ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ದ.ರಾ. ಬೇಂದ್ರೆಯವರ ಯುಗಾದಿ ಬಗೆಗಿನ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ..? ಅದು ಚಲನಚಿತ್ರ ಗೀತೆಯಾಗಿಯೂ ಹೊರಹೊಮ್ಮಿದ ಸುಂದರ ಗೀತೆ.......
ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
ಹೊಂಗೆ ಹೂವ ತೊಂಗಲಲಿ ಬೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆ..... ಈ ಅದ್ಭುತ ಸಾಹಿತ್ಯಕ್ಕೆ ಸಾವಿಲ್ಲ. ಅದೇ ರೀತಿ ರಾಷ್ಟ್ರಕವಿ ಕುವೆಂಪುರವರು ಸುರಲೋಕದ ಸುರನದಿಯಲ್ಲಿ ಮಿಂದು ಸುರಲೋಕದ ಸಂಪದವನು ತಂದು ನವಸಂವತ್ಸರ ಭೂಮಿಗೆ ಬಂದು ಕರೆಯುತ್ತಿದೆ ನಮ್ಮನ್ನು ಇಂದು ಎಂದು ರಚಿಸಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು *ಮಾವು ನಾವು ಬೇವು ನಾವು ನೋವು ನಲಿವು ನಮ್ಮವು,* *ಹೂವು ನಾವು ಹಸಿರು ನಾವು ಬೇವು ಬೆಲ್ಲ ನಮ್ಮವು* ಎಂದರು.
ಯುಗಾದಿ ಎಂಬುದು ಸಂಸ್ಕೃತ ಪದಗಳಾದ 'ಯುಗ' ಮತ್ತು 'ಆದಿ' ಎಂಬ ಎರಡು ಪದಗಳಿಂದ ಜೋಡಣೆಯಾಗಿದೆ. ಯುಗ ಅಂದ್ರೆ ವರುಷ ಕಾಲಘಟ್ಟ. ಆದಿ ಎಂದರೆ ಆರಂಭ. ಇದರರ್ಥ ಹೊಸ ವರುಷದ ಅಥವಾ ಹೊಸ ಯುಗದ ಆರಂಭ ಎಂದರ್ಥ. ಪುರಾಣದ ಪ್ರಕಾರ ಭಗವಾನ್ ಶ್ರೀ ಮಹಾವಿಷ್ಣುವಿನ ಅನೇಕ ಹೆಸರುಗಳಲ್ಲಿ ಯುಗಾದಿಕೃತ್ ಅಂದರೆ ಯುಗಗಳನ್ನು ಸೃಷ್ಟಿಸುವನನ್ನು ಸೂಚಿಸುವ ಹೆಸರು ಎಂದರ್ಥ.ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ರೀತಿಯ ಆಚರಣೆಗಳನ್ನು ಹಿಂದು ಧರ್ಮದ ಜ್ಯೋತಿಷ್ಯ ಶಾಸ್ತ್ರದಿಂದ ನಿರ್ಣಯಗೊಂಡರೂ ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ. ಅಶ್ವಿನಿ ನಕ್ಷತ್ರಕ್ಕೆ ಸೂರ್ಯನು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ. ಆದರೆ ಚಂದ್ರನ ಚಲನ ಗತಿ ಆಧರಿಸಿ ಒಂದೊಂದು ತಿಂಗಳಾಗಿ 12 ಪ್ರದಕ್ಷಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ಸೂರ್ಯ ಮತ್ತು ಚಂದ್ರಗತಿಯನ್ನು ಅವಲಂಬಿಸಿ 11 ರಿಂದ 13 ಪೌರ್ಣಿಮೆ ಅಥವಾ ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ.
