“ಹುಟ್ಟಿದ ಉಸಿರುಗಳ ಒಳಗಿನ ಆತ್ಮವು ಏಕರೂಪಿಯಾಗಿದೆ, ಲಿಂಗ ಭೇದ ಮಾಡಿ ಬೆಳಸುವುದ ಕಂಡು ತಲೆತಗ್ಗಿಸಿದ್ದೇನೆ” ಎನ್ನುವ ಪ್ರಭಾವತಿ ದೇಸಾಯಿ ಅವರ ತರಹೀಗಜಲ್ ಸಂಕಲನ ‘ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ’
“ಬಣ್ಣಗೆಟ್ಟ ಪರದೆಗಳ ತೆಗೆದು ಹಾಕಿಬಿಡು ಕಾದಿದೆ ಹೊಸ ಬದುಕು
ತೊಟ್ಟಿರುವ ಹಳೆ ಬದುಕು ಬಿಚ್ಚಿ ಹಾಕಿಬಿಡು ಕಾದಿದೆ ಹೊಸ ಬದುಕು
ಇಳೆಯಲಿ ದ್ವೇಷ ಅಸೂಯೆಯ ನೆತ್ತರು ಹರಿದು ಕೆಂಪು ಕಲೆಯಾಗಿದೆ
ಸ್ವಚ್ಛ ಮಾಡಲು ಒಲವ ನೀರು ಹಾಕಿಬಿಡು ಕಾದಿದೆಹೊಸ ಬದುಕು
ಭೂಮಿ ಬಾನುವಿನ ತುಂಬ ಹಾರಾಡುತಿವೆ ದುಷ್ಟ ಜೀವಾಣುಗಳು
ಕೆಟ್ಟ ಹುಳುಗಳು ಸಾಯಲಿ ವಿಷಹಾಕಿಬಿಡು ಕಾದಿದೆ ಹೊಸ ಬದುಕು
ಜಗದ ಜೀವಿಗಳೆಲ್ಲ ಬದುಕಿವೆ ರಂಗು ರಂಗಿನ ಮುಖವಾಡದಲ್ಲಿ
ಹಾವಿನಂತೆ ಪೊರೆಯನ್ನು ಕಳಚಿಹಾಕಿಬಿಡು ಕಾದಿದೆ ಹೊಸ ಬದುಕು
ಪಿಸು ಮಾತಿನ ಮಧುರ ಗಜಲ್ ಹಾಡಿ ಹುಚ್ಚು ಹಿಡಿಸಿ ಎಲ್ಲಿ ಮರೆಯಾದೆ
ಒಲಿದ ಹೃದಯ ಪ್ರೀತಿಗೆ ಹಾರಹಾಕಿದೆ ಕಾದಿದೆ ಹೊಸ ಬದುಕು” ಎಂದು ಹೊಸ ಬದುಕನ್ನು ಆಮಂತ್ರಿಸುವ ಶ್ರೀಮತಿ ಪ್ರಭಾವತಿ ಅಮ್ಮನವರ ತರಹೀಗಜಲ್ ಇದು ಸಿದ್ದರಾಮ ಹಿರೇಮಠ ಕೂಡ್ಲೀಗಿ ಇವರ “ತೊಟ್ಟಿರುವ ಹಳೆ ಬದುಕ ಬಿಚ್ಚಿಹಾಕಿಬಿಡು ಕಾದಿದೆ ಹೊಸ ಬದುಕು” ಎನ್ನುವ ಸಾನಿ ಮಿಸ್ರ ಬಳಸಿ ಬರೆದಿರುವ ಮೇಲಿನ ಗಜಲ್ ಹೊಸ ಬದುಕಿನ ಆಶಾವಾದಕ್ಕೆ ಬೇಕಾದ ಅರ್ಹತೆಗಳನ್ನು ಮನತಟ್ಟುವಂತೆ ಹೇಳುತ್ತದೆ. ಗಜಲ್ ಸಾಹಿತ್ಯ ಲೋಕದ ಮೇರು ಗಿರಿ ಪ್ರಭಾವತಿ ಅಮ್ಮ ಈಗಾಗಲೆ ಸಾಕಷ್ಟು ಗಜಲ್ ಸಂಕಲನಗಳನ್ನು ಪರಿಚಯಿಸಿದ್ದು ‘ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ’ ಎನ್ನುವುದು ಇವರ ತರಹೀಗಜಲ್ ಸಂಕಲನವಾಗಿದೆ.
