ಶಾಲೆ ಬಿಡುವ ಮುನ್ನ ಮರಳಿ ನೋಡಿತೆನ್ನ ಮನ
ಮನೆಮನೆಯ ಕುಸುಮಗಳು ಸೇರಿದೆವು ಎ.ಸಿ.ಓ. ಶಾಲೆಯಲ್ಲಿ ।
ಗುರು ಮಾತೆಯರಾಗಿ ಗುರುತಿಸಿದೆವು ಸಮಾಜದಲ್ಲಿ ।
ಅಕ್ಕತಂಗಿಯರಂತೆ ಕೂಡಿ ನಲಿದೆವು।
ನಕ್ಕು ನಲಿಯುತ ದಿನಗಳ ಕಳೆದೆವು॥
ಮಕ್ಕಳ ಮನಸ್ಸನ್ನರಿತು ಪಾಠ ಮಾಡಿದೆವು।
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದೆವು ।
ಮಾತೃಹೃದಯಿ ಯಾಗಿ ಮಕ್ಕಳಿಗೆ ಕಂಡೆವು ।
ಎಲ್ಲೇ ಕಂಡರೂ ನಮಸ್ತೆ ಮಿಸ್ ಎಂಬ ಗೌರವ ಪಡೆದೆವು।
ಅನ್ನದಾತರಾಗಿಹರು ಸಂಸ್ಥೆಯ ಸಂಸ್ಥಾಪಕರು।
ನೋವು ನಲಿವುಗಳಿಗೆ ಸ್ಪಂದಿಸುವ ದೇವರು।
ಪಿತೃ ಭ್ರಾತೃ ಮನದ ಮಹನೀಯರು
ಕಷ್ಟದಲ್ಲಿದ್ದವರಿಗೆ ಕರುಣಾಮಯಿಗಳು ।
ಸಹೋದರರ ವಾತ್ಸಲ್ಯವಿದೆ ಗುರು ವೃಂದದಲಿ।
ಸಹಕಾರದ ಸಂಯಮವಿದೆ ಹೃದಯದಲಿ।
ಜಾತಿ ಭೇದವ ಮರೆತು ವೃತ್ತಿಯಲ್ಲಿ ತೊಡಗಿದೆವು।
ಮುಗ್ದ ಮಕ್ಕಳ ಮನವನ್ನು ಜಾಗೃತಗೊಳಿಸಿದೆವು।.
ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇದು ಸುಂದರ ।
ಜ್ಞಾನಾರ್ಜನೆಯ ಹಸಿವಿರುವವರಿಗೆ ಮಂದಿರ ।
ಬಾಗಿಲೊಳು ಕೈಮುಗಿದು ಒಳಗೆ ಬಾ ಮಗುವೆ ।
ಜ್ಞಾನ ದೇಗುಲವಿದು ಸರಸ್ವತಿ ನಿಲಯ ।
ಜುಲೈ 8ರಂದು ೨೦೨೧ ರಂದು ನಾನು ಶಿಕ್ಷಕಿ ವೃತ್ತಿಯಿಂದ ವಿಮುಖಳಾಗುವುದಾಗಿ ತಿಳಿಸಿದಾಗ ನನ್ನ ಆತ್ಮೀಯ ಸಹ ಶಿಕ್ಷಕಿಯರೆಲ್ಲ ಪ್ರೀತಿಯ ಭೋಜನ ಏರ್ಪಡಿಸುವುದರೊಂದಿಗೆ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸೀರೆಯನ್ನು ಉಡುಗೊರೆಯಾಗಿ ನೀಡಿ ಪ್ರೀತಿಯಿಂದ ವಿದಾಯ ಹೇಳಿದ್ದು ಮರೆಯಲಾರದ ನೆನಪು .ಅವರೆಲ್ಲರಿಗೂ ನಾನು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ .೨೦೦೭ ಜೂನ್ ೧ ರಂದು,ನಾನು ಬಾಗಲಕೋಟ ಜಿಲ್ಲೆಯ ಇಲಕಲ್ಲಿನ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಪ್ರೌಢ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿಯಲ್ಲಿ ನಿರತಳಾದೆ .ಆಗ ಸಂಸ್ಥೆಯ ಅಧ್ಯಕ್ಷರು ಶ್ರೀಯುತ ಡಿ. ಪಿ. ಡಾಗರವರು ಇದ್ದರು ಮತ್ತು ಮುಖ್ಯೋಪಾಧ್ಯಾಯರಾಗಿ ಶ್ರೀ ವಿ.ಎಸ್. ದೇಸಾಯಿಯವರು ಕಾರ್ಯನಿರ್ವಹಿಸುತ್ತಿದ್ದರು.