ಇತಿಹಾಸ ಮತ್ತು ಪೌರಾಣಿಕ ಹಿನ್ನೆಲೆ:
ಭಾರತವನ್ನು ಆಳಿದ ಶಾಲಿವಾಹನನು ಚೈತ್ರ ಶುದ್ಧ ಪಾದ್ಯಮಿಯಂದು ಸಿಂಹಾಸನ ರೂಢನಾದನೆಂದು, ಅಂದಿನಿಂದ ಶಾಲಿವಾಹನ ಶಕೆ ಆರಂಭವಾಯಿತು ಎಂದು ಇತಿಹಾಸ ತಿಳಿಸುತ್ತದೆ. ವರಹಮಿಹಿರಚಾರ್ಯರು ಸಹ ವರ್ಷಾರಂಭವನ್ನು ಚೈತ್ರ ಮಾಸವೆಂದು ತಿಳಿಸಿರುವರು.12ನೇ ಶತಮಾನದಲ್ಲಿ ಪ್ರಸಿದ್ಧ ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರ ಖಗೋಳ ಲೆಕ್ಕಾಚಾರವುಸೂರ್ಯೋದಯದಿಂದ ಯುಗಾದಿಯ ದಿನವನ್ನು ಹೊಸ ವರ್ಷದ ಆರಂಭ, ಹೊಸ ತಿಂಗಳು ಮತ್ತು ಹೊಸ ದಿನವೆಂದು ನಿರ್ಧರಿಸಿದರು.* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕ್ರಿ.ಪೂ. 18-02-3102 ಕ್ಕೆ ಅನುಗುಣವಾದ ಚೈತ್ರದ ಪ್ರಕಾಶಮಾನವಾದ 15ನೆಯ ಮುಂಜಾನೆ ಶ್ರೀ ಕೃಷ್ಣನು ನಿರ್ಯಾಣವನ್ನು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ.* ಹೊಸ ವರ್ಷದ ಮೊದಲದಿನ ಹಾಗೂ ಬ್ರಹ್ಮಾಂಡವು ಸೃಷ್ಟಿಯಾದ ದಿನವಾಗಿರುವ ಯುಗಾದಿ ಎಂದು ಪ್ರಕೃತಿ ಮಾತೆಯು ನವಚತನ್ಯವನ್ನು ತುಂಬಿಕೊಂಡು ಪೂರ್ಣ ಪ್ರಮಾಣದ ಬಿಸಿಲಿನಲ್ಲಿ ಹಸಿರು ಹಸಿರಾಗಿ ಕಂಗೊಳಿಸುತ್ತ, ಮನುಕುಲಕ್ಕೆ ಉಡುಗೊರೆಯಾಗಿ ನೀಡುವ ಕಾಲವಿದು. ವಸಂತ ಋತುವಿನ ಆರಂಭದ ದಿನವಾದ ಚೈತ್ರ ಮಾಸ ಶುಕ್ಲಪಕ್ಷ ಪಾಡ್ಯದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ.
* ವೇದಗಳ ಪ್ರಕಾರ,ಧರ್ಮ ಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಬ್ರಹ್ಮದೇವ ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೇ ಅಂದರೆ ಯುಗಾದಿಯಂದು ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಬ್ರಹ್ಮದೇವನು ಅಂದೇ ಗ್ರಹ, ನಕ್ಷತ್ರ ,ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ ಕಾಲಗಣನೆಯನ್ನು ಆರಂಭಿಸಿದ. ನಂತರ ಜೀವರಾಶಿಯನ್ನು, ಜಲರಾಶಿ ,ಸಸ್ಯರಾಶಿ, ಬೆಟ್ಟಗುಡ್ಡಗಳನ್ನು ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.* ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯವತಾರ. ಈ ಅವತಾರವನ್ನು ತಾಳಿದ್ದು ಯುಗಾದಿಯ ದಿನವೆಂದು ವೇದಗಳಲ್ಲಿ ಉಲ್ಲೇಖವಾಗಿದೆ.* ಬ್ರಹ್ಮದೇವನಿಂದ ನಾಲ್ಕು ವೇದಗಳನ್ನು ಕದ್ದಂತಹ ರಾಕ್ಷಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ಆಗ ವಿಷ್ಣು ಮತ್ಸಾವತಾರವನ್ನು ತಾಳಿ ನೀರಿನಲ್ಲಿ ಅವಿತು ಕುಳಿತಿದ್ದ ಸೋಮಕಾಸುರನನ್ನು ಸಂಹರಿಸಿ, ನಾಲ್ಕು ವೇದಗಳನ್ನು ಬ್ರಹ್ಮ ದೇವರಿಗೆ ಹಿಂತಿರುಗಿಸುತ್ತಾರೆ. ಬ್ರಹ್ಮ ದೇವರು ವೇದಗಳನ್ನು ಪಡೆದ ದಿನವೇ ಯುಗಾದಿ. *ಶ್ರೀರಾಮಚಂದ್ರನು ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಅಯೋಧ್ಯೆಗೆ ಆಗಮಿಸಿ ರಾಜ್ಯಭಾರ ಆರಂಭಿಸಿದ ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. *ಯುಗಾದಿಯ ದಿನ ಕಲಿಯುಗವು ಆರಂಭವಾಯಿತು ಎಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಶಾಸ್ತ್ರಗಳ ಪ್ರಕಾರ, ವೇದಗಳ ಪ್ರಕಾರ ಯುಗಾದಿಯು ಹೊಸ ವರ್ಷದ ಮೊದಲ ದಿನವಾಗಿದೆ. ಬಹಳಷ್ಟು ಶ್ರೇಷ್ಟತೆಯಿಂದ ಕೂಡಿದ ದಿನವಾಗಿದೆ.
