ಶುಕ್ರವಾರ, ಜೂನ್ 23, 2023

ಅಲ್ಲಿ ನೋಡಿ..(ಕವಿತೆ) - ಭರತ್ ಅರ್.

ಇಬ್ಬರು ಮಹಿಳೆಯರ
ಆರ್ತನಾದ ಇಡೀ ಭಾರತವನ್ನೇ 
ಸುತ್ತುವರೆದಿದೆ. 
ಬಿಲ್ಕಿಸ್ ಬಾನು,ಉನ್ನಾವೊ 
ಮತ್ತು ಹತ್ರಾಸ್ನಂತಹ 
ಹಲವು ಹೆಣ್ಜೀವಗಳ 
ನರಳಿಕೆಯೂ ಸಹ. 
ಕಾಳಿ-ಚಾಮುಂಡಿಯರ 
ಪೂಜಿಸುವ ನೆಲದಲ್ಲಿಂದು 
ಇವರೆಲ್ಲರನ್ನಿಡಿದು 
ಎಳೆದಾಡಿ, ಭಾರತಮಾತೆಗೆ
ಕೋಳಗಳ ತೊಡಿಸಲಾಗಿದೆ.

ಎಂದಿನಂತೆ "ಪುರುಷ"ರ 
ಭವನಕ್ಕಿಂದು ಮಹಿಳೆಯರ
ನಿಷೇಧ...!
ಸರ್ವವನ್ನು ಉಂಡವನೀಗ
ಹೆಣ್ತನದ ಪ್ರಾಣ ಹಿಂಡಿ 
ಅಧಿಕಾರದ ದಂಡ ಹಿಡಿದಿದ್ದಾನೆ. 

ಈಗಲೂ 
ಗಂಡಸರೆನಿಸಿಕೊಂಡವರ 
ಉದ್ರೇಕಿಸುವ,
ಮಾಯೆಯಾಗಿ ಕಾಡುವ 
"ಹಣೆಪಟ್ಟಿ"ಯ ಧ್ವನಿ 
ನಮ್ಮ "ಹೆಮ್ಮೆ"ಯ 
"ಗಂಡ"ಸರಿಂದಾಚೆ 
ಹೊಮ್ಮುತ್ತಲೇ ಇದೆ...

- ಭರತ್ ಆರ್.

ಸಂಕ್ರಾಂತಿ- ಕ್ರಾಂತಿ (ಕವಿತೆ) - ಡಾ. ಶಿಲಾಸೂ.

ನಿಸರ್ಗದತ್ತ ಓಡೋಡುತ್ತ
ಹೊಸತುಗಳನು ಹೊಸೆಯುತ !!
ನಿಸರ್ಗ ಬದಲಾವಣೆ ಸ್ವೀಕರಿಸುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ನಿತ್ಯ ಸತ್ಯ ನುಡಿಯುತ
ಸತ್ಯದ ಸಿಹಿಯ ಸವಿಯುತ !!
ಸರ್ವರಿಗೂ ಪ್ರೀತಿಯಂಚುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ದ್ವೇಷ ಅಸೂಯೆ ದುಃಖ ದುಮ್ಮಾನ
ಮೇಲು ಕೀಳು ಮನದಿ ಅಳಿಸುತ !!
ಎಲ್ಲರೊಂದೆಂಬ ಭಾವದಡಿ ನಲಿಯುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ಇರುವುದೊಂದೆ ಬದುಕು ಇರುವುತನಕ ನಗುತ 
ಎಲ್ಲರೊಳು ಬೆರೆಯುತ ಎಲ್ಲರನು ಪ್ರೀತಿಸುತ !!
ಪ್ರೀತಿ ಕೊಟ್ಟು ನೀತಿ ಇಟ್ಟು ನಿಸರ್ಗವುಳಿಸುತ
ಆಚರಿಸುವ ಸಂಕ್ರಾಂತಿ ನಗು ನಗುತ!!

ಮತ್ತೊಮ್ಮೆ ಮರಳಲಿ ಸಂಕ್ರಾಂತಿ
ಆಗಬೇಕಿದೆ ಒಂದೆಂಬ ಕ್ರಾಂತಿ!!
ತೊಲಗಬೇಕಿದೆ ಡಂಬಾಚಾರದ ಬ್ರಾಂತಿ
ಒಲಿಯುವುದು ಸುಖ ಶಾಂತಿ ಆಚರಿಸುವ ಸಂಕ್ರಾಂತಿ !!

ಎಳ್ಳಿನಂತೆ ಮನಸಿರಲಿ
ಬೆಲ್ಲದಂತೆ ಸಿಹಿಯಿರಲಿ !!
ಕಹಿ ದೂರ ತೊಲಗಲಿ
ಸ್ನೇಹಗಳ ಕ್ರಾಂತಿಯಾಗಲಿ ಆಚರಿಸುವ ಕ್ರಾಂತಿ !!

ಎಳ್ಳಿನಂತೆ ಬಾಳು ಏಳ್ಗೆಯಾಗಲಿ
ಬೆಲ್ಲದಂತೆ ಬಾಳು ಬೆಳಕಾಗಲಿ !!
ತರ ತರದ ತಿಂಡಿ ತಿನಿಸು ಸ್ನೇಹ ಬೆಸೆಯಲಿ 
ಬದುಕು ಕ್ರಾಂತಿಯಾಗಲಿ ಸಂಕ್ರಾಂತಿ ಹರುಷ ಹೊತ್ತು ತರಲಿ.

- ಡಾ. ಶಿಲಾಸೂ.

ನಮ್ಮ ಬದುಕಿಗೊಂದು ಅರ್ಥವಿರಲಿ (ಲೇಖನ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಬಸವಣ್ಣನವರು ಜ್ಞಾನ ಮಾರ್ಗವನ್ನು ತೋರಿಸುವ ಅರುಹಿಸುವ ಒಬ್ಬ ಗುರು. ಅಷ್ಟೆಲ್ಲ ಜನರ ಬದುಕುವ ದಾರಿ ಸಮಚಿತ್ತದಿ ಸುಲಭ ಮತ್ತು ಸುರುಳಿತವಾಗಿಸಿಕೊಂಡು ನಡೆಸುವಂತೆ ಮಾರ್ಗದರ್ಶಿಸಿದ ಶ್ರೇಷ್ಠ ವ್ಯಕ್ತಿ. ಚಿಕ್ಕವರಿರುವಾಗಲೇ ಮೌಢ್ಯತನ ಸಹಿಸುತ್ತಿರಲಿಲ್ಲ. ಅವರು ಯಾವುದೇ ಜಾತಿ, ಮತ, ಪಂಥಗಳ ಬಗ್ಗೆ ಮಾತಾಡಿದವರಲ್ಲ. ಮಾನವ ಕುಲ ಒಂದೇ ಎಂದವರು. ಅವರು ತಮ್ಮ ವಚನಗಳಲ್ಲಿ ಗಂಡು ಹೆಣ್ಣು ಎಂಬ ಭಾವನೆ ಕೂಡಾ ಎಲ್ಲಿಯೂ ತೋರಿಸಿಕೊಟ್ಟಿಲ್ಲ. ನಾವು ಯಾವುದೇ ಧರ್ಮದವರು ಆಗಲಿ, ಯಾವ ದೇವರನ್ನೇ ಪೂಜಿಸುವದಾಗಲಿ ಅದು ನಮ್ಮ ಇಚ್ಛೆಗೆ ಬಿಟ್ಟಿದ್ದು. ಅದರಲ್ಲಿ ಮೌಢ್ಯತನಕೆ ಆಸ್ಪದ ಇರಕೂಡದು. ಆದರೆ ನಮ್ಮ ಬಸವಣ್ಣನವರು ಈ ಬ್ರಹ್ಮಾಂಡ ಮತ್ತು ಅದರಲ್ಲಿ ಬೆಳೆದ ಜೀವಸಂಕುಲದ  ಸಮ್ಮಿಲನ ಕುರಿತು ಬಹಳ ಸುಂದರವಾಗಿ ತಿಳಿಹೇಳಿದ್ದಾರೆ. ನಾವು ಅದನ್ನು ಅರಿತು ನಡೆಯುವುದು ಬಿಡುವುದು ನಮಗೆ ಬಿಟ್ಟಿದ್ದು. ಮೊದಲ ಪ್ರಾಶಸ್ತ್ಯ  ಕಾಯಕಕ್ಕೆ ಮಿಸಲಿಟ್ಟಿದ್ದಾರೆ. ನಿಸ್ವಾರ್ಥತೆ, ಪ್ರಾಮಾಣಿಕತೆಯಿಂದ ಮಾಡಿದ ಕಾಯಕ ಬಹಳ ಶ್ರೇಷ್ಠ. ಕಾಯಕವಿದ್ದರೆನೆ ಬದುಕು, ಇಲ್ಲದಿದ್ದರೆ ಮಾನವ ಕುಲದಲ್ಲಿ ಹುಟ್ಟಿದ್ದು ವ್ಯರ್ಥ. ನಮ್ಮ ಕಾಯಕದೊಳಗೆ ಶಾಂತಿ, ಸಂತೃಪ್ತಿ. ಸಮಾಧಾನ. ನೆಮ್ಮದಿಯಿಂದ ಬದುಕುವ ದಾರಿಯಲ್ಲಿ ದೇವರನ್ನು ಕಾಣಬೇಕು. ಪ್ರತೀ ಜೀವಿಗೂ ಬದುಕುವ ಹಕ್ಕಿದೆ. ಆ ಹಕ್ಕಿನ ಬದುಕು ಇಷ್ಟು ಸುಂದರವಾಗಿರಬೇಕೆಂದರೆ ನಾವು ಭೂಮಿ ಬಿಟ್ಟು ಹೋದ ಮೇಲೂ ಕೂಡ ನಮ್ಮ  ಪ್ರತಿಬಿಂಬದ ಛಾಯೆ
ಇಲ್ಲೆ ನಮ್ಮವರ ಒಳಗೆ, ನಮ್ಮನ್ನು ಪ್ರೀತಿಸುವವರ ಮಧ್ಯ ಬಿಟ್ಟಂತೆ ಇರಬೇಕು. ಹಗಲು ನಂತರ ಇರುಳು, ಇರುಳು ನಂತರ ಹಗಲು ಇದು ಪ್ರಕೃತಿಯ ನಿಯಮ. ಮನುಜರಲ್ಲಿಯೂ ಕೂಡ ಕಾಣುವುದೆಲ್ಲ ಶಾಶ್ವತವಲ್ಲ. ಬಡತನ ಸಿರಿತನ, ಮಾಲಿಕ ನೌಕರ, ಮೇಲ್ವರ್ಗ ಕೆಳವರ್ಗ ಇವೆಲ್ಲ ಮೊದಲಿನಿಂದಲೂ ಪ್ರಪಂಚದೊಳಗೆ ಕೆಕೆ ಹಾಕುತ್ತಲೆಯಿವೆ. ನಮ್ಮ ಬಸವಣ್ಣನವರು ಇದೆಲ್ಲವನ್ನು ತೊಲಗಿಸಿ ಸಮಾಜದಲ್ಲಿ ಸಮಾನತೆಯ ಭಾವನೆಯ ಬದುಕಿನ ಬೀಜ ಬಿತ್ತಿದವರು. ನಮ್ಮನಮ್ಮ ಕಾಯಕದ ಕಸುಬಿನಿಂದ ಹುಟ್ಟಿದ ಜಾತಿ ಕುಲ ಭ್ರಮೆ ತೊಳೆದು ಹಾಕಿದರು. ಬದುಕಲು ಯಾವುದಾದರು ಕಾಯಕ ಮಾಡಲೇಬೇಕು, ಆದರೆ ಆ ಕಾಯಕ ನಮ್ಮ ಹಿರಿಯರಿಂದ ಅನುಸರಿಸಿಕೊಂಡು ಬಂದಾಗ ನಾವು ಅದನ್ನೆ ಮುಂದುವರಿಸಿಕೊಳ್ಳುತ್ತೆವೆ. ಗಳಿಕೆ ಕೆಲವರದು ಹೆಚ್ಚು ಕಡಿಮೆ ಇರಬಹುದು. ಆದರೆ ಎಲ್ಲರೂ ದುಡಿಯುವುದು ಗೇಣು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಅಲ್ಲವೇ? ಯಾವುದನ್ನು ರೂಢಿಸಿಕೊಳ್ಳುತ್ತೆವೆಯೋ  ಅದೇ ಜೀವನ. ಶರಣರು, ದಾಸರು, ಸಂತರು ಕೂಡ ತಮ್ಮ ತಮ್ಮ ಬದುಕಿನಲ್ಲಿ ಬಹಳ ಆನಂದದಿಂದ ಸುಖವಾಗಿ ಬದುಕಿ ಹೋದರು ಅಷ್ಟೇಯಲ್ಲ, ಆ ದಾರಿ ಎಷ್ಟು ಸ್ವಚ್ಛಂದದ, ಪ್ರಸನ್ನತೆಯದಾಗಿದೆ ಎಂಬುದು ಮುಂದಿನ ಸಮಾಜಕ್ಕೆ ತೋರಿಸಿಕೊಟ್ಟು ಎಲ್ಲರ ಮನದಲ್ಲಿ ಶಾಶ್ವತ ಉಳಿದು ಹೋದರು. ಅವರಲ್ಲಿ ಹಂಚಿ ಉಂಬುವ ನಿಸ್ವಾರ್ಥ ಭಾವ ತುಂಬಿದ್ದವು. ದೇವರು ಒಬ್ಬನೆ, ಅದು ನಿರಾಕಾರ, ನಿರ್ಗುಣ, ನಿರ್ಮೋಹಿ, ನಿತ್ಯ ನಿರಂಜನಾಗಿದ್ದಾನೆ.  ನಾವು ನಮ್ಮ ಚಿತ್ತದ ಪ್ರಕಾರ ನಾನಾ ಆಕಾರದ ಪ್ರಕಾರದಲ್ಲಿ ಪೂಜಿಸುತ್ತೇವೆ. ನಾವು ಸರ್ವರೀತಿಯಲ್ಲೂ ಸಂಪನ್ನರಾಗಿದ್ದೆವೆ.  ಆ ದೇವರು ನಮಗೆ ಎಲ್ಲವನ್ನೂ ಕೊಟ್ಟಿದ್ದಾನೆ. ನೋಡಲು ದೃಷ್ಟಿ, ಕೇಳಲು ಕಿವಿ, ಒಳ್ಳೆಯ ಮಾತನಾಡಲು ಬಾಯಿ ಮತ್ತು ಮನಸ್ಸು, ದುಡಿಯಲು ಗಟ್ಟಿಮುಟ್ಟಾದ ಸದೃಡ ಶರೀರ, ಸರಿ ತಪ್ಪು ಅರ್ಥೈಸಿಕೊಳ್ಳಲು ಮೆದುಳು  ಇನ್ನೇನು ಬೇಕು ಹೇಳಿ. ಮುಂದಿನದೆಲ್ಲ ಪಡೆದುಕೊಳ್ಳುವ ಗಳಿಸಿಕೊಳ್ಳುವ ಸನ್ಮಾರ್ಗವಿದೆಯಲ್ಲ ಅದು ಬಹಳ ಮುಖ್ಯ. ಈ ಸುಂದರ ಜಗತ್ತು ನಮ್ಮೆಲ್ಲರ ಸಲುವಾಗಿ ನಿರ್ಮಾಣವಾಗಿದೆ. ಸೃಷ್ಟಿಯ ಅಗಾಧ ಸಂಪತ್ತು ನಮಗಾಗಿಯೇ ಇದೆ. ಇಲ್ಲಿರುವ ಶಕ್ತಿ ಅಂದರೆ ದೇವರು ಏನೂ ಬೇಡುವುದಿಲ್ಲ. ನೀವು ನಡೆವ ದಾರಿ ಹೇಗಿದೆಯೋ ನಿಮಗೆ ಲಭಿಸುವುದು. ನೀವು ಯಾವ ದಾರಿ ತುಳಿಯುವಿರಿ ಅದರ ಫಲ ನಿಮಗೆ ಸಿಗುವುದು. ನೀವು ಯಾವ ತರಹದ ಧ್ಯೇಯವನ್ನಿಟ್ಟು ಬೀಜ ಬಿತ್ತುವಿರೋ ಅದನ್ನು ಬೆಳೆದುಕೊಳ್ಳುತ್ತಿರಿ. ಆಧುನಿಕ ಜೀವನದಲ್ಲಿ  ಯಾರು ಯಾರಿಗಿಂತಲೂ ಕಡಿಮೆಯಿಲ್ಲ. ನಿಮ್ಮ ಚಾಣಾಕ್ಷತನ, ಜಾಣತನದಲ್ಲಿ ನಿಮ್ಮ ಬದುಕು ರೂಪಿಸಿಕೊಳ್ಳಬಹುದು. ಸ್ವಾರ್ಥ, ಅಹಂಕಾರ, ನಂಬಿಕೆ ದ್ರೊಹ ನಿಮ್ಮಲ್ಲಿ ಕಿಂಚತ್ತು ಇರಕೂಡದು. ಯಾರಲ್ಲಿ ಈ ಅವಗುಣಗಳಿವೆಯೋ ಅವರ ಬದುಕು ಕ್ಷಣಿಕ ಸುಖದ ಆಸೆ, ದುರ್ದೆಸೆಗೆ ಕಾರಣವಾಗುವುದು. ಸೃಷ್ಟಿಯ ಪ್ರತಿಯೊಂದು ಕೊಡುಗೆಗೆ ಧಕ್ಕೆ ತರದಂತೆ  ನೋಡಿ ಕೊಳ್ಳಬೇಕು. ಅದನ್ನು ಪೂಜಿಸಬೇಕು. ಭೇದವಿರದ ಈ ನಿಸರ್ಗದ ಮಡಿಲಲ್ಲಿ ನಮ್ಮ ಬದುಕು ಸಹಬಾಳ್ವೆ, ಸಮಭಾವನೆ, ಸಹಕಾರದಿಂದ ಕೂಡಿದಾಗಿರಬೇಕು. ವಿಶಾಲವಾದ ಪ್ರಪಂಚಕೆ ವಿಶಾಲವಾದ ಸುಂದರ ಮನಸಿದ್ದು ಯಾವಾಗಲೂ ಶಾಂತಿ ನೆಮ್ಮದಿ ಸಂತೃಪ್ತಿಯಲ್ಲಿ  ಅನುಭವಿಸುವಂತೆ ಆಗಬೇಕು. ಇದಕ್ಕೆ ಸಂಬಂಧ ಪಟ್ಟ ಅಲ್ಲಮರ ವಚನ ಹೀಗಿದೆ.

