ಶನಿವಾರ, ಮೇ 27, 2023

ಅಂಗಾಂಗ ದಾನ (ಲೇಖನ) - ಶ್ರೀಮತಿ ಕಲ್ಪನಾ ಡಿ.ಎನ್.

ಅಂಗಾಂಗ ದಾನಗಳಲ್ಲಿ ವಿಶಿಷ್ಟ ದಾನವಾಗಿದೆ .ಸುಮಾರು 200 ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಲಕ್ಷಾಂತರ ಮಂದಿಗೆ ಮೂತ್ರಪಿಂಡ, ಯಕೃತ್ ,ಹೃದಯ, ಪಿತ್ತಜನಕಾಂಗ ಮತ್ತು   ಶ್ವಾಸಕೋಶಗಳ ಅಗತ್ಯವಿದೆ. ಭಾರತದಲ್ಲಿ ಬಹಳಷ್ಟು ಅಂಗಾಂಗಗಳು ಲಭ್ಯವಾಗುವ ಅವಕಾಶ ಇದ್ದರೂ ದಾನಿಗಳ ಕೊರತೆಯಿಂದ ಸಾಧ್ಯವಾಗುತ್ತಿಲ್ಲ.
ಹೀಗಾಗಿ ಅಂಗಾಂಗ ದಾನಿಗಳಿಂದ ಲಕ್ಷಾಂತರ ಮಂದಿಯ ಜೀವ ನಷ್ಟವಾಗುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯು ಅಂಗಾಂಗ ದಾನ ನೋಂದಣಿ ಮಾಡಿಸುವುದರಿಂದ ಮರಣದ ನಂತರವೂ ನಾವು ಜೀವಂತವಾಗಿರುತ್ತೇವೆ.

ಅಂಗಾಂಗ ದಾನಗಳಲ್ಲಿ ಎರಡು ವಿಧಗಳಿವೆ.. 

1.ಜೀವಂತ ವ್ಯಕ್ತಿ ಮಾಡುವ ದಾನ ವ್ಯಕ್ತಿಯ ದೇಹದಲ್ಲಿ ಮರು ಸೃಷ್ಟಿಯಾಗುವ ಅಂಗಾಂಗಗಳನ್ನು ಜೀವಕೋಶಗಳನ್ನು ದ್ರವ್ಯಗಳನ್ನು ದಾನ ಮಾಡುವುದು..
ಉದಾ.. ರಕ್ತದಾನ ,ಚರ್ಮದಾನ ಅಸ್ತಿಮಜ್ಜೆದಾನ, ಕಿಡ್ನಿ ಶ್ವಾಸಕೋಶದ ಭಾಗ ಯಕೃತ್,pancreas ಇತ್ಯಾದಿ..

2. ಎರಡನೆಯ ದಾನ ಮೆದುಳು ನಿಷ್ಕ್ರಿಯಗೊಂಡ ನಂತರ ಅಂಗಾಂಗವನ್ನು ಬೇರೊಬ್ಬ ವ್ಯಕ್ತಿಗೆ ನೀಡುವುದು ಅಥವಾ ಜೋಡಿಸುವುದು ..
ಉದಾ... ಕಣ್ಣುಗಳು ಚರ್ಮ ಮತ್ತು ಒಳಪದರಗಳು,ಹೃದಯ, ಶ್ವಾಸಕೋಶ, ಪಿತ್ತಜನಕಾಂಗ. ಸಣ್ಣ ಕರುಳು, ರಕ್ತನಾಳಗಳು, ಮೇದೋಜೀರಕಾಂಗ, ಕಾರ್ನಿಯ, ಮೂಳೆಗಳು ,ಹೃದಯ ಕವಾಟುಗಳು ಹೀಗೆ ಮೃತ ವ್ಯಕ್ತಿಯಿಂದ ಕನಿಷ್ಠ 8 ಜೀವಗಳನ್ನು ಉಳಿಸಬಹುದು. ಅಂಕಿ ಅಂಶಗಳ ಪ್ರಕಾರ ನಿಮಿಷಕ್ಕೊಬ್ಬರು ಸಾಯುತ್ತಾರೆ. ಪ್ರತಿಯೊಬ್ಬರೂ ಅಂಗಾಂಗ ದಾನ ಮಾಡಿದ್ದಲ್ಲಿ ಎಂಟು ಜೀವಗಳು ಪುನರ್ಜನ್ಮ ಪಡೆಯುವ ಅವಕಾಶವಿದೆ ಯೋಚಿಸಿ...

ಬ್ರೈನ್ ಡೆತ್ ಎಂದರೇನು?
 ಅಪಘಾತದಿಂದ ತಲೆಗೆ ಏಟು ಬಿದ್ದು ಅಥವಾ ಇನ್ಯಾವುದೇ ಕಾರಣದಿಂದ ಮೆದುಳಿಗೆ ಘಾಸಿಯಾಗಿ ಸಂಪೂರ್ಣ ರಕ್ತ ಸಂಚಾರ ನಿಂತಿರುತ್ತದೆ. ಆಮ್ಲಜನಕದ ಪೂರೈಕೆ ಸ್ಥಗಿತವಾಗಿರುತ್ತದೆ .ಆದರೆ ಹೃದಯ, ಕಿಡ್ನಿ ,ಶ್ವಾಸಕೋಶ ತನ್ನ ಪಾಡಿಗೆ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. ವ್ಯಕ್ತಿಯನ್ನು I.C.U ವಿಭಾಗದಲ್ಲಿ ಇಟ್ಟು ಕೃತಕ ಉಸಿರಾಟದ ಮೂಲಕ ಆಮ್ಲಜನಕದ ಪೂರೈಕೆ ಮಾಡುತ್ತಿರುತ್ತಾರೆ . ಕೃತಿಕ ಉಸಿರಾಟದ ವ್ಯವಸ್ಥೆ ತೆಗೆದೊಡನೆ ವ್ಯಕ್ತಿಯು ಸಾವನ್ನಪ್ಪುತ್ತಾರೆ.ವೈದ್ಯರು ಬ್ರೈನ್ ಡೆತ್ ಎಂದು ಘೋಷಿಸಿದ ನಂತರ ಅಂಗಾಂಗಗಳನ್ನು ಮೃತ ವ್ಯಕ್ತಿಯ ವಾರಸುದಾರರು ದಾನ ಮಾಡಬಹುದು.
ಅಂಗಾಂಗ ದಾನ ಮಾಡಿದ್ದಲ್ಲಿ ಸತ್ತು ಹುತಾತ್ಮರಾಗಬಹುದು. ಮತ್ತೊಬ್ಬ ವ್ಯಕ್ತಿಯಲ್ಲಿ ಮರು ಜನ್ಮ ಪಡೆಯಬಹುದು. ಸಾವಿನ ನಂತರವೂ ಸಾರ್ಥಕತೆಯನ್ನು ಪಡೆಯಬಹುದು ಯೋಚಿಸಿ..
ದಾನಿಗಳಿಂದ ಪಡೆದ ಹೃದಯವನ್ನು 4 ಗಂಟೆಯ ಒಳಗೆ ,ಪಿತ್ತಜನಕಾಂಗ 12 ಗಂಟೆಯ ಒಳಗೆ, ಮೂತ್ರಪಿಂಡವನ್ನು 24 ಗಂಟೆಯ ಒಳಗೆ.. ಅಗತ್ಯವಿರುವ ರೋಗಿಗೆ ಜೋಡಿಸಲಾಗುತ್ತದೆ ಇದೇ ರೀತಿ ಚರ್ಮ, ಹೃದಯ ,ಕವಾಟು, ಮೂಳೆಗಳನ್ನು ದಾನ ಮಾಡಲಾಗುತ್ತದೆ. ಸತ್ತ ವ್ಯಕ್ತಿಯಿಂದ ನೇತ್ರದಾನವನ್ನು ನಾಲಕ್ಕರಿಂದ ಆರು ಗಂಟೆಯ ಒಳಗೆ ಬೇರೆಯವರಿಗೆ ಜೋಡಿಸಲಾಗುತ್ತದೆ. ಅಂಗಾಂಗ ದಾನವು ಕೂಡ ಪವಿತ್ರ ದಾನವಾಗಿದೆ..

ಯಾರು ದಾನ ಮಾಡಬಹುದು?
ಸಣ್ಣ ಮಗುವಿನಿಂದ ಹಿಡಿದು ವೃದ್ಧರೂ ಕೂಡ ಅಂಗಾಂಗ ದಾನ ಮಾಡಬಹುದು ಸ್ವೈಚ್ಛೇಯಿಂದ ಯಾರು ಬೇಕಾದರೂ ಅಂಗಾಂಗ ದಾನದ ಸಂಕಲ್ಪ ಮಾಡಬಹುದು. ನಮ್ಮ ದೇಶದಲ್ಲಿ ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಯಿಂದಾಗಿ ಅಂಗಾಂಗದಾನಿಗಳ ಸಂಖ್ಯೆ ಕಡಿಮೆ ಇದೆ. ಅಂಗಾಂಗ ದಾನಗಳನ್ನು ಮಾಡಿದರೆ ಮೋಕ್ಷ ಸಿಗುವುದಿಲ್ಲ ಎಂಬ ಮೂಡನಂಬಿಕೆ ಹಲವು ಜನರಲ್ಲಿ ಇದೆ. ನಾವು ಪೂಜಿಸುವ ಗಣಪತಿ ಕೂಡ ಅಂಗಾಂಗ ದಾನದಿಂದ ಆಗಿರುವುದನ್ನು  ನೋಡಬಹುದು.. ಅಂದಮೇಲೆ ಯಾರೂ ಬೇಕಾದರೂ ಅಂಗಾಂಗ ದಾನ ಮಾಡಬಹುದಲ್ಲವೇ..

ಪುರಾಣದಲ್ಲೂ ಕೂಡ ಈ ಬಗ್ಗೆ ಉಲ್ಲೇಖವಿದೆ..
 ವೃತ್ತಾಸುರ ರಾಕ್ಷಸನನ್ನು ಸಂಹರಿಸಲು ದದೀಚಿ ಮುನಿಗಳು ಪ್ರಾಣ ತ್ಯಾಗ ಮಾಡಿದ ನಂತರ ಅವರ ಅಸ್ತಿಯಿಂದ ತಯಾರಿಸಿದ ವಜ್ರಾಯುಧದಿಂದ ವೃತ್ತಾಸುರ ರಾಕ್ಷಸನನ್ನು ಸಂಹರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

80 ರಿಂದ 90 ದಶಕದಲ್ಲಿ ಅಂಗಾಂಗ ಮಾರಾಟ ದಂಧೆ ವ್ಯಾಪಕವಾಗಿ ಹುಟ್ಟಿಕೊಂಡಿತು

ಈ ನಿಟ್ಟಿನಲ್ಲಿ ಸಾರ್ವಜನಿಕ ಸಂಘ ಸಂಸ್ಥೆಗಳು ಸಾರ್ವಜನಿಕರನ್ನು ಉತ್ತೇಜಿಸುವ ಕಾರ್ಯ ಮಾಡಬೇಕು.
ಭಾರತದಲ್ಲಿ 1994ರಲ್ಲಿ ಅಂಗಾಂಗ ದಾನವನ್ನು ಸರ್ಕಾರ ಕಾನೂನು ಬದ್ಧಗೊಳಿಸಿದೆ.. 1967ರಲ್ಲಿ ಮೊದಲ ಬಾರಿ ಭಾರತದಲ್ಲಿ ಮೂತ್ರಪಿಂಡ ಕಸಿ ಮಾಡಲಾಯಿತು. 1994ರಲ್ಲಿ ಬದಲಿ ಹೃದಯವನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಜೋಡಿಸಲಾಯಿತು. 1995ರಲ್ಲಿ ಮದರಾಸಿನ ಆಸ್ಪತ್ರೆಯಲ್ಲಿ ಅಂಗಾಂಗ ಬದಲಿ ಜೋಡಣೆಯನ್ನು ಮಾಡಲಾಯಿತು.
50 ರಿಂದ 55 ಮಂದಿಗೆ ಹೃದಯದ ಅಗತ್ಯವಿದ್ದರೆ 10  ಅಥವಾ 20 ಮಂದಿ ಹೃದಯ ದಾನಿಗಳು ಸಿಗುತ್ತಿದ್ದಾರೆ. ಇದು ವಿಷಾದನೀಯ ಸಂಗತಿ. ಹಾಗಾಗಿ ಸ್ನೇಹಿತರೇ, ಅಪಘಾತದಲ್ಲಿ ಸಂಬಂಧಿಕರು ಮೃತಪಟ್ಟರೆ ಅಂಗಾಂಗ ದಾನ ,ದೇಹದಾನ, ನೇತ್ರದಾನ ಮಾಡಲು ಮನೆಯವರ ಮನವೊಲಿಸಿ, ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಅಥವಾ ಬೆಂಕಿಯಲ್ಲಿ ಸುಟ್ಟು ಹೋಗುವ ಅಂಗಾಂಗಗಳನ್ನು ದಾನ ಮಾಡಲು  ನಿಮ್ಮ ಹೆಸರನ್ನು ನೇತ್ರಧಾಮಗಳಲ್ಲಿ ಮೆಡಿಕಲ್ ಕಾಲೇಜುಗಳಲ್ಲಿ ನೀವು ನೇತ್ರದಾನ ,ದೇಹದಾನ ಮತ್ತು ಅಂಗಾಂಗ ದಾನಗಳ ನೋಂದಣಿ ಮಾಡಿಸಬಹುದು ಅಥವಾ on-line ಮೂಲಕ ಕೂಡ ನೋಂದಣಿ ಮಾಡಿಸಬಹುದು. ಈ ನಿಟ್ಟಿನಲ್ಲಿ ಸರ್ವರು ಅಂಗಾಂಗ ದಾನ ಮಾಡುತ್ತಾ ಹಲವಾರು ಜನರ ಜೀವವನ್ನು ಉಳಿಸಬೇಕೆಂದು ನಮ್ಮ ಮನವಿ.

- ಶ್ರೀಮತಿ ಕಲ್ಪನಾ ಡಿ.ಎನ್.
ಉಪಾಧ್ಯಕ್ಷೆ, ರಾಷ್ಟ್ರೀಯ ದೇಹಾಂಗ ದಾನ ಜಾಗೃತಿ ಸಮಿತಿ.




ಬುಧವಾರ, ಮೇ 24, 2023

ಧಾರ್ಮಿಕ ರಂಗಭೂಮಿಯ ಪಿತಾಮಹ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು (ಲೇಖನ) - ಸಂಗಮೇಶ ಎನ್ ಜವಾದಿ.

ಕರುನಾಡಿನ ಪ್ರಗತಿಪರ ವಿಚಾರಧಾರೆಯ ಸಾಹಿತಿ, ಬರಹಗಾರರು, ವೈಚಾರಿಕ ಚಿಂತಕರು, ಅನುಭಾವಿಗಳು,
ನೇರ ನುಡಿಯ ಶ್ರೇಷ್ಠ ವಿದ್ವಾಂಸರು, ಆಧ್ಯಾತ್ಮಿಕ ಸಾಧಕರು, ನಿಸ್ವಾರ್ಥ ಸೇವೆಯ ಶ್ರೀಗಳು ನಮ್ಮ ಸಾಣೇಹಳ್ಳಿ ಶ್ರೀಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರು.

ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳವರು ದಿನಾಂಕ- ೦4-೦9-1951 ರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದ ತಂದೆ ನಾಗಯ್ಯ ತಾಯಿ ಶಿವನಮ್ಮನ ದಂಪತಿಗಳ ಮಗನಾಗಿ ಜನಿಸಿದರು.
ಪ್ರಾಥಮಿಕ ಶಿಕ್ಷಣ ಹೆಡಿಯಾಲದಲ್ಲಿ, ಪ್ರೌಢ ಶಿಕ್ಷಣ ಸುಣಕಲ್ಲ ಬಿದರಿಯಲ್ಲಿ, ಸಿರಿಗೆರೆಯಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿ ಪಿಯುಸಿ ಯನ್ನು ಪಡೆದು. ಇದೇ ವಿಷಯದಲ್ಲಿ ಬಿಎ ಪದವಿಯನ್ನು ಚಿನ್ನದ ಪದಕ ಪಡೆಯುವುದರೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ನಂತರ 
1974 ರಲ್ಲಿ ತತ್ತ್ವಶಾಸ್ತ್ರ ವಿಷಯದಲ್ಲಿಯೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ  
ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿಯನ್ನು ಸಹ ಪೂರೈಸಿದ್ದಾರೆ.

ಹೀಗೆ ಶಾಲಾ ಕಾಲೇಜುಗಳ ಶಿಕ್ಷಣದ ಸಮಯದಲ್ಲಿ ರಂಗಭೂಮಿ ಕಡೆಗೆ ಶ್ರೀಗಳು ಹೆಚ್ಚು ಆಸಕ್ತಿ ಬೆಳೆಸಿಕೊಂಡಿದ್ದರು ಎಂಬುದನ್ನು ಕಾಣುತ್ತೇವೆ.
ರಂಗಭೂಮಿ ಕಡೆಗೆ ಹೆಚ್ಚು ಒಲವು ಇದರಿಂದ 
ಪೂಜ್ಯ ಪಂಡಿತಾರಾಧ್ಯ ಶ್ರೀಗಳು 1987 ರಲ್ಲಿ ಶಿವಕುಮಾರ ಕಲಾ ಸಂಘ ಸ್ಥಾಪನೆ ಮಾಡಿರುತ್ತಾರೆ. ದಶಕದ ನಂತರ 1997 ರಲ್ಲಿ ಒಳಗಡೆ ಶಿವಸಂಚಾರ (ರೆಪರ್ಟರಿ) ಆರಂಭಗೊಳಿಸಿರುತ್ತಾರೆ.
ತದನಂತರ ರಂಗಕರ್ಮಿ ಸಿ.ಜಿ ಕೃಷ್ಣಸ್ವಾಮಿ (ಸಿಜಿಕೆ) ಅವರ ಆಸಕ್ತಿಯಿಂದ 2003 ರಲ್ಲಿ 5000 ಆಸನಗಳ ಸಾಮರ್ಥ್ಯದ ಗ್ರೀಕ್ ಮಾದರಿಯ ಸುಸಜ್ಜಿತ ಬಯಲು ರಂಗಮಂದಿರ ನಿರ್ಮಾಣ ಮಾಡಿದ್ದು ಐತಿಹಾಸಿಕ ಶ್ಲಾಘನೀಯ ಸೇವಾ ಕೆಲಸ ಎಂದರೆ ತಪ್ಪಾಗಲಾರದು.
ಇನ್ನು ಶಿವಕುಮಾರ ಕಲಾಸಂಘ ಶಿವಸಂಚಾರದ ಮೂಲಕ ವರ್ಷಕ್ಕೆ ಮೂರು ನಾಟಕ ನೀಡುತ್ತಾ, ಇಲ್ಲಿಯವರೆಗೆ ಸುಮಾರು 150 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿ ಜನಮೆಚ್ಚುಗೆ ಪಡೆದಿದ್ದಾರೆ. ಈ ನಾಟಕಗಳಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಶರಣತತ್ವ ಮತ್ತು ಸಾಮಾಜಿಕ ಪರಿವರ್ತನೆ ಹೆಚ್ಚಿನ ರೀತಿಯಲ್ಲಿ ನೋಡಬಹುದು. ಸಮಾಜವನ್ನು ಸರಿ ದಾರಿಯಲ್ಲಿ ತರುವ ಪ್ರಯತ್ನ ಈ ನಾಟಕಗಳ ಮೂಲಕ  ಶ್ರೀಗಳು ಹಗಲಿರುಳು ಎನ್ನದೆ ಮಾಡುತ್ತಿದ್ದಾರೆ. ಹೀಗೆ ಶಿವಸಂಚಾರ ಪ್ರಾರಂಭವಾಗಿ.  ಸಂಚಾರದ ನಾಟಕಗಳು ಜನಮನ್ನಣೆಯನ್ನು ಪಡೆದುಕೊಂಡು ಯಶಸ್ವಿಯತ್ತ ದಾಪುಕಾಲು ಹಾಕುತ್ತಿವೆ.

ಅಲ್ಲದೇ ಶಿವಸಂಚಾರ ನಾಟಕ ಪ್ರದರ್ಶನಗಳು ಕರ್ನಾಟಕದಲ್ಲಿ ಮನೆಮಾತಾಗಿವೆ. ಜನರು ನಾಟಕಗಳನ್ನು ನೋಡಲು ಮುಗಿ ಬೀಳುತ್ತಿದ್ದಾರೆ.ಅನೇಕ ಮಠಾಧೀಶರು, ಚಿಂತಕರು, ಸಾಹಿತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ನಾಟಕಗಳನ್ನು ನೋಡಿ ಮೆಚ್ಚಿಗೆಯನ್ನು ವ್ಯಕ್ತಪಡಿಸಿದ್ದಾರೆ. ಹೀಗೆ ಜನಸಾಮಾನ್ಯರ ಭಾವನೆಗಳನ್ನು ಗೌರವಿಸಿದ ಈ ನಾಟಕಗಳು ಸರ್ವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ.ಆರಂಭದ ದಿನಗಳಲ್ಲಿ ನಾಟಕ ಪ್ರದರ್ಶನ ಮಾಡುವುದು ಸವಾಲಾಗಿತ್ತು. ಈ ಸವಾಲನ್ನು ಗಂಭೀರವಾಗಿ ತೆಗೆದುಕೊಂಡು ನಾಟಕ ಪ್ರದರ್ಶನಗಳು ಯಶಸ್ವಿಯಾಗುವಂತೆ ನೋಡಿಕೊಂಡರು ಎಂಬುದು ಈಗ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ರಂಗಭೂಮಿ ಬೆಳೆಸುವ ಜತೆಗೆ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿವಕುಮಾರ ಕಲಾಸಂಘ ಹನ್ನೆರಡು ವರ್ಷಗಳಿಂದ ಸತತವಾಗಿ ಶ್ರಮಿಸುತ್ತಿದೆ. 

ಬಸವಾದಿ ಶರಣರ ತತ್ವ ಪ್ರಚಾರ ಮತ್ತು ಸಾಮಾಜಿಕ ಸತ್ಕಾರ್ಯಗಳು ಮಾಡುವುದು  ಒಂದೇ ನಾಣ್ಯದ ಎರಡು ಮುಖಗಳೆಂದು  ಪರಮ ಪೂಜ್ಯ ಪಂಡಿತಾರಾಧ್ಯ ಶ್ರೀಗಳು ಭಾವಿಸುತ್ತಾರೆ. ಅಂತೆಯೇ ಸಮಾಜ ಸುಧಾರಣೆಗೆ ಹೆಚ್ಚು ಒತ್ತು ಕೊಟ್ಟು ಧರ್ಮದ ಕೈಂಕರ್ಯಗಳು ತಪ್ಪದೇ ಮಾಡಿಕೊಂಡು ಬರುತ್ತಿದ್ದಾರೆ. ಸತ್ಯದ ಸರಿದಾರಿಗೆ ಕೊಂಡೊಯ್ಯಲು  ಧರ್ಮ ಬೇಕು.ಅದೇ ರೀತಿ ಸಮಾಜದಲ್ಲಿ ಬೇರೂರಿರುವ ಹಲವು ಸಮಸ್ಯೆಗಳಿಗೆ ಕಡಿವಾಣ ಹಾಕಿವ ಮೂಲಕ ಅವುಗಳನ್ನು ಬಗೆಹರಿಸುವ ಕಾರ್ಯ ಸುಸೂತ್ರವಾಗಿ ಮಾಡಿದರೆ ಸೇವೆ ಆಗಬಹುದು ಎಂಬ ಅಚಲ ನಂಬಿಕೆಯಿಂದ ಆ ದಿಸೆಯಲ್ಲಿ ಶ್ರೀಗಳು ಹೆಜ್ಜೆ ಹಾಕುತ್ತಿದ್ದಾರೆ.

ಈ ಎರಡೂ ವಿಚಾರಗಳನ್ನು ಸಮಾನಾಂತರವಾಗಿ ತೆಗೆದುಕೊಂಡು ಹೋಗುತ್ತಿರುವ ಶ್ರೀಗಳು 25 ವರ್ಷಗಳಿಗೂ ಹೆಚ್ಚು ಕಾಲ ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆ ಸಾಕ್ಷಿಯಾಗಿದ್ದಾರೆ.  2007 ರಲ್ಲಿ ಭಾರತ ಸಂಚಾರಿ ನಾಟಕಗಳನ್ನು ಆರಂಭಿಸಿ 'ಶಿವದೇಶ ಸಂಚಾರ'ದ ಮೂಲಕ ಭಾರತಾದ್ಯಂತ ಪರ್ಯಟನೆ ಮಾಡಿ, 21 ರಾಜ್ಯಗಳಲ್ಲಿ 'ಮರಣವೇ ಮಹಾನವಮಿ', 'ಶರಣಸತಿ ಲಿಂಗಪತಿ', 'ಜಂಗಮದೆಡೆಗೆ' ಸೇರಿದಂತೆ ಶರಣ ತತ್ವ ಪ್ರತಿಪಾದಿಸುವ 10 ನಾಟಕಗಳನ್ನು ಹಿಂದಿ ಅವತರಣಿಕೆಯಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿದ್ದಾರೆ.ಹೀಗೆ ಎರಡು ದಶಕಗಳಿಂದ ನಡೆಯುತ್ತಿರುವ ಶಿವಸಂಚಾರ ನಾಟಕ ರಾಷ್ಟ್ರೀಯ ನಾಟಕೋತ್ಸವ ಯಶಸ್ವಿಯತ್ತ ಸಾಗುತ್ತದೆ. ಇಲ್ಲಿಯವರೆಗೂ ಸುಮಾರು 2000 ಕ್ಕಿಂತ ಹೆಚ್ಚು ನಾಟಕಗಳ ಪ್ರದರ್ಶನಗೊಂಡಿವೆ.ಸಾಣೇಹಳ್ಳಿ ಮಠದಲ್ಲಿ ನಾಟಕ ಪ್ರದರ್ಶನಗಳ ಜೊತೆಗೆ ರಂಗತರಬೇತಿ ನಡೆಯುತ್ತದೆ. ವರ್ಷಕ್ಕೆ ಹದಿನೈದು ವಿದ್ಯಾರ್ಥಿಗಳಂತೆ ಇನ್ನೂರೈವತ್ತಕ್ಕೂ ಹೆಚ್ಚು ನುರಿತ ಕಲಾವಿದರು ರಂಗಕರ್ಮಿಗಳು ಈ ಕಲಾಸಂಘದಿಂದ ಹೊರಹೊಮ್ಮಿದ್ದಾರೆ. ಹತ್ತಾರು ಕಲಾವಿದರು ಕಿರುತೆರೆ, ಹಿರಿತೆರೆಗಳಲ್ಲಿ ಹೆಸರು ಮಾಡಿದ್ದಾರೆ ಮತ್ತು ಸ್ವತಂತ್ರ ನಿರ್ದೇಶನ ಮಾಡುತ್ತಿದ್ದಾರೆ. ಇದು ಹೆಮ್ಮೆಯ ಪಡುವ ವಿಚಾರವಾಗಿದೆ.

ಸ್ವಾಮಿಗಳೆಂದರೆ ಮೂಗು ಮುರಿದು, ಅನುಮಾನದಿಂದ ನೋಡುವ ಕಾಲವಿದು.ಈ ಕಾಲದಲ್ಲೂ ಇದಕ್ಕೆ ಅಪವಾದವಾಗಿದ್ದಾರೆ ಪಂಡಿತಾರಾಧ್ಯ ಶ್ರೀಗಳು. ಶ್ರೀಗಳ ಪರಿಶ್ರಮ, ಜನಪರ ಕಾಳಜಿ, ವೈಚಾರಿಕ ಚಿಂತನೆ, ರಂಗಾಸಕ್ತಿ, ಸಾಹಿತ್ಯಕ ಅಭಿರುಚಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಒಲವು, ಪ್ರಗತಿಪರ ವಿಚಾರಧಾರೆಗಳ ಮೂಲಕ ಸರ್ವ ಜನಾಂಗದವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದಾರೆ. ಜನಸಾಮಾನ್ಯರು ಶ್ರೀಗಳ ಬಗ್ಗೆ ಗೌರವ, ಕಾಳಜಿ ತೋರುತ್ತಿದ್ದಾರೆ. ಇಂದು ಸಾಣೇಹಳ್ಳಿ ನಾಡಿನ ಎಲ್ಲ ವರ್ಗದ ಜನರ ಗಮನ ಸೆಳೆಯಲು ಕಾರಣವಾದದ್ದು ಶ್ರೀಗಳವರ ರಂಗಭೂಮಿಯ ಚಟುವಟಿಕೆಗಳೇ ಪ್ರಮುಖ ಕಾರಣವೆಂದರೆ ತಪ್ಪಾಗಲಾರದು. ಹೀಗಾಗಿ ಶ್ರೀಗಳು  ಧಾರ್ಮಿಕ ರಂಗಭೂಮಿಯ ಪಿತಾಮಹರೆಂದೇ ಪ್ರಖ್ಯಾತರಾಗಿದ್ದಾರೆ.


