“ ಹಲೋ “,
..............
“ ಹಾಯ್ “,
..............
“ ಹಾಯ್,ಹಲೋ “,
“ಯಾರು?!”
ಅಂತ ಕೇಳಿತು ಮೊಬೈಲಿನಲ್ಲಿಯ ಆ ಬದಿಯ ದನಿ.
ನಾನು ಯಾರು ಅಂತ ಕೇಳಬೇಕಿರಲಿಲ್ಲ.ಅವಳಿಗೆ ಅಷ್ಟೊಂದು ಚಿರಪರಿಚಿತ ನಾನು ಅವಳಿಗೆ.ಜೀವಕ್ಕೆ ಜೀವವೇ ನಾವಿಬ್ಬರೂ ಆಗಿದ್ದಾಗ,ನನ್ನ ಹೆಸರೆ ಅವಳಿಗೆ ಶಕ್ತಿ,ಸಾಂತ್ವನ,ಪ್ರೀತಿ,ಪ್ರೇಮ,ಸಡಗರ,ಜೀವಂತಿಕೆ ಆಗಿತ್ತು.ದಿನಕ್ಕೆ ಒಮ್ಮೆಯಾದರೂ ನೋಡಲೇ ಬೇಕಿತ್ತು,ಒಂದಿಷ್ಟು ಹೊತ್ತು ಮಾತನಾಡಲೆಬೇಕಿತ್ತು."ನೀನು ನನ್ನ ಜೀವ ಭಾವ ತರಂಗ ಕಣೋ” ಅನ್ನೋಳು.
ಆದರೆ,ಇವತ್ತು,ಯಾರು? ಅಂತ ನಿರ್ಭಾವುಕವಾಗಿ ಕೇಳ್ತಾ ಇದ್ದಾಳೆ.
‘ಅಜಯ್ ದೇವಗನ್’ ಅಂದೆ.
ಅವಳಿಗೆ,ಅಜಯ್ ದೇವಗನ್ ಅಂದ್ರೆ ಪ್ರಾಣ.ಅವನ ಪ್ರತೀ ಚಲನ ಚಿತ್ರವನ್ನೂ ಮಿಸ್ ಮಾಡ್ದೆ ನೋಡ್ತಾ ಇದ್ದಳು.ಅವಳ ಪರ್ಸಿನಲ್ಲಿ ಅವನದೊಂದು ಫೋಟೊ ಯಾವಾಗಲೂ ಕುಳಿತಿರೋದು.ಸ್ವಲ್ಪ ಹೆಚ್ಚು ಕಡಿಮೆ ನನ್ನ ಕೂದಲು ಮತ್ತು ನಾನು ಅದೇ ತರಹ ಇದ್ದಿದ್ದರಿಂದ,ನನ್ಗೆ ಮೀಸೆ ಟ್ರಿಮ್ ಮಾಡಿಸ್ತಾ ಇದ್ದಳು.ಅದೇ ತರಹದ ಬಟ್ಟೆಗಳನ್ನೆ ಸೆಲೆಕ್ಟ್ ಮಾಡಿಸ್ತಾ ಇದ್ದಳು.ಒಳಗೊಂದು ಟೀ ಶರ್ಟ್ ಅದರ ಮೇಲೊಂದು ಶರ್ಟ್,ಪೂರ್ತಿ ಮೇಲಿನದೊಂದು ಓಪನ್ ಬಟನ್.ಅವಳ ಪರ್ಸಿನಲ್ಲಿದ್ದ ದೇವಗನ್ ಶೈಲಿದೇ ಒಂದು ಫೋಟೊ ಕೂಡ ತೆಗೆಸಿದ್ದಳು.ಇದು ನಮ್ಮಿಬ್ಬರ ಟಾಪ್ ಸಿಕ್ರೆಟಿನಲ್ಲೊಂದಾಗಿತ್ತು.
