ಶುಕ್ರವಾರ, ಫೆಬ್ರವರಿ 11, 2022

ಬಡಿಕಿಟ್ಟ ಜೀವ (ಕವಿತೆ) - ಸದಾಶಿವ ಎಂ. ಮರಡಿ.

ಶತ-ಶತಮಾನದ ಸರಹದ್ದು ರಣಹದ್ದೊಂದು
ಪುಡಿ-ಪುಡಿಗಟ್ಟಿ ಎಲ್ಲೆ ಮೀರಿ ಬೆಳೆದಿದೆ ಪುಗಸೆಟ್ಟೆ
ಪ್ರಾಚೀನ ಅಜ್ಜನಿಂದ ಕಣ್ಣೀರು ಕೊಡಿ ಹರಿದಿದ್ದು
ಮೊಮ್ಮಗನ ಆತ್ಮಬಲದಲೊಂಚುರು ಸಂಭ್ರಮ
ದಾಖಲೆ ಆಧಾರ ಸ್ಥರವಿನ್ಯಾಸ ಇಲ್ಲದ ಬದುಕು //

ದುರ್ಗಮ್ಮನ ಹೇಳಿಕೆಗೂ ಕೋನಮ್ಮನ ಬ್ಯಾಟಿಗೂ
ವೀರಭದ್ರನ ಅಗ್ನಿಕುಂಡಕ್ಕೂ ದಾಖಲೆ ಇಟ್ಟವರ್ಯಾರು
ತೊಗಲುಗೊಂಬೆ ದೊಡ್ಡಾಟ ಬಯಲಾಟ ನೋಡಿ
ಹೊಟ್ಟೆ ಹುಣ್ಣಾಗುವಂತೆ ನಕ್ಕು ಸುಮ್ಮನಾಗುತ್ತಾರೆ
ಉಳ್ಳವರ ಲಂಫಟತನಕ್ಕೆ ಬಲಿಯಾದ ಮುಗ್ಧರೆಲ್ಲರೂ //

ಎಲುಬು ಕಡಿದು ತುಪ್ಪವನ್ನು ತಿಂದು ಕೊಬ್ಬಿದವರು
ಎಲುಬು ತೊಗಲು ಬಡಿಕಿಟ್ಟ ಜೀವ‌ ತೆಗೆದವರು
ಕೌರ್ಯ ದೌರ್ಜನ್ಯ ಅಂತಸ್ತಿನ ಹಮ್ಮಿನೊಳಗೆ
ಬಾಯಿಗೆ ಮೊಸರು ಒರೆಸಿದವರ  ಯಾದಿಯೂ ಇದೆ
ಪಥ ಬದಲಾದರೂ ಪಂಥ ಪರಿವರ್ತನೆ ಆಗದು //

ಲೆಕ್ಕ ಸಿಗದ ಶೋಷಣೆ ಮುನಿಸು ಮರೆತಿವೆ
ಹಲವು ಮುಖವಾಡ ಕತ್ತಲದಾರಿಯಲ್ಲಿ ನಿತ್ಯ
ಕಣ್ಣು ಕಿವಿ ನಾಲಿಗೆಗೆ ಗ್ರಹಣ ತಾಗಿ ಸೋತಿವೆ
ಅಂತರಂಗದ ವಂಚನೆ ವರಸೆ ನೆಡೆಸೆ ಇದೆ
ಪ್ರಚಂಡ ಗೆಲುವಿನ ಬೆಳಕು ಸಾಕ್ಷಿಯಾಗಲು ಗೆದ್ದಿದೆ //

ಅಳಿಸಲಾಗದ ಗಾಯಗಳಿಗೆ ಉಪ್ಪು ಸುರಿದು
ಜಿಡ್ಡು ಮೌಡ್ಯ ಕೆಳ ಪಂಕ್ತಿಯ ಆಚರಣೆಗಳೆಂದು
ಸರ್ವವ್ಯಾಪಿ ಸದಾಶಿವನ ಮರೆತು ಗತಿಗೆಟ್ಟು
ಅಲ್ಪ ತೃಪ್ತಿಗೆ ಆಸೆ ಹೊತ್ತು ತಿರುಗುತ್ತ ಮತಿಗೆಟ್ಟು
ಹಸುವಿನ ವೇಷದಡಿ ವ್ಯಾಘ್ರತೆ ತಾಂಡವಾಡಿದೆ //

 - ಸದಾಶಿವ ಎಂ. ಮರಡಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

'ಕೋಗಿಲೆಯ ನೋವ' (ರುಬಾಯಿಗಳು) - ಕುಡಗುಂಟಿ ಗವಿಸಿದ್ದಪ್ಪ.

ಬೆಳಗಿನ ಜಾವ ನಿಶ್ಯಬ್ದ ಭಾವ 
ನಿತ್ಯವು ಮಾಮರದಲಿ ಕೇಳುವ  
ಅದೆಷ್ಟೋ ಕೋಗಿಲೆಯ ದ್ವನಿಯೆಲ್ಲ 
ನಿಲ್ಲಾಗಿ ದುಃಖದಿ ಕಣ್ಣೀರ ಭಾವ 

ನಮ್ಮೆವರೆಲ್ಲರ ದ್ವನಿಯನು ಮೀರಿಸುವ 
ನಮ್ಮೆಸರ ಗಗನಕ್ಕೆತ್ತರಕ್ಕೆರಿಸುವ 
ಧ್ವನಿಯು ಅದ್ಯಾಕೋ ಇಂದೇಮಗೆ ಕೇಳಲಿಲ್ಲ 
ಏನಾದ್ರೂ ! ಬತ್ತೋಯಿತೇ ದ್ವನ್ಯಾಂಗದ ಹರಿವ 

ತಮ್ಮ ದ್ವನಿಯ ಜಾದು ಮೂಲಕ ನಮ್ಮೆಸರನ  
ಅಜರಾಮರವಾಗಿಸಿದೆ  ಕೋಗಿಲೆಗಳನ 
ಎಲ್ಲಿ ಹಾರಿಹೋಯಿತು ಎನ್ನುವ ನೋವಿನೊಳಗೆ 
ಮರೆತಂತಿದೆ ತಮ್ಮ ಕಂಠ ಸಿರಿ ಪ್ರಸ್ತಾವನ 

ಅವು ತಮ್ಮದೇ  ದ್ವನ್ಯಾಂಗ ಕಳೆದೊದಂತೆ 
ರೆಕ್ಕೆಗಳ ಸ್ವಾಧೀನ ಕಳೆದುಕೊಂಡಂತೆ 
ಮರಗುತ್ತಲೆ ಕುಳಿತಿವೆ ಸಾವಿರಾರು 
ಕೋಗಿಲೆ ಮರಿಗಳು ದಿಕ್ಕು ತೋಚದಂತೆ 

ಕೋಗಿಲೆ ಮರಿಗಳಿಗೆ ಗುರುಮಾತೆಯಾಗಿ
ಉಳಿದಳು ಆ ತಾಯಿ ಸಂಗೀತಮಾತೆಯಾಗಿ 
ದ್ವನ್ಯಾಂಗವನ್ನು ವರವಾಗಿ ನೀಡಿಯಾದಳು 
ಕೋಟ್ಯಾನು ಕೋಟಿಯ ಜನರ ಮನ ಇಂಪಾಗಿ 

ಮತ್ತೆ ನಮ್ಮೊಡನೆ, ಧರೆಗಿಳಿದು ಅವತರಿಸಿ 
ಹುಟ್ಟಿ ಭಾ ಮಾತೆ ನಾವು ನಿನ್ನ ಬರುವಿಕೆಗಾಗಿಸಿ 
ಕಾದುಕುಳಿತಿರುವೆವು ಒಮ್ಮೆ ಬಂದು ಬಿಡು ತಾಯಿ 
ಎಂದು ಅಂಗಲಾಚುತ್ತಿವೆ ಅನಾಥ ಭಾವನೆಸೂಸಿ 

ಎಲ್ಲಿಗೆ ಹೋದೆ ತಾಯಿ ಬಂದು ಬಿಡೊಮ್ಮೆ ನೀವು 
ನಾವು ಬಿಟ್ಟುಕೊಡೆದೆ ಉಳಿಸಿಕೊಳ್ಳುವೆವು 
 ನಮ್ಮ ಪ್ರಾಣ ತೆತ್ತು ಎನ್ನುತ್ತಿವೆ ದುಃಖತಪ್ತ 
ಜೀವಗಳು ಅವರೊಳಗೊಂದಾಗಿಬಿಟ್ಟವು 

-  ಕುಡಗುಂಟಿ ಗವಿಸಿದ್ದಪ್ಪ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೊಸಬೆಳಕು (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಭರವಸೆಯ ಹೊನ್ನ ಬೆಳಕ ಬೀರುತˌˌˌˌ
ಬರುತಿಹ ನೇಸರ ಹೊನ್ನ ಕಿರಣವ ಸೂಸುತˌˌ
ಮುಚ್ಚಿದ ಬೊಗಸೆಯ ಅರಳಿಸಬೇಕಿದೆˌˌ
ಅರಳುವ ಬದುಕಿಗೆ ಬೆಳಕು
ಮೂಡಬೇಕಿದೆ ˌˌˌ

ಬಂಡೆಯಡಿ ಸಿಲುಕಿದ ಬೀಜಕ್ಕೆ
ಸ್ಪೂರ್ತಿಯದುˌˌ
ಭಾಸ್ಕರನ ಭರವಸೆಯ
ಬೆಳ್ಳಿಕಿರಣವದುˌˌ
ಕಗ್ಗತ್ತಲ ಕಾಡಿನಲ್ಲಿ ಸೂರ್ಯರಶ್ಮಿಯೆ ಜ್ಯೋತಿˌˌ
ತಮ ಕವಿದ ಮನಕೆ ಬೇಕು
ಭರವಸೆಯ ಪ್ರೀತಿˌˌ

ಅಂಧಕಾರವ ಸೀಳಿ ಬರುವ ರವಿಕಿರಣವುˌˌˌ
ಆಗಲಿ ಎಮ್ಮ ಮನಗಳಿಗೂ
ಆಶಾದೀಪವುˌˌ
ಮುಗಿಲಿಗೆ ಕೈಚಾಚುವ ತರುಗಳಂತೆˌˌ
ಗೆಲ್ಲಬೇಕಿದೆ ನಾವು ಮರೆತೆಲ್ಲ
ಚಿಂತೆ ˌˌ

ಬನ್ನಿ ಪ್ರಕ್ರತಿದೇವಿಯ ಆರಾಧಿಸೋಣˌˌ
ನಿತ್ಯ ಹೊಸ ಪಾಠವ ನಿಸರ್ಗದಿಂದಲೇ ಕಲಿಯೋಣˌˌ
 - ಮಧುಮಾಲತಿ ರುದ್ರೇಶ್, ಬೇಲೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಮ್ಮ ಕಂದ (ಕವಿತೆ) - ಹಾಲೇಶ್ ಕೆ. ಜಿ.

ಚಂದದ ವದನ
 ಗಂಧದ ಬಣ್ಣ 
 ಕಂದನೆ ನೀನೇ ಸುಂದರವು |
 ಅಂದದ ನುಡಿಯು 
 ನಂದಿಯ ನಡೆಯು
 ನಂದನ ನಮ್ಮಯ ಬಂಧನವು||೧||

ಕೋಟನು  ಹಾಕಿ 
 ಪೇಟವ  ತೊಟ್ಟು 
 ನೋಟದಿ ಚಾರ್ಲಿಯ  ಹೋಲುವನು |
 ಚೋಟನೆ ಹುಡುಗ
 ನೋಟನು  ಹಿಡಿದು 
ಹೋಟೆಲು ಹಾದಿಯ ಹಿಡಿಯುವನು ||೨||

 ಚಿಕ್ಕನೆ ನಡಿಗೆ 
 ಚೊಕ್ಕನೆ ಮಾತು 
 ಪಕ್ಕನೆ ನಗಿಸುತ ನಲಿಯುವನು|
 ಚಕ್ಕುಲಿ ತಂದು
 ಪಕ್ಕದಲಿರುವ 
 ಮಕ್ಕಳ ಜೊತೆಯಲಿ ತಿನ್ನುವನು ||೩||

 ನಮ್ಮನೆ ಕಂದ 
 ಸುಮ್ಮನೆ ಕುಳಿತು
 ಬಿಮ್ಮನೆ ಚಿತ್ರವ ಬಿಡಿಸುವನು|
 ಗಮ್ಮನೆ ಬೋಂಡ 
 ಒಮ್ಮೆಗೆ ತಿಂದು 
 ಅಮ್ಮಗೆ ತೋರುತ ನಿಂದಿಹನು ||೪||

✍️ ಹಾಲೇಶ್ ಕೆ. ಜಿ, ಶಿಕ್ಷಕರು.
  ಚಳ್ಳಕೆರೆ ತಾಲ್ಲೂಕು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)
 

ನಿನಗಿರುವ ಭಾಗ್ಯ ಎನಗಿಲ್ಲ ಪುರುಷ (ಕವಿತೆ) - ಡಿ‌. ಶಬ್ರಿನಾ ಮಹಮದ್ ಅಲಿ.

ನಿನಗಿರುವ ಭಾಗ್ಯ
ಎನಗಿಲ್ಲ ಪುರುಷ!
ತಾಯಿಗರ್ಭದಿ ತಿರುಗಿದ
ಹಚ್ಚಹಸಿರು ತುಂಬಿದ
ಹೊಲ ಗದ್ದೆಗಳು!
ದೇಕಿ ತೆವಳಿದ
ಕಟ್ಟೆ ಅಂಗಳಗಳು!
ಎಗರಿ ಕುಣಿದ 
ಬಾಲ್ಯದಾಟಗಳು!
ನಾಚಿ ನಲಿದ 
ಯೌವನದ ಮಜಲುಗಳು!
ಊರುಗೋಲಿನ
ವೃದ್ಧಾಪ್ಯದ ದಿನಗಳು
ಎಲ್ಲವು ನಿನ್ನೂರಲ್ಲಿಯೇ!

ನನ್ನದೋ....ನನ್ನದೋ
ಅಲೆಮಾರಿ ಜೀವನ!
ತುತ್ತನಿಟ್ಟ ಹೆತ್ತವರು
ಹೊತ್ತುತಿರುಗಿದ 
ಒಡಹುಟ್ಟಿದವರು
ಗಲ್ಲಿಯಲೆಲ್ಲರೊಂದಾಗಿ
ಕುಣಿದು ಕುಪ್ಪಳಿಸಿದ
ಗೆಳಯ ಗೆಳತಿಯರು
ಇರುವ ಊರನು
ತೊರಿಬೇಕು ನಿನ ನಂಬಿ!
ಉಳಿದರ್ಧ ಜೀವನ
ನಾ ಕಾಣದ,ನನ್ನದಲ್ಲದ 
ನಿನ್ನೂರಲ್ಲಿ!!!!!!

ಮೂಕಮನದ ನನ್ನ 
ವೇದನೆ ಯಾರಿಗೆ ಹೇಳಲಿ?
ಸುಖವ ನೀಡುವ
ತನುವನಷ್ಟೆ ಬಯಸಿ
ಪೀಡಿಸಿ,ಮೋಹಿಸಿ
ಮುದ್ದಿಸುವ ನಿನಗೋ!
ಆ ಕ್ಷಣದ ಮಮತೆ ತೋರಿ
ನಿತ್ಯ ಚಾಕರಿ ಮಾಡಿಸುವ
ಕುಟುಂಬದ ಇತರರಿಗೋ!
ತೊರೆದುಬಂದ ಎನ್ನ
ಹಾಲುಂಡತವರಿಗೋ!
ದಾರಿ ತೋಚದಾಗಿದೆ !
ನಿನಗಿರುವ ಭಾಗ್ಯ
ಎನಗಿಲ್ಲ ಪುರುಷ!

 - ಡಿ‌. ಶಬ್ರಿನಾ ಮಹಮದ್ ಅಲಿ.
 ಶಿಕ್ಷಕಿ,ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಾಮಾಜಿಕ ಚಿಂತನೆಗಳ ಹೊತ್ತು ಸಾಗಿದ ಹಾಗೂ ಭಾವನೆಗಳ ಗುಚ್ಛ ಇರುವ ಕೃತಿ ' ನೀ ಬಿಟ್ಟು ಹೋಗುವ ಮುನ್ನ' (ಪುಸ್ತಕ ಅವಲೋಕನ) - ಶ್ರೀ ರಾಜು ಕವಿ ಸೂಲೇನಹಳ್ಳಿ.

ನನ್ನ ಪ್ರೀತಿಯ ಸಹೋದರಿ ಎಂದೇ ಭಾವಿಸುವ ಡಾಕ್ಟರ್ ಅರ್ಚನಾ ಎಂ ಪಾಟೀಲ್ ಅವರು ಉದಯೋನ್ಮುಖ ಕಾವೇರಿಯಾಗಿ ಬರುತ್ತಿದ್ದಾರೆ ಈಗಾಗಲೇ ಒಂದಷ್ಟು ಕೃತಿಗಳನ್ನು ರಚಿಸಿದ್ದಾರೆ ಅಭಿರುಚಿಯನ್ನು ಕಂಡು ಕವನಸಂಕಲನದಲ್ಲಿ ನನಗೆ ಅವಕಾಶ ಮಾಡಿಕೊಟ್ಟ ಅವರಿಗೆ ತುಂಬು ಹೃದಯದ ಧನ್ಯವಾದಗಳು ಎಂಬ ಕವನ ಸಂಕಲನ ಕವಿತೆಗಳನ್ನು ಒಳಗೊಂಡಿದೆ ಅದರಲ್ಲಿ ಮುಖ್ಯವಾಗಿ ಎಲ್ಲಾ ಕವಿತೆಗಳು ಉತ್ತಮವಾದ ಸಂದೇಶ ಮತ್ತು ಸಾಮಾಜಿಕ ಕವಿತೆಗಳಾಗಿವೆ ಅಷ್ಟೇ ಅಲ್ಲದೆ ಎಲ್ಲಾ ಕವಿತೆಗಳನ್ನು ಉತ್ತಮವಾದಂತಹ ಸಮಾಜದಲ್ಲಿನ ಹುಳುಕುಗಳನ್ನು ಕವಿತೆಗಳನ್ನು ರಚಿಸಿದ್ದಾರೆ.
 ಗಮನಿಸಿದಂತೆ ಕವಿತೆಗಳನ್ನು ನೋಡಿದಾಗ ಹೆಸರು ಪ್ರೀತಿಸಬೇಕು ಮಾಡುತ್ತಿರುವ ಕೆಲಸದಲ್ಲಿ ಎನ್ನುವ ಪದ ಸಾಕುವವನ ಮಗುವಾದಾಗ ಹೊಸತನ ನೀನು ಯಾವಾಗಬಹುಶಃ ಎಲ್ಲಾ ಕವಿತೆಗಳನ್ನು ಕಣ್ಣಾಡಿಸಿದಾಗ ನನಗೆ ತಿಳಿದದ್ದು ಈ ಜೀವನದಲ್ಲಿ ಬಹುಮುಖ್ಯವಾಗಿ ನಮಗೆ ಬೇಕಾಗಿರುವಂತಹ ಅಂಶವೆಂದರೆ ಎಲ್ಲರೊಡನೆ ಸಮಾನತೆಯಿಂದ ಹಾಗೂ ಜಾತಿ ವ್ಯವಸ್ಥೆ ಎನ್ನುವುದನ್ನು ಬಿಟ್ಟರೆ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕುವುದು ತುಂಬಾ ಮುಖ್ಯವಾಗಿರುತ್ತದೆ ಅಂತ ಮೌಲ್ಯಯುತ ವಿಚಾರಗಳನ್ನು ಪಾಟೀಲರವರು ಹೇಳುವಂತ ಒಂದು ಪ್ರಯತ್ನ ಮಾಡಿದ್ದಾರೆ ಪ್ರೀತಿ-ವಿಶ್ವಾಸಗಳು ಆಧ್ಯಾತ್ಮಿಕ ಸಾಮಾಜಿಕ ಸಾಂಸ್ಕೃತಿಕ ಮೌಲ್ಯವಿರುತ್ತದೆ ಕವಿತೆಗಳಲ್ಲಿ ನಾಲ್ಕರಿಂದ ಎಂಟು ಹತ್ತು ಸಾಲುಗಳಲ್ಲಿ ಮಹತ್ವವನ್ನು ನೀಡಿದ್ದಾರೆ ವಿಚಾರಗಳು ಹೆಣ್ಣಿನ ಕುರಿತು ಭಾರತ ದೇಶದ ಪ್ರೇಮದ ಕುರಿತು ಕುರಿತು ನಾಗರಪಂಚಮಿ ಕುರಿತು ಒಂದು ವಿಚಾರವನ್ನು ತಿಳಿಸುತ್ತದೆ.
 
ಮತ್ತು ಮನಸ್ಸಿನ ಭಾವನೆಗಳನ್ನು ಅಷ್ಟೇ ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಮುಂತಾದ ವಿಷಯಗಳನ್ನು ಪ್ರಸ್ತಾಪಿಸುವ ಒಂದು ಸುಮಧುರವಾದ ಪ್ರಯತ್ನವನ್ನು ಬೇರೆ ಬೇರೆ ಇದ್ದರೂ ಉತ್ತಮ ಬರಹ ರಚಿಸಿರುವುದು ಗಮನ ಸೆಳೆಯುತ್ತದೆ. ನಾವು ಕವನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಏನು ಈ ಬಂಧಕೆ ಹೆಸರು, ಈ ಬದುಕು ಒಪ್ಪಿಕೋ, ವಿಶ್ವನಾಥನ ಮಕ್ಕಳು, ಪ್ರೀತಿಸಬೇಕು, ಕನಸು ಕಾಣುವರೆಷ್ಟೋ, ಮಾಡುತ್ತಿರು ನೀ ನಿನ್ನ ಕೆಲಸ, ಕಲಿ, ಅವ್ವ ಎನ್ನುವ ಪದ ಸಾಕು, ಅದೆಲ್ಲ ರವಿಗೂ ಶಶಿಗೂ ಹೋಲಿಕೆ, ಕಾಲಕ್ಕೆ ನೀ ಕೊಟ್ಟ ಹೆಸರು, ಅನ್ನ ತಿನ್ನುವರಿಗೊಂದು ಮನನ, ಮತ್ತೇ ಭ್ರೂಣ ಮಗುವಾದಾಗ, ಹೊಸತನ, ಕಡಲ ಮುಂದೆ ನಿಂತೊಮ್ಮೆ, ಮಂಡಕ್ಕಿ ಬಜ್ಜಿನೂ ತಿನ್ನೋದು ಬಿಡ್ತೇನೆ ನೀ ಸಿಕ್ರೇ, ಅದ್ಯಾವ ಬಾಷೆಯು ದೂರದಿರಿ, ಈ ಎಲ್ಲಾ ಕವನಗಳನ್ನು ಒಂದೊಂದು ಶೀರ್ಷಿಕೆಗೆ ತಕ್ಕಂತೆ ಮೌಲ್ಯ ಹೊಂದಿವೆ.

ಸಾಮಾನ್ಯ ವಿಷಯಗಳು ಆದರೂ ಎಷ್ಟು ಮುಖ್ಯ ಆದು ಎಂತಹ ಪರಿಣಾಮ ಬೀರಬಲ್ಲದು ಎಂಬ ಅಂಶವನ್ನು ಎತ್ತಿ ತೋರಿಸುತ್ತದೆ. ಈ ಕವಿತೆಗಳಲ್ಲಿ ಬಹು ಮುಖ್ಯ ಅವ್ವ, ಮಹತ್ವ ಹಾಗೆಯೇ ಕಡಲು ಹೇಗಿದೆ ಮಂಡಕ್ಕಿ ಎಷ್ಟು ಚೆಂದ ಇನ್ನೂ ಮುಂತಾಗಿ ಚಿಕ್ಕ ಚಿಕ್ಕ ಸಂಗತಿಗಳನ್ನು ಕವನಗಳು ಆಗಿ ಪರಿವರ್ತನೆ ಮಾಡಿ ಓದುಗರಿಗೆ ರುಚಿ ಉಣ ಬಡಿಸಿದ್ದಕ್ಕೆ ಧನ್ಯವಾದಗಳು. 

ಇನ್ನೂ ಮುಂದುವರೆದು ನಾ ನಿನ್ನ ಮಗನೇ, ನಿನ್ನ ಕೇಳುವಾಗ ಶುರುವಾಗೋದು,ನಿನ್ನ ಸುಳಿಗೆ ಸಿಲುಕಿ ನೀವು ಎಷ್ಟು ನೆಮ್ಮದಿ, ಸಾಕು ಬೇಕು, ಒಂದು ಜೀವನದ ಪಾಠ ಬಂದವರು, ಮತ್ತೆ ಮೊದಲಿನಂತೆ ಮನೆಯಲ್ಲಿ ಕುಳಿತರೆ ಸಾಕಲ್ಲ, ನೆನಪು ಕಣ್ಣದ ಕಣ್ಣದ ಆರತಿ, ನಿಂತ ನೀರಲ್ಲಿ, ಅವಳಿಗೆ ಮಗನಾದ ಮಗಳು, ನಮ್ಮವ್ವನ ಸಂಭ್ರಮ, ಕರುನಾಡಲ್ಲಿ ಪ್ರಕೃತಿಯ ವಿಸ್ಮಯ, ಅಮೂಲ್ಯವಾದ ಶಾಲೆ ಪರಿಸರ, ಈ ಎಲ್ಲಾ ಕವನಗಳು ಸಾಮಾನ್ಯ ಅಂಶಗಳೇ ಆಗಿದ್ದರೂ ಆಳವಾಗಿ ಓದಿದಾಗ ಸಂಪೂರ್ಣ ಸಾಮಾಜಿಕ ಸಂದೇಶಗಳನ್ನು ಹೊಂದಿರುವ ಚಿಂತನೆಗೆ ಹಚ್ಚುವ ಕವನಗಳಾಗಿವೆ ಎಂಬುದು ನನಗೆ ಅನ್ನಿಸಿತು. 

