ಗುರುವಾರ, ಏಪ್ರಿಲ್ 27, 2023

ನಾಲ್ಕು ಚುಟುಕುಗಳು - ಗೊರೂರು ಅನಂತರಾಜು, ಹಾಸನ.

1. ಕುರಿಗಳು 
ನಾವು ಕುರಿಗಳು 
ಬಾಡೂಟಕ್ಕೆ
ಹೊರಟ ಕುರಿಗಳು 

2. ರೂಪಳನ್ನು ಜನ
ಪ್ರೀತಿಸುತ್ತಾರೆ ಯಾಕೆ
ಅಯ್ಯೋ ಮಂಕೆ
ಅವಳ ರೂಪ

3. ಬೆಳೆಸಿದರು ನೋಡಿ 
ಸುಂದರ ವನ
ಈಗ ಅಲ್ಲಿ ನೋಡಿ
ಚುಂ..ಬನ

4, ಹೆಂಡತಿ ಕೊಟ್ಟ
ಮುತ್ತಿನ ಸಿಹಿ
ಅದು ಕರಗುವ ಮುನ್ನವೇ 
ಬಿದ್ದಿತು ಸೀರೆಗೆ ಸಹಿ
 
      
- ಗೊರೂರು ಅನಂತರಾಜು, ಹಾಸನ.
9449462879

ಬುದ್ಧನ ಕಿವಿ (ಕೃತಿ ಪರಿಚಯ) - ಮಣಿಕ್ ಪಿ.

 
ಮೊದಲು ನಾನು ಈ ಪುಸ್ತಕ ನೋಡಿದಾಗ ನನಗೆ ತುಂಬಾ ಖಷಿಯಾಯಿತು ಎಕೆಂದರೆ ಈ ಪುಸ್ತಕ ಓದಲು ಬಹಳ ಕಾತುರದಿಂದ ಕಾಯುತ್ತಿದ್ದೆ . ಮೊದಲು ಓದಲು ಶುರುಮಾಡಿದಾಗ ಕೆಲವು ಪ್ರಶ್ನೆಗಳು ಹುಟ್ಟಿಕೊಂಡಿವೆ ಮೊದಲ ಕಥೆಗಳು ಕೆಲವು ಪ್ರಶ್ನೆಗಳು ಹುಟ್ಟಿಸುವಂತಹ ಕಥೆಗಳು ಅವು ಯಾವುವು ಎಂದರೆ 1. ಮೊದಲನೇ ಕಥೆಗೆ ಸರ್ವೈವಲ್ ಬೆನಿಫಿಟ್ ಅಂತ ಟೈಟಲ್ ಯಾಕೆ ಇಟ್ಟರು,ಕಾರಣ ಏನು?
ಎರಡನೆಯ ಕಥೆ 3.5 ಕಥೆಯಲ್ಲಿ ಒಂದು ಹೆಣ್ಣಿನ ಸಹನೆ ,ತಾಳ್ಮೆ ಮತ್ತು ಅವಳ ಪರಿಶ್ರಮ ತುಂಬಾ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ.
ನಾಲ್ಕನೇ ಕಥೆಯಲ್ಲಿ ಮೊದಲು ಓದಿದಾಗ ನನಗೆ ತಿಳಿಯಲಿಲ್ಲ ಮುಂದೆ ಓದಿದರೆ ತಿಳಿಯಬಹುದು ಎಂದು ಹೀಗೆ ಮುಂದೆ ಓದಿದೆ ಆವಾಗ ಸ್ವಲ್ಪ ತಿಳಿಯಿತು ಆಗ ಮತ್ತೆ ನಾನು ಮೊದಲಿನಿಂದ ಓದಿದೆ ಆವಾಗ ತಿಳಿಯುತ್ತ ಹೋಯಿತು ಈ ಕಥೆ ಓದುವಾಗ ನನ್ನ ಮೈ ಮನವೆಲ್ಲ ಒಂಥರಾ ರೋಮಾಂಚನ ಗೊಂಡಿತು ಮತ್ತೆ ಕಥೆಯ ಕೊನೆಯಲ್ಲಿ ಕಥೆಗಾರ ಓದುಗರಿಗೆ ಬೇಸರವಾಗಬಾರ್ದು  ಎನ್ನುವ ಆಲೋಚನೆ ಕೂಡ ಕಂಡುಬರುತ್ತದೆ. ಮುಂದಿನ ಕಥೆ ಮುಳ್ಳು ಎನ್ನುವ ಕಥೆ ಮೊದಲಿಗೆ ಓದಿಕೊಂಡು ಹೋಗುವಾಗ ನನಗೆ ಹಸೀನಾ ಎಂಬ ಸಿನಿಮಾ ನೆನಪಿಗೆ ಬಂತು ಆಮೇಲೆ ಮುಂದೆ ಓದುತ್ತಾ ಹೋದಂತೆ ಇದರ ಕಥೆಯನ್ನು ಬೇರೆ ಅಂತ ಎಲ್ಲಿ ಒಬ್ಬ ಬಡ ಕುಟುಂಬದ ಪರಿಸ್ಥಿತಿಯನ್ನು ಕಥೆಗಾರರು ವಿವರಿಸಲಾಗಿದೆ.
ಮುಂದಿನ ಕಥೆಯಲ್ಲಿ ಪ್ರಸ್ತುತವಾಗಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮತ್ತು ಪ್ರಸ್ತುತ ಇರುವ ಸರ್ಕಾರದ ಬಗ್ಗೆ ಕಥೆಯ ಮೂಲಕ ಅದ್ಭುತವಾಗಿ ತಿಳಿಸಲಾಗಿದೆ ಹೀಗೆ ಮುಂದಿನ ಕಥೆ ಓದುತಿದ್ದೆ  ಮುಂದಿನ ಕಥೆಯಲ್ಲಿ ಕಥೆಗಾರ ಪ್ರಸ್ತುತ ಆಧುನಿಕ ಜಗತ್ತಿನಲ್ಲಾದ ಬದಲಾವಣೆಗಳು ಅಂದರೆ ಡೆವಲಪ್ಮೆಂಟ್ ಅನ್ನು ಹೆಸರಿನಲ್ಲಿ ಜಗತ್ತಿನಲ್ಲಿ ದೊಡ್ಡ ದೊಡ್ಡ ಮಷಿನುಗಳು ಬಂದು ಅದೆಷ್ಟೋ ಬಡ ಜನರ ಬದುಕನ್ನೇ ಕಿತ್ತುಕೊಂಡಿದೆ ಒಂದು ಮಷೀನ್ ಬಂದು 100 ಜನರ ಕೆಲಸವನ್ನು ಕಿತ್ತುಕೊಂಡಿದೆ ಬೆಳವಣಿಗೆ ಅನ್ನೋದು ಜನ ಹಿತಕರ ಆಗಿರಬೇಕೇ ಹೊರತು ಜನರ ಹೊಟ್ಟೆ ಮೇಲೆ ಕಲ್ಲು ಹಾಕೊದು ಅಲ್ಲ ಈ ಕಥೆಯಲ್ಲಿ ಕಥೆಗಾರರು ಜಗತ್ತಿನಲ್ಲಾದ ಬೆಳವಣಿಗೆಯ ಹೆಸರಿನಲ್ಲಾದ ಬದಲಾವಣೆಯನ್ನು ಕಥೆಯ ರೂಪದಲ್ಲಿ ವಿವರಿಸಲಾಗಿದೆ.
ಮತ್ತು ಈ ಕಥೆಯ ಕೊನೆಯಲ್ಲಿ ಈಗಲೂ ಕೆಲವೊಂದು ಕಡೆ ಕೆಲವರನ್ನ ಜಾತಿಯ ಕಾರಣಕ್ಕು ಹಾಗೂ ರೋಹಿಂಗ್ಯ ಅನ್ನೋ ಕಾರಣಕ್ಕೆ ಅವರನ್ನು ಸಮಾಜದಿಂದ ದೂರವಿಡುತ್ತಿದ್ದಾರೆ ಎಂದು ವಿವರಿಸಲಾಗಿದೆ. ಈ ಮುಂದಿನ ಕಥೆಯಲ್ಲಿ ಕಥೆಗಾರರು ಪ್ರಸ್ತುತ ಸರ್ಕಾರಿ ಕಚೇರಿಗಳ ಬಗ್ಗೆ ಹೇಳಬೇಕೆಂದರೆ ಸರ್ಕಾರಿ ಕಚೇರಿಗಳು ದುಡ್ಡು ಸುಲಿಯುವ ಯಂತ್ರಗಳಾಗಿವೆ ಎಂದು ಇಲ್ಲಿ ಕಥೆಗಾರರು ಕಥೆಯ ಮೂಲಕ ವಿವರಿಸಲಾಗಿದೆ. ನಾನು ಕೊನೆಯ ಕಥೆಯನ್ನು ಓದುವಾಗ ಮೊದಮೊದಲಿಗೆ ಅನಿಸಿತು ಇದು ದೇವರ ಮೂಢನಂಬಿಕೆಗಳ ಬಗ್ಗೆ ಇರಬಹುದೆಂದು ತಿಳಿದಿದ್ದೆ ಆದರೆ ಮುಂದೆ ಓದುತ್ತಾ ಹೋದಂತೆ ಈ ಕಥೆಯಲ್ಲಿ 'ದೇವರ ಸೇವೆ' ನೋಡಿ ಇತ್ತೀಚಿಗೆ ನಡೆದ ಮುರುಗ ಮಠದ ಸ್ವಾಮೀಜಿಗಳ ಕಥೆ ತರಾನೇ ಇದೆ ಎಂದು ಅರ್ಥವಾಯಿತು ಮತ್ತೆ ಇವು ಕುತೂಹಲ ಮೂಡಿಸುವಂತಹ ಕಥೆಗಳಾಗಿವೆ ಈ ಪುಸ್ತಕ ಓದಿದರೆ ಈ ಕಥೆಗಳು ಪ್ರಸ್ತುತ ಜೀವನದಲ್ಲಿ ನಡೆಯುತ್ತಿರುವ ಘಟನೆಗಳು ನೆನಪಿಗೆ ಬರುತ್ತವೆ. ದಯಾನಂದ್ ಸರ್ ಕಥೆಗಳನ್ನ ತುಂಬಾ ಚೆನ್ನಾಗಿ ವಿಮರ್ಶಿಸಿದಿದ್ದಾರೆ .  ಎಲ್ಲರೂ ಈ ಕಥೆಯ  ಪುಸ್ತಕ ಓದಲೇ ಬೇಕಾದಂತಹ ಪುಸ್ತಕವಾಗಿದೆ. 

- ಮಣಿಕ್ ಪಿ.

ಭಾರತ ರತ್ನ (ಕವಿತೆ) - ಕಾಜಲ ಎ. ಹೆಗಡೆ.

ಏಪ್ರಿಲ್ 14, 1891 ರ  ವಿಸವಿಯಲಿ
ತಾಯಿ ಭೀಮಾಬಾಯಿಯ ಪುಣ್ಯ ಉದರದಲಿ
ರಾಮಜಿಯವರ ಬಡ ಬಾಳ ಬಳ್ಳಿಯಲಿ
ಜನ್ಮತಾಳಿತು ಭೀಮ ಎಂಬ ಗಂಡು ಹುಲಿ...

ಮೇಲು-ಕೀಳು ಎಂಬ ಭೇದ -ಭಾವದಲಿ
ಜೀವನ ಕಳೆದರು ಕಷ್ಟದ ದಿನಗಳಲಿ
ಅಕ್ಷರ ಕಲೆತರು ಶಾಲೆಯ ಹೋರಾಂಗಣದಲಿ
ಧೈರ್ಯ ದಿಂದ ನಡೆದರು ವಿದ್ಯಾ ಕ್ಷೇತ್ರದಲಿ...

ಬಾಲ ಭೀಮನ ಚಿಗುರುವ  ವಯಸ್ಸಿನಲಿ
ಮಡದಿ ರಮಾಬಾಯಿಯ ಸಂಗಾತಿಯಲಿ
ಹೃದಯವಂತಿಕೆಯ ದೇಶಪ್ರೇಮದಲಿ
ಭಾರತದ ಸಂವಿಧಾನ ಶಿಲ್ಪಿಯಾದರಿಲ್ಲಿ...

ಕರಡು ಸಮಿತಿಯ ಅಧ್ಯಕ್ಷರ ನಾಯಕತ್ವದಲಿ
ಪ್ರೇಮ ಬಿಹಾರಿ ನರೇನ ಅವರ ಹಸ್ತಾಕ್ಷರದಲಿ
2 ವರ್ಷ 11 ತಿಂಗಳು 18 ದಿನಗಳ ಅವಧಿಯಲಿ
ಬರೆದ ಸಂವಿಧಾನವು ಬೆಳಕಿಗೆ ಬಂದಿತಿಲ್ಲಿ...

ಈ ಭೀಮನ ಜನುಮ ದಿನ ಭಾರತದಲ್ಲಿ
ಸಂಭ್ರಮ ಸಡಗರದ ಹಬ್ಬವಾಯಿತು ನಮ್ಮಲ್ಲಿ
ಅಸ್ಪೃಶ್ಯತೆ ಎಂಬ ಹುಟ್ಟಿ ಬೆಳೆದ ಕುಲದಲ್ಲಿ
ಅವರೇ ಭೀಮರಾವ್ ಅಂಬೇಡ್ಕರ್ ಮಹಾನಾಯಕರಿಲ್ಲಿ...

- ಕಾಜಲ ಎ. ಹೆಗಡೆ.

ತನಗರಿಯದ ಮೋಸ (ಸಣ್ಣ ಕತೆ) - ಲಕ್ಷ್ಮೀ ಎ.ಸಿ.,ಮೊರಬ.

ಒಂದು ಹಳ್ಳಿಯಲ್ಲಿ ವಯಸ್ಸಾದ ಅಜ್ಜಿ - ತಾತ ಇದ್ದರು ಅವರಿಗೆ ಮಕ್ಕಳು ಇರಲಿಲ್ಲ. ಅವರು ಹಸುಗಳನ್ನು ಸಾಕಿದ್ದರು. ಹಾಲು ಮತ್ತು ಬೆಣ್ಣೆಯಿಂದ ಅವರ ಜೀವನ ನಡೆಸುತ್ತಿದ್ದರು.
           ಊರಲ್ಲಿ ಒಂದು ಕಿರಾಣಿ ಅಂಗಡಿಯ ಮಾಲೀಕನಿಗೆ ಬೆಣ್ಣೆ ಕೊಟ್ಟು ತನಗೆ ಬೇಕಾದ ಸಾಮಾನಗಳು ತರುತಿದ್ದರು. ಒಂದು ಕೆಜಿ ಬೆಣ್ಣೆಯನ್ನು ಪ್ಲಾಸ್ಟಿಕ್ ದಲ್ಲಿ ಪ್ಯಾಕ್ ಮಾಡಿ ಕೊಡುತ್ತಿದ್ದರು ಮಾಲೀಕನು ಅದನ್ನು ತೂಕ ಮಾಡುತ್ತಿರಲಿಲ್ಲ.
   ಹೀಗೆ ಹಲವಾರು ವರ್ಷಗಳಿಂದ ನಡೆಯುತಿತ್ತು ಒಂದು ದಿನ ಮಾಲೀಕನು ಆ ಬೆಣ್ಣೆಯನ್ನು ತೂಕ ಮಾಡಿದನು. ಅದರಲ್ಲಿ ಬೆಣ್ಣೆ ಕಡಿಮೆ ಇತ್ತು. ಮಾಲೀಕನಿಗೆ ತುಂಬಾ ಕೋಪ ಬಂದು ಏ... ಮೋಸಗಾರ ನಂಬಿಕೆ ದ್ರೋಹಿ ಎಸ್ಟು ದಿನದಿಂದ ಮೋಸ ಮಾಡಿದಿಯಾ ನಮಗೆ.
ಎಂದು ಬೈದು ಹೋಗು ಇಲ್ಲಿಂದ ಇನ್ಮುಂದೆ ಬೆಣ್ಣೆ ಬೇಡ ಎಂದು ಹೇಳಿದನು. 
  ಅವಾಗ ತಾತ ಹೇಳಿದನು ಕ್ಷಮಿಸಿ ಮಾಲೀಕರೇ ನಾನು ತಕ್ಕಡಿ ಕೊಳ್ಳುವಷ್ಟು ಶ್ರೀಮಂತನಲ್ಲ ಹಾಗಾಗಿ ನಿಮ್ಮ ಅಂಗಡಿಯಿಂದ ತಂದ ಒಂದು ಕೆಜಿ ಸಕ್ಕರೆ ಸಮವಾಗಿ ಒಂದು ಕೆಜಿ ಬೆಣ್ಣೆಯನ್ನು ಅಳೆಯುತ್ತೇವೆ. ಎಂದು ಮುಗ್ಧತೆಯಿಂದ ಹೇಳಿದನು. ನಂತರ ಗೊತ್ತಾಯಿತು ಮಾಲೀಕ ಸಕ್ಕರೆ ಕಡಿಮೆ ಕೊಡುತ್ತಾನೆ ಅಂತ. ತನ್ನ ತಪ್ಪು ತನಗೆ ಅರಿವಾಯಿತು. ತಾತನ ಹತ್ತಿರ ಕ್ಷಮೆ ಕೇಳಿದನು. 

