ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಭಾನುವಾರ, ಫೆಬ್ರವರಿ 26, 2023
ನೀ ನನ್ನವಳೇ (ಕವಿತೆ) - ಬಿ.ಹೆಚ್.ತಿಮ್ಮಣ್ಣ.
ಸಾವನ ದುರ್ಗ (ಕವಿತೆ) - ಲಕ್ಷ್ಮಿ ಕಿಶೋರ್ ಅರಸ್.
ಶನಿವಾರ, ಫೆಬ್ರವರಿ 25, 2023
ಮಳೆಯ ಮಹತ್ವ (ಕೃತಿ ಪರಿಚಯ) - ವರುಣ್‌ರಾಜ್ ಜಿ.
ಮಳೆಯಿಂದ ಬರುವ ನೀರಿನ ಮೂಲಕ್ಕೆ ದೇವಮಾತೃಕ ಎನ್ನುವರು. ಮಳೆಯಿಂದಲೇ ನದಿ, ಕೆರೆ-ಕಟ್ಟೆಗಳಿಗೆ ನೀರು. ಅಂತರ್ಜಲಕ್ಕೂ ಮಳೆಯೇ ಮೂಲ. ಮಳೆ ಇಳೆಯ, ಇಳೆಯ ಜನರ ಬಾಳಿಗಾಧಾರ. ಮಳೆಯಿಂದಲೇ ಬೆಳೆ, ಬೆಳೆಯಿಂದಲೇ ಬದುಕು. ಜಲವೇ ನಮ್ಮ ಜೀವನ. ಆಹಾರವಿಲ್ಲದೆ ಮನುಷ್ಯ ಸ್ವಲ್ಪಕಾಲ ಜೀವಿಸಬಹುದಾದರೂ ನೀರಿಲ್ಲದೇ ಬದುಕಲಾರ. ಕೇವಲ ಮನುಷ್ಯನಿಗಷ್ಟೇ ಅಲ್ಲ, ಲೋಕದ ಸಕಲ ಜೀವ ಜಂತುಗಳಿಗೂ, ಗಿಡ – ಮರಗಳಿಗೂ ನೀರು ಬೇಕೇ ಬೇಕು. ಮಳೆ ಹೆಚ್ಚಾದರೂ, ಕಡಿಮೆಯಾದರೂ ಜನರಿಗೆ ಸಂಕಷ್ಟ ತಪ್ಪಿದಲ್ಲ.
ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದರು ನೀರನ್ನು ಕೃತಕವಾಗಿ
ತಯಾರಿಸಲಾಗುವುದಿಲ್ಲ. ಆದರೆ, ಮಳೆಯ ಮಹತ್ವವನ್ನು ಅರಿತು ಪರಿಸರ ಸಂರಕ್ಷಣೆ ಮಾಡುತ್ತಾ, ವೈಜ್ಞಾನಿಕ
ವಿಧಾನಗಳ ಮೂಲಕ ಮಳೆಯ ನೀರನ್ನು ಸದ್ಬಳಕೆ ಮಾಡಿಕೊಳ್ಳಬಹುದು. ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ
ಗಾಳಿ, ನೀರು, ಆಹಾರಗಳನ್ನು ಉಳಿಸಿ ಹೋಗುವುದು ನಮ್ಮ ಮೇಲಿರುವ ಜವಾಬ್ದಾರಿ. ಈ ನಮ್ಮ ಜವಾಬ್ದಾರಿಯನ್ನು
ಮನವರಿಕೆ ಮಾಡಿಕೊಡುವ ಪ್ರಯತ್ನವೊ ಎಂಬಂತೆ ಮಾನ್ಯ ಡಾ. ಜಿ. ಶರಶ್ಚಂದ್ರ ರಾನಡೆ ಯವರು ಮಳೆಯ ಮಹತ್ವ
ಎಂಬ ಕೃತಿ ಮೂಡಿ ಬಂದಿದೆ.
ಮಳೆಯ ಮಹತ್ವವನ್ನು ಮತ್ತು ಸಂರಕ್ಷಣಾ ಕ್ರಮಗಳನ್ನು ವಿವರವಾಗಿ ತಿಳಿಸುವ
ಒಟ್ಟು ೧೭ ವೈಶಿಷ್ಟ್ಯಪೂರ್ಣ ಲೇಖನಗಳನ್ನು ಒಳಗೊಂಡಿರುವ ಈ ಕೃತಿ, ತೀವ್ರವಾದ ಆಸಕ್ತಿ ಮತ್ತು ಆಳವಾದ
ಅಧ್ಯಾಯನದಿಂದ ಮೂಡಿಬಂದದ್ದು. ನಾವು ಈ ಲೇಖನಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಒಂದು,
ರೈತರ ಅಥವಾ ಜನಸಾಮಾನ್ಯರ ದೃಷ್ಠಿಯಲ್ಲಿ ಮಳೆಯನ್ನು ನೋಡುವ ವಿಧಾನ. ಇಲ್ಲಿ, ಮಳೆಯ ಕುರಿತಾದ ಜನಪದರ
ನಂಬಿಕೆಗಳು, ಆಚರಣೆಗಳು, ಸರ್ವಜ್ಞ, ತಿರುವಳ್ಳುವರ್ ಮುಂತಾದವರ ಬರಹಗಳಲ್ಲಿ ಮಳೆ ವ್ಯಕ್ತಗೊಂಡಿರುವ
ಬಗೆ, ಮಳೆ ನಕ್ಷತ್ರಗಳು, ಮಳೆಯ ಕುರಿತಾದ ಗಾದೆಗಳು, ಮಳೆಯ ಕುರಿತಾದ ಪೌರಾಣಿಕ ಮತ್ತು ಸಾಂಸ್ಕೃತಿಕ
ಐತಿಹ್ಯಗಳನ್ನು ಆಸಕ್ತಿಕರವಾಗಿ ವಿಶ್ಲೇಷಿಸಲಾಗಿದೆ.
ಇನ್ನು ಎರಡನೇ ಭಾಗವು ಸಂಪೂರ್ಣ ಮಳೆಯ ವೈಜ್ಞಾನಿಕ ವಿಶ್ಲೇಷಣೆಗೆ ಸಂಬಂಧಿಸಿದ್ದು.
ಚಂಡಮಾರುತಗಳ ವಿವರ, ಮಾನ್ಸೂನ್ ಮಳೆಯ ವಿವರಗಳು, ಹನಿ ನೀರಾವರಿ, ಇಂಗುತ್ತಿರುವ ಅಂತರ್ಜಲ ಮತ್ತು
ಅದಕ್ಕೆ ಪರಿಹಾರಗಳು, ಜಲಾನಯನ ಅಭಿವೃದ್ಧಿ ಯೋಜನೆಗಳು ಮತ್ತು ಅವುಗಳ ಮಹತ್ವ, ಜಲಭಾಗ್ಯ ಮತ್ತು ಕೃಷಿ
ಸಂಚಾಯಿ ಯೋಜನೆಗಳ ವಿವರ, ಜಲ ಮಾಲಿನ್ಯ ಮತ್ತು ಅವುಗಳನ್ನು ತಡೆಗಟ್ಟುವ ಕ್ರಮಗಳನ್ನು ಇಲ್ಲಿ ವಿವರಿವಾಗಿ
ಚರ್ಚಿಸಲಾಗಿದೆ.
ಮೊದಲ ಭಾಗದಲ್ಲಿ ಜನ ಮಳೆಯೊಂದಿಗೆ ಇಟ್ಟುಕೊಂಡಿದ್ದ ಸಾಂಸ್ಕೃತಿಕ ಸಂಬಂಧಗಳನ್ನು
ವಿವರಿಸುತ್ತಾ, ಈ ಸಂಬಂಧಗಳು ಇತ್ತೀಚೆಗೆ ತಪ್ಪಿಹೋಗುತ್ತಿರುವುದನ್ನು ಮತ್ತು ಅದರಿಂದಾಗುವ ಅಪಾಯಗಳನ್ನು
ಮನಗಾಣಿಸಲು ಪ್ರಯತ್ನಿಸಲಾಗಿದ್ದು, ಎರಡನೇ ಭಾಗದಲ್ಲಿ ಅಂಕಿಅಂಶಗಳ ಸಹಿತವಾಗಿ ಮಳೆಯನ್ನು ವೈಜ್ಞಾನಿಕ
ದೃಷ್ಠಿಕೋನಗಳಿಂದ ವಿವರಿಸುತ್ತಾ, ಮಳೆಯ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆಯ ಕ್ರಮಗಳನ್ನು ಸವಿಸ್ತಾರವಾಗಿ
ಚರ್ಚಿಸಲಾಗಿದೆ.
ಕೃತಿಕಾರರು ಜಲ ಸಂರಕ್ಷಣೆಯ ಕುರಿತು ಮಾತನಾಡುತ್ತಾ, ಹೇಳುವ “ಈ ಜಗತ್ತಿನಲ್ಲಿ
ಮೂರನೇ ಮಹಾಯುದ್ಧ ನಡೆದರೆ ಅದು ನೀರಿಗೋಸ್ಕರ ಎಂಬ ಅನುಮಾನವಿಲ್ಲ. ಆ ಅನುಮಾನ ನಿಜವಾಗುವ ಆತಂಕ ಈಗೀಗ
ಸ್ಪಷ್ಟವಾಗತೊಡಗಿದೆ. ನೀರಿನ ಬಳಕೆಯಲ್ಲಿ ಅದನ್ನು ಉಳಿಸಿಕೊಳ್ಳುವಲ್ಲಿ ಒಂದು ಶಿಸ್ತು ಬರದಿದ್ದರೆ
ಹನಿ ನೀರಿಗೂ ಕಷ್ಟಪಡಬೇಕಾದ ಸ್ಥಿತಿ ತಲುಪಲು ಹೆಚ್ಚು ಕಾಲ ಉಳಿದಿಲ್ಲ” ಎಂಬ ಮಾತನ್ನು ನಾವೆಲ್ಲರೂ
ಬಹಳ ಗಂಬೀರವಾಗಿ ಪರಿಗಣಿಸಬೇಕಿದೆ. ಇಂತಹ ಹಲವು ಎಚ್ಚರಿಕೆಗಳನ್ನು ಮತ್ತು ಅವುಗಳಿಗೆ ಸೂಕ್ತ ಪರಿಹಾರ
ಕ್ರಮಗಳನ್ನೂ ಒಳಗೊಂಡ ಈ ಕೃತಿಯನ್ನು ನಾವೆಲ್ಲರೂ ಓದಿ- ಓದಿಸಿ, ಅದನ್ನು ಅನುಸರಿಸಬೇಕು.