ಸಹೋದರಿ ಆರ್ಚನಾ ಪಾಟೀಲ್ ಅವರ ವಿವಿಧ ದೃಷ್ಟಿಕೋನದಿಂದ ವಿಭಿನ್ನವಾಗಿ ಕವನ ರಚನೆ ಮಾಡುವ ಸಾಹಸ ಒಂದಷ್ಟು ಒಳ್ಳೆಯ ಕಾರ್ಯ ಎನ್ನಲಾಗಿದೆ. ಇನ್ನೂ ಮುಂತಾಗಿ ಒಂದೊಂದು ಶೀರ್ಷಿಕೆ ಚೆಂದದ ವಿವರಣೆ ಸರಾಗವಾಗಿ ಓದಿಸುತ್ತವೆ ಆದು ಬಹಳ ಮನಸ್ಸಿಗೆ ನಾಟುತ್ತದೆ. ನಮ್ಮ ಸಂಸ್ಕೃತಿಯ ಹಬ್ಬ ಹರಿದಿನ ಹಾಗೂ ಆಚರಣೆಗಳ ಬಗ್ಗೆ ಸಂಪ್ರದಾಯ ಬಗ್ಗೆ ಮಾಹಿತಿ ಕಲೆ ಹಾಕಿ ಬರೆದಿದ್ದಾರೆ ಎಂಬಂತೆ ಪದ ಕಟ್ಟಿದ್ದಾರೆ. ಕರ್ನಾಟಕದ ಪ್ರಸಿದ್ಧ ಸ್ಥಳ ಆದ ಹಂಪೆಯ ಕುರಿತು ಆನಂತರ ಮತ್ತಿತ್ತರ ವಿಷಯಗಳ ಕುರಿತು ಸೂಕ್ಷ್ಮವಾಗಿ ಗಮನಿಸಿ ತನಗೆ ಪ್ರವಾಸ ಹೋದಾಗ ಕಂಡ ದೃಶ್ಯಗಳು ಕಣ್ಣಿಗೆ ಬಿದ್ದಿರಬೇಕು ಅವನ್ನೇ ಪದವಾಗಿಸಿ ಕವಿತೆ ಬರೆಯುವ ಇವರ ಮನೋಭಾವಕ್ಕೆ ಮೆಚ್ಚುಗೆ ಸೂಚಿಸಲೇಬೇಕು. ಇಷ್ಟು ಒಟ್ಟಾರೆ ಎಲ್ಲಾ ಕವನಗಳನ್ನು ಓದಿ ವಿಮರ್ಶಿಸಿ ನನ್ನ ಲೇಖನ ಬರೆದಿದ್ದೇನೆ.

ಕವಯಿತ್ರಿ ಆದ ಡಾ. ಅರ್ಚನಾ ಎನ್ ಪಾಟೀಲ ಅವರಿಗೆ ಒಂದು ಚಿಕ್ಕ ಸಲಹೆ ಏನೆಂದರೆ ತಾವು ಸಾಕಷ್ಟು ಕವನ ಸಂಕಲನ ಓದಿ ಶೀರ್ಷಿಕೆ ಸ್ವಲ್ಪ ಎಲ್ಲರಿಗಿಂತ ಭಿನ್ನವಾಗಿ ಚೊಕ್ಕವಾಗಿ ಇರಲಿ ಪೂರ್ಣ ಉದ್ದನೆಯ ಸಾಲು ಬೇಡ ಎರಡು ಅಥವಾ ನಾಲ್ಕು ಪದಗಳ ಒಳಗೆ ಶೀರ್ಷಿಕೆ ಇರಲಿ ಹಾಗೆಯೇ ಕೊಂಚ ಸಾಮಾನ್ಯ ಪದಗಳನ್ನು ಕಡೆಗಣಿಸಿ ಕನ್ನಡ ನಿಘಂಟು ಓದಿ ಸಾಹಿತ್ಯ ಅರ್ಥ ಕೊಡುವ ಪದ ಹಾಕಿ ಖಂಡಿತ ಒಳ್ಳೆಯ ಕವನ ಸಂಕಲನ ಆಗುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು ಕೋರುತ್ತೇನೆ. ಇನ್ನೂ ಹಲವಾರು ಕೃತಿಗಳು ತಮ್ಮ ಅಮೃತ ಹಸ್ತದಿಂದ ಹೊರ ಹೊಮ್ಮಲಿ ರಾಜ್ಯಧ್ಯಾಂತ ನಿಮ್ಮ ಹೆಸರು ಮೊಳಗಲಿ ಎಂದು ಆಶಿಸುತ್ತೇನೆ ಶುಭವಾಗಲಿ ಸಹೋದರಿ.

- ಎಸ್. ರಾಜುಕವಿ ಸೂಲೇನಹಳ್ಳಿ
ಕಾದಂಬರಿಕಾರ
ಪ್ರಕಾಶಕರು
ತನುಶ್ರೀ ಪ್ರಕಾಶನ ಸೂಲೇನಹಳ್ಳಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಮ್ಮನೊಳಗೊಂದು ಹೆಣ್ಣು ಭ್ರೂಣ (ಕವಿತೆ) - ರವಿ ನಾಯ್ಕ.

ನಾನು ಅಮ್ಮನೊಳಗಿನ ಭ್ರೂಣ,ಮಾತನಾಡುತಿಹೆ ನಾ ಹೆಣ್ಣು..!!
ನನ್ನಮ್ಮನ ಉದರದ ಮೇಲೇನೋ 
ಅಡ್ಡಾಡುತಿಹದನ್ನು ಗಮನಿಸಿದೆ 
ಅದೇಕೋ ಅಮ್ಮನ ಉಸಿರೇ ಜೋರಾಗಿತ್ತು..
ಯಾರೋ ಹೊರಗಿನ ಮುಖ ಕಾಣದ ಆಗಂತುಕರು ಮುಖ ಹಿಂಡಿದ ಭಾವ ಭ್ರೂಣದಲ್ಲೇ ನನಗರಿವಾಗಿತ್ತು !!

ಸಮಾಜದ ಕಟ್ಟಳೆಯ ಮೀರಿ, ನಾನಿನ್ನು ಕತ್ತಲ ಕೊತ್ತಲದಲ್ಲಿಈಜುವಾಗಲೇ,
ಅವರಿಗೆ ಅರಿಯಬೇಕಿತ್ತು ನನ್ನದ್ಯಾವ ಲಿಂಗ??
ಭಲಾತ್ಕಾರಕೆ ಕಾನೂನಿನ ಚೌಕಟ್ಟಿನಡಿಯಲಿ 
ಎಳೆಯಬೇಕಿತ್ತೆನ್ನ ಹೊರಗೆ !!ನಿಮಗಿದೋ ಅರಿವಿರಲಿ ನಾ 
ತಾಯಿಯ ಗರ್ಭದಲೆ ಹೋರಾಡಿದವಳು 
ಎಲ್ಲರಿಗಿಂತ ಮುಂಚೆ ಗುರಿ ಮುಟ್ಟಿ 
ಅಮ್ಮನ ಅರಮನೆಯಲೇ ಚೀತ್ಕರಿಸಿದವಳು,                          
ನಾನೀಗ ಬೇಡವಾಗಿದ್ದೆನಾ ಯಾರಿಗೂ 
ಕಾರಣ ನಾ ಹೆಣ್ಣು ಎಂಬ ಭ್ರೂಣ!!
ಅರಿಯಬೇಕಿತ್ತು ನಾ ಬಯಸುವ ಜೀವಗಳಿಗೆ,
ದೂಡಬೇಕಿತ್ತೆನ್ನ ಹೇಸಿಗೆಗೆ ಯಾಕೀ ತಾರತಮ್ಯ?
ನನ್ನ ಬಿಡಿ ಅಲ್ಲೇ ಬೆಳೆಯಲು, 
ಅನ್ನ ಪೂರ್ಣೆಯಾಗಿ ಬರುವೆನು!
ನನ್ನ ಪೂರ್ಣ ಅರಿಯದೆ ಹಿಚುಕ ಬೇಡಿ ನನ್ನೆಯ ಕತ್ತನು!!
ನಾ ಭ್ರೂಣ ..ದಯಮಾಡಿ ಮಾಡದಿರೆನ್ನ ಹರಣ.

- ರವಿ ನಾಯ್ಕ.
ಉತ್ತರ ಕನ್ನಡ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಿಡುವಿಲ್ಲದ ಸಾಹುಕಾರ (ಕವಿತೆ) - ಶಿವಾ ಮದಭಾಂವಿ.

ಹಿಂದಿರುವ ಜನರ ಮುಂದೆ
ಕರೆಯುವ ಮೊದಲ ಮಾನವ ನೀ ಜಗದಲ್ಲಿ
ಮಡದಿ ಮಕ್ಕಳು ಬರುವರು ಕನಸಲಿ 
ಪ್ರಯಾಣಿಕರ ಸುರಕ್ಷತೆಯೂ ಸದಾ ಮನದಲ್ಲಿ

ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊರಟಿದೆ ಪಯಣ ಸಾವಿರ ಭಾಷೆಯ ಸಾವಿರ ಭಾವಗಳ ಜೊತೆಗೆ ಸಂಚಾರ ಮಾಡುವ ಜೀವಿ ನೀನು ನಿನ್ನ ಬುದ್ದಿಮತ್ತೆಗೆ ಮೆಚ್ಚಬೇಕು ಲಕ್ಷ್ಮಿಸುತನೆ
ದಣಿವರಿಯದ ಧನಂಜಯ

ಬಿಡುವಿಲ್ಲದ ಸಾಹುಕಾರ 
ಬದುಕುತಿಹನು  ಹರುಷದ ದಿನವಿಲ್ಲ ಹಬ್ಬ ಹರಿದಿನವಿಲ್ಲ 
ಮಡದಿ ಮಕ್ಕಳ ಹರಕೆಯು ದಿನವೆಲ್ಲ  ನೂರಿದ್ದರು ನೋವು ನಗುಮೊಗದಿ ಸಾಗುವ ನಯನಗಾರ

ಪಯಣಿಗರು ಇರುವರು ಜೊತೆಯಲಿ
ಅವರ ಸುರಕ್ಷತೆಯ ಧ್ಯಾನ ವೆಲ್ಲ ಮನದಲ್ಲಿ
ನಿನಗೊಂದು ನಮನ
ಪಯಣಿಗರ  ಆರ್ಶಿವಾದವಿರುವುದು ಸದಾ
ಸಾಗಲಿ ಹೀಗೆ  ಪಯಣ ನಿತ್ಯನೂತನ

- ಶಿವಾ ಮದಭಾಂವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹಸಿರ ಹಾಡು (ಕವಿತೆ) - ಶ್ರೀಮತಿ ರೇಖಾ ನಾಡಿಗೇರ

ಮರದ ಬೊಡ್ಡೆಯದು ಮೈಚಾಚಿ ಚಿಗುರಿಹುದು
ಬೇರಿಲ್ಲದಿರೆ ರೆಂಬೆಯಲ್ಲಿ?
ಕೊಂಬೆಯೆಲ್ಲಿ?//

ಕಡಿಯುವದು,ಕುಕ್ಕುವದು ಮನುಜ ಸ್ವಭಾವ
ಬೇರು ಬೊಡ್ಡೆಯನಾದರೂ ಉಳಿಸಿಹನಲ್ಲ
ಕಾಯಲವನ ದೈವ//

ಹಕ್ಕಿ ಪ್ರಾಣಿ ಪಕ್ಷಿಗಳಿಗೆಂದೇ ಹುಟ್ಟಿ ಬಂದವರು ನಾವು
ಹೂ ಹಣ್ಣು ಹಸಿರು ಗೊಬ್ಬರ ನೀಡಿ
ನಿಮಗೆಲ್ಲ ಉಸಿರಿತ್ತವರು ನಾವು//

ಅರಿಯದಾಗಿಹಿರಿ ಭವಿಷ್ಯದ ದಿನಗಳ
ಗುಡ್ಡ ಬೆಟ್ಟ ಕಾಡುಗಳ ಹೀಗೇ ಸವರುತ್ತ ಸಾಗಿದರೆ
ಮುಂದೆಲ್ಲಿ ಕಾಣುವಿರಿ
ಕೆರೆ ತೊರೆ ನದಿಗಳ//

ನೀರು ಗೊಬ್ಬರ ಕೊಟ್ಟವರು
ನೀವಲ್ಲ
ಕಾಲಕಾಲಕ್ಕೆ ಮಳೆಯ ಹನಿಸಿ ಪೊರೆದವನು ಆ ದೇವರಲ್ಲ!//

ಪ್ರತಿಭಟಿಸಲಾರೆವೆಂದು ನಿಮ್ಮ ಉರವಣಿಗೆ
ನೀರಿಗಾಗಿ ತತ್ತರಿಸುತ್ತಿರುವಿರಿ ಕಾಣದೇನು ನಮಗೆ

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.
9886590666


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಸಿಸಲಿ (ಲೇಖನ) - ಸಂಗಮೇಶ ಎನ್ ಜವಾದಿ.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಮಾನತೆ,ಕಾಯಕ,ದಾಸೋಹ,ದಯೆ ಸೇರಿದಂತೆ ಮೊದಲಾದ ವೈಚಾರಿಕತೆಯ ಚಿಂತನೆಗಳು ಅಳವಡಿಸಿಕೊಂಡು ಅದರಂತೆ ಬಾಳಿದವರು, ಸಮರ್ಪಿಸಿಕೊಂಡವರು ಬಸವಣ್ಣನವರು. ಸಮಾನತೆಯ ಉನ್ನತಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ ಟೊಂಕ ಕಟ್ಟಿಕೊಂಡು ಕೆಲಸ ಮಾಡಿ, ಸರ್ವರಿಗೂ ಸಮಬಾಳು ಸಮಪಾಲು ಎನ್ನುವುದನ್ನು ಜಾರಿಗೆ ತಂದು ಬಸವಣ್ಣನವರು ಈ ನಾಡಿನ  ಅಭ್ಯುದಯಕ್ಕಾಗಿ ಹಗಲಿರುಳು ದುಡಿದಿದ್ದಾರೆ. 

ಇಂಥ ಸಾವಿರಾರು ಸಮಾಜಿಕ  ಕೆಲಸಗಳನ್ನು ಮಾಡಿ ಈ ನಾಡನ್ನು ಪವಿತ್ರ ಪುಣ್ಯ ನಾಡಾಗಿ ಬಸವಣ್ಣನವರು ಮಾಡಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಮರವಾಗಿದೆ. ಇಂತಹ ಅದೆಷ್ಟು ಕೊಡುಗೆಗಳು ನೀಡಿದ ವಿಶ್ವದ ಮೊಟ್ಟಮೊದಲ ಪ್ರಜಾಪ್ರಭುತ್ವವಾದಿ ಅಣ್ಣ ಬಸವಣ್ಣ ಎಂದರೆ ತಪ್ಪಾಗಲಾರದು. ಇನ್ನು ಈ ಕಲ್ಪನೆಯನ್ನು ಕೆಳ ಸಮುದಾಯದಲ್ಲಿ ಮೊದಲು ಆಚರಣೆ ತಂದು ಸಹಕಾರಗೊಳಿಸಿದ ಕೀರ್ತಿ ಮೇಧಾವಿ ಅಣ್ಣ ಬಸವಣ್ಣನವರಿಗೆ ಸಲ್ಲುತ್ತದೆ. ಇಂದಿನ ಸಮಾಜ ಮತ್ತು ಸರ್ಕಾರ ಇದನ್ನು ಮರೆಯುವಂತಿಲ್ಲ.  ಹಾಗಾಗಿ 12ನೇ ಶತಮಾನದ ಸಂದರ್ಭದ ಹಲವು
ಸಂಕೋಲೆಗಳ ಮಧ್ಯೆ, ವೈಚಾರಿಕ ಕ್ರಾಂತಿಯ ಬೀಜವ ಬಿತ್ತಿ, ಆಚಾರ ಕ್ರಾಂತಿಗೆ ಮುನ್ನುಡಿ ಬರೆದು, ವೈಜ್ಞಾನಿಕ ಕ್ರಾಂತಿಗೆ ಕಾರಣೀಭೂತರಾದವರು ಬಸವಣ್ಣನವರು. 

ಈ ಹಿನ್ನೆಲೆಯಲ್ಲಿ
ಬಸವಣ್ಣನವರ ವಿಚಾರಗಳ ಮೌಲ್ಯಧಾರಿತ ನೀತಿಗಳ  ಸಿದ್ಧಾಂತಗಳನ್ನು  ಇಂದು ನಾವೆಲ್ಲರೂ ಪಾಲಿಸಿಕೊಂಡು ಬರುವುದು ಬಹಳ ಅವಶ್ಯಕತೆ ಇದೆ. ಪ್ರಯುಕ್ತ ನಾವು ಸರ್ಕಾರಕ್ಕೆ ಈ ಲೇಖನದ ಮೂಲಕ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಬೇಕೆಂದು ಆಗ್ರಹಿಸುತ್ತಾ, ಕೆಲ ವಿಚಾರಗಳು ತಮ್ಮೆಲ್ಲರ ಮುಂದೆ  ಪ್ರಸ್ತುತ ಪಡಿಸುತ್ತಿದ್ದೇವೆ.

ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಬದುಕಿನುದ್ದಕ್ಕೂ,
ಬದುಕನ್ನು ಸಮಾಜದ ಉನ್ನತಿಗಾಗಿ ಸಮರ್ಪಿಸಿದ ಸೇವಕ ಬಸವಣ್ಣನವರು. ಅಂದು ಸಮಾಜದಲ್ಲಿ ಬೇರೂರಿದ್ದ ಹತ್ತು ಹಲವು ಸಮಸ್ಯೆಗಳನ್ನು ಕಿತ್ತೆಸೆದು ಸಮಾನತೆಯ ಮಹಾನ್ ಕ್ರಾಂತಿ ಮಾಡಿದ ಮೊಟ್ಟಮೊದಲ ಪರಿವರ್ತಕ ಅಣ್ಣ ಬಸವಣ್ಣ. ನೊಂದು ಬೆಂದವರ ಅನಾಥರ ಸೇವೆಯನ್ನು ಮಾಡಿ ಅಣ್ಣ ಜೀವನ ತ್ಯಾಗ ಮಾಡಿರುವುದು ನಾವೆಲ್ಲರೂ ಕಾಣುತ್ತೇವೆ. ಹೀಗೆ ನುಡಿದಂತೆ ನಡೆಯುವ ಮೂಲಕ ಜಗತ್ತಿನಲ್ಲಿ ಇಲ್ಲಿಯವರೆಗೆ ಎಲ್ಲೂ ನಡೆಯದ ಸ್ವಾಭಿಮಾನದ,ನೈಜತೆಯ - ಸತ್ಯ ಪ್ರತಿಪಾದಿಸುವ ವೈಜ್ಞಾನಿಕ - ವೈಚಾರಿಕ ಕ್ರಾಂತಿ ಈ ನಾಡಿನಲ್ಲಿ ನಡೆದುಹೋಗಿದೆ.ಈ ಕ್ರಾಂತಿಯ ಮೂಲಕ ಸಮಸ್ತ ಮನುಕುಲದ ಹಾಗೂ ಸಕಲ ಜೀವಾತ್ಮರಿಗು ಲೇಸನ್ನು ಬಯಸಿ, ಶ್ರೇಷ್ಠ ಮೌಲ್ಯಾಧಾರಿತ ವಿಚಾರಗಳು ಜಾರಿಗೆ ತಂದಿದ್ದು ಐತಿಹಾಸಿಕವಾಗಿದೆ .ಇದುವೇ ಪರಿರ್ವತೆಯ ಜಗದ ನಿಯಮ, ಇದುವೇ ಸೃಷ್ಟಿಯ ಸಂಕೇತ, ಇದುವೇ ಶರಣರು ಕೊಟ್ಟ ಸಮಾಜಿಕ,  ಧಾರ್ಮಿಕ - ಆಧ್ಯಾತ್ಮಿಕ ಶುಚಿತ್ವದ ಬದಲಾವಣೆಯ ನೀತಿ. ಹೀಗೆ ಪ್ರಜಾಪ್ರಭುತ್ವ ಜಾರಿಗೆ ತಂದು ಅನುಭವ ಮಂಟಪ ಸ್ಥಾಪಿಸಿ,  ವಚನ ಸಾಹಿತ್ಯ ರಚನೆ ಮತ್ತು ಅವುಗಳು ನಮ್ಮನ್ನೇಲ್ಲಾ ಪ್ರೇರೇಪಿಸುವಂತೆ ಕಾಣಿಕೆ ನೀಡಿದ ಕಾಣಿಕ ಮಾಹಾಪುರುಷ.

 ಸಮಾನತೆ ಮತ್ತು ಸಹೋದರತೆಯ ಸಹಬಾಳ್ವೆ, ವೈಚಾರಿಕ ವೈಜ್ಞಾನಿಕ ತಳಹದಿ ಮೇಲೆ ವಿಚಾರ ಮಂಥನವನ್ನು ಮಾಡಿ ಶರಣ ಧರ್ಮವನ್ನು ವಿಶ್ವ ಧರ್ಮವಾಗಿಸಿದ ಅಪ್ಪ ಬಸವಣ್ಣನವರ ವಿಚಾರಗಳ ಕ್ರಾಂತಿಯ ಮುನ್ನುಡಿಯಿಂದ ಸಾಂಸ್ಕೃತಿಕ ಲೋಕ ಆ ದಿನಗಳಲ್ಲಿ ವೈಭವದಿಂದ ಬೆಳಗಿದೆ.ಜೊತೆಗೆ ಇಂದಿನ ದಿನಗಳಲ್ಲಿ ಸಹ ಬೆಳಗುತ್ತೀದೆ.

ಬಸವಣ್ಣ ವಿಶ್ವ ಸಂವಿಧಾನ ಶಿಲ್ಪಿ :   ಅಂದು ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಸಮಯವದು. 
ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿರುವ ಕಾಲವಾಗಿತ್ತು.ಇನ್ನು ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತು ದೂರದ ಮಾತಾಗಿತ್ತು. ಅಲ್ಲದೆ
ದೇವರ ಪೂಜೆ ಮಾಡುವ ಮತ್ತು ದೇವಸ್ಥಾನಕ್ಕೆ ಪ್ರವೇಶ ಕೊಡದೇ ಇದ್ದ ಸಮಯದಲ್ಲಿ ಬಸವಣ್ಣನವರು ಇದನ್ನು ನೋಡಿ ಬಹಳ ಸಂಕಷ್ಟ ಪಟ್ಟರು, ಹೇಗಾದರೂ ಮಾಡಿ ಸರಿಪಡಿಸಿ, ಸರ್ವರಿಗೂ ದೇವರ ಧ್ಯಾನ, ದರ್ಶನ ಪಡೆಯುವಂತಾಗಬೇಕೆಂದು ನಿಶ್ಚಯ ಮಾಡುವ ಮೂಲಕ ವೈಚಾರಿಕವಾಗಿ ಚಿಂತಿಸಿ, ವಿಶ್ವಾತ್ಮನ ಕುರುಹಾದ ಇಷ್ಟಲಿಂಗವನ್ನು ಅಂಗದ ಮೇಲೆ ಇಟ್ಟು ಪೂಜಿಸುವ ಶಿವಯೋಗವನ್ನು ಕರುಣಿಸಿ ಕೊಟ್ಟು,ಸರ್ವರಿಗೂ ಇಷ್ಟಲಿಂಗ ಧಾರಣೆ ಮಾಡಿದರು. ಹೀಗೆ ನೂಂದವರ ಪರವಾಗಿ ಹತ್ತು ಹಲವು ಕ್ರಾಂತಿಕಾರಿ ನಡೆಯ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತಂದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ.ಇನ್ನು ಕೆಳ ಸಮುದಾಯಕ್ಕೆ ಅನುಭವ ಮಂಟಪದಲ್ಲಿ ಅವಕಾಶ ನೀಡಿದ ಪ್ರಯುಕ್ತ, ಅವರೆಲ್ಲರೂ ವಚನ ರಚನೆಗಳಲ್ಲಿ ತೊಡಗುವಂತೆ ಪ್ರೇರೆಪಿಸಿ,ವಚನಗಳನ್ನು ಬರೆಯುವಂತೆ ಮಾಡಿದವರು.ಜೊತೆಗೆ  ಅಂತರ್ಜಾತಿ ವಿವಾಹವನ್ನು ಮಾಡಿ  ಮಾನವರೆಲ್ಲರೂ ದೇವರ ಮಕ್ಕಳು ಎಂಬ ನಿಲುವು ಪ್ರತಿಪಾದಿಸಿ,ಸರ್ವರೂ ಸಮಾನರು ಎಂದು ಜಾಗತಿಕ ಪ್ರಪಂಚಕ್ಕೆ ಬಸವಣ್ಣನವರು ಸಾರಿದಾರೆ. ಹೀಗೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಈ ಸಮಾಜದಲ್ಲಿ ನೆಮ್ಮದಿಯಿಂದ ಬಾಳುವಂತಾಗಬೇಕೆಂದು ಹೋರಾಟ ಮಾಡಿದ್ದು ಕಾಣುತ್ತೇವೆ. 

ಇನ್ನು ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡುವ ಮೂಲಕ
ಸಮಾಜವನ್ನು ಸರಿ ದಾರಿಯಲ್ಲಿ ಕೊಂಡ್ಯೊಯುವ ಕೆಲಸ ಪ್ರಮಾಣಿಕವಾಗಿ ಮಾಡಿದ್ದಾರೆ.ಅಂದು ಬಸವಣ್ಣನವರು ಕೆಳಗೆ ಬಿದ್ದವರನ್ನ ಯಾವ ರೀತಿ ಅಪ್ಪಿಕೊಂಡರು ಎಂಬುದಕ್ಕೆ ನಮಗಿಲ್ಲಿ ಅವರ ವಚನಗಳೆ ಸಾಕ್ಷಿಪ್ರಜ್ಞೆಯಾಗಿವೆ. ಬಸವಣ್ಣನವರು ತಮ್ಮನ್ನು ತಾವು ಕನಿಷ್ಠ ಮಟ್ಟದಲ್ಲಿ ಇಳಿದುಕೊಂಡು ಬಹು ಎತ್ತರಕ್ಕೆ ಬೆಳೆದ ಮಹಾನ್ ಚೇತನರಾಗಿದ್ದರು, ಅದಕ್ಕೆ ಅವರ ವಚನವೇ ಸಾಕ್ಷಿ, ಅವರ ಸಂಪೂರ್ಣ ವ್ಯಕ್ತಿತ್ವವನ್ನ ನಿರೂಪಿಸುತ್ತದೆ. 