ನಿಮ್ಮಲ್ಲಿ ನೀವು ತಿಳಿದು ನೋಡಿರೇ ಅನ್ಯವಿಲ್ಲ ಕಾಣಿರೆಣ್ಣ
ಅರಿವು ನಿಮ್ಮಲ್ಲಿಯೇ ತದ್ಗತವಾಗಿಯದೆ ಅನ್ಯ ಸಾಧ್ಯವೇ ನೆನೆಯದೆ
ತನ್ನೊಳಗೆ ತಾನೆಚ್ಚರಬಲ್ಲಡೆ, ತನ್ನಲ್ಲಿಯೇ ತನ್ಮಯ ಗುಹೇಶ್ವರ ಲಿಂಗವು

ಕೂಡಿಬಾಳಿದರೆ ಸ್ವರ್ಗ ಸುಖವೆಂಬ ಗಾದೆಮಾತು ಕೇಳಿರವೆವಲ್ಲ. ವ್ಯರ್ಥ ಆಡಂಬರದ ಬದುಕು ಯಾರಿಗೂ ಬೇಡ. ಮಾನವನಾಗಿ ಮಾನವೀಯತೆಯಿಂದ ಬದುಕಿದರೆ ಸಾಕು. ನಮ್ಮ ಬದುಕಿನ ದಾರಿ ಮುಂದಿನವರಿಗೆ ದಾರಿ ದೀಪವಾಗಿರಬೇಕು.
ಸುಂದರವಾದ ಪ್ರಪಂಚವನ್ನು ಸುಂದರವಾದ ಕಣ್ಣುಗಳಿಂದ ನೋಡಿ, ಸುಂದರವಾದ ಮನಸ್ಸಿನಿಂದ ಅನುಭವಿಸಿ, ಸುಂದರತೆಯನ್ನು ಬದುಕಿನಲ್ಲಿ ಹೆಚ್ಚಿಸಿಕೊಳ್ಳುತ್ತ ಹಂಚುತ್ತಾ ಬದುಕೋಣ.
- ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಮರೆಯದ ವಿದ್ಯಾರ್ಥಿ ನಿಲಯ (ಕವಿತೆ) - ಮುತ್ತು.ಯ.ವಡ್ಡರ, ಬಾಗಲಕೋಟೆ.

ಅಕ್ಷರಾ ನೀಡುತಿದೆ ವಿದ್ಯಾಲಯ
ಅನ್ನವ ನೀಡಿದೆ ವಸತಿ ನಿಲಯ
ಹಲವು ಮನಸ್ಸುಗಳ ಆಲಯ
ಪ್ರತಿನಿತ್ಯ ಸ್ನೇಹಮಯ ತಾರಾಲಯ

ವಿದ್ಯೆಯ ಜೊತೆಗೆ ಅನ್ನ ನೀಡಿದ ಅರಮನೆ
ಎಂದು ಆಗಲಿಲ್ಲ ವಿದ್ಯಾರ್ಥಿಗಳಿಗೆ ಸೆರೆಮನೆ
ಯಾವತ್ತೂ ನೆನಪೇ ಆಗಲಿಲ್ಲ ನಮ್ಮ ಮನೆ
ನಿಲಯ ಪಾಲಕರು ತಂದೆ ಎಂದರೆ ತಪ್ಪಾಗದು ನಮ್ಮಾಣೆ ..

ಬಿಸಿ ಬಿಸಿ ಊಟ ತನ್ನನೆಯ ನಿದ್ದೆಯಲಿ 
ಪರಿಶ್ರಮದಿ ಓದಲು  ಬೇಗ ಎದ್ದೆ ದಿನಾಲು
ಕಲಿತೆ ಸಮಯ ಪ್ರಜ್ಞೆ  ಶಿಸ್ತು ಇಲ್ಲಿರಲು
ಹೆಮ್ಮೆ ಅನಿಸುತ್ತಿದೆ ಹಾಸ್ಟೆಲ್ ಗೆ ನಾನು ನಮಸ್ಕರಿಸಲು...

ಕಷ್ಟಕ್ಕೆ ಸ್ಪಂದಿಸುವ ಸ್ನೇಹಿತರಿರಲು
ನೊಂದ ಮನಸ್ಸಿಗೆ ನಿಲಯ ಪಾಲಕರಿರಲು
ಮರೆಯಲ್ಲ ನಾ ಎಂದು ನೆನಪಿನ ಕನಸಿರಲು
ಸ್ವರ್ಗದ ಖುಷಿಯ ಕಂಡೆ  ಪ್ರತಿಕ್ಷಣ ಇಲ್ಲಿರಲು...

- ಮುತ್ತು.ಯ.ವಡ್ಡರ ( ಶಿಕ್ಷಕರು )
ಬಾಗಲಕೋಟ
Mob-9845568484.

ಗುರುವಾರ, ಜೂನ್ 22, 2023

ಅಮ್ಮ ಅಂದ್ರೆ ಎಲ್ಲಾ.. (ಕವಿತೆ) - ರಾಚು‌ ಬಳಿಗಾರ, ಬಾಗಲಕೋಟೆ.

ಅಮ್ಮ ಅಂದ್ರೆ ಬದುಕಿನ ಬೆನ್ನೆಲುಬು
ಅಮ್ಮ ಅಂದ್ರೆ ಮಮತೆಯ ಮಡಿಲು
ಅಮ್ಮ ಅಂದ್ರೆ ಮಕ್ಕಳ ಬದುಕಿನ ಜೀವತಂತಿ
ಅಮ್ಮ ಅಂದ್ರೆ ಸಾವಿರ ಕಷ್ಟಗಳನ್ನು ಎದುರಿಸೋ ಗಟ್ಟಿಗಿತ್ತಿ
 
ಅವ್ವ ಅಂದ್ರೆ ಆಕಾಶ 
ಅವ್ವ ಅಂದ್ರೆ ಮಕ್ಕಳು ಕೇಳಿದ್ದನ್ನು ಕೊಡೋ ಕಲ್ಪವೃಕ್ಷ 

ಅಮ್ಮ ಅಂದ್ರೆ ಆ ದೇವರ ಪ್ರತಿರೂಪ
ಅಮ್ಮ ಅಂದ್ರೆ ಮನೆ ಅಷ್ಟೇ ಅಲ್ಲ ಭೂಮಿ ಬೆಳಗೋ ದೀಪ 
ಅಮ್ಮ ಅಂದ್ರೆ ಭರವಸೆಯ ಬೆಳಕು 
ಅಮ್ಮ ಅಂದ್ರೆ ಅದಮ್ಯ ಪ್ರೀತಿಯ ಸೆಲೆ
ಅಮ್ಮ ಅಂದ್ರೆ ಆತ್ಮವಿಶ್ವಾಸ 
ಅಮ್ಮ ಅಂದ್ರೆ ಕೊನೆಯಿರದ ಉತ್ಸಾಹ
ಅಮ್ಮ ಅಂದ್ರೆ ಪ್ರತ್ಯಕ್ಷ ದೇವತೆ
ಅಮ್ಮ ಅಂದ್ರೆ ಸದಾ ಬೆಳಗೋ ಮಾನವೀಯತೆ 
ಅಮ್ಮ ಅಂದ್ರೆ ಎಲ್ಲರನ್ನೂ ಪ್ರೀತಿಸೋ ಸಾಗರ
ಅಮ್ಮ ಅಂದ್ರೆ ಪ್ರೀತಿ ತುಂಬಿದ ಸರೋವರ.

- ರಾಚು ಬಳಿಗಾರ, ಬಾಗಲಕೋಟೆ.

ಯೋಗದಿಂದ ಆರೋಗ್ಯ (ಕವಿತೆ) - ಎಲ್ ಎಸ್ ಆಶಾ ಶ್ರೀಧರ್, ಶಿವಮೊಗ್ಗ.