ಜಲ ಸಂರಕ್ಷಣೆ ಮತ್ತು ನೀರಿನ ಸದ್ಬಳಕೆ ನಮ್ಮ ಮೇಲಿರುವ ಜವಾಬ್ದಾರಿಯಷ್ಟೇ
ಅಲ್ಲ, ಇದು ನಮ್ಮ ಮುಂದಿನ ಪೀಳಿಗೆಯ ಅಳಿವು – ಉಳಿವಿನ ಪ್ರಶ್ನೆಯೂ ಹೌದು. ಇಂದು ಜಲಮಾಲಿನ್ಯದ
ಕಾರಣದಿಂದಾಗಿ ಮಾನವ ಹಲವು ರೀತಿಯ ರೋಗ - ರುಜಿನಗಳಿಗೆ ತುತ್ತಾಗುತ್ತಿರುವುದು ನಮ್ಮಗೆಲ್ಲ ತಿಳಿದ
ವಿಚಾರವೇ. ಇಷ್ಟಾದರೂ ನಾವಿನ್ನೂ ಎಚ್ಚೆತ್ತುಕೊಳ್ಳದೇ ಇರುವುದು ದುರಂತ. ಜಲ ಸಂರಕ್ಷಣೆ ಹಾಗೂ ಅಂತರ್ಜಲ
ಮರುಪೂರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವೈಜ್ಞಾನಿಕ ಸಂಶೋಧನೆಗಳು, ಆವಿಷ್ಕಾರಗಳು ಜಗತ್ತಿನಾದ್ಯಂತ
ನಡೆಯುತ್ತಲೇ ಇವೆ. ಆದರೆ, ಇವುಗಳನ್ನು ಅನುಸರಿಸುವವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟು. ಈ ಸಂಬಂಧ
ಸರ್ಕಾರವು ಹಲವು ಯೋಜನೆಗಳನ್ನು ತಂದಿದ್ದರೂ ಅವು ಜನರಿಗೆ ತಲುಪದೇ ಕೇವಲ ದಾಖಲೆಗಳಲ್ಲಿ ಮಾತ್ರ ಉಳಿಯುವಂತಾಗಿದೆ.
ಅನೇಕ ಸಂಘ – ಸಂಸ್ಥೆಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳನ್ನು ನಿರಂತರವಾಗಿ
ಮಾಡುತ್ತಲೇ ಇವೆ. ಇನ್ನಾದರೂ ನಾವು ಪರಿಸ್ಥಿತಿಯ ತೀವ್ರತೆಯನ್ನು ಅರಿಯಬೇಕಾಗಿದೆ ಮತ್ತು ನಮ್ಮ ಮುಂದಿನ
ಪೀಳಿಗೆಯವರಿಗೂ ಈ ಅರಿವನ್ನು ಮೂಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಮಾನ್ಯ ಶರಶ್ಚಂದ್ರರದ್ದು ಒಂದು ಸಾರ್ಥಕ
ಪ್ರಯತ್ನ ಎನ್ನಬಹುದು.
ಮಳೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದಲೇ ರಚನೆಯಾಗಿರುವ ಈ ಮಹತ್ವದ
ಕೃತಿಯ ಕುರಿತು ಒಂದೆರಡು ಅನಿಸಿಕೆಗಳನಷ್ಟೇ ಇಲ್ಲಿ ಹಂಚಿಕೊಳ್ಳಲಾಗಿದೆ. ಇಂತಹ ಕೃತಿಯನ್ನು ಓದುವುದು
- ಅನುಸರಿಸುವುದು ಈ ಕ್ಷಣದ ಅನಿವಾರ್ಯವಾಗಿದ್ದು, ಓದುಗರು ಪುಸ್ತಕವನ್ನು ಕೊಂಡು – ಓದಿ ಮತ್ತಷ್ಟು ಮಾಹಿತಿ
ಹಾಗೂ ಜ್ಞಾನವನ್ನು ಪಡೆದು ವಿಸ್ತರಿಸಿಕೊಳ್ಳಬಹುದು. ಪುಸ್ತಕಕ್ಕಾಗಿ ಸಂಪರ್ಕಿಸಿ: ಡಾ. ಜಿ. ಶರಶ್ಚಂದ್ರ
ರಾನಡೆ #೯೦೦೮೨೩೧೬೮೬.
- ವರುಣ್‌ರಾಜ್ ಜಿ.
ಅಧ್ಯಕ್ಷರು, ವಿಚಾರ ಮಂಟಪ ಬಳಗ.
#೯೪೪೮೨೪೧೪೫೦
ಕಾಯುತ್ತಲೇ ಇರುವೆ ನಿನಗಾಗಿ (ಕವಿತೆ) -ತರುಣ ಈಶಪ್ಪ ಪೂಜಾರ.
ಶರೀಫನ ತಂಬೂರಿ (ಕವಿತೆ) - ಮಹಮ್ಮದ್ ರಫೀಕ್, ಕೊಟ್ಟೂರು.
ಮಾರಬೇಡಿ ಮತಗಳ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.
ಗೆಳತಿಗೊಂದು ಉತ್ತರ (ಕವಿತೆ) - ಖಾಶೀ.
ಜಂಗಮವಾಣಿ (ಕವಿತೆ) - ಮಾಲತಿ ಮೇಲ್ಕೋಟೆ.
ಜಗವ ಪಾಲಿಸು ಶಿವನೇ (ಕವಿತೆ) - ಶಾರದ ದೇವರಾಜ್, ಎ. ಮಲ್ಲಾಪುರ.
ಮಂಗಳವಾರ, ಫೆಬ್ರವರಿ 21, 2023
ಯಶಸ್ವಿಯಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತಾದ ಉಪನ್ಯಾಸ ಕಾರ್ಯಕ್ರಮ.
ವಿಚಾರ ಮಂಟಪ ಬಳಗ ಹಾಗೂ ಕರ್ನಾಟಕ ರಾಜ್ಯ ಸ್ಪಂದನ ಸಿರಿವೇದಿಕೆ
ಹಾಸನ ಇವರ ಜಂಟಿ ಸಹಯೋಗದಲ್ಲಿ ದಿನಾಂಕ ೨೧.೦೨.೨೦೨೩ ರಂದು ಸಂಜೆ ೦೭:೦೦ ಕ್ಕೆ ಗೂಗಲ್
ಮೀಟ್ ಆನ್‌ಲೈನ್ ಜಾಲತಾಣದಲ್ಲಿ ಸಂತಕವಿ ಸರ್ವಜ್ಞ ಹಾಗೂ ಪರಮಹಂಸ ರಾಮಕೃಷ್ಣರ
ಜಯಂತಿಯ ಪ್ರಯುಕ್ತ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂತಕವಿ ಸರ್ವಜ್ಞ ಎಂಬ ವಿಷಯದ ಕುರಿತು ಮಾತನಾಡಿದ ಸಂಶೋಧಕರಾದ ಪ್ರಭುಕುಮಾರ ಪಿ ಇವರು ಸರ್ವಜ್ಞನ ಕುರಿತು ನಮಗೆ ಯಾವ ಅಧಿಕೃತ ಮಾಹಿತಿಯೂ ಲಭ್ಯವಿಲ್ಲದಿದ್ದರೂ ಅವನ ಕುರಿತಾದ ಐತಿಹ್ಯಗಳು, ಕೆಲವು ಸಂಶೋಧನೆಗಳು ಹಾಗೂ ಸ್ವತಃ ಸರ್ವಜ್ಞನೇ ರಚಿಸಿರುವ ತ್ರಿಪದಿಗಳ ಆಧಾರದಲ್ಲಿ ಸರ್ವಜ್ಞನ ಊರು, ತಂದೆ ತಾಯಿ ಇತ್ಯಾದಿ ವಿವರಗಳನ್ನು ಊಹಿಸಲಾಗಿದೆ. ಬಸವರಸ ಹಾಗೂ ಮಾಳಿ ಸರ್ವಜ್ಞನ ತಂದೆ ತಾಯಿಗಳೆಂದು, ಇವನ ನಿಜ ನಾಮ ದೇವದತ್ತ ಅಥವಾ ಪುಷ್ಟದತ್ತನೆಂದು, ಇವನ ಊರು ಈಗಿನ ಹಾವೇರಿ ಜಿಲ್ಲೆಯ ಮಾಸೂರು ಎಂದು ತಿಳಿದುಬಂದಿದೆ. ಒಂದು ಐತಿಹ್ಯದ ಪ್ರಕಾರ ಮಕ್ಕಳಿಲ್ಲದ ಬಸವರಸನು ಮಕ್ಕಳ ಭಾಗ್ಯಕ್ಕಾಗಿ ಕಾಶಿಯಾತ್ರೆಗೆ ಹೋಗಿ ಮರಳಿ ಬರುವ ಹಾದಿಯಲ್ಲಿ ಮಾಳಿಯನ್ನು ಸಂಧಿಸಿದ ಕಾರಣದಿಂದ ಸರ್ವಜ್ಞನು ಹುಟ್ಟಿದನೆಂದು ಹೇಳಲಾಗುವುದು. ಆದರೆ ಸರ್ವಜ್ಞ ʼಊರೆಲ್ಲ ನೆಂಟರು, ಕೇರಿಯಲ್ಲ ಬಳಗ ಎಂಬಂತೆ ಬದುಕಿದವನು.
ಸರ್ವಜ್ಞ ತನ್ನ ಒಂದು ವಚನದಲ್ಲಿ “ಸರ್ವಜ್ಞನೆಂಬವನು
ಗರ್ವದಿಂದಾವನೆ, ಸರ್ವರಿಂದೊಂದು ನುಡಿಕಲಿತು ವಿದ್ಯಯಾ ಪರ್ವತವೇ ಆದ ಸರ್ವಜ್ಞ” ಎಂದು
ಹೇಳಿರುವನು. ಈ ವಚನವು ಒಂದು ಕಡೆ ಒಬ್ಬ ವ್ಯಕ್ತಿ ಸರ್ವಜ್ಞನೆಂದು ಕರೆಸಿಕೊಳ್ಳಬೇಕಾದರೆ ಅಥವಾ
ಅವನು ಸರ್ವವನ್ನೂ ಅರಿಯಬೇಕಾದರೆ ಅವನಿಗಿರುವ ಮಾರ್ಗ ಏನು ಎಂಬುದನ್ನು ಹೇಳುತ್ತಲೇ, ಮತ್ತೊಂದು
ಕಡೆ ಸರ್ವಜ್ಞನು ತನ್ನ ವ್ಯಕ್ತಿತ್ವವನ್ನು ಕುರಿತು ತಾನೇ ಹೇಳಿಕೊಂಡಂತೆ ಇದೆ. ಇಂತಹ
ಸಂಕೀರ್ಣವಲ್ಲದ, ಸರಳವಾದ, ಅಲಂಕಾರವಿಲ್ಲದ, ರೂಪಕಗಳಿಂದ ಕೂಡಿದ ಸಾವಿರಾರು ವಚನಗಳನ್ನು ಸರ್ವಜ್ಞ
ರಚಿಸಿದ್ದಾನೆ.