"ಎನ್ನಿಂದ ಕಿರಿಯರಿಲ್ಲ, ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ, ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ, ಎನಗಿದೇ ದಿಬ್ಯ."
ಎಂಬುದಾಗಿ ಹೇಳುತ್ತಾರೆ, ಅಂದರೆ ಅಂದಿನ ಎಲ್ಲ ಜನಾಂಗವನ್ನ ಯಾವ ರೀತಿ ಒಲಿಸಿಕೊಂಡು ಅವರನ್ನು ಉನ್ನತ ಮಟ್ಟಕ್ಕ ಕರೆದುಕೊಂಡು ಹೋಗಬೇಕು ಎಂಬ ಸತ್ಯದ ದಾರಿ ಅಪ್ಪ ಬಸವಣ್ಣನವರಿಗೆ ಚೆನ್ನಾಗಿ ತಿಳಿದಿತ್ತು, ಹಾಗಾಗಿ ಅವರು ಪ್ರತಿಯೊಬ್ಬರನ್ನು ಸಂಪರ್ಕಿಸಿ ನಿಮ್ಮ ಮನೆಯ ಮಗನೆಂದು ಹೇಳಿಕೊಳ್ಳುತ್ತ ಅವರನ್ನ ಆಲಿಂಗಿಸಿಕೊಂಡು, ಯಾರು ಮಾಡದಂತ ಸಮಾಜಿಕ ಕ್ರಾಂತಿಯನ್ನು  12ನೇ ಶತಮಾನದಲ್ಲಿ ಮಾಡಿ ತೋರಿಸಿದ್ದಾರೆ. ಅವರ ಹಲವು ವಚನಗಳಲ್ಲಿ
ಕಾಣಬಹುದಾಗಿದೆ.

" ಚೆನ್ನಯ್ಯನ ಮನೆಯ ದಾಸನ ಮಗನು, ಕಕ್ಕಯ್ಯನ ಮನೆಯ ದಾಸಿಯ ಮಗಳು, ಇವರಿಬ್ಬರು ಹೊಲದಲು ಹೋಗಿ, ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು, ಕೂಡಲಸಂಗಮದೇವ ಸಾಕ್ಷಿಯಾಗಿ."
ಕೂಡಲಸಂಗಮದೇವನ ಸಾಕ್ಷಿಯಾಗಿ ಎನ್ನಬೇಕಾದರೆ ಬಸವಣ್ಣನವರಿಗೆ ಅದೆಂಥ ತ್ಯಾಗದ ಮನೋಭಾವ, ನಾನು ಸಣ್ಣವ,ನಾನು ಅತ್ಯಂತ ಕೆಳ ಸಮಾಜದವ, ನಾನು
ದಾಸ - ದಾಸಿಯ ಮಗ ಎಂದು ಹೇಳುವ ಈ ವಚನ ಅವರ ಎತ್ತರದ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತದೆ ಅಲ್ಲವೇ, ಇನ್ನು ನಾನು ಕೆಳಸ್ತರದ ಜನಾಂಗದಲ್ಲಿ ಹುಟ್ಟಿದ ಮಗ ಎಂದು ಗೌರವದಿಂದ ಹೇಳುವ ಅವರ ಮಾತು ನಿಜಕ್ಕೂ ದೊಡ್ಡದು,ಮಾನವೀಯ ನಡೆಗೆ ಇದು ಸಾಕ್ಷಿಯಾಗಿದೆ.ಇದೆ ತೆರನಾಗಿ ಎಲ್ಲ ಸಮುದಾಯದ ಜನರಲ್ಲಿ ಹೋಗಿ ಅವರೆಲ್ಲರನ್ನೂ ಒಂದಡೆ ಸೇರಿಸುವ ಅವರ ಪ್ರಯತ್ನ ನಿಜಕ್ಕೂ ಅಚ್ಚರಿಯನ್ನುಂಟು ಮಾಡುತ್ತದೆ. ಅವರನ್ನು ಗೌರವದಿಂದ ಕಾಣುವ ಮನೋಧರ್ಮ ಬಸವಣ್ಣನವರದಾಗಿತ್ತು. ನಡೆನುಡಿಗೆ, ಅವರ ಸಿದ್ಧಾಂತಕ್ಕೆ ಎಲ್ಲರು ಮಣಿದು ಒಂದಡೆ ಸೇರಬೇಕೆಂದರೆ ಬಸವಣ್ಣನವರು ಬಹಳಷ್ಟು ಕಷ್ಟಪಟ್ಟಿದ್ದಾರೆ. ಅವರೆಲ್ಲರಿಗೆ ತಿಳಿ ಹೇಳುತ್ತ, ಸಂತೈಸುತ್ತ, ಸಕರಾತ್ಮಕವಾದ ಭಾವನೆಗಳನ್ನ ಜನರಲ್ಲಿ ತುಂಬಿ ಸತ್ಯದ ಕಡೆಗೆ ಅಂದರೆ ಸನ್ಮಾರ್ಗದ ಕಡೆಗೆ ಸೆಳೆದುಕೊಳ್ಳುತ್ತಾರೆ. ಅದಕ್ಕೆ ಅವರ ಈ ವಚನವು ಸಹ ನಮಗೆ ಸಾಕ್ಷಿಕರಿಸುತ್ತೆ. 

" ಆನು ಭಕ್ತನಲ್ಲಯ್ಯಾ, ಆನು ವೇಷಧಾರಿಯಯ್ಯಾ. ಕಾಟುಗ, ಕೇತುಗ, ಪೋಲುಗ ಎಂಬುದು ಎನ್ನ ಹೆಸರು. ಕೂಡಲಸಂಗಮದೇವಾ ನಿಮ್ಮ ಶರಣರ ಮನೆಯ ಮಗ ನಾನಯ್ಯಾ."
ನಿಮ್ಮ ಶರಣರ ಮನೆಯ ಮಗನು ನಾನಾಗಿದ್ದೇನೆ, ಎಂದು ಈ ವಚನದಲ್ಲಿ ಇಡೀ ಮಾನವ ಸಮಾಜದ ಮಗುವಾಗಿದ್ದೇನೆ ಎಂಬರ್ಥದಲ್ಲಿ ಹೇಳುತ್ತ. ಅವರಲ್ಲಿ ಉತ್ಸಾಹ ಹುರುಪು ತುಂಬಿ, ನವ ಚೈತನ್ಯವನ್ನೆ ಬರುವಂತೆ ಮಾಡುತ್ತಾರೆ ಬಸವಣ್ಣನವರು. ಕೊನೆಯಲ್ಲಿ ಅವರು ತಮ್ಮ ವಚನದ ಮೂಲಕ ಶೋಷಿತ ಸಮುದಾಯಕ್ಕೆ ತಮ್ಮನ್ನು ಅವರೆಲ್ಲ ಅಪ್ಪಿಕೊಳ್ಳಲಿ ಎಂಬ ಮನೋಭಾವದಿಂದ ಅವರಿಗೆ ಈ ರೀತಿಯಾಗಿ ನೀವೆದನೆ ಮಾಡಿಕೊಳ್ಳುತ್ತಾರೆ. 
" ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ. ಇವ ನಮ್ಮವ, ಇವ ನಮ್ಮವ,  ಇವ ನಮ್ಮವನೆಂದೆನಿಸಯ್ಯಾ. ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ."

 ಈ ರೀತಿಯಾಗಿ ಅಪ್ಪ ಬಸವಣ್ಣನವರು ವಚನ ಚಳುವಳಿಯನ್ನು ಆರಂಭಿಸಿ ಸಮಾನತೆಗೆ ಮುನ್ನುಡಿ ಬರೆದಿದ್ದಾರೆ. ಅಂದು ಅಪ್ಪ ಬಸವಣ್ಣನವರು ಅಸಮಾನತೆಯನ್ನು ಹೋಗಲಾಡಿಸಲು ಅವರ ಪಟ್ಟ ಪರಿಶ್ರಮ ಬಹಳ ದೊಡ್ಡದು.ಅದು ಇಂದಿಗೂ ಯಾರು ಪಟ್ಟಿಲ್ಲಾ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.
ಇನ್ನು ಒಂದು ಸಂಘಟನೆ, ಒಂದು ಚಳುವಳಿಯನ್ನ ಮಾಡಬೇಕಾದರೆ ಸಣ್ಣ ಕೆಲಸವಲ್ಲವದು, ಅದಕ್ಕೆ ಬೇಕಾದ ತಯಾರಿ, ಸಿದ್ಧಿಗಳನ್ನು ನಾವು ಮಾಡಿಕೊಂಡಿರಬೇಕಾಗುತ್ತದೆ ಎಂಬುದಕ್ಕೆ ಬಸವಣ್ಣನವರೆ ನಮಗೆ ಮಾದರಿ. ಹಾಗಾಗಿ ಅವರು ಬರೆದ ವಚನಗಳನ್ನ ಅರ್ಥ ಮಾಡಿಕೊಂಡು ಹೋದಾಗ ಮಾತ್ರ ನಮ್ಮ ಬದುಕು ಸುಂದರ ಮತ್ತು ನೆಮ್ಮದಿಯದಾಗುತ್ತದೆ. ಪ್ರತಿ ಸಮಾಜಪರ ಹೋರಾಟಗಳು ಇದೆ ರೀತಿಯಲ್ಲಿದ್ದರೆ ನಾವು ಹಮ್ಮಿಕೊಂಡ ಹೋರಾಟ ಸಾರ್ಥಕತೆಯನ್ನ ಪಡೆಯುತ್ತದೆ.
ಹೀಗಾಗಿಯೇ ವಿಶ್ವಸಮುದಾಯವು ಇವರನ್ನು ವಿಶ್ವದ ಸಂವಿಧಾನ ಶಿಲ್ಪಿ ಎಂದು ಹೆಮ್ಮೆಯಿಂದ ಕರೆಯುತ್ತಾರೆ.

ಜಾತಿಯ ಸಂಕೋಲೆಯನ್ನು ತೊಲಗಿಸಿದ ಬಸವಣ್ಣ: ಬಸವಣ್ಣನವರನ್ನು ವಿಶ್ವವೇ ಒಪ್ಪಿಕೊಂಡರೂ ದೇಶದಲ್ಲಿರುವ ಕೆಲ ಮೂಲಭೂತವಾದಿಗಳು, ಸಂಪ್ರದಾಯವಾದಿಗಳು ಇನ್ನು ಒಪ್ಪಿಕೊಳ್ಳದಿರುವುದು ದುರಂತ. ಸತ್ಯವನ್ನು 
ಮರೆಮಾಚಿ ಸುಳ್ಳನ್ನು ವೈಭವಿಕರಿಸುವ ಇಂದಿನ ಕುತಂತ್ರ ವಾದಿಗಳ ಆಟ ಬಸವಣ್ಣನವರ ತತ್ವಗಳ ತಳಹದಿ ಮೇಲೆ ನಡೆಯುವುದಿಲ್ಲ. ಅದಕ್ಕಾಗಿ ಇವರು ಬಸವಣ್ಣನವರ ಆಶಯಗಳ ವಿರುದ್ದವಾಗಿ ಹಾರಾಟ, ಚೀರಾಟ ಮಾಡುತ್ತಿರುವುದು ನಾವೆಲ್ಲರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇನ್ನು ಬಸವಣ್ಣನವರು ಅಂದೇ 12ನೇ ಶತಮಾನದಲ್ಲಿ ಜಾತಿಯ ಸಂಕೋಲೆಗಳನ್ನು ಬಿಚ್ಚಿ ಬಿಸಾಡಿ, ಮಾನವರೆಲ್ಲರೂ ಸಮಾನರು ಎಂಬುದು ಸಾರಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದನ್ನು ಹೇಗಾದರೂ ಮಾಡಿ ತಡೆಗಟ್ಟಬೇಕೆಂಬ ಉದ್ದೇಶದಿಂದ ಇಂದಿನ ವೈದಿಕಶಾಹಿಗಳ ಮನಸ್ಥಿತಿ ಬಸವತತ್ವ ವಿರುದ್ಧ ನಿರಂತರವಾಗಿ ಕೆಲಸ ಮಾಡುತ್ತಿರುವುದು ಕಾಣುತ್ತೇವೆ. ಇದು ಹೇಡಿತನದ ಕೆಲಸವಲ್ಲದೇ ಮತ್ತೇನೂ ಇಲ್ಲವೇ ಇಲ್ಲ. ಇನ್ನು ಹೇಳಬೇಕೆಂದರೆ 12ನೇ ಶತಮಾನಕ್ಕಿಂತ ಮೊದಲು ನಾವೆಲ್ಲ ಅಸ್ಪೃಶ್ಯರಾಗಿದ್ದೆವು. ಬಸವಣ್ಣ ಎಲ್ಲರಿಗೂ ಇಷ್ಟಲಿಂಗದೀಕ್ಷೆ ನೀಡಿ ಶ್ರೇಷ್ಠರನ್ನಾಗಿಸಿದರು. ಈ ಬಗ್ಗೆ ಇತಿಹಾಸದಲ್ಲಿಯೂ ಉಲ್ಲೇಖವಿದೆ. ಎಲ್ಲರನ್ನೂ ಅಪ್ಪಿಕೊಂಡು ಲಿಂಗ, ವರ್ಣ, ಜಾತಿ, ವಯೋಭೇದ ಮಾಡದೇ ಎಲ್ಲರನ್ನು ಸಮಾನರಾಗಿ ಕಂಡು, ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಿದರು ಬಸವಣ್ಣನವರು. ಅಲ್ಲದೆ ಇನ್ನೊಂದು ವಿಚಾರ ಈ ಸಮಯದಲ್ಲಿ  ಪ್ರಸ್ತಾಪ ಮಾಡುತ್ತಿರುವೇ ಅದು ಏನೆಂದರೆ ಇಂದಿನ ಲಿಂಗಾಯತರು ಸಹ 12 ಶತಮಾನದಲ್ಲಿ ಕೆಳವರ್ಗದ ಜನರೇ ಆಗಿದ್ದರೂ, ಇವರಾಗಿದ್ದರೂ ಎಂಬ ವಿಷಯ ಇತ್ತೀಚೆಗೆ ಬಳಕಿಗೆ ಬರುತ್ತಿದೆ.ಅದು ಎನೇ ಇರಲಿ, ಸಧ್ಯ ನಮಗೆ ಬಸವಣ್ಣ ನವರು ಕೊಟ್ಟ ಕಾಯಕದ ಗುಣಗಳನ್ನು ಅರಿತು  ಅವುಗಳನ್ನು ಅಳವಡಿಸಿಕೊಂಡು ಹೆಜ್ಜೆ ಹಾಕುವುದು ಉತ್ತಮ ಮಾರ್ಗವಾಗಿದೆ. ಮೇಲು ಕೀಳು ಎಂಬ ಭಾವನೆ ತೊಡೆದು ಹಾಕಿ, ಸರ್ವರಿಗೂ ಸಮಪಾಲು, ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಇವು ಬಸವತತ್ವದ ಅನುಷ್ಠಾನದಿಂದ ಮಾತ್ರ ಸಾಧ್ಯವಾಗುತ್ತದೆ.ನಮ್ಮ ಶರಣರು ಹನ್ನೆರಡನೇ ಶತಮಾನದಲ್ಲಿ ಬದುಕಿನ ಸಂಕಷ್ಟಗಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರಗಳನ್ನು ಸೂಚಿಸಿದ್ದಾರೆ. 
ಬನ್ನಿ ನಾವೆಲ್ಲರೂ ಜೊತೆಯಾಗಿ ಮತ್ತೆ ಶರಣರ ವೈಚಾರಿಕ ವಿಚಾರಗಳನ್ನು  ಜಾರಿಗೆ ತಂದು. ಬಸವಣ್ಣನವರ ಮಾರ್ಗದರ್ಶನದಲ್ಲಿ ನಡೆದು, ಸಮಾಜದಲ್ಲಿ ಬೇರೂರಿದ ಅಸಮಾನತೆಯ ಸಂಕೋಲೆ ತೊಲಗಿಸಲು ಸದಾ ಪ್ರಯತ್ನ ಮಾಡೋಣ.

ಕರ್ನಾಟಕ ಸರಕಾರ / ಕೇಂದ್ರ ಸರ್ಕಾರ:
ಬಸವಣ್ಣನವರು ಮಾಡಿದ ಸಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ, ಇವರ ಅನನ್ಯ ನಿಸ್ವಾರ್ಥ ಸೇವಾ ಕೈಂಕರ್ಯಗಳನ್ನು ಗಂಭೀರವಾಗಿ ಪರಿಗಣಿಸುವ ಮೂಲಕ
ಕರ್ನಾಟಕ ಸರಕಾರ ಸೇರಿದಂತೆ
ಕೇಂದ್ರ ಸರ್ಕಾರವು ಬಸವಣ್ಣನವರನ್ನು ಭಾರತದ ಸಾಂಸ್ಕೃತಿಕ 
ನಾಯಕನೆಂದು ಘೋಸಿಸಬೇಕೆಂದು ಸರಕಾರಗಳಿಗೆ ಒತ್ತಾಯಿಸುತ್ತೇನೆ.ಅಲ್ಲದೆ ಕೇಂದ್ರ ಸರ್ಕಾರದಿಂದ ಬಸವಣ್ಣನವರ ಜಯಂತಿ ಆಚರಣೆ ಮಾಡಲೇಬೇಕು
ಜೊತೆಗೆ ಬಸವಣ್ಣನವರ ಹೆಸರಿನಲ್ಲಿ ಪ್ರಶಸ್ತಿ ಪ್ರಧಾನ ಮಾಡಬೇಕು ಮತ್ತು  ದೇಶದ ಎಲ್ಲಾ ಇನ್ನಿತರ ರಾಜ್ಯ ಸರಕಾರಗಳು ಸಹ ಬಸವ ಜಯಂತಿ ಆಚರಣೆ ಮಾಡುವ ದಿಕ್ಕಿನಲ್ಲಿ ಚಿಂತಿಸಬೇಕು.
ಹಾಗೂ ವಿಶ್ವದ ಎಲ್ಲಾ ಭಾಷಗಳಿಗೆ ವಚನಗಳು ತುರ್ಜಮೆಯ ಮಾಡುವ ಕೆಲಸ ಮಾಡಬೇಕು. ಶರಣರ ಹೆಸರಿನಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸಬೇಕು, ಬಸವಕಲ್ಯಾಣ ಮತ್ತು ಕೊಡಲಸಂಗಮ ಅಭಿವೃದ್ಧಿಗೆ (ರೂ 2000 ಕೋಟಿಕ್ಕಿಂತಲೂ ಅಧಿಕ ) ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿತಾಣವಾಗಿ ಅಭಿವೃದ್ಧಿ ಮಾಡಲೇಬೇಕು ಎಂಬುವುದೆ ಇಡಿ ಬಸವಾಭಿಮಾನಿಗಳ ಒಕ್ಕೊರಲಿನ ಆಗ್ರಹವಾಗಿದೆ.

 ಈ ದಿಸೆಯಲ್ಲಿ ಕರ್ನಾಟಕ ಸರಕಾರ ಹಾಗೂ ಭಾರತ ಸರಕಾರ ಈ ನಿಟ್ಟಿನಲ್ಲಿ  
ಹೆಜ್ಜೆ ಶೀಘ್ರವಾಗಿ ಇಡುವ ಮೂಲಕ ವಿಶ್ವಕ್ಕೇ ಮಾದರಿಯಾಗಬೇಕು ಎಂಬುವುದೇ ನಮ್ಮೆಲ್ಲರ ಕಳಕಳಿ.

ಆಶಯ ಮಾತು:
ಅಣ್ಣ ಬಸವಣ್ಣನವರು ವಿಶ್ವದ ಮೊದಲ ವೈಚಾರಿಕ ಪ್ರಜ್ಞೆಯ ಮಾಹಾನ ನಾಯಕ, ಮೌಲ್ಯಾಧಾರಿತ ವಿಚಾರವಾದಿ ಪ್ರತಿಪಾದಕ, ಜಾಗತಿಕ ಸಮುದಾಯದ ಮಹಾನ್ ನಾಯಕ. ಶೋಷಿತ ವರ್ಗದವರನ್ನ, ನಿರ್ದೋಷಿಗಳನ್ನ ರಕ್ಷಿಸಲಿಕ್ಕಾಗಿಯೆ ಈ ಮರ್ತ್ಯಲೋಕಕ್ಕೆ ಬಂದ ಮಹಾಕಾರಣಿಕ ವಿಶ್ವಗುರು ಬಸವಣ್ಣನವರು. ಬಸವಣ್ಣನವರು ಯಾವುದೇ ಒಂದು ಜನಾಂಗದ ಸೊತ್ತಾಗಿರದೆ, ಸಕಲ ಜೀವರಾಶಿಗಳ ಜೀವಾಳವಾಗಿದ್ದರು. ಹಾಗಾಗಿ ಅವರು ಎಲ್ಲರನ್ನೂ ಅಪ್ಪಿಕೊಂಡು ಸಾಮೂಹಿಕ ನಾಯಕತ್ವದಿಂದ ವೈಚಾರಿಕ ಚಳುವಳಿಯನ್ನ ಆರಂಭಿಸಿದರು. ಅದಕ್ಕಾಗಿಯೇ ಬಸವಾದಿ‌ ಶರಣರು ಸುಂದರ, ಸರಳವಾದ ಭಾಷೆಯಲ್ಲಿ ಎಲ್ಲಾ ಜನಾಂಗಕ್ಕೆ ತಿಳಿಯುವಂತೆ ಮನ - ಮನಸ್ಸುಗಳಿಗೆ ನಾಟುವಂತೆ ವಚನಗಳು ಕನ್ನಡದಲ್ಲಿ ರಚನೆ ಮಾಡಿದ್ದಾರೆ.ಜೊತೆಗೆ ಕನ್ನಡ ಭಾಷೆಯನ್ನು  ಶ್ರೀಮಂತಗೊಳಿಸಿದಾರೆ. ವಿಶೇಷವಾಗಿ ಹೇಳಬೇಕೆಂದರೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಪ್ರಮುಖ ಕಾರಣ ವಚನ ಸಾಹಿತ್ಯದ ಅಮೂಲ್ಯ ಕೊಡುಗೆ ಎನ್ನಬಹುದಾಗಿದೆ. ಹಾಗಾಗಿಯೇ ಬಸವಾದಿ ಶಿವಶರಣರು ಕರ್ನಾಟಕ ಸೇರಿದಂತೆ ಭಾರತದ ಹೆಮ್ಮೆಯ ಸಾಂಸ್ಕೃತಿಕ ನಾಯಕ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಈ ಮೂಲಕ ದೇಶದ ಕೀರ್ತಿಯನ್ನು ಬಸವಣ್ಣನವರು ಜಾಗತಿಕ ಮಟ್ಟದಲ್ಲಿ ಪಸರಿಸಿದಾರೆ. ಹೀಗಾಗಿಯೇ ಜನಸಾಮಾನ್ಯರು  ಬಸವಣ್ಣನವರ ವಿಚಾರಗಳನ್ನು ಮನಗಂಡು ಹನ್ನೆರಡನೆಯ ಶತಮಾನವು ವಿಶ್ವದ ಮಹಾದಿವ್ಯ ಜ್ಯೋತಿಯನ್ನು ಬೆಳಗಿದ ಕಾಲಘಟ್ಟವದು ಎಂದು ಸ್ಮರೀಸುತ್ತಾರೆ. 

ಅದೇ ರೀತಿ
ವಿಶ್ವ ಮಾನ್ಯರಾದ ಬಸವಣ್ಣ ಹಾಗೂ ಬಸವಾದಿ ಶಿವಶರಣ ತ್ಯಾಗ, ಬಲಿದಾನ ವ್ಯರ್ಥ ಯಾಗದಂತೆ 
ನಾವೆಲ್ಲ ನೋಡಿಕೊಳ್ಳಬೇಕಾಗಿದೆ ಹಾಗೂ ಕಾರ್ಯನಿರ್ವಹಿಸಬೇಕಾಗಿದೆ.ಈ ದಿಸೆಯಲ್ಲಿ ಎಲ್ಲಾ ಬಸವಾಭಿಮಾನಿಗಳು ಸ್ವಾರ್ಥ ಬಿಟ್ಟು, ನಿಸ್ವಾರ್ಥಿಯಾಗಿ ದುಡಿಯಲು ಮುಂದೆ ಬರಬೇಕಾಗಿದೆ. ಅಂದಗಾಲೇ ನಾವು ಬಸವಣ್ಣನವರನ್ನು ವಿಶ್ವದ ಸಾಂಸ್ಕೃತಿಕ ನಾಯಕನಾಗಿ ನೋಡಬಹುದಾಗಿದೆ.  


ಸಂಗಮೇಶ ಎನ್. ಜವಾದಿ.
ಸಾಹಿತಿ, ಪತ್ರಕರ್ತ.
ಅಧ್ಯಕ್ಷರು : ಕಲ್ಯಾಣ ಕರ್ನಾಟಕ ಸಾಹಿತ್ಯ ಪರಿಷತ್ತು ಹಾಗೂ
ಕಲ್ಯಾಣ ಕಾಯಕ ಪ್ರತಿಷ್ಠಾನ.
ಜಿಲ್ಲೆ-ಬೀದರ.
ಮೋ ನಂ-9663809340.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅವಿತು ಕೂತಿರುವೆ ನೀನೆಲ್ಲಿ (ಕವಿತೆ) - ಸಾಬಣ್ಣ. ಎಚ್. ನಂದಿಹಳ್ಳಿ ಜೆ.