ಯೋಗ ಹೊಂದಿಹುದು ಅಷ್ಟಾಂಗ ಮಾರ್ಗವನು
ದೇಹ ಮನಸಿಗೆ ಸಾಧನವು ಸ್ವಯಂ ನಿಯಂತ್ರಣವು
ಯಮ ನಿಯಮ ಆಸನ ಪ್ರಾಣಾಯಾಮ
ಪ್ರತ್ಯಾಹಾರ ಧಾರಣ ಧ್ಯಾನ ಸಮಾಧಿ ನಾಮವು

ಬುದ್ಧಿ ದೇಹ ಮನಸನು ನಿಯಂತ್ರಿಸುವುದು
ದೇಹ ಮನಸು ಸಡಿಲವಾಗಿ ಹಗುರಗೊಳ್ಳುವುದು
ಆತ್ಮನೊಂದಿಗೆ ಪರಮಾತ್ಮನ ಸೇರಿಸುವುದು
ಆಸನ ಮುದ್ರೆಗಳು ಮಹತ್ವ ಹೊಂದಿಹುದು

ಆಸನಗಳಿಗಧಿಪತಿಯು ಸೂರ್ಯ ನಮಸ್ಕಾರವು
ಜೀವಶಕ್ತಿ  ಹಿಡಿತವೇ ಪ್ರಾಣಾಯಾಮವು
ನಿತ್ಯ ದಿನಚರಿಯಾಗಲು ಇಲ್ಲ ಯಾವ ರೋಗವು
ಇದರಲ್ಲಡಗಿಹುದು ಸನಾತನ ಭಾರತದ ಮಹತ್ವವು

ಶರೀರವು ಬೆಳೆಯಲು ಪ್ರೇರಕ ವೃಕ್ಷಾಷನ
ಉದರದ ಬೊಜ್ಜು ಕರಗಲು ವಜ್ರಾಸನ
ಬೆನ್ನು ಕೀಲು ಸೊಂಟ ನೋವಿಗೆ ಪದ್ಮಾಸನ
ಸಮತೋಲನ ಶಕ್ತಿ ಕಾಪಾಡುವುದು ತಾಡಾಸನ

ದೈಹಿಕ ಮಾನಸಿಕ ಶಕ್ತಿ ಹೆಚ್ಚಳಕ್ಕೆ ಪ್ರಾಣಮುದ್ರೆ
ಗ್ಯಾಸ್ಟ್ರಿಕ್ ಸೊಂಟ ಮಂಡಿ ನೋವಿಗೆ ವಾಯುಮುದ್ರೆ
ಚರ್ಮ ಕೂದಲು ಸ್ನಾಯು ಬೆಳವಣಿಗೆಗೆ ಪೃಥ್ವಿ ಮುದ್ರೆ
ಒತ್ತಡ ಕೋಪ ಉನ್ಮಾದ ನಿದ್ರಾಹೀನತೆಗೆ ಜ್ಞಾನ ಮುದ್ರೆ

ಯೋಗವು ತುಂಬುವುದು ಚೇತನ ಮನಕೆ
ಅಶುಚಿಯ ನಶಿಸಿ ಶುಚಿಗೊಳಿಸುವುದು ದೇಹಕೆ
ಧ್ಯಾನದಿಂದ ಬರುವುದು ಏಕಾಗ್ರತೆ
ದೊರೆವುದು ಉತ್ತಮ ಜೀವನ ನಮಗೆ

ಬದಲಾಗಿದೆ ಜೀವನಕ್ರಮ ಈ ದಿನ
ಸಮಯವೇ ಇಲ್ಲ ತರಾತುರಿಯ ಜೀವನ
ಬದಲಾಗಲೇ ಬೇಕಾಗಿದೆ ಜೀವನ ಕ್ರಮ
ಯೋಗದಿಂದ ಆರೋಗ್ಯವಾಗುವುದು ಸುಗಮ.

 - ಎಲ್ ಎಸ್ ಆಶಾ ಶ್ರೀಧರ್,  ಶಿವಮೊಗ್ಗ.

ಚಿಮ್ಮುವ ನೀರು (ಕವಿತೆ) - ಕುಮುದ.

ಹಸುವು ಬಂದಿದೆ
ದಣಿದು ನಿಂತಿದೆ
ನೋಡಿ ಸಾಕಾಗಿದೆ
ಮನಸು ಕರಗಿದೆ

ಅಮ್ಮ ಬಂದರು
ಮೈ ತೊಳೆವರು
ಜಾಣ ಬುದ್ಧಿಯಿದೆ
ಸುಮ್ಮನೆ ನೋಡುತಿದೆ

ಓಡಲು ಮನಸ್ಸಿಲ್ಲ
ಸ್ನಾನ ಹಿತವಾಗಿದೆ
ಚಿಮ್ಮುವ ನೀರು
ರಭಸವು ಜೋರು

ಹರಿಯುವ ಜಲ
ಇಬ್ಬರೂ ಕಿಲಕಿಲ
ನೋಟವೂ ಚಂದ
ಪ್ರಕೃತಿಯ ಆನಂದ.

- ಕುಮುದ

ಆತ್ಮಭಿಮಾನ (ಕವಿತೆ) - ಭಾಗ್ಯ ಎಲ್.ಆರ್. ಶಿವಮೊಗ್ಗ.

ಮನುಷ್ಯ ಜೀವನದಲ್ಲಿ ಬದುಕಬೇಕು 
ನಾಲ್ವರೊಂದಿಗೆ ಬೆರೆತು- ಅರಿತು 
 ಸಹನೆ- ತಾಳ್ಮೆಯಿಂದ ಹೊಂದಿಕೊಂಡು 
ಹೋಗುವ ಗುಣವೇ ಅಸಹಾಯಕತೆಂದು 
ತಿಳಿದು ದೌರ್ಜನ್ಯ ಎಸಗಿದರೆ ಸಹಿಸದಿರು 
ಮನವೆ 
ಆತ್ಮಭಿಮಾನ ಮುಖ್ಯ ಬದುಕಿಗೆ 
ಆತ್ಮ ಹತ್ಯೆ ಮಹಾಪಾಪ ಆತ್ಮಕ್ಕೆ 
ನಡೆ - ನುಡಿ ಶುದ್ದವಾಗಿದ್ದು 
ಉತ್ತಮ ಮಾರ್ಗದಲ್ಲಿ 
ನೀ ನಡೆ ಮನವೆ 
ಒಳ್ಳೆಯದಕ್ಕೆ ಸಂಕಷ್ಟ ಇದೆ
ಆಗೆಂದ ಮಾತ್ರಕ್ಕೆ ಎದೆಗುಂದದಿರು 
ಕಾಪಾಡುವನು ಪರಮಾತ್ಮ 
ನಿನ್ನ ಆತ್ಮಭಿಮಾನಕ್ಕಿರಲಿ ಗೌರವ 
ಅದು ನಿನ್ನ ವ್ಯಕ್ತಿತ್ವದ ಪ್ರತಿರೂಪ. 

- ಭಾಗ್ಯ ಎಲ್.ಆರ್. ಶಿವಮೊಗ್ಗ.

ಬೆಳಗು (ಕವಿತೆ) - ಮಾಲತಿ ಮೇಲ್ಕೋಟೆ.

ರವಿಯುದಿಸಿ ಆಗಸದಿ
ಕಿರಣಗಳ ಚೆಲ್ಲುತಲಿ
ನಭದಲ್ಲಿ ಕಾಂತಿಯನು ತುಂಬುತಿರುವಾ

ಬಿರಿದು ಸುಮಗಳು ಅರಳಿ
ಕಂಪನ್ನು ಸೂಸುತ್ತ
ಪರಿಮಳವ ಚೆಲ್ಲುತಿವೆ
ಸುತ್ತೆಲ್ಲವೂ

ಕುಕ್ಕುಟವು ಕೂಗುತ್ತ
ಬೆಳಗಾಯಿತೆನ್ನುತಲಿ
ಮಲಗಿರುವವರನ್ನು
ಎಚ್ಚರಿಸಿದೇ

ಬೇಲಿಗಳ ಸಂದಿಯಲಿ
ರವಿಕಿರಣ ಇಣುಕುತ್ತ
ಬಿಸಿಲಕೋಲನು ಮೆಲ್ಲ
ತೂರುತ್ತಿದೇ

ರವಿಯ ಕಿರಣವು ಸೋಕಿ
ಇಬ್ಬನಿಯು ಮುತ್ತಿನೊಲು
ಹುಲ್ಲುಹಾಸಿನ ಮೇಲೆ
ಹೊಳೆಯುತ್ತಿದೇ

ಮರದ ಮೇಲ್ ಹಕ್ಕಿಗಳು
ಚಿಲಿಪಿಲಿಯಗುಟ್ಟುತಲಿ
ಆಹಾರ ಅರಸುತಲಿ
ಹೊರಡುತ್ತಿವೇ

ದನಕರುಗಳೆಲ್ಲವೂ
ಮೇವನ್ನು ಅರಸುತ್ತ
ಬಯಲಿನೆಡೆ ಗುಂಪಲ್ಲಿ
ತೆರಳುತ್ತಿವೇ

ಜಡತೆಯನು ಓಡಿಸುತ
ಚೇತನವ ತುಂಬುತ್ತ
ರವಿ ಬೆಳಕ ನೀಡುತ್ತ
ಬರುತಿರುವನೂ

- ಮಾಲತಿ ಮೇಲ್ಕೋಟೆ.

ದೀಪ ದಾರಿಗಳು (ಕವಿತೆ) - ಜ್ಯೋತಿ ಆನಂದ ಚಂದುಕರ.

ದೀಪ ಬೆಳಗಬೇಕು ನಾವು
 ಮನೆ ಮನಗಳಲ್ಲಿ.
 ಮನದ ಕೊಳೆ ತೊಳೆಯಲು
 ಜ್ಞಾನದ ದೀಪ ಹಚ್ಚಬೇಕು..

 ಅಜ್ಞಾನದ ತಿಮಿರವ ಕಳೆಯಲು
 ಸುಜ್ಞಾನದ ದೀಪ ಬೆಳಗಬೇಕು..
 ಹೃದಯದ ದೀಪ ಬೆಳಗಲು
 ಪ್ರೀತಿಯ ದೀಪ ಹಚ್ಚಬೇಕು..

 ಮುದುಡಿದ ಮನವು ಅರಳಲು
 ನಗುವೆಂಬ ದೀಪ ಬೆಳಗಬೇಕು..
 ಇರುಳು ಕಳೆದು ಬೆಳಕಾಗಲು
 ಲವಲಕೆಯ ದೀಪ ಬೆಳಗಬೇಕು..

 ಪಡುವಣದ ಸೂರ್ಯ ಪವಡಿಸಲು
 ಮುಸ್ಸಂಜೆಯ ದೀಪ ಪ್ರಜ್ವಲಿಸಬೇಕು..

 ಉಸಿರು ಸದಾ ಹಸಿರಾಗಿರಲು
 ನಂಬಿಕೆಯ ದೀಪ ಬೆಳಗಬೇಕು..
 ದೀಪದಿಂದ ದೀಪವ ಹಚ್ಚಿ
 ಮಾನವತೆಯ ಮೆರೆಯಬೇಕು..

 ಜೀವನದ ಯಾನದಲ್ಲಿ ಮುನ್ನುಗ್ಗಲು
 ಮಾನವತೆಯ ದೀಪಧಾರಿಗಳಾಗಬೇಕು 

- ಜ್ಯೋತಿ ಆನಂದ ಚಂದುಕರ.


ಅನಿಸುತ್ತದೆ ಒಮ್ಮೊಮ್ಮೆ ಇದ್ದಾನೆಂದುಆ ದೇವರು..! (ಕವಿತೆ) - ಬಿ ಎಂ ಮಹಾಂತೇಶ, ಕೂಡ್ಲಿಗಿ.

ಬಿತ್ತಿದ ಬೀಜದ ಬೇರು ನೆಲಕೆ,
ಮೊಳಕೆ ಏಕೆ ಮೇಲಕೆ...?
ಕೈಗೆ ಎಟುಕದ ಮುಗಿಲೆ, ನಮಗೇಕೆ
ಇಲ್ಲ ನೀ ಬೀಳಬಹುದೆಂಬ ಜ್ವಾಕೆ...?

ಹಾರೋ ಹಕ್ಕಿಗೆ ಗೂಡು ಕಟ್ಟೋದ,
ಕಳಿಸಿದ ಕಲಿ ಯಾರು..?
ಹರಿಯುವ ನೀರಿಗೆ, ಅಡಿ ಅಡಿಗೆ
ಹಾದಿಯ ಮಾಡಿದವನಾರು..?

ಬಾಯಿ ಇಲ್ಲದ ಜೀವಿಗಳಿಗೆ
ಭಾವವನು ತುಂಬಿದವನಾರು..?
ಬೆಟ್ಟದ ಮೇಲಿನ ಕಲ್ಲು
ವಾಲದಂತೆ ಬಲದಿ ಹಿಡಿದವನಾರು...?

ಸುಮ್ಮನೆ ಕುಳಿತು ಎಲ್ಲವ,
ಯೋಚಿಸಿದಾಗ ಇಲ್ಲಿ...
ಅನಿಸುತ್ತದೆ ಒಮ್ಮೊಮ್ಮೆ ಆ ದೇವರು,
ಇದ್ದನೆಂದು ಪ್ರಕೃತಿಯ ರೂಪದಲ್ಲಿ....

- ಬಿ ಎಂ ಮಹಾಂತೇಶ
SAVT ಕಾಲೇಜ್ ಕೂಡ್ಲಿಗಿ.
9731418615.

ಹೂ (ಕವಿತೆ) - ಗಂಗಾಧರ್ ಗೌಡರ್, ಧಾರವಾಡ.

ನಮ್ಮನೆಯ ಅಂಗಳದಿ ನಾ ಬೆಳೆಸಿದ ಗಿಡವೊಂದು
ಹೂ ಒಂದು ಅರಳಿಸಿದೆ ನೋಡು ಬಾರಾ....
ಘಮ್ ಎಂದು ಹೊರಸೂಸಿ ಅಂಗಳಕ್ಕೆ ಮೆರುಗಾಗಿ
ಅರಳಿ ನಿಂತಿದೆ ಗೆಳತಿ  ನೋಡು ಬಾರಾ.....

ಮಕರಂದ ದೌತಣಕ್ಕೆ ದುಂಬಿಗಳು ನೋಡಲ್ಲಿ
ನಾ ಮುಂದು ತಾ ಮುಂದು ಎನ್ನುತಲೀ
ಝೇಂಕಾರ ನಿನಾದವ ಕೇಳಿಲ್ಲಿ...
ಆ ಸಡಗರವ ನೀನೊಮ್ಮೆ ನೋಡುಬಾರಾ....

ಅರಳಿ ನಿಂತಿರುವ ಹೂವನ್ನು ಬಳ್ಳಿಯಿಂದ ಅಗಲುತಾ
ಅವನ್ ಹಸಿವ ನೀಗಿಸಲು ನೋವಲ್ಲೀ ನಗುನಗುತಾ
ಬುಟ್ಟಿಯೊಳಗೊಂದಾಗಿ,ಹಾರದೊಳಗೊಂದಾಗಿ 
ನಗುತಲಿದೆ...ಗೆಳತಿ ಅದನ್ನೊಮ್ಮೆ ಕೊಳ್ಳುಬಾರಾ....