ತನ್ನ ಸುದೀರ್ಘವಾದ ಜೀವನಾನುಭವ, ಜೀವನ ಧರ್ಮ, ಜೀವ
ಪೋಷಕ ತತ್ತ್ವಗಳನ್ನು ಆನೆಯನ್ನು ಕನ್ನಡಿಯಲ್ಲಿ ತೋರಿಸುವ ಹಾಗೆ ಮೂರೇ ಮೂರು ಸಾಲುಗ ತ್ರಿಪದಿಗಳ ಮೂಲಕ
ಸರ್ವಜ್ಞ ನಮಗೆ ಕಾಣಿಸಿದ್ದಾನೆ. ಸರ್ವಜ್ಞನ ಕೆಲವು ವಚನಗಳಲ್ಲಿ ಮಾತಿನ ಚಮತ್ಕಾರವಿದ್ದರೆ, ಮತ್ತೆ
ಕೆಲವುಗಳಲ್ಲಿ ವಿಡಂಬನಾತ್ಮಕತೆ, ಮತ್ತೆ ಕೆಲವುಗಳಲ್ಲಿ ನೀತಿ ಬೋಧನೆ ಪ್ರಧಾನವಾದ ಅಂಶಗಳು
ಮುಖ್ಯವಾಗಿ ಕಾಣಬರುತ್ತವೆ. ಸರ್ವಜ್ಞನ ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ, ಸಾಲವನು ಕೊಂಬಾಗ
ಹಾಲೊಗರುಂಡಂತೆ, ನಡೆವುದೊಂದೆ ದಾರಿ ಸುಡುವುದೊಂದೆ ಅಗ್ನಿ ಮುಂತಾದ ತ್ರಿಪದಿಗಳಲ್ಲಿ ಮೇಲೆ
ಚರ್ಚಿಸಿದ ಅಂಶಗಳನ್ನು ಸ್ಪಷ್ಟವಾಗಿ ಗುರುತಿಸಬಹುದು ಎಂದರು.
ಪರಮಹಂಸ ರಾಮಕೃಷ್ಣರು ಎಂಬ ವಿಷಯದ ಮೇಲೆ ಮೊದಲನೆಯದಾಗಿ ಗುಡಿಬಂಡೆಯ ಶಿಕ್ಷಕರಾದ
ಡಿ.ಎಲ್. ಪರಿಮಳಾ ಅವರು ಮಾತನಾಡುತ್ತಾ, ಒಬ್ಬ ಸಾಮಾನ್ಯ ಮಾನವನಾಗಿ ಜನಿಸಿದ ರಾಮಕೃಷ್ಣ
ಪರಮಹಂಸರು ದೈವೀ ಪುರುಷರಾಗಿ ದೇಶ ವಿದೇಶಗಳಲ್ಲಿ ಹೆಸರುವಾಸಿಯಾದವರು. ಭಾರತದ ಸಂಸ್ಕೃತಿ
ಆಧ್ಯಾತ್ಮಿಕತೆಯನ್ನು ದೇಶ ವಿದೇಶಗಳಿಗೆ ಪಸರಿಸಿದವರು.
ಗಂಗಾಧರ ಅಥವಾ ಗದಾಧರ ಎಂಬುದು ರಾಮಕೃಷ್ಣ ಪರಮಹಂಸರ ಮೊದಲ ಹೆಸರು.
ಇವರು ಜನಿಸಿದ್ದು ೧೮೩೬ ರಲ್ಲಿ. ಹುಟ್ಟಿನಿಂದಲೇ ಚತುರನೂ ಚಾಲಾಕಿಯೂ ಆಗಿದ್ದ ರಾಮಕೃಷ್ಣರು ಅಷ್ಟೇ
ತುಂಟ ಸ್ವಭಾವದವರೂ ಆಗಿದ್ದರು. ಇವರಿಗೆ ಶಾಲೆಯಲ್ಲಿ ಸಿಗುತ್ತಿದ್ದ ಔಪಚಾರಿಕ ಶಿಕ್ಷಣದಲ್ಲಿ
ಆಸಕ್ತಿ ಇರಲಿಲ್ಲ. ಶಾಲೆಯನ್ನು ತೊರೆದು ನಾಟಕ ಕಲಿಯಲು ಹೋಗುತ್ತಿದ್ದರು. ತಮ್ಮ ೨೦ ನೇ
ವಯಸ್ಸಿನಲ್ಲಿಯೇ ದಕ್ಷಿಣೇಶ್ವರದ ಕಾಳಿಯ ಅನುಗ್ರಹಕ್ಕೆ ಪಾತ್ರರಾಗುವರು. ತಮ್ಮನ್ನು ಸದಾ
ಕಾಡುತ್ತಿದ್ದ, ಈ ಜೀವನದ ಗುರಿ ಏನು?, ದೇವರು ಎಂದರೇನು?, ಈ ಜಗತ್ತಿನ ಸ್ವರೂಪ ಯಾವುದು ಇತ್ಯಾದಿ
ಪ್ರಶ್ನೆಗಳಿಗೆ ತಮ್ಮ ಧ್ಯಾನದಲ್ಲಿಯೇ ಉತ್ತರಗಳನ್ನು ಪಡೆದುಕೊಳ್ಳತ್ತಾ, ಜಾತಿ ಧರ್ಮಗಳನ್ನು
ಮೀರುವ ಸರ್ವರನ್ನು ಸಮಾನವಾಗಿ ಕಾಣುವ, ಸಕಲ ಚರಾಚರಗಳಲ್ಲಿ ದೇವರನ್ನೇ ಕಾಣುವ ಸಂದೇಶವನ್ನು
ಜಗತ್ತಿಗೆ ಕೊಟ್ಟವರು ರಾಮಕೃಷ್ಣ ಪರಮಹಂಸರು.
ʼವಸುದೈವ ಕುಟುಂಬಕಂʼ ಎಂಬ ವಾಕ್ಯವನ್ನು ಯಥಾವತ್ತಾಗಿ
ಪಾಲಿಸುತ್ತಿದ್ದವರು, ಅದರಂತೆ ಬದುಕಲು ತಮ್ಮ ಶಿಷ್ಯ ಕೋಟಿಗೆ ನಿತ್ಯ ಮಾರ್ಗದರ್ಶನ ಮಾಡಿದವರು ರಾಮಕೃಷ್ಣ
ಪರಮಹಂಸರು. ತಮ್ಮ ಜೀವಿತಕಾಲವನ್ನೆಲ್ಲ ಪ್ರವಚನ ಬೋಧನೆಗಳ ಮೂಲಕ ಕಳೆದ ರಾಮಕೃಷ್ಣರು ಗಂಟಲು
ಬೇನೆಗೆ ತುತ್ತಾಗುವರು. ಇಷ್ಟಾದರೂ ತಮ್ಮ ಕಾರ್ಯವನ್ನು ಬಿಡದೇ ಸದಾ ಕ್ರಿಯಾಶೀಲರಾಗಿರುತ್ತಿದ್ದ ಇವರು
೧೮೮೬ ಆಗಸ್ಟ್ ೧೬ ರಂದು ತಮ್ಮ ದೇಹವನ್ನು ಬಿಟ್ಟರು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ
ಸಹ ಅವರ ಜ್ಞಾನ, ಅನುಭವದ ಭೋದನೆಗಳು ನಮಗೆ ನಿತ್ಯ ಮಾರ್ಗದರ್ಶಿಗಳಾಗಿದ್ದು, ಇವರ ಚಿಂತನೆಗಳನ್ನು
ಬೋಧನೆಗಳನ್ನು ನಾವು ಸದಾ ಕಾಲ ಅನುಸರಿಸಿ ಅವರು ತೋರಿಸಿದ ಜ್ಞಾನದ ಬೆಳಕಿನಲ್ಲಿ ನಮ್ಮ
ಜೀವನಗಳನ್ನು ಹಸನುಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಮುಂದೆ ರಾಮಕೃಷ್ಣ ಪರಮಹಂಸರ ಭೋದನೆಗಳನ್ನು ಕುರಿತು ಮಾತನಾಡಿದ
ಶಿಕ್ಷಕಿ ಶಶಿವಸಂತ ಇವರು, ಬಂಗಾಳ ಪ್ರಾಂತ್ಯದ ಹೂಗ್ಲಿ ಜಿಲ್ಲೆಯ ಕಾಮಾರಕಪುರ ಎಂಬ ಒಂದು ಸಣ್ಣ
ಗ್ರಾಮದಲ್ಲಿ ಜನಿಸಿದ ಶ್ರೀ ರಾಮಕೃಷ್ಣ ಪರಮಹಂಸರು ಭಾರತೀಯ ಸಂಸ್ಕೃತಿಯನ್ನು ದೇಶವಿದೇಶಗಳಿಗೆ ಪಸರಿಸುವಂತೆ
ಮಾಡಿದವರು. ಇವರ ತಂದೆ ಖುದಿರಾಮ ಚಟ್ಟೋಪಾಧ್ಯಾಯ ಮತ್ತು ತಾಯಿ ಚಂದ್ರಮಣಿದೇವಿ. ಜನ್ಮತಃ ಧೈರ್ಯಶಾಲಿಗಳಾಗಿದ್ದ
ರಾಮಕೃಷ್ಣರು ಸಜ್ಜನರು, ಸಮಾನ ಚಿತ್ತರೂ ಆಗಿದ್ದರು. ಇವರು ಶಾಲೆಯಲ್ಲಿ ಕಲಿತದ್ದು ಬಹಳ
ಕಡಿಮೆಯಾದರೂ, ತಮ್ಮ ಸುತ್ತಮುತ್ತಲ ಪರಿಸರ ಹಾಗೂ ತಮ್ಮ ಆಂತರಂಗದ ಅನುಭವಗಳ ಮೂಲಕ ಪಡೆದ ಜ್ಞಾನ
ಅಗಾಧವಾದದ್ದು.