ಶ್ರೀಗಳ ಸಾಹಿತ್ಯ/ಚಿಂತನೆ : ಕವಿತೆ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ ಸೇರಿದಂತೆ ಶರಣ ಸಾಹಿತ್ಯ, ಪ್ರಕೃತಿ, ಅಧ್ಯಾತ್ಮಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವ ಶ್ರೀಗಳು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ 
ಪ್ರಮುಖ ಕೃತಿಗಳು ಹೀಗಿವೆ : ಜೀವನ ದರ್ಶನ (1985),ಕೈದೀವಿಗೆ (1988),ಬದುಕು (1990),ಹುಟ್ಟು ಸಾವುಗಳ ಮಧ್ಯೆ (1990),ಸಮಾಧಿಯ ಮೇಲೆ (1991),ಸಮರಸ (1992),ಸಮಕಾಲೀನತೆ ಮತ್ತು ವಚನ ಸಾಹಿತ್ಯ (1992),ಮರುಭೂಮಿ (1993),ಕಾಯಕ ದಾಸೋಹ (1994),ಹುತ್ತ ಮತ್ತು ಹಾವು (1994),ಆದರ್ಶ ವಾಸ್ತವ (1995),ಜಾಗೃತ ವಾಣಿ (1996),ಪ್ರಳಯ! ಮುಂದೇನು? (1998),ಬದುಕು ಹೀಗೇಕೆ? (1999),ಜ್ಞಾನ ಪುಷ್ಪ (1999),ಸುಖ ಎಲ್ಲಿದೆ? (2000),ಧರ್ಮಗುರು (2000),ಕನ್ನಡಿ (2001),ಸುಜ್ಞಾನ (2001),ಮನಸು ಮಲ್ಲಿಗೆಯಾಗಲಿ (2002),ಅಂತರಾಳ (2005),ಶಿವಬೆಳಗು (2005),ಬಾಳ ಬುತ್ತಿ (2006),ಜೇಡರ ದಾಸೀಮಯ್ಯ (2007),ಮಾದರ ಚೆನ್ನಯ್ಯ (2008),ರೊಟ್ಟಿ ಬುತ್ತಿ (2008),ವಚನ ವೈಭವ (2009),ಬಸವಧರ್ಮ (2009),ಪ್ರಸ್ತುತ (2010),ವ್ಯಕ್ತಿತ್ವ (2011),ಕಲ್ಯಾಣ (2012),ದಿಟ್ಟ ಹೆಜ್ಜೆಯ ಧೀರ ಪ್ರಭು (2012),ಮನದನಿ (2012),ಸಂಪತ್ತು (2013),ನೋಯದವರೆತ್ತ ಬಲ್ಲರು? (2014),ಶರಣ ಸಂಕುಲ (2015),ಆತ್ಮ ವಿಕಾಸದ ಮಾರ್ಗ (2015),ನಡೆನುಡಿ ಸಿದ್ಧಾಂತ (2017),ಲಿಂಗಾಯತ ಧರ್ಮ (2017),ವಚನಕಾರರ ಬದ್ಧತೆ (2018),ಮನದ ಮಾತು (2018),ಧರ್ಮಜ್ಯೋತಿ (2018),ಸಮಸಮಾಜದ ಕನಸು (2019),ಮತ್ತೆ ಕಲ್ಯಾಣದೆಡೆಗೆ (2019),ಶರಣಸಂದೇಶ. (2020) ಸೇರಿದಂತೆ ಇತ್ಯಾದಿ. ಇವುಗಳಲ್ಲದೆ 
ನಾಟಕ ಕೃತಿಗಳು ಹೀಗಿವೆ : ಅಂತರಂಗ-ಬಹಿರಂಗ (2000),ಸ್ವಾಮಿ ವಿವೇಕಾನಂದ (2002),ಜಂಗಮದೆಡೆಗೆ (2003),ಅಂಕುಶ (2008),ಮೋಳಿಗೆ ಮಾರಯ್ಯ (2017),ಗುರುಮಾತೆ ಅಕ್ಕ ನಾಗಲಾಂಬಿಕೆ (2019) ಮತ್ತು 1997 ರಲ್ಲಿ  ಪ್ರವಾಸ ಕಥನ 
ಶಿವಾನುಭವ ಪ್ರವಾಸ ಕೃತಿ ಬಿಡುಗಡೆಗೊಂಡಿದೆ.ಅದೇ ರೀತಿ
ಒಲಿದಂತೆ ಹಾಡುವೆ (1996), ಅಮೃತ ಬಿಂದು (2012) ವಚನಗಳ ಕೃತಿಗಳು ಸಹ ನಾಡಿನ ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಾರೆ.

ಶ್ರೀಗಳಿಗೆ ಸಂದ ಪ್ರಮುಖ ಪ್ರಶಸ್ತಿಗಳು ಹೀಗಿವೆ : ಪಾಲ್ ಹ್ಯಾರಿಸ್ ಪ್ರಶಸ್ತಿ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ , ಕರ್ನಾಟಕ ನಾಟಕ ಅಕಾಡೆಮಿ ಗೌರವ ಫೆಲೋಶಿಪ್,
ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ,
ಜೋಳದರಾಶಿ ದೊಡ್ಡನಗೌಡ ಪ್ರಶಸ್ತಿ ಸೇರಿದಂತೆ ನೂರಾರು ಗೌರವ ಸನ್ಮಾನ, ಪ್ರಶಸ್ತಿಗಳು ಪಡೆದಿದ್ದಾರೆ.

ಕಚುಸಾಪ ಸರ್ವಾಧ್ಯಕ್ಷರಾಗಿ ಪಂಡಿತಾರಾಧ್ಯ ಶ್ರೀಗಳು ಆಯ್ಕೆ: 
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಘಟಕದಿಂದ ಪ್ರತಿ ವರ್ಷ ಚುಟುಕು ಸಾಹಿತ್ಯ ಸಮ್ಮೇಳನಗಳು ರಾಜ್ಯದ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗುತ್ತಿದೆ.ಅದೇ ನಿಟ್ಟಿನಲ್ಲಿ ಈದಿಗ
11ನೆಯ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಕಚುಸಾಪ  ಹಾಗೂ ಹಿರೇಮಠ ಸಂಸ್ಥಾನ ಭಾಲ್ಕಿ ಸಂಪೂರ್ಣವಾಗಿ ಸಜ್ಜಾಗಿದೆ.ಈ ಸಮ್ಮೇಳನಕ್ಕೆ ಕರುನಾಡಿನ ಹೆಮ್ಮೆಯ ವೈಚಾರಿಕ ಚಿಂತಕರು, ಸಾಹಿತಿಗಳು, ಬರಹಗಾರರು ಆಗಿರುವ ನಮ್ಮೆಲ್ಲರ ಪೂಜ್ಯನೀಯ ಡಾಕ್ಟರ್ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಸರ್ವಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದು ಹೆಮ್ಮೆಯ ಪಡುವ ಸಂಗತಿಯಾಗಿದೆ.
ದಿನಾಂಕ 25-05-2023 ರಂದು ಬೀದರ ಜಿಲ್ಲೆಯ ಭಾಲ್ಕಿ ಹಿರೇಮಠ ಸಂಸ್ಥಾನ ಚನ್ನಬಸವಾಶ್ರಮದ ಕುಂಬಾರ ಗುಂಡಯ್ಯಾ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಅಷ್ಟೇ ಅರ್ಥಪೂರ್ಣವಾಗಿ, ಸಾಹಿತ್ಯಿಕ ನೆಲೆಗಟ್ಟಿನಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.ತರುವಾಯ ಶ್ರೀಗಳ 
ದಿವ್ಯ ಘನ ಅಧ್ಯಕ್ಷತೆಯಲ್ಲಿ ಸಮ್ಮೇಳನ ಸಾಗಿ ಬರಲಿದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಚುಟುಕು ಭೊಷಣ ಪ್ರಶಸ್ತಿಯನ್ನು ಪರಮ ಪೂಜ್ಯ ಡಾ.ಪಂಡಿತರಾದ್ಯ ಶಿವಾಚಾರ್ಯಮಹಾಸ್ವಾಮಿಗಳವರಿಗೆ ಪ್ರಧಾನ ಮಾಡಲಾಗುತ್ತಿದೆ.

- ಸಂಗಮೇಶ ಎನ್ ಜವಾದಿ.
ಸಾಹಿತಿ,ಪತ್ರಕರ್ತರು, ಸಾಮಾಜಿಕ ಸೇವಕರು.
ಜಿಲ್ಲಾಧ್ಯಕ್ಷರು, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ.
9663809340.

ಸೋಮವಾರ, ಮೇ 22, 2023

ಜನನಾಯಕ (ಕವಿತೆ) - ದಯಾನಂದ ಪಾಟೀಲ.

ಚುನಾವಣೆಯಲ್ಲಿ ಬಂಡವಾಳ ಹಾಕಿ ಅಧಿಕಾರಕ್ಕೆ ಬರುವ ನಾಯಕರು ಇವರು ಜನನಾಯಕರು,

ರಸ್ತೆ ಇಲ್ಲ ನೀರು ಇಲ್ಲ ಶಾಲೆ ಇಲ್ಲ ಆಸ್ಪತ್ರೆ ಇಲ್ಲ,
ಕೇಳಬೇಡ ಕೇಳಬೇಡ ಇವರು ನಾಯಕರು ಜನ ನಾಯಕರು.

ಜಾತಿ ಜಾತಿಗಳ ನಡುವೆ ಜಗಳ ಹಚ್ಚಿ ಅಧಿಕಾರ ಪಡೆಯುವ ನಾಯಕರು ಇವರು ಜನನಾಯಕರು,

ಕೋಟಿಗಟ್ಟಲೆ ಹಣ ನುಂಗಿ ದಿನ ಭತ್ಯೆ ಹೆಚ್ಚಿಸುವ ಇವರು ನಾಯಕರು ಜನ ನಾಯಕರು.

ಇರಲು ಮನೆ ಇಲ್ಲ ದುಡಿಯಲು ಕೆಲಸವಿಲ್ಲ ಉಪವಾಸವೇ ವನವಾಸ ಆದರೆ ಇವರು ಹಣದಲ್ಲಿ ಮಲಗುವ ನಾಯಕರು ಜನನಾಯಕರು.

ತಪ್ಪು ಮಾಡಿದರೆ
ಶಿಕ್ಷೆ ಇಲ್ಲ
ರೇಪ್ ಮಾಡಿದ ರೂ ಶಿಕ್ಷೆ ಇಲ್ಲ,
ಕೊಲೆ ಮಾಡಿದರೂ ಶಿಕ್ಷೆ ಇಲ್ಲ,,
ಇವರು ನಾಯಕರು ಇವರು ಜನನಾಯಕ ರು.

ಮತದಾರರ ಭಾವನೆಗೆ ಮಣ್ಣು ಹಾಕುವ ನಾಯಕರು ಇವರು ಜನ ನಾಯಕರು,
ಸರ್ಕಾರ ಯೋಜನೆ
ಮಾಡಿ ಲೂಟಿ ಮಾಡುವ ನಾಯಕರು ಇವ್ರು ಜನನಾಯಕರು.

ಆರಿಸಿಕೊಟ್ಟ ಪಕ್ಷಕ್ಕೆ ನಾಯಕರಿಗೆ ಮೋಸ ಮಾಡುವ ನಾಯಕರು ಇವರು ಜನ ನಾಯಕರು.


- ದಯಾನಂದ ಪಾಟೀಲ, ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ ಮಹಾರಾಷ್ಟ್ರ.


ಅವಳು (ಕವಿತೆ) - ವಿಸ್ಮಯ ಮೈಲಾರಿ.

ರೂಪದಲ್ಲಿ ಅಷ್ಟೇನೂ
ಸುಂದರಿಯಲ್ಲ
ಗುಣದಲ್ಲಿ ಇವಳಿಗಿಂತ
ಸುಂದರಿಯರಿಲ್ಲ

ಐಸ್ ಕ್ರೀಮ್ ಎಂದರೆ
ಬಾಯಿ ತೆರೆಯುವಳು
ಊಟವೆಂದರೆ ಸ್ವಲ್ಪ
ದೂರ ಸರಿಯುವಳು

ಕೆಲವೊಮ್ಮೆ ವಿನಾಃ
ಕಾರಣ ಅಳುವಳು
ಒಮ್ಮೊಮ್ಮೆ ಕಾರಣ
-ವಿದ್ದರೂ ನಗದವಳು

ಕಷ್ಟದಲ್ಲಿರುವಾಗ
ಸಹಾಯ ಮಾಡುವಳು
ಥ್ಯಾಂಕ್ಸ್ ಹೇಳಿದರೆ ನನ್ನ
ಬಳಿ ಜೇಬಿಲ್ಲ ಎನ್ನುವಳು

ಕವಿಯಾಗಬೇಕು ನಾ
ಇವಳನ್ನು ಹೊಗಳಲು
ಸಹೋದರನಾಗಬೇಕು
ಜೊತೆಯಲ್ಲಿದ್ದು ಕಾಲೆಳೆಯಲು...

        - ವಿಸ್ಮಯ ಮೈಲಾರಿ.

ಕಾಣದ ಮಾಯೆ (ಕವಿತೆ) - ಬಿ. ಎಂ. ಮಹಾಂತೇಶ.

ಹುಲುಜನ್ಮ ಹುಟ್ಟಿಸಿದ
ಈ ಕಾಣದ ಹುಚ್ಚು ಮಾಯೆ...
ಮೂಡಿಸಿದೆ ಆ ಜನ್ಮದ
ಮನದಲ್ಲಿ ಆತುರದ ಛಾಯೆ...

ಗುರುತು ಪರಿಚಯವಿಲ್ಲದವರ
ವಯ್ಯಾರವ ನೋಡುತ ಇಲ್ಲಿ...
ನಾವು ಬಂದಿರುವ ಉದ್ದೇಶವನ್ನು
ಮರೆತಿರುವೆವು ನಾವಿಲ್ಲಿ...

ಕ್ಷಣಿಕದ  ಸಂಬಂಧಗಳಿಗಿಲ್ಲಿ
ಸುಮ್ಮನೆ ಸಮಯದ ನೀರೇರೆಯುತ್ತಿದ್ದೇವೆ...
ನಿಜ ಸಂಬಂಧಗಳು ಸವೆಯುತ್ತಿವೆ
ಎಂಬುದ ಮರೆಯುತ್ತಿದ್ದೇವೆ...

ಈ ಜಾಲದಲಿ ಮಂಗನಂತೆ
ಅಲ್ಲಿಂದ ಇಲ್ಲಿಗೆ ಜಿಗಿಯುತ...
ನಮ್ಮ ಚಿತ್ತದ ಜೊತೆಗೆ
ಹೋಗಿದ್ದೇವೆ ಚಿಂತೆಯಲ್ಲಿ ಜಾರುತ..

ಈ ಮಾಯೆಯೂ ಈಗ ತಂಗಾಳಿಯಾಗಿ
ಆಗಿದೆ ನಮಗೆಲ್ಲ ಮಧುರ...
ಆದರೆ ಮುಂದೊಂದು ದಿನ
ಬಿರುಗಾಳಿಯಾಗಬಹುದು ಎಚ್ಚರ.. ಎಚ್ಚರ....

- ಬಿ. ಎಂ. ಮಹಾಂತೇಶ
SAVT ಕಾಲೇಜ್
ಕೂಡ್ಲಿಗಿ,
9731418615


ಕೋಪ (ಕವಿತೆ) - ಜಿ. ಟಿ. ಆರ್ ದುರ್ಗ, ಬಂಗಾರಪೇಟೆ.

ಮನುಷ್ಯನಿಗೆ ಬಹಳ ಕೋಪ 
ಅದೆಲ್ಲಿಂದ ಬರುವುದೊ
ಅದರ ಗುಟ್ಟೇನು ತಿಳಿಯದು
ತಡೆಯಲಾರದಷ್ಟು ಕೋಪ 

ಅಬ್ಬಬ್ಬಾ ಕೋಪ ನತ್ತಿಗೇರಿದರೆ
ತಡೆದು ಕೊಳ್ಳದೊಷ್ಟು ಕಡು ಕೋಪ
ಶಾಂತಿ ಇಲ್ಲದೆ ಉದ್ರೇಕಗೊಳ್ಳುತ್ತ
ತನಗ್ಯಾರು ಸಿಗುವರೋ ಅವರೊಂದಿಗೆ ಜಗಳ

ತಾಳ್ಮೆ ಇಲ್ಲದ ಮನಸ್ಸು 
ಚೆಂಚಲತೆಯಿಂದ ಯಾರನ್ನಾದರೂ
ಕೊಂದು ಬಿಡುವಷ್ಟು ಕೋಪ
ಸ್ವಲ್ಪವೂ ಯೋಚಿಸದೆ ಆತುರ

ತನ್ನ ಮನಸ್ಸು ಹಿಡಿತವಿಲ್ಲದೆ
ಎಲ್ಲರ ಮೇಲೆ ಎಗರಾಡುತ್ತಾ
ಚೀರಾಡುತ್ತಾ ತನ್ನೆಲ್ಲಾ ಒಳ್ಳೆ ಮನಸ್ಸು
ಹಾಳು ಮಾಡುವುದು ಈ ಕೋಪ

ತಾಳ್ಮೆಯಿಂದ ಎಲ್ಲರನ್ನು ಕಂಡರೆ
ಸ್ವರ್ಗದಂತ ಸುಖ ಸಿಗುವುದು
ಕೋಪದಿಂದ ಎಲ್ಲರನ್ನು ಕಂಡರೆ
ನರಕವೆ ಪ್ರಾಪ್ತಿಯಾಗುವುದು ಜೋಕೆ ಮನುಜ.
- ಜಿ. ಟಿ. ಆರ್ ದುರ್ಗ, ಬಂಗಾರಪೇಟೆ.


ಶಿಕ್ಷಣ ಮತ್ತು ಆರೋಗ್ಯ ಖಾಸಗಿಕರಣವಾದರೆ ಆಗುವ ದುಷ್ಪರಿಣಾಮಗಳು...! (ಲೇಖನ) - ಬಸವರಾಜ್ ಎಚ್. ಹೊಗರನಾಳ.

ಭಾರತದಲ್ಲಿ ಅನಾಧಿಕಾಲದಿಂದಲೂ ನಡೆದುಕೊಂಡು ಬದಿರುವ ಶಿಕ್ಷಣ ಎಂದರೆ ಅದು ಗುರುಕುಲ ಶಿಕ್ಷಣವಾಗಿದೆ. ಗುರುಕುಲ ಶಿಕ್ಷಣ ವ್ಯವಸ್ಥೆಯು ಜಗತ್ತಿನ ಅತ್ಯಂತ ಪುರಾತನ ಶಿಕ್ಷಣ ವ್ಯವಸ್ಥೆಯಾಗಿದೆ. ಆಗಿನ ಶಿಕ್ಷಣ ವ್ಯವಸ್ಥೆಗೂ ಇಂದಿನ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವನ್ನು ಇಂದಿನ ಶಿಕ್ಷಣ ವ್ಯವಸ್ಥೆಯು ತಂದಿದೆ. ಶಿಕ್ಷಣವೂ ವ್ಯಕ್ತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಜ್ಞಾನವುಳ್ಳ ನಾಗರಿಕರನ್ನಾಗಿ ಶಿಕ್ಷಣ ಮಾಡುತ್ತದೆ. ಶಿಕ್ಷಣವೂ ಜಗತ್ತನ್ನು ಬದಲಾಯಿಸುವ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಆಗಿನ ಗುರುಕುಲ ಶಿಕ್ಷಣವೂ ಇಂದು ಸರಕಾರಿ ಶಿಕ್ಷಣವಾಗಿ ಎಲ್ಲರಿಗೂ ಮಾರ್ಗಸೂಚಿಯಾಗಿ ಹೊರಹೋಮ್ಮಿದೆ ಇಂತಹಾ ವ್ಯವಸ್ಥೆಯಲ್ಲಿ ಭಾರತ ದೇಶದಲ್ಲಿ ಶಿಕ್ಷಣವು ಖಾಸಗಿಕಾರಣವಾದರೆ ದೇಶದ ಪರಿಸ್ಥಿತಿ ಏನಾಗಬಹುದು ಹಾಗೂ ಆಗಿನ ಅರೋಗ್ಯ ವ್ಯವಸ್ಥೆಯು ಆಯುರ್ವೇದ ಗಿಡಮೂಲಿಕೆಯಿಂದ ಕೊಡಿತ್ತು ಯಾವುದೇ ಕಾಯಿಲೆಯಾಗಲಿ ಅದು ಆಯರ್ವೇದದಿಂದ ನಿವಾರಣೆಯಗುತ್ತಿತ್ತು. ಆಗಿನ ಅರೋಗ್ಯವು ಇಂದು ಸರ್ಕಾರಿ ಆರೋಗ್ಯವಾಗಿ ಹೊರಬಂದಿದೆ. ಅರೋಗ್ಯವು ಹಾಗೂ ಶಿಕ್ಷಣವೂ ಖಾಸಗಿಕಾರಣ ಆದರೆ ದೇಶದಲ್ಲಿ ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದೆಂದು ಯೋಚಿಸೋಣ.