ಅವಿತು ಕುಳಿತಿರುವೆ 
ಬಂದೊಮ್ಮೆ ಸಂತೈಸು

ಕಾಣದೆ ಮನ ಹುಡುಕುತ್ತಿದೆ
ಹಮ್ಮು ಬಿಮ್ಮುಗಳ ಬಿಟ್ಟು
ಸಂತೈಸಿ ಬಿಡು ಒಮ್ಮೆ ನಿನ್ನ
ಬಿಸಿ ಅಪ್ಪುಗೆಯ ಕೊಟ್ಟು

ಬಾಳಲಾರೆ ನಾ ನಿನ್ನೊಲವ ಬಿಟ್ಟು
ಬಿಟ್ಟೆನೆಂದರೆ ಬದುಕೆಲ್ಲವೂ ಕೆಟ್ಟು

ಹತ್ತು ಹಲವು ಬಣ್ಣಗಳ ನಾ ಕೊಟ್ಟು
ತಯಾರುಸುತ್ತಿರುವೆ ನಿನ್ನೀ ಮೈಕಟ್ಟು
ನೋಡಿ ಅರ್ಪಿಸಿಕೋ- ದಯವಿಟ್ಟು
ಇಷ್ಟವೆಂದರೊಮ್ಮೆ ಹೃದಯ ಕೊಟ್ಟು

ಅರ್ಪಿಸಿಬಿಡು ಪ್ರೀತಿ-ಪ್ರೇಮವ ಕೊಟ್ಟು
ಬದುಕಲಾರೆ ಇನ್ನೂ ನಾ ನಿನ್ನ ಬಿಟ್ಟು

- ಸಾಬಣ್ಣ. ಎಚ್. ನಂದಿಹಳ್ಳಿ ಜೆ.
ತಾ||ಶಹಾಪುರ ಜಿಲ್ಲಾ|| ಯಾದಗಿರಿ
ಮೊಬೈಲ್ ನಂ:- 7348983463


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಲಕದಿರಲಿ ಮನ (ಕವಿತೆ) - ಮೊಹಮ್ಮದ್ ಅಜರುದ್ದೀನ್

ಹಿಜಾಬ್ ರಾಜಕೀಯ ಶುರುವಾಯ್ತು
ವಿದ್ಯಾರ್ಥಿಗಳ ಮನಸ್ಸು ಒಡೆಯಿತು
ಜ್ಞಾನ ಕಲಿಸಿದ ಸರಸ್ವತಿ ಕೂಗುಮರೆತು ಹೋಯ್ತು
ಸಹೋದರರ ನಡುವೆ ಬಿರುಕು ಬಂದಿತು ||

ಮೊಟ್ಟೆ ಆಟ ಮುಗಿಸಿದರು
ಹಿಜಾಬ್ ವಿಷಯ ತೆಗೆದುಕೊಂಡರು 
ಸಮಾನತೆಯ ಮಧ್ಯೆ ಬೆಂಕಿ ಹಚ್ಚಿದರು  
ಆಟ ನೋಡುತ್ತಾ ನಗುತಿರುವರು ||

ಧರ್ಮ ರಾಜಕೀಯ ಶುರುಮಾಡಿದರು  
ಮುಗ್ಧ ಮನಸ್ಸುಗಳಿಗೆ ವಿಷ ತುಂಬಿದವರು  
ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದ
ಸೋದರರ  ಹೃದಯ ಚೂರು-ಚೂರು  ಮಾಡಿದರು ||

ನಾವೆಲ್ಲರೂ ಒಂದೇ ಎಂದರು  
ಹಿಂದಿಂದೆ ರಾಜಕೀಯದ ಮೂಗು ತೂರಿಸಿದರು 
ಅಣ್ಣ-ತಂಗಿ ಮಧ್ಯೆ ಬೆಂಕಿ ಹಚ್ಚಿದರು  
ಹಿಜಾಬ್ ವಿಷಯ ತೆಗೆದು ದೂರ ಮಾಡಿದರು  ||

ವಿದ್ಯಾಲಯದಲ್ಲಿ  ಸಮಾನತೆಯಿಂದ ಇರೋಣ  
ಸಮಾನತೆಯ ಸಸಿ ನೆಟ್ಟು ಬೆಳೆಸೋಣ ಪ್ರೀತಿಯನ್ನು ಉಳಿಸೋಣ  
ಧರ್ಮಗಳ ಭೇದ ಭಾವದ ಕಳೆಯನ್ನು ಕಿತ್ತೊಗೆಯೋಣ
ಸರಸ್ವತಿ ಸಾಲುಗಳನ್ನು ಮತ್ತೆ ನೆನೆಯೋಣ  
ರಾಜಕೀಯದ ವಿಷಬೀಜಗಳಿಂದ ದೂರ ಇರೋಣ  
ನಿರ್ಮಲತೆಯ ಮನವೆಂಬ ಕೊಳ ಕಲಕದಂತೆ ನೋಡಿಕೊಳ್ಳೋಣ ||

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಖಾಲಿ ಕಾಗದ ; ಪುಟ ತುಂಬಿಸುವ ಹಠ (ಗದ್ಯ ಕವಿತೆ) - ಶಾಂತಾರಾಮ ಶಿರಸಿ.

ನೋಡಲು ಬರಿಯ ಖಾಲಿ ಕಾಗದ,
ಖಾಲಿ ಕಾಗದ ಪುಟ ತುಂಬಿಸುವ ಹಠ ಇರಬೇಕು ಸದಾ,
ಮನಸಿನ ಭಾವನೆಗಳನು/ಕಲ್ಪನೆಗಳನು ಬರಹ ರೂಪಕ್ಕಿಳಿಸುವುದ,
ಖಾಲಿ ಕಾಗದದ ಮೇಲೆ ಮುತ್ತುಗಳಂತೆ ಅಕ್ಷರಗಳನು ಪೋಣಿಸುವುದ,
ಚಿತ್ರಗಳ ಗೀಚುವುದ-ರಂಗುರಂಗಿನ ಬಣ್ಣಗಳ ತುಂಬಿಸುವುದ,
ಅಕ್ಷರಗಳ ಪೋಣಿಸಿದರೆ-ರಂಗಿನ ಬಣ್ಣಗಳ ತುಂಬಿಸಿದರೆ  ಹೆಚ್ಚಾಗುವುದು ಕಾಗದದ ಅಂದ,
ಅದ ನೋಡಿದರೆ ಈ ಮನಸಿಗೆ ಉಲ್ಲಾಸ -ಹೊಸ ಸ್ಪೂರ್ತಿ ಆನಂದ...

ಬದುಕೂ ಸಹ ಖಾಲಿ ಕಾಗದ,
ತುಂಬಿಸಬೇಕು ಯೋಚನೆಯ ದುಡಿಮೆಯಿಂದ,
ಮನಸುಗಳ ಬೆಸುಗೆಯ ಪ್ರೀತಿಯಿಂದ,
ಕಷ್ಟವಾದರೂ ಇಷ್ಟಪಟ್ಟು ಬದುಕೆಂಬ ಕಾಗದದ ಮೇಲೆ ಭರವಸೆ-ನಂಬಿಕೆಗಳನು ಧೈರ್ಯದಿಂದ ಗಟ್ಟಿಯಾಗಿ ಅಚ್ಚಾಗಿ ಗೀಚಬೇಕು,
ನೋವು,ದು:ಖ,ನಿರಾಸೆಗಳ ಅಳಿಸಬೇಕು,
ನಗುವು ತುಂಬಿ ನಲಿಯುತಿರಬೇಕು
ಸೋಲುಗಳ ಸುಧಾರಿಸಿ ಗೆಲುವಿನ ಗುರಿಯ ತಲುಪಬೇಕು,
ನಲಿವು,ಸು:ಖ,ಪ್ರೀತಿ-ಮಮತೆ,ಸಂತೋಷ,ನೆಮ್ಮದಿ ತುಂಬಿದ ಕಾಗದದ ಮೇಲಿನ ರಂಗು-ರಂಗಿನ ಚಿತ್ತಾರದ ಮುತ್ತಿನಂತೆ ಪೋಣಿಸಿರುವ ಹೊಳೆಯುವ  ಅಕ್ಷರಗಳಂತೆ ಬದುಕಬೇಕು,
ಈ ಬದುಕು ಇತರರಿಗೆ ಮಾದರಿಯಾಗಬೇಕು- ಸ್ಪೂರ್ತಿ ತುಂಬಬೇಕು...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ.
8762110543
7676106237


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೊಂಗಿರಣ (ಕವಿತೆ) - ರಾಕೇಶ್.ಎಂ.

ಭಾಸ್ಕರನ ಕಿರಣ ಧರೆಗಿಳಿದಿದೆ 
ಹೊಂಬೆಳಕಿನ ಆರತಿಯ ಮಾಡಿದೆ 
ಹೊಸ ಬೆಳಕು ಹೊಸ ಹುಮ್ಮಸ್ಸು 
ದಿನವೂ ಮೂಡಿಸುವನು ಹೊಸ ಮನಸ್ಸು 

ಬರುವನು ಪ್ರತಿದಿನವು ಹೊಸ ಸಂದೇಶದಿ 
ಹುಟ್ಟು ಮೂಡಣದಿ 
ಮುಳುಗುವನು ಪಡುವಣದಿ 
ಮೂಡಿ ಮುಳುಗುವ ಆಟ ಅಂಗಳದಿ 

ತಾಯಿಯ ಗರ್ಭದಿ ಜನಿಸಿದ ಕಂದ 
ಧರೆಯ ನೋಡಲೆಂದು ಬಂದ 
ಪಕ್ಕಿಗಳು ಮಾಡಿದೆ ನಿನಾದ 
ಮೂಡಿಸಿದೆ ಹೊಸ ಭರವಸೆಯ ಇನಾದ 

ಯಾರೂ ಕರೆಯದಿದ್ದರೂ ಬರುವನು ಸೂರ್ಯ 
ದಿನವೂ ಮರೆಯದೆ ಮಾಡುವನು ಅವನ ಕಾರ್ಯ 
ಯಾರೂ ಹೊಗಳ ಬೇಕಿಲ್ಲ ತೆಗಳ ಬೇಕಿಲ್ಲ 
ಪ್ರಶಂಸೆ ಬಿರುದನವ ಬಯಸಲಿಲ್ಲ 

- ರಾಕೇಶ್.ಎಂ.
ಯುವ ಬರಹಗಾರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ನಬಿಸಾಹೇಬ್ ಅಮೀನಾಬಿ ದಂಪತಿಗಳ ಪುತ್ರನಾಗಿ ಜನಿಸಿದರು ಇಬ್ರಾಹಿಂ ಸುತಾರ 
ಆಧುನಿಕ ಸೂಫಿಸಂತರು ಕನ್ನಡದ ಕಬೀರ್ ನಂತೆ ಬೆಳಗಿದರು ಇಬ್ರಾಹಿಂ ಸುತಾರ

ಖುರಾನ್ ಹದೀಸ್ ಭಗವತ್ಗೀತೆ ಉಪನಿಷತ್ ವಚನಗಳ ಆಳ ಅಧ್ಯಯನದ ಪ್ರವಚನಕಾರ
ಪರಮಾತ್ಮ ಧರ್ಮ ಮಾನವ ಕುಲ ಎಲ್ಲವೂ ಒಂದೇ ಎಂದು ಸಾರಿದರು ಇಬ್ರಾಹಿಂ ಸುತಾರ 

ಆಧ್ಯಾತ್ಮಿಕ ಚಿಂತಕರು ಸರ್ವಧರ್ಮಗಳ ಸಮನ್ವಯ ಭಾವದವರು ಇವರು 
ಕನ್ನಡ ರಾಜ್ಯೋತ್ಸವ, ಪದ್ಮಶ್ರೀ ಪ್ರಶಸ್ತಿಗಳಿಂದ ಪುರಸ್ಕೃತರು ಇಬ್ರಾಹಿಂ ಸುತಾರ 

ಮತಗಳೆಂಬ ಬಣ್ಣ ಬಣ್ಣದ ಹೂವುಗಳನ್ನು ಒಂದುಗೂಡಿಸಿದ ಗುಲ್ದಸ್ಥ ನಮಗೆಲ್ಲ 
ಜನ ಮನಗಳಲ್ಲಿ ಭಾವೈಕ್ಯತೆಯ ಸುಗಂಧ ಹಬ್ಬಿಸಿದರು ಇಬ್ರಾಹಿಂ ಸುತಾರ 

ಬಡತನದಲ್ಲಿ ಬೆಂದು ಪ್ರಾಮಾಣಿಕ ದೇಶ ಸೇವೆಗೈದ ಮಹಾ ಲಿಂಗ ಪುರ ದವರು 
"ಮಾಜಾ" ಜಾತಿ ವಾಚಕ ಪದಗಳಲ್ಲ ತತ್ವ ವಾಚಕ ಪದಗಳೆಂದು ಅರುಹಿದರು ಇಬ್ರಾಹಿಂ ಸುತಾರ 

- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಆಶಾಕಾರ್ಯಕರ್ತೆ'ಯೆಂಬ ರಂಗಿನ ಹಿಂದೆ (ಸಣ್ಣ ಕತೆ) - ಸಿ. ಎನ್. ಭಾಗ್ಯಲಕ್ಷ್ಮಿ ನಾರಾಯಣ.

ಎಲ್ಲಡೆ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳಿ ಎಂಬ ಅಬ್ಬರದ ಪ್ರಚಾರದ ನಡುವೆ ತುಂಬಾ ಹಿಂದುಳಿದ ಒಂದು ಹಳ್ಳಿಯ ಜನ ಕೋವಿಡ್ ವ್ಯಾಕ್ಸಿನ್ ನನ್ನು ನಿರಾಕರಿಸಿದ್ದರು.  ಅದು ಎಷ್ಟೋ ತಿಂಗಳ ನಂತರ ಬೆಳಕಿಗೆ ಬಂದಾಗ ಸರ್ಕಾರವು ಆಸ್ಪತ್ರೆಯವರ ಮೇಲೆ ತಿರುಗಿ ಬಿತ್ತು. ಏಕೆಂದರೆ ಕೋವಿಡ್ ಲಸಿಕೆಗೆ ಸಂಬಂಧಪಟ್ಟಂತೆ ಆಸ್ಪತ್ರೆ,  ಪಂಚಾಯಿತಿ,  ಶಾಲೆ ಇವರಿಗೆ ಜವಾಬ್ದಾರಿಯನ್ನು ಕೊಟ್ಟಿತ್ತು.  ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದರೂಶಕೂಡಾ ಫೋನ್ ಸಂಪರ್ಕಕ್ಕೆ ಸಿಗದ  ಇನ್ನೂರು ಜನರಿರುವ ಒಂದು ಕಾಡಿನೊಳಗಿನ ಹಾಡಿ ಕಣ್ತಪ್ಪಿನಿಂದಲೋ,,ಅಜಾಗರೂಕತೆಯಿಂದಲೋ ತಪ್ಪಿಸಿಕೊಂಡಿತ್ತು.
     ಆಸ್ಪತ್ರೆಯ ವೈದ್ಯಾಧಿಕಾರಿಗಳು ಅಲ್ಲಿನ ವೈದ್ಯರಿಗೆ ಕೇಳಲಾಗಿ ಅವರ ಕೈಕೆಳಗೆ ಅತ್ಯಂತ ಕಿರಿಯ ಸಹಾಯಕರಾದ 'ಆಶಾವರ್ಕರ್' ನ್ನು ಬೊಟ್ಟು ಮಾಡಿತ್ತು.  ಆಸ್ಪತ್ರೆಯ ಒಂದು ತಂಡ ಈ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿತ್ತು.  ಅದರ ಮೊದಲ ಮತ್ತು ಕೊನೆಯ ಹಂತ ' ಆಶಾಕಾರ್ಯಕರ್ತರು ' ನಿರ್ವಹಿಸುತ್ತಿದ್ದರು.. ಅದರಲ್ಲಿ ಸೀತಾ ಎನ್ನುವ  ಕಾರ್ಯಕರ್ತೆ ಆ ಹಾಡಿಗೆ ನಿಯೋಜನೆಗೆ ಒಳಪಟ್ಟ ತಂಡದ ಮುಖ್ಯಸ್ಥೆ .  ವಾಹನಗಳ ಸೌಲಭ್ಯ ಇಲ್ಲದ ಹಾಡಿಯೊಳಗೆ ಹೊಕ್ಕುವುದೆಂದರೆ ಸುಲಭದ ಮಾತೇ...?!  ಒಳಬಂದ ಸೀತಾ ಅಧಿಕಾರಿಗಳ ಮೊಗವನ್ನು ನೋಡುತ್ತಾ ತಲೆತಗ್ಗಿಸಿ ನಿಂತಳು.  ಅಧಿಕಾರಿಗಳು ಅವಳನ್ನು ದುರುಗುಟ್ಟಿ ನೋಡುತ್ತಾ,,ರೇಗಲು ಶುರುಮಾಡಿದರು. ಸೀತಾ ಭಯದಿಂದ ನಡೆದ ಘಟನೆಯನ್ನು ಹೇಳಲು ಪ್ರಾರಂಭಿಸಿದಳು.
  ದೇಶದಾದ್ಯಂತ  ವ್ಯಾಕ್ಸಿನ್ ಹಾಕಲು ತರಾತುರಿಯಿಂದ ಸರ್ಕಾರ ಒಪ್ಪಿಗೆ ಕೊಟ್ಟಮೇಲೆ ಆಸ್ಪತ್ರೆಯವರು ಎಲ್ಲಾ ಕೆಲಸಗಳನ್ನು ತಮಗೆ ಸಂಬಂಧಪಟ್ಟವರಿಗೆಲ್ಲಾ ಹಂಚಿತ್ತು.  ಮೊದಲು ನಲವತ್ತರ ಮೇಲ್ಪಟ್ಟ ಜನರನ್ನು ಪಟ್ಟಿಮಾಡಬೇಕಾಗಿದ್ದುದರಿಂದ ಎಲ್ಲಾ ಕಡೆ ಮಳೆ,ಬಿಸಿಲು,ಚಳಿಯೆನ್ನದೆ ತಿರುಗಿ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲೇ ಬೇಕಿತ್ತು. ಸೀತಾ ಮತ್ತು ಅವಳ ಗೆಳತಿಯಿಬ್ಬರೂ  ಕಾಡಿನ ಹಾದಿಯ ಹಾಡಿಯಕಡೆಗೆ ಹೆಜ್ಜೆಹಾಕಿದರು. ಮೊದಲೇ ಹೇಳಿ ಕೇಳಿ ಹಾಡಿಯ ಹಾದಿ ಎಂದರೆ ಸ್ವಲ್ಪ ಭಯವೇ. ಆದರೂ ಧೈರ್ಯ ಮಾಡಿಕೊಂಡು ಹೋಗುತ್ತಿದ್ದ ಇವರ ಮುಂದೆ ' ದೊಪ್ಪೆಂದು ' ನಾಲ್ಕು ಜನ ಜಿಗಿದು ನಿಂತರು. ಸ್ನಾನ ಕಾಣದ, ಒರಟುಮೈಯ, ಚಿತ್ರ ವಿಚಿತ್ರ ಅವತಾರಗಳ,  ಬಲಿಷ್ಠ ಪುರುಷಸಿಂಹಗಳನ್ನು ನೋಡಿ ಸೀತಾ ಮತ್ತು ಅವಳ ಗೆಳತಿ ಅವಕ್ಕಾದರು..ಎದೆಹಿಡಿದುಕೊಂಡು, ಭಯದಿಂದ ನಡುಗುತ್ತಾ ನಿಂತೇ ಬಿಟ್ಟರು.
     ಹಾಡಿಯ ಜನ ಒರಟರಿರಬಹುದು. ಆದರೆ ವಿಚಾರಗಳನ್ನು  ಸ್ವಲ್ಪ ಸ್ವಲ್ಪ ಹಾಗೇ ತಿಳಿಯುತ್ತಿದ್ದರು. ನಗರಪ್ರದೇಶಗಳಿಂದ ನೂರಾರು ಕಿ.ಮೀ.ಗಳ ಅಂತರವಿದ್ದರೂ, ಟಿ.ವಿ.ಅಲ್ಲಿನ ಅವರ ವಿಚಾರ  ವಿನಿಮಯಕ್ಕೆ ಸಾರಥ್ಯವಹಿಸಿತ್ತು. ಶರವೇಗದಿಂದ ನುಗ್ಗುತ್ತಿದ್ದ ಕೋವಿಡ್ ನ ವಿಷಯ ದಂಗಪಡಿಸಿತ್ತಾದರೂ...ಯಾರನ್ನೂ ಹತ್ತಿರ ಬಿಟ್ಟುಕೊಳ್ಳಬಾರದು. ಅದೂ ನಗರವಾಸಿಗಳನ್ನಂತೂ ಸಮೀಪಕ್ಕೆ ಬಿಟ್ಟುಕೊಳ್ಳಬಾರದೆಂದೂ..ಯಾರೂ ಇಲ್ಲಿಂದ ನಗರ ಪ್ರದೇಶಗಳನ್ನು ಮುಟ್ಟವಂತಿಲ್ಲವೆಂಬ ನಿರ್ಧಾರಕ್ಕೆ ಬದ್ಧರಾಗಿ ನಡೆದುಕೊಳ್ಳೋಣ..ನಮ್ಮ ಹಾಡಿಗೆ ಯಾವ ದುರ್ಗತಿಯೂ ಬಾರದಿರಲೆಂದು ಬೇಡುತ್ತಾ ವನದೇವಿಯನ್ನು ಪೂಜಿಸುತ್ತಿದ್ದರು. ವಿಷಯ ಹೀಗಿರುವಾಗ ಇವರು ಬಂದಿದ್ದು ನೋಡಿ.."ನಮ್ಮೂರಿಗೆ ಯಾವುದೇ ನಗರ ಪ್ರದೇಶದವರ ಸಂಪರ್ಕ ಇಲ್ಲ. ಯಾರೂ ಬರುವಂತಿಲ್ಲ. ಹಾಗೊಂದು ವೇಳೆ ಬಂದರೂ ನಾವು ಯಾವ ಔಷಧ, ಇಂಜೆಕ್ಷನ್ ತಗೊಳೋದಿಲ್ಲ. ನಮಗೆ ನಮ್ಮ ಪಾಡಿಗೆ ಇರಲು ಬಿಟ್ಟು ಬಿಡು. ಇಲ್ಲವಾದರೆ ಜೀವ ಸಹಿತ ಹೋಗುವುದಿಲ್ಲ " ಎಂದು ಭಲ್ಲೆಯಿಂದ ನೆಲಕುಟ್ಟಿ ನಿಂತ ಬಿರುಸಿಗೆ ಹೆದರಿ ಜಾಗ ಕಾಲಿಮಾಡಿದ ಸೀತ ಅಂದು ಆಸ್ಪತ್ರೆಗೆ ಸುಳ್ಳು ಮಾಹಿತಿಯನ್ನು ದಾಖಲಿಸಬೇಕಾಗಿತ್ತು.  ನಗರದ ರೋಗವನ್ನೇ ಕಾಣದ ಹಾಡಿಯ ಜನ ಹಾಯಾಗಿ ಹಾಡಿಕೊಂಡು ಇದ್ದವರಿಗೆ ,  ಒಂದು ಗರಬಡಿದಂತೆ ಬಂದೆರಗಿದ ಸುದ್ದಿ ಎಂದರೆ ಆ ಹಾಡಿಯ ಮಗನೊಬ್ಬ ದೂರದ ಊರಲ್ಲಿ ಕೊರೋನಗೆ ಬಲಿಯಾದ ಸುದ್ದಿ.  ಸತ್ತು ಹೋದ ಮಗನ ಹೆಣ ಪಡೆಯಲು ಹೋದಾಗ,  ಸಂಬಂಧಿಕರಿಗೆ  ಕೋವಿಡ್ ಲಸಿಕೆಯ ವಿಚಾರಣೆ ಸಮಯದಲ್ಲಿ "ತಾವು ಯಾವುದೇ ಲಸಿಕೆ ಪಡೆದಿಲ್ಲ,,,ನಮ್ಮೂರಿಗೆ ಯಾರೂ ಬಂದಿಲ್ಲ...ವಿಷಯ ಗೊತ್ತಿಲ್ಲ "ಎಂಬ ಮುಗ್ಧಜನರ ಉತ್ತರ ಕೇಳಿ ಹೌ ಹಾರುವ ಸರದಿ ವಿಚಾರಕರದ್ದು.  ಫೋಟೋ, ಸಂಭಾಷಣೆ ಸಮೇತ ಎಲ್ಲಾ ಕಡೆ ವೈರಲ್ ಆದ ಸುದ್ಧಿ ...ಎಲ್ಲಾ ಅಧಿಕಾರಿಗಳ ಕುತ್ತಿಗೆಗೆ ಬಂದು ಇಲ್ಲೀವರೆಗೆ ಎಳೆತಂದಿತ್ತು.  
           ಸೀತಾ ಮಾಡಿದ ಒಂದು ಸಣ್ಣ ಕೆಲಸ ದೇಶದಾದ್ಯಂತ ಹರಿದಾಡಿ ತಾನಿಷ್ಟು ಕೆಟ್ಟದಾಗಿ ಬಿಂಬಿತಳಾಗುವೆ ಎನ್ನುವ ವಿಷಯ ಅಂದು ಗೊತ್ತಾಗಿದ್ದರೆ ಇಷ್ಟು ರದ್ಧಾಂತ ಆಗುತ್ತಿರಲಿಲ್ಲ. ಹಾಡಿ ಹೈದರ ಮೇಲೆ ಎಲ್ಲಿಲ್ಲದ ರೋಷ ಉಕ್ಕಿ ಹರಿಯಿತು.  ಸೀತಾ ಅಂದೇ ಈ ಸುದ್ದಿಯನ್ನು ಅಧಿಕಾರಿಗಳಿಗೆ ಮುಟ್ಟಿಸಿದ್ದರೂ ಇಷ್ಟು ಆಗುತ್ತಿರಲಿಲ್ಲ..ಆದರೀಗ...?
            ಕೆಲವು ಪ್ರಾಣಿಗಳು,,,ರಕ್ಕಸರೂ,,,ಎಂಟೆದೆ ಬಂಟರೂ ಕಾಲಿಡಲು ನಡುಗುವ ಕಡುಗಪ್ಪು ಕತ್ತಲೊಳಗಿನ ಕಾಡಿನ ಹಾದಿ ಅತೀ ಭಯಂಕರ ಎಂದು ಎಲ್ಲಾ ಅಧಿಕಾರಿಗಳಿಗೂ ತಿಳಿದದ್ದು ಅಂದೇ...ಇನ್ನೂ ಹೆಣ್ಣು ಮಗಳು ಸೀತಾಳ ಕಥೆ ಏನಾಗಿರಬೇಡವೆಂದು ಎಲ್ಲರ ಹೃದಯ ಮರುಗಿತು...' ಆಶಾ ಕಾರ್ಯ ಕರ್ತೆ'ಯ ಕೆಲಸವೇನಿದ್ದರೂ ನಗರದ ಸುತ್ತಮುತ್ತಲಿನ ಹಳ್ಳಿಗಳಿಗೆ ಸೀಮಿತಗೊಳಿಸುವಂತೆಯೂ,,,ಮತ್ತೆಂದೂ ಇಂತಹ ದುರ್ಗಹಾದಿಯೊಳಗೆ ಇಂತಹ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಬಳಸದಂತೆಯೂ ಆದೇಶ ನೀಡಿದ ಅಧಿಕಾರಿಗಳು,,,,ಸೀತಾಳ ಬಳಿ ಕ್ಷಮೆ ಕೋರಿದರು.  ತಾವು ತಿಳಿದ ತಪ್ಪಿಗೆ ಪ್ರಮಾಣೀಕರಣದ ಸಾಕ್ಷಿ ಅವರ ಕಣ್ಣು ತೆರೆಸಿತ್ತು..ಕೈ ಕೆಳಗೆ ಕೆಲಸಮಾಡುವ ಇಂತಹ ಸಹಾಯಕರ ಬಗ್ಗೆ ಸರ್ಕಾರ ಎಚ್ಚೆತ್ತು ಕೊಂಡು ಆಶಾಕಿರಣದಂತಿರುವ ' ಆಶಾಕಾರ್ಯ ಕರ್ತೆ' ಯರ ಬಗ್ಗೆ , ಅವರ ಜೀವನದ ಸಂಘರ್ಷಗಳ ಬಗ್ಗೆ ಒಂದು ದೊಡ್ಡ ಸವಲತ್ತುಗಳ ಮಾರ್ಗಸೂಚಿಯನ್ನು ಹೊರತರುವ  ಆಶಾವಾದಿಯ ಭರವಸೆಯನ್ನು ನೀಡುತ್ತಾ ಮುನ್ನಡೆದರು.
     ಅಧಿಕಾರಿಗಳ ದಂಡು ಆ ಹಾಡಿಗೆ ಮುತ್ತಿಗೆ ಹಾಕಿ....ಸಾಯುತ್ತಿರುವವರ ಚಿತ್ರಣ ತೋರಿಸಿ ಇಡೀ ಹಾಡಿಗೆ ಮುನ್ನೆಚ್ಚರಿಕೆಗಾಗಿ ಕೋವಿಡ್ ಲಸಿಕೆಯನ್ನು ನೀಡುವಲ್ಲಿ ಯಶಸ್ವಿಯಾಯಿತು..
      ಸೀತಾ ತನ್ನ ತಲೆಯ ಮೇಲೆ ಬಂದಿದ್ದ ದೊಡ್ಡ ಗಂಡಾಂತರ ಕಳೆಯಿತೆಂದು..ಅಧಿಕಾರಿಗಳ ಮಾತಿಗೆ ಖುಷಿಪಡುತ್ತಾ ..ಕಣ್ಣಂಚಿನ ನೀರನ್ನು ತುಸು ಮೆಲ್ಲಗೆ ಒರೆಸಿಕೊಂಡಳು.  
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗುರುದೇವೋಭವ (ಲೇಖನ) - ಐಶ್ವರ್ಯಾ ಶ್ರೀ, ಶರೆಗಾರ.