ರಾಮಕೃಷ್ಣರದ್ದು ಎಲ್ಲ ಧರ್ಮಗಳನ್ನು ಒಳಗೊಂಡು ಮತ್ತು ಎಲ್ಲ
ಧರ್ಮಗಳನ್ನು ಮೀರಿದ ಧರ್ಮ. ಇಂತಹ ಒಂದು ಧರ್ಮವನ್ನು ರಾಮಕೃಷ್ಣರು ಭೋಧಿಸಿದ ಕಾರಣದಿಂದ ʼಸ್ಥಾಪಕಾಯಚ ಧರ್ಮಸ್ಯʼ ಎಂಬುದಾಗಿ ಶ್ರೀ ವಿವೇಕಾನಂದರು
ರಾಮಕೃಷ್ಣರನ್ನು ಸ್ತೋತ್ರ ಮಾಡಿರುವರು. ರಾಮಕೃಷ್ಣ ಪರಮಹಂಸರು ಅಷ್ಟಾಂಗ ಯೋಗಗಳಲ್ಲಿ ಕೊನೆಯ
ಹಂತವಾದ ನಿರ್ವಿಕಲ್ಪ ಸಮಾಧಿ ಸ್ಥಿತಿಯನ್ನು ಸಾಧಿಸಿದ್ದರು. ಹೀಗಾಗಿಯೇ ಅವರು ಹಲವು ಘಂಟೆಗಳ,
ವಾರಗಳ ಕಾಲದವರೆಗೂ ಧ್ಯಾನಸ್ಥ ಸ್ಥಿತಿಯಲ್ಲಿಯೇ ಇದ್ದು ಬಿಡಬಹುದಾದ ಶಕ್ತಿಯನ್ನು ಪಡೆದಿದ್ದರು.
ಪರಮಹಂಸ ಎಂಬ ಸ್ಥಾನವೂ ಅವರ ಆಧ್ಯಾತ್ಮಿಕ ಔನತ್ಯವನ್ನು ಪ್ರತಿನಿಧಿಸುವಂತದ್ದೇ ಆಗಿದೆ. ಈ
ಆಧ್ಯಾತ್ಮಿಕ ಹಂತಗಳನ್ನು ಯೋಗಿಯಾದವನು ಅನುಭವಿಸಬಹುದೇ ವಿನಃ ಅವನ್ನು ಮತ್ತೊಬ್ಬರಿಗೆ
ವಿವರಿಸಲಾರನು, ಏಕೆಂದರೆ ಇದು ಮಾತಿಗೆ ಊಹೆಗೆ ಮೀರಿದ/ನಿಲುಕದ ಅನುಭವವಾಗಿರುತ್ತದೆ.
ರಾಮಕೃಷ್ಣ ಪರಮಹಂಸರ ಹೆಂಡತಿ ಶ್ರೀಮತಿ ಶಾರದಾ ದೇವಿ ಹಾಗೂ ಪ್ರಿಯಶಿಷ್ಯನಾದ
ವಿವೇಕಾನಂದರು ರಾಮಕೃಷ್ಣರ ಕೀರ್ತಿಯನ್ನು ಮತ್ತಷ್ಟು ಬೆಳಗಿಸಿದವರು. ಇಬ್ಬರೂ ರಾಮಕೃಷ್ಣರ
ಮಾರ್ಗದರ್ಶನದಲ್ಲಿ ಅವರು ಹೇಳಿದಂತೆ ನಡೆಯುತ್ತಾ ರಾಮಕೃಷ್ಣರ ಭೋಧನೆಗಳನ್ನು ಮುಂದಿನವರಿಗೆ
ದಾಟಿಸುವ ಕೆಲಸವನ್ನು ಮಾಡಿದರು. ಎಲ್ಲ ಅಸ್ತಿತ್ವದ ಏಕತೆ, ಮಾನವರಲ್ಲಿಯೂ ಇರುವ ದೈವತ್ವ, ದೇವರ
ಏಕತೆ, ಎಲ್ಲ ಧರ್ಮಗಳ ಸಾಮರಸ್ಯ ಇವು ರಾಮಕೃಷ್ಣ ಪರಮಹಂಸರು ಮುಖ್ಯವಾಗಿ ನಮಗೆ ನೀಡಿರುವ ನಾಲ್ಕು
ತತ್ತ್ವಗಳು. ಇಂತಹಾ ಆಧ್ಯಾತ್ಮಜೀವಿಯ ಭೋಧನೆಗಳನ್ನು ಕಲಿತು ಅಳವಡಿಸಿಕೊಳ್ಳುವ ಮೂಲಕ ನಾವೆಲ್ಲರೂ
ನಮ್ಮ ನಮ್ಮ ಜೀವನಗಳನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ
ಕಲಾವತಿ ಮಧುಸೂಧನ, ರಾಜ್ಯಾಧ್ಯಕ್ಷರು, ಕರ್ನಾಟಕ
ರಾಜ್ಯ ಸ್ಪಂದನ ಸಿರಿ ವೇದಿಕೆ ಇವರು ಮಾತನಾಡುತ್ತಾ, ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮದ
ಎರಡು ಮೇರು ವ್ಯಕ್ತಿತ್ವಗಳಾದ ಸರ್ವಜ್ಞ ಹಾಗೂ ರಾಮಕೃಷ್ಣ ಪರಮಹಂಸರ ಕುರಿತ ಈ ಉಪನ್ಯಾಸ
ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ಮೂಡಿಬಂದಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚು
ನಡೆಯುತ್ತಿರಲಿ, ಇಂತಹ ಸಾಧಕರ ಜೀವನ ಸಾಧನೆ ಹಾಗೂ ಭೋಧನೆಗಳು ಕೇಳುವ ಅನುಸರಿಸುವ ಮೂಲಕ ನಮ್ಮ
ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳುವಂತಾಗಲಿ.
ಸರ್ವಜ್ಞನಾಗಲೀ, ರಾಮಕೃಷ್ಣ ಪರಮಹಂಸರಾಗಲೀ, ತಮ್ಮ ಅನುಭವಗಳ ಮೂಲಕವೇ ಲೋಕಕ್ಕೆ
ಜ್ಞಾನ ಭೋಧನೆಯನ್ನು ಮಾಡಿದವರು. ಸಂಸ್ಕೃತಿ, ಸನ್ನಡತೆ, ದಾನ, ನೈತಿಕತೆಗಳನ್ನು ಭೋಧಿಸಿದವರು.
ಇಡೀ ವಿಶ್ವಕ್ಕೆ ಇವರು ಮಾದರಿ ಶಕ್ತಿಗಳು. ಸರ್ವವನ್ನು ಅರಿತ ಸರ್ವಜ್ಞ, ತಾನು ಸರ್ವವನ್ನೂ
ಅರಿತಿದ್ದರೂ ತನ್ನಲ್ಲಿ ಎಳಷ್ಟೂ ಅಹಂಕಾರವಿರಲಿಲ್ಲ. ಸರ್ವರಿಂದ ಒಂದೊಂದ ನುಡಿ ಕಲಿತು ವಿದ್ಯೆಯ
ಪರ್ವತವಾದೆ ಎಂದು ಸರ್ವಜ್ಞ ಹೇಳಿಕೊಳ್ಳುವನು. ರಾಮಕೃಷ್ಣರು ಪರಮಹಂಸತ್ವವನ್ನು ಪಡೆದಿದ್ದರೂ ಎಂದೂ
ಅಹಂಕರಿಸದೇ ತಮ್ಮ ಕಾಯಿಲೆಯ ದಿನಗಳಲ್ಲಿಯೂ ಶಿಷ್ಯರಿಗೆ ಜ್ಞಾನ ಭೋಧನೆ ಮಾಡುವುದರಲ್ಲಿ ಕಳೆದರು. ಇಂತಹವರ
ಬರಹಗಳನ್ನು ಮತ್ತೆ ಮತ್ತೆ ಓದುವ ಅವರ ಚಿಂತನೆಗಳೊಂದಿಗೆ ಅನುಸಂಧಾನಗೊಳ್ಳುವ ಹಾಗೂ ಅವನ್ನು
ಅನುಸರಿಸುವ ಮೂಲಕ ನಮ್ಮ ಬದುಕುಗಳನ್ನು ಹಸನಾಗಿಸಿಕೊಳ್ಳಬೇಕಿದೆ ಎಂದರು.
ಮತ್ತೊಬ್ಬ ಮುಖ್ಯ ಅತಿಥಿಗಳಾಗಿದ್ದ ಶ್ರೀ ಪಯಾಜ್
ಅಹಮದ್ ಖಾನ್, ರಾಜ್ಯಾಧ್ಯಕ್ಷರು, ಕರುನಾಡು
ಸಾಹಿತ್ಯ ಪರಿಷತ್ತು ಇವರು ಮಾತನಾಡುತ್ತಾ, ಈ ಕಾರ್ಯಕ್ರಮವು ಬಹಳ ಅಭೂತಪೂರ್ವವಾಗಿ ಮೂಡಿ
ಬಂದಿದೆ. ಜಾನಪದ ಕವಿ, ತ್ರಿಪದಿ ಬ್ರಹ್ಮ ಎನಿಸಿರುವ ಸರ್ವಜ್ಞ ಹಾಗೂ ಯುಗಪುರುಷ ನೆನಿಸಿರುವ ರಾಮಕೃಷ್ಣ
ಪರಮಹಂಸರನ್ನು ಅವರ ಜನ್ಮದಿನಾಚರಣೆಯ ಪ್ರಯುಕ್ತ ಮತ್ತೆ ಮತ್ತೆ ನೆನೆಯುವುದು ಅತ್ಯವಶ್ಯಕವಾದದ್ದು,
ಕೇವಲ ಅವರ ಜನ್ಮ ದಿನಾಚರಣೆಯಂದು ಮಾತ್ರವಲ್ಲದೇ ಸದಾ ಕಾಲ ಇವರ ಚಿಂತನೆಗಳು ಚರ್ಚಿಸುವ ಆಚರಿಸುವ
ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಮುಂದುವರೆಯೋಣ ಎಂದು ಹೇಳಿದರು.