           ಹಿಂದಿನ ಕಾಲದಲ್ಲಿ ಯಾರು ಶಿಕ್ಷಣದ ಕಡೆ ಚಿಂತನೆ ಮಾಡುತ್ತಿರಲಿಲ್ಲ. ಈಗ ಶಿಕ್ಷಣವೇ ಎಲ್ಲರ ಬದುಕಿನ ರೂಪವಾಗಿದೆ. ಈಗಿನ ಯುಗದಲ್ಲಿ ಶಿಕ್ಷಣವೇ ಎಲ್ಲಕ್ಕಿಂತ ಮುಖ್ಯವಾದ ಅಂಶವಾಗಿದೆ. ಶಿಕ್ಷಣ ಎಂಬುವುದು ಹಲವಾರು ಹಂತದಲ್ಲಿಯೇ ವಿಂಗಡಗೊಂಡಿದೆ. ಶಿಕ್ಷಣದ ಮೂಲ ಸರ್ಕಾರಿ ಶಾಲೆಗಳ ಸರ್ಕಾರಿ ಶಿಕ್ಷಣ, ಹಾಗೂ ಇದು ಖಾಸಗಿಯಾದರೆ ದೇಶದ ಹಲವಾರು ಜನರ ಮೇಲೆ ದುಷ್ಪರಿಣಾಮ ಬೀಳಬಹುದು. ಶಿಕ್ಷಣ ಖಾಸಗಿಕರಣ ಮತ್ತು ವ್ಯಾಪಾರಿಕರಣ ಒಂದು ಬಹುದೊಡ್ಡ ಹಾನಿಕಾರಕ ಪರಿಣಾಮವೆಂದರೆ ಅದು ಶಿಕ್ಷಣ ಸಾರ್ವತ್ರಿಕರಣದ ಮಹತ್ವವನ್ನು ಕಡೆಗಣಿಸುತ್ತದೆ. ಖಾಸಗಿ ಶಿಕ್ಷಣವೂ ಅವಕಾಶವಂಚಿತರಿಗೆ ಮತ್ತು ಬಡವರಿಗೆ ಅದರಲ್ಲೂ ವಿಶೇಷವಾಗಿ ಯಾರಿಗೆ ಹೆಚ್ಚಿನ ಶಿಕ್ಷಣದ ಅವಶ್ಯಕತೆ ಇರುತ್ತದೆಯೋ ಅವರಿಗೆ ಶಿಕ್ಷಣವನ್ನು ನಿರಾಕರಿಸುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಪ್ರವೇಶವು ಅರ್ಹತೆ ಅಥವಾ ಸಾಮರ್ಥ್ಯವನ್ನು ಅವಲಂಬಿಸದೆ, ಯಾರು ಹೆಚ್ಚಿನ ಹಣ ನೀಡುವ ಸಾಮರ್ಥ್ಯವಿದೆಯೋ ಅಂತವರಿಗೆ ಆ ಖಾಸಗಿ ಶಿಕ್ಷಣ ದೊರಕುತ್ತದೆ.
     ಭಾರತ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ 1986 ಪ್ಯಾರ 2.2 ರ ಅನ್ವಯ ಶಿಕ್ಷಣವು ಮಹತ್ವದ ಪಾತ್ರವನ್ನು ಹೊಂದಿದೆ. ಈ ರೀತಿಯಾಗಿ ನಮ್ಮ ಸಂವಿಧಾನದಲ್ಲಿ ಉಲ್ಲೇಖಗೊಂಡಿರುವ ಸಂವಿಧಾನದ 45 ನೇ ಅನುಚ್ಚೆದದ ಪ್ರಕಾರ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಂದು ಮಗುವಿಗೂ ಉಚಿತ ಮತ್ತು ಕಡ್ಡಾಯ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪಟ್ಟಬದ್ಧ ಜವಾಬ್ದಾರಿಯಾಗಿದೆ. ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗಿಕಾರಣಗೊಳಿಸಿದರೆ ಸಂವಿಧಾನದ 45 ನೇಯ ಅನುಚ್ಚೆವನ್ನು ಅಲ್ಲಗಳೆದಂತಾಗುವುದು. ಆದ್ದರಿಂದ ದೇಶದಲ್ಲಿರುವ ಬಡ ಮತ್ತು ಗ್ರಾಮೀಣ ಸಮುದಾಯದಲ್ಲಿರುವ ಮಕ್ಕಳಿಗೆ ಶಿಕ್ಷಣವನ್ನು ಪಡೆಯಲು ಅವರ ಮೇಲೆ ದುಷ್ಪರಿಣಾಮವಾಗಬಹುದು. ಶಿಕ್ಷಣವನ್ನು ಖಾಸಗಿಕರಣ ಮಾಡಿದರೆ ವ್ಯಾತೀರಿಕ್ತ ಪರಿಣಾಮಬೀರಿ ಶಿಕ್ಷಣ ಹಾಗೂ ಬಡ ವಿದ್ಯಾರ್ಥಿಗಳ ಕಲಿಕಾ ಬದುಕಿಗೆ ನಷ್ಟವಾಗಬಹುದು.
   ಇಂದಿನ ದಿನಮಾನಗಳಲ್ಲಿ ಶಿಕ್ಷಣದ ಮೌಲ್ಯ ಹಾಗೂ ವ್ಯವಸ್ಥೆ ತುಂಬಾ ಹದೆಗೆಟ್ಟಿದೆ. ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯದೆ ಬರಿ ಖಾಸಗಿ ಶಾಲೆಗಳತ್ತ ಮುಖಮಾಡಿ ಅವಲಂಬಿತವಾದರೇ ಇಂತಹ ಸಂದರ್ಭದಲ್ಲೂ ಸರ್ಕಾರವೂ ಕೂಡ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಇರದೆ ಜನರಿಗೆ ಸಾಥ್ ನೀಡಿ ಸರ್ಕಾರಿ ಶಾಲೆಗಳನ್ನು ಖಾಸಗಿಕರಣ ಮಾಡಲು ಹೊರಟ್ಟಿದ್ದರಿಂದ ಅದೆಷ್ಟೋ ನಿರ್ಗತಿಕ ಮಕ್ಕಳಿಗೆ, ಬಡಮಕ್ಕಳಿಗೆ ತೊಂದರೆಯಾಗುತ್ತದೆ. ಬದುಕಲು ಕಷ್ಟ ಸಾಧ್ಯವಾಗುತ್ತದೆ. ಅವರು ಶಿಕ್ಷಣದಿಂದ ವಂಚಿತರಗುತ್ತಾರೆ. ಎಂಬಂತಹ ಇತ್ಯಾದಿ ಅಂಶಗಳನ್ನು ಸರ್ಕಾರ ಮನಗಂಡು ಸರ್ಕಾರಿ ಶಾಲೆಗಳು, ಸರ್ಕಾರಿ ಶಾಲೆಗಳಾಗಿಯೇ ಉಳಿಯಲಿ, ಶಿಕ್ಷಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ ತಂದರೆ ಅನೇಕ ಬಡಮಕ್ಕಳಿಗೆ ಶಿಕ್ಷಣ ದೊರಕುವುದು ಕಷ್ಟ ಎನ್ನುವಂತಹ ಅಂಶಗಳು ಸರ್ಕಾರದ ಗಮನಕ್ಕೆ ಬರಬೇಕಿದೆ ಅದು ಹೊರತು ಸಂವಿಧಾನದ ಅನುಚ್ಛೆದ ಉಲ್ಲಂಘನೆಯಗುವುದು ಖಂಡಿತಾಗಿದೆ. ಹಾಗೂ ಈ ಉಲ್ಲಂಘನೆ  ಇಂದ ಅದೆಷ್ಟೋ ಶಿಕ್ಷಣ ವ್ಯವಸ್ಥೆ ಹದಗೆಡಬಹುದು ಮತ್ತು ಅದೆಷ್ಟೋ ಬಡಮಕ್ಕಳ ಶಿಕ್ಷಣ ಕುಂಠಿತಗೊಂಡು ಬದುಕು ನರಕವಾಗುವುದರಲ್ಲಿ ಸಂದೇಶವಿಲ್ಲ. ಈ ಕಾರಣದಿಂದಾಗಿ ಅಂದರೆ ಖಾಸಗಿಕರಣದಿಂದ ನಿರ್ಗತಿಕ ಕುಟುಂಬಗಳು ಬೇರೆ - ಬೇರೆ ದೇಶಕ್ಕೋ, ರಾಜ್ಯಕ್ಕೋ, ಜಿಲ್ಲೆಗಳು ಸಿಕ್ಕ -ಸಿಕ್ಕ ಕೆಲಸಗಳಿಗೆ ಹೋಗಿ ಬಾಲಕಾರ್ಮಿಕ ಪದ್ಧತಿ ಮತ್ತೆ ಜಾರಿಯಾಗಿ ಅನಕ್ಷರತೆಯ ಬದುಕಲ್ಲಿ ಬದುಕುವಂತಹ ಸಂಭವ ಎದುರಾಗುತ್ತದೆ.
• ಬಾಲ ಕಾರ್ಮಿಕ ಪದ್ಧತಿ /ನೀತಿ :- ಶಿಕ್ಷಣವನ್ನು ಖಾಸಗಿಕರಣಗೊಳಿಸಿದರೆ, ಅದೆಷ್ಟೋ ಬಡ, ನಿರ್ಗತಿಕರ ಮಕ್ಕಳು, ಶಿಕ್ಷಣವನ್ನು ಪಡೆಯದೆ ಸಿಕ್ಕ -ಸಿಕ್ಕ ಕಾರ್ಖಾನೆ, ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಿ ತಮ್ಮ ಉಜ್ವಲವಾದ ಬದುಕನ್ನು ಚಿಕ್ಕ ವಯಸ್ಸಿನಲ್ಲೋ ಹಾಳುಮಾಡಿಕೊಳ್ಳಲು ಈ ಖಾಸಗೀಕರಣ ಶಿಕ್ಷಣ ನೀತಿಯು ಪ್ರೇರಕವಾಗಿದೆ ಮತ್ತು ಇಂತಹ ಅನಿಷ್ಠ ಪದ್ಧತಿಗಳನ್ನು ತಪ್ಪಿಸಲೆಂದೇ ಸರ್ಕಾರ ಬಾಲ ಕಾರ್ಮಿಕ ಕಾನೂನು /ನೀತಿಯನ್ನು ಜಾರಿಗೆ ತಂದಿದ್ದು ಅಂತಹ ನೀತಿಯನ್ನೇ ಉಲ್ಲಂಘಿಸಿದಂತಾಗುತ್ತದೆ. ಶಿಕ್ಷಣ ಸಿಗದೆ ಖಾಸಗಿಕಾರಣಕ್ಕೆ ಓದಿಸಲು ಹಣವಿಲ್ಲದ ಕಾರಣದಿಂದ ಬಡಜನರ ಮಕ್ಕಳನ್ನು ಶಾಲೆ ಬಿಡಿಸಿ ಬಾಲ್ಯವಿವಾಹಗಳು, ಬಾಲಕಾರ್ಮಿಕರು ಇತ್ಯಾದಿಗಳು ಈ ಖಾಸಗಿಕಾರಣ ಬರುವುದರಿಂದ ಇವುಗಳಿಗೆ ಸಾಮಾನ್ಯರ ಮಕ್ಕಳು ತುತ್ತಾಗುತ್ತಾರೆ.
• ಬಾಲ್ಯ ವಿವಾಹಕ್ಕೆ ಪ್ರಮುಖ ಕಾರಣವೆಂದರೆ :- ಖಾಸಗಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಪ್ರವೇಶ ಶುಲ್ಕ ತುಂಬಲು ಆಗದೆ ಆ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಿ ಅವರಿಗೆ ಬಾಲ್ಯವಿವಾಹ ಮಾಡಲು ಮುಂದಾಗುವುದು ಏನೂ ಅರಿಯದ ವಯಸ್ಸಿನಲ್ಲಿ ಮಧುವೆ ಮಾಡಿ ಶಿಶುಗಳ ಬದುಕನ್ನು ನಾಶಮಾಡಿದಂತಾಗುತ್ತದೆ. 1ನೇ ತರಗತಿಯಿಂದ 10ನೇ ತರಗತಿಯವರೆಗೆ  ಅಂದರೆ 6 ರಿಂದ 14 ವರ್ಷಗಳವರೆಗೆ ಮಕ್ಕಳಿಗೆ ಸರ್ಕಾರಿ ಶಿಕ್ಷಣ ನೀಡಬೇಕೆಂಬುವುದು ಕಾನೂನನ್ನು ಉಲ್ಲಂಘನೆ ಮಾಡಿದಂತಾಗುತ್ತದೆ.
      ಭಾರತವೆಂದರೆ ಅದೊಂದು ವಿಭಿನ್ನ ಸಂಸ್ಕೃತಿ ಹಾಗೂ ವಿಭಿನ್ನ ಔಷದಿಗಳ ಕೇಂದ್ರವೆಂದೇ ಪ್ರಖ್ಯಾತಿ ಹೊಂದಿದೆ ಪ್ರಶ್ಚಾತ್ಯ ದೇಶದ ಹಲವಾರು ಕಡೆ ಅಷ್ಟೇ ಅಲ್ಲದೆ ಜಗತ್ತಿನ ಅನೇಕ ರಾಷ್ಟ್ರಗಳು ಭಾರತದ ಔಷದಿಗಳನ್ನೇ ಉಪಯೋಗಿಸುತ್ತಿವೆ  ಮತ್ತು ಮುಖ್ಯವಾಗಿ ಆಯುರ್ವೇದ ಔಷದಿಗಳು ಇಡೀ ಜಗತ್ತಿನದ್ಯಾಂತ ಹೆಸರು ಮಾಡಿದೆ ಅದೂ ಕೂಡ ಭಾರತೀಯ ಔಷದಿ ಪದ್ಧತಿಯಾಗಿದೆ. ಹಾಗೂ ಆಯುರ್ವೇದ ಔಷದಿಯ ಪಿತಾಮಹ ಚರಕನು ತನ್ನ ಚರಕ ಸಂಹಿತೆಯಲ್ಲಿ ಆಯುರ್ವೇದದ ಉಪಯೋಗ ಮತ್ತು ಮೌಲ್ಯಗಳನ್ನು ತಿಳಿಸಿದ್ದಾನೆ. ಈಗಿರುವಾಗ ಜಗತ್ತಿನೆಲ್ಲೋಡೆ ಚರಕನ ಆಯುರ್ವೇದ ಪದ್ಧತಿಯಿಂದ ಆರೋಗ್ಯ ಸುಧಾರಣೆಯಾಗಿದೆ ಹಾಗೂ ಚರಕನ ಸಂಹಿತೆಯಲ್ಲಿ ಹೇಳಿರುವಂತೆ ಉತ್ತಮವಾದ, ನಿರ್ಮಲವಾದ ಆರೋಗ್ಯ ಪ್ರತಿಯೊಬ್ಬ ನಾಗರಿಕನಿಗೂ, ಸಾರ್ವಜನಿಕರಿಗೂ ದೊರಕಬೇಕೆಂಬ ದ್ವನಿನ್ನಿಂದಲೇ ಸರ್ಕಾರ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಪ್ರತಿಯೊಬ್ಬ ನಾಗರಿಕನಿಗೆ, ಪ್ರತಿಯೊಬ್ಬ ಸಾರ್ವಜನಿಕನಿಗೆ ಉಚಿತವಾಗಿ ಉತ್ತಮವಾದ, ಆರೋಗ್ಯ ಸೇವೆ ದೊರಕಬೇಕೆಂದು ಇಂದು ಹಲವಾರು ಆರೋಗ್ಯ ಸೇವೆಗಳನ್ನು ಸರ್ಕಾರ ನೀಡಿದೆ. ಅದು ಅವಶ್ಯಕವೂ ಕೂಡ ಹೌದು. ಹೀಗಿರುವಾಗ ಪ್ರತಿ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿಕಾರಣಗೊಳಿಸಲು ಮುಂದಾದರೆ ಬಡಕುಟುಂಬಗಳು ಆರೋಗ್ಯ ಸೇವೆಯಿಂದ ಉಚಿತ ಔಷದಿಗಳು ದೊರೆಯದೆ ಅನೇಕ ರೋಗಗಳಿಗೆ ತುತ್ತಾಗಿ ನಿರಂಕುಷವಾಗಿ ಸಾವನ್ನಪ್ಪುವಂತಹ ಸನ್ನಿವೇಶ ಎದುರಾಗುತ್ತದೆ. ಸರಿಯಾದ ಚುಚ್ಚುಮದ್ದನ್ನು ಬಡವರು ಪಡೆಯಲಾಗದೆ ಮಕ್ಕಳು, ವೃದ್ಧರು, ಮಹಿಳೆಯರು ಪ್ರತಿದಿನವೂ ಪರದಾಡಿ ಅವಕಾಶವಂಚಿತರಾಗಿ ಬದುಕುವ ಸಮಯ ಖಾಸಗಿಕಾರಣದಿಂದಗುತ್ತದೆ.
  ಪ್ರಸ್ತುತ ದೇಶದಲ್ಲಿ ಆರೋಗ್ಯ ವ್ಯವಸ್ಥೆಯು ಸಂಪೂರ್ಣ ಖಾಸಗಿಯಾದರೆ ಶೆಕಡ 30%ರಷ್ಟು ಜನರು ಖಾಸಗಿ ಸೇವೆಯನ್ನು ಪಡೆಯಬಹುದು ಇನ್ನುಳಿದ ಶೆಕಡ 70%ರಷ್ಟು ಜನರು ಸರ್ಕಾರಿ ಸೇವೆಯನ್ನು ಹುಡುಕುತ್ತಾ ಸಾಗುತ್ತಾರೆ ಏಕೆಂದರೆ, ಬಡಜನರ ಕಲ್ಯಾಣಕ್ಕಾಗಿ ಮಾನ್ಯ ಪ್ರಧಾನ ಮಂತ್ರಿಗಳು ಅರೋಗ್ಯ ಸೇವೆಗಳ ಕುರಿತು ಹಲವಾರು ಆರೋಗ್ಯ ಸೇವೆಗಳ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 2018 ಸೆಪ್ಟೆಂಬರ್ ನಲ್ಲಿ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಅಯುಷ್ಮಾನ್ ಭಾರತ ಯೋಜನೆಯನ್ನೂ ತಂದರು. ಈ ಯೋಜನೆಯು ವಿಶ್ವದ ಅತೀ ದೊಡ್ಡ ಸರ್ಕಾರಿ ಪ್ರಯೋಜಿತ ಆರೋಗ್ಯ ರಕ್ಷಣೆ ಯೋಜನೆಯಗಿದೆ. ಈ ಯೋಜನೆಯು 10.74 ಕೊಟ್ಟಿಗೂ ಹೆಚ್ಚು ಬಡ ಮತ್ತು ದುರ್ಬಲ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳನ್ನು ಆರೋಗ್ಯ ರಕ್ಷಣೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಇನ್ನೂ ಅನೇಕ ಆರೋಗ್ಯ ಸೇವೆಗಳನ್ನು ಉಚಿತವಾಗಿ ಬಡಜನರಿಗೆ ತಲುಪಲಿ ಎಂಬ ನಿಟ್ಟಿನಲ್ಲಿ ಪ್ರಮುಖ ಯೋಜನೆಗಳನ್ನು ಜಾರಿಗೋಳಿಸಿದ್ದಾರೆ. ಇಂತಹ ಸಂಧರ್ಭದಲ್ಲಿ ಆರೋಗ್ಯ ಸೇವೆಯು ಸಂಪೂರ್ಣವಾಗಿ ಖಾಸಗಿಯಾದರೆ ದೇಶದಲ್ಲಿ ಜಾರಿಗೆ ತಂದಿರುವ ಯೋಜನೆಗಳನ್ನ ಉಲ್ಲಂಘನೆ ಮಾಡಿದಂತೆ ಆಗುತ್ತದೆ, ಮತ್ತು ಬಡಜನರ ಮೇಲೆ ವ್ಯತಿರಿಕ್ತಪರಿಣಾಮವನ್ನು ಉಂಟುಮಾಡಿದಂತಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬ ಬಡಜನರ ಬದುಕಿನ ಮೇಲೆ ಕಲ್ಲೇಸದಂತಾಗುತ್ತದೆ.

                ಇತ್ತೀಚಿನ ದಿನಮಾನಗಳಲ್ಲಿ ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಖಾಸಗಿಯಾಗಬಹುದೇಂಬ ವದಂತಿ ಕೇಳಿ ಬರುತ್ತಲೇ ಇದೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಖಾಸಗಿಕಾರಣವಾದರೆ ಅದೆಷ್ಟೋ ಬಡ ಜನರ ಬದುಕಿಗೆ ಮತ್ತು ಬಡ ಮಕ್ಕಳ ಭವಿಷ್ಯಕ್ಕೆ ಕುತ್ತು ತಂದತಾಗುತ್ತದೆ. ಸಂವಿಧಾನದ ಹಕ್ಕುಗಳು ಮತ್ತು ಪರಿಚ್ಛೆಧಗಳು ಉಲ್ಲಂಘನೆಯಾಗದಂತೆ ನಾವು ನೋಡಿಕೊಳ್ಳಬೇಕು ಮತ್ತು ಇದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದಲ್ಲಿನ ಯಾವುದೇ ಮೂಲ ಅಂಶಗಳು ಉಲ್ಲಂಘನೆಯಾಗಬಾರದು ಪ್ರತಿ ಸರ್ಕಾರಿ ಸೇವೆಗಳು ಪ್ರತಿಯೊಬ್ಬ ಸಾರ್ವಜನಿಕರಿಗೆ ಸರಾಗವಾಗಿ ತಲುಪುವಂತಾಗಬೇಕು. ಯಾವ ಕ್ಷೇತ್ರಗಳೂ ಖಾಸಗಿಕಾರಣಗೊಳ್ಳದೆ ಪ್ರತಿ ಜನಸಾಮಾನ್ಯರಿಗೆ ಆ ಸೇವೆಗಳು ದೊರಕಬೇಕು. ಪ್ರತಿಯೊಂದು ಕ್ಷೇತ್ರಗಳು ಖಾಸಗಿಕಾರಣವಾಗದೆ ಸರ್ಕಾರಿ ಅಧಿನಿಯಮದಲ್ಲಿರಬೇಕು ಆಗಿದ್ದಾಗ ಮಾತ್ರ ನಮ್ಮ ಮೊದಲ ಭಾರತ ದೇಶವನ್ನು ಕಾಣಲು ಸಾಧ್ಯ. ಅದು ಹೊರತು ನಾವು ಪ್ರಶ್ಚಾತ್ಯ ರಾಷ್ಟ್ರಗಳ ಬದುಕನ್ನು ಅನುಭವಿಸಬೇಕಾಗುತ್ತದೆ. ಇಂತಹ ಖಾಸಗಿಕಾರಣವೇನ್ನುವುದು ನಮ್ಮ ದೇಶ ಹಾಗೂ ದೇಶದ ಪ್ರತಿ ಜನಗಳಿಗೆ ಕಳಂಕ ಹಾಗೂ ಅನಿಷ್ಟವಿದ್ದಂತೆ. ಇದನ್ನು ನಾವು ಕಡೆಗಣಿಸಿ ನಡೆಯಬೇಕು ಮತ್ತು ಪದೇ -ಪದೇ ಸುದ್ದಿಯಲ್ಲಿರುವ ಈ ಖಾಸಗಿಕರಣದ ವಿಷಯವನ್ನು ಮುಚ್ಚಿಹಾಕಿ ಅನಿಷ್ಠ ಸೇವೆಗಳಿಗೆ ನಾವು ಆಸ್ವದ ಕೊಡದಂತೆ ಜೀವಿಸಬೇಕು ಮತ್ತು ದೃಢವಾಗಿ ನಿಲ್ಲಬೇಕು. ಭಾರತವೆಂಬುವುದು ಆಗದವಾದ ರಾಷ್ಟ್ರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾನ್ಯತೆ ಮೆರೆದ ರಾಷ್ಟ್ರ ಹೀಗಿರುವಾಗ ಭಾರತ ಬೇರೊಂದು ದುಷ್ಟದಾರಿ ತುಳಿಯಲು ನಾವು ಬಿಡಬಾರದು ಮೊದಲಿನ ಪ್ರಸಿದ್ಧ ಭಾರತವನ್ನು ನಾವು ಕಾಪಾಡಿಕೊಳ್ಳುವ ಮೂಲಕ ಸಂವಿಧಾನದ ಪ್ರತಿ ಅನುಚ್ಛೆದ, ಅಂಶ ಹಾಗೂ ಕರಾರುಗಳನ್ನು ಉಲ್ಲಂಘಿಸದೆ ಪಾಲಿಸೋಣ.

- ಬಸವರಾಜ್ ಎಚ್. ಹೊಗರನಾಳ. ಪತ್ರಿಕೋದ್ಯಮ ವಿದ್ಯಾರ್ಥಿ, ಧಾರವಾಡ 
ಮೊ.ನಂ:8951228607.


ನಮ್ಮ ಊರಿನ‌ ಸೌಕರ್ಯಗಳ ಮೂಲ ಕೊರತೆ (ಲೇಖನ) - ಪ್ರಾರ್ಥನಾ ಕೆ.ಎಂ.ಕಲ್ವಮಂಜಲಿ.

ಕೋಲಾರ ಜಿಲ್ಲೆಯ ಕಲ್ವಮಂಜಲಿ ಗ್ರಾಮದಲ್ಲಿ ವೇಮಗಲ್ ಮತ್ತು ಕಲ್ವಮಂಜಲಿ ಸಂಚಾರಿಸುವ ರಸ್ತೆಯು ತಂಬಾ ಚಿಕ್ಕದಾಗಿದ್ದು ಅಲ್ಲಲಿ
ಕಿತ್ತು ಹೋಗಿರುವ ಕಾರಣ ತುಂಬಾ ಅಪಘಾತಗಳು ಉಂಟಾಗಯತ್ತದೆ.ಹಾಗೂ ಸ್ಕೂಲ್ ವ್ಯಾನ್ ಗಳು ಸಂಚಾರಿಸಲು ಕಷ್ಟವಾಗುತ್ತದೆ.ದೊಡ್ಡ-ದೊಡ್ಡ ಲಾರಿಗಳು ಮುಖಾ-ಮುಖಿ ಆದ್ರೆ ಲಾರಿ ಡ್ರೈವರ್ಗಳು ಹರಸಾಹಸ ಪಡಬೆಕಾಗುತ್ತದೆ.

ಚರಂಡಿ ವ್ಯವಸ್ಥೆ ಊರಿನಲ್ಲಿ ಸರಿಯಾದ ಚರಂಡಿ ವ್ಯವಸ್ಥೆಗಳು ಇಲ್ಲ
ಅಲ್ಲಲಿ ಮುಚ್ಚು ಹೋಗಿರುವ ಚರಂಡಿಗಳು  ನೀರು ಹೋಗಲು ಕಷ್ಟವಾಗುತ್ತದೆ.ಮನೆಗಳ ಬಳಿ ಚರಂಡಿಗಳು ಸ್ವಚ್ಚವಾಗಿಲ್ಲ ಅಂದ್ರೆ ಆರೋಗ್ಯದ ಸಮಸ್ಯೆಗಳು ಎದುರಾಗುತ್ತದೆ.

ಬಸ್ ವ್ಯವಸ್ಥೆ ಕಲ್ವಮಂಜಲಿ ಎಂಬುವ ಗ್ರಾಮ ವೇಮಗಲ್ ಗೆ ಸುಮಾರು ಮೂರು ಕೀ.ಮಿ ದೂರದಲ್ಲಿದೆ.ಊರಿಗೆ ಬಸ್ ನ ವ್ಯವಸ್ಥೆ ಇಲ್ಲ.ಬರುವ ಒಂದು ಬಸ್ ಸರಿಯಾದ ಸಮಯಕ್ಕೆ ಬರುವುದಿಲ್ಲ.ಶಾಲಾ- ಕಾಲೇಜ್ ಗೆ ಹೋಗುವವರು ಅಂದಿನಿಂದ ಇಂದಿನ ವರೆಗೂ ಕಾಲು ನಡೆಗೆಯಲ್ಲಿ ಹೋಗುವ ಪರಿಸ್ಥಿತಿ ಇದೆ.ವಯಸ್ಸಾದವರು ಸಹ ನಡೆದುಕೊಂಡು ಹೋಗ ಬೇಕಾಗುತ್ತದೆ.ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹೋಗಲು ಕಷ್ಟವಾಗುತ್ತದೆ.
ವಿದ್ಯತ್  ಹಾಗೂ ನೀರಿನ ವ್ಯವಸ್ಥೆ ಸ್ವಲ್ಪ ಮಟ್ಟಿಗೆ ಸುಧಾರಿಸಿ ಕೊಂಡಿದೆ.

- ಪ್ರಾರ್ಥನಾ ಕೆ.ಎಂ.ಕಲ್ವಮಂಜಲಿ, ಕೋಲಾರ.

ಸೊಸೆಯು ಮಗಳಾದರೆ ಅಳಿಯ ಮಗನಾಗದೇ!!? (ಸಣ್ಣ ಕತೆ) - ಆಶಾ ನೂಜಿ.

ಪಂಕಜಳೀಗೆ ಮೂವರು ಮಕ್ಕಳು, ಅದರಲ್ಲಿ ಎರಡು ಹೆಣ್ಮಕ್ಕಳು ಒಬ್ಬ ಗಂಡುಮಗ.
ಎರಡೂ ಹೆಣ್ಮಕ್ಕಳು ಎಂದು ಅತ್ತೆಯವರು ಅತ್ತಿದ್ದರಂತೆ .ಮುಂದೆ ನನ್ನಮಗನೀಗೆ ವಾರುಸುದಾರ ಇಲ್ಲವೇ?ಎಂದು .ಅದನ್ನು ನನ್ನಲ್ಲಿ ಹೇಳುತ್ತಾ ಇದ್ದರು .ಆಗ ಪಂಕಜ ಹೇಳಿದಂತೆ"ಎರಡು ಹೆಣ್ಮಕ್ಕಳಾದರೆ ಅವರೀಗೆ ಬರುವ ಗಂಡ ನಮಗೆ ಮಗನೆಂದು ತಿಳಿಯುವ ಅಳಿಯ ಅಂತ ಹೇಳುವುದೇ ಬೇಡ " ...ಆಗ  ಅತ್ತೆಯ ಸರದಿ,  "ಅದು ಹೇಗೆ ಸಾಧ್ಯ ಅಳಿಯ ,ಅಳಿಯನೇ ,ಮಗ ಮಗನೇ  "ನಾನು ಒಪ್ಪಲ್ಲ ಅಂದ್ರು .ಹಾಗಾದರೆ ಸೊಸೆಯನ್ನು ಮಗಳಂತೆ ನೋಡಬೇಕು ಎಂದು ನೀವು ಹೇಳುತ್ತೀರಿ ಎಂದಾಗ ನಾನು ಹಾಗೆ ಹೇಳಿಲ್ಲ "ಮಗಳು ,ಮಗಳೇ ಸೊಸೆ ಸೊಸೆಯೇ ಎಂದರು ".
ಇಂಥವರ ಜೊತೆ ವಾದ ಮಾಡಿ ಪ್ರಯೋಜನ ಇಲ್ಲ ಎಂದು ಸುಮ್ಮನಾದಳು..

ಎರಡನೇ ಮಗಳೀಗೆ ಏಳು ವರುಷ ತುಂಬಿದಾಗ ಪಂಕಜಳೀಗೆ ಮಗ ಹುಟ್ಟಿದ ..ದಿನ ನನ್ನ ಅತ್ತೆ ಅಮ್ಮನ ಉಪದೇಶ ಕೇಳಿ ಸೋತು ಹೋದೆ .ನಂತರ ಮಗನ ಜನನ ವಾಯಿತು ...ಆಗ ಅದ ಸಂತೋಷ ಅಷ್ಟಿಷ್ಟಲ್ಲ .ನಮ್ಮ ಅತ್ತೆಗೆ ".ಕೆಳಗೆ ಇಟ್ಟರೆ ಇರುವೆ ಕಡಿದು ಬಿಡಬಹುದು .ಮೇಲೆ ಇಟ್ಟರೆ ಕಾಗೆ ಕುಕ್ಕಬಹುದು ಎಂಬಂತೆ ನೋಡಿಕೊಂಡರು ..".
ಅವನನ್ನು ಅಳಲು ಬಿಡರು ....ಹೀಗೆ ಅವನನ್ನು ಮುದ್ದು ಮಾಡುತ್ತಾ ಬೆಳೆಸಿದರು ...ಎಂದು ಪಂಕಜ ಹೇಳುತ್ತಾ ಇದ್ದಳು..
ಹೀಗೆ ವರುಷಗಳು ಕಳೆದವು .ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡುವ ವಯಸ್ಸಿಗೆ ಬಂದಾಗ 
ಒಳ್ಳೆ ಸಂಬಂಧದಿಂದ ವರ ಸಿಕ್ಕಿದ ಮದುವೆ ಮಾಡಿ ಬಿಟ್ಟೆವು .ಅಲ್ಲಿ ಎರಡು ಹುಡುಗರು ಮಾತ್ರ ಬೀಗರೀಗೆ .ಅವರು ಹೇಳುತ್ತಾ ಬಂದರು ನಮಗೆ ಹೆಣ್ಣುಮಕ್ಕಳಿಲ್ವ.ಅದಕ್ಕೆ ಮಗಳಾಗಿ ಬಂದಳು ನಿಮ್ಮ ಮಗಳು ಎನ್ನಬೇಕೇ!?
ಆಗ ನನಗಾದ ಸಂತೋಷ ಅಷ್ಟಿಷ್ಟಲ್ಲ,ನಾನೂ ಹೇಳಿದೆ ನಮಗೆ ಒಬ್ಬನೇ ಮಗ ಇನ್ನು ಎರಡು ಜನ ಆಯಿತು ..ನಂತರ ಮೂವರು ಎಂದೆ ..ಸೊಸೆ ಬಂದಾಗ ನಮಗೆ ಆರು ಮಕ್ಕಳು ಎಂದು,ನಾನಂದೆ
ನಮಗೆ ಮೂವರು ಮಗಳಂದಿರು ಸೊಸೆ ಅಲ್ಲ ಎಂದಳು ....ಪಂಕಜ 

ಮಗನೂ ದೊಡ್ಡವನಾದ ಅವನೀಗೂ ಮದುವೆ ಆಯಿತು...

ಆಗ .....