ಜೊತೆಗೆ ಯುಗಾದಿ ಹಬ್ಬ ಪ್ರಕೃತಿಗೆ ಕೃತಜ್ಞತೆಯ ಸಂಕೇತವಾಗಿ ಆಚರಿಸಲ್ಪಡುವ ಹಬ್ಬವಾಗಿದೆ. ವೈವಿಧ್ಯತೆಯಲ್ಲಿ ಏಕತೆಯ ಸಂದೇಶ ಸಾರುವ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಉದಾಹರಣೆಗೆ ಕರ್ನಾಟಕ ತೆಲಂಗಾಣ ಆಂಧ್ರಪ್ರದೇಶ ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ವಿಶೇಷವಾಗಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.
ಯುಗಾದಿಯ ಮಹತ್ವ
ಭಾರತ ಬಹು ಸಂಸ್ಕೃತಿಯ ತವರೂರು. ಭಾರತೀಯ ಹಬ್ಬಗಳಲ್ಲಿ ಯುಗಾದಿಗೆ ರಾಜನ ಸ್ಥಾನಮಾನ.
ನವದುವಿನಂದ ಶೃಂಗಾರಗೊಳ್ಳುವ ಇಡೀ ನಿಸರ್ಗವು ತನ್ನ ಪ್ರಿಯತಮ ವಸಂತನ ಆಗಮನಕ್ಕೆ ಕಾದು ಕುಳಿತ ಕಾಲ. ಸುಗ್ಗಿ ಮುಗಿಸಿದ ರೈತನ ಮೊಗದಲ್ಲಿ ನಗೆಯ ಬೆಳಕು ಚೆಲ್ಲುವ ಕಾಲ. ನೂತನ ವರ್ಷಾರಂಭದ ಶುಭ ಸಂದರ್ಭದಲ್ಲಿ ನಾವಿನ್ಯತೆಯ ಸಿಹಿ ಸಿಂಚನ ಚೆಲ್ಲುವ ಈ ಯುಗಾದಿಯು ನವ ಕನಸುಗಳಿಗೆ, ಭಾವನೆಗಳಿಗೆ ಪುಷ್ಪಗಳ ಮೃದುತ್ವವನ್ನು ಚಿಮ್ಮಿಕಿಸುತ್ತದೆ, ಇಡೀ ಸೃಷ್ಟಿಯಲ್ಲಿ ನವೋಲ್ಲಾಸ ತುಂಬುವ ದಿನ. ವಸಂತ ಋತುವಿನಿಂದ ಮನೋಹರವಾದ ಪ್ರಕೃತಿ, ಪ್ರಾತ:ಕಾಲದಲ್ಲಿ ಪಕ್ಷಿಗಳ ನಿನಾದದಿಂದ ಉಂಟಾಗುವ ರಾಗ ರಂಜಿತವಾಗುತ್ತದೆ. ತಾನು ನೂತನ ಜೀವನವನ್ನು ನಡೆಸಬಹುದೆಂಬ ಸಂದೇಶ ಸಾರುತ್ತದೆ. ಯುಗಾದಿಯ ಆಚರಣೆಯಿಂದ ಮನುಷ್ಯ ತನ್ನಲ್ಲಿರುವ ಅರೀಷಡ್ವರ್ಗ್ಗಳನ್ನು ಅಳಿಸಿ ನಿರ್ಮಲವಾದ, ಪರಿಶುದ್ಧವಾದ, ವ್ಯಕ್ತಿತ್ವ ಹೊಂದಲೆಂಬ ಸಂದೇಶವೇ ಯುಗಾದಿ ಹಬ್ಬ.