ಸಂಶೋಧನಾರ್ಥಿ ಧನುಷ್ ಎಚ್ ಶೇಖರ್ ಇವರು ಕಾರ್ಯಕ್ರಮವನ್ನು ಅಚ್ಚುಕ್ಕಟ್ಟಾಗಿ
ನಿರ್ವಹಿಸಿದರು, ವಿಚಾರ ಮಂಟಪ ಬಳಗ ಸಂಚಾಲಕರಾದ ಗೌತಮ್ ಗೌಡ ಇವರು ಕಾರ್ಯಕ್ರಮವನ್ನು
ಆಯೋಜಿಸಿದ್ದರು, ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆಯ ಹಾಸನ ಜಿಲ್ಲಾಧ್ಯಕ್ಷರಾದ ಆಶಾ ಕಿರಣ
ಎಂ, ಅಮರ್ ಬಿ, ಆಶಾನೂಜಿ, ರಂಗಸ್ವಾಮಿ ಎಚ್, ಲಕ್ಷ್ಮಿ ಕೆ. ಬಿ, ಸುರೇಶ್ ನೆಗಳಗುಳಿ ಮುಂತಾದವರು
ಉಪಸ್ಥಿತರಿದ್ದರು.
- ವರದಿ : ವರುಣ್‌ರಾಜ್ ಜಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್ ಮಾತ್ರ)
ಇಬ್ಬನಿ ಓಕಳಿ (ಕವಿತೆ) - ಶ್ರೀಮತಿ ಎಸ್. ಎಂ. ಬಳ್ಳಾರಿ.
ಮೊಗವಾಡ ಲೋಕ (ಕವಿತೆ) - ಕಾಜಲ ಆನಂದ ಹೆಗಡೆ.
ನಿಮಗಿದು ಬೇಕಿತ್ತಾ ಶಿವನೆ (ಕವಿತೆ) - ಬಸವರಾಜ ಮೈದೂರ ಚಿಕ್ಕಮರಳಿಹಳ್ಳಿ.
ಭಾನುವಾರ, ಫೆಬ್ರವರಿ 19, 2023
ಮಾತನಾಡುವವರಿಗೇನು ಗೊತ್ತು ಮೌನದ ಕಿಮ್ಮತ್ತ (ಕವಿತೆ) - ಬಸವರಾಜ್ ಎಚ್. ಹೊಗರನಾಳ.
ಬಂದಿದೆ ಶಿವರಾತ್ರಿ (ಕವಿತೆ) - ಶಾರದ ದೇವರಾಜ್,ಎ ಮಲ್ಲಾಪುರ.
ಕಲ್ಲಿನ ಕ್ವಾರೆ (ಸಣ್ಣ ಕತೆ) - ಸುನಿಲ್ ಐ. ಎಸ್.
ಶನಿವಾರ, ಫೆಬ್ರವರಿ 18, 2023
ಮಹಾತ್ಮರು (ಕವಿತೆ) - ಸಬ್ಬನಹಳ್ಳಿ ಶಶಿಧರ.
ರಮಾಬಾಯಿ ಅಂಬೇಡ್ಕರ್ (ಕವನ) - ತರುಣ ಈಶಪ್ಪ ಪೂಜಾರ.
ಶಿವಾಮೃತ (ಭಕ್ತಿ ಸ್ತುತಿ) - ಮಧುಮಾಲತಿ ರುದ್ರೇಶ್.
ದಿಗ್ವಿಜಯ (ಕವಿತ) - ಶ್ರೀ ಇಂಗಳಗಿ ದಾವಲಮಲೀಕ.
ಗುರುವಾರ, ಫೆಬ್ರವರಿ 16, 2023
ಗಪದ್ಯ - ಖಾದ್ರಿ ವೆಂಕಟ ಶ್ರೀನಿವಾಸನ್, ಮೇಲುಕೋಟೆ.
ಗೆಲವು ಶಾಶ್ವತವಲ್ಲ! ಸೋಲು ಕೊನೆಯು ಅಲ್ಲ (ಲೇಖನ) - ಮಂಜುನಾಥ್ ಮೇಟಿ.
ಸಾವಿನ ಸತ್ಯ (ಕವಿತೆ) - ಮಾಲತಿ ಮೇಲ್ಕೋಟೆ.
ಕೃತಿ ಪರಿಚಯ: ನನ್ನೊಳಗಿನ ದನಿ (ಕವನ ಸಂಕಲನ) – ವರುಣ್‌ರಾಜ್ ಜಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಶ್ರೀಮತಿ ಅನಿತಾ ಕೆ.ಆರ್. ಇವರು ಪ್ರವೃತ್ತಿಯಲ್ಲಿ ಸಾಹಿತಿ. ಇವರು ಬರೆದಿರುವ ಕೃತಿ ನನ್ನೊಳಗಿನ ದನಿ. ಇದೊಂದು 80 ಪುಟದ ಕೃತಿ. ಸು. 50 ಕವನಗಳು ಈ ಸಂಕಲನದಲ್ಲಿದೆ. ‘ನನ್ನೊಳಗಿನ ದನಿ’ ಎಂಬ ಶೀರ್ಷಿಕೆಯೇ, ಇಲ್ಲಿನ ಕವನಗಳು ಕವಿಯ ಹೃದಯಾಂತರಾಳದ ಅಭಿವ್ಯಕ್ತಿಗಳು ಎಂಬುದನ್ನು ಧ್ವನಿಸುತ್ತದೆ. ನನ್ನೊಳಗಿನ ದನಿ ಎಂಬುದು ಅರ್ಥಪೂರ್ಣವಾದ ಮತ್ತು ಅಷ್ಟೇ ಸೂಕ್ತವಾದ ಶೀರ್ಷಿಕೆ.
ಕೃತಿಯ ಮುಖಪುಟದಲ್ಲಿ, ಒಂದು ಮಾಸಿದ ಗೋಡೆ, ಅದರ ಮೇಲೆ
ಕಲೆಗಳು, ಒಂದು ಕಿಟಕಿ, ಮತ್ತೊಂದು ಅರ್ಧ ಗೋಡೆ, ಒಂದು ಮಾನವ ರೂಪ (ಬಹುಶಃ ಒಬ್ಬ ಹೆಣ್ಣು ಅದರಲ್ಲಿಯೂ
ಒಬ್ಬ ವೃದ್ಧೆ) ಇಷ್ಟು ಇವೆ. ಅಷ್ಟೊಂದು ವರ್ಣ ರಂಜಿತವಾಗಿಲ್ಲದಿದ್ದರೂ, ಈ ಮುಖಪುಟ ಅರ್ಥಪೂರ್ಣವಾದ
ರೂಪಕಗಳಿಂದ ಕೂಡಿದೆ. ಇಲ್ಲಿ ಯಾವುದೇ ಬಾಗಿಲು ಇಲ್ಲ, ಕೇವಲ ಒಂದು ಸಣ್ಣ ಕಿಟಕಿ ಇದೆ. ಇದರ ಮೂಲಕವೇ
ಅವಳು ಲೋಕವನ್ನ ನೋಡಬೇಕು. ಲೋಕ ಅವಳನ್ನು ನೋಡಲೂ ಸಹ ಈ ಕಿಟಕಿಯೇ ಮಾರ್ಗ. ಈ ಕೃತಿಯೂ ಸಹ ಈ ಸಣ್ಣ ಕಿಟಕಿಯ
ಹಾಗೆ, ಓದುಗರು ಕವಿಯ ಮನಸನ್ನು ನೋಡಲು ಮತ್ತು ಕವಿ ಹೃದಯವು ಸಮಾಜವನ್ನು ನೋಡಲು ಎರಡಕ್ಕೂ ಈ ಸಣ್ಣ
ಕಿಟಕಿಯೇ ಮಾಧ್ಯಮ. ಕಿಟಕಿ ಅಂದರೆ ಕೃತಿ ಸಣ್ಣದಿರಬಹುದು, ಆದರೆ ಇದರಲ್ಲಿ ಇಣುಕಿದಾಗ ಕೃಷ್ಣನ ಬಾಯಲ್ಲಿ
ಯಶೋಧೆಗೆ ಬ್ರಹ್ಮಾಂಡವೇ ಕಂಡಹಾಗೇ ಕವಿ ಮನಸ್ಸಿನಾಳದ ಹಲವು ಲೋಕಗಳು ಓದುಗರ ಮುಂದೆ ತೆರೆದುಕೊಳ್ಳುತ್ತವೆ.
ಇದೇ ಈ ಕೃತಿಯ ವೈಶಿಷ್ಟ್ಯ.
ಈ ಕೃತಿಗೆ ಬೆನ್ನುಡಿಯನ್ನು ಬರೆದಿರುವ ಶ್ರೀ ರಾಜು ಸೂಲೇನಹಳ್ಳಿಯವರು
ಕವಯತ್ರಿಯ ಕುರಿತು “ವೃತ್ತಿಯ ಜೊತೆಗೆ ಬರವಣಿಗೆಯ ಪ್ರವೃತ್ತಿಯನ್ನು ರೂಢಿಸಿಕೊಂಡು ಸ್ವ-ಅನುಭವ ಹಾಗೂ
ಜ್ಞಾನವನ್ನು ಒಗ್ಗೂಡಿಸಿಕೊಂಡು ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ…” ಎಂದು ಹೇಳುವರು.
ರಾಜು ಕವಿಯವರು ಈ ಮಾತನ್ನು ಬಹಳ ಸೂಕ್ಷ್ಮವಾಗಿಯೇ ಆಲೋಚಿಸಿ ಹೇಳಿದಂತಿದೆ. ಏಕೆಂದರೆ ಜ್ಞಾನ ಮತ್ತು
ಅನುಭವಗಳ ಸೂಕ್ತವಾದ ಮತ್ತು ಅಷ್ಟೇ ಸರಿಪ್ರಮಾಣದ ಮಿಶ್ರಣ ಈ ಕೃತಿಯಲ್ಲಿದೆ. ರಾಜುರವರ ಮಾತುಗಳು ಅನುಭವವಿಲ್ಲದ
ಜ್ಞಾನದ ನಿಸ್ಸಾರತೆಯನ್ನು, ಸಂವೇದನಾ ಹೀನತೆಯನ್ನೂ ಅಣಕಿಸುವಂತೆ ಇವೆ. ಇಲ್ಲಿನ ಕವನಗಳಿಗೆ ಸೂಕ್ತವಾದ
ರೇಖಾಚಿತ್ರಗಳನ್ನು ಅಳವಡಿಸಿರುವುದು ಕೃತಿಯ ಮತ್ತೊಂದು ವಿಶಿಷ್ಟತೆ.