ಸೊಸೆಯಲ್ಲಿ ಅವರ ಅಪ್ಪ ಅಮ್ಮ ಮತ್ತು ಮನೆಮಂದಿಯೆಲ್ಲಾ ಹೊಸತರಲ್ಲಿ ಕೇಳಿದರಂತೆ ಹೇಗಾಗುತ್ತೆ ನಿನ್ನ ಮನೆ ಮನೆಯ ಮಂದಿಗಳೆಲ್ಲಾ ಅಂದಾಗ ನನಗೆ ಈಗ ಎರಡು ತವರು ಮನೆ ಅಪ್ಪಾ ಎಂದು ಹೇಳಿದಳಂತೆ ...ಅದನ್ನು ಕೇಳಿ ನನಗೆ ಹೃದಯ ತುಂಬಿ ಬಂತು ಎಂದು ಪಂಕಜ ಅವಳ ಮನದಲ್ಲೇ ಅಂದಳು.
ಚಂದದ ಕುಟುಂಬ ಪತಿ ಮತ್ತು ಪತ್ನಿ ಇವರೀಗೆ ಮಗಳು ಮಗ ಇಬ್ಬರು ಮಕ್ಕಳು .ಎಲ್ಲರಂತೆ ಮಗಳನ್ನು ಚೆನ್ನಾಗಿ ಓದಿಸಿ ಬೆಳೆಸಿ ಇನ್ನೇನು ಮಗಳೀಗೆ ಮದುವೆ ಮಾಡಲು ಗಂಡು ಹುಡುಕುತ್ತಿದ್ದಂತೆಯೇ ಮಗಳು ಬೇರೆ ಕುಲದ ಗಂಡನ್ನು ಪ್ರೀತಿಸಿ ಮದುವೆ ಆಗಿ ಮನೆಗೆ ಕರೆತಂದು ಅಪ್ಪನ ಅಮ್ಮನ ಆಶೀರ್ವಾದ ಪಡೆಯಲು ಬಂದಳು ...ಬಂದಾಗ ಅಪ್ಪ ಅಮ್ಮನೀಗೆ ಶಾಕ್ ಅಪ್ಪ ಒಳಗೆ ಬರಲು ಬಿಡದೆ ನನಗೆ ಮಗಳೇ ಇಲ್ಲ ಅಂದು ಬಿಟ್ಟು ಹೊರಹಾಕಿದ ...ಬೇಸರದಿಂದ ಮಗಳು ಮನೆಬಿಟ್ಟು ಪತಿಯೊಂದಿಗೆ ನಡೆದಳು ...ಅಮ್ಮನಿಗೆ ಏನೂ ಮಾಡಲೂ ಸಾಧ್ಯವಿಲ್ಲ...ಕೊರಗುತ್ತಲೇ ಇದ್ದಳು ..ಆಗ ಫೋನು ಇರಲಿಲ್ಲ ಕಾಗದದ ಮುಖಾಂತರವೇ ವ್ಯವಹಾರ...ಆದರೆ ಅವರು ವಿದೇಶಕ್ಕೆ ಹಾರಿದರು ...ಎರಡು ,ಮೂರು ವರುಷ ಮಗಳ ಸುದ್ದೀಯೇ ಇಲ್ಲ ,ಅವಳೀಗೆ ಒಂದು ಮಗುಆಗಿತ್ತು .ಆಗ ಅವಳ ಅಪ್ಪನೀಗೆ ಹೃದಯಾಘಾತ ಆಗಿತ್ತು ...ಅದಕ್ಕೆ ಸರ್ಜರಿ ಆಗಬೇಕಾದರೆ ತುಂಬಾ ಹಣ ಕಟ್ಟಬೇಕು ಎಲ್ಲಿಂದ ತರಲೀ...ಎಂದು ಅಮ್ಮ ದುಃಖಿಸಿದಾಗ ನೆನಪಾಗಿದ್ದುದು ಮಗಳು ಅಳಿಯ .ಕೂಡಲೇ ಟೆಲಿಗ್ರಾಂ ಕೊಟ್ಟು ಬಿಟ್ಟಳು ಅಮ್ಮ ,ತಕ್ಷಣ ಹೊರಟು ಬನ್ನಿ ಅಪ್ಪನೀಗೆ ಮೈನರ್ ಹಾರ್ಟ್ಎಟೆಕ್ ಆಗಿದೆ ತಕ್ಷಣ ಸರ್ಜರಿ ಮಾಡಿದರೆ ಅಪ್ಪ ಉಳಿಯಬಹುದು ಎಂದು ...ಅದನ್ನು ಕೇಳಿದ ತಕ್ಷಣ ಮಗಳು ಅಳಿಯ ಮೊಮ್ಮಗ ಇಂಡಿಯಾಕ್ಕೆ ಬಂದು ಅಪ್ಪನ ಯೋಗಕ್ಷೇಮ ವಿಚಾರಿಸಿದರು .ನಂತರ ಆಪರೇಷನ್ ಮಾಡಲು ಹಣ ಕಟ್ಟಿದರು .ಎಲ್ಲಾ ಅಳಿಯನೇ .....ಆಗ ಅಮ್ಮ ಹೇಳಿದ ಮಾತು .ಪತಿಯಲ್ಲಿ ನಿಮಗೆ ಒಬ್ಬ ಮಗ ಅಲ್ಲ ಇಬ್ಬರು .ಇವನು ಜವಾಬ್ದಾರಿ ಹೊತ್ತ ಮಗ ನಮ್ಮ ನಿಜವಾದ ಮಗ ಚಿಕ್ಕ ಈಗ .ಅಂದಳು .ಆಗ ಪತಿಗೆ ಕಣ್ಣಲ್ಲಿ ನೀರು ತುಂಬಿಕೊಂಡು ಹೌದು ನಾನು ತಪ್ಪು ಮಾಡಿದೆ ಅಳಿಯಂದಿರೇ. ಮಗನ ಸ್ಥಾನದಲ್ಲಿ ನಿಂತು ನನ್ನ ನೋಡಿಕೊಂಡಿರುವಿರಿ .ಎಂದು ಹೇಳಿ ಕೈಮುಗಿದರು ....
ಮಾವ ನೀವು ಹೀಗೆ ಅನ್ನ ಬಾರದು ನನ್ನ ಸ್ಥಾನದಲ್ಲಿ ಯಾರೇ ಇದ್ದರೂ ಹೀಗೆ ಮಾಡುವರು .ನೀವು ಬೇಸರ ಮಾಡಬೇಡಿ ದೈರ್ಯ ದಿಂದಿರಿ ನಿಮಗೆ ಏನೂ ಆಗಿಲ್ಲ ..ಉಷಾರಾಗುವುರಿ.ಎಂದು ಸಮಾಧಾನದ ಮಾತನ್ನು ಹೇಳಿದ ಖುಷೀ ಆಯಿತು ..ಮಾವನೀಗೆ...
ಹೀಗೆ ಅಳಿಯ ಮಗನಾದ ....

- ಆಶಾನೂಜಿ.

ಪ್ರೀತಿಸುವ ಹೃದಯದ ಹುಡುಕಾಟದಲ್ಲಿ ನೊಂದ ಮನಸ್ಸು (ಸಣ್ಣ ಕತೆ) - ಮಮತ (ಕಾವ್ಯ ಬುದ್ಧ)

ಒಂದು ಹಳ್ಳಿಯಲ್ಲಿ ವ್ಯವಸಾಯ ಮಾಡುತ್ತಿದ್ದ ಕುಟುಂಬವೊಂದಿತ್ತು.  ಆ ಕುಟುಂಬದಲ್ಲಿ ಐದು ಮಂದಿ ಹೆಣ್ಣುಮಕ್ಕಳೇ ಜನಿಸಿದ್ದರು. ಕೊನೆಯವರ ಮಾತೃಪ್ರೇಮದ ಯಶಸ್ವಿ ಕಥೆಯಿದು. ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದರು ಬಹಳ ಚುರುಕು ಸ್ವಭಾವದವರು ಅಪಾರ ಜ್ಞಾನ ಹೊಂದಿದ್ದರು. ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಓದಿನಲ್ಲಿ ಹಾಗೂ ಚಟುವಟಿಕೆ , ಆಟೋಟಗಳಲ್ಲಿ ಅವರೇ ಮೊದಲಿಗರು. ಶಾಲೆಯ ನಂತರ ಹಸುಗಳನ್ನು ಮೇಯಿಸುವುದು, ಸೊಪ್ಪು ಮಾರುವುದು ಹೀಗೆ ಸಣ್ಣವಯಸ್ಸಿನಲ್ಲಿಯೇ ಹಣ ಸಂಪಾದನೆಯ ಮಾರ್ಗಗಳನ್ನು ಹುಡುಕಿಕೊಂಡು ಕುಟುಂಬಕ್ಕೆ ನೆರವಾಗಿದ್ದರು. ಅವರು ೫ನೇ ತರಗತಿಯಲ್ಲಿ ಇದ್ದಾಗಲೇ ದೊಡ್ಡಕ್ಕನ ಮದುವೆ ಆಯಿತು. ನಂತರ ಅವರಿಗೆ ಇನ್ನಷ್ಟು ಜವಾಬ್ದಾರಿಗಳು, ಅಮ್ಮನಿಗೆ ಸಾಲಭಾದೆ, ಜೀವನ ನಿಬಾಯಿಸಲು ಕಷ್ಟವೆಂದು ಅರಿತು, ಇದೆನ್ನೆಲ್ಲಾ ಮನಸಿಗೆ ಹಾಕಿಕೊಂಡು ಶಾಲೆ ಬಿಟ್ಟು ಅವರೇ ಸ್ವಂತ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಾ, ಹಸುಗಳನ್ನು ಸಾಕಿ ಹಾಲನ್ನು ಮಾರುತ್ತಾ ಊರೂರು ಸುತ್ತಿ ಸೊಪ್ಪು ತರಕಾರಿ ಮಾರುತ್ತಾ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಎಲ್ಲಾ ಅಕ್ಕಂದಿರ ಮದುವೆ ಮಾಡಿ ಅವರ ಬಾಣಂತನ ಮಾಡಿ, ಮಕ್ಕಳ ಹಾರೈಕೆ ಮಾಡುವ ವೇಳೆಗೆ ಅವರಿಗೂ ೧೭ ವರ್ಷ ತುಂಬಿತು ಇನ್ನೂ ಎಲ್ಲರೂ ಮದುವೆ ವಿಚಾರ ಪ್ರಸ್ತಾಪ ಮಾಡುತ್ತಾ ವರನನ್ನು ಹುಡುಕಲು ಪ್ರಾರಂಭಿಸಿದರು. ಒಬ್ಬ ಸೂಕ್ತ ಸರ್ಕಾರಿ ಉದ್ಯೋಗದಲ್ಲಿದ್ದ ವರನನ್ನೇ ಹುಡುಕಿ ಎಲ್ಲಾ ಉಡುಗೊರೆಗಳನ್ನು ನೀಡಿ ಮದುವೆಯೂ ಮಾಡಿದರು. ತದ ನಂತರವೇ ಅವರ ಜೀವನದಲ್ಲಿ ಇನ್ನಷ್ಟು ಕಷ್ಟಗಳು ಒದಗಿ ಬಂದವು. ಗಂಡ ಸರ್ಕಾರಿ ನೌಕರ ಹಾಗೂ ಹಳ್ಳಿ/ಸಮಾಜ ಸೇವಕ ಅವರ ಹಳ್ಳಿಗೆಲ್ಲಾ ಅವನೊಬ್ಬನೇ ಸರ್ಕಾರಿ ಉದ್ಯೋಗಿ ಸರ್ವರ ಕಷ್ಟಗಳೆಲ್ಲಾ ತನ್ನದೆಂದು ಭಾವಿಸುತ್ತಾ ಅವರ ಕಷ್ಟಗಳಲ್ಲಿ ಬಾಗಿಯಾಗಿ ಪರಿಹಾರಗಳ, ದನಸಹಾಯ ಮಾಡುತ್ತಿದ್ದ. ದಿನ ಮನೆಯಲ್ಲಿ ದಾಸೋಹ ಸಂಬಳ ಕಡಿಮೆ ಗಂಡನಿಗೆ , ಬಂದವರಿಗೆ ಬಡಿಸಿ ಆಕೆ ಖಾಲಿ ಹೊಟ್ಟೆಯಲ್ಲಿಯೇ ಅಥವಾ ಗಂಜಿಯನ್ನು ಕುಡಿದು ದಿನ ಕಳೆಯುವಂತಾಯಿತು ಕಾರಣ ಜನರ ನಿಂದನೆಗೆ ಸಿಕ್ಕುವಳೆಂಬ ಭಯದಿಂದಲೇ. ಹಳ್ಳಿಯಲ್ಲಿ ಮದುವೆ ಮುಂಜಿ ಏನೇ ಆದರೂ ಸಹ ಇವರ ಗಂಡನ ಹಣದಿಂದಲೇ ನಡೆಯಬೇಕಾಗಿತ್ತು. ಬರುವ ಸಂಬಳ ಸಾಕಾಗುತ್ತಿರಲಿಲ್ಲ ಸಾಲ ಮಾಡಿ ಸಹಾಯ ಮಾಡುತ್ತಿದ್ದರು. ಇಂತಹ ಸಂದಿಗ್ಧ ಸಮಯದಲ್ಲೇ ೩ ಮಕ್ಕಳು ೨ ಹೆಣ್ಣು ಒಂದು ಗಂಡು. ಇನ್ನು ಮಕ್ಕಳ ವಿದ್ಯಾಭ್ಯಾಸ ಸರ್ಕಾರಿ ಶಾಲೆಯಲ್ಲಿಯೇ ನಡೆಯುತ್ತಿತ್ತು. ಅವಳು ಗಂಡ , ಮಕ್ಕಳು, ನೆಂಟರು , ಇಷ್ಟರ ಸುಃಖ -ದುಃಖಗಳಲ್ಲಿ ಭಾಗಿಯಾಗಿ ಅವಳಿಗೆಂದು , ಅವಳ ಸುಃಖಕ್ಕೆಂದು ಒಂದೂ ದಿನವೂ ಮೀಸಲಿಡಲಿಲ್ಲ , ಹೊಸ ಬಟ್ಟೆ ತೊಡಲಿಲ್ಲ. ಈ ನಡುವೆ ಅತ್ತೆ-ಬಾವ- ನಾದಿಯರ ಕಾಟದೊಂದಿಗೆ ಬೇಸೆತ್ತು ಅವಳ ಮಗ ಎಂಟನೇ ತರಗತಿಯಲ್ಲಿದ್ದಾಗ ವಿದ್ಯಾಭ್ಯಾಸ ಮುಂದುವರೆಸುವ ನಿರ್ಣಯ ತೆಗೆದುಕೊಂಡು ಹತ್ತನೇ ತರಗತಿಯ ಪರೀಕ್ಷೆ ಬರೆದು ಪಾಸಾಗಿ ಶಿಶುವಾರದ ಶಿಕ್ಷಕಿಯೂ ಸಹ ಆದಳು. ಆವೇಳೆಗಾಗಲೇ ಗಂಡನ ಸಮಾಜಸೇವೆ ಇನ್ನಷ್ಟು ಹೆಚ್ಚಾಯಿತು ಹಾಗೆಯೆ ಕೆಲವು ದುಷ್ಟ ಚಟಗಳಿಗೆ ದಾಸನಾದ ಇನ್ನು ಆ ಹೆಣ್ಣಿನ ಕಥೆ ಹೇಳತೀರದಾಯಿತು. ಮಕ್ಕಳಿಗೆ ತಿಳಿಯದಂತೆ ಅನೇಕ ಕಷ್ಟಗಳನ್ನು ಹಿಂಸೆಗಳನ್ನು ತಾನೇ ಎದುರಿಸುತ್ತಿದ್ದಳು. ಮುಂದೆ ಮಕ್ಕಳ ಮುಂದೆಯೂ ಸಹ ಹೆಚ್ಚಿನ ಜಗಳಗಳೇ ನಡೆಯುತ್ತಾ ಹೋಯಿತು. ಈ ಪರಿಸ್ಥಿತಿಯಲ್ಲಿ ಮಗಳ ಮದುವೆಯೂ ನಡೆಯಿತು. ಮುಂದೊಂದು ದಿನ ಅವಳ ನಲವತ್ತರ ವಯಸ್ಸಿನಲ್ಲಿಯೇ ಗಂಡನಿಗೆ ಹೃದಯಘಾತವಾಗಿ ಸಾವನ್ನಪ್ಪಿದನು.  ಸಮಾಜ ಸೇವೆಗೆಂದು ಗಂಡ ಬಹಳಷ್ಟು ಸಾಲ ಮಾಡಿದ್ದ ಕಾರಣ ಮಗನಿಗೆ ಸರ್ಕಾರವೇ ಕೆಲಸ ನೀಡಿತು. ಅದರೆ ಅವಳ ಕಷ್ಟಗಳು ಮಾಸಿ ಸುಃಖದ ದಿನಗಳು ಬರಲೇ ಇಲ್ಲ ನಿವೃತ್ತಿ ವಯಸ್ಸು ದಾಟುವವರೆಗೂ ಕೆಲಸ ಮಕ್ಕಳನ್ನು ತುಂಬಾ ಅಪರೂಪವಾಗಿ ಪ್ರೀತಿಯಿಂದ ಬೆಳೆಸಿದ್ದಳು, ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಿದ್ದಳು ಎಲ್ಲರೂ ಅವರವರ ಕೆಲಸಗಳ ಕಡೆಯಲ್ಲಿ ಮಗ್ನರಾಗಿದ್ದಾರೆ ಇದುವರೆಗೂ ಮಕ್ಕಳೂ ಸಹ ಅವಳನ್ನೂ ಪ್ರೀತಿಸುವ ಗೋಜಿಗೆ ಹೋಗಿಲ್ಲ. ಈಗಲೂ ನೊಂದ ಮುದಿ ಮನಸು ಪ್ರೀತಿಸುವ ಹೃದಯಕ್ಕಾಗಿ ಕಾಯುತ್ತಲೇ ಇದೆ......

- ಮಮತ (ಕಾವ್ಯ ಬುದ್ಧ),
ಕನ್ನಡ ಅದ್ಯಾಪಕಿ , ಸಾಹಿತಿ.


ಬುಧವಾರ, ಮೇ 17, 2023

ನೆನಪಾದೆಯಮ್ಮ (ಕವಿತೆ) - ಗಿರೀಶ(ರಾಗಿ).

ಚಂದಿರನೊಮ್ಮೆ ನೋಡಿದೆ,
      ನಗುವನೋ,ಅಳುವನೋ
                         ನಾಕಾಣೆ
ಆದರೂ ತಂದ ನಿನ ನೆನಪ
        ಮರೆಯಲಾಗದು ತಾಯಿ
                     ನನ್ನಾಣೆ...

ಇದ್ದಾಗ ತಿರಸ್ಕರಿಸಿದೆ,
   ಬೈದೆ, ಹೀಯಾಳಿಸಿದೆ
ಹಸಿವು ನೆಪವೊಡ್ಡಿ
    ಅವಮಾನಿಸಿದೆ...

ಸೇವೆ ಪಡೆದೆನೆ ವಿನಃ
       ನಾ ನೀಡಲಿಲ್ಲ...
ತಾಯೆoಬ ಪ್ರೀತಿಯಲಿ
         ಹಿತ ನುಡಿಯಲಿಲ್ಲ...

ಕ್ಷಮೆ ಇರಲಿ ತಾಯಿ
     ನನಬಿಟ್ಟು ಹೋಗಲು
ಮನಸೇಗೆ ಬಂತು..?
ನಿನ್ನಡಿಗೆರಗಿ ಕ್ಷಮೆ ಕೇಳಬೇಕು
          ಬರುವೆಯಾ ಮರಳಿ..?
          
- ಗಿರೀಶ(ರಾಗಿ), ರಾಮನಗರ.


ನಮ್ಮೂರಿನ ಶಿಕ್ಷಣದ ಸ್ಥಿತಿಗತಿ (ಲೇಖನ) - R ಸಾವಿತ್ರಿ, ಹೊಸಪೇಟೆ.

ವಿಜಯನಗರ ಜಿಲ್ಲೆ, ಹೊಸಪೇಟೆ ತಾಲ್ಲೂಕು,ಪಾಪಿನಾಯಕಹಳ್ಳಿ ಗ್ರಾಮಪಂಚಾಯಿತಿಗೆ ಸೇರಿರುವ ನಾಗಪ್ಪ ಕ್ಯಾಂಪ್ನಾ ಒಂದು ಸಣ್ಣ ಕಿರು ಪರಿಚಯ :  ನಾನು  ಮೈನಿಂಗ್   ಏರಿಯಾದಿಂದ ಬಂದವಳು,  ಅಂದರೆ ನಾನು ಜಾಸ್ತಿ ಮೈನಿಂಗ್ ಕೆಲಸ ಮಾಡಿದವಳಲ್ಲ. ನನ್ನ ತಂದೆ ತಾಯಿ  ಆಂಧ್ರದಿಂದ ವಲಸೆ ಬಂದವರು.  ಮೈನಿಂಗ್ ನಲ್ಲಿ ಸುಮಾರು 50  ವರ್ಷಗಳ ಕಾಲ ಕೆಲಸ ಮಾಡಿದವರು.  ಕೇವಲ ನಮ್ಮ ಕ್ಯಾಂಪ್ ನಲ್ಲಿ 150 ಮನೆಗಳನ್ನು ಹೊಂದಿದೆ. 500 ಮತ್ತು 600  ಜನಸಂಖ್ಯೆಯನ್ನು ಹೊಂದಿರುವ ಒಂದು ಸಣ್ಣ ಕ್ಯಾಂಪ್ ನಮ್ಮದಾಗಿದೆ.   ಮೈನಿಂಗ್ ಆರಂಭವಾಗಿದ್ದು 1953 ರಲ್ಲಿ ಸ್ಟಾರ್ಟ್ ಆಗಿದೆ.  ಇಲ್ಲಿನ ಜನರು  ಆಂಧ್ರದಿಂದ ವಲಸೆ ಬಂದವರು ಆಗಿದ್ದರಿಂದ ಮೂಲತಃ ಅವರ ಭಾಷೆಯೇ ತೆಲುಗು  ಭಾಷೆ ಆಗಿದೆ.  ಇಲ್ಲಿನಾ ಜನ ತಮ್ಮ ಜೀವನವನ್ನು ಮೈನಿಂಗ್ ನಲ್ಲಿ  ಮುಂದುವರಿಸಿದರು.
 ಶಿಕ್ಷಣದ ಕೊರತೆ : ಇಲ್ಲಿ ಶಿಕ್ಷಣದಿಂದ ತುಂಬಾ ಮಕ್ಕಳು ಹಾಗೂ ಯುವ ಜನರು ವಂಚಿತರಾಗಿದ್ದಾರೆ. ಏಕೆಂದರೆ ಕೇವಲ ಮೈನಿಂಗ್ ನಿಂದಲೇ ಅಂತ ಹೇಳಬಹುದು. ನಮ್ಮ ಕ್ಯಾಂಪಿನಲ್ಲಿ ಪ್ರೈಮರಿ ಶಾಲೆ  ಒಂದು ಇತ್ತು. ಅದು ಒಂದರಿಂದ ಏಳನೇ ತರಗತಿಯವರೆಗೆ. ಆಗ ಎಲ್ಲಾ ತಂದೆ ತಾಯಿಯರು ಕ್ಯಾಂಪಿನಲ್ಲಿ ಇರುವುದರಿಂದ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು. ಇನ್ನು ಕೆಲವು ಪೋಷಕರು ಅವರ ಜೊತೆಯಲ್ಲಿಯೇ ಮೈನಿಂಗ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪ್ರೈಮರಿ ಶಾಲೆ ಮುಗಿದ ನಂತರ ಹೈಸ್ಕೂಲ್ ಗೆ ಕಳಿಸಬೇಕಾದರೆ ಎಲ್ಲಾ ಮನೆಗಳಲ್ಲಿ ಒಪ್ಪುತ್ತಿರಲಿಲ್ಲ.  ಏಕೆಂದರೆ ಆರ್ಥಿಕ ಸಮಸ್ಯೆ ಅವರಲ್ಲಿ ಕಾಡುತಿತ್ತು.  ಇನ್ನು ಕೆಲವು ಮನೆಗಳಲ್ಲಿ ಕಳಿಸಲು ಸಿದ್ಧರಾಗಿದ್ದರು ಕೂಡ ಮಕ್ಕಳಲ್ಲಿ ಓದುವ ಆಸಕ್ತಿ ಇರಲಿಲ್ಲ, ಏಕೆಂದರೆ ಮನೆ ಪರಿಸ್ಥಿತಿಯನ್ನು ನೋಡಿ ಅವರಿಗೆ ಹೋಗಲು ಇಷ್ಟವಾಗುತ್ತಿರಲಿಲ್ಲ ಮತ್ತೆ ಅವರಿಗೆ ಶಿಕ್ಷಣದ ಬಗ್ಗೆ ಹರವು ಕೂಡ ಗೊತ್ತಿರಲಿಲ್ಲ.    ಕೆಲವು ಮಕ್ಕಳು SSLC ನಲ್ಲಿ ಸಬ್ಜೆಕ್ಟ್ ಗಳಲ್ಲಿ ಫೇಲ್ ಆದ್ರೆ  ಮತ್ತೆ ಕಟ್ಟುವ ಪ್ರಯತ್ನ ಕೂಡ ಮಾಡುತ್ತಿರಲಿಲ್ಲ. ಕೇವಲ ಲಾರಿ ಲೈಸೆನ್ಸ್ ಗೋಸ್ಕರ SSLC ಯನ್ನು ಓದುತ್ತಿದ್ದರು.  ಈಗಲೂ ಕೂಡ ಅಲ್ಲಿನ ಯುವ ಜನರಿಗೆ ಲಾರಿ ಡ್ರೈವರ್ ಗಳು ಮತ್ತೆ ಕಿನ್ನರ್ ಗಳಾಗಿ ಉಳಿದುಬಿಟ್ಟಿದ್ದಾರೆ. ಈ ಎರಡು ಕೆಲಸಗಳು ಬಿಟ್ರೆ ಇನ್ನೂ ಯಾವುದು ಕೆಲಸ  ಅವರಿಗೆ ಗೊತ್ತೇಯಿಲ್ಲ. ಏಕೆಂದರೆ ಜಾಸ್ತಿ ಮೈನಿಂಗ್ ಕೆಲಸಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತಾರೆ. ಹಾಗೆಯೇ ಹೆಣ್ಣು ಮಕ್ಕಳು ಕೂಡ ಗಾರೆ ಕೆಲಸಕ್ಕೆ, ಬಿಲ್ದರ್ ಕಳಸಕ್ಕೆ, ಕೂಲಿ ಕಳ್ಸಕ್ಕೆ ಸಣ್ಣ ಸಣ್ಣ ವಯಸ್ಸಿಗೆ ಕೆಲಸ ಮಾಡಲು ಹೋಗ್ತಾರೆ. 
 ನಮ್ಮ ಕ್ಯಾಂಪಿನಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ  ದುರ್ಬಲರಾಗಿದ್ದೇವೆ.  ಏಕೆಂದರೆ ನಮ್ಮ ಊರಿನಲ್ಲಿ ಮೈನಿಂಗ್ ಗೆ ಇರುವ ಪ್ರಾಮುಖ್ಯತೆ   ಶಿಕ್ಷಣಕ್ಕೆ ಇಲ್ಲ.    ದಿನಕ್ಕೆ 150 ರುಪಾಯಿಯಂತೆ  ಗಣಿಗಾರಿಕೆಯಲ್ಲಿ ಲೇಬರ್, ಹೆಲ್ಪರ್, ಕಲ್ಲು ಹೊಡೆಯುವುದು  ಮಾಡುತ್ತಿದ್ದವರು. ಇಲ್ಲಿನಾ ಮಕ್ಕಳು ಶಿಕ್ಷಣದಿಂದ ದೂರವಾಗಿ ಮೈನಿಂಗ್ ನಲ್ಲಿ ಕೆಲಸ ಮಾಡುತ್ತ ಸಣ್ಣ ವಯಸ್ಸಿಗೆ ಕ್ಯಾನ್ಸರ್, ಹೃದಯ, ಅಂಗವಿಕಲರಾಗಿದ್ದಾರೆ, ಕಿವಿ ಕೇಳಿಸದೆ ಇರುವುದು, ಎದೆ ನೋವು, ಮಂಡಿ ನೋವು, ಬೆನ್ನು ನೋವು ಇವುಗಳು ಕಾಣಿಸಿಕೊಳ್ಳುತ್ತಿವೆ. ನಾವು ಗಣಿಭಾದಿತ ಪ್ರದೇಶಗಳಿಲ್ಲ ವಾಸ ಮಾಡುವುದರಿಂದ  ಇತ್ತೀಚಿಗೆ ಎರಡು ತಿಂಗಳಯಿಂದೆ ಜಿಲ್ಲಾಡಳಿತ ಮತ್ತು ಸಖಿ ಸಂಸ್ಥೆಯವರು ಆರ್ಥಿಕವಾಗಿ ಸಾಮಾಜಿಕವಾಗಿ ನಮ್ಮ ಕ್ಯಾಂಪ್ ನಲ್ಲಿ ಸರ್ವೆಯನ್ನು ಮಾಡಿದದ್ದೆವು. ಅದರಲ್ಲಿ ನಾವು ಕೂಡ ಭಾಗವಹಿಸಿದ್ದೆವು. ಆಗಿನ ಪರಿಸ್ಥಿತಿಯೇ  ಬೇರೆ, ಈಗಿನ ಪರಿಸ್ಥಿತಿಯೇ  ಬೇರೆಯಾಗಿದೆ. ಯಾಕೆಂದರೆ  ಹಾಗೀನ ತರ  ಲಾರಿಗಳಿಗೆ ಮೂಮೆಂಟ್ ಇಲ್ಲದೆ ಮನೆ ಮುಂದೇನೆ ನಿಂತಿವೆ. ಇದರಿಂದ ಅಲ್ಪ ಸ್ವಲ್ಪ ಶಾಲಾಕಲೇಜುಗಳಿಗೆ  ಹೋಗುತ್ತಿರುವ ಯುವಜನರಿಗೆ  ತುಂಬಾ  ಸಮಸ್ಯೆಗಳು ಎದುರಗುತ್ತಿವೆ.  ಆದರಿಂದ ನಾವು ನಮ್ಮೂರಲ್ಲಿ ಹತ್ತು ಜನ ಯುವಜನರನ್ನು ಸೇರಿಸಿ ಒಂದು  ಸಣ್ಣ ಗುಂಪು ರಚನೆ ಮಾಡಿಕೊಂಡೆವು.ಆ ಗುಂಪಿಗೆ ಗಗನ ಯುವಬಳಗ ಎಂದು ಹೆಸರು ಇಟ್ಟುಕೊಂಡೇವು. ಇದರಿಂದ ವಾರಕ್ಕೆ ಒಂದು ದಿನವಾದರೂ  ಕಲಿಕೆಗೆ ಸಂಬಂಧ ಪಟ್ಟಂತೆ ನಾಲ್ಕು ಕ್ಯಾಂಪ್ ಗಳಿಗೆ ಅವರ್ನೆಸ್ ಮಾಡುತ್ತಿದ್ದೆವು.  ಮಹಿಳೆಯಾರಿಗೆ, ದಲಿತ ಮಹಿಳೆಯಾರಿಗೆ, ಯುವಜನರಿಗೆ ಮತ್ತು ಮಕ್ಕಳಿಗೆ  ಶಿಕ್ಷಣದ ಅರಿವು ಮೂಡಿಸಬೇಕೆಂದು ನಮ್ಮ ಸಖಿ ಸಂಸ್ಥೆ ಕಡೆಯಿಂದ  ಪ್ರಯತ್ನ ಮಾಡುತ್ತಿದೆವೆ. ಇನ್ನೊಂದು ನಮ್ಮ ಕ್ಯಾಂಪ್ನಲ್ಲಿ ಮಹಿಳೆಯರಿಗೆ ಮಾತನಾಡುವ ಹಕ್ಕು,  ಶಿಕ್ಷಣದ ಹಕ್ಕು, ಉದ್ಯೋಗ ಹಕ್ಕು ಇಲ್ಲ. ಅವರಿಗೆ ಯಾವುದೇ ರೀತಿಯಾ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಕಾಶ ಕೂಡ ಅವರಿಗೆ ಇಲ್ಲದಂತೆಯಾಗಿದೆ.
ಗಣಿ ಬಾಧಿತ ಪ್ರದೇಶಗಳಲ್ಲಿ ಜಿಲ್ಲಾಡಳಿತದ DMF ಅಡಿಯಲ್ಲಿ ಬರುವ  ಫ್ಯಾಂಡ್ ಬಗ್ಗೆ  ಯುವ ವಿದ್ಯಾರ್ಥಿಗಳಿಗೆ ಮಾಹಿತಿ ಇಲ್ಲ. ಆದರಿಂದ ನಮ್ಮ ಸಂಸ್ಥೆ ನೆರವುನಿಂದ ನಾವು ಜಿಲ್ಲಾಧಿಕಾರಿ ಕಚೇರಿ ಹೋಗಿ ಮೂಲಭೂತ ಸೌಕರ್ಯ ಗಳು ಕಲ್ಪಿಸಬೇಕೆಂದು ಮನವಿ ಸಲ್ಲಿಸಿದ್ದೆವು.
ನಮ್ಮ ಗಗನಯುವ ಬಳಗ ಗುಂಪಿನಿಂದ ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ತಡೆ, ದೇವದಾಸಿ ಪದ್ಧತಿಯ  ನಿರ್ಮೂಲನೆ ಮಾಡಲು ಸಣ್ಣ ಪುಟ್ಟ ಕಾರ್ಯಕ್ರಮಗಳು, ನಾಟಕ ಪ್ರದರ್ಶನ ಮಾಡುತ್ತಿದ್ದೆವು. ಇದರಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ಶಾಲೆಗೆ ಬಗ್ಗೆ ಒಂದು ಸಣ್ಣಅರಿವು ಬರುವ ಆಗೇ ಪ್ರಯತ್ನ ಮಾಡಿದೆವು. ಇತ್ತೀಚಿಗೆ ನಮ್ಮ ಕ್ಯಾಂಪ್ ನಲ್ಲಿ ಹತ್ತು ಮಂದಿ ಅಷ್ಟೇ ಡಿಗ್ರಿ ಕಾಲೇಜ್ ಗಳಿಗೆ  ಹೋಗ್ತಾಯಿದ್ದಾರೆ.  ಈ ವಿದ್ಯಾರ್ಥಿಗಳಿಗೆ ಕೂಡ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಆ ವಿದ್ಯಾರ್ಥಿಗಳು ಪ್ರತಿದಿನ ಆಟೋ ಗೆ  40 ರೂಪಾಯಿ ಚಾರ್ಜ್ ಕೊಟ್ಟು ಕಾಲೇಜುಗಳಿಗೆ ಹೋಗುತ್ತಾರೆ. ನಮ್ಮೂರಿಗೆ ಇವತ್ತಿನವರೆಗೂ ಒಂದು ಸಲವಾದರೂ ಬಸ್ ಎಂಬುದು ಬಂದೇ ಇಲ್ಲ! ಇನ್ನೂ ಮನೆಯಲ್ಲಿಯಂತೂ ನಾವು ದುಡಿದು ತಿನ್ನೋದಕ್ಕೆ ಕಷ್ಟವಾಗುತ್ತಯಿದೆ  ಇನ್ನೂ ನಿಮಗೆ  ಆಟೋ ಚಾರ್ಜ್ ಗೆ , ಕಾಲೇಜು ಫೀಜ್ ಗೆ, ಬುಕ್ಸ್, ಬ್ಯಾಗ್  ಬಟ್ಟೆ ಗೆ ಕೊಟ್ಟು ನಿಮ್ಮನ್ನು ಸಾಕಬೇಕಾದ್ರೆ ತುಂಬಾ ಕಷ್ಟವಾಗುತ್ತದೆ ಅಂತಾ ಮನೆಯಲ್ಲಿ ಪೋಷಕರು ಹೇಳುತ್ತಾರೆ. ಇನ್ನೂ ಗ್ರಾಮಪಂಚಾಯಿತಿ ಕಡೆಯಿಂದ ಬುಕ್ ಬಿಲ್ ಅಮೌಂಟ್ ಇಬ್ಬರಿಗೊ ಮೂವರಿಗೋ ಬರುತ್ತೆ. ಯಾಕೆ ನಮಗೂ ಬಂದಿಲ್ಲ ಅಂತಾ ಕೇಳಿದ್ರೆ ಮತ್ತೊಮ್ಮೆ ಹಾಕ್ತಿವಿ ಅಂತಾ ಹೇಳುತ್ತಾರೆ. ವಿದ್ಯಾರ್ಥಿಗಳಿಗೆ ಅಂತೂ ಓದುವುದಕ್ಕೆ ಗ್ರಂಥಾಲಯವೆ ಇಲ್ಲ. ಇದ್ದಾರು ಅದು ಪಾಪಿನಾಯಕನಹಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಇದೆ. ನಮ್ಮೂರಿನಿಂದ 6 ಕಿಲೋಮೀಟರ್ ದೂರದಲ್ಲಿ ಇದೆ. ಆದರಿಂದ ಮಹಿಳೆಯರಿಗೆ  ಗ್ರಂಥಾಲಯಕ್ಕೆ ಹೋಗಲು ತೊಂದ್ರೆ ಆಗ್ತಿದೆ. ಇನ್ನೂ ತುಂಬಾ ಸಮಸ್ಯೆಗಳು ನಮ್ಮೂರಿನ ಯುವಜನರು ಅನಾಭವಿಸುತ್ತಿದರೆ. ಇವೆಲ್ಲ ಕಷ್ಟಗಳ್ಳನ್ನು ಮೀರಿ ತಮ್ಮ ಗೆಲುವಿಗಾಗಿ ಶ್ರಮ ವಾಯಿಸುತ್ತಿದ್ದಾರೆ.

