ಹೆತ್ತವ್ವ ಕಲಿಸಿದಳು ಅಮ್ಮ ಎಂದು
ಅಪ್ಪನು ಹೆಗಲ ಮೇಲೆ ಹೊತ್ತುಕೊಂಡು
ಅಕ್ಕನ ಕಂಕುಳಲ್ಲಿ ಕುಂತು ಬೆಳೆದು
ತಂಗಿಯ ಜೊತೆಗೆ ಕುಂಟೆಬಿಲ್ಲೆ ಆಡಿ
ತಮ್ಮನೊಂದಿಗೆ ಲಗೋರಿಯಲ್ಲಿ ಕೂಡಿ
ಗೆಳೆಯರೊಟ್ಟಿಗೆ ಮರಕೋತಿಯಲ್ಲಿ ಸೇರಿ
ಈಜು ಆಡಿ,ತೋಟಕ್ಕೆ ನುಗ್ಗಿ ಮಾಲೀಕನ ಕೈಗೆ ಸಿಕ್ಕಿ
ಬುದ್ಧಿ ಮಾತ ತಿಳ್ಕೊಂಡು ಕಡೆಗೂ ಬಾಲ್ಯ ಕಳೆಯಿತು
ನೆನೆಸಿಕೊಂಡರೆ ಮೈನಿಗುರಿತು
ಉಪ್ಪಿಟ್ಟು ಸಾಲಿ ಮುಗಿಯಿತು
ಚಿಣ್ಣರಂಗಳಕ ಇಟ್ಟೀವಿ ಕಾಲ
ಅಆಇಈ ತಿದ್ದಿಸಿದರು ಪಾಟಿಮ್ಯಾಲ
ಹೆಗಲಿಗಿ ಹಾಕೊಂಡು ಹೊಂಟೀವಿ ಪಾಟಿಚೀಲ
ಬಾಯಾಗ ತಿನ್ನುತ್ತ ನಡೆದೀವಿ ಎಳ್ಳುಂಡಿಬೆಲ್ಲ
ಸಣ್ಸಾಲಿ ಮಾಸ್ತರ ಕಲಿಸ್ಯಾನ ಅಕ್ಷರ
ಪಾಟ್ಯಾಗ ಹಾಕ್ಯಾರ ಕೈಬರ
ಪ್ರಾಥಮಿಕ ಮುಗಿದರು ಮರಿವಲ್ದು ಅವ್ರೆಸ್ರ
ಅಚ್ಚೊತ್ತಿ ಕುಂತಾವ ಎದಿಯಾಗ ಪೂರ
ಪ್ರೌಢಕ್ಕ ಬಂದೇವ ಅರೆ ಜ್ಞಾನ ತಿಳಿದೇವ
ಗೆಳೆಯರೆಲ್ಲರೂ ಕೂಡಿ ಆಡಿದೇವ
ನಮಗೆಲ್ಲ ತಿಳಿತದ ಅಂತ್ಹೇಳಿ ಗುರುವ
ತಲೆಯೊಳಗೆ ಜ್ಞಾನದ ಮೊಳಕೆ ಒಡದಾವ
ಅಲ್ಲಿಂದ ಚಿಗುರುಗಳು ಬಲಿತಾವ
ಪ್ರೌಢದ ಮೂರೊರುಷ ನಗುನಗುತ ಕಳಿತೇವ ನೆನಪುಗಳು ಸಾಯದೆ ಇರುತಾವ
ಗುರುಗಳ ಹೆಸರು ಮನದಾಗ ಅಚ್ಯೊತ್ಯಾವ
ಪದವಿ ಪೂರ್ವಕ್ಕೆ ಹೊರಡಾಗ ಒಡೆದೋಯ್ತು ನಂಗುಂಪು
ಆದರೂ ಮನಸ್ಸಿತ್ತು ಬಾಳ ತಂಪು
ಕಲಿಯೋದೇ ಎರಡೊರುಷ
ಸಿಗುತ್ತಿತ್ತು ಬಹಳ ಹರುಷ
ನೆರೆಯೂರ ಗೆಳೆಯರು ಕೂಡ್ತೇವ ಒಂದೆಡೆಗೆ
ಬಿಟ್ಟು ಹೋಗ್ವಾಗ ನೋವಾಯ್ತು ಮನಸ್ಸಿಗೆ
ಕವಲುಗಳ ದಾರಿ ಬರುತಾವ ಎದುರಿಗಿ
ಮಾಡಬೇಕು ಮೂರೊರುಷ ಡಿಗ್ರಿ
ಕಲಿತೀವಿ ಅದರಲ್ಲಿ ಜೀವನದ ಪಾಠ
ಕಾಡತೈತಿ ಮನದೊಳಗ ಗುರುವಿನ ನೋಟ
ತಿಳಿದೀವಿ ಡಿಗ್ರಿಯು ಹಾಸ್ಯದ ಚದುರಂಗದಾಟ
ಮೈ ಮರೆತು ಕಳೆದರೆ ಆಗುತೈತಿ ಬದುಕಿಗೆ ನಷ್ಟ
ಪ್ರೊಫೆಸರ್ ಇರ್ತಾರಂತ ತಂಪಾಡಿಗೆ ತಾವ
ಅಂತ ತಿಳಿಹೇಳಿದ್ರು ಊರಾಗ ಕಲಿತವ್ರ
ನಂಭಾಗ್ಯ ಚೆಂದಿತ್ತು
ಗುರು ನಂಟು ಗಟ್ಟಿತ್ತು
ಎಲ್ಲೆಡೆ ಇದ್ದವರು ಕೂಡಿದೆವು ಒಂದೆಡೆ
ಅಪರಿಚಿತರಂತೆ ಬಂದವರು