     ಸ್ನೇಹಿತರೆ.. ನಾವು ಬೇರೆಯವರ ತಪ್ಪು ಹುಡುಕುವ ಮೊದಲು ನಮ್ಮ ತಪ್ಪು ಹುಡುಕಬೇಕು.
 - ಲಕ್ಷ್ಮೀ ಎ.ಸಿ.,ಮೊರಬ.(ರಾಯಬಾಗ).

ಸಂಭ್ರಮಿಸದ ಬದುಕೊಂದು ಬದುಕೇ (ನ್ಯಾನೋ ಕತೆ) - ಸೌಜನ್ಯ ದಾಸನಕೊಡಿಗೆ.

ಒಮ್ಮೆ ಕಾಗೆಮರಿಯೊಂದು ತನ್ನ ಸುತ್ತಾಟವನ್ನು ಮುಗಿಸಿ ಬಂದಾಗ ಅದರ ಕಪ್ಪು ಪುಕ್ಕಗಳ ನಡುವೆ ಒಂದೇ ಒಂದು  ಹಸಿರು ಪುಕ್ಕ ಸಿಕ್ಕಿಕೊಂಡಿತಂತೆ, ಕಾಗೆ ಮರಿಗೆ ಆ ಗಿಳಿಯ ಹಸಿರುಪುಕ್ಕವನ್ನು ಕಂಡು ಅತೀ ಆಶ್ಚರ್ಯವು ಆನoದವು ಆಯಿತoತೆ.

ಒಂದೇ ಒಂದು ಗಿಳಿಯ ಗರಿಯನ್ನು ಪಡೆದ ನಾನು ಇಷ್ಟೊಂದು ಸಂತೋಷಪಡುತ್ತಿರಲು, ಇಂತಹ ಸೊಗಸಾದ ಗರಿಗಳನ್ನು ಮೈ ತುಂಬಾ ಹೊದ್ದಿರುವ ಆ ಗಿಳಿ ಪ್ರತಿದಿನ ತನ್ನ ಮೈಬಣ್ಣವನ್ನು ನೆನೆದು  ಇನ್ನೆಷ್ಟು ಸಂಭ್ರಮಿಸಬಹುದು ಎಂಬ ಕುತೂಹಲದಿಂದ ಗಿಳಿಯನ್ನು ನೋಡಲು ಆ ಕಾಗೆ  ಹೋದಾಗ,

"ನವಿಲುಗಳ ಬಣ್ಣ ಬಣ್ಣದಗರಿಗಳು ಅದೆಷ್ಟು ಚೆನ್ನ, ನನ್ನ ಪುಕ್ಕಗಳು ಇವೆ ಬರೀ ಒಂದೇ  ಬಣ್ಣ"ಎಂದು ಶೋಕಿಸುತ್ತ ಕುಳಿತಿತ್ತು ಆ ಗಿಳಿ.

ನಾವು ದೂರುವ ನಮ್ಮ ಬದುಕು ಅದೆಷ್ಟೋ ಜೀವಗಳ ದೂರದ ಬಯಕೆ.
ನಮ್ಮ ಬದುಕನ್ನು  ನಾವೆ  ಸಂಭ್ರಮಿಸದೆ ಬದುಕುವುದೂ  ಒಂದು ಬದುಕೇ..?

-ಸೌಜನ್ಯ ದಾಸನಕೊಡಿಗೆ.

ಶುಕ್ರವಾರ, ಏಪ್ರಿಲ್ 21, 2023

ನೆಟ್ಟಗಿರು (ಕವಿತೆ) - ಬಸವರಾಜ ಮೈದೂರ, ಚಿಕ್ಕಮರಳಿಹಳ್ಳಿ.

ನಮ್ಮ ನಡವಳಿಕೆ 
ಮತ್ತು ಕ್ರಿಯೆಗಳನ್ನ 
ಅಗೋಚರವಾದ ಶಕ್ತಿ 
ಲೆಕ್ಕ ಹಾಕುತಿದೆ..

ನಾವು ಮಾಡಿದ್ದು
ಚಾಚು ತಪ್ಪದೆ 
ಮೇಲೊಬ್ಬನ ಸಿ ಸಿ ಕ್ಯಾಮೆರಾದಲ್ಲಿ ಸೇರೆಯಾಗುತಿದೆ..

ಎಲ್ಲವನ್ನೂ ನಮಗೆ 
ಗೊತ್ತಾಗದ ಹಾಗೆ 
ಈ ಕಾಲಾ ಕೂಲಾಗಿ 
ಬುಕ್ಕಿಗೇರಿಸುತಿದೆ..

ಅವರವರು ಮಾಡಿದ್ದನ್ನು
ಚಾಚು ತಪ್ಪದೆ 
ಅವರವರ ಬೆನ್ನಿಗೆ 
ಕಟ್ಟಲು ಅಣಿಯಾಗುತಿದೆ..

  - ಬಸವರಾಜ  ಮೈದೂರ, ಚಿಕ್ಕಮರಳಿಹಳ್ಳಿ.

ನೋಡ್ಲಾ ಅಲ್ಲಿ ಅವ್ರನಡೀರ್ಲಾ ಕಿತ್ಕಳ್ರಾ ಒಡ್ಲಾ ( ಕವಿತೆ ) - ದುರ್ಗೆಶ್.

ನೋಡ್ಲಾ  ಅಲ್ಲಿ ಅವ್ರ
ನಡೀರ್ಲಾ ಕಿತ್ಕಳ್ರಾ ಒಡ್ಲಾ  

ತಿನ್ನೊದ್ನ ಹೆಂಗ್ ಬೆಂಕಿಗ್ ಹಕ್ತವ್ರೆ ನೊಡ್ರುಲಾ
ದುರಂಕಾರ  ಹೆಂಗ್ ಐತೆ ಅವ್ರ್ಗೆ
ದ್ರಾಕ್ಷಿ ನೋಡ್ಲ ಗೊಡಂಬಿ ನೋಡ್ಲ ಅಲ್ಲಿ
ಬೆಂಕಿಲಿ ಹೆಂಗ್ ಬೈತೈತೆ ನೋಡ್ಲ
ಅಲ್ನೊಡ್ಲಾ ಕೊಬ್ಬರಿ ಒಂದ್ ವಾರ ಸಾರ್ ಆಗ್ತೈತೆ ನಮಗೆ
ನೊಡ್ಲಾ ಅವ್ರ ದುರಂಕಾರ ಎಸ್ಟ್  ಐತೆ

ಬಾದಾಮಿ, ಖರ್ಜೂರ, ಏಲಕ್ಕಿನಾ ನೋಡುದ್ರೆ ಹೊಟ್ಟೆ ಹುರಿತೈತೆ
ನಾವ್ ಕಷ್ಟ ಪಟ್ಟು ಬೆಳೆದು ತಿನ್ನದೆ ಮಾರ್ತಿವಿ,
ನೀರ್ ಚಲ್ದಂಗೆ ಬೆಂಕಿಗೆ ಹಾಕ್ತವ್ರಲ್ಲ ಎಸ್ಟ್ ಐತೆ ಇವ್ರ್ಗೆ
ಆನೆ ಕ್ವಟ್ಲೇ ತಡ್ದು ಬಾಳೆ ಬೆಳ್ಸುದ್ರೆ ತೂದ್ ಬಿಸಾಕ್ತರಲ್ಲ.
ನನ್ ಮಕ್ಲಿಗ್ ತಿನ್ನಕೆ ನಾನೆ ಬಿಟ್ಟಿಲ್ಲ ಪುಡಿಗಾಸುಗೊಸ್ಕರ  ಹಾ..... ಅಲಾ ಇವ್ರನ್ನ ಏನ್ ಮಾಡ್ಬೇಕು

ದೇವ್ರಾ ಹೇಸ್ರು ಹೇಳ್ಕೊಂಡು  ಮೊದ್ಲೇ ಮೋಸ ಮಾಡ್ತಾರೆ ಅದ್ರಲ್ಲು ತಿನ್ನೊದ್ನು ಹೀಗ್ ಮಾಡುದ್ರೆ ನಾವ್ ಏನ್ ತಿನ್ನೋದು?
ಕಲ್ಮುಂದೆ ಏಲ್ಲಾನು ಇಡ್ತರೆ ಅದು ತಿನ್ನಲ, ನಮ್ಗೆ ಕೊಡ್ರಿ ಅಂದ್ರೆ ಕೊಡಲ್ಲ.
ಆ ದೆವ್ರು ಏನಾದ್ರೂ ಬಂದ್ರೆ ಅವನಿಗೆ ಹೇಳಿ ಚರ್ಮ ಸುಲಿಸ್ತಿನಿ ನೋಡ್ತಾ ಇರ್ಲಾ

ಅರ್ಥ ಆಗ್ದೇ ಇರೋ ಮಾತಲ್ಲಿ ಬುಡ ಬುಡ ಅಂತಾರೆ 
ಬುಡ ಬುಡ ಅಂತ ಸುರಿತಾವ್ರೆ 
ಹೊಟ್ಟೆ ಉರಿತೈತೆ ನೊಡ್ಲ ಕಣ್ಣಲ್ಲಿ ರಕ್ತ ಬತ್ತದಲ್ಲ 
ನೊಡ್ಲಾ ಅಲ್ಲಿ ಅವ್ರ 
ನಡೀರ್ಲಾ ಕಿತ್ಕಳ್ರ ಒಡ್ಲಾ.

- ದುರ್ಗೇಶ್.

ರಂಜಾನ್ ಮಹತ್ವ (ಲೇಖನ) - ಇಂಗಳಗಿ ದಾವಲಮಲೀಕ.


