ಸದ್ಭಾವನಾ ಪ್ರಶಸ್ತಿ, ಕರುನಾಡು ಪದ್ಮಶ್ರೀ ಪ್ರಶಸ್ತಿ, ಅನಿಕೇತನ ಪ್ರಶಸ್ತಿ, ಆದರ್ಶ ಶಿಕ್ಷಕ ಪ್ರಶಸ್ತಿ, ಅತ್ಯುತ್ತಮ ಯುವ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಸಂಘ ಸಂಸ್ಥೆಗಳಿಂದ ರಾಜ್ಯ ,ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಇವರಿಗೆ ಲಭಿಸಿವೆ.
   ಇವರು ಕರುನಾಡು ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿಯಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಕನ್ನಡಮ್ಮನ ಸೇವೆಯನ್ನು ಮಾಡುತ್ತಿದ್ದಾರೆ. 

  ವೃತ್ತಿಯಲ್ಲಿ ಶಿಕ್ಷಕರಾಗಿರುವ ಇವರು ಪ್ರಸ್ತುತ ಚಿಂತಾಮಣಿ ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಕಿರಿಯ ವಯಸ್ಸಿಗೆ ಹಿರಿಯ ಸಾಧನೆ ಮಾಡುತ್ತಿರುವ ಯುವ ಸಾಹಿತಿ ಅಕ್ರಂಪಾಷರವರಿಗೆ ಮತ್ತಷ್ಟು ಕನ್ನಡಮ್ಮನ ಸೇವೆ ಮಾಡುವ ಶಕ್ತಿಯನ್ನು ಭಗವಂತ ಕರುಣಿಸಲೆಂದು ಇವರಿಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬರಲೆಂದು ತುಂಬು ಮನಸ್ಸಿನಿಂದ ಎಲ್ಲರೂ ಆಶಿಸೋಣ.
- ಎನ್ ಮಸ್ತಾನ್ ವಲಿ, ಯನುಮಲಪಾಡಿ.

ಮಕರ ಸಂಕ್ರಾಂತಿ (ಕವಿತೆ) - ಕಲ್ಪನಾ ಡಿ. ಎನ್.

ಉತ್ತರಾಭಿಮುಖವಾಗಿ ಸೂರ್ಯನ ಪಥ ಸಂಚಲನ
ಸಂಕ್ರಾಂತಿ ಸುಗ್ಗಿಯ ಹುಗ್ಗಿ ಹಬ್ಬಕ್ಕೆ ಆಹ್ವಾನ
ಸಂಸ್ಕೃತಿ,ಸ್ನೇಹ ಬಂಧಗಳ ಬೆಸೆದ ಆಗರವು
ಸಾಮರಸ್ಯ,ಸಮೃದ್ಧಿಯ ಪ್ರತೀಕ ನವಕಾವ್ಯವು

ಭೀಷ್ಮರು ಇಚ್ಛೆಯಿಂದ ದೇಹ ತ್ಯಜಿಸಿದ ದಿನವು
ಮಾತೆ ಗಂಗಾ ಧರೆಗಿಳಿದ ಪುಣ್ಯ ಕಾಲವು
ಶ್ರೀರಾಮನು ಗಾಳಿಪಟ ಹಾರಿಸಿದ ದಿವ್ಯ ಸಂಕೇತವು
ತೀರ್ಥಯಾತ್ರೆಯಲಿ ಆತ್ಮ ಶುದ್ಧಿಯ ಧೃಗ್ಗೋಚರವು 

ಮಾಗಿಯ ಚಳಿಯಲಿ ಎಣ್ಣೆಯ ಸ್ನಾನವು
ಸಜ್ಜೆಯ ರೊಟ್ಟಿ ಹೋಳಿಗೆಯ ಹೂರಣವು
ಮುತ್ತೈದೆಯರಿಗೆ ಬಾಗಿನ ಕೊಡುವ ಸಂಭ್ರಮವು
ಎತ್ತುಗಳ ಸಿಂಗರಿಸಿ ಕಿಚ್ಚನ್ನಾಯಿಸುವ ಸಡಗರವು