ಒಂದು ಕಾಡಿನಲ್ಲಿ ಅಚ್ಚು, ಮೀಟು,ಚುಮ್ಮಿ ಮತ್ತು ಚಿಟ್ಟೆ ಎಂಬ ನಾಲ್ಕು ಗುಬ್ಬಿಗಳು ವಾಸವಾಗಿದ್ದವು.ಅದರಲ್ಲಿ ಅಚ್ಚು ಮತ್ತು ಚುಮ್ಮಿ ಎಂಬ ಗುಬ್ಬಿಗಳು ಜಾಣರಾಗಿದ್ದವು, ಆದರೆ ಚಿಟ್ಟಿ ಗುಬ್ಬಿಗೆ ಏನು ಬರುತ್ತಿರಲಿಲ್ಲ ಒಂದು ದಿನ ಆಹಾರ ಹುಡುಕಿ ಸುಸ್ತಾಗಿ ಚುಮ್ಮಿ ಗುಬ್ಬಿ ಸಪ್ಪೆಮೋರೆ ಮಾಡಿಕೊಂಡು ಕುಳಿತಿತ್ತು ಆಗ ಅಲ್ಲಿಗೆ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಬಂದು ಚಿಟ್ಟಿ ಯಾಕೆ ಇಷ್ಟು ಬೇಸರದಲ್ಲಿ ಕುಳಿತಿದ್ದೀಯ ಏನಾಯ್ತು ಎನ್ನುತ್ತವೆ,ಅದಕ್ಕೆ ಚಿಟ್ಟೆ ಏನು ಮಾಡಲಿ ನನಗೆ ಎಲ್ಲಿಯೂ ಆಹಾರ ಸಿಗುತ್ತಿಲ್ಲ ,ದೂರ ಹೋಗಿ ಹುಡುಕಲು ನನಗೆ ಜಾಸ್ತಿ ಹೊತ್ತು ಹಾರುವ ಸಾಮರ್ಥ್ಯವಿಲ್ಲ ಎಂದು ಹೇಳುತ್ತದೆ .ಅದಕ್ಕೆ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಜಾಸ್ತಿ ಹೊತ್ತು ದೂರದವರೆಗೆ ಹಾರಲು ಕೆಲವು ನಿಯಮಗಳಿವೆ ನಾವು ನಿನಗೆ ಕಲಿಸುತ್ತೇವೆ ಮತ್ತು ನಾಳೆ ನಾವೇ ನಿನ್ನನ್ನು ಆಹಾರ ಇರುವ ಜಾಗಕ್ಕೆ ಕರೆದೊಯ್ಯುತ್ತೇವೆ  ಎಂದು ಹೇಳುತ್ತವೆ ಅವುಗಳ ಮಾತು ಕೇಳಿ ಚಿಟ್ಟಿಗೆ ಬಹಳ ಸಂತೋಷವಾಯಿತು. ಅಂದು ಅಚ್ಚು ಮತ್ತು ಚುಮ್ಮಿ,ಚಿಟ್ಟಿಗೆ ದೂರದವರೆಗೆ ಹಾರಲು  ನಿಯಮಗಳನ್ನು ಹೇಳಿಕೊಟ್ಟವು.ಚಿಟ್ಟಿರಾತ್ರಿ ಇಡೀ ಆ ನಿಯಮಗಳನ್ನು ಅಭ್ಯಾಸ ಮಾಡಿತು. ಮಾರನೇದಿನ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು ಬಂದು ಚಿಟ್ಟಿಯನ್ನು ಕರೆದುಕೊಂಡುಹೋದರು. ರಾತ್ರಿ ಅಭ್ಯಾಸ ಮಾಡಿದ್ದರಿಂದ ಚಿಟ್ಟಿ, ಅಚ್ಚು ಮತ್ತು ಚುಮ್ಮಿಗಿಂತ ಜೋರಾಗಿ ಹಾರುವುದನ್ನು ಕಲಿತಿತ್ತು. ಆದ್ದರಿಂದ ಅವುಗಳಿಗಿಂತ ತಾನೆ ಮುಂದೆ ಹೋಗಿ ಆಹಾರ ಹುಡುಕಿ ಅಚ್ಚು ಮತ್ತು ಚುಮ್ಮಿ ಗಾಗಿ ಕಾಯುತ್ತಾ ಕುಳಿತಿತ್ತು. ಇದರಿಂದ ಕೋಪಗೊಂಡ ಅಚ್ಚು ಮತ್ತು ಚುಮ್ಮಿ ಗುಬ್ಬಿಗಳು  ನಮ್ಮಿಂದ ಹಾರಲು ಕಲಿತ ಚಿಟ್ಟಿ ನಮಗಿಂತ ವೇಗವಾಗಿ ಹಾರುತ್ತಿದೆ ಎಂದು ಹೊಟ್ಟೆಕಿಚ್ಚು ಪಟ್ಟವು.
                  ಸ್ವಲ್ಪ ದಿನದ ನಂತರ ಮಳೆಗಾಲ ಪ್ರಾರಂಭವಾಯಿತು. ಎಲ್ಲ ಗುಬ್ಬಿಗಳು ಗೂಡು ಕಟ್ಟಲು ಪ್ರಾರಂಭಿಸಿದವು,ಆದರೆ ಚಿಟ್ಟಿ ಗುಬ್ಬಿಗೆ ಗೂಡು ಕಟ್ಟಲು ಸಹ ಬರುತ್ತಿರಲಿಲ್ಲ, ಈ ವಿಷಯ ಅಚ್ಚು ಮತ್ತು ಚುಮ್ಮಿಗೆ ತಿಳಿಯಿತು. ಆಗ ಅವೆರಡೂ ಸೇರಿ ಸಂಚು ರೂಪಿಸಿದವು.ಚಿಟ್ಟೆಯು ಅಚ್ಚು ಮತ್ತು ಚುಮ್ಮಿ ಹತ್ತಿರ ಹೋಗಿ ಗೂಡುಕಟ್ಟಲು ಸಹಾಯ ಕೇಳಿತು ,ಅದಕ್ಕೆ ಅಚ್ಚು ಮತ್ತು ಚುಮ್ಮಿ ಒಪ್ಪಿಕೊಂಡು ನೀನು ಹುಲ್ಲಿನ ಕಡ್ಡಿ ತೆಗೆದುಕೊಂಡು ಬಾ ನಾವೇ ಗೂಡು ಕಟ್ಟಿಕೊಡುತ್ತೇವೆ ಎಂದು ಹೇಳಿದವು. ಅದಕ್ಕೆ  ಚಿಟ್ಟಿ ಆಗಲಿ ಎಂದು ಹುಲ್ಲಿನ ಕಡ್ಡಿ ತಂದಿತು.ಅವು ತಮ್ಮ ಸಂಚಿ ನಂತೆ ಗೂಡು ಕಟ್ಟಿದವು .ಅವು ಮಾಡಿದ ಸಂಚು ಚಿಟ್ಟಿಗೆ ಹೊಳೆಯಲೇ ಇಲ್ಲ. ಇದು ತನ್ನದೂಂದು ಗೂಡು ಸಿದ್ದವಾಯಿತೆಂದು ತುಂಬಾ ಖುಷಿಯಾಗಿತ್ತು.  ಮತ್ತು ಹೇಳಿತು  ನೀವಿಬ್ಬರು ತುಂಬಾ ಒಳ್ಳೆಯವರು  ನನಗೆ ತುಂಬಾ ಸಹಾಯ ಮಾಡಿದ್ದೀರಿ, ನಾನು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ. ನಿಮ್ಮಂತಹ ಸ್ನೇಹಿತರು ಸಿಕ್ಕಿರುವುದು ನನ್ನ ಭಾಗ್ಯ ಎಂದು.  ಇತ್ತ ಅಚ್ಚು ಮತ್ತು ಚುಮ್ಮಿ ಮಾತನಾಡಿಕೊಂಡು ನಮ್ಮಿಂದ ಹಾರುವುದನ್ನು ಕಲಿತು ನಮಗಿಂತ ಮುಂದೆ ಬರುತ್ತೀಯಾ ಈಗ ನೋಡು ನಿನ್ನ ಪರಿಸ್ಥಿತಿ ಏನಾಗುತ್ತದೆ ಎಂದುಕೂಂಡವು.ಇತ್ತ ಸ್ವಲ್ಪ ಸಮಯದ ನಂತರ ಜೋರಾಗಿ ಗಾಳಿ ಬೀಸಲು ಶುರು ಮಾಡಿತು, ಎಲ್ಲರೂ ಗೂಡು ಸೇರಿದರು. ಗಾಳಿಯ ರಭಸಕ್ಕೆ ಚಿಟ್ಟಿಯ ಗೂಡಿನ ಒಂದೊಂದೆ ಕಡ್ಡಿಗಳು ಕಿತ್ತು ಹೋಗಲಾರಂಭಿಸಿದವು ಚಿಟ್ಟಿಗೆ ಭಯವಾಯಿತು ,ಜೋರಾಗಿ ಮಳೆಯು ಬರತೊಡಗಿತು, ಮಳೆಯ ಹೊಡೆತಕ್ಕೆ ಗೂಡು ಕಿತ್ತು ಹೋಯಿತು ಚಿಟ್ಟಿ ಕೆಳಗೆ ಬಿದ್ದಿತ್ತು. ಅದನ್ನು ನೋಡಿ  ಅಚ್ಚು ಮತ್ತು ಚುಮ್ಮಿ ನಗತೊಡಗಿದರು,  ಚಿಟ್ಟಿ ಮಳೆ ಹೋಗುವವರೆಗೆ ತನ್ನನ್ನು ಅವುಗಳ ಗೂಡಿಗೆ ಸೇರಿಸಿಕೊಳ್ಳಿ ಎಂದು ಬೇಡಿಕೊಂಡಿತು ಆದರೆ ಅವು ಅದಕ್ಕೆ ಜಾಗ ಕೊಡಲಿಲ್ಲ. ಚಿಟ್ಟಿ ಮಳೆಯ ರಭಸಕ್ಕೆ ಸಿಕ್ಕಿ ಸಾಯುವ ಸ್ಥಿತಿ ತಲುಪಿತು. ಆಗ ಅಲ್ಲಿಗೆ ಮೀಟು ಗುಬ್ಬಿಯು ಬಂದು  ಚಿಟ್ಟಿಯ ರಕ್ಷಣೆ ಮಾಡಿತು. ಚಿಟ್ಟಿ ನಡೆದ ಘಟನೆಯನ್ನೆಲ್ಲಾ   ಮೀಟುವಿಗೆ  ಹೇಳಿ ತನಗೆ ಒಂದು ಗೂಡು  ಕಟ್ಟಿಕೊಡುವಂತೆ ಕೇಳಿತು.  ಅದಕ್ಕೆ ಮೀಟು ಒಂದು ಗೂಡು ಕಟ್ಟಿ ತೋರಿಸಿ, ತನ್ನಂತೆ ಕಟ್ಟಲು ಹೇಳಿತು ಈಗ ಚಿಟ್ಟಿ ಮೀಟುವಿಗಿಂತ ಸುಂದರವಾಗಿ ಗೂಡು ಕಟ್ಟಿತು. ಆಗ ಮೀಟುವಿಗೆ ತುಂಬಾ ಸಂತೋಷವಾಯಿತು. ನೀನು ನನಗಿಂತ ಸುಂದರವಾಗಿ ಕಟ್ಟಿದ್ದೀಯ ಎಂದಿತು ಮೀಟುವಿನ ಕಣ್ಣಲ್ಲಿ ಸಾರ್ಥಕ ಭಾವ ಕಾಣುತ್ತಿತ್ತು. ಅದು ಚಿಟ್ಟಿಯ ಗೂಡು ನೋಡಿ ಅಚ್ಚು ಮತ್ತು ಚುಮ್ಮಿಯಂತೆ ಹೊಟ್ಟೆಕಿಚ್ಚು ಪಡಲಿಲ್ಲ ಬದಲಾಗಿ ಹೆಚ್ಚು ಸಂತೋಷ ಪಟ್ಟಿತು, ಕಾರಣ ಮೀಟು ಚಿಟ್ಟಿಯ ಗುರುವಾಗಿತ್ತು

              ನೋಡಿ ಪ್ರಪಂಚದಲ್ಲಿ ಯಾವುದೇ  ಸ್ವಾರ್ಥವಿಲ್ಲದೆ, ಅಸೂಯೆ ಪಡೆದೆ ತನ್ನಲ್ಲಿರುವ ಜ್ಞಾನವನ್ನು ಹಂಚುವ ಏಕೈಕ ವ್ಯಕ್ತಿ ಗುರು.ಗುರು ಯಾವಾಗಲೂ ತನ್ನ ಶಿಷ್ಯ ತನಗಿಂತ ಒಂದು ಹೆಜ್ಜೆ ಮುಂದೆ ಇರಬೇಕೆಂದು ಬಯಸುತ್ತಾನೆ.

    -  ಐಶ್ವರ್ಯಾ ಶ್ರೀ, ಶರೆಗಾರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹರಿಯುವ ಕಂಬನಿ (ಕವಿತೆ) - ಶ್ರುತಿ ಚಂದ್ರು, ಎಸ್.

ಹರಿಯುವ ಕಣ್ಣಿನ ಕಂಬನಿಗೆ ಕಾರಣವ್ಯಾರು।
ಮನಸ್ಸಿನ ಭಾವನೆಗೆ ಒಡೆಯ ಇನ್ಯಾರೋ ॥
ಮರೆಯದೆ ಕಾಡುತ್ತಿವೆ ಮನಸ್ಸಿನ ನೋವುಗಳು ನೂರಾರು/

 ನೋಡದೆ ಇರಲಾರದೆ ಇರಲು ಜೀವನ ಅಷ್ಟು ಸುಲಭವೇನೂ ?
ಈ ಆಸೆಗಳು ಹುಚ್ಚು  ಎಂದು ತಿಳಿದರೂ
 ಮಾಡುತ್ತಿವೆ ಸಾವಿರ ತಕರಾರು:
ಆಗುವ  ಸಮಯವಲ್ಲ ಹೋಗುವ ಗಳಿಕೆಯೂ ಅಲ್ಲ 
ಆದರೂ ಸದ್ದಿಲ್ಲದೆ ಮೂಡುತ್ತವೆ ತುಂಟಾಟದ ಕನಸುಗಳೆಲ್ಲಾ /

ಮರೆ ಮಾಚಿ ನಿಂತಿವೆ ನೂರಾರು ಆಸೆಗಳು
ಕಣ್ಮುಂದೆ ನಿಲ್ಲಲಾರದೆ 
ಕಡಿವಾಣವೂ ಹಾಕಲಾರದೆ "
ಮರುಗುತ್ತಿದೆ ಮನಸ್ಸು ಒಳಗೊಳಗೆ/

- ಶ್ರುತಿ  ಚಂದ್ರು. ಎಸ್ , ಕೊಟ್ಟೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೊರೋನ ಸಹೋದರಾ (ಕವಿತೆ) - ಶ್ರೀಮತಿ ಕಲಾವತಿ ಮಧುಸೂದನ.

ಸೌಹಾರ್ದತೆ ಸೌಜನ್ಯದ ಸಮಾನತೆಯ ಕೊರೋನಾ ಸಹೋದರ ಜ್ವರಾ.. ಎಲ್ಲೆಡೆಯು ಸಂಚರಿಸಿ ಮನೆಮನ ಗಳನು ಬಿಡದೆ ಹೊಕ್ಕು,ಮಕ್ಕಳು ಮುದುಕರು ಹರೆಯದವರೆಂದು ಬೇಧವೆಣಿಸದೆ ವಿಚಾರಿಸುವ ಜ್ವರಾ..

ಮಮತೆ ಕಾಳಜಿಗಳಿಂದ ನಿಷ್ಪಕ್ಷಪಾತದೆ ಸರದಿಯಂತೆ ವಿಚಾರಿಸುವ ವಿಶ್ವಾಸ ಪೂರ್ಣತೆಗೆ  ಮನೆಮಾತಾಗಿರುವ ಜ್ವರಾ.. ಕೊರೋನ ಸಹೋದರ ಜ್ವರಾ.. 

ಗೋಪಿಕಾ ಸ್ತ್ರೀಯರು ಒಂದೆಡೆ ಸೇರಿದಾಗ ರಾತ್ರಿ ನಮ್ಮ ಮನೆಗೆ ಕೃಷ್ಣ ಬಂದಿದ್ದ,ನಮ್ಮ ಮನೆಗೆ ಕೃಷ್ಣ ಬಂದಿದ್ದ
ಎಂದು ಎಲ್ಲರೂ ಒಂದೇ ಸಂಭ್ರಮವನ್ನು ಹೆಮ್ಮೆಯಿಂದ ಹಂಚಿಕೊಂಡಂತೆ...

ನಮ್ಮ ಮನೆಗೂ ಶೀತಛಳಿ ಜ್ವರಾ ಕೆಮ್ಮುಗಳ ಅತಿಥಿ ಮಿತ್ರರು ಬಂದು ವಿಚಾರಿಸುತ್ತಿದ್ದಾರೆ., ನಮ್ಮ ಮನೆಗೂ ಛಳಿಜ್ವರಗಳಿಂದ  ನರಳುವ ಧ್ವನಿಗಳದೇ ಸುಸ್ವರಾ...!!

ಉಪದ್ರವಿದ್ದರೂ. ಅಭದ್ರವಲ್ಲದ ಸಹಜರೂಪ ಪ್ರಾಣಾಂತಿಕವಿರದ ಶಾಂತರೂಪಿ  ವೈರಾಣುವ ಬೇಸರಿಸದೇ ಸತ್ಕರಿಸಿ ಉಪಚರಿಸಿ ಕಳಿಸೋಣ ಕೊರೋನ ಸಹೋದರನಾ..!!

ಆತಂಕರಹಿತ ಪಯಣವನು ನಿಭಾಯಿಸುವ ಕೊರೋನ ಸಹೋದರಿಯನು ಕೊರೋನಾದ ನಿಯಮವನೆ ಅನುಸರಿಸಿ  ಉಪಚರಿಸಲು ಮರೆಯದಿರೋಣ...!!

- ಶ್ರೀಮತಿ ಕಲಾವತಿ ಮಧುಸೂದನ, ಹಾಸನ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅರಳುವ ಸುಮ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ಸುಮವ  ಮಾರಿ ಕುಸುಮವ ಅರಳಿಸುವ ಮಾತೆಯೇ
ಛಲದಿ ಬದುಕ ಕಟ್ಟಿಕೊಡಲು ಹವಣಿಸುತಿಯೇ
ಬೆನ್ನಿಂದಿರುವಳು ಪುಷ್ಪದ ರಾಣಿ ಅರಳುವಳು
ಅರಳಿ ಆಸರೆಯಾಗುವಳು ತಾಳ್ಮೆಯಲಿ ಕಾಯೇ.

ನಿನ್ನ ಹೆಗಲಲಿ ಹೊರುವ ಕಾಯಕಕೆ ನಿಂತಿಹಳು
ಹಣೆಬರಹವ ತಾನೇ ಬರೆಯಲು ಹೊರಟಿಹಳು
ಕಾಲಚಕ್ರದಲಿ ಯಾವುದು ಶಾಶ್ವತವಲ್ಲೆಂದು
ತಿಳಿದು ಇತಿಹಾಸ ಬರೆಯಲು ಸಜ್ಜಾಗಿಹಳು.

ನೀ ಮಾರಿದ ಹೂಗಳದು ಬಾಡಿದರು ಬಾಡಲಿ
ಜೀವಕೆ ಕಂಪ ಕೊಡುವ ಸುಮವದು ಬಾಡದಿರಲಿ
ಕೆಸರಲ್ಲಿ ಕಮಲ ಹುಟ್ಟಿದರು ಬೆಲೆಯು ಎಂದೆಂದೂ
ಕಷ್ಷಗಳೆಷ್ಟಿದರೂ ಬಾಡಿಸದಿರು ತಾಯಿ ಅವಳ ನಗುವೆಂದು.

ನಿಷ್ಕಲ್ಮಶ ತುಂಬಿದ ಕೈಯಲಿ ಪುಸ್ತಕವ ಹಿಡಿಸಿರುವೆ
ಸದ್ಗುಣ ಧಾರೆಯೆರೆದು ಮಸ್ತಕವ ಬೆಳೆಸಿರುವೆ
ಕಲ್ಲುಮುಳ್ಳು ತುಳಿದ ನಿನ್ನ ಪಾದಗಳ ಅಡಿಯಲ್ಲಿ
ಸುಮರಾಶಿಯ ಚೆಲ್ಲಿ ಬೆಳಗುವಳು ಕಾದು ನೋಡಲ್ಲಿ.

ಇದು ಕೇವಲ ನಿನ್ನಂತರಂಗದ ನೋವಲ್ಲ ಕೇಳೆ ಮಾತೆ
ಬೇಸರವಿಲ್ಲದೆ ಸಲಹುತಿಹಳು ಹಲವು ವ್ಯಥೆಯ ಭೂಮಾತೆ
ನಿನ್ನ ಭರವಸೆಯದು ನಿನ್ನ ಬೆನ್ನ ನೆರಳಾಗಿ ಕುಳಿತಿಹುದು
ನಿನ್ನ ಬೆಳಕಲಿ ಸಾಗಿಸುವ ಗುರಿಯನು ಹೊಂದಿಹುದು.

ಬಾಡುವ ಸುಮಕೆ ನೀರ ಚಿಮುಕಿಸುವಂತೆ ನೀಡು 
ಮಗಳ ಭವಿಷ್ಯವ ಬೆಳಗುವ ಭರವಸೆಯನು ಮನಕೆ.

- ಪುರುಷೋತ್ತಮ ಪೆಮ್ನಳ್ಳಿ.
ಪಾವಗಡ ತಾ ತುಮಕೂರು ಜಿ.
ದೂ.9632296809


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಾನಾಗುವಾಸೆ (ಕವಿತೆ) - ಶ್ರೀ ವೆಂಕಟೇಶ್ ಬಡಿಗೇರ

ಭವದ ಬೆಂಕಿಯ ಕೆನ್ನಾಲಿಗೆಯಲಿ ಸುಟ್ಟು 
ಪುರ್ರನೆ ಹಾರಿದ
ಬೂದಿ ಹಕ್ಕಿಯಾಗಿ
ದಿಗಂತದ ಮೈ ಸವರಿ
ಮಳೆಯಂತೆ ಸುರಿಯಬೇಕು.

ಭೂ ಒಡಲತುಂಬ 
ಹಸಿರನುಸಿರು. 
ಬೆಳ್ಳಿ ಬೆಟ್ಟದ ಮೂಡಲಿ
ಕಣ್ಣ ತೆರೆದ ಬೆಳಕು
ನಗೆ ಚಿಮ್ಮಿ 
ಹಠಾತನೆ ಮೂಡಿದ ಕಾಮನಬಿಲ್ಲು.