ರಂಜಾನ್ ಅಥವ ರಮದಾನ್ (ಅರೇಬಿಕ್‌ ಭಾಷೆಯಲ್ಲಿ: رمضان ) ಇಸ್ಲಾಮ್ ಕ್ಯಾಲೆಂಡರ್‌ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್‌ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಮದಾನ್‌ನ ಸಮಯದಲ್ಲಿ ಉಪವಾಸ ನಡೆಯುತ್ತದೆ.
ಕ್ರೆಸೆಂಟ್ ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟಿದೆ ಮತ್ತು ರಮದಾನ್ ಸಮಯದಲ್ಲಿ ಸುಂದರವಾಗಿ ಪ್ರಕಾಶಿಸಲ್ಪಟ್ಟಿದೆ.
ಇಸ್ಲಾಮಿನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆ ಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾ ಮುಹಮ್ಮದ್(ಸ)ರವರ ಮೇಲೆ ಇದೇ ತಿಂಗಳಲ್ಲಿ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು.ಇದರ ಗೌರವಾರ್ಹ ಪ್ರತಿವರ್ಷವೂ ಈ ಒಂದು ತಿಂಗಳ ವ್ರತಾಚರಣೆಯನ್ನು ಕಡ್ಡಾಯ ಗೊಳಿಸಲಾಯಿತು. ಪ್ರಭಾತಕಾಲ ದಿಂದ ಹಿಡಿದು ಸೂರ್ಯಾಸ್ತಮದವರೆಗೆ ಇತರ ಸಮಯಗಳಲ್ಲಿ ಧರ್ಮಸಮ್ಮತ ವಾದ ಅನ್ನ ಪಾನೀಯಗಳನ್ನು ಮತ್ತು ಕಾಮಾಸಕ್ತಿಯ ಚಟುವಟಿಕೆಗಳನ್ನು ತ್ಯಜಿಸುವುದನ್ನೇ ಇಸ್ಲಾಮಿನಲ್ಲಿ ಉಪವಾಸ ಅಥವಾ ವ್ರತಾಚರಣೆ ಎನ್ನಲಾಗಿದೆ. ಸ್ವೇಚ್ಛೆ, ಸ್ವಾರ್ಥ ಮತ್ತು ಅತ್ಯಾಗ್ರಹಗಳಂಥ ಎಲ್ಲ ವಿಧ ಮಾನವೀಯ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಪವಿತ್ರ ಗೊಳಿ ಸುವುದೇ ಒಂದು ತಿಂಗಳ ಪೂರ್ಣ ವ್ರತಾಚರಣೆಯ ಉದ್ದೇಶವಾಗಿದೆ.
ಇಸ್ಲಾಂ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ಧಾರ್ಮಿಕವಾಗಿ ಈದ್-ಉಲ್-ಫಿತರ್ ಎಂತಲೂ ಕರೆಯುತ್ತಾರೆ.
ಒಂದು ತಿಂಗಳ ಕಠಿಣ ವೃತಾಚರಣೆಯ ಬಳಿಕ ಈದ್-ಉಲ್-ಫಿತರ್ ಬಂದಿದೆ. ರಂಜಾನ್ ತಿಂಗಳ ಹಗಲಿನಲ್ಲಿ ತೊಟ್ಟು ನೀರೂ ಕುಡಿಯದೆ, ಕಠಿಣ ವೃತದ ಮೂಲಕ ಹಸಿವಿನ ಕಠಿಣತೆಯನ್ನು ಅರಿತು, ವಿಶ್ವ ಮುಸ್ಲಿಮರೆಲ್ಲರು ಸಮಾನರೆನಿಸಿದರು. ಅಲ್ಲಿ ಬಡವ - ಶ್ರೀಮಂತರೆನ್ನುವ ಭೇಧವಿಲ್ಲದೆ ಎಲ್ಲರೂ ವೃತಾಚರಣೆಯಲ್ಲಿ ತೊಡಗಿದರು. ದೇವಲೀನರಾಗಿ ಅಲ್ಲಾಹನನ್ನು ಪ್ರಾರ್ತಿಸುತ್ತಾ ಎಲ್ಲ ರೀತಿಯ ತಪ್ಪುಗಳಿಂದ ದೂರವಿದ್ದ ಒಂದು ತಿಂಗಳು ಕಳೆದು ಈದ್-ಉಲ್-ಫಿತರ್ ಬಂದಿದೆ. ಇದು ದಾನದ ಹಬ್ಬ. ಒಂದು ತಿಂಗಳ ಹಸಿವೆಯ ಪಾಠದಿಂದ ಬಡತನ ಹಸಿವು ಏನೆಂಬುದು ಅರಿತ ಮುಸ್ಲಿಮನಿಗೆ ಈಗ ಬಡವನಿಗೆ -ಹಸಿದವನಿಗೆ ದಾನದ ಮೂಲಕ ಸಹಾಯಿಯಾಗುವುದು ಕರ್ತವ್ಯ. ಇಸ್ಲಾಂ ಎಂದೂ ಸಂಪತ್ತಿನ ಕೇಂದ್ರೀಕರಣ ವನ್ನು ವಿರೋಧಿಸುತ್ತದೆ. ಯಾವತ್ತೂ ಶೀಮಂತನನ್ನು ದಾನ ನೀಡುವುದಕ್ಕೆ ಪ್ರೇರೇಪಿಸುತ್ತದೆ. ಇಸ್ಲಾಮಿನ ಐದು ಪ್ರಧಾನ ಕರ್ಮಗಳಲ್ಲಿ ಒಂದಾದ 'ಝಕಾತ್' ಇದಕ್ಕೆ ಪುಷ್ಟಿ ನೀಡುತ್ತದೆ. ಅದಲ್ಲದೇ ಹಲವಾರು ಪುಣ್ಯ ಕಾರ್ಯಗಳ ಸಂದರ್ಭಗಳಲ್ಲೂ ದಾನ ನೀಡುವುದು ಕಡ್ಡಾಯಗೊಳಿಸುತ್ತದೆ. ಅಂತಹ ಒಂದು ಹಬ್ಬವಾಗಿದೆ ಈದ್-ಉಲ್-ಫಿತರ್. ಇಸ್ಲಾಂ ಆಚರಿಸುವ ಎರಡೂ ಹಬ್ಬಗಳೂ ದಾನವನ್ನು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈಗ ಬಂದಿರುವ ಈದ್-ಉಲ್-ಫಿತರ್ ಸಂದರ್ಭೋಚಿತವಾಗಿ 'ದಾನ್ಯ' ದಾನ ಮಾಡುವುದನ್ನು ಹೇಳುತ್ತದೆ. ಇದು ಪ್ರತೀ ಮುಸ್ಲಿಮನ ಕಡ್ಡಾಯ ಕರ್ಮವಾಗಿದೆ. ಈದ್ ದಿನದಂದು ಯಾರೂ ಹಸಿದಿರಬಾರದು ಎಂಬುದು ಈ ದಾನದಿಂದ ಉಧ್ದೇಶಿಸಲಾಗಿದೆ. ಒಬ್ಬ ಮುಸ್ಲಿಮ ಆತನ ಈದ್ ದಿನದ ಹಗಲಿನ ಮತ್ತು ಆರಾತ್ರಿಯ ಖರ್ಚುಗೆ ಬೇಕಾದ ಸ್ವತ್ತು ಕಳೆದು ಬೇರೇನಾದರೂ ಉಳಿದಲ್ಲಿ, ಖಡ್ಡಾಯ ವಾಗಿ ದಾನ ನೀಡ ತಕ್ಕದ್ದು. ಅದು ಆ ಊರಿನ ಆಹಾರ ದಾನ್ಯ ವಾಗಿರಬೇಕು ಮತ್ತು ಅದಕ್ಕಾಗಿ ಒಂದು ಅಳತೆಯನ್ನು ನಿಗದಿಪಡಿಸಿದೆ(ಪ್ರತೀ ವ್ಯಕ್ತಿಯ ಮೇಲೂ ಸುಮಾರು 3 ಕೆಜಿ - ಇದು ಮಝಹಬ್ ಗಳಿಗೆ ಅನುಸರಿಸಿ ಬದಲಾಗಬಹುದು). ಯಾರೆಲ್ಲ ಈ ದಾನ ನೀಡಲು ಸಮರ್ಥರಲ್ಲವೋ ಅವರೆಲ್ಲ ದಾನಪಡಯಲು ಅರ್ಹರು. ಆದರೆ ಈ ದಾನದ ಲೆಕ್ಕಾಚಾರದಲ್ಲಿ ಒಬ್ಬಾತನ ಮನೆಯಲ್ಲಿರುವ ಪಾತ್ರೆ ಮೊದಲಾದ ವಸ್ತುಗಳೂ ಒಳಗೊಳ್ಳುತ್ತದೆ. ಅಂದರೆ ಪಾತ್ರೆಗಳನ್ನು ಮಾರಿಯಾದರೂ ದಾನ ನಿಡಬೇಕು. ಮಾತ್ರವಲ್ಲ ಒಂದು ಮನೆಯಲ್ಲಿರುವ ಪ್ರತಿವ್ಯಕ್ತಿಯ ಮೇಲೂ ಈ ದಾನ ಖಡ್ಡಾಯ ವಾಗಿದೆ.
ಹಾಗಿದ್ದರೆ ಯೋಚಿಸಿ ನೋಡಿ ವಿಶ್ವದ ಎಲ್ಲ ಮುಸ್ಲಿಮ ಈ ದಾನವನ್ನು ನೀಡಿದರೆ ಕನಿಷ್ಟ ಒಂದು ವಾರವಾದರೂ ಹಸಿವಿಲ್ಲದ ವಾರ ವಾಗಿರಬಹುದು. "ಜಿಹಾದ್-ಜಿಹಾದ್" ಅನ್ನುವ ನಾಮಧಾರಿ ಮುಸ್ಲಿಮ "ಝಕಾತ್ - ಝಕಾತ್" (ದಾನ) ಅಂದರೆ ಇಂದು ಹಸಿವಿನಿಂದ ಸಾಯುವವರ ಸಂಖ್ಯೆ ಬಹಳ ಕಡಿಮೆ ಇರುತ್ತಿತ್ತು.
ಸಹೋದರ ಭಾವ ತುಂಬಿಸುವ ಈದ್ ನ ಈ ದಿನ ಎಲ್ಲರೂ ದಾನ ಕರ್ಮಗಳಿಂದ ಸುಂದರವಾಗಿಸಲು, ಸೃಷ್ಟಿಕರ್ತ ನಮನ್ನು ಕರುಣಿಸಲೀ (ಆಮೀನ್) ಎಂದು ಪ್ರಾರ್ತಿಸುತ್ತೇನೆ. ಎಲ್ಲರಿಗೂ ಈದ್-ಉಲ್-ಫಿತರ್ (ದಾನ್ಯ ದಾನದ ಹಬ್ಬ) ನ ಶುಭಾಶಯಗಳು.
- ಇಂಗಳಗಿ ದಾವಲಮಲೀಕ.

ಋಣ (ಕವಿತೆ) - ಮಾಲತಿ ಮೇಲ್ಕೋಟೆ.

ಜನನನಿಂ ಮರಣದನಕ
ಋಣದಲೇ ಬದುಕಿದುವು
ಒಂದೆರಡೆ ಹಲವಾರು
ಹೆಚ್ಚೊಮ್ಮೆ ಕಡಿಮೆಯೊಮ್ಮೆ

ಜನಿಸಿದೊಡನೆ ಪಂಚಭೂತಗಳ ಋಣ
ಬೆಳೆಸಿದ ತಾಯ್ತಂದೆಯರ ಋಣ
ಜೊತೆ ಬೆಳೆದ ಒಡಹುಟ್ಟಿದವರ ಋಣ
ಏನ ಹೆಸರಿಸಲಿ ಏನ ಬಿಡಲಿ

ವಿದ್ಯೆ ಕಲಿಸಿದ ಗುರುಗಳದೊ
ಅನ್ನ ನೀಡಿದ ರೈತನದೊ
ದೇಶ ಕಾಯ್ದ ಯೋಧನದೊ
ಕೈಹಿಡಿದು ಕಾಯ್ವ ದೇವನದೊ

ಚಿಕಿತ್ಸೆ ನೀಡಿದ ವೈದ್ಯರ ಋಣವೇ
ಸತ್ತ ನಂತರ ಬಿಟ್ಟಿತೇನು ಋಣವು
ಹೆಗಲು ಕೊಡುವವರ ಋಣವೇ
ಸಂಸ್ಕಾರ ಮಾಡುವವರ ಋಣವೇ

ಕಂಡಂತೆ ಕಾಣದಂತೆ
ತಿಳಿದಂತೆ ತಿಳಿಯದಂತೆ
ಋಣದಲೇ ಬದುಕಿದುವು
ಋಣಮುಕ್ತರಿಲ್ಲ ಇಲ್ಲಿ

- ಮಾಲತಿ ಮೇಲ್ಕೋಟೆ.


ಯಕ್ಷಪ್ರಶ್ನೆ.! (ಕವಿತೆ) - ಬಸವರಾಜ ಕರುವಿನ, ಬಸವನಾಳು.

ನಾಡನಾಳುವ ದೊರೆಗಳಿಗಿಲ್ಲ ತತ್ವ, ಸಿದ್ಧಾಂತಗಳ ಹಂಗು.!
ಅಧಿಕಾರಬೇಕೆಂಬುದಷ್ಟೇ ಅವರ ಗುಂಗು
ಚುಕ್ಕಾಣಿಗಾಗಿ ಹಲವಾರು ಚಮತ್ಕಾರ
ಟಿಕೆಟ್ ಸಿಗದವರೆಲ್ಲ ಪಕ್ಷಾಂತರ.!

ನೈತಿಕತೆ ಕಳೆದುಕೊಂಡ ರಾಜಕೀಯ.!
ಹಣ, ಹೆಂಡದ ನಡುವೀಗ ಮತದಾರ ಪರಕೀಯ
ಕುಟುಂಬ ರಾಜಕಾರಣದಲ್ಲಿ ಯುವರಾಜನಿಗೆ ಟಿಕೆಟ್.!
ತತ್ವ,ಸಿದ್ದಾಂತಕ್ಕಾಗಿ ಬದುಕಿದವರಿಗೆ ಖಾಲಿ ಬಕೆಟ್.!

ಚುನಾವಣೆ ಹಬ್ಬದಲ್ಲಿ ಮತದಾರನೆ ಭೇಟೆ
ಕಟ್ಟಿ ಬಿಸಾಡುವರು ಅಭಿವೃದ್ಧಿಯ ಮೂಟೆ
ಜಾತಿ ಮತದ ಹೆಸರಲ್ಲಿ ಗೆಲುವಿನ ಲೆಕ್ಕಾಚಾರ
ದೇಶದ ಸಮಸೆಗಳಿಗಿಲ್ಲ ಶಾಶ್ವತ ಪರಿಹಾರ  

ಬದಲಾಗುವುದು ಯಾವಾಗ ಈ ವ್ಯವಸ್ಥೆ.?
ಕುರಿಮಂದೆಯಂತೆ ಮತದಾರನ ಅವ್ಯವಸ್ಥೆ.!
ಅಂತಃ ಕರಣದ ಅರಸ ಸಿಗಬಹುದೇ ನಾಡಿಗೆ.?
ದೇಶ ಸಾಗಬಹುದೇ ಎಲ್ಲರನ್ನ ಒಳಗೊಂಡಂತೆ ಅಭಿವೃದ್ಧಿ ಯ ಜಾಡಿಗೆ.?

- ಬಸವರಾಜ ಕರುವಿನ, ಬಸವನಾಳು.

ಮಧುರ ಮನಸು (ಕವಿತೆ) - ಎಲ್. ಎಸ್. ಆಶಾ ಶ್ರೀಧರ್.

ಹೂವಿನಂತೆ ನಗುತಿರಲಿ ಮನಸು
ಮಗುವಿನಂತಿರಲು ಇನ್ನೂ ಸೊಗಸು
ಮನಮಂದಿರದಲಿ ಪ್ರೀತಿಯಿರಲಿ
ತುಂಬಿರಲಿ ಸ್ನೇಹಭಾವ ಅದರಲಿ 

ಮನಸಿನಲಿ ಚಿಂತೆಯ ಕಾರ್ಮೋಡ ಏಕೆ
ಜೀವನವಿರುವುದೇ ನಗುತಾ ಬಾಳುವುದಕ್ಕೆ
ಚಂಚಲತೆ ಬೇಡ ನಿಶ್ಚಲತೆ ಇರಲಿ
ಕಠೋರತೆ ಬೇಡ ಮಧುರತೆ ತುಂಬಿರಲಿ

ಮನಸಿನೊಳಗೆ ಅಡಗಿಹುದೆಷ್ಟೊಂದು ಮನಸು
ಕಪಟವರಿಯದ ಮಗುವಿನ ಮನಸು, 
ಸದಾ ಸಹಾಯಕೆ ನಿಂತ ತೆರೆದ ಮನಸು
ಕಷ್ಟಗಳಿಗೆ ಜಗ್ಗದೆ ನಿಂತ ಗಟ್ಟಿ ಮನಸು,

ನಂಬಿಕೆದ್ರೋಹಕೆ ಒಡೆದ ಮನಸು,
ದುಃಖದಿಂದ ಭಾರವಾದ ಮನಸು,
ಸಂತೋಷದಿಂದ ಕುಣಿದಾಡುವ ಮನಸು,
ಹಕ್ಕಿಯಂತೆ ಹಾರಾಡಿದೆ ಮನಸು

ಒಲಿದ ಮನಸು, ದೂರಾದ ಮನಸು,
ಹತ್ತಿರವಾಗಲು ಕಾತರಿಸುವ ಮನಸು,
ಮೋಸಕೆ ಛಿದ್ರವಾದ ಮನಸು,

ಉದಾಸೀನತೆಗೆ ಕಿರಿದಾಗುವ ಮನಸು
ಸಂತೋಷಪಡಿಸಿದಾಗ ಹಿಗ್ಗುವ ಮನಸು
ಮನಸಿನಲಿ   ಇರದಿರಲಿ ಗೊಂದಲ 
ಮನೆಯಲೂ ಮನಸಲೂ ತುಂಬದಿರಲಿ ಕಶ್ಮಲ

ಮನಸ್ಸಿಗಿಂತ ದೊಡ್ಡದಾವುದಿದೆ ನಮ್ಮಲ್ಲಿ
ಮನಸ್ಸಾಕ್ಷಿಯೇ ಮುಖ್ಯ ಎಲ್ಲದರಲ್ಲಿ

ಹರಿಯಬಿಡಬೇಡಿ ನಿಮ್ಮಯ ಮನಸು
ನುಚ್ಚುನೂರಾಗುವುದು ಕಂಡಕನಸು
ಚಿಂತೆ ಮಾಡುವುದು ಏಕೆ ಅದಕೆ
ಕಾಯಕ ಮಾಡಿದರೆ ಬಾಳೇ ಸೊಗಸು

- ಎಲ್. ಎಸ್. ಆಶಾ ಶ್ರೀಧರ್, ಶಿವಮೊಗ್ಗ.


ತಂಬೆಲರೇ (ಕವಿತೆ) - ಸಬ್ಬನಹಳ್ಳಿ ಶಶಿಧರ.

ತಂಗಾಳಿಯೆ ನೀ ಬೇಗ ಬಾ
ನನ್ನವಳ ಮನ ಸೇರಲು
ತಂಬೆಲರೇ ತಂಪಾಗಿ ಬಾ
ಮನದ ಬೇಗೆ ನೀಗಲು

ದೇಹ ಎದುರಿದೆ ಮನವು ದೂರಿದೆ
ಎದುರೆ ಇದ್ದರು ಮಾತು ಮರೆತಿದೆ
ಏನಾಗಿದೆ ಮನವು ಹೇಳದಿದೆ
ನನಗೇತಕೊ ದಿಗಿಲಾಗಿದೆ

ದಿನವು ಹೀಗೆಯೆ ಬದುಕು ಸಾಗಿದೆ
ಚೇತನವಿಲ್ಲದೆ ಮನಸು ಬಾಡಿದೆ
ಪ್ರೀತಿಯ ನುಡಿ ಕೇಳದೆ ಮನವು
ವಿಲವಿಲ ಒದ್ದಾಡಿದೆ

ಪ್ರೀತಿ ಪ್ರೇಮವು ಎಲ್ಲೋ ಮಲಗಿವೆ
ನೋವು ಬೇಸರ ಎದೆಯ ಬಿರಿದಿವೆ
ಕಾಮನಬಿಲ್ಲಾಗಿವೆ ಮನದಾಸೆಗಳು
ನಿಲ್ಲದೆ ಹಾರೋಡುತಿವೆ

ಓಡೋಡಿ ಬಾ ತಂಗಾಳಿಯೆ
ಸಡಗರ ಹೊತ್ತು ಬಳಿಗೆ ಬಾ
ನನ್ನವಳ ನಕ್ಕು ನಗಿಸು ಬಾ
ಪ್ರೀತಿಯ ಸೊಗಸ ಮೆರೆಸು ಬಾ.
 