- R ಸಾವಿತ್ರಿ, ಹೊಸಪೇಟೆ.


ಗಮನಹರಿಸಿ ಸರ್ಕಾರಿ ಶಾಲೆಗಳತ್ತ (ಲೇಖನ) - ಆಶಾ ಎನ್. ಬಳ್ಳಾರಿ.

ಭಾರತದಲ್ಲಿ ಶಿಕ್ಷಣದ ಹಕ್ಕು ಮೂಲಭೂತ ಹಕ್ಕಾಗಿದೆ, ಇದು 6 ರಿಂದ 14 ವರ್ಷಗಳ ನಡುವಿನ ಭಾರತದ ಪ್ರತಿಯೊಬ್ಬ ನಾಗರಿಕನು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಾನೆ ಎಂದು ಹೇಳುತ್ತದೆ. ಆದರೆ ಅತಿ ಹೆಚ್ಚು ಶಿಕ್ಷಣದ ಕೊರತೆ ಕಂಡು ಬರುವುದು ಹಳ್ಳಿ ಮತ್ತು ಗ್ರಾಮಗಳಲ್ಲಿ ಯಾಕೆ ಇದರ ಸಮಸ್ಯೆ ನಗರಗಳಲ್ಲಿ ಇರುವುದಿಲ್ಲ ಎಂಬುವುದು ಕೆಲವರಿಗೆ ಕಾಡುವ ಪ್ರಶ್ನೆ ನಗರಗಳಲ್ಲಿಯೂ ಸಹ ಶಿಕ್ಷಣದ ಸಮಸ್ಯೆಗಳು ಕಂಡುಬರುತ್ತದೆ ಆದರೆ ಅಲ್ಲಿ ಯಾರು ಅದರ ಬಗ್ಗೆ ಮಾತನಾಡುವುದಿಲ್ಲ ಶಿಕ್ಷಣ ಮತ್ತು ಆರ್ಥಿಕ ಭದ್ರತೆಗಾಗಿ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಾರೆ ಮಕ್ಕಳ ಭವಿಷ್ಯ ಎಷ್ಟು ಮುಖ್ಯ ಅದರಲ್ಲೂ ಇಂದಿನ ಸಮಾಜದಲ್ಲಿ ಎಷ್ಟು ಮುಖ್ಯವೆಂಬುದು ನಿಮಗೆಲ್ಲಾ ತಿಳಿದಿದೆ. 

ಕೊರೊನಾ ಸಂದರ್ಭದಲ್ಲಿಯಂತು ಹಲವಾರು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ಕಳಿಸಲು ಶುರು ಮಾಡಿದ್ದರು. ಆಗ, ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿದ್ಯಾಗಮ ಎಂಬ ಯೋಜನೆಯನ್ನು ಜಾರಿಗೊಳಿಸಿತ್ತು. ಅದರನ್ವಯ, ಸರ್ಕಾರಿ ಶಾಲೆಗಳ ಶಿಕ್ಷಕರು ಮಕ್ಕಳು ಇರುವ ಮನೆಗಳ ಸುತ್ತಮುತ್ತಲಿನ ಮೈದಾನ, ಪಾರ್ಕ್ ಹಾಗೂ ಸಮುದಾನ ಭವನ, ಜಗುಲಿಗಳ ಮೇಲೆ ನಿಂತು ಪಾಠ ಮಾಡುತ್ತಿದ್ದರು. ಈಗ, ಪರಿಸ್ಥಿತಿ ತಿಳಿಯಾಗಿದೆ. ಶಾಲೆಗಳು ಪುನರಾರಂಭವಾಗಿವೆ. ಆದರೆ, ಪೋಷಕರು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ.

ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲೂಕಿನ ಶಾಂತನಹಳ್ಳಿಯಲ್ಲಿ ಶಿಕ್ಷಣದ ಕೊರತೆ ಇದೆ. ಇಲ್ಲಿನ ಜನಸಂಖ್ಯೆ ಒಟ್ಟು ಸರಾಸರಿ ಐನೂರು ಜನರು ಈ ಪುಟ್ಟ ಪ್ರದೇಶದಲ್ಲಿ100 ಯುವಜನರು ಇದ್ದಾರೆ. ಉಳಿದವರೆಲ್ಲ 400 ಜನ ಇದ್ದಾರೆ. ಒಂದರಿಂದ ಐದನೇ ತರಗತಿಗೆ ಮಾತ್ರವೇ ಶಿಕ್ಷಣ ಇರುವುದರಿಂದ ಮುಂದಿನ ಶಿಕ್ಷಣಕ್ಕಾಗಿ ಬೇರೆ ಹಳ್ಳಿಗಳ ಕಡೆಗೆ ಹೋಗಬೇಕು. ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲದೆ ಎಷ್ಟೋ ಜನರು ಶಿಕ್ಷಣವನ್ನು ತೊರೆಯುತ್ತಿದ್ದಾರೆ. ಇನ್ನೂ ಹೆಣ್ಣು ಮಕ್ಕಳ ಸ್ಥಿತಿಯಂತೂ ಹೀನಾಯವಾಗಿದೆ ಹತ್ತನೇ ತರಗತಿಯವರೆಗೆ ಓದುವುದು ತುಂಬಾ ಅಪರೂಪವಾಗಿದೆ. 8ನೇ ಅಥವಾ 9ನೇ ತರಗತಿವರೆಗೆ ಮಾತ್ರವೇ ಓದುತ್ತಾರೆ.

ಮುಂದಿನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಕಾರಣ ಮದುವೆಯ ವಯಸ್ಸಾಯ್ತು ಇನ್ನೂ ಹೊಲ, ಮನೆ ಕೆಲಸ ಇದೆಲ್ಲ ಕಲಿಯಲಿ ಎಂದು ಅವರ ಭವಿಷ್ಯವನ್ನು ಹಾಳು ಮಾಡುತ್ತಾರೆ. ತಮ್ಮ ಮಗಳಿಗೆ ಮದುವೆ ಮಾಡಬೇಕು ಪಕ್ಕದ ಮನೆಯವರ ಮಗಳಿಗೆ ಮದುವೆಯಾಗಿದೆ, ಜನರು ಮಾತನಾಡುತ್ತಾರೆ ಮತ್ತು ಅವಳು ಯಾರನ್ನಾದರೂ ಇಷ್ಟಪಟ್ಟು ಮದುವೆ ಆದರೆ ನಮ್ಮ ಜಾತಿ ಕೆಡುತ್ತದೆ ಮಾನ ಮರ್ಯಾದೆ ಹೋಗುತ್ತದೆ ಹೀಗೆ ಇಂತಹ ಭಯಗಳಿಗೆ ಹೆಣ್ಣನ್ನು ಬಲಿಯಾಗಿ ಮಾಡುತ್ತಾರೆ. 

ಅದೇ ಪಕ್ಕದ ಮನೆಯ ಹುಡುಗಿ ಡಿಗ್ರಿ ಅಥವಾ ಪಿಯುಸಿ ಓದುತ್ತಿದ್ದಾಳೆ ನನ್ನ ಮಗಳು ಓದಲಿ ಎಂಬ ಅರಿವು ಮಾತ್ರ ಅವರಲ್ಲಿ ಇರುವುದಿಲ್ಲ. ಇನ್ನೂ ಯುವಕರು ಪಿಯುಸಿ ಅಥವಾ SSLC  ಅಷ್ಟಕ್ಕೇ ಅವರಿಗೆ ಸಾಕು ಆಗಿರುತ್ತದೆ. ತಂದೆ ತಾಯಿ ಮಾಡುವ ಕಸುಬನ್ನೆ ಮುಂದುವರಿಸಿಕೊಂಡು ಹೋಗುತ್ತಾರೆ. ಮನೆಯ ಜವಾಬ್ದಾರಿ ತಂಗಿ,ಅಕ್ಕನ ಮದುವೆ ಮಾಡಬೇಕು ಎಂಬ ಕಾರಣಕ್ಕೆ ಶಿಕ್ಷಣವನ್ನು ಮುಂದುವರಿಸುವುದಿಲ್ಲ ಪ್ರಾಥಮಿಕ ಶಿಕ್ಷಣದ ಕೊರತೆ ಪ್ರತಿಯೊಬ್ಬರಿಗೂ ಇದೆ. ಉತ್ತಮ ಶಿಕ್ಷಣದ ಕೊರತೆ, ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು ಕೊರತೆ ಮತ್ತು ಶಿಕ್ಷಕ ಅಥವಾ ಶಿಕ್ಷಕಿಯರ ಕೊರತೆ ಅತಿ ಹೆಚ್ಚಾಗಿ ಕಂಡು ಬರುತ್ತದೆ ಜೊತೆಗೆ ಪೌಷ್ಟಿಕ ಆಹಾರ, ಪಠ್ಯಪುಸ್ತಕ, ಬಟ್ಟೆ, ಬ್ಯಾಗು ಹೀಗೆ ಮುಂತಾದವುಗಳು ಮಕ್ಕಳಿಗೆ ಇದು ಯಾವುದು ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಎಷ್ಟೋ ಮಕ್ಕಳು  ಶಾಲೆಗೆ ಬರುವುದಿಲ್ಲ. ಮುಂದೆಯಿಂದ ನೋಡಿದರೆ ಶಾಲೆಗಳ ಕಟ್ಟಡಗಳು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಒಳಗೆ ಹೋಗಿ ನೋಡಿದರೆ ಶಾಲೆಗಳ ಕಟ್ಟಡ, ಮುರುಕು ಗೋಡೆ, ಚಾವಣಿ, ಕುಡಿಯುವ ನೀರು, ಸ್ಪಚತೆ ಇದೆಲ್ಲ ಇಲ್ಲದೆ ಇರುವುದು ಕಂಡುಬರುತ್ತಿದೆ.  ಎರಡು ಮೂರು ವಿಷಯಾಧಾರಿತ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿಯನ್ನು ನೇಮಿಸುತ್ತಾರೆ. ಹೀಗಿರುವಾಗ ಒಬ್ಬ ವಿದ್ಯಾರ್ಥಿಗೆ ಅಥವಾ ವಿದ್ಯಾರ್ಥಿನಿಗೆ ಅಷ್ಟೇ ಗುಣಮಟ್ಟದ ಶಿಕ್ಷಣ ದೊರಕಲು ಹೇಗೆ ಸಾಧ್ಯ? ಗುಣಮಟ್ಟದ ಆಹಾರ, ಗುಣಮಟ್ಟದ ತಂತ್ರಜಾಲದ ವ್ಯವಸ್ಥೆ ಅಷ್ಟೇ ಯಾಕೆ ಒಂದು ಸ್ವಚ್ಛವಾದ ಶೌಚಾಲಯ ಕೂಡ ಇರುವುದಿಲ್ಲ.
ಗ್ರಾಮೀಣ ಪ್ರದೇಶಗಳಲ್ಲಿ ಶಾಲೆಗಳ ಲಭ್ಯತೆಯೂ ಕಡಿಮೆ ಇದೆ. ಅನೇಕ ವಿದ್ಯಾರ್ಥಿಗಳು ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಮೈಲುಗಟ್ಟಲೆ ದೂರ ಕ್ರಮಿಸಿ ಹೋಗಬೇಕು. ಸಾರಿಗೆ ಸೌಲಭ್ಯ ಇಲ್ಲದಿರುವುದು ಮತ್ತೊಂದು ಸವಾಲಾಗಿದೆ. ಶಾಲೆಗೆ ತಲುಪಲು ಮತ್ತು ಮನೆಗೆ ಹಿಂತಿರುಗಲು ಬಹಳ ಗಂಟೆಗಳು ತೆಗೆದುಕೊಳ್ಳುತ್ತದೆ.
ಗ್ರಾಮೀಣ ಶಿಕ್ಷಣವನ್ನು ಉತ್ತೇಜಿಸುವ ಪ್ರಮುಖ ಮಾರ್ಗವೆಂದರೆ ಉಚಿತ ಶಿಕ್ಷಣವನ್ನು ಹೆಚ್ಚಿಸುವುದು. ನಮ್ಮ ಸಂವಿಧಾನವು ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣದ ಹಕ್ಕನ್ನು ಒದಗಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಮಕ್ಕಳ ದಾಖಲಾತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಬಗ್ಗೆ ಸರ್ಕಾರ ಗಮನಹರಿಸಬೇಕು.

ಹೆಚ್ಚಿನ ಶಾಲೆಗಳನ್ನು ಸ್ಥಾಪಿಸುವ ಮೂಲಕ, ಸರಿಯಾದ ಮೂಲಸೌಕರ್ಯ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಇದನ್ನು ಮಾಡಬಹುದು. ಶಾಲೆಗೆ ಹೋಗುವ ಮಕ್ಕಳ ಸಂಖ್ಯೆಯು ಪ್ರಾಥಮಿಕ ಹಂತದವರೆಗೆ ಶಿಕ್ಷಣವನ್ನು ಉಳಿಸಿಕೊಳ್ಳಬೇಕು ಎಂದು ಸರ್ಕಾರವು ಖಚಿತಪಡಿಸಿಕೊಳ್ಳಬೇಕು. ಸಂಪನ್ಮೂಲಗಳಲ್ಲಿ ಪಠ್ಯಪುಸ್ತಕಗಳು, ಲೇಖನ ಸಾಮಗ್ರಿಗಳು, ಪ್ರಯೋಗಾಲಯಗಳು, ಆಟದ ಮೈದಾನಗಳು ಮತ್ತು ಬೆಂಚುಗಳು ಉತ್ತಮ ಸ್ಥಿತಿಯಲ್ಲಿರಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಲಭ್ಯವಿರಬೇಕು. ಇದು ಶಿಕ್ಷಣದ ಉದ್ದೇಶವನ್ನು ಸಾಧಿಸಲು ಮತ್ತು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹೆಣ್ಣು ಮಕ್ಕಳಿಗೆ ಋತು ಚಕ್ರದ ಬಗ್ಗೆ ಅರಿವು ನೀಡಬೇಕು ಅವರಿಗೆ ಸ್ಯಾನಿಟರಿ ಪ್ಯಾಡ್ ಗಳನ್ನು ಪ್ರತಿ ತಿಂಗಳು ಸಿಗುವಂತೆ ನೋಡಿಕೊಳ್ಳಬೇಕು ಇದು ಯಾವುದು ಹಳ್ಳಿಗಳ್ಳಿ ಸಿಗುವುದಿಲ್ಲ. ಮತ್ತೆ ಮುಟ್ಟಿನ ಸಮಯದಲ್ಲಿ ಅವರು ದೂರದ ಶಾಲೆಗೆ ಹೋಗುವುದಿಲ್ಲ ಇದರಿಂದ ಅವರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗದೆ ಅವರ ಶಿಕ್ಷಣವನ್ನು ಮುಂದುವರಿಸದೇ ಅಲ್ಲಿಗೆ ನಿಲ್ಲಿಸುತ್ತಾರೆ.
ಇದು ನನ್ನ ಊರಿನ ಸಮಸ್ಯೆ ಒಂದೇ ಅಲ್ಲ ಪ್ರತಿ ಗ್ರಾಮದಲ್ಲಿ ಇರುವ ಸರ್ಕಾರಿ ಶಾಲೆಗಳ ಸಮಸ್ಯೆಯಾಗಿದೆ. ಮತ ಪ್ರಚಾರ    ಮಾಡುವಾಗ, ಮತವನ್ನು ಚಲಾಯಿಸುವಾಗ, ಭರವಸೆಗಳ ಬಂಡಿಯನ್ನು ನೀಡುವಾಗ ಯಾರಿಗೂ ನೆನಪಿಗೂ ಬಾರದೆ ಇರುವುದು ಸರ್ಕಾರಿ ಶಾಲೆಗಳು. ಗ್ರಾಮೀಣ ಪ್ರದೇಶದ ಜನರಿಗೂ ಇದರ ಅರಿವು ಇಲ್ಲ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ . ಏನನ್ನೂ ತಿಳಿಯದ ಮಕ್ಕಳು ಪ್ರತಿ ದಿನವೂ ಶಾಲೆಗೆ ಹೋಗಿ ಬರುತ್ತಾರೆ. ಎಲ್ಲಿಯವರೆಗೆ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದಿಲ್ಲ. ಅಲ್ಲಿಯವರೆಗೂ ಅಂಬೇಡ್ಕರ್ ಅವರ ಕನಸು ನನಸಾಗಿದೆ. ಪ್ರತಿ ನಿಮಿಷ ನಾವು ಸಂವಿಧಾನಕ್ಕೆ ಅವಮಾನ ಮಾಡಿದಂತೆಯಾಗುತ್ತದೆ.

- ಆಶಾ ಎನ್., ಬಳ್ಳಾರಿ.

ಸ್ವಾಭಿಮಾನ (ಸಣ್ಣ ಕಥೆ) - ಮಾಲತಿ ಮೇಲ್ಕೋಟೆ.

ಮಗಳೊಂದಿಗೆ ಶಾಪಿಂಗ್
ಮಾಲ್ ನಲ್ಲಿ ಶಾಪಿಂಗ್ ಮುಗಿಸಿ
ಒಂದೊಂದು ಕೈಯಲ್ಲಿಯೂ
ಎರಡು,ಮೂರು ಚೀಲಗಳನ್ನು
ಹಿಡಿದು ಹೊರಬಂದೆ.ಅವಳ
ಕೈಯಲ್ಲಿಯೂ ನಾಲ್ಕೈದು
ಚೀಲಗಳಿದ್ದವು.ಪಾರ್ಕಿಂಗ್
ಹತ್ತಿರದಲ್ಲಿ ಸಿಗದಿದ್ದರಿಂದ
೧೦೦ಮೀಟರ್ ದೂರದಲ್ಲಿ
ನಿಂತಿದ್ದ ಕಾರ್ ವರೆಗೆ ಹೋಗ-
ಬೇಕಿತ್ತು.ಸುತ್ತಮುತ್ತ ಬ್ಯಾಗ್
ಹಿಡಿದು ತರಲು ಯಾರಾದರೂ
ಸಿಗಬಹುದಾ ಎಂದು ನೋಡು-
ತ್ತಿದ್ದಾಗ, ೮-೧೦ ವಯಸ್ಸಿನ
ಹುಡುಗನೊಬ್ಬ ಹಳೆಯ
ಬಟ್ಟೆ ತೊಟ್ಟು ನಿಂತಿದ್ದುದು
ಕಾಣಿಸಿತು.ಅವನನ್ನು ಹತ್ತಿರ
ಕರೆದು ಸ್ವಲ್ಪ ದೂರದಲ್ಲಿರುವ
ನಮ್ಮ ಕಾರ್ ವರೆಗೆ ಚೀಲಗಳನ್ನು ಹಿಡಿದು ತರಲು
ಕೇಳಿದಾಗ ಮರುಮಾತಾಡದೆ
ಎರಡು ಕೈಗಳಲ್ಲೂ ಎರಡೆರಡು
ಚೀಲಗಳನ್ನು ಹಿಡಿದು ನಮ್ಮ
ಜೊತೆ ಬಂದ.ಚೀಲಗಳನ್ನು
ಕಾರ್ ಒಳಗೆ ಇರಿಸಿ ಆ ಹುಡುಗ-
ನಿಗೆ ೫೦ರೂ.ಗಳ ನೋಟು
ಕೊಡಲು ಹೋದಾಗ ತೆಗೆದು
ಕೊಳ್ಳಲೇ ಇಲ್ಲ.ತನ್ನ ತಾಯಿ
ಹತ್ತಿರದಲ್ಲೇ ಎಲ್ಲೋ ಹೋಗಿದ್ದ
ರಿಂದ ಅವರಿಗಾಗಿ ಕಾಯುತ್ತಾ
ನಿಂತಿದ್ದುದಾಗಿ ಹೇಳಿ
ಆ ಹುಡುಗ ಓಡಿಹೋಗಿಬಿಟ್ಟ.
ಹಳೆಯ ಬಟ್ಟೆ ಹಾಕಿಕೊಂಡಿದ್ದ
 ಅವನನ್ನು ಕೂಲಿ ಹುಡುಗ ಎಂದು ತಿಳಿದು ಸಹಾಯಕ್ಕೆ 
ಕರೆದ ನಮಗೆ ‌ಅವನ 
ಸ್ವಾಭಿಮಾನವನ್ನು ನೋಡಿ,
ನಾಚಿಕೆಯಿಂದ ತಲೆ 
ತಗ್ಗಿಸುವಂತಾಯಿತು.

- ಮಾಲತಿ ಮೇಲ್ಕೋಟೆ.


ಅಕ್ಷರದ ಅಭಿಮಾನ (ಕವಿತೆ) - ಶಾರದಾ ದೇವರಾಜ್.