ಅರಳಿ ನಿಂತೆನು ನಾ... ಪಯಣ ಎಲ್ಲಿಗೆಂದು ತಿಳಿಯದು
ಮಸಣಕ್ಕೋ,ದೇವರ ಸನ್ನಿಧಿಗೋ ಒಂದೂ ತಿಳಿಯುತ್ತಿಲ್ಲ ಎಂಬ ಹೂವಿನ ಸ್ವಗತದಿ ಎಂದೇನುತ್ತಾ
ನೋವಲ್ಲಿ ಬಾಡುತ್ತಿದೆ ....ಗೆಳತೀ ಅದ ಕೇಳಿ ಸಂತೈಸಿ ಬಾರಾ.....
ಹೇ ಹೂವೇ....ನಿನ್ನ ಸೌಂದರ್ಯಕ್ಕೆ ಮಾರು ಹೋದವರಿಲ್ಲ 
ನಿಸರ್ಗ ರಮಣೀಯತೆ ಗೆ ನೀನೇ ಕಾರಣ
ಘಮವಾಗಿ, ಸುಮವಾಗಿ, ಕುಸುಮವಾಗೀ ಕೈ ಬೀಸಿ 
ಕರೆಯುತ್ತಿದೆ ಗೆಳತಿ ನೀನೊಮ್ಮೆ ಹೂವನ್ನು ಮುಡಿಯಬಾರಾ......


ಕೆಲವೇ ಗಂಟೆಗಳು ಬದುಕು ,ಉಸಿರು ಆರುವ ಮುನ್ನ 
ಎಲ್ಲರಿಗೂ ಬೇಕಾಗು, ನೂರು ವರ್ಷಗಳ ನಿನ್ನ ಬದುಕೇ
ವ್ಯರ್ಥ ಎಂಬರ್ಥದಿ ಕಲಿಸುವ ಪಾಠವನ್ನು 
ಮನುಜನಿಗೆ ತಿಳಿಸಿ ಹೇಳಿ ಬಾರಾ....

- ಗಂಗಾಧರ್ ಗೌಡರ್.
ಸಾರಿಗೆ ಇಲಾಖೆ ಧಾರವಾಡ (ದಾಸಬಾಳ)9886652974.


ಕಣ್ಣು ಮಣ್ಣಾಗದಿರಲಿ ಬೇರೊಬ್ಬರ ಬಾಳಿಗೆ ಹೊನ್ನಾಗಲಿ (ಲೇಖನ) - ಶಿವನಗೌಡ ಪೋಲಿಸ್ ಪಾಟೀಲ.

ಮನುಷ್ಯನ ದೇಹದಲ್ಲಿರುವ ಒಂದು ಅವಿಭಾಜ್ಯ ಅಂಗವೆಂದರೆ ಅದು ಕಣ್ಣು. ಪ್ರಪಂಚವನ್ನು ಇಷ್ಟು ಸುಂದರವಾಗಿ ಕಾಣಲು ಕಾರಣವೇ ಕಣ್ಣು.ನಮ್ಮ ದೇಶದಲ್ಲಿ ಇಂದಿಗೂ ಒಂದು ಅಂದಾಜಿನ ಪ್ರಕಾರ 50 ಲಕ್ಷಕ್ಕೂ ಅಧಿಕ ಪುರುಷರೂ, ಮಹಿಳೆಯರೂ ಹಾಗೂ ಮಕ್ಕಳು ಅಂಧರಾಗಿ ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ಯಾವತ್ತೂ ಸೂರ್ಯನ ಕಿರಣಗಳನ್ನು ಕಂಡಿಲ್ಲ. ಪೂರ್ಣ ಹುಣ್ಣಿಮೆ ಚಂದ್ರನ ಸವಿ ಸವಿದಿಲ್ಲ. ಇಂಥವರಿಗೆ ಸಹಾಯ ಮಾಡುವ ಮನಸ್ಸು ನಾವೆಲ್ಲಾ ಮಾಡಬೇಕು. ನೇತ್ರದಾನ ಮಾಡುವವರ ಸಂಖ್ಯೆ ಇನ್ನೂ ಹೆಚ್ಚಬೇಕು. ಈ ನಿಟ್ಟಿನಲ್ಲಿ ಸಮಾಜದ ಸಂಘ ಸಂಸ್ಥೆಗಳು ಪ್ರಜ್ಞಾವಂತರು ಜಾಗೃತಿ ಮೂಡಿಸಬೇಕು.
ಭಾರತದಲ್ಲಿ ಸುಮಾರು 6.8 ಮಿಲಿಯನ್‌ ಜನರಿಗೆ ಕಾರ್ನಿಯಲ್‌ ಅಂಧತ್ವ ಇದೆ. ಈ ಸಂಖ್ಯೆ 2021ರ ವೇಳೆಗೆ 10.6 ಮಿಲಿಯನ್‌ಗೆ ಏರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು
" ಒಬ್ಬ ವ್ಯಕ್ತಿಯು ತನ್ನ ಮರಣಾನಂತರ ನೇತ್ರಗಳನ್ನು ದಾನ ಮಾಡುವುದಾಗಿ ಶಪಥ ಮಾಡುವುದೇ ನೇತ್ರದಾನವಾಗಿದೆ. ವ್ಯಕ್ತಿಯು ತನ್ನ ನೇತ್ರಗಳನ್ನು ದಾನ ಮಾಡುವುದರಿಂದ ಇಬ್ಬರು ವ್ಯಕ್ತಿಗಳ ಬದುಕಿನಲ್ಲಿ ಬೆಳಕು ಮೂಡುತ್ತದೆ.
 
# ಒಬ್ಬ ವ್ಯಕ್ತಿ ಸತ್ತ 6 ಗಂಟೆಯ ಒಳಗಡೆ ನೇತ್ರದಾನದ ಕಾರ್ಯ ನಡೆಯಬೇಕು.
# ಸತ್ತ ಮೇಲೆ ಐಸ್‌ನಲ್ಲಿ ಶೀತಲೀಕರಣ ಮಾಡಿದ್ದರೆ 11 ಗಂಟೆಯ ಒಳಗಡೆ ನೇತ್ರದಾನದ ಕಾರ್ಯ ಮಾಡಬಹುದಾಗಿದೆ. 
# ವ್ಯಕ್ತಿಯ ಮರಣಾನಂತರ ಮೃತರ ಸಂಬಂಧಿಕರು ಕೂಡಲೇ ನೇತ್ರಭಂಡಾರಕ್ಕೆ ಮಾಹಿತಿ ನೀಡಬೇಕು. # ವ್ಯಕ್ತಿ ಬದುಕಿರುವಾಗಲೇ ಹೆಸರನ್ನು ನೇತ್ರ ಭಂಡಾರದಲ್ಲಿ ನೊಂದಾಯಿಸುವುದರಿಂದ ನೇತ್ರ ಭಂಡಾರದ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಲು
# ತಮ್ಮ ಕಣ್ಣುಗಳನ್ನು ಸಾವಿನ ನಂತರ ಯಾವುದೇ ವಯಸ್ಸು , ಲಿಂಗ ಅಥವಾ ಸಾಮಾಜಿಕ ಸ್ಥಿತಿ ಪರಿಗಣಿಸದೆ ಯಾವುದೇ ವ್ಯಕ್ತಿ ಕಣ್ಣುಗಳನ್ನು ದನ ಮಾಡಬಹುದು. 
# ಕನ್ನಡಕ ಧರಿಸುವವರು, ಕಾಂಟ್ಯಾಕ್ಟ್ ಲೆನ್ಸ್‌ ಧರಿಸುವವರು, ಯಶಸ್ವಿಯಾಗಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು , ಸಕ್ಕರೆ ಕಾಯಿಲೆ, ಬ್ಲಿಡ್‌ ಪ್ರಶರ್‌ ಇರುವವರು, ಅಸ್ತಮಾದವರು ಯಾರು ಕೂಡಾ ಅವರ ಕಣ್ಣುಗಳನ್ನು ದಾನ ಮಾಡಬಹುದು.
# ಕುಟುಂಬದವರಿಂದ ಯಾವುದೇ ಶುಲ್ಕ ಪಡೆಯುವು ದಿಲ್ಲ. ನೇತ್ರ ಸಂಗ್ರಹಣಾ ಕೇಂದ್ರದವರು ದಾನಿಗಳ ಮನೆಗೆ ಅಥವಾ ಮೃತಪಟ್ಟ ಸ್ಥಳಕ್ಕೆ ಬರುತ್ತಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಉಚಿತ ಸೇವೆಯಾಗಿದೆ.

ವ್ಯಕ್ತಿಯು ಸತ್ತ ಕೂಡಲೇ ಏನು ಮಾಡಬೇಕು?
– ವ್ಯಕ್ತಿಯು ಸತ್ತ ಕೂಡಲೇ ಕಣ್ಣನ್ನು ಮುಚ್ಚಬೇಕು.
– ಫ್ಯಾನನ್ನು ಆರಿಸಬೇಕು. ಯಾವುದೇ ಕಾರಣಕ್ಕೂ ಫ್ಯಾನಿನ ಗಾಳಿ ನೇರವಾಗಿ ಕಣ್ಣಿಗೆ ಬೀಳಬಾರದು.
-ತಲೆಯನ್ನು 6 ಇಂಚಿನಷ್ಟು ಎತ್ತರಕ್ಕೆ ತಲೆದಿಂಬಿನಿಂದ ಎತ್ತರಿಸಬೇಕು. ಇದರಿಂದ ಕಣ್ಣು ತೆಗೆಯುವಾಗ ಕಡಿಮೆ ರಕ್ತಸ್ರಾವ ಆಗುತ್ತದೆ.
-ತಣ್ಣಗಿನ ಬಟ್ಟೆ ಅಥವಾ ಐಸ್‌ಕ್ಯೂಬನ್ನು ಹಣೆಯ ಮೇಲೆ ಇಡಬೇಕು.
-ಸಾಧ್ಯವಾದರೆ ಆ್ಯಂಟಿಬಯೋಟಿಕ್‌ ಕಣ್ಣಿನ ಡ್ರಾಪ್ಸ್‌ ಹಾಕುವುದರಿಂದ ಸೋಂಕನ್ನು ತಡೆಗಟ್ಟಬಹುದು.
-ಆದಷ್ಟು ಬೇಗನೆ ಹತ್ತಿರದ ನೇತ್ರ ಭಂಡಾರಕ್ಕೆ ತಿಳಿಸಬೇಕು.
-ಸರಿಯಾದ ವಿಳಾಸವನ್ನು ಫೋನ್‌ ನಂಬರನ್ನೂ ತಿಳಿಸಿದರೆ ನೇತ್ರ ಭಂಡಾರದ ಕಾರ್ಯಕರ್ತರು ಸರಿಯಾದ ಸಮಯಕ್ಕೆ ತಲುಪಬಹುದು.
-ಮರಣ ಪತ್ರ ಇದ್ದರೆ ಅದನ್ನು ರೆಡಿ ಇಡಬೇಕು.
-ನೇತ್ರದಾನದ ಕಾರ್ಯ ಶುರು ಮಾಡಲು ಇಬ್ಬರು ಒಪ್ಪಿಗೆ ಸಹಿ ಇರಬೇಕು.


 ಕಣ್ಣಿಗೆ ದೃಷ್ಟಿ ಕೊಟ್ಟದ್ದು ಸೃಷ್ಟಿ
 ನೇತ್ರದಾನ ಮಾಡುವುದು ಕೃಪಾದೃಷ್ಟಿ
 ಅಂದರಿಗೆ ನೀಡಿ ನಿಮ್ಮ ದೃಷ್ಟಿ
 ಅದರಿಂದ ಆಗುವುದು ಸುಂದರ ಲೋಕ ಸೃಷ್ಟಿ.....

- ಶಿವನಗೌಡ ಪೋಲಿಸ್ ಪಾಟೀಲ. ನವಲಹಳ್ಳಿ, ಕೊಪ್ಪಳ.

ಭೂಮಿ ಎಂಬ ಒಡಲು (ಕವಿತೆ) - ಬಸವರಾಜ ಕರುವಿನ, ಬಸವನಾಳು.

ಭೂಮಿಯ ಒಡಲಲ್ಲಿ 
ಪ್ರಕೃತಿ ಮಾಡಿಲ್ಲಲ್ಲಿ 
ಅರಳಿದೆ ಈ ಜೀವರಾಶಿ 
ಕೊಲ್ಲಬೇಡಿ ಭೂಮಿಗೆ  ವಿಷ ಹಾಯಿಸಿ 

ಪ್ರಕೃತಿಯ ಹಸಿರಲ್ಲಿ 
ತಂಗಾಳಿ ಉಸಿರಲ್ಲಿ 
ಹೆಸರಿಲ್ಲದೇ ಬದುಕುತಿಹವು  ಜೀವರಾಶಿ 
ಕೊಲ್ಲಬೇಡಿ ಗುಂಡು ಹಾರಿಸಿ 

ಜಗತ್ತಿನ ಜೀವ ಸಂಕುಲ 
ಬದುಕುತಿದೆ ಈ ಲೋಕದಗಲ
ಕಡಿಯಬೇಡಿ ಹಸಿರ ಕಾಡು
ಬೆಳೆಯುವುದು ನಮ್ಮ ನಾಡು 

ಜೀವಕ್ಕೆ ಜೀವವಾಗಿ
ನಾಡಿಗೆ ನಾಡಿಯಾಗಿ 
ಬದುಕಬೇಕಿದೆ ಮಾನವ 
ಆಗ ಕಾಣಬಹುದು ಸುಂದರ ಜಗವ !