ಅಲ್ಲಿಂದ ನನ್ನ ಶಿಕ್ಷಕಿ ವೃತ್ತಿ ಆರಂಭವಾಗಿ, ೨೦೨೧ರ ವರೆಗೆ ಹಲವಾರು ಮರೆಯಲಾರದ ಭಾವನಾತ್ಮಕ ಸಂಬಂಧಗಳ ಬೆಸುಗೆಯಲ್ಲಿ ಬಂಧಿಯಾಗಿದೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಂತದಿಂದ ಹತ್ತನೆಯ ತರಗತಿಯವರೆಗೆ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರು.ಎ .ಸಿ. ಓ ಸಂಸ್ಥೆಯಲ್ಲಿ ಶಿಕ್ಷಕಿ ವೃತ್ತಿ ನಿರ್ವಹಿಸಿದ ಬಗ್ಗೆ ಸಂತೃಪ್ತಿಯಿದೆ ಮತ್ತು ಹೆಮ್ಮೆಯೆನಿಸುತ್ತಿದೆ.ಪದವಿ ಶಿಕ್ಷಣ ಪಡೆದವರೆಲ್ಲರಿಗೂ ಸರಕಾರಿ ವೃತ್ತಿ ದೊರೆಯುವುದು ಅಸಾಧ್ಯ, ಅಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ವೃತ್ತಿ ಒದಗಿಸುವ ಮೂಲಕ ಸಾಕಷ್ಟು ಕುಟುಂಬಗಳ ಬದುಕಿಗೆ ದಾರಿದೀಪವಾಗಿವೆ .'ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ' ಎಂಬಂತೆ ಕೊರೋನಾ ಸೋಂಕಿನಂತಹ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಕೈಬಿಡದೆ ಮಾನವೀಯತೆ ತೋರಿದ್ದಾರೆ .
೧೯೭೫ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಹಂತಹಂತವಾಗಿ ಬೆಳೆಯುತ್ತಾ ಇಂದು ಇಳಕಲ್ ನಗರದಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದು ನಿಂತಿದೆ.ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ತಾವು ಕಲಿತ ಈ ಸಂಸ್ಥೆಯ ಬಗ್ಗೆ, ಆಡಳಿತ ಮಂಡಳಿಯವರ ಬಗ್ಗೆ ಮತ್ತು ಶಿಕ್ಷಕ ವೃಂದದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದನ್ನು ಕೇಳಿ ಹೆಮ್ಮೆಯೆನಿಸುತ್ತದೆ .