ಬರವಣಿಗೆಯ ಮೇಲಿರಲಿ 
ಅಕ್ಷರದ ಅಭಿಮಾನ
 ಇದ ತೋರಿಸಲು ಬೇಕಿಲ್ಲ 
ಯಾವ ಬಿಂಕ ಬಿಗುಮಾನ l

 ಅಕ್ಕರೆಯ ಅಕ್ಷರದೊಳಿರಲಿ
 ಶುದ್ಧ ಭಾವದ ದೃಡೀಕರಣ
 ಅಕ್ಷರದರ್ಥಗಳ ಮೇಲಿರಲಿ
 ಸ್ಪಷ್ಟ ಬದುಕಿನ ನಿಲ್ದಾಣl

 ನಿಂತ   ನೀರಂತಾಗದಿರಲಿ
 ಅಕ್ಷರ ಸಾಹಿತ್ಯದ ಅಬ್ಬರ
 ಹರಿವ ನದಿಯಂತಾಗಲಿ
 ಕೀರ್ತಿಗರಿಮೆಯ ಸಂಸ್ಕಾರl

 ಆದರ್ಶದ ಬರವಣಿಗೆ
 ಶುದ್ಧ ಜೀವನದ ಬೆಳವಣಿಗೆ
 ತೋರ್ಪಡಿಸು ಸಂಯಮವ
 ಸಾಹಿತ್ಯ ಸಂಸ್ಕೃತಿಯ ಕೌಸ್ತುಭವl

- ಶಾರದಾ ದೇವರಾಜ್, A  ಮಲ್ಲಾಪುರ.


ಸಿನಿಮಾ ಒಂದು ಜನಪದ ಕಲೆ‌ (ಕೃತಿ ವಿಮರ್ಶೆ) - ಕಾಶಿನಾಥ ಮುದ್ದಾಗೋಳ.

ಸಿನಿಮಾ ಒಂದು ಜನಪದ ಕಲೆ ಪುಸ್ತಕ ಬರೆದವರು ಬರಗೂರು ರಾಮಚಂದ್ರಪ್ಪ.
ಈ ಪುಸ್ತಕವು 2005ರಲ್ಲಿ ಮೊದಲ ಮುದ್ರಣ 2016ರಲ್ಲಿ ಎರಡನೇ ಮುದ್ರಣವಾಗಿದೆ. ಪುಸ್ತಕ ಅರ್ಪಣೆ ಶ್ರೀ ಸುರೇಶ್ ಅರಸು ಅವರಿಗೆ ಎಂದು ಆರಂಭಗೊಳ್ಳುವ ಈ ಪುಸ್ತಕವು ಮುನ್ನುಡಿಯ ಬದಲಿಗೆ 'ಯಾತನೆ -ಚಿಂತನೆ'ಎಂದು ಪ್ರಾರಂಭಗೊಂಡು ಕೊನೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ಸಂದರ್ಶನಗಳ ಕೆಲ ಆಯ್ದ ಭಾಗಗಳ ಮೂಲಕ ಮುಗಿಯುತ್ತದೆ.

ಬರಗೂರು ತಮ್ಮ ಜೀವನದಲ್ಲಿ ಸಿನಿಮಾ ಕಡೆ ವಾಲಿದ ಅನುಭವದಿಂದ ತಾವೇ ನಿರ್ಮಾಪಕರು ನಿರ್ದೇಶಕರು ಆಗಿ ಕೆಲಸ ಮಾಡಿರುವ ಹಂತಗಳನ್ನು ಇಲ್ಲಿ ವಿವರಿಸಿದ್ದಾರೆ. ಅವರು ಬರೆದ ಮತ್ತು ಕೆಲವು ಪ್ರಕಟಕೊಂಡ ಲೇಖನಗಳು ಇಲ್ಲಿ ಸಾಕ್ಷಿಪಡಿಸಿದ್ದಾರೆ ಅಥವಾ ಸಂಪಾದಿಸಿದ್ದಾರೆ.
ಪುಸ್ತಕದ ಹೆಸರು 'ಸಿನಿಮಾ ಒಂದು ಜನಪದ ಕಲೆ 'ಎನ್ನುವುದು ನೋಡಿದಾಗ ವಯಕ್ತಿಕವಾಗಿ ನನಗೆ ತುಂಬಾ ಆಶ್ಚರ್ಯವನಿಸಿತು ಮತ್ತು ಅಷ್ಟೇ ಕುತೂಹಲವು ಇತ್ತು. ಇದೇನಿದು ಹೊಸ ತರಹದ ಶೀರ್ಷಿಕೆ ಎನಿಸಿತು. ಮೊದಲನೆಯ ಭಾಗದಲ್ಲಿ ಸಿನಿಮ ಒಂದು ಜನಪದ ಕಲೆ ಜನಪದ ಮತ್ತು ಜಾನಪದದ ವ್ಯತ್ಯಾಸವನ್ನು ವಿವರಿಸುತ್ತಾ, ಸಾಹಿತ್ಯ ಮತ್ತು ಸಿನಿಮಾ ಒಂದಕ್ಕೊಂದು ಹೇಗೆ ಬಿಗಿದುಕೊಂಡಿವೆ ಮತ್ತು ಅವು ಎಷ್ಟರಮಟ್ಟಿಗೆ ಅವಲಂಬಿತವಾದವು ಅದನ್ನ ಅರಿತುಕೊಂಡು ಬರಗೂರರು ಮಾಡಿದಂತಹ ಕಾರ್ಯಗಳ ಬಗ್ಗೆ ಸಾಹಿತ್ಯದ ಜೊತೆ ಜೊತೆಗೆ ಸಿನಿಮಾ ಕಟ್ಟುವ ಪರಿಯನ್ನ ಇಲ್ಲಿ ರಾಮಚಂದ್ರಪ್ಪನವರು ವಿವರಿಸುವ ರೀತಿ ತುಂಬಾ ಸ್ವಾರಸ್ಯಕರವಾದದ್ದು.
ಭಾಷೆ, ತಂತ್ರಜ್ಞಾನ ಮತ್ತು ಸಾಹಿತ್ಯ ಜಟಿಲಗೊಂಡ ಕೊಂಡಿಯಂತೆ ಬೆಸೆದುಗೊಂಡಿವೆ. ಒಂದು ಚಲನಚಿತ್ರಕ್ಕೆ ಈ ಮೂರರ ಮೇಲೆ ಎಷ್ಟು ಸಾಧ್ಯವೊ ಅಷ್ಟರಮಟ್ಟಿಗೆ ಕೆಲಸ ಮಾಡಬೇಕಾದ ಅಗತ್ಯತೆ ಮತ್ತು ಅನಿವಾರ್ಯತೆಗಳು ಕಾಣಬಹುದು.

ಸಿನಿಮಾ ಒಂದು ಕಲೋದ್ಯಮ ಎನ್ನುವುದನ್ನು ವಿವರಿಸುತ್ತಾ ಸಿನಿಮಾ ಜನಪದ ಎಂದು ಒಪ್ಪದ ಒಂದಿಷ್ಟು ಉದ್ಯಮಿಗಳಿಗೆ ಮತ್ತು ಬಂಡವಾಳಿಗರಿಗೆ ಉತ್ತರವಾಗಿ ಸಿನಿಮಾ ಒಂದು ಜನಪದ ಅದು ಕಲೆ ಜೊತೆಗೆ ಕಲೋದ್ಯಮ ಎಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯನ್ನ ಸಿನಿಮಾ ಕೇವಲ ಆರ್ಥಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ಗಟ್ಟಿಗೊಳಿಸುವ ಸಾಧನವೆಂದು ವಿವರಿಸುತ್ತಾರೆ. ಈ ಪುಸ್ತಕ ಓದುತ್ತಾ ಹೋದಂತೆ ನನಗೂ ಇದು ಸರಿ ಅನಿಸಿತು. ಕನ್ನಡ ಸಾಹಿತ್ಯ ಸಿನಿಮಾ ಉಪಧಾರೆ ಈ ಭಾಗದಲ್ಲಿ ಕನ್ನಡ ಸಾಹಿತ್ಯದ ಮತ್ತು ಸಿನಿಮಾ ಪರಂಪರೆ ಕುರಿತು ವಿವರಿಸುತ್ತಾ ಸರ್ಕಾರಗಳಿಂದ ಸಿನಿಮಾಗಳಿಗೆ ಸಿಗುವ ಸೌಲಭ್ಯಗಳು, ಸಬ್ಸಿಡಿಗಳು ಹಾಗೂ ಪರಭಾಷೆ ಸಿನಿಮಾಕು ಸ್ವಮೇಕ್ ಮತ್ತು ರಿಮೇಕ್ ಚಲನಚಿತ್ರಗಳು ಇವುಗಳ ಪರಿಣಾಮದಿಂದ ಕನ್ನಡ ಚಿತ್ರರಂಗದಲಾಗುವ ಪ್ರಭಾವ ಕುರಿತು ಮಾತನಾಡುತ್ತದೆ. ಅಷ್ಟೇ ಅಲ್ಲದೆ ಮುಂದುವರೆದು ಸಿನಿಮಾದಲ್ಲಿ ಜಾತಿ, ವರ್ಗ ಸಮುದಾಯಗಳ ಬಗ್ಗೆ ಅಲ್ಲಿ ಕಟ್ಟುಕೊಡಲಾದ ವಿಷಯಗಳ ಬಗ್ಗೆ ವಿವರಿಸುತ್ತಾರೆ. ಚಿತ್ರರಂಗದಲ್ಲಿ ಆಸಕ್ತಿ ಅಭಿರುಚಿ ಗಿಂತ ಮತ್ತು ಆರ್ಥಿಕ ಬಲಕ್ಕಿಂತ ಹೆಚ್ಚಾಗುವ ಜಾತಿ, ವರ್ಗ, ಸಮುದಾಯಗಳ ಪರಿಣಾಮ ಮತ್ತು ಇವುಗಳು ಉಂಟು ಮಾಡುವ ಅಳುಕುಗಳ ಬಗ್ಗೆ ತಮ್ಮ ಸಂದರ್ಶನದಲ್ಲಿಯೂ ಮತ್ತು ಈ ಭಾಗದಲ್ಲಿಯೂ ಹೇಳಹರಟ್ಟಿದ್ದಾರೆ. ಕನ್ನಡ ಮತ್ತು ಕರ್ನಾಟಕದಂತಹ ಸಂದರ್ಭದಲ್ಲಿ ಸಮೂಹ ಮಾಧ್ಯಮ ಸಂಸ್ಕೃತಿ ಮತ್ತು ಮಹಿಳೆ, ಪ್ರದರ್ಶಕನ ಕಲೆ ಸ್ವರೂಪ, ದೂರದರ್ಶನ ಸಂಸ್ಕೃತಿ, ಕನ್ನಡ ಪರ ಸಿನಿಮಾ ನೀತಿಗೆ ಮೂಲ ಮಾತು, ಕನ್ನಡ ಚಿತ್ರರಂಗದ ಬಿಕ್ಕಟ್ಟು, ಕನ್ನಡ ಕೇಂದ್ರೀತ ಸಿನಿಮಾ ನೀತಿ, ರೀಮೇಕ್ ರಾಜಕೀಯ, ಡಾ. ರಾಜ್ ಕುಮಾರ್ ರೂಪದೊಳಗಿನ ರೂಪಕ, ಹೀಗೆ ಮುಂದುವರೆದು ಅವರ ನಿರ್ದೇಶನದಲ್ಲಿ ಮೂಡಿ ಬಂದ ತಾಯಿ, ಕೋಟೆ, ಒಂದು ಊರಿನ ಕಥೆ ಇವುಗಳ ಬಗ್ಗೆ ಮತ್ತು ಈ ಚಿತ್ರಗಳಿಗೆ ದೊರೆತ ಪ್ರಶಸ್ತಿ ಹಾಗೂ ಅವರ ನಿರ್ದೇಶನಕ್ಕೆ ದೊರೆತ ರಾಷ್ಟ್ರೀಯ ಪ್ರಶಸ್ತಿ ಅವುಗಳ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಬರಗೂರ ರಾಮಚಂದ್ರಪ್ಪ ಮತ್ತು ಕನ್ನಡ ಚಿತ್ರರಂಗದ ನಾಯಕ ನಟ ಡಾಕ್ಟರ್ ರಾಜಕುಮಾರ್ ಅವರ ಒಡನಾಟದ ಬಗ್ಗೆ ಮತ್ತು ರಾಜಕುಮಾರ ಅವರ ವ್ಯಕ್ತಿತ್ವ ಸರಳತೆ ಅವರ ಆದರ್ಶ ಗಳನ್ನು ಮನ ಮುಟ್ಟುವಂತೆ ಇಲ್ಲಿ ರಾಮಚಂದ್ರಪ್ಪನವರು ಅಕ್ಷರ ರೂಪಕ್ಕೆ ಇಳಿಸಿದ್ದಾರೆ.


ಚಲನಚಿತ್ರರಂಗದಲ್ಲಿ ಚಿತ್ರ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ಮತ್ತು ಅಲ್ಲಿ ನಡೆಯುವ ನಿಯಮ ಉಲ್ಲಂಘನೆ ತಾರತಮ್ಯ ಇವುಗಳ ಕುರಿತು ಸಂದರ್ಶನಗಳಲ್ಲಿ ಚರ್ಚಿಸಿದ್ದಾರೆ. ಮತ್ತು ಅವರು ನ್ಯಾಯಕ್ಕಾಗಿ ಹೋರಾಡಿದ ಹಾಗೂ ಕೋರ್ಟ್ ಗಳಿಗೆ ಅಲೆದ ಸಂದರ್ಭಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕೊನೆಯದಾಗಿ ಖಾಸಗೀಕರಣ, ಜಾಗತೀಕರಣ ಮತ್ತು ಸಿನಿಮಾ ಇವುಗಳ ಬಗೆಯು ವಿವರಿಸಿದ್ದಾರೆ ಖಾಸಗೀಕರಣ ಮತ್ತು ಜಾಗತೀಕರಣ ಇವುಗಳನ್ನು ಭಿನ್ನ ನೆಲೆಯಲ್ಲಿ ನೋಡಬೇಕು ಎನ್ನುವ ನಿಲುವು ಅಭಿಪ್ರಾಯ ಅವರದು. 

ತಮ್ಮ ಸಂದರ್ಶನಗಳಲ್ಲಿ ಚಿತ್ರದ ಯಶಸ್ಸಿಗೆ ಬೇಕಾದ ಗಟ್ಟಿ ಕಥೆ, ಹೆಚ್ಚು ಜನ ಆಕರ್ಷಕ ಉತ್ತಮ ಚಿತ್ರ ಬೇಕು,  ಪ್ರಶಸ್ತಿಗೆ ಮಾನದಂಡ ಯಾವುದು?, ಹೊಸ ರೀತಿ ಚಿತ್ರಗಳ ವಿತರಣೆಗೆ ಹೊಸ ವ್ಯವಸ್ಥೆ, ನನ್ನ ಸೂತ್ರ ನಾನೇ ಮೀರುವುದು ಪ್ರಯೋಗ, ಕಲೋದ್ಯಮವಾಗಿರುವ ಸಿನಿಮಾ, ಕಲಾತ್ಮಕ ಚಿತ್ರಕೂಡ ಕಮರ್ಷಿಯಲ್ ಚಿತ್ರ, ಪ್ರಶಸ್ತಿಯ ಸಂತಸ, experimental and  innovative cinema ಹೀಗೆ ಒಂಬತ್ತು ಸಂದರ್ಶನಗಳಲ್ಲಿ ತಮ್ಮ ನಿರ್ದೇಶನದ ಅನುಭವ ಮತ್ತು ಅವರು ಕಂಡ ಕನ್ನಡ ಚಿತ್ರರಂಗದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ ಅವರ ಸಂದರ್ಶನಗಳು ಪ್ರಜಾವಾಣಿ, ಈ ಭಾನುವಾರ, ವಿಜಯ ಚಿತ್ರ, ಪ್ರಜಾಪ್ರಭುತ್ವ ದಂತಹ ವಾರಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಬರಗೂರಂತಹ ಸಾಹಿತಿಯೊಬ್ಬರು ಸಿನಿಮಾ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಬಲವು ತೋರಿಸಿ ಅಲ್ಲಿನ ವ್ಯವಸ್ಥೆ, ಅಳುಕು ಹೊಳುಕುಗಳ ಬಗ್ಗೆ ಚಿತ್ರಿಸಿರುವುದು ಮತ್ತು ಅವರ ಅನುಭವ ಸಂಶೋಧನೆಯಲ್ಲಿ ಮೋಡಿದ ಈ ಪುಸ್ತಕ ಓದುಗರಿಗೆ ಮತ್ತು ಕಲೆ, ಸಿನಿಮಾ, ಸಾಹಿತ್ಯ ಪ್ರಿಯರಿಗೆ ಸಹಾಯವಾಗುವುದು ಸತ್ಯ.

- ಕಾಶಿನಾಥ ಮುದ್ದಾಗೋಳ, ನಾಗೂರು ಕಲಬುರ್ಗಿ.

ಇಂದಿನ ಶಿಕ್ಷಣ ಪದ್ಧತಿ (ಲೇಖನ) - ಮಲ್ಲಿಕಾರ್ಜುನ ಕೊಳ್ಳುರ.

ಬದಲಾಗಬೇಕಿದೆ  ಇಂದಿನ ಶಿಕ್ಷಣ ಪದ್ಧತಿ, ಸಿಗಬೇಕು ಎಲ್ಲರಿಗೂ ಸಮಾನ ಶಿಕ್ಷಣ.

ನಮ್ಮದು ಕಲಬುರಗಿಯ ಚಿಕ್ಕದೊಂದು ಹಳ್ಳಿ ಹಳ್ಳಿಯಲ್ಲಿ ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರುವ ದೃಶ್ಯ ನೋಡುವುದೇ ಒಂದು ಚಂದ. ಆದರೆ ನಮ್ಮ ಊರಿನ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಕ್ಕಂತೆ ಶಾಲಾ ಕೊಠಡಿಗಳಿದ್ದರು ಕೂಡ ಗುಣಮಟ್ಟದ ಶಿಕ್ಷಣ ಕಲಿಸುವ ಸಿಬ್ಬಂದಿಗಳ ಕೊರತೆ ಇದೆ. ತಾವು ಕಲಿಯದೆ ಇದ್ದರು ತಮ್ಮ ಮಕ್ಕಳು ಕಲಿತು ಒಂದೊಳ್ಳೆ ನೌಕರಿ ಪಡೆದು ನಮ್ಮನ್ನು ನೋಡಿಕೊಳ್ಳುವರೆಂಬ ಭಾವನೆಯಿಂದ ಕಲಿಸುತ್ತಿದ್ದಾರೆ. ವಿಶ್ವಾದ್ಯಾಂತ ಮತ್ತು ಭಾರತದಲ್ಲಿ ಹರಡಿದ ಕರೊನ ಕಾರಣದಿಂದಾಗಿ ಶಾಲೆಗಳು ಮುಚ್ಚಿದವು ಇದರ ನೇರ ಪರಿಣಾಮ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಕ ವರ್ಗದ ವಿದ್ಯಾರ್ಥಿಗಳು ಎರಡು ವರ್ಷಗಳ ಕಾಲ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವರಲ್ಲಿ  “ಬಹುತೇಕ ಈ ಎಲ್ಲಾ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ" ಸೇರಿದವರಾಗಿದ್ದಾರೆ. ಕರೋನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಕೆಲವು ಕಡೆ ಆನ್ಲೈನ್ ತರಗತಿಗಳನ್ನು ತೆಗಕೊಳ್ಳಲಾಗುತ್ತಿತ್ತು ಶ್ರೀಮಂತರ ಮಕ್ಕಳು ಸುಲಭವಾಗಿ ತರಗತಿಗಳನ್ನ ಕೇಳುತ್ತಿದ್ದರೆ ಫೋನ್ ಇಲ್ಲದ ಕಾರಣಕ್ಕೆ ಕ್ಲಾಸಿಗೆ ಹಾಜರಾಗುವುದಕ್ಕೆ ಆಗುತ್ತಿರಲಿಲ್ಲ. ಇದರ ಜಾರಿಗೆ ತಂದ NEP2020 (ಹೊಸ ರಾಷ್ಟ್ರೀಯ ಶಿಕ್ಷಣ ನೀತಿ)ಯು ಆಗಾಗಲೇ ಪಠ್ಯದಲ್ಲಿ ಇದ್ದ ಸ್ವಾಮರಸ್ಯವನ್ನು ಮೂಡಿಸುವಂತಹ ಪಾಠಗಳಿಗೆ ಕಡಿತ ಹಾಕಲಾಯಿತು. ಈ ರಾಷ್ರೀಯ ಶಿಕ್ಷಣನೀತಿಯು  ಕೇಸರಿಕರಣ  ಮಾಡುವ ಹಾಗೆ ರಚಿಸಲಾಗಿದೆ ಎಂದು ಹೇಳಲಾಗುತ್ತಿದೆ. 

ಭಾರತದಲ್ಲಿ ಶೇ. 70ರಷ್ಟು ಮಂದಿ ಹಳ್ಳಿಗಳಲ್ಲೇ ವಾಸವಿದ್ದಾರೆ. ಹಾಗೆ ಗ್ರಾಮೀಣ ಶಾಲೆಗಳು ಇರುವುದು ಹೆಣ್ಣುಮಕ್ಕಳಿಗಾಗಿ ಎಂಬುವುದು ಗಮನಿಸಬೇಕು, ಸಣ್ಣರೈತರ, ಕಾರ್ಮಿಕರ, ಕೆಳ ಹಾಗೂ ದುರ್ಬಲ ವರ್ಗದವರ ಮಕ್ಕಳಿಗಾಗಿ. ಈ ಪೈಕಿ ಬಹುತೇಕ ಮಕ್ಕಳು ಸಾಧಾರಣ ಆರ್ಥಿಕ ಹಿನ್ನೆಲೆಯಿಂದ ಬಂದವರು ಮತ್ತು ಕುಟುಂಬಗಳಲ್ಲಿ ಮೊದಲ ಸಲ ಕಲಿಯುವವರು. ಧ್ವನಿ ಇಲ್ಲದ, ಗ್ರಾಮೀಣ ಓದು, ಬರಹ ಬಾರದ ತಂದೆತಾಯಂದಿರು ಸರ್ಕಾರಿ ಶಾಲೆಗಳು ನೀಡುವ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿದಿರುವುದಿಲ್ಲ. ದುರದೃಷ್ಟವಶಾತ್ ಗ್ರಾಮೀಣ ಪ್ರದೇಶದ ಶ್ರೀಮಂತ ಕುಟುಂಬಗಳು ನಗರಗಳತ್ತ ವಲಸೆ ಹೋಗುವುದರಿಂದ ಇಂಥ ಕುಟುಂಬಗಳ ಮಕ್ಕಳು ಮಾತ್ರ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದು ಆದರೆ ಕೆಲವು ಸಲ ಶ್ರೀಮಂತ ಕುಳವಂತರು ಒಂದಿಷ್ಟು ಕಡೆ ಖಾಸಗಿ ಶಾಲೆಗಳನ್ನು ಸ್ಥಾಪಿಸಿ ಇರುವಂತಹ ಸ್ವಾಮರಸ್ಯವನ್ನು ಕೆಡುವ ಹಾಗೆ ಮಾಡಲಾಗುತ್ತಿದೆ. ಶಾಲಾ ಶಿಕ್ಷಣವು, ಜೀವನದ ಮೊದಲ 10-14 ವರ್ಷದ ಅವಧಿಯಲ್ಲಿ ಮಕ್ಕಳ ಭವಿಷ್ಯದ ಜೀವನಕ್ಕೆ, ವ್ಯಕ್ತಿತ್ವ ವಿಕಸನಕ್ಕೆ, ಮನೋಪ್ರವೃತ್ತಿ, ಆತ್ಮವಿಶ್ವಾಸ, ಹವ್ಯಾಸ, ಕಲಿಕಾ ಕೌಶಲ ಹಾಗೂ ಸಂವಹನ ಸಾಮರ್ಥ್ಯಕ್ಕೆ ಅಡಿಗಲ್ಲು, ಈ ಹಂತದ ಓದುವ, ಬರೆಯುವ, ಲೆಕ್ಕದ ಮೂಲಭೂತ ಕೌಶಲಗಳು ಉನ್ನತ ಶಿಕ್ಷಣದ ಭದ್ರ ಬುನಾದಿಯಾಗುತ್ತವೆ. ಮನೆ ಹಾಗೂ ಶಾಲೆಗಳ ಆರಂಭಿಕ ಅನುಭವಗಳ ಪರಿಣಾಮಗಳು ಭವಿಷ್ಯದಲ್ಲಿ ಮಗುವಿನ ಸಾಮಾಜಿಕ ಸ್ಥಾನಮಾನವನ್ನು ನಿರ್ಧರಿಸುವಲ್ಲಿ ಸಹಕಾರಿಯಾಗುತ್ತವೆ. ಪೋಷಕರು ಶಿಕ್ಷಣದಲ್ಲಿ ಪಾತ್ರ ವಹಿಸದಿರುವುದು ಹಾಗೂ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕದ ಕಾರಣದಿಂದ, ಮಕ್ಕಳು ಅನಕ್ಷರಸ್ಥರಾಗಿ, ನಿರುದ್ಯೋಗಿಗಳಾಗಿ ಹಾಗೂ ಬಡವರಾಗಿ ರೂಪುಗೊಳ್ಳುತ್ತಾರೆ.

ಹಾಗಾದರೆ ಗ್ರಾಮೀಣ ಶಿಕ್ಷಣ ಏಕೆ ಮುಖ್ಯ?

ಶಿಕ್ಷಣವು ಹೊಸ ಮಾಹಿತಿ ಮತ್ತು ತಂತ್ರಜ್ಞಾನವನ್ನು ಪ್ರವೇಶಿಸಲು ಹೊಸ ಅವಕಾಶಗಳನ್ನು ತೆರೆಯುತ್ತದೆ, ಅದು ವ್ಯಕ್ತಿಯನ್ನು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ನೀತಿಗಳು, ಹಕ್ಕುಗಳು, ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ, ಅದು ಭವಿಷ್ಯದಲ್ಲಿ ಸಹಾಯಕವಾಗುತ್ತದೆ. ಭಾರತದ ಜನಸಂಖ್ಯೆಯ 65% ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವುದರಿಂದ, ಗ್ರಾಮೀಣ ಶಿಕ್ಷಣಕ್ಕೆ ಒತ್ತು ನೀಡುವುದರಿಂದ ಒಟ್ಟಾರೆ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಗ್ರಾಮೀಣ ಪ್ರದೇಶಗಳಿಂದ ಉದ್ಯೋಗದ ಸ್ಥಳಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡಲು ಮತ್ತು ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಶಿಕ್ಷಣ ಯಾರಿಗೆ ದೊರಕುತ್ತಿಲ್ಲ ? 
ಭಾರತವು ಹಿಂದಿನ ಕಾಲದಿಂದಲೂ ಅನೇಕ ರೂಢಿ ಸಂಪ್ರದಾಯಗಳನ್ನು ಆಚರಿಸಿಕೊಂಡು ಬರುತ್ತಿದೆ ಅದರಲ್ಲಿಯೂ ಮುಖ್ಯವಾಗಿ ಜಾತಿ ಪದ್ಧತಿಗಳಂತಹ ಆಚರಣೆಗಳು. ಮೇಲುಪಂಕ್ತಿಯಲ್ಲಿ ಕುಳಿತುಕೊಂಡಂತಹವರು ಕೇಳ ಸ್ತರದಲ್ಲಿ ಇರುವ ಸಮುದಾಯದ ಜನರಿಗೆ ಶಿಕ್ಷಣ ಕೊಡದಿರುವುದು ಒಂದು ಮುಖ್ಯ ಕಾರಣ. ಪಾಠಶಾಲೆಗಳ ಹತ್ತಿರ ಕೂಡ ಸುಳಿಯದಂತೆ ಆಗಿನ ಬ್ರಾಹ್ಮಣಶಾಹಿಗಳು ತಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ಸ್ವಾತಂತ್ರ್ಯ ಪಡೆದು 75ವರ್ಷ ಕಳಿಯುತ್ತಿದ್ದಾಗಲು ಇತಂಹ ಸ್ಥಿತಿಗತಿಗಳು ಇಂದಿಗೂ ಕೂಡ ಬದಲಾಗುತ್ತಿಲ್ಲ. ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಆಗಾಗ ಕೇಳಿ ಬರುತ್ತಿರುವ ಸುದ್ದಿಗಳು ಒಮ್ಮೆಲೇ ಆತಂಕ್ಕೆ ಎಡೇ ಮಾಡಿಕೊಡುತ್ತವೆ.
ಈ ದಿಸೆಯಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತೆ ನಮ್ಮ ಭಾರತ ಸಂವಿಧಾನದಲ್ಲಿ 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕು ಎಂಬ ಕಾನೂನಿದೆ ಅದನ್ನು ಸರಿಯಾದ ಕ್ರಮದಲ್ಲಿ ಜಾರಿ ಗೊಳಿಸಿದರೆ ಎಲ್ಲರೂ ಶಿಕ್ಷಿತರಾಗುವರು.