ಈ ಕೃತಿಗೆ ಮುನ್ನುಡಿಯನ್ನು ಬರೆದಿರುವ ಪ್ರಾಧ್ಯಾಪಕರಾದ
ಅಶೋಕ ನರೋಡೆಯವರು ‘ನನ್ನೊಳಗಿನ ದನಿ’ಗೊಂದು ಸುಂದರವಾದ ಚೌಕಟ್ಟನ್ನು ಹಾಕಿಕೊಟ್ಟಿರುವರು. ಇಂತಹ ಕ್ರಿಯೆಟಿವ್
ಬರಹಗಳನ್ನು ಓದುವಾದ ಮುನ್ನುಡಿ ಬೆನ್ನುಡಿಗಳನ್ನು ಓದದೆಯೇ ಕೃತಿಗೆ ಪ್ರವೇಶ ಮಾಡಬೇಕೆಂಬುದು ನನ್ನ
ಸಾಮಾನ್ಯ ನಂಬಿಕೆ. ಆದರೆ, ಈ ಮುನ್ನುಡಿ ಓದುಗರಿಗೆ ಒಂದು ಉತ್ತಮ ಪ್ರವೇಶಿಕೆಯನ್ನು ಒದಗಿಸುತ್ತದೆ
ಎನಿಸಿತು. ಇಲ್ಲಿ ಅಶೋಕ ನರೋಡೆಯವರು ಮಹಿಳೆಯರು ಸಾಹಿತ್ಯ ರಚನೆಗೆ ಹೆಚ್ಚು ಹೆಚ್ಚು ಮುಂದಾಗಬೇಕೆಂದು
ಹೇಳುತ್ತಾ, ತನ್ನನ್ನು ತಾನು ಶೋಧಿಸಿಕೊಳ್ಳಲು ಕಾವ್ಯ ಒಂದು ಅತ್ಯುತ್ತಮ ಮಾಧ್ಯಮವಾಗುವ ಬಗೆಯನ್ನೂ
ವಿವರಿಸುತ್ತಾರೆ. ಈ ಕಾವ್ಯ ಮಾಧ್ಯಮವನ್ನು ಅಷ್ಟೇ ಯಶಸ್ವಿಯಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಕವಯತ್ರಿ
ಅನಿತಾರವರು ಮಾಡಿರುವರು.
ಕವಯತ್ರಿ ತಮ್ಮ ಕವನವನ್ನು ಪ್ರಾರಂಭಿಸುವುದೇ ಆನ್ನದಾತನಿಂದ.
ಈ ಕೃತಿಯಲ್ಲಿ ದೇಶಕ್ಕೆ ಅನ್ನವನ್ನು ನೀಡುವ ರೈತರಿಗೆ ಮೊದಲ ಸ್ಮರಣೆ ದಕ್ಕಿರುವುದು ವಿಶೇಷವಾಗಿದ್ದು,
ಇದು ಕವಿ ಮನಸ್ಸಿನ ವೈಚಾರಿಕ ಪ್ರಜ್ಞೆಯನ್ನು ಹಾಗೂ ಸಾಮಾಜಿಕ ಸಂವೇದನೆಯನ್ನು ನಮಗೆ ತಿಳಿಸುತ್ತದೆ.
ಈ ಕವಿತೆಯಲ್ಲಿ ರೈತರ ತ್ಯಾಗ, ಕಾಯಕಗಳನ್ನು ವಿವರಿಸುತ್ತ,
“ಸ್ಮರಿಸು ಬಾ ಮನುಜ
ಗಾಂಧಿ ತಾತನಂತೆ ದುಡಿವ
ರೈತ ಯೋಗಿಯ
ನಮ್ಮ ರೈತ ಯೋಗಿಯ”
ಎಂದು ಹೇಳುತ್ತಾ, ರೈತನ ಅನ್ನದ ಕೃಷಿ, ಗಾಂಧಿಯ ಸ್ವತಂತ್ರ್ಯದ
ಕೃಷಿ ಎರಡನ್ನೂ ಸಮೀಕರಿಸುತ್ತಾ, ರೈತರ ಆತ್ಮಹತ್ಯೆಗಳನ್ನು, ಗಾಂಧಿಯ ಹತ್ಯೆಯನ್ನು ನೆನಪಿಸಿ ಎರಡಕ್ಕೂ
ವಿಷಾದ ವ್ಯಕ್ತಪಡಿಸುತ್ತದೆ. ಕೃತಿಯ ಮತ್ತೊಂದು ಕವಿತೆ ಮತದಾನದ ಕುರಿತದ್ದು, ‘ಮತದಾನ ಮಹಾದಾನ’ ಈ
ಕವಿತೆಯ ಶೀರ್ಷಿಕೆ. ಮತದಾನಕ್ಕೆ ಪ್ರೇರಣೆ ನೀಡುವ ಆಶಯವನ್ನೊಳಗೊಂಡು ಪ್ರಾರಂಭವಾಗುವ ಈ ಕವಿತೆ ಮತವನ್ನು
ಮಾರಿಕೊಳ್ಳಬೇಡಿ ಎಂದು ಹೇಳುತ್ತ, ಮತದಾನವನ್ನು ಪ್ರಜಾಪ್ರಭುತ್ವದ ಹಬ್ಬ ಎಂದು ಗುರುತಿಸುತ್ತದೆ.
ʼಕವಯತ್ರಿʼ ಎಂಬ ಮತ್ತೊಂದು ವಿಶೇಷವಾದ ಕವಿತೆಯಲ್ಲಿ ಬರುವ
“ಹೃದಯದೊಳಗಿನ ಭಾವನೆಗೆ
ಮನದ ಏಖಾಂತಕ್ಕೆ ಬೇಸರಕ್ಕೆ
ಬೇಕಿತ್ತೊಂದಾಸರೆ”
“ಕಾಗದ, ಲೇಖನ ದೊರಕ ತನಕ
ಚಿಮ್ಮಿತ್ತು ಭಾವನೆ
ಮೂಡಿಬಂದವು ಅಕ್ಷರಗಳು
ಹೊಮ್ಮಿದವು ಪದಗಳು
ಅನುಭವಗಳು, ಅನಿಸಿಕೆಗಳು....”
ಎಂಬ ಸಾಲುಗಳು ಒಂದು ರೀತಿಯ ಸ್ತ್ರೀವಾದಿ ಕಾವ್ಯಮೀಮಾಂಸೆಯ ದೃಷ್ಠಿಕೋನವನ್ನು
ಒಳಗೊಂಡಂತೆ ಅನಿಸುವುದು. ಕವಿ ತನ್ನ ಬಿಡುಗಡೆಗಾಗಿ ಕಾವ್ಯ ರಚನೆಯನ್ನು ಮಾಡುತ್ತಾನೆ. ತನ್ನ ಅಭಿವ್ಯಕ್ತಿಯ
ಒಂದು ಮಾಧ್ಯಮವಾಗಿ ಬರವಣಿಗೆಯನ್ನು ಆಯ್ದುಕೊಳ್ಳುವ ಕವಿ ಆ ಮೂಲಕವೇ ತನ್ನೆಲ್ಲ ಅನಿಸಿಕೆ ಅನುಭವಗಳನ್ನು
ನೋವು-ನಲಿವುಗಳನ್ನು ಹೊರಹಾಕುತ್ತಾ ಹಗುರಾಗುವನು. ಇಂತಹ ಹಗುರಾಗುವಿಕೆ ಈ ಕವಿತೆಯಲ್ಲೂ ವ್ಯಕ್ತವಾಗಿದೆ.
ಇದೇ ಕವಿತೆಯ ಮುಂದಿನ ಸಾಲುಗಳಲ್ಲಿ ನನ್ನ ಪದಗಳು ಖಾಲಿಯಾದರೆ ಹೇಗೆ ? ಎಂಬ ಭಯವನ್ನೂ ಉಳಿಸಿಕೊಳ್ಳುತ್ತಾ,
ಕವಿಯೆಂಬ ಅಹಂಕಾರದ ಭಾವನೆ ತನ್ನಲಿ ಸುಳಿಯಬಾರದೆಂಬ ಆಶಯವನ್ನು ವ್ಯಕ್ತಪಡಿಸುತ್ತಾರೆ.
‘ಆರಾಧನೆ’ ಎಂಬ ಮತ್ತೊಂದು ಕವಿತೆಯಲ್ಲಿ,
“ಅಭಿಮಾನಿಸುತ್ತೇನೆ ಗೆಳೆಯಾ
ಗೆದ್ದು ಬೀಗುವಾಗ ಬೆನ್ತಟ್ಟಿದ್ದಕ್ಕಲ್ಲ
ಸೋತು ಕುಸಿದಾಗ ಕೈ ಹಿಡಿದದ್ದಕ್ಕೆ
ಸದ್ಗುಣಗಳ ಮೆಚ್ಚಿಕೊಂಡದ್ದಕ್ಕಲ್ಲ
ದುರ್ಗುಣಗಳ ಸಹಿಸಿಕೊಂಡದಕ್ಕೆ,
ಸಿರಿಯಿದ್ದಾಗ ಸನಿಹವಿದ್ದುದ್ದಕಲ್ಲ
ಸೂತಕವಿದ್ದಾಗ ಜೊತೆಯಾದುದಕ್ಕೆ.”
ಇಂತಹಾ ಒಬ್ಬ ಗೆಳೆಯನನ್ನು
ಆರಾಧಿಸುವೆ ಎನ್ನುತ್ತಾರೆ. ಇಂತಹ ಒಬ್ಬ ಸಂಗಾತಿಯ ನಿರೀಕ್ಷೆ ಎಲ್ಲ ಗಂಡು ಹೆಣ್ಣುಗಳಲ್ಲೂ ಸಾಮಾನ್ಯ.
ಈ ನಿರೀಕ್ಷೆ ಸಫಲವಾದ ಸಾರ್ಥಕ ಭಾವ ಈ ಕವಿತೆಯಲ್ಲಿ ಕಂಡು ಬರುತ್ತದೆ.
“ಮನಸ್ಸಿದೆಯಲ್ಲ ಎಂಬ ಮತ್ತೊಂದು ಕವಿತೆಯನ್ನು ಗಮನಿಸುವುದಾದರೆ,
“ಮಿನುಗುವ ತಾರೆಗಳ
ಮುಟ್ಟಲಾಗದಿದ್ದರೇನಂತೆ?
ಅವುಗಳ ಬೆಳಕಲಿ ಸಾಗುವ
ಕನಸಿದೆಯಲ್ಲ?........................