ನನ್ನ ೧೪ ವರ್ಷದ ವೃತ್ತಿಜೀವನದುದ್ದಕ್ಕೂ ಪ್ರತಿಯೊಂದು ವಿಷಯದಲ್ಲಿಯೂ ಸಹಾಯ, ಮಾರ್ಗದರ್ಶನ ನೀಡಿವರನ್ನು ನೆನೆಯಲೇಬೇಕು .ಶಾಲೆಯಲ್ಲಿ ಪ್ರತಿಯೊಂದು ಶೈಕ್ಷಣಿಕ ಕಾರ್ಯಕ್ರಮ ನಡೆದಾಗಲೂ ಆ ಕಾರ್ಯಕ್ರಮದಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಕೊಡುತ್ತಿದ್ದರು. ಮೊದಮೊದಲು ಭಯ ಎನಿಸುತ್ತಿತ್ತು ಪ್ರತಿ ಹಂತದಲ್ಲಿಯೂ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ವಿ. ಎಸ್.ದೇಸಾಯಿ ಗುರುಗಳು ತುಂಬಾ ತಾಳ್ಮೆಯಿಂದ ಕಾರ್ಯಕ್ರಮದ ನಿರ್ವಹಣೆ ಮಾಡುವ ವಿಧಾನ ತಿಳಿಸುವುದರ ಜೊತೆಗೆ ಕಾರ್ಯಕ್ರಮ ಮುಗಿದ ಮೇಲೆ ಮೆಚ್ಚುಗೆ ವ್ಯಕ್ತ ಪಡಿಸುವುದನ್ನು ಮರೆಯುತ್ತಿರಲಿಲ್ಲ. ಜೊತೆಗೆ ಕೆಲವೊಂದು ವಿಷಯವನ್ನು ನೀವು ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ ಎಂದು ಆಡಳಿತಮಂಡಳಿಯವರು ತಿಳಿಸಿದರು ಎಂದಾಗ ಒಂದು ರೀತಿಯ ಸಮಾಧಾನ. ವೃತ್ತಿ ಜೀವನದುದ್ದಕ್ಕೂ ಸಾಕಷ್ಟು ನಿರೂಪಣಾ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಕೈಗೊಂಡಿರುವುದರ ಸಂತೃಪ್ತಿ ಇದೆ .ಇದಕ್ಕೆ ಸಹಕಾರ ನೀಡಿದ ಅವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ .
ಮೊಟ್ಟಮೊದಲ ಬಾರಿಗೆ ಇಳಕಲ್ ನಗರದಲ್ಲಿ ದೇವಲ ಮಹರ್ಷಿ ಉತ್ಸವ ಸಮಾರಂಭದಲ್ಲಿ ನಿರೂಪಣೆ ಮಾಡಲು ಸಹೋದರ ಸಮಾನರಾದ ಶ್ರೀ ವೇಣುಶಂಕರ ಕುಂಟೋಜಿಯವರು ಅವಕಾಶ ಕಲ್ಪಿಸಿದರು .ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ ಆ ಸಮಾರಂಭದಲ್ಲಿ ಅಷ್ಟೊಂದು ಜನರೆದುರು ನಿರೂಪಣೆ ಮಾಡಲು ನಿರಾಕರಿಸಿದೆ .ನಿಮ್ಮಿಂದ ಸಾಧ್ಯ ಮೇಡಮ್ ಪ್ರಯತ್ನಿಸಿ ಎಂದು ಧೈರ್ಯ ತುಂಬಿದಾಗ ಯಶಶ್ವಿಯಾಗಿ ಶ್ರೀಮತಿ ವಿಜಯಲಕ್ಷ್ಮೀ ಗೂಳಿ ಅವರೊಂದಿಗೆ ನಿರೂಪಣೆ ಮಾಡಿದೆ.ಅಲ್ಲಿಂದ ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಅವಕಾಶ ಸಿಕ್ಕಿತು, ಅದಕ್ಕಾಗಿ ಶ್ರೀ ವೇಣುಶಂಕರ ಕುಂಟೋಜಿ ಅವರಿಗೆ ಧನ್ಯವಾದಗಳನ್ನು ತಿಳಿಸುವೆ .