ಆಗಿನ್ನೂ,ಮೊಬೈಲ್ ಬೊಚ್ಚು ಬಾಯಿ ಬಿಟ್ಟು ಕೊಂಡು,ಅಂಬೆಗಾಲು ಇಡ್ತಾ ಇದ್ದ ಕಾಲ.ಈಗಿನ ತರಹ ಆಗಿದ್ದರೆ,ಟ್ರೂ ಕಾಲರ್ ಆ್ಯಪಿನಲ್ಲಿ ನನ್ನ ಹೆಸರು ಬಂದ ತಕ್ಷಣ ಬ್ಲಾಕ್ ಆಗಿರುತ್ತಿತ್ತೇನೋ.
ಇದೆಲ್ಲ ನೆನಪಿಸಿಕೊಳ್ಳುತ್ತಾ,ನನ್ನ 1108 ನೋಕಿಯಾ ಫೋನ್ ಅನ್ನು ಕಿವಿಗೆ ಸರಿಯಾಗಿ ಹಿಡಿದುಕೊಂಡೆ.
“ಯಾಕೆ ಮಾಡಿದೆ ಫೋನ್?ಫೋನು ಮಾಡಬಾರದು ಅಂತ ನಿನ್ಗೆ ಹೇಳಿಲ್ವ,ಹೇಳಿದ್ದನ್ನೆ ಹೇಳೋಕೆ ಅಸಹ್ಯ ಆಗುತ್ತೆ,ಯಾವ ಬೇವರ್ಸಿನೋ ನಿನ್ಗೆ ನನ್ನ ನಂಬರ್ ಕೊಟ್ಟಿದ್ದು,ಆ ಗಿಡ್ಡ ಮಂಜನಾ,ಆ ಪ್ರವೀಣನಾ?ಆ ನನ್ನ ಮಕ್ಳಿಗೆ ಎಷ್ಟು ಹೇಳಿದ್ರೂ ನಿನ್ಗೆ ನನ್ನ ನಂಬರ್ ಕೊಡ್ತಾರೆ,ಈಡಿಯಟ್ಸ್ .”ಅಂತ ಏನೇನೋ ಬೈಯ್ತಾ ಇದ್ದಳು.ಆದ್ರೆ ಅಪ್ಪಿ ತಪ್ಪಿಯು ಹೇಗಿದ್ದಿಯಾ?ಅರಾಮಾ?ಏನ್ ಮಾಡ್ತಾ ಇದ್ದೀಯಾ?ಎಲ್ಲಿದ್ದೀಯಾ?ಅಟ್ ಲಿಸ್ಟ್ ಸತ್ತಿದ್ದೀಯಾ?ಬದುಕಿದ್ದಿಯಾ? ಅಂತಾನು ಕೇಳಲಿಲ್ಲ.
ಕೊಂಚ ಸಮಯದ ನಂತರ ಫೋನ್ ಕರೆ ಕಟ್ಟಾಗಿತ್ತು.ಇವಳು ಅವಳೇನಾ?ಅಥವಾ ರಾಂಗ್ ನಂಬರ್ರಿಗೆ ಕಾಲ್ ಮಾಡಿದ್ನಾ? ಅಂತ ಒಂದು ಕ್ಷಣ ದಿಗಿಲಾಯ್ತು.
ಇರಲಿ ಯಾವ್ದೋ ಧಾವಂತದಲ್ಲಿ ಇರಬೇಕು ಅಂದುಕೊಂಡು,ಸ್ವಲ್ಪ ಸಮಯದ ನಂತರ ಮೆಸೇಜ್ ಮಾಡ್ದೆ.ಆಗೆಲ್ಲಾ ಮೆಸೇಜಿಗೂ ಕೂಡ ಒಂದು ರೂಪಾಯಿ ಕಟ್ಟಾಗೋದು,ನನ್ಗೆ ಅದರ ದರ್ದು ಇರಲಿಲ್ಲ.ನನ್ನ ಗಮನವೆಲ್ಲ ಅವಳು ನನ್ನ ಜೊತೆ ಮಾತನಾಡಬೇಕು.ನನ್ಗೆ ಅವಳು ಬೇಕಿತ್ತು ಅಷ್ಟೇ.