ಸ್ಥಳ ನಾಮ ತಿಳಿಯದವರು
ನಿಧಾನಗತಿಯಲ್ಲಿ ಕೂಡಿತು ಎಲ್ಲರ ಹೃದಯ
ನಮ್ಮವರೆಂದು ಮಾಡಿತು ಶುಭ ಸಮಯ
ಸವಿರುಚಿಯ ಮಾತುಗಳ ಆರಂಭ ಬಾಯಾಗ
ಹರಿಯುವುದು ರಕ್ತ ಎಲ್ಲರೊಳು ಮೈಯ್ಯಾಗ
ಸವಿಗಾಳಿ ಸುಳಿತಾದ ಸುಯ್ಯಂದು ಮನದಾಗ
ಹಗುರಾಯಿತು ಭಾವಗಳು ತುಂಬಿದ ಬನದಾಗ
ಕೂಡುತ್ತೇವ ಬಂಧುಗಳಂತೆ ಮಗ್ಗುಲಲ್ಲಿ ನಾವು
ನಮ್ಮನ ಬೆರಿತಾಗ ಕೊಟ್ಟಂಗ ಕಾವು
ಲವಲವಿಕೆ ಎಲ್ಲರ ಮನದೊಳಗೆ ಠರಾವು
ಬೆಂಬಿಡದೆ ಕೂಡುವ ನೆನಪುಗಳಿಗೆ ಇಲ್ಲ ಸಾವು
ಡಿಗ್ರಿಯ ಕಲಿಕೆ ಜೀವನಕ್ಕೆ ಹೆಚ್ಚಿಸುವುದು ಬೇಡಿಕೆ
ಮೈಮರೆತು ಕಲಿತರೆ ಕಾಡುವುದು ಕಾಡಿಕೆ
ಎಲ್ಲ ಬಿಟ್ಟು ಗೂಳಿಯಂಗೆ ತಿರುಗಿದರೆ ಆದಿತು ನಾಚಿಕೆ
ಪಡಿಬೇಕು ಮೂರೊರುಷದಾಗ ಅಮೂಲ್ಯ ಕಾಣಿಕೆ
ಗುರುವರ್ಯರ ಬಂಧ
ಮರೆಯಲಾಗದು ಎಂದ
ಬರುತೈತಿ ನೆನಪ ಬಿಡದ ಸಂದ
ನೆನೆದರೆ ಮನವು ಭಾರದ ಅಶ್ರುಗಂಧ
ಕಳೆದ ಅರೆಕ್ಷಣ ನೆನೆದರೆ ಬೀಳುವುದು ಕನಸು
ಇದ್ದಾಗ ಖುಷಿಪಟ್ಟು ಹಗುರಗೊಳಿಸು ಮನಸ್ಸು
ಸಿಗುವುದಿಲ್ಲ ಮತ್ತೊಮ್ಮೆ ಕಳೆದರೆ ಆ ಚಾನ್ಸು
ಮುಂದಿನ ಹಂತದಲ್ಲಿ ಸಿಗುವರೇನೋ ಇಂಥ ಫ್ರೆಂಡ್ಸು
ಬಿಟ್ಟು ಹೊರಡುವೆವು ಕೊನೆಗೊಮ್ಮೆ ತುಂಬಿದ ಹೌಸು
ಮರೆಯಲಾಗದು ಡಿಗ್ರಿಯ ಅನುಭವ
ಬಾಳೆಗೊನೆಯಂತೆ ಕೂಡುತ್ತಾರ ಒಂದು ಗಿಡದಾಗ
ಕೊನೆಗೊಮ್ಮೆ ಉದುರಬೇಕು ಹಣ್ಣೆಲೆನೇ
ಖಾಲಿ ಮಾಡಬೇಕು ಎಲ್ಲರೂ ಸುಮ್ಮನೇ
ಹರಸುವರು ಗುರುಗಳು ಭಾರದ ಮನದಿಂದ
ತುಂಬಿ ಹರಿಯುವುದು ಅಶ್ರುಜಲ ಅಕ್ಷಿಯಿಂದ
ಕೂಡಬಹುದೇನೋ ಎಲ್ಲರೂ ಒಂದೊಮ್ಮೆ ದಿನ
ಬಾಳ ದಾರಿ ಸುಖದಿ ಸಾಗಲಿ
ನೆನಪುಗಳು ಸಾಯದಿರಲಿ
ಕನಸುಗಳು ಬೀಳುತ್ತಿರಲಿ
ಮನವು ಕೆಡದಿರಲಿ
ಎಲ್ಲರೂ ಒಂದು ದಾರಿಗೆ ಸಾಗುತ್ತಿರಲಿ
ಗುರಿಗೆ ಪ್ರೇರಣೆ ಗುರುಗಳೆಲ್ಲರೂ ಹಿಂದಿರಲಿ
ಶಿಶುವಿನಿಂದ ಮುಪ್ಪಿನೊರೆಗೆ ಕಲಿಸಿದ ಗುರು
ಕಲಿತರೂ ಅಹಂನಿಂದ ಮೆರೆಯದಿರು
ಮೆರೆದು ಹಾಳಾಗದಿರು
ನೆನಪುಗಳಿಗೆ ಸಾವು ತರದಿರು
ಸಾಯುವುದಿಲ್ಲ ನೆನಪುಗಳು ಮರೆಯದಿರು.
- ಬಿ.ಹೆಚ್.ತಿಮ್ಮಣ್ಣ.