ಸಂಕ್ರಮಣವು, ಸರ್ವರ ಬಾಳಿಗೆ ನೆಮ್ಮದಿ ತರಲಿ
ಹೊಸ ಕಾಂತಿಯ ಹೊಂಬೆಳಕು ಪ್ರಜ್ವಲಿಸಲಿ
ದ್ವೇಷ, ಅಸೂಯೆ,ಅಹಂ ಮನದಿ ನಶಿಸಲಿ
ಭ್ರಾತೃ ಪ್ರೇಮದ ಸಮ್ಮಿಲನ ಹೃದಯದಿ ರಾರಾಜಿಸಲಿ

ಸರ್ವರಿಗೂ ಎಳ್ಳು ಬೆಲ್ಲವನ್ನು ಹಂಚೋಣ
ಜೇನಿನಂತೆ ಬೆರೆತು ಸವಿಯಾಗಿ ಮಾತಾಡೋಣ
ಎಲ್ಲರ ಬದುಕಲಿ ನವೋಲಾಸ ತುಂಬಿರಲಿ
ಸಂಕ್ರಮಣದ ಸಂತಸ ಸ್ಥಿರವಾಗಿ  ನೆಲೆಸಲಿ
 - ಕಲ್ಪನಾ ಡಿ. ಎನ್.

ಸಂಕ್ರಾಂತಿ ಸಡಗರ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಭೇದ ಭಾವವ ತೊರೆಯಿರಿ
ಎಳ್ಳು ಬೆಲ್ಲದಂತೆ ಕೂಡಿರಿ
ಸಿಹಿಯ ಬೀರುತ ನಡಿರಿ
ಕಹಿ ನೆನಪುಗಳು ಮರೆಯಿರಿ

ಸಡಗರದ ಪರ್ವ ಸಂಕ್ರಾಂತಿ
ತೊಡೆದು ಸುಟ್ಹಾಕಿ ಮನದೊಳುದುಗಿರುವ ಚಿಂತಿ
ಇದ್ದಂತೆಯೇ ಇರಲಿ ಕಳೆಯದಿರಲಿ ಮನಸ್ಥಿತಿ
ಹಂಚುತ್ತಾ ಸಾಗಿರಿ ಸರ್ವರಿಗೂ ಪ್ರೀತಿ

ಆಚರಣೆ ಮಾಡುವರು ನಾನಾ ಹೆಸರಿನಿಂದ
ಸಂಕ್ರಾಂತಿ, ಪೊಂಗಲ್ ಎಂಬ ನಾಮಗಳಿಂದ
ನಮಿಸುವರು ಸೂರ್ಯನಿಗೆ ಭಕ್ತಿಯಿಂದ
ಬರುವನು ಈ ದಿನ ರವಿಯು ಉತ್ತರಾಯಣದಿಂದ

ಈ ದಿನಕ್ಕೆ ಕಾದಿದ್ದನು ಮಹಾಭಾರತದ ಭೀಷ್ಮ
ಶರಶಯನದ ಮೇಲೆ ಜೀವವಿಡಿದು ಮಲಗಿದ್ದ ಮಹಾತ್ಮ
ಸ್ವರ್ಗಕ್ಕೆ ತೆರೆದಿಹುದಂತೆ ಬಾಗಿಲು ಆ ಕ್ಷಣ
ಪುಣ್ಯಾತ್ಮರು ಬಯಸುವರು ತಾವು ಕೊನೆಗೆ ಹೋಗಲು ಯಾನ