ವಸಂತಋತುವನ್ನು ಸ್ವಾಗತಿಸುತ್ತಾ, ಪ್ರಕೃತಿಯಲ್ಲಿ ವಸಂತದ ಚಿಹ್ನೆಗಳು ಮತ್ತು ವಿಭಿನ್ನ ಬಣ್ಣದ ಪುಷ್ಪಗಳನ್ನು ನೋಡುತ್ತೇವೆ. ಜೀವನದ ಹೊಸತನವನ್ನು ಸ್ವೀಕರಿಸಲು ಜನರನ್ನು ಉತ್ತೇಜಿಸುವಂತಹ ವಿಶೇಷ ಹಬ್ಬ. ಮಾವಿನ ಎಲೆಗಳು ಮತ್ತು ಮಲ್ಲಿಗೆ ಹೂವಿನ ಹಾರಗಳನ್ನು ಹೆಚ್ಚಾಗಿ ಈ ಹಬ್ಬದಲ್ಲಿ ನಾವು ಬಳಸುವುದನ್ನು ಕಾಣುತ್ತೇವೆ. ಏಕೆಂದರೆ ಆಗತಾನೇ ಈ ಸಂದರ್ಭದಲ್ಲಿ ಮಾವಿನ ಗಿಡಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತಾ ಮಾವಿನಕಾಯಿಗಳನ್ನು ಮಡಿಲಲ್ಲೊತ್ತು ಮನೆಯ ಬಾಗಿಲಿನ ತೋರಣಕ್ಕೆ ತನ್ನನ್ನು ಅಲಂಕರಿಸುವಂತೆ ಕೈಚಾಚಿ ಕರೆಯುತ್ತಿರು ತ್ತಿರುವಂತೆ ಭಾಸವಾಗುತ್ತದೆ. ಸುಗಂಧ ಭರಿತ ಮಲ್ಲಿಗೆ ಹೂವಿನ ಕಂಪು ಮನಸ್ಸಿಗೆ ಮುದ ನೀಡಿ ಮಲ್ಲಿಗೆ ಮಾಲೆಯಿಂದ
ಮನೆಗಳ ಬಾಗಿಲುಗಳನ್ನ ಅಲಂಕರಿಸುತ್ತೇವೆ. ಮನಸ್ಸು ಮನಸ್ಸುಗಳನ್ನು ಬೆಸೆಯುವಂತ ಹಬ್ಬ ಯುಗಾದಿ. ಈ ದಿನದಂದು ಬೇವು ಬೆಲ್ಲದ ಸ್ವೀಕಾರ ಪ್ರಶಸ್ತವಾದುದ್ದು. ಹೇಗೆ ಹಗಲಿರುಳು, ಉಷ್ಣ ಶೀತಗಳು ಸಮವಾಗಿವೆಯೋ ಹಾಗೆ ಸುಖ ದುಃಖಗಳನ್ನು ಸಮನಾಗಿ ಪಡೆಯುವ ಸಂಕೇತವಾಗಿದೆ. ಸುಖದ ಸಂಕೇತವಾದ ಬೆಲ್ಲವನ್ನು ಮತ್ತು ಕಷ್ಟದ ಸಂಕೇತವಾದ ಬೇವನ್ನು ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವೋ ಹೊಟ್ಟೆಯೊಳಗೆ ಶಾಖವನ್ನು ಉಂಟು ಮಾಡಿದರೆ ಬೇವು ಆ ಶಾಖವನ್ನು ಶಮನಗೊಳಿಸುತ್ತದೆ. ಹೀಗಾಗಿ ಬೇವು ಬೆಲ್ಲದ ಮಿಶ್ರಣ ಜನವನ್ನು ತಿನ್ನುವಾಗ ಅಥವಾ ಕುಡಿಯುವಾಗ ಪೂರ್ವಜರು ಒಂದು ಶ್ಲೋಕವನ್ನು ಪಠಿಸುತ್ತಿದ್ದರು.
*ಶತಾಯು:ವಜ್ರ ದೇಹಾಯ ಸರ್ವಸಂಪತ್ಕರಾಚ*
*ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂll*
ಅಂದರೆ ನೂರು ವರ್ಷಗಳ ಆಯುಷ್ಯ. ಸದೃಢವಾದ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು-ಬೆಲ್ಲ ಸೇವನೆ ಮಾಡುತ್ತೇನೆ ಎಂದು ಪ್ರಾರ್ಥನೆ ಸಲ್ಲಿಸುತ್ತಾ ಬೇವನ್ನು ಸ್ವೀಕರಿಸುವಂತಹ ಪದ್ಧತಿಯಿತ್ತು.
ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ. ಸರ್ವೇ ಸಾಮಾನ್ಯವಾಗಿದೆ. ಬೇವು-ಬೆಲ್ಲ ಜೀವನದ ಸಿಹಿಕಹಿಗಳೆರಡನ್ನು ಸಮಾನವಾಗಿ ಸ್ವೀಕರಿಸುವಂತಹ ಮನಸ್ಥಿತಿಯನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಆತ್ಮಸ್ಥೈರ್ಯವನ್ನು ಗಟ್ಟಿಗೊಳಿಸುವಂತಹ ಒಂದು ಸಂಪ್ರದಾಯ. ರಾಷ್ಟ್ರದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ರೀತಿಯಾಗಿ ಬೇವು ತಯಾರಿಸಿ ಸೇವಿಸುವಂತಹ ಪದ್ಧತಿ ಇದೆ. ಒಣ ಬೇವು ಮತ್ತು ನೀರು ಬೇವು ವಿಶೇಷವಾದದ್ದು. ಮುಖ್ಯವಾಗಿ ಕರ್ನಾಟಕದಲ್ಲಿ ಎರಡು ರೀತಿಯ ಬೇವುಸೇವನೆಯ ರೂಢಿ ಇದೆ. ನೀರ್ ಬೇವಿಗಾಗಿ ಹುಣಸೆಹಣ್ಣು ನೆನೆಸಿ, ರಸ ತೆಗೆದು ಅದಕ್ಕೆ ಬೆಲ್ಲ, ಪುಟಾಣಿ ಹಿಟ್ಟು, ಒಣ ಕೊಬ್ಬರಿ, ಮಾವಿನ ಕಾಯಿ, ಯಾಲಕ್ಕಿ, ಲವಂಗ, ಮೆಣಸು, ಜಾಜಿಕಾಯಿ, ಜೇನುತುಪ್ಪ, ಗಸಗಸೆ, ಬೇವಿನ ಹೂವು, ಮಾವಿನಕಾಯಿ, ಗೋಡಂಬಿ, ದ್ರಾಕ್ಷಿ ,ಅಂಜೂರ, ಬದಾಮಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಜೊತೆಗೆ ಕುಡಿಯಲು ಹದವಾದ ರುಚಿಯಂತೆ ಸಿದ್ಧಗೊಳಿಸಿ ಬೇವಿನ ಸ್ವಾದ ಹೆಚ್ಚಿಸಲು ಅದಕ್ಕಾಗಿ ಚಿಕ್ಕುಹಣ್ಣು, ದ್ರಾಕ್ಷಿ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಬೇವಿನ ಹೂ ಸೇರಿಸಿ ಸಿದ್ಧಪಡಿಸುವುದು ವಾಡಿಕೆ. ಸದೃಢ ಆರೋಗ್ಯಕ್ಕಾಗಿ ಬೇವಿಗೆ ಬಳಸುವ ಪದಾರ್ಥಗಳೆಲ್ಲವೂ ಹಿತಕರ ಎಂಬ ಎಂಬುದು ಹಿರಿಯರ ಪೂರ್ವಲೋಚನೆ.
ಹಿಂದೂಧರ್ಮದ ಪ್ರತಿಯೊಂದು ಹಬ್ಬಕ್ಕೂ ವಿಶೇಷ ಮಹತ್ವವಿದೆ. ಯುಗಾದಿಯ ಧರ್ಮಸಿಂಧು ಎಂಬ ಗ್ರಂಥದಲ್ಲಿ ಯುಗಾದಿ ಹಬ್ಬಕ್ಕೆ ಐದು ವಿಧಿಗಳನ್ನ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಮೊದಲನೇದಾಗಿ ಹಬ್ಬದ ದಿನದಂದು ಎದ್ದ ಕೂಡಲೇ ಅಗಲವಾದ ಬಾಯಿಯ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಮನೆ ಮಂದಿಯಲ್ಲ ಅದರಲ್ಲಿ ಮುಖ ನೋಡಿಕೊಳ್ಳಬೇಕು ಹಾಗೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ. ಎರಡನೆಯದು ಹರಳೆಣ್ಣೆಯಿಂದ ಅಭ್ಯಂಗ ಸ್ನಾನ ಮಾಡುವುದು ಹರಳೆಣ್ಣೆ ದೇಹವನ್ನು ತಂಪಾಗಿಸುವುದರಿಂದ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದಿದೆ.ಮೂರನೆಯದಾಗಿ ಹೊಸ ಬಟ್ಟೆ ಧರಿಸಿ ಮನೆಯವರೆಲ್ಲ ಕುಲದೇವರನ್ನು ಇಷ್ಟ ದೇವರನ್ನು ಆರಾಧನೆ ಮಾಡುವ ಪದ್ಧತಿ. ನಾಲ್ಕನೆಯದು ಹಬ್ಬದಂದು ಪಂಚಾಂಗ ಪಠಣ ಹಾಗೂ ಶ್ರವಣದಿಂದ ವಿಶೇಷವಾದ ಫಲಗಳು ಪ್ರಾಪ್ತಿಯಾಗುತ್ತವೆ. ಪಂಚಾಂಗದಿಂದ ತಿಥಿಯ ಬಗ್ಗೆ ತಿಳಿದರೆ ಶ್ರೇಯಸ್ಸು ಉಂಟಾಗುತ್ತದೆ. ನಕ್ಷತ್ರದಿಂದ ಪಾಪ ಪರಿಹಾರ. ಯೋಗದಿಂದ ರೋಗ ನಿವಾರಣೆ. ಕರಣದಿಂದ ಕಾರ್ಯಸಿದ್ಧಿಯಾಗುತ್ತದೆ ಎಂದರು. ಜೊತೆಗೆ ಆರೋಗ್ಯ ಬಲವರ್ಧನೆಗಾಗಿ ಬೇವು-ಬೆಲ್ಲ ಸೇವನೆ ಎಂಬ ಮಾತುಗಳು ಶಾಸ್ತ್ರಗಳಲ್ಲಿ ಉಲ್ಲೇಖಿತ. ಅಲ್ಲದೆ ಈ ದಿನದಂದು ಸಾಯಂಕಾಲ ಸೌಂದರ್ಯಲಹರಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದರೆ ಮನೋ ಸಂಕಲ್ಪ ಸಿದ್ಧಿಯಾಗುತ್ತದೆ ಎಂಬ ನಂಬಿಕೆ.