“ ಹಾಯ್ ”.
.........
“ ಹಲೋ” .
.............
“ ಯಾಕೆ,ನೋ ರಿಪ್ಲೇ?”
“ ಹೇ,ಯಾರಿದು? ‘
ಮತ್ತದೇ,ಸಿಡಿಗುಂಡಿನಂತಹ ಪ್ರಶ್ನೆ.ಅಂದ್ರೆ ನನ್ನ ನಂಬರ್ ಅನ್ನು ಒಂದ್ಸಾರಿನೂ ಗಮನಿಸಿಲ್ಲ ಅಂದ ಹಾಗೆ ಆಯ್ತು.
‘ ರಾಹುಲ್ ದ್ರಾವಿಡ್ ’ ಆಂತ ಈ ಸಾರಿ ಟೈಪಿಸಿದೆ.ಅವಳ ಎರಡನೇ ಫೇವರಿಟ್ ಹೀರೊ.ಗ್ರೇಟ್ ಕ್ರಿಕೆಟರ್.ಇದು ನಮ್ಮಿಬ್ಬರಿಗಷ್ಟೆ ಗೊತ್ತಿದ್ದ ಎರಡನೇ ಸಿಕ್ರೇಟ್.
“ಥೂ!,ನಿನ್ನ.ನಿನ್ನ ಜನ್ಮಕ್ಕೆ ಬೆಂಕಿ ಹಾಕಾ!”.ಎಂದು ರಿಪ್ಲೈ ಬಂತು.ಹೌದು ನನ್ನ ಜನ್ಮಕ್ಕೆ ಬೆಂಕಿಗಿಂತ ಉತ್ತಮ ಸ್ನೇಹಿತ ಇರಲು ಸಾದ್ಯವಿರಲಿಲ್ಲ.ಕನಿಷ್ಟ ನಾಯಿಗೂ ಒಂದು ಹೆಸರಿರುತ್ತೆ,ಬಂಟಿ,ಬಿಂಗೋ,ಚಿನ್ನು,ಮುನ್ನ,ಪಪ್ಪಿ,ರಾಮು...ಹೀಗೆಯೆ,ಆದರೆ ನನ್ಗೆ? ನಂದೆ ಆದ ಹೆಸರೇ ಇರಲಿಲ್ಲ.ಅವರಿವರ ಹೆಸರು ಹೇಳಿಕೊಂಡು,ಪಾತ್ರ ಮಾಡಬೇಕಿತ್ತು.ಹೆಸರಿಲ್ಲದವನು ನಾನು!!!
ಹೀಗೆ ಸುಮಾರು ಆರೇಳು ತಿಂಗಳ ಕಾಲ,ಅಜಯ್ ದೇವಗನ್ ಹಾಗೂ ರಾಹುಲ್ ದ್ರಾವಿಡ್ ಪಾತ್ರಗಳ ಪರಕಾಯ ಪ್ರವೇಶ ಮಾಡಿದರೂ.ಅವಳಿಂದ ಯಾವುದೇ ಉತ್ತರ ಬರಲೇ ಇಲ್ಲ.ಕೊನೆಕೊನೆಗೆ ನಾನು ಹಲೋ ಅಂದ ತಕ್ಷಣ ಫೋನ್ ಕರೆ ಕಟ್ ಮಾಡ್ತಾ ಇದ್ದಳು.ನಾನು ಕಳುಹಿಸಿದ ಎಷ್ಟೋ ಮೆಸೇಜುಗಳು ಇನ್ ಬಾಕ್ಸಿನಲ್ಲಿ ಹಾಗೆಯೇ ಬಿದ್ದು ಸತ್ತು ಹೋಗಿರ್ತಾ ಇದ್ದವು.
