ಹಳ್ಳಿ ಜೀವನವೆಂದರೆ ಪರಿಸರಕ್ಕೆ ಹೊಂದಿಕೊಂಡು ಬದುಕಲೇ ಬೇಕು. ನಂಬಿಕೆ ಅದರಲ್ಲೂ ಮೂಢನಂಬಿಕೆಗಳ ಸುತ್ತಲೂ ಸುತ್ತು ಹಾಕುತ್ತಾ ಸಾಗುತಿರಲೇ ಬೇಕು..
ನಾನು ಹೇಳ ಹೊರಟಿರುವ ಕಥೆಯೇನೆಂದರೆ
'ಮುಗ್ಧ ಬಾಲೆಯ ಸುತ್ತ ಎಲ್ಲರ ಚಿತ್ತ' ಮುಂದೆ ಸಾಗುತ್ತಾ ತಿಳಿಯುವುದು..
ಹಳ್ಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಗಲಿ ಮಾತುಕಥೆಯಲ್ಲಿ ಕೇಳಿಬರುವ ಅನುಭವದ ಸುದ್ಧಿ ಸಮಾಚಾರಗಳ ನಡುವಿಂದ ಹೊರಬಂದ ಸ್ವತಃ ಅವರೇ ಕಂಡ ಧ್ವನಿ-ಚಿತ್ರಣಗಳು ಕಣ್ಮುಂದೆ ಬಂದು ಜೀವವೇ ಬಾಯಿಗೆ ಬಂದ ಹಾಗೇ ಮಾಡಿದ ಭಯದ ಕಾಡಿನ ನಡುವಿನಿಂದ ಹೊತ್ತು ತಂದ ಮೈ ನವಿರೇಳಿಸುವ ನಡುಕ ಹುಟ್ಟಿಸುವ ಆಡುಮಾತಿನಂತೆ ಹೆದರಿಸುತ್ತೆ ಎಂಬುದರ ಸುತ್ತ ಹೆಣೆದುಕೊಂಡಿರುವ ಉಳ್ಳವರು ಬಡವರನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿ ಪಡೆದುಕೊಳ್ಳುವ ಜಗಲಿ ಕಟ್ಟೆಯ ಒಬ್ಬರ ಅನುಭವದ ಮಾತಿನ ಕಥೆಯ ತುಣುಕನ್ನು ಇಲ್ಲಿ ಇಳಿಸುವೆ..
ಹಳ್ಳಿ ಬದುಕು ಎಂದರೆ ಕಾನನ, ಅಡವಿ, ಪರಿಸರಕ್ಕೆ ಹೊಂದಿಕೊಂಡೆ ಬದುಕನ್ನು ದೂಡಲೇಬೇಕು. ಹಾಗೇ ಜೀವನ ಸಾಗಿಸಲು ದೂರದ ಧಣಿಗಳ ಅಥವಾ ಜಮೀನ್ದಾರರ, ಒಡೆಯರ ಮನೆಗೆ ಹೋಗಿ ಅಲ್ಲಿ ಚಾಕರಿ ಮಾಡಿ ಜೀವನ ಸಾಗಿಸಲೇ ಬೇಕು.
ಅಥವಾ ಪಕ್ಕದ ಊರಿಗಾದರೂ ದುಡಿಯಲು ಹೋಗಿ ಬಂದು ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ.
ಗಂಡಸರು, ಹೆಂಗಸರು, ೩-೪ ಕಿಲೋ ಮೀಟರ್ ನಷ್ಟು ದೂರ ಕಾಡಿನಲ್ಲಿಯೇ ಕ್ರಮಿಸಿ ಕೆಲಸಕ್ಕೆ ಹೋಗಬೇಕು.
ಇದು ನಿತ್ಯ ಕಾಯಕ.
ಹೀಗೆ ಹೋಗಬೇಕಾದರೆ ನಾಲ್ಕೈದು ಜನರು ಗುಂಪಾಗಿ ಹೋಗಲೇ ಬೇಕು.
ಹೀಗೆ ಬದುಕು ಸಾಗುತಿರಲೇಬೇಕು.
ಅದೊಂದು ದಿನ ಮಳೆಗಾಲ ಧಣಿಗಳ ಮನೆಯಲ್ಲಿ ಚಾಕರಿ ಮಾಡಿ ಮುಗಿಸುವುದಕ್ಕೂ ಮೂರ್ಸಂಜೆ ಹೊತ್ತು ಹತ್ತಿಕೊಳ್ಳುವುದಕ್ಕೂ ಸಮನಾಗುತ್ತದೆ.ಆ ದಿನ ಅಮವಾಸ್ಯೆ ಬೇರೆ. ಕತ್ತಲಾಗಿ ಬಿಡುತ್ತೆ.ದಾರಿ ಕಂಡರೂ ಒಂಥರಾ ಮಬ್ಬಾಗಿ ಸ್ಪಷ್ಟವಾಗಿ ಕಾಲಡಿ ಏನೂ ಕಾಣುವುದಿಲ್ಲ.