 
- ಸಬ್ಬನಹಳ್ಳಿ ಶಶಿಧರ.

ಬೆತ್ತಲೆ ವೃಕ್ಷ - ಭಾರತದ ಲೈಂಗಿಕ ಜಗತ್ತಿನ ಸಾಂಸ್ಕೃತಿಕ, ಚಾರಿತ್ರಿಕ ಸಂಕಥನ (ಪುಸ್ತಕ ವಿಮರ್ಶೆ) - ಪೂಜಾ ಎಸ್, ಕಲಬುರಗಿ.

ಡಾ ‌ ಸಿ . ಜಿ ಲಕ್ಷೀಪತಿಯವರು ಈ ಪುಸ್ತಕವನ್ನು ಬರೆದಿದ್ದಾರೆ. ಇಪ್ಪತ್ತು ವರ್ಷಗಳಾದ ಮೇಲೆ   ಪುನಃ  ಕೌದಿ ಪ್ರಕಾಶನದಿಂದ ಪುಸ್ತಕ ಬಿಡುಗಡೆಯಾಗಿದೆ.
ಓದುಗರನ್ನು ಓದಿಸಿಕೊಂಡು ಹೊಗುವಂತ ಬರಹ ಇವರದ್ದು. ಓದಲು , ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು. ಸರಳವಾದ ಪದಗಳ ಬಳಕೆ ಮಾಡಿದ್ದಾರೆ.  ಒಟ್ಟಿನಲ್ಲಿ ಭಾರತದಲ್ಲಿ ಲೈಂಗಿಕತೆಗಳಿಗಿರುವ , ಮೌಢ್ಯತೆಗಳು, ನಂಬಿಕೆಗಳು ಹಾಗೂ ಇತಿಹಾಸವನ್ನು ಹೇಳಿದ್ದಾರೆ.

ಹಳ್ಳಿಗಳಲ್ಲಿ  ಗುಟ್ಟಾಗಿ ನಡೆಯುವ ಲೈಂಗಿಕತೆ ಚರ್ಚೆಗಳ ಬಗ್ಗೆ ಹೇಳಿದ್ದಾರೆ ಅವುಗಳನ್ನು ಕೇಳಿದರೆ , ಕಾಮಿಡಿಗಳನ್ನು ಇಷ್ಟೊಂದು ಸಿರೀಯಸ್ ತೊಗೊಳುತ್ತಾರ  ಎಂಬ ಪ್ರಶ್ನೆಗಳು ಮೂಡುತ್ತವೆ. 
ಹಳ್ಳಿಗಳಲ್ಲಿ ಹೀಗೆ ಮಾತಾಡುತ್ತಾ "ನಿನ್ನ ಮರ್ಮಾಂಗದ ಸುತ್ತ ಕಳ್ಳಿ ಹಾಲನ್ನು ಸವರಿಬಿಡು , ಲೈಂಗಿಕ ಅಂಗ ಗಟ್ಟಿಯಾಗುವುದರ ಜೊತೆಗೆ ದಿರ್ಘವಾಗಿ ಸಂಭೊಗಿಸುವ ಶಕ್ತಿ ಬರುತ್ತೆ" ಎಂದು ಹೇಳಿದನ್ನು ಕೇಳಿ ಹಾಗೇ ಮಾಡಿ, ಆ ಜಾಗವೆಲ್ಲ ಊದುಕೊಂಡಿಹೊಗಿತಂತೆ . ಹೀಗೆ ಹಲವಾರು ಕಟ್ಟುಕತೆಗಳು, ಹಾಸ್ಯರ್ಥದ ಮಾತುಗಳಿವೆ. ಇಂತಹ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ' ಆಲಂಪುರ'  ಎಂಬಲ್ಲಿ ಇವತ್ತಿಗೂ ಯೋನಿ ಪೂಜೆ ಮಾಡುವುದರ ಬಗ್ಗೆ ತಿಳಿಸಿದ್ದಾರೆ. ಅಲ್ಲಿನ ಜನರ ನಂಬಿಕೆ ಯೊನಿಪೂಜೆ ಮಾಡಿದ್ರೆ ಮಕ್ಕಳಾಗುತ್ತೆ ಅಂತಾ .
ನಮ್ಮ ಭಾರತೀಯರು ಲೈಂಗಿಕತೆ ವಿಷಯ ಬಂದರೆ ವೈದ್ಯರ  ಬಳಿ ಹೋಗುವವರಿಗಿಂತ ತಾಂತ್ರಿಕರ ಬಳಿ ಹೋಗುತ್ತಾರೆ. 

ಈ ಪುಸ್ತಕ ಓದಿದದರಿಂದ ಗೊತ್ತಾಗಿದ್ದು ಪಾಲಿಪುತ್ರದಲ್ಲಿ, ಬನರಾಸ್ಸಿನಲ್ಲಿ ವೆಶ್ಯೆಗೃಹಗಳಿದ್ದವೆಂದು . ಲೈಂಗಿಕತೆಯನ್ನು ಸಮಾಜವು ನಿಗೂಢವಾಗಿ ಇರಿಸಿದೆ. ಅದನ್ನು ಈ ಪುಸ್ತಕ ಮುಕ್ತವಾಗಿ ತೆರೆದಿಟ್ಟಿದೆ. ಇದರಲ್ಲಿ ವಾತ್ಸಾಯಾನ ಕಾಮಸೂತ್ರ , ಕೊಕ್ಕನ ರತಿ ರಹಸ್ಯ , ರತಿ ಸೂತ್ರ, ಮನುಸ್ಮೃತಿ , ಕೌಟಿಲ್ಯನ, ಇವರೆಲ್ಲರ ಅಂಶಗಳನ್ನು ಒಳಗೊಂಡಿದೆ. 
ಮುಂಬೈನ ರೆಡ್ ಲೈಟ್ ಎರಿಯಾ ಆದ ಕಾಮಾಟಿಪುರದ ಬಗ್ಗೆಯು ವಿವರಣೆಯನ್ನು ಕೊಟ್ಟಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಒತಿಗಾಗಿ ಕೆಲಸಮಾಡುತ್ತಿರುವ ಕಾರ್ತಿಲಾಲ್ ಭೋಲಾ ಅವರ ಪ್ರಕಾರ , ಭಾರತದಲ್ಲಿ ಸರಿಸುಮಾರು 23,85,000 ವೇಶ್ಯೆಯರಿದ್ದಾರೆ. 2,75,000 ವೇಶ್ಯೆಗೃಹಗಳು ಮತ್ತು 1100 ರೆಡ್ ಲೈಟ್ ಎರಿಯಾಗಳಿವೆ .
ಲೈಂಗಿಕ ಚಟುವಟಿಕೆಯನ್ನು ವೃತ್ತಿಯೆಂದು ಪರಿಗಣಿಸದ ವೇಳೆಯಲ್ಲಿ, ವೇಶ್ಯರು ತುಂಬಾ ನೋವನ್ನು ಅನುಭವಿಸಿದ್ದಾರೆ. ಅವರಿಗೆ ಸಿಗುವ ಅಲ್ಪಸ್ವಲ್ಪ ಹಣದಲ್ಲಿ, ಘರವಾಲಿಗಳಿಗೆ ಕೊಡಬೇಕು, ಪೋಲಿಸರಿಗೆ ಕೊಡಬೇಕಿತ್ತು, ಪೋಲಿಸ್ ದಾಳಿ ಮಾಡಿದರೆ ಲಾಯರ್ ಗೆ ಹಣ ಪಾಲಾಗುತಿತ್ತು . ಹೀಗಾಗಿ ಲೈಂಗಿಕ ಕಾರ್ಯಕರ್ತೆಯರು ಸೇರಿ ಸಭೆ ಸೇರಿದರು ಚರ್ಚೆ ಮಾಡಿದ್ದರು. ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ನನಗೆ ಸರಿ ಅನಿಸಿದೆ. ಅದು ಸಹ ಒಂದು ವೃತ್ತಿ‌ಯೆಂದು ನೋಡಬೇಕು.
ಗಾಂಧಿಯನ್ನು ನಾನು ತಿಳಿದುಕೊಂಡಿದ್ದು ನಮ್ಮ ಶಿಕ್ಷಕರು ಹೆಳಿದ್ದು ಮಾತ್ರ. ಆದರೆ  ಗಾಂಧಿಜಿಯವರ ಲೈಂಗಿಕತೆಯ ವಿಚಾರಗಳು ತಿಳಿದುಕೊಂಡೆ. ತಮ್ಮ 77 ನೇ ವಯಸ್ಸಿನಲ್ಲಿ ಗಾಂಧಿಜಿ ತಮ್ಮ ಮೊಮ್ಮಗಳೊಡನೆ ಬೆತ್ತಲೆ ಮಲಗಿದ್ದರು ಎಂದು ಓದಿದ ನನಗೆ ಆಶ್ಚರ್ಯವಾಗಿತು. 37  ನೇ ವಯಸ್ಸಿಗೆ ಬ್ರಹ್ಮಚರ್ಯವನ್ನು ಆಚರಿಸಿದ ಗಾಂಧಿಗೆ 77  ನೇ ವಯಸ್ಸಿಗೆ ಅನುಮಾನ ಬಂದಿದ್ದು ಏಕೆ..?  ಎಂಬುದು ಗೊತ್ತಾಗಲಿಲ್ಲ‌ .
" ಗಟ್ಟಿನಾಣ್ಯ - ಮೃದು ದೇಹ" ಅದ್ಯಾಯವು ನನಗೆ ನಿಜಕ್ಕೂ ಬೇಸರವಾಯಿತು ಅಭಿವೃದ್ಧಿಯ ಹೆಸರಿನಲ್ಲಿ ಅರ್ಥ ಮಂತ್ರಿಯಾದ ಮನಮೊಹನ್ ಸಿಂಗ್ ಅವರು ಉದಾರೀಕರಣ ಜಾರಿಗೆ ತರುವುದರ ಮೂಲಕ ಪರೋಕ್ಷವಾಗಿ  ಸೆಕ್ಸ್ ಟೂರಿಸಂ ಗೆ ಒಪ್ಪಿಗೆ ನೀಡಿದರು. ಇದರಲ್ಲಿ ತುಂಬಾ ಜನರು ಬಲಿಯಾಗಿದ್ದಾರೆ, ಮಕ್ಕಳು ಮಹಿಳೆಯರು, ಬೇರೆ ಬೇರೆ, ಸಿಫಿಲಸ್, ಗೊನೆರಿಯಾ , ಏಡ್ಸ್ ರೋಗಗಳಿಗೆ ತುತ್ತಾಗಿದ್ದಾರೆ.

 ಸಲಿಂಗರತಿ ಬಗ್ಗೆ ನೋಡಬಹುದು. ವಿರುದ್ಧ ಲಿಂಗಗಳೊಡನೆ ಇರುವದು ಸರಿ ಎಂದು ಒಪ್ಪಿಕೊಳ್ಳುವ ಹಾಗೆ ಸಲಿಂಗರತಿಯನ್ನು ಒಪ್ಪಿಕೊಳ್ಳಬೇಕು. 
" ಹಾಯ್ ಸೆಕ್ಸಿ" ಅದ್ಯಾಯನ್ನು ಓದುತ್ತಿರುವಾಗ ಇದೆನು ಹೀಗೆ ಹೇಳಿದ್ದಾರೆ. ಈ ತರ ಸಾಂಗ್ ಇದೇನಾ ಅಂತಾ ಯುಟ್ಯುನಲ್ಲಿ ನೊಡ್ದೆ . ಹಾಡು ಇತ್ತು ನೋಡಿ ನಗುಬಂತು.
 ಖೊಜಾಗಳ ಬಗ್ಗೆಯು ಇದರಲ್ಲಿ ವಿವರಿಸಿದ್ದಾರೆ. ಇದರಲ್ಲಿ ಅಮಾಯಕರನ್ನು ಬಳಸಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.
" ನಿಷೇಧ " ಅಧ್ಯಾಯದಲ್ಲಿ ಕೆಲವೊಂದು ನಿಷೇಧಗಳಿವೆ.
 ಅಣ್ಣ ತಂಗಿಯನ್ನು ನೋಡಬಾರದರಂತೆ . ಎಕೆಂದರೆ  ಅವರಿಬ್ಬರು ಲೈಂಗಿಕ ಆಕರ್ಷಣೆ‌ಗೆ ಒಳಗಾಗಬಹುದೆಂಬ ನಂಬಿಕೆ  ಆಸ್ಟ್ರೇಲಿಯಾದ ಲೆಪರ್ಸ್ ದ್ವೀಪದಲ್ಲಿದೆ. 
ಬಾರೋಗೋಸ್ ಎಂಬ ಆಫ್ರಿಕಾದ ಬುಡಕಟ್ಟಿನಲ್ಲಿ ಮೈದುನ ಅತ್ತಿಗೆಯನ್ನು ನೊಡಬಾರದಂತೆ.
ಸೊಲೊಮನ್ ಬುಡಕಟ್ಟಿನಲ್ಲಿ ಅಳಿಯನು ಅತ್ತೆಯ ಮುಖ ನೋಡಬಾರದು. ಕಾರಣ ಇಷ್ಟೇ , ಅತ್ತೆಯಲ್ಲಿ ಹೆಂಡತಿಯ ಪ್ರತಿರೂಪವನ್ನು ಕಾಣುತ್ತೆ , ಹೆಂಡತಿಯನ್ನೆ ಹೋಲುವ ಅತ್ತೆಯ ಬಗೆಗೆ ಭಾವನಾತ್ಮಕ ಸಂಬಂಧ ಹೊಂದುವ ಸಾಧ್ಯತೆಗಳಿರುತ್ತೆ.

ಒಟ್ಟಿನಲ್ಲಿ ಈ ನಿಷೇಧಗಳಿರುವುದು ಎಲ್ಲಿ ಇವರುಗಳ ಮಧ್ಯೆ ಲೈಂಗಿಕ ಸಂಬಂಧ ಏರ್ಪಡುವ ಸಾಧ್ಯತೆಗಳಿವೆ ಅದನ್ನು ನಿಯಂತ್ರಿಸಲು ಈ ಮೇಲಿನ ನಿಷೇಧಗಳು.
"ಸೈಬರ್ ಸೆಕ್ಸ್" ಈ ಪದ ನಂಗೆ ಅಪರಿಚಿತ . ಓದಿದ್ದು ಮೊದಲು ಈ ಪುಸ್ತಕದಲ್ಲಿ. 
ತುಂಬಾ ಹೊಸ ಹೊಸ ವಿಚಾರಗಳನ್ನು ಮತ್ತೆ ಮಾಹಿತಿಯನ್ನು ತಿಳಿದುಕೊಂಡೆ . ಪುಸ್ತಕ ಚನ್ನಾಗಿದೆ , ಇಂತಹ ಪುಸ್ತಕ ರಚಿಸಿದ ಲಕ್ಷೀಪತಿ ಸರ್ ಗೆ ಧನ್ಯವಾದಗಳು. 
  
- ಪೂಜಾ ಎಸ್, ಕಲಬುರಗಿ.

ಸಾಪ್ಟ್ ವೇರ್ ಇಲ್ಲ (ಕವಿತೆ) - ಶ್ರೀಮತಿ ವಿಜಯ ಭರಮಶೆಟ್ರು.