ನನ್ನ ವೃತ್ತಿ ಜೀವನದಲ್ಲಿ ಮರೆಯಲಾರದ ಕ್ಷಣವೆಂದರೆ ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮೀಜಿ ಅವರಿಂದ ಪ್ರಶಂಸೆಗೆ ಒಳಗಾಗಿ ಶಾಲುಓದಿಸಿಕೊಂಡು ಸನ್ಮಾನಗೊಳ್ಳುವಂತಹ ಅವಕಾಶವನ್ನು ೨೦೧೮ ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ. ಆರ್. ಕಟ್ಟಿಯವರು ಕಲ್ಪಿಸಿಕೊಟ್ಟಿದ್ದರು.ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರ ೧೫೦ ನೇ ಜನ್ಮ ಶತಮಾನೋತ್ಸವದ ನಿಮಿತ್ತ ಅವರ ಜೀವನಕ್ಕೆ ಸಂಬಂಧಿಸಿದಂತಹ ವಿಷಯವಸ್ತುವನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಅದರ ಅಧ್ಯಯನದ ಮೇಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅತಿ ಹೆಚ್ಚು ಅಂಕ ಪಡೆದವರಿಗೆ ಪುಸ್ತಕರೂಪದ ಬಹುಮಾನ ನೀಡುವ ಮೂಲಕ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲಿ ಎನ್ನುವ ಸದುದ್ದೇಶದಿಂದ ಹರಿಹರದ ಶ್ರೀ ರಾಮಕೃಷ್ಣ ಆಶ್ರಮದ ಟ್ರಸ್ಟ್ ನವರು ಎಲ್ಲಾ ಊರುಗಳಲ್ಲಿಯೂ ಈ ರೀತಿ ಪರೀಕ್ಷೆ ಏರ್ಪಡಿಸಿದ್ದರು.
ಅದೇ ರೀತಿ ಇಳಕಲ್ ನಗರದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ಪರೀಕ್ಷೆ ನಡೆಸಿದರು. ನಮ್ಮ ಶಾಲೆಯ ವತಿಯಿಂದ ಆ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನನಗೆ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದ ಸಹ ಶಿಕ್ಷಕರಾದ ಶ್ರೀ ಎಂ. ಕೆ .ಬಗಾಡೆಯವರಿಗೆ ವಹಿಸಿದ್ದರು .ಯಶಸ್ವಿಯಾಗಿ ಪರೀಕ್ಷೆ ನಡೆಯಲು ಸಹಕಾರ ನೀಡಿದರು ಎನ್ನುವ ಕಾರಣಕ್ಕೆ ಎಂ.ಕೆ.ಬಗಾಡೆಯವರಿಗೆ ಮತ್ತು ನನಗೆ ಶ್ರೀ ಶಾರದೇಶಾನಂದ ಸ್ವಾಮೀಜಿಯವರಿಂದ ಗೌರವ ಸ್ವೀಕರಿಸುವ ಸದಾವಕಾಶ ಒದಗಿದ್ದು, ವೃತ್ತಿಜೀವನದ ಸ್ಮರಣೀಯ ನೆನಪು.
ಮತ್ತೊಂದು ನಿರೂಪಣೆ ಮಾಡುವ ಅವಕಾಶ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ.ಆರ್. ಕಟ್ಟಿಯವರಿಂದ ಒದಗಿಬಂತು. ನನ್ನಿಂದ ಸಾಧ್ಯ ಎನ್ನುವ ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ಆದರೆ ಅವರಲ್ಲಿತ್ತು.೧೩-೧೧-೨೦೧೮ ರಂದು ಇಳಕಲ್ ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯ ಮೇಲಿದ್ದ ಭಯ ಹೋಗಲಾಡಿಸಲು "ಹತ್ತರ ಭಯ ಹತ್ತಿರ ಬೇಡ! ಎನ್ನುವ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ ಅನಂತರಾಮು ಮತ್ತು ಹರಿಹರದ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮೀಜಿ ಅವರಿಂದ ಏರ್ಪಡಿಸಿದ್ದರು.