ಒಡೆಯರ ಮನೆಯಿಂದ ಬರೋಬ್ಬರಿ ಎರಡು ಕಿಲೋ ಮೀಟರ್ ದೂರ ಹಳ್ಳ ದಾಟಿ ಕಗ್ಗತ್ತಲ ಕಾಡಿನ ದೈತ್ಯ ಮರಗಳ ನಡುವೆ ಉಸಿರು ಬಿಗಿಹಿಡಿದುಕೊಂಡು ಬರಲೇ ಬೇಕು.
ಏನಕ್ಕೆಂದರೆ ಆ ಜಾಗ ಅಂತದ್ದು.
ಈ ದಾರಿಯಲ್ಲಿ ಹೆದರಿಸುತ್ತದೆ ಎಂದು ಜನರೆಲ್ಲರೂ ನಂಬಿದ್ದರು.
ಎರಡು ಉದ್ದನೆಯ ಕಟ್ಟಿಗೆಯ ತುಂಡು ತೆಗೆದು ಅದಕ್ಕೆ ಬಟ್ಟೆಯ ಸುತ್ತಿ ಒಂಚೂರು ಸೀಮೆಎಣ್ಣೆ ಸೋಕಿ ಒಂದು ಬೆಂಕಿಪಟ್ನವನ್ನು ಪಡೆದು, ಎರಡು ಚೂಡು/ಜುಂಜುಗಳಿಗು ಬೆಂಕಿ ಹಚ್ಚಿಕೊಂಡು ಮನೆಕಡೆ ಹೊರಟರು...
ಈಗ ಕಥೆಯ ಕಾತರತೆಯ ಮುಖ್ಯಭಾಗ ಪ್ರಾರಂಭ .
ಸಣ್ಣನೇ ಜಿಟಿ-ಜಿಟಿ ಮಳೆ, ಕಂಬಳಿ ಕೊಪ್ಪೆಗಳು ತಲೆಗೆ ಹಾಕಿಕೊಂಡು ದಢ-ಭಡ ಎಂದು ಸಾಗುತಿರುವ ಇವರಲ್ಲಿ ಊರಿನ ದೇವರ ಗುಡಿಯತನಕ ಮುಟ್ಟಿದರೆ ಸಾಕಪ್ಪಾ ಎಂಬುದು ಮನಸ್ಸಿನ ಇಚ್ಚೆ.
ಇವರ ಇಚ್ಛೆ ಆ ದೇವರು ಈಡೇರಿಸುವನೋ ಕಾದು ನೋಡಿ ..
ದಾರಿಯಲ್ಲಿ ಮಾತಾಡಿಕೊಂಡು ಪಟಾ-ಪಟಾ ಬರುತ್ತಿದ್ದಾರೆ.
ಗಾಳಿಯು ಒಂದೇ ಸಮನೆ ಬೀಸುತ್ತಿದೆ. ಚೂಡುಗಳು ಆಗೋ-ಇಗೋ ಅನ್ನುತ್ತಿವೆ.
ಹೊಳೆಯ ಹತ್ತಿರ ಬಂದು ನೋಡುತ್ತಾರೆ ಮಳೆಯ ಪ್ರಮಾಣ ಕಡಿಮೆ ಇದ್ದರೂ ಕಡುಗೆಂಪು ನೀರು ಹರಿಯುತ್ತಿರನವುದು ನೋಡಿ ಎದೆಯಲ್ಲಿ ಝಲ್ ಎನಿಸಿತು, ರೋಮಗಳು ಹಾಗೇ ಎದ್ದುನಿಂತವು.ತಣ್ಣನೆಯ ಮಳೆಯಲ್ಲೂ ಬೆವರಿಳಿಯಲು ಪ್ರಾರಂಭಿಸಿತು.
ಹಳ್ಳದಲ್ಲಿ ನೀರು ಕಡಿಮೆ ಇದ್ದರೂ ದಾಟಲು ಭಯ.
ಆದರೂ ದೇವರ ಮೇಲೆ ಭಾರ ಹಾಕಿ ದಾಟಲು ಮುಂದಾದರು.
ನೀರಿನೊಳಗೆ ಕಾಲು ಇಟ್ಟಿದ್ದೇ ತಡ, ಎರಡೇ ಹೆಜ್ಜೆಗೆ ಹೊಳೆ ದಾಟಿದ್ದೆ ಬದುಕಿದೆವು ಎಂದು ನಿಟ್ಟುಸಿರು ಬಿಡಲು ಹಿಂತಿರುಗಿ ನೋಡಿದಾಕ್ಷಣ ಹೊಳೆಯ ನೀರೆಲ್ಲಾ ತಿಳಿಯಾಯಿತು.