ಬಾಳಿನಲಿ ನಾವು ಹೊಸ ಮನ್ವಂತರಕೆ ಮುನ್ನುಡಿ ಇಡಬೇಕಾದರೆ ಹಳೆಯ ಜಡ ಗಟ್ಟಿದ ಮನಸ್ಸುನ್ನು ನವೀಕರೀಸಲು ಮೊದಲು ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರಮಾಣಿಕವಾದ ಬದುಕು ಖಂಡಿತ ಸ್ವಂಚದ ಮನಸ್ಸಿಗೆ ಮತ್ತು ಬದುಕಿಗೆ ಕಾರಣವಾಗುತ್ತದೆ. ಎನ್ನುವ ಆಶಯದಲ್ಲಿ ಮಾತನಾಡುವ ಪ್ರಭಾವತಿ ಅಮ್ಮ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅವರು ಕೈವಾರಿಸಿದ್ದು ಅತ್ಯದ್ಭುತ ಕೃತಿಗಳನ್ನು ಹೊರ ತಂದಿದ್ದಾರೆ.
“ಜಗದ ಅಪನಿಂದೆ ಅವಮಾನಗಳಿಗೆ ಕಿವಿಗೊಟ್ಟರೆ ಗರಬಡಿದಂತೆ
ಎಲ್ಲ ಮರೆತು ಬೀರುವ ಮಂದಹಾಸ ನಗೆಹೊನಲು ಆವರಿಸಿದಂತೆ
ಕರಾಳ ಇರುಳ ಗರ್ಭದಲ್ಲಿಯೇ ಅಡಗಿರುತ್ತದೆ ಬೆಳಕಿನ ಕಿರಣ
ಸೋಲಿನ ಚಳಿಕೆಳೆಯಲು ಗೆಲುವೆಂಬುದು ಎಳೆಬಿಸಿಲು ಆವರಿಸಿದಂತೆ”
ಎಂದು ತುಂಬಾ ಅರ್ಥ ಗರ್ಭಿತವಾದ ಸಾಲುಗಳನ್ನು ಹೆಣೆಯುವ ಮೂಲಕ ಬದುಕಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. “ನರಳದಿರು ಜೀವವೆ ಕೊರಗದಿರು ಮನವೆ ಬರುತ್ತವೆ ಕಷ್ಟ ಕಳೆವ ದಿನ ಮಳೆನಿಂತ ಮೇಲೆ ದಿಗಂತದಲಿ ಕಾಮನಬಿಲ್ಲು ಆವರಿಸಿದಂತೆ”
ಶ್ರೀಮತಿ ಪ್ರಭಾವತಿ ದೇಸಾಯಿ ಅಮ್ಮನವರು ಜನಿಸಿದ್ದು ರಾಯಚೂರಿನಲ್ಲಿ, ನೆಲಸಿದ್ದು ವಿಜಯಪುರದಲ್ಲಿ. ಹೊಲಿಗೆಯ ಮುಖ್ಯ ಭೋದಕಿಯಾಗಿ ಕಾರ್ಯ ನಿರ್ವಹಿಸಿದ ಇವರು ಈಗ ನಿವೃತ್ತಿ ಜೀವನದಲ್ಲಿ ಸಂತೃಪ್ತಿ ಕಾಣುತ್ತಾ ಸಾಹಿತ್ಯ ರಚನೆಯಲ್ಲಿ ಸಕ್ರೀಯವಾಗಿ ತೊಡಗಿ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾ.ಶಾರದಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಇವರು ಸಾಕಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಹೃದಯಿಗಳಾಗಿದ್ದಾರೆ.
ಡಾ. ಕಾಶಿನಾಥ್ ಅಂಬಲಗೆಯವರ ಸಾನಿಮಿಸ್ರಾ “ನೋವೇ ನೋವನ್ನು ಅರಿಯಲು ಕಲಿಸುತ್ತದೆ” ಎನ್ನುವ ಗಜಲ್‌ನಲ್ಲಿ ಅಮ್ಮ ಹೀಗೆ ಹೇಳುತ್ತಾರೆ.