ಹಿಂದೊಮ್ಮೆ, ಅವಳು,ನಾನಿದ್ದಲ್ಲಿಗೆ ಬಂದು,”ಇವತ್ತಿಗೆ,ನಮ್ಮಿಬ್ಬರ ಪ್ರೀತಿ ಮುಗೀತು,ಕಾರಣ ಏನೂ ಇಲ್ಲ.ನನ್ಗೆ ನೀನು ಬೇಡ ಅಷ್ಟೆ”,ಅಂದು ಹೋದ ದಿನದಿಂದ ಅವಳ ಮನಸ್ಸಿನಲ್ಲಿ,ಈಗ ಅವಳ ಮೊಬೈಲ್ಲಿನಲ್ಲಿ ನನ್ಗೆ ಯಾವ್ದೇ ಜಾಗ ಇರಲಿಲ್ಲ.ಫೋನ್ನಲ್ಲಿ ನನ್ನ ಹೆಸರು ಸೇವ್ ಆಗಿರಲೇ ಇಲ್ಲ.ಕನಿಷ್ಟ ಒಂದು ಡಾಟ್ ಆಗಿಯಾದರೂ ಸೇವ್ ಮಾಡಬಹುದಿತ್ತು.ಆದರೆ,ಮಾಡಿರಲಿಲ್ಲ.ನನ್ನ ಹೆಸರು,ಅವಳ ಹೃದಯದಲ್ಲಿ,ಅವಳ ಮೋಬೈಲ್ಲಿನಲ್ಲಿ ಉಳಿಯುವುದು ಅವಳಿಗೆ ಬೇಕಾಗಿರಲಿಲ್ಲ.ಲವ್ ಅಂತ ಸೇವ್ ಮಾಡಲು,ನಾನು ಅವಳ ಲವ್ವರ್ ಅಲ್ಲ,ಎಕ್ಸ್ ಅಂತ ಸೇವ್ ಮಾಡಿ ಮನೆಯವರ ಕೆಂಗಣ್ಣಿಗೆ ಸಿಲುಕುವುದೂ ಬೇಕಿರಲಿಲ್ಲ.ಹಾರ್ಟ್ ಸಿಂಬಲ್ ಆಗಿ ಸೇವ್ ಮಾಡಲು,ಇದ್ದೊಂದು ಹೃದಯವ ಯಾರಿಗೆ ಕೊಟ್ಟಿದ್ದಳೋ,ಯಾರಿಗೆ ಗೊತ್ತು?
ನಾನೂ ಏನೆಲ್ಲಾ ಪ್ರಯತ್ನಿಸಿದರು,ಅವಳ ಎದೆಯ ಕವಾಟಗಳು,ನನ್ನ ವಿಷಯದಲ್ಲಿ ಯಾವಾಗಲೋ ಮುಚ್ಚಿ ಹೋಗಿದ್ದವು.ಪ್ರೀತಿ ಇಲ್ಲದವರ ಮನೆಯ ದೇವರ ಜಗುಲಿಯಾದರೂ ಬೇಡ,ಪ್ರೀತಿ ತುಂಬಿದ ಮನೆಯ ಮೆಟ್ಟಿನ ಗೂಡಾಗಿದ್ದರು ಸಾಕು.ನಾನಾದರೂ ಏನು ಮಾಡಲಿ,ಪ್ರೀತಿ ಇಲ್ಲದ ಮೇಲೆ.ಬಲವಂತದಿಂದ ಮಾಡೋಕೆ ಅದೇನು ಬಲಾತ್ಕಾರವೆ?