ಅವರಿಗರಿವಾಯಿತು ಇಲ್ಲಿಂದ ದೇವಸ್ಥಾನದ ಕಟ್ಟೆ ಬರುವವರೆಗೂ ಇದು ಕಟ್ಟಿಟ್ಟ ಬುತ್ತಿ. ಅವನೇ ಕಾಪಾಡಬೇಕೆಂದು ಅವನನ್ನೇ ನೆನೆಯುತ್ತಾ ಸಾಗುತಿರಲು.
ಅಮ್ಮಾ...ಕೂ...ಎಂಬ ಹೆಣ್ಣಿನ ಧ್ವನಿಯಿಂದ ಕರೆದಂತಾಯ್ತು. ಅದನ್ನೆಲ್ಲಾ ಲಕ್ಷಿಸದೇ, ಮುಂದೆ ಧಾವಿಸತೊಡಗಿದರು.
ಆದರೂ ಯಾವುದೋ ಹೆಣ್ಣಿನ ಧ್ವನಿ ಮತ್ತೆ ಅಮ್ಮಾ,ನಿಲ್ಲಿ,ಯಾರಾದ್ರೂ ಕಾಪಾಡಿ , ಯಾರಾದರೂ ಬನ್ನಿ ಎಂದು ಕರೆದ ಹಾಗಾಯಿತು. ಈ ಧ್ವನಿಯು ಅವರಲ್ಲಿ ಒಂದು ಹೆಂಗಸಿನ ಮಗಳ ಧ್ವನಿಯು ಆಲಿಸಿದ ಹಾಗಾಯಿತು. ಆದರೂ ಹೆದರಿಕೆ, ಭಯ, ನಡುಕಗಳು ಅವರನ್ನು ಅಲ್ಲಿಯ ಸನ್ನಿವೇಶಗಳಿಗೆ ಕಿವಿಕೊಡದಂತೆ ಮಾಡಿ ಮುಂದೆ ಸಾಗಲು ಮನಸ್ಸು ಹೇಳುತ್ತಿತ್ತು.
ಹಾಗೇ ಮುಂದೆ ಬರಲು ಯಾರೋ ಇಬ್ಬರು ಕಾಡಿನಲ್ಲಿ ಬೆಳಕು ಹೊಡೆದಂತಾಯಿತು, ಆ ಕಡೆಯಿಂದ ಒಡಾಡುವ ದರ್ಕಿನ ಶಬ್ಧ ಕೇಳಿಸುತ್ತಿತ್ತು.
ಇವರಿಗೇನೋ ದೆವ್ವ,ಭೂತ, ಪಿಶಾಚಿಗಳೇ ನಮ್ಮನ್ನು ಹೆದರಿಸುತ್ತಿವೆ ಎಂಬ ಭಯದಿಂದ ದಾಪುಗಾಲು ಹಾಕತೊಡಗಿದರು.
ಇನ್ನೇನೂ ದೇವರ ಗುಡಿ ಕಾಣುತ್ತಿತ್ತು.
ಅಷ್ಟರಲ್ಲಿ ಯಾರೋ ಇಬ್ಬರು ಬಿಳಿ -ಕೆಂಪು ಸೀರೆಯುಟ್ಟ ಎರಡು ಹೆಂಗಸರು ಇವರ ಪಕ್ಕದಿಂದ ಹಾದು ಹೋದರು.
ಇವರ ಜೀವ ಬಾಯಿಗೆ ಬಂದಂತಾಯಿತು.
ಅವರಿಗೇನೂ ಆಗಲಿಲ್ಲ.. ಆದರೆ ಹೆದರಿಕೆ ಎನ್ನುವುದು ಯಾರನ್ನೂ ಸಹ ಏನು ಬೇಕಾದರೂ ಮಾಡಬಹುದು.
ಅವರು ಹಳ್ಳಿಯ ಹೆಂಗಳೆಯರಾಗಿದ್ದರಿಂದ ಸ್ವಲ್ಪ ನಾಟಿತನ, ಗಡಸು ಧೈರ್ಯ, ದೇಹದಲ್ಲಿ ತುಂಬಿತ್ತು.
ಆದರೆ ಕಾಡಿನ ದಾರಿಯಲ್ಲಿ ಬೆಂಕಿಪಟ್ಟಣ,ಉದುಬತ್ತಿ,
ಲಿಂಬು ಬಿದ್ದಿದ್ದನ್ನು ಒಬ್ಬಳು ಗಮನಿಸಿದ್ದಾದ್ರೂ ಭಯದ ನಡುವೆ ಅವೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.