ರವಿಯ ಬೆಳಕು ಚೆಲ್ಲುವುದು ಸಂಕ್ರಮಣದಂದು
ಹಗಲು ಇರುವುದು ಹೆಚ್ಚು ಸಮಯ ಈ ದಿನದಂದು
ಇರುಳೋಡುವುದು ತನ್ನ ದಾರಿ ಹರಸಿ ಬಲು ದೂರಕ್ಕೆ
ಸಕಲ ಜೀವಾತ್ಮಗಳಿಗೆ ದೊರಕುವುದು ಸುಖಿಯ ರಸದೌತಣ

ಸಂಕ್ರಾಂತಿಯು ಬಂದು ತರುವುದು ಭುವಿಗೆ ನೆಮ್ಮದಿ
ಮಿಶ್ರಣದ ರಸಪಾಕದ ಹುಂಡಿ ನೀಡುವರು ಮನಿಮಂದಿ
ಅನ್ಯೋನ್ಯದ ಸಂಬಂಧ ನಮ್ಮವರೆಲ್ಲರಲ್ಲು ನಂಟು
ಬಿಡಿಸದಿರಲಿ ಬೇವು ಬೆಲ್ಲದಂತೆ ಕೂಡಿರುವ ನಮ್ಮನಸ್ಸುಗಳ ಗಂಟು
- ಬಿ.ಹೆಚ್.ತಿಮ್ಮಣ್ಣ.

ಸಂಕ್ರಾಂತಿ ಹಬ್ಬ ಸುಗ್ಗಿಯ ಹಾಡು (ಕವಿತೆ) - ಗೊರೂರು ಅನಂತರಾಜು.

ಸುಗ್ಗಿಯ ಕುಣಿತವ ಕುಣಿಯೋಣ ಬನ್ನಿ
ಸುಗ್ಗಿಯ ಹಾಡು ಹಾಡೋಣ
ಸುಗ್ಗಿಯ ಹಾಡು ಹಾಡುತ್ತಾ ನಾವು 
ಸುಗ್ಗಿಯ ಕುಣಿತ ಕುಣಿಯುತ್ತಾ ನಾವು
ನಮ್ಮೆಲ್ಲಾ ನೋವು ಮರೆಯೋಣ

ಊರಿನ ಜನರೆಲ್ಲಾಒಟ್ಟಾಗಿ ಸೇರಿ
ತೆನೆ ಭತ್ತ ಎಲ್ಲರೂ ಕುಯ್ಯೋಣ 
ಭತ್ತವ ನಾವು ಹೋರೋಣ ಬನ್ನಿ
ಜೊಳ್ಳನು ಗಾಳಿಲಿ ತೂರೋಣ
ನಾವು ಭತ್ತದ ರಾಶಿಯ ಮಾಡೋಣ

ಹಸನಾದ ಭತ್ತದ ರಾಶಿಯ ಮಾಡಿ
ಹಸೆಯನ್ನು ಬರೆದು ಬೆಳವಣ್ಣಮಾಡಿ
ಹೂವಿನ ಹಾರದ ಶೃಂಗಾರ ಮಾಡಿ 
ರಾಶಿಯ ಪೂಜೆ ಮಾಡೋಣ
ನಾವು ಕಣಜಕ್ಕೆ ಭತ್ತವ ತುಂಬೋಣ

ಸಂಕ್ರಾಂತಿ ಹಬ್ಬ ಊರಲ್ಲಿ ಮಾಡಿ
ದನಕರುಗಳ ಕಿಚ್ಚು ಹಾಯಿಸೋಣ
ನಾವು ಎಳ್ಳು ಬೆಲ್ಲ ಹಂಚೋಣ
ಊರಿನ ಸ್ವಚ್ಛತೆ ನಾವೆಲ್ಲಾ ಮಾಡಿ
ಸಂತಸ ಬದುಕು ನೆಡೆಸೋಣ

- ಗೊರೂರು ಅನಂತರಾಜು, ಹಾಸನ.
9449462879.

ಗೋವಿನಂತವಳು (ಕವಿತೆ) - ಸೌಜನ್ಯ ದಾಸನಕೊಡಿಗೆ.