ಇಲಕಲ್ಲ ನಗರದ ಎಲ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ -ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿತ್ತು .ಶಾಲಾ ಹಂತದ ನಿರೂಪಣೆಯೇ ಬೇರೆ, ಅಷ್ಟೊಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮೂಹದ ನಡುವೆ ನಿರೂಪಣೆ ಮಾಡುವೆನೆಂಬ ಧೈರ್ಯ ನನಗಿರಲಿಲ್ಲ. ಆದರೆ ಶ್ರೀ ಬಿ. ಆರ್. ಕಟ್ಟಿಯವರು, ನೀವೇ ನಿರೂಪಣೆ ಮಾಡಬೇಕು ಎಂದಾಗ, ಧೈರ್ಯದಿಂದ ಒಪ್ಪಿಕೊಂಡೆ .ಸರಿ ಸುಮಾರು ೫೦೦ ವಿದ್ಯಾರ್ಥಿಗಳು ಇರಬಹುದೇನೋ, ಅಂತಹ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದು ಅವಿಸ್ಮರಣೀಯ ನೆನಪು. ಆತ್ಮವಿಶ್ವಾಸದ ಮಾತುಗಳಿಂದ ಧೈರ್ಯ ತುಂಬಿ ಯಶಸ್ವಿಯಾಗಿ ಶೈಕ್ಷಣಿಕ ಕಾರ್ಯಕ್ರಮ ನೆರವೇರುವಂತೆ ಮಾಡಿದ ಶ್ರೀ ಕಟ್ಟಿ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ . ಮೈಸೂರಿನ ಡಾ.ಕೆ ಅನಂತರಾಮು ಮತ್ತು ಶ್ರೀ ಶಾರದೇಶಾನಂದ ಸ್ವಾಮೀಜಿಗಳು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಇದ್ದಂತಹ ಭಯವನ್ನು ಹೋಗಲಾಡಿಸುವಂತಹ ಹಲವಾರು ಉಪಯುಕ್ತ ಮಾಹಿತಿಯನ್ನು ತಿಳಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಯ ಬಗ್ಗೆ ನಿರ್ಭಯರನ್ನಾಗಿ ಮಾಡುವ ಪ್ರಯತ್ನ ಮಾಡಿದರು .
ಇಲಕಲ್ಲಿನ ಅನುಭವ ಮಂಟಪದಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ ಕುರಿತು ನಾಟಕವೊಂದನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದರು.ಈ ತಂಡದಲ್ಲಿ ಬೇರೆ ಬೇರೆ ರಾಜ್ಯದಿಂದ ಬಂದಂತಹ ಯುವಕರು ಅಭಿನಯದ ಮೂಲಕ ಮಹಾತ್ಮಾ ಗಾಂಧೀಜಿಯವರ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಊರೂರುಗಳಿಗೆ ಸಂಚರಿಸುತ್ತಾ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಿದ್ದರು .ಅದಕ್ಕಾಗಿ ಇಲ್ಲಿನ ಶ್ರೀ ಗುರುಮಹಾಂತ ಸ್ವಾಮೀಜಿಯವರು ಅನುಭವ ಮಂಟಪವನ್ನು ಉಚಿತವಾಗಿ ನಾಟಕ ಪ್ರದರ್ಶನಕ್ಕೆ ನೀಡುವ ಮೂಲಕ, ಎಲ್ಲ ಶಾಲೆಯ ವಿದ್ಯಾರ್ಥಿಗಳು ಅಲ್ಲಿಯೇ ಬಂದು ನೋಡಲು ಅವಕಾಶ ಕಲ್ಪಿಸಿದ್ದರು.