ಹೀಗೆಯೇ ಸುಮಾರು ಮೂರು ವರ್ಷಗಳು ಕಳೆದಿರಬಹುದು.ಪಾಪಿ ಪೇಟ್ ಕಾ ಸವಾಲ್.ಏನಾದರೂ ಮಾಡಲೇ ಬೇಕಲ್ವಾ?ಬದುಕು ಬಡಿದು ಬಡಿದು,ಜೀವನದ ಮುಂದಿನ ದಡಕ್ಕೆ ತಲುಪಿಸುತ್ತಂತೆ.ನಾನು ಯಾವುದೋ ಕೆಲಸದ ಮೇಲೆ ದೇವನಹಳ್ಳಿಗೆ ಹೋಗಿದ್ದೆ.ನನ್ನವಳನ್ನು ಅವರ ಸೋದರ ಮಾವನವರ ದೇವನಹಳ್ಳಿಯ ಮನೆಯಲ್ಲಿ ಬಿಟ್ಟು,ಇನ್ನೊಂದು ಕಡೆ ಹೋಗಿ,ಬಸ್ಸಿಳಿದು ಬರ್ತಾ ಇದ್ದೆ.ಮಧ್ಯಾಹ್ನ ಸುಮಾರು ಮೂರು ಗಂಟೆ.ಸೂರ್ಯನಿಗೆ ಆಗ ತುಂಬು ಯೌವ್ವನ,ನಿಗಿ ನಿಗಿ ಬೆಂಕಿ ಕಾರುತ್ತಿದ್ದ.ವಿಪರೀತ ಸೆಕೆ.ಇಳೆ,ಮಳೆ ಕಾದು,ಕಾದು ಕೆಂಡವಾಗಿದ್ದಳು.
ಚೀನಾದ,ಇಷ್ಟಗಲದ ಕಲರ್ ಡಿಸ್ಪ್ಲೇನ ಮೊಬೈಲಲ್ಲಿ ಯಾವುದೋ ಹೊಸ ನಂಬರ್ ನಿಂದ ಕಾಲ್ ಬಂತು.
“ ಹಲೋ ”,
...........
“ ಹಾಯ್,ಯಾರು? ”
“ ನಾನು.”
ನೆತ್ತಿಗೆ ಒಂದೇ ಸಾರಿಗೆ ಸಿಡಿಲು ಬಡಿದ ಹಾಗೆ ಆಯ್ತು.ಕತ್ತೆತ್ತಿ ನೋಡಿದೆ,ಮಳೆ ಮೋಡವಾಗಿ,ಸಿಡಿಲು ಏನಾದರೂ ಬಿತ್ತಾ?ಅಂತ.ಆದರೆ,ಅದೇ ನೀಲಿ ಆಕಾಶದಲ್ಲಿ,ಮೂವತ್ತರೆಡು ಹಲ್ಲು ಬಿಟ್ಟು ಸೂರ್ಯ ನಕ್ಕಂಗೆ ಆಯ್ತು.
“ ಒಂದ್ನಿಮಿಷ.”
ಅಂದು,ಆ ಕಡೆ ಈ ಕಡೆ ನೋಡಿದೆ.ಅಲ್ಲೊಂದು,ಪಟ್ಟಿಗೆ ಅಂಗಡಿ ಇತ್ತು.ಗಿರಾಕಿಗಳಿಲ್ಲದ ಮುದಿ ವೈಶ್ಯಯಂತೆ,ಬಾಗಿಲು ತೆರೆದು ನಿಂತಿತ್ತು.ಅಲ್ಲೋಗಿ ಒಂದು ಸಿಗರೇಟ್ ಕೊಂಡು,ಬಾಯಿಗೆ ಇಟ್ಟು ಅಂಟಿಸಿಕೊಂಡು,ಎದೆಯ ಪುಪ್ಪಸದಾ ತುಂಬಾ ಹೊಗೆಯನ್ನು ಎಳೆದು,ನಿರಾಳನಾದೆ.