- ಬಸವರಾಜ ಕರುವಿನ, ಬಸವನಾಳು.

ಮಂಗಳವಾರ, ಜೂನ್ 20, 2023

ತಾಯ್ತನದ ಕುಡಿ (ಕವಿತೆ) - ಸ್ವಪ್ನ ಆರ್. ಎ., ಹಿರಿಯೂರು.

 ಅವ್ವನ ಅoತರ್ಯದ ಬಾಳಿನ ಕುಡಿ,
ತಾಯಿಯ ಹೃದಯದ ತಂತಿಯ ಮಿಡಿ
ಮಾತೆಯ ಮಾಧುರ್ಯದ ಬೆಳಕಿನ ಕಿಡಿ//

ಜೀವನದ ದಾರಿಯ ಕೈ0ಕರ್ಯದ ಅಡಿ
ಹೆಜ್ಜೆ ಹೆಜ್ಜೆಯ ದೀಪ್ತಿಯ ಮಡಿ
ಯಶಸ್ಸಿನ ಮೆಟ್ಟಿಲಿನ ಕಡೆ ನೀ ನಡಿ//

ಪುಟಕ್ಕಿಟ್ಟ ಖನಿಯ ನವರತ್ನ ಮಣಿ
ಮಾತಿಗೆಳೆಯುವ ಮಮತೆಯ ಮುದ್ದಿನ ಗಿಣಿ
ಕರುಣಾಮಯಿ,ಕಾಳಜಿಯ ಮಿಂಚಿನ ಮಿಣಿ//

ಭಾವನೆಯ ಬಿಂದುವಿನ ಮಾತಿನ ಗಣಿ
ಮುಂದೆ ಆಗುವೆಯ ಸಮಾಜದ ಧಣಿ
ಸಂಬಂಧದ ಸೇತುವೆಯಲ್ಲಿ ಸಿಕ್ಕ ಮಗಳು ಭರಣಿ//

ಅಕ್ಕರೆಯ ಅಮೃತದ ಒಡಲ ಜನ್ಮದಾತೆ
ತುತ್ತನ್ನು ಉಣಿಸುವ ನಿತ್ಯದ ಅನ್ನದಾತೆ
ತಾಯ್ತನಕ್ಕೆ ಭಾಗ್ಯವ ತಂದ ಭಾಗ್ಯದಾತೆ//

ಓದಿದನ್ನು ತಿಳಿಸುವ ಇವಳು ಅಕ್ಷರದಾತೆ
ಓದು,ಬರಹ ಕಲಿಯುವ ಜ್ಞಾನದಾತೆ
ಮಗಳಿಂದ ಹೆತ್ತ ಕರುಳ ಪಡೆದ ಸೌಭಾಗ್ಯದಾತೆ// 

- ಸ್ವಪ್ನ ಆರ್. ಎ., ಹಿರಿಯೂರು.

ಗುರುವಾರ, ಜೂನ್ 8, 2023

ನನಸಾಗದ ಕನಸು (ಕವಿತೆ) - ಮುರುಳಿ ಆರ್.ಎನ್. ರಾಯಚೆರ್ಲು.

ನನಸಾಗದ ಕನಸುಗಳ ನಡುವೆ,
ಒದ್ದಾಡುತಿದೆ ಮನಸು.
ಕನಸು ನನಸಾಗುತ್ತಾ, ಕನಸಾಗೇ,
ಉಳಿಯುತ್ತಾ ನೀ ತಿಳಿಸು.

ನೀ ನನ್ನ ಬೇಡಾಂದ ಆ ಕ್ಷಣದಲ್ಲಿ,
ನಾ ಕಂಡೆ ನನ್ನ ಶವ ಮಸಣದಲ್ಲಿ.
ನಿಜ ನಾವಿಬ್ಬರು ಬೇರಾದೆವು ಕಣೇ,
ನನ್ನಲ್ಲಿ ನಿನ್ನ ಸ್ಥಾನ ಇನ್ನೊಬ್ಬರಿಗಿಲ್ಲ ನನ್ನಾಣೆ.||ನನಸಾಗದ ||

ನೀನನ್ನ ಕಡೆಗಣಿಸಿ ಹೋಗುತಿಯೇ,
ನನ್ನ ಅನಾಥ ಮಾಡುತಿಯೇ.
ಮುಂದೊಂದು ದಿನ ನೀ ಬಂದ್ರು ನಾ ಸಿಗಲ್ಲ,
ಯಾಕಂದ್ರೆ ಅಂದು ಈ ನಿನ್ನ ನಾನು ಬದುಕಿರೋಲ್ಲ. ||ನನಸಾಗದ||

ಅಂದು ನಾವು ಕಂಡ ಕನಸು ನನಸಾಗಲಿಲ್ಲ,
ನೀನು ಕೈ ಕೊಡುತ್ತೀಯೆಂದು ಕನಸೂ ಕಂಡಿರಲಿಲ್ಲ.
ನಾ ಕಂಡ ಕನಸು ಕನಸಾಗೇ ಉಳಿಯಿತು,
ನಾನು ಕಂಡಿರದ ಕನಸುಗಳು ನನಸಾದವ ||ನನಸಾಗದ||

- ಮುರುಳಿ ಆರ್.ಎನ್. ರಾಯಚೆರ್ಲು.

ಆದರ್ಶ (ಸಣ್ಣ ಕಥೆ) - ಮಾಲತಿ ಮೇಲ್ಕೋಟೆ.

ವೀಳ್ಯ ಮೆಲ್ಲುತ್ತಾ ಜಗಲಿಯಲ್ಲಿ
ಆರಾಮಕುರ್ಚಿಯಲ್ಲಿ ಕುಳಿತಿದ್ದ 
ಶ್ರೀನಿವಾಸಯ್ಯ ತಿಮ್ಮನ ದಾರಿ
ಕಾಯುತ್ತಿದ್ದರು.ಅಂಗಳದಲ್ಲಿ
ಹರಡಿದ್ದ ಮಟ್ಟೆಕಾಯಿಗಳನ್ನು
ಸುಲಿಯಲು ಬೆಳಿಗ್ಗೆ ೯ಕ್ಕೇ
ಬರುವೆನೆಂದಿದ್ದ ತಿಮ್ಮ ೧೦
ಗಂಟೆಯಾದರೂ ಬಂದಿರಲಿಲ್ಲ.
೧೦-೨೦ರ ವೇಳೆಗೆ ದೂರದಲ್ಲಿ
ತಿಮ್ಮ ಬರುವುದು ಕಂಡಿತು.
     
ಹತ್ತಿರ ಬಂದೊಡನೆ "ಅಡ್ಬಿದ್ದೆ
ಬುದ್ದೋರೆ"ಎಂದ.ಶ್ರೀನಿವಾಸ
"ಯಾಕೋ ಇಷ್ಟು ತಡ"ಎಂದು
ಸಿಡಿಮಿಡಿಯಿಂದ ಕೇಳಿದರು.
"ಬೆಳಿಗ್ಗೆ ವೆಂಕಯ್ಯನವರ
ತೋಟಕ್ಕೆ ಪಾತಿ ಮಾಡೋಕೆ 
ಓಗಿದ್ದೆ.ಬಿಸಿಲಾದ್ಮೇಲೆ ಕಷ್ಟ
ಅಲ್ಲವ್ರಾ,ಅದ್ಕೆ ಮುಗ್ಸೇ ಬಂದೆ"
ಅಂದ.ಇವರ ಮನೆ ಅಂಗಳದಲ್ಲಿ
ಶೀಟ್ ಹೊದಿಸಿದ್ದರಿಂದ ಬಿಸಿಲಿನ ಸಮಸ್ಯೆ ಇರಲಿಲ್ಲ.
ಅವನೊಡನೆ ಬಂದಿದ್ದ ಅವನ
ಹೆಂಡತಿ ಕೆಂಪಿ ಮನೆಗೆಲಸದಲ್ಲಿ
ನೆರವಾಗಲು ಒಳಹೋದಳು.

     ರಾಯರಿಗಿನ್ನೂ ತಿಮ್ಮನ
ಮೇಲಿನ ಕೋಪ ಕರಗಿರಲಿಲ್ಲ.
ಅವನು ಕೆಲಸ ಶುರು ಮಾಡು-
ತ್ತಿದ್ದಂತೆ ಮಾತಿಗೆಳೆದರು.

   ‌‌.   "ಅಲ್ವೋ,ನೀನು,ನಿನ್
ಹೆಂಡ್ತಿ ಕಷ್ಟಪಟ್ಟು ಕೂಲಿನಾಲಿ
ಮಾಡಿ ಮಗನ್ನ ಓದ್ಸಿದ್ರಿ,ಅವನು
ಕೆಲ್ಸ ಸಿಕ್ಕ ಕೂಡ್ಲೇ ನಿಮ್ಮನ್ನು 
ಬಿಟ್ಟು ಪಟ್ಣಕ್ಕೆ ಹೋಗ್ಬಿಟ್ನಲ್ಲೋ"
ಎಂದು ಕಿಚಾಯಿಸಿದರು.ನೀವೂ
ಅಲ್ಲೇ ಹೋಗಿ ಅವನ್ಜೊತೆ ಇರ್ಬಾರ್ದಾ ಎಂದು ಒಗ್ಗರಣೆ
ಸೇರಿಸಿದ್ರು.ಅವನೆಂದ,"ನಮ್ಗೆ
ಅಳ್ಳೀನೇ ಸರಿ,ಅಲ್ದೆ ನಾವಿಬ್ರೂ
ಇನ್ನೂ ಗಟ್ಯಾಗಿದೀವಿ.ಇಲ್ಲೇ
ಕೆಲ್ಸ ಮಾಡ್ಕೊಂಡು ಸುಕ್ವಾಗಿ
ಇದೀವಿ ಬುಡಿ"ಎಂದ.ಅವನ 
ಶಾಂತಚಿತ್ತತೆಯನ್ನು ಕಂಡು
ಇವರಿಗೆ ಆಶ್ಚರ್ಯ.

ಆದ್ರೂ ಶ್ರೀನಿವಾಸಯ್ಯ
ಸೋಲಲು ತಯಾರಿರ್ಲಿಲ್ಲ.
"ನಿನ್ ಮಗನ್ನ ದುಡ್ಡು ಕಳ್ಸೋಕೆ
ಹೇಳೋ,ನೀವಿಬ್ರೂ ಇನ್ಮೇಲೆ
ಕೂಲಿ ಕೆಲ್ಸ ಬಿಟ್ಟು ಆರಾಮ-
ವಾಗಿ ಇರ್ಬೋದು"ಎಂದರು.

   ‌.   ತಿಮ್ಮ ತಕ್ಷಣ ಉತ್ತರಿಸಿದ,
"ಅಲ್ಲ ಸ್ವಾಮೀ,ನಾವು ಕಷ್ಟಪಟ್
ಓದ್ಸಿದ್ಕೆ ಅವನು ಸಂದಾಗಿ ಓದಿ
ಪಟ್ಣದಲ್ಲಿ ಕೆಲ್ಸ ಸಂಪಾದ್ನೆ 
ಮಾಡ್ಕೊಂಡಿದ್ ಕಂಡು ನಾವು
ಖುಸಿ ಪಡ್ಬೇಕಲ್ಲವ್ರಾ,ಅವನು
ನಪಾಸಾಗಿ ,ಸರ್ಯಾಗಿ ಓದ್ದೇ,
ಕೆಲ್ಸಾನೂ ಇಲ್ದೇ ಇಲ್ಲೇ ಕುಂತಿದ್ರೆ
ನಮ್ ಕಷ್ಟ ಸಾರ್ತ್ಕ ಆಯ್ತಿತ್ತಾ,
ಈಗಂತೂ ನಮ್ಗೆ ಬೋ ಖುಷಿ.
ನಮ್ ಶ್ರಮಾನೂ ಸಾರ್ತ್ಕ ಆಯ್ತು.ಅವನು ಮಗೀ ಆಗಿದ್ದಾಗ ನಮ್ಗೆ ಎಷ್ಟ್ ಖುಷಿ
ಕೊಟ್ಟವ್ನೆ ಗೊತ್ರಾ,ಮರ್ಯಕ್ಕಾ-
ಯ್ತದಾ ಅದ್ನ,ಈಗ್ಲೂ ಅಪ್ಪ,
ಅಮ್ಮ ಅನ್ಕೊಂಡು ನಂ ಜೊತೆ
ಸಂತೋಸ್ವಾಗೇ ಅವ್ನೆ."ಎಂದಾಗ
ಮಾತು ಮುಂದುವರಿಸಲು
ಶ್ರೀನಿವಾಸಯ್ಯನವರಿಗೆ
ತೋಚದಾಯಿತು.

- ಮಾಲತಿ ಮೇಲ್ಕೋಟೆ.


ಬುಧವಾರ, ಜೂನ್ 7, 2023

ಕಾಡು ಬೆಳೆಸಿ ನಾಡು ಉಳಿಸಿ (ಕವಿತೆ) - ಶ್ರೀ ಮುತ್ತು ಯ. ವಡ್ಡರ.

ಹಸಿರೇ ಉಸಿರು ಉಸಿರೇ ಹೆಸರು 
ಮಳೆಯಿಂದ ಬೆಳೆ,ಬೆಳೆಯಿಂದ ಉತ್ತಮ ಪೈರು
ಪ್ರಕೃತಿಯ ಮಡಿಲಲಿ ಎಳೆಯೋನ ನಿತ್ಯ ಹಸಿರತೇರು
ಬಾನೆತ್ತರಕ್ಕೆ ಬೆಳೆಸಿ ಮರ ಪಡೆ ಅಮೃತ  ನೀರು.