ಚಂದ್ರ ದರ್ಶನ ಪಾಠದ ನಂತರ ಬಿದಿಗಿಯ ದಿನ ಸ್ನಾನ ಪೂಜಾರಿಗಳನ್ನು ಮುಗಿಸಿ ಸಂಜೆ ಚಂದ್ರದರ್ಶನ ಮಾಡಿ ನಮಸ್ಕರಿಸುವ ಸಂಪ್ರದಾಯವಿದೆ ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ನೋಡಿ ಅತೀವ ಸಂಕಷ್ಟಕ್ಕೆ ಒಳಗಾಗಿರುವವರು ಯುಗಾದಿ ಬಿದಿಗೆ ಚಂದ್ರನನ್ನು ನೋಡಿ ಕ್ಷೀರಸಮುದ್ರದಲ್ಲಿ ಜನಿಸಿದವನೇ ಶ್ರೀ ಲಕ್ಷ್ಮಿ ದೇವಿಯ ಸಹೋದರನೇ ಶಿವನ ಜೊತೆಯಲ್ಲಿರುವ ಬಾಲಚಂದ್ರ ನಿನಗೆ ನಮಸ್ಕಾರ ಎಂದು ನಮಸ್ಕರಿಸಿ ಪ್ರಾರ್ಥಿಸಿ ಹೊಸ ಬಟ್ಟೆಯ ಒಂದು ವೇಳೆಯನ್ನು ಚಂದ್ರನಿಗೆ ಅರ್ಪಿಸಿದರೆ ಪಾಪ ಪರಿಹಾರವಾಗಿ ಸುಖ ಶಾಂತಿಗಳು ಶಾಶ್ವತವಾಗಿ ಸಿಗುತ್ತವೆ ಎಂಬ ನಂಬಿಕೆ.
ಸನಾತನ ಧರ್ಮವನ್ನು ಗೌರವಿಸುವ ನಮಗೆ ನೂತನ ವರ್ಷ ಯುಗಾದಿಯಾದರೂ ನಾವು ಪಾಶ್ಚಿಮಾತ್ಯರ ಅನುಕರಣೆ ಮಾಡಿ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಮಾಡುತ್ತಿರುವುದು ವಿಪರ್ಯಾಸ. ಇನ್ಮುಂದೆಯಾದರೂ ನಮ್ಮ ದೇಶದ ಹೊಸ ವರ್ಷದ ಆಚರಣೆ ಬದಲಾವಣೆಗೊಳ್ಳುವುದೋ ಕಾದು ನೋಡಬೇಕು. ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ ಈ ಯುಗಾದಿಯ ಹಬ್ಬದ ಸಂಭ್ರಮದ ಈ ಶುಭಕೃತ ನಾಮ ಸಂವತ್ಸರ ಸರ್ವರಿಗೂ ಆರೋಗ್ಯ ,ಸುಖ ಶಾಂತಿ ನೆಮ್ಮದಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥನೆಯೊಂದಿಗೆ ನನಗೆ ನನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುವಂತ *ಸ್ವರಚಿತ ಕವನ ನೆನಪಿಗೆ ಬಂತು*
*ನಮ್ಮ ಬಾಲ್ಯದಲ್ಲಿ ಯುಗಾದಿ ಸಂಭ್ರಮ*
*ಬ್ರಹ್ಮಾಂಡದ ಸೃಷ್ಟಿಯ ಮೊದಲ ರವಿಯ ಕಿರಣ*
*ಯುಗಾದಿಯ ಹೊಸ ವರುಷದ ಆರಂಭದ ಕ್ಷಣl*
*ಕೊಪ್ಪಳ ಜಿಲ್ಲೆಯ ಪುಟ್ಟಗ್ರಾಮ ಅಳವಂಡಿ*
*ಬಾಲ್ಯವ ಕಳೆದೆನಿಲ್ಲಿ ಅಮ್ಮನ ಮಡಿಲಲ್ಲಾಡಿl*