ಇರುವ ಸಾಲಿನ ಕಿರಿಯ ನಾನು 
ಬಿಲ್ಲಿಗೆ ಬಾಣ ಹೂಡುವ ಬಗೆಗೆ
ನನ್ನ ನಡೆ  ಹಾಸಿ 
ನದಿಯಾಗಿ ತೊರೆಬ್ಬಿಸಿ ಸಮುದ್ರದೊಡಲು 
ಸೇರುವ ಕನಸು.

ಚಂದ್ರಮ ಹೆತ್ತ 
ಬೆಳದಿಂಗಳ  ಪರದೆಯಲಿ ಬೆಳ್ಳಿಚುಕ್ಕಿಯಾಗುವಾಸೆ.
ಮಣ್ಣ ಕಣದಲಿ ಗುಲಾಬಿ ನಗು
ಚಿಗುರೊಡೆದು
ಜಗದ ಹಸಿವು ನೀಗುವಾಸೆ.
ಹಸಿರ ಚಿಗುರ ತೇರನೇರಿ ಬಂತು  ಮರಿದುಂಬಿ ಚಿಗುರು ಮೀಸೆ 
ಎಲ್ಲೆಲ್ಲೂ ನೀರವ ಮೌನ ಗಗನ ಸಿಡಿಲು ಗುಡುಗುವಾಸೆ.
ಹೆತ್ತೊಡಲು ಭೂತಾಯಿಗೆ 
ಚಿದಂಬರ ತೊಡಿಸುವಾಸೆ.
- ವೆಂಕಟೇಶ್ ಬಡಿಗೇರ
ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತರು
ಕಮಲಾಪುರ ಅಂಚೆ
 ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ.
ಮೊಬೈಲ್ ಸಂಖ್ಯೆ 9448330535


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಜಯಂತಣ್ಣನಿಗಾಗಿ (ಪುಸ್ತಕ ಅವಲೋಕನ) - ಶ್ರೀಮತಿ ಶಾರದಾ ಎ. ಅಂಚನ್.

ಇತ್ತೀಚೆಗಷ್ಟೇ 
 ಡಾ// ರಂಜಿತ್ ಕುಮಾರ್ ಶೆಟ್ಟಿ ಅವರ ವೈದ್ಯಕೀಯ ವೃತ್ತಿ ಜೀವನದ ಅನುಭವಗಳ ಬಂಡಾರವನ್ನೇ  ತುಂಬಿಕೊಂಡ  ಲೇಖನಗುಚ್ಛಗಳ  ಕೃತಿ "ನೆನಪಿನಾಳದಿಂದ " ಕೃತಿಯನ್ನು ಓದಿ ಪ್ರೇರಿತಳಾಗಿದ್ದ  ನಾನು  ಕುತೂಹಲದಿಂದ ಕೈಗೆತ್ತಿಕೊಂಡದ್ದು ಅವರ ಇನ್ನೊಂದು  ಕಾದಂಬರಿ ಕೃತಿ ."ಜಯಂತಣ್ಣನಿಗಾಗಿ... ." .ಶೀರ್ಷಿಕೆಯೇ  ತುಂಬಾ ಕುತೂಹಲವಾಗಿ ಕಂಡಿತು ನನಗೆ.ಯಾಕೆ ಈ ಹೆಸರು? ಜಯಂತಣ್ಣನಿಗಾಗಿ ಏನು ?ಯಾರು ಜಯಂತಣ್ಣ ? ಹೀಗೆ ಆಸಕ್ತಿಯಿಂದ ಪುಟ ತೆರೆದಂತೆ ಅತೀ ಕುತೂಹಲ ಬರಹ!. ಕೂಡಲೇ ಓದಿ ಮುಗಿಸಬೇಕೆಂಬ ಹಂಬಲ..! .ಸಿನಿಮಾ ಶೈಲಿಯ ಕಾದಂಬರಿಯಾದರೂ ವಾಸ್ತವಕ್ಕೆ ಹತ್ತಿರವಾದಂತೆ ಭಾಸ. ಈ ಕಾದಂಬರಿ ಚಲನಚಿತ್ರವಾದರೆ ಬಹುಶ; ಯಶಸ್ವಿಯಾಗಬುದೆಂದು ಇವರ ಸಹೋದರ ನಾದ ನಿರ್ದೇಶಕ ,ನಿರ್ಮಾಪಕ ರಿಷಬ್ ಶೆಟ್ಟಿ ಯೋಚಿಸಿದ್ದರೇನೋ  ಅದಕ್ಕೆಂದೇ ಜಯಂತಣ್ಣನಿಗಾಗಿ... ಕಾದಂಬರಿಯನ್ನು ಚಲನಚಿತ್ರವನ್ನಾಗಿ ಮಾಡುವ ಆಶಯ  ಹೊಂದಿದ್ದಾರೆ ಅವರು .
" ರಂಜಿತ್ ಗೆ  ಪ್ರಶಸ್ತಿಗಳು ಬರಬೇಕು. ಈ ಕಥೆ ಸಿನಿಮಾ ರೂಪದಲ್ಲಿ ಬರಬೇಕು. ನಾನೊಬ್ಬ ಕಠಿಣ ಎಕ್ಸಾಮಿನರ್.ಆದರೆ  ಈ ಪುಸ್ತಕಕ್ಕೆ ಅತೀ  ಹೆಚ್ಚಿನ ಅಂಕಗಳನ್ನು ಕೊಡುತ್ತಿದ್ದೇನೆ.ಇದು ಕನ್ನಡದ ಒಂದು ಅತೀ ಉತ್ತಮ ಕಾದಂಬರಿ .....ಹೀಗೆಂದವರು ಬೇರೆ ಯಾಡಾ// ರಂಜಿತ್ ಕುಮಾರ್ ಅವರೊಬ್ಬ  ಸ್ತ್ರೀ ರೋಗ ತಜ್ಞರು, ಮಣಿಪಾಲದಂತಹ ಖ್ಯಾತ ಮೆಡಿಕಲ್  ಕಾಲೇಜಿನಲ್ಲಿ ಕಲಿತು ಅಂದಿನ ದಿನಗಳ ಹೆಸರಾಂತ ಸ್ತ್ರೀರೋಗ ತಜ್ಞೆ ಡಾ// ಪದ್ಮಾರಾವ್ ಅವರ  ಅವರ ಶಿಷ್ಯನಾಗಿ ಪಳಗಿದವರು. ಮುಂದಿನ ದಿನಗಳಲ್ಲಿ ಕುಂದಾಪುರದಲ್ಲಿ  ವಿನಯ ನರ್ಸಿಂಗ್ ಹೋಂ  ಸ್ಥಾಪಿಸಿ  ಸುಮಾರು  42 ವರುಷಗಳ  ಕಾಲ ವೈದ್ಯಕೀಯ ಸೇವೆ ಮಾಡಿದವರು.ವೈದ್ಯನೊಬ್ಬ ಬರೀ ರೋಗಿಯ ಸೇವೆ ಮಾಡುವುದು ಮಾತ್ರವಲ್ಲದೆ ಸಮಾಜದ ಅಂಕು ಡೊಂಕುಗಳನ್ನು ಕೂಡಾ ಸರಿದಾರಿಗೆ ತರಬಲ್ಲ ಎಂಬುದನ್ನು ಸಾಬೀತುಪಡಿಸಿದ   ಅಪರೂಪದ ಕಾದಂಬರಿ  “  ಜಯಂತಣ್ಣನಿಗಾಗಿ......”  
 
 ಇದೊಂದು  ಸಿನಿಮೀಯ ಶೈಲಿಯಲ್ಲಿ ಬರೆಯಿಸಿಕೊಂಡು ಹೋದ ಕಾದಂಬರಿಯಾದರೂ  ಓದುತ್ತ ಹೋದಂತೆ  ‘ಇಂದಿನ ದಿನ  ಈ ಕಾದಂಬರಿ ಯನ್ನು ಓದಿಯೇ ಮುಗಿಸುವೆ ಎಂಬ ಭಾವನೆ ತರಿಸಿದ , ಪುಸ್ತಕ ದಿಂದ ಕಣ್ಣು ಕೀಳಲಾಗದಂತಹ  ಮಾಂತ್ರಿಕತೆಯ  ಬರಹ  ತುಂಬಿದ ಕೃತಿ. ಡಾ//ರಂಜಿತ್ ಕುಮಾರ್  ಅವರ ಬರಹದ ಶೈಲಿ ಬಹುಶ: ಅವರ ಬರಹಗಳನ್ನು ಓದಿದವರಿಗೆ ಮಾತ್ರ ಗೊತ್ತು ,ಒಬ್ಬ ವೈದ್ಯನಾಗಿ ಕೂಡ  ಲೀಲಾಜಾಲವಾಗಿ  ಬರೆಯುತ್ತಾ  ಓದುಗನನ್ನು   ತನ್ನ ಅಕ್ಷರದೊಳಗೆ ಹೇಗೆ  ಬಂಧಿಸಬೇಕು ಎಂಬುದನ್ನು  ಚೆನ್ನಾಗಿ ತಿಳಿದುಕೊಂಡ ವೈದ್ಯ ಸಾಹಿತಿ.
ಜಯಂತಣ್ಣನಿಗಾಗಿ--ಕಾದಂಬರಿಯಲ್ಲಿ ಬರುವ ಎರಡು  ಪಾತ್ರದಾರಿಗಳು. ಒಬ್ಬ ಜೂನಿಯರ್ ವೈದ್ಯ ಮತ್ತೊಬ್ಬ ಸೀನಿಯರ್ ವೈದ್ಯ. ಉತ್ತಮರ ಸಂಘ ಹೇಗೆ ಮನುಷ್ಯನನ್ನು ಮುಂದಕ್ಕೆ ತರುತ್ತದೆ ಎನ್ನುವುದನ್ನೇ ಸಾಕ್ಷಿಯಾಗಿಟ್ಟುಕೊಂಡು ತನ್ನ ಬದುಕಿನಲ್ಲಿ  ಸನ್ಮಾರ್ಗ  ತೋರಿಸಿದ ಸೀನಿಯರ್ ವೈದ್ಯನನ್ನು ಅನುಸರಿಸಿ ಗೆದ್ದ ಜೂನಿಯರ್ ವೈದ್ಯನ  ಕಥೆ  .ಹಾಗೆಯೇ ಆ ಸೀನಿಯರ್     ವೈದ್ಯನ   ಬದುಕು,ಭಾವನೆ, ಅವನು ಯಾವ ರೀತಿಯಿಂದ ಮಹಾತ್ಮನೆನಿಸಿಕೊಳ್ಳುತ್ತಾನೆ,ಅವನ ದ್ಯೇಯ  ಧೋರಣೆಗಳೇನಿತ್ತು?,ಅವನು ಯಾವ ರೀತಿ ಇತರರಿಗೆ ಮಾದರಿಯಾಗಿದ್ದ? ಅವನು ಬಾಳಿ ಬದುಕಿದ ರೀತಿ  ಇತ್ಯಾದಿ ಅಂಶಗಳು ಈ ಕಾದಂಬರಿಯ ಮೂಲಾಂಶಗಳಾಗಿವೆ .

.ಮುಕುಂದ್ ಹೊಸ ಭವಿಷ್ಯದ ಕನಸುಗಳನ್ನು  ಸಾಕಾರಗೊಳಿಸಲೆಂದು  ವೈದ್ಯಕೀಯ ವಿದ್ಯಾರ್ಥಿಯಾಗಿ ಮೆಡಿಕಲ್ ಕಾಲೇಜ್ ಗೆ   ಸೇರಿಕೊಳ್ಳುತ್ತಾನೆ..ಒಳಗೆ ಬರುತ್ತಲೇ  ರಾಗಿಂಗ್ ಕಾಟ.. ರಾಗಿಂಗ್  ಬಗ್ಗೆ ಎಲ್ಲರಿಗೂ ತಿಳಿದದ್ದೇ. .ಇದರಿಂದಾಗಿ ಬಹಳಷ್ಟು ವಿದ್ಯಾರ್ಥಿಗಳು ಮಾನಸಿಕ ರೋಗಿಗಳಾದದ್ದುಂಟು,, ವಿದ್ಯಾಭ್ಯಾಸ ತೊರೆದು ಮನೆಗೆ  ವಾಪಸ್ಸು ಮರಳಿದ್ದುಂಟು,ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆಗ ಶರಣಾದದ್ದೂ ಇದೆ..ಮಣಿಪಾಲಕ್ಕೆ ವೈದ್ಯಕೀಯ  ವಿದ್ಯಾಭ್ಯಾಸಕ್ಕೆಂದು  ಬಂದ ಮುಕುಂದ್ ಗೆ ರಾಗಿಂಗ್ ಎಂಬ ವಿಷಸರ್ಪಗಳು ಸುತ್ತಿಕೊಳ್ಳುತ್ತವೆ .ಅಂತಹ ವರ್ತುಲದಲ್ಲಿ ಸಿಕ್ಕಿ ನರಳುತಿದ್ದವನಿಗೆ  ದೇವರಂತೆ ಬಂದು ರಕ್ಷಿಸಿದವ ಜಯಂತ್ ಎಂಬ ಸೀನಿಯರ್ ಸ್ಟೂಡೆಂಟ್.ಆಪತ್ಕಾಲದಲ್ಲಿ ಬಂದು ರಕ್ಷಿಸಿದ ಆತನ  ,ಗಾಂಭೀರ್ಯ,ವ್ಯಕ್ತಿತ್ವ ಮುಕುಂದ್ ನ ಬದುಕನ್ನು ಬದಲಾಯಿಸುತ್ತದೆ.ತನ್ನ ವಿದ್ಯಾರ್ಥಿ ಜೀವನದಲ್ಲಿ ಎಲ್ಲೆಲ್ಲಿ  ತಾನು ಎಡವುತ್ತಿದ್ದೇನೆ ಎಂದೆನಿಸಿದಾಗ ಅಲ್ಲಲ್ಲಿ  ಡಾ// ಜಯಂತ್  ಆತನಿಗೆ ಮಾರ್ಗದರ್ಶಿಯಾಗುತ್ತಾನೆ,ಅವನಲ್ಲಿ ಭವಿಷ್ಯದ ದ್ಯೇಯ ಅರುಹುತ್ತಾನೆ.ಹೀಗಾಗಿ ಆತ  ಮುಕುಂದ್ ನ ಪ್ರೀತಿಯ ಜಯಂತಣ್ಣನಾಗುತ್ತಾನೆ. ಮುಂದೆ ಮುಕುಂದ್  ಎಂ. ಎಸ್ .ಮುಗಿಸಿ ಸರ್ಜನ್ ಆಗಿ ಮುಂಬೈ ಸೇರಿದರೆ ಡಾ// ಜಯಂತ್  ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಸರ್ಜನ್  ಆಗಿ ಸೇರಿಕೊಳ್ಳುತ್ತಾರೆ(ಜಯಂತ್ ಒಂದು ಕಾದಂಬರಿಯ ಪಾತ್ರಧಾರಿಯಾದರೂ ಇಲ್ಲಿ  ಒಬ್ಬ ಶ್ರೇಷ್ಠ ವೈದ್ಯ ನಮ್ಮ-ನಿಮ್ಮೊಳಗೆ   ಇದ್ದಾರೆ ಎಂಬ ಭಾವನೆಯಿಂದ  ಅವರನ್ನು ಅವನೆಂದು ಬರೆಯಲು ಒಪ್ಪದೇ ಮುಂದೆ   ಅವರು  ಎಂದು ಉಲ್ಲೇಖಿಸುತ್ತಿದ್ದೇನೆ, ಕಾರಣ  ಲೇಖಕರು ಡಾ// ಜಯಂತ್ ರನ್ನು  ಮಹಾನ್ ವ್ಯಕ್ತಿಯಾಗಿ   ಚಿತ್ರಿಸಿದ್ದಾರೆ.ಲೇಖಕರು ಇಂತಹ ಒಬ್ಬ ವ್ಯಕ್ತಿಯನ್ನು ತನ್ನ ವೃತ್ತಿ ಜೀವನದಲ್ಲಿ ಕಂಡಿರಬಹುದು ಅದಕ್ಕಾಗಿ ಅವರನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ ಎಂದುಕೊಳ್ಳುತ್ತೇನೆ). 
ಡಾ//ಜಯಂತ್ ರ ಆದರ್ಶಗಳನ್ನೇ ಬಂಡವಾಳವಾಗಿರಿಸಿಕೊಂಡು ಮುಂಬಯಿ ಸೇರಿದ ಡಾ//ಮುಕುಂದ್ ಅಲ್ಲಿ ತನ್ನ ಸರ್ಜನ್ ವೃತ್ತಿಯನ್ನು ಮುಂದುವರಿಸುತ್ತಿರಬೇಕಾದರೆ  ಅದೊಂದು ದಿನ ಪೇಪರ್ ನಲ್ಲಿ ಓದಿದ  ನ್ಯೂಸ್ ಅವನನ್ನು ಘಾಸಿಗೊಳಿಸುತ್ತದೆ. 

ಕನಕನ ಹಳ್ಳಿಯ ಖ್ಯಾತ ವೈದ್ಯ ಡಾ// ಜಯಂತ್ ಕೊಲೆಯಾಗಿದೆ ,ಜಗನ್ನಾಥ್ ಎನ್ನುವ ವ್ಯಕ್ಯಿಯಿಂದ ಬರ್ಬರ ಹತ್ಯೆ ಗೊಳಗಾಗಿದ್ದಾರೆ ಎಂಬ ಸುದ್ದಿ ಓದಿ ಚಿಂತೆಗೀಡಾಗುತ್ತಾನೆ ಡಾ//ಮುಕುಂದ್.  ತನ್ನ ಜೀವದ ಅಂಗದಂತಿದ್ದ,ತನ್ನ ಸರ್ವಸ್ವವೇ ಆಗಿದ್ದ ಡಾ// ಜಯಂತ್ ಕೊಲೆ ಹೇಗೆ ಆಯಿತು ಎಂದು ತಿಳಿದುಕೊಳ್ಳಲು  ಡಾ //ಜಯಂತರ   ಊರಾದ ಕನಕನ ಹಳ್ಳಿಗೆ ಹೊರಟು   ನಿಲ್ಲುತ್ತಾನೆ ಆತ. ಈ ನಡುವಿನ ಅಧ್ಯಾಯಗಳಲ್ಲಿ   ಡಾ//ಜಯಂತ್  ಹಾಗೂ ಡಾ//ಮುಕುಂದ್ ನ  ಆತ್ಮೀಯತೆ,ಅವರಿಬ್ಬರ ಅನ್ಯೋನ್ಯತೆ, ಡಾ// ಜಯಂತ್ ಹೇಗೆ ಮುಕುಂದ್ ನ  ಬದುಕಿನಲ್ಲಿ ಹಾಸುಹೊಕ್ಕಾಗಿದ್ದರು, ,ಹೇಗೆ ಡಾ// ಮುಕುಂದ್ ಅವರಿಂದ ಪ್ರೇರೇಪಿತನಾಗಿದ್ದ ?  ಡಾ//ಜಯಂತ್ ಎನ್ನುವ ಖ್ಯಾತ ವೈದ್ಯ ಜಯಂತಣ್ಣ ನಾಗುವಷ್ಟು   ಮುಕುಂದ್ ಗೆ ಹೇಗೆ  ಹತ್ತಿರವಾದರು ಎನ್ನುವ ವಿಚಾರಗಳು  ಬರುತ್ತವೆ.  ಜೊತೆಗೆ  ಜಯಂತಣ್ಣನ ಕೊಲೆ ಹೇಗೆ ಆಯಿತು ಎಂಬುದನ್ನು ತಿಳಿಯಲು ಕೊನೆಯವರೆಗೂ ಉಸಿರು ಬಿಗಿಹಿಡಿದು  ಓದಲೇಬೇಕಾದ ಪ್ರಮೇಯ ಲೇಖಕರು ಮಾಡಿಕೊಟ್ಟಿದ್ದಾರೆ ಎಂದರೆ ತಪ್ಪಾಗಲಾರದು.
 
ತನ್ನ ವಿದ್ಯಾರ್ಥಿ ಜೀವನದಲ್ಲಿ ತನ್ನನ್ನು ಪಡೆಯಲು ಪರಿತಪಿಸುತ್ತಿದ್ದ   ಜ್ಯೂಲಿಯ ಪ್ರೇಮಪಾಶಕ್ಕೆ ಸಿಲುಕಿ ಬೆಂಗಳೂರು ಸೇರಿದ ಡಾ//ಜಯಂತ ಅಲ್ಲಿಯ ಖ್ಯಾತ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅಂದು ಅವರ  ಪ್ರೀತಿಗಾಗಿ   ಹಂಬಲಿಸಿದ ಜ್ಯೂಲಿಗೆ    ಇಂದು ಡಾ// ಜಯಂತರ ದ್ಯೇಯ,ಆದರ್ಶ ,ಅವರ ನೇರ ಸ್ವಭಾವ,ಹಣಕ್ಕಾಗಿ ಉದ್ಯೋಗ  ಮಾಡದೇ,ಮಾನವೀಯತೆಗೆ ಓಗೊಟ್ಟು  ಬಹಳಷ್ಟು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಅವರ ಉದಾರತೆ  ಇವೆಲ್ಲವೂ ಬೇಡವಾಗಿ,, ಪತಿಯ ಬಗ್ಗೆ ಕಾಳಜಿ ವಹಿಸದೆ  ತನ್ನ ಗೆಳೆಯ ಗೆಳತಿಯರೊಂದಿಗೆ ಹೊರಪ್ರಪಂಚದಲ್ಲೇ ಸುತ್ತುತಿದ್ದ ಆಕೆಗೆ  ಒಂದು ಹೆಣ್ಣು ಮಗುವಾದಾಗಲೂ .ಆ ಮಗು ತನಗೆ ಹುಟ್ಟಿದ್ದಲ್ಲ ಎನ್ನುವ ಸತ್ಯ ಅರಿತು ಕೂಡ ಮೌನಧಾರಣೆಮಾಡಿಕೊಂಡು ಆ ಮಗುವನ್ನೇ ತನ್ನ ಜೀವದ ಒಂದು ಅಂಗವಾಗಿ ಸ್ವೀಕರಿಸಿದ ಡಾ// ಜಯಂತ್ ಎಂಬ ಶ್ರೇಷ್ಠ ವ್ಯಕ್ತಿ ಹೇಗೆ ಕೊಲೆಯಾದರು,?ಅಂತಹ ವಿಶಾಲ ವ್ಯಕ್ತಿತ್ವದ ವ್ಯಕ್ತಿ ಕೊಲೆಯಾಗಲು ಹೇಗೆ ಸಾಧ್ಯ ?ಎಂದು ತಲೆಗೆ ಒಂದಷ್ಟು ಯೋಚನೆಗಳನ್ನು ತುಂಬುತ್ತ ಮತ್ತೆ ಓದಿಸಿಕೊಂಡು ಹೋಗುತ್ತದೆ ಕುತೂಹಲಕಾರಿ ಕಥೆ.
ಯಾವುದೇ ಒಂದು ರೋಗಿಯ ಶಸ್ತ್ರಕ್ರಿಯೆ ಮಾಡುವಾಗ ಆ ರೋಗಿಯ ಬ್ಲೀಡಿಂಗ್ ಟೈಮ್ ,ಕ್ಲೋಟಿಂಗ್ ಟೈಮ್ ಎನ್ನುವ ರಕ್ತ ಪರೀಕ್ಷೆ ಮಾಡಲಾಗುತ್ತದೆ.ಅದು ನಾರ್ಮಲ್ ಇದ್ದರೇನೇ ಆಪರೇಷನ್ ಗೆ  ಕೈ ಹಾಕಬಹುದು.ಇಲ್ಲಿ ಸೌರಭ್ ಎನ್ನುವ ಹುಡುಗನ  ಹೊಟ್ಟೆಯಲ್ಲಿ ಬೆಳೆದ ಗೆಡ್ಡೆಯನ್ನು  ಆಪರೇಷನ್ ಮಾಡಿ  ತೆಗೆಯಲಿಕ್ಕಿತ್ತು.ಡಾ// ಜಯಂತ್   ಪೇಷಂಟ್ ನ ಬ್ಲೀಡಿಂಗ್ , ಟೈಮ್ , ಕ್ಲೋಟಿಂಗ್   ಟೈಮ್  ಟೆಸ್ಟ್ ಮಾಡಲು ಅನುಮೋದಿಸಿದ್ದರು. ಆದರೆ ಲ್ಯಾಬ್ ಟೆಕ್ ಸೌರಭ್ ನ ಎಲ್ಲ ಟೆಸ್ಟ್ ಮಾಡಿದರೂ ಈ ಎರಡು ಟೆಸ್ಟ್ ನ್ನು ಮರೆತು ಬಿಟ್ಟ.ಗೊನೆಗೆ ವಿಧಿಯಿಲ್ಲದೆ ನಾರ್ಮಲ್ ರಿಪೋರ್ಟ್ ಟೈಪ್ ಮಾಡಿ  ಕಳಿಸಿಕೊಟ್ಟಿದ್ದ.ಆದರೆ ಸೌರಭನ  ದೇಹದಲ್ಲಿ ರಕ್ತಸ್ರಾವದ  ತೊಂದರೆಯಿತ್ತು  ಲ್ಯಾಬಿನಿಂದ ಬರುವ ರಿಪೋರ್ಟ್ ನ್ನೇ ಆಧಾರವಾಗಿಟ್ಟುಕೊಂಡು ವೈದ್ಯರು
ಆಪರೇಷನ್ ಗೆ  ಸಜ್ಜಾಗುತ್ತಾರೆ.ಆತನ ರಿಪೋರ್ಟ್ ನಾರ್ಮಲ್ ಎಂದು ತಪ್ಪಾಗಿ  ಬಂದುದನ್ನೇ  ನಂಬಿ ಡಾ//ಜಯಂತ್ ಸರ್ಜರಿಗೆ  ತಯಾರಾಗಿದ್ದರು.ಆಪರೇಷನ್ ನಂತರ  ಆತನ ರಕ್ತಸ್ರಾವ ನಿಲ್ಲಲೇ ಇಲ್ಲ,೩ ಬಾಟಲಿ ರಕ್ತ ಟ್ರಾನ್ಫ್ಯೂಸ್ ಮಾಡಿದರೂ ಸೌರಭ್ ನ ಪ್ರಾಣ ಉಳಿಯಲಿಲ್ಲ..