................ಮನಸ್ಸು ಎಂದಿಗೂ
ಬರಿದಾಗದು
ಜೀವ ಭಾವಗಳ ಮುನ್ನಡೆಸುವ
ಬಾಳಿನ ದೋಣಿಯಿದು”
ಎಂಬ ಸಾಲುಗಳು ಮಾನವನ ಮನಸ್ಸಿನಲ್ಲಿರುವ ಅಗಾಧ ಶಕ್ತಿಯನ್ನು ಮನವರಿಕೆ
ಮಾಡಿಕೊಡುತ್ತಲೇ, ಸೋತ ಮನಸ್ಸುಗಳಿಗೆ ದೈರ್ಯ ತುಂಬುವ ಕೆಲಸವನ್ನು ಮಾಡುತ್ತವೆ. ಇರುವೆಗಳು ಎಂಬ ಮತ್ತೊಂದು
ಕವಿತೆಯಲ್ಲಿ, “ನಾವು ಮಾಡಿದ್ದು ಸಾಧನೆಯಲ್ಲ, ಓದಿ, ಬರೆದು ಅಹಂಕಾರ ನಮ್ಮದೆಲ್ಲ” ಎಂಬ ಆತ್ಮ ನಿವೇದನೆ
ಇದೆ. ಇರುವೆಗಳ ಒಗ್ಗಟ್ಟನ್ನು, ಛಲಬಿಡದ ಶ್ರಮವನ್ನು ಪ್ರಶಂಶಿಸುತ್ತಾ ಮಾನವನಿಗೆ ಇರುವೆಯೂ ಮಾದರಿಯಾಗಬಹುದು
ಎಂಬುದನ್ನೂ ಕವಿ ಗುರುತಿಸುತ್ತಾರೆ. ಮತ್ತೊಂದು ಕವಿತೆ ‘ಬದುಕಿನ ಸಾರ್ಥಕತೆ’ ಈ ಕವಿತೆಯಲ್ಲಿ,
“ಕಾನನದ ಬಿದುರುಗಳೆಲ್ಲವೂ
ಮಧುರ ಮುರಳಿಯಾಗಬಲ್ಲವೇ?
ಹೂ ಬನದ ಸುಮಗಳೆಲ್ಲವೂ
ದೇವರ ಮುಡಿಗೇರಬಲ್ಲವೇ?
ಬದುಕು ಬದಲಾಗಲು ಕಾಲಬೇಕು
ಹಸಿವು ಕಸುವಿನಲ್ಲಿ ಮೀಯಬೇಕು
ಒಲುಮೆ ಚೆಲುಮೆಯ ಜಾಲಬೇಕು
ಪರೀಕ್ಷೆ ನಿರೀಕ್ಷೆಯಲ್ಲಿ ಬೇಯಬೇಕು”
ಎನ್ನುತ್ತಾ ಬದುಕಿನ
ಸಾರ್ಥಕತೆಯ ತತ್ತ್ವವನ್ನು ಬಹಳ ಸರಳವಾಗಿಯೇ ವಿವರಿಸಿರುವರು.
ʼಸಾಕೆನಿಸಿದೆ ಬದುಕುʼ ಎಂಬ ಕವಿತೆಯಲ್ಲಿ ಯಾವುದೋ ಸಂದರ್ಭದಲ್ಲಿ ತಾನು ಅನುಭವಿಸಿದ ನೋವು
ಅಥವಾ ನಿರಾಶೆಯನ್ನು ವ್ಯಕ್ತ ಪಡಿಸುತ್ತಾ ಬದುಕು ಸಾಕೆನಿಸಿದೆ ಎಂದು ಕವಯತ್ರಿ ಬರೆಯುತ್ತಾರೆ. ಇಂತಹ
ನಿರಾಶಾವಾದದ ಬೆನ್ನಿಗೇ, ‘ನಿತ್ಯ ಮಾರ್ಗದರ್ಶನ’ ಎಂಬ ಕವಿತೆಯಿದೆ. ಈ ಕವಿತೆ ತನ್ನನ್ನೂ ಒಳಗೊಂಡಂತೆ
ನಾವು ಎಂದಿಗೂ ನಿರಾಶಾವಾದಿಗಳಾಗಬಾರದು ಎನ್ನುವ ಸಂದೇಶವನ್ನು ಕೊಡುತ್ತದೆ. ಎಲ್ಲಾ ಆಶೆಯ ಹಾದಿಗಳೂ
ಮುಚ್ಚಿಕೊಂಡರೂ ನಮಗೆ ನಾವೇ ಮಾರ್ಗದರ್ಶಕರಾಗಿ ಬದುಕನ್ನು ಮುನ್ನಡೆಸಬೇಕೆಂಬ ಆಶಯ ಈ ಕವಿತೆಗಳಲ್ಲಿದೆ.
‘ವಿಮರ್ಶೆ’ ಈ ಕವಿತೆಯಲ್ಲಿ ಮಹಿಳೆಯ ಕಣ್ಣೀರಿನ ಪ್ರಶ್ನೆ ಇದೆ.
“ಉತ್ತರ ಇಲ್ಲದ
ವಿಮರ್ಶೆಯ ಸಂತೆಯಲ್ಲಿ
ಜೀವನ ಜಾತ್ರೆಯು ಸಾಗಿತು
ಬದುಕಿನ ಪರದೆಯು ಮುಚ್ಚಿತ್ತು
ವಿಮರ್ಶೆ ಕೂಟವು ಕೂಡಿತ್ತು.
ಇಲ್ಲಿ ವಿಮರ್ಶೆ ಅಂದರೆ ಸ್ತ್ರೀ ಎದುರಿಸುವ ನಿಂದನೆ ಆಪಾದನೆಗಳು
ಅನ್ನುವ ಅರ್ಥದಲ್ಲಿ ಇವರು ವಿಮರ್ಶೆಯನ್ನ ಬಳಸಿದ್ದಾರೆ ಮತ್ತೊಂದು ಕಡೆ ವರದಕ್ಷಿಣೆಯ ಕುರಿತು ಮಾತನಾಡುತ್ತಾ,
“ವರನೆಂಬ ಭೂತ
ಮದುವೆ ಮಂಟಪದಲ್ಲಿ ಕೂತ
ವರದಕ್ಷಿಣೆ ಎಂಬುದಕ್ಕೆ ಸೋತ”
“ಗಂಡಾದರೇನಂತೆ, ಅವನು ಹುಟ್ಟಿರುವುದು ಹೆಣ್ಣಿನ ಗರ್ಭದಲ್ಲೇ!” ಎನ್ನುವ
ಸಾಲುಗಳಲ್ಲಿ ವ್ಯಕ್ತವಾಗಿರುವ ಸಹಜ ಪ್ರಾಸ, ಮತ್ತು ವರದಕ್ಷಿಣೆ ಪಡೆಯುವ ವರನನ್ನು ಕುರಿತ ವ್ಯಂಗ್ಯ
ಅರ್ಥಪೂರ್ಣವಾಗಿ ಮೂಡಿ ಬಂದಿವೆ.
ʼಮರಳಿನ ಗೂಡುʼ ಎಂಬ ಕವಿತೆಯು, ನಮ್ಮೆಲ್ಲರ ಬಾಲ್ಯವನ್ನು ನೆನಪಿಸುತ್ತಲೇ, ಆ ಮರಳಿನ
ಗೂಡೇ ಅನಂತವಾಗುವ ಪರಿಯನ್ನು ಚಿತ್ರಿಸುತ್ತಾ ಮಾನವನ ಭವ ಬಂಧನಗಳ ಮತ್ತವುಗಳ ಕ್ಷಣಿಕತೆಯನ್ನು ಓದುಗರಿಗೆ
ಮನದಟ್ಟು ಮಾಡಿಸುತ್ತದೆ.
ʼಚುನಾವಣೆʼ ಎಂಬ ಕವಿತೆಯಲ್ಲಿ “ಯಾರು ಅಧಿಕಾರ ಹಿಡಿದರೇನು, ಎಲ್ಲರೆಲ್ಲರೂ ದೃತರಾಷ್ಟ್ರ
ಪುತ್ರರೇ, ಅಬ್ಬರ ಆಡಂಬರದ ಮಂಟಪದಲ್ಲಿ ಕುರಿಗಳೇ ಎಲ್ಲ(ನಾವೆಲ್ಲ)” ಎಂಬ ಸಾಲುಗಳು ಒಂದು ರೀತಿಯ ಬಂಡಾಯವನ್ನು
ವ್ಯಕ್ತಪಡಿಸುತ್ತವೆ. ಇಂದಿನ ರಾಜಕೀಯ ವಿದ್ಯಮಾನಗಳನ್ನು ಕಂಡು ಬೇಸತ್ತಿರುವ ಕವಿ ಮನಸ್ಸಿನ ನೋವನ್ನು,
ಆಕ್ರೋಶವನ್ನು ಈ ಕವಿತೆ ವ್ಯಕ್ತಪಡಿಸುತ್ತೆ. ಈ ಕವಿತೆಗೆ ಅಳವಡಿಸಿರುವ ರೇಖಾ ಚಿತ್ರವನ್ನು ಗಮನಿಸುವುದಾದರೆ,
ಸಂವಿಧಾನನ್ನು ಮುಚ್ಚಿಟ್ಟು ಅದರ ಮೇಲೆ ಕುರ್ಜಿಯನ್ನು ಹಾಕಲಾಗಿದೆ, ಜೊತೆಗೆ ಪ್ರಶ್ನಿಸುವ, ದಿಕ್ಕಾರ
ಕೂಗುವ ಕೈಗೆ ಹಗ್ಗ ಬಿಗಿಯಲಾಗಿದೆ. ಈ ರೇಖಾಚಿತ್ರವೂ ಸಹ ಕವಿತೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿ
ಪ್ರತಿನಿಧಿಸುತ್ತದೆ.
ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ
ನೀಡುವ ಹಲವು ಪದ್ಯಗಳು ಈ ಕೃತಿಯಲ್ಲಿವೆ. ಪ್ರಮುಖವಾಗಿ, ಬಾ ಬಾಲೆ ಶಾಲೆಗೆ, ಕೂಲಿಯಿಂದ ಶಾಲೆಗೆ, ಶಾಲೆಗಾಗಿ
ನಾವು ನೀವು, ನಲಿ-ಕಲಿ ಮುಂತಾದ ಕವಿತೆಗಳು ಶಾಲಾ ಶಿಕ್ಷಣದ ಮಹತ್ವವನ್ನು ಸರಳವಾಗಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ
ನಮ್ಮ ಮುಂದಿಡುತ್ತವೆ. ಉಳಿದಂತೆ, ಮಡದಿಯ ವೇದನೆ, ಸತಿ-ಪತಿ ಕರ್ತವ್ಯ, ಇಳೆಯ ಮಳೆ, ಬಡತನದ ಬವಣೆ,
ಮೌನ, ವಿರಹ ವೇದನೆ ಮುಂತಾದ ಕವಿತೆಗಳು ಅರ್ಥಪೂರ್ಣವಾಗಿವೆ.