“ ಮ್ಮ್,ಹೇಳಿ,ಯಾರು?” ಅಂತ ಕೇಳಿದೆ,ಯಾವುದೇ ಭಾವನೆ ಇಲ್ಲದೇ. ಆದರೆ,ನನ್ಗೆ ಗೊತ್ತಿತ್ತು,ಅದು ಅವಳೇ ಅಂತ.ಅವಳು ಕರೆ ಮಾಡಿದಕ್ಕೆ ನಾನು ಸಂಭ್ರಮಿಸಲೂ ಇಲ್ಲ,ಆಶ್ಚರ್ಯ ಪಡಲೂ ಇಲ್ಲ.
“ ನಾನು” ಅಂದಳು.
“ ನಾನು ಅಂದ್ರೆ,ಹೆಸರಿಲ್ವಾ?”ಮರು ಪ್ರಶ್ನೆ ಎಸೆದೆ.
“ನಾನು.............ಅಂತ,ನಿನ್ಗೆ .........ಆಗಬೇಕು”ಹೀಗೆ ಏನೋ ಹೇಳಿದಳು.ಆದರೆ ನನ್ಗೆ ಅವಳ ಹೆಸರು ಮತ್ತು ನಮ್ಮ ಸಂಬಂಧದ ಬಗ್ಗೆ ಹೇಳಿದಾಗ,ಯಾಕೋ ಮ್ಯೂಟ್ ಮಾಡಿದ ಪಿಕ್ಚರಿನ ಸೀನ್ ತರಹ ಏನೂ ಕೇಳಿಸಲೇ ಇಲ್ಲ.
“ ಹ್ಞುಂ,ಹೇಳು” ಅಂದೆ,ಬೇಕಂತಲೆ,ಬಹುವಚನದಲ್ಲಿ ಮಾತನಾಡಲಿಲ್ಲ.
“ ಚೆನ್ನಾಗಿದ್ದೀಯಾ?”
“ ಬದುಕಿದ್ದೇನೆ.”
“ ಮದುವೆ ಆಯ್ತಂತೆ,ನಾನೇಳಿರಲಿಲ್ವ,ನಿನ್ಗೆ ನಂಗಿಂತ ಒಳ್ಳೆ ಹುಡ್ಗಿ ಸಿಕ್ತಾಳೆ ಅಂತ,ಟೀಚರ್ ಅಂತೆ.”ಅಂದಳು.
“ ನಿಂದೂ ಮದುವೆ ಆಯ್ತಾ?”ಸುಮ್ನೆ ಏನೋ ಒಂದು ಕೇಳಬೇಕು ಅಂತ ಕೇಳಿದೆ.
“ ಹೌದು ಆಯ್ತು,ನಮ್ಮನೆವರು ಎಲ್.ಐ.ಸಿ.ಯಲ್ಲಿ ಡಿ.ಓ.” ಅಂದಳು.
“ಸರಿ” ಅಂದೆ.
“ ಎಲ್ಲಿದ್ದೀಯಾ? ” ಯಾವಾಗ ಕೇಳಬೇಕಿತ್ತೋ ಅವಾಗ ಕೇಳಿರಲಿಲ್ಲ.ಈಗ ಈ ಪರಿಯ ಪ್ರಶ್ನೆ.
“ ಯಾಕೆ? ನಿನ್ನಿಂದ ದೂರಾನೆ,ಇದ್ದೀನಿ ಬಿಡು”,ಅಂತಂದು ಮುಖಕ್ಕೆ ಹೊಡೆದ ಹಾಗೆ ಹೇಳಿದೆ.
“ನಿಂದು,ಅಪಾಯಿಂಟ್ ಆಯ್ತಂತೆ?ನೀನೂ ಟೀಚರ್ ಅಂತೆ?”
“ ಹೌದು”.ಅರ್ಧಕ್ಕೆ ತುಂಡರಿಸಿದೆ.
“ ಓ.ಕೆ.ಬ್ಯೂಸಿ ಇರೋ ಹಾಗೆ ಕಾಣುತ್ತೆ,ಇದೇ ನನ್ನ ನಂಬರ್ ಸೇವ್ ಮಾಡ್ಕೋ ಬಾಯ್”.ಅಂದಳು.