- ಮಲ್ಲಿಕಾರ್ಜುನ,
ಕಲಬುರಗಿ.

ಡಾರ್ಕ್ ವೆಬ್ ನಲ್ಲಿ ಒಂದು ಸುತ್ತು (ಕೃತಿ ವಿಮರ್ಶೆ) - ಬಿನಿತ .ಜಿ, ಕಲಬುರಗಿ.

 ಎಲ್ಲ ಆನ್ಲೈನ್ ಜಗತ್ತಿನಲ್ಲಿ ಇದ್ದವರು
ಈ ಪುಸ್ತಕದಲ್ಲಿರುವ ಎಲ್ಲಾ ಲೇಖನಗಳು ಪ್ರತಿಯೊಬ್ಬರೂ ಓದಲೇ ಬೇಕು.
ತಂತ್ರಜ್ಞಾನ ಅನ್ನುವುದು ಎಷ್ಟು ಬೆಳೆದುಬಂದಿದ್ದೆವೂ ಅಷ್ಟೇ ಇದ್ದರಿಂದ ಮನುಷ್ಯನಿಗೆ ಅಪಾಯಕಾರಿ ಆಗುತ್ತಿದೆ. 
ಇಲ್ಲಿರುವ ಪ್ರತಿಯೊಂದು ಲೇಖನಗಳು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳು ಅದರಲ್ಲಿ ಒಂದೊಂದು ವಿಷಯವನ್ನು ವಿವರಿಸುತ್ತಾರೆ.
ಲೇಖಕರು ಓದ್ದಿದು  ಎಂಜಿನಿಯರಿಂಗ್ ಪದವಿ,ಬಿಟ್ಸ್ ಪಿಲಾನಿಯಿಂದ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಮಾಸ್ಟರ್ಸ್ ಡಿಗ್ರಿ,2008ರಲ್ಲಿ ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಮಾಡಿದ್ದಾರೆ.ಇವಾಗ ಸದ್ಯಕ್ಕೆ ಐಬಿಎಮ್ ನಲ್ಲಿ ಉದ್ಯೋಗಮಾಡುತ್ತಿದ್ದಾರೆ.
ಅವರು ಬೆಂಗಳೂರಿನಲ್ಲಿ ನೆಲೆಸಿದ್ದು ಇವರಿಗೆ ಸಾಹಿತ್ಯದಲ್ಲಿ ಹವ್ಯಾಸ ಇದ್ದು ಇವರ ಚೊಚ್ಚಲ ಕೃತಿ ಕಾರೇಹಣ್ಣು ಕಥಾ ಸಂಕಲನವು 2019 'ಈ ಹೊತ್ತಿಗೆ' ಕಥಾ ಸಂಕಲನ ಪ್ರಶಸ್ತಿಗೆ ಭಾಜನವಾಗಿದೆ.  ಅವರ ಎರಡನೇ ಕಥಾ ಸಂಕಲನ "ಫೀಫೋ" 2021 ರಲ್ಲಿ 'ಬಹುರೂಪಿ' ಯಿಂದ ಪ್ರಕಟವಾಗಿದೆ.ಇವರ ಈ ಡಾರ್ಕ್ ವೆಬ್ ಪುಸ್ತಕದಲ್ಲಿ ನಾಲ್ಕು ವಿಭಾಗದಲ್ಲಿ ವಿಂಗಡಿಸಿದ್ದಾರೆ.ಒಂದನೆಯದು ತಂತ್ರ ಜ್ಞಾನ ಹೇಗೆ ಕೆಲಸ ಮಾಡುತ್ತದೆ, ಎರಡನೆಯದು ತಂತ್ರ ಜ್ಞಾನದ ಬಳಕೆ ಮತ್ತು ಸುರಕ್ಷಾ ಕ್ರಮಗಳು ಮೂರನೆಯದು ಆಧುನಿಕ ತಂತ್ರ ಜ್ಞಾನಗಳು ನಾಲ್ಕನೆಯದು ಆಸಕ್ತಿಕರ ಸಂಗತಿಗಳು ಹೀಗೆ ಭಾಗಮಾಡಿರುವುದು ನಾವು ನೋಡಬಹುದು.
ಭಾಗ ಅ ದಲ್ಲಿ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಅದರಲ್ಲಿ ಎಗ್ಸಾಟ್ಲಿ ನೀವು ಏನು ಕೆಲಸ ಮಾಡೂದು? ಇದು ಒಂದು ಲೇಖನದ ಹೆಸರು ಲೇಖನದಲ್ಲಿ ಅವರು ನೀಡಿರುವ ಮಾಹಿತಿಗಳು ಕಂಪ್ಯೂಟರ್ ನಲ್ಲಿ
 ಸೊನ್ನೆ ಒಂದು ಪ್ರಪಂಚ ಸೊನ್ನೆ ಇಲ್ಲದೆ ಕಂಪ್ಯೂಟರ್‌ಗೆ ನಾವು ಏನು ಹೇಳಿದರು ಅರ್ಥವಾಗಲ್ಲ ಆದರು ಅದು ಹಾಗೆ ಕೆಲಸ ಮಾಡುತ್ತದೆ ಎನ್ನುವು ತಿಳಿಯಬಹುದು. ಮನುಷಯರು ಹೇಗೆ ಮಧ್ಯವರ್ತಿಗಳ ಜೊತೆಯಲ್ಲಿ ಕೆಲಸ ಮಾಡುತ್ತದೆವೊ ಇಲ್ಲಿ ಕಂಪ್ಯೂಟರ್ ಸಹ ಮಧ್ಯವರ್ತಿ ಭಾಷೆಯಲ್ಲಿ ಕಾರ್ಯ ಮಾಡುತ್ತದೆ,ಹಾಗೆ ಇದಕ್ಕೆ ಐದು ವೋಲ್ಟಿನ ಕರೆಂಟು ಕೊಟ್ಟು ತೆಗೆದು ಜುಂ ಅನ್ನಿಸಿ ಕೃತಕವಾಗಿ ಭಾಷೆಯನ್ನು ಅರ್ಥಮಾಡಿಸಬೇಕು .ಇದರಲ್ಲಿ 1111 ಎಂಬ ಅರ್ಥ  ಬರಬೇಕು ಎಂದರೆ ಕ್ವಾರ್ಟ್ಜ್ ಕಲ್ಲು ನಾಲ್ಕು ಬಾರಿ ನಡುಗುವ ತನಕ ಹಿಡಿದಿಟ್ಟಿಕೊಳ್ಳಬೇಕು ಅಷ್ಟೇ. ಹೀಗೆ ಆದಮೇಲೆ ಕಂಪ್ಯೂಟರ್ ಭಾಷೆ ಬರುತ್ತದೆ ಮತ್ತು ಇಂತಹ ಕೋಟ್ಯಾನುಕೋಟಿ ಟ್ರಾನ್ಸಿಸ್ಟರುಗಳು ಸೇರಿದರೆ ಒಂದು ಲ್ಯಾಪ್ ಟಾಪ್ , ಮೊಬೈಲ್ ಆಗುತ್ತದೆ. ಕಂಪ್ಯೂಟರು ಹೇಗೆ ಲೆಕ್ಕ ಮಾಡುತ್ತದೆ? ಕಂಪ್ಯೂಟರ್ ಮನುಷ್ಯನಿಗೆ ಹೋಲಿಸಿದರೆ ಸರಳವಾಗಿ ಅರ್ಥಕ್ಕೆ ಸಿಗುತ್ತದೆ. ಅದಕ್ಕೆ ಇದನ್ನು ಯಂತ್ರ ಮಾನವ ಎಂದು ಕರೆಯುತ್ತಾರೆ. ಇಂಟೆಲ್ಲಿನ ಸಿಪಿಯು ಚಿಪ್ ಕಂಪ್ಯೂಟರ್ನಲ್ಲಿ ಇದು ಸರಳವಾಗಿ ಲೆಕ್ಕ ಮಾಡಲು ಉಪಯೋಗಿಸುತ್ತಾರೆ. ಟ್ರಾನ್ಸಿಸ್ಟರ್ ನಲ್ಲಿ ಮೂರು ಬಗೆಗಳು ಎಮಿಟರ್, ಬೆಸ, ಕಲೆಕ್ಟರ್ ಇದಕ್ಕೆ ನಾವು ಎಷ್ಟು ಕರೆಂಟನ್ನು ಕೊಡುತ್ತೇವೋ ಅದರ ಮೇಲೆ ಕೆಲಸ ಮಾಡುತ್ತವೆ.ಆವಾಗ ಇದು ಒಂದೊಂದು ರೀತಿ ಉತ್ತರ ಕೊಡುತ್ತವೆ.
ಕಂಪ್ಯೂಟರ್ ಹೇಗೆ ನೆನಪಿಟ್ಟುಕೊಳ್ಳುತ್ತದೆ?
ಪ್ರೈಮರಿ ಮೆಮೊರಿ, ಸೆಕೆಂಡರಿ ಮೆಮೊರಿ ಎರಡು ಕಂಪ್ಯೂಟರ್ ನಲ್ಲಿ ಕೆಲಸಮಾಡುತ್ತವೆ. ಇದರಲ್ಲಿ ಪ್ರೈಮರಿ ಮೆಮೊರಿ ಕಂಪ್ಯೂಟರ್ ಆನ್ ಇರೋವರ್ಗು ಕರೆಂಟು ಸಪ್ಲೈ ಇರುವವರೆಗೆ ಮಾತ್ರ ಶೇಖರಿಸಿದ್ದನ್ನು ಉಳಿಸಿಕೊಂಡಿರುತ್ತದೆ.
ಮ್ಯಾಗ್ನೆಟಿಕ್ ಹಾರ್ಡ್ ಡಿಸ್ಕ್ ಇದರಲ್ಲಿ ವಿಡಿಯೋ, ಫೋಟೋ, ಹಾಳೆ, ಫೈಲ್ ಗಳು ಎಲ್ಲವನ್ನೂ ಸೊನ್ನೆ ರೂಪದಲ್ಲಿ ಸೇವ್ ಮಾಡಿಕೊಳ್ಳುತ್ತದೆ. ಹೇಗೆ ಕಲರ್ ಸೇವ್ ಆಗುತ್ತವೆ, ಟೇಪ್ ಹಾರ್ಡ್ ಡಿಸ್ಕ್ ಮೇಲಿಟ್ಟಿರುವ ಎಸ್ ಎಸ್ ಡಿ ಫೋಟೋದ ಬಣ್ಣಗಳು ಕಂಪ್ಯೂಟರ್ ನಲ್ಲಿ ಬಣ್ಣಗಳಿಗೆ ಕೋಡ್ ಸೆಟ್ ಮಾಡಿರುತ್ತಾರೆ ಅದು ಪಿಕ್ಸಲ್ ರೂಪದಲ್ಲಿ ಚಿತ್ರಾನ್ನ ಕಣಕಣವಾಗಿ ಬೇರ್ಪಡಿಸುತ್ತಾರೆ.ಇದು ಸೊನ್ನೆಯ ಸಮೂಹವನ್ನು ಹಾರ್ಡ್‌ ಡಿಸ್ಕಿನಲ್ಲಿ ಸ್ಟೋರ್ ಮಾಡುವುದು ಹೀಗೆ.ರೀಡ್ ಓನ್ಲಿ ಮೆಮೊರಿ ಇವು ಸಾಫ್ಟ್‌ವೇರ್ ಗಳನ್ನು ROM  ಮೇಲೆ ಕೆತ್ತಲಾಗಿರುತ್ತದೆ.
ಆಪರೇಟಿಂಗ್ ಸಿಸ್ಟಂನ ಕೆಲಸ ಏನು? ಇದು ಅಪ್ಲಿಕೇಶನ್, ಕರ್ನಲ್, ಸಿಪಿಯು ,ಮೆಮೊರಿ, ಡ್ರೈವ್ಸ್ ಇದರ ಮೂಲಕ ಕೆಲಸ ಮಾಡುತ್ತದೆ. ಆಪರೇಟಿಂಗ್ ಸಿಸ್ಟಮ್ ಅಂದ್ರೆ ಯಂತ್ರ ಜೀವಿಗಳ ಸರ್ಕಾರ ಇದು ನಮ್ಮ ಲ್ಯಾಪ್ಟಾಪ್ ನಲ್ಲಿ ವಿಂಡೋಸ್ ಮತ್ತು ಮೊಬೈಲ್ ನಲ್ಲಿರುವ ಆಂಡ್ರಾಯ್ಡ್ ಲಿನಕ್ಸ್. ಇಂಟರ್ನೆಟ್ ಹೇಗೆ ಹೆಣೆದುಕೊಂಡಿದೆ? ಇಂಟರ್ನೆಟ್ ಎಂದರೆ ಯಾವ್ದೇ ಒಂದು ಕಂಪನಿಯಲ್ಲಾ  ಒಬ್ಬ ಮಾಲೀಕನಿಲ್ಲ ಇದು ಒಂದು ಮಾಹಿತಿ ಜಾಲವಷ್ಟೇ ,ಕೆಲವೊಂದು ಕಂಪನಿಗಳಷ್ಟೇ ಅವರ ಬಳಕೆದಾರರು ಹೆಂಚಿದ್ದಾರೆಂದು ಆದೇಶದಲ್ಲಿ ಡಾಟಾ ಸೆಂಟರ್ ಇಟ್ಟುಕೊಂಡಿದ್ದಾರೆ. ಬ್ಲೂಟೂತ್ ಹೇಗೆ ಕೆಲಸ ಮಾಡುತ್ತದೆ?  ಪ್ರತಿ ವೆರೈಟಿಗಳಾದ ಟಿವಿ. ಮೊಬೈಲು, ವೈಫೈ ಬ್ಲೂಟೂತುಗಳಿಗೆ ತಮ್ಮದೇ ಆದ ಧ್ವನಿ ಇರುತ್ತದೆ.ಇದನ್ನು ಫ್ರೀಕ್ವೆನ್ಸಿ ಎನ್ನುತ್ತಾರೆ. ಬ್ಲೂಟೂತ್ ಕೂಡ ಹ್ಯಾಕ್ ಮಾಡಬಹುದು. ಯಾಕ್ ಮಾಡಬಾರದೆಂದರೆ ಕೆಲವು ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ. ಬಳಸದೇ ಇರುವಾಗ ಬ್ಲೂಟೂತ್ ಆಫ್ ಮಾಡಿರುವುದು, ಪಾಸ್ವರ್ಡ್ ಬಲಿಷ್ಠವಾಗಿಹಾಕಿರುವುದು, ಸ್ವಂತದ್ದಲ್ಲದ ಡಿವೈಸುಗಳೊಂದಿಗೆ pair ಮಾಡಬೇಡಿ.ಇವುಗಳನ್ನು ಅನುಸರಿಸಬೇಕು.
ಬಾರ್ ಕೋಡ್ ಕ್ಯೂಆರ್ ಕೋಡ್ ಯುಪಿಐ ಐಡಿ, ಕೀ ಲಾಗರ್ ಎಂಬ ಸೈಬರ್ ಕಳ್ಳರ ಭಯಾನಕ ಅಸ್ತ್ರ, ಫೇಸ್ಬುಕ್ ಅಕೌಂಟುಗಳು ಯಾಕೆ ಹ್ಯಾಕ್ ಆಗುತ್ತವೆ? ,5 ಎಂದರೇನು? ,ಬಿಟ್ ಕಾಯಿನ್ ಎಂದರೇನು? ಹೀಗೆ ನಾನಾ ರೀತಿಯ ವಿಷಯಗಳನ್ನು ಈ ಪುಸ್ತಕದಲ್ಲಿ ವಿವರಿಸಿದ್ದು ನಾವು ಓದಬಹುದು. 5g ಎಂದರೇನು ಈ ಲೇಖನದಲ್ಲಿ ಫೋನಿನ ಬದಲಾವಣೆ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಬಿಟ್ ಕಾಯಿನ್ ಎಂದರೆ ಅದನ್ನು ಹೇಗೆ ಉಪಯೋಗಿಸುತ್ತಾರೆ, ಇದು ಯಾವಾಗಿಂದ ಪ್ರಾರಂಭವಾಯಿತು ಎಲ್ಲಿ ಚಲಾವಣೆಗೆ ಇದೆ ಇದು ಅಪಾಯಕಾರಿ ಅಲ್ಲವೇ ಹೀಗೆ ನಾನಾ ರೀತಿಯಾಗಿ ಲೇಖನದಲ್ಲಿ ವಿವರಿಸಿದ್ದಾರೆ. ಇಲ್ಲಿವರೆಗೂ ನನಗೆ ಕೆಲವೊಂದು ಹೊಸ ಮಾಹಿತಿಗಳು ದೊರಕಿದವು, ಈ ಪುಸ್ತಕ ಓದಿದ ಮೇಲೆ ತಂತ್ರಜ್ಞಾನ ಇಷ್ಟೊಂದು ಮುಂದುವರೆದಿದೆ ಎಂಬುವುದು  ಅರಿವಿಗೆ ಬಂತು. ತಂತ್ರಜ್ಞಾನ ಇಷ್ಟೊಂದು ಮುಂದುವರೆದಿರುವುದರಿಂದ ನಾವುಗಳು ತುಂಬಾ ಸುರಕ್ಷಿತವಾಗಿ ಇರಬೇಕು ಎಂಬುದು ತಿಳಿಸಿಕೊಡುತ್ತದೆ. ಈ ಪುಸ್ತಕ ಸರಳ ಹಾಗೂ 
ಎಲ್ಲರಿಗು ಅರ್ಥವಾಗುವ ಹಾಗೆ
ಮೂಡಿಬಂದಿರುವ ಪುಸ್ತಕವಾಗಿದೆ.

(ಪುಸ್ತಕ: ಡಾರ್ಕ್ ವೆಬ್
ಇಂಟರ್ ನೆಟ್ಟಿನಲ್ಲಿ ನೀವು ಎಷ್ಟು ಸುರಕ್ಷಿತರು?
ಲೇಖಕರು: ಮಧು ವೈ.ಎಸ್
ಮುದ್ರಕರು:  ಇಮೇಜಸ್ ಪ್ರಿಂಟ್ ಸರ್ವಿಸಸ್ ಬೆಂಗಳೂರು)
- ಬಿನಿತ .ಜಿ, ಕಲಬುರಗಿ.

ಮಹಿಳೆಯ ಬೆನ್ನತ್ತಿರುವ ದೌರ್ಜನ್ಯನೆಂಬ ಬೇತಾಳ (ಲೇಖನ) - ಅರ್ಚನ ಹೊನಲು.

ಕಳೆದ 21 ದಿನಗಳಿಂದ ಜಂತರ್ ಮಂತರ್ ನಲ್ಲಿ ಭಾರತಕ್ಕೆ ಮೆಡಲ್ ತಂದ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳಾ ಕುಸ್ತಿಪಟ್ಟುಗಳ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಾರೆ ಅವರನ್ನು ಕೂಡಲೇ ಬಂಧಿಸಬೇಕು ಎಂದು ಹಾರೈಸಿ ದೆಹಲಿಯಲ್ಲಿ ನಾಲ್ಕು ವಾರಗಳಿಂದ ಧರಣಿ ನಡೆಸುತ್ತಿದ್ದಾರೆ.  ಈ ಪೈಲ್ವಾನರ ಬಳಗವು ಈ ರೀತಿ ಧರಣಿ ಕುಳಿತಿರುವುದು ಇದು ಎರಡನೇ ಬಾರಿ. ಮೂರು ತಿಂಗಳ ಹಿಂದೆ ಒಲಂಪಿಕ್ ನ ಕುಸ್ತಿಪಟುಗಳಾದ ವಿನೇಶ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ಬಜರಂಗ್ ಪುನ್ಯಾ ಸೇರಿದಂತೆ ಹಲವು ಪೈಲ್ವಾನರು ದೆಹಲಿಯ ಜಂತರ್ ಮಂತರ್ ನಲ್ಲಿ ಮೂರು ದಿನಗಳ ಕಾಲ ಅಹೋ ರಾತ್ರಿ ಧರಣಿ ನಡೆಸಿದ್ದರು. ಆಗ ಪ್ರಕರಣಗಳ ತನಿಖೆಗೆ ಕೇಂದ್ರ ಸರ್ಕಾರವು ಒಲಂಪಿಯನ್ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಅಲ್ಲದೆ ಆರೋಪಿ ಬ್ರಿಜ್ ಭೂಷಣ್ ಅವರನ್ನು ತಾತ್ಕಾಲಿಕವಾಗಿ ಅಮಾನತು ಗೊಳಿಸುವುದಾಗಿ ಎಂದು ಹೇಳಿತು. ಆದರೆ ಹೇಳಿದ ರೀತಿ ಸರ್ಕಾರ ನಡೆದುಕೊಂಡಿಲ್ಲ. ಆದ ಕಾರಣ ಮತ್ತೆ ತಮ್ಮ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಒಟ್ಟು ಏಳು ಸಂತ್ರಸ್ತೆಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು ಅದರಲ್ಲಿ ಒಬ್ಬ ಬಾಲಕಿಯು ಇದ್ದಾಳೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಆರೋಪಿಯನ್ನು ಬಂದನಕ್ಕೆ ಒಳಪಡಿಸಿಲ್ಲ. ರಾಜಕಾರಣ ತಂತ್ರವಿರಬಹುದು ಎಂಬ ಅನುಮಾನವೂ ಉಂಟಾಗುತ್ತದೆ. 

ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರವನ್ನು ತೊಡೆದು ಹಾಕುವ ಗುರಿಯನ್ನು ಹೊಂದಿರುವ ಅಂತರಾಷ್ಟ್ರೀಯ ಸಾಧನಗಳನ್ನು ವಿವಿಧ ಅಂತರಾಷ್ಟ್ರೀಯ ಸಂಸ್ಥೆಗಳು ಜಾರಿಗೆ ತಂದಿದೆ. ಆದರೆ ಭಾರತದಲ್ಲಿ ಇಂತಹ ಸಾಧನಗಳು ಕಂಡು ಬಂದಿಲ್ಲ. ಆದ್ದರಿಂದ ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚು ತಲೇ ಇದೆ. ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಸಾಂಸ್ಥಿಕ ಪರಿಸರದಲ್ಲಿ ಹಿಂಸೆ, ಬಲವಂತ ಮದುವೆಗಳು, ಗೌರವದ ಹೆಸರಿನಲ್ಲಿ ಹತ್ಯೆ, ಬಾಲ್ಯ ವಿವಾಹ, ವಿಧವೆಯರಿಗೆ ದೈಹಿಕ ಮತ್ತು ಮಾನಸಿಕ ನಿಂದನೆ, ಉದ್ಯೋಗ ಸ್ಥಳದಲ್ಲಿ ದೌರ್ಜನ್ಯ, ಸ್ತ್ರೀ ಜನನಾಂಗ ಯೂನಿಗೊಳಿಸುವುದು, ಅಲ್ಲದೆ ಲೈಂಗಿಕ ಕಿರುಕುಳದ ಪರಿಕಲ್ಪನೆ ಮನುಕುಲದ ಇತಿಹಾಸದಷ್ಟು ಹಳೆಯದಾಗಿದೆ.

'ಕ್ರೈಂ ರೆಕಾರ್ಡ್ ಬ್ಯುರೋ' ಭಾರತದ ಪ್ರಕಾರ, ದೇಶದಲ್ಲಿ ಪ್ರತಿ 78 ಗಂಟೆಗಳಿಗೊಮ್ಮೆ ಒಂದು ವರದಕ್ಷಿಣೆ ಸಾವು, ಪ್ರತಿ 59 ನಿಮಿಷಕ್ಕೆ ಒಂದು ಕಿರುಕುಳ, ಪ್ರತಿ ಮೂರು ನಿಮಿಷಕ್ಕೆ ಅತ್ಯಾಚಾರ, ಪ್ರತಿ 12 ನಿಮಿಷಕ್ಕೆ ಒಂದು ಚಿತ್ರಹಿಂಸೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಕರಣಗಳು ಕಂಡು ಬಂದರು ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನಸಿಕ ಅಸ್ವಸ್ಥತೆಯ ಸಂಬಂಧವನ್ನು ಸಮರ್ಪಕವಾಗಿ ಅನ್ವೇಷಿಸಲಾಗಿಲ್ಲ. ಭಾರತೀಯ ಸಮಾಜ ಯಾವಾಗಲು ಮಹಿಳೆಯರನ್ನು ಗೌರವಿಸುತ್ತದೆ, ಎಂದು ಹಿಂದೂ ಧರ್ಮದಲ್ಲಿ ಪುರುಷ ಮತ್ತು ಮಹಿಳೆ ದೈವಿಕ ದೇಹದ ಎರಡು ಭಾಗಗಳನ್ನು ಪ್ರತಿನಿಧಿಸುತ್ತಾರೆ. ಆದರೆ ಮಹಿಳೆಯರಿಗೆ ಎಂದಿಗೂ ಸಮಾನ ಸ್ಥಾನಮಾನ, ಅವಕಾಶಗಳು ನೀಡಲಿಲ್ಲ. ಹೆಣ್ಣು ಭಾರತ ಮಾತೆ ಎಂದು ಬಾವುಟ ಕೈಗೆ ಕೊಟ್ಟು ಸಿಂಹದ ಮೇಲೆ ಕೂರಿಸುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ನ್ಯಾಯಮಾತೆಗೆ ಮಾತ್ರ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟುತ್ತಾರೆ. 

ದೇಶಕ್ಕೆ ಚಿನ್ನದ ಪದಕವನ್ನು ತಂದು ಕೊಟ್ಟ ಮಹಿಳೆಯರಿಗೆ ನ್ಯಾಯ ಸಿಗದಿದ್ದಾಗ, ಸಾಮಾನ್ಯ ಮಹಿಳೆಯರಿಗೆ ಇನೇಷ್ಟು ಮಾತ್ರಕ್ಕೆ ನ್ಯಾಯ ಸಿಗುತ್ತದೆ. 'ಭೇಟಿ ಪಡಾವೋ ಬೇಟಿ ಬಚಾವೋ' ಎಂದವರೇ ಇಷ್ಟೆಲ್ಲ ಪ್ರತಿಭಟನೆ ನಡೆಯುತ್ತಿದ್ದರು ರೋಡ್ ಶೋ ಮಾಡುತ್ತಿದ್ದದ್ದು ಎಷ್ಟು ಮಾತ್ರಕ್ಕೆ ಸರಿ. ಆಕೆಗೆ ರಾಜಕೀಯ ಕ್ಷೇತ್ರದಲ್ಲಿ ಹೋಗಲು ಬಿಡುವುದಿಲ್ಲ ಇನ್ನೊಂದೆಡೆ ದೇಶಕ್ಕೆ ಪದಕ ತಂದರು ಗೌರವವಿಲ್ಲ. ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಭ್ಯೂಷಣ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಖ್ಯಾತನಾಮ ಇಲ್ಲಿ ನಡೆಸಿರುವ ಪ್ರತಿಭಟನೆಗೆ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿದ್ದಾರೆ. 5 ಲಕ್ಷ ರೂಪಾಯಿಯಲ್ಲಿ ಹಾಸೀಗೆಗಳು, ಬೆಡ್ ಶೀಟ್ ಗಳು, ಫ್ಯಾನ್ ಗಳು, ಸ್ಪೀಕರ್ ಮತ್ತು ಮೈಕ್ರೋಫೋನ್, ಮಿನಿ ಪವರ್ ಜನರೇಟ್ ಗಳನ್ನು ಪ್ರತಿಭಟನೆಯ ಸ್ಥಳದಲ್ಲಿ ಅಳವಡಿಸಿಕೊಂಡಿದ್ದಾರೆ. ಆರಂಭದಲ್ಲಿ ಅವರು ಹಾಸಿಗೆ ಬೆಡ್ ಶೀಟ್ಗಳು ಮತ್ತು ಧ್ವನಿವರ್ಧಕಗಳನ್ನು ಬಾಡಿಗೆಗೆ ತಂದಿದ್ದರು ಆದರೆ ಅವು ದಿನವೊಂದಕ್ಕೆ 27 ಸಾವಿರ ದುಬಾರಿಯಾಗುತ್ತಿತ್ತು. ಆದ ಕಾರಣ ಅವರು ಐದು ಲಕ್ಷ ವೆಚ್ಚ ಮಾಡಿ ಎಲ್ಲಾ ಪರಿಕರಗಳನ್ನು ಖರೀದಿಸಿದರು. ಊಟ ತಿಂಡಿ ಹಾಗೂ ನೀರು ಬಾಟಲಿಗಳಿಗೂ ವೆಚ್ಚಮಾಡಲಾಗಿದೆ. 