“ಸಾಗರ ಅಲೆಗಳ ಕುಣಿತ ಭಯಹುಟ್ಟಿಸುವುದು
ಪ್ರಮಾಣಿಕ ಬಾಳು ಜೀವಿಸಲು ಕಲಿಸುತ್ತದೆ”
ಲಕ್ಷ್ಮಿ ದೊಡ್ಡಮನಿ ಅವರ ಸಾನಿಮಿಸ್ರಾ “ಮನುಜರು ಪಶುಗಳಂತೆ ಆಡುವುದು ಕಂಡು ತಲೆತಗ್ಗಿಸಿದ್ದೇನೆ” ಎನ್ನುವಲ್ಲಿ ಮಾನವನ ದುರ್ನಡತೆಯಿಂದಾಗಿ ಸಮಾಜ ದುರ್ಗತಿಗೆ ತಲುಪಿರುವ ಸ್ಥಿತಿಯನ್ನು ಅಮ್ಮ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಬ್ರಷ್ಟಾಚಾರ, ಲಿಂಗತಾರತಮ್ಯ, ಪುರುಷಪ್ರಧಾನತೆ, ಜನಸಂಖ್ಯೆ ಹೀಗೆ ಹಲವಾರು ಸಾಮಾಜಿಕ ಸಮಸ್ಯೆಗಳ ವಿರುದ್ದ ಧ್ವನಿಯಾಗಿ ಹೊರಹೊಮ್ಮಿದೆ. ಹೆಣ್ಣಿನ ಮೇಲೆ ಬಲತ್ಕಾರ ಮಾಡುವ ಹೀನ ಮನಸ್ಸಿನ ವಿರುದ್ಧ ಚಾಟಿ ಬೀಸಿದ್ದಾರೆ.
“ಹೆಣ್ಣಾದ ಅಕ್ಕ ತಂಗಿ ತಾಯಿ ಅಜ್ಜಿ ಸಾಲದಾಗಿದೆ ದಾಹಕೆ
ಸೊಕ್ಕಿದ ನಾಯಿ ಹರಿದು ತಿನ್ನುವುದು ಕಂಡು ತಲೆತಗ್ಗಿಸಿದ್ದೇನೆ
ಹೌದು ಅಮ್ಮನದು ಬರೀ ಸಮಸ್ಯೆಯ ಅನಾವರಣವಲ್ಲ ಅದಕ್ಕೆ ಕಾರಣವನ್ನು ನೀಡುತ್ತಾರೆ
“ಹುಟ್ಟಿದ ಉಸಿರುಗಳ ಒಳಗಿನ ಆತ್ಮವು ಏಕರೂಪಿಯಾಗಿದೆ
ಲಿಂಗ ಭೇದ ಮಾಡಿ ಬೆಳೆಸುವುದು ಕಂಡು ತಲೆತಗ್ಗಿಸಿದ್ದೇನೆ”
ನಾವೇ ಮಾಡುವ ಲಿಂಗ ತಾರತಮ್ಯವೇ ನಮ್ಮ ಬದುಕಿನ ದುರಂತಕ್ಕೆ ಕಾರಣವಾಗಿದೆ ಅಲ್ಲವೆ?
“ಗೇಣು ಬಟ್ಟೆ ಚೋಟು ಹೊಟ್ಟೆಗೆ ಬೇಕೆಷ್ಟು ಎಲ್ಲ ಬಿಟ್ಟು ಹೋಗು
ಎಲ್ಲವು ನನಗೆಂದು ಕೂಡಿಡುವುದ ಕಂಡು ತಲೆತಗ್ಗಿಸಿದ್ದೇನೆ”
ಅಮ್ಮ ಇಲ್ಲಿ ದುರಾಸೆ, ಬ್ರಷ್ಟಾಚಾರದ ವಿಡಂಬನೆಗೆ ತೊಡಗುತ್ತಾರೆ. ಮುಂದುವರೆದು
“ಮುಗ್ಧ ಜೀವಿಗಳಿಗೆ ಬಣ್ಣ ಬಳಿದು ಜಗಳ ಹಚ್ಚಿ ಮಜಾ ಮಾಡುವಿರಿ
ಧರ್ಮಗುರುಗಳು ಜಗವೆಲ್ಲ ಉರಿಸುವುದು ಕಂಡು ತಲೆತಗ್ಗಿಸಿದ್ದೇನೆ”
ಜಾತಿ, ಧರ್ಮದ ವೈಶಮ್ಯ ಹೆಚ್ಚಾಗಿ ಮುಗ್ಧ ಜನಗಳಲ್ಲಿ ಬಿತ್ತುವವರು ಸಾಕಷ್ಟು ಪಾಂಡಿತ್ಯ ಸಂಪಾದಿಸಿದ ಧರ್ಮಗುರುಗಳೆ ಎನ್ನುವ ಅಂಶ ವೇದ್ಯವಾಗುತ್ತದೆ.