*ಎಳ್ಳೆಣ್ಣೆ ಸ್ನಾನಮಾಡಿ ಹೊಸಲಂಗರವಿಕೆ ಧರಿಸಿ*
*ಮಾರುದ್ದಜಡೆ ಹೆಣೆದು ರಿಬ್ಬನ್ನಿನಿಂದ ಸಿಂಗರಿಸಿl*
*ಕಾಲ್ಗೆಜ್ಜೆ ಹಾಕಿ ಹೆಜ್ಜೆಯ ಸದ್ದು ಮಾಡುತ*
*ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುತl*
*ಸಗಣಿ ಗೋಮೂತ್ರದಿ ಸಾರಣೆಯ ಮಾಡಿದೆವು*
*ರಂಗೋಲಿಯ ಚಿತ್ತಾರ ಬಿಡಿಸಿ ನಕ್ಕು ನಲಿದೆವುl*
*ಹೂಹಣ್ಣುಕಾಯಿ ಕರ್ಪೂರದಿ ದೇವರ ಆರಾಧನೆ*
*ಹೋಳಿಗೆ ಪಾಯಸ ಬೇವು ಬೆಲ್ಲದ ಸಮರ್ಪಣೆl*
*ಹಣ್ಣೆಲೆಗಳುದುರಿ ಗಿಡದಿ ಚಿಗುರೆಲೆಗಳು ನಾಚಿನಿಂತವು*
*ಹಸಿರಸಿರಿಗೆ ನಸುನಾಚುತಲಿ ಗೆಳತಿಯರೆಲ್ಲಾ ಕೂಡಿ ನಲಿದೆವುl*
*ಬೇವುಬೆಲ್ಲ ಸವಿಯುವ ನಮ್ಮತಲೆ ನೇವರಿಸಿದಳಮ್ಮ*
*ಕಷ್ಟಸುಖಗಳೇನೇ ಬರಲಿ ಎದೆಗುಂದದಿರಿಯಂದನಪ್ಪl*
*ಶಾಲೆಯ ಮೇಷ್ಟ್ರುಗಳ ಮನೆ ಮನೆಗೆ ತೆರಳಿದೆವು*
*ಬೇವು ಬೆಲ್ಲವ ನೀಡುತ ಹೊಸವರುಷದ ಶುಭ ಕೋರಿದೆವುl*
*ವರುಷಕೊಂದು ಹೊಸತುದಿನ ಸವಿನೆನಪಿನ ಕಂಪನ*
*ಯುಗಯುಗಾದಿ ಕಳೆದರೂ ಬಾಲ್ಯದ ಸಂಭ್ರಮದಾಲಿಂಗನ।*
ಒಂದು ಕಡೆ ವಸಂತ ಮಾಸವನ್ನು ಆಲಂಗಿಸುವ ಯುಗಾದಿ ಹಬ್ಬ ಸಂಭ್ರಮ ತಂದುಕೊಟ್ಟರೆ, ಮತ್ತೊಂದು ಕಡೆ ಆತಂಕದ ಸೃಷ್ಟಿಯನ್ನು ಮೂಡಿಸುತ್ತಿರುವುದು ಜಾಗತಿಕ ತಾಪಮಾನ.ಹವಮಾನ ಬದಲಾವಣೆಯೊಂದಿಗೆ ಜಾಗತಿಕ ತಾಪಮಾನವು ಸಹ ವರ್ಷದಿಂದ ವರ್ಷಕ್ಕೆ ಏರಿಕೆಯಾಗುವುದನು ಗಮನಿಸುತ್ತಲೇ ಬಂದಿದ್ದೇವೆ. ಸಾಗರಗಳ ಪ್ರವಾಹವು ಜಗತ್ತಿನ ವಿವಿಧ ಭಾಗಗಳಲ್ಲಿ ಶಾಖವನ್ನು ಪ್ರವಹಿಸುತ್ತದೆ. ಇದರ ಪರಿಣಾಮವಾಗಿ ಕೆಲವು ಪ್ರದೇಶಗಳು ತಂಪಾದ ಹವಮಾನವನ್ನು ಅನುಭವಿಸಿದರೆ, ಮತ್ತೆ ಕೆಲವು ಪ್ರದೇಶಗಳು ಬೆಚ್ಚನೆಯ ಹವಮಾನವನ್ನು ಅನುಭವಿಸುತ್ತವೆ. ಆದ್ದರಿಂದ ಹವಮಾನ ಬದಲಾವಣೆಗಳು ವಿವಿಧ ಪ್ರದೇಶಗಳಲ್ಲಿ ಬದಲಾಗುತ್ತವೆ.