ಸುಂದರ ಪ್ರಕೃತಿಯು ಮನಸನು ಸೆಳೆವುದು 
ಭಗವಂತ ನೀಡಿದ ನಿಸರ್ಗ ಧಾಮವಿದು
ಎಷ್ಟು ಇಂಪು  ಮುಂಜಾನೆ ಕೂಗಿಲೆ ಕೂಗುವುದು
ಮಯೂರಿಯ ನೃತ್ಯ ನೋಡಲು ಎರಡು ಕಣ್ಣು ಸಾಲದು.

ಕಾಡು ಬೆಳೆಸಿ ನಾಡು ಉಳಿಸಿ
ಮರ-ಗಿಡ ಕಡೆಯುವ ಕ್ರೂರ ನಿಲ್ಲಿಸಿ
ಕಾಡು ಪ್ರಾಣಿಯ ಬೇಟೆಯ ಅಳಿಸಿ
ಗುಡಿಸಲ ಕಟ್ಟಿ ಕಾಡದಿ  ನೆಮ್ಮದಿ  ಅನುಭವಿಸಿ.

ಜೀವ ಉಳಿಸುವ ಪ್ರಾಣ ವಾಯುವಿದೆ
ರೋಗಗಳಿಗೆ ರಾಮಬಾಣದ ಔಷದವಿದೆ
ಕವಿ ಸಾಹಿತಿಗಳಿಗೆ ನೆಮ್ಮದಿಯ ತಾನವಿದೆ
ಗಡ್ಡೆ ಗೆಣಸುಗಳ ಸಿಹಿ ಫಲವಿದೆ.

ಹಸಿರೇ ಉಸಿರಾಗಲಿ ಸದಾ ನಿತ್ಯ ನೂತನ
ಕಾಡು ಬೆಳೆಸಿ ನಾಡು ಉಳಿಸಿ ಬದುಕು ಪಾವನ
ಉಳಿಸಿ ಬೆಳೆಸಿ ಹಚ್ಚ ಹಸುರಿನ  ಪ್ರಕೃತಿಯನ
ಕಡಿಯದೆ ಗಿಡವನ ಪೋಷಿಸಿ ಸಸಿ, ಪರಿಸರವನ..

ನಿಲ್ಲಿಸು  ಮಾನವ ನಿನ್ನ ಕ್ರೂರತನ
ಪೋಷಿಸಿ ಬೆಳೆಸು ವನ್ಯಜೀವಿ ತಾಣ
ತಿಳಿ ಸಾಲುಮರದ ತಿಮ್ಮಕ್ಕಳ ದಿಟ್ಟತನ
ಅಂದಾಗ ಪರಮಾತ್ಮನೂ ಕೂಡ ಮೆಚ್ಚುತ್ತಾನ.

 - ಶ್ರೀ ಮುತ್ತು ಯ. ವಡ್ಡರ (ಶಿಕ್ಷಕರು)
ಊರು-ಹಿರೇಮಾಗಿ
ಜಿಲ್ಲೆ-ಬಾಗಲಕೋಟ
Mob-9845568484.


ನಿಸರ್ಗ ಮಾತೆ (ಕವಿತೆ) - ಸದ್ದಾಂ ತಗ್ಗಹಳ್ಳಿ.

ಓ ನಿಸರ್ಗ ಮಾತೆ
ನೀ ನಮ್ಮ ಜೀವದಾತೆ

ಬಾನಲಿ ಚಂದ್ರನು ಮಿಂಚುತಿರಲು
ಕೊಂಬೆಯ ಮೇಲೆ ಕೂತು ಕೋಗಿಲೆ ಹಾಡುತಿರಲು
ಗುಡುಗು ಮಿಂಚುಗಳೊಡನೆ ಮಳೆಯೂ ಸುರಿಯುತಿರಲು
ಉಲ್ಲಾಸದಿಂದ ನದಿಯ ಝರಿಯು ಧುಮುಕುತಿರಲು
ಸಂಜೆ ಹೊತ್ತಲ್ಲಿ ತಂಪು ಗಾಳಿ ಬೀಸುತಿರಲು
ಆಕರ್ಷಿಸಿತು ಮನ ಪ್ರಕೃತಿಯ ಸೊಬಗನ್ನು ಅನುಭವಿಸಲು

ನಿನ್ನ ಮಡಿಲಲ್ಲಿ ಜೀವಿಸುವ ಮಕ್ಕಳು ನಾವೆಲ್ಲ
ನೀ ಇಲ್ಲದೆ ನಮ್ಮ ಬದುಕೇ ಇಲ್ಲ
ನಿನ್ನಯ ಆಶ್ರಯ ನಮಗೆ ಅವಶ್ಯವಾಯಿತಲ್ಲ
ನಿನ್ನ ಸಲುಗೆಯಿ೦ದ ನಮ್ಮ ಬದುಕು ಬೇವು ಬೆಲ್ಲ

ಎತ್ತ ನೋಡಿದತ್ತ ಶಕ್ತಿ ಸಂಪನ್ಮೂಲಗಳು ತುಂಬಿಕೊಂಡಿವೆ
ಮನುಷ್ಯನ ಆಸೆ ಈಡೇರಿಸುವ ಅಂಶಗಳೆಲ್ಲ ನಿನ್ನ ಕೊಡುಗೆಯಾಗಿವೆ
ಪ್ರಕೃತಿ ದೇವತೆಯೇ ನಿನ್ನ ವೈಭವವನ್ನು ವರ್ಣಿಸಲು ಸಾಧ್ಯವೇ
ನಿನ್ನ ಹಚ್ಚಹಸಿರ ಮಡಿಲಲ್ಲಿ ನಮ್ಮ ಉಸಿರು ನಿಂತಿದೆ

ಓ ನಿಸರ್ಗ ಮಾತೆ 
ನೀ ನಮ್ಮ ಜೀವದಾತೆ

ಹಸಿರೇ ಉಸಿರು ಎಂಬಂತೆ ಹರಡಿರುವುದು ನಿನ್ನ ಹೆಸರು
ನಿನ್ನ ಒಡಲಲ್ಲಿ ಅವಿತಿರುವುದು ನಮ್ಮೆಲ್ಲರ ಉಸಿರು
ಜಗದೊಳು ನಿನ್ನದೇ ಪರ್ಯಟನೆ ,
ಗುರುತಿಸಿಕೊಳ್ಳಲು ಮನುಜನಿಗಿರುವ ನಿನ್ನದೊಂದೆ ನಮೂನೆ

ಸಾಲಿನೊದ್ದಕ್ಕು ನಿಂತ ಮರಗಳು ಧರೆಗುರುಳಿ ಮಣ್ಣಾಗುತ್ತಿವೆ
ಸುತ್ತ ನೋಡಿದತ್ತ ಹಸಿರು ಮಾಯವಾಗಿ ಉಸಿರು ನಿಂತಂತಾಗಿದೆ
ಗಾಳಿ ಇದ್ದು ಶುದ್ಧ ಗಾಳಿಗೆ ಪರದಾಡುವಂತಾಗಿದೆ
ಮಾನವನ ದುರಾಸೆಗಳಿಗೆ ಪ್ರಕೃತಿಯೇ ತಲೆ ಬಾಗಿಬಿಟ್ಟಿದೆ

 ಕೊರಗಬೇಡ ಅಳಬೇಡ ಪ್ರಕೃತಿಯೇ ಮಾನವ ನಾಶ ಮಾಡಿದನೆಂದೂ
ಅವನ ಆಸೆಗಳೆಲ್ಲ ಮಿತಿಮೀರಿ ಕ್ರೂರಿ ಆಗಿದ್ದಾನೆ 
ಈಗಿನ ಕೆಟ್ಟ ಪರಿಸ್ಥಿತಿಯನ್ನು ಎದುರಿಸದೆ ವಿಫಲನಾಗಿದ್ದಾನೆ
ಓ ನಿಸರ್ಗ ದೇವತೆ ಕರುಣಿಸು ಆಶೀರ್ವಾದಿಸು ನೀ ನಮಗೆ ಎಂದೆಂದೂ

ಗಿಡ ನೆಟ್ಟು ಮರವಾಗಿ ಬೆಳೆಸುವ ಸಂಕಲ್ಪ ಮಾಡೋಣ
ಜಗ ಉಳಿಸುವ ಕಾರ್ಯ ಕೈಗೊಳ್ಳೋಣ
ಪ್ರಕೃತಿಯ ಜೊತೆ ಕೈಜೋಡಿಸಿ ಹೊಸ ಪ್ರಪಂಚವ ನಿರ್ಮಿಸೋಣ
ಕಾಡು ಬೆಳೆಸುತ್ತಾ ನಾಡು ಉಳಿಸೋಣ..

ಓ ನಿಸರ್ಗ ಮಾತೆ
ನೀ ನಮ್ಮ ಜೀವದಾತೆ.

- ಸದ್ದಾಂ ತಗ್ಗಹಳ್ಳಿ.




ಪ್ರಕೃತಿಯ ಶಿಶು ನಾನು (ಕವಿತೆ) - ಸೌಜನ್ಯ ದಾಸನಕೊಡಿಗೆ.

ಪ್ರಕೃತಿಯ ಶಿಶು ನಾನು
ಶೃತಿಬದ್ಧ ಹಾಡೊoದ ಹಾಡಲೇನು...
ಅವಳಾ ಕೃತಿಗೆ ಆಕೃತಿಯ ಅಳುಕಿಲ್ಲ
ತುದಿ ಮೊದಲು ಇದ್ದರದು ಭೂಮಿ ಬಾನು...!

ಪ್ರಕೃತಿಯ ಆವೃತ್ತಿಯೊಳಗೆ ಸೆರೆಸಿಕ್ಕ ನಾನು,
ವಿಕೃತಿಯ ಜಗದಿಂದ ಹೊರಬಿದ್ದೆನು....
ಅವಳಾ ಜಾಗೃತಿಯ ಜೋಲಿಯಲಿ ತಲೆಯಿಟ್ಟು ತೂಗುತಾ
ಪ್ರತಿ ವಸಂತಗೀತೆಯೊಳಹೊಕ್ಕು ಶರಣೆದೆoನು...
ಕಣ್ಣೆದುರು ಕಾಣದೆ ಕುಳಿತು ಈ ಕೋಮಲೆಯ ಕೆತ್ತಿದಾ ದೇವನು 
 ಕಣ ಕಣವು ಅವಳಾಗಿ  ಪರಿಸರದ ಸರಿಗಮದಿ ಕಲೆತೋದನು...
ಪ್ರಕೃತಿಯ ಶಿಶು ನಾನು,
ಅವಳಾ ಶೃತಿಬದ್ಧ ಹಾಡೊಂದ ಹಾಡಲೇನು....!

ಹೃದಯ ದಿಗಂತದಿ ರವಿಯಾಗಿ ನೆಲೆನಿಂತು
ಉದಯಿಸಿದಳು ಶ್ಯಾಮಲೆ ನಿತ್ಯ ಎನಗಾಗಿ...
ಹಗಲಿರುಳು ಹಸಿರಾಗಿ, ಹಣ್ಣಾಗಿ, ಕಾಯಾಗಿ
ಹರಸಿದಳು ಸದಾ ಹಸನಾಗಿ ಮಾಗಿ...
ಬೀಗುವೆ ನಾ ನಿನ್ನ ಕಂದನೆಂದು,
ಬಾಗುವೆ ಸದಾ ನಿನ್ನೆದುರು ಓ ಆತ್ಮ ಬಂಧು...
ಈ ಪ್ರಕೃತಿಯ ಶಿಶು ನಾನು
ಅವಳಾ ಶೃತಿಬದ್ಧ ಹಾಡೊಂದ ಹಾಡಲೇನು...!

ನನ್ನೆದೆಯ ಅಂಗಳದಿ ನದಿಯಾಗಿ, ವಿಧಿಯಾಗಿ
ಹರಿದವಳವಳು ನಿಸರ್ಗೆ ಗಂಗೆ ತುಂಗೆಯಾಗಿ...
ಕೊನೆಗೂ ಮಿಣುಕು ಹುಳುವಾಗಿ ಇಣುಕಿದಳು ನನ್ನಾತ್ಮದೆಡೆ ಸಾಗಿ,
ದಿಗ್ಬ್ರಮೆಯೊಳು ದಿಟ್ಟಿಸುತ ಮರುಳಾದೆ ಅವಳಾಟಕೆ ನಾ ಬೆರಗಾಗಿ...
ನಾನವಳ ತೊರೆದು ಮರೆಯಾಗುವೆನೆಂದು ಮುನಿದು ನಿಂತಾಗ
ನಸುನಗುತಲೆಂದಳು, "ಎಲೆ ಮರುಳೆ ಕೇಳು, ನಾನೇ ನೀನೀಗ....!".
ಆ ಪ್ರಕೃತಿಯ ಶಿಶುನಾನು 
ಅವಳಾ  ಶೃತಿಬದ್ಧ ಹಾಡೊನ್ದ ಹಾಡಲೇನು...!

ಬೆಟ್ಟ ಗುಡ್ಡವ ಹೊಸೆದಳು
ನಡುವೆ ಕಾನನವ ನೆಟ್ಟು,
ಹಸಿರು ಸೆರಗುಟ್ಟಳು,
ಜಲಪಾತ ಝರಿ ಜುಮುಕಿ ಓಲೆಯ ತೊಟ್ಟು...
ಅವಳುಸಿರ ಉಷೆ ಸಾಕು ಜಗದ ವಿಷ ವಿಷಯವ ಹೊಸಕು ಹಾಕಲು ...
ಅವಳ ಹೊಸತನ ಬೇಕು,
 ಅವಳ ಕಲರವ ಬೇಕು
ಅವಳ ಚೈತನ್ಯ ಪಸರಿಸಿದರೆ ಸಾಕು
ನನ್ನೊಳ  ಬದುಕ ಬತ್ತದಂತೆ  ಬೆಳಗಲು...
ಆ ಪ್ರಕೃತಿಯ ಶಿಶು ನಾನು
ಅವಳ ಶೃತಿಬದ್ಧ ಹಾಡೊಂದ ಹಾಡಲೇನು..!