ಬೆಚ್ಚನೆಯ ಹೃದಯದಲಿ
ನನ್ನೆಲ್ಲ ಆಸೆಗಳ ಬಚ್ಚಿಟ್ಟು
ಅವುಗಳಿಗಾಗಿ ಹುಚ್ಚಿಯಂತೆ
ಹರಿದಾಡಿ, ತಾರಾಡಿ, ಬಾರಾಡಿ
ಅಚ್ಚುಕಟ್ಟಾಗಿ ನೀರೆರೆದು
ಜೀವ ಪಣಕಿಟ್ಟು ಬೆಳೆಸಿದೆ
ಬಂದ ಫಲ ನಿರಾಶೆ
ಪಾಪಾಸುಕಳ್ಳಿ ಬೇಲಿಯಂತೆ
ಹರಡಿ ಹಾವು ಹೆಗ್ಗಣಗಳ ಪಾಲಾಯಿತು
ಅವುಗಳನೆಲ್ಲ ಸವರಿ ಕತ್ತರಿಸಿ
ಹೊಸ ಹೂಗಳ ಬೆಳೆಯಲಾರೆ
ಸೊಂಟ ಬಾಗಿದೆ ಮನಸ್ಸು ಕದಡಿದೆ
ಬೇವಿನ ಬೀಜಕ್ಕೆ ಬೆಲ್ಲ
ಹಾಲು ಸುರಿದು ಬೆಳೆಸಿದಂತಾಯಿತು
ಮೋಸಹೋದೆ ಈ ಬಾಳಿನಲಿ
ನನ್ನದೆಂಬ ಮೋಹ ಆವರಿಸಿತ್ತು
ಕಣ್ಣು ತೆರೆಯಿತು
ನೋಟ ಆಟ ನಿಚ್ಚಳಾಯಿತು
ಎಷ್ಟಾದರೂ ಇಷ್ಟೇ
ಇಂದಿನ ಬದುಕೇ
ಮುಂಬರುವ ದಿನಗಳಿಗೆ ಡಿಟ್ಟೋ
ಡಿಲೀಟ್ ಮಾಡಲು ಬರದು
ಎಲ್ಲ ವ್ಯ್ವವಹಾರಗಳು cut & paste
ಪ್ರೀತಿ ವಿಶ್ವಾಸಗಳು
ಅತಃಕರಣ ನಂಬಿಕೆಗಳು
ಡಿಲೀಟ್ ಆಗಿಬಿಟ್ಟಿವೆ
Install ಮಾಡಲು ಬರದು
ಆ software ರೇ ಈಗ ಇಲ್ಲ.
- ಶ್ರೀಮತಿ ವಿಜಯ ಭರಮಶೆಟ್ರು, ದಾವಣಗೆರೆ.

ಒಲವೇ (ಕವಿತೆ) - ಭಾಗ್ಯ ಎಲ್.ಆರ್.

ಒಲವೇ ನೀನು ಇಲ್ಲದೇ ಏನಿದೆ 
ಮನಸ್ಸೆಲ್ಲ ನಿನ್ನಲ್ಲೇ ನೆಲೆಯಾಗಿದೆ;
ಹಗಲಲ್ಲು ನಿನದೇ ಧ್ಯಾನ 
ಇರುಳಲ್ಲು ನಿನ್ನದೇ ಧ್ಯಾನ.

ನನ್ನ ಉಸಿರ ಕಣ ಕಣದಲ್ಲು ನೀನೇ ತುಂಬಿರುವೆ 
ನಿನ್ನ ದೂರದ ವಿರಹದ ನೋವು 
ನನ್ನ ಅನವರತ ಸುಡುತ್ತಿದೆ;
ನಿನ್ನ ನೋಡುವ ಹಂಬಲ 
ಸದಾ ನನ್ನ ಕಾಡುತ್ತಿದೆ.

ನೀ ನನ್ನ ಹೃದಯದಲ್ಲಿ 
ಭಿತ್ತಿದ ಒಲವಿನ ಬೀಜ 
ಅಂಕುರವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ;
ನನ್ನ ಉಸಿರ ಕೊನೆಯವರೆಗೂ 
ಈ ನಮ್ಮ ಒಲವು ಶಾಶ್ವತ.

ಬಂದು ಒಮ್ಮೆ ನೀ ಸಮ್ಮತಿಸು 
ನಮ್ಮ ಒಲವಿನ ಔತಣಕ್ಕೆ ನಾ ನಿನ್ನ 
ಜೊತೆ ಇರುವೆ ನನ್ನ ಉಸಿರ ಕೊನೆಯವರೆಗೆ ನನ್ನ ಒಲವೇ.

- ಭಾಗ್ಯ ಎಲ್.ಆರ್., ಶಿವಮೊಗ್ಗ.