ಅದೇ ರೀತಿ ನಮ್ಮ ಶಾಲೆಯ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿದ್ದೆವು. ನಾಟಕ ಪ್ರದರ್ಶನದ ನಂತರ ಅವರ ಅಭಿನಯದ ಬಗ್ಗೆ ಅನಿಸಿಕೆ ಹೇಳುವ ಅವಕಾಶ ಸಿಕ್ಕಾಗ ನಮ್ಮ ಶಾಲೆಯ ಪರವಾಗಿ ಅನಿಸಿಕೆ ಹಂಚಿಕೊಂಡ ಕ್ಷಣವೂ ನನಗೆ ಅಮೂಲ್ಯವೆನಿಸಿತ್ತು .ಭೂಮಿ ಹದವಾಗಿದ್ದಾಗ ಬೀಜ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರುವಂತೆ, ವಿದ್ಯಾರ್ಥಿ ಜೀವನವೆಂದರೆ ಹದವಾದ ಭೂಮಿ ಇದ್ದಂತೆ .ಇಂತಹ ಸಂದರ್ಭದಲ್ಲಿ ಸದ್ವಿಚಾರಗಳನ್ನು ಬಿತ್ತರಿಸಿದರೆ ಅದರಂತೆ ಅವರು ನಡೆದುಕೊಳ್ಳುವರೆಂಬ ಸದುದ್ದೇಶದಿಂದ ಈ ಜಾಗೃತಿ ಅಭಿಯಾನ ನಿರಂತರವಾಗಿ ನಡೆಯುತ್ತಿದೆ .
ಎ .ಸಿ. ಓ. ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಶ್ರೀ ಆರ್.ಎಂ. ಬಸನಗೌಡ ಇವರು ವಿದ್ಯಾರ್ಥಿಗಳೆಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ರಾಷ್ಟ್ರೀಯ ಹಬ್ಬಗಳಾದ ಆಗಸ್ಟ್ ೧೫,ಜನೇವರಿ ೨೬ ಮತ್ತು ಮಹಾತ್ಮಾ ಗಾಂಧಿ ಜಯಂತಿಯಂತಹ ಸಂದರ್ಭಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಳ್ಳುವಂತೆ ಮಾಡುವ ಕೆಲಸವನ್ನು ಎಲ್ಲ ಶಿಕ್ಷಕ-ಶಿಕ್ಷಕಿಯರು ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದು, ಮಕ್ಕಳ ಮನಸ್ಸಿಗೆ ಮುದ ತರುವಂಥ ವಿಷಯವಾಗಿತ್ತು .ಅಲ್ಲದೆ ಶೈಕ್ಷಣಿಕ ಪ್ರವಾಸಗಳನ್ನು ಕೈಗೊಂಡಾಗ ಶಿಸ್ತಿನಿಂದ ವಿದ್ಯಾರ್ಥಿಗಳ ಯೋಗಕ್ಷೇಮದ ಜವಾಬ್ದಾರಿಯನ್ನು ಹೊತ್ತು ಸುರಕ್ಷಿತವಾಗಿ ಅವರನ್ನು ಕರೆತರುವ ಗುರುತರ ಜವಾಬ್ದಾರಿಯ ಕೆಲಸ ಮಾಡುವುದನ್ನು ಕಂಡರೆ ಸಂತೋಷವೆನಿಸುತ್ತಿತ್ತು. ಕನ್ನಡ ಮಾಧ್ಯಮ ಪ್ರೌಢ ವಿಭಾಗದ ವಿದ್ಯಾರ್ಥಿಗಳೊಂದಿಗೆ 3ಸಾರಿ ಶೈಕ್ಷಣಿಕ ಪ್ರವಾಸ ಮಾಡಿದ ಮಧುರ ಅನುಭವಗಳು ನೆನಪಿನಂಗಳದಲಿ ಹಾಗೆ ವಿಹರಿಸುತ್ತಿರುತ್ತವೆ .ವಾರ್ಷಿಕ ಸ್ನೇಹ ಸಮ್ಮೇಳನ ದಂತಹ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಆದರ್ಶ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಕ್ರೀಡಾಪಟುಗಳ ಸನ್ಮಾನ ಸಮಾರಂಭವು ಸಹ ಎ.ಸಿ.ಓ.ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಒಂದಾಗಿತ್ತು .ಅಲ್ಲದೆ ಎಪ್ಪತ್ತು ವಸಂತಗಳನ್ನು ಪೂರೈಸಿದಂತಹ ಆಡಳಿತ ಮಂಡಳಿಯ ದಂಪತಿಗಳಿಗೆ ಸನ್ಮಾನಿಸುವ ಸಮಾರಂಭವು ಸಹ ವಿನೂತನ ಕಾರ್ಯಕ್ರಮವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸುವಲ್ಲಿ ಸಹಾಯಕವಾದ ಮಾರ್ಗದರ್ಶನದ ಅಂಶ ಬಿಂಬಿತವಾಗುತ್ತಿತ್ತು .ಒಟ್ಟಾರೆಯಾಗಿ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರ ಸಹಕಾರದಿಂದ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಪ್ರಗತಿ ಪಥದತ್ತ ಸಾಗುತ್ತಿರುವ ಶಿಕ್ಷಣ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಯಸುತ್ತೇನೆ. ಶಾಲೆಯಿಂದ ವಿಮುಖಳಾಗುತ್ತಿರುವುದು ಮನಸ್ಸಿಗೆ ಬೇಸರದ ವಿಷಯವಾಗಿದ್ದರೂ ಸಹ, ನನ್ನಂತೆಯೇ ಶಿಕ್ಷಕ ವೃತ್ತಿಯನ್ನು ಮಾಡಲು ಹಂಬಲಿಸುವಂತಹ ಪದವೀಧರರಿಗೆ ಇದು ಅವಕಾಶ ಕಲ್ಪಿಸುವ ಕ್ಷಣವೆಂದು ಭಾವಿಸಿ, ಸಂತೃಪ್ತಿಯಿಂದ ಶಾಲೆಯಿಂದ ಬೀಳ್ಕೊಡುಗೆಯನ್ನು ಪಡೆಯುತ್ತಿದ್ದೇನೆ. ಹಾಗೆಯೇ ಸಂಸ್ಥೆಯ ಹಿರಿಯ ಚೇತನಗಳಾದ ಶ್ರೀಯುತ ಎಂ. ಎಸ್. ಕೊಡಗಲಿ, ಗೋಟೂರ ಸರ್ ,ಗೊಂಬಿ ಸರ್ ,ಕೆ ಎಚ್ .ಕಂದಿಕೊಂಡ ಸರ್, ಎನ್ ಎಚ್. ಪತ್ತಾರ್ ಸರ್ ಇವರೆಲ್ಲರೂ ನಮ್ಮನ್ನಗಲಿದ್ದಾರೆ .ಈ ಹಿರಿಯ ಚೇತನಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಸಂಸ್ಥೆಯ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪಿ. ಎನ್ .ದರಕ ಅವರಿಗೆ ಹಾಗೂ ಕನ್ನಡ ಮಾಧ್ಯಮ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ಎಸ್ .ಕವಡಿಮಟ್ಟಿ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ವಸಂತ್ ಎಸ್. ಗುಡೂರು ಇವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇನೆ .ಸಂಸ್ಥೆಯ ಹಿರಿಯರಾದ ಪಿತೃ ಸಮಾನರಾದ ಶ್ರೀ ಡಿ .ಪಿ. ಡಾಗರವರಿಗೂ ಸಹ ವಂದನೆಗಳನ್ನು ಸಲ್ಲಿಸುತ್ತೇನೆ .ಪ್ರೀತಿಯಿಂದ ಬೀಳ್ಕೊಡುಗೆ ನೀಡಿದ ಎಲ್ಲಾಸಹ ಶಿಕ್ಷಕಿಯರ ನೆನಪಿನಲ್ಲಿ .........
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)