ದೇವರ ಗುಡಿಯ ದಾರಿಗೆ ತಲುಪಿದರು. ನಿಟ್ಟುಸಿರು ಬಿಟ್ಟರು. ಆದರೆ ಮನೆಯ ಅಂಗಳಕ್ಕೆ ತಲುಪುವುದರೊಳಗೆ ಒಂದು ಹೆಂಗಸಿನ ಎದೆಯ ಡವ-ಡವ ಶಬ್ಧ ನಿಂತಿರಲಿಲ್ಲ, ನಡುಕವೂ ನಿಂತಿರಲಿಲ್ಲ, ಮನಸ್ಸಿನಲ್ಲಿ ಏನೋ ಕಳೆದುಕೊಂಡಂತೆ ಭಾಸ, ಬದುಕೆ ಇಂದಿಗೆ ಕೊನೆಯಾಯಿತೇ ಎಂಬ ಶೋಕ.
ಏತಕೇ ಇಂತಹ ಯೋಚನೆಗಳು ಬರುತ್ತಿವೆ ಎಂದು ಅಂಗಳದ ಮೆಟ್ಟಿಲನ್ನು ಏರುತಿರಲು ಅಂಗಳದಲ್ಲಿ ನಾಲ್ಕೈದು ಜನ ಗಂಡಸರು, ಮೂರ್ನಾಲ್ಕು ಜನ ಹೆಂಗಸರು ನಿಂತು ಯಾರಿಗೋ ಕಾಯುತ್ತಿರುವಂತೆ ಇವರಿಗೆ ಕಂಡಿತಾದರೂ ಏನೋ ಮಾತಾಡ್ತಾ ಇರ್ಬೇಕು ಎಂಬ ಭಾವನೆಯಿಂದ ಅಂಗಳಕ್ಕೆ ಬಂದವಳೇ ಮಗಳನ್ನು ಕರೆದಳು.
ತಕ್ಷಣ ನಿಮ್ಮ ಜೊತೆ ಬರಲಿಲ್ವಾ ಎಂಬ ಮಾತು ಕೇಳಿದ್ದೇ ತಡ ಮೂರ್ಛೆ ಬಿದ್ದಳು.
ಎಲ್ಲರಲ್ಲೂ ಭಯ, ಆತಂಕ ಮನೆ ಮಾಡಿತ್ತು,
ಇನ್ನೊಂದು ಹೆಂಗಸಿನ ಹತ್ತಿರ ಹೇಳಿದರು ಹುಡುಗಿಯು ಶಾಲೆಯಿಂದ ನೇರವಾಗಿ ಒಡೆಯರ ಮಗಳ ಜೊತೆ ಅಲ್ಲಿಗೇ ಹೋಗಿರಬಹುದು, ಮತ್ತು ನಿಮ್ಮ ಜೊತೆ ಬರಬಹುದೇನೋ ಎಂದು ಮಾತಾಡ್ತಾ ಇದ್ದದ್ದಾಗಿತ್ತು...
ಆದರೆ ಅಲ್ಲಿ ನಡೆದ ಅಸಲಿ ಕಥೆಯೇ ಬೇರೆಯಾಗಿತ್ತು.
ಇದರ ಹಿಂದಿನ ಸಂಗತಿ-ಸನ್ನಿವೇಶ, ಉದ್ದೇಶಗಳೇ ಬೇರೆಯದ್ದಾಗಿತ್ತು.
ಎಲ್ಲವನ್ನು ಕೂಡ ಯೋಜನಾತ್ಮಕವಾಗಿಯೇ ರೂಪಿಸಲಾಗಿತ್ತು.
ಯಾವುದೋ ಒಂದು ಆಸೆಯನ್ನು ಪೂರೈಸಲು ಆ ಮುಗ್ದ ಹೆಣ್ಣು ಕೂಸು ಬಲಿಯಾಗಿದ್ದಳು.
ಇದರ ಹಿಂದೆ ನಿಂತವನೇ ಆ ಹೆಂಗಸರು ಚಾಕರಿ ಮಾಡಿದ ಧಣಿ/ಒಡೆಯನಾಗಿದ್ದನು..
ಇವೆಲ್ಲಾ ಏತಕೇ ಎಂದು
ಇದರ ಸುತ್ತ ಮೂಡುವ ಕಾಡುವ ಪ್ರಶ್ನೆಗಳಿಗೆ ಕಥೆಯ ಎರಡನೇ ಭಾಗ ರಹಸ್ಯ ಸತ್ಯ ಬಿಚ್ಚಿಡುತ್ತದೆ ಉತ್ತರಿಸುತ್ತದೆ.
- ಶಾಂತಾರಾಮ ಶಿರಸಿ, ಉತ್ತರ ಕನ್ನಡ.
8762110543
7676406237.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)