ಅಯ್ಯೋ,ದುರ್ವಿಧಿಯೆ,ಇದೇನು ನಿನ್ನ ಮಾಯ ಜಾಲ,ಬಳಲಿ ಬೆಂಡಾಗಿ ಬಸವಳಿದಾಗ,ಅವಳು ಇನ್ನಿಲದಂತೆ ಕಾಡಿದಳು.ಈಗ ಬೇಡವೆಂದರೂ,ಅವಳೇ ಬಂದು ಕಾಲಿಗೆ ತೊಡರುತ್ತಿದ್ದಾಳೆ.ನಂಬರ್ ಸೇವ್ ಮಾಡಲಾ?ನನ್ನವಳಿಗೆ ಗೊತ್ತಾಗದ ಹಾಗೆ,ಇದನ್ನು ಗುಪ್ತವಾಗಿ ಮುಂದುವರೆಸಲಾ?ಹಳೆಯ ಸಲುಗೆಯಿಂದ ಅವಳಿಗೆ ಪುನಃ ಹತ್ತಿರವಾಗಲಾ?
ಮದುವೆಗೂ ಮುಂಚೆ ನನ್ನವಳಿಗೆ ಅವಳ ಬಗ್ಗೆ ಹೇಳಿದಾಗ,”ನೋಡ್ರಿ,ಪಾಸ್ಟ್ ಈಸ್ ಪಾಸ್ಟ್.ಹಿಂದೆ ಏನಾಗಿತ್ತು,ಅದು ನಂಗೆ ಬೇಡ.ಇನ್ಮುಂದೆ ನೀವು ನನ್ನವರು ಮಾತ್ರ ಅಷ್ಟೇ.”ಅಂದಿದ್ದಳು.ಮದುವೆಯಾಗಿ ಕೆಲವು ದಿನಗಳ ನಂತರ “ಆದರೆ ಮುಂದೆ ಎಂದಾದರೂ ಅವಳು ವಾಪಾಸ್ಸು ಬಂದು,ನಂಗೆ ನೀನು ಬೇಕೆ ಬೇಕು ಅಂದ್ರೆ,ನನ್ನನ್ನು ಬಿಟ್ಟು ಅವಳೆ ನಿಮ್ಮ ಚಾಯ್ಸ್ ಆಗಿರುತ್ತಾಳೆ ಅಲ್ವಾ ?”ಅಂತ ಗೇಲಿ ಮಾಡಿ ನಕ್ಕಿದ್ದಳು.ಅವಳ ಆ ನಗು ನಂಗೆ,ಬೆಂಕಿ ಹಾಗೆ ಸುಡಲು ಪ್ರಾರಂಭಿಸಿತು,ಆದರೆ ನಿಜವಾಗಲೂ ಸುಟ್ಟಿದ್ದು,ಸಿಗರೇಟ್ಟಿನ ಕೊನೆಯ ಬಿಟ್ ದಾಟಿ ಬಂದ ಬೆಂಕಿ.ಜೋರಾಗಿ ಕೈ ಕೊಡವಿ,ಸಿಗರೇಟ್ ಬಿಸಾಕಿದೆ.