ಡಾ//ಜಯಂತ ಕಂಗಾಲಾದರು.ಯಾವ ಆಪರೇಷನ್ ನಿಂದಲೂ ಫೇಲ್ ಎಂದೆನಿಸಿಕೊಳ್ಳದ ವೈದ್ಯ ಇಂದು ಫೇಲ್ ಆದಾಗ ವಿಪರೀತ ಮಾನಸಿಕ ಒತ್ತಡಕ್ಕೆ  ಬಿದ್ದು ಅವರ  ಬಿಪಿ ಹೆಚ್ಚಾಗಿ ಅವರ ದೇಹದ ಎಡಭಾಗ ಪಾರ್ಷಿಯಲ್  ಪ್ಯಾರಾಲಿಸಿಸ್ ಆಗಿ ಚಿಕಿತ್ಸೆಗೆ ಒಳಗಾದರೂ ಸಂಪೂರ್ಣವಾಗಿ ಕ್ಯೂರ್   ಆಗದಾದಾಗ ಡಾ//ಜಯಂತ್ ತಾನು ಕಾರ್ಯ ನಿರ್ವಹಿಸುತ್ತಿದ್ದ  ಪ್ರಸಿದ್ಧ ಸಂಜೀವನಿ ಆಸ್ಪತ್ರೆಗೆ ರಿಸೈನ್ ಕೊಟ್ಟು ತನ್ನ ಹೆತ್ತ ಊರಾದ ಕನಕನ ಹಳ್ಳಿಗೆ ಹೋಗುವ ನಿರ್ದಾರಕ್ಕೆ ಮುಂದಾಗುತ್ತಾರೆ .
ತನ್ನೊಂದಿಗೆ ಬರಲು ತಯಾರಿಲ್ಲದ ಹೆಂಡತಿಯನ್ನು ಬಿಟ್ಟು ತನ್ನ ಸರ್ವಸ್ವವಾದ  ರೂಪಾಳನ್ನು  ಹೊತ್ತುಕೊಂಡು ಕನಕನ ಹಳ್ಳಿಗೆ ಪ್ರಯಾಣ.ಮುಂದಿನ ಕೆಲವೇ ದಿನಗಳಲ್ಲಿ ಹೆಂಡತಿ  ಆಕ್ಸಿಡೆಂಟ್ ಒಂದರಲ್ಲಿ ಮರಣ ಹೊಂದಿದಳೆಂಬ ಸುದ್ದಿ  ತಲುಪಿದರೂ  ನಿರ್ವೀಕಾರವಾಗಿದ್ದ  ಡಾ//ಜಯಂತ್ ರದು ತಾಯಿ ಗಂಗಮ್ಮ ನೊಂದಿಗೆ ಹಳ್ಳಿಯ ಮನೆಯಲ್ಲಿ ವಾಸ .ಅದೇ ಮನೆಯ ಒಂದು ಮಗ್ಗುಲಲ್ಲಿ ಕ್ಲಿನಿಕ್ ಆಗಿ ಮಾಡಿಕೊಂಡು ಊರಿನ ಜನರಿಗೆ ಮದ್ದು ಮಾತ್ರೆ ಬರೆದುಕೊಡುತ್ತಾ ಕರ್ತವ್ಯ ನಿರ್ವಹಣೆ. ಯಾಕೆಂದರೆ  ಅವರ ದೇಹದ ಒಂದು ಮಗ್ಗುಲಲ್ಲಿ ಶಕ್ತಿ ಇರಲಿಲ್ಲ,ಶಸ್ತ್ರಕ್ರಿಯೆ ಮಾಡಲು ಈಗ ಅವರಷ್ಟು ಸಶಕ್ತರಾಗಿರಲಿಲ್ಲ, ರೂಪ, ಗಂಗಮ್ಮ ನೊಂದಿಗೆ ಬಂದು ಸೇರಿಕೊಂಡ ನಿಷ್ಠಾವಂತ ಸೇವಕ ಬಾಡು.ಇಲ್ಲಿ ಆತನ ಚಿತ್ರಣ ಕೂಡ  ಮನೋಜ್ಞವಾಗಿ ಲೇಖಕರು ಒಂದು ಅದ್ಯಾಯ ಪೂರಾ  ಬರೆದಿದ್ದಾರಾದರೂ ಅದ್ರ ಬಗ್ಗೆ ತೀವ್ರ ವಿಮರ್ಶಿಸುವುದಕ್ಕೆ ಹೋಗುವುದಿಲ್ಲ .ಅವನ ಅದ್ಯಾಯ  ಓದಿದ ನಂತರ ತಿಳಿಯಿವುದು ಆತ ಪ್ರಾಣಕ್ಕೆ ಪ್ರಾಣ  ಕೊಡುವ  ಕಟ್ಟಾಳು.

ರೂಪಾಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತ.ಜಯಂತರ ನಿಷ್ಠೆಯ ಸೇವಕನಾಗಿ,ಅವರ ತಮಾಷೆಯ ಬಡ್ಡಿಮಗನೇ ಎನ್ನುವ ಬೈಗುಳವನ್ನೇ  ತನ್ನ ಜೀವನದ ಪಂಚಾಮೃತ ಎಂದು ಭಾವಿಸುತ್ತಾ ಇವರೇ  ತನ್ನ ಸರ್ವಸ್ವ  ಎಂದು ತನ್ನನ್ನು ತಾನು ಸಮರ್ಪಿಸಿಕೊಂಡ  ಅನಾಥ ಬಾಡು .
 ಡಾ  //ರಂಜಿತ್ ಕುಮಾರ್ ಶೆಟ್ಟಿ ಯವರ ಬರಹಗಳು ಒದುಗರಿಗೆ ಅತೀವ ಇಷ್ಟವಾಗುವುದು ಯಾಕೆಂದರೆ ಅತೀ ಸೀರಿಯಸ್ ವಿಚಾರಗಳ ನಡುವೆಯೂ ಅವರು ಉಣಬಡಿಸುವ  ತಿಳಿಹಾಸ್ಯ,ಅದು ಓದುಗನನ್ನು ಪುಸ್ತಕ  ಬದಿಗಿರಿಸುವಲ್ಲಿ  ವಿಪಲವಾಗುತ್ತದೆ. ಒಮ್ಮೆ  ಓದಿಯೇ ಮುಗಿಸುವೆ  ಎನ್ನುವ ತರಾತುರಿ ಹೆಚ್ಚಿಸುತ್ತದೆ..ಈ ಕಾದಂಬರಿಯಲ್ಲಿ   ಬರುವ ಡಾ//ಜಯಂತ್.   ಡಾ// ಮುಕುಂದ್, ರೂಪ ,ಗಂಗಮ್ಮ .ಬಾಡು ಇವರೆಲ್ಲಾ ನಮ್ಮವರೇ ಎಂದು ಬಿಡುವಷ್ಟು ಆತ್ಮೀಯತೆ ಬಂದು ಬಿಡುತ್ತದೆ. ಕಾದಂಬರಿಯೊಂದನ್ನು ಓದುತ್ತಿದ್ದೇನೆ ಎನ್ನುವುದಕ್ಕಿಂತ  ಈ ಪಾತ್ರದಾರಿಗಳೆಲ್ಲ ನಮ್ಮ ಸುತ್ತಮುತ್ತಲೇ ಇದ್ದಾರೆ ಎನ್ನುವಂತಹ ಭಾವನೆ  ಬೆಳೆಯುತ್ತದೆ  ..ಇದು  ಡಾ//ರಂಜಿತ್ ಶೆಟ್ಟಿ ಯವರ ಬರಹದ ಮಟ್ಟ ಎನ್ನಬಹುದು  .ಈ ರೀತಿಯ ಬರಹಗಳು ಎಲ್ಲ ಬರಹಗಾರರಿಂದ ಬರಲು ಅಸಾಧ್ಯ.ನೂರಾರು, ಸಾವಿರಾರು ರೋಗಿಗಳ ನೋವನ್ನು ಹತ್ತಿರದಿಂದ ಕಂಡು,ಅವರ ಭಾವದಲ್ಲಿ ಭಾವವಾಗಿ.ಅವರ ನೋವಿನಲ್ಲಿ ನೋವಾಗಿ ತಾನೂ  ಬಹಳಷ್ಟು ಉದ್ವಿಗ್ನತೆಗಳನ್ನು,ಅಸಹಾಯಕತೆಗಳನ್ನು  ಅನುಭವಿಸಿದ ವೈದ್ಯನೊಬ್ಬನಿಂದ ಮಾತ್ರ ಇಂತಹ ಪಾತ್ರದಾರಿಗಳು, ಬರಹಗಳು ಮೂಡಿಬರಲು ಸಾಧ್ಯ  ಎಂದು ಕಾದಂಬರಿಯ ಪ್ರತೀ ಹಂತದಲ್ಲೂ   ತಿಳಿದು ಬರುವುದು.

 ತನ್ನ ಮಗಳನ್ನು ವೈದ್ಯೆಯಾಗಿ ಮಾಡಬೇಕೆಂಬ ಅಸೆ ಮೂಗಿನ ತುದಿಯವರೆಗೆ ಇದ್ದರೂ  ಹಳ್ಳಿಯ  ಜನರಿಂದ ಸಿಗುವ  ೫-೧೦ ರೂಪಾಯಿಯಿಂದ  ಮಗಳನ್ನು ವೈದ್ಯೆ ಮಾಡಲಾರೆ ಎನ್ನುವ  ಸತ್ಯ  ಡಾ //ಜಯಂತ ರಿಗೂ ತಿಳಿದಿತ್ತು   .ಹಾಗಾಗಿ ತನ್ನನ್ನುದೇವರೆಂದು ಭಾವಿಸುವ ತನ್ನ ಶಿಷ್ಯ ನ ಸ್ಥಾನದಲ್ಲಿದ್ದ ಡಾ//ಮುಕುಂದ್ ಗೆ ಒಂದು ಪತ್ರವನ್ನು ಬರೆದಿಟ್ಟಿದ್ದರು
 ಡಾ //ಜಯಂತ್” ’ನನ್ನ ಮಗಳ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ನೆರವಾಗುವೆಯಾ ಎಂದು? ಆದರೆ ಆ ಪತ್ರವನ್ನು ಮುಕುಂದ್ ಗೆ ಮುಟ್ಟಿಸುವ ಧೈರ್ಯ  ಮಾತ್ರ ಅವರಲ್ಲಿರಲಿಲ್ಲ. ಈ ಕಾದಂಬರಿಯ ಕ್ಲೈಮಾಕ್ಸ್ ಎಂದರೆ   ಕನಕನ ಹಳ್ಳಿಯ  ಬಡ ಬಗ್ಗರ ಅತೀ ಮೆಚ್ಚಿನ ವೈದ್ಯನಾದ  ಡಾ//ಜಯಂತರ ಕೊಲೆ ಹೇಗಾಯಿತು?ಮುಂದೆ ವಿವರಣೆಗಳು ಸಿಗಲಾರಂಭಿಸುತ್ತವೆ !!
ತನ್ನ ಕನಕನ ಹಳ್ಳಿಯ ಜನ  ಇತ್ತೀಚೆಗೆ ಹೊಟ್ಟೆನೋವು ವಾಂತಿ. ಜುಲಾಬು ಎಂದು ಅವರ ಬಳಿ ಬರಲು ಪ್ರಾರಂಭಿಸಿದಾಗ,   ಇದಕ್ಕೆ ಕಾರಣ  ಏನೆಂದು ಡಾ/ ಜಯಂತ್ ಪರಾಮರ್ಶಿ ಸುತ್ತಾರೆ .ಆಗ ಅವರ ಗಮನಕ್ಕೆ ಬಂದದ್ದು ಕನಕನ ಹಳ್ಳಿಯ  ಪಂಚಾಯತ್ ಬೋರ್ಡ್ ಪ್ರೆಸಿಡೆಂಟ್ .ಲೋಕಲ್ ಪುಡಾರಿ ಪರಮೇಶಪ್ಪನ  ರಾಸಾಯನಿಕ ಗೊಬ್ಬರದ ಕಾರ್ಖಾನೆ ಎಂಬ ಸತ್ಯ . ಆ ಕಾರ್ಖಾನೆಯ ತ್ಯಾಜ್ಯಗಳು   ನೇರವಾಗಿ   ನೆಲಕ್ಕೆ ಹೋಗುತಿತ್ತು. ಅಲ್ಲಿ ಭಾವಿಯ ಹತ್ತಿರದ ನೆಲದಲ್ಲಿ  ಈ ತ್ಯಾಜ್ಯಗಳು ಮಣ್ಣಿನ ಮೂಲಕ ಕೆಳಗಿಳಿಯುತ್ತಾ  ಭಾವಿಯ ನೀರನ್ನು ಹಾಳು ಮಾಡಿ ಬಿಟ್ಟಿದ್ದವು. ಆ ನೀರನ್ನು ಕುಡಿದ ಅಮಾಯಕ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದರು. ಗರ್ಭಿಣಿಯರಿಗೆ ಹುಟ್ಟಿದ ಮಕ್ಕಳು ನರದ ಕಾಯಿಲೆಗೆ ಒಳಗಾಗುತ್ತಿದ್ದರು.ಈ ವಿಚಾರ ತಿಳಿದ ಡಾ//ಜಯಂತ್ ಪರಮೇಶಪ್ಪನಲ್ಲಿ ತ್ಯಾಜ್ಯ ಹೋಗಲು ಬೇರೆ ಯೂನಿಟ್ ಮಾಡಿಸಿ ಎಂದಾಗಿನಿಂದ ಪರಮೇಶ ಡಾ//  ಜಯಂತರ ವಿರೋಧಿ ಯಾಗುತ್ತಾನೆ.ಅವನಿಗೆ ಬೇರೆ ಯೂನಿಟ್ ಕಟ್ಟಿಸಿ ೧೫ ಲಕ್ಷ  ವ್ಯರ್ಥ  ಮಾಡಲಿಕ್ಕಿರಲಿಲ್ಲ ,ಡಾ/ ಜಯಂತ್   ಬಾವಿಯ ನೀರು  ಕಲುಷಿತಗೊಂಡ ಬಗ್ಗೆ  ರಿಪೋರ್ಟ್ ಕೂಡ ಮಾಡಿಸಿದ್ದರು .ಡಾ// ಜಯಂತ್ ಪರಮೇಶನಲ್ಲಿ  ಈ ತೊಂದರೆಗೆ ಬೇರೆ  ವ್ಯವಸ್ಥೆ ಮಾಡುವ ಬಗ್ಗೆ  ವಿನಂತಿಸಿಕೊಂಡರೂ  ಪರಮೇಶ ಫ್ಯಾಕ್ಟರಿ ಬಂದ್ ಮಾಡಲು ಅಥವಾ ಯೂನಿಟ್ ಹಾಕಲು ಒಪ್ಪದಿದ್ದಾಗ ಡಾ// ಜಯಂತ್ ಆರೋಗ್ಯಮಂತ್ರಿಗಳಿಗೆ ನೀರಿನ ಲ್ಯಾಬ್ ರಿಪೋರ್ಟ್ ನೊಂದಿಗೆ  ವಿಚಾರ ತಿಳಿಸುತ್ತೇನೆ   ಎಂದಾಗ  ಪರಮೇಶ ಹುಷಾರಾಗುತ್ತಾನೆ, ಡಾ// ಜಯಂತ್ ಗೆ ಬುದ್ದಿ ಕಲಿಸಬೇಕೆಂದು ಭಾವಿಸುತ್ತಾನೆ .  
 
 ಜಗನ್ನಾಥ ಪರಮೇಶನ ತಮ್ಮ. ಡಾ/ಜಯಂತ್  ರಿಗೆ ಸ್ವಲ್ಪ ಬುದ್ದಿ ಹೇಳು ಎಂದು ಅಣ್ಣ ಪರಮೇಶ್ ಅವರ ಬಳಿ ಕಳಿಸುತ್ತಾನೆ . ಬುದ್ಧಿಹೇಳಲೆಂದು ಬಂದವ ಡಾ//ಜಯಂತ್ ರ ನೇರ ಹಾಗೂ ಖಡಾಖಂಡಿತವಾದ  ಉತ್ತರಕ್ಕೆ ಉಗ್ರನಾಗುತ್ತಾನೆ.ಮಾತಿಗೆ ಮಾತು ಬೆಳೆದು ಡಾ/ ಜಯಂತ್ ರಿಗೆ  ಮನ ಬಂದಂತ ಹೊಡೆಯುತ್ತಾನೆ,ಕಾಲಿಂದ ಒದೆಯುತ್ತಾನೆ,ಅಸಹಾಯಕರಾದ ಡಾ// ಜಯಂತ್  ನೋವಿನಿಂದ ಬಿದ್ದು ಹೊರಳಾಡುತ್ತಿರಬೇಕಾದರೆ ಜಗನ್ನಾಥನ ಕಣ್ಣು  ಗೊಂಬೆಯಂತಹ ಅವರ ಮಗಳು  ರೂಪಾಳತ್ತ  ಬೀಳುತ್ತದೆ .ಆಕೆಯನ್ನು  ನೋಡಿ ಜೊಲ್ಲು ಸುರಿಸುತ್ತಾನೆ.  ಜಗನ್ನಾಥ್ ಗೆ  ಈಗ ಜಯಂತ್ ರಿಗಿಂತಲೂ  ರೂಪಾಳನ್ನು ಅನುಭವಿಸುವುದು ಮುಖ್ಯವಾಗಿ ಕಾಣುತ್ತದೆ..ತನ್ನ ಜೀವವಾದ ಮಗಳು ಅವನ ಮುಷ್ಟಿಯಲ್ಲಿ ಸಿಲುಕಿ  ನಲುಗುತ್ತಿರುವುದನ್ನು ಕಂಡ ಡಾ// ಜಯಂತ್ ರಲ್ಲಿ  ರೋಷ ಉಕ್ಕುತ್ತದೆ. ಈಗಾಗಲೇ ಜಗನ್ನಾಥನಿಂದ ಪೆಟ್ಟು ತಿಂದು ಏಳಲಾಗದ ಸ್ಥಿತಿಯಲ್ಲಿ ಅವರಿದ್ದರೂ     ತನ್ನ ಮಗಳ ಬಟ್ಟೆಯ ಮೇಲೆ ಅವನು ಕೈ ಹಾಕಿದಾಗ ಅವರಲ್ಲಿ ಅದೆಂತಹುದೋ   ಅಸಾಧಾರಣ ಶಕ್ತಿ  ಬರುತ್ತದೆ..ಏಳುತ್ತ ಬೀಳುತ್ತಾ ಜಗನ್ನಾಥನಿಂದ ಮಗಳನ್ನು ಬಿಡಿಸಲು ಮುಂದಾಗುತ್ತಾರೆ. ತನ್ನ ಬಳಿಬಂದ ಅವರನ್ನು  ಚೂರಿಯಿಂದ ಆತ ಭಾರಿ ಭಾರಿ ಇರಿದರೂ  ಆತನಿಂದ ಹೇಗೋ  ತನ್ನ ಮಗಳನ್ನು  ಬಿಡಿಸಿ  ಆತನನ್ನುನಾಯಿಯಂತೆ ಎಳೆಯುತ್ತ   ಮಾಳಿಗೆಯಿಂದ ನೇರವಾಗಿ ಕೆಳಗಿನ  ರಸ್ತೆಗೆ ನೂಕಿದ ನಂತರ ಅವರು ತನ್ನ ಪ್ರಾಣ ಬಿಡುತ್ತಾರೆ  ಜಗನ್ನಾಥನನ್ನು  ಮೇಲಿಂದ ಕೆಳಗೆ ತಳ್ಳಿದ ಪರಿಣಾಮವಾಗಿ  ಜಗನ್ನಾಥನ ಎರಡೂ  ಕಾಲುಗಳು ಜಜ್ಜಿಹೋಗಿದ್ದವು . 
ಇತ್ತ “ ಜಯಂತಣ್ಣನ ಕೊಲೆ ಹೇಗೆ ಆಯಿತು?” ಎಂಬ ವಿಷಯ ತಿಳಿಯಲು ಬಂದ  ಮುಕುಂದ  ಬಾಡುವಿನಿಂದ ಎಲ್ಲಾ ವಿಷಯವನ್ನೂ   ಸಂಗ್ರಹಿಸುತ್ತಾನೆ . ಏನೋ ನಿರ್ಧರಿಸಿದವನಂತೆ  ಜಗನ್ನಾಥ ಸೇರಿಕೊಂಡಿದ್ದ ಅದೇ ಊರಿನ ಹೆಲ್ತ್  ಹೆಲ್ತ್ ಸೆಂಟರ್ ಗೆ ಹೋಗುತ್ತಾನೆ. ಮಗಳು ರೂಪ, ಇನ್ಸ್ಪೆಕ್ಟರ್ ಶಿವಣ್ಣ, ಬಾಡು  ಎಲ್ಲರೂ ಅಚ್ಚರಿ ಪಡುವಂತೆ ಜಗನ್ನಾಥನ ಜೀವ ಉಳಿಸಲು ಮುಂದಾಗುತ್ತಾನೆ ಡಾ/ಮುಕುಂದ್ .ಆ ಸಂಧರ್ಭದಲ್ಲಿ ಆ ಹೆಲ್ತ್ ಸೆಂಟರ್ ನಲ್ಲಿ ಅವನ ಚಿಕಿತ್ಸೆಗೆ ಸರಿಯಾದ ವೈದ್ಯರುಗಳಿರಲಿಲ್ಲ.ತಾನು ಅವನನ್ನು ಟ್ರೀಟ್ ಮಾಡುತ್ತೇನೆ ಎಂದ ಡಾ// ಮುಕುಂದ್  ಓದುಗರನ್ನೂ ಅಚ್ಚರಿಗೊಳಿಸುತ್ತಾನೆ.

ತನ್ನ  ಜಯಂತಣ್ಣನ ಸಾವಿಗೆ ಕಾರಣನಾದ ಜಗನ್ನಾಥನನ್ನು ಮುಕುಂದ್  ಏಕೆ ಬದುಕಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದೂ ಓದುಗನೂ ತಲೆಕೆರೆದುಕೊಳ್ಳುತ್ತಾನೆ. ಅವನನ್ನು ಪರೀಕ್ಷಿಸಿದ ಡಾ// ಮುಕುಂದ್ “ ಎರಡೂ ಕಾಲ್ಗಳಿಗೆ ರಕ್ತಸಂಚಾರ ನಿಂತು  ಕಾಲುಗಳು ಕೊಳೆಯಲು ಪ್ರಾರಂಭವಾಗಿದೆ.ಕಾಲುಗಳೆರಡನ್ನು ಕತ್ತರಿಸಬೇಕು, ಇಲ್ಲವಾದಲ್ಲಿ  ಗ್ಯಾಂಗ್ರೀನ್ ಹರಡಿ ಜೀವಕ್ಕೇ ಅಪಾಯ.ತಕ್ಷಣ ಆಪರೇಷನ್ ಮಾಡಬೇಕು” ಎಂದಾಗ ಎಲ್ಲರಿಗೂ ಅಚ್ಚರಿ !!  ಇದರ  ಹಿಂದಿನ ಗೂಡಾರ್ಥಗಳನ್ನು  ಲೇಖಕರು ಕುತೂಹಲಕಾರಿಯಾಗಿ ತೆರೆದಿಟ್ಟಿದ್ದಾರೆ .ಇದೊಂದು ಕಾದಂಬರಿಯ ಅಂತಿಮ ಘಟ್ಟ, ಹಾಗು ಕೊನೆಯ ಅತೀ ಮುಖ್ಯ ಘಟ್ಟ. ಏನೂ  ವ್ಯವಸ್ಥೆ ಇರದ ಆಸ್ಪತ್ರೆಯಲ್ಲಿ ಎಲ್ಲವನ್ನು ಹೊಂದಾಣಿಸಿಕೊಂಡು “, ನಾನೊಬ್ಬ ಡಾಕ್ಟರ್ ,ನನ್ನ ವೈರಿಯನ್ನು ಸಾಯಲು ಬಿಡಲಾರೆ ಎನ್ನುವ ವೈದ್ಯ ಧರ್ಮವನ್ನು ಅನುಸರಿಸಿದ ಡಾ// ಮುಕುಂದ್ ನ ಈ ಆಪರೇಷನ್ನ  ಮರ್ಮವೇನು ?ಇದು ರೂಪಾಳಿಗಾಗಲಿ,ಬಾಡುವಿಗಾಗಲಿ.ಇನ್ಸ್ಪೆಕ್ಟರ್ ಶಿವಣ್ಣನೀಗಾಗಲಿ ಅಥವಾ ಊರಿನ ಡಾ// ಜಯಂತ್ ರ ಯಾವುದೇ ಅಭಿಮಾನಿಗಳಿಗಾಗಲಿ  ಬಹುಶ: ತಿಳಿಯಲೇ ಇಲ್ಲ.