ದೀರ್ಘ ಉಸಿರಿನ ಒಳಗೆ ಋತುಗಾನದ ಚೇತನವುಂಟು,
ನನ್ನಾಂತರ್ಯದಿ  ಚಿಗುರಿದ ಕಾಂತಿಯಲಿ ಧಾತ್ರಿಯದೆ ನಂಟು...
ನಿಲಾoಬರದ ತಿಳಿ ನೆತ್ತಿಯ ಸೊಗಡುಂಟು  ಅವಳಾಕಳಿಕೆಯಲಿ
ವಿಶಾಲ ಹಗಲು ರಾತ್ರಿಗಳೆಂಬ ಜೋಡಿ ಜನ್ಮಗಳುoಟು....
ಹೆಣೆದಳು ಗಿರಿಜೆ ಕಾಡು ಮಲ್ಲಿಗೆ ಸಂಪಿಗೆಯೊಳು ಸೆಳೆವ  ಬಂಧ,
ಅದರೊಳಗೆ ಕಟ್ಟಿದಳೆನಗಾಗಿ ತಂಪೆರೆವ ತೊಟ್ಟಿಲೊಂದ...
ಆ ಪ್ರಕೃತಿಯ ಶಿಶುನಾನು
ಅವಳದೇ ಶೃತಿಬದ್ಧ ಹಾಡೊಂದ ಹಾಡಲೇನು...!

- ಸೌಜನ್ಯ ದಾಸನಕೊಡಿಗೆ.


ಮಂಗಳವಾರ, ಜೂನ್ 6, 2023

ಪಶುಗಳು (ಕವಿತೆ) - ಪ್ರೊ ಶಕುಂತಲಾ ಬರಗಿ.

ನೋವುಗಳ ಸಂದುಗಳಲ್ಲಿ ಸಿಕ್ಕು
ಒದ್ದಾಡುವ ಹಸುವಾಗಿದ್ದೇನೆ
ಇತ್ತೀಚೆಗೆ ನಾ ಬಲಿಪಶುವಾಗಿ ಇದ್ದೇನೆ
ಪಶು ಸದೃಶ್ಯ ನರಗಳ ನಡುವೆ

ನೋವಿನಲಿ ಬಳಲುತ್ತಿದ್ದೇನೆ
ಬೇರೆಯವರು ಕೊಂಕು ಮಾತುಗಳಿಗೆ
ಅನ್ಯರ ಭ್ರಷ್ಟತೆಗೆ ಸಿಕ್ಕು ನಾ
ಮೂಕಳಾಗಿದ್ದೇನೆ ಈ ಪಶುಗಳ ನಡುವೆ

ಅಸಹ್ಯವೇ ಇಲ್ಲದ
ಅವರ ಅಂಧ ಹೃದಯಗಳಿಗೆ
ನಾ ಮೂಕ.. ಮೂಕವಿಸ್ಮಿತಗಿಳಾದ್ದೇನೆ 
ಅವರಿವರ ಕೊಚ್ಚೆಯ ಮನಗಳಿಗೆ

ಮನುಷ್ಯರಂತೆ ಇರುವ ರಾಕ್ಷಸರ ನಡುವೆ
ಸಿಕ್ಕು ಬಳಲಿ ಬೆಂದುಹೋಗಿ
ಆವಿಯಾಗುವ ಮೋಡ ವಾಗುವ ಮುನ್ನ
ಜೋರಾಗಿ ಗುಡುಗು-ಸಿಡಿಲಾಗಬೇಕಾಗಿದೆ ನಾ.

- ಪ್ರೊ ಶಕುಂತಲಾ ಬರಗಿ
ಕನ್ನಡ ಉಪನ್ಯಾಸಕರು ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ ಬಾಗಲಕೋಟೆ.
 ಮೊ - 8147146194


ಪ್ರಕೃತಿಯ ಶಿಶು ನಾನು (ಕವಿತೆ) - ಡಾ. ಸುಸ್ಮಿತ ಕೆ.

ಜೀವನಕೆ ಅರ್ಥ ನೀಡಿದ 
ತಾಯಿ ಪ್ರಕೃತಿಯ ಶಿಶು ನಾನು

ಹಸಿರ ಮಡಿಲ ಸಿರಿತಂಪಲಿ 
ತರು ಲತೆಗಳ ತೊಟ್ಟಿಲ ತೂಗಿ 
ಮಂದಾರ ಹೂ ನಗೆಯ ಸೂಸಿದ
ತಾಯಿ ಪ್ರಕೃತಿಯ ಶಿಶು ನಾನು 

ಗರ್ಭದೊಳು ಉರಿ ಜ್ವಾಲೆ ಇದ್ದರು 
ಒಡಲ ಮಗುವಿಗೆ ಸಿಹಿ‌ ನೀರ ಹಂಚಿ
ತಾಳ್ಮೆ ಸಹನೆಗೆ ಸ್ಪೂರ್ತಿಯಾಗಿಹ
ತಾಯಿ ಪ್ರಕೃತಿಯ ಶಿಶು ನಾನು 

ರತ್ನ ಮಾಣಿಕ್ಯ ಕನಕ ವಜ್ರಗಳ ಗಣಿ 
ಕಾಡುಮೇಡುಗಳ ಸುಂದರ ಸರಣಿ
ಇಷ್ಟಿದ್ದರೂ ಸರಳತೆಯ ಮೆರೆದಿಹ
 ತಾಯಿ ಪ್ರಕೃತಿಯ ಶಿಶು ನಾನು 

ಎಷ್ಟು ಒದ್ದರೂ ಪ್ರೀತಿ ಕರುಣಿಸಿ
ಹೊತ್ತು ಹೊತ್ತಿಗೂ ಅನ್ನ ಉಣಿಸಿ
ಪ್ರತಿ ಬಾಳಿಗು ನೆಲೆಯ ನೀಡಿದ
ತಾಯಿ ಪ್ರಕೃತಿಯ ಶಿಶು ನಾನು

ಪ್ರಕೃತಿ ಮಾತೆಯ ಆರೋಗ್ಯಕಾಗಿ
ಆಕೆಯ ಚೆಲುವ ರಕ್ಷಣೆಗಾಗಿ 
ಹಗಲಿರುಳು ಶ್ರಮಿಪೆ ಅಮ್ಮನ ಕ್ಷೇಮಕಾಗಿ  
ಇಂತಿ, ತಾಯಿ ಪ್ರಕೃತಿಯ ಶಿಶು ನಾನು


- ಶ್ರೀಮತಿ ಡಾ. ಸುಸ್ಮಿತ. ಕೆ
ಕನ್ನಡ ಶಿಕ್ಷಕಿ, ಸಾಹಿತಿ
ಬೆಂಗಳೂರು.


ಸೋಮವಾರ, ಜೂನ್ 5, 2023

ಕೇಳುವವರಾರು ನನ್ನ ಧ್ವನಿಯ (ಕವಿತೆ) - ಭೀಮಣ್ಣ ಹತ್ತಿಕುಣಿ.

ಕೇಳುವವರಾರು ನನ್ನ ಧ್ವನಿಯ
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ!!
ಆಸೆಯ ಬಚ್ಚಿಟ್ಟು ಬದುಕಿದೆ ನಾನು 
ನೀ ತೋರಿದ ದಾರಿಯಲಿ ಅಪ್ಪ
ಕೇಳುವರಾರು ನನ್ನ ಧ್ವನಿಯ 
ಮನಸಲ್ಲಿ ಕನಸೊಂದ ಕಟ್ಟಿ ಬಿಳಿಸಿದೆ ನಾನು 
ಸಮಾನತೆ ಸಾರಿದ ಅಂಬೇಡ್ಕರ ಭೂಮಿಯಲ್ಲಿ 
ಕೇಳುವವರಾರು ನನ್ನ ಧ್ವನಿಯ
ಬದುಕೊಂದು ಕಟ್ಟಲು ಬಿಡಿ 
ಸಮಾಜದಲ್ಲಿ ನನಗೊಂದು ಜಾಗ ಕೊಡಿ
ಹೆತ್ತು ಹೇರಲು ಹೆಣ್ಣು ಸಾಕಾ
ನನ್ನ ಬದುಕು ನನಗೆ ಬೇಕಾ
....ಬದುಕಲು ಬಿಡಿ....
ಕೇಳುವವರಾರು ನನ್ನ ಧ್ವನಿಯ 
ಸಮಾನತೆ ಸಾರಿದ ಅಂಬೇಡ್ಕರ್ ಭೂಮಿಯಲ್ಲಿ
   
 - ಭೀಮಣ್ಣ ಹತ್ತಿಕುಣಿ, ಯಾದಗಿರಿ.


ಭಾನುವಾರ, ಜೂನ್ 4, 2023

ನಾನಿ ಅವರ ಅಂತರಂಗದ ಧ್ಯಾನ ಗಜಲ್ ಸಂಕಲನ (ಕೃತಿ ಪರಿಚಯ) - ಸುನೀತರವಿ

ನಾನಿಯೆಂಬ ಕಾವ್ಯನಾಮದಿಂದ ಪರಿಚಿತರಾಗಿರುವವರು ನೋರಾಯಣಸ್ವಾಮಿ. ಇವರು ಕಳೆದ ಕೆಲವು ದಿನಗಳ ಹಿಂದೆ ತನ್ನ ಗಜಲ್ ಸಂಕಲನವಾದ 