ಹೆಸರಿಲ್ಲದವನು ನಾನು, ಪ್ರೇಯಸಿಯ ಅಂತಃಪುರ ಹಸಿರು ಮಾಡಲಾ?ಅಥವಾ ಮುತ್ತು,ಮುತ್ತು ಅಂತ ನನ್ನನ್ನೇ ನೆಚ್ಚಿ ಬಂದು, ಮದುವೆಯಾಗಿ ವರ್ಷ ತುಂಬುವುದರೊಳಗೆ,ಬಸಿರಾಗಿ,ಹೆರಿಗೆಯಾಗಿ,ಮಗು ಕಳೆದುಕೊಂಡು,ಬರಿದಾದ ಮಡಿಲಲ್ಲಿ,ಅಕ್ಷರಶಃ ಹುಚ್ಚಿಯಾಗಿದ್ದಾಳೆ.ನನ್ನವಳ,ಆ ಹುಚ್ಚನ್ನು ಇನ್ನಷ್ಟು ಹೆಚ್ಚಿಸಲೇ?,ಮಸಣವಾದ ನನ್ನವಳ ಬಾಳಲ್ಲಿ ಚಿಂತೆಯ ಚಿತೆಯಾಗಲೇ? ಅಥವಾ ಮಡಿಲಲ್ಲಿ ಮಗುವಾಗಲೇ!.
ಅವಳ ಜೀವನದಲ್ಲಿ ನನ್ನ ಪಾತ್ರಕ್ಕೆ ,ಒಂದು ಹೆಸರಿಲ್ಲ.ಆದರಿವಳೋ ಮುಂದೆ ಹುಟ್ಟುವ ನಮ್ಮ ಮಕ್ಕಳ ಹೆಸರ ಮುಂದೆ ನನ್ನ ಹೆಸರನ್ನು ಸೇರಿಸಿ,ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂದು ಕನಸು ಕಾಣುತ್ತಿರುವವಳು.ನನ್ನ ಹೆಸರು ನನ್ನವಳಿಗೆ ಕುಲ ತಿಲಕ.ರಾಜ ವೈಭವ.ಮದುವೆಯಾದ ಕ್ಷಣದಿಂದ ತನ್ನ ಹೆಸರ ಮುಂದೆ ನನ್ನ ಹೆಸರನಿಟ್ಟು ಮೆರೆಸಿದವಳು.
ಗೆದ್ದಲು ತಿಂದ ಹೃದಯವನ್ನು ದೈವ ಮಂದಿರ ಮಾಡಿ ಪೂಜಿಸಿದ ನನ್ನವಳ ಪ್ರತಿಮೆಯ ಮುಂದೆ,ಅವಳ ನೆನಪು,ಮುಸುಕಾಗಲು ಪ್ರಾರಂಭಿಸಿತು.ಕಾಲುಗಳು ನನ್ನವಳನ್ನು ಸೇರುವ ಕಾತರದಿಂದ,ಆ ಕಡೆ ನಡೆಯಲು ಪ್ರಾರಂಭಿಸಿದವು.ಅವಳಿಂದ ಬಂದ,ಕರೆಯ ನಂಬರ್ರಿನಲ್ಲಿಯ ಅಂಕಿಗಳು ಮನದ ಪಟದಿಂದ ಒಂದೊಂದೇ ಅಳಿಸಿ ಹೋಗಲು ಪ್ರಾರಂಭಿಸಿದವು.
ನಿಂತ ನೀರ
ಕಲಕಬೇಡಿ ಕಲ್ಲುಗಳೆ.
ಹೂದಳಗಳ
ಇರಿಯಬೇಡಿ ಮುಳ್ಳುಗಳೆ.
ಎಂಬ ಎದೆಯ ಹಾಡು,ಎಲ್ಲಿಂದಲೋ ತೇಲಿ ಬರ್ತಾ ಇತ್ತು.
- ಜ್ಯೋತಿ ಕುಮಾರ್.ಎಂ(ಜೆ.ಕೆ.).
ವಿಳಾಸ:-ಜ್ಯೋತಿ ಕುಮಾರ್.ಎಂ(ಜೆ.ಕೆ.)
ಶ್ರೇಯಾಂಕ್ ನಿಲಯ
ಮುದ್ದಣ್ಣ ಬಡಾವಣೆ
A.P.M.C.ಹಿಂಭಾಗ
ಜಗಳೂರು
ದಾವಣಗೆರೆ-ಜಿಲ್ಲೆ.
9972397103
jkdear007@gmail.com