ಒಟ್ಟಿನಲ್ಲಿ, ʼನನ್ನೊಳಗಿನ ದನಿʼ ಒಂದು ಯಶಸ್ವಿ ಪ್ರಯೋಗವಾಗಿದೆ.
ಈ ಕೃತಿ ಸಂಪೂರ್ಣ ಪರಿಪೂರ್ಣವೆಂದ ಹೇಳಲಾಗದು. ಹಾಗೆ
ನೋಡಿದರೆ ಯಾವುದೋ ಪರಿಪೂರ್ಣವಲ್ಲ. ಅಕ್ಷರ ದೋಷಗಳು ಈ ಕೃತಿಯಲ್ಲಿ ಹೆಚ್ಚಾಗಿದ್ದು, ಬರಹಗಾರರು, ಪ್ರಕಾಶಕರು
ಇಂತಹ ವಿಚಾರಗಳನ್ನು ಮುಖ್ಯವಾಗಿ ಗಮನಿಸಲೇಬೇಕು. ಕೆಲವು ಕಡೆ ಪ್ರಾಸ ಸಹಜವಾಗಿದ್ದು, ಕವಿತೆಯ ಸೌಂದರ್ಯವನ್ನು
ಹೆಚ್ಚಿಸಿದ್ದರೇಮ ಹಲವು ಕಡೆ ಪ್ರಾಸವನ್ನು ಬಲವಂತವಾಗಿ ತಂದಂತಿದೆ. ಪ್ರಾಸಕ್ಕಿಂತ ಪದ ಮತ್ತು ಪದಾರ್ಥಕ್ಕೆ
ಹೆಚ್ಚಿನ ಆದ್ಯತೆಯನ್ನು ನೀಡಬೇಕಿತ್ತು. ಕೆಲವು ಕಡೆಗಳಲ್ಲಿ ಪ್ರಾಸ ಬರಲೇಬೇಕೆಂಬ ಹಠ ಪದ್ಯದ ಅರ್ಥವ್ಯಾಪ್ತಿಯನ್ನು
ಅನಂತ ವಿಸ್ತರಣಾ ಸಾಧ್ಯತೆಗಳನ್ನು ಮಿತಿಗೊಳಿದಂತೆ ಭಾಸವಾಗುತ್ತದೆ.
ಕೃತಿಯ ಕೆಲವು ಕವನಗಳ ಪದ ಬಳಕೆಯಲ್ಲಿ ಮತ್ತಷ್ಟು ಎಚ್ಚರಿಕೆ
ಬೇಕಿತ್ತು ಎನಿಸುತ್ತದೆ. ಉದಾ: ʼಸೃಷ್ಠಿಯ ಅಸಮಾನತೆʼ ಎಂಬ ಕವಿತೆಯಲ್ಲಿ
ಅಸಮಾನತೆ ಎಂಬ ಪದ ಸೂಕ್ತವೇ? ಸೃಷ್ಠಿಯಲ್ಲಿ ಅಸಮಾನತೆಯಿಲ್ಲ ಬದಲಾಗಿ ಬಹುತ್ವವಿದೆ. ಇದೇ ರೀತಿ ʼವಿಮರ್ಶೆʼ ಎನ್ನುವ ಪದ್ಯದಲ್ಲಿ
ವಿಮರ್ಶೆ ಎಂಬ ಪದವನ್ನು ಸ್ತ್ರೀ ಎದುರಿಸುವ ನಿಂದನೆಗಳು ಎಂಬ ಅರ್ಥದಲ್ಲಿ ಬಳಸಲಾಗಿದೆ. ಈ ಪ್ರಯೋಗವೂ
ಅಷ್ಟು ಸೂಕ್ತ ಎನಿಸುವುದಿಲ್ಲ. ಇಂತಹ ಪದ ಪ್ರಯೋಗಗಳನ್ನು ಎಚ್ಚರಿಕೆಯಿಂದ ಗಮನಿಸಬೇಕಿತ್ತು.
ಕೆಲವು ಪದ್ಯಗಳಲ್ಲಿ ವಾಕ್ಯ ರಚನೆ ಹಾಗೂ ವ್ಯಾಕರಣ ನಿಯಮಗಳನ್ನು
ಗಮನಿಸಬೇಕಿತ್ತು. ಉದಾ: ʼಭಾರತದ ಪರಿಸ್ಥಿತಿʼ ಎಂಬ ಕವಿತೆಯಲ್ಲಿ
“ಅವರು ಧರಿಸುವುದೆಲ್ಲಾ ಬರೀ ಜೀನ್ಸ್ ಪ್ಯಾಂಟನ್ನು” ಎಂದಿದೆ. ಇಲ್ಲಿ ಬಹುವಚನದಲ್ಲಿ ಪ್ರಾರಂಭವಾಗುವ
ವಾಕ್ಯ ಕೊನೆಗೆ ಏಕವಚನದಲ್ಲಿ ಮುಕ್ತಾಯವಾಗುವುದು. ಇಂತಹ ಪ್ರಯೋಗಗಳು ಕೃತಿಯ ಹಲವು ಕಡೆ ಇದ್ದು ಇವನ್ನು
ಬರಹಗಾರರು ಮುಖ್ಯವಾಗಿ ಗಮನಿಸಬೇಕು.
ಇದು ಲೇಖಕಿಯ ಚೊಚ್ಚಲ ಕೃತಿಯಾದರಿಂದ ಈ ಎಲ್ಲಾ ಸಣ್ಣ ಪುಟ್ಟ
ದೋಷಗಳಿಗೆ ರಿಯಾಯಿತಿ ಇದ್ದೆ ಇರುತ್ತದಾದರೂ ಇವನೆಲ್ಲಾ ಗಮನಿಸಿ ಅನುಸರಿಸಿದಲ್ಲಿ ಮುಂದಿನ ಬರಹ ಬಹಳ
ಅರ್ಥಪೂರ್ಣವಾಗುವುದು ಎಂಬ ಸದಾಶಯ ನಮ್ಮದು.
ಉಳಿದಂತೆ, ಈ ಕೃತಿಯಲ್ಲಿ ಒಬ್ಬ ಬಂಡಾಯದ ಮನಸ್ಥಿತಿಯ ವ್ಯಕ್ತಿ,
ಒಬ್ಬ ತಾಯಿ, ಸ್ತ್ರೀಪರ, ಜೀವಪರ ಚಿಂತನೆಯ ಮನಸ್ಸು, ಪ್ರಗತಿಪರ ಆಲೋಚನೆಯ ಮನಸ್ಸು ಹಾಗೂ ಮೌಢ್ಯವಿರೋಧಿ
ಮನಸ್ಥತಿ, ಸಮಕಾಲೀನ ಚಿಂತನೆಗಳು, ಸಾಮಾಜಿಕ ಸಂವೇದನೆ, ಆತ್ಮನಿವೇದನೆ, ಇತ್ಯಾದಿಗಳು ಸ್ಪಷ್ಟವಾಗಿ
ಗೋಚರಿಸುತ್ತವೆ. ಇನ್ನಷ್ಟು ಆಳದ ಆಲೋಚನೆಗಳನ್ನು, ನೋಟ ಕ್ರಮಗಳನ್ನು, ದರ್ಶನವನ್ನು ಕಾಣಿಸುವ ಪ್ರಯತ್ನವನ್ನು
ಮುಂದಿನ ಬರಹಗಳಲ್ಲಿ ಮಾಡಬಹುದು.
ಕೊನೆಯದಾಗಿ, ಇಂತಹ ಮಹತ್ವದ ಪ್ರಯತ್ನಕ್ಕಾಗಿ ಶ್ರೀಮತಿ
ಅನಿತಾ ಕೆ. ಆರ್. ಇವರಿಗೆ ತುಂಬು ಗೃದಯದ ಅಭಿನಂದನೆಗಳನ್ನು ತಿಳಿಸುತ್ತಾ, ಇಂತಹಾ ಹತ್ತು ಹಲವು ಮಹತ್ವದ
ಕೃತಿಗಳು ಇವರಿಂದ ಬರಲಿ ಎಂದು ಆಶಿಸುವೆ. ಓದುಗರ ಮಹಾಶಯರು ಕೃತಿಯನ್ನು ಕೊಂಡು-ಓದು ತಮ್ಮ ಅಭಿಪ್ರಾಯಗಳನ್ನು
ಹಂಚಿಕೊಳ್ಳುವ ಮೂಲಕ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂದು ಕೋರುವೆ. ನಮಸ್ಕಾರಗಳು.
ನನ್ನೊಳಗಿನ ದನಿ ಕೃತಿಗಾಗಿ ಸಂಪರ್ಕಿಸಿ: 7259896840
- ವರುಣ್‌ರಾಜ್ ಜೀ.
ವಿಚಾರ ಮಂಟಪ ಬಳಗ.
# ೯೪೪೮೨೪೧೪೫೦
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
-
ಅಂತರಾಷ್ಟ್ರೀಯ ಮಹಿಳಾ ದಿನ... International WOMEN'S Day... ಆತ್ಮೀಯ ಗೆಳತಿ ಅಕ್ಷತಾ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲೆಯ ತವರೂರಿನ ಹೆಣ್ಣು...
-
ಶ್ರೀಮತಿ ಆಶಾಕಿರಣ ಬೇಲೂರು. ಶಿಕ್ಷಕರು, ಬರಹಗಾರರು ಹಾಗೂ ಸಾಮಾಜ ಸೇವಕರು. ಬೇಲೂರು, ಹಾಸನ ಜಿಲ್ಲೆ. ಇವರು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ...
-
ಬಾಲ್ಯದ ಆ ದಿನಗಳು....... ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ,ಗಣಪತಿ ಮಂದಿರ,ವಿಠಲನರುಕ್ಮಿಣಿ ಮಂದಿರ ,ದುರ್ಗವ್ವ, ಮರುಗವ್ವ ಹೀಗೆ ಹತ್ತು ಹಲವ...