2009ರಲ್ಲಿ ಸೈಂಟಿಫಿಕ್ ಅಮೆರಿಕನ್ ನಲ್ಲಿ ಪ್ರಕಟವಾದ ಲೇಖನದ ಪ್ರಕಾರ ಜಾಗತಿಕ ತಾಪಮಾನವು ಪ್ರತಿ ವರ್ಷ ಸುಮಾರು 1,50,000 ಸಾವುಗಳಿಗೆ ಏರಿಕೆಯಾಗಿದೆ ಎಂದು ಡಬ್ಲ್ಯೂ ಎಚ್ ಓ(WHO) ನ ಹವಮಾನ ಸಂಶೋಧಕರು ಸೂಚಿಸುತ್ತಾರೆ. ತಾಪಮಾನ ಏರಿಕೆಗೆ ಜಾಗತಿಕ ತಾಪಮಾನವು ಸಹ ಕಾರಣವಾಗಿದೆ. ಭೂಮಿಯ ಮೇಲ್ಮೈ ಸಂಪೂರ್ಣ ಸೌರಶಕ್ತಿ ಸುಮಾರು ಪ್ರತಿಶತ 75% ರಷ್ಟು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ತಾಪಮಾನ ಹೆಚ್ಚಳಕ್ಕೆ ಇದು ಸಹ ಕಾರಣವಾಗಿದೆ. ಜಾಗತಿಕ ತಾಪಮಾನ ಏರಿಕೆಯೂ ಹಿಮನದಿಗಳು, ಸಮುದ್ರ ಮಟ್ಟ ಏರಿಕೆ, ಕರಾವಳಿ ಪ್ರದೇಶಗಳ ಪ್ರವಾಹ ಮತ್ತು ಒಟ್ಟಾರೆ ತಾಪಮಾನ ಏರಿಕೆಗೆ ಕಾರಣ. ತಾಪಮಾನ ಏರಿಕೆಯಿಂದಾಗಿ ಹಲವು ಸಾಂಕ್ರಾಮಿಕ ರೋಗಗಳು ತಲೆದೂರುವುದಲ್ಲದೆ ವಾತಾವರಣದಲ್ಲಿ ಸಹ ಹಲವು ವೈಪರಿತ್ಯಗಳಿಗೆ ಕಾರಣವಾಗುತ್ತದೆ. ಇದರಿಂದಾಗಿ ಸುಖ ಜೀವನ ಕಷ್ಟ ಸಾಧ್ಯ. ಜಾಗತಿಕ ತಾಪಮಾನದ ಸಮತೋಲನಕ್ಕೆ ನಮ್ಮೆಲ್ಲರಿಂದ ಸಾಧ್ಯವಾದಷ್ಟು ಸಹಾಯ ಮಾಡೋಣ. ಮನುಷ್ಯ ತನ್ನ ಸ್ವಾರ್ಥಕ್ಕೆ ಗಿಡಮರಗಳನ್ನು ಕಡಿಯುತ್ತಿರುವುದರಿಂದ ತಾಪಮಾನ ಏರಿಕೆಯಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರೂ ಸಸ್ಯಗಳನ್ನು ನೆಡುವೆ ಮೂಲಕ ವಾತಾವರಣದಲ್ಲಿ ಸಮತೋಲನವನ್ನು ತರುವಲ್ಲಿ ಭಾಗಿಗಳಾಗೋಣ. ಕಾಡುಗಳ ನಾಶವನ್ನು ತಡೆಗಟ್ಟಬೇಕು. ಪ್ರಕೃತಿಯಲ್ಲಿ ಸಮತೋಲನವನ್ನು ತಂದಾಗ ಮಾತ್ರ ಮುಂದಿನ ಪೀಳಿಗೆ ನೆಮ್ಮದಿಯಿಂದ ಜೀವಿಸಲು ಸಾಧ್ಯ.
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ, ಇಲಕಲ್.