ಅಮ್ಮನ ಸಾಲುಗಳಲ್ಲಿ ನನಗೆ ಕಾಣಿಸಿದ್ದು ಸಮಾಜದ ಅನ್ಯಾಯಗಳ ವಿರುದ್ಧದ ಧ್ವನಿ, ಅಸಹಾಯಕರ ಪರವಾದ ಅನುಕಂಪ, ವೈರಾಗ್ಯದ ಜೊತೆಯಲ್ಲಿಯೇ ಬದುಕಿನ ಆಶಾವಾದ, ಇನ್ನುಳಿದಂತೆ ಗಜಲ್‌ನಲ್ಲಿ ಸಾಮನ್ಯ ಎನ್ನಬಹುದಾದ ಪ್ರೀತಿ, ಪ್ರೇಮ, ವಿರಹದ ಭಾವಗಳು. ಅಗಲಿಕೆಯ ತಲ್ಲಣಗಳು.
“ಇಳೆ ಬಿಸಿ ಕರಗಿಸಲು ನಭ ಹನಿ ಉದುರಿಸಿ ಹಗುರಾಗಿದೆ ಸಾಕಿ
ಬೆಚ್ಚಗಾಗಲು ತುಂಬಿದ ಮಧುಬಟ್ಟಲು ಬೇಕಾಗಿದೆ ಸಾಕಿ”
“ಸಾಕಿ ಇಲ್ಲದೆ ಬರಿದಾಗಿದೆ ಜಗದ ಮಧುಶಾಲೆಗಳು
ಖಾಲಿಯಾದ ಮಧು ಹೂಜಿಯು ಬದುಕಿಗೆ ಸವಾಲಾಗಿದೆ ಸಾಕಿ” ಕಡುವಿರಹದ ಮಾತನಾಡುವ ಈ ಸಾಲು ಕೇಳಲು ಹಿತವೆನ್ನಿಸುತ್ತದೆ.
ಸಂಕಲನದ ಆರಂಭದಲ್ಲಿಯೇ ಬರುವ ಶಾಂತರಸರ ಸಾನಿ ಮಿಸ್ರಾದ ಗಜಲ್‌ನ ಸಾಲುಗಳು ಪ್ರಾಪಂಚಿಕ ಬದುಕಿನ ಕ್ಷುಲ್ಲಕ ವಿಚಾರಗಳ ಕುರಿತಾದ ವೈರಾಗ್ಯ ಎಲ್ಲರಿಗೂ ಆಗುವಂತದ್ದೇ ಆದರೆ ಆಧ್ಯಾತ್ಮದ ಮೂಲಕ ನಾವು ಶಾಂತಿ, ಸಹನೆ, ಅನುಕಂಪದ ಗುಣಗಳನ್ನು ಬೆಳೆಸಿಕೊಂಡು ಜಗತ್ತನ್ನು ಹೇಗೆ ಪ್ರೀತಿಸುತ್ತಾ ನಡೆದು ಬಿಡಬೇಕೆಂದು ತುಂಬಾ ಚನ್ನಾಗಿ ವಿಶ್ಲೇಷಿಸುತ್ತಾರೆ.
“ಫಲವತ್ತಾದ ಭೂಮಿ ಬರಕ್ಕಿ ಬಿರುಕು ಬಿಟ್ಟು ಬರುಡಾಗಿದೆ
ಬಂಜರ ನೆಲದಲಿ ಮಲ್ಲಿಗೆ ಸುಮ ಅರಳಿಸುತ್ತ ನಡೆದು ಹೋದೆ
ಮೌನದ ಚೂರಿಯಿಂದಿರಿದು ಮಾಡಿದ ಗಾಯ ಎಂದು ಮಾಯದು
ಹೃದಯಕೆ ಚುಚ್ಚಿ ಆದ ನೋವು ಆಡಿಸುತ್ತ ನಡೆದು ಹೋದೆ
ಈ ಲೋಕದ ಕ್ರೂರತೆ ನೋಡಿ ಬಳಲಿ ಬೆಂಡಾಗಿದೆ ಉಸಿರು
ನೊಂದು ಜೀವಿಗೆ ಪ್ರೀತಿಯ ಹೊನಲು ಹರಿಸುತ್ತ ನಡೆದು ಹೋದೆ”
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಸಂಸ್ಥಾಪಕರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)