ಬೆತ್ತಲಾದ ಕರುಳ ಕಂದನೆದೆಗೆ
ಮುತ್ತನಿಟ್ಟು ಹುರುಳು ತುಂಬಿದಾಕೆ...
ಹೆತ್ತು ಹೊತ್ತು ಇರುಳು ನಿದ್ದೆಗೆಟ್ಟಾ ಮೇಲು
ಹಿತ್ತಲೊಳಗಿನ ಅವರೆಯಂತವಳು ಕಾಣೆ ಹೆಗ್ಗಳಿಕೆ...
ಚಿತ್ತವರಳಲು ಸ್ವಾತಿ ಮುತ್ತು ಮುನಿಸು ಮೊಗವಷ್ಟೇ
ಬತ್ತಲಾರದ  ಒಲುಮೆ ಕೊಳವೊಂದಿದ್ದರೆ ಅದಕೆ ಸಾಟಿ 
ಅವ್ವಾ.. ಅವಳಷ್ಟೇ..

ಬಿಸಿಲ ಗಾಢ ಗರ್ಭದಿಂದ ತಂಗಾಳಿ ಎಳೆತಂದು
ಬಾಳ ಹೊಸಿಲ ಮೇಲೆ ಎರೆದಳವ್ವ ತಾಪದಿ ತಾ ಮಿಂದು..
ಹೊರ ನುಸುಳಲಿಲ್ಲ ಗೋಳುಎನುತ
ಹರಿದ  ಬದುಕ ಮುನ್ನೂಕಿದಳು 
ಮರು ನಸು ನಕ್ಕಳವ್ವ ಅಳುವ ನುಂಗಿ
ಬಾಳಿನೆಳೆಗಳ ತೇಪೆ ಹಾಕಿದಳು...

ಕೂಡಿ ಬಾಳಲು ಕಲಿಸಿದಾಕೆ ಮರಗಿಡಗಂಟಿನಂಟಿಗೊರಗಿ...
ಬೇಡಲಿಲ್ಲ ಬಡವಿಯಾದರು
ಕರದಿ ಬಿತ್ತಿಬೆಳೆದಳು ವಸಂತಗಳ
ಕುಳಿತವಳಲ್ಲ ಕೊರಗಿ..
ಮೋಡಿಯವಳ ಲಾಲಿ ಹಾಡು
ಕಾಡೊ ಅಮಲು ಅವಳಾ ಪದ...
ಜಾಡು ತಿಳಿಸದ ಪ್ರಶಾಂತ ಬೀಡು
ನೋಡಾ  ನನ್ನವ್ವಾ ಅನಂತ ಆನಂದ  ಸದಾ....

ಅವಳ ಮೂಗುತ್ತಿ ಮಿನುಗಿಗೆ ನಾಚಿಯಾವು
ಬಾನ ಬಿಳಿ ಚುಕ್ಕಿ,
ಬಹಳ ಆತುರವು ಶಶಿಗೆ ಒಮ್ಮೆಗಾದರೂ ತಣಿಯಬೇಕಂತೆ ಅವ್ವನಂತರಾಳದ  ಆ ತಂಪಿನಂಗಳವ ಹೊಕ್ಕಿ..
ಹವಳದಂತವಳ ನಗೆ ತಿಳಿಬೆಳಕಿನಾ ಛಾಯೆ
ನಿರಾಳ  ಅವ್ವಾ ಎಂಬೀ ಪ್ರೇಮ ಭುಗ್ಗೆ ಅರಿಯಲಾರೆನಾ ಮಾಯೆ...