ಭಾರತೀಯರಾಗಿ, ನಮ್ಮ ಕರ್ತವ್ಯ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ನಾವೀಗ 21ನೇ ಶತಮಾನದಲ್ಲಿ ಇದ್ದೇವೆ. ಪ್ರಪಂಚ ತುಂಬಾ ಮುಂದುವರೆದಿದೆ. ಅಂದುಕೊಂಡದ್ದನ್ನೆಲ್ಲ ಸಾಧಿಸುವ ಕಲೆಯಲ್ಲಿ ಮನುಷ್ಯ ನಿಪುಣನಾಗಿದ್ದಾನೆ. ಅದೇ ರೀತಿ ಪ್ರಪಂಚದ ಭೂಪಟದಲ್ಲಿ ಏಷ್ಯಾ ಖಂಡದಲ್ಲಿ ಬರುವ ನಮ್ಮ ಭಾರತ ದೇಶವು ಮುಂದುವರಿಯುತ್ತಿರುವ ರಾಷ್ಟ್ರಗಳ  ದೇಶಗಳ ಸಾಲಿನಲ್ಲಿದೆ. ಪುರಾತನ ಕಾಲದಿಂದಲೂ ಹಲವು ಧರ್ಮಗಳ ನೆಲೆಯಾಗಿರುವ ಭಾರತದಲ್ಲಿ ಪ್ರತಿಯೊಂದು ಧರ್ಮಕ್ಕೂ ತನ್ನದೇ ಆದ ಚೌಕಟ್ಟುಗಳಿವೆ. ಅದೇ ರೀತಿ ಹಿಂದೂ ಧರ್ಮವೂ ಸಹ ಹಲವು ವೈವಿಧ್ಯತೆಗಳಿಂದ ಕೂಡಿದೆ. ವೇದಗಳ ತವರೂರಾದ ಭಾರತವು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ನೆಲೆಗಟ್ಟಿನಲ್ಲಿಯೇ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಹಾಗೆಯೇ ವೈಜ್ಞಾನಿಕವಾಗಿಯೂ ಖಗೋಳ ಜ್ಞಾನದ ಪರಿಚಯ ಪುರಾತನ ಕಾಲದಿಂದಲೇ ನಮಗೆ ತಿಳಿಯುತ್ತಾ ಬಂದಿದೆ.
          ಆರ್ಯಭಟ, ಬ್ರಹ್ಮಗುಪ್ತ, ಸುಶ್ರುತ, ಇತ್ಯಾದಿಯಾಗಿ ಅನೇಕ ವೈಜ್ಞಾನಿಕ ಆವಿಷ್ಕಾರಗಳನ್ನು ನಮಗೆ ತಿಳಿಸಿದವರನ್ನು ಸ್ಮರಿಸುವುದು ಅಷ್ಟೇ ಸೂಕ್ತ. ಹಂತ ಹಂತವಾಗಿ ವಿಜ್ಞಾನ ಬೆಳೆದಂತೆಲ್ಲಾ ವೈಜ್ಞಾನಿಕ ಆವಿಷ್ಕಾರಗಳು ಹೆಚ್ಚಾಗಿ ಪ್ರತಿಯೊಂದು ಕೆಲಸವನ್ನು ನಾವೀಗ ಯಂತ್ರದ ಮೂಲಕವಾಗಿ ಮಾಡಿಕೊಳ್ಳುತ್ತಿದ್ದೇವೆ. ಮೊದಲಿದ್ದ ಯಾವುದೇ ಶ್ರಮದದಾಯಕ ಕೆಲಸಗಳನ್ನು ಕ್ಷಣಮಾತ್ರದಲ್ಲಿ ಯಂತ್ರಗಳು ಪೂರ್ಣಗೊಳಿಸುತ್ತವೆ. ಆ ಒಂದು ಸಾಧನೆ ಸಾಧಿಸುವ ಮೊದಲು ಒಂದು ಕ್ಷಣ ಹಿಂದಿರುಗಿ ನೋಡಿದರೆ ಆ ಸಾಧನೆಯ ಹಾದಿಯಲ್ಲಿಯ ಕಲ್ಲು ಮುಳ್ಳುಗಳ ಹಾಸಿಗೆ ಮೇಲೆ ನಡೆದು ಸಾಧಿಸಿದ ಸಾಧಕರ ನೆನಪು ನಮ್ಮ ಕಣ್ಮುಂದೆ ಬಂದು ಹೋಗುತ್ತದೆಯಲ್ಲವೇ....? ಏಕೆಂದರೆ ಸಿಂಧೂ ನಾಗರಿಕತೆಯಿಂದ ಆರಂಭವಾದ ನಮ್ಮ ಭಾರತೀಯ ಇತಿಹಾಸವನ್ನು ಮಹಾನ್ ಸಾಧಕರ ಸಾಧನೆಗಳು ಕಣ್ತುಂಬಿಕೊಂಡು ಅವರನ್ನು ಈ 21 ನೇ ಶತಮಾನದಲ್ಲೂ ಕಾಣುತ್ತಿದ್ದೇವೆ. ಮೌರ್ಯ ಚಕ್ರವರ್ತಿ ಅಶೋಕ, ಗುಪ್ತರ ಸಮುದ್ರಗುಪ್ತ, ಗೌತಮಿಪುತ್ರ ಶಾತಕರ್ಣಿ, ಶ್ರೀ ಕೃಷ್ಣದೇವರಾಯ, ಮಯೂರವರ್ಮ, ರಾಜರಾಜ ಚೋಳ, ಅಕ್ಬರ್, ಶಹಜಾನ್ ಹೀಗೆ ಭಾರತದ ಇತಿಹಾಸದುದ್ದಕ್ಕೂ ರಾಜ ಮಹಾರಾಜರ ಆಳ್ವಿಕೆಯ ಗತವೈಭವದ ಸಾಧನೆಯನ್ನು ಮೆಲಕು ಹಾಕುತ್ತಿರುವುದು ಅವರು ಕೊಡುಗೆಯಾಗಿ ನೀಡಿದ ವಾಸ್ತುಶಿಲ್ಪಗಳು, ಶಾಸನಗಳು, ಭಿತ್ತಿಪತ್ರಗಳನ್ನು ಇಂದಿಗೂ ನಾವು ನೋಡುತ್ತಾ ಅವರೆಲ್ಲರೂ ಗತಿಸಿ ಶತಮಾನಗಳೇ ಕಳೆದಿದ್ದರೂ ಅವರ ಕೊಡುಗೆಗಳು ಅವರನ್ನು ಜೀವಂತವಾಗಿರಿಸಿವೆ.
        ಈ ರಾಜಮಹಾರಾಜರ ಆಳ್ವಿಕೆಯ ಮಧ್ಯದಲ್ಲಿ ಪಾಶ್ಚಿಮಾತ್ಯ  ಐರೋಪ್ಯರು ನಮ್ಮ ದೇಶಕ್ಕೆ ವ್ಯಾಪಾರಕ್ಕಾಗಿ ಆಗಮಿಸಿ, ಕಾಲಕ್ರಮೇಣ ರಾಜಕೀಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡಿ, ನಮ್ಮ ರಾಜರುಗಳನ್ನು ಪರಾಭವ ಗೊಳಿಸುತ್ತಾ ತಮ್ಮ ರಾಜಕೀಯ ಚದುರಂಗದಾಟದಲ್ಲಿ ನಮ್ಮ ರಾಜರುಗಳನ್ನು ದಾಳವಾಗಿ ಮಾಡಿಕೊಂಡು ಶತಶತಮಾನಗಳ ಕಾಲ ನಮ್ಮ ರಾಷ್ಟ್ರದ ಸಂಪತ್ತು ಲೂಟಿ ಮಾಡಿ ನಮ್ಮನ್ನೇ ದಾಸ್ಯದ ಕೂಪಕ್ಕೆ ತಳ್ಳಿ ಆಳ್ವಿಕೆ ನಡೆಸಿದರು. ನಮ್ಮ ರಾಷ್ಟ್ರಕ್ಕಾಗಿ, ನಮ್ಮ ನೆಲಕ್ಕಾಗಿ, ನಮ್ಮ ರಾಷ್ಟ್ರದ ಸಾವಿರಾರು ದೇಶಭಕ್ತರ ಪ್ರಾಣತ್ಯಾಗ, ಬಲಿದಾನ ಕೊಡುವಂತಹ ಸ್ಥಿತಿ ನಿರ್ಮಾಣವಾಯಿತು. ಈ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಕ್ಷಣದ ಶ್ರಮದಾಯಕ ಜೀವನದಿಂದಾಗಿ ಇಂದು ನಾವು ನೆಮ್ಮದಿಯ ಜೀವನ ನಡೆಸುತ್ತಿರುವುದು ಅಷ್ಟೇ ಸತ್ಯ.
      ಸ್ವಾತಂತ್ರ್ಯ ಹೋರಾಟಗಾರರ ಶ್ರಮದ ಫಲದಿಂದಾಗಿ ಭಾರತ ತನ್ನ ಪ್ರಜೆಗಳಿಗೆ ಪ್ರಜಾಪ್ರಭುತ್ವದಂತಹ *ನಮ್ಮನ್ನು ನಾವೇ ಆಳಿಕೊಳ್ಳುವಂತಹ ಸರ್ಕಾರದ* ಕೊಡುಗೆ ನೀಡಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕ್ರಾಂತಿಕಾರರು, ಸ್ವಾತಂತ್ರ ಹೋರಾಟಗಾರರನ್ನು ಸ್ಮರಿಸುತ್ತ, ಪ್ರಜಾಪ್ರಭುತ್ವದ ಸವಿಯನ್ನ ಉಣ್ಣುತ್ತಿದ್ದೇವೆ. ರಾಷ್ಟ್ರದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರನ್ನು ಒಳಗೊಂಡು, ರಾಷ್ಟ್ರದ ಪ್ರಥಮ ಆಡಳಿತದ ಚುಕ್ಕಾಣಿ ಹಿಡಿದ ಪ್ರತಿಯೊಬ್ಬ ಪ್ರಧಾನಮಂತ್ರಿ ತನ್ನದೇ ಕೊಡುಗೆ ನೀಡುತ್ತಾ ದೇಶವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುತ್ತಾ ಹಲವು ಸಾಧನೆಗಳಲ್ಲಿ ಜಗತ್ತಿನ ಭೂಪಟದಲ್ಲಿ ಭಾರತ ರಾರಾಜಿಸುವಂತೆ ಮಾಡಿದ್ದಾರೆ. ಮುಂದುವರೆಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಸಾಧನೆಯ ಹೆಜ್ಜೆ ಹಾಕುತ್ತಿರುವುದು ಹೆಮ್ಮೆಯ ವಿಷಯ.
         ಇತ್ತೀಚಿನ ದಿನಮಾನಗಳಲ್ಲಿ ರಾಜಕೀಯ ಜೀವನ ಚಕ್ರದಲ್ಲಿ ಸ್ವಾರ್ಥಪರತೆ ತುಂಬಿ, ಜಾತಿಯತೆಯ ನೆಲೆಗಟ್ಟಿನಲ್ಲಿ ಹಲವಾರು ಅಹಿತಕರ ಘಟನೆಗಳು ಸಂಭವಿಸುತ್ತಾ ಕೋಮುಗಲಭೆಗಳು, ಭಯೋತ್ಪಾದನೆ, ದೇಶಾದ್ಯಂತ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯ. ವೈಜ್ಞಾನಿಕ ಆವಿಷ್ಕಾರಗಳಿಂದ ಬಹುದೂರದ ಸ್ಥಳವನ್ನು ತಲುಪಲು ಸಹಾಯಕವಾಗುವಂತೆ ವೈವಿಧ್ಯಮಯವಾದ ಸಾರಿಗೆ ಸೌಲಭ್ಯಗಳು ಅನುಕೂಲ ಕಲ್ಪಿಸಿವೆ. ಅದರಲ್ಲೂ ವಾಯು ಸಾರಿಗೆಯಿಂದ ದೇಶವಿದೇಶಗಳ ಸಂಚಾರ ಅತಿ ಸುಲಭ ಮಾರ್ಗವಾಗಿದೆ. ಇದರಿಂದಾಗಿ ಪ್ರಪಂಚದ ವಿವಿಧ ಸಂಗತಿಗಳ ಪರಿಚಯಕ್ಕೆ ಅನುಕೂಲವಾಗಿದೆ. ಸಂಪರ್ಕ ಮಾಧ್ಯಮದ ಅತ್ಯಮೂಲ್ಯವಾದ ಸೌಕರ್ಯ ದೊರೆತಿದ್ದು ನಮಗೆ ವರವೂ ಹೌದು. ಪತ್ರಿಕೆಗಳು, ದೂರವಾಣಿ, ಅಂತರ್ಜಾಲದ ಸೌಲಭ್ಯದಿಂದಾಗಿ ಕುಳಿತಲ್ಲಿಯೇ ಪ್ರಪಂಚದ ಯಾವುದೇ ದೇಶದಲ್ಲಿ ನಡೆದ ಘಟನೆಗಳನ್ನು ನೋಡುವ ಅವಕಾಶ ವೈಜ್ಞಾನಿಕ ಆವಿಷ್ಕಾರಗಳಿಂದ ನಮಗೆ ದೊರೆತಿದೆ. ವೇದಕಾಲ ನಾಗರಿಕತೆಯ ಪವಿತ್ರ ಗ್ರಂಥಗಳಾದ ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಸುಖಜೀವನ ನಡೆಸುತ್ತಾ ಬಂದಿರುವ ಅದ್ಬುತ ಅನ್ಯೂನ್ಯ ಸಂಬಂಧಗಳ ರಾಷ್ಟ್ರ ನಮ್ಮ ಭಾರತ. ಕಾಲಚಕ್ರದಲ್ಲಿ ಪಾಶ್ಚಿಮಾತ್ಯರ ಆಗಮನದಿಂದಾಗಿ ವಿವಿಧ ಧರ್ಮಗಳನ್ನು ಸ್ವೀಕರಿಸುವ  ಔದಾರ್ಯತೆ ಭಾರತೀಯರಲ್ಲಿ ಅನಿವಾರ್ಯವಾಗಿ ಬೆಳೆಯಿತು. ಜೈನ ಧರ್ಮ, ಬೌದ್ಧ ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಹೀಗೆ ಹಲವು ಧರ್ಮಗಳ ಧಾರ್ಮಿಕ ಮನೋಭಾವನೆಗಳೊಂದಿಗೆ ಬೆರೆತ ಎಲ್ಲಾ ಭಾರತೀಯರು ಏಕತೆಯಿಂದ ರಾಷ್ಟ್ರೀಯ ಭಾವೈಕ್ಯತೆಗೆ ಮುನ್ನುಡಿಯಾಗುವಂತೆ ನಮ್ಮ ರಾಷ್ಟ್ರದ ಸಂವಿಧಾನದಲ್ಲಿ *ಜಾತ್ಯಾತೀತ ಮತ್ತು ಸಮಾಜವಾದಿ*) ಎಂಬ ಅಂಶಗಳನ್ನು ಸೇರ್ಪಡೆಗೊಳಿಸಿ *ಸರ್ವರೂ ಸಮಾನರು* ಎಂಬ ಭಾವನೆ ಬೆಳೆಸಿದೆ. ಸರ್ವಧರ್ಮೀಯರು ನೆಲೆಸಿರುವ ಈ ಭಾರತ ಎಣಿಕೆ ಇಲ್ಲದಷ್ಟು ಅಗಾಧವಾದ ಕೊಡುಗೆಯನ್ನು ನಮಗೆಲ್ಲ ಕೊಟ್ಟಿದೆ ಹಾಗಾದರೆ.......... ನಮ್ಮ ದೇಶಕ್ಕಾಗಿ ನಾವು ಏನು ಕೊಟ್ಟಿದ್ದೇವೆ? ಎಂದು ಒಂದು ಕ್ಷಣ ಎಲ್ಲರೂ ವಿಚಾರ ಮಾಡಬೇಕಾದ ಸಂಗತಿ. ಏಕೆಂದರೆ ಮೊದಲಿನಂತೆ ಮೌಲ್ಯದ ಜೀವನ ನಶಿಸಿ ಎಲ್ಲಿ ನೋಡಿದರಲ್ಲಿ ಕೊಲೆ, ದರೋಡೆ, ಅಂಹಿಂಸಾತ್ಮಕ ಘಟನೆಗಳು ದಿನನಿತ್ಯ ನಡೆಯುತ್ತಿವೆ. ಅವುಗಳನ್ನು ತಡೆಗಟ್ಟುವ ಪ್ರಯತ್ನದಲ್ಲಿ ಎಲ್ಲರೂ ಭಾಗಿಯಾಗಬೇಕು. ಕೋಮುಗಲಭೆಯಿಂದಾಗಿ ಜಾತಿ ಜಾತಿಗಳ ನಡುವೆ ತಾರತಮ್ಯ ಹೆಚ್ಚಾಗಿ ಅಖಂಡ ದೇಶದ ವಿಘಟನೆಗೆ ಕಾರಣವಾಗುವಂತಹ ದುಷ್ಕೃತ್ಯಗಳು ನಡೆಯುತ್ತಿವೆ. ಇದು ನಿಲ್ಲಬೇಕಾದರೆ ವೈಯಕ್ತಿಕ ಸುಖಕ್ಕಿಂತ ದೇಶದ ಹಿತರಕ್ಷಣೆ ದೊಡ್ಡದು ಎಂಬ ಅರಿವು ಮೂಡಿಸುವ ಪ್ರಯತ್ನದಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ನಮ್ಮದು ಜಾತ್ಯಾತೀತ ರಾಷ್ಟ್ರ ಎಂಬ ವಾಸ್ತವಿಕ ಸತ್ಯವನ್ನು ಮನದಟ್ಟು ಮಾಡಿಕೊಂಡು ಎಲ್ಲಾ ಧರ್ಮೀಯರು ಅನ್ಯೂನ್ಯತೆಯಿಂದ ಇದ್ದಾಗ ಮಾತ್ರ ರಾಷ್ಟ್ರದ ರಕ್ಷಣೆ ಸಾಧ್ಯ. ಇದಕ್ಕೆ ಸಹಕರಿಸುವುದೇ ಭಾರತದ ಪ್ರತಿಯೊಬ್ಬ ಪ್ರಜೆ ದೇಶಕ್ಕೆ ಸಲ್ಲಿಸುವ ಕೊಡುಗೆ. ಪ್ರಾದೇಶಿಕತೆ, ಭಾಷಾಭಿಮಾನ ಇರಬೇಕು ಅದರ ಜೊತೆಗೆ ಉಳಿದ ರಾಜ್ಯ, ರಾಷ್ಟ್ರ, ಭಾಷೆಗಳನ್ನು ಗೌರವಿಸುವುದರಿಂದ ನಮ್ಮ ರಾಷ್ಟ್ರದ ಸುರಕ್ಷತೆ ಸಾಧ್ಯ. ಸಂಪರ್ಕ ಮಾಧ್ಯಮಗಳನ್ನು ನಮ್ಮ ಉಪಯುಕ್ತತೆಗೆ ಅನುಗುಣವಾಗಿ ಧನಾತ್ಮಕ ಚಿಂತನೆಗೆ ತಕ್ಕಂತೆ ಬಳಸಿಕೊಂಡರೆ ನಮಗೆ ವರವಾಗಿ ಪರಿಣಮಿಸುತ್ತದೆ. ದುರುಪಯೋಗ ಮಾಡಿಕೊಂಡರೆ ಅವುಗಳೇ ನಮಗೆ ಶಾಪವಾಗಿ ಕಾಡುತ್ತವೆ. ಆದ್ದರಿಂದ ಉತ್ತಮ ನಾಗರಿಕರಾದ ನಾವು ಸಂಪರ್ಕ ಮಾಧ್ಯಮಗಳ ದುರ್ಬಳಕೆಯಾಗದಂತೆ ಜಾಗೃತಿ ವಹಿಸಿ ಮಕ್ಕಳು ಆ ಮಾಧ್ಯಮಗಳಿಂದ ಹಾಳಾಗದಂತೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು.
         ಪುರಾತನ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗಾಗಿ ಲಘು ಶಿಕ್ಷೆಯ ಮೂಲಕ ಶಿಲೆಯಂತಿದ್ದ ಮಕ್ಕಳನ್ನು ಉತ್ತಮ ಶಿಕ್ಷಣ ನೀಡುವ ಮೂಲಕ ಸುಂದರ ಮೂರ್ತಿಯಾಗಿ ಮಾಡುವಲ್ಲಿ ಅನವರತ ಶ್ರಮಿಸುತ್ತಿದ್ದ *ಗುರು* ಅತ್ಯುತ್ತಮ ಗುಣಗಳಿಂದ ವೃತ್ತಿ ಶಿಕ್ಷಣದ ತರಬೇತಿಯ ಜೊತೆಗೆ ಸಮಾಜದಲ್ಲಿ ಆ ಮಗು ಪ್ರವೇಶ ಪಡೆಯುವಂತಹ ವ್ಯವಸ್ಥೆ ಇತ್ತು. ಆದರೆ ಆಧುನಿಕ ಶಿಕ್ಷಣ ಪದ್ಧತಿಯಲ್ಲಾದ ಅನೇಕ ಬದಲಾವಣೆಗಳಿಂದಾಗಿ ಮಕ್ಕಳ ತಪ್ಪಿಗೆ ಶಿಕ್ಷೆಯೇ ಇಲ್ಲದಂತಾಗಿದೆ. ಗುರುಗಳೇ ಶಿಷ್ಯನೆದರೂ ತಲೆತಗ್ಗಿಸುವಂತಹ ಹೀನ ಮಟ್ಟಕ್ಕೆ ವಿದ್ಯಾರ್ಥಿಗಳು ತೊಡಗುತ್ತಿರುವುದು ಸಮಾಜದ ಆತಂಕಕಾರಿ ಬೆಳವಣಿಗೆ ಎಂದರೆ ತಪ್ಪಾಗಲಾರದು. ಇದರ ಬಗ್ಗೆ ಪ್ರತಿಯೊಬ್ಬ ಪಾಲಕರು ಒಂದು ಕ್ಷಣ ವಿಚಾರ ಮಾಡಿದರೆ ಒಳಿತು ಎನಿಸುತ್ತದೆ. ಏಕೆಂದರೆ ಒಂದು ಮಗು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂಬ ಕನಸಿದ್ದರೆ ಸಾಲದು ಆ ಕನಸು ನನಸು ಮಾಡಲು ಆ ಮಗುವಿನ ಪ್ರತಿ ಹಂತದ ಬೆಳವಣಿಗೆಯಲ್ಲಿ ಮಾರ್ಗದರ್ಶಕರಾದ ಗುರುಗಳ ಬಗ್ಗೆ ಧನಾತ್ಮಕ ಭಾವನೆ ಇರಬೇಕು. ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ನೀಡುವ ಅಧಿಕಾರ ತಂದೆ ತಾಯಿಯವರಿಗೆ ಬಿಟ್ಟರೆ ಗುರುಗಳಿಗೆ. ಆ ರೀತಿಯ ಧನಾತ್ಮಕ ಆಲೋಚನೆಯೊಂದಿಗೆ ಪಾಲಕರು ಶಿಕ್ಷಕ ವೃಂದದ ಜೊತೆಗೆ ಸಹಕರಿಸಿದರೆ ತಪ್ಪು ಹೆಜ್ಜೆ ಇಡುತ್ತಿರುವ ಮಕ್ಕಳನ್ನು ಸರಿದಾರಿಗೆ ತರುವಲ್ಲಿ ಸಹಾಯಕವಾಗಬಹುದು.
        ಸ್ವಚ್ಛತೆಯ ಕೊರತೆಯಿಂದಾಗಿ ಹಲವು ರೋಗಗಳು ಸೃಷ್ಟಿಯಾಗಲು ಅವಕಾಶ ನೀಡದೆ ಸ್ವಚ್ಛತೆಯ ಬಗ್ಗೆ ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿ, *ಮನೆಗೆದ್ದು ಮಾರುಗೆಲ್ಲು* ಎನ್ನುವಂತೆ ಮೊದಲು ನಾವು ನಮ್ಮ ಊರಿನ ಸ್ವಚ್ಛತೆಯ ಕಡೆಗೆ ಪ್ರತಿಯೊಬ್ಬರು ಗಮನಹರಿಸಿದರೆ ಊರಿಂದ ನಾಡು, ನಾಡಿನಿಂದ ದೇಶ, ತನ್ನಿಂದ ತಾನೇ ಸ್ವಚ್ಛತೆಯ ಹಾದಿಯಲ್ಲಿ ಸಾಗಿ ಸ್ವಚ್ಛ ಭಾರತದ ಅಭಿಯಾನಕ್ಕೆ ಪಣತೊಟ್ಟಿರುವ ಪ್ರಧಾನಮಂತ್ರಿಗಳಾದ ಸನ್ಮಾನ್ಯ ನರೇಂದ್ರ ಮೋದಿಯವರ ಆಶಯದಂತೆ ಉತ್ತಮ ಪರಿಸರದಿಂದ ಕೂಡಿದ ಸ್ವಚ್ಛ ಭಾರತ ಎಂಬ ಹೆಗ್ಗಳಿಕೆಗೆ ಎಲ್ಲರೂ ಕೈಜೋಡಿಸಬೇಕು. ಪ್ರಜಾಪ್ರಭುತ್ವದ ಕನಸನ್ನು ಸಾಕಾರಗೊಳಿಸಲು ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು, ರಾಜನೀತಿ ನಿರ್ದೇಶಕ ತತ್ವಗಳನ್ನು ನೀಡಿದೆ. ಮೂಲಭೂತ ಹಕ್ಕುಗಳ ರಕ್ಷಣೆಗೆ ರಕ್ಷಣಾ ಕವಚದಂತೆ ಸಂವಿಧಾನಬದ್ಧ ಪರಿಹಾರದ ಹಕ್ಕಿದೆ. ಅದೇ ರೀತಿ ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಕರ್ತವ್ಯಗಳ ಜವಾಬ್ದಾರಿಯು ನಮ್ಮ ಮೇಲಿದೆ. ಆ ಕರ್ತವ್ಯಗಳನ್ನು ಪಾಲಿಸುವ ನಿಷ್ಠೆಗೆ ಸರ್ವರೂ ಬದ್ಧರಾಗೋಣ.
       ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಅವಿಭಕ್ತ ಕುಟುಂಬದಂತೆ ನಮ್ಮ ಭಾರತವಿದೆ. ಈ ಅವಿಭಕ್ತ ಕುಟುಂಬದಂತಿರುವ ರಾಷ್ಟ್ರ ಎಂದು ವಿಘಟನೆಯಾಗದಂತೆ ನೋಡಿಕೊಳ್ಳುವುದು ಆಡಳಿತದ ಚುಕ್ಕಾಣಿ ಹಿಡಿದ ಕುಟುಂಬದ ಯಜಮಾನನ ಕೆಲಸ. ಕುಟುಂಬದ ಮುಖ್ಯಸ್ಥ ಕುಟುಂಬದ ಎಲ್ಲಾ ಸದಸ್ಯರಿಗೆ ಬೆಲೆ ಕೊಡುವಂತೆ ರಾಷ್ಟ್ರದ ಆಡಳಿತಗಾರ ಎಲ್ಲಾ ರಾಜ್ಯಗಳಿಗೆ ಅನುಕೂಲ ಕಲ್ಪಿಸುವ ರೀತಿಯಲ್ಲಿ ಆಡಳಿತ ನಡೆದಾಗ ಆ ರಾಷ್ಟ್ರ ಎಂದು ವಿಘಟನೆ ಯಾಗದೆ ಕುಟುಂಬದ ಸರ್ವ ಸದಸ್ಯರು ಗೌರವ ಸಲ್ಲಿಸುತ್ತಾ ಯಜಮಾನನ ಮಾರ್ಗದರ್ಶನದಲ್ಲಿ ನಡೆಯುತ್ತಾರೆ. ಅಂತಹ ಸಮರ್ಥ ಯಜಮಾನನನ್ನು ಗುರುತಿಸುವುದು, ಉಳಿಸಿಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.ಆ ಯಜಮಾನ ಯಾವುದೇ ರಾಜ್ಯ, ಜಾತಿ, ಪಕ್ಷದವನಾಗಿರಲಿ ಅದಕ್ಕೆ ಬೆಲೆ ನೀಡದೆ ನಮ್ಮ ರಾಷ್ಟ್ರವನ್ನು ಪ್ರಗತಿಯತ್ತ ಕೊಂಡಯುವ ಸಮರ್ಥ ನಾಯಕತ್ವ ಯಾರಲ್ಲಿದೆ ಎಂಬುದನ್ನು ನಾವು ಮನಗಂಡಾಗ ಅವರನ್ನೇ ರಾಷ್ಟ್ರದ ಆಡಳಿತಕ್ಕೆ ಸೂಕ್ತ ವ್ಯಕ್ತಿಯಾಗಿ ಆಯ್ಕೆ ಮಾಡಿದಾಗ ಮಾತ್ರ ಪ್ರಜಾಪ್ರಭುತ್ವದ ಕನಸು ನನಸಾಗುವುದು. ಇಲ್ಲಿ ರಾಷ್ಟ್ರದ ಪ್ರಗತಿಯ ಹಿತದೃಷ್ಟಿಯಿಂದ ಅನುಭವವುಳ್ಳ ವ್ಯಕ್ತಿಯ ಸಾಮರ್ಥ್ಯ ಮುಖ್ಯವೆ ವಿನಹ ಪಕ್ಷವಲ್ಲ. ಆದ್ದರಿಂದ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರದೊಂದಿಗೆ ಉತ್ತಮ ನಾಯಕರ ಆಯ್ಕೆ ನಮ್ಮದಾಗಿರಲಿ.
          ಅದೇ ರೀತಿ ನಮ್ಮತನ ನಮಗೆ ಚೆಂದ. ನಮ್ಮ ಸಂಸ್ಕೃತಿ ನಮಗೆ ಅಂದ. ಪಾಶ್ಚಿಮಾತ್ಯರ ಉಡುಗೆ ತೊಡುಗೆಗೆ ಆಕರ್ಷಿತರಾಗಿ ದೇಶಿಯ ಸೊಗಡನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಪೂರ್ವಜರ ಆಚಾರ ವಿಚಾರಗಳೆಲ್ಲವೂ ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ನಿಂತಿವೆ. ಪಾಶ್ಚ್ಯಾತೀಕರಣದಿಂದಾಗಿ ಅವುಗಳಿಗೆ ಬೆಲೆ ನೀಡದೆ ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ಅಷ್ಟೇ ಸತ್ಯ. ಯಾವುದೇ ಪಾಶ್ಚಿಮಾತ್ಯ ಅನುಕರಣೆಯ ಸಂಸ್ಕೃತಿ ನಮ್ಮ ಊಟದಲ್ಲಿ ಉಪ್ಪಿನಕಾಯಿಯ ಆಗಬೇಕೆ ವಿನಹ ಅದುವೇ ಊಟವಾಗಬಾರದು. ಆದ್ದರಿಂದ ನಮ್ಮ ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದು ನಮ್ಮ ದೇಶಕ್ಕೆ ನಾವು ಕೊಡುವ ಕೊಡುಗೆಯಾಗಿದೆ.
         ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದಲ್ಲಿದ್ದ ಗುಡಿ ಕೈಗಾರಿಕೆಗಳಲ್ಲ ನಶಿಸಿ ಹೋಗುತ್ತಿವೆ. ಅನ್ನದಾತರೆನಿಸಿಕೊಂಡ ರೈತರು ಕೃಷಿಯಿಂದ ವಿಮುಖರಾಗಿ ನಗರ ಜೀವನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಹಲವಾರು ನದಿಗಳ ತಾಣವಾಗಿರುವ ಭಾರತ ಫಲವತ್ತಾದ ಮಣ್ಣಿನಿಂದ ಕೂಡಿದ್ದು, ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುವ ಶಕ್ತಿಯನ್ನು ನಮ್ಮ ಯುವ ಪೀಳಿಗೆ ಬೆಳೆಸುವಂತಹ ಮಾರ್ಗದರ್ಶನ ಅವರಿಗೆ ನೀಡಿ ಪುನಹ ಕೃಷಿಯತ್ತ ಅನ್ನದಾತ ಮರಳಿ ಬರುವಂತಹ ಬದಲಾವಣೆ ಮಾಡುವುದು ನಮ್ಮ ಕರ್ತವ್ಯ. ಸ್ತ್ರೀ- ಪುರುಷರು ಸಮಾನರು ಎನ್ನುವುದು ಎಷ್ಟು ಮುಖ್ಯವೋ.... ಸ್ತ್ರೀ- ಪುರುಷರ ನಡುವಿನ ಅಂತರದ ಬಗ್ಗೆ ಜಾಗೃತಿ ಮೂಡಿಸುವುದು ಅಷ್ಟೇ ಮುಖ್ಯ. ಏಕೆಂದರೆ ಸ್ವಾತಂತ್ರ್ಯ, ಸಮಾನತೆಯ ಗುಂಗಿನಲ್ಲಿ ಯುವಪೀಳಿಗೆ ತಪ್ಪು ಹೆಜ್ಜೆ ಹಾಕುತ್ತಿರುವುದನ್ನು ಗಮನಿಸುತ್ತಿದ್ದೇವೆ. ಅಕ್ಕ, ತಂಗಿ ,ಅಣ್ಣ, ತಮ್ಮ, ಅತ್ತಿಗೆ, ಸ್ನೇಹಿತ,ಇಂತಹ ಪವಿತ್ರ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಎಲ್ಲರನ್ನು ಒಂದೇ ದೃಷ್ಟಿಕೋನದಿಂದ ನೋಡುವ ಮನೋಭಾವನೆ ಯುವಪೀಳಿಗೆಯಲ್ಲಿ ಬೆಳೆಯುತ್ತಿರುವುದು ಆತಂಕಕರ ವಿಷಯ. *ವೈವಾಹಿಕ ಜೀವನವೆಂಬ* ಪವಿತ್ರ ಸಂಬಂಧದೊಂದಿಗೆ ತಮ್ಮ ಜೀವನ ರೂಪಿಸಿಕೊಳ್ಳುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿ ಸಮಾಜದಲ್ಲಿ ಸ್ವೇಚ್ಛಾಚಾರ ತಾಂಡವವಾಡುತ್ತದೆ. ಇದರಿಂದ ಅದೆಷ್ಟೋ ಮುಗ್ಧರು ಬಲಿಯಾಗಿ ಆತ್ಮಹತ್ಯೆಯಂತಹ ಅಸಹಾಯಕ ಸ್ಥಿತಿಗೆ ತಮ್ಮನ್ನು ತೊಡಗಿಸಿಕೊಳ್ಳಬಹುದು.ಇಂತಹ ಸ್ಥಿತಿ ನಿರ್ಮಾಣವಾಗದಂತೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ. ರಾಷ್ಟ್ರ ನಮಗೇನು ಕೊಟ್ಟಿದೆ....? ಎಂದು ವಿಚಾರ ಮಾಡದೆ ರಾಷ್ಟ್ರಕ್ಕೆ ನಾವೇನು ಕೊಟ್ಟಿದ್ದೇವೆ....? ಎಂದು ವಿಚಾರ ಮಾಡುತ್ತಾ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡೋಣ. ಇಂತಹ ಸರ್ವಧರ್ಮಗಳ ಸಮನ್ವಯದ ನಾಡನ್ನು ಪ್ರಪಂಚದ ಭೂಪಟದಲ್ಲಿ ಉನ್ನತ ಸ್ಥಾನಕ್ಕೇರಿಸೋಣ ಎಂದು ಆಶಿಸುತ್ತಾ..