ಆರೋಪಿ ಸಿಂಗ್ ಒಂದು ದಶಕದಿಂದ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿದ್ದಾರೆ. ಸರಕಾರದ ಮಟ್ಟದಲ್ಲಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಲೈಂಗಿಕ ದೌರ್ಜನ್ಯದ  ವಿರುದ್ಧ ಧ್ವನಿ ಎತ್ತಿದ ಕುಸ್ತಿಪಟ್ಟುಗಳಲ್ಲಿ ಹೆಚ್ಚಿನವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವವರು. ಇದೀಗ ಕೆಲವು ವಿರೋಧ ಪಕ್ಷಗಳು ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಇದರಿಂದ ಈ ವಿಷಯವು ರಾಜಕೀಯ ಬಣ್ಣವೂ ಪಡೆದುಕೊಳ್ಳುತ್ತಿದೆ. ಕುಸ್ತಿ, ಅಥ್ಲೆಟಿಕ್ಸ್ ಸೇರಿದಂತೆ ಬಹಳಷ್ಟು ಕ್ರೀಡೆಗಳಲ್ಲಿ ಮಹಿಳೆಯರು ರೈತರು ಹಾಗೂ ಸಿನಿಮಾ ನಟರು ಹೆಚ್ಚಿನ ಸಂಖ್ಯೆಯಲ್ಲಿ ಅವರ ಸಾತ್ ನೀಡುತ್ತಿರುವುದು ಒಳ್ಳೆಯ ಸಂಗತಿ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾದರು ಆತನನ್ನು ಇನ್ನು ಬಂದಿಸಿಲ್ಲ. ಸರ್ಕಾರವು ತಪ್ಪಿತಸ್ಥರಿಗೆ ಕೂಡಲೇ ಶಿಕ್ಷೆ ವಿಧಿಸಬೇಕು. ಕ್ರೀಡಾಂಗಣದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷಿತ ವಾತಾವರಣ ಸೃಷ್ಟಿಸಿಕೊಡುವುದು ಸರ್ಕಾರ ಹಾಗೂ ಸಮಾಜದ ಆದ್ಯಕರ್ತವ್ಯವಾಗಿದೆ. ದೌರ್ಜನ್ಯ ಕಾರಣದಿಂದ ಹೆಣ್ಣು ಮಕ್ಕಳು ಕ್ರೀಡೆಯಿಂದ ಹಿಂದೆ ಉಳಿಯುವ ಸಾಧ್ಯತೆ ಇದೆ. ಹಾಗಾಗಿ ಹೆಣ್ಣು ಮಕ್ಕಳು ಧೈರ್ಯದಿಂದ ಕ್ರೀಡಾ ಸಾಧನೆ ಮಾಡುವಂತಹ ವಾತಾವರಣನ್ನು ಸರ್ಕಾರ ಹಾಗೂ ಸಮಾಜವು ನಿರ್ಮಿಸಬೇಕಾಗಿದೆ. 

- ಅರ್ಚನ ಹೊನಲು, ಅತ್ತಿಬೆಲೆ.


ಭಾನುವಾರ, ಮೇ 14, 2023

ಪ್ರೀತಿ ಪ್ರಮಾಣ (ಕವಿತೆ) - ರಾಯಾ ಎಸ್. ಕೆ.

ಬಾಗಿಲ ಬಳಿ ಬಿಡಿಸಿದ ರಂಗೋಲಿ
ಗಾಳಿಗೆ ಹಾರುಬೂದಿಯಾಗುವ ಮುನ್ನ
ಕಟ್ಟಿದ ತೋರಣ ಒಣಗಿ ಮನೆಗೆ
ಅಪಶಕುನವಾಗುವ ಮುನ್ನ 
ಹೊಸಿಲು ದಾಟಿಬಿಡು ನೀನು...

ನೀ ಬೆಳಗಿಸಲು ಎಣ್ಣೆ ಸುರಿದು 
ಬತ್ತಿ ಹೊಸೆದು ಸಿಂಗರಿಸಿದ
ದೀಪ ಬಣ್ಣ ಕಳೆದು ಕೊಳ್ಳುವ ಮುನ್ನ
ಬಾಳಿನ ಜ್ಯೋತಿಯಾಗಲು 
ಬಿಸಿಯುಸಿರ ತಾಕಿಸಿಬಿಡು ನೀನು...

ಬಾಳ ನೊಗಕೆ ಭಾರ ನನಗಿರಲಿ
ಮಡಿಲು ತುಂಬಿ ಹರಿಷಿಣದ ಸಿಂಗಾರ
ನಿನಗೆ ದಿನವೂ ಉತ್ಸವಾಗುತಿರಲಿ
ಅರ್ಪಣೆಯಲ್ಲ ಸ್ವಾರ್ಥ ನನ್ನದು
 ಪ್ರೀತಿಯ ತದ್ಭವವೇ ನೀನಲ್ಲವೇ..!

ಚಿಕ್ಕಿ ಚಂದ್ರಮರ ಹಂಗೇತಕೆ 
ಹೊನ್ನಗದ್ದೆಯಲಿ ಹಾಲ ಚೆಲ್ಲಿ 
ಹೂ ಹಾಸಿ ರಾಣಿ ಮಾಡುವೆ
ಚಂದ್ರ ಅಸೂಯೆ ಪಡುವ ಮುನ್ನ
ಕಿರುಬೆರಳ ಹಿಡಿದು ಉಸಿರ ನೀಡು ನೀನು...!

- ರಾಯಾ ಎಸ್. ಕೆ.


ಆತ್ಮಸ್ಥೈರ್ಯ (ಕವಿತೆ) - ಶ್ರೇಯಾ ಮಿಂಚಿನಡ್ಕ, ಕಾಸರಗೂಡು.

ಬೀಗುವವರಿಗೆ ಬೀಗಲುಬಿಡಿ,
 ಬೋಗಳುವವರಿಗೆ ಬೊಗಳಲುಬಿಡಿ,
 ಬೆನ್ನಹಿಂದೆ ಚುರಿಯಿರಿಯುವವರಿಗೆ ಇರಿಯಲುಬಿಡಿ,
             ಬೀಳುವುದು ಖಚಿತವೆಂದಾಗ,
             ಪ್ರತಿಕ್ರಿಯೆ ಇಲ್ಲವೆಂದಾಗ,
             ನಿಮ್ಮ ಆತ್ಮಸ್ಥೈರ್ಯ ಧೃಡವಿದ್ದಾಗ
ಭಾಗ್ಯವೂ ಕೂಡಾ ಬದಲಾಗುವುದು,
ಬೀದಿಯೂ ಕೂಡಾ ಬದಲಾಗುವುದು,
ಚುರಿಯೂ ಕೂಡಾ ಚಮತ್ಕಾರವಾಗಿ ಬದಲಾಗುವುದು
       ಸೋಲಿನ ಪಯಣದಲ್ಲಿ                         ಮುನ್ನಡೆದರೂ
       ಗೆಲುವಿನ ಬಾಗಿಲು ತೆರೆಯದೇ               ಹೋದರೂ
       ಆತ್ಮ ವಿಶ್ವಾಸವೇ ಗೆಲುವಿನೆಡೆಗೆಕೊಂಡೊಯ್ಯುವುದು ಅವಕಾಶಗಳು ಅಡಗಿರುವುದು ಕಷ್ಟಗಳ ರಾಶಿಯಲಿ,
ಹುಡುಕಿ ಹೊರತೆಗೆಯಬೇಕು ಬಹಳ ತಲ್ಮೆಯಲಿ,
ಆತ್ಮಸ್ಥೈರ್ಯದೊಂದಿಗೆ ನಿರೀಕ್ಷಿಸಿ.. ಗೆಲುವು ನಿಮ್ಮದಾಗಲಿ..

 - ಶ್ರೇಯಾ ಮಿಂಚಿನಡ್ಕ, ಕಾಸರಗೂಡು.


  

ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಕೊನೆ ಎಂದು ? (ಲೇಖನ) - ಭೀಮಣ್ಣ ಹತ್ತಿಕುಣಿ, ಯಾದಗಿರಿ.

ಸಾವಿರಾರು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಪುರುಷ ಪ್ರಾಧ್ಯಾನತೆ ತುಳಿಯುತ್ತ ಬಂದಿದೆ. ಹೆಣ್ಣು ಎಂದರೆ ಅವಳು ಪೂಜೆ ಮಾಡುವ ದೇವತೆ, ತ್ಯಾಗಮಹಿ, ಸಹನೆ, ಹೀಗೆ ಒಂದಿಷ್ಟು ಹೇಳಿಕೆಗಳನ್ನ ಅವಳ ಮೇಲೆ ಹೋರಿಸಿ ಧ್ವನಿಯಿಲ್ಲದ ಹಾಗೆ ಮಾಡಿರುವ ಸಂಸ್ಕೃತಿ ನಮ್ಮದು. ಹೆಣ್ಣು ಶತಮಾನಗಳಿಂದ ಅಡುಗೆ ಮನೆಗೆ ಮಾತ್ರ ಸೀಮಿತವಾದವಳು. ಸತತವಾಗಿ 24ಗಂಟೆಗಳ ಕಾಲ ಹೆಣ್ಣು ಮನೆಯ ಒಳಗೆ ಇರಬೇಕು. ಅವಳು ತೋಡುವ ಒಂದು ಬಟ್ಟೆಯಿಂದ ತಿನ್ನುವ ಆಹಾರದವರೆಗೂ ಒಬ್ಬ ಗಂಡಸು ನಿರ್ಧಾರಿಸುತ್ತಾನೆ ಎಂದರೆ ಹೆಣ್ಣು ಮಕ್ಕಳು ಎಷ್ಟು ತುಳಿತಕ್ಕೆ ಒಳಪ್ಪಟ್ಟಿದ್ದಾರೆವೆಂಬುವುದು ಯೋಚನಿಯ. 

    ದಶಕಗಳಿಂದ ಹೆಣ್ಣು ಒಂದು ಗಂಡಿನ ಅಡಿಯಾಳಾಗಿ ಬದುಕುತ್ತಿದ್ದಾಳೆ. ಅವಳಿಗೆ ಅವಳದೇ ಆದ ಆಸೆ, ಆಕಾಂಕ್ಷೆಗಳಿದ್ದರು ಎಲ್ಲವು ಪಕ್ಕಕ್ಕೆ ಸರಿಸಿ ಈ ಪುರುಷ ಪ್ರಧ್ಯಾನ್ಯತೆ ಹೇಳಿದ ಹಾಗೆ ಕೇಳುತ್ತಿದ್ದಾಳೆ. ನಗರಗಳಲ್ಲಿ ಸ್ವಲ್ಪ ಸುಧಾರಣೆಗೆ ಬಂದಿದೆ ಆದರೆ ಹಳ್ಳಿಗಳಲ್ಲಿ ಇನ್ನೂ ಗಂಡಿನ ಅಡಿಯಾಳೆ. ಮನು ತನ್ನ ಪುಸ್ತಕವಾದ ಮನಸ್ಮೃತಿಯಲ್ಲಿ ಹೆಣ್ಣಿನ ಬಗ್ಗೆ ಹಲವು ನಿರ್ಬಂಧನೆಗಳನ್ನು  ಹೇರಿದ್ದ. ಅವುಗಳಲ್ಲಿ ಹಲವು ಆಚರಣೆಯಲ್ಲಿ ಇದ್ದವು.  ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳನೆಲ್ಲ ಹೊಡೆದಾಕಿ ಗಂಡಿನಷ್ಟೇ ಹೆಣ್ಣಿಗೂ ಬದುಕುವ ಹಕ್ಕಿದೆ ಎಂದು ಹೋರಾಟ ಮಾಡಿದ ಹಲವು ವೀರ ಮಹಿಳೆಯರನ್ನ ಕಂಡಿದ್ದೇವೆ.

ಇತ್ತೀಚಿಗೆ ಮಹಿಳೆಯರು ಸುಧಾರಿಸಿಕೊಂಡು ಎಲ್ಲಾ ಕ್ಷೆತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಗಂಡಿನಷ್ಟೇ ಸಮವಾಗಿ ಬದುಕುವ ಬಲವಿದೆ ಎಂದು ತೋರಿಸಿಕೊಳ್ಳಿತ್ತಿದ್ದಾರೆ. ಆದರೆ ಈ ಪುರುಷ ಮತ್ತೆ ಮತ್ತೆ ಹೆಣ್ಣುಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಕೊಡುತ್ತಾ ಬಂದಿದ್ದಾನೆ. ಹೌದು ಇತ್ತೀಚಿಗೆ ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೊಗಟ್ ಅವರು ಭಾರತಕ್ಕೆ ಪದಕಗಳನ್ನ ತಂದು ಕೊಟ್ಟವರು. ಇವರ ಮೇಲೆಯೆ ಲೈಂಗಿಕ ದೌರ್ಜನ್ಯವಾಗಿದೆ. ದೇಶಕ್ಕೆ ಹೆಮ್ಮೆ ಪಡುವಂತ ವಿಚಾರವೆಂದರೆ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಹಾಕಿ ಕ್ರೀಡೆ ಬಿಟ್ಟರೆ. ಅತಿಹೇಚ್ಚು ಪದಕಗಳನ್ನು ತಂದು ಕೊಟ್ಟ ಶ್ರೇಯ ಕುಸ್ತಿಪಟುಗಳಿಗೆ ಸೇರಬೇಕು. ಎರಡು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಭಾರತಕ್ಕೆ ತಂದು ಕೊಟ್ಟಿದ್ದಾರೆ. ಇದರಲ್ಲಿ ಮಹಿಳೆಯರ ವಿಭಾಗದಲ್ಲಿ ಒಂದು ಕಂಚು ಇದೆ. ಭಾರತಕ್ಕೆ ಪದಕಗಳನ್ನು ತಂದು ಭಾರತದ ಕೀರ್ತಿಯನ್ನ ಹೆಚ್ಚಿಸಿದಾ ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯವಾಗಿದೆ. ಇದರ ವಿರುದ್ಧ ಧ್ವನಿಯೇತ್ತಿದ ಪಟುಗಳು ದೆಹಲಿಯ ಜಂತರ್ ಮಂತರ್ ನಲ್ಲಿ ಧರಣಿಗೆ ಕುಳಿತ್ತಿದ್ದಾರೆ.

  ದೆಹಲಿಯಲ್ಲಿ ಹಗಲು ರಾತ್ರಿಯನ್ನದೆ ಮೈ ಕೊರೆಯುವ ಚಳಿಯನ್ನು ಲೆಕ್ಕಿಸದೆ ಕುಸ್ತಿಪಟುಗಳು ಬಿದಿಗಿಳಿದು ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಇನ್ನೂವರೆಗೂ ಯಾವುದೇ ನ್ಯಾಯ ಸಿಕ್ಕಿಲಿಲ್ಲವೆನ್ನುವುದು ಬೇಸರದ ಸಂಗತಿ. ಭಾರತದ ಗೌರವವನ್ನ ಹೆಚ್ಚಿಸಿದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಪೋಗಟ್ ಹಾಗೂ ಬಜರಂಗ್ ಪೊನಿಯಾ ಅವರು ಕುಸ್ತಿ ಅಖಾಡದಲ್ಲಿ ಪದಕ ಗೆದ್ದು ಆನಂದಭಾಷ್ಪ ಸುರಿಸಿದ್ದರು. ಭಾರತದ ಕುಸ್ತಿ ಪ್ರಿಯರು ಅಷ್ಟೇ ಅಲ್ಲದೆ ನೆರೆದೇಶಗಳ ಕುಸ್ತಿ ಪ್ರಿಯರು ಭಾರತದ ಕುಸ್ತಿಪಟುಗಳತ್ತಾ ನೋಡುತ್ತಿರುವ ಘಳಿಗೆಯೊಂದು ಉದ್ಭವವಾಗಿತ್ತು. ಭಾರತದ ಕೀರ್ತಿ ಹೆಚ್ಚಿಸಿದ ಮಹಿಳೆಯರಿಗೆ  ಭಾರತ  ನೀಡಿದ ಗೌರವವೇನು? ಲೈಂಗಿಕ ದೌರ್ಜನ್ಯ ಮತ್ತು ಬೀದಿಯಲಿ ಧರಣಿಯೇ?

   ಕೆಲ ತಿಂಗಳಿಂದ ಭಾರತದ ಕುಸ್ತಿ ಪಟುಗಳು, ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಿನೇಶ್ ಮತ್ತು ಕೆಲ ಮಹಿಳೆಯರು ಆರೋಪಿಸಿದ್ದರು. ಭಾರತದ ಕುಸ್ತಿ ಫೇಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಮೇಲೆ ಹಲವು ಆರೋಪಗಳನ್ನು ಬಹಿರಂಗ ಪಡಿಸಿದ್ದರು. ಕೇವಲ ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ಅಷ್ಟೇ ಅಲ್ಲದೆ ಭಜರಂಗ್ ಪೋನಿಯ ಜೊತೆಯಲ್ಲಿ ಹಲವರು ದೂರಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಬೇಜವಾಬ್ದಾರಿ ತೋರಿಸಿರುವುದು ಖಂಡನಿಯ.  ಬ್ರಿಜ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದವರು. ಹಾಗೂ ಭಾರತೀಯ ಜನತಾ ಪಕ್ಷದ ಸಂಸದರು. ಇವರು ಆರು ಸಲ ಸಂಸದರಾಗಿದ್ದರು. ಕೆಲ ವರ್ಷಗಳಿಂದೆ ಟೌಡ ಕಾಯ್ದೆಯಡಿ ಬಂಧನಕ್ಕೂ ಒಳಗಾದವರು. ಆದರೆ ಇವರ ಮೇಲೆ ಯಾವುದೇ ಕ್ರಮ ಜರುಗಲಿಲ್ಲ. ಬ್ರಿಜ್ ಭೂಷಣ್ ಅವರು ಒಬ್ಬ ಪ್ರಭಾವಿಯಾಗಿದ್ದರು ಮತ್ತು ಇದರಿಂದ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಅವಮಾನ ಆಗುವುದು ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲವೆಂದು ಕಾಣುವುದು.

ಬ್ರಿಜ್ ಭೂಷಣ್ ಮತ್ತು ಕೆಲವು ತರಬೇತುದಾರರು ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ವೆಸಗುತ್ತಿರುವರು ಎಂದು ಆರೋಪಿಸಿದರು. ಆದರೆ ಕೇಂದ್ರ ಸರ್ಕಾರ ತಲೆಕೆಡಸಿಕೊಳ್ಳಲಿಲ್ಲ. ಬದಲಾಗಿ ಮಾನ್ಯ ಪ್ರಧಾನಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡರು. ಮಹಿಳೆಯರ ಸುರಕ್ಷತೆಗಿಂತಲೂ ಇವರಿಗೆ  ಪ್ರಚಾರದ ಅವಶ್ಯಕತೆ ಇತ್ತೇ. "ಬೇಟಿ ಬಚಾವೋ ಬೇಟಿ ಪಡಾವೋ" ಕೇವಲ ಹೇಳುವುದು ಅಲ್ಲ ನುಡಿದಂತೆ ನಡೆಯಬೇಕಾಗಿದೆ ಎಂದು ನೆನಪಿಸುವ ದುಸ್ಥಿತಿ ಬಂದಿದೆ. ಈ ಪ್ರಕರಣದಲ್ಲಿ ಬಿದಿಗಿಳಿದು ಆರೋಪಿಸಿದ್ದು ಹಲವು ಪದಕ ವಿಜೇತರಾಗಿದ್ದಾರೆ. ಕಾಮನ್ ವೇಲ್ತ್ ಕ್ರೀಡಾಕೂಟದಾ ಪದಕ ವಿಜೇತರಾದ ವಿನೇಶ್ ಪೋಗಟ್, ರಿಯಾ ಒಲಂಪಿಕ್ಸ್ ಕಂಚಿನ ಪದಕ ವಿಜೇತ ಸಾಕ್ಷಿ ಮಲಿಕ್, ಟೋಕಿಯೋ ಒಲಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪೊಂಯಾ, ರವಿ ದಹಿಯಾ, ಮಹಿಳಾ ಕುಸ್ತಿಪಟುಗಳಾದ ಬಬಿತಾ ಪೋಗಟ್, ಅನ್ಕ್ಷು  ಮಲಿಕ್ ಸೇರಿದಂತೆ ಸುಮಾರು ಕುಸ್ತಿಪಟುಗಳು ಸೇರಿ ಲೈಂಗಿಕ ದೌರ್ಜನ್ಯದ ವಿರುದ್ಧ ಖಂಡಿಸಿ ಜೊತೆಗೂಡಿದರು. ಇದು ಇಡೀ ಭಾರತಕ್ಕೆ ನಾಚಿಕೆಯಾಗುವಂತಹ ವಿಷಯವಾಗಿದೆ. ದೇಶದ ಗೌರವಕ್ಕೆ ಧಕ್ಕೆಯಾಯಿತು ಎಂದು ಗೊತ್ತಿದ್ದರೂ ಕೇಂದ್ರ ತಕ್ಷಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ತಲೆ ತಗ್ಗಿಸುವಂತೆ ಮಾಡಿತು.

   ಕೊನೆಗೂ ಕುಸ್ತಿ ಪಟುಗಳಿಗೆ ಮಣಿದ ಕೇಂದ್ರ  ಕ್ರೀಡಾ ಇಲಾಖೆಯ ತನಿಖೆ ಸಮಿತಿಯೊಂದನ್ನು ರಚಿಸಿತು.  ಪಿ. ಟಿ. ಉಷಾ ನೇತೃತ್ವದಲ್ಲಿ ಭಾರತ ಒಲಂಪಿಕ್ಸ್ ಸಂಸ್ಥೆಯು ಏಳು ಜನರ ತನಿಖಾ ಸಮಿತಿಯನ್ನು ರಚಿಸಿದ್ದು. ಮತ್ತೊಂದು ಸಮಿತಿ ರಚನೆಗೆ ಕ್ರೀಡಾ ಇಲಾಖೆ ಮುಂದಾಗಿದೆ. ಕುಸ್ತಿ ಪಟುಗಳು ಈಗಾಗಲೇ ಹೇಳಿದ್ದಾರೆ ನಮ್ಮಲ್ಲಿ ಎಲ್ಲಾ ಸಾಕ್ಷಾಧಾರಗಳು ಇವೆ ಎಂದು. ಆದರೂ ಕ್ರಮ ಜರುಗಿಸದೆ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಕ್ರೀಡಾ ಸಚಿವ ಅನುರಾಗ ಠಾಕೂರ್ ಕುಸ್ತಿಪಟುಗಳಿಗೆ ಮನವೊಲಿಸಲು ಮುಂದಾಗಿದ್ದಾರೆ ಎಂದರೆ ಇದರ ಹಿಂದೆ ಹಲವು ಗಣ್ಯರು ಎನಿಸಿಕೊಳ್ಳಿವವರ ಕೈವಾಡವಿದೆ ಎಂದು ಸಂಶಯ ಬರುವುದು ಸತ್ಯ.

ಇದು ಕೇವಲ ಕುಸ್ತಿ ಪಟುಗಳ ಮೇಲೆ ಆಗುತ್ತಿರುವ ದೌರ್ಜನ್ಯವಷ್ಟೇ ಅಲ್ಲ. ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿರುವ ಮಹಿಳೆಯರ ಮೇಲೂ ಆಗುತ್ತಿವೆ. ಸಿನಿಮಾ ರಂಗ ಮತ್ತು ಖಾಸಗಿ ಕಂಪನಿಗಳು, ಸರ್ಕಾರಿ ಕಚೇರಿಗಳು, ಹೀಗೆ ಹಲವು ಕ್ಷೇತ್ರಗಳಲ್ಲಿ ಲೈಂಗಿಕ ಕಿರುಕುಳ ಸಹಿಸಿಕೊಂಡು ಬದುಕುತ್ತಿದ್ದಾರೆ. ಪ್ರಭಾವಿಗಳ ವಿರುದ್ಧ ಧ್ವನಿಯೇತ್ತಲು ಆಗದೆ ಅಸಾಯಕರಾಗಿ ಸಹಿಸಿಕೊಳ್ಳುತ್ತಿದ್ದಾರೆ. ಇದಕೆಲ್ಲ ಕೊನೆಯವಾಗ ಎಂಬುವುದು ಪ್ರತಿ ಹೆಣ್ಣು ಮಕ್ಕಳ ಒಳಧ್ವನಿಯಾಗಿದೆ. ಇತ್ತೀಚಿಗೆ ಮಠಾಧೀಶರೊಬ್ಬರು ವಿದ್ಯಾರ್ಥಿಗಳ  ಮೇಲೆ ದೌರ್ಜನ್ಯ ಎಸಗಿರುವ ಕೃತ್ಯ ಕಂಡಿದ್ದೇವೆ. ಹೀಗೆ ಆದರೆ ಮಹಿಳೆಯರು ಸಮಾಜದಲ್ಲಿ ಬದುಕುವುದಾದರೂ ಹೇಗೆ. ಭಾರತವು ಹೆಣ್ಣು ಮಕ್ಕಳನ್ನು ಪೂಜ್ಯನಿಯವೆಂದು ಕರೆಯಲ್ಪಡುವ ದೇಶ. ಈಗ ಅವರ ಮೇಲೆ ಕೃತ್ಯವೇಸಗಿದ್ದಾರೆ. ಆದೊಷ್ಟು ಬೇಗಾ ಅಂತ ನೀಚ ಕೆಲಸ ಮಾಡುವವರ  ವಿರುದ್ಧ ಕ್ರಮ ಜರುಗಿಸಬೇಕು. ಮತ್ತು ಬೇರೊಂದು ಹೆಣ್ಣು ಮಕ್ಕಳಿಗೆ ನಮ್ಮೊಂದಿಗೆ ಕಾನೂನು, ಸಂವಿಧಾನ, ಮತ್ತು ಸರ್ಕಾರವಿದೆ, ಎಂದು ಧೈರ್ಯಬರುವಂತೆ ಆಗಲಿ.

                                                        - ಭೀಮಣ್ಣ ಹತ್ತಿಕುಣಿ, ಯಾದಗಿರಿ.


ಗುರುವಾರ, ಮೇ 11, 2023

ನೀವಾಗಿರಿ (ಕವಿತೆ) - ಸಬ್ಬನಹಳ್ಳಿ ಶಶಿಧರ.

ಮತಾಂಧ ಮನುಜರು ಎಲ್ಲೆಡೆ ಇಹರು
ಮುಕ್ಕಿ ಮುಗಿಸಲು ಕಾದಿಹರು
ಪ್ರೀತಿ ಪ್ರೇಮದ ನಾಟಕವಾಡಿ
ನರಕದ ಬಲೆಗೆ ಸೆಳೆಯುವರು

ದುರ್ಬಲಗೊಂಡ ಮನಸು ಸಿಕ್ಕರೆ
ತಪ್ಪದು ನಿಮಗೆ ನರಕದ ಸೆರೆ
ಮಾನವೀಯತೆ ಇಲ್ಲದ ಮೃಗಗಳು
ಕುಕ್ಕಿ ತಿನ್ನುವ ರಣಹದ್ದುಗಳು

ತಿಂದು ಬಿಸಾಡುವ ಎಂಜಲ ಎಲೆಯಂತೆ
ನಿಮ್ಮನ್ನು ಅವರು ಬಳಸುವರು
ಪ್ರೀತಿ ಪ್ರೇಮ ಕರುಣೆ ಮಮತೆ
ಯಾವುವು ಇರದ ದಾನವರು

ಗೋಮುಖ ರೂಪದ ವ್ಯಾಘ್ರ ಮಾತಿಗೆ
ತಪ್ಪಿಯು ಮನ ಕಿವಿ ನೀಡದಿರಿ
ಹರಕೆ ಕುರಿಯಾಗಿ ಮೋಹಕೆ ಸಿಲುಕಿ
ಅನಾಥ ಶವಗಳು ಆಗದಿರಿ

ಸಂಸ್ಕಾರ ಮರೆತು ಮೆರೆದರೆ ಬದುಕು
ಹರಾಜಿಗಿಟ್ಟ ವಸ್ತುವಾಗುವುದು
ನೀವು ನೀವಾಗಿ ನಿಮ್ಮೊಳಗಿದ್ಢರೆ
ಸ್ವರ್ಗ ಜೀವನ ನಿಮದಾಗುವುದು.
  
 
 -  ಸಬ್ಬನಹಳ್ಳಿ ಶಶಿಧರ.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...