ಆಪರೇಷನ್ ಮಾಡಿ ಅವನ ಎರಡು ಕಾಲೂ ಕತ್ತರಿಸಿದ ಬಳಿಕ  ಡಾ/ ಮುಕುಂದ್ ಜಗನ್ನಾಥನ ಕಿವಿಯಲ್ಲಿ ಅದೇನೋ ಉಸುರಿದ್ದ.ಒಬ್ಬ ರೋಗಿಯ ಕಿವಿಯಲ್ಲಿ ಉಸುರುವ ಅಗತ್ಯ   ವೈದ್ಯನಿಗೇನಿದೆ? ಎಂದು ಅಲ್ಲಿದ್ದ ನರ್ಸ್ ಯೋಚಿಸಿದ್ದು ಸಹಜ !! ಇದು ಕಾದಂಬರಿಯ ಸಸ್ಪೆನ್ಸ್. “ನನ್ನ ತಂದೆಯನ್ನು ಕೊಂದ ಪಾಪಿಯ ಆಪರೇಷನ್ ಮಾಡಿ ಯಾಕೆ ಬದುಕಿಸಿದಿರಿ? ಅಂಕಲ್ “ಎನ್ನುವ  ರೂಪಾಳ ಪ್ರಶ್ನೆಗೆ “  ಜಯಂತಣ್ಣನಂತಹ  ವ್ಯಕ್ತಿಯನ್ನು  ಕೊಂದ ಪಾಪಿಗೆ ಅಷ್ಟು ಸುಲಭವಾಗಿ ಸಾಯುವಂತಹ ಶಿಕ್ಷೆಯೇ? “ಎಂದು ಉತ್ತರವಿತ್ತ   ಡಾ// ಮು ಕುಂದ್ ನ ಮನಸ್ಸಿನಲ್ಲಿದ್ದ ವಿಚಾರ  ಏನು?   
ಆಪರೇಷನ್  ಮುಗಿದ ನಂತರ  ಡಾ// ಮುಕುಂದ್ ಜಗನ್ನಾಥನ ಕಿವಿಯಲ್ಲಿ "ಹಲ್ಕಾ ,ಸುವಾರ್  ನನ್ನ ಮಗನೆ,ಜಯಂತಣ್ಣನನ್ನು  ತುಳಿದ ನಿನ್ನ ಕಾಲುಗಳ ಶಕ್ತಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತಿದ್ದಿ ಅಲ್ಲವೇನು ? ನೋಡಲ್ಲಿ ,ಆ ಎರಡು ಕಾಲುಗಳನ್ನು  ಕತ್ತರಿಸಿ ಬಿಸಾಕಿದ್ದೇನೆ,ನ್ಯಾಯಾಲಯ ನಿನ್ನನ್ನು ಶಿಕ್ಷಿಸದೆ ಬಿಡಬಹುದು .ಆದರೆ ಜಯಂತಣ್ಣನ ಶಿಷ್ಯ  ನಿನ್ನನ್ನು ಸುಮ್ಮನೆ ಬಿಡುತ್ತಾನೆ ಎಂದೆ ಣಿಸಿದ್ದೀಯಾ? ಅನುಭವಿಸು ಪಾಪಿ " ಎಂದದ್ದು ಬರೀ ಜಗನ್ನಾಥನಿಗೆ ಮಾತ್ರ ಗೊತ್ತಿದೆ. ಎಂದು ಲೇಖಕರು ಇಲ್ಲಿ ಡಾ//ಮುಕುಂದ್ ನ ಮನದಾಳದ ಮಾತನ್ನು ಬೆಚ್ಚಿ ಬೀಳುವಂತೆ ಎತ್ತಿಟ್ಟಿದ್ದಾರೆ!!
ಇಂದು ಜಗನ್ನಾಥ “ಕಾಲಿಲ್ಲದ ನನ್ನನ್ನು ಸಾಯಿಸಿ “ ಎಂದು ಬೊಬ್ಬೆ ಹಾಕಿದರೂ ಯಾರೂ ಸಾಯಿಸುವವರಿಲ್ಲ. ಡಾ// ಜಯಂತ್ ರನ್ನು ತುಳಿದ ಆ ಕಾಲುಗಳನ್ನು ಕತ್ತರಿಸಿಕೊಂಡು ಜೀವಂತ ಶವವಾಗಿ ಬದುಕಬೇಕಿದೆ. ಆ ರೀತಿ ಮಾಡಿ ತನ್ನ ಪಾಲಿಗೆ ದೇವರಂತಿದ್ದ ಡಾ// ಜಯಂತ್ ರ ಕೊಲೆಗಾರನಿಗೆ ಕೊಟ್ಟ ಶಿಕ್ಷೆ ಡಾ/ಮುಕುಂದ್ ನದ್ದು.  ಮುಕುಂದ್ ಮಾಡಿದ  ಈ ಕೆಲಸ  ಸರಿಯೇ ತಪ್ಪೇ ಎಂಬ ನಿರ್ದಾರ ಲೇಖಕರು  ಓದುಗರಿಗೆ ಬಿಟ್ಟಿದ್ದಾರೆ.

ಹಾಗೆ  ಯೋಚಿಸುವಾಗ  ಒಬ್ಬ ವೈದ್ಯನಾಗಿ ಡಾ// ಮುಕುಂದ್  ತನ್ನ ವೈದ್ಯ  ವೃತ್ತಿಗೆ ಚ್ಯುತಿ  ತರದ ಕೆಲಸ ಮಾಡಿದ್ದಾ ನೆ. ಒಬ್ಬ ವೈದ್ಯನಾಗಿ ತನ್ನ ಕಣ್ಣೆದುರೇ ರೋಗಿಯೊಬ್ಬ ಸಾಯುವುದನ್ನು ಬಿಡದೆ ಇಡೀ ದೇಹವನ್ನೆಲ್ಲ  ಗ್ಯಾಂಗ್ರೀನ್ ಆವರಿಸಿಕೊಂಡು  ನಾಲ್ಕೈದು ದಿನಗಳೊಳಗೆ  ಸಾಯಬೇಕಿದ್ದ ವನನ್ನು ತುರ್ತು  ಆಪರೇಷನ್ ಮಾಡಿ, ಅವನ ಕಾಲು ಕತ್ತರಿಸಿ ,ಸಾಯದಂತೆ ಬದುಕಿಸಿದ್ದಾನೆ.ತನ್ನ ವೈದ್ಯ   ಧರ್ಮ ನಿಭಾಯಿಸಿದ್ದಾನೆ.
ಇನ್ನೊಂದು  ಮಗ್ಗುಲಲ್ಲಿ  ಯೋಚಿಸುವಾಗ  ಒಬ್ಬ ಮಹಾನ್ ವೈದ್ಯ   ಡಾ// ಜಯಂತ್  ಕೊಲೆಗಾರ ಇಷ್ಟು   ಬೇಗ ಸಾಯುವುದು ಆತನಿಗೆ ಬೇಡವಾಗಿತ್ತು.ಆತ ಇನ್ನಷ್ಟು  ದಿನ ಬದುಕಬೇಕು.ದೇವತಾ ಮನುಷ್ಯನೊಬ್ಬನನ್ನು ಕೊಂದು ತಾನು ತಪ್ಪು ಮಾಡಿಬಿಟ್ಟೆ ಎಂದುಕೊಂಡು ಮಲಗಿದ್ದಲ್ಲೇ ಹೊರಳಾಡಿ ಕೊರಗಬೇಕು.ಅವರನ್ನು  ಒದೆದು ಒದೆದು ಸುಸ್ತಾದ ಆ ಕಾಲುಗಳೇ ಇಂದು ತನ್ನಲ್ಲಿ ಇಲ್ಲವಲ್ಲಾ ಎಂದು  ಅಳಿದುಳಿದ ತನ್ನ ಅರ್ಧ ಕಾಲುಗಳನ್ನು ಸವರುತ್ತ  ಆತ ದಿನೇ  ದಿನೇ  ಸಾಯಬೇಕು ,ತಾನು ಮಾಡಿದ ತಪ್ಪಿಗಾಗಿ  ಜೀವನ ಪರ್ಯಂತ ಕಣ್ಣೀರು ಹಾಕಬೇಕು.ಅದಕ್ಕಾಗಿ ಡಾ// ಮುಕುಂದ್  ಅವಸರವಸರವಾಗಿ ಆಪರೇಷನ್ ಗೆ  ಮುಂದಾದದ್ದು .ಹಾಗಾಗಿ ಈ ಕಥೆಯ ಅಂತ್ಯವನ್ನು ತಿಳಿಯುವಾಗ ಡಾ/ ಮುಕುಂದ್ ಎರಡು ವಿಧದಲ್ಲೂ ಗೆದ್ದು ಬಂದಿದ್ದಾನೆ. ವೈದ್ಯನಾಗಿ ತನ್ನ ಕರ್ತವ್ಯವನ್ನು  ಕೂಡ ಮಾಡಿದ   ಜೊತೆಗೆ .ತನ್ನ  ಪಾಲಿನ ದೇ ವರಾದ ಜಯಂತರ ಕೊಲೆಗಾರನಿಗೆ  ತಕ್ಕ ಶಿಕ್ಷೆ ಕೂಡ ನೀಡಿದ .       
ಕೊನೆಯದಾಗಿ ಜಯಂತಣ್ಣ ತನಗಾಗಿ ಬರೆದಿಟ್ಟ ಪತ್ರವನ್ನೂ ಓದಿ  ಅವರ ಮಗಳ ಎಲ್ಲ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ನಿರ್ಧಾರಕ್ಕೆ ಬಂದ  ಡಾ// ಮುಕುಂದ್ ಕೂಡ  ಜಯಂತಣ್ಣನಂತೆ  ಇಲ್ಲಿ  ಮಹಾನ್ ಆಗಿ  ಕಂಡುಬರುತ್ತಾನೆ.
  
  ಡಾ// ರಂಜಿತ್ ಕುಮಾರ್ ಅವರ   ಬರಹದ  ಶೈಲಿ ಇತರ ಇತರ ಬರಹಗಾರರಿಗಿಂತ  ಭಿನ್ನವಾಗಿದೆ. ಓದುಗನನ್ನು ಯಾವ ರೀತಿ  ತನ್ನ ಬರಹಗಳೊಳಗೆ ಸೆಳೆದಿಟ್ಟುಕೊಳ್ಳಬೇಕು  ಎಂಬ  ಬರಹದ  ಕಲೆ ಅವರಿಗೆ ಸಿದ್ದಿಸಿದೆ .ಹೀಗಾಗಿ  ಈ ಕಾದಂಬರಿ  ಎಲ್ಲಿಯೂ ನೀರಸವಾಗದೆ ಕೊನೆಯವರೆಗೂ ನಿರಾಯಾಸವಾಗಿ ಓದಿಸಿಕೊಂಡು  ಹೋಗುತ್ತದೆ .ವೈದ್ಯ ಕಾಂಬರಿಕಾರರ ಈ ಕೃತಿಯನ್ನೊಮ್ಮೆ ಕನ್ನಡದ ಜನತೆ ಓದಿ ಅವರ ಬರಹದ ಸಾಮರ್ಥ್ಯವನ್ನು ಅರಿತುಕೊಳ್ಳಬೇಕು,ಡಾ// ಬಿ.ಮ್.ಹೆಗ್ಡೆಯವರು   ಹೇಳುವಂತೆ ಈ ಕಾದಂಬರಿ ಖಂಡಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾಗಬೇಕು..ಅವರ ಬರಹಗಳ ಶೈಲಿ ಗೆ ಕನ್ನಡದ ಜನತೆ ತಲೆದೂಗಬೇಕು ಎನ್ನುತ್ತಾ ಸದ್ಯ ನಿವೃತ್ತ ಜೀವನ ನಡೆಸುತ್ತಿರುವ ಡಾ//ರಂಜಿತ್ ಕುಮಾರ್ ಶೆಟ್ಟಿ ಅವರಿಂದ  ಇನ್ನಷ್ಟು  ಇಂತಹ ಅಪರೂಪದ ಕೃತಿಗಳು ಹೊರಬರಲೆಂದು  ಆಶಿಸುತ್ತೇನೆ.
- ಶ್ರೀಮತಿ ಶಾರದಾ ಎ. ಅಂಚನ್ ಕೊಡವೂರು
ನವಿ-ಮುಂಬೈ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಂಗಳವಾರ, ಫೆಬ್ರವರಿ 1, 2022

ಕಳ್ಳಿ ಹೂಗಳು (ಪುಸ್ತಕ ಅವಲೋಕನ) - ವರುಣ್ ರಾಜ್ ಜಿ.


ಶ್ರೀ ಧನಪಾಲ ನಾಗರಾಜಪ್ಪನವರ ೧೫ನೇ ಕೃತಿಯಾಗಿ ʼಕಳ್ಳಿ ಹೂಗಳುʼ ಎಂಬ ಸ್ವರಚಿತ ಅಬಾಬಿಗಳ ಸಂಕಲನ ಪ್ರಕಟವಾಗಿರುವುದು ಸಂತೋಷದ ಸಂಗತಿ. ಇವರು ತೆಲುಗಿನ ಶೇಕ್‌ ಕರೀಮುಲ್ಲಾರು ಆವಿಷ್ಕರಿಸಿದ ಅಬಾಬಿ ಸಾಹಿತ್ಯ ಪ್ರಕಾರವನ್ನು ಕನ್ನಡದಲ್ಲಿ ಯಶಸ್ವಿಯಾಗಿ ಪ್ರಯೋಗಕ್ಕೆ ತಂದಿದ್ದಾರೆ. 

ಅಬಾಬಿಗಳು ಸರ್ವಜ್ಞನ ವಚನಗಳು, ತೆಲುಗಿನ ವೇಮನರ ಪದ್ಯಗಳಂತೆ ಸಣ್ಣ ಸಣ್ಣ ಬಿಡಿ ಪದ್ಯಗಳಾಗಿದ್ದು, ವಿಚಾರ, ವಿಚಾರ ತೀಕ್ಷ್ಣತೆ ಮತ್ತು ಉತ್ತಮ ಸಾಹಿತ್ಯಗುಣ ಇವುಗಳಲ್ಲಿದೆ. ಕರೀಮುಲ್ಲಾರ ಅಬಾಬಿಗಳು ʼಸಮಸ್ತ ಶೋಷಿತರ ಪರ ನಿಲ್ಲುತ್ತವೆʼ ಎಂಬ  ಮಾತಿಗೆ ಯಾವ ಅಪವಾದವೂ ಇಲ್ಲದಂತೆ ಇಲ್ಲಿನ ಅಭಾಬಿಗಳ ರಚನೆಯಾಗಿವೆ.

ಅಬಾಬಿ ಎಂದರೆ 
ಸಣ್ಣ ಸಾಲು, ತೀಕ್ಷ್ಣ ವಿಚಾರ
ಆತ್ಮಾವಲೋಕನ, ಸಂದೇಶ, ವಿಡಂಬನೆ, ವಿವರಣೆ 
ವರುಣ
ಅಬಾಬಿಗಳು ಆಧುನಿಕ ವಚನಗಳು

 ಪ್ರಸ್ತುತ ಅಬಾಬಿಗಳ ಸಂಕಲನದಲ್ಲಿ ಸು. ೨೦೬ ಅಬಾಬಿಗಳಿದ್ದು, ವಿವಿಧ ಸಂಧರ್ಭದಲ್ಲಿ ಉಂಟಾದ ಯೋಚನೆ, ಹೊಳೆದ ಹೊಳಹು, ಕಾಡಿದ ನೆನಪು ಇತ್ಯಾದಿಗಳನ್ನು ಧನು ಎಂಬ ಕಾವ್ಯನಾಮದಲ್ಲಿ  ಕವಿಗಳು ದಾಖಲಿಸಿದ್ದಾರೆ. ಜ್ಞಾನ ಅನುಭವ ಮತ್ತು ಸಂವೇದನೆಗಳ ಸಮಿಶ್ರಣದಿಂದ ಇಲ್ಲಿನ ಅಬಾಬಿಗಳು ಪಕ್ವವಾಗಿವೆ.
ಹಲವು ಕಡೆ ಪ್ರಚಲಿತ ಗಾದೆಗಳನ್ನು ಬಳಸಿಕೊಂಡಿರುವುದು ಅಬಾಬಿಗಳಿಗೆ ಒಂದು ಗಹನತೆಯನ್ನು ತಂದುಕೊಟ್ಟಿದೆ. 

ಜೊತೆಗೆ ಒಂದಷ್ಟು ಹೊಸ ಗಾದೆಯ ರೂಪದ ವಾಕ್ಯಗಳನ್ನು ಸೃಷ್ಠಿಸಿರುವುದು ಈ ಕೃತಿಯ ಮತ್ತೊಂದು ವಿಶೇಷ. ಬದುಕು ಮೂರು ದಿನ ಸಂತೆ, ಮುಖ ನೋಡಿ ಮಣೆ ಹಾಕಬೇಡ, ಅಂಗೈಯಲ್ಲಿನ ಹುಣ್ಣಿಗೆ ಕನ್ನಡಿ ಬೇರೆ ಬೇಕೆ? ತಾಳಿದವನು ಬಾಳಿಯಾನು, ಇಂತಹ ಪ್ರಚಲಿತ ಗಾದೆಗಳನ್ನು ಸೂಕ್ತವಾಗಿ ಮತ್ತು ಅರ್ಥಪೂರ್ಣವಾಗಿ ಬಳಸಿರುವುದರ ಜೊತೆಗೆ ನಂಟುಗಳೇ ನೋಯಿಸುವ ಗಂಟುಗಳು, ವಿನೀತರಿಗೆ ವಿಜಯ ಒಲಿಯುವುದು, ಗಾಳಿಮಾತಿಗೆ ಕಿವುಡನಾಗು, ವಿಶ್ವಾಸವೊಂದು ವಜ್ರಾಯುಧ, ಭವ ಸಾಗರ ಕಷ್ಟ ನಷ್ಟಗಳ ಆಗರ, ಅಹಂಕಾರದಿಂದ ಬದುಕು ಅಂಧಕಾರ, ರೂಪಗಳು ಹಲವು ಜೀವ ಒಂದೆ ಮುಂತಾದ ಹೊಸ ಗಾದೆಯ ರೂಪದ ಸಾಲುಗಳನ್ನು ಕಟ್ಟಲಾಗಿದೆ.

             (ಶ್ರೀ ಧನಪಾಲ ನಾಗರಾಜಪ್ಪನವರು)

ಕೃತಿಯಲ್ಲಿ ಸಂದೇಶ, ಆತ್ಮಾವಲೋಕನ ವಿಡಂಬನೆ, ವಿಷಯ – ವಿಶ್ಲೇಷಣೆ ಎಲ್ಲವೂ ಸಮವಾಗಿ ಸೇರಿರುವುದರೊಂದಿಗೆ ಸಮಕಾಲೀನ ಸಮಸ್ಯೆ, ವಿದ್ಯಮಾನಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೀವನ ಎಂದರೇನು ಎಂಬುದು ಒಂದು ಆದಿಮ ಪ್ರಶ್ನೆ, ಈ ಪ್ರಶ್ನೆಗೆ ಉತ್ತರವಾಗಿ

ನೋವನು ಕಳೆದು
ನಲಿವನ್ನು ಭಾಗಿಸಿ
ಪ್ರೀತಿಯನ್ನು ಕೂಡಿಸು 
ಧನು
ಇಷ್ಟೇ ಬದುಕು 

ಎಂಬ ಸರಳವಾದ ಬದುಕಿನ ಸೂತ್ರವನ್ನು ಈ ಅಬಾಬಿ ನಮ್ಮ ಮುಂದಿಡುತ್ತದೆ. ಮುಂದಿನ ಮತ್ತೊಂದು ಪದ್ಯದಲ್ಲಿ ಸಾಧನೆ ಮತ್ತು ಸಾರ್ಥಕತೆ ಎಂಬೆರಡು ಪದಗಳನ್ನು ಬಹಳ ಅರ್ಥಪೂರ್ಣವಾಗಿ ಬಳಸಿಕೊಂಡು ಸಾಧನೆಗಿಂತಲೂ ಸಾರ್ಥಕತೆ ಮುಖ್ಯ, ಮನುಷ್ಯನಾಗಿ ಹುಟ್ಟಿದವನು ಮನುಷ್ಯನಾಗಿಯೇ ಬದುಕಿ ಮನುಷ್ಯನಾಗಿಯೇ ಸಾಯುವುದು ಸಾರ್ಥಕತೆ ಎಂದು ಹೇಳುವರು. ಪ್ರಶಸ್ತಿ, ಸನ್ಮಾನ ಇತ್ಯಾದಿಗಳನ್ನೇ ಸಾಧನೆ ಎಂದು ಭಾವಿಸಿ ಮನುಷ್ಯತ್ವವನ್ನೇ ಮರೆಯುತ್ತಿರುವ ಪ್ರಸ್ತುತ ಸಮಾಜದ ಪರಿಸ್ಥಿತಿಯನ್ನು ವಿಡಂಬಿಸುವ ಮತ್ತು ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ಸಂದೇಶ ಈ ಅಬಾಬಿಯಲ್ಲಿದೆ. 

ಹುಟ್ಟಿದಾಗ
ಎಲ್ಲರೂ ಮನುಷ್ಟರೇ
ಮನುಷ್ಯರಾಗಿ ಬದುಕಿ ಸತ್ತರದೇ ಸಾರ್ಥಕತೆ
ಧನು
ಸಾಧನೆಗಿಂತ ಸಾರ್ಥಕತೆ ಮುಖ್ಯ

ಮುಂದಿನ ಮತ್ತೊಂದು ಅಬಾಬಿಯಲ್ಲಿ ಓದದೇ ಬರೆಯುವ, ಬರೆದವರನ್ನು ಓದಿ ಪ್ರೋತ್ಸಾಹಿಸದ ವ್ಯಕ್ತಿತ್ವಗಳನ್ನು ಕುರಿತು ಬರಹಗಾರನು ಖಂಡಿತವಾಗಿ ಓದುಗನಾಗಿಯೇ ಇರಬೇಕು, ಓದದೇ ಬರೆಯುವ ಬರವಣಿಗೆಯು ಜ್ಞಾನ ಅನುಭವ ಮತ್ತು ಸಂವೇದನೆಯ ಕೊರತೆಯಿಂದಾಗಿ ಸತ್ವಹೀನವಾಗುವುದರಿಂದ ಬರಹಗಾರನು ಓದಿನ ಮೂಲಕ ಸತ್ವಯುತ ಬರಹಗಾರನಾಗುವುದರೊಂದಿಗೆ ಇತರೆ ಬರಹಗಾರರನ್ನು ಓದಿ ಪ್ರೋತ್ಸಾಹಿಸಬೇಕು ಎಂಬುದನ್ನು ಈ ಅಬಾಬಿ ವಿವರಿಸುತ್ತದೆ.

ರುಚಿಯಾದ ಅಡುಗೆಯೇ ಉಣ್ಣದವರು
ಸ್ವಾದಿಷ್ಟವಾದ ಅಡುಗೆ ಮಾಡಬಲ್ಲರೆ?
ಓದುಗರೆಲ್ಲರೂ ಬರಹಗಾರರಾಗಬೇಕಿಲ್ಲ
ಧನು
ಬರಹಗಾರರೆಲ್ಲರೂ ಓದುಗರಾಗಿರಲೇಬೇಕು.

ಧರ್ಮ, ಜಾತಿ ಇತ್ಯಾದಿಗಳ ಹೆಸರಿನಲ್ಲಿ ಹೊಡೆದಾಡುತ್ತಿರುವ ಪ್ರಸ್ತುತ ಸಂಧರ್ಭಕ್ಕೆ ಪೂರಕವಾಗಿ ಧರ್ಮ ಎಂದರೇನು ಎಂಬುದಕ್ಕೆ ಪ್ರೀತಿಯೊಂದೇ ಜೀವಂತ ಧರ್ಮ, ಮಾನವನಾಗಿ ಬದುಕುವುದೇ ನಿಜವಾದ ಧರ್ಮ ಎನ್ನುವ ಸಂದೇಶಗಳನ್ನು ಮುಂದಿನ ಅಬಾಬಿಗಳ ಮೂಲಕ ನೀಡಲಾಗಿದೆ.
 
ಎಲ್ಲರೂ….
ಮೊದಲು ಮನುಷ್ಟರು
ಆ ನಂತರವೇ ಹಿಂದೂ, ಕ್ರೈಸ್ತ, ಮುಸ್ಲಿಂ..
ಧನು 
ಬದುಕೇ ದಿಟವಾದ ಧರ್ಮ


ದ್ವೇಷಿಸುವವರು ದ್ವೇಷಿಸಲಿ
ದುಷ್ಟರ ಗೊಡವೆ ನಮಗೇಕೆ?
ಪ್ರೀತಿಸುವುದನ್ನು ನಿಲ್ಲಿಸಬೇಡ
ಧನು
ಪ್ರೀತಿಯೊಂದೇ ಜೀವಂತ ಧರ್ಮ
 
ಇಂತಹ ಹತ್ತುಹಲವು ಮೌಲ್ಯಯುಕ್ತ ಅಬಾಬಿಗಳನ್ನು ಈ ಕೃತಿ ಒಳಗೊಂಡಿದೆ, ಮುಖ್ಯವಾಗಿ ಗಾಳಿ ಮಾತುಗಳಿಗೆ ಕಿವುಡನಾಗು, ಗೆಲ್ಲುವುದಷ್ಟೇ ಅಲ್ಲ ಸೋಲುವುದನ್ನೂ ಕಲಿ, ಮನದ ಶುಚಿಯ ವಿಷಯವೇನು ಧನು…. ಅಹಂ ಬಿಟ್ಟು ಅವಲೋಕನ ಮಾಡು, ಶ್ರೇಷ್ಠತ್ವದ ವ್ಯಸನ ಬದುಕಿಗೆ ಮಾರಕ, ಸೋಲನ್ನು ಕೂಡ ಸಂಭ್ರಮಿಸು, ಇಂತಹಾ ಮೌಲಿಕ ಸಂದೇಶಗಳ ಜೊತೆಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳು, ಬಡವನ ನೋವು, ನೈತಿಕತೆಯ ಕುಸಿತ, ಅಧರ್ಮದ ಮೇಲುಗೈ, ಮಾಧ್ಯಮ ಮತ್ತು ರಾಜಕಾರಣಿಗಳ ಹೊಣೆಗೇಡಿತನ ಮುಂತಾದವುಗಳ ವಿಮರ್ಶೆ, ವಿಡಂಬನೆ ಇತ್ಯಾದಿಗಳಿಂದ ತುಂಬಿರುವ ಕೃತಿಯನ್ನು ಸಹೃದಯರು ಓದಿ ಆಸ್ವಾದಿಸಬೇಕೆಂದು ವಿನಂತಿಸುವೆ. ನಮಸ್ಕಾರಗಳು.

- ಶ್ರೀ ವರುಣ್‌ ರಾಜ್‌ ಜಿ.
ವಿಚಾರ ಮಂಟಪ ಸಾಹಿತ್ಯ ಬಳಗ


ಪ್ರತಿಗಳಿಗಾಗಿ ಸಂಪರ್ಕಿಸಿ : ಶ್ರೀ ಧನಪಾಲ ನಾಗರಾಜಪ್ಪ - 7892546523/6362567802

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...