- ಶ್ರೀಮತಿ  ಸುಮಂಗಲಾ ಕೃಷ್ಣ ಕೊಪ್ಪರದ, ಇಳಕಲ್.

ಸೌಹಾರ್ದ ನಡಿಗೆಯಲ್ಲಿ ಅಕ್ಷರದ ಬೆಸುಗೆ(ಕವಿತೆ) - ಬಿನಿತ ಜಿ.

ಏನು ಆಯಿತು ಈ ಕಾಲಕ್ಕೆ...
ಮನ ಮನಗಳು ಬೇರೆಯದಂಗಾಯಿತ್ತು 
ನಾನು ನೀನು  ಭಾಯಿ ಭಾಯಿ ಚಾಚಾ ಮಾಮು  ಅಂದವರು...
 ಇಂದು ನಾ ಹಿಂದೂ ನೀ ಮುಸ್ಲಿಂ ಅಂದಾಯ್ತು....

ಏನು ಆಯಿತು ಈ ಕಾಲಕ್ಕೆ...
ಈ ಮನಸುಗಳಿಗೆ ಬಿರುಕು ಮೂಡಿಸಿದವರು ಯಾರು?...
ಯಾಕಾಯ್ತು ಹೇಗಾಯಿತು ಸೌಹಾರ್ದ ಮನಸ್ಸುಗಳಿಗೆ ನೋವಾಯಿತು...

ಏನು ಆಯಿತು ಈ ಕಾಲಕ್ಕೆ...
ಮತ್ತೆ ಮನ ಮನಗಳು ಬೆರೆಯಬೇಕು...
ಮನದಲ್ಲಿ ನಗುವಿನ ರಂಗೋಲಿ ಮೂಡಬೇಕು... 
ನಾನು ಅಣ್ಣಾ ತಮ್ಮ ಅಕ್ಕ ತಂಗಿ ಅಂದು ಬೇರೆಯುವಂತಾಗಬೇಕು...
ಜಗತುಂಬ ಸೌಹಾರ್ದದ ನಗು ಹರಡಬೇಕು....
       
 - ಬಿನಿತ ಜಿ. ಕಲಬುರಗಿ.

ಬಿ.ಆರ್. ಅಂಬೇಡ್ಕರ್ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.

ಭಾರತ ಭೂಮಿಯಲ್ಲಿ ಜನಿಸಿ
 ಭಾರತ ಮಾತೆಗೆ ನಮಿಸಿ
 ಭಾರತೀಯ ನಾನೆಂದು ಘೋಷಿಸಿ
 ಭಾರತೀಯರೆಲ್ಲರಿಗೊಂದಿಸಿl

 ಇಟ್ಟ ಹೆಜ್ಜೆಯ ಹಿಂದೆ ಸರಿಸದೆ
 ಮಟ್ಟಗೊಳಿಸುವವರನ್ನು ಬಿಡದೆ
 ಪಟ್ಟು ಹಿಡಿದು ನಿಂತೆ ನೀನು
 ತೊಲಗಿಸಲು  ಅಸ್ಪೃಶ್ಯತೆಯನುl

 ಕಾಟಕೊಟ್ಟವರೆಲ್ಲರನು
 ಕೀಟದಂತೆ ಹೊಸರುತಲಿ
 ನೀತಿ ನಿಲುವಿನ ಮೆಟ್ಟಿಲನು
 ಎಲ್ಲ ಜನರಿಗೂ ತೋರಿಸುತಲಿl

 ಅನ್ನ ನೀರನು ಕೊಡದೆ ಕಾಡಿ
 ನಿಂತ ನೆಲಕೆ ನೀರು ಎರಚಿ
   ತುತ್ತು ಅನ್ನಕು   ಕುತ್ತು ಹೊಡ್ಡಿ
  ಬಡಿದು ಕಾಡುತ ಮನವ ಕಲಚಿl

 ಕಾಡಿ ಕಲ್ಲಿರಿದ ಮನುಜರು
 ಬೇಡಿಕೊಂಡರೂ ನೂಕುತಿರುವರು
 ನಡೆವ ಹಾದಿಗೆ ಬೇಲಿ ಹಾಕಿ
 ಮಾನವತೆಯನು  ಚಿವುಟಿ  ಹಾಕಿl

 ನಿನ್ನ ದಾರಿಗೆ ಅಡ್ಡ ಗಟ್ಟಿ
 ನಿನ್ನ ಸಾಧನೆಗೆ ತೊಡರುಗಟ್ಟಿ
 ನಿನ್ನ ಕಾಣಲು ಮುಖವ ತಿರುಗಿಸಿ
 ನಿನ್ನ ಜನತೆಗೆ ಉಸಿರುಗಟ್ಟಿಸಿl

 ಉಸಿರುಗಟ್ಟಿದ ದಲಿತರೊಳಿತಿಗೆ
 ದಾರಿದೀಪವಾಗಲು ಯತ್ನಿಸಿ
 ನಿನ್ನ ನೀನೇ ಬಿಡದ ಬಯಕೆಗೆ
 ಅಬ್ಬರಿಸುತ ನಿಂತೆ ನೀ  ಘರ್ಜಿಸಿl

 ಎಲ್ಲ ಮನುಜರುಗಳೊಂದೇ ಭೂಮಿಯಲಿ
 ಮೇಲು ಕೇಳಿಲ್ಲ ಯಾವ ಮನುಜರಲಿ
 ಜಾತಿ ಮತಗಳ ಬಿಟ್ಟು ನಡೆಯಿರಿ
 ಮನುಕುಲದ ಒಳಿತಿಗೆ ಹರಸಿರಿl

 ಹಂಚಿ ತಿನ್ನುವ ಬದುಕ ಕಲಿಯಿರಿ
 ಮೋಸದ್ರೋಹ ಬಿಟ್ಟು ನಲಿಯಿರಿ
 ಭಾತೃ ಭಾವದ ಬಾಳು ಸವಿಯಿರಿ
 ನೀತಿಯ ಕರ್ಮದ ಕನಸು ಕಾಣಿರಿl

 ದ್ವೇಷಸೂಯೆಯ ಕಿತ್ತು ಹೊಗೆಯಿರಿ
 ಭಾರತೀಯರು ಒಂದೇ ಎನ್ನಿರಿ
 ಭರತಮಾತೆಯ ಪುತ್ರರೆಲ್ಲರೂ
 ಸಂತಸದಿ ಬದುಕಿ ಬಾಳೋಣ ಎಲ್ಲರೂl
- ಶಾರದ ದೇವರಾಜ್, ಎ. ಮಲ್ಲಾಪುರ.

ಕವಿ-ಕವಿತಾ ಸಂಗಮ (ಕವಿತೆ) - - ಖಾದ್ರಿ ವೆಂಕಟ ಶ್ರೀನಿವಾಸನ್, ಮೈಸೂರು.