"ಅಂತರಂಗದ ಧ್ಯಾನ" ವನ್ನು ನನಗೆ ಕಳುಹಿಸಿದ್ದರು.  ಅವರ ಒಟ್ಟು ಅರವತ್ತು "ಗಜಲ್"ಗಳು  ಇದರಲ್ಲಿ ಕಾಣಬರುತ್ತವೆ. ಪ್ರತಿಯೊಂದು  ಗಜಲ್ಗಳೂ ನಮ್ಮನ್ನು ಓದಿನೆಡೆಗೆ ಕೊಂಡೊಯ್ಯುತ್ತದೆ. ಇದು ಹೆಸರೇ ಸೂಚಿಸಿದಂತೆ ನಾನಿಯವರ ಅಂತರಂಗದ ಧ್ಯಾನ ಎಂಬಂತೆ ಭಾಸಗೊಳಿಸುತ್ತವೆ. ಶ್ರೀದೇವಿ ಕೆರೆಮನೆ ಇವರು ಮುನ್ನುಡಿ ಬರೆದಿದ್ದಾರೆ. ಪ್ರತಿಯೊಂದು ಗಜಲ್ಗಳನ್ನು ಕಂಡಾಗ ನನಗೆ ಅನುಭವವಾದಂತೆ ಈ ಕೆಳಗಿನ ಅಂಶಗಳು ವೇದ್ಯವಾಗುತ್ತವೆ.
     ಗಜಲ್ 1:  ಬಡತನದಲ್ಲೂ ತನ್ನ ಕಂದನ ಮರ್ಯಾದೆ ಕಾಪಾಡುವ ತಾಯಿಯ ಪ್ರಯತ್ನ.
ಗಜಲ್ 2: ಮನುಜನ ಅವಾಮಯ ವರ್ತನೆ
ಗ 3: ಧನಾತ್ಮಕ ಮತ್ತು ಋಣಾತ್ಮಕ ಧೋರಣೆಗಳ ಘರ್ಷಣೆ.
ಗ 4: ನೋವುಗಳ ಮಾರ್ಮಿಕವಾದ ಮಾರಾಟ.
ಗ 5: ಹೃದಯದೊಳಗೆ ಸುಳಿವ ಪ್ರೀತಿಯ ಬಾಣಗಳು.
ಗ 6: ಪ್ರೀತಿ - ಜೀವನ ವ್ಯರ್ಥವಾಗಬಹುದೆಂಬ ನಾನಿಯ ಭಯ.
ಗ 7: ನಿಜವಾದ ಪ್ರೀತಿಯ ಚಿತ್ರಣ
ಗ 8: ಹೊಸ ಬಯಕೆಯ ಭಾವ ಮಿಡಿತ
ಗ 9: ರಾಮರಾಜ್ಯದ ರಾಕ್ಷಸ ರೂಪ
ಗ 10: ಸಖಿಗಾಗಿ ಹಾತೊರೆಯುವ ಒಂಟಿತನದ ಭಾವ
ಗ 11: ಶಾಶ್ವತ ಪ್ರೀತಿಯ ಬಯಕೆ
ಗ 12: ಪ್ರೀತಿಯ ನಶೆಯ ಮರೆಸುವಿಕೆ
ಗ 13 : ನಾನಿ ಕಟ್ಟಿದ ಪ್ರೀತಿಯ ಅರಮನೆ
ಗ 14: ಸಖಿಯೊಂದಿಗಿನ ನಿವೇದನೆ
ಗ 15: ಪ್ರೀತಿಗೆ  ಒದಗಿದ ಅಡೆತಡೆಗಳು
ಗ 16: ಸೋಲಿನಲ್ಲೂ ಗೆಲುವನ್ನು ಬಯಸುವ ಬಗೆ
ಗ 17: ಮುಂದೆ ಸಾಗಿದವಗೆ ಹಿಂದೆ ಎಳೆಯಬೇಡ ಎಂಬ ಭಾವ
ಗ 18: ಬಿರುಕಾದ ಪ್ರೀತಿ
ಗ 19: ನಾನಿ ಅರಿತ ಜಗದ ಕಲ್ಪನೆ
ಗ 20: ಪ್ರೀತಿಯ ಸ್ಪರ್ಶಕ್ಕಾಗಿ ಹಾತೊರೆಯುವುದು.
ಗ 21: ಬದುಕಿನ ಕರಾಳ ಚಿತ್ರಣ
ಗ 22: ನೈಜ ಪ್ರೀತಿಯ ಬಯಕೆ
ಗ 23: ಶ್ರಮ ಜೀವನದೊಳಗೊಂದು ಆಶಾಕಿರಣ
ಗ 24 : ನಾನಿ ಹೃದಯದ ಹೂ
ಗ 25: ಬಡವನ ಬವಣೆ
ಗ 26 : ಕೈ ಗೆಟುಕದ ಪ್ರೀತಿಯ ಹಂಬಲ
ಗ 27 : ತೊರೆದು ಹೋದ ಪ್ರೀತಿಯ ನೆನಪು
ಗ 28: ಹಂಬಲಿಸುವ ಪ್ರೀತಿ
ಗ 29: ಆಧುನಿಕ ಬದುಕಿನ ಕರಾಳತೆ
ಗ 30: ತಿರಸ್ಕಾರದ ಪ್ರೀತಿಯಿಂದೆದ್ದ ರೋಷ
ಗ 31 :ಜ್ಞಾನದ ಹೊಳೆ ಹರಿಯುವ ಸಮಯ
ಗ 32 : ಪ್ರೀತಿಯ ತಡೆಗೋಡೆಯೊಳಗೊಂದು ಧರ್ಮ
ಗ 33 : ಪ್ರೀತಿಯ ಗಾಯ
ಗ 34 : ಚಿಗುರಿದ ಪ್ರೀತಿ
ಗ 35 : ನಾನಿಯು ಆಸರೆಗಾಗಿ ಹಾತೊರೆಯುವ ಸಮಯ
ಗ 36: ರಕ್ಷೆಗಾಗಿ ಹಂಬಲ
ಗ 37 : ನಾನಿಯ ಕವಿತೆಯ ವ್ಯಸನ
ಗ 38: ಕಂಡೂ ಕಣದಂತಿರುವ ಭಾವ(ಅಂತರಾತ್ಮದ ಪಿಶಾಚಿ)
ಗ 39 : ಪರಿವರ್ತನೆಯ ಮನ
ಗ 40: ಸರಳ ಭಾವದ ಬಯಕೆ
ಗ 41:ನಾನಿಯ ಶುದ್ಧ ಹೃದಯ
ಗ 42: ಬಡವನ ಬವಣೆ
ಗ 43 : ಅಸ್ತವ್ಯಸ್ತದೊಳಗೆ ಸುವ್ಯವಸ್ಥೆಯ ಹುಡುಕಾಟ
ಗ 44 : ತೊರೆದ ಹೃದಯಕ್ಕಾಗಿ ಪರಿತಪಿಸುವಿಕೆ
ಗ 45 : ನಾನಿಯ ಸ್ವಾಭಿಮಾನದ ಬದುಕು
ಗ 46: ನಾನಿಯ ಮುಂದಿನ ಜೀವನದ ಹುಡುಕಾಟ
ಗ 47 : ನಿಸ್ವಾರ್ಥ ಪ್ರಂತಿಗೆ ದ್ರೋಹ
ಗ 48 : ನಡುನೀರಿನಲ್ಲಿ ಬಿಟ್ಟ ಭಾವ
ಗ 49: ಕಲ್ಪನೆಯೊಳಗಿನ ಪ್ರೀತಿಯಲಿ ಅಭಯದ ಹಂಬಲ
ಗ 50: ಪ್ರೀತಿಯ ಅಮಲು
ಗ 51 : ನಾನಿ ಪ್ರೀತಿ ಬಯಸಿದ ಬಗೆ
ಗ 52 : ಸ್ಥಿತ ಪ್ರಜ್ಞೆಯಿಂದ ಹಿತ ಪ್ರೇಮದ ಬಯಕೆ
ಗ 53 : ನಾನಿಯನು ಸೆಳೆದ ಬುದ್ಧ
ಗ 54: ಪ್ರೀತಿಯ ಮಾರುಕಟ್ಟೆ
ಗ 55 : ಭರವಸೆಯ ಕಿರಣ
ಗ 56 : ಕಾನನದ ವೃಕ್ಷದಡಿ ನಾನಿಯ ಏಕಾಂತತೆ
ಗ 57 : ನಾನಿಯ ಮೈಮನದ ತುಂಬೆಲ್ಲಾ ತುಂಬಿಕೊಂಡಿರುವ ಪ್ರೀತಿ
ಗ 58: ಅಳಿದ ಪ್ರೀತಿಯಲಿ ಚಿಗುರ ಬಯಕೆ
ಗ 59 : ಪ್ರೀತಿಯ ಕರಾಳ ದರ್ಶನ
ಗ 60: ಅಪ್ಪನ ಅಂತರಂಗದ ದರ್ಶನ
         ಇಲ್ಲಿನ ಹೆಚ್ಚಿನ ಗಜಲ್ಗಳು ಶೃಂಗಾರ ಭರಿತ ಗಜಲ್ಗಳಾಗಿವೆ. ಓದುಗರನ್ನು ಶೃಂಗಾರ ಲೋಕಕ್ಕೆ ನಡುನಡುವೆ ಕೊಂಡೊಯ್ಯುತ್ತವೆ. ಪ್ರತಿಯೊಬ್ಬರೂ ಓದಬಹುದಾದ ಗಜಲ್. ನಾನಿಯ ಅಂತರಂಗದ ಧ್ಯಾನ ಪ್ರತಿಯೊಬ್ಬರೂ ಓದುವಂತಾಗಲಿ ಎಂದು ಆಶಿಸುತ್ತೇನೆ.

- ಸುನೀತರವಿ 
ನೆಲೆಗದ್ದೆ, ಮಕ್ಕಿಮನೆ
ಕನ್ನಡ ಶಿಕ್ಷಕರು,
ಮೊರಾರ್ಜಿ ದೇಸಾಯಿ ವಸತಿಶಾಲೆ , ಹರಂದೂರು, ಕೊಪ್ಪ.


ಪರಿಸರಕ್ಕೆ ನಿಮ್ಮ ಕೊಡುಗೆ ಏನಿದೆ? (ಲೇಖನ)- ದುರ್ಗೆಶ್.

ಪರಿಸರಕ್ಕೆ ನಿಮ್ಮ ಕೊಡುಗೆ ಏನಿದೆ? ಈ ವಿಷಯವು ಕುತೂಹಲ ಮೂಡಿಸುತ್ತದೆ. ಪರಿಸರಕ್ಕೆ ನಮ್ಮ ಕೊಡುಗೆ ಏನಿದೆ ಎಂದು ಯೋಚಿಸಿದರೆ ಒಂದು ಕಾಳು ಸಾಸಿವೆಯಷ್ಟು ಸಹಾ ಕೊಡುಗೆ ಏನು ಏನು ಇಲ್ಲ ಎಂದು ಸ್ಪಷ್ಟವಾಗುತ್ತದೆ. ಜೂನ್ ಐದನೇ ತಾರೀಕು ಬಂದರೆ *ಪರಿಸರ ದಿನದ ಶುಭಾಶಯಗಳು* ಎಂದು ಹೇಳುತ್ತಾ *ಒಂದು ಗಿಡ ನೆಟ್ಟು ಫೊಟೊ ನಾ ಸ್ಟೇಟಸ್ ಹಾಕಿ , ಮರು ದಿನ ಅದನ್ನು ಮರೆತುಬಿಟ್ಟು ಸುಮ್ಮನಾಗುತ್ತಿವಿ.*  ಆದರೆ ಪರಿಸರಕ್ಕೆ ನಾವು ಇದುನ್ನೆನಾ ಕೊಡುಗೆ ನೀಡುತ್ತಿರೊದು ಎಂಬುದು ನನ್ನ ಪ್ರಶ್ನೆ? ಪ್ರತಿ ದಿನ ನಮಗೆ ತಿಳಿಯದಂತೆ ಬೆಳಗ್ಗಿನಿಂದ ರಾತ್ರಿಯ ತನಕ ಪ್ಲಾಸ್ಟಿಕ್ ಅನ್ನು ಬಳಸುತ್ತಲೇ ಇರುತ್ತಿವಿ ಉದಾಹರಣೆಗೆ:- ಚಪ್ಪಲಿ,ಬ್ರೆಷ್, ಬೆಲ್ಟು, ಬ್ಯಾಗ್, ಜಿಲೇಸ್ಟಿಕ್ ಬಟ್ಟೆ, ಮೊಬೈಲ್ ಕ್ಯಾಪ್, ಬಸ್ ಸೀಟು, ತರಕಾರಿ ಇತ್ಯಾದಿಗಳಿಗೆ ಪ್ಲಾಸ್ಟಿಕ್ ಕವರ್ ಇನ್ನು ಹಲವಾರು ರೀತಿಯಲ್ಲಿ ನಮಗೆ ತಿಳಿಯದೆ ಬಳಸುತ್ತಲೇ ಇರುತ್ತಿವಿ. ಆದರೂ ನಾವು ಒಂದ್ ಗಿಡ ನೆಟ್ಟು ಫೊಟೊ ಹಾಕಿ ಪರಿಸರ ದಿನದ ಶುಭಾಶಯಗಳು ಎಂದು ಹೇಳುತ್ತೇವೆ.

ನಾವು ಪ್ರತಿದಿನ ಬಳಸುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯದೇ ಸಾವಿರಾರು ವರ್ಷಗಳು ತಟಸ್ಥ ರೀತಿಯಲ್ಲಿ ಉಳಿದುಬಿಡುತ್ತದೆ. ಒಬ್ಬರು ವ್ಯಕ್ತಿ ಮಾಡಿರುವ ಸತ್ಯ ಶೋಧನೆಯಲ್ಲಿ ಕಂಡು ಬಂದಿದೆ. ಮುಟ್ಟಿನ  ಸಮಯದಲ್ಲಿ ಬಳಸುವ ಸ್ಯಾನಿಟರಿ ನ್ಯಪ್ಕಿನ್ ಪ್ಯಾಡ್ ಗಳು ಒಂದು ವರ್ಷದಲ್ಲಿ ಹನ್ನೆರಡು ಬಿಲಿಯನ್ ಅಷ್ಟು ಪ್ಯಾಡ್ ಗಳು ಭೂಮಿಗೆ ಸೇರುತ್ತಿದೆ ಇದು ಭೂಮಿಯಲ್ಲಿ ಕೊಳೆಯುವುದಿಲ್ಲ. ಇದರಿಂದ ಭೂ ಮಾಲಿನ್ಯ ವಾಗುತ್ತದೆ. ಇನ್ನು ಪ್ರತಿನಿತ್ಯ ಚಿಕ್ಕ ಹಾಗು ದೊಡ್ಡ ಮಾರುಕಟ್ಟೆಯಲ್ಲಿ ಅಧಿಕವಾಗಿ ಪ್ಲಾಸ್ಟಿಕ್ ಕವರನ್ನು ಬಳಸುತಿದ್ದಾರೆ. ವಾಹನದ ಹೋಗೆ, ಕಾರ್ಖಾನೆ ಹೋಗೆ, ಕಲುಷಿತ ನೀರು ಇತ್ಯಾದಿಗಳು ನಮ್ಮ ಪರಿಸರವನ್ನು ಹಾಳು ಮಾಡಿ, ನಮ್ಮ ದೇಹಕ್ಕೆ ನಾನಾ ರೀತಿಯ ಕಾಯಿಲೆಗಳು ಬಂದು ನೂರು ವರ್ಷ ಬದುಕುವ ವ್ಯಕ್ತಿ ಐವತ್ತು ವರ್ಷಕ್ಕೆ ಸಾವನ್ನಪ್ಪುತಿದ್ದಾರೆ. ಇದನ್ನು ನಾವು ಇನ್ನು ಮುಂದೆ ಆದರೂ ಸರಿ ಪದಿಸಿಕೊಳ್ಳಬೇಕಿದೆ.

     ನಾನು ಪ್ಲಾಸ್ಟಿಕ್ ಬಳಸದೇ ಇರಲು ಸಾಧ್ಯವೇ ಇಲ್ಲ, ಆದರೆ ಯಾವ ಯಾವ ರೀತಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡಲು ಸಾಧ್ಯ? ಎನ್ನುವವರಿಗೆ ಇದು ಚಿಕ್ಕ ಉತ್ತರ. 

ನಾವು ಪರಿಸರವನ್ನು ಉಳಿಸಬೇಕು ಎಂದರೆ ಪರಿಸರವಾದಿ ಆಗಲೇ ಬೇಕು ಎಂದೇನಿಲ್ಲ. ಪ್ರತಿದಿನ ಬಳಸುವ ಪ್ಲಾಸ್ಟಿಕ್ ಕವರ್ ಬದಲು ಬಟ್ಟೆ ಬ್ಯಾಗ್ ಗಳನ್ನು ಬಳಸೋಣ , ಅಂಗಡಿಗೆ ಹೋಗುವಾಗ ನಾವೇ ಒಂದು ಬ್ಯಾಗ್ ತೆಗೆದುಕೊಂಡು ಹೋಗೋಣ. ನನ್ನ ಕೊಡುಗೆ:- ನಾನು ಸುಮಾರು ಆರೇಳು ತಿಂಗಳಿನಿಂದ ಅಂಗಡಿಗೆ ಹೋಗುವಗ ಮನೆಯಿಂದಲೇ ಕವರ್ ಅನ್ನು ತೆಗೆದುಕೊಂಡೆ ಹೋಗುವುದು, ಅಂಗಡಿಯಲ್ಲಿ ಕಾಳುಗಳಿಗೆ ಬಿಟ್ಟು ಬೇರೆಯಾವುದಕ್ಕು ಕವರ್ ಅನ್ನು ಪಡೆಯುವುದಿಲ್ಲ ಇದು ನನ್ನ ಕೊಡುಗೆ. ಹೀಗೆ ಹಲವಾರು ರೀತಿಯಲ್ಲಿ ಪರಿಸರಕ್ಕೆ ಚಿಕ್ಕದಾಗಿ ಕೊಡುಗೆ ನೀಡಬಹುದು.

              - ದುರ್ಗೆಶ್.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...