ಇಳೆ ಅತ್ತು  ನಡುಗಿದಂತೆ,
ಮಳೆಯಿರದ ಬರದಂತೆ 
ತಾಳಲಾರದ ಒಡಲ ಹಸಿವಿನoತೆ
ನನ್ನವ್ವನಾ ಅರೆಕ್ಷಣದಾ ದುಗುಡ..
ಕಳೆಕಟ್ಟಿ ನೆಲ ತಟ್ಟಿ ಹದವಾಗಿ ನಿಲ್ಲುವಳು
ಗಟ್ಟಿಗಿತ್ತಿ  ನನ್ನವ್ವ ಹಿರಿವುದೇ ತಡ ಮನದ ಕಾರ್ಮೋಡ...
ನೋವಿನೆಸಳೆಲ್ಲವಾ ನುಂಗಿ ಸಿಹಿಯಾಮೃತವನ್ನಷ್ಟೇ ನೀಡುವಳು,
ಗೋವಿನಂತವಳು ಮೆಲುಕುಹಾಕುವಳು ನೆನಪ
 ತುಸು ನೀ ತಿನ್ನವ್ವ ಎನ್ನಲು  ಹಸಿವಿಲ್ಲವೆಂಬ ಹುಸಿ  ನೆಪ....
- ಸೌಜನ್ಯ ದಾಸನಕೊಡಿಗೆ.

ಸಂಕ್ರಾಂತಿ ಹಬ್ಬ (ಕವಿತೆ) - ಕಮಲಾ ರಾಜೇಶ್, ತುಮಕೂರು.

ಅಕ್ಕಪಕ್ಕದ ಮನೆಯ ಗೆಳತಿಯರ ಸಂಕುಲವು 
ಅಕ್ಕರದಿ ಬಂದು ಹಂಚುವರು ಎಳ್ಳು 
ಸಕ್ಕರೆಯ ರಸಗುಲ್ಲ ಹೋಳಿಗೆಯ ಎಡೆನೀಡಿ 
ನಕ್ಕುನಲಿಯುವರಾಗ ಕಮಲಾತ್ಮವೆ

ಬಣ್ಣಬಣ್ಣದ ರೇಷ್ಮೆ ಸೀರೆಯನು ತೊಟ್ಟಿರುವ 
ಹೆಣ್ಣುಮಕ್ಕಳು ಇಕ್ಕೆಲದಿ ನಿಂತಿರೆ 
ಹಣ್ಣುಹಂಪಲು ಹಂಚಿ ಸಂಭ್ರಮಿಸೆ ನಾಯಕರು 
ಕಣ್ಣ ಕಾಂತಿಯ ಹೊಳಪು ಕಮಲಾತ್ಮವೆ

ಕೆಂಡವನು ಹಾಕುವರು ರಾಸುಗಳ ಓಡಿಸಲು 
ಗಂಡುಗಲಿ ವೀರ ಅದರೊಡನೆ ಸರಿವ 
ಕೊಂಡಾಟ ಕೂಗಾಟ ಮುಗಿಲನ್ನು ಮುಟ್ಟಿರಲು 
ತಿಂಡಿಯನು ಹಂಚುವರು ಕಮಲಾತ್ಮವೆ

ಎಳ್ಳು ಜೀರಿಗೆ ಜೊತೆಗೆ ಬೆಲ್ಲವನು ಸೇರಿಸುತ 
ಹಳ್ಳಿಯಲಿ ಹಂಚುವರು ತೋಷದಲ್ಲಿ 
ಎಳ್ಳು ಬೆಲ್ಲವ ತಿಂದು ಸಖರನುಜರೊಡಗೂಡಿ 
ಒಳ್ಳೊಳ್ಳೆ ಮಾತಾಡಿ ಕಮಲಾತ್ಮವೆ

ರೈತರಿಗೆ ಸುಗ್ಗಿಯಾ ಹಬ್ಬವಿದು ಸಂಕ್ರಾಂತಿ 
ರಾತ್ರಿಯಲಿ ಹಾಕುವರು ಧಾನ್ಯರಾಶಿ 
ಪಾತ್ರಧಾರಿಯ ಕರೆದು ದಾನಧರ್ಮವ ನೀಡೆ
ಭೂತಳಕೆ ಮಾದರಿಯು ಕಮಲಾತ್ಮವೆ.
- ಕಮಲಾ ರಾಜೇಶ್, ತುಮಕೂರು.

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...