ಏ....ಕವಿತಾ, ಎಲ್ಲಿ ಹೋದೆ ನೀ ತಾಂ ತಾಂ ಎನ್ನುತಾ
ಈ.....ಕವಿಗೆ ,ತಟಕಿತ ತಾ.ರಮ್ಮ...ಯ್ಯ ತೋರುತಾ
ಹೋ....ಇಂದೇ ನಿನ್ನಯ ದಿನವಂತಾ ತಾ ತಾ ತಾ
ಬಾ....ಇಂದಾದರೂ ಬರಬಾರಧಿಂ ಧಿಂ ದಿ ತ್ತಾ
ಧೋ.ಧೋ , ಸುರಿಬಾರದಿತ್ತಾ ಸುತ್ತಾ ಮುತ್ತಾ
ಸುಂ.ಸುಂ , ಸುಮ್ಮನೆ ಸುಳಿಬಾರದಿತ್ತಾ ಅತ್ತಾ ಇತ್ತಾ
ಧಿಂ ಧಿಮಿ..ನಲಿಯುತ ನನ್ನಂತ:ಸತ್ವವ ಹೀರುತಾ
ಸಾ ಸಾ ಸರಿಗಮ ಸಂಗೀತದ  ಮೇಳವ ಮಾಡುತಾ
ಭಾ ಭಾ ಭಾವದ ಅಭಿಷೇಕವ ರಾಗದಿ ರಂಗೇರಿಸುತ
ಬಾ ಬಾ  ಕವಿ ಮನಸಿಗೆ ಸವಿ ಸ್ಪೂರ್ತಿಯ ನೀ ತಾ
ತಾ ತಾ ಹತ್ತಿರ ಬಂದರೆ  ಕವಿ ತಾ ಬರೆಯುವ ಕವಿತಾ
ಹೋ ಹೋ. ಸಂಭ್ರಮ ಸಂಗಮ ತಾ ತಾ ಮಧು ತಾ  ಧಿಮಿಕಿಟತಕಧಿಂ ಕವಿ ಕವಿತಾ ಸಂಗಮ ..ಸಂಭ್ರಮವಿರುತಾ
ವಿಧವಿಧ ಲಲಿತಾ ಕಲೆಗಳ ಸ್ಫುರಿಸುತಾ , ಸವಿಯುತಾ
ಜನಮಾನಸದೀ ಅವಿರತದಾನಂದವೀಯುತಾ
ಇರುವರು   ಕವಿ ಕವಿತಾ ಜೋಡಿಯು ಅನವರತಾ.
- ಖಾದ್ರಿ ವೆಂಕಟ ಶ್ರೀನಿವಾಸನ್, ಮೈಸೂರು.

ಭಕ್ತೋದ್ಗಾರಕ ಶ್ರೀರಾಮ (ಕವಿತೆ) - ಶ್ರೀ ವೆಂಕಟೇಶ ಬಡಿಗೇರ್.

ರಘು ಕುಲ ಸೋಮ ಸಾಕ್ಷಾತ್ ರಾಮ 
ಪಿತೃವಾಕ್ಯ ಪರಿಪಾಲಕ ಗುಣ ಶಾಮ 
ಅಯೋಧ್ಯವಾಸಿ  ಶ್ರೀ ರಾಮ್ 
ಕೌಶಲ್ಯ ಸುತ ರಾಮ್ 
ದಶರಥ ನಂದನ ಜಾನಕಿ ಜೀವನ ರಾಮ||

 ಹನುಮನ ಆತ್ಮವಿ ಭಕ್ತ ಕರುಣಾಮಯಿ 
ತ್ಯಾಗ ಮೂರ್ತಿ ಶ್ರೀರಾಮ 
ಶಬರಿಯ ಭಕ್ತಿಗೆ ಮೆಚ್ಚಿದ 
ಭಕ್ತೋದ್ಧಾರಕ ಶ್ರೀರಾಮ||

ಚಕ್ರವರ್ತಿ ಪುರುಷೋತ್ತಮ ದೀರೋದತ್ತ  ರಾಮ 
ಮಾತೃ ಹೃದಯ ಕರುಣ ಬಿಂದು 
ರಾಮಚಂದ್ರ ಪ್ರಭುವೇ ||

ತೇಜು ಮೂರ್ತಿ ಮುಖದ ಕಾಂತಿ 
ಭಕ್ತ ಹೃದಯ ಸ್ಪೂರ್ತಿ 
ಜಗದ ಯುಗದ ಆದರ್ಶ ಪುರುಷನೀತ ನಾನು ನಿನ್ನ ಭಕ್ತ 
ಯುಗಪುರುಷ ಶ್ರೀರಾಮ|| 

- ಶ್ರೀ ವೆಂಕಟೇಶ ಬಡಿಗೇರ್.


ಕಾವ್ಯ ಕನ್ಯೆಯರು (ಕವಿತೆ) - ಗೊರೂರು ಅನಂತರಾಜು, ಹಾಸನ.

             (ಚಿತ್ರ: ಅಗ್ನಿ ಸುರೇಶ್).

ನೂರಾಸೆಯ ಕಣ್ಣುಗಳಲ್ಲಿ 
ನೂರೆಂಟು ಕನಸುಗಳನ್ನು 
ಹೆಣೆದುಕೊಳ್ಳುವವರು
ನನ್ನ ಕಾವ್ಯ ಕನ್ಯೆಯರು

ಬೀದಿ ಕಾಮುಕರ
ಪೋಲಿ ಪದ ಪುಂಜಗಳಿಗೆ 
ನೊಂದು ನಲುಗುವವರು
ನನ್ನ ಕಾವ್ಯ ಕನ್ಯೆಯರು

ಹದಿ ಹರೆಯದ 
ಬಯಕೆಗಳಿಗೆ ಬಲಿಯಾಗಿ 
ಸುಟ್ಟು ಕರಕಲಾಗುವವರು
ನನ್ನ ಕಾವ್ಯ ಕನ್ಯೆಯರು 

ಜಾತಿ ಧಮ೯ ಪರಂಪರೆಯ 
ಸಂಕೋಲೆಗೆ ಸಿಲುಕಿ 
ಧಮ೯ ಸಂಕಟದಿ ಕೊರಗುವವರು
ನನ್ನ ಕಾವ್ಯ ಕನ್ಯೆಯರು

ವರನೆಂಬ ವರದಕ್ಷಿಣೆಯ 
ಆಲದಮರಕ್ಕೆ ಮಾಲೆ ಹಾಕಲು 
ಕಾದು ಕುಳಿತ್ತಿರುವವರು
ನನ್ನ ಕಾವ್ಯ ಕನ್ಯೆಯರು

  
- ಗೊರೂರು ಅನಂತರಾಜು, ಹಾಸನ.
9449462879
ಚಿತ್ರ: ಅಗ್ನಿ ಸುರೇಶ್.

ಹೇ.. ಬಾಬಾ, ನೀ ಮರಳಿ ಬಾ.. (ಕವಿತೆ) - - ಬಿ. ಎಂ. ಮಹಾಂತೇಶ.

ಹೇ.. ಜಗದೊದ್ಧಾರಕ.. ಮಹಾನಾಯಕ
ನೀ ಮತ್ತೊಮ್ಮೆ ಮರಳುವೆಯ...
ನೊಂದವರ ಬದುಕಿನ
ಅಳಲನ್ನೊಮ್ಮೆ ಆಲಿಸುವೆಯ...

ಹುಟ್ಟುಹಬ್ಬಕ್ಕೊಮ್ಮೆ ನಿನ್ನ ಫೋಟೋವನ್ನು
ಕೆಳಗಿಳಿಸಿ, ಮಾಡುವರು ಪೂಜೆ...
ಆದರೆ ನೀ ಬರೆದಿಟ್ಟ ಆ ಪುಸ್ತಕವನ್ನು
ಅಳಿಸಿ ನೀಡಿರುವರು ರಜೆ...

ಮತ್ತೊಮ್ಮೆ ಹುಟ್ಟಿ ಬಾ, ಮುಟ್ಟಿನಲೇ
ಬದುಕುವವರನು ಮಾಡಲು ಶುಚಿ...
ಈ ಕೆಟ್ಟ ವ್ಯವಸ್ಥೆಯನ್ನು
ಓಡಿಸಲು ಗಡಿಯಾಚಿ...

ಆದರೂ ಒಮ್ಮೊಮ್ಮೆ
ಚಿಂತಿಸುವೆನು ನಾನು...
ಬದಲಾಗಬಹುದೇ ಈ ಜಗವು
ಮರಳಿದರೆ ನೀನು...?

- ಬಿ. ಎಂ. ಮಹಾಂತೇಶ
SAVT ಕಾಲೇಜ್ ವಿದ್ಯಾರ್ಥಿ
ಕೂಡ್ಲಿಗಿ
9731418615


ಶುಕ್ರವಾರ, ಏಪ್ರಿಲ್ 14, 2023

ಬಾಂಧವ್ಯ ಸಾಯುತಿದೆ ಕಾಪಾಡ ಬನ್ನಿ (ಕವಿತೆ) - ನಾರಾಯಣ ರಾಠೋಡ.

ಬಾಂಧವ್ಯ ಸಾಯುತಿದೆ ತಡೆಯ ಬನ್ನಿ.

ತಂತ್ರಜ್ಞಾನದಿ ಒಳಿತಾದಿತೆಂದು ಕನಸು ಕಂಡೆವು.
ಕೆಲಸದ ಹೊರೆ ಕಡಿಮೆಯಾದಿತೆಂದು ಆಸೆಪಟ್ಟೆವು. 
ಕ್ಷಣದಿ ಮಾಹಿತಿ ಸಿಗುವುದೆಂದು ಹಿರಿ ಹಿಗ್ಗಿದೆವು.

ಕಂಡ ಕನಸುಗಳು ಕಮರಿದವು. ಮಾನಸಿಕ ಒತ್ತಡ ಹೆಚ್ಚಿತು.
ಆರೋಗ್ಯ ಹದಗೆಟ್ಟಿತು.
 ಬಿಪಿ ಶುಗರ್ ಗಹಗಹಿಸಿ ನಕ್ಕವು.
ಗಳಿಕೆಯ ಹಣ ಸೋರಿತು,
ದೀಘಾ೯ಯುಷ್ಯದ ಕನಸು ಕಮರಿತು.

ನೆಮ್ಮದಿಯಿಂದಿದ್ದ ಕುಟುಂಬಗಳೊಡೆದವು.
ಒಟ್ಟಿಗೆ ಸೇರಿ ಊಟ ಮಾಡುವ  ಮಕ್ಕಳು ಕೋಣೆಗೆ ಸೇರಿದರು.
ಮಗನೊಂದು ಕೋಣೆಗೆ ಸೊಸೆಯೊಂದು ಕೋಣೆಗೆ ಮಗಳು ಮತ್ತೊಂದು ಕೋಣೆಗೆ!

ನಗುವಿನಿಂದ ತುಂಬಿದ ಮನೆಯ ಜಗುಲಿ, ಬಣಗುಡುವಂತಾಯಿತು.
ಹಿರಿ ಜೀವಗಳು ಒಂಟಿಯಾದವು.
ಮಾತುಗಳಿಂದ ತುಂಬಿದ ಸಂಸಾರ ಮೂಕರೋಧನ ವಾಯಿತು.
ಮೊಬೈಲ್ ಗುಂಗಲ್ಲಿ ಮಕ್ಕಳನ್ನು, ವಯಸ್ಸಾದ ತಂದೆ ತಾಯಿಗಳನ್ನು ಅಲಕ್ಷಿಸುವಂತಾಯಿತು. 

ಬೆಳಗೆದ್ದು ನಾನು ಯಾರ್ಯಾರ  ನೆನೆಯಲಿ ಎಂಬುದು ಮರೆತು 
ರಾತ್ರಿ ಯಾರ್ಯಾರಿಗೆ ಮೆಸ್ಸೇಜ್ ಮಾಡಿ ಲೈಕ್ಸ್ ಪಡೆಯಲಿ ಎಂದಾಯಿತು. 
ಕಾಲೇಜಿಗೆ ಹೋಗುವ ನೆಪದಲ್ಲಿ ಗಾಡ೯ನ್ ಸೇರುವಂತಾಯಿತು.

ಮಕ್ಕಳ ಮುಖ ತಾಯಿ ನೋಡುವ ಬದಲು,
 ಗಂಡನು ಹೆಂಡತಿಯ ಮುಖ ನೋಡುವುದರ ಬದಲು, ಮೊಬೈಲನ್ನೇ ನೋಡುವಂತಾಯಿತು. 
ಮೊಬೈಲ್ ವೈರಸ್ ಮಕ್ಕಳನ್ನೂ ಆವರಿಸಿತು.
ಆಟದ ಅಂಗಳ ಮರೆತು ಮಕ್ಕಳು ಮನೆ ಮೂಲೆ ಸೇರುವಂತಾಯಿತು.
ಕರೋನಾ ಮಾರಿ ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿತು.
ದೈಹಿಕ ಚಟುವಟಿಕೆ ಯಿಲ್ಲದೆ, ಮಕ್ಕಳ ದಾಷ್ಟ್ಯ೯ತೆ  ಕ್ಷೀಣಿಸಿತು.

ಅನ್ಯೋನ್ಯವಾಗಿದ್ದ ಗಂಡ ಹೆಂಡಿರ ಸಂಬಂಧಗಳಲ್ಲಿ ಬಿರುಕು ಕಾಣಿಸಿತು. 
ಮೊಬೈಲ್ ಮಾತು ಸಂಶಯ ಹುಟ್ಟಿಸಿತು
ಡೈವೊಸ್೯ ಕೇಸ್ಗಳು ಹೆಚ್ಚಾದವು. 

ಸೌಖ್ಯದಿಂದ ಬಾಳಬೇಕಿದ್ದ ದಂಪತಿಗಳು,
ಬದುಕಿನ ವಿನಾಶಕ್ಕೆ ಕೊಡಲಿ ಪೆಟ್ಟಾಯಿತು.
ಗಂಡ ಹೆಂಡಿರ ನಡುವೆ ಕೂಸುಗಳು ಅನಾಥವಾದವು. 
ಸುಖ ಸಂಸಾರದ ನೆಮ್ಮದಿಗೆ ಮೊಬೈಲ್ ನಾಂದಿ ಹಾಡಿತು.

- ನಾರಾಯಣ ರಾಠೋಡ, ಉಪನ್ಯಾಸಕರು.

ಶರದ್ಗಾನ (ಕವಿತೆ) - ಗುಲಾಬಿ ರಾಘವೇಂದ್ರ.

ಅನಂತ ನೋವುಗಳ ನುಂಗುತಿರುವೆ ನನ್ನೊಳು
ದಮನಿಸುವ ಕಲೆಯದು ಕಲಿಯಬೇಕು ಭವದೊಳು
ಅಂಬರದ ದಿನಪನು ಕ್ಷಯಿಸುವನು ಒಮ್ಮೊಮ್ಮೆ
ಕಾರ್ಮುಗಿಲು ಒಗ್ಗೂಡಿ ಅವನೆಡೆಗೆ ಧಾವಿಸಲು II

ನೆನಹುಗಳೇ ಬದುಕಿನ ಅಡ್ಡಗೋಡೆಗಳಾಗಿ
ಚಲಿಸುವ ಪಥವನು ತಡೆ ಹಿಡಿದು ಬಿಡುವವು 
ನೆನಪುಗಳ ಸಿಹಿ ಕಹಿಯ ಚಾದರವ ಮಡಿಸುತ್ತ
ಬೆಳದಿಂಗಳಿರುಳಿಗೆ ಮನವ ತೆರೆಯಬೇಕಿದೆ II

ನಾವಲ್ಲಿಯೇ ನಿಂತರೆ ಸಾಗದು ಜೀವನವು
ಬೀಸುತ್ತಲಿರಬೇಕು ತಿರುತಿರುಗಿ ಸುಳಿಗಾಳಿಯಂತೆ
ಮೆರೆಯುತಿಹ ಕಾರ್ಮುಗಿಲ ತಿಳಿಯಾಗಿಸಿ ಬಾನೊಳು 
ಮರೆಯಾದ ರವಿತೇಜನ ಸಹಿ ಹಾಕಿಸಬೇಕಿದೆ II

- ಗುಲಾಬಿ ರಾಘವೇಂದ್ರ, BEML ಕೆಜಿಎಫ್.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...